ಪ್ರತಿ ಸಾವಿನ ಹಿಂದೆ: ಅಶ್ಫಾಕ್ ಪೀರಜಾದೆ

ಸಮೃದ್ಧವಾದ ಜಾನುವಾರು ಸಂಪತ್ತು ಹೊಂದಿದ್ದ ಜನಪದ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿತ್ತು. ದನಕರುಗಳು ರಾಶಿ ರಾಶಿಯಾಗಿ ಉಸಿರು ಚೆಲ್ಲುತ್ತಿದ್ದವು. ಮೃತ ದೇಹಗಳನ್ನು ಜೇಸಿಬಿ ಬಳಸಿ ಭೂಮಿಯೊಡಲಿಗೆ ನೂಕಲಾಗುತ್ತಿತ್ತು. ಪ್ರಾಣಿಗಳ ಮೂಕ ರೋಧನ ಆ ಭಗವಂತನಿಗೂ ಕೇಳಿಸದಾಗಿ ಆ ದೇವರು ಎನ್ನುವ ಸೃಷ್ಟಿಯೇ ಸುಳ್ಳು ಎನ್ನುವ ಕಲ್ಪನೆ ರೈತಾಪಿ ಜನರಲ್ಲಿ ಮೂಡುವಂತಾಗಿತ್ತು. ಇಂಥ ಒಂದು ಭಯಾನಕ ದುಸ್ಥಿತಿ ಹಿಂದೆಂದೂ ಕಂಡು ಬಂದಿರಲಿಲ್ಲ. ಇಡೀ ರೈತ ಸಮುದಾಯ ಆತಂಕದ ಸ್ಥಿತಿಯಲ್ಲಿ ಕಣ್ಣೀರು ಸುರಿಸುತ್ತ ಕಂಗಾಲಾಗಿ ಕುಳಿತಿದ್ದರೆ ಪಶು ವೈದ್ಯ ಲೋಕ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಕೈಚೆಲ್ಲಿ ಕುಳಿತ್ತಿತ್ತು. ಎಲ್ಲರೂ ಬಲ್ಲಂತೆ ರೋಗಢಣುವಿನಿಂದ ಬರುವ ರೋಗಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಎನ್ನುವುದು ಇರುವದಿಲ್ಲ.ಆದರೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಮೂಲಕ, ಕೆಲವು ಸ್ವಚ್ಚತಾ ಕ್ರಮಗಳು ಅನುಸರಿಸುವ ಮೂಲಕ ರೋಗ ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು. ಮುಂಚಿತವಾಗಿ ಜಾನುವಾರಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗವನ್ನು ತಡೆಯಬಹುದಾಗಿತ್ತು ನಿಜ, ಆದರೆ ಈ ರೋಗ ನಮ್ಮ ದೇಶದಲ್ಲಿ ಕಾಣಿಸಿಕೊಂಡಿದ್ದೆ ಇತ್ತೀಚೆಗಷ್ಟೆ, ಹೀಗಾಗಿ ಈ ರೋಗ ನಿಯಂತ್ರಿಸುವ ಲಸಿಕೆ ಇನ್ನೂ ರವರೆಗೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಪ್ರಯತ್ನ ಇನ್ನೂ ಸಫಲವಾಗಿಲ್ಲ. ಪ್ರಯತ್ನ ಸಫಲವಾಗುವರೆಗೆ ಅಂತಾ ಸಾವಿಗೀಡಾದ ಜಾನುವಾರುಗಳಿಗೆ ಒಂದಿಷ್ಟು ಪರಿಹಾರ ಕೂಡ ಸರ್ಕಾರ ಘೋಷಿಸಿದೆ. ಆದರೆ ಕಳೆದ ಎರಡ್ಮೂರು ತಿಂಗಳಿಂದ ಈ ರೋಗದಿಂದ ಸಾಯುವ ದನಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಪಶು ವೈದ್ಯ ಇಲಾಖೆ, ಪಶು ವೈದ್ಯರು ತಮ್ಮ ಶಕ್ತಿ ಮೀರಿ ಮೂಕ ಪ್ರಾಣಿಗಳನ್ನು ಉಳಿಸಿಕೊಳ್ಳುವ ಪ್ರಯತ್ನಿಸುತ್ತಿದ್ದಾರೆ. ಆದರೆ ರೋಗ ಲಕ್ಷಣಗಳು ಆಧರಿಸಿ ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಬೆರಳೆಣಿಕೆಯಷ್ಟು ಪ್ರಾಣಿಗಳು ಸ್ಪಂದಿಸುತ್ತಾಯಿವೆ. ಆದರೆ ಬಹುತೇಕ ಜಾನುವಾರುಗಳು ಕಣ್ಣಿಗೆ ಕಾಣದ ಈ ರೋಗಾಣುವಿನ ಹೊಡೆತ್ತಕ್ಕೆ ನರಳಿ ನರಳಿ ಕೊನೆಗೆ ಕೊನೆಯುಸಿರು ಬಿಡುತ್ತಿವೆ. ದಿನೇ ದಿನೇ ರೈತರ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಹಲವರು ಹಲವಾರು ಉದ್ದೇಶಕ್ಕಾಗಿ ಕೃಷಿ ಕೆಲಸಕ್ಕೋ, ಹೈನುಗಾರಿಕೆಗೋ ಅಂತಾ ಸಾಕಿಕೊಂಡು ಜಾನುವಾರುಗಳು ತಮ್ಮ ಕಣ್ಣು ಮುಂದೆಯೇ ಹೀಗೆ ನರಳಿ ನರಳಿ ಸತ್ತು ಹೋಗುತ್ತಿರುವುದು ಕಂಡೂ ಏನೂ ಮಾಡಲಾಗದ ಅಸಹಾಯಕತೆಯಿಂದ ರೈತರು ಕಂಗಾಲಾಗಿದ್ದಾರೆ.

ಉಳುಮೆಗೆ ಅಂತಾ ಸಾಕಿಕೊಂಡ ಬೆಲೆಬಾಳುವ ಎತ್ತುಗಳು, ಹಾಲು ಹೈನಿಗೆ ಅಂತಾ ಸಾಕಿಕೊಂಡ ಹಸುಗಳು.. ಮಗಳ ಮದುವೆಗೋ ಮಗನ ಮದವೆಗೋ, ತಮ್ಮ ದೈನಂದಿನ ಖರ್ಚು ವೆಚ್ಚಗಳಿಗೆ, ಮಕ್ಕಳ ಶಿಕ್ಷಣದ ಖರ್ಚು ಸರಿದೂಗಿಸಲು, ತಮ್ಮ ವೈದ್ಯಕೀಯ ವೆಚ್ಚಗಳಿಗೆ, ತುತ್ತು ಅನ್ನ ಆಹಾರಕ್ಕಾಗಿಯೋ ಅಂತಾ ಹಲುವಾರು ಅಗತ್ಯ ಕಾರಣಗಳಿಗಾಗಿ ಜೀವನ ಆಧಾರಕ್ಕೆಂದು ಹೈನುಗಾರಿಕೆಯಲ್ಲಿ ತೊಡಗಿಕೊಂಡ ಬಡ ಕುಟುಂಬಗಳು ಈ ಭೀಕರ ರೋಗದ ಕಾರಣ ಇನ್ನಷ್ಟು ಆರ್ಥಿಕ ಹೊಡೆತ ಸಹಿಸದೇ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದವು. ಬಲು ಕಷ್ಟದಿಂದ ಕಟ್ಟಿಕೊಂಡ ಬದುಕು ಬೀದಿ ಪಾಲಾಗುತ್ತಿತ್ತು. ಶ್ರೀಮಂತರ, ಜಮೀನ್ದಾರರ ಸ್ಥಿತಿ ಕೂಡ ಬಡ ಕೃಷಿಕರ, ಕೃಷಿ ಕಾರ್ಮಿಕರ ಸ್ಥತಿಗಿಂತ ಭಿನ್ನವಾಗಿರಲಿಲ್ಲ. ನೂರಾರು ಎಕರೆ ಜಮೀನನ ಉಳುಮೆಗೆ ಅಂತಾ ಸಾಕಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳು ನೋಡು ನೋಡುತ್ತಿದಂತೆ ವಿಷಮ ಜ್ವರದ ಕಾರಣ ಶಾಕ್ ತಾಳಿಕೊಳ್ಳಲಾರದೆ, ನೋವು ಸಹಿಸಿಕೊಳ್ಳಲಾರದೆ ಉಸಿರು ಚೆಲ್ಲುತ್ತಿದ್ದವು. ಅದನ್ನು ಪ್ರೀತಿಯಿಂದ ಸಾಕಿದ ರೈತರು ಕೂಡ ಆಘಾತ ತಾಳಲಾರದೆ ಕುಸಿದು ಬಿಳುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿ ಬಡವರ ಶ್ರೀಮಂತರ ಕೃಷಿಕರ ಮಾಲಿಕರ ಪಾಡು ಎಲ್ಲ ಒಂದೇ ಆಗಿತ್ತು.

ಒಟ್ಟಿನಲ್ಲಿ ಕಣ್ಣಿಗೆ ಕಾಣದ ಒಂದು ವೈರಸ್ನ ಕಾರಣದಿಂದ ಇಡೀ ಗ್ರಾಮೀಣ ಬದುಕು ದಿಕ್ಕೆಟ್ಟು ಹೋಗಿತ್ತು. ಕೇವಲ ತಮ್ಮ ಪಶು ಸಂಪತ್ತು ಕಳೆದುಕೊಳ್ಳುವುದಷ್ಟೆ ಅಲ್ಲದೆ ಅವುಗಳ ಆರೈಕೆ ಔಷಧೋಪಚಾರದ ಖರ್ಚು ಭರಿಸಲಾಗದೆ ಜನ ಒದ್ದಾಡುತ್ತಿದ್ದರು. ಇಂಥದರಲ್ಲಿ ಕೆಲ ಸರ್ಕಾರಿ ವೈದ್ಯರು ತಮ್ಮ ಕೈಲಾದಷ್ಟು ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದರು. ಆದರೆ ಕೇಲವೊಂದು ಉತ್ತಮ ಗುಣಮಟ್ಟದ ಔಷಧಿಗಳಿಗಾಗಿ ರೈತರು ಔಷಧಿ ಅಂಗಡಿಗಳಿಗೆ ಅಲೆದಾಡಲೇಬೇಕಾಗಿತ್ತು. ಎಲ್ಲವನ್ನೂ ತಾವೇ ತಂದು ಮಾಡುತ್ತೇವೆ ಎನ್ನುವ ಕೆಲ ಖಾಸಗಿ ಮತ್ತು ನಕಲಿ ವೈದ್ಯರು ರೈತರ ರಕ್ತ ಹೀರುತ್ತಿದ್ದರು. ಇಷ್ಟೆಲ್ಲಾ ಆದರೂ ಜಾನುವಾರುಗಳ ಜೀವ ಉಳಿಯುವ ಸಂಭವ ಮಾತ್ರ ತುಂಬಾ ಕಡಿಮೆ ಆಗಿತ್ತು. ಒಂದೊಂದು ಊರಲ್ಲಿ ಪ್ರತಿದಿನ ಹತ್ತಾರು ಜಾನುವಾರಗಳು ಕೊನೆಯುಸಿರು ಎಳೆಯುತ್ತಲೇ ಇದ್ದವು. ಪಶು ವೈದ್ಯ ಇಲಾಖೆಯ ಪ್ರಕಾರ ಚರ್ಮ ಗಂಟು ರೋಗ ದನ ಎಮ್ಮೆ ಎತ್ತುಗಳಲ್ಲಿ ಕಂಡುಬರುವ, ವೈರಸ್‌ನಿಂದ ಹರಡುವ ಖಾಯಿಲೆ. ಪಾಕ್ಸ್‌ವಿರಿಡೆ ಕುಟುಂಬಕ್ಕೆ ಸೇರಿದ, ಕ್ಯಾಪ್ರಿಪಾಕ್ಸ್ ವೈರಸ್ ಕುಲದ ಲಂಪಿ ಸ್ಕಿನ್ ಡಿಸೀಸ್ ವೈರಸ್‌ನಿಂದ ಈ ಖಾಯಿಲೆ ಹರಡುತ್ತದೆ. ದೇಹದ ಬಹುತೇಕ ಭಾಗಗಳಲ್ಲಿ ಕಂಡುಬರುವ ಕೀವು ತುಂಬಿದ ಬಾವು, ಬಾಯಿಯ ಲೋಳೆ ಪೊರೆ, ಮೂಗಿನ ಹೊಳ್ಳೆ ಕೆಚ್ಚಲು ಮತ್ತು ಜನನಾಂಗದ ಹತ್ತಿರ ಹುಣ್ಣು- ಇವು ಮೇಲ್ನೋಟಕ್ಕೆ ಕಂಡುಬರುವ ಖಾಯಿಲೆಯ ಲಕ್ಷಣಗಳು. ವಿಶ್ವದಲ್ಲಿ ಮೊದಲಿಗೆ ಅಫ್ರಿಕಾದ ದಕ್ಷಿಣ ಪ್ರಾಂತ್ಯ ಮತ್ತು ಮಡಗಾಸ್ಕರ್‌ನಲ್ಲಿ ೧೯೨೯ರ ಸುಮಾರಿಗೆ ಈ ವೈರಸ್‌ನ ಇರುವಿಕೆಯನ್ನು ಪತ್ತೆ ಹಚ್ಚಲಾಯಿತು. ಚರ್ಮ ಗಂಟು ರೋಗಕ್ಕೆ ಕಾರಣವಾದ ಲಂಪಿ ಸ್ಕಿನ್ ಡಿಸೀಸ್ ವೈರಸ್ ಪಾಕ್ಸ್‌ವಿರಿಡೆ ಕುಟುಂಬದ, ಕ್ಯಾಪ್ರಿಪಾಕ್ಸ್ ಕುಲದ ಸದಸ್ಯ. ಈ ಕ್ಯಾಪ್ರಿಪಾಕ್ಸ್, ಕೊರ್ಡೋಪಾಕ್ಸ್‌ವೈರಸ್ (ChPV) ಉಪಕುಟುಂಬದೊಳಗಿನ ಎಂಟು ಕುಲಗಳಲ್ಲಿ ಒಂದು. ಕುರಿ ಮತ್ತು ಮೇಕೆಗಳಿಗೆ ರೋಗ ತರುವ ವೈರಸ್‌ಗಳಾದ ಶೀಪ್‌ಪಾಕ್ಸ್ ವೈರಸ್ ಮತ್ತು ಗೋಟ್‌ಪಾಕ್ಸ್ ವೈರಸ್‌ಗಳೂ ಸಹ ಕ್ಯಾಪ್ರಿಪಾಕ್ಸ್ ಕುಲಕ್ಕೆ ಸೇರಿದವುಗಳಾಗಿವೆ. ಫಾಕ್ಸ್‌ವಿರಿಡೆ ಕುಟುಂಬದ ಇತರ ವೈರಸ್‌ಗಳಂತೆ ಕ್ಯಾಪ್ರಿಪಾಕ್ಸ್‌ವೈರಸ್‌ಗಳು ಸಹ ಇಟ್ಟಿಗೆಯ ಆಕಾರದಲ್ಲಿರುತ್ತವೆ. ಇದೇ ಕಾರಣಕ್ಕೆ ಕುರಿ ಮೇಕೆಗಳಲ್ಲಿ ಸಿಡುಬು ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕೊಡುವ ಲಸಿಕೆಯನ್ನೆ ಜಾನುವಾರುಗಳಿಗೆ ಪ್ರಾಯೋಗಿಕವಾಗಿ ಇದೇ ಲಸಿಕೆಯನ್ನು ನೀಡಲಾಗುತ್ತಿತ್ತು.

ಈಗ ನಮ್ಮ ದೇಶಕ್ಕೂ ದಾಳಿ ಇಟ್ಟ ಈ ಮಾರಣಾಂತಿಕ ವೈರಸ್ ದೇಶದ ಹಲವು ರಾಜ್ಯಗಳಲ್ಲಿ ತನ್ನ ಕೌರ್ಯ ಮೆರೆಯುತ್ತಲೇ ಈಗ ನಮ್ಮ ರಾಜ್ಯಕ್ಕೂ ದಾಳಿಯಿಟ್ಟಿತ್ತು. ಜಾನುವಾರುಗಳಲ್ಲಿ ಈ ವೈರಸ್ ಸೇರಿಕೊಂಡು ಅವುಗಳ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿ ಚರ್ಮದಲ್ಲಿ ಗಂಟುಗಳು ಸೃಷ್ಟಿಯಾಗುತ್ತಿದ್ದವು. ಹೀಗಾಗಿ ಮದ್ದಿಲ್ಲದ ಈ ರೋಗಕ್ಕೆ ಚರ್ಮ ಗಂಟು ರೋಗ ಆಂಗ್ಲ ಭಾಷೆಯಲ್ಲಿ ಲಂಪಿ ಸ್ಕಿನ್ ಡಿಸೀಸ್ ಎಂದು ಕರೆಯಲಾಗುತ್ತಿತ್ತು. ಜಾನುವಾರುಗಳಲ್ಲಿ ಅತಿಯಾದ ಜ್ವರ, ದೇಹ ತುಂಬ ಗಂಟುಗಳು ಆಗಿ, ಜಾನುವಾರಿನ ಕಾಲು ಬಾಯಿಗಳಲ್ಲಿ ಉರಿಯೂತ ಕಂಡು ಬರುತ್ತಿತ್ತು. ಇಂತಹದರಲ್ಲಿ ವೈದ್ಯರಿಗೂ, ರೈತರಿಗೂ ಬಾಯಿಲ್ಲದ ಪ್ರಾಣಿಗಳು ಮೂಕ ವೇದನೆಯಿಂದ ನರಳಿ ಸತ್ತು ಹೋಗುವ ಕಾಲದಲ್ಲಿ ಕೈಲಾದಷ್ಟು ಮಟ್ಟಿಗೆ ಆರೈಕೆ ಮಾಡಿ ವ್ಯಥೆ ಪಡೆಯುವುದು ಮಾತ್ರ ಸಾಧ್ಯವಾಗಿತ್ತು.

*

ಜಾನುವಾರು ಅಧಿಕಾರಿಯಾದ ನನ್ನ ಇಡೀ ದಿನ ಪ್ರಾಣಿಗಳ ಆರೈಕೆಯಲ್ಲೇ ಕಳೆದು ಹೋಗುತ್ತಿತ್ತು. ಕಳೆದ ಮೂವತ್ತು ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ ಇಂಥದೊಂದು ಭಯಾನಕ ಖಾಯಿಲೆ ನಾನು ಎಂದಿಗೂ ಕಂಡಿರಲಿಲ್ಲ. ದಿನವಿಡೀ ರೋಗಗ್ರಸ್ತ ಪ್ರಾಣಿಗಳ ಚಿಕಿತ್ಸೆ ಮಾಡಿ ಬಂದು ಬಳಲಿದ ನಂತರವೂ ರಾತ್ರಿ ಸಹ ನಿದ್ರೆಯಿಲ್ಲದೆ ಪ್ರತಿಯೊಂದು ಕ್ಷಣ ಆತಂಕದಲ್ಲಿ ಕಳೆಯಬೇಕಾಗುತ್ತಿತ್ತು. ತಡರಾತ್ರಿಯವರೆಗೆ ಚಿಕಿತ್ಸೆ ಮಾಡಿ ಬಂದ ಜಾನುವಾರಗಳ ಸಾವಿನ ಸುದ್ದಿಗಳು ಮುಂಜಾವು ಮೂಡುವ ಮೊದಲೇ ಕೇಳಬೇಕಾದ ದುರ್ದೈವ ಪ್ರತಿ ಪಶುವೈದ್ಯನದಾಗಿತ್ತು. ಯಾವ ಕ್ಷಣದಲ್ಲಿ ಏನಾಗುವುದೋ ಎನ್ನುವ ಆತಂಕ ಮನಸ್ಸಿನಲ್ಲಿ ಮನೆ ಮಾಡಿ ಬಿಟ್ಟಿತ್ತು.
ಈಗಿನ ಈ ಪಶು ಜಗತ್ತಿನ ಈ ಪರಿಸ್ಥಿತಿಗೂ ೨೦೧೯ ರಲ್ಲಿ ಸೃಷ್ಟಿ ಯಾಗಿದ್ದ ಮನುಷ್ಯ ವೈದ್ಯಲೋಕದ ಕೊರೋನಾದ ವೈರಸ್ ವಿಕೋಪಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಕೇವಲ ವ್ಯತ್ಯಾಸವೆಂದರೆ ಆಗ ಸತ್ತು ಹೋಗುತ್ತಿದ್ದದ್ದು ಮನುಷ್ಯ ಜೀವಗಳು ಆದರೆ ಈಗ ಈ ಮೂಕ ಪ್ರಾಣಿಗಳು. ನಿಸ್ಸಹಾಯಕವಾಗಿದ್ದ ಅಂದಿನ ವೈದ್ಯಲೋಕಕ್ಕೂ ಇಂದಿನ ಈ ಪಶುವೈದ್ಯ ಲೋಕಕ್ಕೂ ಎಳಷ್ಟು ವ್ಯತ್ಯಾಸ ಇರಲಿಲ್ಲ. ಮನುಷ್ಯ ಕೋರೋನಾ ಬಂದಾಗ ಎಲ್ಲ ಸಂಬಂಧಗಳು ಕಡಿದುಕೊಂಡು ಕ್ಷಣ ಮಾತ್ರದಲ್ಲಿ ಜಗತ್ತು ಬಿಟ್ಟು ಹೋಗಿತ್ತಿದ್ದರೆ ಇಲ್ಲಿ ಈಗ ಆದಿ ಅನಾದಿ ಕಾಲದಿಂದಲೂ ಮನುಷ್ಯನ ಒಡನಾಡಿ ಜೀವನಾಡಿ ಅನಿಸಿಕೊಂಡ ಮೂಕ ಜೀವಿಗಳು ಮನುಷ್ಯನನ್ನು ನಿಜವಾದ ಅರ್ಥದಲ್ಲಿ ಅನಾಥನನ್ನಾಗಿಸುದಷ್ಟೇ ಅಲ್ಲದೇ ಅವನ ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಿಸಿ ಹೊರಟು ಹೋಗುತ್ತಿದ್ದವು. ಆಗ ತಂದೆ ತಾಯಿ ಅಣ್ಣ ತಂಗಿ ತಂದೆ ಮಗ ತಾಯಿ ಮಗಳು ಎನ್ನುವಂಥ ಎಷ್ಟೋ ರಕ್ತ ಸಂಬಂಧಗಳು ಕಡಿದುಕೊಂಡು ಈ ವೈರಾಣುವಿನ ಕಾರಣ ಕೊನೆಗೆ ಮನುಷ್ಯ ಯಾರಿಗೂ ಮುಖ ತೋರಿಸದೆ ಹೊರಟು ಬಿಡುತ್ತಿದ್ದರೆ ಅಸಹಾಯಕರಾಗಿ ಅಳುತ್ತ ಮನೆಯಲ್ಲಿ ಕುಳಿತು ಬಿಡುವಂಥ ಪರಿಸ್ಥಿತಿ ಅವರ ಬಂಧು ಬಳಗದ್ದು ಆಗಿತ್ತು. ಸಾವಿನ ಸಂದರ್ಭದಲ್ಲೊ ಯಾರು ಯಾರನ್ನು ಸಾಂತ್ವನಿಸದಂಥ ಸ್ಥಿತಿ ಆಗ ನಿರ್ಮಾಣವಾದಂತೆ ಈಗ ತಾವು ತಮ್ಮ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸಿದ ಪಶುಗಳನ್ನು ಮನೆಯಿಂದ ದೂರ ಇಡಬೇಕಾದ, ಮಣ್ಣು ಮಾಡಬೇಕಾದ ಪರಸ್ಥತಿ.

ವೈದ್ಯರು ಮುಂಜಾಗ್ರತಾ ಕ್ರಮವಾಗಿ ರೋಗಗ್ರಸ್ತ ಜಾನುವಾರವನ್ನು ಆರೋಗ್ಯವಂತ ಹಿಂಡಿನಿಂದ ಬೇರ್ಪಡಿಸಿ ಆರೈಕೆ ಮಾಡಲು ಸಾರಿದ್ದರು. ಅದೃಷ್ಟಕ್ಕೆ ರೋಗ ಗ್ರಸ್ತ ಪ್ರಾಣಿಗಳಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲವಾದ್ದರಿಂದ ಮನುಷ್ಯರಿಗೆ ಈ ರೋಗದಿಂದ ಹೆದರುವ ಅವಶ್ಯಕತೆ ಇರಲಿಲ್ಲ. ಅದಕ್ಕೆಂದೇ ರೈತರು ಈ ಪ್ರಾಣಿಗಳ ಅರೈಕೆಯಲ್ಲಿ ಹಗಲು ರಾತ್ರಿ ಒಂದು ಮಾಡಿದ್ದರು. ತನ್ನ ತನು ಮನ ಧನ ಎಲ್ಲ ಸಮರ್ಪಿಸಿದ್ದರು. ಇಷ್ಟಾದರೂ ರೈತ ಒಡನಾಡಿ ಬದುಕಿನ ಆಸರೆಯಾಗಿದ್ದ ಜಾನುವಾರಗಳನ್ನು ಕಳೆದುಕೊಂಡು ಒದ್ದಾಡಬೇಕಾದ ದಾರುಣ ಪರಿಸ್ಥತಿ ರೈತರದಾಗಿತ್ತು. ಕೆಲವೊಮ್ಮೆ ತೀರ ಮನುಷ್ಯತ್ವ ಮರೆತು ವರ್ತಿಸುವ ಮನುಷ್ಯನ ಕೆಲವು ಘಟನೆಗಳು ಕಂಡಾಗ ಮನುಷ್ಯ ಅದೆಂಥ ಸ್ವಾರ್ಥಿ ಅಲ್ಲವೇ ಅನಿಸದೇ ಇರತ್ತಿರಲಿಲ್ಲ. ತನ್ನ ತಂದೆ ತಾಯಿ ಬಂಧು ಬಳಗದ ಸಾವಿನಲ್ಲೆ ಲಾಭದ ಲೆಕ್ಕಾಚಾರ ನಡೆಸುವ ಮನುಷ್ಯ ತಾನು ಸಾಕಿದ ಪ್ರಾಣಿಯಿಂದ ಆಗುವ ಲಾಭ ನಷ್ಟದ ಬಗ್ಗೆ ಯೋಚಿಸದೇ ಇರುತ್ತಾನೆಯೇ?. ಅವನ ಮಾತುಗಳಲ್ಲಿ, ಸಂಕಷ್ಟದ ಕ್ಷಣಗಳಲ್ಲಿ ಕೂಡ ತನ್ನ ಸ್ವಾರ್ಥದ ಲೆಕ್ಕಾಚಾರ ಪ್ರತಿಫಲಿಸುತ್ತದೆ.

ಕೆಲವೊಮ್ಮೆ ನಿರುಪಯುಕ್ತ ಅನಿಸುವ ಜಾನುವಾರುಗಳನ್ನು ಕಾನೂನಿನ ಕಣ್ಣು ತಪ್ಪಿಸಿ ಅಕ್ರಮವಾಗಿ ಮಾರಾಟವಾಡುತ್ತಿದ್ದರು. ತೀರ ಸಾವಿಗೆ ಹತ್ತಿರವಾದ ರೋಗ ಗ್ರಸ್ತ ಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ ಆದರೆ ಇನ್ನೂ ಸ್ವಲ್ಪ ಚೆನ್ನಾಗಿರು ಜಾನುವಾರಗಳು ಎಷಟಾದರೂ ಬರಲಿ ಎನ್ನುವ ಕಾರಣಕ್ಕೆ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿತ್ತು.
ಒಂದು ದಿನ ಒಂದು ಊರಿನ ಗೌಡ್ರು, ಹೆಸರು ದಾನ ಗೌಡರು, ಊರಿಗೆ ದೊಡ್ಡ ಶ್ರೀಮಂತರು, ನೂರಾರು ಎಕರೆ ಫಲವತ್ತಾದ ಭೂಮಿ, ಅದರ ಉಳುಮೆಗೆ ಅಂತಾ ಸದಾ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳು ಎತ್ತುಗಳು. ಅವರ ದುರಾದೃಷ್ಟಕ್ಕೆ ಎನ್ನುವಂತೆ ಅವರು ಎತ್ತುಗಳಿಗೆ ಈ ರೋಗ ವಕ್ಕರಿಸಿ ಬಿಟ್ಟಿತ್ತು. ಏನೇ ಆಗಲಿ ತನ್ನ ಎತ್ತುಗಳನ್ನು ಬದುಕಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದವರಂತೆ ತಮ್ಮ ಸೊಕ್ಕಿನ ಕಾರಣವೋ ಅಜ್ಞಾನದ ಕಾರಣವೋ ಖಾಸಗಿ ನಕಲಿ ವೈದ್ಯರುಗಳಿಗೆಲ್ಲ ಕರೆಸಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಅತ್ಯಂತ ದುಬಾರಿ ಬೆಲೆಯ ಔಷಧಿಗಳೆಲ್ಲ ಎತ್ತಿನ ಮೇಲೆ ಪ್ರಯೋಗಿಸಿದ ನಂತರವೂ ಒಂದು ಎತ್ತು ಚಿಕಿತ್ಸೆಗೆ ಸ್ಪಂದಿಸದೇ ಅಸು ನೀಗಿದಾಗ ತುಂಬಾ ನೊಂದುಕೊಂಡು ಬಿಟ್ಟಿದ್ದರು.

ಒಂದು ದಿನ ಅವರ ಶ್ರೀಮತಿಯವರು ನನಗೆ ಕರೆ ಮಾಡಿ ವಿಷಯ ತಿಳಿಸಿ ಇನ್ನೊಂದು ಎತ್ತಿಗೂ ತುಂಬಾ ಸಿರಿಯಸ್ ಇರುವದರಿಂದ ತುರ್ತು ಚಿಕಿತ್ಸೆಗೆ ಬರಲೇಬೇಕು ಅಂತಾ ಒತ್ತಾಯಿಸಿದರು. ಅವರ ವಿನಂತಿಗೆ ಸ್ಪಂದಿಸಿ ಅಲ್ಲಿಗೆ ಹೋಗಿ ನೋಡಿದರೆ ಆ ಗೌಡರು ಸಿಕ್ಕಾಪಟ್ಟೆ ಸರಾಯಿ ಕೊಡಿದು ರಸ್ತೆ ಪಕ್ಕದಲ್ಲಿರುವ ಅವರ ಮನೆಯಂಗಳದಲ್ಲಿ ತೂರಾಡುತ್ತ ಮಲಗಿದ್ದರು. ಅವರ ನಾಲಿಗೆ ಇಡೀ ಪಶು ವೈದ್ಯ ಕುಲಕ್ಕೆ ಹಿಡಿ ಶಾಪ ಹಾಕುತ್ತಿತ್ತು. ಅವರು ಶ್ರೀಮತಿ ಸೇರಿದಂತೆ ಮನೆಯ ಆಳಗಳೆಲ್ಲ ಸೇರಿ ಅವರನ್ನು ಮನೆಯೊಳಕ್ಕೆ ಎತ್ತಿ ಹಾಕಲು ಶ್ರಮಿಸುತ್ತಿದ್ದರು. ಇದನ್ನೆಲ್ಲ ನೋಡಿ ಇದೇನಾಯಿತು ನಾನು ನೋಡಲು ಬಂದದ್ದು ಜಾನುವಾರುಗಳನ್ನ ಆದರೆ ಇದೇನು ನೋಡುತ್ತಿದ್ದೇನೆ? ಕೊಣಿನಂತಿರು ಈ ಗೌಡರ ಚಿಕಿತ್ಸೆಗಾಗಿ ನನ್ನನ್ನು ಆಹ್ವಾನಿಸಲಾಗಿದೆಯೇ ಎಂದು ಒಂದು ಕ್ಷಣ ಗಾಬರಿಗೊಂಡು ನಿಂತಲ್ಲೇ ನಿಂತು ಬಿಟ್ಟೆ. ನನ್ನ ಆತಂಕ ಗಾಬರಿಯಲ್ಲ ಗಮನಿಸಿದ ಗೌಡತಿ ” ಡಾಕ್ಟರೇ, ನಿವ್ ಗಾಬರಿ ಆಗಬ್ಯಾಡ್ರೀ.. ಗೌಡ್ರಿಗೆ ಸ್ವಲ್ಪ ಎಣ್ಣೆ ಹಾಕೋ ಅಭ್ಯಾಸ ಐತ್ರಿ..

ಮೊನ್ನೆ ಒಂದು ಎತ್ತು ಸತ್ತು ಈಗ ಇನ್ನೊಂದು ಎತ್ತು ತುಂಬಾ ಸಿರೀಯಸ್ಸು, ಅಡ್ಡ ಮಲಗೇ ಬಿಟ್ಟೈತಿ, ಗೌಡ್ರು ಎರಡೂ ಎತ್ತೂ ಬದುಕಿಸೋ ಬೇಕು ಅಂತಾ ಹರ ಸಾಹಸ ಪಟ್ಟಿದ್ದಾರ, ಸಾಕಷ್ಟು ಖಾಸಗೀ ಡಾಕ್ಟರ್ ಗಳನ್ನೆಲ್ಲ ಕರೆಸಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರ. ಏನೂ ಪ್ರಯೋಜನವಾಗಲಿಲ್ಲ ಅಂತಾ ಊರಿಗೇ ದೊಡ್ಡ ಗೌಡ ನಾಲ್ಕು ದುಡ್ಡು ಖರ್ಚು ಮಾಡಿ ಒಂದು ಎತ್ತು ಉಳಿಸಿಕೊಳ್ಳಲು ಆಗಲಿಲ್ಲ ಅಂದರೆ ಊರಲ್ಲಿ ಏನು ಮರ್ಯಾದೆ ಉಳಿದೀತು ಅಂತಾ ಟೇನಷನ್ ತಗೊಂಡು ಸ್ವಲ್ಪ ಜಾಸ್ತಿನೇ ಕುಡಿದು ಈ ಥರಾ ಹುಚ್ಚರಾಂಗ ಮಾಡಾಕ ಹತ್ತಾರ” ಎಂದು ವಿವರಿಸಿದಾಗ ನಾನು ಸ್ವಲ್ಪ ನೆಮ್ಮದಿಯ ಉಸಿರು ಬಿಟ್ಟಿದ್ದೆ. ಆಳುಗಳು ಗೌಡರನ್ನ ಎತ್ತಿ ಮನೆಯ ಒಂದು ಕೊನೆಯೊಳಗೆ ಹಾಕಿ ಚಿಲಕಾ ಜಡಿದಾಗ ಗೌಡತಿ ಎತ್ತು ಮಲಗಿದ್ದ ಜಾಗಕ್ಕೆ ನನ್ನ ಕರೆದೊಯ್ದರು. ನಾನು ಕೊನೆಯುಸಿರು ಎಣಿಸಿತ್ತಿರುವ ಎತ್ತನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ ನಂತರ
”ಇದು ತಾವು ಇದಕ್ಕೆ ಕೊಡಿಸಿದ ಹಾಯರ್ ಅಂಟಿ ಬಾಯಟಿಕ್ಸ್, ಸ್ಟೇರಾಯಿಡ್ ಔಷಧಿಗಳ ಅಡ್ಡ ಪರಿಣಾಮದಿಂದ ಈ ಸ್ಥತಿಗೆ ಬಂದಿದೆ, ಈಗ ಇನ್ನಷ್ಟು ಇದಕ್ಕೆ ಇಂಜೆಕ್ಷನ್ ಗಳೆಲ್ಲ ಕೊಟ್ಟರೆ ಅದು ಈಗಲೇ ಸತ್ತು ಹೋಗುತ್ತದೆ. ಆದ್ದರಿಂದ ಇದಕ್ಕೆ ಔಷದೋಪಾಚಾರನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟು ನೋಡಬೇಕು. ಅದರ ಬದಲಾಗಿ ಎಳೆ ನೀರು, ಗಂಜಿ, ಕಾಡಿ ಬೆಲ್ಲದ ನೀರು ಇತ್ತಾದಿ ಕೊಟ್ಟು ಆರೈಕೆ ಮಾಡಿ ಎಂದು ಸಲಹೆ ನೀಡಿ ಮುಂದೆ ಒಂದೆರಡು ದಿನ ನೋಡಿ ಇದರಿಂದ ಏನಾದರೂ ಫಲ ಸಿಕ್ಕರೆ ಮುಂದೆ ಏನಾದರು ಪ್ರಯತ್ನಿಸಹುದು ಅಂತಾ ಹೇಳಿ ಅಲ್ಲಿಂದ ಬಂದಿದ್ದೆ. ನಂತರ ಮೂರ್ನಾಲ್ಕು ದಿನ ಯಾವುದೇ ಸುದ್ದಿ ಬರಲಿಲ್ಲ.

ನಾಲ್ಕನೇ ದಿನ ಸ್ವತಃ ಗೌಡ್ರೇ ಫೋನ ಮಾಡಿ ”ಡಾಕ್ಟರ್ ತಾವು ಹೇಳಿದಂತೆ ನಾವು ಔಷಧಿ ಇಂಜೆಕ್ಷನ್ ಎಲ್ಲ ಬಿಟ್ಟು ಕೇವಲ ಆಹಾರೋಪಚಾರದ ಮುಖಾಂತರ ಎತ್ತು ಆರೈಕೆ ಮಾಡಿದೆವು. ಈಗ ಎತ್ತು ಸ್ವಲ್ಪ ಚೇತರಿಸಿಕೊಂಡು ಸ್ವಲ್ಪ ಎದ್ದು ನಡಿತಾಯಿದೆ. ದಯವಿಟ್ಟು ಇನ್ನೋಮ್ಮೆ ಬಂದು ಚಿಕೊತ್ಸೆ ಮತ್ತು ಸಲಹೆ ನೀಡಿಬೇಕು” ಎಂದು ಸಂತೋಷದಿಂದ ಹೇಳಿದಾಗ ನಿಜಕ್ಕೂ ಇದೊಂದು ಪವಾಡ ಅನಿಸಿ ಮತ್ತೇ ಅವರ ಮನೆಗೆ ಹೋಗಿ ನೋಡಿದಾಗ ನಿಜಕ್ಕೂ ಅದೊಂದು ಪವಾಡವೇ ಆಗಿತ್ತು. ಖಂಡಿತವಾಗಿಯೂ ಸಾಯಬಹುದು ಎಂದುಕೊಂಡಿದ್ದ ಎತ್ತು ಮೇವು ತಿನ್ನುತ್ತ ಅವರ ಮನೆಯಂಗಳದಲ್ಲಿ ನಿಂತಿತ್ತು. ಕುಡಿದು ಮನೆಯಂಗಳದಲ್ಲಿ ತೂರಾಡುತ್ತ ಮಲಗಿದ್ದ ಗೌಡ್ರು ಇವರೇ ಹೌದೋ ಅಲ್ಲೋ ಎನ್ನುವಂತೆ ಓಡಿ ಬಂದು ತುಂಬ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡರು ಮತ್ತು ತಮ್ಮ ಕೃತಜ್ಞತೆ ವ್ಯಕ್ತ ಪಡಿಸಿದರು.

” ಅದೆಲ್ಲ ಹೋಗಲಿ ಬಿಡ್ರಿ ಗೌಡ್ರ.. ನೀವು ಚೆನ್ನಾಗಿದರಲ್ಲ ಅಷ್ಟು ಸಾಕು”” ಎಂದು ಗೌಡರಿಗೆ ತಮಾಷೆ ಮಾಡಿದಾಗ ಅಂದಿನ ತಮ್ಮ ಪರಿಸ್ಥಿತಿ ನೆನಪಿಸಿಕೊಂಡು ನಾಚಿಕೆ ಪಟ್ಟವರಂತೆ
“ಅದಾ.. ಅದೆಲ್ಲ.. ಟೇನಷನಲ್ಲಿ ಒಂದು ಸ್ವಲ್ಪ…” ಎಂದಾಗ ಅಲ್ಲಿದ ಗೌಡತಿ, ಕೆಲಸದವರು ಎಲ್ಲ ಹೊನಲು ಬಂದಂತೆ ನಕ್ಕಿದ್ದರು. ನಾನು ಇನ್ನೊಮ್ಮೆ ಆ ಎತ್ತು ಪರೀಕ್ಷಿಸಿ ಅದಕ್ಕೆ ಲೀವರ್ ಟಾನಿಕ್ ಜೆನರಲ್ ಟಾನಿಕ್ ಎಲ್ಲ ಬರೆದು ಕೊಟ್ಟು ನಿಯಮಿತವಾಗಿ ಅದಕ್ಕೆ ಹಾಕುವಂತೆ ಸಲಹೆ ನೀಡಿ ಮರಳಿ ಬಂದಿದ್ದೆ‌. ನಂತರ ಎತ್ತು ಚೇತರಿಸಿಕೊಂಡು ಆರಾಮವಾಗಿರುವುದು ಊರಿನವರಿಗೆಲ್ಲ ಸೋಜಿಗದ ಸಂಗತಿಯೇ ಆಗಿತ್ತು.

*

”ಗೋವು ಎಂದರೆ ಎಲ್ಲರಿಗೂ ಪೂಜ್ಯತೆ, ಗೋಮಾತೆ ಹಸುವಿನ ಹೊಟ್ಟೆಯಲ್ಲಿ ಕೋಟ್ಯಾನು ಕೋಟಿ ದೇವತೆಗಳು ವಾಸವಾಗಿದ್ದಾರೆ ಎನ್ನುತ್ತಾರೆ ಅಂಥ ಶ್ರೇಷ್ಠ ಗೋಮಾತೆಗೆ ಈ ಸ್ಥತಿ ಬರಬೇಕೆ?…. ಎತ್ತು ಅಂದರೆ ದೇವರು ಬಸವಣ್ಣ .. ಭೂಮಿ ಹೊತ್ತ ಬಸವಣ್ಣನಿಗೆ ಈ ಪರಿಸ್ಥಿತಿ ಬರಬೇಕೆ?” ಎಂದು ಜನ ಮೂಕ ಪ್ರಾಣಿಗಳ ಸ್ಥಿತಿ ಕಂಡು ಮಾತಾಡಿಕೊಂಡು ಮರಗುತ್ತಿದ್ದರೆ ಇನ್ನೊಂದು ಕಡೆ –
”ಇಡೀ ವಿಶ್ವವನ್ನೆ ಬೆಳಗುವ ಸೂರ್ಯ ಚಂದ್ರರಿಗೇ ಗ್ರಹಣ ಬಿಟ್ಟಿಲ್ಲ ಅಂದರೆ ಈ ಮೂಕ ಪ್ರಾಣಿಗಳ ಯಾವ ಲೆಕ್ಕ?” ಎಂದು ಇನ್ನೊಂದು ಕಡೆ ಆಡಿಕೊಳ್ಳುವ ಮೂಲಕ ಸಾಮಾಧಾನಿಸಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಕೆಲವೊಂದು ಕಡೆ ಸತ್ತ ಜಾನುವಾರುಗಳಿಗೆ ಭಜನೆ, ಪೂಜೆ, ಪುನಸ್ಕಾರ ಮಾಡುವ ಮೂಲಕ ತಮ್ಮ ಭಕ್ತಿ, ಪ್ರೀತಿ, ನಿಷ್ಠೆ ತೋರುತ್ತ ಗೌರವಯುತವಾಗಿ ಸತ್ತ ದನಗಳನ್ನು ಅಂತ್ಯ ಸಂಸ್ಕಾರ ಮಾಡಿ ಮನುಷ್ಯ ಮಾನಷ್ಯತ್ವ ಮೆರೆಯತ್ತಿರುವುದನ್ನು ನೋಡುತ್ತಿದ್ದರೆ ಮನುಷ್ಯ ಜೀವನ ಸಾರ್ಥಕವೆನಿಸಿ ಮನಸ್ಸಿಗೆ ಸಮಾಧಾನವಾಗುತ್ತಿತ್ತು.

  • 1ಒಂದು ದಿನ ಬೆಳಗು ಮುಂಜಾನೆ ನಾನು ನಿರೀಕ್ಷಿಸಿದಂತೆ ಇದಕ್ಕಿದಂತೆ ಒಂದು ಫೋನ್ ಕರೆ ಬಂದೇ ಬಿಟ್ಟಿತ್ತು. ಒಂದು ಹಸುವಿನ ಸಾವಿನ ಸುದ್ದಿ ಹೊತ್ತು ತಂದ ಆ ಕರೆ ತಕ್ಷಣಕ್ಕೆ ಬರುವಂತೆ ನನ್ನಲ್ಲಿ ವಿನಂತಿಸಿತು. ಕಳೆದ ಒಂದು ವಾರದಿಂದ ನಾನು ಚಿಕಿತ್ಸೆ ನೀಡುತ್ತಿದ್ದ ಹಸುವೊಂದು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೆ ಶರಣಾಗಿತ್ತು. ಸರ್ಕಾರಿ ವೈದ್ಯನಾಗಿ ಸತ್ತ ಹಸುವಿನ ಮಾಲೀಕರಿಗೆ ಪರಿಹಾರ ಕೊಡಿಸುವ ಸಂಬಂಧ ಜಿಪೀಯಸ್ ಪೋಟೋ, ಮರಣೋತ್ತರ ವರದಿಯಲ್ಲ ಸಲ್ಲಿಸಬೇಕಾಗಿತ್ತು. ಹೀಗಾಗಿ ನಾನು ಕರೆ ಬಂದ ತಕ್ಷಣ ಹಸು ಮರಣಿಸಿದ ಆ ಹಳ್ಳಿ ಮನೆಗೆ ಬೇಟಿ ನೀಡಿದೆ. ಆ ಹಸು ಸಾಕಿಕೊಂಡು ತನ್ನ ಜೀವನ ಸಾಗಿಸುತ್ತಿದ್ದವಳು ಒಬ್ಬ ಕಡು ಬಡ ಕುಟುಂಬದ ಯುವತಿ. ಆ ಯುವತಿ ಕೃಷಿ ಕೂಲಿ ಮಾಡಿ ಬದುಕುತ್ತಿದ್ದವಳು. ತನ್ನ ದೈನಂದಿನ ಖರ್ಚುಗಳಿಗೆ ಅಂತಾ ಒಂದು ಹಸು ಕಟ್ಟಿಕೊಂಡು ಬೇರೆಯವರ ಭೂಮಿಯಲ್ಲಿ ದುಡಿದು ಬರುವಾಗ ಅವರದೇ ಹೊಲದಿಂದ ಒಂದಿಷ್ಟು ಮೇವು ತಂದು ಹಸುವಿಗೆ ಹಾಕಿ ಅದರ ಹೊಟ್ಟೆ ತುಂಬಿಸುತ್ತ ಇದರ ಬದಲಾಗಿ ಹಸು ನೀಡುವ ಹಾಲು ಮಾರಿ ಅದರಿಂದ ಬರುವ ದುಡ್ಡಿನಲ್ಲಿ ತನ್ನ ಮನೆ ನಡೆಸುತ್ತಿದ್ದಳು.2

ಈಗ ಮೂರ್ನಾಲ್ಕು ವರ್ಷಗಳ ಹಿಂದೆ ಅವಳ ತಂದೆ ತಾಯಿ ಸತ್ತಾಗ ಅವಳಿಗೆ ಕೇವಲ ಹದಿನಾರು ವರ್ಷ. ಅವಳ ತಂದೆ ತಾಯಿ ಇಬ್ಬರೂ ಕೂಲಿ ಕಾರ್ಮಿಕರು. ದಿನ ನಿತ್ಯ ದುಡಿದು ತಿನ್ನುವುದೇ ಅವರ ಜೀವನ. ಈ ನಡುವೆ ಹುಟ್ಟಿದವಳು ಈ ಲಕ್ಷ್ಮಿ. ಲಕ್ಷ್ಮಿ ಹುಟ್ಟಿದೇ ತಡ ಇವಳ ಅಪ್ಪ ಸುರೇಶ ಬೆಳೆಯುವ ಮಗುವಿಗೆ ಹಾಲು ಬೇಕಾಗುತ್ತೆ ಅಂತಾ ತಾನು ದುಡಿಯಲು ಹೋಗುತ್ತಿದ್ದ ಸಾಹುಕಾರರ ಮನೆಯಲ್ಲಿ ಇತ್ತೀಚಿಗೆ ಹುಟ್ಟಿದ ಒಂದು ಜರ್ಸಿ ಹೆಣ್ಣು ಕರು ಇರುವುದನ್ನು ಕಂಡು ಕಾಡಿ ಬೇಡಿ ತಂದು ಮನೆಯಲ್ಲಿ ಕಟ್ಟಿದ್ದ. ಬೆಳೆಯುತ್ತ ಹೊರಟಿದ್ದ ಲಕ್ಷ್ಮಿಗೆ ಆ ಕರುವೇ ಸರ್ವಸ್ವವಾಗಿತ್ತು. ಅದೇ ಅವಳ ಜಗತ್ತು ಕೂಡ ಆಗಿತ್ತು. ಅದರೊಂದಿಗೆ ಆಡುವುದು ಅದರ ಕೆಂಪು ವರ್ಣದ ರೇಶ್ಮೆ ಮೈಯನ್ನು ತೀಡುವುದು ಮುಟ್ಟಿ ಸಂಭ್ರಮಿಸುವುದು. ಅ ಕರುವಿಗೆ ಮೇವು ಹಾಕುವುದು ಇತ್ಯಾದಿ ಎಲ್ಲ ಲಕ್ಷ್ಮೀಯದೇ ದಿನಚರಿಯಾಗಿತ್ತು. ಲಕ್ಷ್ಮಿ ಬೆಳೆದು ದೊಡ್ಡವಳಾಗಿ ಶಾಲೆಗೆ ಹೊರಟಂತೆಲ್ಲ ಕರು ಪ್ರೌಢಾವಸ್ಥೆಗೆ ಬಂದು ಗರ್ಭ ಧರಿಸಿ ಕರುವಿಗೆ ಜನ್ಮ ನೀಡಿ ತಾಯಿಯಾಗಿ ಹಾಲು ಕೊಡುವ ಮೂಲಕ ಲಕ್ಷ್ಮಿಗೂ ಇನ್ನೊಬ್ಬಳು ತಾಯಿಯಾಗಿದ್ದಳು. ಇಂಥದರಲ್ಲಿ ಅದ್ಯಾವುದೋ ಕಾಯಿಲೆಗೆ ತುತ್ತಾಗಿ ಲಕ್ಷ್ಮಿ ತಾಯಿ ಚಂದ್ರಿ ಇಹಲೋಕ ತ್ಯಜಿಸಿದ್ದಳು. ನಂತರ ತಾಯಿ ಇಲ್ಲದೆ ಅನಾಥವಾಗಿದ್ದ ಲಕ್ಷ್ಮಿಗೆ ಈ ಹಸು ಲಕ್ಷ್ಮಿ ಪ್ರೀತಿಯ ಗೌರಿಯೇ ಸಾಕು ತಾಯಿಯಾಗಿದ್ದಳು.

”ಡಾಕ್ಟರ್ ಸಾಹೇಬ್ರಾ, ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ. ನಿಜ ಹೇಳಬೇಕೆಂದ್ರ ನನ್ನ ತಾಯಿ ನನಗ ತನ್ನ ಹಾಲುಣಿಸಿದ್ದನ ನೆನಪಿಲ್ಲ.. ಆದರ ಈ ತಾಯಿ ಗೋಮಾತೆ ನನ್ನ ಬುದ್ದಿ ತಿಳದಾಂಗಿಂದಲೂ ನನಗ ತನ್ನ ಜೀವಾಮೃತ ಕುಡಿಸಿ ಬೆಳೆಸಿದ ದೇವತೆ. ನನ್ನ ಸ್ವಂತ ತಾಯಿ ಸತ್ತಾಗಲೂ ನನಗೆ ಇಷ್ಟು ನೋವು ಅಗಿರಲಿಲ್ಲ. ಈಗ ಅದಕ್ಕೂ ಹೆಚ್ಚು ನನ ಮನಸ್ಸಿಗೆ ನೋವಾಗೈತ್ರಿ ಸಾಯಬ್ರ..”
ಅವಳು ಕಣ್ಣೀರವಾಗಿದ್ದಳು. ಅವಳ ಮನೆಗೆ ಸಾಂತ್ವನ ಹೇಳಲು ಬಂದ ಜನ ಅವಳ ಒಂಟಿ ಜೀವನದ ಬಗ್ಗೆ, ಅವಳ ಬಡತನದ ಬಗ್ಗೆ ಅವಳ ತಂದೆ ತಾಯಿಗಳ ಬಗ್ಗೆ ಎಲ್ಲ ಕತೆಯನ್ನು ಬಿಚ್ಚಿಟ್ಟಿದ್ದರು. ತಾಯಿ ಮೊದಲು ಯಾವುದೋ ರೋಗದಿಂದ ಸತ್ತು ಹೋದರೆ ತಂದೆ ಮುಂದೆ ಕರೋನ ರೋಗ ಬಂದು ಸತ್ತು ಹೋಗಿದ್ದ.

ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿ ಬದಕುತ್ತಿದ್ದ ಲಕ್ಷ್ಮಿ ತನ್ನ ತಂದೆ ಬಿಟ್ಟು ಹೋಗಿದ್ದ ಏಕೈಕ ಆಸ್ತಿ ಎಂದರೆ ಈ ಹಸುವನ್ನು ಸಾಕಿಕೊಂಡು ಅದರ ಹಾಲನ್ನು ಮಾರಿ ಜೀವನ ಸಾಗಿಸುತ್ತಿದ್ದಳು. ಈಗ ಆ ಹಸುವನ್ನು ಸಹ ಕಳೆದುಕೊಂಡು ಲಕ್ಷ್ಮಿ ಮತ್ತೊಮ್ಮೆ ಅನಾಥವಾಗಿದ್ದಳು. ಕೂಲಿ ಮಾಡಿಯೇ ಬದುಕುಬೇಕಾದ ಗತಿ. ಇಂಥದರಲ್ಲಿ ಸರ್ಕಾರದಿಂದ ಏನಾದರು ಪರಿಹಾರ ಸಿಕ್ಕರೆ ಇನ್ನಷ್ಟು ಸಾಲ ಸೂಲ ಮಾಡಿ ಇನ್ನೊಂದು ಹಸು ತಗೆದುಕೊಳ್ಳಬಹುದು ಎಂದು –
”ಸಾಯಬ್ರ ಕಾಲ ಮುಗ್ದ ಕೇಳಕೋತೀನಿ ಆದಷ್ಟು ಬೇಗ ನನಗ ಪರಿಹಾರ ಸಿಗುವಾಂಗ ಮಾಡಿ ಪುಣ್ಯ ಕಟ್ಕೋರಿ.. ಅದರಿಂದ ನಾ ಇನ್ನೊಂದು ಹಸು ಕಟ್ಕೊಂಡ ನನ್ನ ಜೀವನಾ ಸಾಗಸ್ತೀನಿ..” ಎಂದು ವಿನಂತಿಸಿದಾಗ ನನ್ನ ಕಣ್ಣಲ್ಲಿ ನೀರು ಬಾರದಿರಲಿಲ್ಲ. ಅರ್ಜಿ, ಪೋಟೋ, ಪೋಸ್ಟ್ ಮಾರ್ಟಮ್ ಎಲ್ಲ ಮುಗಿಸಿ ಆದಷ್ಟು ಬೇಗ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡುವ ಮೂಲಕ ನಾನು ಸಾವಿನ ಸರಮಾಲೆಯನ್ನೆ ಕಂಡ ಆ ಅನಾಥ ಹೆಣ್ಣಿನ ಮನೆಯಿಂದ ಹೊರಗೆ ಬಂದಾಗ ಸಾಲು ಸಾಲಾಗಿ ಸಾಯುತ್ತಿದ್ದ ಪ್ರತಿ ಜಾನುವಾರಿನ ಸಾವಿನ ಹಿಂದೆ ಒಂದು ಕರುಣಾಜನಕ ಕಣ್ಣೀರಿನ ಕತೆ ಇದ್ದೇ ಇದೆ ಎಂದು ಅನಿಸಿ ಮನಸ್ಸಿಗೆ ಚರ್ಮ ಗಂಟು ರೋಗ ಆವರಿಸಿದಂತೆ ಹಿಂಸೆಯಾಗಿತ್ತು. ಆದರೆ ನಾನು ಇನ್ನೊಂದು ಸಾವಿನ ಕತೆಗೆ ಕಿವಿಗೊಡಬೇಕಾದ ಅನಿವಾರ್ಯತೆ ನನ್ನ ಮುಂದೆ ಇತ್ತು.
-ಅಶ್ಫಾಕ್ ಪೀರಜಾದೆ


  1. ↩︎
  2. ↩︎
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x