“ಕತ್ತಲ ಹೂವು” ನೀಳ್ಗತೆ (ಭಾಗ ೭): ಎಂ.ಜವರಾಜ್

ಭಾಗ 7

ದಂಡಿನ ಮಾರಿಗುಡಿಲಿ ಕುಣೀತಿದ್ದ ನೀಲಳಿಗೆ ಅವಳ ಅವ್ವ ಸ್ಯಬ್ಬದಲ್ಲಿ ಹೊಡೆದು ಕೆಂಗಣ್ಣು ಬಿಟ್ಟು ಕೆಂಡಕಾರಿದ್ದು ಕಂಡು ದಿಗಿಲುಗೊಂಡ ಚಂದ್ರ ನಿಧಾನಕೆ ಮುಂಡಗಳ್ಳಿ ಬೇಲಿ ಮರೆಯಲ್ಲೇ ಸಾವರಿಸಿಕೊಂಡು ದೊಡ್ಡವ್ವನ ಹಿಂದೆಯೇ ಬಂದು ನಿಂತಿದ್ದ. ಅವನ ಕಿರಿ ತಮ್ಮ ಗೊಣ್ಣೆ ಸುರಿಸಿಕೊಂಡು ಚಂದ್ರನ ತಲೆಯನ್ನು ಸಸ್ದು ಸಸ್ದು ದಂಡಿನ ಮಾರಿಗುಡಿಗೇ ಕರೆದುಕೊಂಡು ಹೋಗುವಂತೆ ಆಕಾಶ ಭೂಮಿ ಒಂದಾಗ ತರ ಕಿಟಾರನೆ ಕಿರುಚುತ್ತ ಕಣ್ಣೀರು ಹರಿಸುತ್ತ ಗೋಳೋ ಅಂತ ಅಳುತ್ತಿತ್ತು. ಚಂದ್ರ ಸಿಟ್ಟುಗೊಂಡು ಅಳುತ್ತಿದ್ದ ತಮ್ಮನನ್ನು ಸೊಂಟದಿಂದ ಕೆಳಗಿಳಿಸಿ ನೆಲಕ್ಕೆ ಕುಕ್ಕರಿಸಿ ಜಾಡಿಸಿದ. ಆಗ ಚಂದ್ರನತ್ತಲೇ ನೋಡುತ್ತ ತೆಂಗಿನ ಮರ ಒರಗಿ ನಿಂತಿದ್ದ ನೀಲ ಭೂಮಿಯೇ ಅದುರುವಂತೆ ಪಾಚಿ ಕಟ್ಟಿದ ಹಲ್ಲು ಬಿಟ್ಟು ನಗುತ್ತ ‘ಕುಕ್ಕುಡ.. ಇನ್ನೊಸಿ ಕುಕ್ಕುಡ ನನೈದುನ್ ಕೂಸ..ನಾಲ್ಗ ಬಿದ್ದೊಗದು ತಲ ಚಿಟ್ಟಿಡೆ ತರ ಕಿರುಚುತ್ತ’ ಅಂತ ಮುಖ ಸಿಂಡರಿಸಿಕೊಂಡು ಹಾಗೇ ಚಕ್ಕನೆ ಜೋರಾಗಿ ನಕ್ಕಳು.

ಈ ದೊಡ್ಡವ್ವ ಸ್ಯಬ್ಬ ಹಿಡಿದು ನೀಲಳನ್ನು ರೇಗುತ್ತಲೇ ಅವಳ ಬಗ್ಗೆ ‘ಅಯ್ಯೋ ಶಿವ್ನೇ.. ನಿ ಯಾಕಾರು ಹಿಂಗ್ ಮಾಡ್ದ ನನ್ನೆಣ್ಣ‌. ನಾನೇನ್ ಮಾಡಿದ್ದಿ.. ನನ್ನೆಣ್ ಏನ್ಮಾಡಿತ್ತು ಶಿವ್ನೇ.. ಈ ಕಣ್ಲಿ ಹೆಂಗಾರು ನೋಡ್ಲಿ ನಾನು.. ಅಯ್ಯೋ.. ದೇವ್ರೇ.’ ಅಂತ ಸಿಟ್ಟು ಕನಿಕರದಿಂದ ಕಣ್ಣೀರು ಸುರಿಸುತ್ತಿದ್ದಳು.

ಚಂದ್ರ ದೊಡ್ಡವ್ವನ ಈ ರೋದನವ ನೋಡ್ತ ನೋಡ್ತಾನೆ ಅಳುತ್ತಿದ್ದ ತನ್ನ ತಮ್ಮನ ಮೂಗಿಂದ ಸೋರುತ್ತಿದ್ದ ಗೊಣ್ಣೆಯನ್ನು ತೆಗೆಯಲು ಅದರ ಮೂಗನ್ನು ಕೈ ಬೆರಳಿಂದ ಭದ್ರವಾಗಿ ಅದುಮಿ ಗೊಣ್ಣೆಯನ್ನು ಬೆರಳಿಂದ ಎಳೆದು ‘ಥೂ.. ನಾಯಿ ಮೂದೇವಿ’ ಅಂತ ಗೊಣ್ಣೆ ಅಂಟಿದ ಕೈ ಬೆರಳನ್ನು ಜೋರಾಗಿ ಒದರಿದ. ಅವನು ಒದರಿದ ರಭಸಕ್ಕೆ ಕೈ ಬೆರಳಿಗಂಟಿದ್ದ ಗೊಣ್ಣೆ ಛಿದ್ರ ಛಿದ್ರವಾಗಿ ಹಾರಿ ಭೂತಾಯಿ ಮಡಿಲಿಗೆ ಬಿತ್ತು. ಚಂದ್ರ ತನ್ನ ಬೆರಳಿಂದ ಮೂಗನ್ನು ಅದುಮಿ ಗೊಣ್ಣೆ ಎಳೆದ ರೀತಿಗೆ ತಮ್ಮನ ಮೂಗು ಕೆಂಪೇರಿ ಉರಿ ಉರಿ ಉರಿಯುತ್ತಿತ್ತೇನೋ.. ಆ ಉರಿಗೆ ಆ ತಮ್ಮ ಇನ್ನೂ ಜೋರಾಗಿ ಅರಚಲು ಶುರು ಮಾಡಿತು. ಇನ್ನೊಂದು ತಮ್ಮ ಸುಮ್ಮನೆ ನೋಡುತ್ತಾ ನಿಂತಿತ್ತು.

ಅಲ್ಲೆ ಜಗುಲಿ ಮೇಲಿದ್ದ ರೂಮೊಳಗೆ ರಗ್ಗೊದ್ದು ಮಲಗಿದ್ದ ಅಡಿನಿಂಗಿ ತಟ್ಟನೆ ಎದ್ದವಳಂತೆ ‘ಏ ಏನಾ.. ಕುಸೂ ಇದ್ಯಾಕ ಅತೈ.. ಏನಾಯ್ತು ಉಡೌ ಚಂದ್ರಾ.. ನೋಡುಡ ಕೂಸು ಕಿರುಚುತ್ತಾ ಮೇಯ್ ಸಿದ್ದಿಅದೇನ್ ಮಾಡ್ತಿ ಒಳ್ಗ… ‘ ಅಂತ ಕೂಗಿಕೊಂಡು ಎದ್ದು ಕೋಲೂರಿಕೊಂಡು ಜಗುಲಿ ಅಂಚಿಗೆ ಬಂದು ಇಣುಕಿದಳು. ಅಡಿನಿಂಗಿಯ ಮಾತು ಕೇಳಿತೋ ಏನೋ ಅಂತೂ ಒಳಗೆ ಬಾಗಿಲಂಚಿನ ಬಚ್ಚಲಿಗೆ ಅಂಟಿಕೊಂಡಿದ್ದ ಹಳೆ ಒಲೆ ಮೇಲೆ ಸಿದ್ದಿ ದೊಡ್ಡಳಗ ಇಟ್ಟು ಆಲದ ತರಗು ಹೊಟ್ಟಿ ನೀರು ಕಾಯಿಸುತ್ತಿದ್ದಳು. ಆ ಆಲದ ತರಗು ಧಗಧಗನೆ ಉರಿದು ಕಾವು ರಾಚುತಿತ್ತು.

ಇತ್ತ ಚೆನ್ನಬಸವಿ ನೀಲಳ ಮುಂದೆ ಸ್ಯಬ್ಬ ಹಿಡಿದು ಇನ್ನೂ ಲಕಲಕ ಅಂತಾನೇ ಇದ್ದಳು. ಅಡಿನಿಂಗಿ ಇಣುಕುತ್ತ ಹಂಗೆ ಕೋಲೂರಿಕೊಂಡು ಕಂಬ ಹಿಡಿದು ಕುಂತಳು. ಸೊಸೆ ಚೆನ್ನಬಸವಿಯ ಮಾತು ಅಡಿನಿಂಗಿಯ ಕಿವಿಗೆ ತಾಕಿತು. ಡ್ಯಾನ್ಸು ಹಾಡು ಅಂತೆಲ್ಲ ಕೇಳಿತು. ಈಗ ಅಡಿನಿಂಗಿಗೆ ಮೊದಲಿನ ಶಕ್ತಿ ಇಲ್ಲ. ಏನು ಮಾಡುವುದು.. ಆದರು ಬಿಡದೆ ತೊದಲು ತೊದಲಾಗಿ ‘ಆ ಹೆಣ್ಣ ಕುಣ್ಯಾಕ ಕಳಿಸಿ ಅದ್ರ ಬಾಳ ಹಾಳ್ ಮಾಡ್ದವ ಇವ.. ಇವ ನಲ್ದು ನಲ್ದು ಆ ಹೆಣ್ಗೂ ನಲ್ಯಾದ ಕಲ್ಸಿ ಆ ನನ್ ಮಗುನ್ ಕೂಸ್ಗ ತಲಿಡ್ದವ ಇವ.. ಇವ ಒಂದೇಡ್ ಕೆಲ್ಸ ಮಾಡಿದಳ..’ ಅಂತ ಶಾಪಾಕತೊಡಗಿದಳು. ಒಳಗೆ ನೀರು ಕಾಯಿಸುತ್ತಿದ್ದ ಸಿದ್ದಿ ಹೊರಬಂದು ಅತ್ತೆ ಅಡಿನಿಂಗಿಗೂ ವಾರಗಿತ್ತಿ ಚೆನ್ನಬಸವಿಗೂ ‘ಇದೇನಮ್ಮ ನೀನಾಡ ಮಾತು ಈಗ ಅದೆಲ್ಲ ಯಾಕ.. ಆದ್ದು ಆಯ್ತು.. ಈಗಂದ್ರ ಆಡುದ್ರ ಯಾರುಗ್ ಲಾಭ..ಅಕೈ ನಿಂಗಾರು ಗ್ಯಾನ ಬ್ಯಾಡ್ವ ಮುದ್ಕಿ ಏನಾ ಅಂತಳ ಅಂತ ನೀನೂ ಲಕಲಕ ಅಂದಯ.. ಮನ ಮರ‌್ಯಾದಿನ ಕಳಿತಿದ್ದರಿ..’ ಅಂತ ತಣ್ಣಗೆ ರೇಗಿದಳು. ಸಿದ್ದಿಯ ರೇಗು ಇಬ್ಬರನ್ನೂ ತಾಕದೆ ಅದು ದಿಕ್ಕಾಪಾಲಾಗಿ ರವ್ಗುಟ್ಟಿ ಸುಡುತ್ತಿದ್ದ ಬಿಸಿಲಿಗೂ ಅಲ್ಲಿ ಒಲೆಯೊಳಗೆ ಧಗಧಗನೆ ಉರಿತಿದ್ದ ಆಲದೆಲೆ ಬೆಂಕಿ ಉರಿಗೆ ಸುಟ್ಟು ಭಸ್ಮವಾಯ್ತು. ಇವರ ರೇಗಾಟ ಕೂಗಾಟ ನಿಲ್ಲದ್ದು ನೋಡಿ ನೋಡಿ ಸಾಕಾಗಿ ಹೋದ ಸಿದ್ದಿ ಅಳುತ್ತಿದ್ದ ಚಿಕ್ಕೂಸನ್ನು ಎತ್ತಿಕೊಂಡು ಇನ್ನೊಂದನ್ನು ಕೈಲಿಡಿದು ‘ಉಡೌ ಚಂದ್ರ ಬಾ ಒಳಕ’ ಅಂತ ಸಿಡಿದು ಒಳಕ್ಕೆ ಹೋದಳು.

ಇಲ್ಲಿ ಚೆನ್ನಬಸವಿಯ ಮೇಲಿನ ಅಡಿನಿಂಗಿಯ ಶಾಪ ಜೋರಾಯ್ತು. ಚಂದ್ರ ಜಗುಲಿ ಏರಿ ಇಬ್ಬರ ಬೊಯ್ದಾಟವನ್ನು ನೋಡ್ತಾ ಬೆಚ್ಚಿದವನಂತೆ ಕಂಡ. ಅವರ ಬೊಯ್ದಾಟ ಸೇರಿಗೆ ಸವ್ವಾಸೇರಿನಂತೆ ಅವಳೊಂದು ಅಂದರೆ ಇವಳೊಂದು. ಮಾತಿಗೆ ಮಾತು ಬೆಳೆಯುತ್ತಾ ಚಂದ್ರನ ಸುತ್ತ ಗಿರಗಿರನೆ ಸುತ್ತತೊಡಗಿತು.

*

ಅವತ್ತು ನೀಲಳ ಮೇಲೆ ಕಣ್ಣಾಕಿ ಉಬ್ಬು ಹಾರಿಸಿದ್ದ ಯಕ್ಟಪ್ಪನ ಮಗ ಶಿವನಂಜನನ್ನು ಮಂಜು ಕವಿದ ಹೊತ್ತಲ್ಲಿ ಆ ಮಲ್ಲನಕೇರಿ ಏರಿಯಲ್ಲಿ ಹೊಡೆದು ರಕ್ತ ಬರಿಸಿದ್ದ ಪಡ್ಡೆಯನ್ನು ಕುಲದ ಕಟ್ಟೆಗೆ ನಿಲ್ಲಿಸಿದ್ದ ಯಂಕ್ಟಪ್ಪನ ಮಾತಿಗೆ ಮಾದಿಗೇರಿಯ ಕುಲ ಚೆನೈನ್ ಗುಡಿಲಿ ಮರ‌್ಯಾದೆ ಕೊಟ್ಟಿತ್ತಲ್ಲ.. ಆ ಪಡ್ಡೆ ‘ಅಂವ ನೀಲುಂಗೆ ಉಬ್ಬಾರ‌್ಸಿದ್ದ. ಅದ್ಕೆ ಹೊಡ್ದಿ. ನಾ ನೀಲುನ್ನ ಇಷ್ಟ ಪಟ್ಟಿನಿ. ಅವುಳುನ್ನೆ ಮದ್ವ ಆಯ್ತಿನಿ’ ಅಂತಂದ ಕೇರಿಯ ಪಡ್ಡೆಗೆ ತಿಂಗಳ ಮಟ್ಟಿಗೆ ಊರಿಂದ ಬಹಿಷ್ಕಾರ ಹಾಕಿತಲ್ಲ.. ಆ ಯಂಕ್ಟಪ್ಪ ಕುಲದ ತೀರ್ಪಿಗೆ ತಲೆಬಾಗಿ ಎದ್ದಿದ್ದರಲ್ಲ.. ಆ ಅಡಿನಿಂಗಿ, ಆ ಪಡ್ಡೆಗೂ ಸೊಸೆ ಚೆನ್ನಬಸವಿಗೂ ಉಗುದು ಆ ಯಂಕ್ಟಪ್ಪನಿಗೂ ಅವನ ದೊಡ್ಡಸ್ತನಕ್ಕೂ ಸವಾಲು ಹಾಕಿದ್ದಳಲ್ಲ.. ಆ ಸವಾಲಿಗೆ ಸವಾಲು ಎಂಬಂತೆ ಶಿವನಂಜ ಮೀಸೆ ತಿರುವಿ ಆ ಅಡಿನಿಂಗಿಗೂ ಆ ಪಡ್ಡೆಗೂ ಸೆಡ್ಡು ಹೊಡೆದಿದ್ದು.. ಆ ಸೆಡ್ಡಿಗೆ ಆ ಪಡ್ಡೆ ಗುರಾಯಿಸಿದ್ದು…ಆಗ ಕುಲದ ಮಂದಿ ಹಾ.. ಹೂ.. ಹೊಯ್.. ಅಂತ ಗಲಕಾಕಿದ್ದು..

ಇದಾಗಿ ವಾರೊಂಭತ್ತು ದಿನ ಕಳೆದಿತ್ತು.

ಈ ವಾರೊಂಭತ್ತು ದಿನಕ್ಕು ಮುನ್ನ ಅಗ್ರಹಾರದ ಮಂದಿ ನೀಲಳಿಗೆ ಡ್ಯಾನ್ಸ್ ಹೇಳಿಕೊಡಲು ಯಂಕ್ಟಪ್ಪನ ಸಮಕ್ಷಮ ಸೀಟು ಇಲ್ಲ ಅಂದಿದ್ದು ಮೂರ‌್ನಾಕು ತಿಂಗ್ಳಾಗಿತ್ತು. ಈ ಮೂರ‌್ನಾಕು ತಿಂಗಳಿಂದ ಚೆನ್ನಬಸವಿಯ ಮುನಿಸು ಯಂಕ್ಟಪ್ಪನಿಗೂ ಅರಿವಾಗಿತ್ತು.

ಈ ನಡುವೆ ಶಿವನಂಜನ ಗೇಲಿ ದೊಡ್ಡಬಸವಯ್ಯನ ಎದೆಯಲ್ಲಿ ಅಡಗಿ ಒಳಗು ಇರದೆ ಹೊರಕ್ಕು ಬರದೆ ನಗಾಡುತ್ತ ಕೇಕೆ ಹಾಕುತ್ತ ಕುಂತಿತ್ತು. ಅವನೂ ಯಾವುದ್ಯಾವುದೊ ನೆಪದಲ್ಲಿ ಆ ಶಿವನಂಜನ ಗೇಲಿಯನ್ನ ಚೆನ್ನಬಸವಿಗೂ ಆ ನೀಲಳಿಗೂ ಮುಟ್ಟಿಸಲು ಹೆಣಗಿ ಸೋತು, ಆ ಗೇಲಿ ಮತ್ತಷ್ಟು ನಗಾಡತೊಡಗಿತು.

‌‌‌‌‌*

ಅವತ್ತೊಂದಿನ ಮದ್ಯಾಹ್ನದ ಸುಡು ಬಿಸಿಲು. ಯಂಕ್ಟಪ್ಪ ಬಾಳ ತೋಟದತ್ರ ಮುಂಬೇಲಿ ತಡಿ ಎಳಕೊಂಡು ಚೇರಲ್ಲಿ ಕುಂತಿದ್ದ. ಗತ್ತಿಗೇನೂ ಕಮ್ಮಿ ಇಲ್ಲ. ಮೋಟ್ರು ಸದ್ದು ಮಾಡ್ತ ನೀರು ದಿದಿ ಅಂತ ದಿಗುಗುಟ್ಟಿ ಬಾಳೆಗಿಡದ ಪಾತಿಗೆ ಹರಿತಿತ್ತು. ಆಗ ಚೆನ್ನಬಸವಿ ತಲೆ ಮೇಲೆ ಸೆರಗ ಹೊದ್ದು ಅದೇ ದಾರಿಲಿ ಹಾದು ಹೋಗುತ್ತಿದ್ದುದು ಕಂಡಿತು. ಯಂಕ್ಟಪ್ಪನ ಮನಸು ರಂಗಾಯ್ತು. ಅವಳನ್ನು ಕೂಗದೆ ‘ಕ್ಯಕ್ಯಕ್ಯ’ ಅಂತ ಕ್ಯಾಕರಿಸುವ ಹಾಗೆ ಸದ್ದು ಮಾಡಿದ. ಚೆನ್ನಬಸವಿಗೆ ಇದು ಮಾಮೂಲು. ಇವತ್ತು ಅವನು ಕ್ಯಾಕರಿಸಿದ್ದಕ್ಕೆ ಕ್ಯಾರೆ ಅನ್ನದೆ ಸೋಡು ತಿರುಗಿಸಿ ಸುಮ್ಮನೆ ನಿಂತಳು. ಯಂಕ್ಟಪ್ಪ ಮತ್ತೆ ‘ಕ್ಯಕ್ಯಕ್ಯ’ ಅಂತ ಮತ್ತೆರಡು ಸಲ ಅಂದ. ಅವಳು ಹಾಗೇ ನಿಂತಿದ್ದು ನೋಡಿ ‘ಬಾ ಅದೆಲ್ಲಿಗೊಯ್ತಿದೈ.. ಮೂರ‌್ನಾಕ್ ತಿಂಗಾಯ್ತು ನೋಡಿ. ಅದೆಲ್ಲಿ ನಿನ್ ಕಾಣ್ಣೆ.. ಇಲ್ಲ. ನಿಮ್ಮಪ್ಪುನ್ ಮನ್ಗೇನಾರ ಹೋಗಿದ್ಯಾ..’ ಅಂದ. ಅದಕ್ಕೆ ‘ಯಾತಿಕ್ಯಾ ಅಪ್ಪುನ್ ಮನ್ಗೋಗ್ಲಿ.. ನನ್ ಯವರ ಕಟ್ಗಂಡು ನಿಮ್ಗೇನ. ನಂಬಿದ್ದಿ ಅಳಿ ನಿಮ್ಮ. ನಂಬ್ಕ ಅಂದ್ರ ಇದಾ.. ನನ್ನೆಣ್ಗ ಏನಾ ಒಂದ್ ನ್ಯಾರ ಮಾಡ್ತರ ಅಂದ್ಕಂಡಿದ್ದಿ’ ಅಂತ ಸುಮ್ಮನಾದಳು. ಯಂಕ್ಟಪ್ಪ ಅತ್ತಿತ್ತ ನೋಡಿ ಮೇಲೆದ್ದು ‘ಅಷ್ಟೆನಾ.. ಬಾ ಒಳಿಕೆ ದಾರಿಲಿ ಯಾರಾರು ನೋಡಿರು..’ ಅಂತ ಕರೆದ. ಚೆನ್ನಬಸವಿ ಮರು ಮಾತಾಡದೆ ಸರಿದು ಮುಂಬೇಲಿ ತಡಿ ನೂಕಿ ಒಳ ಹೋದಳು.

ಬಿಸಿಲು ಚುರುಚುರು ಚುರುಗುಟ್ಟುತ್ತಿತ್ತು. ಆ ಬಿಸಿಲ ಬೇಗೆಗೆ ಚೆನ್ನಬಸವಿಯ ಮುಖ ಹನಿಗೂಡಿದ ಬೆವರಿಂದ ಅದ್ದಿ ತೊಟ್ಟಿಕ್ಕುತ್ತಿತ್ತು. ಆ ಹನಿಗೂಡಿದ ಬೆವರಿಗೆ ಅವಳು ಇನ್ನಷ್ಟು ರಂಗಾಗಿ ಕಂಡಳು. ನೀರು ದಿದಿ ಹರಿಯುತ್ತ ಬಾಳೆ ತೋಟದ ಪಾತಿಪಾತಿಗೂ ನಿಧಾನಕೆ ಆವರಿಸಿ ಬಾಳೆಗಿಡಗಳು ಹಸಿರಿಂದ ನಳನಳಿಸಿ ಕಂಗೊಳಿಸುತ್ತಿದ್ದವು. ಮುಂಬೇಲಿ ತಡಿಯಿಂದ ಮುಂದೆ ಎರಡು ಪಾತಿ ದಾಟಿದರೆ ತೆಂಗಿನ ಗರಿ ಗುಳ್ಳು. ಮೇಲೆ ನೆಲ್ಲುಲ್ಲು ಹಾಸು. ಯಾರ‌್ಯಾರ ಬಂದ್ರ ಅಂತ ಗಾಬರಿಯಿಂದಲೆ ಮೆಲ್ಲಮೆಲ್ಲಗೆ ಸರಿದಳು. ‘ನೋಡು ಅವ್ರು ಮೇಲ್ಜನ. ದೇವ್ರೇ ಅವ್ರ್ ಪರ. ಅಸ್ಟ್ ಸುಲಬಾಗಿ ಸೇರುಸ್ದರ.. ನೋಡು ನಮ್ ಜನ್ಕೇ ಈಚನಂತ. ಹಂಗಿರಗ ನಿನ್ ಮಗುಳ್ಗ ಹೆಂಗ್ ಸೇರುಸ್ತರು.. ನಾನು ನನ್ ದೊಡ್ಡಸ್ತಿಕೆನೆಲ್ಲ ಮರ‌್ತು ಓಡಾಡ್ನಿಲ್ವ.. ಯೋಚುಸ್ಬೇಡ ಬುಡು ಇವತ್ತಲ್ಲ ನಾಳ ಒಂದ್ ನ್ಯಾರ ಆಯ್ತುದ..’ ಅಂತ ಒತ್ತರಿಸಿ ನಡೆದ.

ಆ ಸುಡುವ ಬಿಸಿಲಿಗೆ ಮೈ ಬೆವರಿಗೆ ಇಬ್ಬರೂ ಅದ್ದಿ ಹೋಗಿದ್ದರು. ತೆಂಗಿನ ಗರಿ ನೆಲ್ಲುಲ್ಲು ಹೊದ್ದ ಗುಳ್ಳು ತಕರಾರು ಮಾಡದೆ ಒಳಕ್ಕೆ ಬಿಟ್ಟಕೊಂಡು ಬಿಸಿಲ ಬೇಗೆ ನೀಗಿಸಿತ್ತು.

ಸ್ವಲ್ಪ ಹೊತ್ತು ಕಳೆಯಿತು. ಹೊರಗೆ ಸದ್ದು ಕೇಳಿತು. ಪಂಚೆ ಕಟ್ಟಿಕೊಳ್ಳುತ್ತಾ ಗುಳ್ಳಿನ ತಡಿ ತಳ್ಳಿ ಇಣುಕಿದ ಯಂಕ್ಟಪ್ಪನ ಕಣ್ಣಿಗೆ ಕಂಡವನು ಅಗಸರ ಸೊಸ್ಮಾರಿ ಗುಡಿ ಪೂಜಾರಿ. ‘ಈ ಧಗಲಿ ಒಳ್ಗ ಅದೇನ್ ಮಾಡ್ತಿದ್ರಿ ಅಳಿ.. ನೀರು ಪಾತ್ಪಾತಿ ತುಂಬಿ ರೋಡ್ಗ ಬೀಳ್ತ ಅದ ಅಳಿ. ನೀವಿಲ್ವೇನ ಮೋಟ್ರು ನಿಲ್ಸವ್ ಅಂತ ಬಂದಿ’ ಅಂತ ಅಂದ. ಯಂಕ್ಟಪ್ಪ ‘ಇಲ್ಲ ಧಗೆಲ್ವ ಕಣ್ಣು ಎಳಿತಿತ್ತು. ಅಂವ.. ನಿಂಗೊತ್ತಿಲ್ವ.. ಪಾತಿ ಕಟ್ಟಕ ಬತ್ತಿನಿ ಅಂದಂವ ಇಷ್ಟೊತಾದ್ರು ಬರ‌್ನಿಲ್ಲ. ಅದ್ಕ ನಾನೇ ಕಟ್ಟಂವ್ ಅಂತ ಬಂದಿ. ಮೋಟ್ರಾಕಿ ಹಿಂಗೆ ಕುಂತಿ ಕಣ್ಣು ಎಳಿತಿತ್ತಲ್ಲ ನೀರು ಹಾಯಗಂಟ ಸುಮ್ನ ದಿಂಬ್ಗ ತಲ ಕೊಟ್ಟಿದ್ದಿ ಹಂಗೆ ನಿದ್ದ ಬಂತು’ ಅಂದಂದು ತಡಿನ ಹಾಕಿ ಬಂದಿ ಇರು ಅಂತ ಮೋಟ್ರು ಆಫ್ ಮಾಡಲು ಹೆಜ್ಜೆ ಎತ್ತಿಟ್ಟ.

ಈ ಪೂಜಾರಿ ‘ಆಯ್ತು ಅಳಿ ಬತ್ತಿನಿ’ ಅಂತ ತಿರುಗಿ ಮುಂಬೇಲಿ ತಡಿ ಎಳೆದ. ಯಂಕ್ಟಪ್ಪ ಸರಿ ನಡಿ ಅಂತಂತಲೇ ಎರಡು ಪಾತಿ ದಾಟಿ ಮೋಟ್ರು ಕಡೆ ನಡೆದಿದ್ದರು. ಆಗ ಗುಳ್ಳೊಳಗೆ ಬಳೆ ಸದ್ದಾದಗಾಯ್ತು. ಈ ಪೂಜಾರಿ ತಡಿ ಹಿಡಿದಿದ್ದವನು ಅದನ್ನು ಹಂಗೇ ಬಿಟ್ಟು ಆಚೆ ಹೋಗದೆ ಬಾಳೆ ಗಿಡಗಳ ಮರೆಯಿಂದ ಸರ‌್ರನೆ ಗುಳ್ಳಿನ ಹಿಂದಕ್ಕೋಗಿ ಮೂಲೇಲೆ ಮೆಲ್ಲಗೆ ತೆಂಗಿನ ಗರಿ ಎತ್ತಿದ. ಚೆನ್ನಬಸವಿ ನಿಟಾವಟ್ಟು ಮಲಗಿದ್ದು ಕಂಡು ಅವನ ಮೈ ಜುಂ ಅಂತ ಅಂದು ಬೆವರಿತು.

ಹಿಂಗೆ ಅವತ್ತೊಂದಿನ ಸೊಸ್ಮಾರಿ ಹಬ್ಬದ ಹಿಂದುನ್ ರಾತ್ರಿ ಕಿಟಕಿ ಕಿಂಡಿಯಲ್ಲಿ ಕಂಡಿದ್ದು. ನೋಡ್ತಾ ನೋಡ್ತಾ ಮೈ ಕಾವು ಏರಿಸಿಕೊಂಡಿದ್ದು. ಆಗ ಬೆದೆಗೆ ಬಂದು ಒಂದಕ್ಕೊಂದು ಗಂಟಾಕಿಕೊಂಡು ಜಗುಲಿ ಏರಿ ಕಚ್ಚಾಡುತ್ತಿದ್ದ ನಾಯಿಗಳು ಬೆದೆಯ ಮತ್ತಿನಲ್ಲಿ ಈ ಪೂಜಾರಿಯ ಮೇಲೂ ಬಿದ್ದು ಕಚ್ಚಿ ಕೆಡವಿದ್ದು.. ಅವನು ದಿಗಿಲುಗೊಂಡು ಆ ಕಡು ಕತ್ತಲಲ್ಲಿ ಅರಚುತ್ತಾ ಬೀದಿಯಲ್ಲಿ ಓಡಿದ್ದು ನೆನಪಾಗಿ ಬೆರಗೊಂಡು ನಿಂತ.

ಬಿಸಿಲು ಚುರುಗುಟ್ಟುತ್ತಿತ್ತು. ನೀರಿನ ಮೋಟ್ರು ಸದ್ದು ನಿಂತಿತು. ಪೂಜಾರಿ ಆಗಲೇ ಹೋದ ಅಂತಂದುಕೊಂಡ ಯಂಕ್ಟಪ್ಪ ‘ಕ್ಯಕ್ಯಕ್ಯ.’ ಅಂತ ಕ್ಯಾಕರಿಸಿದ. ಚೆನ್ನಬಸವಿ ತಲೆ ಮೇಲೆ ಸೆರಗ ಹೊದ್ದು ಗುಳ್ಳಿನ ತಡಿ ಸರಿಸಿ ಇಣುಕಿದಳು. ಆಗ ಪೂಜಾರಿ ಗಾಬರಿ ಬಿದ್ದವನಂತೆ ಬೇಲಿಯಿಂದ ಆಚೆಗೆ ಹಾರಿದ. ಅವನು ಹಾರಿದ ರಭಸಕ್ಕೆ ಬೇಲಿ ನೊರನೊರ ನೊರಗುಟ್ಟುತ್ತಾ ಸದ್ದಾಯ್ತು. ಆ ಸದ್ದಿಗೆ ಚೆನ್ನಬಸವಿ ಇಣುಕುತ್ತಿದ್ದವಳು ಹಿಂದಕ್ಕೆ ಸರಿದಳು. ಯಂಕ್ಟಪ್ಪ ಹಿಂದಕ್ಕೋಗಿ ಸದ್ದಾದ ಕಡೆ ಕಣ್ಣಾಡಿಸಿದ. ಯಾರೂ ಇದ್ದಂತೆ ಕಾಣದೆ ಪಂಚೆ ಎತ್ತಿಕಟ್ಟುತ್ತ ‘ಕ್ಯಕ್ಯಕ್ಯ..’ ಅಂತ ಕ್ಯಾಕರಿಸಿದ. ಬಿಸಿಲು ಇನ್ನಷ್ಟು ರವ್ಗುಟ್ಟುತ್ತ ಗುಳ್ಳೊಳಗೆ ಬೆಂದು ಬೆವರುತ್ತಿದ್ದ ಚೆನ್ನಬಸವಿ ಗುಳ್ಳಿನ ತಡಿ ಸರಿಸಿ ಇಣುಕಿದಳು. ಪಂಚೆ ಎತ್ತಿಕಟ್ಟಿ ಎದುರಿಗೆ ನಿಂತ ಯಂಕ್ಟಪ್ಪನ ನೋಡ್ತಿದ್ದಂತೆ ಅವಳ ಕಣ್ಣಲ್ಲಿ ನೀರು ತುಂಬಿತ್ತು.

*

ಇದಾದ ಮೇಲೆ ಕಳಕಂಬ್ಳ ಅಂತ ಹೋಗಾ ಬರಾ ಹೊತ್ತಲ್ಲಿ ‘ನಿನ್ ಮೊಮ್ಮೆಣ್ಣುನ್ ಮೊಖ ನಿನ್ ಮಗುನ್ ತರನೂ ಇಲ್ಲ ನಿನ್ ಸೊಸ ತರಾನು ಇಲ್ಲ.. ಅಂತೂ ಚೆಂದ್ಗಾಂದಗಿರ ಹೆಣ್ಣೆತ್ತಳ ಬುಡು ನಿನ್ ಸೊಸ’ ಅಂತ ಆ ಪೂಜಾರಿ ಗೇಲುಗನ್ನ ಆಡಿ ನಗಾಡಿದ್ದು ಅಡಿನಿಂಗಿಯನ್ನು ಕೆಣಕಿತ್ತು.

ಸೌದೆ ಹೊಡೆದು ಸಾಕಾಗಿ ಮೊಕ್ಕತ್ತಲ ಬೆನ್ನಿಗೆ ಬಂದ ನಿಂಗಯ್ಯನ ಮುಂದೆ ಪೂಜಾರಿಯ ಗೇಲುಗನ್ನದ ಮಾತ ಹಿಡಿದು ಅಡಿನಿಂಗಿ ಲಕಲಕ ಅಂತ ಕ್ಯಾತೆ ತೆಗೆದಿದ್ದಳು. ಕೋಣೆಯಲ್ಲಿ ಚೆನ್ನಬಸವಿ ಹಿಟ್ಟುನೀರು ಇಟ್ಟು ಒಲೆಗೆ ಆಲದ ಸೌದೆ ಹೊಟ್ಟಿ ಅದು ಉರಿಯದೆ ಹೊಗೆ ತುಂಬಿಕೊಂಡು ಕೆಮ್ಮುತ್ತ ಬೂರಣಿಗೆಯಲ್ಲಿ ಬುಸ್ಸಬುಸ್ಸನೆ ಉರುಬುತ್ತಿದ್ದಳು. ಇದೆ ಹೊತ್ತಲ್ಲಿ ಅತ್ತೆ ಅಡಿನಿಂಗಿಯ ಮಾತು ಚೆನ್ನಬಸವಿ ಕಿವಿಗು ತಾಕಿ ಉರುಬಿ ಉರುಬಿ ಸಾಕಾಗಿ ಉರಿ ಹತ್ತದ ಸಿಟ್ಟಿನಿಂದಲೇ ಹೊರಗೋಡಿ ಬಂದಳು. ಅಲ್ಲೆ ಜಗುಲಿ ಮೇಲೆ ನೀಲ ಪೆಚ್ಚು ಮೋರೆಯಲ್ಲಿ ತನ್ನ ತಂಗಿ ತಮ್ಮನನ್ನು ಕೂರಿಸಿಕೊಂಡು ಮೇಷ್ಟ್ರುಮನೆ ರೇಡಿಯೋದಲ್ಲಿ ಬರುತ್ತಿದ್ದ ಹಾಡು ಕೇಳುತ್ತ ಅಣಕಲ್ಲು ಆಡುತ್ತಿತ್ತು. ಒಳಗಿಂದ ಬಂದ ಚೆನ್ನಬಸವಿ ‘ಅವ ಏನಾರು ಅನ್ಲಿ ನೀ ಬಾ’ ಅಂದಳು. ನಿಂಗಯ್ಯ ಕೈಯಲ್ಲಿ ಆಪು ಹಿಡಿದು ಹೆಗಲ ಮೇಲೆ ಕೊಳ್ಳಿ ಹೊತ್ತುಕೊಂಡು ಚೆನ್ನಬಸವಿಯ ಸಿಡುಕಿಗೆ ಅಲ್ಲಿ ನಿಲ್ಲದೆ ಹಾಗೇ ಬಂದು ಉಸ್ಸ್ ಅಂತ ಅಣಕಲ್ಲು ಆಡುತ್ತಿದ್ದ ಐಕಳ ಮುಂದೆ ತಿಕವೂರಿ ‘ಅದೇನ ನಿನ್ ಕತ..ಅವೇನ ಒಗೊಗ್ಟಾಗಿ ಮಾತಾಡದು..ಆ್ಞ..’ ಅಂತ ರೇಗಿದ.

ಅರರೆ ಗಂಡನ ಈ ಮಾತ ಕೇಳಿ ಚೆನ್ನಬಸವಿ ನಡುಮನೆಗೆ ಹೋಗಿ ಎದೆ ಎದೆ ಬಡಿದುಕೊಂಡು ಗೋಳಾಡ ತೊಡಗಿದಳು. ನೀಲ ಅಣಕಲ್ಲು ಆಡುವುದನ್ನು ನಿಲ್ಲಿಸಿ ಆ ಪೆಚ್ಚುಮೋರೆಯಲ್ಲೇ ನಡುಮನೆಗೆ ಹೋಗಿ ಅವ್ವ ಗೋಳಾಡಿ ಅಳುವುದನ್ನು ನೋಡುತ್ತ ನಿಂತುಕೊಂಡು ಹಿಂದಕ್ಕೆ ಸರಿದಳು.

ಅವತ್ತು ಹಿಂಗೆ ಮೊಕ್ಕತ್ತಲ ಬೆನ್ನಿಗೆ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಮೂಲೇ ಅರಳೀಮರದ ಕೆಳಗೆ ಕತ್ತಲೊಳಗೆ ನೀಲ, ಶಿವನಂಜನ ಜೊತೆ ತಲೆ ಬಗ್ಗಿಸಿ ಮಾತಾಡುತ್ತಾ ನಿಂತಿದ್ದಳು. ಅದೆ ತಾನೇ ಅಂಗಡಿ ಬೀದಿಗೆ ಹೋಗಿ ದವಸ ತಕ್ಕಂಡು ಆ ಬ್ಯಾಗ ಕಂಕಳಲ್ಲಿ ಎರಿಕಂಡು ಬಿರಬಿರನೆ ಅಯ್ಯೋ ಉಸ್ಸೋ ಅಂತ ಬರುತ್ತಿದ್ದ ಅಡಿನಿಂಗಿ ಮರದ ಕೆಳಗೆ ಮಾತಾಡ್ತ ಇರದ್ಯಾರ ಅಂತ ಮೂತ್ರಿಸುವ ನೆವದಲ್ಲಿ ಕಂಕುಳಲ್ಲಿದ್ದ ದವಸವ ಅಲ್ಲೆ ಇದ್ದ ಕಲ್ಲಿನ ಮೇಲೆ ಇಟ್ಟು ಮರದ ಬೊಡ್ಡೆಯಲ್ಲಿ ಕುಂತಳು. ನೋಡ್ತಾ ನೋಡ್ತಾ ನೀಲ ಕಣ್ಣಿಗೆ ಬಿದ್ದಳು. ಅಂವ ಶಿವನಂಜ. ಯಲಾ ನ್ ಮಗುನ್ ಕೂಸೇ ಅಂತ ಮೇಲೆದ್ದು ‘ಇಲ್ಲೇನ್ ಮಾಡ್ತಿದ್ದಯ್ ಬಚ್ಚಾಲ್ಮುಂಡ.. ನಿಮ್ಮೊವ್ವಾಡಿ ಆಡಿ ಸಾಕಾಗಿ ಕಾಳಿಜವ್ರಯ್ನ್ ವಂಶನೆ ತಲತಗ್ಸ ತರ ಮಾಡ್ದ.. ಈಗ ನೀ ಮಾಡ್ತಿದ್ದಯ..’ ಅಂತ ನೀಲಳ ಕಿರಿಕಿರಿ ಎಟ್ಟಿ ಉಗುತು ಕಳಿಸಿದ್ದು ಅವ್ವ ಚೆನ್ನಬಸವಿಗೂ ಗೊತ್ತು.

-ಎಂ.ಜವರಾಜ್

(ಮುಂದುವರಿಯುವುದು..)

[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x