ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ ಸಮಯದ ಮೇಲೆ ನೆಪ ಹಾಕಿ,ಅದರ ಮೇಲೆ ಗೂಬೆ ಕೂರಿಸೋದು!ಬೇಕಾದ್ದಕ್ಕೆ ಮಾತ್ರ ಬೇಕಾದಷ್ಟು ಸಮಯ ಬಳಸ್ಕೊಳ್ಳೋ ನಾವು, ಬೇಡವಾದ್ರೆ ಮಾತ್ರ ಪಿಳ್ಳೆನೆವ ಹಾಕಿ ಮುಂದಿನ ಡೇಟಿಗೆ ಅಡ್‌ಜರ್‌ನ್ಮೆಂಟ್ ಕೊಡ್ತಲೇ ಇರ್ತೀವಿ.
ನಮ್ಮೂರಿನಲ್ಲಿ ಪತಂಜಲಿ ಯೋಗ ಕೂಟದಿಂದ ನಿತ್ಯ ಬೆಳಗ್ಗೆ ಕೋಟೆಯಲ್ಲಿ, ಸಂಜೆ ಪೇಟೆಯಲ್ಲಿ ತರಗತಿಗಳು ಎಷ್ಟೋ…..ವರುಷಗಳಿಂದಲೂ ನಡೆಯುತ್ತಿದೆ. ನನಗೆ “ರೂಪಾ, ಯೋಗಕ್ಕೆ ಹೋಗಿ ಆರೋಗ್ಯ ಸುಧಾರಿಸಿಕೋ”ಎಂದು ಬಲವಾಗಿ ಬಲಮನಸ್ಸು ಎಚ್ಚರಿಸುತ್ತಿದ್ದರೂ, ಈ ಎಡಬಿಡಂಗಿ ಎಡಮನಸ್ಸು,”ಅಯ್ಯೋ ಐದು ಗಂಟೆ ಕತ್ತಲಿನಲ್ಲಿ ನೀನು ಹೋಗಲೇಬೇಕಾ? ಮನೇಲೇ ಟಿವಿ ಗುರುಗಳ್ ಮುಂದೆ ಏಕಲವ್ಯೆ ಥರ ಅಭ್ಯಾಸ ಮಾಡ್ಕೊಂಡ್ರೆ ಸಾಲ್ದಾ, ದಿನವೂ ಕ್ಲಾಸುಗಳಿಗೆ ಹೋಗೋಕೇಂತ ಎಷ್ಟು ಸಮಯ ವ್ಯರ್ಥ ಮಾಡ್ಕೊಡ್ತೀಯಾ?”, ಅಂತ ಕಳ್ಳ ನೆಪಗಳು ತೆಗೆದೂ ತೆಗೆದೂ ನನ್ನ ಬಲಮನಸ್ಸಿಗೆ ಬಲವಾಗಿ ಮೊಟಕಿ ಮೂಲೆಗೆ ಕೂರಿಸಿಬಿಟ್ಟಿತ್ತು.
ಆದರೂ ನನ್ನ ಜಾತಕದಲ್ಲಿ ಅದೇನು ಗ್ರಹಗತಿ ಬದಲಾಯ್ತೋ ಗೊತ್ತಿಲ್ಲ, ನನ್ನ ಬಲಮನಸ್ಸಿಗೆ ಇತ್ತೀಚೆಗೆ ಚೆನ್ನಾಗಿ ಬಲಬಂದು, ಎಡಮನಸ್ಸಿನ ಮೇಲೆ ಸಮರ ಸಾರಿ, ಅದರ ಬಾಯಿ ಮುಚ್ಚಿಸಿ, ವಿಜಯ ಸಾಧಿಸಿತ್ತು!
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತು ಅನ್ನುವ ಹಾಗೇ, ಈ ವಯಸ್ಸಿನಲ್ಲಿ
ಯೋಗ ತರಬೇತಿಗೆ ಹೋಗುವ ಸುಯೋಗ ಒದಗಿಬಂತು! ಸೇರಿ ೪-೫ ದಿನಗಳಾಯ್ತು.
ಓಹೋ…… ಯೋಗ ಮಾಡಲು ಹೋಗ್ತಿರೋದು ತಿಳಿಸೋಕೆ ಈನಾರಿ ಬಿಲ್ಡಪ್ಪಾ ಅಂತ ನನ್ನ ಹೀನವಾಗಿ ನೋಡ್ಬೇಡ್ರೀ. ನಾಲ್ಕೈದು ದಿನ ತರಗತಿಗಳಿಗೆ ಹೋಗಿದ್ದಕ್ಕೇ,”ಅಯ್ಯೋ….. ಎಂಥಾ ಸೋಂಭೇರಿಯಾಗಿ ಇಷ್ಟು ವರ್ಷ ಇಂಥ ಅವಕಾಶವನ್ನ ಕಳೆದುಕೊಂಡ್ಬಿಟ್ನಲ್ಲಾ”, ಅಂತ ನಿಜಕ್ಕೂ ಈಗ ನನಿಗೆ ಜ್ಞಾನೋದಯವಾಗ್ತಿದೆ. “ಅಟ್ಟದ ಮೇಲೆ ಒಲೆ ಉರೀತು, ಕೆಟ್ಟ ಮೇಲೆ ಬುದ್ದಿ ಬಂತೂ”, ಅಂತ ಹಿರಿಯರು ನನ್ನಂಥವಳನ್ನ ನೋಡಿಯೇ ಹೇಳಿರಬೇಕು.ಅದೂ…..ಸರೀ…..ಅನ್ನೀ. ನೀವೇನೇ ಹೇಳೀ…..ಎಲ್ಲದಕ್ಕೂ ಕಾಲ ಕೂಡಿ ಬರ್ಬೇಕು!
ಈಗ ವಿಚಾರ ಏನಪ್ಪಾ ಅಂದ್ರೆ, ಯೋಗ ಕ್ಲಾಸ್ನಲ್ಲಿ ಒಂದೊಂದು ದಿನ ಒಂದೊಂದು ತೆರನಾದ ತರಬೇತಿ! ಹಾಗಾಗಿ ಪ್ರತಿಗುರುವಾರ ವಿವಿಧ ರೀತಿಯ ನಡಿಗೆಗಳು,ಪ್ರಾಣಿಗಳ ನಡೆಗಳ ಅನುಕರಣೆ, ಅವುಗಳಂತೆ ಸದ್ದು ಮಾಡುವುದು, ಘರ್ಜಿಸುವುದು, ಜೋರಾಗಿ ನಗುವುದು, ಅಳುವುದೂ ಇಂಥವು.ಈ ದಿನ ಬೆಳಗ್ಗೆ ಹೀಗೆ ಕಪ್ಪೆ ನೆಗೆತ ಮಾಡ್ತಾ ಇದ್ವಾ…….
ಒಂದು ಕಪ್ಪೆ ನಮ್ಮ ಚಿತ್ರವಿಚಿತ್ರವಾದ ನೆಗೆತ ನೋಡಿ ತಡೆಯಲಾರದೆ ಸ್ವತಃ ಡೆಮೋ ತೋರಿಸೋಕೆ ನಮ್ಮ ನಡುವೆ ಪ್ರತ್ಯಕ್ಷವಾಗಿಯೇ ಬಿಡ್ತು. ಎಂಥಾ ಕಾಕತಾಳೀಯ ಮಾರಾಯ್ರೇ!!!!! ಕಪ್ಪೆ ನೆಗೆತ ನಾವು ಮಾಡುವುದಕ್ಕೂ ಕಪ್ಪೆ ನೆಗೆದುಕೊಂಡು ಬರುವುದಕ್ಕೂ ಎಲ್ಲಿಂದೆಲ್ಲಿಗೆ ಲಿಂಕ್ ಕೊಡೋದು ಹೇಳೀ! “ಅಯ್ಯಾ ಮನುಷ್ಯರಾ, ಎಲ್ಲಾನೂ ಬಲ್ಲೇ ಎಂಬುವಿರಲ್ಲಾ! ನೀವು ನೆಗೀತಿರೋದು ಸರಿ ಇಲ್ಲ. ನನ್ನನ್ನ ನೋಡಿ ಕಲಿತುಕೊಳ್ರಪ್ಪಾ”, ಅಂತ ಹೇಳುವಂತೆ ಆ ಜಾಗದ ತುಂಬೆಲ್ಲಾ ಫೋಟೋ ಕೂಡಾ ತೆಗೆಯಲಾಗದಂತೆ ಕುಪ್ಪಳಿಸಿ ಕುಪ್ಪಳಿಸಿ ನೆಗೆದಾಡಿ ತನ್ನ ಟ್ರೈನಿಂಗ್ ಮುಗಿಸಿ, ಕಲಿಸೋದು ನನ್ ಧರ್ಮ, ಕಲಿಯದಿದ್ರೆ ಅದು ನಿಮ್ ಕರ್ಮ ಅನ್ನುವಂತೆ ತನ್ನ ಪಾಡಿಗೆ ತಾನು ಅದೃಶ್ಯವಾಯಿತು! ಈ ವಿಚಾರವನ್ನ ನಮ್ಮ ಮಾಧ್ಯಮದವರಿಗೇನಾದರೂ ತಿಳಿಸಿದ್ದರೆ,”ಹೀಗೂ ಉಂಟೇ!!!! ಕಪ್ಪೆ ನೆಗೆತ ಕಲಿಸಲು ತಾನೇ ಸ್ವತಃ ಬಂದ ಕಪ್ಪೆರಾಯಾ!ಕಪ್ಪೆಗೂ ಕಿವಿ ಕೇಳಬಹುದು, ಕಣ್ಣು ಕಾಣಬಹುದು! ವಿಜ್ಞಾನ ಇದಕ್ಕೇನು ಉತ್ತರ ಕೊಡುತ್ತದೇ? ಇದು ಸತ್ಯದರ್ಶನದ ಹಿನ್ನೆಲೆ ಏನೂ?ಈ ಕೌತುಕ ಹಾಗೂ ವಿಸ್ಮಯಕ್ಕೆ ಸಾಕ್ಷಿಯಾದವರು …………”, ಅಂತ ನಮ್ಮ ಅಷ್ಟೂ ಜನರನ್ನ ಹೈಲೈಟ್ ಮಾಡಿ, ನಾಲ್ಕು ಕಂತುಗಳಿಗಾಗುವಷ್ಟು ರಬ್ಬರ್ ಬ್ಯಾಂಡ್ ಎಳೆಯುವಂತೆ ಎಳೆದೂ ಎಳೆದೂ, ನಮ್ಮನ್ನೆಲ್ಲಾ ಇಂಟರ್‌ವ್ಯೂಗೆ ಕೂರಿಸ್ಕೊಂಡು, ವರ್ಲ್ಡ್ ಫೇಮಸ್ ಮಾಡ್ಬಿಟ್ಟಿರೋರು. ಛೇಛೇಛೇಛೇ, ತೋಚ್ದೇಹೋಯ್ತು! ಹೌದ್ರೀ ಕೆಲವು ಸರಿ ತಲೆ ಕೆಲ್ಸ ಮಾಡದೆ, ಅಪರೂಪಕ್ಕೆ ಮಿಂಚೋಕೆ ದಕ್ಕಿದ ಛಾನ್ಸ್‌ಗಳ್ನ ಅನ್ಯಾಯವಾಗಿ ಕಳ್ಕೊಂಬಿಡ್ತೇವೆ! ಏನ್ ಮಾಡೋದೂ ಹೇಳಿ, ಎಲ್ಲದಕ್ಕೂ ಕಾಲ ಕೂಡಿ ಬರ್ಬೇಕು!
ನೋಡೀ…… ಕಾಲ ಕೂಡಿ ಬರ್ಬೇಕೂ, ಕಾಲ ಕೂಡಿ ಬರ್ಬೇಕೂಂತ ನನ್ ಹಾಗೇ ನೀವು ಕಾಲದ ಮೇಲೆ ಭಾರ ಹಾಕಿ ನಿಸೂರಾಗಿ ಇದ್ಬಿಡಬೇಡಿ ಪ್ಲೀಸ್. ನಿಮ್ಮ ಈ ನಿಸೂರತೆಯೇ ನಿಮ್ಮನ್ನ ಹುಷಾರು ತಪ್ಪಿಸುತ್ತೆ. Prevention is better than cure ಎನ್ನುವಂತೆ ಜೀವನದಲ್ಲಿ ಮುಂಜಾಗ್ರತೆ ವಹಿಸುವವನೇ ಜಾಣ! ಯಾವತ್ತೂ ಯಾವ ವಿದ್ಯೆಯನ್ನಾದರೂ ಸರಿಯೆ ಸರಿಯಾಗಿ ತಿದ್ದಿ ತೀಡುವ ಗುರುಮುಖೇನ ಕಲಿಯುವುದು ಬಹಳ ಒಳ್ಳೆಯದು.
ನೀವೂ ಕೂಡಾ ನಿಮ್ಮನಿಮ್ಮ ಸುತ್ತ ಇರುವ ಯೋಗ ಕೇಂದ್ರಗಳಿಗೆ ಹೋಗಿ ಅಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಯಾಕೇಂದ್ರೆ ಅರೋಗ್ಯವೇ ಭಾಗ್ಯ. ಈ ಭಾಗ್ಯವನ್ನ ನಮಗೆ ನಾವೇ ಸಂಪಾದಿಸಿಕೊಳ್ಳಬೇಕೇ ಹೊರತು ಯಾವ ಮಂತ್ರಿಮಹೋದಯರೂ ಕರುಣಿಸೋಕೆ ಸಾದ್ಯವಿಲ್ಲ!
ಭಾರತೀಯರಿಗೆ ಇಂಥಾ ಒಳ್ಳೆಯ ಅತ್ಯಮೂಲ್ಯವಾದ ವಿದ್ಯೆಯನ್ನು ಆಸ್ತಿಯನ್ನಾಗಿ ಪತಂಜಲಿ ಮಹರ್ಷಿಗಳು ಕೊಟ್ಟುಹೋದರಾದರೂ, ನಮಗೆ, ಹಿತ್ತಲ ಗಿಡ ಮದ್ದಲ್ಲವೆಂಬ ಉದಾಸೀನ, ನಿಕೃಷ್ಟ ಭಾವನೆ! ಆದರೆ ಈಗ ಪ್ರಪಂಚದಾದ್ಯಂತ ವಿದೇಶೀಯರೂ ನಮ್ಮ ಆಸ್ತಿಯ ಫಲಾನುಭವಿಗಳಾಗಿ ಆಯುರಾರೋಗ್ಯ ಸಂಪಾದಿಸುತ್ತಿರುವಾಗ, ನಮ್ಮಗಳ ಉದಾಸೀನ ಎಷ್ಟು ಮೂರ್ಖತನ ಹೇಳೀ! ಬನ್ನಿ ಎಲ್ಲರೂ ಬದಲಾಗೋಣ! ಬಲಿಷ್ಟ ಭಾರತಕ್ಕೆ ಕಾರಣರಾಗೋಣ!
ಪತಂಜಲಿ ಮಹರ್ಷಿಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳನ್ನ ಮಾಡುತ್ತಾ………
-ರೂಪ ಮಂಜುನಾಥ