ಸಮರ
ಮಿಣುಕು ನಕ್ಷತ್ರಗಳ ಒಡ್ಡೋಲಗ
ರಾಕೇಂದು ಆಸ್ಥಾನದಲಿ ಮಹಾ ಕಾಳಗ
ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದು
ಬಾನ್ ಕಡಲ ಹೊಳೆ ಮುತ್ತು ತಾನೇ ಎಂದು
ಕೋಟಿ ಕೋಟಿ ತೇಜ ಪುಂಜಗಳಿಗೆ
ಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ
ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದು
ಉನ್ಮತ್ತ ತಾರೆಗಳು ಮನದುಂಬಿ ಕುಣಿದು
ಇರಳೂರ ಪ್ರಜೆಗಳಿಗೆ ಹೊನಲು ಹಬ್ಬ
ಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ
ಕಾತರದಿ ಕೈ ಕಟ್ಟಿ ಕಾಯುತಿರುವ
ಶಾಮನ ಮನದಲ್ಲಿ ಪ್ರೇಮ ಕಲರವ
ಬೆದರುತ್ತ ಬೆವರುತ್ತಾ ಬಂದ ನಲ್ಲೆ
ವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ
ಯಮುನೆಗೂ ವಿಸ್ತಾರ ಬೆಳದಿಂಗಳು
ನಾಚುತಲಿ ರಾಧೆ ನಗೆ ಬೀರಲು
ಆಗಸದ ಕದನಕ್ಕೆ ತೆರೆ ಬಿದ್ದಿದೆ
ಇಂದುಮುಖಿ ನಯನದಲಿ ಶುರುವಾಗಿದೆ
*
ಬೆಂಕಿ
ಜ್ವಲಿಸುತ್ತಲೇ ಇದೆ
ಎದೆಯಲಗ್ಗಿಷ್ಟಿಕೆ
ಸಣ್ಣ ಅಂತರವಿರಲಿ
ಸಲ್ಲ ಹುಡುಗಾಟಿಕೆ
ಅನವರತ ಉರಿಯುತಿದೆ
ಎಣೆಯಿಲ್ಲದೆ
ಅನಲನ ಆರ್ಭಟಕೆ
ಕೊನೆಯೆಲ್ಲಿದೆ
ಸುಡುವುದದರ ಧರ್ಮ
ಅದುವೇ ಕರ್ಮ
ಅದನುಳಿದು ತಿಳಿದಿಲ್ಲ
ಅನ್ಯ ಮರ್ಮ
ಬಳಿ ಬರುವ ಮುನ್ನ
ಕೊಡು ಗಮನವನ್ನ
ಕರಗಿದಾಗಲೆ ಇನ್ನಷ್ಟು
ಗಟ್ಟಿ ಚಿನ್ನ
*
ಕೌತುಕ
ನಿಶೆಗೆ ಯಾವ ಬೇಲಿಯಿತ್ತು?
ಬೆಳಕಿಗಾವ ಗೋಡೆ?
ಬೇಲಿಯಾಚೆ ಬೆಳಕು ತೂರಿ ಗೋಡೆ ಹೊಳೆಯುತಿತ್ತು
ಗಾಳಿಗಾವ ಕೋಟೆಯಿತ್ತು?
ಉಸುರಿಗಾವ ಅರಸ?
ಪಾಲು ಹಂಚಿ ಗಾಳಿ ತಾನು ಮಾಯವಾಯಿತು.
ನೀರಿಗೆಂತ ಮಡಿ?
ಭೂಮಿಗೆಂತ ಮುಟ್ಟು?
ಅದೇ ನೀರು ಭೂಮಿ ಮೇಲೆ ತೊಟ್ಟಿಲ ಕಟ್ಟಿತ್ತು.
ನಗುವಿಗಾವ ಭಾಷೆ
ಅಳುವಿಗಾವ ಭಾಷ್ಯ
ಅಕ್ಷರಗಳ ಹಂಗಿರದ ಭಾವ ಮಹಾಕಾವ್ಯ.
ಹಸಿವಿಗಾವ ಜಾತಿಯಿತ್ತು?
ಅನ್ನಕಾವ ಧರ್ಮ?
ಜಾತಿ ಧರ್ಮ ಮೀರಿ ಕರುಣೆ ಮೆರೆಯುತಲಿತ್ತು.
-ಸುಮತಿ ಕೃಷ್ಣಮೂರ್ತಿ
ಸುಂದರ ಕವನಗಳು.