೩೬೦ ಡಿಗ್ರೀ ಪುಸ್ತಕದ ತಾಕಿದ ಸಾಲುಗಳು: ಅನುರಾಧಾ ಪಿ. ಸಾಮಗ  

ಕವಿ ಕೊಲರಿಜ್ ನ ಪ್ರಕಾರ, ʼಗದ್ಯದ ಗುರಿ ಓದುಗನಿಗೆ ವಾಸ್ತವವನ್ನು ತಲುಪಿಸುವುದು ಮತ್ತು ಪದ್ಯದ ಗುರಿ ಓದುಗನನ್ನು ತಾನೇ ತಲುಪಿ ಸಂತೋಷಗೊಳಿಸುವುದುʼ. ಹಾಗಾಗಿ ಗದ್ಯವೊಂದು ತಾನೆಷ್ಟೇ ಪ್ರಭಾವಶಾಲಿಯೆನಿಸಿಕೊಂಡಿದ್ದರೂ  ಹೆಚ್ಚಿನಸಲ ಬುದ್ದಿಯ ಪರಿಧಿಯೊಳಗೇ ನೆಲೆ ನಿಲ್ಲುತ್ತದೆ. ಅದೇ ಚಂದದ ಪದ್ಯವೊಂದು ಬುದ್ದಿಯನ್ನು ದಾಟಿ ಸೀದಾ ಭಾವದ ಕದ ತಟ್ಟಿಯೊಳಗೆ ಪದವಿಟ್ಟು ಮನಸ ಮನೆ ಮಾಡಿ ನಿಲ್ಲುತ್ತದೆ.

 ವಾಸ್ತವವನ್ನೇ ಎದುರಿನವನ ಬುದ್ಧಿ-ಭಾವಗಳೆರಡೂ ತಣಿಯುವಂತೆ ಹೇಳಬೇಕಾದರೆ ಬಹುಶಃ ಪದ್ಯದ ಜಾಡಿನಲ್ಲಿ ಗದ್ಯವನ್ನು ಮುನ್ನಡೆಸಲಿಕ್ಕೆ ಬೇಕಾದಂತೆ ಒಂದು ಸೂಕ್ಷ್ಮ ಎಚ್ಚರದಲ್ಲಿ ಭಾಷೆಯನ್ನು ಬಳಸಿಕೊಳ್ಳುವ ಕಲೆಗಾರಿಕೆ ಬೇಕು. ಬಾಷೆ ಸುಮ್ಮಸುಮ್ಮನೆ ಹೀಗೆಲ್ಲ ಬಳಸಿಕೊಳ್ಳಲಿಕ್ಕೆ ಒದಗುವುದಿಲ್ಲ. ಬಾಷೆಯನ್ನು ಸದಾ ಒಂದು ಮುಗಿಯದ ಬೆರಗಾಗಿ ನೋಡುವ ಲೇಖಕ, ಕವಿ, ಕಥೆಗಾರ ಶ್ರೀ ನಾಗರಾಜ ರಾಮಸ್ವಾಮಿ ವಸ್ತಾರೆಯವರ ಬರವಣಿಗೆಯನ್ನು ಓದುವಾಗಲೆಲ್ಲ ತನ್ನನ್ನು ಅತೀವವಾಗಿ ಪ್ರೀತಿಸುವ ಮನಸುಗಳಿಗಷ್ಟೇ ಭಾಷೆ ತನ್ನನ್ನು ಒಪ್ಪಿಸಿಕೊಂಡೀತು ಅನಿಸುವುದು ಸುಳ್ಳಲ್ಲ.   

360`  ಅನ್ನುವ ವಸ್ತಾರೆಯವರ ಈ ಪುಸ್ತಕದಲ್ಲಿ ಗೂಗಲಿತ ವೃತ್ತಾಂತಗಳು ಎಂದು ಅವರೇ ಕರೆದಿರುವ ಅವರ ಹದಿನಾಲ್ಕು ಬರೆಹಗಳಿವೆ. ಸಾಂಚಿಮುದ್ರೆ ಪ್ರಕಾಶನದಿಂದ ಪ್ರಕಟಿತಗೊಂಡಿರುವ ಈ ಪುಸ್ತಕ ಮುಖಪುಟ, ಬೈಂಡಿಂಗ್, ಒಳಗಿನ ವಿಷಯಗಳು ಮತ್ತು ಅವು ಅಚ್ಚಾಗಿರುವ ರೀತಿ ಎಲ್ಲದರಲ್ಲೂ ಭಿನ್ನವಾಗಿ ಕಾಣುತ್ತದೆ. ಮೊದಲ ಓದಿನಲ್ಲಿ ಶುರುವಿಂದ ಕೊನೆವರೆಗೆ ಒಂದಿಷ್ಟೂ ಮಸುಕಾಗದ ಒಂದು ಬೆರಗಾಗಿ ಕಂಡದ್ದು, ಎರಡನೆಯ ಓದಿನಲ್ಲಿ ಒಂದು ಅಪೂರ್ಪದ ಮೆಚ್ಚುಗೆಯೊಂದಿಗೆ ಓದಿಸಿಕೊಂಡಿತು. ಈಗ ಅದರ ಬಗ್ಗೆ ನನಗನಿಸಿದ್ದು ಬರೆಯುವೆ ಅಂತ ಕೂತಾಗ ಎರಡು-ಮೂರನೆಯ ಭೇಟಿಯಲ್ಲೇ ಎಷ್ಟೋ ಸಮಯದಾಚೆಗಿನ ಅನುಬಂಧ ಇದು ಅಂತನಿಸುವಂಥ ಕೆಲ ವ್ಯಕ್ತಿತ್ವಗಳಿರುತ್ತವಲ್ಲಾ, ಹಾಗೆ ಆಪ್ತವೆನಿಸುತ್ತಿದೆ. ಈ ಇಷ್ಟೂ ಲೇಖನಗಳಲ್ಲಿ ಸಾಲುಗಳ ನಡುವೆ ಆಗಾಗ ಕಥೆಗಾರ ವಸ್ತಾರೆ, ಕವಿ ವಸ್ತಾರೆ ಮತ್ತು ವಾಸ್ತುಶಿಲ್ಪಿ ವಸ್ತಾರೆ ಮೂವರೂ ಸಂದರ್ಭಾನುಸಾರ ಇಣುಕಿ ಹೋಗುತ್ತಿರುತ್ತಾರೆ.

ಕಂಪಾಸಿನ ನೆಟ್ಟ ಮುಳ್ಳಿನ ಸುತ್ತ ಪೆನ್ಸಿಲು ಹಗುರಾಗಿ ಒಂದು ವೃತ್ತ ಬಿಡಿಸಿ ಮತ್ತೆ ಮೊನೆಯೊತ್ತಿ ಆ ವರ್ತುಲವನ್ನು ಗಾಢಯಿಸುತ್ತಾ ನಡೆನಡೆದು ಹೊರಟಲ್ಲಿಗೇ ವಾಪಾಸಾಗುವ ರೀತಿಯಲ್ಲಿ ಆದಿ-ಅನಾದಿಯೆಂಬ ವಿವರಣೆ ಮತ್ತು ಆ ವಿವರಣೆಯೊಳಗೆ ಜೋಮೆಟ್ರಿಯ ಡೆಫಿನಿಷನ್ ಇರುವ ಬಗ್ಗೆ ಹೇಳುತ್ತಲೇ ಇಲ್ಲಿನ ಹದಿನಾಲ್ಕು ಇಂಥದೇ ಪರಿಕ್ರಮಣದ ಗುಣವಿರುವ ತನ್ನ ಬರೆಹಗಳನ್ನು ಪ್ರಬಂಧವೆನ್ನುವುದು ಬೇಡವೆನ್ನುತ್ತಾರೆ ಲೇಖಕರು. ಯಾಕಂದರೆ ಅವರ ಪ್ರಕಾರ ಇವು ನಮ್ಮ ಸಂಸ್ಕೃತಿಯ ಸಂಸ್ಮರಣೆ ಎನ್ನಬಹುದಾದ ಕಥೆಗಳ ಸುತ್ತ ಜರುಗುವ ಇವತ್ತಿನ ಉಪಕಥೆಗಳು.

ಉದ್ಧಾಲಕನೆಂಬ ಮಹರ್ಷಿಯ ಮಗ ಶ್ವೇತಕೇತು ಗುರುಕುಲದ ವಿದ್ಯಾಭ್ಯಾಸ ಮುಗಿಸಿ ಬಂದವನು ಎಲ್ಲ ಕಲಿತು ಬಂದಿರುವೆನೆಂದು ಹೇಳುವುದು, ನಾನು ನೀನು ಮತ್ತೆ ಜಗತ್ತಿನ ಎಲ್ಲವನ್ನೂ ಒಳಗೊಂಡ ಇನ್ನೊಂದಿದೆ ಅದನ್ನು ತಿಳಿದಿರುವೆಯಾ ಎಂದ ಅಪ್ಪನಿಗೆ ಇಲ್ಲವೆಂದು ಉತ್ತರಿಸುವುದು, ಮಗನಿಗೆ ತಂದೆ ಆ ಇನ್ನೊಂದನ್ನು ವಿವರಿಸುತ್ತಾ ಜಗತ್ತಿನ ಪ್ರತಿಯೊಂದು ವಸ್ತುವಿಷಯಗಳೂ ಮೂಲದಲ್ಲಿ ಯಾವ ಧಾತುರೂಪದಿಂದಾಗಿದೆಯೋ ಆ ಧಾತುರೂಪವನ್ನು ಉಪನಿಷತ್ತಿನಲ್ಲಿ “ಬ್ರಹ್ಮ” ಅನ್ನುತ್ತಾರೆ, ಅದನ್ನು ತಾನು “ಸತ್” ಎಂದು ಹೆಸರಿಸುತ್ತೇನೆ ಎಂದು ವಿವರಿಸುವುದು- ಈ ಕಥನವನ್ನು ತೆಗೆದುಕೊಂಡು ಈ “ಅದು” ಅನ್ನುವದ್ದು ತನ್ನಮಟ್ಟಿಗೆ ಭಾಷೆ ಆಗಿದೆ ಅನ್ನುವ ಲೇಖಕರು ಮೊದಲ ಲೇಖನವನ್ನು ವಿಸ್ತರಿಸುತ್ತಾ ಹೋಗುತ್ತಾರೆ ಮತ್ತು ತಾನು ಭಾಷೆಯನ್ನು ಹಾಗಂದುಕೊಳ್ಳುವುದನ್ನು ಹೀಗೆ ಸಮರ್ಥಿಸಿಕೊಳ್ಳುತ್ತಾರೆ,

“ನಾನು ನನ್ನ ಹೆತ್ತಾಕೆಯನ್ನು ಅಮ್ಮ ಅನ್ನುವ ಮೊದಲೇ ಅವಳು ತಾಯಿ ಎಂದೂ, ಅವಳು ಹೆತ್ತದ್ದು ಹೆಣ್ತನವೆಂದೂ, ತಾಯ್ತನವೆಂದೂ ಭಾಷೆ ತಿಳಿಸಿದೆ. ತಲೆಯ ಮೇಲೆ ಮೋಡಗಳಡ್ಡಾಡುವ ನೀಲಿಯ ಬೋರಲೇ ನಭವೆಂದು, ಮೋಡವನ್ನು ಮೋಡವೆಂದೂ, ನೀಲಿಯನ್ನು ನೀಲಿಯೆಂದೂ, ಮುಗುಚಿ ಬಿದ್ದದ್ದನ್ನು ಬೋರಲೆಂದೂ, ಸುಡುವದ್ದನ್ನು ಬೆಂಕಿಯೆಂದೂ, ಸುಯ್ವದ್ದನ್ನು ಗಾಳಿಯೆಂದೂ ನನಗೆ ಯಾರು ಕಲಿಸಿದ್ದು, ಯಾರೋ ಕಲಿಸಿದ್ದು ಅಂದುಕೊಂಡರೂ, ಹಾಗೆ ಕಲಿಸಿದವರಿಗೆ ಭಾಷೆಯಲ್ಲದೆ ಇನ್ಯಾರು ತಿಳಿಸಿದ್ದು?”

ಹೆಜ್ಜೆಹೆಜ್ಜೆಗೂ ಒಂದು ಸೋಜಿಗವಾಗಿ ಕಾಣುವ ಭಾಷೆಯ ಪಾರಮ್ಯ ಮತ್ತು ಎಲ್ಲದಕ್ಕೂ ಮೂಲದಲ್ಲಿರುವ ಅದರ ಧಾತುಸ್ವರೂಪವನ್ನು ನಿರೂಪಿಸುವ ಇಂಥ ಕೆಲವಾರು ಸ್ವಾರಸ್ಯಕರ ದೃಷ್ಟಾಂತಗಳು ಈ ಬರೆಹದಲ್ಲಿವೆ.

ರಾಮ-ರಾವಣರ ಯುದ್ಧಾನಂತರ ಪರಾಭವಗೊಂಡ ರಾವಣನನ್ನು ರಾಮಬಾಣವು ಕೊಲ್ಲದೇ ವಾಪಾಸು ಬರುತ್ತದೆ. ಮಹಾಜ್ಞಾನಿ ರಾವಣ ಸತ್ತರೆ ಅವನ ಜ್ಞಾನ ಅವನೊಂದಿಗೇ ಹೋಗುತ್ತದೆ, ಅವನಿಂದ ಆ ಅರಿವನ್ನು ಪಡೆದು ಬರಬೇಕೆಂಬ ರಾಮಬಾಣದ ಆಶಯದಂತೆ ಲಕ್ಷ್ಮಣ ಜರ್ಝರಿತನಾಗಿ ಬಿದ್ದುಕೊಂಡಿದ್ದ ರಾವಣನಲ್ಲಿಗೆ ಹೋಗುತ್ತಾನೆ. “ರಾಮಬಾಣದಿಂದ ಕೆಡವಲ್ಪಟ್ಟವನೇ ನಿನ್ನ ಪರಮದರಿವನ್ನು ನನಗೆ ಕೊಡು, ಕೂಡಲೇ ನೋವು ನೀಗಿ ದೈವಾಧೀನನಾದೀಯೆ” ಎಂದು ಅವನ ಕಿವಿಯಲ್ಲುಸುರುತ್ತಾನೆ,  “ ಅರಿವೀಯೆಂದು ಕೋರಲಿಕ್ಕೂ ಅರ್ಹತೆ ಬೇಕು, ಹೋಗಿ ನಿನ್ನಣ್ಣನನ್ನು ಕಳುಹು” ಎಂದು ರಾವಣ ಗುಡುಗುತ್ತಾನೆ. ರಾಮ ಬಂದವನೇ ಬೆಟ್ಟದ ತಪ್ಪಲಿನಂತೆ ಕಾಣುತ್ತಿದ್ದ ರಾವಣನ ಕಾಲು ಹಿಡಿದು ಜ್ಞಾನಭಿಕ್ಷೆ ಕೇಳುತ್ತಾನೆ, ರಾವಣ ಭಿಕ್ಷಾರ್ಹತೆಯಿರುವುದು ಬಾಗಿ ಕೈಗೊಂಡ ಪಾದಸ್ಪರ್ಶದಲ್ಲೇ ಹೊರತು ತಲೆಯಲ್ಲಲ್ಲ ಅನ್ನುತ್ತಾ ತನ್ನ ಅರಿವನ್ನು ತನ್ನ ಪಾದಗಳ ಮೂಲಕ ಹರಿಯಗೊಟ್ಟ ಹಾಗೇ ‘ಹರಿ’ಯೊಳಕ್ಕೆ ತನ್ನ ಪ್ರಾಣವನ್ನೂ… ಈ ಕಥೆಯಲ್ಲಿ ಸಾಮಾನ್ಯ ನಾವು ಯಾವುದನ್ನು ತಿರುಳಾಗಿ ತೆಗೆದುಕೊಳ್ಳುತ್ತೇವೋ ಆ ಮಾಡಬೇಕು-ಮಾಡಬಾರದುಗಳ ಬಗ್ಗೆ ಮಾತಾಡದೇ, ಹತ್ತು ತಲೆಯವನಿಗೆ ಇಪ್ಪತ್ತು ಕಿವಿಗಳಿದ್ದೀತಾ, ಹೊರುವ ಹೆಗಲೆಷ್ಟು ದೊಡ್ಡದಿದ್ದೀತು, ಹತ್ತಾರು ಕೈ-ಕಾಲುಗಳಲ್ಲಿ ಕೀಲುಗಳೆಷ್ಟಿದ್ದೀತು ಅನ್ನುತ್ತಾ ಚತುರ್ಮುಖ ಬ್ರಹ್ಮನ ಬಗೆಗಿನ ಇಂಥದೇ ಜಿಜ್ಞಾಸೆಗಳು, ಮುಂದುವರೆದು ರಾವಣನ ಚಿತ್ರದಲ್ಲಿ ತಲೆಗಳು ಹತ್ತರ ಬದಲು ಹನ್ನೊಂದಿದ್ದಿದ್ದರೆ ಸಿಮಿಟ್ರಿಯಿರುತ್ತಿತ್ತೆನ್ನುತ್ತಾ, ತಾವು ಕಂಡ ರಾವಣನ ಅಪೂರ್ಪದ ಕೆಲ ಚಿತ್ರವೊಂದರಲ್ಲಿ ಒಂಬತ್ತು ತಲೆಯಷ್ಟೇ ಇದ್ದು ಅವನು ನವಾನನನಾಗಿರುವ ಮಾತಾಡುತ್ತಾ, ಶಿಲ್ಪವೊಂದರಲ್ಲಿ ಅವನ ಹತ್ತನೇ ತಲೆ ಹಿಂಭಾಗದಲ್ಲಿರುವುದನ್ನು ಕಂಡು ಸಹಜ ಸಮತೋಲಕ್ಕು, ಸಿಮಿಟ್ರಿಗೂ ಇರುವ ಲೆಕ್ಕವನ್ನು ಹೀಗೆ ಅಭಿಪ್ರಾಯಸಿದ ಕಲಾಕಾರನಿಗೆ ಶರಣೆನ್ನುವಲ್ಲಿ ವಾಸ್ತುಶಿಲ್ಪಿ ವಸ್ತಾರೆ ಕಾಣುತ್ತಾರೆ. ಲಘುಧಾಟಿಯಲ್ಲೇ ಎಷ್ಟೋ ವಿಷಯಗಳನ್ನು ಹೇಳುವ ಈ ಬರೆಹ ಸಣ್ಣದೊಂದು ನಗುವನ್ನು ಓದು ಮುಗಿವವರೆಗೂ ಕಾಪಿಟ್ಟುಕೊಳ್ಳುತ್ತದೆ.

ಈ ನಡುವೊಂದು ಗೇ ಟಿಪ್ಪಣಿ ಎಂಬ ಬರೆಹ ಇಂಗ್ಲಿಷ್ ಭಾಷೆ ಈ ಪದವನ್ನು ನೌನು ಮತ್ತು ಅಡ್ಜೆಕ್ಟಿವ್ ಎರಡೂ ಆಗಿ ಬಳಸುವ ಸೋಜಿಗದ ಬಗೆಗಿನದು. ಈ ತಲೆಮಾರಿಗೆ ಭಾಷಿಕವಾಗಿ ಆ ಶಬ್ದ ಮತ್ತು ಸಾಮಾಜಿಕವಾಗಿ ಆ ಸಂದರ್ಭ – ಎರಡೂ ಕಡೆ  ಸಂಧಿಗ್ಧವಿಲ್ಲದಿರುವುದು ಮತ್ತು ಇದರ ಹಿಂದಿನ ತಲೆಮಾರುಗಳಿಗೆ ಸಂಧಿಗ್ಧ ಇರುವುದನ್ನು ಮಾತಾಡುವ ಇದು ಕೆಲವೇ ಸಾಲುಗಳದೊಂದು ಪುಟ್ಟ, ಆದರೆ ಗಾಢವಾಗಿ ಆವರಿಸುವ ಲಹರಿ.

 “ಹೇಳಿದ್ದು ಮುಖ್ಯವೋ, ಹೇಳಿದ ರೀತಿಯೋ” ಅಂತ ಶುರುವಾಗುವ ಒಂದು ಲಹರಿಯೊಳಗೆ ಒಂದೇ ಉಕ್ಕಿನಿಂದಾದ ಚಾಕು-ಚೂರಿಗಳೆಂಬ ಬೇರೆಬೇರೆಯೇ ಆದ ವಸ್ತುಗಳು, ಒಂದೇ ಬಗೆ ಮತ್ತು ಸಂಖ್ಯೆಯ ಕ್ರೊಮೋಸೋಮಿದ್ದರೂ ಇಷ್ಟೊಂದು ರೂಪವೈವಿಧ್ಯವಿರುವ ಮನುಷ್ಯರು ಅಂತ ಫಾರ್ಮು-ಕಂಟೆಂಟುಗಳ ಜಿಜ್ಞಾಸೆ ಬರುತ್ತದೆ. ಎ ಥಿಂಗ್ ಈಸ್ ಎ ಥಿಂಗ್ ನಾಟ್ ವಾಟ್ ಈಸ್ ಸೆಡ್ ಅಬೌಟ್ ಇಟ್ ಅನ್ನುವ ಮಾತಿಗೆ ಕೆಂಪುಕೊಕ್ಕು, ಹಸುರು ಮೈ, ಗಿಣಿಮಾತು ಯಾವ ವಿವರಣೆಯೂ ಅಲ್ಲ, ಗಿಣಿಯಾಗುವುದು ಗಿಣಿ ಮಾತ್ರ ಎಂಬ ದೃಷ್ಟಾಂತ, ನುಡಿ ಮತ್ತು ಮಾತು ಇವೆರಡರ ನಡುವಿನ ವ್ಯತ್ಯಾಸವನ್ನು ಹೇಳುವ ಬ್ರಹ್ಮ-ವಿಷ್ಣು-ಮಹೇಶ್ವರರು ಮತ್ತವರ ಪತ್ನಿಯರ ದೃಷ್ಟಾಂತ- ಇವೆಲ್ಲದರ ಕಡೆಗೆ ನುಡಿ ನೆಚ್ಚುಗೆಯ ಉಪೋತ್ಪನ್ನವೇ ಆದ ಈ ಭಾಷೆಯೆಂದರೇನು, ನುಡಿಯೇ, ಲಿಪಿಯೇ, ವ್ಯಾಕರಣ-ಕಾಗುಣಿತವೇ, ಪಂಕ್ಚುವೇಶನ್ನೇ, ಇವೆಲ್ಲ ಸೇರಿಯಾದದ್ದೇ, ಹೇಳಿದ್ದೇ, ಹೇಳಿದ್ದರಾಚೆಗಿನ ಅರ್ಥವೇ ಎಂಬ ಪ್ರಶ್ನೆ- ಇದಿಷ್ಟರೊಂದಿಗೆ ಇನ್ನೂ ಏನೇನನ್ನೋ ಸ್ವಾರಸ್ಯಕರವಾಗಿ ಹೆಣಿಗೆ ಮಾಡುವ ‘ಕಾಮಾ ನಂತರದಲ್ಲೊಂದು ಅವಶ್ಯ ಎಡೆ’ ಲೇಖನವನ್ನೆಲ್ಲರೂ ಓದಲೇಬೇಕು,

ಸೂರ್ಯನ ಆಮಂತ್ರಣಕ್ಕೆ ಓಗೊಟ್ಟು ಅವನೊಳಗೆ ಮುಳುಗೆದ್ದು ಬಂದ ನಂತರ ಒಂದಾನೊಂದು ಕಾಲದಲ್ಲಿ ಬೆಳ್ಳಂಬೆಳ್ಳಗಿದ್ದ ಕಾಗೆಯೊಂದು ಕರಟಿ ಕರ್ರಗಾಯಿತಂತೆ. ಅದನ್ನು ನೋಡಿ ನಕ್ಕ ಬಿಳಿಯಾನೆಗೆ ಅಯ್ಯೋಬಿಡು, ಆ ಸೂರ್ಯದೊಳಗೆ ಕರಿಬಿಳಿಯೆರಡೂ ಒಂದೇ, ಒಂದಿನ್ನೊಂದರ ನೆರಳು ಮಾತ್ರವೆಂಬ ಅಪ್ಪಟ ನಿಜವನ್ನು ಕರ್ರನೆ ಕರಿ ಕಾಗೆ ಬೋಧಿಸಿತಂತೆ.  ಈ ಕಥೆಯು ವೃಥಾ ಕಾಲಕ್ಷೇಪ ಅನ್ನುವ ಪದ್ಯವಾಗಿ, ತಾನು ಲಘುವಾದ ಲಹರಿಯಲ್ಲಿ ಬೆಳೆಯುತ್ತಲೇ ಗಹನ ವಿಷಯಗಳನ್ನು ಹೇಳುತ್ತದೆ. ಟ್ರಾಫಿಕ್ ಜ್ಯಾಮ್ ನಲ್ಲಿ ಕವಿ ವಸ್ತಾರೆಯವರು ತಾಸುಗಟ್ಟಲೆ ಸಿಲುಕಿಕೊಂಡ ಒಂದು ದಿನ ಕಾರಿನೊಳಗೆ ಕೂತಲ್ಲೇ ಹೊಳೆದ ಒಂದು ಸಾಲು ಈ ಪದ್ಯವಾಯಿತಂತೆ. ಬರೆಯಿಸಿಕೋ ಎಂದು ಒಳಗಿದ್ದು ಕಾಡುತ್ತಿದ್ದ ಈ ವೃತ್ತಾಂತವನ್ನು ಬರೆದು ನಿರಾಳನಾದೆ ಅನ್ನುವಾಗ ಬೇಂದ್ರೆಯವರು ಕಾವ್ಯವಾಗುವ ವಿಷಯವಸ್ತುವೊಂದು ಗಮನಕ್ಕೆ ಬಂದ ಹೊತ್ತಿನಿಂದ ಅದು ಕಾವ್ಯವಾಗಿಯೇಬಿಡುವ ತನಕ ನಿದ್ದೆಗೊಡದೇ ತನ್ನನ್ನು ಕಾಡುತ್ತಿತ್ತು ಅಂತ ಹೇಳಿದ್ದು ನೆನಪಾಯಿತು.

ಶರಶಯ್ಯೆಯಲ್ಲಿರುವ ಭೀಷ್ಮನ ದೇಹಕ್ಕೆ ಮುಪ್ಪಡರಿತ್ತೇ ಮನಸು ಕಾರ್ಪಣ್ಯಗಳಲಿ ಸೋತಿತ್ತೇ ಅನ್ನುವ ಜಿಜ್ಞಾಸೆಯೊಂದು ಕಾಂಬೋಡಿಯಾದ ಭಿನ್ನವೇ ಆದ ಒಂದು ಭೀಷ್ಮಾವತರಣಿಕೆಯೊಳಗೆ ಅರಳುತ್ತಾ ಹೋಗುತ್ತದೆ. ಇದರೊಳಗೆ ನೂರರಾಚೆಗಿನ ವಯಸ್ಸಿನ ಬಲುಹಿರೀಕ ಭೀಷ್ಮನನ್ನು ಕರಿಕೇಶಿಯಾಗಿ ಚಿತ್ರಿಸುವ ಸೋಜಿಗ ಮತ್ತದರೊಳಗೆ ನೆರೆಗೂದಲಿನ ಪಾಂಡವ-ಕೌರವರನ್ನು ಕಂಡು ಭೀಷ್ಮ ತಾನು ತಳಮಳಿಸಿದ ಸಂದರ್ಭವಿದೆಯಂತೆ.” ಭೀಷ್ಮನ ಆಯುಸ್ಸು ಪುರಾಣವಿದ್ದಂತೆ ಮತ್ತು ಕುರುಪುತ್ರರ ವಯಸ್ಸು ಇತಿಹಾಸದ ರೀತಿ”  ಅನ್ನುತ್ತಾ ಲೇಖಕರು  ವಯಸ್ಸನ್ನು ಲೆಕ್ಕಿಸುತ್ತಾ ಕಾಲದ ಘಟನಾವಳಿಗಳಲ್ಲಿ ನೆನಪುಗಳ ಮೂಲಕ ಹಿಂದೆ ಹಿಂದೆ ಚಲಿಸುತ್ತಾ ಹೋಗುವ ತನ್ನ, ತನ್ನ ತಾಯಿಯ, ಮನೆಗೆಲಸದವಳ, ಅವಳ ಸಖಿಯ ಇವರೆಲ್ಲರ ವರಸೆಗಳನ್ನು ಸಣ್ಣದೊಂದು ನಗುವಿನ ಜೊತೆ ಓದಿಸಿಕೊಳ್ಳುವಂತೆ ವಿಸ್ತರಿಸುತ್ತಾರೆ.  

ನಂಬಿಕೆ ಮತ್ತು ದಾಖಲೆ-ಅಂಕಿ-ಅಂಶ ಅಂತ ಸಾಕ್ಷಿ ಹುಡುಕಹೊರಡುವ ಮನೋಭಾವ- ಇವೆರಡರ ನಡುವೆ ನಮ್ಮ ನಿನ್ನೆಗಳ ಚೆಲುವು-ಸೊಗಸು ಸೊರಗುವ ಬಗ್ಗೆ ಹಲವಾರು ನಿದರ್ಶನಗಳ ಮೂಲಕ ಮಾತಾಡುತ್ತದೆ ಒಂದು ಲೇಖನ. ಮಾರ್ಖಂಡೇಯನನ್ನು ಶಿವ ತಬ್ಬಿ ಕಾಪಾಡಿದ ಜಾಗ ಅನ್ನುವ ಐತಿಹ್ಯ ಹೊಂದಿರುವ ತನ್ನ ಪರಿಚಯದ  ಖಾಂಡ್ಯವೆಂಬ ಸ್ಥಳ ಮತ್ತು ತಾನು ಆರ್ಕಿಟೆಕ್ಚರ್ ಕಲಿಯುವಾಗ ಓದಿದ ಗುಡಿಗೋಪುರ ಕಟ್ಟಲ್ಪಡಲು ಶುರುವಾದದ್ದು ಬುದ್ಧನ ಕಾಲಾನಂತರ ಅನ್ನುವ ಚರಿತ್ರೆ- ಇವೆರಡರ ನಡುವೆ ತನ್ನ ಬಾಲ್ಯದಲ್ಲಿ ಪುಳಕಗೊಳಿಸುತ್ತಿದ್ದ ಮಾರ್ಕಂಡೇಯನೆಂಬ ಆ ನಂಬಿಕೆ ಸೊರಗುವುದು, ಪಕ್ಕಾ ನೆನಪಿರುವ ಗೆಳತಿಯ ಹತ್ತು ಅಂಕಿಯ ಫೋನ್ ನಂಬರು ಮತ್ತು ನೆನಪಲ್ಲುಳಿಯದ ಅಣ್ಣನ ನಂಬರು- ಇದರಲ್ಲಿರುವ ನಮ್ಮ ಸ್ಮರಣಾಶಕ್ತಿ ಅಪ್ಪಿಕೊಳ್ಳುವ ಪ್ಯಾಟರ್ನು, ತಿರುಪತಿಯ ದೇವರೆಂದರೆ ಅಲಂಕಾರರಹಿತ ನಿರ್ವಾಣದ ರೂಪವೇ ಅಥವಾ ಸಾಲಂಕೃತ ವೈಭವದಲ್ಲಿ ಅದ್ದಿದ ರೂಪವೇ ಎಂಬ ಪ್ರಶ್ನೆ- ಹೀಗೆ ಬದುಕಿಗೆ ಬೇಕಾದ ಸ್ಪಷ್ಟತೆಯೆಷ್ಟು, ನಿರ್ದಿಷ್ಟತೆಯೆಷ್ಟು… ಎಂದು ಮಾತಾಡುತ್ತಾ ಹೋಗುವ ಈ ಬರೆಹ ಯೋಚನೆಗೆ ಹಚ್ಚುತ್ತದೆ.

ಮುಳ್ಳಯ್ಯನಗಿರಿಯ ಕತ್ತಲಕಾನು ಎಂಬ  ವಸ್ತಾರೆಯವರದೇ ಶಬ್ದಗಳಲ್ಲಿ ಹೇಳುವುದಾದರೆ “ಪಸುರುಹಂಬಿನ ನಿಬಿಡಾರಣ್ಯವೊಂದರಲ್ಲಿ “ ಆಕಾಶ ಚುಂಬಿಸುವಂತೆ ಬೆಳೆದಿದ್ದ ಬೃಹತ್ ಮರಗಳನ್ನು ಆಧರಿಸಿರುವ ಬೇರು ಎಷ್ಟು ಆಳಕ್ಕಿಳಿದಿರಬಹುದು ಎಂಬ ಜಿಜ್ಞಾಸೆ ಬರೆಹವಾಗಿ ಮುನ್ನಡೆಯುವ ಇನ್ನೊಂದು ಲೇಖನವೂ ಇದೇ ಧಾಟಿಯದು. ಇಂಜಿನಿಯರ್ ಗೆಳೆಯ ಬ್ರಿಂಜಾಲ್ಮಂಜನೆದುರು ಈ ಗೊಂದಲವನಿಟ್ಟಾಗ ನ್ಯೂಟನ್, ಐನ್ಸ್ಟೀನ್ ರವರ ವಿಚಾರಧಾರೆಗಳನ್ನು ಬಿಟ್ಟು ಆತ ಕೊಡುವ ವೈಜ್ಞಾನಿಕವಲ್ಲದ ಸರಳ ಮತ್ತು ಕಾಸ್ಮಿಕ್ ಪರಿಕಲ್ಪನೆಯ ಉತ್ತರವೇ  ಲೇಖಕರಿಗೆ ಮೈನವಿರೇಳಿಸುವಷ್ಟು ಅದ್ಭುತವಾಗಿ ಕಾಣುವುದು ಮತ್ತು   ಆಧುನಿಕ ವೈಚಾರಿಕತೆಯು ಭೌತಿಕವಿವರಗಳನ್ನಷ್ಟೇ ಪ್ರಮಾಣಬದ್ಧವಾಗಿ ಕಾಣುವುದೆಂಬ ಶುಷ್ಕ ಬೆಳವಣಿಗೆ- ಇವೆರಡು ವಿಷಯಗಳ ಸುತ್ತ ಲೇಖಕರ ಆಲೋಚನಾಲಹರಿಯೊಂದು ಸುತ್ತುತ್ತದೆ. ವಾಶ್ತುಶಿಲ್ಪಿಯ ವೈಜ್ಙಾನಿಕ, ತಾರ್ಕಿಕ ದೃಷ್ಟಿಕೋನದೊಳಗೆ ಬಳಲುವ ಮನುಷ್ಯಸಹಜ ಚಿಂತನೆಯ ದೃಷ್ಟಿಕೋನವನ್ನು ಸವಿಸ್ತಾರವಾಗಿ ಮನಸೊಪ್ಪುವಂತೆ ಇಲ್ಲಿ ಬಣ್ಣಿಸಲಾಗಿದೆ.

ಹದಿನಾಲ್ಕರಲ್ಲಿ ಹದಿನಾಲ್ಕನ್ನೂ ಇಲ್ಲಿ ಉಲ್ಲೇಖಿಸುವ ಅತ್ಯುತ್ಸಾಹ ಈಗ ಸಲ್ಲದು, ಇನ್ನೇನೇನು ಇರಬಹುದೆಂಬ ಕಾತರವೊಂದು  ಮಿಕ್ಕಂತೆ ಹಸಿಯಾಗಿಯೇ ಉಳಿಯಲಿ ಅನ್ನುವ ಉದ್ದೇಶದಿಂದ ಇನ್ನುಳಿದ ಲೇಖನಗಳ ಬಗ್ಗೆ ಪ್ರಸ್ತಾಪಿಸದೇ ಬಿಡುತ್ತಿದ್ದೇನೆ.

“ನಿರ್ದಿಷ್ಟ ಕೇಂದ್ರವೊಂದರ ಸುತ್ತ ನಿಗದಿತವಾಗಿ ಕ್ರಮಿಸುವಾಗ ವೃತ್ತವಾಗುತ್ತದೆ. ಹಾಗೇ ನಿರ್ದಿಷ್ಟ ವಸ್ತುವಿನ ಸುತ್ತ ಕಣ್ಮನ ಹಾಯಗೊಟ್ಟು ವೃತ್ತಾಂತವಾಗುತ್ತದೆ. ಈ ವೃತ್ತಾಂತವೆಂಬುದೂ ಮೂಲತಃ ವೃತ್ತವೇ ಆದುದರಿಂದ ಇದಕ್ಕೂ ಅದರದೇ ಅಳತೆ, ಮುನ್ನೂರ ಅರುವತ್ತು ಡಿಗ್ರಿ ಸುತ್ತಳತೆ”

ಹೀಗೆ ತನ್ನ ಪುಸ್ತಕದ ಹೆಸರಿನ ಔಚಿತ್ಯವನ್ನು ಅವರು ತಿಳಿಸಿಕೊಡುವ ರೀತಿಯಲ್ಲೇ ಅವರ ಅಷ್ಟೂ ಬರೆಹಗಳ ಒಂದು ವಿಶಿಷ್ಠವೂ ಸ್ಥೂಲವೂ ಆದ ಪರಿಚಯವಿದೆ. ನಾನು ಓದಿದಾಗ ಸುಖಿಸಿದ ಪರಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಕಾತರಕ್ಕಾಗಿ  ಪರಿಚಯಿಸಿದ್ದೇನೆ.

ಕವಿತೆಗೋ, ಕಥೆಗೋ, ಪ್ರಬಂಧ ಅಥವಾ ಲೇಖನಕ್ಕೋ ವಸ್ತಾರೆಯವರು ಆಯ್ಕೆ ಮಾಡಿಕೊಳ್ಳುವ ವಿಷಯವೂ ಸಾಮಾನ್ಯಕ್ಕಿಂತ ಭಿನ್ನವಾದದ್ದು. ಮತ್ತದನ್ನು ಪರಿಗಣಿಸುವ ರೀತಿ ಹಾಗೂ ಬರವಣಿಗೆಯನ್ನು ನಡೆಸುವ ಭಾಷೆಯ ಹೊಸದೇ ಆದೊಂದು ಲಯ- ಇವೆಲ್ಲವೂ ಸಾಮಾನ್ಯಕ್ಕಿಂತ ಬೇರೆಯ ತರಹದ್ದು.

ಕುತೂಹಲವನ್ನು ಕೆರಳಿಸುತ್ತಾ ಹಾಗೂ ತಣಿಸುತ್ತಾ ಸಾಗುವ ಓದಿನ ಅನುಭವಕ್ಕಾಗಿ ಈ ಪುಸ್ತಕವನ್ನು ಇಲ್ಲಿಯತನಕ ಓದಿಲ್ಲದೇ ಇರುವವರು ಈಗ ಕೈಗೆತ್ತಿಕೊಂಡಾರು ಅನ್ನುವ ಭರವಸೆ ನನ್ನದು.

ಅನುರಾಧಾ ಪಿ. ಸಾಮಗ

ಪುಸ್ತಕ: ೩೬೦ ಡಿಗ್ರಿ (ಪ್ರಬಂಧಗಳು)
ಲೇಖಕರು: ನಾಗರಾಜ‌ ರಾಮಸ್ವಾಮಿ‌ ವಸ್ತಾರೆ
ಪ್ರಕಾಶಕರು: ಸಂಚಿಮುದ್ರೆ, ಬೆಂಗಳೂರು
ಪುಟಗಳು: 118
ಬೆಲೆ: Rs. 200/-
ಪ್ರತಿಗಳಿಗಾಗಿ ಸಂಪರ್ಕಿಸಿ: 080-26718609/10

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x