ಬಾಗಿಲು ತೆಗೆದು ಒಳಗೆ ಬಂದೆ, ಸ್ಕೂಲ್ ನಿಂದ ಬಂದಿರೋ ನನಗೆ ಈಗ ವಿಶ್ರಾಂತಿ ಬೇಕು ಅಂತ ಅನಿಸ್ತು, ಕೆಲ ಗಳಿಗೆ ಕಾಲು ಚಾಚಿ ಕೂತೇ…. ನೀನು ಬೇಕು ಅನಿಸ್ತು, ಮನಸು ಖಾಲಿ ಅನ್ಸುದ್ರು ಆವರಿಸಿಕೊಂಡೇ ಇರೋ ಶಕ್ತಿ ಇರೋದು ನಿನ್ ಒಬ್ಬನಿಗೆ. ದಣಿದ ದೇಹಕ್ಕೆ ನಿನ್ನ ನೆನಪು ಹಿತ ಅನಿಸ್ತಾ ಇದೆ. ವಿಶಾಲ ಎದೆಯಲ್ಲೊಮ್ಮೆ ತಲೆ ಇರಿಸಿ, ನಿನ್ನ ಹೂ ಮುತ್ತೊಂದ ಬಯಸ್ತಾ ಇದ್ದೀನಿ ಒಂಥರಾ ಎನರ್ಜಿ ಟಾನಿಕ್. ನೀನು ನನ್ ಜೊತೆ ಇರೋ ಪ್ರತಿಗಳಿಗೇನೂ ಸಂಭ್ರಮ -ಅದು ಪ್ರೀತೇನೇ ಆಗಿರ್ಬೋದು ಅಥವಾ ಜಗಳ. ಪ್ರೀತಿಸುವಾಗ ನೀನು ಬರೀ ಮುದ್ದಿಸಿದರೇ, ಜಗಳ ಆದ ಮೇಲೆ ನೀನು ಸಂತೈಸೋದು, ಹಳೆ ನೆನಪುಗಳನ್ನ -ಮಾತುಗಳನ್ನ ನೆನಪಿಸೋದು, ನೂರು ಬಾರಿ ಸಾರಿ (sorry) ಕೇಳಿದ್ರೆ ಸಾವಿರ ಬಾರಿ ಐ ಲವ್ ಯು ಅಂತ ಹೇಳಿರ್ತ್ಯ, ನೀನು ಒಂದೊಂದು ಸಲ ಐ ಲವ್ ಯು ಅಂದಾಗ್ಲೂ ಇನ್ನೂ ಒಂದ್ಸಲ ಕೇಳ್ಬೇಕು ಅನ್ಸುತ್ತೆ.
ಒಂದು ಐ ಲವ್ ಯು ಗೆ ಒಂದು ಮುತ್ತು ಅಂದ್ರು ಸಾವಿರ ಮುತ್ತು, ಬಂಪರ್… ಜಗಳ ಮಾಡ್ದಾಗ ‘ಅಮ್ಮು ಸಾರಿ, ಅಮ್ಮು ಸಾರಿ ‘ಅಂದ್ರೆ ನಿನ್ನ ಇನ್ನೂ ಗೋಳಿಕೋ ಬೇಕು ಈಗ್ಲೇ ಕರ್ಗೊಗ್ಬಾರ್ದು ಅನ್ನಿಸ್ತಾ ಇರುತ್ತೆ. ಇನ್ನೊಂದು ಕಡೆ ಭಯ ನೀನೇದ್ರೂ ಸೀರಿಯಸ್ ಆಗಿ ತಗೊಂಡು ಮಾತು ಬಿಟ್ರೆ…. ಯಪ್ಪೋ ಜೀವನೇ ಹೋಗ್ಬಿಡತ್ತೆ ನಂದು. ಆಗೆಲ್ಲಾ ನಂಗೆ 40 ರ ನೆನಪೇ ಇರಲ್ಲ, ಇಪ್ಪತ್ತರ ಹರೆಯ ಅನ್ಸುತ್ತೆ -ನಿತ್ಯ ಪ್ರೇಮಿ.
ತಂದೆ -ತಾಯಿ, ಬಳಗನ ಬಿಟ್ಟು ನಿನ್ನ ಜೊತೆ ಬಂದಾಗ -ಜಗತ್ತಿನಲ್ಲಿ ಅತೀ ಹೆಚ್ಚು ಪ್ರೀತಿ ಮಾಡೋ ನನ್ನಪ್ಪನ ಬಿಟ್ಟು ಬದುಕ್ತೀನಾ ಅನ್ನೋ ಪ್ರಶ್ನೆಗೆ ನೀನೇ ತಂದೆ ಸ್ಥಾನದಲ್ಲಿ ನಿಂತು ನನ್ನಪ್ಪನ ನೆರಳು ಅನ್ನೋಹಾಗೆ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟಿದ್ದೀಯ. ಮದುವೆಯಾಗಿ ಗಂಡನ ಮನೆಗೆ ಕಳುಹಿಸುವಾಗ -ಬಟ್ಟಂ ಬಯಲಿನಲ್ಲಿ ಕಣ್ಣುಕಟ್ಟಿ ಬಿಟ್ಟಂಗೆ ಹಾಗಿತ್ತು, ಭಯ… ಭಯದಲ್ಲಿ ಎಳೆದ ಮೊದಲ ಉಸಿರು ಬಿಡುವ ಮುನ್ನವೇ ಓಡಿ ಬಂದು, ನನ್ನ ಮಗು ತರ ಎದೆಗವಿಚಿಕೊಂಡು ಅಪ್ಪನಷ್ಟೇ ಭರವಸೆ ಮೂಡಿಸಿದ -ಅಪ್ಪ.
ನೋವಿನಲ್ಲಿ ನರಳಾಡ್ತ, ಜೀವನದ ಬಹುತೇಕ ಸಂಧಿಗ್ಧತೆ ಗಳಲ್ಲಿ ಸಿಲುಕಿದ್ದಾಗ ಆರೈಕೆ ಮಾಡಿ, ಕೈ ತುತ್ತು ಕೊಟ್ಟಿದ್ಯ. ಅಬಾರ್ಶನ್ ಆಗಿ ಅತಿರಕ್ತ ಸ್ರಾವ ದಿಂದ ನಿತ್ರಾಣಳಾಗಿದ್ದಾಗ ನನ್ನ ಪ್ಯಾಡ್ ಕೂಡಾನೂ ಬದಲಾಯಿಸಿದ್ಯ.ಈಗಲೂ ತಲೆಗೆ ವಾರಕ್ಕೊಮ್ಮೆ ಎಣ್ಣೆ ಮಸಾಜ್ ಮಾಡ್ತ್ಯ, ಎದೆಯಾಲೊಂದನ್ನ ಉಣಿಸದ -ತಾಯಿ.
ಐದು ವರ್ಷಗಳ ಕಾಲ ಸಾಲು ಸಾಲಾಗಿ ಮಕ್ಳನ್ನ ಕಳ್ಕೊಂಡೆ, ಆಗೆಲ್ಲಾ ಅದರ ನೋವನ್ನ ಮರೆಸಿದೋನು…
ಮಗುವಿನಂತೆಯೇ ಮನಸು. ಕರುಣೆಗೋ -ಪ್ರೀತಿಗೋ ಒಂದೇ ಒಂದು ಗಳಿಗೆಯಲ್ಲೂ ಮಕ್ಕಳ ವಿಷಯವಾಗಿ ನೋಯಿಸದೇ, ಚುಚ್ಚು ಮಾತಾಡದೇ ನನ್ನ ಪ್ರೀತಿಸಿದ್ಯ. ನಾನದ್ರೋ ಹೆಣ್ಣು -ಯಾರಲ್ಲಾದರೂ ಹೇಳಿಕೊಂಡು ನೋವು -ನಿರಾಸೆ ಕಡಿಮೆ ಮಾಡ್ಕೋತಾ ಇದ್ದೆ. ಆದರೆ ನೀನು ಕಣ್ಮುಂದೆ ಯಾರೇ ಬಸುರಿ ಹೆಂಗಸ್ರು ಹೋದ್ರು, ಪುಟ್ಟ ಮಕ್ಕಳು ಇದ್ರು ನಿನ್ನ ಕಣ್ಣಲ್ಲಿ ಹೊಳಿತಾ ಇದ್ದ ಆ ಆಸೆನ ನಾನು ಎಷ್ಟೋ ಸಾರಿ ಗುರುತಿಸಿದ್ದೀನಿ. ಆದರೆ ನೀನ್ಯಾವತ್ತು ನನ್ನ ಹತ್ರ ಅದನ್ನ ನಿರಾಸೆಯಾಗಿ ಹೇಳಿಲ್ಲ ಬದಲಾಗಿ ಆತ್ಮಸ್ಥೈರ್ಯ ತುಂಬಿದ್ಯ. ಹಿರಿಯವರು ಮತ್ತೊಂದು ಮದುವೆ ವಿಷಯ ತಗೆದಾಗ ನಿನ್ನ ಕಣ್ಣಲ್ಲಿ ಕಂಡ ರೋಷ ಅವ್ರಿಗಾಗ್ಲೇ ತಿಳೀತು ನಮ್ಮ ಪ್ರೇಮ ಆರಾಧನೆ . ನನ್ನ ಪರ ನಿಂತ ನೀನ್ಯಾವಾಗ್ಲೂ ನನ್ನ -ಹಿರಿಮಗನೇ.
ಕೆಲಸಗಳ ಒತ್ತಡ, ಕೆಲವರ ದಬ್ಬಾಳಿಕೆ-ದೌರ್ಜನ್ಯ ಗಳಿಂದ ಕಮರಿ ಹೋಗಿದ್ದ ನನ್ನೊಳಗಿನ ಕವಿಯನ್ನ ಪ್ರೇರೇಪಿಸಿದ್ದು ಈ ಭಾವನಾಜೀವಿನೇ ಅಂದ್ರೆ ಬುದ್ದು ನೀನೇ ! ನೀನು ಯಾವಾಗ್ಲೂ ನನ್ನ born to win, born to win ಅಂತ ಹೇಳಿ, ಹೇಳಿ ಇಲ್ಲಿವರ್ಗು ಕರ್ಕೊಂಡ್ ಬಂದಿದ್ಯ, ನಿನ್ನ ಪರಿಶ್ರಮವನ್ನ ನನ್ನ ಗೆಲುವಾಗಿ ಮಾಡಿದ್ಯ ನಿನ್ನ ಬೆವರಿಂದ ನನ್ನ ಮತ್ತು ಮಗನ ಭದ್ರತೆಯನ್ನ ಕಲ್ಪಿಸಿದ್ಯ ನನ್ನ ಬೆನ್ನೆಲುಬಾಗಿ ನಿಂತು ಸದಾಕಾಲ ಬೆಳಕಿನತ್ತಲೇ ದಾರಿ ತೋರಿಸೋ ಗುರು ಆಗಿದ್ಯ. ಪ್ರತಿ ಗಂಡಿನ ಹಿಂದೆ ಒಂದು ಹೆಣ್ಣು ಅನ್ನೋದಕ್ಕೆ ಪ್ರತಿಯಾಗಿ ಹೆಣ್ಣಿನ ಯಶಸ್ಸಿನ ಹಿಂದೆ ಗಂಡು ಅನ್ನೋದನ್ನ ತೋರಿಸಿದ್ಯ.ನನ್ನ ಎಲ್ಲಾ ಯಶಸ್ಸು, ಆನಂದ, ಕನಸುಗಳ ನನಸು ಮಾಡಿದ, ಸದಾ ನನ್ನೊಡನಾಡಿ -ನನ್ನ ಗುರು.
ಈಗಾಗ್ಲೇ ಕತ್ಲಾಗಿದೆ, ಎಲ್ಲಾ ನಕ್ಷತ್ರಗಳು ಆಗಸದ ಮನೆಗೆ ಮರಳಿವೆ ನೀನಿನ್ನೂ ಬಂದಿಲ್ಲ. ಮನಸೆಲ್ಲಾ ನಿನ್ನ ದಾರಿನೇ ಕಾಯ್ತಾ ಇದೆ. ನೀನು ‘ಚಂದ್ರ’-ನಾನು ‘ಚಕೋರಿ’ ಅನ್ನೋ ಬದಲು, ನೀನು ಚಂದ್ರ ನಾನು ಮಾಲಾ ಅಂತಾನೆ ಚನ್ನಾಗಿದೆ. ನಿನ್ನ ಬಿಟ್ಟು ಒಂದು ದಿನಾನೂ ನಾನೆಲ್ಲೂ ಹೋಗಿಲ್ಲ, ಹೋಗೋದು ಇಲ್ಲಾ. ಯಾಕೆ ಗೊತ್ತಾ, ನೀನು ಜೊತೆಗಿದ್ರೆ ನಂಗೆ ಮೇಕಪ್, ಒಡವೆ ಬೇಕಾಗೇ ಇಲ್ಲ. ನಿನ್ನ ಸಾಂಗತ್ಯ ದಲ್ಲಿ ಸಿಗೋ ತೃಪ್ತಿ, ಆತ್ಮಸ್ಥೈರ್ಯ ಒಡವೆ ಮೇಕಪ್ನ ಮೀರಿಸುತ್ತೆ. ನಿನ್ನ ಪ್ರೀತಿಲಿ ಮಿಂದಿರೋ ನನಗೆ ನಿತ್ಯವೂ ಪ್ರೇಮಿಗಳದಿನ, ಪ್ರೇಮೋತ್ಸವ.
ಬೇಗ ಬಾ… ನಿನ್ನ ನೋಡೋ ತುಡಿತ ಕ್ಷಣ ಕ್ಷಣಕ್ಕೂ ಜಾಸ್ತಿ ಆಗಿ ಎದೆ ಜೋರಾಗಿ ಹೊಡ್ಕೋತಾ ಇದೆ ಒಂದ್ ಸಾರಿ ನೋಡ್ಬಿಟ್ರೆ ಸಾಕು ಅನ್ನೋ ಅಷ್ಟೂ ಉದ್ವೇಗ. ಆ ಗಳಿಗೆ ನಾ ಬಿಡೋ ನಿಟ್ಟುಸಿರು ನಿನ್ನ ಹತ್ರ ಸಾವಿರ ಮಾತುಗಳನ್ನ ತರುತ್ತೆ. ನನ್ನ ಪ್ರೇಮ ನಿವೇದನೆಗೆ ಈ ರಾತ್ರಿ ಎಷ್ಟು ಮೌನವಾಗಿದೆ ಅಂದ್ರೆ ನನ್ನಷ್ಟೇ ಆ ಕತ್ತಲು ಕೂಡ ಕಾಯ್ತಾ ಇದೆ. ದೂರದೆಲ್ಲೆಲ್ಲೋ ಒಂದ್ ಹಾಡು “ನನ್ನ ಪ್ರಿಯನಿಗೆ ನೆನಪಿನ ಅಭಿಷೇಕ….. “.
–ಮಾಲಾ ಕೆ.
Nice.