“ಕತ್ತಲ ಹೂವು” ನೀಳ್ಗತೆ (ಭಾಗ ೮): ಎಂ.ಜವರಾಜ್

ಭಾಗ – ೮

ಶಿವಯ್ಯನ ಅವ್ವ ಅಡಿನಿಂಗಿ ಸತ್ತು ಎರಡು ಎರಡೂವರೆ ವರ್ಷವೇ ಕಳೆದಿತ್ತು. ಅಡಿನಿಂಗಿ ಮಲಗುತ್ತಿದ್ದ ರೂಮೀಗ ಶಿವಯ್ಯನ ಹಿರೀಮಗನ ಓದಕೆ ಮಲಗಾಕೆ ಆಗಿತ್ತು. ಚಂದ್ರ ತನ್ನ ಅಣ್ಣನ ರೂಮಿಗೆ ಹೋಗಿ ಅವನ ಪುಸ್ತಕಗಳನ್ನು ಎತ್ತಿ ಎತ್ತಿ ನೋಡುತ್ತಿದ್ದ. ಒಂದು ಉದ್ದದ ಬೈಂಡಿತ್ತು. ಅದರ ಮೇಲೆ ಉದ್ದವಾದ ಮರದ ಸ್ಕೇಲಿತ್ತು. ಜಾಮಿಟ್ರಿ ಬಾಕ್ಸಿತ್ತು. ಮೂಲೇಲೆ ಒಂದು ದಿಂಡುಗಲ್ಲಿನ ಮೇಲೆ ಗ್ಲೋಬ್ ಇತ್ತು. ಅದನ್ನು ತಿರುಗಿಸಿದ. ಗೋಡೆಯಲ್ಲಿ ಇಂಡಿಯಾ ಮ್ಯಾಪು ಗಾಂಧೀಜಿ ಫೋಟೋ ತಗಲಾಗಿತ್ತು. ಹೊರಗೆ ಅಣ್ಣನ ಮಾತು ಕೇಳಿದ ಹಾಗಾಯ್ತು. ಸರಕ್ಕನೆ ಹೊರಗೆ ಬಂದ. ಅಪ್ಪ ಏರು ಕಟ್ಟುತ್ತಿದ್ದ.

ಒಂಭತ್ತು ಪಾಸಾಗಿ ಎಸ್ಸೆಸ್ಸೆಲ್ಸಿಗೆ ಬಂದ ಚಂದ್ರ ಒಳಗೆ ಅವ್ವನೊಂದಿಗೆ ಸ್ಕೂಲಿಗೆ ಹೋಗಲು ಕಣಿ ಆಡಿ ಹಾಗೇ ಹೊರಗೆ ಬಂದು ರೂಮಿಗೆ ಹೋಗಿ ಆಡಾಡಿಕೊಂಡು ತನ್ನ ಕಣಿಯನ್ನು ಕಂಟಿನ್ಯೂ ಮಾಡಿದ್ದ. ನೆನ್ನೆ ಸೋಮವಾರ ಸಂತೆಗೋಗಿ ವಯಸ್ಸಾಗಿದ್ದ ಎಡಗೋಲು ಹಸು ಬದಲಿಸಿ ಅದೆ ಎಡಗೋಲು ಕಡಸು ತಂದಿದ್ದ. ಇನ್ನೊಂದು ಬಲಗೋಲು ಹಸುಗೆ ವಯಸ್ಸಾದರು ಬದಲಿಸದೇ ಉಳಿಸಿಕೊಂಡಿದ್ದ ಅದು ಶಿವಯ್ಯನಿಗೆ ಸಾಟಿ ಎನಿಸಿ ಗಾಡಿಗೆ ಎಷ್ಟು ತುಂಬಿದ್ದರು, ಹಳ್ಳಕೊಳ್ಳ ರೋಡಿದ್ದರು ಬಿಸಿಲಿದ್ದರು ಮಳೆಯಿದ್ದರು ಏಗಿ ನಿಭಾಯಿಸುವ ಛಾತಿ ಉಳಿಸಿಕೊಂಡಿತ್ತು. ಈಗ ಅದಕ್ಕೆ ಹೊಂದಾವಣಿ ಆಗದ ಹೊಸ ಎಡಗೋಲು ಕಡಸು ಮೊಸಗರಿಯುತ್ತ ನೊಗ ಹಾಕಲು ಹೋದರೆ ನುಲಿದುಕೊಂಡು ಕಣಿ ಆಡುತ್ತಿತ್ತು. ಶಿವಯ್ಯ ಕಡಸಿನ ಕಣಿಗೆ ಸಿಡಿಸಿಡಿ ಸಿಡಿದು ಕೈಲಿದ್ದ ಬಾರ‌್ಕೋಲಿನಿಂದ ಅದರ ಬೆನ್ನಿಗೆ ಒಂದೆರಡು ಸಲ ಬಾರಿಸಿದ್ದ. ಇದರಿಂದ ಬೆಚ್ಚಿ ಜೊಲ್ಲು ಸೋರಿಸುತ್ತ ಮೊಸಗರಿಯುತ್ತಾ ನುಲಿದುಕೊಂಡೇ ಅತ್ತಿತ್ತ ಕಾಲಾಡಿಸುತ್ತ ನಿಂತು ಹೆಗಲಿಗೆ ನೊಗ ಏರಿಸಿಕೊಂಡು ಬಾರ‌್ಕಾಣಿಗೆ ಕತ್ತು ಕೊಟ್ಟು ಶಿವಯ್ಯನನ್ನೇ ದುರುಗುಟ್ಟಿ ನೋಡುತ್ತಿತ್ತು.

ಅದೇ ಹೊತ್ತಲ್ಲಿ ಚಂದ್ರನ ಕಣಿ ಶಿವಯ್ಯನ ಪಿತ್ತ ಏರಿಸಿತ್ತು. ಕಡಸಿಗೆ ಬಾರಿಸಿ ಕೈಲಿಡಿದಿದ್ದ ಅದೆ ಬಾರುಕೋಲಲ್ಲಿ ಚಂದ್ರನಿಗೂ ಬೀಸಿದ. ಅವನು ಬೀಸಿದ ರಭಸಕ್ಕೆ ಚಂದ್ರ ಚಿಳ್ ಅಂತ ಕಿರುಚಿದ. ಸಿಂವ್ ಅಂತ ಬೀಸಿದ ಬಾರ‌್ಕೋಲಿನ ಏಟಿಗೆ ಅವನ ಕೈ ಕಾಲಲ್ಲಿ ಬೊಗಬೊಗನೆ ಬಾಸುಂಡೆ ಎದ್ದು ಕೆಂಪೇರಿತ್ತು. ತೆಂಗಿನ ಮರ ಒರಗಿ ನಿಂತಿದ್ದ ನೀಲ ಸರಕ್ಕನೆ ತಿರುಗಿ ತಾನೂ ಕಿಟಾರನೆ ಕಿರುಚಿ “ಅಯ್ಯಯ್ಯೋ ಬನ್ರಪ್ಪೊ ಆ ಗಂಡ ಸಾಯ್ಸ್ ಬುಡ್ತನ ಬನ್ನಿಬನ್ನಿ” ಅಂತ ಕೂಗುತ್ತ “ಇದ್ಯಕ ಶಿವಪ್ಪ ಆ ಗಂಡ್ಗ ಬಾಲ್ಸುಂಡ ಬರಮಟ್ಗ ಹೊಡ್ದಿದ್ದಯ್..” ಅಂತ ಚಂದ್ರನನ್ನ ಎಳೆದುಕೊಂಡು “ಸುಮ್ನಿರು ನಮ್ಮಪ್ನೆ” ಅಂತ ಬಾಸುಂಡೆ ಬಂದಿರ ಚಂದ್ರನ ಕಾಲನ್ನು ಉಜ್ಜುತ್ತಾ ಕುಂತ ನೀಲಳ ಲಂಗದಾವಣಿ ಅತ್ತಿತ್ತ ಸರಿದು ಎಗ್ಗಿಲ್ಲದೆ ಅವಳ ಮೈಮಾರ ಕಾಣುತ್ತಿತ್ತು. ಚಂದ್ರನ ಕಿರುಚಾಟ ಕೇಳಿ ಓಡೋಡಿ ಬಂದ ಸಿದ್ದಿ “ಏ ಇದೇನ.. ಇದ್ಯಾಕಲ ಅತೈ..” ಅಂದಳು. ನೀಲ “ಅಂವ.. ಅಂವವ್ನಲ್ಲ.. ಅಲ್ನೋಡು ನಿಂತನಲ್ಲ.. ನಿನ್ ಗಂಡ್ಯಾಗಿರಂವ.. ಆ ಗಂಡ್ಗ ಬಾಲ್ಸುಂಡ ಬರಮಟ್ಗ ಹೊಡ್ದನ. ಅವ್ನ್ ಕೈಗ ನಾಗ್ರಾವ್ ಕಡಿಬಾರ‌್ದ..” ಅಂತ ಪಟಕ್ ಪಟಕ್ ಅನ್ನಿಸಿ ನಟಿಕೆ ಮುರಿದಳು. ಶಿವಯ್ಯ ನೀಲಳ ಕಡೆ ದುರುಗುಟ್ಟಿದ. ಸಿದ್ದಿ “ಏಯ್ ಸುಮ್ನಿರು.. ಅದೇನ ನಟ್ಕಿ ಮುರೇಯ್.. ಲೇಯ್ ಎದ್ದೇಳು..” ಅಂತ ಚಂದ್ರನ ರಟ್ಟೆ ಹಿಡಿದಳು. ನೀಲಳ ಕಡೆ ತಿರುಗಿ ‘ನೀ ಏನಾ ಎಲ್ಲನು ಗೋರ‌್ಕ ಕುಂತಿದೈ ಹೋಗತ್ತಗಿ..” ಅಂತ ರೇಗಿದಳು. ಸಿದ್ದಿಯ ರೇಗಿಗೆ ಸಿಟ್ಟಾದ ನೀಲ ಚಂದ್ರನ ಮುಂದಲೆ ಸಸ್ದು “ಹೋಗುಡ ಎಂಗ್ಯಾರ ಹೊಡಿಸ್ಕ.. ನಾ ಏನಾ ಅಂವ ಹೊಡ್ದು ಸಾಯಿಸ್ಬುಡ್ತನ ಅಂತ ಓಡ್ಬಂದ್ರ ನಿಮ್ಮೊವ್ ನನ್ ಸಂವ್ತಿ ನಂಗೇ ರೇಗ್ತಳ.. ಅದೇನ.. ನಾ ಗೋರ‌್ಕಂಡು ಕುಂತಿದನಂತ.. ನಾ ಎಂಗ್ಯಾರ ಗೋರ‌್ಕ ಕುಂತ್ಕತಿನಿ.. ಬಿಚ್ಗಂಡೇ ಕುಂತ್ಕತಿನಿ ಇವ್ಳಿಗೇನ.. ” ಅಂತ ಕೆಕ್ಕಳಿಸಿ ನೋಡಿ ತೆಂಗಿನ ಮರನ ಮುಟ್ಟಿ ಮುಟ್ಟಿ ನಮಸ್ಕರಿಸಿ “ನೀನೇ ಸರಿ ಏನೂ ಮಾತಾಡಲ್ಲ” ಅಂತ ಒರಗಿ ನಿಂತು ಕಿಸಕ್ಕನೆ ನಕ್ಕಳು.

ಈ ಚಂದ್ರ ಓದ್ತಾ ಇದ್ದದು ವಿದ್ಯೋದಯ ಸ್ಕೂಲಲಿ. ಖಾಕಿ ಚಡ್ಡಿ ಬಿಳಿ ಅಂಗಿ ಯೂನಿಫಾರಂ. ಎಂಟುಕ್ಕ ಬಂದಾಗ ಆ ಚಡ್ಡಿ ಅಂಗಿ ಹೊಲಿಸಿದ್ದು. ವಾರಕ್ಕಂಟ ಇಕ್ಕಂಡು ಶನಿವಾರ ಒಗುದು ಇಟ್ರ ಇನ್ನು ಸೋಮವಾರಕ್ಕಂಟ ಅದ್ಕೆ ರೆಸ್ಟು. ಇನ್ನು ಬುಧವಾರ ಕಲರ್ ಬಟ್ಟೆ. ಅವತ್ತೊಂದಿನ ರೆಸ್ಟು. ಹೀಗೆ ಅದು ರೆಸ್ಟ್ ತಕ್ಕ ತಕ್ಕಂಡು ಎರಡು ವರ್ಷ ಕಳುದು ಮೂರನೆ ವರ್ಷಕ್ಕೆ ಕಾಲಿಟ್ಟು ದಾಖಲೆ ನಿರ್ಮಿಸಿತ್ತು. ಆ ಖಾಕಿ ಚಡ್ಡಿ ತಿಕದ ಎರಡೂ ಕುಂಡಿತವು ನುಸೋದಾಗಿ ಅಗಲವಾಗಿ ದರಿ ಬಿಟ್ಟು ವಿಸ್ತರಿಸುತ್ತಿತ್ತು. ಇದನ್ನು ನೋಡಿದವ್ರು ಪೋಸ್ಟ್ ಅನ್ನೊರು.

ಸಿಲ್ಕ್ ಫ್ಯಾಕ್ಟ್ರಿ ಗೇಟ್ ಹತ್ರ ಒಂದು ಪೋಸ್ಟ್ ಡಬ್ಬಿ ನೇತಾಕಿದ್ರು. ನೆಂಟರಿಷ್ಟರಿಗೆ ಕಾಗದ ಕಳುಹಿಸುವವರು ಬರೆದು ಆ ಪೋಸ್ಟ್ ಡಬ್ಬಿಗೆ ಹಾಕೋರು. ಈ ಚಂದ್ರ ವಿದ್ಯೋದಯ ಸ್ಕೂಲಿಗೆ ಹೋಗುವಾಗ ಅದರ ಮುಂದೆನೆ ಹೋಗೋನು. ಊರಲ್ಲಿ ಅಕ್ಕಪಕ್ಕದ ಮನೆಯವರು ಅವರ ನೆಂಟರಿಷ್ಟರಿಗೆ ಕಾಗದ ಬರೆಸಿ ನೀಟಾಗಿ ಅಂಟಿಸಿ ಅವನ ಕೈಗೆ ಕೊಟ್ಟು ತಗಪ್ಪ ಇದ್ನ ಪೋಸ್ಟ್ ಡಬ್ಬಿಗ ಹಾಕ್ಬುಟ್ಟು ಒಂದ್ಸಲ ಕುಲ್ಕು ಅನ್ನೋರು. ಹಿಂಗೆ ಒಂದ್ಸಲ ಕಾಗದ ಹಾಕಿ ಪೋಸ್ಟ್ ಡಬ್ಬಿ ಕುಲುಕೋವಾಗ ಪೋಸ್ಟ್ ಮ್ಯಾನ್ ನೋಡಿ ಇವನಿಗೆ ಬಾರಿಸಿದ್ದ. ಇವನು ಸಮಜಾಯಿಸಿ ನೀಡಿದರು ಕೇಳದೆ ಇವನು ಹತ್ತಾರು ಸಲ ಅಲ್ಲಾಡಿಸಿರೋದನ್ನು ನೋಡಿ ನೋಡಿ ಸಾಕಾಗಿದ್ದ ಪೋಸ್ಟ್ ಮ್ಯಾನು “ನಿನ್ ತಿಕ್ಕೇ ಹಾಕ ಅಳ್ಳಾಡ್ಸು.. ಅಲ್ನೋಡು ನಿನ್ ತಿಕುದ್ ಕುಂಡಿತವು ಆ ಚಡ್ಡಿ ತೂತ್ಗಳು ಈ ಪೋಸ್ಟ್ ಡಬ್ಬಿಗಿಂತ ಅಗಲಾಗಿ ಅವ.. ಅದ್ಕೆ ಹಾಕಿ ಅಳ್ಳಾಡುಸ್ಕಂಡು ಹೋಗಿ ನಿಂಗ್ಯಾರು ಕಾಗ್ದ ಹಾಕಿ ಅಳ್ಳಾಡ್ಸು ಅಂದಿದ್ರೋ ಅವ್ರ್ ಮುಂದ ಅಳ್ಳಾಡ್ಸು ” ಅಂತ ಗೇಲಿ ಮಾಡಿ ರೇಗಿದ್ದ. ಅವತ್ತಿಂದ ಸ್ಕೂಲಿಗೆ ಹೋಗ್ತಾ ಬರ‌್ತಾ ಪುಸ್ತಕ ತುಂಬಿದ ಬ್ಯಾಗನ್ನು ತಿಕದ ಕುಂಡಿ ತನಕ ಮುಚ್ಚಿಕೊಳ್ಳೊದನ್ನ ಶುರು ಮಾಡ್ಕೊಂಡಿದ್ದ. ಆ ಪೋಸ್ಟ್ ಮ್ಯಾನು ದಾರಿಲಿ ಸಿಕ್ಕಾಗೆಲ್ಲ “ಏ ಪೋಸ್ಟು.. ಬ್ಯಾಗ್ ಮುಚ್ಕ ಹೋಯ್ತಿದಯ ತಿಕ ಕಾಣ್ದೆ ಇರ‌್ಲಿ ಅಂತ.. ಬಾಯಿಲ್ಲಿ ನಾನೊಂದ್ ಕಾಗ್ದ ಪೋಸ್ಟ್ ಮಾಡ್ತಿನಿ” ಅಂತ ನಗೋನು. ಇವನು ಗೋಳೋ ಅಂತ ಅಳೋನು. ಇದು ಊರಿನ ಜನಕ್ಕೆ ತಿಳಿಯೋದೇನು ಕಷ್ಟ ಆಗ್ನಿಲ್ಲ. ಈಗ ಜನಗಳೂ ಇವನನ್ನು ನೋಡಿ “ಏ ಪೋಸ್ಟಾಗಿರೋನೇ ಬಾ ಇಲ್ಲಿ” ಅಂತ ಕಿಚಾಯಿಸಿ ಪೋಸ್ಟ್ ಪೋಸ್ಟ್ ಅಂತ ರೇಗ್ಸೋರು.

ಒಂದಿನ ಹಿಂಗೆ ಟ್ರಿಣ್ ಟ್ರಿಣ್ ಅಂತ ಸೈಕಲ್ ಏರಿ ಬಂದ ಪೋಸ್ಟ್ ಮ್ಯಾನು ಕಾಗದ ಹಂಚುತ್ತ ಮುದುಕ ಮುದುಕಿಯರಿಗೆ ಹೆಬ್ಬೆಟ್ಟು ಒತ್ತಸಿಕೊಂಡು ದುಡ್ಡು ಕೊಡುತ್ತಾ ಇದ್ದ. ಅಲ್ಲೆ ನೋಡುತ್ತಾ ನಿಂತಿದ್ದ ಚಂದ್ರನನ್ನು “ಏನಪ್ಪ ಪೋಸ್ಟು.. ಸ್ಕೂಲ್ಗ ಗೀಲ್ಗ ಹೋಗ್ದೆ ಇದ್ಯಾಕ್ ಹಿಂಗ್ ನಿಂತಿದ್ದಯ್.. ಯಾಕ ಚಡ್ಡಿ ಇಲ್ವ ಹೋಗಕ” ಅಂತ ನಗ್ತಾ ರೇಗಿಸುತ್ತಿದ್ದ. ಚಂದ್ರ ಅಳತೊಡಗಿದ. ನೀಲಳಿಗೆ ಪೋಸ್ಟ್ ಮ್ಯಾನ್ ಕಂಡರೆ ಅಕ್ಕರೆ. ಅವನು ವಯಸ್ಸಾದವರಿಗೆ ಸೈನು ಹಾಕಿಸಿಕೊಂಡು ದುಡ್ಡು ಕೊಡುತ್ತಿದ್ದರೆ ಈ ನೀಲ “ಅದೇನ ಬಂದು ಬಂದು ಬರೀ ಅವ್ರಿಗೇ ಕೊಡ್ತಿದೈ ನಂಗು ಕೊಡು ಬೆಡ್ಡು ಬಿಸ್ಕಟ್ಟು ತಕ್ಕತಿನಿ” ಅನ್ನೋಳು. ಈ ಪೋಸ್ಟ್ ಮ್ಯಾನು ನಗ್ತ ನಗ್ತಾನೆ ಅಯ್ಯೋ ಅನ್ಕಂಡು ಬಂದಾಗೆಲ್ಲ ಬಾಳೆ ಹಣ್ಣೊ ಬಿಸ್ಕೆಟ್ಟೊ ಏನೊ ಒಂದು ತಿಂಡಿ ತಂದು ಕೊಡೋನು. ಇವತ್ತು ಬಂದವನು ಅವಳ ಕೈಗೆ ಶುಂಠಿ ಪೇಪರ್ ಮಿಂಟ್ ತಂದು ಕೊಟ್ಟಿದ್ದ. ಅದನ್ನ ಚೀಪ್ತಾ ಚೀಪ್ತಾ ಕಿಸಿಕಿಸಿ ನಗ್ತಾ ಮರ ಒರಗಿ ನಿಂತಿದ್ದಳು. ಚಂದ್ರನ ಅಳು ಜೋರಾಯ್ತು. ಇವನ ಅಳು ನೋಡಲಾರದೆ ಓಡೋಡಿ ಬಂದ ನೀಲ ಚಂದ್ರನ ತಲೆ ಸವರಿ “ಇದ್ಯಾಕುಡ ಹಿಂಗತೈ.. ಯಾರೇನಂದ್ರು.. ಲೇ ನನ್ ಮರ್ ಮಗ್ನೆ ಅದೇನ ನಿಂದು ಕಣಿ.. ಸುಮ್ನ ಅದೇನ ಈ ಮುಂಡರ ್ಗ ದುಡ್ಡ ಪಡ್ಡ ಕೊಟ್ಟು ತಿಕ ಮುಚ್ಗ ಹೋಗದ್ ತಾನೆ. ಆ ಗಂಡ ಹಂಗ ಅಳುಸ್ತಿದ್ದಯಲ್ಲ” ಅಂತ ಅವನ ಮುಂದಲೆ ಹಿಡಿದು ಎಳೆದು ಬಿಟ್ಟಳು. ಆ ಪೋಸ್ಟ್ ಮ್ಯಾನ್ ತೊಡೆ ಮೇಲೆ ಇದ್ದ ಮನಿ ಆರ್ಡರ್ ಫಾರಂ, ಕಾಗದ, ದುಡ್ಡು, ಇಂಕ್ ಪ್ಯಾಡು ಎಲ್ಲ ಚೆಲ್ಲಿಕೊಂಡವು. ಅವನು ಗಾಬರಿಗೊಂಡು ತಡಬಡಾಯಿಸಿಕೊಂಡು ಎಲ್ಲವನ್ನು ಆಯ್ದುಕೊಳ್ಳುತ್ತಿದ್ದರೆ ನೋಡುತ್ತಿದ್ದವರು ಅಯ್ಯೊ ಛೇ ಛೇ ಅಂತ ಅವರೂ ಬಗ್ಗಿ ಆಯ್ದುಕೊಂಡು ಅವನಿಗೆ ಎತ್ತಿ ಕೊಟ್ಟರು. ಕೆಲವು ಗಾಳಿಗೆ ತೂರಿಕೊಂಡು ಹೋಗ್ತಾ ಇದ್ದವು. ಅವನು ಓ ಅಂತ ಅರಚಿಕೊಂಡು ಅತ್ತಿತ್ತ ಓಡಾಡಿ ಎಲ್ಲವನ್ನು ಆಯ್ದು ಆಯ್ದು ಬ್ಯಾಗಿಗೆ ತುಂಬಿಕೊಂಡು ಸೈಕಲ್ ಗೆ ನೇತಾಕಿಕೊಂಡು ನೀಲುನ್ನ ನೋಡ್ತಾ “ಹಿಂಗ ಮಾಡ್ದೆಲ್ಲ.. ನಿಂಗೇನು ತಂದು ಕೊಡಲ್ಲ ನಾಳಯಿಂದ” ಅಂತ ಜೋರು ಮಾಡಿದ.
ಅವಳು “ಏಯ್ ನಾಯಿ ನಿಮ್ಮಪ್ಪನ ಮನೆಯಿಂದ ತಂದ್ಕೊಟ್ಟಯ.. ತಂದ್ಕೊಡಲ್ಲ ಅಂದ್ರ ಆಪೀಸ್ಗೆ ಬಂದು ಹೇಳ್ತಿನಿ.. ತಿಕ ಮುಚ್ಕ ಹೋಗು” ಅಂತ ಹಲ್ಲು ಕಡಿದಳು. ಆ ಪೋಸ್ಟ್ ಮ್ಯಾನು ಇದೇ ಒಂದು ಸವುಳು ಅಂತ ಸೈಕಲ್ ಏರಿ ಭರ‌್ರಂತ ಹೋದದ್ದೂ ಆಗಿತ್ತು. ಹೀಗಾಗಿ ಚಂದ್ರ ಸ್ಕೂಲಿಗೆ ಹೋಗಲು ಕಣಿ ಆಡಲು ಕಾರಣವಾಗಿತ್ತು.

ಸಿದ್ದಿ ಮರು ಮಾತಾಡದೆ ಹೋಗ್ತಾ ಹಂಗೆ ಹಿಂದೆ ತಿರುಗಿ ಗಂಡ ಶಿವಯ್ಯನಿಗೆ “ಚಡ್ಡಿ ಅರ‌್ದೋಗದ ಅದ್ಕ ಅಂವ ಕಣಿ ಆಡ್ತನ” ಅಂದಳು. ಶಿವಯ್ಯ “ಈಗ ಚಡ್ಡಿ ಹೊಲಿಸಕ ಎಲ್ಲಿದ್ದು ದುಡ್ಡು.. ಅದ್ಕೆ ಯಾವ್ದ್ಯಾರ ಬಟ್ಟ ಇದ್ರ ಸೇರ‌್ಸಿ ಭದ್ರಾಗಿ ಹೊಲ್ದು ಇಕ್ಕಿ ಕಳಿಸು.. ಇದೊಂದೊರ‌್ಸ” ಅಂತ ಏರು ಅಟ್ಟಿಕೊಂಡು ಹೊರಟ. ಸಿದ್ದಿ ಚಡ್ಡಿಗೆ ಪ್ಯಾಚು ಹಾಕಲು ಹೊಸಿಲು ದಾಟಿ ಒಳ ಹೋಗುವಾಗ ಒಕ್ಕಲಗೇರಿಯಿಂದ ನಾಕಾರು ಜನ ಬಂದು ಸಂದಿಗುಂಟ ನಡೆದಿದ್ದರು. “ಇವತ್ಯಾಕ ಇವ್ರು ಬಂದಿದರು.‌.” ಅಂತಂದುಕೊಂಡ ಸಿದ್ದಿ “ಅಕ್ಕುನ್ ಮ್ಯಾಲ ಇವತ್ತು ಯಂಕ್ಟಪ್ಪ ಬಂದ್ಗಿಂದನಾ ಏನಾ..” ಅಂತ ಒಳ ನಡೆದಳು.

ಚೆನ್ನಬಸವಿ ಕಿರಿ ಮಗಳು ಸುಶೀಲ ಮುದುಕಿ ಚಿಕ್ಕನಹುಂಡಿಗೆ ಮದುವೆ ಆಗಿದ್ದಳು. ಒಂದು ಕೈಗೂಸೂ ಇತ್ತು. ಚೆನ್ನಬಸವಿಯ ಕಿರೀಮಗ ಸ್ಕೂಲಿಗೆ ಹೋಯ್ತಿತ್ತು. “ಶಿವಿ, ಅಂದ್ರ ಸುಶೀಲ ಊರಿಂದ ಬಂದಿರದು ನೋಡಿದ್ರ ಚೆನ್ನಬಸಕ್ಕನ ಮ್ಯಾಲ ಯಂಕ್ಟಪ್ಪ ಇವತ್ತೂ ಬತ್ತನ ಅಂತ ಗ್ಯಾರಂಟಿ ಆಯ್ತು. ಅದ್ಕೆ ಮಂತ ವತಾರನೆ ಮನ ಕ್ವಾಣ ತೊಳ್ದು ರಂಗೋಲ ಬುಟ್ಟಿರದು” ಅಂತಂತ ಗೊಣಗುಡುತ್ತ ಜಗುಲಿಗೆ ಬಂದು ಸೂಜಿ ತಕ್ಕಂಡು ಚಡ್ಡಿ ಹೊಲಿತಾ ಇದ್ದರೆ ಚೆನ್ನಬಸವಿ ಮನೆ ಜಗುಲಿ ಮೇಲೆ ಒಕ್ಕಲಿಗೇರಿಯವ್ರು ಅದೇನೊ ಪಿಸಿಪಿಸಿ ಪಿಸುಗುಟ್ಟೋರು. ಅದೇ ಹೊತ್ತಿಗೆ ಇನ್ನೊಂದಿಬ್ರು ಬಂದ್ರು. ಈಗ ಬಂದವರು ಹೊಸ ಮುಖ. ಹಿಂದ ಎಂದೂ ಬಂದಂಗಿಲ್ಲ. ಅವರ ಹಿಂದೆನೆ ಕಿಸಿಕಿಸಿ ನಗ್ತಾ ಬಂದ ನೀಲ ಅವರಲ್ಲೊಬ್ಬರನ್ನು ಬೆಂಟಿದಳು. ಅವರು ಬೆಚ್ಚಿ ಜಗುಲಿ ಏರಿದರು. ಸಿದ್ದಿ “ಏನು ಇಲ್ಲಕಣ ಇರಿ. ಅವ ನನ್ ವಾರ‌್ಗಿತ್ತಿ ಮಗ್ಳೆ ಕಣ” ಅಂತಂದಳು. ಆಗ ಮೊದಲು ಬಂದವರು ಎದ್ದು ಬಂದು ನೀಲಳಿಗೆ ಒಂದು ಗ್ಲೂಕೂಸ್ ಬಿಸ್ಕೆಟ್ ಕೊಟ್ಟು ‘ಚೆಂದಗಿದ್ದಯವ್ವ’ ಅಂತ ನಗ್ತ.. ಈಗ ಬಂದ ತಮ್ಮವರನ್ನ “ಬನ್ನಿ ಬನ್ನಿ ಏನು ಇಲ್ಲಕಣ.. ಅವ ದೇವ್ರ್ ಬತ್ತುದಲ್ಲ ಅವ್ರ್ ಮಗಳಿಯೇ.. ಏನಾ ಆಗಿ ಇಂಗಾಗದ ಬನ್ನಿ ಬನ್ನಿ” ಅಂತ ತಾವು ಕುಂತಿದ್ದ ಜಗುಲಿಗೆ ಕರೆದೊಯ್ದು ಪಿಸುಗುಟ್ಟುವುದ ಮುಂದುವರಿಸಿದರು. ಇವರ ಪಿಸಿಪಿಸಿ ಮಾತು ಚಡ್ಡಿಗೆ ಪ್ಯಾಚು ಹಾಕುತ್ತಿದ್ದ ಸಿದ್ದಿಗು ಅದನ್ನು ನೋಡುತ್ತ ಕುಂತಿದ್ದ ಚಂದ್ರನಿಗು ತಾಕುತಿತ್ತು.

*

ಸುಗ್ಗಿ. ಕುಯ್ಲು ನಡೀತಿತ್ತು. ಯಂಕ್ಟಪ್ಪ ಆಳು ಬಿಟ್ಟು ಗದ್ದೆ ಕುಯ್ಸತ್ತಿದ್ದರು. ಪುರುಸೊತ್ತೇ ಇಲ್ಲ. ಭತ್ತ ರಾಶಿರಾಶಿ. ಗಾಡಿ ಕಟ್ಟೋರು ಕಟ್ತಾನೆ ಇದ್ರು. ಯಂಕ್ಟಪ್ಪನಿಗೆ ಸಾಕುಸಾಕಾಗಿ ಬಿಸಿಲಿಗೆ ಛತ್ರಿ ಹಿಡಿದು ಏರಿಮೇಲೆ ನಿಂತಿದ್ದ ಎತ್ತಿನಗಾಡಿ ಕೆಳಗೆ ಕುಂತಿದ್ದ. ಅತ್ತ ಚೆನ್ಮಬಸವಿ ಆಳುಗಳೊಂದಿಗೆ ಆಳಾಗಿ ಭತ್ತದ ಅರಿ ಕಟ್ಟಿಕಟ್ಟಿ ಹೊರುವವರಿಗೆ ಹೊರಿಸುತ್ತಿದ್ದಳು. ಅಲ್ಲೊಬ್ಬಳು ಚೆನ್ನಬಸವಿಗೆ ‘ಅಕೈ ನಿಮ್ ನೀಲ್ನ ಆಸ್ಪತ್ರಗಾರು ತೋರ‌್ಸು.. ಉಣ್ಣಗ ತಿನ್ನಗ ಏನಾರು ಆಗಿರುತ್ತ’ ಅಂದಳು. ಚೆನ್ನಬಸವಿ ‘ಏಯ್ ಏನಾ ತೋರ‌್ಸದು.. ಅವ್ಳಿಗೇನಾಗಿದ್ದು..ಹೊತ್ಗ ನಡಿ’ ಅಂತ ಗದರಿದಳು. ಅವಳ ಗದರಿಕೆಗೆ ಕೇರು ಮಾಡದ ಅವಳು ‘ಅಕೈ ನಿಂಗೊತ್ತಿಲ್ವ.. ನನ್ನೆಣ್ಣು ನಿನ್ನೆಣ್ಣು ವಂದ್ಗೆ ಅಲ್ವ ಮುಟ್ಟಯ್ತಿದ್ದು.. ನನ್ನೆಣ್ಣು ಆಗಿ ವಾರಾಯ್ತು.. ಮೂರ್ ನೀರೂ ಹಾಕಂಡಾಯ್ತು. ನಿಮ್ ನೀಲ ಇನ್ನೂ ಆಗಿಲ್ವಂತಲ್ಲ. ಅವತ್ತು ಅವ್ರಿಬ್ರು ಮಾತಾಡಗ ಕೇಳ್ಕಂಡಿದ್ದಿ. ನಾ ಕೇಳಂವ್ ಅನ್ಕಂಡಿ. ಕೆಲ್ಸದ ದಿಗ್ಲಲಿ ಸುಮ್ನಾಗಿ ಆಮೇಲ ಗೆಪ್ತಿಯಾಗಿ ಅವ್ಳುನ್ನೇ ಕೇಳ್ದಿ. ಇಬ್ರು ಜೊತ್ಗೇ ಅಲ್ವ ಓದಕ ಹೋಗದು.. ನಂಗೊತ್ತಿಲ್ವ. ಅವ್ಳ ಕೇಳ್ದವತ್ಗ ಸುಸ್ತು ಸಂಕ್ಟ ಅಂತಿದ್ಲಂತ. ಅದ್ಕೆ ಕೇಳ್ದಿ ನಂಗೇನು ಗೊತ್ತಿಲ್ಲಕವೈ…” ಅಂತ ಅರಿ ಹೊತ್ಗಂಡು ತೆವ್ರಿ ಹತ್ಕಂಡು ಕಳದ ಕಡೆ ಬಿರಬಿರನೆ ನಡೆದಳು. ಅಲ್ಲಿ ಇನ್ನೊಂದು ಮಗ್ಗುಲು ಪಾತಿ ಒಳಗ ಸೊಸ್ಮಾರಿಗುಡಿ ಪೂಜಾರಿ ಕಟ್ಗಳ್ನೆಲ್ಲ ಹಾಸಿ ಹಾಸಿ ಅರಿ ಎತ್ತಿ ಎತ್ತಿ ಮಡ್ಗಿ ನೀಟಾಗಿ ಭದ್ತಾಗಿ ಅರಿ ಕಟ್ತಿದ್ದ.

ಸೂರ್ಯ ಕೆಂಪೇರಿ ಮುಳುಗೋ ಹೊತ್ತು. ಎಲ್ಲ ಗಂಡಾಳು ಹೆಣ್ಣಾಳು ಕಾವ್ಲಿಗಿಳ್ದು ಕೈಕಾಲು ತೊಳ್ದು ಅವರಲ್ಲಿ ಕೆಲವರು ದುಡ್ಡೀಸ್ಕಂಡು ಏರಿ ಏರಿಕೊಂಡು ನಡೀತಿದ್ರೆ ಇನ್ನು ಕೆಲವರಿಗೆ ಯಂಕ್ಟಪ್ಪ ಜೋರ್ ಮಾಡಿ “ಜೋಬಲಿರದೆಲ್ಲ ತೀರೋಯ್ತು ಆಮೇಲ ಮನೆತವ್ಕ ಬರೋಗಿ” ಅಂತ ಸನ್ನೆ ಮಾಡಿದ್ಮೇಲೆ ಅವರೂ ಏರಿಗುಂಟ ನಡುದ್ರು. ಚೆನ್ನಬಸವಿಗೆ ಇದ್ಯಾವುದರ ಪರಿವೇ ಇಲ್ಲದಂತೆ ತನ್ನ ಪಾಡಿಗೆ ತಾನಿದ್ದು ಏನೋ ಯೋಚಿಸುವವಳಂತೆ ಕಂಡಳು.

ಈಗ್ಗೆ ಎಂಟ್ಹತ್ತು ದಿನದಿಂದ ನೀಲ ಮುಖ ಕಿನ್ನಾಯ್ಕಂಡು ಇದ್ದದ್ದು. ಬರೋಳು ಹೋಗೋಳು ಮಾತಿಲ್ಲ ಕತಿಲ್ಲ. ಮಲ್ಲಮೇಷ್ಟ್ರ ಮನೇ ರೇಡಿಯೋದಲ್ಲಿ ಎಂತೆಂಥ ಹಾಡು ಬರ‌್ತಾ ಇದ್ವು. ಈಗ ಏನೂ ಆಗದವಳ ಹಾಗೆ ಸುಮ್ನೆ ಕುಂತಿರೋಳು. ಮೊದಲೆಲ್ಲ ರೇಡಿಯೊ ಹಾಡು ಬಂದರೆ ಬಾಗಿಲು ಹಾಕೊಂಡು ಕುಣಿಯೋಳು. ಒಂದೊಂದು ಸಲ ಚೆನ್ನಬಸವಿನೆ ಮಗಳ ಕುಣಿತಕ್ಕೆ ನಾಚಿ ನೀರಾಗೋಳು. ಎರಡೂ ಕೈಯಿಂದ ನಟಿಕೆ ಮುರಿಯೋಳು. ಅಕ್ಕಪಕ್ಕದ ಮನೆ ಐಕಳು ಬಾಗಿಲತ್ತಿರ ನಿಂತು ಕಿಂಡಿಲಿ ಇಣ್ಕಿ ನೋಡ್ತ ನೀಲಕ್ಕ ಕುಣಿತಾವ್ಳ ಅಂತ ನಲೀತಿದ್ದು. ಹಿಂಗೆ ಒಂದಿನ ನಿಂಗಯ್ಯ ಕೆಲಸ ಮುಗಿಸಿ ಬಂದೊತ್ತಲ್ಲಿ ಮಲ್ಲಮೇಷ್ಟ್ರ ಮನೇಲಿ ರೇಡಿಯೋದಲ್ಲಿ ಹಾಡು ಮೊಳಗುತ್ತಲೇ ಇತ್ತು. ನೀಲ ಕುಣೀತನೇ ಇದ್ಲು. ಇವಳ ಕುಣಿತ ನೋಡಿ ರೇಗಿದ. ಚೆನ್ನಬಸವಿಗೂ ರೇಗಿದ. “ಅವೆಣ್ಣ ಹಾಳ್ ಮಾಡ್ದಿದ್ದಯ್” ಅಂದ. ಅದಾದ ಮೇಲೆ ಚೆನ್ನಬಸವಿ ಎಂಟ್ಹತ್ತು ದಿನ ಗಂಡನೊಂದಿಗೆ ಮಾತಾಡದೆ ಮುನಿಸಿಕೊಂಡಿದ್ದಳು. ನಿಂಗಯ್ಯ ಸೌದೆ ಹೊಡೆದು ಸಂಜೆಗೆ ಬರುವಾಗ ಹೆಂಡತಿಗಾಗಿ ಮಸಾಲೆ ದೋಸೆ ತಂದು ಅವಳ ಹತ್ತಿರ ಹೋಗಿ ಮುದ್ದಿಸಿ ತಿನ್ನಿಸಿ ಮುನಿಸು ದೂರ ಮಾಡಿದ್ದು ನೆನಪಾಯ್ತು. ಚೆನ್ನಬಸವಿ ಕೈಕಾಲ್ನೂ ತೊಳಿದೆ ಯಂಕ್ಟಪ್ಪನಿಗೂ ಹೇಳ್ದೆ ಸುಮ್ನೆ ಏರಿಗುಂಟ ನಡೆದಿದ್ದಳು. ಮೊನ್ನೆ ನೀಲಳಿಗೆ “ಇದ್ಯಾಕಮ್ಮಿ ಹಿಂಗ್ ಕುಂತದ್ದಯ್” ಅಂದಿದ್ದು ಹಾದು ಹೋಯ್ತು. ಈಗ ಗದ್ದವೊಳಗ ಅರಿ ಕಟ್ಟಾಗ ನೀಲಳ ಬಗ್ಗೆ ಅವಳ್ಯಾವಳೊ ಅರಿ ಕಟ್ಟವ ಮಾತಾಡಿದ್ದು ಅಳುಕಾಯ್ತು. ಚೆನ್ನಬಸವಿಯ ನಡಿಗೆಯ ಬಿರುಸು ಜೋರಾಯ್ತು. ಯಂಕ್ಟಪ್ಪ ಅವಳ ಬಿರುಸು ನಡಿಗೆ ನೋಡದೆ ಇರಲಿಲ್ಲ.

ಗವ್ಗತ್ತಲು. ಸೊಳ್ಳೆ ಜೊಂಯ್ಞ್ ಅನ್ನುತ್ತಿದ್ದವು. ಶಿವಯ್ಯ ಜೋಳದ ಕದ್ಕ ತಂದು ಉಗ್ಗು ಹಾಕಿದ್ದ. ಹೊಗೆ ಸಂದಿನೆಲ್ಲ ಆವರಿಸಿ ಮನೆಯೊಳಕ್ಕು ಕವಿಕಂಡಿತ್ತು. ಮನೆಯೊಳಗೆ ಶಿವಯ್ಯನ ಐಕ ಮಕ್ಳು ಗಲಕಾಕುತ್ತ ಸೀಮೆಣ್ಣೆ ಸೊಳ್ಳಿನ ಮುಂದೆ ಕುಂತು ಓದುತ್ತಿದ್ದರೆ ಸಿದ್ದಿ ಕೋಣೆಯೊಳಗೆ ಹಿಟ್ಟು ಒನಸುತ್ತಿದ್ದಳು. ಜಗುಲಿ ರೂಮಿನಲ್ಲಿ ಅಡಿನಿಂಗಿ ರಗ್ಗು ಹೊದ್ದು ದೊಣ್ಣೆಯನ್ನು ನೆಲಕ್ಕೆ ಬಡಿಯುತ್ತ ಜೊಂಯ್ಞ್ ಅನ್ನೊ ಸೊಳ್ಳೆನ ಯಾವುದ್ಯಾವುದೊ ನೆವ ಹಿಡಿದು ಬಯ್ಯುತ್ತಿದ್ದಳು. ಅಷ್ಟೊತ್ತಿಗೆ ಗದ್ದೆ ಕೆಲ್ಸ ಮುಗಿಸಿ ಬಂದ ಚೆನ್ನಬಸವಿ ಸಂದಿಯಲ್ಲಿ ಕವಿಕಂಡಿರ ಹೊಗೆಯೊಳಗೇ ಕೆಮ್ಮುತ್ತಾ ಕ್ಯಾಕರಿಸುತ್ತಾ ಮನೆಯೊಳಗೆ ನಡೆದಾಗ ಬೀಡಿ ಸೇದ್ತಾ ಹೊಸಿಲಿಗೆ ತಿಕ ಹಾಕಿ ಕುಂತಿದ್ದ ನಿಂಗಯ್ಯ “ಇದ್ಯಾಕಮ್ಮಿ ಇಸ್ಟೊತ್ತು.. ಇದೇನ್ ಮಾಡ್ತಿದ್ದ .. ” ಅಂತ ಅಂದಂಗಾಯ್ತು. ಒಳಗೆ ನೀಲ ಸೀಮೆಣ್ಣೆ ಸೊಳ್ಳು ಮಡಿಕಂಡು ಸೊಳ್ಳೆಯಿಂದ ಪಾರಾಗಲು ಕೈ ಬಡಿಯುತ್ತಾ ಓದ್ತಾ ಇರುವಂತೆ ಕಂಡಳು. ಗಂಡ ನಿಂಗಯ್ಯನ ಮಾತು ಚೆನ್ನಬಸವಿಗೆ ತಾಕಿ “ಸುಮ್ನ ಬಾಯ ಮುಚ್ಕ ಕೂತ್ಕ ನನ್ ಕಷ್ಟ ನಂಗ” ಅಂತಂದು ಓದ್ತಾ ಕುಂತಿದ್ದ ನೀಲುನ್ಗ ಜಾಡ್ಸಿ ಒದ್ದ. ಅವಳು ಒದ್ದ ರಭಸಕ್ಕೆ ಅವ್ವೊ.. ಅಂತ ಗೋಡೆಗೆ ಅಪ್ಪರಿಸಿಕೊಂಡಳು. ನಿಂಗಯ್ಯ ತೂರಾಡುತ್ತ ಓಡಿ ಬಂದು “ಏಯ್ ಇದ್ಯಾಕಮ್ಮಿ ಅವೆಣ್ ಒದ್ದಯ್.. ಜೋಡ್ ತಕ್ಕ ಹೊಡಿತಿನಿ ನಾಯಿ ಮುಂಡ..” ಅಂತ ನೀಲುನ್ನ ಎತ್ತಿ ಕೂರಿಸಿದ. ಚೆನ್ನಬಸವಿಗೆ ಇದ್ಯಾಕೊ ಸರಿ ಕಾಣದೆ ಬಚ್ಚಲಿಗೆ ಹೋಗಿ ಕೈಕಾಲು ತೊಳೆದು ಕ್ವಾಣ ಒಳಕ್ಕೆ ಹೋಗಿ ಒಲೆ ಹಸ್ಸಿ ಹಿಟ್ನೆಸರು ಇಟ್ಟು ಕಣ್ಣಲ್ಲಿ ನೀರು ತುಂಬಿಕೊಂಡಳು. ಅವಳ ಕಣ್ಣೀರು ನಿಂಗಯ್ಯನನ್ನು ತಟ್ಟಿ ತೂರಾಡುತ್ತಲೇ ಹೊರಗೋದ. ಇದೇ ಒಂದು ಸವುಳು ಅಂತ ನೀಲುನ್ನ ಕ್ವಾಣ ಒಳಕೆ ಕರ‌್ದು ಕೂರುಸ್ಕಂಡು ಕೇಳಿದಳು. ನೀಲ ಅಳ್ತ ಅಳ್ತ ಆಣಿ ಪ್ರಮಾಣ ಮಾಡಿದಳು. ಚೆನ್ನಬಸವಿ ಹಲ್ಲುಮುಡಿ ಕಚ್ಚಿದಳು. ಒಲೆಯೊಳಗೆ ಒಣಗಿ ದಳ್ಳಾಗಿದ್ದ ಮುಂಡ್ಗಳ್ಳಿ ಹೊತ್ತಿ ಉರಿತಾ ಕಾವೇರತೊಡಗಿತು.

‌‌‌‌‌‌-ಎಂ. ಜವರಾಜ್

(ಮುಂದುವರಿಯುವುದು)

[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x