“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು.
ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ ಮಾನವೀಯ ಮೌಲ್ಯಗಳು, ಮೌಲ್ಯಾಧಾರಿತ ವಿಚಾರಗಳು ಶಿಕ್ಷಣ ಕಲಿಸುವ ಸಂಸ್ಥೆಗಳಲ್ಲಿ ಕಾಣುತ್ತಿದ್ದೆವು. ಶಾಲೆಯ ಪರೀಕ್ಷೆಗಳಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿ ಕೂಡ ತಾನು ಕಲಿತ ಮೌಲ್ಯಗಳಿಂದ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲ ಗುಣಗಳಿಂದ ಉತ್ತಮ ಪ್ರಜೆಯಾಗಿ ಜೀವನ ಸಾಗಿಸುವುದರಲ್ಲಿ ಯಶಸ್ವಿಯಾಗುತ್ತಿದ್ದನು. ದರ್ಜೆಗಳೇನೆ ಇದ್ದರು ಪರೀಕ್ಷೆಗೆ ಜೀವನಕ್ಕಲ್ಲ ಎಂಬ ನೈಜ್ಯ ತಿಳುವಳಿಕೆ ಅಂದಿನ ಮಕ್ಕಳಿಗೆ ಶಾಲೆಯಲ್ಲಿಯೇ ಮನದಟ್ಟಾಗಿ ಬದುಕಿಗೆ ಬೇಕಿರುವ ಮೌಲ್ಯಗಳಿಗೆ ಪ್ರಾಶಸ್ತ್ಯ ನೀಡಿ ಜೀವನ ಸಾಗಿಸುತ್ತಿದ್ದರು.
ಆಧುನಿಕತೆ ಹೆಚ್ಚಾದಂತೆ ಶಿಕ್ಷಣದಲ್ಲಿಯೂ ಹತ್ತಾರು ಬದಲಾವಣೆಗಳು ಮೌಲ್ಯ ರಹಿತ ಶಿಕ್ಷಣದೆಡೆಗೆ ಮಕ್ಕಳನ್ನು ಕರೆದೊಯ್ಯುವಂತೆ ಭಾಸವಾಗುತ್ತಿದೆ. ಹಿಂದೆಲ್ಲಾ ಗುರುಕುಲ,ಆಶ್ರಮ ಮತ್ತು ಧರ್ಮಶಾಲೆಗಳು ಮಗುವಿಗೆ ಶಿಕ್ಷಣದ ಮೊದಲ ಪಾಠವಾಗಿ ಮಾನವೀಯ ಮೌಲ್ಯಗಳನ್ನು ತುಂಬುವುದರೊಂದಿಗೆ ಶಿಕ್ಷಣ ಕಲಿಸುತ್ತಿದ್ದರು. ಆದರೆ ಇಂದಿನ ಶಿಕ್ಷಣದ ವ್ಯವಸ್ಥೆಯೊಳಗೆ ಸರ್ಕಾರ ನೂರಾರು ಯೋಚನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರೂ ಸಹ ಬದುಕಿನ ಮೌಲ್ಯಗಳನ್ನು ಹೆಚ್ಚಾಗಿ ಯಾವ ಶಾಲೆ,ಸಂಸ್ಥೆಗಳು ತುಂಬುತ್ತಿಲ್ಲವಾಗಿರುವುದರಿಂದ ಮಕ್ಕಳಲ್ಲಿ ಮೌಲ್ಯಗಳ ಕೊರತೆ ಕಾಡುತ್ತಿದೆ. ಶಾಲೆಯಲ್ಲಿ ಪಠ್ಯ ಪುಸ್ತಕಗಳ ಪಾಠಗಳು, ಚಟುವಟಿಕೆಗಳು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆಯೋ ಹಾಗೆಯೇ ಬದುಕಿಗೆ ಬೇಕಿರುವ ಮಾನವೀಯ ಮೌಲ್ಯಗಳು, ಮೌಲ್ಯಾಧಾರಿತ ಶಿಕ್ಷಣವು ಅಷ್ಟೇ ಪಾತ್ರ ವಹಿಸುವುದನ್ನು ಇಲ್ಲಿ ಪ್ರತಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಅರಿತುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಮೌಲ್ಯಯುತ ಮಕ್ಕಳನ್ನು ಕಾಣಲು ಸಾಧ್ಯವಾಗುತ್ತದೆ.
ಹಿಂದೆಲ್ಲಾ ಗ್ರಾಮೀಣ ಪ್ರದೇಶದ ಮಕ್ಕಳು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಘಳಿಗೆ ತಮ್ಮ ಸುತ್ತಮುತ್ತಲಿನ ಪರಿಸರ, ಜನಜೀವನ,ಅವರ ಕಾರ್ಯ ವೈಖರಿ, ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದ ರೀತಿ ಹೀಗೆ ನಾನಾ ನಿದರ್ಶನಗಳು ಕಣ್ಮುಂದೆ ಸಾಗುತ್ತಿತ್ತು. ಆದರೆ ಇಂದಿನ ಗ್ರಾಮೀಣ ಜನತೆ ಕೂಡ ಮಕ್ಕಳಿಗೆ ನಗರದ ಖಾಸಗಿ ಶಾಲೆಗಳಿಗೆ ದಾಖಲು ಮಾಡಿಸಿ ನಿಂತಿರಲು ನಗರದ ಪರಿಸರ ಮತ್ತು ಜನಜೀವನ ಅವರನ್ನು ಪ್ರೇರೇಪಿಸುತ್ತಿರಲು ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಮನೋಭಾವವಾದರು ಮೂಡಲು ಸಾಧ್ಯವೆಲ್ಲಿ?. ಹಾಗೆಂದು ನಗರ ಪ್ರದೇಶದ ಜನರಿಗೆ ಮಾನವೀಯ ಮೌಲ್ಯಗಳಿಲ್ಲವೆ? ಎಂಬ ಪ್ರಶ್ನೆಯು ನಿಮ್ಮನ್ನು ಕಾಡಬಹುದು. ಆದರೆ ಸದಾ ತಮ್ಮ ತಮ್ಮ ಜವಾಬ್ದಾರಿಗಳ ಹಿಂದೆ ಬಿದ್ದು ಓಡುವಾಗ ಮಕ್ಕಳ ಕಣ್ಣಿಗೆ ಅವರ ಕಾರ್ಯವೈಖರಿ ಕಾಣಬಹುದೇ ಹೊರತು ಅವರೊಳಗಿರುವ ಮೌಲ್ಯಗಳಂತೂ ಅಲ್ಲ.
ಇನ್ನು ಮನೆಯ ವಾತಾವರಣಕ್ಕೆ ಬಂತೆಂದರೆ ಪೋಷಕರು ಕೂಡ ಮಕ್ಕಳ ಅಂಕಗಳೆಷ್ಟು ? ಓದುವ ಪರಿ ಹೇಗಿದೆ? ಎಂಬುದನ್ನು ಗಮನಿಸುವಷ್ಟು ನನ್ನ ಮಗು ಯಾವ ಹಾದಿಯಲ್ಲಿದೆ? ಅವನ ಗುಣಗಳು ಎಷ್ಟರ ಮಟ್ಟಿಗೆ ಜೀವನಕ್ಕೆ ಪೂರಕವಾಗಿವೆ? ಒಂದು ವೇಳೆ ವಿದ್ಯಾಭ್ಯಾಸದಲ್ಲಿ ಕುಂಠಿತಗೊಂಡರೆ ಅವನಲ್ಲಿರುವ ಸಾಮಾಜಿಕ ಸಾಮಾನ್ಯ ಗುಣಗಳು ಬದುಕಿಗೆ ಎಷ್ಟು ಸಹಾಯಕಾರಿ ಅಗಬಲ್ಲವು ಎಂಬುದನ್ನು ಯೋಚಿಸುವಲ್ಲಿ ವಿಫಲವಾಗುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು. ಉಳಿದ ಕೆಲ ಪೋಷಕರು ಬಾಲ್ಯದಿಂದಲೇ ಮಕ್ಕಳನ್ನು ದೂರದ ಶಿಕ್ಷಣಕ್ಕೆ ತಳ್ಳಿ ಅವರ ಗುಣಗಳನ್ನು ಗಮನಿಸಲು ಸಮಯ ನೀಡದೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೇಕಿರುವ ಹಣ,ಆಸ್ತಿ ಮಾಡಲು ನಿರತರಾಗಿರುತ್ತಾರೆ. ಮೌಲ್ಯವೇ ಇಲ್ಲದ ಮಕ್ಕಳಿಗೆ ನೀವೆಷ್ಟೇ ಆಸ್ತಿ ಮಾಡಿದರು ಅದನ್ನು ಸದ್ಭಳಕೆ ಮಾಡುವ ವಿಧಾನ, ಸಮಾಜದೊಂದಿಗೆ ನಡೆದುಕೊಳ್ಳಬಹುದಾದ ರೀತಿ ಬಹುಮುಖ್ಯ ಎಂಬುದನ್ನು ಮೊದಲಿಗೆ ಪೋಷಕರು ಅರಿತುಕೊಳ್ಳಬೇಕಿದೆ. ತಮ್ಮ ಜವಾಬ್ದಾರಿಗಳ ಹಿಂದೆ ಬಿದ್ದು
ಸಮಾಜದ ನೈಜ್ಯ ಚಿತ್ರಣವನ್ನು ಮಕ್ಕಳಿಗೆ ತೋರಿಸುವಲ್ಲಿ ವಿಫಲವಾಗುತ್ತಿರುವ ಪೋಷಕರ ಒಂದಷ್ಟು ಸಮಯ ಮಕ್ಕಳಿಗೆ ಮೀಸಲಿಟ್ಟು ತಾವು ಬದುಕುತ್ತಿರುವ ಸಮಾಜದೊಳಗಿನ ನೂರಾರು ಮೌಲ್ಯಗಳನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ತೋರಿಸಿ ಮನಸ್ಸಿಗೆ ನಾಟಿಸುವಂತೆ ಮಾಡಬೇಕಿದೆ.
ಮಕ್ಕಳು ಮನೆಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಸಮಯ ಕಳೆಯುವುದು ಶಾಲೆಯಲ್ಲಿ. ಆದರೆ ಶಾಲಾ ಸಮಯದಲ್ಲಿ ಮಕ್ಕಳ ವಿದ್ಯಾಬ್ಯಾಸದೊಂದಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಕಲಿಸುವ ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಗಮನಿಸಲೇಬೇಕಾದ ಅಂಶವಾಗಿದೆ. ಸ್ವಾತಂತ್ರ ಹೋರಾಟಗಾರರು, ಲಕ್ಷಾಂತರ ಸಾಧಕರು, ವಿದ್ವಾಂಸರು, ಹಿರಿಯ ನಾಗರಿಕರು, ದೇಶವನಾಳುವ ರಾಷ್ಟ್ರ ನಾಯಕರು ಹೀಗೆ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದಿರಲು ಅದರ ಬಗೆಗಿನ ಮಾಹಿತಿ, ಅವರ ಜೀವನದ ಗುರಿ, ಬದುಕಿನ ಶೈಲಿ, ಅಳವಡಿಸಿಕೊಂಡಿದ್ದ ಆದರ್ಶಗಳನ್ನು ಮಕ್ಕಳಿಗೆ ಬಿತ್ತುವ ಕೆಲಸ ಅತಿ ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕಿದೆ. ಕೇವಲ ಪಠ್ಯಕ್ಕೆ ಪೂರಕವಾಗಿ ಪಾಠ ಪ್ರವಚನ ನೀಡಿ ಬದುಕಿನ ಆದರ್ಶಗಳನ್ನು ತಿಳಿಸುವ ಮೌಲ್ಯಗಳೇ ಮಕ್ಕಳನ್ನು ತಲುಪದಿದ್ದಾಗ ಆತ ನೂರಕ್ಕೆ ನೂರರಷ್ಟು ಅಂಕ ಪಡೆದರು ನಿಜ ಜೀವನದಲ್ಲಿ ವಿದ್ಯಾರ್ಥಿ ಸೋಲನ್ನು ಅನುಭವಿಸುವ ಸಂದರ್ಭ ಉದ್ಭವಿಸಿದರೆ ಅದನ್ನು ತಡೆದುಕೊಳ್ಳವ ಅಥವಾ ನಿಭಾಯಿಸುವ ಸಾಮಾರ್ಥ್ಯ ಅವನಲ್ಲಿ ಇರುವುದೇ ಇಲ್ಲ. ಸದಾ ಗೆಲುವನ್ನೇ ಕಂಡ ವಿದ್ಯಾರ್ಥಿಗಳಿಗೆ ಸೋಲಿನ ನೋವು ನೀಡುವ ತೀವ್ರತೆಯ ಪರಿಣಾಮ ವಿದ್ಯಾರ್ಥಿಯನ್ನು ಬಲಿ ಪಡೆಯುವವರೆಗೂ ಕರೆದೊಯ್ಯಬಹುದು. ಆದ್ದರಿಂದ ಮಕ್ಕಳ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳಾದ ಸತ್ಯ,ಅಹಿಂಸೆ,ಪ್ರೀತಿ,ವಿಶ್ವಾಸ,ಸ್ನೇಹ,ಸಂಬಂಧಗಳ ಸತ್ವ, ನೋವು ನಲಿವಿನ ಸಮತೋಲನ,ಸೋಲು ಗೆಲುವಿನ ಸಮಚಿತ್ತ ಭಾವನೆ, ನನ್ನವರು ತನ್ನವರೆನ್ನುವ ಬಾಂಧವ್ಯದ ಬೆಸುಗೆ, ಗುರು ಹಿರಿಯರಿಗೆ ನೀಡುವ ಗೌರವ,ಮಾತೃ
ಪಿತೃವಿನ ಮಮತೆಯ ಮನಸ್ಥಿತಿ, ಸುಳ್ಳು ಮೋಸಗಳ ತೀವ್ರತೆ,ದ್ವೇಷ ಅಸೂಯೆಗಳ ಪರಿಣಾಮ ಮುಂತಾದ ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಮೈಗೂಡಿಸಿದರೆ ಮಕ್ಕಳು ಸಹ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳಲ್ಲು ಕಾರಣವಾಗಬಹುದು. ಆದ್ದರಿಂದಲೇ ಸರ್ಕಾರಗಳು ಉತ್ತಮ ವ್ಯಕ್ತಿಗಳ ಜಯಂತಿ, ಜನ್ಮದಿನಾಚರಣೆಗಳು,ಹುತಾತ್ಮರ ಸ್ಮರಣೆ,ವ್ಯಕ್ತಿಗತವಾದ ವಿಚಾರಗೋಷ್ಠಿಗಳನ್ನು ನಡೆಸಲು ಅನುಮತಿಸಿರುವುದು. ಆದರೆ ಅದರ ಆಚರಣೆ ಅರ್ಥ ಪೂರ್ಣವಾಗಿ ಮಕ್ಕಳ ಮನ ಮುಟ್ಟುವಲ್ಲಿ ಯಶಸ್ವಿಯಾಗುವುದು ಬಹುಮುಖ್ಯ.ಕೇವಲ ಕಾರ್ಯಕ್ರಮ ಮಾಡಬೇಕು ಮಾಡೋಣ ಎಂಬ ಮನೋಭಾವನೆ ಬೇಡವೇ ಬೇಡ ಪ್ರತಿ ಕಾರ್ಯಕ್ರಮವು ಮಕ್ಕಳ ಮನಸ್ಥಿತಿಗೆ ಒಪ್ಪುವಂತೆ ಭವಿಷ್ಯಕೆ ಬುನಾದಿಯಾಗುವಂತೆ ಯಶಸ್ವಿಯಾದರಷ್ಟೇ ಕಾರ್ಯಕ್ರಮಕ್ಕೆ ನಿಜವಾದ ಬೆಲೆ ಬರಲು ಸಾಧ್ಯ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ದೇಶದ ದಿವ್ಯ ವಾಕ್ಯ ಮಕ್ಕಳನ್ನು ಕೇವಲ ಸಾಮಾನ್ಯ ಪ್ರಜೆಗಳನ್ನಾಗಿಸದೆ ಮೌಲ್ಯಯುತ ಪ್ರಜೆಗಳನ್ನಾಗಿಸಲು ನಾವು ನೀವುಗಳೆಲ್ಲರು ಸದಾ ಶ್ರಮಿಸೋಣ ಮತ್ತು ನಮ್ಮ ಮಕ್ಕಳೊಂದಿಗೆ ಸಂಭ್ರಮಿಸೋಣ.
-ವಿಜಯ್ ಕುಮಾರ್ ಕೆ.ಎಂ.