ಅವಳು ಯಾರ್ಯಾರೋ ಸುರಸುಂದರಾಂಗರು ಉನ್ನತ ಉದ್ಯೋಗದವರು ಬಂದರೂ ಬೇಡ ನನಿಗೆ ಇಂಜಿನಿಯರೇಬೇಕು ಎಂದು ಬಂದವರೆಲ್ಲರನ್ನು ನಿರಾಕರಿಸಿದಳು. ಕೊನೆಗೆ ಒಬ್ಬ ಇಂಜಿನಿಯರ್ ಒಪ್ಪಿಗೆಯಾದ. ಅವನಿಗೂ ಒಪ್ಪಿಗೆಯಾದಳು. ಮದುವೆಯೂ ಆಯಿತು. ಕಂಪನಿ ಕೊಟ್ಟ ಕಡಿಮೆ ರಜೆಯನ್ನು ಅತ್ತೆ ಮಾವರ, ನೆಂಟರಿಷ್ಟರ ಮನೆಯಂತೆ ಹನಿಮೂನಂತೆ ಅಂತ ಎಲ್ಲಾ ಸುತ್ತಿ ಮುಗಿಸಿದರು.
ಎಲ್ಲಾ ಸುತ್ತಾಡಿದಮೇಲೆ ಉದ್ಯೋಗದ ಕೇಂದ್ರ ಸ್ಥಾನವನ್ನು ಬಂದು ಸೇರಲೇಬೇಕಲ್ಲ? ಇಬ್ಬರೂ ಪ್ರತಿದಿನ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮನೆಬಿಟ್ಟು ಸಂಜೆ 6 ಗಂಟೆಗೆ ಮನೆಗೆ ಬರುತ್ತಿದ್ದರು. ಹೆಂಡತಿ ಬೆಳಿಗ್ಗೆ ತಿಂಡಿ ಮಾಡಿ ತಾನು ರೆಡಿ ಆಗುವ ಹೊತ್ತಿಗೆ ಸಾಕಾಗುತಿತ್ತು. ಅದರಲ್ಲೂ ಉಪಹಾರ ಮಾಡಿದರೂ ಬಡಿಸಿಕೊಂಡು ತಿನ್ನದ ಪತಿರಾಯಬೇರೆ. ಮುಂದಕ್ಕೆ ತಂದಿಟ್ಟರೆ ಮುಟ್ಟುತ್ತಿದ್ದ. ಕೆಲಸದಿಂದ ಮನೆಗೆ ಬಂದೊಡನೆ ಇಬ್ಬರಿಗೂ ಸುಸ್ತಾಗುತ್ತಿತ್ತು. ಇಬ್ಬರೂ ವಿಶ್ರಾಂತಿಗಾಗಿ ಹಂಬಲಿಸಿ ಆರಾಮ್ ಚೇರಿಗೆ ಮೈ ಕೊಡುತ್ತಿದ್ದರು. ಹೀಗೇ ಅನೇಕ ತಿಂಗಳು ಉರುಳಿದವು. ಮನೆಗೆ ಬಂದ ತಕ್ಷಣ ಏನಾದರೂ ಬಿಸಿಬಿಸಿಯದು ಕುಡಿಯಬೇಕೆನಿಸುತಿತ್ತು.
ಮದುವೆಯಾದ ಹೊಸದರಲ್ಲಿ ಅವಳು ಜ್ಯೂಸೋ ಕಾಫಿನೋ ಟೀನೋ ಬೂಸ್ಟೊ ಏನು ಅವಶ್ಯಕ ಎಂದು ಗಂಡನ್ನು ಕೇಳಿ ಬಯಸಿದುದ ಮಾಡಿ ಕೊಟ್ಟು ತಾನೂ ಕುಡಿದು ದಣಿವಾರಿಸಿಕೊಳ್ಳುತ್ತಿದ್ದಳು. ಈಚೆಗೆ ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕುಳಿತೂ ಸಾಕಾಗಿ ಮನೆಗೆ ಬಂದು ಸ್ಟೌವ್ ಮುಂದೆ ನಿಲ್ಲಬೇಕೆಂದರೆ ಸುಸ್ತಾಗುತಿತ್ತು. ಪ್ರಯುಕ್ತ ಅವಳೂ ಬಂದು ಹಾಗೇ ಕುರ್ಚಿಗೆ ಒರಗಿ ವಿಶ್ರಮಿಸುತ್ತಿದ್ದಳು. ಯಾರೂ ಕಾಫಿ ಟೀ ಕೊಡುವವರು ಇರಲಿಲ್ಲ. ಆದರೆ ಇಬ್ಬರಿಗೂ ಬೇಕೆನಿಸುತಿತ್ತು. ಹೆಂಡತಿ ನನ್ನಂತೆ ಸುಸ್ತಾಗಿದ್ದಾಳೆ ಅವಳಿಗೂ ತೊಂದರೆ ಎಂದು ಮೊದಮೊದಲು ಗಂಡ ಸುಮ್ಮನಿರುತ್ತಿದ್ದ. ಬಹಳ ದಿನಗಳ ನಂತರ ಗಂಡ ಮೊದಲಿನಂತೆ ಕುಡಿಯಲು ಕೇಳಿದ. ಅವಳು ನನಗೆ ದಣಿವು ಎಂದಾಗ ಹತ್ತಿರದ ಜ್ಯೂಸ್ ಸೆಂಟರಿಗೋ ಕಾಫೀ ಕಾರ್ನರಿಗೋ ಇಬ್ಬರೂ ಹೋಗಿಬರುತ್ತಿದ್ದರು. ತಿಂಗಳಗಟ್ಟಲೆ ಹೀಗೇ ನಡೆಯಿತು. ಅದೂ ಸಾಕಾಯಿತು. ಒಂದು ದಿನ ಅಲ್ಲಿಗೆ ಹೋಗಿಬರುವುದು ಕಷ್ಟವಾಗುತ್ತಿದೆ ನೀನೇ ಏನಾದರೂ ಕುಡಿಯಲು ಕೊಡು ಎಂದು ಗಂಡ ಕೇಳಿದ. ಒಂದೆರಡು ದಿನ ಕಷ್ಟವಾದರೂ ಮಾಡಿದಳು. ನಂತರ ಕಷ್ಟವೆಂದು ನಿರಾಕರಿಸಿದಳು. ಗಂಡ ಒತ್ತಾಯಿಸುತ್ತಿದ್ದ. ಹಾಗೇ ಒಂದು ಮಗು ಮಾಡಿಕೊಳ್ಳಬೇಕೆಂಬ ಬಯಕೆ ಇಬ್ಬರನ್ನೂ ಕಾಡಿದರೂ ಮುಂದೂಡುತ್ತಾ ಬಂದಿದ್ದರು. ಮಗು ಇಲ್ಲದಾಗ ಸಹಕರಿಸದವ ಮಗು ಅದಮೇಲೆ ತನಗೆ ತುಂಬಾ ತೊಂದರೆಯಾಗಬಹುದೆಂದು ಹೆಂಡತಿ ಭಾವಿಸಿದುದರಿಂದ ಮಗು ಮಾಡಿಕೊಳ್ಳುವುದನ್ನು ಮುಂದೂಡುತ್ತಾ ಬಂದಿದ್ದಳು. ಗಂಡನ ಮತ್ತು ತವರು ಮನೆಯಿಂದ ಒತ್ತಡ ಬರತೊಡಗಿತು. ಗಂಡನೂ ಒತ್ತಾಯ ಮಾಡತೊಡಗಿದ. ಅವಳು ಮಾತ್ರ ನಿರಾಕರಿಸುತ್ತಾ ಬಂದು ಸಾಕಾಗಿತ್ತು.
ಹಾಗೇ ಎಷ್ಟೋ ದಿನ ಬೆಳಿಗ್ಗೆ ಉಪಹಾರ ಮಾಡಿ ಗಂಡನಿಗೆ ಕೊಟ್ಟು ಕಂಪನಿಗೆ ರೆಡಿ ಆಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೋಟಲಿನಲ್ಲೇ ಶಾಸ್ತ್ರ ಮುಗಿಸುತ್ತಿದ್ದರು. ಅವಳಿಗೆ ಒಂದರ ಮೇಲೆ ಒಂದು ಒತ್ತಡಗಳು ಬಂದವು. ಹೊರಗೆ ತಿಂದು ಸಾಕಾಗಿದೆ ನೀನೇ ಉಪಹಾರ ಮಾಡು ಎಂದು ಗಂಡ ಒತ್ತಡ ಏರುತ್ತಿದ್ದ. ಸಾಕಾಗಿ ಸುಸ್ತಾದ ಅವಳು ” ರೀ, ನೀವೂ ಉಪಹಾರ ಮಾಡಲು ಸ್ವಲ್ಪ ಸಹಕರಿಸಿ, ನನಗೂ ಶ್ರಮ ಕಡಿಮೆಯಾಗುತ್ತದೆ! ನನಗೂ ಹೋಟೆಲಿನ ಉಪಹಾರ ರುಚಿಸದು. ಅದನ್ನು ತಿಂದರೆ ಗ್ಯಾಸ್ ಹೊಟ್ಟೆ ತುಂಬ ತುಂಬಿಕೊಂಡು ಹೊಟ್ಟೆ ಬಲೂನಿನಂತೆ ಊದಿಕೊಳ್ಳುತ್ತದೆ! ನೀವು ಸಹಕರಿಸಿದರೆ ಖುಷಿಯಾಗಿ ಮಾಡಬಹುದು ” ಎಂದಳು ಆಕಸ್ಮಿಕ. “ಹಾ! ನಾನು ಅಡಿಗೆ ಮನೆಗೆ ಬಂದು ಅಡಿಗೆ ಮಾಡುವುದ? ಅದು ಎಂದಿಗು ಸಾಧ್ಯವಿಲ್ಲ! ” ಎಂದ. ” ರೀ, ಹಾಗೆನ್ನ ಬೇಡಿ, ಸ್ವಲ್ಪ ಈರುಳ್ಳಿ ಆದರು ಹೆಚ್ಚಿಕೊಡಿ” ಎಂದಳು. ” ಇವತ್ತು ಈರುಳ್ಳಿ ಅಂತಿಯ? ನಾಳೆ ಅಂಗೆ ಈರುಳ್ಳಿ ಜತೆಗೆ ತರಕಾರಿನೂ ಹೆಚ್ಚಿಕೊಡಿ ಅಂತೀಯಾ? ನಾಡಿದ್ದು ನೀನೆ ಅಡುಗೆನು ಮಾಡು ” ಅಂತಿಯ ಎಂದ. ” ರೀ ಸ್ವಲ್ಪ ಅರ್ಥ ಮಾಡಿಕೊಳ್ಳಿ, ನಾನೂ ನಿನ್ನಂತೆ ಹೊರಗೂ ಕೆಲಸ ಮಾಡಿ ದಣಿದು ಬಂದಿರುತ್ತೇನೆ. ಸ್ವಲ್ಪ ಸಹಕರಿಸಿ” ಎಂದಳು ” ಸಾಧ್ಯವಿಲ್ಲ” ಎಂದ. ” ಯಾಕ್ರೀ ಸಾಧ್ಯವಿಲ್ಲಾ?” ಎಂದಳು.
” ನಾನು ಗಂಡುಸು ಕಣೆ, ನಮ್ಮ ಮನೆಯಲ್ಲಿ ಗಂಡಸರು ಯಾರೂ ಅಡುಗೆ ಮಾಡುವುದಿಲ್ಲ. ನಾನು ದುಡಿದುಕೊಂಡು ಬರುವುದಿಲ್ಲವೇ ? ನನಿಗೆ ರೆಸ್ಟ್ ಬೇಕು ” ಎಂದುಬಿಡುವುದೆ? ” ಅಲ್ಲಾ ರೀ, ಭೀಮಸೇನ ನಳಮಹಾರಾಜರು ಗಂಡಸರಲ್ಲವೆ? ಹೆಣ್ಣುಮಕ್ಕಳಿಗಿಂತ ಅಡಿಗೆ ಮಾಡುವುದರಲ್ಲಿ ಫೇಮಸ್ಸಲ್ಲವೆ? ತುಂಬ ರುಚಿಯಾದ ಅಡುಗೆಯನ್ನು ನಳಪಾಕ ಅನ್ನುವುದಿಲ್ಲವೆ? ಅಂಥಾ ರಾಜರು ಬಲಶಾಲಿಗಳು ಅಡಿಗೆ ಮಾಡಿರುವಾಗ ನಿಮದೆಂತಹ ಬಿಗುಮಾನರಿ? ಎಲ್ಲಾ ಹೋಟೆಲ್ ಗಳಲ್ಲಿ ಗಂಡಸರೆ ಅಡಿಗೆ ಮಾಡುವುದು! ನಾನು ನಿನ್ನಂತೆ ಸಾಪ್ಟ್ ವೇರ್ ಇಂಜಿನಿಯರ್ ತಾನೆ? ನಾನು ದುಡಿದು ಬರುತ್ತೇನೆ, ನನಿಗೂ ರೆಸ್ಟ್ ಬೇಕೂ ಅಂತ ಕೂತರೆ ಮನೆಯ ಕೆಲಸ ಮಾಡುವವರು ಯಾರು? ನೀನು ಮಾಡುವ ಕೆಲಸವನ್ನು ನಾನು ಮಾಡುವಾಗ ನಾನು ಮಾಡುವ ಕೆಲಸ ನೀವು ಏಕೆ ಮಾಡಬಾರದು? ಅಡುಗೆ ಕೆಲಸ ಹೆಣ್ಣುಮಕ್ಕಳದೇ ಅಂತ ಯಾರು ಹೇಳಿದರು? ಯಾರು ಮನೆಯಲ್ಲಿ ಖಾಲಿ ಇರುತ್ತಿದ್ದರೋ ಅವರು ಮಾಡುತ್ತಿದ್ದರು. ಹೆಣ್ಣುಮಕ್ಕಳು ಮನೆಯಲ್ಲಿರುತ್ತಿದ್ದರು. ಅದಕ್ಕೆ ಅವರು ಮಾಡುತ್ತಿದ್ದರು. ಇವು ಹೆಣ್ಣುಮಕ್ಕಳ ಕೆಲಸ, ಇವು ಗಂಡುಮಕ್ಕಳ ಕೆಲಸ ಅಂತ ಯಾವೂ ಇರುವುದಿಲ್ಲ. ಅವು ಕೆಲಸ ಅಷ್ಟೆ! ಯಾರಿಗೆ ಯಾವ ಕೆಲಸ ಮಾಡಲು ಕಷ್ಟ ಆಗುತ್ತದೋ ಆಗ ಖಾಲಿ ಕುಳಿತವರು ಸಹಕರಿಸಬೇಕು. ಮಾಡಬೇಕು. ಗಂಡ ಹೆಂಡತಿಯೆಂದರೆ ಸಂಸಾರ ಎಂಬ ಗಾಡಿಯ ಎರಡು ಚಕ್ರ ಇದ್ದಂಗೆ. ಒಂದು ಚಕ್ರ ಮಾತ್ರ ತಿರುಗಿದರೆ ಸಂಸಾರದ ಬಂಡಿ ಮುಂದೆ ಸಾಗುತ್ತಾ? ಇಲ್ಲ! ಸಂಸಾರದಲ್ಲಿ ಯಾವ ಕೆಲಸ ಆಗಬೇಕಿರುತ್ತದೊ ಅದನ್ನು ಇಬ್ಬರೂ ಸೇರಿ ಮಾಡಬೇಕು. ಕಷ್ಟದಲ್ಲಿ ಸಹಕರಿಸಬೇಕು! ಅದು ಮಾನವೀಯತೆ. ಅದು ವಿದ್ಯಾವಂತರ ಲಕ್ಷಣ ” ಎಂದು ಮುಂತಾಗಿ ಹೇಳುತ್ತಿದ್ದುದನ್ನು ಕಿವಿಮೇಲೆ ಹಾಕಿಕೊಳ್ಳದೆ ಎದ್ದು ಹೋದ.
ಹಾಗೆ ಒಂದು ಕ್ಷಣ ಹಿಂದಕ್ಕೆ ಬಂದು ಮುಂದಿನ ತಿಂಗಳು ನಮ್ಮ ಅಪ್ಪ ಅಮ್ಮ ಬರ್ತಿದ್ದಾರೆ. ಅವರು ಬಂದಾಗಲೂ ಹಿಂಗೇ ಮಾಡಿಯಾ?” ಅಂದ. ” ಅಲ್ಲರೀ, ನೀವು ಸಹಕರಿಸಿದರೆ ತಾನೆ ನಾನು, ನಿಮ್ಮ ಅಪ್ಪ ಅಮ್ಮನನ್ನು ಉಪಚರಿಸಿ ಸತ್ಕರಿಸಲು ನೆಮ್ಮಧಿಯಾಗಿಡಲು ಸಾಧ್ಯ!” ಎಂದಳು. ” ನಾನು ಬಂದು ಅಡುಗೆ ಮನೆಯಾಗೆ ನಿನಿಗೆ ಸಹಕರಿಸುವುದು ನೋಡಿದರೆ ಅಮ್ಮನವರ ಗಂಡ ಅಂದುಕೊಳ್ಳುತ್ತಾರೆ” ಎಂದ ಗಂಡ. ” ಹಾಗೆ ಯಾಕೆ ಅಂದುಕೋತಾರೆ? ನನ್ನ ಸೊಸೆನೂ ಹಗಲೆಲ್ಲಾ ಮಗ ದುಡಿದಂತೆ ಕಂಪನಿಯಲ್ಲಿ ದುಡಿದುಬಂದು ಸುಸ್ತಾಗಿರುತ್ತಾಳೆ. ಒಬ್ಬಳೆ ಮನೆಯ ಎಲ್ಲಾ ಕೆಲಸ ಮಾಡಿದರೆ ತೊಂದರೆ ಅಗುತ್ತದೆ ಅಂತ ಸಹಕರಿಸುತ್ತಾನೆ. ಒಳ್ಳೆ ಮಗ! ಇವರು ಹೀಗೇ ಪರಸ್ಪರರು ಅರ್ಥ ಮಾಡಿಕೊಳ್ಳುತ್ತಾ ಅನ್ಯೋನ್ಯವಾಗಿ ಬದುಕಲಿ” ಎಂದು ಆಶಿಸುತ್ತಾರೆ. ಅಂತ ನೀವು ಏಕೆ ಅಂದುಕೊಳ್ಳುವುದಿಲ್ಲ? ಒಂದು ವೇಳೆ ಅವರು ಹಾಗೆ ಅಂದುಕೊಳ್ಳುವುದು ಮುಖ್ಯನೋ ನನಿಗೆ ಅಗುವ ಕಷ್ಟ ತಪ್ಪಿಸಿ ಸಂಸಾರ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವುದು ಮುಖ್ಯನೋ? ಸಂಸಾರ ಅಂದರೆ ನಾನು ಬೇರೆ ನೀನು ಬೇರೆ ಅಲ್ಲ! ಇಬ್ಬರು ಒಂದ! ಯಾರಿಗೆ ತೊಂದರೆ ಆದರೂ ಇಬ್ಬರಿಗೂ ಆದಂಗ” ಎಂದುದಕ್ಕೆ ಅವ
ಊಂ, ಉಹು ಎನ್ನದೆ ಹೊರಟ.
ಹೀಗೇ ವಾದ ಮಾಡುತ್ತಾ ದಿನೇ ದಿನೇ ವೈಮನಸ್ಸು ಹೆಚ್ಚಾಯಿತು. ಹಾಗೇ ಮಗು ಮಾಡಿಕೊಳ್ಳುವ ವಿಷಯ ಚರ್ಚೆಗೆ ಬಂದು ವೈಮನಸ್ಸು ಬೆಳೆಯುತ್ತಾ ಹೋಯಿತು!ಒಂದು ದಿನ ಕೆಲಸ ಮುಗಿಸಿಕೊಂಡು ಹೆಂಡತಿ ಮನೆಗೆ ಹೊರಟಿದ್ದಳು. ಮನೆ ನೆನಪಾದ ತಕ್ಷಣ ಗಂಡ ಅವನ ಅಸಹಕಾರ, ಅರ್ಥಮಾಡಿಕೊಳ್ಳದಿರುವಿಕೆ, ವ್ಯರ್ಥ ಚರ್ಚೆ, ದಬ್ಬಾಳಿಕೆ ನೆನೆದು ಮನೆಗೆ ಹೋಗಲು ಬೇಸರ ಮಾಡಿಕೊಂಡಿದ್ದಳು. ಅನಿರೀಕ್ಷಿತವಾಗಿ ಅವಳ ಕ್ಲಾಸ್ ಮೆಟ್ ಸಾಪ್ಟ್ ವೆರ್ ಇಂಜಿನಿಯರಾಗಿದ್ದ ಅನ್ಯೋನ್ಯ ಅಲ್ಲಿ ಬೆಟ್ಟಿಯಾದಳು. ಖುಷಿಯಾಯಿತು. ಮನೆ ಇಲ್ಲೆ ಇರುವುದೆಂದು ಅಪರೂಪಕ್ಕೆ ಸಿಕ್ಕಿರುವೆಯೆಂದು ಬಿಡದೆ ಮನೆಗೆ ಕರೆದೊಯ್ದಳು. ಅನ್ಯೋನ್ಯಳ ಗಂಡ ಔಚಿತ್ಯ ಈಗಾಗಲೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಇವರು ಮಾತನಾಡುತ್ತಾ ಇರುವಾಗಲೇ ಔಚಿತ್ಯ ಮೂರು ಗ್ಲಾಸ್ ಜ್ಯೂಸು ತಂದಿಟ್ಟ. ಯಾರೋ ಕೆಲಸದವ ಇರಬೇಕೆಂದುಕೊಂಡಳು. ಹಾಗೆ ಮನದಲ್ಲಿ ಅಂದುಕೊಳ್ಳುತ್ತಿರುವಾಗಲೆ ಇವರು ನನ್ನ ಸಂಗಾತಿ ಔಚಿತ್ಯ, ಇವಳು ನನ್ನ ಗೆಳತಿ ಆಕಸ್ಮಿಕ ಅಂತ ಇವಳ ಹೆಸರು ಉದ್ಯೋಗ ವಿದ್ಯಾಬ್ಯಾಸ ಮುಂತಾದವುಗಳ ಇಬ್ಬರಿಗೂ ಪರಸ್ಪರರ ಪರಿಚಯ ಮಾಡಿಕೊಟ್ಟಳು.
ಹಾಗೇ ಮಾತನಾಡುತ್ತಾ ಇಂದು ಡಿನ್ನರ್ ಇಲ್ಲೇ ಮುಗಿಸುವಿಯಂತೆ ನನ್ನ ಸಂಗಾತಿಯ ಕೈರುಚಿ ಸವಿಯುವಿಯಂತೆ, ನಿನ್ನ ಹಸ್ಬೆಂಡಿಗೆ ಕರೆ ಮಾಡು ಅವರೂ ಬರಲಿ ಎಂದಳು ಅನ್ಯೋನ್ಯ. ಇಂದು ಬೇಡ ಇನ್ನೊಂದು ದಿನ ಬರುವುದಾಗಿ ಹೇಳಿ ಹೊರಟಳು. ಬಸ್ಟಾಂಡಿನವರೆಗೂ ಅನ್ಯೋನ್ಯ ಬಂದಳು. ಅದು ಇದು ಮಾತನಾಡಿದ ಮೇಲೆ ಅವಳು ” ನೀವು ಇಬ್ಬರೂ ಸಾಪ್ಟ್ ವೇರ್ ಇಂಜಿನಿಯರಾಗಿದ್ದರೂ ಎಷ್ಟು ಸಂತೋಷವಾಗಿದ್ದೀರಲ್ಲ ಅದು ಹೇಗೆ ಸಾಧ್ಯ” ಎಂದಳು ಆಕಸ್ಮಿಕ. ” ನನ್ನ ಸಂಗಾತಿ ಹೊಂದಾಣಿಕೆ ಸ್ವಭಾವದವರು, ಅವರು ಮಾನವೀಯ ಗುಣದವರು. ಇನ್ನೊಬ್ಬರ ಕಷ್ಟವನ್ನು ಅರ್ಥಮಾಡಿಕೊಳ್ಳುವವರು. ನನ್ನ ಸ್ನೇಹಿತರು ಬಂದರೆ ಅವರು ಸತ್ಕಾರ ಮಾಡಲು ಅಡುಗೆ ಮನೆ ಸೇರಿದರೆ, ಅವರ ಸ್ನೇಹಿತರು ಬಂದರೆ ನಾನು ಅಡುಗೆ ಮನೆ ಸೇರಿ ಸತ್ಕರಿಸಲು ಸಿದ್ದತೆ ಮಾಡಿ ಅವರು ಅವರ ಗೆಳೆಯರೊಂದಿಗೆ ಪ್ರೀಯಾಗಿ ಮಾತನಾಡಲು ಬಿಡುತ್ತೇವೆ. ಬೆಳಿಗ್ಗೆ ಇಬ್ಬರು ಸೇರಿ ಉಪಹಾರ ತಯಾರಿಸಿದರೆ ಸಂಜೆ ಒಂದು ದಿನ ಅವರು ಇನ್ನೊಂದು ದಿನ ನಾನು ಕುಡಿಯಲು ತಯಾರಿಸುತ್ತೇವೆ. ಯಾರಿಗೆ ಧಣಿವಾಗಿದೆ ಎಂದು ತಿಳಿದು ಎಲ್ಲಾ ಕೆಲಸಗಳ ಗಂಡು ಹೆಣ್ಣು ಬೇಧಬಾವವಿಲ್ಲದೆ ಅರ್ಥ ಮಾಡಿಕೊಂಡು ಮಾಡುತ್ತೇವೆ. ಧಣಿದವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಬಿಡುತ್ತೇವೆ. ಹೀಗೆ ಎಲ್ಲಾ ಕಡೆ ಪರಸ್ಪರರು ಸಹಕರಿಸುತ್ತೇವೆ” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಬಸ್ಸು ಬಂದಿತು. ಸಿಗೋಣವೆಂದು ಬಾಯ್ ಹೇಳಿದರು.
ತಡವಾಗಿದ್ದಕ್ಕೆ ಕಾಲ್ ಸಹ ಮಾಡದಿರುವುದಕ್ಕೆ ಗಂಡನ ಕೋಪ ಮೂಗಿನ ತುದಿಗೆ ಬಂದಿರುವುದನ್ನು ತಿಳಿದ ಹೆಂಡತಿ ಮೊದಲು ಸಾರಿ ಕೇಳುತ್ತಾಳೆ. ಸಿಟ್ಟು ಇಳಿಸುತ್ತಾಳೆ, ಜ್ಯೂಸ್ ಮಾಡಿ ಕೊಡುತ್ತಾಳೆ. ಅವನು ಕುಡಿಯುತ್ತಿರುವಾಗ ಅನ್ಯೋನ್ಯಳ ಮನೆಗೆ ಹೋಗಿ ಬಂದುದ ಹೇಳುತ್ತಾಳೆ. ಮತ್ತೆ ಅದೇ ಕಾಫಿ, ಜ್ಯೂಸು, ಉಪಹಾರ ತಯಾರಿಕೆ, ತರಕಾರಿ ಕತ್ತರಿಸುವಿಕೆ ಚರ್ಚೆ, ವಾದದಲ್ಲಿ ಮನಸುಗಳು ಕಲುಷಿತಗೊಂಡು ದೂರ ದೂರ ಆಗುತ್ತಿರುತ್ತವೆ. ಹೀಗೇ ಬಹಳ ದಿನಗಳು ಆದವು. ಒಂದು ದಿನ ತನ್ನ ಮಗನ ಹುಟ್ಟಿದ ಹಬ್ಬವಿದೆ ತಪ್ಪದೆ ನಿಮ್ಮ ಮನೆಯವರನ್ನು ಕರೆತನ್ನಿ ಎಂದು ಅನ್ಯೋನ್ಯ ಕರೆ ಮಾಡಿದ್ದುದ ಮರೆತುಬಿಟ್ಟಿರುತ್ತಾಳೆ.
ಪರವಾಗಿಲ್ಲಾ ಇಂದು ರಜೆ ಇಂದಾದರು ವಿಷ್ ಮಾಡಿಬರೋಣ ಎಂದು ಹೇಗೋ ಗಂಡನನ್ನು ಒಪ್ಪಿಸಿ ಕರೆದೊಯ್ಯುತ್ತಾಳೆ. ಇವರನ್ನು ಕಂಡು ಅನ್ಯೋನ್ಯಳಿಗೆ ಖುಷಿಯಾಗುತ್ತದೆ. ತುಂಬು ಹೃದಯದಿಂದ ಸ್ವಾಗತಿಸುತ್ತಾಳೆ. ಗೆಳತಿಯ ಮುದ್ದು ಮಗಳಿಗೆ ಗಿಫ್ಟ್ ಕೊಟ್ಟು ಆಶೀರ್ವಧಿಸುತ್ತಾರೆ. ಗಿಪ್ಟ್ ಸ್ವೀಕರಿಸಿದ ಕೊಡುಗೆ ಥ್ಯಾಂಕ್ಸ್ ಹೇಳಿ ಗೊಂಬೆ ಹಿಡಿದು ಕಿ ಕೊಟ್ಟು ಅದು ಕುಪ್ಪಳಿಸುವುದ ಕಂಡು ತಾನೂ ಖುಷಿಯಿಂದ ಕುಪ್ಪಳಿಸುತ್ತಾಳೆ. ತಂದೆ ತಾಯಿಗೆ ತೋರಿಸಿ ಹಿರಿಹಿರಿ ಹಿಗ್ಗುತ್ತಾಳೆ. ಮನೆ ತುಂಬ ಕುಣಿದಾಡಿ ಕಲರವಗಯ್ಯುತ್ತಾಳೆ. ಔಚಿತ್ಯನಿಗೆ ವಿಷಯ ಮುಟ್ಟಿಸಿದ್ದರಿಂದ ಅತಿಥಿಗಳ ಸತ್ಕರಿಸಲು ನೀರು ಕೇಕು, ಕೋಡುಬಾಳೆ ತಂದಿಟ್ಟು ಅಡುಗೆ ಮನೆಯ ಒಳಗೆ ಹೋಗುತ್ತಾನೆ. ಗಂಡನ ಗಮನ ಟಿವಿಯಲ್ಲಿ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ” ಇನ್ನು ಎರಡು ನಿಮಿಷದಲ್ಲಿ ಅಚ್ಚರಿಯ ಸುದ್ದಿ ” ಎಂದು ದೊಡ್ಡ ಮ್ಯೂಜಿಕ್ ಹಿನ್ನೆಲೆಯಿಂದ ಬರುತ್ತಿದ್ದುದರ ಕಡೆಗೆ ಇದ್ದುದರಿಂದ ಮುಂದಕ್ಕೆ ಏನು ತಂದಿಟ್ಟರು ಯಾರು ತಂದಿಟ್ಟರು ಎಂಬುದು ಗಮನಿಸಿರುವುದಿಲ್ಲ. ಯಾರೋ ಕೆಲಸದವರು ಏನೋ ತಂದಿಟ್ಟು ಹೋದಂತೆ ಅನಿಸಿರುತ್ತದೆ. ಔಚಿತ್ಯ ಜ್ಯೂಸ್ ತರುತ್ತಾನೆ. ಬ್ರೇಕಿಂಗ್ ನ್ಯೂಸ್ ಆರಂಭವಾಗಿರುತ್ತದೆ ವಿದ್ಯುತ್ ಸರಬರಾಜು ಇದ್ದಕ್ಕಿದ್ದಂತೆ ಕಡಿತಗೊಳ್ಳುತ್ತದೆ. ಮುಖ ಎತ್ತಿ ಆಕಸ್ಮಿಕಾಳ ಗಂಡ ಡೈನಿಂಗ್ ಹಾಲ್ ಕಡೆ ನೋಡುತ್ತಾನೆ. ತನ್ನ ಕಂಪನಿ ಬಾಸ್!
ತಕ್ಷಣ ಎದ್ದುನಿಂತು ಸೆಲ್ಯೂಟ್ ಮಾಡಿ ಕೈಯೊಳಗಿನ ಜ್ಯೂಸ್ ಪಡೆದು ತಾನೇ ಸರ್ವೀಸ್ ಮಾಡಲು ಹೋಗುತ್ತಾನೆ. ‘ ಅತಿಥಿ ದೇವೋಭವ ‘ ಎಂದು ಅವನನ್ನು ಕೂಡಿಸಿ ಜ್ಯೂಸ್ ಕೊಡುತ್ತಾನೆ. ಕಂಪನಿಯಲ್ಲಿ ನಾನು ಬಾಸ್, ನೀನು ಸಬಾಡಿನೇಟ್! ಇಲ್ಲಿ ನೀನು ಗೆಸ್ಟ್! ಎಂದು ಅವನ ಪಕ್ಕದಲ್ಲೇ ಕುಳಿತು ಮಾತನಾಡುತ್ತಾ ಜ್ಯೂಸ್ ಸವಿಯುತ್ತಾನೆ! ಒಮ್ಮೆ ಅನ್ಯೋನ್ಯ ಒಂದು ತಿನಿಸನು ಡೈನಿಂಗ್ ಟೇಬಲ್ಲಿಗೆ ತಂದಿಟ್ಟರೆ ಇನ್ನೊಮ್ಮೆ ಔಚಿತ್ಯ ಕೋಸುಂಬರಿ, ಸಂಡಿಗೆ ಮತ್ತೇನನೊ ತಂದಿಡುವುದು ಮಾಡಿ ಇಬ್ಬರೂ ಕೂಡಿ ಸಿಹಿ ಅಡುಗೆ ಮಾಡಿ ಆ ದಿನ ರಾತ್ರಿ ಅಲ್ಲೆ ಔತಣ ನೀಡುತ್ತಾರೆ.
ಅನ್ಯೋನ್ಯ ಔಚಿತ್ಯ ಅವರು ಇಂಜಿನಿಯರ್ ಜೋಡಿನೆ, ನಾವೂ ಇಂಜಿನಿಯರ್ ಜೋಡಿನೆ ಅವರ ಮನೆ ನಂದನ! ನಮ್ಮದು ನರಕ! ಏಕೆ? ರಾತ್ರಿ ಎಷ್ಟು ಖುಷಿಯಿಂದ ಇದ್ದರು? ಆರೋಗ್ಯ ಸಂತೋಷ ಉತ್ಸಾಹ ತುಂಬಿತುಳುಕುತ್ತಿತ್ತು. ಎಲ್ಲಾ ಕೆಲಸವನ್ನು ಭೇದಭಾವ ಇಲ್ಲದೆ ಹಂಚಿಕೊಂಡು ಮಾಡುತ್ತಾ ಅನ್ಯೋನ್ಯವಾಗಿದ್ದರು. ನಮ್ಮಿಂದ ಏಕೆ ಹಾಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ರಾತ್ರಿಯೆಲ್ಲಾ ಯೋಚನೆಯಲ್ಲಿ ಮುಳುಗಿದ್ದವ ಬೆಳಿಗ್ಗೆ ಹೆಂಡತಿಯ ಜತೆಗೆ ಅಡುಗೆ ಮನೆಗೆ ಬಂದು ಯಾವ ತರಕಾರಿ ಹೆಚ್ಚಿ ಕೊಡಲಿ? ಎಂದು ಚಾಕು ಹಿಡಿದು ನಿಲ್ಲುತ್ತಾನೆ!
-ಕೆ ಟಿ ಸೋಮಶೇಖರ ಹೊಳಲ್ಕೆರೆ