ಪಂಜು ಕಾವ್ಯಧಾರೆ

ತೋಳಗಳು

ಅಳುತ್ತಿದೆ ಪುಟ್ಟ ಕಂದ
ಎತ್ತಿಕೊಳ್ಳುವವರಿಲ್ಲದೇ
ಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ

ತೋಳಗಳು ಶುಭ್ರ ಬಟ್ಟೆ ತೊಟ್ಟು
ನಗುವಿನಲಂಕಾರದ ಬೊಟ್ಟನ್ನಿಟ್ಟು
ಗರತಿಯಂತೆ ಕೈ ಬೀಸುತ್ತಿವೆ
ತಬ್ಬಲಿಯಾದಳು ಭಾರತಿ

ತಬ್ಬುವ ತವಕದಲ್ಲಿ
ಪಿತೂರಿಯ ಬಾಕನ್ನು ಅಡಗಿಸಿಟ್ಟಿಹರು
ಕೆದರಿದ ಕೇಶರಾಶಿಯ ಹಿಡಿದು
ಗಹಗಹಿಸುತಿಹ ತೋಳಗಳದ್ದು ಆತ್ಮರತಿ

ಅಂಗಾಂಗ ಊನ ಮಾಡಿದವು
ಮುದ್ದು ಭಾರತಿ ಈಗ ಅಂಗವಿಕಲೆ
ತೋಳಗಳ ಸಾಮ್ರಾಜ್ಯದಲ್ಲಿ
ದಾರಿಗಾಣದೇ ನಿಂತಿಹ ಅಬಲೆ

ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲ
ಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶ
ತೋಳಗಳ ತೋಳ್ಬಲ ಹೆಚ್ಚಾಗಿದೆ
ಊಳಿಡುತ್ತಿವೆ ಭಾರತಿಯ ಕರುಳ ಬಗೆದು

ಏನು ಮಾಡಬಲ್ಲಳು ಅವಳು
ನಾಲಗೆಯ ಹೊರಗೆಳೆದಿವೆ
ಕೈಕಾಲುಗಳ ಮುರಿದಿವೆ
ತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!?

ತಂದೆ ತಾಯಿಯಿಲ್ಲ ಅಣ್ಣತಮ್ಮರ್ಯಾರೂ ಇಲ್ಲ
ಅನಾಥಳಿವಳು ಕೇಳುವವರಿಲ್ಲ ಹೇಳುವವರಿಲ್ಲ
ಬಿಕರಿಯಾಗಿಹಳು ಸಂತೆಯಲ್ಲಿನ ಮೇಕೆಯಂತೆ
ಕಪಟತನದ ಕಟೌಟ್ ಗಳು ಮುಗಿಲೆತ್ತರ ನಿಂತಿವೆ

ಮೈದುಂಬಿ ನಳನಳಿಸಿದ್ದಳು ಭಾರತಿ
ಅಲ್ಲೊಂದು ಇಲ್ಲೊಂದು ಇದ್ದ ತೋಳಗಳೀಗ
ಹೆಜ್ಜೆ ಹೆಜ್ಜೆಗೂ ಸೀಳು ನಾಲಗೆಯ ತೋರುತ್ತಿವೆ
ಮೊನಚಾದ ಉಗುರುಗಳಿಂದ ಬಗೆ ಬಗೆದು ಮುಕ್ಕುತ್ತಿವೆ.

-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ರಕ್ತ ಕೆಂಪು ಎನ್ನುವುದನ್ನು ಮರೆತವರ ನಡುವೆ

ರಾಜಕೀಯ ಕೆಸರಾಟದಲ್ಲಿ ಓಣಿ ನೀರು ಕೆಂಪಾದವೋ
ಅಲ್ಲಿಗೆ ಸತ್ತು ಬಿದ್ದ ಹೆಣಕ್ಕೆ ಹೊಸ ವಿಚಾರ ಹುಟ್ಟಿದಂತಾಯಿತು.

ಬದುಕಿನ ರಂಗಸಜ್ಜಿಕೆಯಲ್ಲಿ ಅನಾಥ, ಸುತ್ತ ನಂತರ ಶವ
ಬದುಕಿದ್ದಾಗ ಮೂರುದಿನಕ್ಕೂ ಜೀವದ
ಖಾತ್ರಿ ಇಲ್ಲದೆ ಬದುಕಿದ್ದು ಯಾರು ನೋಡಲಿಲ್ಲ…

ದರಬೇಸಿಯು ಯಾರ ಮನಸಿನಲ್ಲಿ ಕನಸಿನ ಖಾತೆ ತೆರೆದಿಲ್ಲ
ಯಾವ ಸರ್ಕಾರಿ ಕಚೇರಿಯ ತಿಜೋರಿಗೆ ನನಸಿನ ಜಮೆಯನ್ನು ಮಾಡಲಿಲ್ಲ…

ನೂರಾರು ಆಸೆಗಳನ್ನು ಹೊತ್ತಿರುವ ಇವನು ಕಾಯ್ತುತ್ತಾ
ಕುಳಿತಿತಿದ್ದೇ ಬಂತು ಸುಖಜೀವನಕ್ಕೆ ಏನು ಬಟವಾಡೆ‌ಯಾಗಲು
ಸಮಯ ಕೂಡಿ ಬರಲೇ ಇಲ್ಲ…

ಕನಸಿನ ಬಂಗಲೆಗಿಂತ
ಗುಡಿಸಲೇ ಅಸಲಿ ಜಾಗ ಕಂಡ ಕನಸುಗಳು ನನಸಾಗುವುಕ್ಕೆ
ಹಾಗಂತ ಯಾರೂ ಗುಡಿಸಲಿಲ್ಲ ಬದುಕಿಲ್ಲ
ಎನ್ನುವುದೇ ದೊಡ್ಡ ಹಾಸ್ಯದ ಚಟಾಕಿ..

ಮನೆಯವರಿಗೆ ಸತ್ತವನದು ಶವ, ಆದರೆ ರಾಜಕೀಯಕ್ಕೇ
ಬಳಸಿಕೊಳ್ಳುವನಿಗೆ ಬಂಗಾರದ ಭಂಡಾರ…
ಕತ್ತಲು ಕನಸಿನಾಟಕ್ಕೆ ಮೈದಾನವಾದರೆ,
ಬೆಳಕು ಮನುಷ್ಯನ ಕಾಮ,ಕ್ರೋದ,ಮದ
,ಮತ್ಸರದ ಸ್ವಾರ್ಥಕ್ಕೆ ಗುರಿಯ ಬಿಲ್ಲು…

ಬಲಿಯಾಗುವವರು ಬಡವರೇ ಆದರೆ, ಲೆಕ್ಕಕ್ಕೆ
ಸಿಕ್ಕಗುವುದಿಲ್ಲ ಯಾವ ಗೋರಿ ಕಲ್ಲಿನ ಮೇಲೆ
ಹೆಸರಾಗಿಯೂ ಉಳಿಯುವುದಿಲ್ಲ…

ರಕ್ತ ಕೆಂಪು ಎನ್ನುವುದಕ್ಕೆ ಬಡವನ ಹೆಣ ಬಿದ್ದಾಗ ಸಾಕ್ಷಿ
ದೊರೆತಂತೆ ಧನಿಕನ ಖುಷಿ ಚಿಲುಮೆ,
ಈ ರಕ್ತ ಬಳಸಿಕೊಂಡಾಗ ಹಲವು ಮುಖ, ಹಲವು ಬಣ್ಣ
ತುತ್ತು ಅನ್ನಕ್ಕಾಗಿ ಹೋರಾಡಿ ಸತ್ತವರು ಸಿಂಹಾಸನಕ್ಕೆ
ಏರಿದ್ದು ಇತಿಹಾಸ ಕಂಡಿಲ್ಲ
ಮೆರೆದವರ ಮಕ್ಕಳು ನಿಯತ್ತಿನಿಂದ ಬದುಕಿದ್ದು ಯಾರು ಕಂಡಿಲ್ಲ…

-ವೃಶ್ಚಿಕಮುನಿ

ಕನಸು

ಬದುಕ ಬಹು ಬದುಕಿಸುವುದು
ಕನಸೆಂಬ ಸಾರಥಿಯಲ್ಲವೆ.
ಇಂದಲ್ಲ ನಾಳೆ ಮಳೆ ಬಂದು,
ಬಿತ್ತ ಬೀಜ ಚಿಗುರೊಡೆದು.
ಫಲಭರಿತ ಹಚ್ಚ ಹಸಿರ ನೋಡುವ
ರೈತನ ಕನಸಲ್ಲವೇ
ಮರು ಬಿತ್ತಿಸುವುದು.

ಬದುಕ ಬಹು ಬದುಕಿಸುವುದು
ಕನಸೆಂಬ ಸಾರಥಿಯಲ್ಲವೆ
ಮನ ಮನದ ನಡುವೆ,
ಪ್ರೀತಿಯ ಮಾಧುರ್ಯ ತೆಯ ಹಬ್ಬಿ.
ಅದರ ಇದರ ಬದುಕ ಅದರದೋಳ್,
ಸಮ್ಮಿಲನ ಗೊಳ್ಳಿಸುವುದಲ್ಲವೆ
ಯೌವನದ ಕನಸು.

ಬದುಕ ಬಹು ಬದುಕಿಸುವುದು
ಕನಸೆಂಬ ಸಾರಥಿಯಲ್ಲವೆ
ಪ್ರಸ್ತುತಯ ಚಿಂತೆಯ ಮರೆಸಿ,
ಪರಿದಿಗಳ ಕಿತ್ತೊಗೆಯಿಸಿ,
ಅಸಾಧ್ಯವಾದುದರ ಆಕಾಂಕ್ಷಿಯಾಗಿಸಿ,
ಆ ಕನಸ ಕಣ್ಗಳೆದುರು ಈಡೇರಿಸುವುದು
ಮಹತ್ವಾಕಾಂಕ್ಷೆಯ ಕನಸಲ್ಲವೇ.

ಬದುಕ ಬಹು ಬದುಕಿಸುವುದು
ಕನಸೆಂಬ ಸಾರಥಿಯಲ್ಲವೆ
ಇಂದು ಇರುವ ಕಷ್ಟ,
ನಾಳೆ ಇರದು ಎಂದು.
ನೋವಿನಲ್ಲಿ ಮಿಂದ,
ಮನಕೆ ಕಗ್ಗತ್ತಲಲ್ಲಿ ಬಂದ ಕನಸು
ಆಲಿಂಗಿನದಿ ಬದುಕಿಸುವುದಲ್ಲವೆ
ನೈಜ ಬದುಕ

-ಚಾರುಶ್ರೀ ಕೆ ಎಸ್

ಸ೦ಪಾದಕರು ತಿರಸ್ಕರಿಸಿದ ಕವಿತೆ

ಆವತ್ತಿನ ದಿನ ತುಂಬಾ ಉತ್ಸಾಹದಿಂದ
ಅವರನ್ನು ಭೇಟಿಯಾಗಿದ್ದೆ
ಹಗಲು ರಾತ್ರಿ ಸೇರಿ
ಸತತ ಹದಿನೈದು ದಿನಗಳವರೆಗೂ
ಘಟಿತ ಮತ್ತು ಅಸ೦ಘಟಿತಗಳ
ಜೊತೆಗೂಡಿ ಬರೆದ ಕವಿತೆಯೊಂದನ್ನು
ನಮಸ್ಕಾರಗಳೊ೦ದಿಗೆ ಅವರೆದುರಿಗಿಟ್ಟಿದ್ದೆ,
ಒ೦ದು ಉತ್ತಮ ಪ್ರತಿಕ್ರಿಯೆ ಸಿಗಬಹುದು
ಅನ್ನುವ ನಿರೀಕ್ಷೆಯಲ್ಲಿ

ನಾಲ್ಕೈದು ನಿಮಿಷಗಳು
ಮೌನ ಓದಿದ ಅವರು
ಓದಿದ್ದನ್ನು ಅಷ್ಟೊಂದು ಸುಲಭವಾಗಿ
ಒಪ್ಪಿಕೊಳ್ಳದೇ ಇರುವುದಕ್ಕೆ
ಸಾಕಷ್ಟು ಕಾರಣಗಳು
ಒ೦ದೊ೦ದಾಗಿ
ಬಿಡಿಸಿ ಹೇಳಿದ್ದರು

ಅವರು ಹೇಳಿದ೦ತೆಯೇ
ಬರೆದ ಅಕ್ಷರಗಳು ಮತ್ತೊಮ್ಮೆ
ಒ೦ದೊ೦ದಾಗಿ ಬಿಡಿಸಿ
ಓದುತ್ತಾ ಹೋದಂತೆ,
ಮುಂದೆ ನಾನು ಎನನ್ನೂ
ಮಾತನಾಡುವ ಹಾಗಿರಲಿಲ್ಲ
ಒಂದು ಸರಳವಾಗಿ
ಅರ್ಥ ಹೇಳುವ೦ತಹ ಸಾಮರ್ಥ್ಯ
ನನ್ನ ಅಕ್ಷರಗಳಿಗೆ ಇಲ್ಲದಿರುವಾಗ,
ಬರೆಯುವ ಉತ್ಸಾಹದಲ್ಲಿ
ಓದುವ ಹವ್ಯಾಸವನ್ನು ಕಳೆದುಕೊಂಡಾಗ…..

-ನರೇಶ ನಾಯ್ಕ

ಬೇಂದ್ರೆಯಜ್ಜ

ಟೀಕಾ ಮಾಡೋ ಮಂದಿಗೆಲ್ಲ
ಬ್ಯಾರೆ ಲೋಕ ತೋರಿಸ್ಯಾನ
ಲೋಕಾರೂಢಿ ಮೆಚ್ಚುವಂಗ
ಮಾತಿನ ಚಾಟಿಯ ಬೀಸ್ಯಾನ

ಅಕ್ಕರತಿಲೇ ಅಳತಿಯ ಮೀರಿ
ಪದದಿ ಪ್ರೀತಿಯ ಹಂಚ್ಯಾನ
ಸೊಕ್ಕುಕ್ಕಿದಾವ್ರ ಸಲ್ಲ ಅಡಗಿಸಿ
ಸವಿ ಸೊಲ್ಲುಗಳ ಬರದಾನ

ನಾಕ ತಂತಿಯೊಳಗ ಲೋಕದ
ಆಗು ಹೋಗು ತೋರಿಸ್ಯಾನ
ಮದವ ಮೆಟ್ಟಿ ಪದಗಳ ಕಟ್ಟಿ
ಅಂಬಿಕಾತನಯ ಎನಿಸ್ಯಾನ

ಮಾರಿಗಿ ಹೊಡದಂಗ ನೇರ
ನುಡಿಗಳ ಹರಿದು ಬಿಡ್ತಾನ
ಗರುವಿರದ ಗಾರುಡಿಯಂತೆ
ಪದಕೆ ಪದ ಜೋಡಿಸಿಡ್ತಾನ

ಬಿಟ್ಟೆನೆಂದರೂ ಬಿಡದ್ಹಾಂಗ
ಪದದ ಗುಂಗ ಹಿಡಸ್ಯಾನ
ಬಾಳಿನುದ್ದಕೂ ಬ್ಯಾರೆದಾವ್ರ
ಹಾಳು ಹಂಗ ತೋರದಾನ

-ಎಮ್ಮಾರ್ಕೆ

ಅತ್ಯಾಚಾರ

ನಾಲ್ಕು ಜನ ಬಂದಿದ್ದಷ್ಟೇ ನೆನಪಿದೆ
ಬಲಿ ತೆಗೆದುಕೊಳ್ಳುವ ಕ್ರೂರಿಗಳಂತೆ
ಅವಳು ಅಡ್ಡ ಬಿದ್ದು ಒದ್ದಾಡಿದಾಗ
ಬಾಯಿ ಹಿಡಿದು ಮುಚ್ಚಿದರೂ
ಚಿರುತಿದ್ದಾಳೆ ಕೋಗಿಲೆಯಂತಲ್ಲ
ಕಿರುಚುವ ನಾಯಿಯಂತೆ
ಪರಚುವ ಹಂದಿಗಳ ಮುಂದೆ

ಕಾಲು ಗಟ್ಟಿ ಹಿಡಿಯುವಾಗ
ಗಂಡಸರು ಈಗ ನಾಲ್ಕು ಅಲ್ಲ
ಎಂಟು, ಹನ್ನೆರೆಡು, ನೂರು, ಇನ್ನೂರು
ಇಡೀ ಸಮಾಜವೇ ಆಗಿ ಕಾಣುತ್ತಿದೆ
ನನ್ನೊಳಗಿನ ಅಂತರಾತ್ಮ ಓಡಬೇಕೆನ್ನುತ್ತದೆ
ಆದರೆ ಅವಳೊಳಗಿನ ಶೀಲ, ಸೀತೆ, ಧರಿತ್ರಿಯರು
ಬಿದ್ದು ಧರೆಯಲ್ಲಿ ಒದ್ದಾಡುತ್ತಿದ್ದಾರೆ
ಧರೆಯಾದರು ಹತ್ತಿ ದಗದಾಗ ಉರಿಯಬಾರದೆ?
ಅವಳ ಕರುಳ ಬತ್ತಿ ಉರಿಯುತ್ತಿದೆ
ಇಡೀ ರಕ್ತ ಕೊತಕೋತಾನೆ ಕುದಿದು ಆವಿಯಾದಾಗ
ಓಡುತ್ತಿದ್ದಾಳೆ ಸಮಾಜವ ಧಿಕ್ಕರಿಸಿ !
ಓಡುತ್ತಲೇ ಇದ್ದಾಳೆ
ನಾಡ ಮೃಗಗಳಿಂದ ಬಿಡಿಸಿ
ಕೈ ಬಿಗಿ ಹಿಡಿದು ಅವಳ ಮುಗಿಸಿಬಿಟ್ಟರು
ಮುಗಿದಿಲ್ಲ ಕಥೆ !

-ಶಕುಂತಲಾ ಪ್ರ. ಬರಗಿ

ಪಾಳು ಕೋಟೆಯ ಕಲ್ಲುಗಳ ಸ್ವಗತ

ಹಲವು ದಶಕಗಳ ಹಿಂದೆ
ನಾಡಿನ ರಕ್ಷಣೆಗಾಗಿ
ಎಲ್ಲೆಲ್ಲಿಂದಲೋ ಬಂದ ನಾವುಗಳು
ನಮಗಾದ ನೂರೆಂಟು ನೋವು ಸಹಿಸಿ,
ಶಿಸ್ತಿನಿಂದ ಸಾಲು ಸಾಲಾಗಿಯೂ
ಒಬ್ಬರ ಮೇಲೆ ಒಬ್ಬರಂತೆಯೂ
ಅಚಲವಾಗಿ ನಿಂತು, ವೈರಿಗಳು
ಹಾರಿಸಿದ ಭಾರೀ ಮದ್ದು ಗುಂಡುಗಳನು
ಎದೆಗುಂದದೇ ಎದುರಿಸಿ,
ನಿಸ್ವಾರ್ಥ ಸೇವೆ ಸಲ್ಲಿಸಿಸುತ
ನಮ್ಮನ್ನೇ ಅಪಾರವಾಗಿ ನಂಬಿದ್ದ
ಅರಸರಿಗೆ ಸಾಲು ಸಾಲುಗಳಲ್ಲಿ
ಅಪ್ರತಿಮ ವಿಜಯವನ್ನು
ತಂದು ಕೊಟ್ಟು, ಹೆಮ್ಮೆಯಿಂದ
ಮೆರೆದಿದ್ದೆವು ಅಂದು ನಾವು.
ಬರಬರುತ್ತ ನಮ್ಮೊಳಗಿನ ಒಗ್ಗಟ್ಟು ಸಡಿಲಾಗಿ
ಮೊದಲಿದ್ದ ಶಕ್ತಿ ಕುಂದುತ್ತ ಬಂದಾಗ,
ಶತ್ರುಗಳು ನಡೆಸಿದ ಫನ ಘೋರ
ದಾಳಿಗೆ ಸಿಲುಕಿ, ತತ್ತರಿಸಿ ಎಲ್ಲೆಂದರಲ್ಲಿ
ಹೇಗೆಂದರೆ ಹಾಗೆ, ನೆಲದ ಮೇಲೆ
ಅಳದ ಕಂದಕದ ಒಳಗೆ ಬಿದ್ದಿದ್ದ ನಾವು
ಧೂಳು – ದುರ್ವಾಸನೆ ಕುಡಿಯುತ್ತ
ಎಲ್ಲರಿಂದಲೂ ” ಥೂ.. ಪಾಳು ಕೋಟೆಯ
ಕಲ್ಲು” ಎಂದೆನಿಸಿಕೊಳ್ಳುತ, ಅನಾಥರಂತೆ
ದು:ಖಿಸುತಿಹೆವು ಇಂದು

-ಅರವಿಂದ.ಜಿ.ಜೋಷಿ.

ಅವ್ವ ಕಲಸಿದ ಹಸಿಗೊಜ್ಜು!

ಒಬ್ಬಟ್ಟಿಗೇನೋ ಬರ; ಅವ್ವ ಸಂಕ್ರಾಂತಿಗೋ,
ಯುಗಾದಿಗೋ; ಇಲ್ಲ ಶಿವರಾತ್ರಿಗೋ
ಯಾವಾಗಲಾದರೊಂದು
ಸಲ ತಟ್ಟುತ್ತಿದ್ದಳು.

ಆದರೆ, ಹಸಿಗೊಜ್ಜಿನ ವಿಚಾರವಾಗಲ್ಲ,
ಹಗಲೆನ್ನದೇ ಇರುಳೆನ್ನದೇ
ಸಿಡಿದು ಪುಟಿಯುವ ಕರಿಮುದ್ದೆಗದು
ಜೊತೆಯಾಗುತ್ತಿತ್ತು.
ನಮ್ಮ ಬಾಯಲ್ಲಿ ನೀರೂಡುತ್ತಿತ್ತು.

ಅವ್ವ ಹೇಗೆ ತನ್ನೆಲ್ಲಾ ಕಷ್ಟ ನಷ್ಟಗಳಿಗೆ
ಇದ್ದಂತೆ ಒಗ್ಗಿಕೊಳ್ಳುತ್ತಿದ್ದಳೋ…
ಅಂತೆಯೇ ಹಸಿಗೊಜ್ಜು,
ಎಲ್ಲದರೊಂದಿಗೂ ಸರಾಗವಾಗಿ
ಹೊಂದಿಕೊಳ್ಳುತ್ತಿತ್ತು!

ಇಳಿಬಿಟ್ಟ ಹಸಿಗೊಜ್ಜಿಗೆ ಮುದ್ದೆ
ಕದಡಿ ಕುಡಿದುಬಿಡುತ್ತಿದ್ದ ನಮಗೂ
ಅಪ್ಪನ ಸಾರಾಯಿ ಬಾಯಿಗೂ
ರುಚಿ ಭಿನ್ನವಾದರೂ
ಸ್ವಾದ ಒಂದೆಯಾಗಿರುತ್ತಿತ್ತು.

ಕಣ್ಣಮುಂದೆ ಒಬ್ಬಟ್ಟಿದ್ದರೂ ಈಗ
ಬಾಯಿ ನೀರಾಡುವುದಿಲ್ಲ!
ಹಸಿಗೊಜ್ಜಿಗೆ ಮನಸೋರೆಗೊಂಡಂತೆ
ಬೇರಾವುದಕ್ಕೂ ಮನ ಶರಣಾಗುವುದಿಲ್ಲ.

ಏಕೆಂದರೆ, ಅವ್ವ ಕಲಸಿದ ಹಸಿಗೊಜ್ಜು
ಗತಿಯಿಲ್ಲದರ ಗುರುತಲ್ಲ,
ರುಚಿಯನ್ನುಡುಕಿ ಪರೆದಾಡುವ
ನಾಲಿಗೆಯೊಂದರ ಬಯಕೆ !

-ಮನು ಗುರುಸ್ವಾಮಿ

ಈ ಬುವಿಯಲ್ಲಿ

ಈ ಬುವಿಯಲ್ಲಿ ನೀರು
ಜೀವಜಲ
ಗಾಳಿಯೋ ಉಸಿರು ಕಾವ
ಚೇತನದುಸಿರು
ಹಸಿರೋ ಬದುಕೊಲವ
ಪ್ರೀತಿಯ ಹಣತೆ
ಮಣ್ಣು ಬೇಕಾದದ್ದು
ನೀಡುವ ಘನತೆ
ಕಡಲೋ ಅಲೆಯೊಳಗಿನ
ಸಂಭ್ರಮದ ಒರತೆ
ಹುಟ್ಟು ಸಾವು
ಸ್ವಾಭಾವಿಕ ಜೀವಕ್ಕೆ
ಪ್ರಾಣಿ ಪಕ್ಷಿಗಳೋ ಅದರದೇ
ಸ್ವರೂಪದ ಪ್ರತಿರೂಪ
ಬದಲಾಗಿದ್ದು ಸಾವಿರ
ಯೋಚನೆ ವಿಚಾರಗಳು
ಆಸೆಯ ಸುತ್ತ ಸುಳಿವ
ಮನಸಿನ ಮಾತುಗಳು
ಅದೃಶ್ಯ ಆಸೆ ಬಿಂಬಗಳು
ಒಳಿತುಂಟು ಕೆಡಕು ಜೊತೆಗೆ
ಮಾತು ಮೌನ ಜೊತೆಗೆ
ಅಲ್ಲಲ್ಲಿ ಕನಸುಗಳು
ಬದುಕೆಂದರೆ ಬದಲಾಗದಿರಲಿ
ಅಂತ:ಕರಣ ಭಾಂದವ್ಯ
ಹಂಚಿತಿನ್ನುವ ಕಾಗೆಯ ಕನಿಕರ
ಅರ್ಥದೊಳಗೆ ಮೌನವಾಗಿರಲಿ
ಅಂತರಂಗದ ಸಾಲುಗಳು
ಪ್ರೀತಿಯೊಳಗೆ ಅವಿತುಕೊಳ್ಳಲಿ
ಬೇಡದ ದ್ವೇಷಗಳು
ನಗುವೊಂದು ಹಾಡಾಗಿ
ನೆಲ ನಗುತಿರಲಿ……
ಮನುಕುಲದ ಮಗುವೊಂದು
ಮತ್ತೆ ಆಡುತಿರಲಿ……

-ನಾಗರಾಜ ಬಿ.ನಾಯ್ಕ

ಬದುಕಿನಾಟ

ಬಟ್ಟೆಯೊಳಗಿನ ದೇಹ ಕಾಣದು
ದೇಹದೊಳಗಿನ ಭಾವ ನಿಲುಕದು
ಭಾವದೊಳಗಿನ ಬಂಧ ತಿಳಿಯದು
ಭಾವ ಬಂಧಕೆ ಬಟ್ಟೆ ಸಾಕಾಗದು

ದಾರಿ ದೂರವೂ ಪ್ರೀತಿ ಮಧುರ
ಕೋರಿ ಸಂಬಂಧವ ಮನವು ಸನಿಹ
ಮಾರಿ ಅಷ್ಟ ಐಶ್ವರ್ಯ ಧನವನು
ಪಡೆಯಲಾಗದು ಪ್ರೀತಿ ಋಣವನು

ಮೋಹ ಕಾಮ ಸ್ವಾರ್ಥ ಮತ್ಸರ
ಶುದ್ಧ ಪ್ರೀತಿಯು ತರುವ ವಿಚಾರ
ತಾನು ತನ್ನದು ತನಗೇ ಬೇಕೆನುತ
ವೇಣು ನಾದದ ಬಲೆಗೆ ಬೀಳುತ

ಒಂಟಿ ಬದುಕು ತೀರಾ ನೀರಸ
ಗಂಟು ಹಾಕಲು ಪರರ ಸಾಹಸ
ಜಂಟಿಯಾಗಿ ಇರಲು ಕಷ್ಟವೂ
ತಂಟೆ ಮಾಡುತ ಜಗಳ ಕದನವೂ

ಪ್ರೀತಿ ನೆಮ್ಮದಿ ಶಾಂತಿ ಅರಸುತ
ಭೀತಿ ಬಾಳುವೆ ನಿತ್ಯ ಕಳೆಯುತ
ಕೋಟಿ ಹಣದ ಆಸೆ ಇಡುತ
ಮೇಟಿ ವಿದ್ಯೆಯೇ ಮೇಲು ಎನುತ

ಬದುಕಿನಾಟವು ಸಾಗಿ ಮುಂದು
ನೋವಿನಾಟಕೆ ಕೊನೆಯು ಎಂದು
ತನು ಮನದ ಸಂತಸ ಬಯಸಿ ಇಂದು
ಮನುಜ ಬಯಕೆಗೆ ಅಂತ್ಯ ಎಂದು?

-ಪ್ರೇಮಾ ಆರ್ ಶೆಟ್ಟಿ

ಚಿಂತಿಸಿದಷ್ಟೂ ಹೆಚ್ಚುವ ಸಮಸ್ಯೆ

ಬದಲಾದ ಜೀವನ ಶೈಲಿಯಲ್ಲಿ
ತರ ತರದ ಶಾಂಪೂಗಳು
ಬಗೆಬಗೆಯ ತೈಲಗಳ ಬಳಕೆಯಲಿ
ಕೂದಲು!

ಬಳಬಳನೆ ಉದುರುತ್ತಿವೆ
ಬಾಚಿಕೊಳ್ಳೋ ಮೊದಲೇ
ಬುಡ ಸಹಿತ ಸಿಕ್ಕ ಸಿಕ್ಕಲ್ಲೆಲ್ಲ ತಲೆಕೂದಲು!

ಕಸಗುಡಿಸೆಂದರೆ ಕೆಲಸದಾಕೆ
ಸಿಡಿಮಿಡಿ ಎಂಬಳು
ಪೊರಕೆಗೆ ಸುತ್ತಿಕೊಂಡಿವೆ
ಕೂದಲು!

ಮಡಿ ಮೈಲಿಗೆಯೆಂದು
ದೂರ ಸರಿವ ಅತ್ತೆಗೆ
ಪೂಜೆಯ ಹೂವುಗಳಲ್ಲೇ
ಅಡಗಿವೆ ಕೂದಲು!

ವೇದ ಸುಳ್ಳಾದರೂ ಗಾದೆ
ಸುಳ್ಳಲ್ಲ!
ಗಂಡನ ಊಟದಿ
ಮೊಸರಲ್ಲೂ ಕೂದಲು!

ಬೊಗಳೆ ಹರ್ಬಲ್
ಟಿಪ್ಸ್ ಗಳು,
ಜಾಲತಾಣದ ತುಂಬೆಲ್ಲ
ಉದ್ದುದ್ದ ಕೂದಲು!

ಬಣ್ಣ ಮೆತ್ತಿದರೆ ನಾಲ್ಕೇ
ದಿನ ಮಿರ ಮಿರಮಿಂಚಿವೆ
ಕಪ್ಪನೆ ಕೂದಲು!

ಮತ್ತದೇ ನಿದ್ರೆಯಿಲ್ಲದ
ರಾತ್ರಿಗಳು ಹೆಚ್ಚುತ್ತಲೇ ಇವೆ
ಸಿಲ್ವರ್ ಕೂದಲು!

-ಕುಸುಮಾ.ಜಿ.ಭಟ್

ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x