“ಕತ್ತಲ ಹೂವು” ನೀಳ್ಗತೆ (ಭಾಗ ೯): ಎಂ.ಜವರಾಜ್

ಭಾಗ -9

ಅವತ್ತು ಅಡಿನಿಂಗಿ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಮೂಲೇಲಿದ್ದ ಮರದ ಕೆಳಗೆ ನೀಲ ಶಿವನಂಜ ನಿಂತಿದ್ದು ನೋಡಿ ಲಕಲಕ ಅಂತ ಊರಿಗೇ ಗೊತ್ತಾಗುವಂತೆ ಮಾತಾಡಿದ್ದಾಯ್ತು. ಆಮೇಲೆ ಏನಾಯ್ತು…

ಅವತ್ತೊಂದಿನ ನಡು ಮದ್ಯಾಹ್ನ. ನೀಲ ಕಾಲೇಜು ಮುಗಿಸಿ ಒಬ್ಬಳೇ ಬರುತ್ತಿದ್ದಳು. ನಸರುಲ್ಲಾ ಸಾಬರ ಭತ್ತದ ಮಿಲ್ ಕಾಂಪೌಂಡ್ ಕ್ರಾಸ್ ಹತ್ರ ಟ್ರಿಣ್ ಟ್ರಿಣ್ ಅಂತ ಬೆಲ್ಲು ಮಾಡುತ್ತಾ ಸೈಕಲ್ ಏರಿ ಬಂದ ಶಿವನಂಜ ಸರ‌್ರನೆ ಸೈಕಲ್ ನಿಂದ ಇಳಿದು ಅವಳ ಹೆಜ್ಜೆಗೆ ಹೆಜ್ಜೆ ಹಾಕ್ತ ಸೈಕಲ್ ತಳ್ಳಿಕೊಂಡು ಅವಳ ಸಮಕ್ಕೆ ನಡೆದಿದ್ದ. ಅವಳು ಹಲ್ಲು ಕಿರಿದಳು. ಇವನೂ ಉಬ್ಬಿದ. “ನೀಲ ನೀನು ಡ್ಯಾನ್ಸ್ ಮಾಡ್ದಯಂತ.. ದೊಡ್ಬಸ್ವ ಹೇಳ್ದ.. ನಮ್ಮಪ್ಪ ಕರ‌್ಕ ಹೋಗಿದ್ನಂತ. ಅದೇನ ಆಯ್ತು ಬುಡು. ಆದದೆಲ್ಲ ಒಳ್ಳೇದ್ಕೇ ಅನ್ಕ. ಈಗ ನಾ ಹೇಳ್ದಾಗಿ ಕೇಳು.. ಆದ್ರ ನಾ ಸೇರುಸ್ಕೊಟ್ಟಿ ಅಂತ ಹೇಳ್ಬ್ಯಾಡ. ಅವತ್ತೆ ಹೇಳಿದ್ರ ಇಷ್ಟೊತ್ಗ ನಿನ್ನೆಸ್ರು ಪೇಪರ‌್ಲೆಲ್ಲ ಬರಂಗಿ ಮಾಡನು. ಆ ಅಗ್ರಹಾರನೆ ನಂದು ನೀಲ.. ಅಲ್ಲಿ ನಿಂಗ ಯವಸ್ತಿ ಮಾಡ್ತಿನಿ” ಅಂದ. ನೀಲ ರಂಗಾದಳು. ಮಾತೇ ಆಡದೆ ನಸು ನಕ್ಕಳು.

ಇದಾಗಿ ಮೂರು ದಿನವಾಯ್ತು. ಇದೆಲ್ಲವನ್ನು ಅವ್ವ ಚೆನ್ನಬಸವಿಗೆ ಹೇಳಿದ್ದಳು. ಚೆನ್ನಬಸವಿ ಅವರಪ್ಪನಿಂದ ಆಗದ್ದು ಮಗನಿಂದಾದರು ಆಗ್ಲಿ. ಅವ್ಳ ಆಸೆ ಈಡೇರಲಿ ಅಂತ ಮನಸಲ್ಲೆ ಅಂದ್ಕೊಂಡದ್ದು ಬಾಯಿಬಿಟ್ಟು ಹೇಳದೆ “ಹುಷಾರು ತಲ ಬಗ್ಗುಸ್ಕಂಡು ಹೋಗ್ಬೇಕು ಬರ‌್ಬೇಕು. ಏನಾ..” ಅಂತ ತಾಕೀತು ಮಾಡಿದ್ದಳು. ನೀಲ ಮಾತಾಡದೆ ತಲೆಯಾಡಿಸಿದ್ದಳು.

ಅವತ್ತು ಮೊಕ್ಕತ್ತಲು. ಕಾಲೇಜು ಮುಗಿಸಿದವಳು ಮನೆ ಕಡೆ ನಡೆಯದೆ ಅಗ್ರಹಾರದ ಕಡೆ ನಡೆದು ರಾಮಂದ್ರದ ಕಾಂಪೌಂಡ್ ಮಗ್ಗುಲಿಗೆ ಎದೆಗೆ ಪುಸ್ತಕ ಎರಿಕಂಡು ನಿಂತಿದ್ದಳು. ಅಷ್ಟೊತ್ತಿಗೆ ಶಿವನಂಜ ಭರ‌್ರಂತ ಬಂದು ಸೈಕಲ್ ನಿಲ್ಲಿಸಿ ರಾಮಂದ್ರದ ಒಳಗೋಗಿ ಒಂದಷ್ಟೊತ್ತು ಕಳೆದು ವಾಪಸ್ಸು ಬಂದು “ನಾಳಯಿಂದ ಬಾ. ಯಾರು ಏನಂದ್ರು ತಲ ಕೆಡುಸ್ಕಬ್ಯಾಡ. ನಾ ಎಲ್ಲ ಹೇಳಿನಿ ಮಾತಾಡಿನಿ. ಮಾರಾಜ್ರ ಅರಮನೇಲಿ ಮಾಡ್ತಿದ್ರಲ್ಲ ರಾಣಿರು ಆ ಡ್ಯಾನ್ಸೆಲ್ಲ ಕಲುಸ್ತರಂತ. ನಿ ಹೆಂಗ್ ಮಾಡ್ದಯ ಅದ್ಯಾವ್ ಡ್ಯಾನ್ಸ್ ಮಾಡ್ದಯ ನಂಗೊತ್ತಿಲ್ಲ. ಮುಂದುಕ್ಕ ನಿನ್ನಿಷ್ಟ. ಅವತ್ತೆ ನಂಗಿಂಕ್ರ ಹೇಳಿದ್ರ ನಾ ಎಲ್ಲ ನಿಬಾಯಿಸನು. ಆದ್ರ.. ಸರಿ ಬುಡು ಆಗೋಗಿರದೆಲ್ಲ ಈಗ್ಯಾಕ.. ನಮ್ಮಪ್ಪ ಹಳ ಕಾಲ್ದಂವ ನೀಲ. ಅಂವ ದರ್ಬಾರ್ ಮನ್ಸ. ಕೆಮ್ಮಂಗಿಲ್ಲ ಕ್ಯಾಕರ‌್ಸಂಗಿಲ್ಲ. ಅವ್ನಿಗೆ ಯಾರ‌್ಯಾರ ಎದುರುಗ್ ಬಂದು ಬುದ್ದಿ ನಮಸ್ಕಾರ ಅಂದ್ರ ಮುಗಿತು.. ಕಿರೀಟ ತೊಡುಸ್ಕಂಡಾಗಿ ಆಡ್ತನ ಕ ನೀಲ. ಅಂವ ಬುದ್ದಿ ಕಲ್ತಿಲ್ಲ. ಕಾಲಕ್ ತಕ್ಕಂತ ಇರ್ಬೇಕು” ಅಂದ. ನೀಲ ತಲೆಯಾಡಿಸಿ ಎದೆಗೆ ಪುಸ್ತಕ ಎರಿಕಂಡು ನಡೆದಳು. ಅವಳೊಂದಿಗೆ ಶಿವನಂಜನೂ ನಡೆದ. ಅವಳು ನೋಡದಿದ್ದರು ಇವನೇ ಅವಳನ್ನು ನೋಡೋದು ಉದ್ದುದ್ದ ಮಾತಾಡೋದು. ಅವಳು ಅವನ ಹತ್ತು ಮಾತಿಗೆ ಒಂದ್ಸಲ ನೋಡಿ ಮುಖದಲ್ಲೆ ಸಣ್ಣಗೆ ನಗ್ತಿದ್ದಳು. ಅವಳ ಆತರ ನಗುಗೆ ಅವನ ಕಾಲು ನೆಲದ ಮೇಲಿರದೆ ಆಕಾಶದಲ್ಲಿ ಹಾರಾಡ್ತ ಇರೋ ತರ ಮಾತಾಡ್ತನೇ ನಡೆದಿದ್ದ.

ಹಿಂಗೆ ಒಂದೆರಡು ತಿಂಗಳು ಕಳೆದು ಹೋಯ್ರು.

ಅಗ್ರಹಾರದ ಬೀದಿಬೀದಿಲಿ ಇವಳದೇ ಮಾತು. ಇದು ಯಂಕ್ಟಪ್ಪನಿಗೂ ಗೊತ್ತಾಗಿ ಚಿಂತಾಕ್ರಾಂತನಾದ. ಒಂದಿನ ಚೆನ್ನಬಸವಿಯ ಕರೆದು ತೊದಲುತ್ತಲೇ ಹೇಳಿದ. ಚೆನ್ನಬಸವಿಗೆ ಧಣಿಯ ತೊದಲು ಹೊಸದಾಗಿ ಕಂಡರು ಸುಮ್ಮನೆ ಹೂಂಕಂಡಳು.

ಮಾದಿಗೇರಿಯೊಳಗೆ ನೀಲಳಿಗೆ ಹುಬ್ಬು ಹಾರಿಸಿದವರಿದ್ದರು. ಇದು ಗೊತ್ತಿರದೆ. ಅದ್ಕೂ ಪೈಪೋಟಿ. ನೀಲ ಅವರ‌್ಯಾರಿಗೂ ಕ್ಯಾರೆ ಅಂದಿರದೆ ಕಾಲಲ್ಲಿದ್ದದ್ದು ಕೈಗೆ ಬಂದಿದ್ದು ಊರಿನ ಬೀದಿಬೀದಿಗೂ ಗೊತ್ತಿದ್ದ ಸಂಗತಿ. ಅದು ಅಡಿನಿಂಗಿ ಸುಪರ್ದಿಯಲ್ಲಿ ರಂಪವಾಯ್ತಲ್ಲ. ಅದು ಮುಗಿದು ಒಂದಷ್ಟು ದಿನ ಕಳೆದಿತ್ತು. ಶಿವನಂಜ ಮಲ್ಲನಕೇರಿ ಏರಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಕುಲ ಸೇರಿತಲ್ಲ.. ಯಂಕ್ಟಪ್ಪ ಆ ಕುಲಕ್ಕೆ ಗೌರವ ಕೊಟ್ಟಿದ್ದರಲ್ಲ.. ಹುಬ್ಬು ಹಾರಿಸಿದವನಿಗೆ ಕುಲದ ತೀರ್ಪು ಕುದಿಯಾಗಿ ಶಿವನಂಜನನ್ನೇ ಕೆಕ್ಕಳಿಸಿ ನೋಡಿ ಮನಸಲ್ಲದ ಮನಸಲ್ಲಿ ಊರು ಬಿಟ್ಟೋದ್ನಲ್ಲ..

ಇದಾಗಿ ತಿಂಗ್ಳಾಯ್ತು.

ಕುಲದ ಪಾಡಿಗೆ ಕುಲ ತೀರ್ಪು ಕೊಟ್ರೂ ಅಡಿನಿಂಗಿಯ ಲಕಲಕ ಸದ್ದು ನಿಲ್ಲಲಾಗದೆ ಜಗಜ್ಜಾಹೀರಾಗ್ತಿತ್ತು. ಈ ಹೊತ್ತಲ್ಲೆ ಚೆನ್ನಬಸವಿಗೆ ಯಂಕ್ಟಪ್ಪ ಸನ್ನೆ ಮಾಡಿ “ರಾತ್ರುಕ ಬಾಳತೋಟ್ದ ಮಗ್ಗುಲ್ಗ ಬಾ” ಅಂತ ಚೆನ್ನಬಸವಿನ ಕರೆದದ್ದಕ್ಕೆ ರಾತ್ರಿಯಾಗುವುದನ್ನೆ ಕಾದು ಯಾವುದ್ಯಾವುದೊ ನೆಪವೊಡ್ಡಿ ಸಂದಿಮನೆಯಿಂದ ಹೆಜ್ಜೆ ಎತ್ತಿಟ್ಟು ಬಾಳೆತೋಟದ ಮಗ್ಗುಲಿಗೆ ಹೋದವಳ ಮುಂದೆ “ನೀಲುನ್ ಮದ್ವಗ ಏನ್ ಬೇಕು ಅದ ಮಾಡಕ ನಾ ರಡಿ ಅವ್ನಿ. ಮಂಜ ಅವ್ನಲ್ಲ.. ನಿನ್ ತಮ್ಮ ಅವ್ನಿಗೇ ಕೊಟ್ಟು ಮದ್ವ ಮಾಡು” ಅಂತೇಳಿ ಕತ್ತಲಲ್ಲಿ ಕರಗಿದ್ದು ಸರ‌್ರನೆ ಬಂದು ಹೋದಂಗಾಯ್ರು.

ಒಲೆ ಉರಿಯುತ್ತಲೇ ಇತ್ತು. ಇನ್ನೊಂದು ಮುಂಡ್ಗಳ್ಳಿ ಇಕ್ಕಿದಳು. ಅಷ್ಟೊತ್ತಿಗೆ ಹೊರಗೋಗಿದ್ದ ನಿಂಗಯ್ಯ ಕ್ಯಾಕರಿಸುತ್ತ ಬಂದ. ಚೆನ್ನಬಸವಿ ಧೈರ್ಯಮಾಡಿ ಗಂಡನ ಮುಂದೆ ನಿಂತು “ನಾನು ಮೊಬ್ಗೆ ನಿಲ್ಸೊಗ್ಗ ಹೋಗಿ ಮಂಜನ್ನ ಕೇಳ್ಕ ಬತ್ತಿನಿ. ಈ ತಿಂಗ್ಳು ಕಳೇದ್ರೊಳ್ಗ ಕಡ ಕಾರ‌್ತುಗ್ಗ ಮದ್ವ ಮಾಡಿ ಮುಗಿಸ್ಬೇಕು. ನೀನು.. ನಿಮ್ಮೊವ್ವ.. ಆಡ್ಲಿ ಅನ್ಲಿ ನಾ ನನ್ ತಮ್ಮುನ್ಗೆ ಮದ್ವ ಮಾಡದು..” ಅಂತ ರೇಗುತ್ತ ಗಳಗಳನೆ ಅಳುತ್ತ ಹೇಳಿದಳು. ನಿಂಗಯ್ಯನಿಗೆ ಕುಡಿದದ್ದು ಇಳಿದಂತಾಗಿ ಮೆಲ್ಲಗೆ “ಏನಾ.. ಇದೇನಾ.. ಇದ್ಕಿದ್ದಾಗಿ ಮದ್ವಗಿದ್ವ ಅಂದ್ರ ದುಡ್ಡುಕಾಸು ಬ್ಯಾಡ್ವ.. ಕಾಳುಕಡ್ಡಿ ಬ್ಯಾಡ್ವ” ಅಂದ. ಚೆನ್ನಬಸವಿ “ಕಾಲ ಯಾವ್ದ.. ಈಗ ಕಾಲ ಯಾವ್ದ ಹೇಳು ಸಟ್ಗ.. ಸುಗ್ಗಿಕಾಲ. ಕಾಳುಕಡ್ಡಿ ಕೊಡವ್ರು ದಿಕ್ಕಿಲ್ವ. ಅವತ್ತು ಕುಲ ಏನೇಳ್ತು ಗೊತ್ತದ ತಾನೆ. ತಿಂಗ್ಳೊಳ್ಗ ಮದ್ವ ಮಾಡಿ ಮುಗ್ಸಿ ಅಂತೇಳಿಲ್ವ. ಕುಲ ಮೀರಿಯಾ.. ಮೀರಕಾದ್ದ.. ಮನಲಿ ಹೆಣ್ಣವ್ಳ ಅಂದ್ರ ಸೆರುಗುನ್ ಕೆಂಡ ಇದ್ದಂಗಿ ಅನ್ನ ಮಾತದ. ಅದು ನಂಗ ಲೆಕ್ಕುಕ್ಕಿಲ್ಲ. ಆದ್ರ ಈಗಾಗಿರದು ನಿಂಗೇನಾದ್ರು ಗೊತ್ತ. ಗೇದು ತಂದಾಕ್ಬುಟ್ರ ಆದ್ದ. ನಿನ್ ಕಟ್ಕಂಡು ನಾ ಪಟ್ಟಿರ ಸುಕನೇ ಸಾಕು. ಅದು ನನ್ನೆಣ್ಗು ಬರ‌್ದೆ ಇರ‌್ಲಿ. ಹೆಂಗುಸ್ರ್ ಸಂಕ್ಟ ಗೊತ್ತಾ ನಿಂಗಾ..” ಅಂತ ಒಂದೇ ಸಮ ಹೇಳಿದಳು. ಹಂಗೆ “ಅವ್ಳ ನಾ ಏನಾ ಮಾಡವ್ ಅಂತ ಹೋದಿ. ಇನ್ನು ಹಳ ಕಾಲುತ್ತರನೇ ಬದ್ಕಕ್ಬೇಕ.. ಅದ್ಕ ಅವ ಆಸ ಪಟ್ಟ ಅನ್ತ ಏನಾ ಮಾಡಕೋದಿ. ಅದಿರ‌್ಲಿ ಈಗ ನಡಿತಿರ ಇದ್ಯಮಾನ ನನ್ನ ಕಾಡ್ತ ಅದ ಕಣ.. ವಸಿ ಅರ‌್ತ ಮಾಡ್ಕಳಾ..” ಅಂತ ಮೂಗಿನಲ್ಲಿ ನೀರಾಗಿ ಸೋರುತ್ತಿದ್ದ ಗೊಣ್ಣೆಯನ್ನು ಸೀರೆ ಸೆರಗಲ್ಲಿ ಒರೆಸಿಕೊಂಡಳು. ನಿಂಗಯ್ಯನ ಮಾತು ನಿಂತಿತು. ಆಲ್ಲಿ ಕೋಣೆ ಒಲೆಯೊಳಗೆ ಇಕ್ಕಿದ್ದ ಮುಂಡ್ಗಳ್ಳಿ ದಿಗಿದಿಗಿ ಅಂತ ಉರಿಯುತ್ತ ಆ ಉರಿಯ ಜ್ವಾಲೆ ನೀಲಳ ಕಣ್ಣೊಳಗೂ ಉರಿತಾ ಆ ಕಣ್ಣೊಳಗಿನ ನೀರೂ ಕಾದು ಅದು ತೊಟತೊಟನೆ ತೊಟ್ಟಿಕ್ಕಿ ಅದು ನೀಲಳಂತೆ ಜೀವ ಪಡೆದು ಕಥೆಯೊಂದ ಹೇಳಿತು.

*

ಅಂವ ಬೆಳ್ಳಿ ಗೆಜ್ಜೆ ಕೊಡ್ಸಿದ್ದ. ಮಿರಮಿರ‌್ನೆ ಮಿಂಚ ಅರ‌್ಮನೆ ರಾಣೀರು ಉಡೋ ಸೀರ ಕೊಡ್ಸಿದ್ದ ಮೂಗ್ಬಟ್ಟು ಕೊಡ್ಸಿದ್ದ. ಡಾಬ್ನು ಕೊಡುಸ್ದ. ಸಣ್ಣ ಜುಮುಕಿ, ದೊಡ್ಡ ಕಾಸುನ್ ಸರ ಕೊಡ್ಸಿದ್ದ. ಸ್ನೊ ಪೌಡ್ರೂನೂ ಕಣ್ಕಪ್ನೂ ಕಲರ್ ಕಲರ್ ಮೇಕಪ್ ಸಾಮಾನ್ ಜೊತ್ಗ ಡಿಜೈನಾಗಿರ ಕನ್ನಡಿ ಬಾಚಣ್ಗ ಎಲ್ಲ ಕೊಡ್ಸಿದ್ದ. ಎಲ್ಲನು ಸೈಡು ಬ್ಯಾಗೊಳಕ ಹಾಕಂಡು ಎಲ್ರು ಜೊತ ಮೈಸೂರ್ ಬಸ್ ಹತ್ತಿದ್ದಿ. ಅಗ್ರಹಾರದ ಮೇಷ್ಟ್ರು ಕಡೇವ್ರು ಮಸ್ತು ಇದ್ದರು. ಆ ಬಸ್ಸು ರಸ್ಸೊ ರಸ್ಸು. ನನ್ಗ ಸುಸ್ತಾಗದು. ಅವನು ಹಿಂದ ಹತ್ತಿರದು ಗೊತ್ತಾಯ್ತು. ನಂಗ ತಲ ನೋವು ಬರಂಗಾಯ್ತು. ಮೈ ಕೈ ನೋಯಂಗಾಯ್ತು. ಬಸ್ಸು ಕುಲುಕಿ ಬಳುಕಿ ಬರ‌್ರೊ ಬರ‌್ರೊ ಅಂತ ಸದ್ದು ಮಾಡುತ್ತಾ ಹೋಯ್ತಿತ್ತು.

ಮೈಸೂರ್ ಬಂತು. ಅರಮನೆನೂ ಕಾಣ್ತು. ನಾ ಇದೇ ಮೊದಲು ಮೈಸೂರ್ ನೋಡಿದ್ದು. ಆ ಅರಮನೆಯೋ ರಂಗ್ ರಂಗ್. ಈಗ ನನ್ನ ತಲನೋವು ಕಮ್ಮಿಯಾಯ್ತು. ಆ ಅರಮನ ನೋಡಿ ನಿಂತಲ್ಲೆ ಕುಣೀಬೇಕು ಅನ್ನುಸ್ತು. ಅವನು ಹಿಂದಿನಿಂದ ಇಳಿದು ಮೆಲ್ಲಗೆ ಬಂದ. ನಾನು ನೋಡುದ್ರು ನೋಡದ ಹಾಗೆ ನಿಂತ್ಕಂಡಿ. ಅಗ್ರಹಾರದ ಮೇಷ್ಟ್ರು ಅವನನ್ನು ನೋಡಿ ಸಣ್ಣಗೆ ನಕ್ಕಿ ಬನ್ನಿ ಅಂದರು. ಅವರು ಕೆಂಪ್ ಕೆಂಪ್ಗ ಮಾರಾಜರ ತರ ಇದ್ರು. ಉದ್ದ ಮೂಗು. ನೈಸ್ ತಲ. ಬಿಳಿ ಪಂಚ ಬಿಳಿ ಅಂಗಿ ಇಕ್ಕಂಡಿದ್ರು. ಮೊಕ್ಕತ್ತಲಲ್ಲಿ ಸಡನ್ ನನ್ನ ಕೈಹಿಡಿದಿದ್ದು ಯಾರ‌್ಗು ಕಾಣ್ದು. ಅವರು ನನ್ನ ಕೈ ಹಿಡಿದು ನಾಜೂಕಾಗಿ ನಕ್ಕು “ಎಲ್ರು ಲೈನಾಗಿ ಕೈಕೈ ಹಿಡ್ಕ ನಡೀರಿ ತಪ್ಪುಸ್ಕೊಂಡರಿ” ಅಂತ ನನ್ನ ಹಿಡಿದ ಕೈ ಭದ್ರವಾಗಿ ಅದುಮಿ ಹೆಜ್ಜೆ ಇಟ್ಟರು. ಹಿಂದೆ ತಿರುಗಿ ನೋಡಿದೆ. ಅವನು ಹಿಂದೆ ಗುಂಪಲ್ಲಿ ಬರ‌್ತಿದ್ದ. ಮೊಖ ಸಪ್ಪಗಿತ್ತು. ಜನವೋ ಜನ. ಮಿರಮಿರ ಮಿಂಚುವ ಲೈಟುಗಳು ಅರಮನೆ ಬೆಳಗುತ್ತಿತ್ತು.

ಅವ್ವ ಬತ್ತಿನಿ ಅಂದಿದ್ದಳು. ಬಲವಂತ ಮಾಡಿದಳು. ಅದ್ಯಾಕೊ ಮೇಷ್ಟ್ರು ಒಪ್ಪಲಿಲ್ಲ. ಅವನು ಮೊದಲೇ ನಿಮ್ಮೊವ್ವಗಿವ್ವ ಕರ‌್ಕವೊಗ್ಬೇಡ ಅಂದಿದ್ದ. ಆದ್ರ ಇವನ್ಯಾಕೆ ಬಂದ.. ನಂಗೂ ಇಂವ ಬತ್ತಿನಿ ಅಂದಿರಲಿಲ್ಲ. ಅವ್ವುಂಗೆ ಹೇಳಿದ್ದಿ. ಅವ್ವ ಕಣ್ಣೀರಾಕಿ ” ಸರಿ ಹಾಗಾದ್ರ ಹುಷಾರು.. ಜೋಕಾ ಏನಾ..” ಅಂದಿದ್ದು ಅವನಿಗೂ ಗೊತ್ತಿತ್ತು. ಇಲ್ಲಿ ಜಗನ್ ಜಾತ್ರೆ. ಆ ಬೆಳಕಲ್ಲು ಅಗ್ರಹಾರದ ಮೇಷ್ಟ್ರು ಮೊಖ ಲಕಲಕ ಅಂತ ಹೊಳಿತಿತ್ತು. ನನ್ನ ಕೈ ಹಿಡಿದವರು ಬಿಡದೆ ಒತ್ತರಿಸಿಕೊಂಡೆ ನಡೆದರು. ನಾನು ಕೊಸರಲು ಹೋದೆ. ಅವರ ಹಿಡಿದ ಹಿಡಿತ ಭದ್ರವಾಗಿತ್ತು. ಪ್ರೋಗ್ರಾಮಿಗೆ ಯಾವ್ಕಡೆಯಿಂದ ಹೋಗದು ಅಂತ ಗೊತ್ತಾಗ್ದೆ ತಡಕಾಡಕೆ ಶುರುವಾಯ್ತು. ನಾ ದಸರ ರಂಗುನ್ನ ನೋಡೇ ಇರ‌್ನಿಲ್ಲ. ಹೋಗ್ತಾ ಹೋಗ್ತಾ ಹೇಗೋ ಮೇಷ್ಟ್ರು ಪತ್ತೆ ಮಾಡೇ ಬಿಟ್ಟರು.

ಅದು ದೊಡ್ದಾಗಿರ ಮಂಟಪ. ಅದು ಅಗಲಾಗಿತ್ತು. ಸತ್ಮುತ್ತ ಬರೀ ಕಲರ್ ಕಲರ್ ಲೈಟ್ಗಳೇ. ಆ ಲೈಟ್ಗ ಎಲ್ರು ಮೊಖನು ಬೆಳ್ಗದು. ಆ ಮಂಟಪದ ಮೇಲೆ ಹೆಣ್ಣೈಕಳ ಗುಂಪು ಕೋಲಾಟ ಆಡುತ್ತಿದ್ದರು. ಆ ಕೋಲಾಟದ ಸದ್ದಿಗೆ ನನ್ನ ಕಾಲ್ಗಳೂ ಕುಣಿದಂತಾಗಿ ಮೇಷ್ಟ್ರ ಕಾಲಿಗೆ ತಾಕಿತೊ ಏನೊ ಅವರ ಮೊಖ ರಂಗ್ ರಂಗಾದ್ದು ನನಗೆ ಗೊತ್ತಾಯ್ತು. ಆಗ ಅದೇ ರಂಗಲ್ಲಿ ನನಗೂ ತಾಕಿಸಿದರು. ಮೇಷ್ಟ್ರು ನನ್ನ ಕೈಬುಟ್ಟು ಮಂಟಪ್ಪುತ್ತವ್ಕ ಹೋಗಿ ಬಂದ್ರು. ನಮ್ಮ ಸರದಿ ಇನ್ನು ಎರಡು ತಾಸಿತ್ತು. ನಾವು ಮೇಕಪ್ ಮಾಡ್ಕಬೇಕಲ್ಲ ಅಂತ ನಾವ್ ನಾವೇ ಕೇಳ್ಕಂಡು ಮೇಷ್ಟ್ರಿಗೆ ಹೇಳ್ದಾಗ ಅದ್ಕೂ ಓಡುದ್ರು. ಆದ್ರ ನಾವ್ ನಾವೇ ಎಲ್ಲಾದ್ರ ಸರಿ ರೆಡಿ ಮಾಡ್ಕ ಬರಬೇಕು ಅಂತ ಗೊತ್ತಾದ ಮೇಲೆ ಮೇಷ್ಟ್ರು ‘ಬನ್ನಿ ಇಲ್ಲೆ ನಮ್ಮ ಶಂಕರ ಮಠವಿದೆ. ನನಗೆ ಪರಿಚಯ. ನಮ್ಮವರದೆ ರೂಮಿದೆ. ಅಲ್ಲಿ ಹೇಳ್ತಿನಿ” ಅಂದ. ಅವನು ಹಿಂದೆ ದೂರ ಇದ್ದ. ಮುಖ ಸಿಂಡರಿಸಿಕೊಂಡಿದ್ದ. ಅವನು ಓಡಿ ಬಂದು ಮೇಷ್ಟ್ರೇ ಇಲ್ಲೆ ಹೋಟ್ಲದ ಬನ್ನಿ ಅಂದ. ನನಗೆ ಅವನ ಹೋಟ್ಲು ಮಾತು ಸರಿ ಕಾಣ್ದೆ ಶಂಕರ ಮಠವೇ ಸರಿ ಅನ್ನಿಸಿತು. ಮೇಷ್ಟ್ರಿಗೂ ಇಷ್ಟ ಆಗದೆ ಅವನ ಮಾತಿಗೆ ಏನೊಂದೂ ಮಾತಾಡದೆ ಬನ್ನಿಬನ್ನಿ ಅಂತ ನಡೆದರು. ನಂಗ ಅವ್ವ ಇದ್ದಿದ್ರ ಚೆನ್ನಗಿರದು ಅನ್ನುಸ್ತು. ಅವ್ವುನ್ಗು ನನ್ ಡ್ಯಾನ್ಸ್ ನೋಡ ನೆಪ್ದಲ್ಲಿ ಈ ದಸರ ವೈಭೋಗ ನೋಡದು ಇಷ್ಟ ಇತ್ತು ಅನ್ನುಸ್ತು.

ನಾನು ಕೂಸು. ಕೂಸು ಅಂದ್ರ ಎಳಕೂಸಲ್ಲ. ನಡ್ದಾಡ್ತಿದ್ದಿ. ಮಾತಾಡ್ತಿದ್ದಿ. ಎರ‌್ಡೊರ‌್ಸ ಆದ್ರು ಹಾಲ ಕುಡ್ಯಾದ ಬುಟ್ಟಿರ‌್ದೆ ಪರ‌್ಚಂಡಿ ಹಿಡ್ದಿದ್ನಂತ. ಅವ್ವ ತನ್ನೆದ್ಗ ಬೇವುನ್ ಸೊಪ್ಪ ಅರುದು ಉಜ್ಜುದ್ರು ಬುಡ್ದೆ ರವ್ಕ ಕಿತ್ತು ಕುಡಿತಿದ್ನಂತ. ಹಂಗಾಗಿ ಅವ್ವನ ತೊಡೆ ಮೇಲೆ ಮಲಗಿ ಅವಳ ಎದೆ ಕಚ್ಚಿ ಹಾಲು ಕುಡಿಯೋವಾಗ ಅವ್ವ ತನಗೆ ತಾನೆ ನಂಗೇಳತರನೊ ಇನ್ಯಾವ್ ಹೊಟ್ಟ ಉರಿಗೊ ಗೊಣಗುಟ್ಟಿದ್ದು ಈಗ್ಲೂ ನೆಪ್ಪದ. ಅದೇನಂದ್ರ,

ಅವ್ವ ಒಂದ್ಸಲ ಯಂಕ್ಟಪ್ಪನ ಜೊತ ದಸರ ನೋಡಕ ಬಂದಿದ್ಲಂತ. ಅದೂ ಒಂದ್ ದೊಡ್ ಕತ.

ಅವ್ವ ಮದ್ವ ಆದ ಹೊಸದರಲ್ಲಿ ಅಪ್ಪನ್ಗ ದಸರ ನೋಡಕ ಕರ‌್ಕ ಹೋಗು ಅಂದವತ್ಗ ‘ನಮ್ಮಂತೆವ್ರು ನೋಡಕಾದ್ದ.. ಅದೆಲ್ಲ ದೊಡ್ ದೊಡ್ಡವ್ರ ಹಬ್ಬ. ಅಲ್ಲಿಗೋಗದು ಅಂದ್ರ ಸ್ವರ್ಗುಕ್ಕ ಹೋದಂಗಿ. ದೇವ್ರು ನಮ್ಮಂತೆವ್ರ್ ನ ಸ್ವರ್ಗ ನೋಡಕ ಬುಟ್ಟಿನ.. ದೇವ್ರುಗ ಎದುರಾಗಿ ಬದ್ಕಕಾದ್ದ.. ಹಿಟ್ಟುಸೊಪ್ಪು ಉಣ್ಕಂಡು ಶಿವುನ್ ಗ್ಯಾನ್ದಲ್ಲಿ ಬದಿಕಂಡು ಇರಂವು ನಮಗ್ಯಾಕ ಚಿನ್ನ” ಅಂದಿದ್ದು ಅವ್ವ ಮುಖ ತಿರುಗಿಸಿ ಕಣಿ ಆಡ್ತಿದ್ಲಂತ. ಒಂದಿನ ಯಂಕ್ಟಪ್ಪವ್ರು ನಮ್ಮಮ್ಮ ಅಡಿನಿಂಗಿನ ಗದ್ದ ಕಳ ಕೀಳಕ ಅಂತ ಕರೆಯಾಕ ಬಂದು ‘ಏನಮ್ಮಿ ಅಡಿನಿಂಗಿ ಮದ್ವ ಆಗಿರ ಮಗ ಸೊಸ ಎಂಗಿದ್ದರು” ಅಂದ್ರಂತ. ನಮ್ಮಮ್ಮ “ನನ್ ಮಗ ಚಿನ್ನ ಬುದ್ದಿ. ಅದು ಬಂದುದಲ್ಲ ಮಾರ‌್ನಾಗದು ಜನ ಸೇರ‌್ದೆದದು ಆ ನನ್ ಗಂಡ ಒಂದಿನಾರು ಮೊಖ ಕೊಟ್ಟು ಮಾತಾಡಲ್ದು. ಮೊಖ ಊದುಸ್ಕಂಡೇ ಕೂತ್ಕತುದ. ಅದೇನ ಅವ ದಸ್ರ ನೋಡ್ಬೇಕಂತ.. ಇವ ಮಾರಾಣಿ. ಆರ‌್ಮನಯಿಂದ ಬಂದಳ. ಇವ ಹೋಗ್ನಿಲ್ಲ ಅಂದ್ರ ದಸರ ನಡೆದಿಲ್ವಂತ..” ಅಂತ ಕ್ಯಾಣಾಡಿದ್ಲಂತ. ಆಗ ಯಂಕ್ಟಪ್ಪ ನಮ್ ಮನತವ್ಕ ಬರದು ಜಾಸ್ತಿಯಾಗಿ ಯಾವತ್ತೂ ಕರಿದೆ ಇರ ಅಪ್ಪುನ್ನ ಕೆಲ್ಸಕ್ಕ ಕರ‌್ಕವೋಗಕ ಶುರುವಾದ್ನಂತ. ಇದು ಅಮ್ಮುನ್ಗ ಏನಾ ಅನ್ಸಿ ಯಂಕ್ಟಪ್ಪನ್ಗ ಯಾವ್ದ ನೆಪ್ದಲ್ಲಿ ಜಗ್ಳ ಆಡುದ್ಲಂತ. ನಮ್ಮೂರ‌್ಲಿ ಯಂಕ್ಟಪ್ಪನ ಎದುರ‌್ಗ ನಿಂತು ಜಗಳ ಆಡಿ ಸವಾಲಾಗ್ದವ ನಮ್ಮಮ್ನೆ. ಅಲ್ಲಿಂದ ಯಂಕ್ಟಪ್ಪನಿಗ ಮೀಸ ಮ್ಯಾಲ ಒದ್ದಂಗಾಗಿ ಅಪ್ಪುನ್ನ ಬೇಕ್ ಮಾಡ್ಕಂಡು.. ಅಪ್ಪುನ್ ಜೊತ ಅವ್ವನು ಹೋಗಾಕ ಶುರು ಮಾಡುದ್ಲಂತ. ಅಮ್ಮ ಇದ ನೋಡಿ ಅಪ್ಪುನ್ಗ ಅವ್ವುನ್ಗ ನಟಿ ನಟಿ ಬೊಯ್ತಾ ಅದು ದೊಡ್ದಾಗಿ ಊರ‌್ಗೇ ಗೊತ್ತಾಗ ತರ ಆಯ್ತು.

ಸರಿ ಹಿಂಗಾಗಿ ಒಂದಿನ ಯಂಕ್ಟಪ್ಪ ಅವ್ವುನ್ಗ ದಸರ ಆಸ ಹುಟ್ಸಿ ಕರ‌್ಕ ಹೋಗಿದ್ನಂತ. ಇದು ಅಪ್ಪುನ್ಗು ಗೊತ್ತಿಲ್ಲ ಅಮ್ನುನ್ಗು ಗೊತ್ತಿಲ್ವಂತ. ಅವ್ವ ಸರೊತ್ಲಿ ಬಂದಾಗ ಅಪ್ಪ ಮುನಿಸ್ಕಂಡು ಮನಿಗಿದ್ನಂತ. ಅಮ್ಮ ಕ್ಯಾಣಾಡ್ಕಂಡು ಮನ್ಗಿದ್ದ ಮಗ್ಗುಲ್ಲೆ ನಟಿನಟಿ ಅಂತ ಬೊಯ್ತಿದ್ಲಂತ. ಅವ್ವ ಅಪ್ಪನಿಗೆ ಒಂದು ಟರ್ಕಿ ಟವಲ್ ತಂದಿದ್ಲಂತ. ಮುನಿಸ್ಕಂಡ್ ಮನಿಗಿದ್ದ ಅಪ್ಪನ ಮೈಮೇಲ ಹಾಕಿದ್ಲಂತ. ಬೆಳುಗ್ಗ ಎದ್ದಾಗ ಮಗ್ಲಲಿದ್ದ ಟರ್ಕಿ ಟವಲ್ ನೋಡಿ ಅಪ್ಪ ಬೆರಗಾಗಿ ಅವ್ವನ್ನ ಕೇಳುದ್ನಂತ. ಯಂಕ್ಟಪ್ಪೊರು ಕೊಟ್ರು. ನೀನೆ ಕೇಳಿದೆಂತಲ್ಲ. ಕೇಳಿಕೇಳಿ ಸಾಕಾಗಿ ಕೇಳದ್ನೆ ಬುಟ್ಟೆಂತಲ್ಲ. ನಮ್ಮೊವ್ವುನ್ಗ ಹುಷಾರಿಲ್ದೆ ಹೊಯ್ತು ಬತ್ತು ಅಂತ ಆಗಿ ನಾನು ಒಬ್ಳೆ ಸಂತಮಾಳ ಕಡಯಿಂದ ಬಿಸುಲ್ಲಿ ನಿಲುಸೋಗುಕ್ಕ ಹೋಗಿ ಬಸ್ಸಿಲ್ದೆ ಇಷ್ಟೊತ್ತಾಗಿ ತಲ ಮೇಲ ಸೆರಗಾಕಿ ನಡಕೊಂಡು ಬರೊವಾಗ ಆ ಯಂಕ್ಟಪ್ಪೋರೆ ಸಿಕ್ಕಿ “ತಕ್ಕಮಿ ನಿನ್ ಗಂಡುನ್ಗ್ ಕೊಡು. ಅಂವ ಕೇಳಿಕೇಳಿ ಸಾಕಾಗಿ ಮಾತೇ ಆಡದ ಬುಟ್ಟನ” ಅಂತ ಕೊಟ್ರು ಅಂತಂದಿದ್ದಳು. ಅಪ್ಪ ತನ್ನ ಮುನಿಸ ದೂರ ಮಾಡ್ಕಂಡು ಆ ಟರ್ಕಿ ಟವಲ್ ನ ಈಗ್ಲೂ ಹೆಗುಲ್ಗ ಹಾಕಂಡು ಸೌದ ಹೊಡಿಯೊಕೊಯ್ತನ ಅನ್ನದೆ ದೊಡ್ದು.

ಈಗ ಶಂಕರ ಮಠ ಸಿಕ್ತು. ಅವನು ಹಿಂದೆನೆ ಬತ್ತಿದ್ದ. ಇವನ್ಯಾಕ ಹಿಂದಿಂದೆ ಬಂದನು ಅಂದ್ಕಳವೊತ್ಲಿ ಯಾರೊ ಬಂದರು. ಅವರೊಂದಿಗೆ ಅವನೂ ಇದ್ದನು. ಅವನು ಅವರನ್ನು ‘ಇವರು ಪೇಪರ್ ನವ್ರು’ ಅಂದ. ನಂಗ ಸಿಟ್ಟಾಗಿ ‘ಯಾವ್ ಪೇಪರ’ ಅಂದಿ ಅವನು ಮುಖ ತಿರುಗಿಸಿದ. ಬಂದವರನ್ನು ‘ನೀವು ಯಾವ ಪೇಪರಿನವ್ರು’ ಅಂದೆ. ಅವರೂ ಮುಖ ತಿರುಗಿಸಿದರು. ಮೇಷ್ಟ್ರು ಸಿಡಿಸಿಡಿ ಅಂತಿದ್ರು. ನೋಡಿ ಎಲ್ಲ ಹೆಣ್ಮಕ್ಳೆ ಅವ್ರ. ಹಂಗೆಲ್ಲ ಫೋಟಗೀಟ ಬೇಡ ನಾವು ಬೇಗ ಹೋಗ್ಬೇಕು” ಅಂತಂದು “ಶಿವ್ನಂಜ ಯಾಕಪ್ಪ ಹಿಂದಿಂದೆ ಬರ‌್ತಿದಿಯ” ಅಂದರು. ಆಗ ಮಠದಲ್ಲಿ ಯಾರೋ ವಯಸ್ಸಾದವರು ಕುರ್ಚಿಯಲ್ಲಿ ಕುಂತಿದ್ದರು. ಯಾರು ಅಂದರು. ಮೇಷ್ಟ್ರು ‘ಇವರು ನಮ್ ಸ್ಟೂಡೆಂಟ್ಸು. ಡ್ರೆಸ್ ಹಾಕೊತಾರೆ. ನಾನು, ನಾನು.. ಅದೆ..’ ಅಂದರು. ಆ ವಯಸ್ಸಾದವರು ‘ಬಾಪ್ಪ ಗೊತ್ತಾಯ್ತು.. ಬೇಗ ಬರೊದಲ್ವ ಏನೊ ಒಂದೊಳ್ಳೆ ಕೆಲ್ಸ ಮಾಡ್ತ ಇದ್ದಿಯ” ಅಂದರು. ಅವ್ವ ಬಂದಿದ್ರೆ ಚೆನ್ನಾಗಿರದು ಅನ್ನುಸ್ತು. ನಾವೆಲ್ಲ ಹಂಗೆ ಒಳಕ್ಕೋಗುವಾಗ ಶಿವನಂಜ ಇರ‌್ನೇ ಇಲ್ಲ. ಆಯ್ತು ಎಲ್ಲ ಆಯ್ತು. ಸದ್ಯ ಅವನು ಹೊಂಟೋಗಿದ್ದ.

ಅರಮನೆ ರಂಗದಲ್ಲಿ ಮೇಳಗಳ ಸದ್ದು ಮೊಳಗುತ್ತಿತ್ತು. ನಾವೆಲ್ಲ ಮಠದ ಮೆಟ್ಟಿಲಿಳಿದ್ವಿ. ನಾ ಹಾಕಂಡಿರ ಬಟ್ಟ ನೋಡಿ ಮೇಷ್ಟ್ರು ಚೆನ್ನಾಗಿದೆ ಅಂದ್ರು. ನಾನು ಹಿಂದೆ ಮುಂದೆ ನೋಡ್ಕಂಡು ಉಬ್ಬಿದೆ. ಉದ್ದಕ್ಕು ಕತ್ತಲು. ಮೇಷ್ಟ್ರು ಕೈ ಹಿಡುದ್ರು. ನಾನು ಕೊಸರಿ ಬಿರಬಿರ ನಡೆದೆ. ಕೈಬೀಸಿ ನಡೆವಾಗ ಉದ್ದಕ್ಕು ನನ್ನ ತೋಳ ಬಳೆಗಳು ಸದ್ದಾಗತೊಡಗಿದವು. ನನ್ನ ಹೆಜ್ಜೆಗಳ ಬಿರುಸಿಗೆ ಬೆಳ್ಳಿ ಕಾಲ್ಗೆಜ್ಜೆಗಳ ಸದ್ದು ಘಲ್ ಘಲ್ ಎನ್ನಲು ಶುರು ಮಾಡಿದವು. ನನಗೆ ಮೈ ಜುಂ ಅಂತಿತ್ತು. ಅವನು ಕೊಡ್ಸಿದ್ರಲ್ಲಿ ಕಾಲ್ಗೆಜ್ಜೆ ಬೆಳ್ಳಿಯವು. ಉಳ್ದವು ರೋಲ್ಡ್ ಗೋಲ್ಡು. ನಾ ಬೆಳ್ಳಿ ಗೆಜ್ಜೆ ಹಾಕಿದ್ದು ಇದೇ ಮೊದುಲ್ನೆ ಸಲ. ಎಲ್ಲನು ಅವನೇ ತಕ್ಕೊಟ್ಟಿದ್ದ ಅಂತ ಹೇಳುದ್ನಲ್ಲ ಅದ್ಕ ಅವನೇ ನೆನಪಾಗ್ತಿದ್ದ. ಇದರೊಂದ್ಗ ಅವ್ವನು ಬಿಟ್ಟೂ ಬಿಡದೆ ನೆನಪಾಗೋಳು. ಇದ ಅವ್ವ ನೋಡ್ಬೇಕಿತ್ತು ಅನ್ನುಸ್ತು. ನೋಡಿದ್ರ ನನ್ ಅಂದಚೆಂದುಕ್ಕ ಬೆರಗಾಗಿ ಆರ‌್ತಿ ಎತ್ತಿ ನಟ್ಕಿ ಮುರ‌್ಯಾಳು. ಯಾಕಂದ್ರ ಅವ್ವುನ್ಗು ಒಂದಾಸ ಇತ್ತು. ಅವ್ವ ಮದುವೆಯಾದ ಹೊಸುದ್ರಲ್ಲಿ ಬೆಳ್ಳಿ ಕಾಲ್ಚೈನ್ ಹಾಕಬೇಕು ಅನ್ನ ಆಸ ಇತ್ತಂತ. ಹಂಗಂತ ಅಪ್ಪನ್ನ ಕೇಳಿಕೇಳಿ ಸಾಕಾದ್ಲಂತ. ಒಂದಿನ ಅಪ್ಪ ಅವ್ವನ್ನ ರೇಗಿ ಮೊಬ್ಬಿಗೆ ಬೆಳ್ಕರಿಯ ಮುನ್ನ ತಂಗುಳ್ನೂ ಉಣ್ದೆ ಕೊಳ್ಳಿನ ಹೆಗಲಿಗಾಕಂಡು ಸೌದ ಹೊಡಿಯಾಕ ಹೊಂಟೋಯ್ತಿದ್ನಂತ. ಇದ ನೋಡ್ದ ಅವ್ವ ಅಳ್ತ ಕರಿತಾ ಅವ್ರ ಅಪ್ಪನಟ್ಟಿ ನಿಲ್ಸೋಗ್ಗೆ ಕಾಲಿಟ್ಟು ಅವ್ವ ಅಪ್ಪುನ್ ಮುಂದ “ತಲ ಬಿದ್ರು ಅವ್ನ್ ಜೊತ ಬಾಳಲ್ಲ” ಅಂತ ವರಾತ ತೆಗೆದಿದ್ಲಂತ. ಅದ್ಕ ಅವ್ವವ್ರೊವ್ವನು ಅಪ್ಪನು ಮಗಳಿಗೆ ಬುದ್ದಿವಾಣಿ ಹೇಳಿ ‘ಕುಸೊ ಸಂಸಾರ ಅಂದ್ರ ಬೆಳ್ಳಿ ಬಂಗಾರ ಅಲ್ಲಕವ್ವಾ.. ವಾದ್ಮನಲಿ ಇದ್ದದ್ರಲಿ ಬಾಳಿ ಬದ್ಕಿ ತವ್ರ್ ಮನ ಮಾನ ಉಳಿಸದು.. ಹೆತ್ತವ್ರ್ ಮಾನ ಹೆಸ್ರುಳಿಸದು..’ ಅಂತಂದು ಅವ್ರತ್ತ ಮಾವ ಕೊಟ್ಟಿದ್ದ ಬೆಳ್ಳಿದು ಕಾಲುಂಗ್ರ ಕೊಟ್ಟು ‘ತಕ್ಕವ್ವ ಇದ ಏಡ್ ಕಾಲ್ಬೆಳ್ಗು ಹಾಕ.. ಗಂಡುನ್ ಮನಲಿ ಒಂದೊತ್ ಹಸುದ್ರು ಅದ ಬೀದಿಗ ತರ‌್ದೆ ಹೊಟ್ಟವೊಳಗೇ ಇಟ್ಗಂಡು ಮನ ನಡೀಸ್ಕಂಡು ಹೋಗವ್ವ. ತುಂಬುದ್ ಮನ ಹೆಸ್ರ ಕೆಡುಸ್ಬೇಡ.. ಈ ಹೊತ್ಲಿ ನೀ ಒಬ್ಳೇ ಇಲ್ಲಿಗ ಬಂದಿರದೇ ತಪ್ಪು.. ನಡ ನಾವೂ ಬತ್ತಿಂವಿ.. ಆ ಮನಲಿ ಏನದ ಅದ ಉಣ್ಕ ತಿನ್ಕಂಡು ನಂಟುಸ್ತನ ಮಾಡ್ಕ ಬತ್ತಿಂವಿ’ ಅಂತ ಕಾಲುಂಗ್ರ ತೊಡುಸ್ಕಂಡು ಮೊಬ್ಬಿಗೆ ಕಾಲಿಟ್ಟಾಗ ನಮ್ಮಮ್ಮ ಅಡಿನಿಂಗಿ ಕಸ್ಬಳ್ಳ ಹಿಡ್ಕಂಡು ಬಾಗ್ಲಲ್ಲೆ ನಿಂತಿದ್ಲಂತ. ಇದ ನೋಡಿ ಅಪ್ಪ ಸುಮ್ಮನಿರಿಸಿ ನೀರ್ ಕೊಟ್ಟು ಮಾತುಕತ ಮಾಡಿ ಇನ್ನೇನ ಉಣ್ಣಕ ಇಕ್ಕಬೇಕು.. ಅಷ್ಟೊತ್ಗ ಅಮ್ಮನ ಕಣ್ಣಿಗೆ ಅವ್ವನ ಕಾಲಲಿದ್ದ ಕಾಲುಂಗುರ ಕಂಡು ಸಿಡಿಸಿಡಿಗೊಂಡು ‘ಏಯ್ ಏನಾ ಇದು.. ನೀ ಏನಾ ಮಾಡ್ಕ ಬಂದಿರದು.. ನಮ್ದು ಬೆಳ್ಳೀರ್ ಕುಲ. ಬೆಳ್ಳಿನ ಕಾಲ್ಲಿ ಮೆಟ್ಬಾರ‌್ದು ಅಂತ ಗೊತ್ತಿಲ್ವ.. ಇಳ್ಯ ಕೊಡಾಗ ನಮ್ ಕುಲದ ನೇಮ ಹೇಳಿರ‌್ನಿಲ್ವ.. ‘ ಅಂತ ಶಾಪಾಕುತ್ತಾ ನಿಂತಳು. ಅಷ್ಟೊತ್ತಿಗೆ ಅವ್ವರೊವ್ವನು ಅಪ್ಪನು ‘ಗೊತ್ತಿಲ ಅಳಿ.. ಏನಾ ಆಯ್ತು.. ‘ಅಂತ ಆ ಬೆಳ್ಳಿ ಕಾಲುಂಗುರವ ಬಿಚ್ಚಾಕಿಸಿ ಸೊಂಟಕ್ಕೆ ಸಿಕ್ಕಿಸಿಕೊಂಡರು. ಆಗ ಅಮ್ಮ ಕೋಣೆ ಮೂಲೇಲಿ ನೇತಾಕಿದ್ದ ನೆಲುವಿನ ಮಡಿಕೆಯಲ್ಲಿ ಹಸೆ ಅಕ್ಕಿಯೊಳಗೆ ಇಟ್ಟಿದ್ದ ತಾಮ್ರುದ್ದೊ ಕಬ್ಣುದ್ದೊ ಸಣ್ಣದಾದ ಎರಡು ಕಾಲುಂಗ್ರವ ಎತ್ಕ ಬಂದು ದೇವರ ಫೋಟೋ ಮುಂದೆ ಇಟ್ಟು ಮೂಗೂರು ತಿಬ್ಬಾದೇವಿಯ ಹೆಸರೇಳಿ ಅವ್ವನ ಕಾಲ್ಬೆರಳಿಗೆ ತೊಡಿಸಿದ್ರಂತ. ಅದ ಅವ್ವ ಈಗಲೂ ಆಗಾಗ ಹೇಳ್ಕಂಡು ಉರ‌್ದು ಉರ‌್ದು ಬೀಳ್ತಳ.

ಈಗ ಹತ್ತತ್ರ ಬಂದು. ಜನನೆಲ್ಲ ನೂಕ್ಕಂಡು ಮುಂದೋಗಿ ಕುಂತ್ವಿ. ನಾವು ಹತ್ತು ಸೀಟ್ ಇದ್ವಿ. ಮೇಷ್ಟ್ರು ಲಿಸ್ಟ್ ಕೊಟ್ಟು ಬತ್ತಿನಿ ಅಂತ ಜನನ ನೂಕ್ಕಂಡು ಅಡ್ಡ ನಿಂತಿದ್ದ ಪೋಲೀಸ್ರುಗ ಹೇಳಿ ಹೋದ್ರು. ಗಾಳಿ ತಿಸ್ಸಂತ ಬೀಸ್ತು. ನಡ್ದು ನಡ್ದು ಸಾಕಾಗಿ ಬೆವ್ರು ಕಿತ್ತರಿತಿತ್ತು. ಆ ಬೀಸ ಗಾಳಿಗ ಒಂಥರಾ ತಣ್ಣಗಾಯ್ತು. ಮೇಕಪೆಲ್ಲ ಬೆವ್ರ್ ಗ ಹರಿತಿರ ತರ ಮೊಖ ಎಲ್ಲ ಗುರುಗುರು ಅನ್ನದು. ಗಾಳಿ ಜೊತ್ಗ ಕೈಲಿ ಸೆಕ ಬೀಸ್ಕತಾ ಇದ್ದಾಗ್ಲೆ ಗಾಳಿ ಇನ್ನೂ ಜೋರಾಯ್ತು. ಮಂಟಪ ಮಿಂಚ್ತಿತ್ತು. ನಮ್ದು ಎಷ್ಟೊತ್ತಿಗೆ ಬಂದುದು ಅಂತ ಕಾಯ್ತ ಅವ್ರ್ ಮಾಡ ಗ್ರೂಪ್ ಡ್ಯಾನ್ಸ್ ನೋಡ್ತ ನಾನು ಅಲ್ಲಿಗೋದಾಗ ನಾನೆಂಗ್ ಕಾಣ್ಬೋದು ಅಂತ ನೆನಕೊಂಡಿ. ಮೈ ಜುಂ ಅಂತು. ಸ್ವರ್ಗದಲ್ಲಿ ತೇಲ್ತ ಇರ ತರ ಆಯ್ತಿತ್ತು. ಗಾಳಿಬಡ್ತ ನಿಲ್ಲದೆ ಸುಂಟರಗಾಳಿನೆ ಏಳ್ತು. ಜನ ‘ಹೊಹೊಹೊ ಹೊಯ್..’ ಅಂತ ಮೇಲೆದ್ರು. ಮಿಂಚು ಬಂದೋದ ತರ ಆಯ್ತು. ಅದರೊಂದ್ಗೆ ಗುಡುಗುಡು ಗುಡುಗ್ತು. ಮಂಟಪದಲ್ಲಿ ಕುಣಿಯೋರು ಕುಣಿತಾನೇ ಇದ್ರು. ಮೈಕಲ್ಲಿ ‘ಕೂತ್ಕೊಳಿ ಗಲಾಟೆ ಮಾಡ್ಬೇಡಿ.’ ಅಂತ ಸಾರ‌್ತ ಇದ್ರು. ನಾವು ಕುಂತ್ಕಳದು ನಿಂತ್ಕಳದು ಮಾಡ್ತ ಮೇಷ್ಟ್ರು ನೋಡ್ತ ಇದ್ವಿ. ಮೇಷ್ಟ್ರು ಪತ್ತೆನೆ ಇಲ್ಲ. ಗುಡುಗು ಸಿಡಿಲು ಜಾಸ್ತಿ ಆಯ್ತು. ಮೇಲೆ ನೋಡ್ದಿ. ಆಕಾಶ್ವೆಲ್ಲ ಕಪ್ಪಂದ್ರ ಕಪ್ಪು. ಅದರ ಸಂದಿ ಸಂದಿಲಿ ಪಣಕ್ ಪಣಕ್ ಮಿಂಚು ಮಿಂಚದು. ಎಲ್ರುಗೂ ಗಾಬ್ರಿ. ಹನಿ ಉದುರೋಕೆ ಶುರು ಮಾಡ್ತು. ಎಂಥ ಹನಿ ಅಂದ್ರ ಕಲ್ಲು ಬೀಳತರ ಬೀಳಕ ಶುರು ಮಾಡ್ತು. ಜನ ಗೊಳ್ ಅಂದ್ರು. ಅತ್ತಿತ್ತ ಓಡಾಡತೊಡಗಿದರು.
ಕಣ್ಣು ಮುಚ್ಚಿ ಬುಡೊದ್ರಲ್ಲಿ ಮಳೆ ರಮ್ಮರುಮ್ಮನೆ ಚಚ್ಚತೊಡಗಿತು. ಎಲ್ರು ದಿಕ್ಕಾಪಾಲಾದ್ರು. ನನ್ ಕಣ್ಗ ಒಬ್ರೂ ಕಾಣ್ರು. ಬೆಳುಗ್ತಿರ ಮಂಟಪದ ಮೇಲುಕ್ಕೆ ಹತ್ತಿ ನಿಂತು ಅದೂ ತುಂಬಿ ತುಳುಕ್ತಿತ್ತು. ನಾನು ಒಂದು ಮಗ್ಗುಲಿಗೆ ಬಂದು ನಿಂತಿ. ನಂಗ ಜೀವ ಬಡ್ಕಂಡು ಅಳೋಕೆ ಶುರು ಮಾಡ್ದೆ. ನಿಂತಿರೊರು ಯಾರೂ ನಮ್ಮವ್ರ್ ತರ ಕಾಣ್ನಿಲ್ಲ. ನಿಂತು ನಿಂತು ಸಾಕಾದ್ರು ಮಳೆ ಮಾತ್ರ ನಿಲ್ಲಲಿಲ್ಲ. ನಮ್ಕಡೆಯವ್ರು ಸಿಕ್ದಾರೇನೊ ಅಂತ ಇನ್ನೊಂದ್ ಕಡೆಗ ಆ ಮಳೆವೊಳ್ಗೇ ಓಡ್ದಿ. ಓಡ್ದಿ ಓಡ್ದಿ ಎಲ್ಲೊದ್ರು ಜಾಗ್ವಿಲ್ಲ. ನಾನು ನೆನ್ದು ಅಜ್ಜೋಗಿ ಸುಮ್ನ ಜಾಗ ಸಿಗುತ್ತ ಅಂತ ಹೋಯ್ತನೇ ಇದ್ದಿ. ಎಲ್ಲೋದ್ರು ಜನ. ಸೈಡಲ್ಲಿ ಬ್ಯಾಗ್ ಬೇರೆ ಇತ್ತು. ಒಳಕೊಂದು ಪ್ಲಾಸ್ಟಿಕ್ ಕವರೂ ಇತ್ತು. ಬಳ್ಸಿ ಬಳ್ಸಿ ನಾ ಎಲ್ಲಿಗ್ ಬಂದು ನಿಂತಿ ಅನ್ನದೇ ತಿಳಿದೆ ದಿಕ್ಕೆಟ್ಟು ಅಳ್ತನೇ ಇದ್ದಿ.

ಒಂದು ದೊಡ್ಡ ಸರ್ಕಲ್ ಕಾಣ್ತು. ಸರ್ಕಲ್ ಮಧ್ಯೆ ಮಾರಾಜ್ರು ಪ್ರತಿಮೆ ಕಾಣ್ತು. ಮಳೆ ನಿಲ್ಲತರ ಕಾಣ್ತು. ಸೈಡಲ್ಲಿ ಹೋಗ್ತಾ ಅಲ್ಲೆ ನಿಂತಿರೋರ ಬಸ್ಟ್ಯಾಂಡ್ ಯಾವ್ಕಡೆ ಅಂದೆ. ಅವರು ಕೈ ತೋರಿದರು. ನೀರು ರೋಡ್ ತುಂಬಾ ಹೊಳ ಹರಿಯೋ ತರ ಹರಿಯೋದು. ಆಗ ಯಾರ ಹಿಂದ ಬಂದಂಗಾಯ್ತು. ನಡುಗ್ತ ತಿರುಗ್ದಿ. ನೋಡುದ್ರ ಅವನು. ನಂಗ ಜೀವ ಬಂದಂಗಾಯ್ತು. ನಾ ನಿನ್ನಿಂದೇ ಇದ್ದಿ. ನೋಡ್ದ್ಯಾ ಹೆಂಗ್ ಕೈಕೊಟ್ರು ಅಂದ. ನಂಗ ಮಾತಾಡ ಶಕ್ತಿ ಇರ‌್ನಿಲ್ಲ. ಬಾ ಬಾ ಅಂದ. ನಾನು ಅವನೊಂದ್ಗ ಓಡ್ದಿ ಓಡ್ದಿ ಅವನು ಒಂದು ಹೋಟ್ಲತ್ರ ನಿಲ್ಸಿ ಒಳ ಕರಕೊಂಡು ಹೋದ್ನ. ನನ್ನ ಅರ್ಥ ಮಾಡ್ಕಂಡಿದ್ನ ಅನ್ಸುತ್ತ. ಕೈ ತೋರ‌್ದ. ಬ್ಯಾಗಲಿರ ಟವಲ ಎತ್ಕಂಡು ಒಳಕೋಗಿ ಈಚ್ಗ ಬಂದಿ ನೋಡು ಆಗ ನೆಮ್ದಿ ಆಯ್ತು. ಅಲ್ಲೆ ಕುಂತ್ಕಂಡು. ಮಸಾಲದೋಸ ಬಂತು. ಸುಸ್ತಾಗಿತ್ತು. ಟೀನು ಬಂತು. ಎಲ್ಲ ಆಯ್ತು. ಬಾ ಹೋಗಂವ್ ಅಂದಿ ಅವನು ಆಯ್ತು ಅಂದ. ಊರ‌್ಗ ಬಸ್ ಹತ್ತಿ ಕುಂತಾಗ ಜನ ರಸ್ಸು. ಸೀಟಂತು ಸಿಕ್ಕಿತ್ತು. ಹಿಂದುಕ್ಕಾದಗಿ. ಸದ್ಯ ಸೀಟ್ ಸಿಕ್ತಲ್ಲ ಅಂತ ಸಮಾಧಾನ ಆಯ್ತು. ಬಸ್ ಮಧ್ಯೆ ನಮ್ಮೂರವೇ ಐಕ ಕಂಡಂಗಾಯ್ತು. ನನಗ ಉಬ್ಬು ಹಾರುಸ್ತಿದ್ದವ್ರೆ ಅವ್ರು. ಅವ್ರು ನನ್ನೇ ನೋಡ ತರ ಇತ್ತು. ಕಿತ್ತೋದ್ ರೋಡು ಹೆಂಡ ಕುಡ್ದವ್ರ್ ತರ ಬಸ್ಸು ವಾಲಾಡ್ತಿತ್ತು. ಡಾಂಬರೆಲ್ಲ ಕಿತ್ತು ಹಳ್ಳಕೊಳ್ಳವಾಗಿ ಬಸ್ಸು ಉಳ್ಳಾಡೋದು. ಅದರೊಂದಿಗ ನಾವೂ ಉಳ್ಳಾಡ್ತಿದ್ವಿ. ನೋಡ್ತ ನೋಡ್ತನೆ ನಿದ್ದ ಬಂತು. ನಿದ್ದ ಬಂದದೇ ಗೊತ್ತಾಗ್ನಿಲ್ಲ. ಎಚ್ಚರ ಆದಾಗ ಅವನ ತೊಡೆ ಮೇಲ ಮನ್ಗಿದ್ದಿ. ಬಸ್ ಲೈಟು ಆಫಾಗಿತ್ತು. ಏಳ್ಬೇಕು ಅನ್ಸುದ್ರು ಏಳಕಾಗ್ದು. ಇನ್ನೂ ಒಂದಾಯ್ತು. ನನ್ ಜಾಕೀಟು ಸೀರ ಸಡ್ಲ ಆದಂಗಿತ್ತು. ಒಂಥರಾ ಆಗದು. ಅವನ ಕೈ ನನ್ನ ಹೊಕ್ಕಳ ಕೆಳಗಿತ್ತು. ಹಂಗೇ ಮನಿಕಂಡಿ. ಊರು ಬತ್ತೇನೊ ‘ಏಳು’ ಅಂದ. ನಾನು ಎತ್ತಗು ನೋಡ್ದೆ ಕೆಳಕಿಳ್ದು ಬ್ಯಾಗ್ ನ್ಯಾತಾಕಂಡು ಬಿರಬಿರ ನಡ್ದಿ. ಗವ್ಗತ್ತಲು. ಮುಂಡ್ಗಳ್ಳಿ ಬೇಲಿ ಎರಡಾಳುದ್ದ ಬೆಳ್ದಿತ್ತು. ಜೀವ ಅಳುಕ್ತು. ಅವನು ಹಿಂದೆನೆ ಬಂದು ಹೆಗಲಿಗೆ ಕೈಹಾಕ್ದ. ನಿಧಾನುಕ್ಕೇ ಹೋಗಂಗಾಯ್ತು. ಹೋಯ್ತ ಹೋಯ್ತ ಅಲ್ಲೊಂದು ದಾರಿ ಇತ್ತು ಅನ್ಸುತ್ತ. ಅವನು ಎಳೆದ. ನನ್ಗ ಅಳಂಗಾಯ್ತು. ಅಂವ ಬಲವಂತ ಮಾಡ್ದ. ಏಡ್ ಸಲ ಕಿತ್ತಾಕಂಡು ಈಚ್ಗ ಬಂದಿ. ಅಂವ ನಾಯಿ ಬೆದೆಗ್ ಬಂದು ಸುತ್ಕತುದಲ್ಲ ಆ ತರ ಎಗುರ‌್ತಿದ್ದ. ಹಂಗೂ ನಾ ಕೊಸರಾಡ್ದಿ. ಅವನೊದ್ಗ ಆಡಿಆಡಿ ಸುಸ್ತಾಗಿ ಕುಂತ್ಕಳಂಗಾಯ್ತು. ಅಂವ ನನ್ನ ತಬ್ಬಿಡ್ದು ಎತ್ಕಂಡು ಬೇಲಿ ದಾಟ್ದ. ನಂಗ ಗ್ಯಾನನೇ ಇಲ್ದಗಾಯ್ತು ಅಂತ ಜೀವದ ಕಣ್ಣೀರು ಕಥೆ ಬಿತ್ತರಿಸಿ ಇಂಗಿ ಹೋಯ್ತು.

ಅತ್ತ ಒಲೆಯೊಳಗೆ ಮುಂಡ್ಗಳ್ಳಿ ಬೆಂದು ಬೂದಿಯಾಗಿ ಹೊಗೆ ಏಳುತ್ತಿತ್ತು.

*

ಚೆನ್ನಬಸವಿ ತಮ್ಮ ಮಂಜನಿಗೆ ನೀಲನ್ನ ಕೊಟ್ಟು ಮದ್ವ ಮಾಡೋಕೆ ಅಂತ ಅವ್ವ ಅಪ್ಪನ ಜೊತೆ ಮಾತಾಡಲು ನಿಲಸೋಗ್ಗ ಹೋಗಿ ಮೂರು ದಿನ ಆಗಿತ್ತು. ಸೊಸ್ಮಾರಿ ಗುಡಿ ಪೂಜಾರಿ ಜೋಳ್ದೊಲುತ್ತವು ಗರಿಕೆ ವರಿವಾಗ ನವುಲೂರಮ್ಮನ ಜೊತೆ ಪಿಸುಗುಟ್ಟಿದ್ದು ಅಡಿನಿಂಗಿಗೂ ಮುಟ್ಟಿತ್ತು. ಊರಿನ ಬೀದಿಬೀದಿಗೂ ದಾಟ್ತು.

“ಇಷ್ಟಿದ್ಮೇಲ ಕುಲ ಆ ಗಂಡುಂದೇ ತಪ್ಪು ಅಂತ ಊರಾಚ ಹಾಕುದ್ದು ಯಾವ್ ನ್ಯಾಯನ.. ಏನಾ, ವಯ್ಸು ಆಡ್ತವ. ಐಕ್ಳಲ್ವ.. ಐಕ್ಳಾಡ್ದೆ ನಾವಾಡಗಿದ್ದಾ.. ಇವ, ಇವುರೊವ್ವ ತರಾನೆ.. ನಸರಾಣಿ ಆಟ ಆಡ್ತಳ. ಕುಲ ಕೊಟ್ಟಿರ ನ್ಯಾಯುಕ್ಕ ಉಗಿರಿ. ಎಂಥ ನ್ಯಾಯನ ಅದು.. ಊರೆಣ್ಣ ಹಂಗ ಮಾಡನ ಅಂತ ನಮ್ಮೂರೈಕ ಆ ಶಿವ್ನಂಜುನ್ಗ ಹೊಡುದ್ದು ತಪ್ಪಾ.. ಆ ಅಡಿನಿಂಗಿನೆ ಸರಿ ಇವ್ಕ. ಸರ‌್ಯಾಗ್ ಅಂತಳ..’ ಅಂತ ಜನ ಮಾತಾಡ್ಕತಿತ್ತು.

ಮದುವೆ ಆಗಿ ವಾರ ವಪ್ಪತ್ತು ಆಗಿತ್ತು. ಅಡತಡೆ ಅನ್ನದೇನು ಇಲ್ಲ. ದಾರಿಲಿ ನೀಲ ಮಂಜನ ಕೈ ಹಿಡಿದು ಲಕಲಕ ಅಂತ ಹೊಳೆಯುತ್ತ ಹೋಗುತ್ತಿದ್ದಳು. ಮಂಜ ಚೆಂದುಳ್ಳಿ ಹೆಣ್ಣು ಕಟ್ಟಿಕೊಂಡೆನೆಂಬ ಹಮ್ಮಿನಿಂದ ಬೀಗುತ್ತಿದ್ದ. ಎದುರಿಗೆ ಸಿಕ್ಕವರನ್ನು ಮಾತಾಡಿಸುತ್ತ ನೀಲಳ ಜೊತೆ ತನ್ನ ದನದ ವ್ಯಾಪಾರ, ಸಂತೆ ವ್ಯವಹಾರ, ದುಡ್ಡುಕಾಸು ವಿಚಾರ ಹೇಳುತ್ತಾ ಅವಳನ್ನು ಒತ್ತರಿಸಿಕೊಂಡೇ ಕಿಸಿಕಿಸಿ ನಗ್ತಾ ಮಾತಾಡ್ತ ದಾರಿ ಸಾಗ್ತ ಸಾಗ್ತ ಭಗವಾನ್ ಟಾಕೀಸ್ ಬಂದೇ ಬುಡ್ತು. ಅಲ್ಲಿ ಅಣ್ಣಾವ್ರ “ನಾ ನಿನ್ನ ಮರೆಯಲಾರೆ” ಪಿಚ್ಚರ್ ಹಾಕಿದ್ರು. ಅದೇನ್ ಜನ.. ಅಣ್ಣಾವ್ರು ಲಕ್ಷ್ಮೀ ಬೈಕ್ ಮೇಲೆ ಕುಂತಿರೊ ವಾಲ್ ಪೋಸ್ಟ್ರು.. ವ್ಹಾವ್ಹಾ.. ನೀಲಳಿಗೆ ಲಕ್ಷ್ಮಿ ತರಾನೆ ತುಂಡು ಫ್ರಾಕ್ ಹಾಕಬೇಕು ಅನ್ಬುಸ್ತು. ಅಲ್ಲಿ ನಿಂತಿರ ಜನುಕ್ಕ ಆ ಟಾಕೀಸೇ ಕಾಣ್ತಿಲ್ಲ. ಅಂತಾ ಜನ ಇದ್ರು. ಅಬ್ಬಾ ಟಿಕೆಟ್ಗಂತು ಮಾರಾಮಾರಿ ನಡೀತಿತ್ತು. ಮಂಜ ಪ್ಲಾನ್ ಮಾಡಿದ. ಬ್ಲಾಕಲ್ಲಿ ಟಿಕೆಟ್ ತಕ್ಕಂಡು ನೀಲನ್ನ ಎಳ್ಕಂಡು ಟಾಕಿಸೊಳಕ ಹೊಂಟೇ ಹೋದ.

ಅತ್ತ ಯಂಕ್ಟಪ್ಪ ಬಿಳಿ ಪಂಜೆ ಬಿಳಿ ಅಂಗಿ ಹಾಕಂಡು ಹಿಂದಕ್ಕೆ ಕೈಕಟ್ಟಿ ಗಂಭೀರವಾಗಿ ನಡಿತಾ ಇದ್ದ. ಊರ ಜನ ಮಾಮೂಲಿಯಾಗಿ ಅವನನ್ನು ಕಂಡು ಬಗ್ಗಿ ನಮಸ್ಕರಿಸಿ ಗೌರವ ಕೊಡುತ್ತಿದ್ದರೆ ಅವನ ಮಗ ಶಿವನಂಜ ಸೊಸ್ಮಾರಿಗುಡಿ ಪೂಜಾರಿನ ಸೈಕಲಲ್ಲಿ ಕೂರುಸ್ಕಂಡು ಭರ‌್ರಂತ ಹೋದದ್ದು ಅವರು ಪಿಸುಗುಟ್ಟು ಮಾತಲ್ಲಿ ಮೆಲ್ಲಗೆ ಹಾದು ಹೋಯ್ತು.

ಇತ್ತ ಖಾಕಿ ಚಡ್ಡಿಗೆ ಪ್ಯಾಚು ಹಾಕಿದ ಸಿದ್ದಿ ಚಂದ್ರನಿಗೆ ಕೊಟ್ಟು “ಕಣಿ ಆಡ್ದೆ ಇದ್ನೆ ಇಕ್ಕ ಹೋಗು. ಈಗ ಹೊಲಿಸಕ ದುಡ್ಡೆಲ್ಲಿದ್ದು” ಅಂತ ಹೇಳುತ್ತಿದ್ದರೆ ಚಂದ್ರ ಪ್ಯಾಚು ಹಾಕಿದ ಚಡ್ಡಿ ಈಸಿಕೊಂಡು ಅಗಲಿಸಿ ತಿರುಗಿಸಿ ನೋಡುತ್ತ ಸಪ್ಪಗೆ ಮುಖಮಾಡಿ ಕಾಲೆಳೆದುಕೊಂಡು ಒಳಕ್ಕೆ ಹೋದ.

ತೆಂಗಿನ ಮರ ಒರಗಿ ನಿಂತಿದ್ದ ನೀಲ ಸಂದಿ ಕಡೆ ಹೆಜ್ಜೆ ಹಾಕಿ ಸಿದ್ದಿ ಕಡೆ ತಿರುಗಿ “ಚಡ್ಡಿ ಹೊಲ್ಕೊಟ್ಯಾ ಚಿಕ್ಕಿ.. ಶಿವಪ್ಪ ಹೊಡ್ದಿಟ್ಬುಟ್ನ ಆ ಗಂಡಾ.. ನಂಗಂತು ಹೊಟ್ಟುರ‌್ದುಬುಡ್ತು. ಸುಮ್ಮಿರು ನಾಳ ನನ್ತವಿರ ದುಡ್ನೆಲ್ಲ ಕೊಡ್ತಿನಿ ಹೊಸ ಚಡ್ಡಿನೆ ಹೊಲುಸ್ಕೊಡಯ್.. ಚೆನ್ನಾಗಿ ಓದಿ ಆ ಪೋಸ್ಟಮ್ಯಾನ್ ತರ ಸಾಯೆಬ್ರಾಗ್ಲಿ..” ಅಂತ ಹಂಗೇ ಹೋಗಿ ಮನೆ ಬಗ್ಗಿ ನೋಡಿ “ನಮ್ಮೊವ್ಗ ಇನ್ನೂ ಯಂಕ್ಟಪ್ಪ ಬಂದೇ ಇಲ್ಲ.. ಅದೆಲ್ ಕೂತಿದ್ದನ ಆ ನನೈದುನ್ ಮಗ. ಅಂವ ಬರಗಂಟ ಇವು ಮನಬುಟ್ಟು ಹೋಗದಿಲ್ಲ. ಇವುತ್ರಿಂದಾಡಿ ನನ್ ಕೆಲ್ಸೆಲ್ಲ ಹಾಳಾಯ್ತು” ಅಂತ ನಟಿಕೆ ಮುರಿತಾ ತೆಂಗಿನ ಮರ ಒರಗಿಕಂಡು “ರಾಗವೇಂದ್ರ ನೀ ಮೌನವಾದರೆ..” ಅಂತ ಹಾಡಾಡ್ತ ಇದ್ದಾಗ ಅತ್ತಿಂದ ಬಂದು ಒಂದು ನಾಯಿ ಬಂದು ಅವಳು ನಿಂತಿದ್ದ ತೆಂಗಿನ ಮರಕ್ಕೆ ಕಾಲೆತ್ತಿ ಉಚ್ಚೆ ಉಯ್ತಿತ್ತು. ನೀಲ ಕೆಕ್ಕಳಿಸಿ ನೋಡಿ ಉಚ್ಚೆ ಉಯ್ತಿದ್ದ ನಾಯಿಗ ಜಾಡಿಸಿ ಒದ್ದು “ಥೂ ಲೋಪರ್ ಮುದೇವಿ” ಅಂದಳು. ನಾಯಿ ಅರ್ಧಂಬರ್ಧ ಉಚ್ಚೆ ಉಯ್ದು ಉಚ್ಚೆ ಚೊಟ್ಟುಸ್ತ ಚೊಟ್ಟುಸ್ತ ಕಂಯ್ ಕಂಯ್ ಅಂತ ಕುಂಟುತ್ತಾ ಅರುಚ್ತಾ ಹೋಗ್ತಿದ್ರಾ ಇವ ಕಿಸಿಕಿಸಿ ಅಂತ ನಗತೊಡಗಿದಳು.

-ಎಂ.ಜವರಾಜ್
(ಮುಂದುವರಿಯುವುದು)

[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x