ʼ ಒಂದು ಮೊಟ್ಟೆಯ ಕತೆ ʼ ಯಿಂದ ʼಸ್ವಾತಿ ಮುತ್ತಿನ ಮಳೆ ಹನಿಯೆʼ ತನಕ ರಾಜ್ ಬಿ ಶೆಟ್ಟಿ ಹಲವು ಅವತಾರಗಳನ್ನು ಎತ್ತಿದ್ದಾರೆ. ಅವರ ಸೃಜನಶೀಲತೆ ಹಲವು ಪ್ರಯೋಗಳನ್ನು ಆಗು ಮಾಡಿದೆ; ಯಶಸ್ಸೂ ದಕ್ಕಿದೆ. ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುವ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಸಿನಿಮಾ ಅವರ ಸಿನಿ ಪಯಣದ ಇನ್ನೊಂದು ʼತಿರುವೆʼನ್ನಬಹುದು. ಇದರಲ್ಲಿ ರಾಜ್ ಬಿ ಶೆಟ್ಟಿ ಪ್ರೇಕ್ಷಕರ ಅಭಿರುಚಿಗೆ ಹೊಂದುವ ಸಿನಿಮಾದ ಮಾಡುವ ಬದಲಾಗಿ ತಮಗೆ ಪ್ರಿಯವಾದುದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದಂತಿದೆ.
ತಮ್ಮ ಚಿಂತನೆಗೆ ಕಲ್ಪನೆಯನ್ನು ಬೆರೆಸಿ ರಾಜ್ ಬಿ ಶೆಟ್ಟಿ ಕಲಾತ್ಮಕ ಚಿತ್ತಾರ ರಚಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರವಾದ ಪ್ರೇರಣಾ ತೊಡುವ ಸೀರೆ, ಅವಳ ರವಿಕೆ ಗಮನಿಸಿದರೆ ಈ ಚಿತ್ತಾರದ ಅರಿವಾಗುತ್ತದೆ. ಸರಳ ಪ್ಲೈನ್ ಕಾಟನ್ ಸೀರೆಗೆ ತೊಡುವ ಬ್ಲೌಸ್‌ಗಳಲ್ಲಿ ನಂದಿ ಬಟ್ಟಲು ಹೂ, ಹೂ ಬಳ್ಳಿಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆ. ಧಾವಂತದಿಂದ ಆಸ್ಪತ್ರೆಗೆ ಧಾವಿಸುವಾಗ ಧರಿಸಿದ ನೈಟ್ ಡ್ರೆಸ್ಸಲ್ಲೂ ನಂದಿ ಬಟ್ಟಲು ಹೂಗಳು! ಚಿತ್ರ ನಿರ್ಮಿತಿಯ ಶ್ರದ್ಧೆ ಕತೆಗೆ ಹೊಂದುವಂತ ಉಡುಗೆಯನ್ನು ಆರಿಸುವುದರಲ್ಲೂ ಕಾಣುತ್ತದೆ. ಪ್ರೇರಣಾ ಆಫೀಸಿನ ಪುಸ್ತಕಗಳು, ಅನಿಕೇತನನ ಪಕ್ಕದಲ್ಲಿರುವ ರಮಣ ಮಹರ್ಷಿಯ ಪುಸ್ತಕ, ಸುಗಮ ಬಸ್ಸು ಇವೆಲ್ಲವನ್ನೂ ಜತನದಿಂದ ಸಂದರ್ಭಕ್ಕೆ ಅನುಸಾರ ಆಯ್ಕೆ ಮಾಡಲಾಗಿದೆ.
ಚಿತ್ರವನ್ನು ಪೂರ್ತಿಯಾಗಿ ಆವರಿಸಿರುವುದು ಪ್ರೇರಣಾ (ಸಿರಿ ರವಿಕುಮಾರ್). ಸಾವಿನ ಕದ ತಟ್ಟುತ್ತಿರುವವರ ಸಾಂತ್ವನ ಕೇಂದ್ರದ ಕೌನ್ಸೆಲ್ಲರ್ ಆಗಿರುವ ಆಕೆಯ ಜೀವನದಲ್ಲಿ ಸಂತಸವೇನೂ ಇಲ್ಲ. ಏರುಪೇರಿಲ್ಲದ ಬದುಕು ನಡೆಸುತ್ತಿದ್ದರೂ ತನ್ನ ದುಗುಡವನ್ನು ಕಾಣಿಸದೆ ಸಾವಿನ ಹೊಸ್ತಿಲಲ್ಲಿರುವವರಿಗೆ ನೆಮ್ಮದಿ ಒದಗಿಸುವ ಕೆಲಸ ಅವಳದು. ಆಕೆ ಕೆಲಸ ಮಾಡುವ ʼಆಸರೆʼ ಗೆ ಪ್ರಾಣಾಂತಿಕ ಕಾಯಿಲೆಯಿಂದ ನರಳುವ ಅನಿಕೇತನ್ (ರಾಜ್ ಬಿ ಶೆಟ್ಟಿ) ಬರುತ್ತಾನೆ. ಆತನ ಆಗಮನದ ಬಳಿಕ ಪ್ರೇರಣಾ ಜೀವನದಲ್ಲಿ ಆಗುವ ಬದಲಾವಣೆಗಳು ಸ್ಥೂಲವಾಗಿ ಚಿತ್ರದ ವಸ್ತು.
ರಾಜ್ ಬಿ ಶೆಟ್ಟಿ ತಮ್ಮ ಚಿಂತನೆಗಳನ್ನು ಹೇಳಲು ಪ್ರೇರಣಾ ಮತ್ತು ಅನಿಕೇತ್ ಎನ್ನುವ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ತಮ್ಮ ಚಿಂತನೆಗಳನ್ನು ಮನವರಿಕೆ ಮಾಡಿಸಲು ದಂಡಿಯಾಗಿ ರೂಪಕಗಳನ್ನು ಬಳಸಿದ್ದಾರೆ. ಚಿತ್ರದಲ್ಲಿ ನಂದಿ ಬಟ್ಟಲು ಹೂ ಪದೇ ಪದೇ ಬರುತ್ತದೆ. ದೇವರ ಪೂಜೆಗೆ ಆಗದ, ಮುಡಿಯಲು ಯೋಗ್ಯವಲ್ಲದ ನಂದಿ ಬಟ್ಟಲು ಹೂಗಳು ತಮ್ಮಷ್ಟಕ್ಕೆ ತಾವು ಅರಳಿ ಉದುರಿ ಬಿಡುತ್ತವೆ. ಬೀದಿ ನಾಯಿಗಳು ಸಾಯುವ ಕಾಲದಲ್ಲಿ ಯಾರಿಗೂ ತಿಳಿಯದಂತೆ ಎತ್ತಲೋ ಹೋಗಿ ಬಿಡುತ್ತವೆ.ಇವು ಬದುಕಿನ ಅರ್ಥವನ್ನು ಶೋಧಿಸುವ ರೂಪಕಗಳಾದರೆ ಕೊಳದ ಬಗೆಗಿನ ಕವನ, ತೆರೆದ ಕಿಟಿಕಿ, ಪ್ರೇರಣಾಳ ಮೇಕಪ್ ಎಲ್ಲವೂ ಸಂದರ್ಭಗಳ ಅರ್ಥವಂತಿಕೆಯನ್ನು ಹೆಚ್ಚಿಸಲು ನೆರವಾಗಿವೆ.
ಅದೇ ರೀತಿ ಹೊರಾಂಗಣ ಕೂಡಾ ಮನೋಹರವಾಗಿದ್ದು ಪಾತ್ರಗಳ ಮನಃಸ್ಥಿತಿಗೆ ಪೂರಕವಾಗಿದೆ. ಪ್ರವೀಣ್ ಶ್ರೀಯಾನ್ ಕ್ಯಾಮರಾ ಲೋಕೇಶನ್‌ನ ಒಳಹೊರಗನ್ನು ಸಮರ್ಥವಾಗಿ ಸೆರೆ ಹಿಡಿದಿದೆ. ಮಿದುನ್ ಮುಕುಂದನ್ ಸಂಗೀತ ಚಿತ್ರದ ಧ್ವನಿಯನ್ನು ಹಿಡಿದಿಟ್ಟಿದೆ. ʼ ಮೆಲ್ಲಗೆ ಧ್ಯಾನಿಸು, ಚಂದವೇ ಪ್ರೀತಿ….ʼ ಹಾಡು ಇಂಪಾಗಿರುವುದಷ್ಟೇ ಅಲ್ಲ, ಸುಂದರ ಪ್ರಕೃತಿಯಲ್ಲಿ ಭಾವನೆಗಳನ್ನು ಮೀಟುತ್ತದೆ. ಬಸವಣ್ಣನವರ ʼ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತುʼ ವಚನವನ್ನು ಬಳಸಿಕೊಂಡ ರೀತಿಯೂ ಚೆನ್ನಾಗಿದೆ.
ಕತೆ, ಚಿತ್ರ ಕತೆ ಬರೆದ ರಾಜ್ ಬಿ ಶೆಟ್ಟಿ ಸಂಭಾಷಣೆಯನ್ನೂ ಬರೆದಿದ್ದಾರೆ. ಪ್ರೇರಣಾ ನಾನು ಅನಿಕೇತನನ್ನು ಪ್ರೀತಿಸುತ್ತೇನೆ ಎಂದಾಗ ಅವಳ ಅಮ್ಮ ʼತಾಯಿಯಾಗಿ ನಾನು ಒಪ್ಪುವುದಿಲ್ಲ, ಹೆಣ್ಣಾಗಿ ಒಪ್ಪುತ್ತೇನೆ ʼ ಎನ್ನುತ್ತಾರೆ. ನಿನ್ನ ಗಂಡನ ಬಗ್ಗೆ ನನಗೆ ಗೊತ್ತು, ನೀನು ಅವನನ್ನು ಸಹಿಸಿಕೊಂಡಿದ್ದಿ, ನಿನ್ನ ಮೆಚೂರಿಟಿ ಮೆಚ್ಚುತ್ತೇನೆ ಎಂದು ಡಾ ಮನು ಪ್ರೇರಣಾಗೆ ಹೇಳಿರುತ್ತಾನೆ. ಅದನ್ನೇ ಇನ್ನೊಂದು ಸಂದರ್ಭದಲ್ಲಿ ಪ್ರೇರಣಾ “ನಿಮ್ಮ ಗೆಳೆಯನಿಗೂ ಮೆಚೂರ್ಡ್ ಆಗಿ ಇರಲು ಹೇಳಿ” ಎಂದು ಹೇಳುವುದು ಸಂಭಾಷಣೆಯ ಕುಶಲತೆಗೆ ಸಾಕ್ಷಿ. ಅಲ್ಲಲ್ಲಿ ಕಚಕುಳಿ ನೀಡುವ ಮಾತುಗಳೂ ಇವೆ. ಮಾತಿನಷ್ಟೇ ಮೌನವೂ ಚಿತ್ರದಲ್ಲಿ ಪರಿಣಾಮಕಾರಿಯಾಗಿದೆ.
ಎಲ್ಲರೂ ನಟನೆಯಲ್ಲಿ ಪೂರ್ಣ ಅಂಕ ಪಡೆಯುತ್ತಾರೆ. ಪ್ರೇರಣಾ ಪಾತ್ರ ಸಿರಿ ರವಿಕುಮಾರ್‌ಗಾಗಿಯೇ ಬರೆದಂತಿದೆ. ನೋವನ್ನು ತೋರ್ಪಡಿಸದ ಶಾಂತ ಮುಖಭಾವ, ಹರ್ಷಕ್ಕೆ ತಕ್ಕ ನಗು, ಅರೈಕೆ ಮಾಡುವ ಪ್ರೀತಿ ಎಲ್ಲವೂ ಸೊಗಸಾಗಿವೆ. ರಾಜ್ ಬಿ ಶೆಟ್ಟಿಯವರದು ತೂಕ ತಪ್ಪದ ನಟನೆ. ಸಣ್ಣ ಪಾತ್ರದಲ್ಲಿ ಜೆ ಪಿ ತುಮ್ಮಿನಾಡುರವರದು ಗಮನ ಸೆಳೆಯುವ ನಟನೆ.
ಚಿತ್ರ ಸ್ವಾತಿ ಮಳೆಯಲ್ಲಿ ತೋಯಸುತ್ತದೆ. ಆದರೆ ಮಳೆ ಹನಿ ಎಲ್ಲಿ ಬೀಳಬೇಕಿತ್ತೋ ಅಲ್ಲಿ ಬೀಳುವುದಿಲ್ಲ. ಘಟನೆಗಳ ಸಾಂಗತ್ಯ ಇಲ್ಲದಿರುವುದು ಅದಕ್ಕೆ ಮುಖ್ಯ ಕಾರಣ. ಚಿಂತನೆಗಳನ್ನು ತಾವಾಗಿ ಒದಗಿ ಬರದೆ ಹೇರಿದಂತೆ ಕಾಣುತ್ತದೆ. ಚಲನಚಿತ್ರ ಮಾಧ್ಯಮದಲ್ಲಿ ಸನ್ನಿವೇಶಗಳನ್ನು ಸೃಷ್ಟಿಸದೆ ಮಾತುಗಳಲ್ಲಿ ಗಹನವಾದ ವಿಚಾರಗಳನ್ನು ತಲುಪಿಸುವುದು ಕಷ್ಟ. ಪ್ರೇರಣಾ ಮತ್ತು ಅನಿಕೇತನ್ ನಡುವೆ ಉಂಟಾಗುವ ಪ್ರೀತಿಗೆ ಕಾರಣಗಳೇ ಇಲ್ಲ. ಅನಿಕೇತನ್‌ನ ಹಿನ್ನೆಲೆ ತಿಳಿಯುವುದಿಲ್ಲ. ಇಂತಹ ವಿಷಯಗಳ್ಲಿ ಇನ್ನಷ್ಟು ʼಮೆಚ್ಯೂರಿಟಿʼ ಬೇಕಿತ್ತು.
ರಾಜ್ ಬಿ ಶೆಟ್ಟಿ ಮೊದಲ ಬಾರಿ ಸಂಕಲನದಲ್ಲೂ ತೊಡಗಿಸಿಕೊಂಡು ನೂರ ಒಂದು ನಿಮಿಷಗಳಲ್ಲಿ ತಮ್ಮ ಚಿಂತನೆ/ ಕಲ್ಪನೆಯನ್ನು ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಅದರಿಂದ ಪ್ರೇಕ್ಷಕನಿಗೆ ದಣಿವಾಗುವುದಿಲ್ಲ ; ಕಾಡುವ ನೆನಪಾಗಿಯೂ ಉಳಿಯುವುದಿಲ್ಲ.
ಹಾಗಿದ್ದರೂ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಖಂಡಿತ ಒಳ್ಳೆಯ ಪ್ರಯತ್ನ. ಕೆಂಪು ಬಣ್ಣ ಚೆಲ್ಲಾಡುವ ಚಿತ್ರಗಳಿಗಿಂತ ಹಸಿರು ಹೊಮ್ಮುವ ಇಂತಹ ಕಲಾತ್ಮಕ ಚಿತ್ರಗಳಲ್ಲಿ ರಾಜ್ ಬಿ ಶೆಟ್ಟಿಯವರು ಹೆಜ್ಜೆ ಗುರುತುಗಳನ್ನು ಮೂಡಿಸಲೆಂದು ಹಾರೈಸಬಹುದು. ಚಿತ್ರದ ನಿರ್ಮಾಪಕಿ ರಮ್ಯಾ ಗಲ್ಲಾ ಪೆಟ್ಟಿಗೆಯ ಮೇಲೆ ಕಣ್ಣಿಡದೆ ಮೊದಲ ಸಿನಿಮಾದಲ್ಲೆ ಸರಿಯಾದ ಹೆಜ್ಜೆ ಇಟ್ಟಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರಿಕ್ಷಿಸೋಣ.
ಕೊ ಮಾ : ಅನಿಕೇತನ್ ಲೇಖಕರಲ್ಲಿ ನನಗೆ ಕುವೆಂಪು ಇಷ್ಟ ಎನ್ನುತ್ತಾನೆ. ಬಳಿಕ ಕಾರಂತರೂ ಇಷ್ಟ ಎನ್ನುತ್ತಾನೆ. ಆದರೆ ಸಬ್ ಟೈಟಲಲ್ಲಿ ಬಿ ವಿ ಕಾರಂತ ಎಂದಿದೆ. ಪಾಪ ಶಿವರಾಮ ಕಾರಂತರು!
–ಎಂ ನಾಗರಾಜ ಶೆಟ್ಟಿ
ಚಂದದ ವಿಮರ್ಶೆ ಸರ್, ಧನ್ಯವಾದಗಳು.- ಗುಬ್ಬಚ್ಚಿ ಸತೀಶ್.