“ಕತ್ತಲ ಹೂವು” ನೀಳ್ಗತೆ (ಭಾಗ ೧೦): ಎಂ.ಜವರಾಜ್

ಭಾಗ – 10

ನೀಲಳ ಅಪ್ಪ ನಿಂಗಯ್ಯನಿಗೆ ದಮ್ಮು ಸೂಲು ಬಂದು ಏನು ಮಾಡಿದರು ಆಗದೆ ಸತ್ತು ಹೋಗಿ ಈಗ್ಗೆ ಮೂರ‌್ನಾಕು ವರ್ಷಗಳೇ ಆಗಿದ್ದವು. ನೀಲಳ ಕೂದಲು ನೆರೆದು ತಲೆ ಕೂದಲು ಗಂಟುಗಂಟಾಗಿ ಗಟ್ಟಿಯಾಗಿ ಬೆಳ್ಳಗೆ ಕರ‌್ರಗೆ ಮಿಕ್ಸ್ ಆಗಿರೋ ತರ ಆಗಿ ಜಡೆ ಜಡೆಯಾಗಿತ್ತು. ಸುಶೀಲ ಎರಡನೆಯದರ ಮಗೂಗೆ ಬಾಣಂತನಕ್ಕೆ ಬಂದು ಕುಂತಿದ್ದಳು. ಪೋಲಿ ಅಲೀತಿದ್ದ ಸಿದ್ದೇಶನ ಮದ್ವೆ ಮಾತುಕತೆಗಳು ನಡೆದಿದ್ದವು. ಶಿವಯ್ಯ ತನ್ನ ಹನ್ನೊಂದು ಮಕ್ಕಳ ಪೈಕಿ ಗಂಡು ಮಕ್ಕಳು ಬಿಟ್ಟು ಉಳಿದ ಹೆಣ್ಣು ಮಕ್ಕಳಲ್ಲಿ ಮುಕ್ಕಾಲು ಭಾಗ ಮದ್ವೆ ಒಸಗೆ ಮಾಡಿ ಅವರಿಗೆ ತನ್ನ ಕೈಲಾದಷ್ಟು ಒಂದು ನ್ಯಾರ ಮಾಡಿದ್ದ. ನೀಲಳ ಅಪ್ಪ ಸತ್ತ ವರ್ಷವೇ ಚಂದ್ರ ಎಸೆಸೆಲ್ಸಿ ಫೇಲಾಗಿ ಇನ್ನೂ ಪಾಸಾಗದೆ ಹೊಲ ಗದ್ದೆ ಕೆಲ್ಸ ಅದೂ ಇದೂ ಮಾಡ್ಕಂಡು ತಿರುಗುತ್ತಿದ್ದ.

ಅದೆ ತಾನೆ ಸೂರ್ಯ ಮೇಲೆದ್ದು ಚುರುಗುಟ್ಟುತ್ತಿದ್ದ. ಊರಲ್ಲಿ ರೋಡಿನ ಕೆಲಸ ನಡೀತಿತ್ತು. ಹಳ್ಳಕೊಳ್ಳ ಧೂಳಿಂದ ಕೂಡಿದ್ದ ರೋಡನ್ನು ಅಗೆದು ಡಾಂಬರು ಹಾಕಲು ಸಮತಟ್ಟು ಮಾಡುತ್ತಿದ್ದರು. ಅಗೆದು ಸಮತಟ್ಟು ಮಾಡುವಾಗ ದಪ್ಪ ದಪ್ಪ ಕರಿಕಲ್ಲು ಬೆಣಚುಕಲ್ಲುಗಳನ್ನು ಕಿತ್ತದ್ದು ಅಲ್ಲಲ್ಲೆ ಬಿದ್ದಿದ್ದವು. ಬೀದಿ ಜನ ಪಂಚಾಯ್ತಿಯವರಿಗೆ ಗೊತ್ತಾಗದ ಹಾಗೆ ಆ ಕಲ್ಲುಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ನೀಲಳು ಎಲ್ಲರಂತೆ ಕಿಸಿಕಿಸಿ ನಗ್ತಾ ಕಲ್ಲುಗಳನ್ನು ಎತ್ತಿ ಎತ್ತಿ ಶಿವಯ್ಯ ಹಸು ಕಟ್ಟಾಕುವ ಚಣುಗದ ಪಕ್ಕ ಒಂದೊಂದಾಗಿ ಜೋಡಿಸಿ ಗುಡ್ಡೆ ಹಾಕುತ್ತಿದ್ದಳು. ಪುಂಡೈಕಳೂ ಎತ್ತಿಕೊಂಡು ಹೋಗುವವರಿಗೆ ಸಪೋರ್ಟು ಮಾಡುವವರಂತೆ ಅಲ್ಲಲ್ಲೆ ಅಡ್ಡಾಡುತ್ತಿದ್ದವು.

ಎಲೆಕ್ಷನ್ ಹೊತ್ತಲ್ಲಿ ಮಾತು ಕೊಟ್ಟಿದ್ದವರು ಗೆದ್ದು ಎಮ್ಮೆಲ್ಲೆ ಆಗಿದ್ದರು. ಗೆದ್ದಾದ ಮೇಲೆ ಒಂದ್ಸಲ ಊರಿಗೆ ಬಂದಿದ್ದರು. ಅವರನ್ನು ಚೆನೈನ್ ಗುಡಿಗೆ ಕರೆದುಕೊಂಡು ಹೋಗಿ ಹೂವಾರ ಹಾಕಿ ತಮಟೆ ಹೊಡೆದು ಊರಲ್ಲಿ ಬೀದಿ ಬೀದಿ ಸುತ್ತಿಸಿ ಮರ‌್ಯಾದೆ ಮಾಡಿದ್ದರು. ಆಗ ಊರಲ್ಲಿ ಕಿತ್ತೋಗಿರೊ ರೋಡು ಬೀದಿಬೀದಿಗ ಮೋರಿ ಮಾಡಿಸಿಕೊಡುವ ಬಗ್ಗೆ ಮಾತಾಡಿ ಜ್ಞಾಪಿಸಲಾಯ್ತು. ಅವರು ಆಯ್ತು ಆಯ್ತು ಅಂತ ಎಲ್ಲರಿಗೂ ಕೈ ಮುಗಿದಿದ್ದರು. ಆ ಮಾತು ಅಲ್ಲಿಗೆ ಮುಗಿತು. ಇನ್ನೊಂದ್ ಸಲ “ಇಂದ್ರಗಾಂಧಿ ಪ್ರಧಾನಿ ಆಗ್ಲಿ ಅಂತ ಇನ್ನೊಬ್ರನ್ನ ನಿಲ್ಸಿದಿವಿ. ಅವರನ್ನ ಡೆಲ್ಲಿಗೆ ಕಳಿಸ್ಬೇಕು. ಅವ್ರು ಗೆದ್ರ.. ಇಂದ್ರಗಾಂಧಿಗ ಅವ್ರು ಹತ್ರ ಅವ್ರ.. ಹಂಗಾಗಿ ನಿಮ್ಮೂರ‌್ಗ ಎಲ್ಲ ಕೆಲ್ಸನು ಆಯ್ತವ” ಅಂತಂದ್ರು. ಆಗ್ಲು ಜನ ಓಟಾಕಿ ಗೆಲ್ಸಿದ್ರು. ಆ ಮಾತೂ ಅಲ್ಲಿಗೇ ಮುಗಿತು.

ಇದಾದ ಮೇಲೆ ಡಿಸ್ಟ್ರಿಕ್ಟ್ ಎಲೆಕ್ಷನ್ ಬಂತು. ಈ ಕಿತ್ತೋಗಿರ ರೋಡ್ ತೋರ‌್ಸಿ ತೋರ‌್ಸಿ ಸಾಕಾಗಿದ್ದ ಜನ ದೊಂಬಿ ಎಂದಿದ್ದರು. ಪಂಚಾಯ್ತಿ ಮೆಂಬರುಗಳಿಗೆ ತಲೆಕೆಟ್ಟು ಒಂದು ಐಡಿಯಾ ಮಾಡಿದ್ರು. ಒಂದಷ್ಟು ಪುಂಡು ಕಟ್ಟಿಕೊಂಡು ಡಿಸ್ಟ್ರಿಕ್ಟ್ ಎಲೆಕ್ಷನ್ ಗೆ ನಿಂತಿದ್ದವನನ್ನ ಮುಂದೆ ಮಾಡ್ಕೊಂಡು ಎಂಪಿ ಎಮ್ಮೆಲ್ಲೆ ಹತ್ರ ಹೋದ್ರು. ಅವರು, ಇವರು ಹೇಳಿದ್ದನ್ನು ಕೇಳಿ “ಯೆಸ್, ಹಾಗೆ ಮಾಡಿ” ಅಂದ್ರು. ಅವರು ಹೇಳಿದಂಗೆ ಊರಾಚೆ ಬೇಲಿ ಎದ್ದು ಕವುಚಿಕೊಂಡಿದ್ದ ಗದ್ದೆಮಾಳದಲ್ಲಿ ಬಾಡೂಟ ಏರ್ಪಾಟು ಮಾಡಿ ಅದಕ್ಕೆ ಎರಡು ದೊಡ್ಡ ದನಗಳನ್ನು ತಂದು ಕೊಟ್ಟಿದ್ದರು.

ಎಲೆಕ್ಷನ್ ಇನ್ನು ಎಂಟು ದಿನ ಇತ್ತು. ಊರೊಳಕ್ಕೆ ಪೋಲಿಸ್ರು, ಎಲೆಕ್ಷನ್ ಆಫೀಸರ್ ಗಳು ಆಗಾಗ ಬಂದು ಬಂದು ಹೋಗ್ತಿದ್ರು. ಆಮೇಲೆ ಎಂಪಿ ಎಮ್ಮೆಲ್ಲೆ ಸಾಹೇಬ್ರಗಳ ಬೆದರಿಕೆಯಿಂದಲೊ ಏನೊ ಎರಡು ದಿನದಿಂದ ಅ ಪೋಲಿಸ್ರು ಎಲೆಕ್ಷನ್ ಆಫೀಸರ‌್ಗಳು ಬಂದಿರಲಿಲ್ಲ. ಅವತ್ತು ಬಾಡೂಟ ರೆಡಿಯಾಯ್ತು. ಎಮ್ಮೆಲ್ಲೆ ಸಾಹೇಬ್ರು, ಡಿಸ್ಟ್ರಿಕ್ಟ್ ಎಲೆಕ್ಷನ್ ಗೆ ನಿಂತಿದ್ದವ ದೂರದಲ್ಲಿದ್ದ ದೇವಸ್ಥಾನದತ್ರ ಚೇರ್ ಹಾಕಿಸ್ಕೊಂಡು ತನ್ನ ಕಡೆಯವರ ಜೊತೆ ಮಾತಾಡ್ತ ಕುಂತಿದ್ದರು.

ಇತ್ತ ಊರ ಜನ ಎರಡೆರೆಡು ಜೊನ್ನೆ ಎತ್ತಿಕೊಂಡು ಸಾಲಾಗಿ ಬಂದು ಒಂದು ಜೊನ್ನೆಗೆ ಬಾಡಿನ ಗೊಜ್ಜು ಇನ್ನೊಂದು ಜೊನ್ನೆಗೆ ಕಾಯನ್ನ ಹಾಕಿಸಿಕೊಂಡು ಉಣ್ಣತೊಡಗಿದರು. ಈಗಾಗಲೇ ಕೆಲವರು ಕಾಲುವೆ ಏರಿ ಕೆಳಗಿದ್ದ ಕುರುಬಗೇರಿ ಮಾದೇವಪ್ಪನ ತೋಟದೊಳಗಿದ್ದ ಹೆಂಡದಂಗಡಿಯಲ್ಲಿ ಹೆಂಡದ ಬಾಟಲಿ ಹಿಡಿದು ತಂದು ಹೆಂಡ ಕುಡಿಯುತ್ತಲೇ ಜೊನ್ನೆ ಹಿಡಿದು ಬಾಡಿನ ಗೊಜ್ಹು ಈಸಿಕೊಂಡು ತೆವರಿ ಮೇಲೆ ಕುಂತು ಹೆಂಡ ಹೀರಿ ಬಾಡಿನ ಗೊಜ್ಜು ಚಪ್ಪರಿಸುತ್ತಿದ್ದರು.

ಒಬ್ಬೊಬ್ಬರು ಎರಡೆರಡು ಸಲ ಈಸಿಕೊಂಡು ಮನೆಗೂ ಹೋಗಿ ಇಟ್ಟು ಬರುತ್ತಿದ್ದರು. ಕೊಡುತ್ತಿದ್ದವರಿಗೂ ಸಾಕು ಸಾಕಾಗಿತ್ತು. ಕೊಡ್ತಾ ಕೊಡ್ತ ಜನ ಜಾಸ್ತಿಯಾಗಿ ಮೇಲ್ ಮೇಲೆ ಬಿದ್ದು ಅವರವರೇ ಜೊನ್ನೆಗೆ ಅನ್ನನು ಬಾಡನ್ನು ಬೆರಕೆ ಮಾಡಿ ತುಂಬಿಕೊಂಡು ಹೋಗತೊಡಗಿದರು. ಎಮ್ಮೆಲ್ಲೆ ತಿರುಗಾಡಿಕೊಂಡು ಬಂದು “ಲೈನಾಗಿ ನಿಲ್ರಿ ಯಾಕ್ ಮೇಲ್ ಬೀಳ್ತಿರಾ..” ಅಂತ ಹೇಳಿ ಮತ್ತೆ ಅಲ್ಲೆ ಹೋಗಿ ಕುಂತರು.

ಆಗ ನೀಲ ಕೂಗಿಕೊಂಡು ಓಡೋಡಿ ಬರುತ್ತಿದ್ದಳು. ಕುಡಿದು ತಿಂದು ಮತ್ತಿನಲ್ಲಿದ್ದ ಕೆಲ ಪುಂಡು ಐಕಳು ನೋಡಿ ಕೇಕೆ ಹಾಕ್ತ “ಪಿಗರ್ ಬತ್ತಾ ಅದ. ನೋಡಿ ಈಗ ಆಟ ಹೆಂಗಾಯ್ತುದ” ಅಂತ ಕಿರುಚತೊಡಗಿದರು. ಬಂದವಳು “ನಂಗೊಂದ್ ಜೊನ್ನಿ ಕೊಡಿ ನಂಗೊಂದ್ ಜೊನ್ನಿ ಕೊಡಿ.. ನಂಗೊಸಿ ಹೇಳ್ಬಾರ‌್ದ ನಾಯ್ಗಳ” ಅಂತ ಎಲ್ಲರಿಗೂ ರೇಗುತ್ತ ಗೋಗರೆಯುತ್ತಿದ್ದಳು. ಕೇಕೆ ಹಾಕುತ್ತಿದ್ದವರಲ್ಲೊಬ್ಬ ನೀಲಳನ್ನು ಉಬ್ಬಿಸಿದ. “ಅಲ್ನೋಡು ಬಿಳಿ ಪ್ಯಾಂಟು ಬಿಳಿ ಅಂಗಿ ಇಕ್ಕಂಡರಲ್ಲ ಅವ್ರ್ ಕೇಳು ಕೊಡ್ತರ” ಅಂತ “ಕ್ಕಿಕ್ಕಿಕ್ಕಿ..” ಅಂತ ಕೈತೋರಿದ. ಅವಳು ಓಡಿ ಹೋಗಿ “ನಂಗೊಂದ್ ಜೊನ್ನಿ ಕೊಡಿ ಸಾ.. ನಾನೂ ಉಣ್ಬೇಕು.. ಬಾಡ್ನೆಸ್ರ್ ವಾಸ್ಣ ಅಲ್ಲಿಗಂಟು ಬತ್ತಿತು ಅದ್ಕ ಓಡ್ಬಂದಿ” ಅಂತ ಕೈ ಚಾಚಿದಳು. ಎಮ್ಮೆಲ್ಲೆ ಸಾಹೇಬ್ರು “ಲೇ ಬರ‌್ರಪ ಇಲ್ಲಿ.. ಇದೇನ್ ನೋಡಪ” ಅಂತ ಯಾರನ್ನೊ ಕೂಗಿ ಹೇಳಿದರು. ಕೇಳಿಸಿಕೊಂಡವರು ಅಲ್ಲಿಂದಲೇ “ಎಲ್ಲ ಖಾಲಿಯಾಯ್ತು ಸಾ” ಅಂತಂದ್ರು. ನೀಲಳಿಗೆ ಅದನ್ನು ಎಷ್ಟು ಹೇಳಿದರು ಕೇಳದೆ ಬೊಯ್ತಲೇ ಇತ್ತ ಬಂದಳು. ಅವಳಿಗೆ ಕೇಳು ಅಂದವನೆ ಅವಳನ್ನು ಕರೆದು “ಅವ್ರೆಲ್ಲ ಆಮೇಲ ತಿನ್ನಕ ಬೇರೆ ಎತ್ತಿ ಮಡಿಕಂಡು ಇಲ್ಲ ಅಂತವ್ರ.. ನೋಡು ನಂಗೂ ಒಂಚೂರೇ ಕೊಟ್ರು.. ಈಗ್ತಾನೆ ಬೇರೆ ಎತ್ತಿಟ್ಟಿರದ ಈಸ್ಕ ಬಂದಿ” ಅಂತ ತಿನ್ನುತ್ತಿದ್ದ ಜೊನ್ನಿ ತೋರಿದ. ಇದನ್ನು ಕೇಳಿದ ನೀಲಳಿಗೆ ಸಿಟ್ಟು ಬಂದು ಎಮ್ಮೆಲ್ಲೆ ಹತ್ರ ಹೋಗಿ ಅವರನ್ನು ಕೆಕ್ಕಳಿಸಿ ನೋಡಿ ” ಏ ಲೋಪರ್ ನನ್ ಮಗ್ನೆ.. ಓಟ ನಾನಾಕಿಲ್ವ.. ನಮ್ಮೊವ್ವಾಕಿಲ್ವ.. ನಮ್ಮಪ್ಪಾಕಿಲ್ವ.. ನಮ್ ಚಿಕ್ಕಿ ಹಾಕಿಲ್ವ.. ನಮ್ ಶಿವಪ್ಪಾಕಿಲ್ವ.. ನಮ್ ಚಂದ್ರಾಕಿಲ್ವ.. ಏನ್ ಬಿಟ್ಟಿಕ್ಕೊಟ್ಟಯ ನನೈದುನ್ ಕುಸೆ.. ನಂಗೊಸಿ ಬಾಡ್ನೆಸ್ರು ಅನ್ನ ಕೊಟ್ಟಯ ಇಲ್ವ ಹೇಳು ಸಟ್ಗ.. ಇಲ್ಲ ನಿನ್ ನಾಲ್ಗ ಕೂದು ನಾಯಿಗಾಕ್ತಿನಿ.. ” ಅಂದಳು. ಇವಳ ಮಾತು ಕೇಳಿದ ಎಮ್ಮೆಲ್ಲೆ ಟವಲ್ಲು ಬಡಿದು ಬೆವರು ಒರೆಸಿಕೊಂಡು ಯಾರನ್ನೊ ಕೂಗಿದ. ಎಲ್ಲರು ಓಡಿ ಬಂದ್ರು. “ಏಯ್ ಯಾರ ಇದು. ಮಾಡುದ್ರ ನೆಟ್ಟುಗ್ ಮಾಡಿ. ಇದ್ಯಾರೊ ಇದು ಕಳಿಸ್ರಿ ಆಕಡೆ ಹುಚ್ ಬಡ್ಡತವ.. ” ಅಂದ. ಅವನ ಮಾತು ಕೇಳಿದ ನೀಲ “ಏಯ್ ಯಾರುಡ ನೀನು.. ಯಾರ‌್ನುಡ ಕಳಿಸು ಅಂದೈ.. ಊರು ನಿಮ್ಮಪ್ಪುಂದ.. ನಿಮ್ಮೊವ್ವ ಹಿಡ್ದು ನನ್ ಗಂಡ್ ಮಡಿಕಳ” ಅಂತ ಆ ಎಮ್ಮೆಲ್ಲೆ ಜುಟ್ಟಿಡಿದು ಕೆಳಕ್ಕೆ ಕೆಡವಿ ಅವನ ಮೇಲೆ ಕುಂತು ರಪರಪ ಬಡಿದು ಲಂಗದಾವಣಿ ಗೋರಿ ಮುಖನೆಲ್ಲ ಉಜ್ಜತೊಡಗಿದಳು. ನಿಂತಿದ್ದವರು ಇಬ್ಬರನ್ನು ಹಿಡಿದು ಎಳೆದಾಡಿದರೂ ಬಿಡದೆ ಅವಳ ರೊಚ್ಚನ್ನು ತಾಳದ ಎಮ್ಮೆಲ್ಲೆ ಬಾಯಿ ಬಡಿಯಲು ಶುರು ಮಾಡಿದ. ಅವನ ಬಟ್ಟೆಯೆಲ್ಲ ಹರಿದು ಹೋಯ್ತು. ನೀಲಳ ಲಂಗದಾವಣಿನು ಹರಿದು ಅವಳ ಮೈಯಲ್ಲ ಕಾಣ್ತಿತ್ತು. ಪುಂಡೈಕಳು ಕುಡಿದ ಮತ್ತಿನಲ್ಲಿ ಇಬ್ಬರನ್ನು ನೋಡ್ತಾ ಬೇಲಿ ಸಂದಿಗ ಹೋಗಿ ಕೇಕೆ ಹಾಕಿ ಕುಣಿಯತೊಡಗಿದವು. ಅಷ್ಟೊತ್ತಿಗೆ ಚೆನ್ನಬಸವಿ ಓಡಿ ಬಂದು ಎಮ್ಮೆಲ್ಲೆ ಸಾಹೇಬ್ರಿಗೆ ಕೈಮುಗಿದು ಅವಳನ್ನು ಬೈದು ಕರೆದುಕೊಂಡು ಹೋಗಿದ್ದಳು.

ಡಿಸ್ಟ್ರಿಕ್ಟ್ ಎಲೆಕ್ಷನ್ ಮುಗಿದು ವರ್ಷ ಆರು ತಿಂಗಳಾದ ಮೇಲೆ ಊರಿಗೆ ಡಾಂಬರು ರೋಡು ಮಾಡಲು ಸಾಂಕ್ಷನ್ ಆಯ್ತು. ಅದಕ್ಕು ಮುನ್ನ ಪಂಚಾಯ್ತಿ ಮೆಂಬರ್ ಗಳಿಗೂ ಊರ ಪುಂಡೈಕಳಿಗೂ ರೋಡಿನ ವಿಚಾರಕ್ಕೆ ಜಗಳ ನಡಿತಾನೆ ಇತ್ತು. ಈಗ ಪಂಚಾಯ್ತಿ ಮೆಂಬರ್ ಗಳು ಧಿಮಾಕಿನಿಂದ ಯಾರನ್ನು ಲೆಕ್ಕಿಸದೆ
ಹಿಂದಕ್ಕೆ ಕೈಕಟ್ಟಿಕೊಂಡು ಕೈತೋರಿಸಿ ಏನೇನೋ ಹೇಳುತ್ತ ರೋಡು ಕೆಲಸ ಮಾಡಿಸುತ್ತಿದ್ದರು.

ಊರ ಜನರು, ಒಂದಷ್ಟು ಪುಂಡೈಕಳು ಅತ್ತಿತ್ತ ತಿರುಗುತ್ತ ಪಂಚಾಯ್ತಿ ಮೆಂಬರ್ ಗಳಿಗೂ ಸೆಡ್ಡು ಹೊಡೆದು ಅಷ್ಟೇ ಧಿಮಾಕಿನಿಂದ ರೋಡಿನ ಡಾಂಬರು ಕೆಲಸವನ್ನು ನೋಡುತ್ತ “ಚೆನ್ನಾಗಿ ಗಟ್ಟಿಯಾಗಿ ಮಾಡ್ಬೇಕು.. ನಾವೂ ನೋಡ್ತಿವಿ ಹೆಂಗ್ ಮಾಡ್ದರಿ ಅಂತ” ತಾಕೀತು ಮಾಡುತ್ತಿದ್ದರು.

ಅದೇ ಹೊತ್ತಿಗೆ ಬಿಳೀ ಬಟ್ಟೆ ತೊಟ್ಟಿದ್ದ ದಪ್ಪಗಿರೊ ಊರೊರಗಿನ ಒಂದಿಬ್ಬರು ಕಪ್ಪು ಬಣ್ಣದ ಬುಲೆಟ್ ಗಾಡಿಲಿ ಬಂದು ಅದನ್ನು ಆಫ್ ಮಾಡದೇ ಅದರ ಮೇಲೆ ಕುಂತೇ ಅದು ಬಡಬಡಾ ಅನ್ನೊ ಸದ್ದಿನೊಳಗೇ ಊರ ಮೆಂಬರ್ ಜೊತೆ ಮಾತಾಡುತ್ತ ದಂಗಾದವರಂತೆ ಕಂಡರು. ಸಣೈಕಳು ಇದ್ಯಾವುದನ್ನೂ ಲೆಕ್ಕಿಸದೆ ಆ ಬುಲೆಟ್ ಗಾಡಿ ಹಿಂದೆ ಹೋಗಿ ಅದರ ಬಡಬಡಾ ಸದ್ದಿಗೆ ಹೊಗೆ ಬರ‌್ತಿದ್ದ ಪೈಪ್ ಕೊಳವೆ ನೇರಕ್ಕೆ ತಮ್ಮ ಕಾಲುಗಳನ್ನು ಜೋಡಿಸಿ ನಿಲ್ಲಲು ಪೈಪೋಟಿಗಿಳಿದಿದ್ದವು. ಆ ಪೈಪಿಂದ ಬರುವ ಹೊಗೆ ಆ ಐಕಳ ಕಾಲಿಗೆ ಬಿದ್ದು ಅದು ಚಿತ್ರ ವಿಚಿತ್ರ ಚಿತ್ರ ಬಿಡಿಸುತ್ತಿತ್ತು. ಅವು ಆ ಚಿತ್ರ ವಿಚಿತ್ರ ಕಪ್ಪುಚಿತ್ರ ನೋಡಿಕೊಂಡು ಕೇಕೆ ಹಾಕುತ್ತ ಕುಣಿಯುತ್ತಿದ್ದವು.

ಅದೇ ಹೊತ್ತಿಗೆ ಭರ‌್ರಂತ ಸೈಕಲ್ ತುಳಿಯುತ್ತಾ ಬಂದ ಪೇಪರ್ ಹಾಕುವ ಹುಡುಗ ‘ಇಂದ್ರಗಾಂಧಿಗೆ ಗುಂಡು.. ಇಂದ್ರಗಾಂಧಿಗೆ ಗುಂಡಾಕಿ ಸಾಯ್ಸವ್ರೆ..’ ಅಂತ ‘ಆರತಿ’ ಪೇಪರ್ ಹಿಡಿದು ಸಾರುತ್ತ ದಡಾರಂತ ಕೆಳಕ್ಕಿಳಿತು. ಹಂಗೆ, ಕಿತ್ತಾಕಿರೊ ಆ ರೋಡಿನಲ್ಲಿ ಸೈಕಲ್ ಓಡಿಸಲಾರದೆ ಹಿಂದೆ ಕ್ಯಾರಿಯರ್ ನಲ್ಲಿನ ಪೇಪರ್ ಬಂಡಲನ್ನು ಒಂದು ಕೈಲಿ ಹಿಡಿದು ತಳ್ಳಿಕೊಂಡೇ ಹೋಯ್ತಿತ್ತು. ಬುಲೆಟ್ ಗಾಡಿಯೋರು, ಊರ ಮೆಂಬರು ಆ ಹುಡುಗನ್ನ ಕರೆದು ಕಾಸು ಕೊಟ್ಟು ಒಂದೊಂದು ‘ಆರತಿ’ ಪೇಪರ್ ತೆಗೆದುಕೊಂಡು ಓದತೊಡಗಿದರು. ಊರ ಜನ ಗಾಬರಿಗೊಂಡು ಅವರ ಸುತ್ತ ಸುತ್ತಿಕೊಂಡು ಓದುತ್ತೋದುತ್ತಲೇ ಮಾತಾಡುತ್ತಾ ವಿವರಿಸುತ್ತಿದ್ದವರ ಮಾತು ಕೇಳುತ್ತ ಲೊಚಗುಟ್ಟಿ ಇಂದಿರಗಾಂಧಿಗೆ ಗುಂಡು ಹೊಡೆದ ಸುದ್ದಿ ಕೇಳತೊಡಗಿದರು.

ಅತ್ತ ಮಲ್ಲಮೇಷ್ಟ್ರ ಮನೆಯ ಎರಡು ಬ್ಯಾಂಡಿನ ರೇಡಿಯೋದ ಪ್ರದೇಶ ಸಮಾಚಾರದಲ್ಲಿ ಇಂದಿರಗಾಂಧಿ ಸತ್ತ ಸುದ್ದಿ ಬಿತ್ತರವಾಗುತ್ತಿತ್ತು. ಈ ಸುದ್ದಿ ಕೇಳುತ್ತಲೆ ಮಲ್ಲಮೇಷ್ಟ್ರ ಮನೆಯ ಮುಂದೆ ಅಕ್ಕಪಕ್ಕದ ಹೆಂಗಸರು ಗಂಡಸರು ಐಕ ಮಕ್ಕ ಮುತ್ತಿಕೊಂಡು ಲೊಚಗುಟ್ಟುತ್ತ ಕಣ್ಣೀರಾಡುತ್ತಿದ್ದರು. ರೇಡಿಯೋದಲ್ಲಿ ಪ್ರದೇಶ ಸಮಾಚಾರ ಬಿತ್ತರವಾಗುತ್ತಲೇ ಇತ್ತು. ಮಲ್ಲಮೇಷ್ಟ್ರು ಒಂದು ಕೈಯಲ್ಲಿ ‘ಆರತಿ’ ಪೇಪರ್ ಹಿಡಿದು ಹೆಡ್ ಲೈನ್ ನೋಡುತ್ತ ಹಂಗೆ ಅದನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಜೋಬಲ್ಲಿದ್ದ ಒಂದು ಗಣೇಶ ಬೀಡಿ ಎತ್ತಿಕೊಂಡು ತುಟಿಯಲ್ಲಿ ಕಚ್ಚಿಡಿದು ಕಡ್ಡಿಗೀರಿ ಉಗುಳು ನುಂಗಿ ಒಂದು ದಮ್ಮು ಎಳೆದು ಹೊಗೆ ಬಿಟ್ಟು ಪಂಚೆ ಸರಿಮಾಡಿಕೊಂಡು ಜಗುಲಿ ಮೇಲೆ ಕುಂತು ಇಂದಿರಗಾಂಧಿ ಇತಿಹಾಸ ಹೇಳತೊಡಗಿದರು. ಇದು ನಿಧಾನಕೆ ಊರನ್ನು ಆವರಿಸುತ್ತಿತ್ತು.

ಇಲ್ಲಿ ರೋಡು ಕೆಲಸ ಮಾಡುತ್ತಿದ್ದವರು ಕೆಲಸ ಮಾಡಲೊ ಬೇಡವೊ ಎಂಬ ಗೊಂದಲದಲ್ಲಿ ಮುಳುಗಿ ಪೇಪರು ಹಿಡಿದು ಓದುವವರ ಮುಂದೆ ಕಣ್ಣಲ್ಲಿ ನೀರಾಡಿಸಿಕೊಂಡು ನಿಂತಿದ್ದರು. ಮೆಂಬರುಗಳು ಪೇಪರು ಮಡಚಿ ಕಂಕುಳಿಗೆ ಸಿಕ್ಕಿಸಿಕೊಂಡು “ನಿಮ್ ಪಾಡ್ಗ ನೀವ್ ಕೆಲ್ಸ ಮಾಡಿ.. ಕೆಲ್ಸ ಬೇಗ ಮುಗ್ಸುದ್ರ ಬಿಲ್ ಬೇಗ ಆಗುತ್ತ. ಇಲ್ಲಾಂದ್ರ ಬಟೊಡಿ ಇಲ್ಲ” ಅಂತ ತಾಕೀತು ಮಾಡುತ್ತಿದ್ದ.

ಈ ಶಿವಯ್ಯ “ಇದ್ಯಾಕ ಬೀದಿಲ್ ಬಿದ್ದಿರ ಕಲ್ನ ಹೊತ್ಗಬಂದ್ ಹೊತ್ಗಬಂದ್ ಸಾಕಾದೈ.. ಬ್ಯಾಡ ಬುಡಮ್ಮಿ” ಅಂತ ನೀಲಳಿಗೆ ಎಷ್ಟು ಹೇಳಿದರೂ ಕೇಳದೆ ಅವಳು ಕಲ್ಲುಗಳನ್ನು ಎತ್ತಿಕೊಂಡು ಬಂದು ಚಣುಗದೊತ್ತಿಗೆ ತಂದು ತಂದು ಹಾಕಿ ತನಗೆ ತಾನೇ ಉಸ್ಸ್ ಅಂತ ಸಾಕಾದವಳಂತೆ ತೆಂಗಿನ ಮರ ಒರಗಿ ನಿಂತಳು. ಇದೇ ಹೊತ್ತಲ್ಲೆ ಇಂದಿರಗಾಂಧಿ ಸತ್ತ ಸುದ್ದಿ ಕೇಳಿ ಚಿಂತಾಕ್ರಾಂತನಾಗಿ ಗಾಡಿ ಕಟ್ಟುತ್ತಿದ್ದ ಶಿವಯ್ಯ ಗಾಡಿ ಕಟ್ಟುವುದನ್ನು ನಿಲ್ಲಿಸಿ ಸಿದ್ದಿಯನ್ನು ಕರೆದು ಹೇಳಿದ. ಸಿದ್ದಿ ಜಗುಲಿ ಗೋಡೆ ಒರಗಿ ಕಣ್ಣೀರು ತುಂಬಿಕೊಂಡು ಕುಂತು ಮೇಷ್ಟ್ರ ಮನೆಯ ಆಚೆ ಜನ ತುಂಬಿದ್ದು ನೋಡಿದಳು. ಶಿವಯ್ಯನೂ ಅತ್ತ ಸಪ್ಪಗೆ ಹೆಜ್ಜೆ ಎತ್ತಿಟ್ಟ. ನೀಲಳೂ ನೋಡಿದಳು. ಮಲ್ಲಮೇಷ್ಟ್ರ ಮನೆಯಲ್ಲಿ ರೇಡಿಯೋದಲ್ಲಿ ಪ್ರದೇಶ ಸಮಾಚಾರ ಮುಗಿದಿರದೆ ಅದನ್ನು ಕೇಳುತ್ತಿದ್ದವರ ಗಮನ ಅತ್ತ ಮಲ್ಲಮೇಷ್ಟ್ರು ಕೈಲಿಡಿದ್ದ ಆರತಿ ಪೇಪರ್ ಕಡೆಗೂ ಇತ್ತು.

“ಒಂದೆಣ್ಣೆಂಗ್ಸ ಎದುರ‌್ಸಕಾಗ್ದೆ ಇಂಗ್ ಮಾಡುದ್ರಲ್ಲ ಮೇಷ್ಟ್ರೇ ನನ್ ಮಗ್ನವ್ರು. ಕೊಂದವ್ರ್ ಮನ ಹಾಳಾಗ. ಅವ್ರ್ ಯಕ್ಕುಟ್ಟೋಗ. ನಮ್ಗ ದುಡ್ ಬರಾಗಿ ಮಾಡ್ದ. ಗತೀಲ್ದೇದವ್ರಿಗ ದವ್ಸನು ಕೊಟ್ಟ. ಹೊಲ ಗದ್ದನು ಮಾಡತರ ಮಾಡ್ದ. ಇಂಗ ಅಸ್ಟ ಇಸ್ಟ ಕೊಟ್ಟೆಣ್ಣು ಕಣ ಅವ. ಯಂಗ್ಯಾ ನಮ್ಮಂತ ಗತ್ಗೆಟ್ಟವ್ರಿಗ ಹೊಟ್ಗ ಬಟ್ಗ ನ್ಯಾರ ಮಾಡ್ದವ ಕಣ ಅವ. ಅವ ಇಂಗ್ ಮಾಡ್ತಳ ಅಂತ್ಲೇನ ಅವ್ಳ ಹೊಡ್ದು ಸಾಯ್ಸುದ್ರಲ್ಲ ಮೇಷ್ಟ್ರೇ.. ಥೂ ಹಾಳ್ ಪಾಪಿಗಳಾ.. ” ಅಂತ ವಯಸ್ಸಾದವರಲ್ಲದೆ ಇನ್ನೂ ಕೆಲವರು ಮಲ್ಲಮೇಷ್ಟ್ರು ಜೊತ ಮಾತಾಡ್ತ ಕಣ್ಣೀರಾಕುತ್ತಿದ್ದರು. ಮಲ್ಲಮೇಷ್ಟ್ರು ತುಟಿಲಿ ಕಚ್ಚಿಕೊಂಡಿದ್ದ ಗಣೇಶ ಬೀಡಿಯನ್ನು ಹಾಗೆ ಅತ್ತಿತ್ತ ಆಡಿಸಿ ಸೈಡಿಗೆ ಕಟಬಾಯಿ ಹತ್ರ ತಂದುಕೊಂಡು ಊಪಿ ನಿಧಾನಕೆ ಮೂಗಿನಿಂದ ಹೊಗೆ ಬಿಟ್ಟು “ಅವ ಪ್ರಪಂಚಕ್ಕೆ ಬೇಕಾಗಿದ್ದವ. ಅಕ್ಪಕ್ದ ದೇಶ್ದವ್ರೆಲ್ಲ ಇವ್ಳ ಕಂಡ್ರ ಗಡಗಡ ನಡುಗ್ತಿದ್ರು. ಏನ್ ಮಾಡ್ದರಿ ರಾಜ್ಕೀಯ.. ಇವಿದ್ರ ನಮ್ಗ ಉಳ್ಗಾಲ ಇಲ್ಲ ಅಂತ ಇಲ್ಲೆವ್ರೆ ಎಲ್ಲ ಸೇರ‌್ಕಂಡು ಅವ್ಳ ಜೊತ ಇದ್ದವ್ರಿಂದ್ಲೆ ಪ್ಲಾನ್ ಮಾಡಿ ಮಾಡುದ್ದು..” ಅಂತ ತುಟಿಲಿದ್ದ ಮೋಟು ಬೀಡಿಯನ್ನು ಮೋರಿಗೆಸೆದು ಒಳಕ್ಕೋದರು.

ನೀಲ ಇಂದಿರಗಾಂಧಿ ಸತ್ತ ಸುದ್ದಿ ಕೇಳಿ ಶಿವಯ್ಯನ ಹೆಜ್ಜೆ ಅನುಸರಿಸಿ ತಾನೂ ಹೆಜ್ಜೆ ಎತ್ತಿಟ್ಟು ಗೋಳೋ ಅಂತ ಅಳ್ತ “ಶಿವಪ್ಪ.. ಶಿವಪ್ಪವ್ ಇದ್ಯಾಕ ಗಾಡಿ ಕಟ್ಟಲ್ವ” ಅಂದಳು. ಶಿವಯ್ಯ “ಹೋಗಮೇಯ್ ನನ್ ಕಸ್ಟ ನಂಗ. ಅವ್ಳ ಕೊಂದಕರ.. ಅವ ಅಲ್ಲಿ ಸತ್ತು ಮನ್ಗಳ ಹೆಂಗ್ ಕೆಲ್ಸ ಮಾಡಕ ಮನ್ಸ್ ಬಂದುದು” ಅಂತ ಕಣ್ಣೀರಾಕ್ತಿದ್ದ. ನೀಲ ಈ ಮಾತ ಕೇಳಿ ಶಿವಯ್ಯ ಅಳೋದ ನೋಡಿ ಗಳಗಳನೆ ಅಳತೊಡಗಿದಳು. ಚೆನೈನ್ ಗುಡಿಗೋಗಿ ಎಲ್ರಿಗು ಒಪ್ಪಿಸಿದಳು. ಸೀದಾ ಚೆನೈನ್ ಗುಡಿ ಬೀದಿ ಹಾದು ಊರಲಿರ ಎಲ್ಲ ಬೀದಿಗು ಹೋಗಿ ಇಂದಿರಗಾಂಧಿ ಸತ್ತ ಸುದ್ದಿನ ಅಳಳ್ತ ಹೇಳ್ತಿದ್ದಳು. ಅವಳ ಕಣ್ಣಿಗೆ ಊರಲ್ಲಿರ ಹೆಂಗುಸ್ರೆಲ್ಲ ಅವರವರ ಜಗುಲಿಲೊ, ಗುಂಪು ಗುಂಪು ಕುಂತೊ ನಿಂತೊ ಮಾತಾಡ್ತ ಅಳೋದು ಕಂಡಿತು. ಹಿಂಗೆ ಊರ‌್ನೆಲ್ಲ ಬಳಸಿ ಪಂಚಾಯ್ತಿ ಆಫೀಸತ್ರ ಬಂದ್ಲು. ಊರ‌್ಗ ಹೆಬ್ಬಾಗಿಲ ತರ ಇದ್ದ ರೋಡ್ ಕೆಲ್ಸ ಮಾಡ್ತಿದ್ರಲ್ಲ ಅದನ್ನು ನೋಡಿದಳು. ಅವರನ್ನ “ಅಣ್ಣವ್ ಇಂದ್ರಗಾಂಧಿ ಸತ್ತೊಗಳ ಅಂತ ಗೊತ್ತಿಲ್ವ ನಿಮ್ಗ” ಅಂದ್ಲು. ಅವರು ಇವಳ ಮಾತ ಲೆಕ್ಕಿಸದೆ ಕೆಲ್ಸ ಮಾಡ್ತನೇ ಇದ್ರು. ನೀಲ ಇನ್ನೊಂದ್ಸಾರಿ ಎಲ್ರುಗು ಕೇಳೊ ತರ ಹೇಳಿದಳು. ಅವರು ಸುಮ್ಮನಿರದೆ “ಉಂಕಣ ಹೋಗು ನಮ್ಗು ಗೊತ್ತು..” ಅಂದರು. ಅವಳು “ಅಲ್ಲಕಣ ಅವ್ಳ ಗುಂಡಾಕಿ ಹೊಡ್ದಾಕರಲ್ಲ.. ಊರೆಲ್ಲ ಅಳ್ತ ಅದ. ನಂಗು ಅಳ ಬತ್ತಾ ಅದ.. ಇಂಗಿರಗ ನೀವೆಲ್ಲ ಕೆಲ್ಸ ಮಾಡ್ತಿದ್ದರೆಲ್ಲ ಹೋಗಿ ಹೋಗಿ ಮಣ್ ಮಾಡಗಂಟ ಕೆಲ್ಸ ಮಾಡ್ಬೇಡಿ” ಅಂತ ಅಂದಳು. ಅವರು “ಏಯ್ ಹೋಗು ಅವ್ಳ್ ಸತ್ರ ನಮ್ಗೇನ.. ಕೆಲ್ಸ ನಿಲ್ಲುಸ್ತಿವಿ ನೀ ಕೊಟ್ಟಯ ಸಂದಕ ದುಡ್ಡಾ..” ಅಂದರು. “ಅಲ್ಲಕಣ ನಮ್ ಶಿವಪ್ನೇ ಅವ ಸತ್ತಳ ಅಂತ ಗಾಡಿ ಕಟ್ದೆ ಮನಲಿ ಅಳ್ತ ಕೂತನ ನೀವೇನ.. ಹೋಗಿ ಹೋಗಿ” ಅಂದಳು. ಅವರು ಅವಳಿಗೆ ರೇಗಿ ಹೊಡೆಯಲು ಕಲ್ಲೆತ್ತಿಕೊಂಡರು. ನೀಲ ಹೇಳೊತನಕ ಹೇಳಿ ನೋಡೊತನಕ ನೋಡಿ “ಲೋಪರ್ ನನ್ ಮಗ್ನೆ.. ಏನಂದ ನೀನು… ಅವ ನಮ್ಮೊವ್ವ ಕಣ.. ನೀ ಬದ್ಕಿರದೆ ಅವ್ಳಿಂದ ಕಣ.. ಅಲ್ಲೋಗಿ ರೇಡಿಯಾವ್ಲಿ ಕೇಳೋಗು ಗೊತ್ತಾಯ್ತುದ” ಅಂತ ಅವರಲ್ಲಿಬ್ಬರ ಮುಂದಲೆ ಹಿಡಿದು ಕಿತ್ತಾಕಿದ್ದ ರೋಡಿನ ಮಣ್ಣಿಗೆ ಅದುಮಿ ಎಳೆದಾಡಿದಳು. ಇಂದಿರಗಾಂಧಿ ಸತ್ತ ಸುದ್ದಿ ಮಾತಾಡ್ತ ಗಾಬರಿಗೊಂಡಿದ್ದ ಕುಂತಿದ್ದ ನಿಂತಿದ್ದ ಊರ ಜನ ಓಡೋಡಿ ಬಂದರು. ನೀಲಳ ಕೈಯನ್ನು ಕಿತ್ತಾಕಿ ಹೋಗು ಹೋಗು ಅಂದರು. ಅವಳು ಹೋಗದೆ ಕಲ್ಲನ್ನು ಎತ್ತಿಕೊಂಡು “ಹೋಗ್ರುಡ ನನೈದ್ದಿರಾ..” ಅಂತ ಗುರಿಯಿಡಲು ಮುಂದಾದಳು. ಕೆಲಸ ಮಾಡುತ್ತಿದ್ದ ಹತ್ತಿಪ್ಪತ್ತು ಮಂದಿನು ರೋಡಿಂದ ಮೇಲತ್ತಿ ನಿಂತು “ಮೆಂಬರ್ ಬರತಂಕ ಮಾಡದೆ ಬ್ಯಾಡ ಇದ್ಯಾವ್ ಗಾಚಾರನ” ಅಂತ ಸೈಡಿಗೋಗಿ ಕುಂತರು. ಬಿಸಿಲು ಏರುತ್ತ ರವರವ ಅಂತ ಚುರುಗುಟ್ಟತೊಡಗಿತು.

-ಎಂ.ಜವರಾಜ್

(ಮುಂದುವರಿಯುವುದು..)


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x