ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ದಿಟ್ಟ ಸಿನಿಮಾ – ಕಾತಲ್‌ ದ ಕೋರ್: ಚಂದ್ರಪ್ರಭ ಕಠಾರಿ

ಪ್ರತಿಭಾವಂತ ಮಲಯಾಳಮ್ ನಿರ್ದೇಶಕ  ಜೊ ಬೇಬಿ –  2021ರಲ್ಲಿ ತೆರೆಗೆ ತಂದ ʼದ ಗ್ರೇಟ್‌ ಇಂಡಿಯನ್‌ ಕಿಚನ್‌ʼ ಸಿನಿಮಾಕ್ಕೂ ಮುಂಚೆ ರೆಂಡು ಪೆಣ್‌ ಕುಟ್ಟಿಕಲ್‌, ಕುಂಜು ದೇವಮ್‌, ಕಿಲೊಮೀಟರ್‌ ಕಿಲೋಮೀಟರ್ ಮತ್ತು ನಂತರ ಕೂಡ ಹಲವು ಸಿನಿಮಾಗಳನ್ನು ಫ್ರೀಡಮ್‌ ಫೈಟ್‌, ಶ್ರೀಧನ್ಯ ಕ್ಯಾಟೇರಿಂಗ್‌ ಸರ್ವೀಸ್ ನಿರ್ದೇಶಿಸಿದ್ದರೂ ʼದ ಗ್ರೆಟ್‌ ಇಂಡಿಯನ್‌ ಕಿಚನ್‌ʼ ಅವರಿಗೆ ಬಹು ಖ್ಯಾತಿಯನ್ನು ತಂದು ಕೊಟ್ಟ ಸ್ತ್ರೀಸಂವೇದನೆಯ ಸಿನಿಮಾ.  ಗೃಹಿಣಿಯನ್ನು ಅಡುಗೆಮನೆಗೆ ಸೀಮಿತಗೊಳಿಸಿ, ಅವಳ ಸ್ವಾತಂತ್ರ್ಯ, ಅಸ್ತಿತ್ವವನ್ನು ಕಸಿದುಕೊಂಡ ಪುರುಷ ಯಜಮಾನಿಕೆಯನ್ನು ಪ್ರಶ್ನಿಸುವ ವಿಶಿಷ್ಟ ಬಗೆಯ ಸರಳ ನಿರೂಪಣೆಯ  ಸಿನಿಮಾವಾಗಿ‌  ಬಹಳ ಹೆಸರು ಗಳಿಸಿತ್ತು ಮತ್ತು ಬಹು ಚರ್ಚಿತವಾಗಿತ್ತು. ಆ ಸಿನಿಮಾಕ್ಕೆ ಕೇರಳ ಸರ್ಕಾರದ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಚಿತ್ರಕತೆ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿತ್ತು.

ಈಗ ಮತ್ತೆ ನಿರ್ದೇಶಕ ಜೊ ಬೇಬಿ ʼ ಕಾತಲ್‌ – ದ ಕೋರ್‌ʼ ಸಿನಿಮಾದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತ,  ಸಿನಿಮಾಸಕ್ತರ ವಲಯದಲ್ಲಿ ಹಲವು ಆಯಾಮಗಳಲ್ಲಿ ಚರ್ಚಿತವಾಗುತ್ತಿದೆ. ಅದಕ್ಕೆ ಕಾತಲ್‌ – ದ ಕೋರ್ ಸಿನಿಮಾ ಗೇ (ಸಲಿಂಗ) ಕಥಾವಸ್ತು ಹೊಂದಿರುವುದು ಒಂದು ಕಾರಣವಾದರೆ, ಮಮ್ಮುಟಿಯಂಥ ಮೇರು ಪ್ರತಿಭೆಯ ಕಲಾವಿದ, ಸೂಪರ್‌ ಸ್ಟಾರ್‌ ಮುಖ್ಯಪಾತ್ರದಲ್ಲಿರುವುದಲ್ಲದೇ, ಆ ಸಿನಿಮಾವನ್ನು ನಿರ್ಮಾಣ ಮಾಡಿರುವುದು. ಇಪ್ಪತ್ತೊಂದನೇ ಶತಮಾನದ ಈ ಕಾಲಘಟ್ಟದಲ್ಲಿ ಕೂಡ ಮಡಿವಂತ ಸಮಾಜ ಮತ್ತು ನೆಲದ ಕಾನೂನು ಕೂಡ ಮಾನವೀಯತೆ ನೆಲೆಯಲ್ಲಿ ಎಲ್‌ ಜಿ ಬಿಟಿ ಕ್ಯು ಸಮುದಾಯವನ್ನು ಮುಖ್ಯವಾಹಿನಿಗೆ ಬಿಟ್ಟುಕೊಳ್ಳದಿರುವಾಗ, ಆ ಸಮುದಾಯದ ವಿವಾಹಿತನ ಕತೆಯನ್ನು ತೆರೆಗೆ ತರುವುದು ಮತ್ತು ಸಿನಿಮಾ ಯಶಸ್ವಿಯಾಗುವುದು ಊಹೆಗೂ ನಿಲುಕದ ಮಾತು. ಇಂಥ ಪ್ರಯತ್ನವನ್ನು ಇದಕ್ಕೂ ಮೊದಲೇ ಜೊ ಬೇಬಿ ತಮ್ಮ ಸಿನಿಮಾ ವಿದ್ಯಾರ್ಥಿ ದೆಸೆಯ ಕೊನೆಯ ವರ್ಷದಲ್ಲೇ ಮಾಡಿದ್ದರು. 2007ರಲ್ಲಿ ʼಸಿಕ್ರೇಟ್‌ ಮೈಂಡ್ಸ್ʼ‌ ಎಂಬ ಸಲಿಂಗಿಗಳ ಸಂಬಂಧ ಕುರಿತಾದ ಕಿರುಚಿತ್ರವನ್ನು ತಯಾರಿಸಿದ್ದರು. ಕಥಾವಸ್ತುವಿನ ಕಾರಣಕ್ಕಾಗಿಯೇ ಅವರನ್ನು ಕಾಲೇಜಿನಿಂದ ಉಚ್ಚಾಟಿಸಲಾಗಿತ್ತು. 

ಕಾತಲ್‌ – ದ ಕೋರ್‌ ಸಿನಿಮಾದ ಕಥಾವಸ್ತು ಸರಳವಾಗಿದೆ. ಇಪ್ಪತ್ತು ವರ್ಷಗಳ ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿ, ದಂಪತಿಗಳಿಬ್ಬರಲ್ಲೂ ದೈನಂದಿನ ಬದುಕು ಸಾಗಿಸಲು ಬೇಕಾದ ಹೊಂದಾಣಿಕೆ, ಸಹನೆ ಇದ್ದು, ಗುರುತರವಾದ ಭಿನ್ನಾಭಿಪ್ರಾಯ ಇಲ್ಲದಿದ್ದರೂ, ಗೃಹಿಣಿಯಾಗಿ ಇಷ್ಟು ವರ್ಷ ತಾಳಿದವಳು “ಇಷ್ಟು ಸಾಕಾಯಿತು, ಇನ್ನು ಮುಂದೆ ಬಾಳಲಾರೆ” ಎಂದು ವಿಚ್ಚೇದನಕ್ಕಾಗಿ ನ್ಯಾಯಾಲಯವನ್ನು ಕೋರುತ್ತಾಳೆ. ಹರೆಯಕ್ಕೆ ಬರುವ ಮಗಳಿದ್ದ ತಾಯಿ ಹಾಗೆ ಕೋರ್ಟಿನ ಮೆಟ್ಟಿಲೇರಿ ದಾಂಪತ್ಯವನ್ನು ಮುರಿದುಕೊಳ್ಳಲು ಇದ್ದ ಕಾರಣಗಳೇನು? ಸಾಮಾನ್ಯವಾಗಿ ಇರುವ ಡೊಮೆಸ್ಟಿಕ್‌ ವಾಯಲೆನ್ಸ್‌ ಕಾರಣವಾಗಿರದೆ ಯಾವ ಉಸಿರುಗಟ್ಟಿಸುವ ಸಂಗತಿಗಳನ್ನು ಮುಂದಿಟ್ಟು ವಿಚ್ಚೇದನವನ್ನು ಆಕೆ ಕೋರುತ್ತಿದ್ದಾಳೆ? ಅದನ್ನು ಕೋರ್ಟ್‌ ಮಾನ್ಯ ಮಾಡಿ ಅವಳ ಮನವಿಯನ್ನು ಪುರಸ್ಕರಿಸುವುದೇ? ಎಂಬುದು ಸಿನಿಮಾ ತಿರುಳು.

ಎಲ್‌ ಜಿ ಬಿಟಿ ಕ್ಯು ಸಮುದಾಯದ ಬಿಕ್ಕಟ್ಟುಗಳು ಸಂಕೀರ್ಣವಾದವು.  ವ್ಯಕ್ತಿಯಲ್ಲಿನೈಸರ್ಗಿಕವಾಗಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳಿಂದ ಆತ/ಆಕೆ ತಾನು ಎಲ್‌ ಜಿ ಬಿಟಿ ಕ್ಯು ನಲ್ಲಿ ಯಾವ ಗುಂಪಿಗೆ ಸೇರುತ್ತೇನೆ ಎಂದು ಗುರುತಿಸಿಕೊಳ್ಳುವುದೇ ಕ್ಲಿಷ್ಟಕರವಾಗಿರುತ್ತದೆ. ಈ ಸಮಸ್ಯೆ ಆ ಸಮುದಾಯದ ವೈಯಕ್ತಿಕ ನೆಲೆಗಟ್ಟಿನದ್ದು. ಆದರೆ, ಮಡಿವಂತ ಸಮಾಜಕ್ಕೂ ಒಂದು ಸಮಸ್ಯೆ ಇದೆ. ಪ್ರಕೃತಿ ಸಹಜವಾದ ವಿಜ್ಞಾನವೂ ಒಪ್ಪಿಕೊಂಡ ಸಲಿಂಗ ಸಂಬಂಧವನ್ನು, ಅದು ಹೆಣ್ಣುಗಂಡಿನಷ್ಟೇ ಸಹಜವಾದ ಆಕರ್ಷಣೆಯ ಪ್ರಕ್ರಿಯೆ ಎಂದು ಅದು ಒಪ್ಪುವುದಿಲ್ಲ.

ಹಾಗಾಗಿ ಸಮಾಜ ತನ್ನನ್ನು ಎಲ್ಲಿ ಪರಕೀಯನನ್ನಾಗಿ ಕಾಣುತ್ತದೊ ಎಂದು ಅನ್ಯಲಿಂಗಿಗಳು ತಮ್ಮ ಪರಿಸ್ಥಿತಿಯನ್ನು ಧೈರ್ಯದಿಂದ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದ್ದರಿಂದ ಅನ್ಯಲಿಂಗಿ ಅಲ್ಲದ ವ್ಯಕ್ತಿಯೊಬ್ಬ ಆ ಸಮುದಾಯದ ಕತೆಯನ್ನು ಕಲೆಯ ಮೂಲಕ ಅಭಿವ್ಯಕ್ತಿಸುವಾಗ ಅವನಿಗೇ ಆದ ಮಿತಿಗಳಿರುತ್ತದೆ.

ಬದುಕಲ್ಲಿ ತಾನು ಅನ್ಯಲಿಂಗಿ ಎಂದು ಅರಿವುಂಟಾದಾಗ ಆಗಬಹುದಾದ ಮಾನಸಿಕ ತುಮುಲಗಳನ್ನು ಅವರಷ್ಟೇ ಹೇಳಬಲ್ಲರು. ಇತರರ ಅನುಭವಕ್ಕೆ ದಕ್ಕುವುದು ಅಸಾಧ್ಯದ ಮಾತು ಎಂಬುದು ಒಪ್ಪತಕ್ಕ ವಾದ.  

ಎಲ್‌ ಜಿ ಬಿಟಿ ಕ್ಯು ಸಂವೇದನೆಯ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಭಾವ ಸ್ಪಂದನೆಗಿಂತ ಹೆಚ್ಚಾಗಿ ದೈಹಿಕ ವಾಂಛೆ ಹೆಚ್ಚಾಗಿ ಕಾಣುತ್ತದೆ. ಅದನ್ನು ನಿರಾಕರಿಸಲಾಗದು ಎಂಬುದು ಸರಿಯಾದ ಮಾತಾದರೂ,  ಸಾಮಾನ್ಯರಿಗೆ ಕಾಣದ ಆ ಸಮುದಾಯದ ಲೋಕವನ್ನು ಒಂದೇ ದೃಷ್ಟಿಕೋನದಲ್ಲಿ ಗ್ರಹಿಸುವುದು ಕೂಡ ಅಭಿವ್ಯಕ್ತಿಯ ಪೂರ್ಣತೆಯನ್ನು ಸಾಧಿಸಿದಂತೆ ಆಗುವುದಿಲ್ಲ.

ಇಷ್ಟೆಲ್ಲ ಪೀಠಿಕೆಯ ಉದ್ದೇಶವೆಂದರೆ – ಜೊ ಬೇಬಿ ಯ ಕಾತಲ್‌ ದ ಕೋರ್‌ ಸಿನಿಮಾದ ಚಿತ್ರಕತೆಯಲ್ಲಿ ಅಂತಹ ಯಾವುದೇ ಮುಖ್ಯವಾಹಿನಿಗೆ ಅರಿವಿರದ ಸಂಗತಿಗಳನ್ನು ಮುಟ್ಟುವುದೇ ಇಲ್ಲ. ಅನ್ಯಲಿಂಗಿ ಸಿನಿಮಾದಲ್ಲಿ ಸಾಮಾನ್ಯವಾಗಿ ಆಳವಡಿಸಿದ ದೃಶ್ಯಗಳನ್ನು ನೆನಪಿಸಿಕೊಂಡು ಉದಾಹರಿಸುವುದಾದರೆ – ಅನ್ಯಲಿಂಗಿಗಳ ಬಾಲ್ಯದ ಚಿತ್ರಣಗಳು, ಅಪಮಾನಗಳು, ಸಲಿಂಗ ವ್ಯಕ್ತಿಗಳ ಖಾಸಗಿ ಲೈಂಗಿಕ ಸನ್ನಿವೇಶದ     ದೃಶ್ಯಗಳು ಕಾತಲ್‌ ನಲ್ಲಿ ಇಲ್ಲ. ಇದು ಸಿನಿಮಾಕ್ಕೆ ಗೊಂದಲರಹಿತವಾದ ಆವರಣವನ್ನು ಒದಗಿಸುತ್ತದೆ.

ಮ್ಯಾಥ್ಯು ದೇವಸಿ (ಮಮ್ಮುಟಿ) ಜೊತೆ  ಸಂಗಾತಿ ತಂಕನ್ (ಸುದೀ ಕೊಳಿಕೊಡ್) ಜೊತೆ ಇದ್ದಿರಬಹುದಾದ ಭಾವನಾತ್ಮಕ, ದೈಹಿಕ ಸಂಬಂಧವನ್ನು ಜೊ ಬೇಬಿ ನೇರವಾಗಿ ದೃಶ್ಯಕಟ್ಟುಗಳಲ್ಲಿ ಚಿತ್ರಿಸುವುದಿಲ್ಲ. ಬದಲಿಗೆ ಅವರುಗಳು ಎದುರುಬದುರಾಗುವ ಕೆಲವು ಸನ್ನಿವೇಶಗಳಲ್ಲಿ ಕೇವಲ ಕಣ್ಣೋಟಗಳ ಮಾತುಗಳು, ಕದ್ದು ಪರಸ್ಪರ ನೋಟ ವಿನಿಮಯದಲ್ಲಿ ಪ್ರಕಟವಾಗುವ ಭಯಮಿಶ್ರಿತ ಮುಖಚರ್ಯೆಗಳನ್ನು ಕ್ಯಾಮೆರಾ ಕಣ್ಣಿಂದ ಸೆರೆ ಹಿಡಿಯುತ್ತಾರೆ. ಆ ಮೂಲಕ ಅವರಲ್ಲಿ ಇದ್ದಿರಬಹುದಾದ ಅನುಬಂಧವನ್ನು ನೋಡುಗರ ಮನದಲ್ಲಿ ಮೂಡಿಸುತ್ತಾರೆ. ಊರಿನ ಜನರು ಆಡುವ ಸಂಭಾಷಣೆಯ ಮೂಲಕ ದಾಟಿಸುತ್ತಾರೆ.

ಈ ಮೇಲಿನ ಮಾತಗಳನ್ನು ಪುಷ್ಟೀಕರಿಸಲು ಮ್ಯಾಥ್ಯು ಪತ್ನಿಒಮನಾಳ (ಜ್ಯೋತಿಕಾ) ದೂರನ್ನೂ ಗಮನಿಸಬಹುದು. ಮದುವೆಯಾದ ಇಪ್ಪತ್ತು ವರುಷಗಳಲ್ಲಿ ತನ್ನಗಂಡ ಸಲಿಂಗಿ ಎಂದು ಆಕೆಯ ಅನುಭವಕ್ಕೆ ಬಂದಿದೆ. ನ್ಯಾಯಾಲಯದಲ್ಲಿ ವಿಚ್ಚೇದನ ಕೋರುವಾಗ ಅದನ್ನು ಉಲ್ಲೇಖಿಸಿದ್ದಾಳೆ. ಆದರೆ, ನೆನಪಿನಿಂದಲೇ ಆಗಲಿ ನ್ಯಾಯಾಲಯಕ್ಕೆ ಉತ್ತರಿಸುವಾಗಲೇ ಆಗಲಿ ಗಂಡನ ಸಲಿಂಗತನವನ್ನು ತಾನು ಕಂಡುಕೊಂಡ ಬಗೆಯ ಬಗ್ಗೆ ದಾಖಲಿಸುವುದಿಲ್ಲ. ಅಂದರೆ ನಿರ್ದೇಶಕರು ಗಂಡನ ಸಲಿಂಗ ಸಂಬಂಧವನ್ನು ದೃಶ್ಯವಾಗಿಸುವ ಸಾಧ್ಯತೆಯನ್ನು ಬೇಕಂತಲೇ ಕೈಬಿಟ್ಟಿದ್ದಾರೆ.

ಯಾವ ಭೂತಕಾಲದ ನೆನಪುಗಳಿಲ್ಲದೆ ವರ್ತಮಾನದ ಘಟನೆಗಳಿಗೆ ಮಾತ್ರ ಸೀಮಿತವಾಗುವ          ದೃಶ್ಯಗಳ ಸಿನಿಮಾದಲ್ಲಿ, ವಿಚ್ಚೇದನದ ಪಾಟೀ ಸವಾಲಿನ ಕೋರ್ಟ್‌ ಸನ್ನಿವೇಶಗಳು ಸಾಗುತ್ತವೆ. ವಿಚ್ಚೇದನಕ್ಕೆ ಒಮನಾಳು ಕೊಟ್ಟಿರುವ ಕಾರಣ ಮ್ಯಾಥ್ಯುನ ಸಂಗಲಿತನವಲ್ಲ(ಇದು ಸಿನಿಮಾದ ಘನ ಉದ್ದೇಶವನ್ನು ಎತ್ತಿಹಿಡಿಯುತ್ತದೆ). ಅದಕ್ಕೆ ಅವಳ ಅಭ್ಯಂತರವಿಲ್ಲ.

ಕುಟುಂಬವನ್ನು ಗೃಹಿಣಿಯಾಗಿ ಕರ್ತವ್ಯದಂತೆ  ನಿರ್ವಹಿಸುತ್ತಲೇ  ಒಂದು ಹೆಣ್ಣಾಗಿ ಗಂಡನಿಂದ ಸಹಜವಾಗಿ ಬಯಸುವ ಪ್ರೀತಿ ಮಾತ್ರವಲ್ಲದೆ ಲೈಂಗಿಕ ಕಾಮನೆಯು ಒಮನಾಳಿಗೆ ಇದೆ. ಆದರೆ, ಗಂಡನಿಗೆ ಅವನದೇ ಸಮಸ್ಯೆಗಳಿಂದ ಅದನ್ನು ಪೂರೈಸಲು ಆಗುತ್ತಿಲ್ಲ ಎಂಬುದು ಕೌರ್ಯ. ಇಪ್ಪತ್ತು ವರುಷಗಳಲ್ಲಿ ಕೇವಲ ನಾಲ್ಕು ಬಾರಿ ದಂಪತಿಗಳು ಕೂಡಿದ್ದಾರೆ. ಅದೂ ಹೆಂಡತಿಯ ಕೋರಿಕೆ ಮೇರೆಗೆ. ಈಗವಳಿಗೆ ಸಾಕಾಗಿದೆ. ಆ ದಾಂಪತ್ಯ ಬಂಧನದಿಂದ ಮುಕ್ತಿ ಪಡೆಯಬೇಕಿದೆ. ಆ ಕಾರಣವಾಗಿ ನ್ಯಾಯಾಲಯಕ್ಕೆ ಬಂದಿದ್ದಾಳೆ.

ಇಲ್ಲಿ ಪ್ರಸ್ತುತವಲ್ಲದಿದ್ದರೂ ಒಂದು ಪ್ರಶ್ನೆಯನ್ನು ಎತ್ತಬಹುದು. ವಿವಾಹಿತ ಮ್ಯಾಥ್ಯು ಒಮ್ಮೆ ಗಂಡಲ್ಲದೆ ಹೆಣ್ಣಿನೊಬ್ಬಳೊಂದಿಗೆ ಸಂಬಂಧದಲ್ಲಿದ್ದರೆ ಅದು ಒಮನಾಳಿಗೆ ಒಪ್ಪಿಗೆಯಾಗುತ್ತಿತೇ? ಸಲಿಂಗ ಸಂಬಂಧ ಹೊಂದುವುದು ಕೂಡ ವಿವಾಹೇತರ ಸಂಬಂಧವಾಗಿ ಅನೈತಿಕವಲ್ಲವೇ? ಈ ಪ್ರಶ್ನೆಗಳು ಉದ್ಭವಿಸುವ ಸಾಧ್ಯತೆಯನ್ನು ಯೋಚಿಸಿಯೇ ಜೊ ಬೇಬಿ ಬುದ್ಧಿವಂತಿಕೆಯಿಂದ ಸಿನಿಮಾವನ್ನು ಕಟ್ಟಿದ್ದಾರೆ. ಒಮನಾಳಿಗೆ ಗಂಡ ಸಲಿಂಗಿ ಅಥವಾ ವಿವಾಹೇತರ ಸಂಬಂಧವಿದೆ ಎನ್ನುವುದು ಮುಖ್ಯ ವಿಷಯವೇ ಅಲ್ಲ. ಬದಲಿಗೆ ಒಂದು ಹೆಣ್ಣಾಗಿ ಸಹಜವಾಗಿ ದಕ್ಕಬೇಕಾದ ಲೈಂಗಿಕ ಸಂಪರ್ಕದಿಂದ ವಂಚಿತಳಾಗಿರುವುದನ್ನು ಪ್ರಶ್ನಿಸುತ್ತಾಳೆ.  

ಕೆಲವು  ದೃಶ್ಯಗಳನ್ನು ನಿರ್ದೇಶಕರು ಕಟ್ಟಿರುವ ಪರಿ  ನೋಡುಗರನ್ನು ಭಾವುಕರನ್ನಾಗಿಸುತ್ತದೆ. ತನ್ನ  ಮಗ ಬಾಲ್ಯದಿಂದಲೇ ಸಲಿಂಗಿ ಎಂದು ತಿಳಿದೂ, ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದು ನಂಬಿಸಿ ಮಗನನ್ನು ಮದುವೆಗೆ ಬಲವಂತವಾಗಿ ಒಪ್ಪಿಸಿದ ತಪ್ಪಿಗೆ ಪಶ್ಚಾತ್ತಾಪದಿಂದ ಗೋಳಿಡುವ ತಂದೆ ಮತ್ತು ಮಗನ ಸಂಭಾಷಣೆ ಆರ್ದ್ರತೆಯಿಂದ ಕೂಡಿದೆ. ಹಾಗೆ ಸಂದರ್ಭಕ್ಕೆ ಕಟ್ಟುಬಿದ್ದು ಮದುವೆಯಾಗಿ, ನೋಯುತ್ತ ಬದುಕನ್ನು ಸವೆಸುವಂತೆ ಮಾಡಿದ್ದಕ್ಕೆ ಒಮನಾಳಲ್ಲಿ ಮ್ಯಾಥ್ಯು ಕ್ಷಮೆಯಾಚಿಸುವುದು ಸಿನಿಮಾದ ಕ್ಲೈಮಾಕ್ಸ್‌ ಆಗಿ ಕಾಡುವ ಸನ್ನಿವೇಶಗಳಾಗಿವೆ.

ಇವೆರೆಡು ದೃಶ್ಯಗಳಿಗಿಂತ ಹೆಚ್ಚು ಸಶಕ್ತವಾಗಿರುವುದು ಒಮನಾಳು ಇಬ್ಬರೂ ದೂರವಾಗುವ ಮುಂಚೆ ಕೊನೆಯ ಬಾರಿ ತನ್ನೊಂದಿಗೆ ಮಲಗುತ್ತೀಯ ಎಂದು ಕೇಳಿಕೊಳ್ಳುವುದು, ಆ ಅಖಂಡ ಪ್ರೀತಿಯ ಅಭಿವ್ಯಕ್ತಿಗೆ ಕಡು ನೊಂದ ಮಾಥ್ಯು “ಓ…ಕಡವುಳೇ (ಓ..ದೇವರೇ) ಎಂದು ಉದ್ಗರಿಸುವುದು ಮರೆಯಲಾಗದ  ಅದ್ಭುತ ದೃಶ್ಯಕಟ್ಟಾಗಿದೆ.

ಸಮಾಜದಲ್ಲಿ ಸರಳ, ಸಭ್ಯ ವ್ಯಕ್ತಿಯಾಗಿ ಮ್ಯಾಥ್ಯುವನ್ನೇ ಗ್ರಾಮ ಪಂಚಾಯಿತಿಯ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರು ಕೇಳಿಕೊಳ್ಳುವುದು. ಅವನು ಒಪ್ಪಿ ಚುನಾವಣೆಗೆ ನಿಲ್ಲುವ ಸನ್ನಿವೇಶಗಳು ಸಿನಿಮಾಕ್ಕೆ ಪೂರಕವಾಗಿದೆ. ಆದರೆ, ಕೋರ್ಟಿನ ತೀರ್ಪು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಷಯ ಅಷ್ಟು ಆಸಕ್ತಿ ಮೂಡಿಸುವುದಿಲ್ಲ. ಬದಲಿಗೆ, ಒಮನಾಳು ಸ್ವಾತಂತ್ರ್ಯಗೊಂಡು ಮುಂದೆ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ? ಹಾಗೆಯೇ ಒಮನಾಳೊಂದಿಗೆ ಆತ್ಮೀಯವಾಗಿದ್ದ ಮ್ಯಾಥ್ಯುನ ಮುಂದಿನ ಬದುಕಿನ ಪಯಣ ಹೇಗೆ? ಎಂಬ ಕುತೂಹಲ ಹುಟ್ಟಿಸುತ್ತದೆ.

ಜೊ ಬೇಬಿ ಪ್ರೇಕ್ಷಕರನ್ನು ನಿರಾಶೆಗೊಳಿಸುವುದಿಲ್ಲ. ಹೊಸ ಬಾಳ ಸಂಗಾತಿಯನ್ನು ಭೇಟಿಯಾಗಲು ಒಮನಾ ಆತಂಕದಿಂದ ಕಾಯುತ್ತ ಕುಳಿತಿರುತ್ತಾಳೆ. ಅವಳೊಂದಿಗೆ ಮ್ಯಾಥ್ಯು ಕೂಡ ಇರುತ್ತಾನೆ. ಮುಂದಿನ  ದೃಶ್ಯದಲ್ಲಿ ಸಲಿಂಗ ಸಂಗಾತಿ ತಂಕನ್‌ ಕಾರಿನ ಡ್ರೈವರ್‌ ಸೀಟಿನಲ್ಲಿ ಕಾಯುತ್ತ ಕೂತಿದ್ದಾನೆ. ಮ್ಯಾಥ್ಯು ಹತ್ತಿ ಕಾರು ಹೊರಟು ಶೂನ್ಯದಲ್ಲಿ ಲೀನವಾಗುತ್ತದೆ. ಮ್ಯಾಥ್ಯು ಚುನಾವಣೆಲೀ ಗೆದ್ದ ಪೋಸ್ಟರ್‌ ಮೇಲೆ ಕ್ಯಾಮೆರಾ ಪ್ಯಾನ್‌ ಆಗುತ್ತದೆ. ಅದರ ಹಿಂದೆ ಆಕಾಶದಲ್ಲಿ ಸುಂದರವಾದ ಕಾಮನಬಿಲ್ಲು ಮೂಡಿರುತ್ತದೆ.

ಮಮ್ಮುಟಿ ಮತ್ತು ಜ್ಯೋತಿಕಾ – ದಂಪತಿಗಳಾಗಿ ಬಹಳ ಕಾಲ ನೆನಪಲ್ಲಿ ಉಳಿಯುವ ಅಭಿನಯ ನೀಡಿದ್ದಾರೆ. ಹಾಗೆ ಉಳಿದ ಪಾತ್ರಗಳ ಸಮಯೋಚಿತ ನಟನೆ ಇದೆ.

ಕೊನೆಯಲ್ಲಿ ಸಂದೇಹ ಕಾಡುವುದು ಕಾತಲ್‌ ದ ಕೋರ್‌ – ಎಲ್‌ ಜಿ ಬಿಟಿ ಕ್ಯು ಸಂವೇದನೆಯ ಸಿನಿಮಾವೋ ಅಥವಾ ಮಹಿಳಾ ನೆಲೆಯಿಂದ ಕಟ್ಟಿದ ಸಿನಿಮಾವೋ ಎಂದು. ಸಲಿಂಗ ಪ್ರೇಮದ ಅಭಿವ್ಯಕ್ತಿಯು ಸೂಕ್ಷ್ಮವಾಗಿ ಪ್ರಸ್ತಾಪವಾದರೂ ಅದು ಸಿನಿಮಾದ ಪ್ರಧಾನ ವಿಷಯವೇ ಆಗಿದೆ. ಆದರೆ, ಇಡೀ ಸಿನಿಮಾ ಕುಟುಂಬವೆಂಬ ಸಂಸ್ಥೆಯಲ್ಲಿ ಹೆಣ್ಣು ಎಷ್ಟು ಹೊಂದಿಕೊಳ್ಳಬೇಕು? ಅದಕ್ಕೆ ಅವಳು ತನ್ನತನವನ್ನು ಎಷ್ಟು ತ್ಯಜಿಸಬೇಕು? ಎಂಬಂತಹ ಮಹಿಳೆಯ ಸ್ವಾತಂತ್ರ್ಯ, ಘನತೆಯ ಪ್ರಶ್ನೆಗಳನ್ನು ಸಿನಿಮಾ ಎತ್ತುತ್ತದೆ. ಅಲ್ಲದೆ,  ಅದಕ್ಕೆ ಸಮಂಜಸವಾದ ವಿಮೋಚನೆಯ ದಾರಿಯನ್ನು ತೋರುತ್ತದೆ. ಹಾಗಾಗಿ ಇದು ಮಹಿಳಾ ಸಂವೇದನೆಯ  ಸಿನಿಮಾವೆಂದೇ ಹೇಳಬೇಕಾಗುತ್ತೆ.

ಚಂದ್ರಪ್ರಭ ಕಠಾರಿ

cpkatari@yahoo.com

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x