ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಶ್ರೀರಾಮಪಟ್ಟಾಭಿಷೇಕಂ – ಒಂದು ತೌಲನಿಕ ವಿವೇಚನೆ: ಸಂತೋಷ್ ಟಿ.

“ರಾಮಾಯಣ ಜಗತ್ತಿನ ಮಹಾಕಾವ್ಯಗಳಲ್ಲಿ ಒಂದು. ಭಾರತಕ್ಕಂತೂ ಅದು ಆದಿ ಕಾವ್ಯ. ಅದನ್ನು ಕಾವ್ಯವೆಂದು ಆಸ್ವಾದಿಸುವ, ಪುರಾಣವೆಂದು ಆರಾಧಿಸುವ ಜನ ಕೋಟಿ ಕೋಟಿ. ಸಾಮಾನ್ಯ ಭಾರತೀಯನಿಗೆ ರಾಮಾಯಣವೊಂದು ಐತಿಹಾಸಿಕ ಘಟನೆ. ಅದರ ಬಗೆಗೆ ಅವನಲ್ಲಿ ಯಾವ ಪ್ರಶ್ನೆಗೂ, ಶಂಕೆಗೂ ಆಸ್ಪದವಿಲ್ಲ. ಸಂಸ್ಕೃತದಲ್ಲಿಯೂ ನಮ್ಮ ದೇಶಭಾಷೆಗಳಲ್ಲಿಯೂ ರಾಮಾಯಣ ಸಾವಿರಾರು ಕೃತಿಗಳಿಗೆ ಆಕರವಾಗಿದೆ. ಸಾವಿರಾರು ಕವಿಗಳಿಗೆ ಸ್ಫೂರ್ತಿಯನ್ನೊದಗಿಸಿದೆ. ಅದರ ಪಾತ್ರಗಳು ಪ್ರಸಂಗಗಳು ಆದರ್ಶಗಳು ನಾನಾ ವಿಧದ ಕಲಾಕೃತಿಗಳಾಗಿ ರೂಪ ತಾಳಿವೆ. ರಾಮಾಯಣ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಎಷ್ಟು ಕೃತಿಗಳು ಅದನ್ನು ಆಧರಿಸಿ ರಚಿತವಾದುವೆಂದರೆ, ನಮ್ಮ ಹಿಂದಿನ ಕವಿಯೊಬ್ಬ ರಾಮಾಯಣದ ಭಾರದಿಂದ ಆದಿಶೇಷನೇ ತಿಣುಕುತ್ತಿದ್ದಾನೆಂದು ಹೇಳಿ ತಾನು ಮಹಾಭಾರತದ ಕತೆಯನ್ನು ಆರಿಸಿಕೊಂಡ” ( ಪುಟ,೨೨೯, ಮಾಸ್ತಿಯವರ ಕಾವ್ಯ- ಒಂದು ಅಧ್ಯಯನ, ಡಾ.ಸಿ.ಪಿ. ಸಿದ್ಧಾಶ್ರಮ) ಎಂಬ ಹಾಮಾ ನಾಯಕರ ಸದಭಿಪ್ರಾಯ ಸಾದೋಹರಣವಾಗಿದೆ. ೧೯-೨೦ನೇ ಶತಮಾನದ ನವೋದಯ ಕನ್ನಡ ಸಾಹಿತ್ಯ ಕಾಲಘಟ್ಟದಲ್ಲಿ “ಶ್ರೀನಿವಾಸ”ಎನ್ನುವ ಕಾವ್ಯನಾಮದಿಂದ ಸೃಜನಶೀಲ ಸಾಹಿತ್ಯ ರಚನೆಯ ನಿರ್ಮಾಣದಲ್ಲಿ ಬಹುದೊಡ್ಡ ಹೆಸರು ಮಾಸ್ತಿ ವೆಂಕಟೇಶಯ್ಯಂಗಾರ್. ಭಾರತೀಯ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಪುನರುಜ್ಜೀವನ ಕಾಲದಲ್ಲಿ ಕನ್ನಡ ಭಾಷೆಯ ಸತ್ವವನ್ನು ಮನಗಂಡು ಹೊಸದೊಂದು ಸಾಹಿತ್ಯ ಭಾಷೆಯ ಪಠ್ಯಗಳನ್ನು ಸೃಜನೆಗೈದವರಲ್ಲಿ ಶ್ರೀನಿವಾಸರು ಪ್ರಮುಖರು. ಭಾಗವತ ಪ್ರಜ್ಞೆ ,ಬದಲಾದ ಆಂಗ್ಲಶಿಕ್ಷಣದ ಆಧುನಿಕ ಚಿಂತನೆಗಳು, ಭಾರತೀಯತ್ವದ ದೇಸಿಯ ಪುನರ್ ಪ್ರತಿಷ್ಠಾಪನೆ, ಹೊಸಹೊಸ ಮಟ್ಟುಗಳ ಶೋಧ, ಕನ್ನಡ ಜನಮಾನಸದ ಭಾಷೆಯಾಗಿ ಹೇಗೆ ರೂಪುಗೊಂಡು ಸ್ಥಿರವಾಗಬೇಕು ಎನ್ನುವ ಕಾಲದಲ್ಲಿ ಇದ್ದ ನವತರುಣ ಪ್ರಾಜ್ಞರಲ್ಲಿ ಶ್ರೀನಿವಾಸರ ಸಾಹಿತ್ಯ ಸಹಜ ದೇಸಿಯಿಂದ ಆರಂಭವಾಗುತ್ತದೆ. ಪ್ರಮುಖವಾಗಿ ಮಾಸ್ತಿಯವರು ಬಯಲು ಸೀಮೆಯ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ – ಹೊಂಗೆನಹಳ್ಳಿ ಗ್ರಾಮಗಳ ಕಡೆಯಿಂದ ಬಂದವರು. ಕಡು ಬಡತನದಲ್ಲೂ ಅವರು ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಂಡು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಅಂದಿನ ವಿಶಾಲ ಮೈಸೂರು ಸರ್ಕಾರದಲ್ಲಿ ಸೇವೆಯಲ್ಲಿದ್ದರು. ಅವರು ಸಣ್ಣ ಕತೆ ಎಂಬ ಸಾಹಿತ್ಯ ಪ್ರಕಾರದ ಪಿತಾಮಹ ಅಥವಾ ಜನಕ ಎಂದು ಹೆಸರಾದವರು. ಅವರ ಅನೇಕ ಭಾವಗೀತೆಗಳು, ಕಥನಗೀತೆಗಳು, ಸುನೀತಗಳು, ನಾಟಕಗಳು, ಕಾದಂಬರಿಗಳು, ಅನುವಾದಗಳು, ವಿಮರ್ಶೆ , ಆಧುನಿಕ ದೇಸಿ ಛಂಧಸ್ಸಿನಲ್ಲಿ ರಚಿತವಾಗಿವೆ. ಜೀವನ ಎಂಬ ಪತ್ರಿಕೆಯನ್ನು ನಡೆಸಿ ನಾಡಿನ ಅನೇಕ ಮಹತ್ವದ ಬರಹಗಾರ ಲೇಖಕರನ್ನು ಬೆಳೆಸಿದ ಕೀರ್ತಿ ಶ್ರೇಯಸ್ಸು ಅವರಿಗಿದೆ. ಅವರ ಭಾವ ಎಂಬ ಆತ್ಮಕತೆ ಸಂಪುಟಗಳು ಪ್ರಕಟವಾಗಿವೆ. ಅವರ ಚಿಕ್ಕವೀರರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿಯೂ ಸಿಕ್ಕಿದೆ ಮತ್ತು ಆ ಕೃತಿ ಅನೇಕ ಟೀಕೆ ಮತ್ತು ವಿಮರ್ಶೆಗೆ ಗುರಿಯೂ ಆಗಿತ್ತು. ಆ ಮೂಲಕ ಚರ್ಚೆಗೆ ಒಳಗಾಗಿತ್ತು ಎಂಬುದು ಈಗ ಇತಿಹಾಸ. ವೈದಿಕ ಭಾಗವತ ಪರಂಪರೆಯ ಪ್ರಮುಖ ಸಾಹಿತ್ಯದ ಕೊಂಡಿಗಳಲ್ಲಿ ಮಾಸ್ತಿಯವರು ಪ್ರಮುಖರು. ವಾಲ್ಮೀಕಿ ರಾಮಾಯಣವನ್ನು ಬೆರಗುಗಣ್ಣಿನಿಂದ ಕಂಡ ಅವರು ಅದನ್ನು ಹೊಸ ವ್ಯಾಖ್ಯಾನ ಮಾಡಿದರು. ವಿಮರ್ಶಾತ್ಮಕವಾಗಿ “ಆದಿಕವಿ ವಾಲ್ಮೀಕಿ” ಎಂಬ ಗದ್ಯವನ್ನು ರಚಿಸಿದರು. ನಂತರ ಕನ್ನಡ ದೇಸಿ ರಗಳೆಯಲ್ಲಿ ಮತ್ತು ಜನಪದ ಕಥನಗೀತೆಯ ಮಟ್ಟಿನಲ್ಲಿ ” ಶ್ರೀರಾಮ ಪಟ್ಟಾಭಿಷೇಕಂ” ಮಹಾಕಾವ್ಯವನ್ನು ರಚಿಸಿದರು. ಈ ಎರಡರ ಸಮತೂಕದ ಆಶಯಗಳು ಒಂದೆ ಮಿಳಿತವಾದರೂ ಅವರ ವಿಮರ್ಶೆಗೆ ಸಿಕ್ಕ ಜನಪ್ರಿಯ ಮನ್ನಣೆ ಕಾವ್ಯಕ್ಕೆ ಸಿಗಲಿಲ್ಲ. ಸ.ರಘುನಾಥರು ಹೇಳುವಂತೆ ಮಾಸ್ತಿಯವರ ಕಾವ್ಯಕ್ಕೆ ಅಷ್ಟು ಮನ್ನಣೆ ಸಿಗದಿದ್ದರೂ, ಅವರ ಸಣ್ಣ ಕತೆಗಳು ಮತ್ತು ವಿಮರ್ಶೆಗಳಿಗೆ ಮಹತ್ವದ ಸ್ಥಾನವನ್ನು ಕನ್ನಡಿಗರು ನೀಡಿದರು. ಅವರ ಕಾವ್ಯದಲ್ಲೂ ಸಹಜವಾದ ಒಂದು ಶ್ರೀನಿವಾಸ ದೇಸಿ ಶೈಲಿ ಅಡಕವಾಗಿದೆ ಅದನ್ನು ಸಹೃದಯ ವಿಮರ್ಶಕರು ಅಷ್ಟಾಗಿ ಗಮನಿಸದೆ ಹೋದದ್ದು ಖೇದಕರ ಸಂಗತಿ ಎನ್ನುತ್ತಾರೆ. ಮುಂದಿನ ಯುವ ತಲೆಮಾರು ಅವರ ಕಾವ್ಯವನ್ನು ಮಹತ್ವದಿಂದ ಸ್ವೀಕರಿಸಿ ವಿಮರ್ಶೆ ವಿಶ್ಲೇಷಣೆ ಮಾಡಬೇಕಿರುವುದು ಇಂದಿನ ತುರ್ತು ಮತ್ತು ಸಂಶೋಧನೆಯ ವಿಚಾರವಾಗಿ ಕಾಣುತ್ತದೆ. ಅವರ ಕಾವ್ಯದ ನೆಲೆಬೆಲೆಗಳನ್ನು ವಿವೇಚಿಸಿಕೊಂಡು ಶತಮಾನದ ಸರದಿಯಲ್ಲಿ ಮೌಲ್ಯಮಾಪನ ಮಾಡಬೇಕಿದೆ ಎಂಬ ನಿಲುವು ಬಹಳ ಮಹತ್ವಪೂರ್ಣವಾಗಿ ಇದೆ.

ಮಾಸ್ತಿಯವರು ನಂಬಿದ ಜೀವನ ಮೌಲ್ಯಗಳು ವಸ್ತುನಿಷ್ಠ ಸತ್ಯಶೋಧಕ ಬರಹಗಳಂತೆ ಬೇಕಾದುದನ್ನು ಪಡೆದು ಬೇಡವಾದುದನ್ನು ಕೈಬಿಟ್ಟು ವಸ್ತಾವಕ್ಕೆ ಖಚಿತವಾದ ಮತ್ತು ಸಹಜವಾದ ಧಾತುಗಳನ್ನು ಮಾತ್ರ ಅವರು ಸ್ವೀಕರಿಸಿದ್ದು ಕೆಲವರಿಗೆ ಇಷ್ಟವಿಲ್ಲದಿರಬಹುದು ಕೆಲವರಿಗೆ ಇಷ್ಟವಿರಬಹುದು. ಪುರಾಣ ಐತಿಹ್ಯಗಳಲ್ಲಿ ಅದ್ಭುತ ಪವಾಡಗಳು,ಮತೀಯ ಧೋರಣೆಗಳು,ಕತೆ ಉಪಕತೆಗಮಳು, ವ್ಯಾಖ್ಯಾನ,ಆಖ್ಯಾನ, ಅಖ್ಯಾಯಿಕೆಗಳು, ಇನ್ನಿತರ ಹೊಸ ಅಂಶಗಳು ಪ್ರಕ್ಷಿಕ್ತವಾಗಿ ಅನೇಕ ಮಾರ್ಪಾಡುಗಳಿಂದ ಸೇರಿಬಿಟ್ಟಿರುವುದರಿಂದ ಯಾವುದು ನಿಜವಾದ ವಾಲ್ಮೀಕಿ ಕೃತ ರಾಮಾಯಣ ಎಂಬುದನ್ನು ವಿವೇಚಿಸಿಕೊಳ್ಳಲು ಕಷ್ಟವಿರುವಾಗ ಮೂಲಪಾಠಗಳಿಗೆ ಸಮೀಪವರ್ತಿವಾಗಿ ಅವುಗಳ ಸಹಜ ಸ್ಥಿತಿಯನ್ನು ಹೆಕ್ಕಿ ತೆಗೆದು ಪುನರ್ ನಿರ್ಮಾಣ ಸೃಜನ ಮಾಡಿರುವುದರಲ್ಲಿ “ಶ್ರೀರಾಮ ಪಟ್ಟಾಭಿಷೇಕಂ” ಕಾವ್ಯದ ನಿಜವಾದ ಮಹತ್ವ ಅಡಗಿದೆ. ಅಂಧಶ್ರದ್ಧೆ , ಮತೀಯ ವಿರೋಧಿ ನಿಲುವುಗಳಿಂದ ದೂರ ಉಳಿದು ಮೂಢನಂಬಿಕೆಗಳಿಗೆ ಶರಣಾಗದೆ ಸಹಜತೆಯ ಧರ್ಮದಲ್ಲಿ ಪಾತ್ರಚಿತ್ರಣಗಳನ್ನು ಆಧುನಿಕ ಮನಸ್ಥಿತಿಗಳ ಹಿನ್ನೆಲೆಯಲ್ಲಿ ರಾಮಾಯಣದ ಮಹತ್ತರ ಚಿಂತನೆಗಳನ್ನು ಅಡಕಗೊಳಿಸಿ ಕನ್ನಡಭಾಷೆಯನ್ನು ಅಭಿಜಾತ ಸಾಹಿತ್ಯದ ಭಾಷೆಯನ್ನಾಗಿ ಮಾಡಲು ಶ್ರಮಿಸಿದರು. ಇವರ ಕಾವ್ಯಕ್ಕೆ ಸಿಕ್ಕ ಮನ್ನಣೆ ಅಷ್ಟಕಷ್ಟೆ ಎಂದು ಹೇಳಿದ ಮೇಲೂ ವಿ.ಸೀ ಯವರ “ಸಾಹಿತ್ಯಾವಲೋಕನ” ದಲ್ಲಿ ಹಾಮಾನ ಅವರ
ಎರಡು ಲೇಖನಗಳು, ಸಂಭಾವನಾ ಗ್ರಂಥದಲ್ಲಿ ಪ್ರೊ.ವೆಂಕಟಸುಬ್ಬಯ್ಯನವರ ಒಂದು ಲೇಖನ, ಎಲ್.ಎಸ್.ಶೇಷಗಿರಿರಾಯರ ಒಂದು ಆಂಗ್ಲ ಲೇಖನದಲ್ಲಿ ಪರಿಚಯ, ವಿ.ಎಂ.ಇನಾಂದಾರರ
” ಶ್ರೀನಿವಾಸರ ಶ್ರಿರಾಮ ಪಟ್ಟಾಭಿಷೇಕಂ” ಗ್ರಂಥ, ನಂತರ ಹಾಮಾನಾ ಸಂಪಾದಿತ “ಶ್ರೀನಿವಾಸ ಸಾಹಿತ್ಯ” , ಮೈಸೂರಿನ ಮಾನಸ ಗಂಗೋತ್ರಿಯ ಸಿ.ಪಿ.ಸಿದ್ಧಾಶ್ರಮರ ಸಂಶೋಧನೆ “ಮಾಸ್ತಿಯವರ ಕಾವ್ಯ -ಅಧ್ಯಯನ”ದಲ್ಲಿ ಮಹತ್ವದ ಚರ್ಚೆ “ಶ್ರೀರಾಮ ಪಟ್ಟಾಭಿಷೇಕಂ” ಕೃತಿಗೆ ಲಭ್ಯವಿದೆ. ಅಲ್ಲದೆ ಇತ್ತೀಚೆಗೆ ಎಸ್.ವಿ.ಪ್ರಭಾವತಿಯವರ “ಕನ್ನಡ ರಾಮಾಯಣಗಳು- ಒಂದು ತೌಲನಿಕ ಅಧ್ಯಯನ”ದಲ್ಲಿ ಒಂದು ಅಧ್ಯಾಯ ಮೀಸಲಿದೆ.

ಮಾಸ್ತಿಯವರು ಚಿಕ್ಕಂದಿನಿಂದ ಮನೆಯ ಪರಿಸರದಲ್ಲಿ ಕಂಡ ವೈದಿಕ ಸಂಪ್ರದಾಯದ ಆಚರಣೆಗಳಿಂದ ಹಿಡಿದು ತಮ್ಮ ಅನುಭವದ ಸಿದ್ಧತೆಯಲ್ಲಿ ತೊಡಗಿ ಇಳಿವಯಸ್ಸಿನ ಪಕ್ವತೆಯಲ್ಲಿ ರಚಿಸಿದ ಈ ಕಾವ್ಯದಲ್ಲಿ ದೈವತ್ವದ ಪರಿಕಲ್ಪನೆಗಳು, ಮಿಥ್ ಮಿರಕಲ್, ಪವಾಡಗಳು,ಅಸಹಜ ಸನ್ನಿವೇಶಗಳು ,ಅತಿಮಾನುಷತೆಗಳು, ಅದ್ಭುತಗಳನ್ನು ಕೈಬಿಟ್ಟು ಪ್ರಕೃತಿ ಸಹಜವಾದ ನೆಲೆಯಲ್ಲಿ ರಾಮಾಯಣವನ್ನು ಆರೋಹಣ ಮಾಡಿ ಸನಾತನ ದೇವರ ಕಲ್ಪನೆ ವಾಟೆಹೊರಟೆಯಾಗಿರುವುದರಿಂದ ಆಧುನಿಕ ಮನೋಧರ್ಮಕ್ಕೆ ತಕ್ಕಂತೆ ರಾಮಕತೆಯನ್ನು ಜಾಣ್ಮೆಯಿಂದ ವಿವೇಚಿಸುವ ರಚನೆಯನ್ನು ವಿನಮ್ರ ಪ್ರಯತ್ನದಿಂದ ಮಾಡಿದರು.

“೧೯೭೨ರಲ್ಲಿ ಪ್ರಕಟವಾದ ಮಾಸ್ತಿಯವರ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಕಾವ್ಯವು ‘ ಆದಿಕವಿ ವಾಲ್ಮೀಕಿ’ಯ ಸರಳ ರಗಳೆಯ ರೂಪ ಎನ್ನಬೇಕು. ‘ಆದಿಕವಿ ವಾಲ್ಮೀಕಿ’ಯಲ್ಲಿ ಮೂಲ ರಾಮಾಯಣದ ಅದ್ಭುತ -ಪವಾಡ , ಅವತಾರವಾದ,ಪ್ರಕ್ಷಿಪ್ತ ಭಾಗಗಳು ಮುಂತಾದ ಅನ್ಯವಿಷಯಗಳಿಂದ ಹೊರತಾಗಿ ಯಾವ ರೀತಿ ಶುದ್ಧ ಕಾವ್ಯವಾಗಿತ್ತೆಂಬುದನ್ನು ವಿಮರ್ಶಾತ್ಮಕವಾಗಿ ಚರ್ಚಿಸಿದ ಮಾಸ್ತಿಯವರು, ಅದನ್ನು ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯದ ಮೂಲಕ ಪುನರ್ ಸೃಷ್ಟಿಸಿದ್ದಾರೆ.” (ಪುಟ ೨೩೧, ಮಾಸ್ತಿಯವರ ಕಾವ್ಯ -ಒಂದು ಅಧ್ಯಯನ, ಸಿ.ಪಿ.ಸಿದ್ಧಾಶ್ರಮ) ಇದು ಅವರ ಪಕ್ವ ಮನಸ್ಥಿತಿ ವ್ಯಕ್ತಿತ್ವದ ಜಿಜ್ಞಾಸೆಯಾಗಿ ಹೊರಹೊಮ್ಮಿದೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಒಂದು ಮಹಾಕಾವ್ಯದ ನೈತಿಕ ನೈಜ ಒಪ್ಪುವಂತಹ ಚಿಂತನೆಗಳನ್ನು ಸಹಜ ಸ್ಥಿತಿಯಲ್ಲಿ ಕೊಟ್ಟಿರುವುದು ಸೃಜನಶೀಲತೆಯ ಅಭ್ಯಾಸದ ನೆಲೆಯಾಗಿದೆ. ಶ್ರೀ ರಾಮಪಟ್ಟಾಭಿಷೇಕವು ಪ್ರಸ್ತಾವನೆಯ ನೂರು ಅರವತ್ತೆರಡು ಸಾಲುಗಳು,ಮಂಗಳದ ನಲ್ವತ್ತು ನಾಲ್ಕು ಸಾಲುಗಳು ಸೇರಿ ಒಟ್ಟು ಮೊತ್ತ ಒಂಬತ್ತು ಸಾವಿರ ಇನ್ನೂರ ಐವತ್ತೊಂಬತ್ತು ಸಾಲುಗಳಲ್ಲಿ ಮೂಲ ರಾಮಾಯಣಕ್ಕೆ ತೀರಾ ಹತ್ತಿರವಾದ ಕಾವ್ಯವನ್ನು ಸಹಜ ಸ್ಥಿತಿಯಲ್ಲಿ ನಿರೂಪಣೆಯ ಕ್ರಮದಿಂದ ಸ್ವಾತಂತ್ರ್ಯ ವಹಿಸಿ ಮೂಲರಾಮಾಯಣದ ಆವರಣವನ್ನು ಪುನರ್ ಸೃಷ್ಟಿ ಮಾಡಿದರೆಂದು ಹೇಳಬಹುದು. ಇದೊಂದು ಅನು ಸೃಜನಕಾರ್ಯ. ಬೇಡನೊಬ್ಬ ತನ್ನ ಪೂರ್ವ ಭವದ ಹೀನಕೃತ್ಯಗಳನ್ನು ತೊಡೆದು ಋಷಿಯಿಂದ ಪ್ರಸನ್ನ ಚಿತ್ತನಾದವನು. ಮನಸಿನಲ್ಲಿ ಹುತ್ತಗಟ್ಟಿದ ರಾಮ ಮಂತ್ರವೇ “ಮರಾ ಮರಾ ರಾಮ ರಾಮ” ಆಗಿ ಚಿತ್ತದಲ್ಲಿ ಹುತ್ತಗಟ್ಟಿ ವಾಲ್ಮೀಕಿ ಮಹರ್ಷಿಯಾದ ಕವಿ ಚರಿತೆಯು ಹೇಗೆ ಒಬ್ಬ ಮಾನವ ತನ್ನ ಹೀನಮನಸ್ಥಿತಿ ತೊಡೆದು ಕಾರ್ಯತತ್ಪರನಾಗಿ ತಪವನಾಚರಿಸಿ ಆದಿಕವಿಯ ಪಟ್ಟವನ್ನು ಪಡೆದನು ಅಚಂದ್ರಾರ್ಕ ಪರ್ಯಂತ ಆದಿಕವಿ ಎನ್ನಿಸಿದನೋ ಅಂತಹ ಕವಿಯ ಕೃತಿ ಮಂದರ ಕಾವ್ಯ ವಾಲ್ಮೀಕಿ ಮಹರ್ಷಿಗಳ ಶ್ರೀ ರಾಮಾಯಣ.

“ಕೂಜಂತಂ ರಾಮರಾಮೇತಿ ಮಧುರಂ ಮಧುರಾಜ್ ರೂಂ
ಆರುಹ್ಯ ಕವಿತಾ ಶಾಖಂ ವಂದೇ ವಾಲ್ಮೀಕಿ ಕೋಕಿಲಂ
ಮಾನಿಷಾಧ ಪ್ರತಿಷ್ಟಾತ್ವಮಗಮಃ ಶಾಶ್ವತೀಃ ಸಮಆಃ
ಯತ್ ಕ್ರೌಂಚ ಮಿಥುನಾಧೇಕ ಮವಧಈಃ ಕಾಮಮೋಹಿತಂ”

ಇದು ಪ್ರಥಮ ಬಾರಿ ಕ್ರೌಂಚ ಮಿಥುನಗಳ ಅಹಿಂಸೆಯನ್ನು ಕಂಡು ವಾಲ್ಮೀಕಿ ಕಂಠದಿಂದ ಹೊರಳಿದ ಮಧುರವಾದ ಪದ್ಯವಾಗಿದೆ.ಇದು ನಾಂದಿ, ರಾಮಾಯಣ ಮಹಾಕಾವ್ಯ ಕೃತಿ ಮಂದರವನ್ನು ರಚಿಸಲು ಎಂಬುದು ಇಲ್ಲಿ ವೇದ್ಯವಾಗುವ ವಿಚಾರ.

ಮಾಸ್ತಿಯವರು ಸಾಂಪ್ರಾದಾಯಿಕವಾದ ಪರಿಸರದಿಂದ ಸಂಸ್ಕಾರವಂತ ಸಭ್ಯ ಮನೆತನದವರಾದ ಕಾರಣ ಪ್ರಸ್ತಾವನೆ ಪದ್ಯಗಳಲ್ಲಿ ಕವಿ ಗುರುಗಳನ್ನು ಭಕ್ತಿಭಾವದಿಂದ ಕಂಡು ಮಹಾಪ್ರತಿಭೆಗಳನ್ನು ಹೃದಯದಲ್ಲಿ ಸ್ಥಾಪಿಸಿಕೊಂಡು ವಿನಮ್ರತೆಯಿಂದ ಪ್ರಾರ್ಥಿಸುತ್ತಾರೆ.

“ಕವಿ ಗುರುವೆ
ದೈವಸಾನಿಧ್ಯದಲಿ ಸುಖದೊಳಿಹ ವಾಲ್ಮೀಕಿ
ಎಳಮೆಯಿಂದಲು ನಿನ್ನ ನುಡಿಕೇಳಿ ಸುಖಕಂಡ
ಅಣುಗನೆಂದನ್ನೆ ವಾತ್ಸಲ್ಯ ಭಾವದಿ ನೋಡಿ
ನಿನ್ನ ಭಾವನೆ ವಿವರ ವಿವರ ಎನ್ನೀಮನದಿ
ಸ್ಫುಟವಾಗಿ ಮೂಡುವಂದವನು, ಮೂಡಿದ ಭಾವ
ನಿನ್ನ ನುಡಿಗಳನೆ ಬಹುತೇಕ ಬಳಸಿದ ಒಂದು
ಸರಳಸುಂದರ ವಾಣಿಯಿಂದ ಕನ್ನಡವಾಗಿ
ಹರಿಯುವಂದವನನುಗ್ರಹಿಸು”

ಎಂಬ ಪಾರ್ಥನೆ ಎಷ್ಟು ವಿನಮ್ರತೆಯಿಂದ ಕೂಡಿದೆ. ಅತಿ ಓದು ಉನ್ನತ ಅಧಿಕಾರದ ಸೊಕ್ಕು ತಲೆಗೇರಿಸಿಕೊಂಡು ಮದದಿಂದ ವರ್ತಿಸುವ ಅನೇಕ ಪಂಡಿತರ ಮಧ್ಯೆ ಮಾಸ್ತಿಯವರ ಸರಳ ಸಜ್ಜನಿಕೆ ವಯಸ್ಸಿನ ಪರಿಪಕ್ವತೆ ವಿವೇಕದ ಔಚಿತ್ಯ ಚಿಂತನೆಗಳು ತನ್ನ ಗುಣಗ್ರಾಹಕತೆಯಿಂದ ಸವ್ಯಸಾಚಿಯಾದುದು ಎನ್ನಬೇಕು. ಇಲ್ಲಿನ ರಾಮಕತೆಯ ಉದ್ದೇಶ ಆಧ್ಯಾತ್ಮಿಕವಲ್ಲದೆ ಹೋದರು ಸಾಮಾಜಿಕ ವಸ್ತಾವ ಉದ್ದೇಶವನ್ನು ತನ್ನ ಅಂತರಂಗದಲ್ಲಿ ತುಂಬಿಕೊಂಡಿದೆ. ಸಹಜ ನೆಲ ಮೂಲ ಸಂಸ್ಕೃತಿಯ ಉದಾತ್ತ ಮಹೋನ್ನತ ಚಿಂತನೆಗಳನ್ನು ಸಾದರಪಡಿಸುವ ಅನುಬಾನೆತ್ತರದ ಕಾವ್ಯವೆಂದರೆ ಸರಿಹೋಗುವುದು. ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ ಆಧ್ಯಾತ್ಮಿಕ ನೆಲೆಯಲ್ಲಿ ಹಲವು ವೈರುಧ್ಯಗಳ ಪಾತ್ರಗಳ ಕಳಂಕಗಳನ್ನು ತೊಡೆದುಹಾಕಿ ಅಥವಾ ನಿವಾರಣೆಯಿಂದ ಸಾಮಾಜಿಕತೆಯಲ್ಲಿ ಕಥಾಪಾತ್ರಗಳ ಉದ್ದರಿಸಿ ಔನತ್ಯ ತಂದರು. ಹಾಗೆ ಆಧುನಿಕೋತ್ತರ ಚಿಂತನೆಗಳಲ್ಲಿ ರಾಮ ಆದರ್ಶ ಪುರುಷನಾದರೂ ಕಾವ್ಯದ ಮಹಾಛಂಧಸ್ಸಿನ ತಪಸಿದ್ಧಿ ಅಲ್ಲಿ ಸಾಧ್ಯವಾಗಿದೆ ಹಾಗಾಗಿ ಕುವೆಂಪು ರಾಮಾಯಣ ಭವ್ಯ ಮಾನವರ ಕಲ್ಪನೆಯದು ಆಗಿದೆ.

“ಇತಿಹಾಸಮಲ್ತು ; ಬರಿ ಕದಥೆಯಲ್ತು; ಕಥೆ ಯಾಕೆ
ನಿಮಿತ್ತಮಾತ್ರಂ, ಆತ್ಮಕೆ ಶರೀರದೋಲಂತೆ
ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ
ರಾಮರೂಪದ ಪರಾತ್ಪರನ ಪುರುಷೋತ್ತಮನ
ಲೋಕಲೀಲಾದರ್ಶನಂ “
ಎನ್ನುವ ಮಹಾಕವಿ ವಿಭೂತಿ ಕುವೆಂಪು ಅನೇಕ ಮಾರ್ಪಾಡುಗಳನ್ನು ಸನ್ನಿವೇಷ ಚಿತ್ರಣಗಳನ್ನು ಆಧುನಿಕ ಜಗತ್ತಿಗೆ ಸಲ್ಲುವಂತೆ ಸೃಜನ ಮಾಡಿ ಬರೆದರು. ಇದು ಕಾಲಮಾನದ ಸಾಂಸ್ಕೃತಿಕ ರಾಜಕೀಯವನ್ನು ತನ್ನ ಸಮ ಸಂದರ್ಭದ ಜಾಗತಿಕ ಪ್ರಪಂಚವನ್ನು ಅನುಲಕ್ಷಿಸಿರುವುದನ್ನು ಕಾಣಬಹುದು.

ಅದೇ ಇನ್ನು ಆಧುನಿಕವೆನ್ನಬಹುದಾದ ಉದಾತ್ತ ಚಿಂತನೆಗಳನ್ನು ಸಮಕಾಲೀನ ಸಂಧರ್ಭದ ಸಾಂಸ್ಕೃತಿಕ ರಾಜಕಾರಣವನ್ನು ಒಬ್ಬ ಕವಿಯಾಗಿ ರಾಜಕಾರಣಿಯಾಗಿ ಬರೆದ ಶ್ರೀ ವೀರಪ್ಪ ಮೊಯಿಲಿಯವರ ಮಹಾಕಾವ್ಯ “ರಾಮಾಯಣ ಮಹಾನ್ವೇಷಣಂ” ತನ್ನ ಉದ್ದೇಶದಲ್ಲಿ ಲಕ್ಷ್ಮಾಣಾಯಣವಾಗಿದೆ.

” ಇದು ರಾಮಾಯಣವು ಅಲ್ಲ ಸೀತಾಯಣವೂ ಅಲ್ಲ ಲಕ್ಷ್ಮಾಣಾಯಣ
ಮಧುಕರನ ಸನ್ನಿಧಿಯು ಕಂಪೊಗೆವ ಕುಸುಮಗಳ
ಮಾರುತನು ಪ್ರೇಮಭಾವದಿ ಎನ್ನ ಹೃದಯಾದಾ
ಗಸದಲಿ ರಾಮನನು ಜನತಾತ್ವಿಕ ಮಹೋನ್ನತಿಯ
ಪ್ರಭೆಯುದಿಸಿರಲು ವಿಶಾಲ ನಿರಭ ಸಂಯೋಗ
ಸಾಗರದ ಮೇಲೆ ಪ್ರೇಮ ನೌಕೆಯಲ್ಲಿ ತೇಲಿ
ಸುತಿಸುತ್ತ ರಚಿಸುವೆನು ಮಹಾನ್ವೇಷಣೆಯಲಿ ಸೆಲೆ
ಲಕ್ಷ್ಮಣ ಮಹಾಕಾವ್ಯವನು”

ಎನ್ನುವ ಕವಿ ಜೈನ ಧರ್ಮದ ತಾತ್ವಿಕ ತಿರುಳಿನಂತೆ ರಾಮನನ್ನು ಅಹಿಂಸೆಯ ನಾಯಕನಾಗಿಸಿ ವೀರತೆಯ ಮಹತ್ತಿಗೆ ಲಕ್ಷ್ಮಣನನ್ನು ನಾಯಕನಾಗಿಸಿರುವುದು ಕಾಲಮಾನದ ಮನೋಧರ್ಮ ಎನ್ನಬಹುದು. ಇವೆಲ್ಲವೂ ತೌಲನಿಕ ಕ್ರಮದಲ್ಲಿ ಕವಿಗಳು ಹೇಗೆ ಪ್ರಸ್ತಾವನೆ ಭಾಗವಾಗಿ ನಾಂದಿಯಾಗಿಸಿದರು ಎಂಬುದನ್ನು ತಮ್ಮ ಕಾವ್ಯಗಳ ಉದ್ದೇಶಗಳಲ್ಲಿ ತಿಳಿಯಪಡಿಸುತ್ತಾರೆ ಎಂಬುದು ಇಲ್ಲಿನ ವಿವೇಚನೆಯಷ್ಟೇ.

“ಶ್ರೀರಾಮಪಟ್ಟಾಭಿಷೇಕಂ” ಹೆಸರೆ ಸೂಚಿಸಿರುವಂತೆ ಇದು ರಾಮಪಟ್ಟಾಭಿಷೇಕದ ಕುರಿತ ಕಾವ್ಯ. ಇಲ್ಲಿನ ಮಾಸ್ತಿಯವರ ನಿರೂಪಣಾ ಕ್ರಮ ಸಮಗ್ರ ರಾಮಾಯಣವನ್ನು ಆಧುನಿಕ ಕನ್ನಡದ ಸರಳರಗಳೆ ಛಂಧಸ್ಸಿನಲ್ಲಿ ಆಡುನುಡಿಯ ದೇಸಿ ಸೊಬಗಿನಲ್ಲಿ ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾರೆ. ಮಾಸ್ತಿ ಅಥವಾ ಶ್ರೀನಿವಾಸರ ಈ ಪರಿಕಲ್ಪನೆಗಳ ಆಲೋಚನೆಯಲ್ಲಿ ಮತ್ತು ಸಂಭಾಷಣೆಯ ಚತುರತೆಯಲ್ಲಿ ತಾಜಾತನದ ಲವಲವಿಕೆಯ ಇದೆ. ಈ ಕಾವ್ಯವು ಇಂದಿಗೆ ಅರ್ಧ ಶತಮಾನವನ್ನು ಪೂರೈಸಿದರು ಮತ್ತೇ ಮತ್ತೇ ಓದುವಂತೆ ಮಾಡುವ ಗುಣದಿಂದ ಅದರ ಹೆಗ್ಗಳಿಕೆಯ ಗುರುತು ಕಂಡಿದೆ.
ನಂದಿಗ್ರಾಮದಲ್ಲಿ ಭರತನ ರಾಮ ನೀರಿಕ್ಷೆಯ ಕಾತರತೆಯ ಸನ್ನಿಷೇಷದಿಂದ ಆರಂಭವಾಗುತ್ತದೆ ಈ ಕಾವ್ಯ. ಈ ನಿರೀಕ್ಷೆಯು ರಾಮನ ವನವಾಸದ ಕೊನೆಯ ದಿನ. ರಾಮನಿಂದ ಯಾವ ನಿರೀಕ್ಷೆಯ ಸಂದೇಶವು ಬಾರದೆ ಇರುವಾಗ ಸಾಮಾನ್ಯವಾಗಿ ತಲ್ಲಣಗೊಳ್ಳುವ ಭರತನ ಮನಸ್ಥಿತಿ. ಮುಂದಿನ ರಾಮಕತೆಯೆಲ್ಲ ಎರಡು ದಿನಗಳದ್ದು. ಎಂದರೆ ರಾಮ ವನವಾಸದಿಂದ ಮರಳಿ ಬಂದ ಸಂಭ್ರಮ ಸಡಗರ ಮತ್ತು ಪಟ್ಟಾಭಿಷೇಕ ನಡೆಯುವ ಉತ್ಸವ ದಿನಗಳಿಂದ ಆವರಿಸಿದ ಕತೆ. ಮೂರು ದಿನಗಳ ಬೆಳಕಿನಲ್ಲಿ ಹದಿನಾಲ್ಕು ವರ್ಷಗಳ ನೆಳಲನ್ನು ನೇಯ್ದಿರುವುದು ಈ ಕಾವ್ಯದ ವೈಶಿಷ್ಟ್ಯ ಚಿತ್ರಣವಾಗಿದೆ. ಕಥಾ ನಿರೂಪಣೆಯ ಯೋಜನೆ ಮತ್ತು ಒಮುಖದ ಪರಿಣಾಮದತ್ತ ಕಾವ್ಯದ ಓಟ ತನ್ನ ರಚನೆಯ ಸಾಮರ್ಥ್ಯದಿಂದ ಔಚಿತ್ಯವನ್ನು ಸಾಧಿಸಿದೆ.” ಶ್ರೀರಾಮಪಟ್ಟಾಭಿಷೇಕಂ” ಮಹಾಕಾವ್ಯ ಎಂದರೆ ಸಮರ್ಥನೀಯವಾಗುತ್ತದೆ.

ವನವಾಸದ ಕೊನೆಯ ಬೆಳಗಿನಲ್ಲಿ ಹಿಂದುರುಗಿ ಬರಬೇಕಾದ ರಾಮನ ನಿರೀಕ್ಷೆಯಲ್ಲಿ ನಂದಿಗ್ರಾಮದಲ್ಲಿ ಕಾಯುತ್ತಿದ್ದ ಭರತನಿಗೆ ತಲ್ಲಣ ತಳಮಳ ಆವರಿಸಿದೆ. ಅಣ್ಣನ ಬರವಿನ ಯಾವ ನಿರೀಕ್ಷೆಯೂ ಇಲ್ಲ. ಮರು ದಿನ ಅಣ್ಣ ಬರದೇ ಹೋದರೆ ಅಗ್ನಿ ಪ್ರವೇಶ ಮಾಡುವ ಸಂಕಲ್ಪವನ್ನು ನಿರ್ಧರಿಸುತ್ತಾನೆ ಭರತ. ಗುಹರಾಜನಿಗೆ ಏನಾದರೂ ಸಂದೇಶ ಬಂದಿದೆಯೆಂದು ತಿಳಿಯಲು ಶತ್ರುಘ್ನನನ್ನು ಕಳಿಸುತ್ತಾನೆ. ಹದಿನಾಲ್ಕು ವರ್ಷಗಳ ಹಿಂದೆ ಭರತ ಮತ್ತು ತಾನು ತಾತನ ಮನೆಯಲ್ಲಿದ್ದು, ಭರತನು ಕೆಟ್ಟಕನಸು ಕಂಡದ್ದು, ತಾವಿಬ್ಬರು ಅಯೋಧ್ಯೆಗೆ ಬಂದು ತಂದೆಯ ಸಾವಿನ ಸುದ್ದಿಯನ್ನು ಕೇಳಿದ್ದು, ಅಣ್ಣಂದಿರು ಮತ್ತು ಅತ್ತಿಗೆ ವನವಾಸಕ್ಕೆ ಹೊರಟಿದ್ದು, ಕೈಕೆಯಿ ಭರತನಿಗಾಗಿ ಮೀಸಲು ಮಾಡಿದ ರಾಜ್ಯವನ್ನು ಆತ ತಿರಸ್ಕರಿಸಿದ್ದು ಈ ಎಲ್ಲಾ ಸಂದರ್ಭಗಳು ಗುಹನನ್ನು ಕಾಣಲು ಹೊರಟ ಶತ್ರುಘ್ನನ ಮನಃಪಟಲದಲ್ಲಿ ಸುಳಿದು ಆನಂದಬಾಷ್ಪ ಸುರಿಯುತ್ತದೆ. ರಾವಣ ಸೀತೆಯನ್ನು ಕದ್ದೊಯ್ಯೊಲು,ಅವಳ ಬಿಡಿಸಿ ತರಲು ಹೊರಟ ರಾಮ, ವಾನರ ಸೈನ್ಯದ ರಾಜರ ನೆರವು ಪಡೆದು ದಂಡಯಾತ್ರೆ ಕೈಗೊಂಡು ಲಂಕೆಗೆ ಹೋದರೆಂಬ ಸುದ್ಧಿಯನ್ನು ಗುಹನು ಶತ್ರುಘ್ನನಿಗೆ ಅರಹಿದನು. ಇದನ್ನು ಭರತನಿಗೆ ತಿಳಿಯಪಡಿಸುವುದು ಬೇಡ ಹೇಗಿದ್ದರು ಶ್ರೀರಾಮ ವನವಾಸದಿಂದ ನಾಳೆ ಬರುವವನಿದ್ದಾನೆ , ಬಂದೇಬರುತ್ತಾನೆಂದು ಅಚಲವಾದ ಧೃಡವನ್ನು ಹೇಳುತ್ತಾನೆ. ಅಷ್ಟರಲ್ಲಿ ಕೌಸಲ್ಯೆ, ಕೈಕೆಯಿಯೊಂದಿಗೆ ಭರತನನ್ನು ಕಾಣಲು ಸುಮಂತ್ರನ ಮೊಮ್ಮಗನ ಸಾರಥ್ಯದಲ್ಲಿ ಬರುತ್ತಾರೆ. ಅವರ ಅನ್ಯೋನ್ಯತೆಯನ್ನು ಕಂಡು ಗುಹನು ಸಂತೋಷಭರಿತನಾಗಲು ಶತ್ರುಘ್ನ ಕೈಕೆಯಿ ಮಾತೆಯನ್ನು ಗುಣಗಾನ ಮಾಡುತ್ತಾನೆ. ಗುಹನು ದಶರಥನ ಮೂರು ರಾಣಿಯರನ್ನು ಅವರ ನಾಲ್ವರು ಮಕ್ಕಳನ್ನು ಕೊಂಡಾಡುತ್ತಾನೆ. ಸಾರಥಿ ಸುಮಂತ್ರ ಗುಹನೊಡನೆ ಮಾತನಾಡುತ್ತ ತನ್ನ ಮೊಮ್ಮಗ ಶ್ರೀರಾಮ ವನವಾಸಕ್ಕೆ ಹೋದ ದಿನದಂದು ಹುಟ್ಟಿದವನು. ಹಾಗಾಗಿ ಅವನಿಗೆ ಹೆಸರಿಡುವ ಹೊಣೆ ಸೀತಾದೇವಿಯದು ಎಂದು ತನ್ನ ಮೊಮ್ಮಗನ ಜನನ ವೃತ್ತಾಂತವನ್ನು ಹೇಳುತ್ತಾನೆ. ದಶರಥನು ರಾಮನಿಗೆ ಯುವರಾಜ ಪಟ್ಟ ಕಟ್ಟಲು ನಿರ್ಧರಿಸಿದಾಗ ಪ್ರಜೆಗಳಿಗೆ ಆದ ಆನಂದ ಸಂಭ್ರಮ ಕಳೆಗಟ್ಟಿದ ಅಯೋಧ್ಯೆ ನಗರ ಚಿತ್ರಣ. ಕೈಕೆಯಿ ಭರತನಿಗೆ ರಾಜ್ಯ ,ರಾಮನಿಗೆ ಹದಿನಾಲ್ಕು ವರ್ಷ ವನವಾಸವನ್ನು ಬೇಡಿ ಪಡೆದಾಗ ತಂದೆ ತಾಯಿಯರ ಜೊತೆ ರಾಮ ಅವರವರ ವ್ಯಕ್ತಿತ್ವಕ್ಕೆ ಸ್ವಭಾವಕ್ಕೆ ತಕ್ಕಂತೆ ಮಾತಾಡಿ ಸಂತೈಸಿ ಸೀತೆ ಲಕ್ಷ್ಮಣರ ಜೊತೆಗೆ ವನವಾಸಕ್ಕೆ ಸಂತೋಷದಿಂದ ಹೊರಟನು. ಅವನ ಸತ್ಯಸಂಧತೆ, ಗುಣಗ್ರಾಹಕತೆ, ಹೃದಯ ಶ್ರೀಮಂತಿಕೆಗೆ ಬೆಲೆಕಟ್ಟಲಾಗದ ಸತ್ಯನಿಷ್ಠತೆ ಆ ದಿನದ ಸ್ಥಾಯಿಭಾವ ಆಗಿ ಮಡುಗಟ್ಟಿದೆ. ರಾಮನ ಆಗಲಿಕೆಯಿಂದ ದಶರಥ ಮರಣ ಹೊಂದಿದನು. ಇದನ್ನೆಲ್ಲ ಸುಮಂತ್ರ ಗುಹನೊಡನೆ ವರ್ಣಿಸಿ ವಿವರಿಸಿದನು. ಅಷ್ಟರಲ್ಲಿ ಹನುಮಂತ, ಶ್ರೀರಾಮ ನಾಳೆ ಬರುತ್ತಾನೆ ಎಂಬ ಸಂತಸದ ಸುದ್ದಿಯನ್ನು ಹೊತ್ತು ತಂದು, ಭರತ ಮೊದಲಾದವರಿಗೆ ಹೇಳುತ್ತಾನೆ. ಅತೀವ ಸಂತಸದಿಂದ ಭರತ ಅಣ್ಣನ ಪಟ್ಟಾಭಿಷೇಕದ ಸಿದ್ಧತೆ ನಡೆಸುವಂತೆ ಶತ್ರುಘ್ನನಾದ ತಮ್ಮನಿಗೆ ಆಜ್ಞಾಪಿಸುತ್ತಾನೆ. ಹನುಮಂತನು, ಭರತ , ಕೌಸಲ್ಯೆ, ಕೈಕೆಯಿ ಮುಂತಾದ ನೆರೆದ ಜನರಿಗೆ ಶ್ರೀರಾಮನ ವನವಾಸಕಾಲದ ಕತೆಯನ್ನು ಹೇಳುತ್ತಾನೆ. ರಾವಣ ಸೀತೆಯನ್ನು ಅಪಹರಣ ಮಾಡಿದ್ದು, ರಾಮ ಸುಗ್ರೀವನ ಸಖ್ಯ ಮಾಡಿದ್ದು, ತಾನು ಲಂಕೆಯ ಅಶೋಕವನದಲ್ಲಿ ಮ್ಲಾನಚಿತ್ತಳಾಗಿ ತಪೋನಿರತಳಾದ ಸೀತಾದೇವಿಯನ್ನು ಕಂಡಿದ್ದು, ರಾಜ ಕುರುಹುಗಳು ರಾವಾನೆ ಮಾಡಿದ್ದು, ವಿಭೀಷಣ ರಾಮನಿಗೆ ಶರಣಾಗಿದ್ದು, ರಾಮ ಸುಗ್ರೀವನ ಸೈನ್ಯದೊಂದಿಗೆ ಲಂಕೆಯನ್ನು ಮುತ್ತಿಗೆ ಹಾಕಿ ರಾವಣನನ್ನು ಸಂಹರಿಸಿದ್ದು, ಸೀತಾದೇವಿಯ ಅಗ್ನಿಪರೀಕ್ಷೆ ಸಾರ್ವಜನಿಕವಾಗಿ ನಡೆದಿದ್ದು, ಶ್ರೀರಾಮ, ಸೀತೆ, ಲಕ್ಷ್ಮಣರು ಸುಗ್ರೀವ ಮೊದಲಾದ ಜನರೊಂದಿಗೆ ಭಾರದ್ವಾಜರ ಆಶ್ರಮಕ್ಕೆ ಹಿಂದುರುಗಿದು. ಎಲ್ಲ ಕತೆಯನ್ನು ಸಾಂಗವಾಗಿ ವಿವರಿಸಿದನು. ಸುದ್ಧಿ ತಿಳಿದು ಸುಮಿತ್ರಾ ಊರ್ಮಿಳೆಯ ಆಶ್ರಮಕ್ಕೆ ಬರುತ್ತಾಳೆ. ವಸಿಷ್ಠರು ನಂದಿಗ್ರಾಮದಲ್ಲಿ ಬಂದು ಪಟ್ಟಾಭಿಷೇಕದ ಸಿದ್ಧತೆ ಮಾಡುವಂತೆ ಭಾರತ ಶತ್ರುಘ್ನರಿಗೆ ಹೇಳುತ್ತಾರೆ. ರಾಮನ ಆಗಮನದ ನಿರೀಕ್ಷೆಯ ಸುತ್ತ ನೆರೆದ ಜನರು ಸಂಭ್ರಮ ಸಡಗರಗಳಿಂದ ಜಾತ್ರೆ ಜಾತ್ರೆಯಾಗಿ ನಂದಿಗ್ರಾಮದ ಕಡೆ ಬರುತ್ತಾರೆ.

ಹನುಮಂತನು ತಿಳಿಸಿದಂತೆ ಮರುದಿನ ವನವಾಸ ಮುಗಿಸಿಕೊಂಡು ಶ್ರೀರಾಮ,ಸೀತೆ, ಲಕ್ಷ್ಮಣರು ಬರುತ್ತಾರೆ. ಇವರ ಜೊತೆಗೆ ಸುಗ್ರೀವ, ವಿಭೀಷಣ,ತಾರಾ,ರುಮೆ,ಅನಲೆ,ಅಂಗದರು ಬರುತ್ತಾರೆ. ಜಾತ್ರೆಯಂತೆ ತಂಡೋಪತಂಡವಾಗಿ ನೆರೆದ ಜನಕ್ಕೆ ರಾಮನ ಆಗಮನ ಸಂಭ್ರಮದ ವಿಚಾರವಾಗುತ್ತದೆ. ಆ ಸಭಾಮಂಟಪದಲ್ಲಿ ವಸಿಷ್ಠರು ಶ್ರೀರಾಮನಿಗೆ ರಾಜ್ಯಭಾರ ವಹಿಸಿಕೊಳ್ಳಲು ಆಜ್ಞಾಪಿಸುತ್ತಾರೆ. ನಾಡು ಅರಮನೆ ಅತ್ಯಂತ ಆನಂದ ತಂದುಲತೆಯಿಂದ ಸಡಗರದಲ್ಲಿ ತೊಡಗಿರುತ್ತದೆ. ಸುಗ್ರೀವ ವಿಭೀಷಣನು ರಾಜಮಾತೆಯರ ಭೇಟಿ ಮಾಡಿ ರಾಮ ಪಟ್ಟಾಭಿಷೇಕದ ಸಿದ್ಧತೆಯಲ್ಲಿ ನೆರವಾಗುತ್ತಾರೆ. ಅವರು ಹೋದ ನಂತರ ಕೌಸಲ್ಯೆಯ ಆಪೇಕ್ಷೆಯಂತೆ ತಾರೆ ತಮ್ಮ ಬುಡುಕಟ್ಟು ಸಂಸ್ಕೃತಿಯ ಜೀವನ ವಿಧಾನಗಳನ್ನು ತಮ್ಮ ಸಂಸಾರದ ಕತೆಯನ್ನು ವಿವರಿಸುತ್ತಾಳೆ. ಸೀತೆ ಅಶೋಕವನದ ಸೆರೆಯಲ್ಲಿ ಪಟ್ಟಪಾಡನ್ನು ವಿಭೀಷಣನ ಮಗಳು ಅನಲೆ ಹೇಳುತ್ತಾಳೆ. ಶತ್ರುಘ್ನನಿಗೆ ಅಂಗದ ರಾಮ ಲಂಕೆಗೆ ದಂಡೆತ್ತಿಹೋಗಿದ್ದು, ಸಂಧಾನ ಪ್ರಯತ್ನ, ನಡೆದ ಯುದ್ಧ, ರಾವಣ ಸಂಹಾರ, ದಿಗ್ವಿಜಯವನ್ನು ಅರಹುತ್ತಾನೆ. ಶ್ರೀರಾಮ ಲಕ್ಷ್ಮಣನಿಗೆ ಯುವರಾಜನ ಆಗು ಎನ್ನಲು ಆತ ಒಪ್ಪಿದೆ ಇರಲು ಭರತನಿಗೆ ಯುವರಾಜ ಪಟ್ಟವನ್ನು ನೀಡಲು ಒತ್ತಾಯಿಸುತ್ತಾನೆ. ಹಾಗೆ ನಿರ್ಧಾರವಾಗುತ್ತದೆ. ಸೀತೆ ಊರ್ಮಿಳೆಯರ ಸಮಾಗಮ ಪರಸ್ಪರ ಪ್ರೀತಿ ವಿಶ್ವಾಸದ ಕುಶಲೋಪರಿ ನಡೆಯುತ್ತದೆ. ಊರ್ಮಿಳೆಯ ತ್ಯಾಗವನ್ನು ಸೀತೆ ಕೊಂಡಾಡುತ್ತಾಳೆ. ಊರ್ಮಿಳೆಗೆ ತನ್ನ ರಾಮನ ಆಗಲಿಕೆ ನೋವನ್ನು ವನವಾಸದ ಅಷ್ಟು ಅನುಭವಗಳನ್ನು ಹೇಳುತ್ತಾಳೆ. ಇಲ್ಲಿ ಸ್ತ್ರೀ ಸಂವೇದನೆಗಳಿಗೆ ಅವಕಾಶ ಲಭಿಸಿದೆ. ರಾಮನ ವಿರಹ ತಾಪ, ತನ್ನ ತನ್ಮಯತೆಯ ಸಂಯಮ ಸಮಾಧಾನವನ್ನು ಹೇಳುತ್ತಾಳೆ. ಮುಖ್ಯವಾಗಿ ವನವಾಸ ಕಾಲದ ಪ್ರಕೃತಿ ಸೌಂದರ್ಯದ ತನಿಯನ್ನು ವಿವರಿಸುತ್ತಾಳೆ. ಮಾನಸಿಕವಾಗಿ ಮಂಥರೆ ಕೈಕೆಯಿಯ ಮನಸ್ಸನ್ನು ಹೇಗೆ ತಾನು ರಾಮನಿಗೆದಿರಗಿ ತಿರುಗಿಸಿದೆ ಎಂಬ ಸನ್ನಿವೇಶ ಪರಿಸ್ಥಿತಿಗಳನ್ನು ನೆನಪಿಸಿಕೊಳ್ಳುತ್ತಾಳೆ. ಪಟ್ಟಾಭಿಷೇಕದ ಸಿದ್ಧತೆಗಳು ಇಕ್ಷ್ವಾಕು ವಂಶದವರ ಧರ್ಮದಂತೆ ರಾಮನಿಗೆ ಅತ್ಯಂತ ವಿಜೃಂಭಣೆಯಿಂದ ಉತ್ಸವದ ರೀತಿ ಸಿಂಹಾಸನಾರೋಹಣ ನಡೆಯುತ್ತದೆ. ವಸಿಷ್ಠರು ಅನೇಕ ಜಲಾಭಿಷೇಕವನ್ನು ಸಿಂಪಡಿಸಿ ರಾಜಧರ್ಮ ವನ್ನು ರಾಮನಿಗೆ ಪ್ರವಚನ ಮಾಡುತ್ತಾರೆ. ಇಕ್ಷ್ವಾಕು ವಂಶಸ್ಥರ ಪೂರ್ವಸೂರಿಗಳ ಗುಣಗಾನ ನಡೆಯುತ್ತದೆ. ಅಭಿಷಿಕ್ತರ ಮೆರವಣೆಗೆ ,ಉತ್ಸವದ ರಾಜಸಭೆ ನಡೆಯುತ್ತದೆ. ರಾಮರಾಜ್ಯದ ಜನರು ಸಂತೋಷದಲ್ಲಿ ಮುಳುಗುತ್ತದೆ. ಈ ಸಂಭ್ರಮವನ್ನು ಕಂಡು ಸುಗ್ರೀವ ವಿಭೀಷಣರು ತಮ್ಮ ತಮ್ಮ ನಾಡಿಗೆ ತೆರಳುತ್ತಾರೆ. ಹನುಮಂತ ರಾಮ ಸೇವಕನಾಗಿ ಅಯೋಧ್ಯೆಯಲ್ಲಿ ನಿಲ್ಲುತ್ತಾನೆ. ರಾಮರಾಜ್ಯದ ಸುಖ ಸಂಪತ್ತು ಆದರ್ಶ ವೈಭವಗಳೊಂದಿಗೆ ಈ ಕಾವ್ಯ ಸುಖಾಂತವಾಗುತ್ತದೆ. ಇದಿಷ್ಟು ಇಲ್ಲಿನ “ಶ್ರೀರಾಮಪಟ್ಟಾಭಿಷೇಕಂ” ಕಾವ್ಯದ ಸಂಕ್ಷಿಪ್ತ ವಿವರಣೆಯನ್ನು ಮಾಸ್ತಿಯವರು ಕಟ್ಟಿಕೊಟ್ಟಿದ್ದಾರೆ. ಉತ್ತರೋತ್ತರ ರಾಮಾಯಣ ಕತೆಯನ್ನು ಇಲ್ಲಿ ಔಚಿತ್ಯದಿಂದ ಕೈಬಿಡಲಾಗಿದೆ. ಮಾಸ್ತಿಯವರಿಗೆ ಸತಿಪತಿಯ ಆಗಲಿಕೆಯ ನೋವಿನಿಂದ ಆದ ಸುಪ್ತ ಮನಸಿನ ಎಚ್ಚರಿಕೆ ಮತ್ತು ವಿರಹತಾಪ ಇಲ್ಲಿ ಕೆಲಸಮಾಡಿದೆ. ಮತ್ತೆಮತ್ತೇ ದುರಂತಗಳನ್ನು ತರದೆ ವಿಕ್ಷುಬ್ದ ವಿಲಕ್ಷಣಗಳನ್ನು ತರದೆ ಬದುಕಿನೆಚ್ಚರಿಕೆಯ ಮನಸ್ಥಿತಿಯಿಂದ ಕಾವ್ಯವನ್ನು ಸುಖಾಂತ ಮಾಡುತ್ತಾರೆ. ಕವಿ ಪ್ರತಿಭೆ ಹೊರಗಿನ ಯಾವ ಪ್ರಕ್ಷಿಪ್ತ ಹೊರ ನೋಟಗಳನ್ನು ತರದೆ, ಇರುವ ವಾಲ್ಮೀಕಿ ರಾಮಾಯಣದ ಪ್ರಸಂಗ ಸನ್ನಿವೇಷಗಳನ್ನು ಒಂದು ಸಂಕ್ಷಿಪ್ತ ಸಮಗ್ರತೆಯ ನೆಲೆಯಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಮೈದುಂಬಿ ವಿರಚಿಸಲು ಇಲ್ಲಿ ಪ್ರತಿಭೆ ಸೂಕ್ಷ್ಮತರವಾಗಿ ಕೆಲಸಮಾಡಿದೆ. ಮಾಸ್ತಿಯವರು ಜೀವನಾನುಭವ, ಅನುಭೂತಿ, ಲೋಕೋತ್ತರ ಜೀವನವನ್ನು ಒಬ್ಬ ಹಿರಿಯ ಅಧಿಕಾರಿಯಾಗಿ, ಕೋಶವನ್ನು ಓದಿ, ನಾಡು ಸುತ್ತಿ ಕಂಡಿದ್ದರು. ಹಾಗಾಗಿ ಅವರಿಗೆ ಯಾವುದು ಔಚಿತ್ಯ ಎಂಬ ಪರಿಜ್ಞಾನವಿರುವುದು ಇಲ್ಲಿ ಸಮಂಜಸವಾಗಿ ಕಂಡಿದೆ. ನಿರೂಪಣೆಯ ಕ್ರಮದಲ್ಲಿ ವಹಿಸಿದ ಎಚ್ಚರಿಕೆ ವಕಾಲತ್ತಿನಂತೆ ಕಂಡರು ಅಲ್ಲಿನ ಪಾತ್ರ ಚಿತ್ರಣ ವರ್ಣನೆಯ ಪ್ರಸಂಗಗಳು ಜನಪದಕ್ಕೆ ಹತ್ತಿರದವುಗಳು.ಕವಿ ಸಮಯಗಳನ್ನು ಪಡಿಮಿಡಿಯುವಲ್ಲಿ ,ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿ , ಮಾಡಿಕೊಂಡ ಮಾರ್ಪಾಡುಗಳು ಕನ್ನಡತನದಿಂದ ಕೂಡಿ ಓದುಗರು ಹೃದಯದಲ್ಲಿ ತನ್ನ ಸ್ಥಾನಮಾನವನ್ನು ಚಿರಸ್ಥಾಯಿಯಾಗಿ ಪಡೆದಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ರಾಮಾಯಾಣ ಕತೆಯನ್ನು ತುಣುಕು ತುಣುಕಾಗಿ ನವೀನತೆಯ ನಾಟಕೀಯ ಶೈಲಿಯಲ್ಲಿ ಪಾತ್ರಗಳ ಮೂಲಕ ಹೇಳಿಸುವ ಸ್ವಗತ ಇಲ್ಲಿ ಹೊಸತನದಿಂದ ಕೂಡಿದೆ. ಕವಿ ಪ್ರಥಮ ಪುರುಷನಾಗಿ ಏನನ್ನು ಹೇಳುವುದಿಲ್ಲ. ಕಥಾ ಪಾತ್ರಗಳೇ ತಮ್ಮ ಅನುಭವಗಳನ್ನು ವಿವರಿಸುವ ನಿವೇಧಿಸುವ ಪರಿಕಲ್ಪನೆ ಸ್ವ-ಸ್ವಗತಗಳನ್ನು “ಶ್ರೀರಾಮಪಟ್ಟಾಭಿಷೇಕ”ದಲ್ಲಿ ಕಾಣಲು ಸಾಧ್ಯವಿದೆ. ಕತೆಯ ಓಟ ಪರಿಣಾಮದ ಕಡೆಗೆ ಓಡುವ ಕುದುರೆಯಂತೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಪ್ರಜ್ಞಾಪ್ರವಾಹ ತಂತ್ರವೆಂಬುದು ಔಚಿತ್ಯಕಾಗಿಯೆ ವಿನಾ ಅನ್ಯ ಕಾರಣವಿಲ್ಲ. ಅದು ಹಳ್ಳಿಗಾಡಿನ ಜೀವನದ ರೀತಿಯಲ್ಲಿಯೆ ಇರುವಂತದ್ದು. ಕೇಳುಗರ ಕೇಳುವ ಕುತೂಹಲದ ಬಲದಿಂದ ಕಥಾಪಾತ್ರಗಳು ತಮ್ಮ ಕತೆಯನ್ನು ಅರಹುತ್ತವೆ. ನಿರೂಪಕನ ಕ್ರಮವಿಲ್ಲಿ ಮಾಸ್ತಿಯವರ ನಿರೂಪಣೆಯೆ ಆಗಿರದೆ ಕತೆ ಪಾತ್ರಗಳು ನಡೆದ ಸಂಗತಿ ಘಟನೆಗಳನ್ನು ಮೆಲುಕು ಹಾಕಿ ಹೇಳುವಂತಿದೆ.ಇಲ್ಲಿ ಎಲ್ಲಿಯೂ ಉದ್ವಿಗ್ನತೆ, ರಸಾವೇಶಭಾವಗಳ ಏಕಾತನತೆಯ ಸಿನಿಕಥನಗಳಿಗೆ ಅಂದರೆ ಅಧಿಕ ಪ್ರಸಂಗಗಳಿಗೆ ಎಡೆಯಿಲ್ಲ. ಸಾಂಗ್ಯವಾದ ಸಾಂಘಿಕ ಜೀವನದ ಕ್ರಮ ಕಂಡುಬರುತ್ತದೆ. ಇದರಿಂದ ಓದುಗರಲ್ಲಿ ಯಾವುದೇ ಬೇಸರ ಆಗಲು ಸಾಧ್ಯವಿಲ್ಲ ಎನ್ನುವ ಭಾವ ಮೂಡದೆ ತಮ್ಮದೆ ಕತೆಯನ್ನು ಹೇಳುವ ಪಾತ್ರಗಳು ಆಪ್ತತೆಯಿಂದ ಕೂಡಿ ಸಹೃದಯ ಮನಸುಗಳನ್ನು ಸೊರೆಮಾಡುತ್ತವೆ. ಇಲ್ಲಿ ರಾಮ ಆಧ್ಯಾತ್ಮಿಕ ದೈವಿಪುರಷನಲ್ಲ. ಅಥವಾ ಅದ್ಭುತ ಪವಾಡಗಳನ್ನು ಮೆರೆಯುವ ಮಾಂತ್ರಿಕನಲ್ಲ. ಬದಲು ಸವ್ಯಸಾಚಿ ಭವ್ಯಮಾನವ. ಭಾರತೀಯ ಸಂಸ್ಕೃತಿಯಲ್ಲಿ ಜನರು ರಾಮಾಯಣವನ್ನು ಅದರ ಕತೆಯನ್ನು ಪರಮಭಕ್ತಿಯಿಂದ ಪೂಜಿಸಿ, ಆಧ್ಯಾತ್ಮಿಕತೆ ಅವಾಹನೆ ಮಾಡಿಕೊಳ್ಳುವುದುಂಟು. ಇಂಥಲ್ಲಿ ರಾಮ ಅವತಾರ ಪುರುಷ, ಅದ್ಭುತ ಅಸಾಧಾರಣ ವ್ಯಕ್ತಿ , ಪರಮಾತ್ಮ ಲೀಲೆಯ ಮನುಷ್ಯ ಎಂದು ನಂಬಲಾಗುತ್ತದೆ. ಅವರ ಮನಸ್ಥಿತಿಗಳಿಗೆ ಇಲ್ಲಿ ಧಕ್ಕೆಯಾಗಿಲ್ಲದಿದ್ದರೂ, ರಾಮ ಇಲ್ಲಿ ಅತಿ ಸಾಮಾನ್ಯ ಮನುಷ್ಯ, ಮನುಷ್ಯರಂತೆ ಹಲವು ನೋವುಗಳನ್ನು ಮೈಯುಂಡು ಮಾಗಿದ ವ್ಯಕ್ತಿತ್ವ, ಅವನು ನಂಬಿದ ಗುಣಸಂಪನ್ಮೂಲ ಆದರ್ಶಗಳಿಂದ ಆತ ದೈವಿಪುರಷನಾದನೇ ಹೊರತೂ, ಹುಟ್ಟಿನಿಂದಲ್ಲ. ಎಂಬ ಅಂಶಗಳು ಜೈನಧರ್ಮದ ತಾತ್ವಿಕ ತಿರುಳಿನಂತೆ ಕಂಡರು ಇದು ವೈದಿಕಾನೂಸಾರ ಕವಿ ಅಥವಾ ಲೋಕಸೇವಾ ಸಮಾಜ ಚಿಂತಕನ ಲೋಕೋತ್ತರ ಕೊಡುಗೆ ಎಂದರು ಸರಿಯಾದೀತು. ಇಲ್ಲಿ ಸತ್ಯಶೋಧಕ ಗುಣವಿದೆ. ಸಿಂಹಾವಲೋಕನ ಕ್ರಮವಿದೆ, ಕತೆಯನ್ನು ಕಥಾಪಾತ್ರಗಳು ಹೇಳುವ ನಿರೂಪಣೆಯ ಕ್ರಮವಿದೆ. ವಸ್ತಾವ ಜೀವನದ ದೃಷ್ಟಿಕೋನವನ್ನು ಪಡಿ ಮಿಡಿದಿದೆ. ಅದ್ಭುತಗಳನ್ನು ಇಲ್ಲದೆ, ಮಾನವ ಕಾರ್ಯಕ್ಕೆ ಸರಿಯಾದ ಕ್ರಮವಿದೆ. ಇಪ್ಪತ್ತಮೂರನೇ ಜೈನ ಚಕ್ರಿ ಮತ್ತು ತೀರ್ಥಂಕರನಾದ ಜೀವಂಧರನಂತೆ ಸಾಮಾನ್ಯ ರಾಮ ತನ್ನ ನಡವಳಿಕೆಯಿಂದ ದೇವಮಾನವನಾಗುವ ಪರಿಕಲ್ಪನೆಯಿದೆ. ಆದರೆ, ವೈದಿಕಾನೂಸಾರಿಯಾಗಿ ರಾಮ ವಿಷ್ಣುವಿನ ಅವತಾರ ಎಂಬ ನಿಲುವಿದೆ. ಇಲ್ಲಿ ಹನುಮಂತ ಸಮುದ್ರವನ್ನು ಈಸಿ ಲಂಕೆ ತಲುಪಿದನು. ಯಾವುದೇ ಅಳತೆ ಪ್ರಮಾಣಗಳು ಲೆಕ್ಕ ಅದ್ಭುತಗಳು ಜರುಗಲಿಲ್ಲ. ಹೈಫೋಥಿಸಿಸ್ ಊಹನೆಯ ಆಲೋಚನೆಗಳಿಗೆ ಒಂದು ಕ್ರಮವಿರುತ್ತದೆ. ಹಾಗೆ ಈ ಕಾವ್ಯ ಔವಿತ್ಯದಿಂದ ಕೂಡಿದೆ. ಎಲ್ಲೆಲ್ಲಿ ಅತಿಮಾನುಷ ಪವಾಡ ಅದ್ಭುತಗಳ ವರ್ಣಿಸುವ ಅವಕಾಶವಿದೆಯೊ ಅಲ್ಲೆಲ್ಲ ಸಹಜತೆಯ ಜೀವನದ ತಲಸ್ಪರ್ಶಿ ಅನುಭವವಿದೆ.

“ನಮ್ಮ ದಳ,ಯಾರು ಲಂಕೆಗೆ ಹೋಗುವುದು ಎಂದು
ಅಜ್ಜ ಜಾಂಬವರಾಜ ನಿರವಿಸಲಿ; ಎಂದಿತು
ಅಜ್ಜ ನಾ ಹೋಗುವುದು ಎಂದು ನಿಶ್ಚಯಿಸಿದರು
ಅವರ ಹರಕೆಯ ತಳೆದು ನಾನು ನೀರನು ಈಸಿ
ಲಂಕೆಯನು ಸೇರಿ ಇರುಳಲಿ ನಗರವನು ಹೊಕ್ಕು
ದೇವಿ ಎಲ್ಲಿಹರು ಎಂದರಿದೆನು “

ಎಂಬ ಹನುಮಂತನ ಸಹಜ ಸಾಹಸ ಇಲ್ಲಿದೆ. ಇಲ್ಲಿ ಸೇತುಬಂಧ ನಿರ್ಮಿಸುವ ಅಗತ್ಯ ಕಾಣದೆ ಜಲಮಾರ್ಗವನ್ನು ಭೇದಿಸುವ ನಳನ ಸಂಘಾಟ ತೆಪ್ಪಗಳ ಅಥವಾ ದೋಣಿಗಳ ವಿವರಣೆ ನೌಕಯಾನದ ಪರಿಕಲ್ಪನೆ ಸಮಂಜಸವಾಗಿದೆ. ಇದು ಕಾವ್ಯ ವಿವರಣೆ. ಆದರೆ ನಿಜವಾಗಲೂ ಸೇತುಬಂಧ ನಿರ್ಮಾಣ ಮಾಡಲಾಗಿತ್ತು ಅದು ಸಮುದ್ರದಲ್ಲಿ ಇಂದು ಮುಳುಗಿದೆ ಎಂಬ ಶೋಧ ಇತ್ತೀಚಿನ ವಿವರಣೆ ಅಲ್ಲಿಲ್ಲ. ಸೇತುವೆ ನಿರ್ಮಾಣವನ್ನು ಮಾಡಲಾಯಿತು ಎಂದಷ್ಟೆ ತಿಳಿಯುತ್ತದೆ. ಕೆಲವು ಕಡೆ ಗೊಂದಲವೂ ಇದೆ. ಕಲ್ಪನೆಗೆ ಅವಕಾಶವು ಮಾಸ್ತಿ ನಿರ್ವಹಿಸಿದ್ದಾರೆ.
ಪಾಯಸದಿಂದ ರಾಮದಿ ಮಕ್ಕಳು ಹುಟ್ಟದೆ ವಯಸ್ಸಿನ ಅಂತರದಲ್ಲಿ ಅವರ ಜನ್ಮ ವೃತ್ತಾಂತವನ್ನು ವಿವರಿಸಲಾಗಿದೆ. ಖರ, ಧೂಷಣ, ತ್ರಿಶಿರರು ರಾಕ್ಷಸರಲ್ಲ. ಶೂರ್ಪನಖಿ ಕುರೂಪಿಯೂ ಅಲ್ಲ,ಕಿವಿ ಮೂಗು ಕೊಯ್ಯುವ ಪ್ರಸಂಗವಿಲ್ಲ. ಆ ವಾಡಿಕೆಯನ್ನು ಕೇಳಿಯೇ ಅವಳು ಫಲಾಯನ ಮಾಡಿದಳು. ಖರ ಧೂಷಣರ ಸೈನ್ಯ ಹದಿನಾಲ್ಕು ಸಾವಿರವಲ್ಲ, ಹದಿನಾಲ್ಕು ಜನರು ಮಾತ್ರ. ಮಾರೀಚ ಜಿಂಕೆ ವೇಷ ತಳೆದು ಜಿಂಕೆಯ ತೊಗಲು ಹೊದ್ದು ಸಂಚರಿಸುವುದು (ಹಗಲುವೇಷ) ಅವನ ವಾಡಿಕೆ. ಆ ಸಹಾಯದಿಂದ ರಾವಣ ಸೀತೆಯ ಅಪಹರಿಸಿದನು. ಜಟಾಯು ಒಬ್ಬ ಋಷಿ ಪಕ್ಷಿಯಲ್ಲ, ಅವನ ತೋಳನ್ನು ಖಡ್ಗದಿಂದ ಕತ್ತರಿಸಿ ಸೀತೆಯನ್ನು ರಥದಲ್ಲಿ ಕುಳ್ಳಿರಿಸಿ ಕದ್ದೊಯ್ದನು ರಾವಣ. ಕಬಂಧ ದಸ್ಯು ಜನರ ಅರಸ, ಮುಂದೆ ಶಬರಿಯ ಸರಳ ಉಪಚಾರ, ಲಂಕಾದಹನವಂತು ಇಲ್ಲವೆ ಇಲ್ಲ. ದಂಡಯಾತ್ರೆ ಸರಳತೆ ಸಹತೆಯಿದ ಕೂಡಿ ಅದು ಸಮುದ್ರದಲ್ಲಿ ಈಜಿ,ಸಂಘಾಟಗಳ ಮೂಲಕ ಲಂಕೆ ತಲುಪುತ್ತದೆ. ಯುದ್ಧ ಅನಿವಾರ್ಯವಾಗಿದೆ. ರಾವಣನ ಶಕ್ತ್ಯಾಯುಧ ಘಾತದಿಂದ ಲಕ್ಷ್ಮಣ ಮೂರ್ಛೆ ಬಿದ್ದಾಗ ಹನುಮಂತ ಸಂಜೀವಿನಿ ಪರ್ವತ ತರದೆ ಸುಷೇಣನ ವೈದ್ಯ ಕ್ರಮದಲ್ಲಿ ಅವರು ಬಲ್ಲ ಪರ್ವತದಲ್ಲಿ ಸಿಗುವ ಔಷಧಿಯ ಸೊಪ್ಪಿನಿಂದ ವೈದ್ಯ ಮಾಡಿದರು. ರಾಮ ರಾವಣರ ಯುದ್ಧ ಸಹಜವಾಗಿತ್ತು. ರಾವಣನ ಸಂಹಾರ ರಾಮನ ಒಂದು ಸರಳಿನಿಂದ ಆಯಿತು. ಇಲ್ಲಿ ಯಾವುದೇ ಅತಿಶಯ ತಲ್ಲಣ ವೈಭವಗಳಿಗೆ ಅವಕಾಶವಿಲ್ಲ. ಸೀತೆಯ ಸತ್ಯಸಂಧತೆಯ ವಿಷಯಕ್ಕೆ ಅಗ್ನಿದಿವ್ಯ ಒಂದು ನೆಪಮಾತ್ರವಾಗಿ ಅಗ್ನಿಪರೀಕ್ಷೆ ನಡೆಯುತ್ತದೆ. ಅಯೋಧ್ಯೆಯ ಕಡೆಗೆ ನಂದಿಗ್ರಾಮದ ಕಡೆಗೆ ರಾಮನ ಆಗಮನ. ಇಲ್ಲಿ ಊರ್ಮಿಳೆಯ ತ್ಯಾಗ ಮತ್ತು ಸಹಾನೂಭೂತಿಯ ಗುಣ ಅವಳ ಸಂಯಮ, ಚರ್ಯೆ ತಪಸ್ಸು ಔಚಿತ್ಯದಿಂದ ಕೂಡಿದೆ. ಕಾಡಿನ ವಿವರಣೆಯ ಜೀವನವೇ ತಿಳಿಯದ ಲಕ್ಷ್ಮಣ ಆ ಅನುಭವಗಳನ್ನು ಹೊಸಹೊಸ ಕಲಿಕೆಗಳನ್ನು ಅವಳಿಗೆ ನಿವೇಧಿಸಿದನು. ಮಂಥರೆಯಂತು ತೀರಾ ಸಹಜ ಆಲೋಚನೆಯಿಂದ ಕೂಡಿದವಳು ತನ್ನನ್ನು ಸಾಕಿದ ಒಡತಿಗೆ ಒಳಿತಾಗಲಿ ಎಂಬ ಮನೋಧರ್ಮ ಬಿಟ್ಟರೆ ಬೇರೆ ಯಾವ ಕೇಡು ಯಾರಿಗೂ ಬಯಸದ ಅವಳ ಗುಣ ಮೆಚ್ಚುವಂತದ್ದು. ಕಿಷ್ಕಿಂಧೆಯವರು ಯಾರು ಕಪಿಗಳಲ್ಲ ವಾನರರಲ್ಲ. ವಾನರ ಎಂಬ ಬುಡಕಟ್ಟು ಜನಾಂಗದದವರು ಎಂಬ ಕಲ್ಪನೆ ಅಂಥ್ರೋಪಾಲಜಿ ಅಭ್ಯಾಸ ಬಲವೆ ಹೊರತೂ, ಡ್ರಾವೀನ್ ಥೀಯರಿಯಲ್ಲ. ಅವರಲ್ಲಿ ಅತ್ತಿಗೆ ನಾದಿನಿ ಯಾರನ್ನು ಅಣ್ಣ ತಮ್ಮಂದಿರು ಕಟ್ಟಿಕೊಳ್ಳುವುದು ಇಲ್ಲ. ಕೂಡಿಕೆ ಅಥವಾ ಕೂಟಿಕೆ ಅವರ ಸಂಸ್ಕೃತಿಯಲ್ಲಿ. ಇದನ್ನೆ ತಾರೆ ಕೌಸಲ್ಯೆಗೆ ಹೇಳಿದ್ದು. ಸುಮಂತ್ರನ ಮೊಮ್ಮಗನಿಗೆ ಸುಮಂತ್ರನೆಂದೆ ಸೀತೆ ಹೆಸರಿಡುತ್ತಾಳೆ. ವಿಭೀಷಣನು ಲಂಕೆಯ ವೃತ್ತಾಂತದ ಕತೆ ಹೇಳಿದನು. ಹನುಮಂತ ಅಯೋಧ್ಯೆಯಲ್ಲಿ ರಾಮ ಸೇವಕನಾಗಿ ನಿಯೋಜಿತನಾದನು. ಕೊನೆಯ ಭಾಗವಂತೂ ಮಂಗಳ ಶ್ಲೋಕಗಳ ಸುಖಾಂತ.

ಮಂದಾಕಿನಿ ನದಿಯ ಸಹಜ ಸುಂದರ ಚಿತ್ರಣ, ಚಿತ್ರಕೂಟದ ನಿಸರ್ಗ ರಮ್ಯತೆ ಎಲ್ಲವೂ ಪ್ರಕೃತಿ ವರ್ಣನೆಯ ಕವಿ ಸಮಯವಾಗಿದೆ. ನವೋದಯದವರ ಪ್ರಮುಖ ಪರಿಕಲ್ಪನೆಯೇ ಅದು. ಇಹದ ಬಾಳನ್ನು ಸವ್ಯಸಾಚಿಯಾಗಿ ಕಂಡು ದಿವ್ಯತೆ ಸಾರುವ ದಿನಕೆ ಸತಿಪತಿಗಳ ಕೀರ್ತಿ ಇವರ ಸಂಸಾರದಲ್ಲಿ ತಾನೆ ನೆಲೆಯಾಗಿ ನಿಂತ ಕತೆ ಎಂಬ ಸೂಕ್ತ ವಿವರಣೆ ಉತ್ತರಕಾಂಡದ ಅಗತ್ಯವನ್ನು ಮನಗಾಣಿಸುವುದಿಲ್ಲ. ಇದು ಅವರ ಸಂಕ್ಷಿಪ್ತ “ಶ್ರೀರಾಮಪಟ್ಟಾಭಿಷೇಕಂ” ಕಾವ್ಯದ ಮೂಲ ತಿರುಳು.

ಇನ್ನು ಮಹಾ ಛಂಧಸ್ಸಿನಲ್ಲಿ ಬರೆದ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ ಮತ್ತು ಆಧುನಿಕವೆನ್ನಬಹುದಾದ ಶ್ರೀ ವೀರಪ್ಪಮೊಯಿಲಿಯವರ “ರಾಮಾಯಣ ಮಹಾನ್ವೇಷಣಂ” ಕಾವ್ಯವು ಬೇರೆಯದೆ ಆದ ಗುಣ ಸ್ವರೂಪಗಳನ್ನು ತಮ್ಮ ಕಾವ್ಯಗಳಲ್ಲಿ ಗರ್ಭಿಕರಿಸಿಕೊಂಡಿವೆ. ಕುವೆಂಪು ಅದ್ಭುತಗಳನ್ನು ನಿವಾರಿಸುವುದಿಲ್ಲ. ಆದರೆ ಆದರ್ಶವನ್ನು ಎತ್ತಿಹಿಡಿಯುತ್ತಾರೆ. ಕೆಲವು ಪಾತ್ರಗಳಿಗೆ ಅಂಟಿದ ಕಳಂಕವನ್ನು ನಿವಾರಿಸಿ ಅದನ್ನು ಮಹೋನ್ನತಿಗೆರಿಸಿದರು. ಮೊಯಿಲಿಯವರ ಕಾವ್ಯದಲ್ಲಿ ಹೆಚ್ಚು ಹೆಚ್ಚು ವೈಜ್ಞಾನಿಕ ಎನ್ನಬಹುದಾದ ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ರಾಜಕಾರಣದ ಪ್ರಶ್ನೆ, ಶಿಕ್ಷಣದ ಪ್ರಾಮುಖ್ಯತೆ, ಸ್ತ್ರೀ ಸಮಾನತೆಯ ಧೋರಣೆ, ಸಮಕಾಲೀನ ಜನಜೀವನದ ಅಂಶಗಳು ಕುತೂಹಲಕಾರಿಯಾಗಿ ಬೆರಗು ಮೂಡಿಸುತ್ತದೆ. ಅವುಗಳನ್ನು ವಿವೇಚಿಸಲು ಪ್ರತ್ಯೇಕವಾದ ಅಧ್ಯಯನವೇ ಬೇಕು.

ಇಲ್ಲಿ ಮಾಸ್ತಿಯವರ “ಶ್ರೀ ರಾಮಪಟ್ಟಾಭಿಷೇಕಂ” ಕೊನೆ ಕಾವ್ಯದ ವಿವರಣೆಯ ಸಂಧರ್ಭದಲ್ಲಿ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ ಮತ್ತು ವೀರಪ್ಪ ಮೊಲಿಯವರ “ರಾಮಾಯಣ ಮಹಾನ್ವೇಷಣಂ” ಕಾವ್ಯದ ವಿವರವನ್ನು ಸಂಕ್ಷಿಪ್ತವಾಗಿ ತೌಲನಿಕವಾಗಿ ನೋಡಲು ಸಣ್ಣ ಪ್ರಯತ್ನವಷ್ಟೆ .ಅವುಗಳ ನೆಲೆಬೆಲೆ ಮೌಲ್ಯಗಳನ್ನು ವಿವೇಚಿಸಲು ಪಟ್ಟಿಮಾಡಲು ಪ್ರತ್ಯೇಕವಾದ ಅಧ್ಯಯನಗಳ ಅಗತ್ಯವಿದೆ. ಇದು ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಸಂಶೋಧನೆಗೆ ಬಿಟ್ಟ ವಿಚಾರವಾಗಿದೆ. ಹೀಗೂ ಅಧ್ಯಯನ ಮಾಡಲು ಅವಕಾಶವಿದೆ ಎಂಬುದು ಸೂಚ್ಯ ಅನುಭವವಷ್ಟೆ ಆಗಿದೆ. ಇನ್ನು “ರಾಮಪಟ್ಟಾಭಿಷೇಕಂ” ಎಂಬ ಹೆಸರಿನ ಇನೊಂದು ಕಾವ್ಯವಿದೆ. ಅದು ನವೋದಯದ ಅರುಣೋದಯ ಕಾಲದ್ದು. ನವೋದಯದ ಮುಂಗೋಳಿ ಎಂದು ಯಾರನ್ನು ಕರೆಯುತ್ತೇವೆ ಅಂತಹ ಕವಿ ಮುದ್ದಣ ಪ್ರತಿಭೆಯು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಹತ್ತೊಂಬತ್ತನೇ ಶತಮಾನದ ಕೊನೆಯ ಕಾವ್ಯವದು. ಮಾಸ್ತಿಯವರು ಅದೆ ಹೆಸರಿನಿಂದ ಬರೆದರು. ಆದರೆ, ಭಾಷೆ ಸಂಸ್ಕೃತ ಭೂಯಿಷ್ಟವಲ್ಲ. ಜನಪದರ ಕಥನಗೀತೆ ಮಾದರಿಯ ಸರಳರಗಳೆ ಧಾಟಿಯದು. ಪುರಾಣವೊಂದನ್ನು ಹೇಳುವ ಭಾಷೆ ಹೆಚ್ಚು ಆಧುನಿಕತೆಯಿಂದ ಕೂಡಿದೆ. ಸಹಜತೆಗೆ ಪಕ್ಕಾಗಿದೆ. ಆಧುನಿಕ ಶಿಕ್ಷಣದ ಪಾಶ್ಚಿಮಾತ್ಯ ಚಿಂತನೆಗಳು ಕಲಿತಿದ್ದ ಒಬ್ಬ ನುರಿತ ಹಿರಿಯ ಅಧಿಕಾರಿಗಳಾದ ಮಾಸ್ತಿಯವರು ಎಷ್ಟು ಸಮಂಜವಾಗಿ ಪಾತ್ರಕಲ್ಪನೆ ಮಾಡಿ ಆಡುನುಡಿಯಲ್ಲಿ ರಾಮಾಯಣ ಕತೆಯನ್ನು ಪುನರ್ ಸೃಷ್ಟಿ ಮಾಡಿದರು ಅಥವಾ ಸಾಹಿತ್ಯದ ಒಂದು ಔಕಟ್ಟು ಫಾರ್ಮನಲ್ಲಿ ಮಹಾಕಾವ್ಯದ ಸಹಜ ಓಜಸ್ಸು ಮತ್ತು ಸೊಗಸನ್ನು ತಂದರು ಎಂಬುದು ಎಪ್ಪತ್ತರ ದಶಕದಲ್ಲಿ ಚಿಂತಿಸಿ ಬರೆದರು ಎಂಬುದು ಬಹಳ ಮಹತ್ವದ ವಿಚಾರವಾಗಿ ಕಂಡಿದೆ. ಔಚಿತ್ಯದಿಂದ ಕೂಡಿ ದೇಸಿ ಭಾಷೆಯನ್ನು ಉಜ್ವಲ ಮಾಡಿದೆ ಎಂದು ಅಭಿಪ್ರಾಯಪಡಬಹುದು. ಸಾರಸ್ವತ ಲೋಕದ ಹಿರಿಯ ತಾತನೊಬ್ಬ ಕತೆ ಬೆಸಸಿ ಹೇಳಿದಂತೆ ಅದರ ಗುಣಸ್ವರೂಪ ವಿವೇಚನೆಯಿದ್ದರೂ ಅದು ಹೆಚ್ಚು ವಿವೇಕದಿಂದ ಕೂಡಿದೆ. “ಕಲ್ಪನೆಗಳಲ್ಲಿ ವಿಹರಿಸುವ ಕವಿಗಳನ್ನು ಯಾವ ಬಹುಮಾನವನ್ನಾದರೂ ಕೊಟ್ಟು ಹೊರಹಾಕಿರಿ” ಎನ್ನುವ ಪ್ಲೇಟೊನ ಹೇಳಿಕೆಯ ಪ್ರತಿರೂಪಕ ವೈರುಧ್ಯವಾಗಿ ಮಾಸ್ತಿಯವರು ಸತ್ಯಶೋಧಕ ಮನೋಧರ್ಮದಿಂದ ವಾಸ್ತವ ಪ್ರಜ್ಞೆ, ಔಚಿತ್ಯ ಪ್ರಜ್ಞೆ, ವೈಚಾರಿಕ ನಿಲುವುಗಳ ತಳೆಯುವಿಕೆ, ಮಾನವೀಯ ಪಾತ್ರ ಕಲ್ಪನೆಗಳು, ಉಚಿತವಾದ ಸೋಪಾಜ್ಞ ಶೈಲಿ ಹಾಗೂ ಪ್ರಥಮದರ್ಜೆಯ ಪ್ರತಿಭೆಯಾಗಿ ನಮಗೆ ಕಂಡರೆ ಅದು ಸಾರ್ಥಕ ಜೀವನದ ಯಶೋಗಾಥೆಯೆಂದು ಹೇಳಬಹುದು. ಇದು ಕವಿಯ ಕಲೆಗಾರಿಕೆ ನಿಜವಾದ ಅದ್ಭುತ ನೈಪುಣ್ಯತೆ. ಸಮಕಾಲೀನ ಕವಿಗಳು ಚಿಂತಕರು ಬೇರೆ ರೀತಿ ಆಲೋಚಿಸುವಾಗ ಇವರ ಕಲ್ಪನೆ ಸಹಜವಾಗಿರುವುದೆ ವಿಶೇಷಣ. ಸಹಜತೆ ಎನ್ನುವುದು ಭಗವಂತನ ರೀತಿ ಮತ್ತು ನೀತಿ. ಅದು ಕಾವ್ಯದಲ್ಲಿ ನಿಜವಾಗಿದೆ. ಉನ್ನತ ಆಲೋಚನೆಗಳು ಮತ್ತು ಸಾಮಾನ್ಯಮೇ ಜೀವನ ಎಂಬ ಅವರ ಸಿದ್ಧಾಂತ ಇಲ್ಲಿ ಗಮನಿಸಬೇಕಾದ ಮಹತ್ವದ ಕೊಡುಗೆಯಾಗಿದೆ.

-ಸಂತೋಷ್ ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x