ಸ್ವಾಮ್ಯಾರ `ಸೌಜನ್ಯ’ : ಎಫ್. ಎಂ. ನಂದಗಾವ

ಬೆಂಗಳೂರಿನ ಸಂಚಲನ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್. ಎಂ. ನಂದಗಾವ ಅವರ ಹೊಸ ಕಥಾ ಸಂಕಲನ ಘಟ ಉರುಳಿತು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಘಟ ಉರುಳಿತು’ ಕಥಾ ಸಂಕಲನದಲ್ಲಿನ ಸ್ವಾಮ್ಯಾರ ಸೌಜನ್ಯ’ ಕತೆ ‘ಪಂಜು’ವಿನ ಓದುಗರಿಗಾಗಿ. .

“ಊರಾಗ, ಬಾಳ ಅನ್ಯಾಯ ಆಗಾಕ ಹತ್ತೇದ, ಸ್ವಾಮ್ಯಾರು ಎಡವಟ್ಟ . . ”

ಸಂತ ಅನ್ನಮ್ಮರ ಗುಡಿಯ ವಿಚಾರಣಾ ಗುರುಗಳ ಜೋಡಿ ಮುಂಜಾನೆ ನಾಷ್ಟಾ ಮಾಡತಿದ್ದ ಸಾಲು -ಸಾಲಮೊನಪ್ಪ. ದಂಡೀನ, ವಿಷಯ ಪ್ರಸ್ತಾಪಿಸಲಿಕ್ಕ ಶುರು ಮಾಡಿದ್ದ.

ರಾತ್ರಿ ಕಡಿ ಬಸ್ಸಿಗೆ ಈ ಊರಿಗೆ ಬಂದಿದ್ದ ಗುರುಗಳ ತಮ್ಮ -ಸಾಲಮೊನಪ್ಪ, ಅಣ್ಣ ನಾಗಿರುವ ಸಂತ ಅನ್ನಮ್ಮರ ಗುಡಿಯ ಧರ್ಮಕೇಂದ್ರದ ಗುರುವಿಗೆ- ಪ್ಯಾರಿಷ್ ಪ್ರೀಸ್ಟ್ಗೆ, ಊರಾಗಿನ ಮನೀದ ಒಂದ ಖಾಸಾ ವಿಷಯ ತಿಳಿಸಬೇಕಂತ, ತುದಿಗಾಲಲ್ಲಿ ಬಂದು ಕುಂತಿದ್ದ ಊಟದ ಟೇಬಲ್ಲಿಗೆ.

ರಾತ್ರಿ ಬಂದಾಗ ಭಾಳ ತಡಾ ಆಗಿತ್ತು. ಒಂಬತ್ತೂವರೀದ ಕಡಿ ಬಸ್ಸು ಅವರ ಊರಿಂದ ಬರೂದು. ಸಂಜಿ ಮುಂದ ನಾಲ್ಕಕ್ಕ ಕೂತರ, ಅವರು ಈ ಊರಿಗೆ ಬರಬೇಕಂದ್ರ, ಏನಿಲ್ಲ ಅಂದರೂ ಐದ ತಾಸ ಆಗೂದು. ಅಣ್ಣಗ ಮೊದಲ ಮೊಬೈಲ್ ಫೋನನೊಳಗ ತಾ ಬರೂದನ್ನ ತಿಳಿಸಿದ್ದ. ಬಂದ ತಕ್ಷಣ ಮಜುಕೂರ ತಿಳಸಾಕ ಅವನಿಗೆ ಮುಜಗರ ಆಗಿತ್ತು. ಒಂದು ಧರ್ಮಕೇಂದ್ರದ -ಪ್ಯಾರಿಷ್ನ ಒಬ್ಬ ಗುರುಗಳ ಮ್ಯಾಲ, ಇನ್ನೊಂದು ಧರ್ಮಕೇಂದ್ರದ ಇನ್ನೊಬ್ಬ ಗುರುಗಳ ಮುಂದ ಆರೋಪ ಮಾಡೂದ ಹೆಂಗ? ರಾತ್ರಿ ಬಂದಾಗ, ಅವನಿಗಾಗಿ ಕಾದಿದ್ದ ಅಡುಗೆಯಾಳು ಕ್ಲಾರಮ್ಮ, ಊಟ ಬಡಿಸಿದ್ದಳು. ಅವನಿಗಾಗಿ ಸಿದ್ಧಪಡಿಸಿದ್ದ ಸ್ವಾಮ್ಯಾರ ಮನೆಯಲ್ಲಿನ -ಪ್ರೆಸ್ಬಿಟರಿಯಲ್ಲಿನ ಗೆಸ್ಟ್ ರೂಂನಲ್ಲಿ ಅವನಿಗೆ ಮಲಗಾಕ ವ್ಯವಸ್ಥಾ ಮಾಡಿದ್ದಳು. ಮರುದಿನ ರವಿವಾರ. ಶನಿವಾರ ರಾತ್ರಿ, ಮರುದಿನದ ರವಿವಾರದ ಪೂಜ್ಯಾಗ ಪ್ರಸಂಗ ಮಾಡಾಕ ಅಣ್ಣಾ ಪೂರ್ವಸಿದ್ಧತೆಯಲ್ಲಿ ತೊಡಗುತ್ತಿರುವುದು ಸಾಲಮೊನಪ್ಪನಿಗೆ ಗೊತ್ತಿತ್ತು. ಹಿಂಗಾಗಿ ಚರ್ಚ್ ಕಂಪೌಂಡ ಮುಟ್ಟಿದ ಕೂಡಲೇ ಅಣ್ಣನ ಖೋಲಿಗೆ ನುಗ್ಗಿರಲಿಲ್ಲ.

ಅಷ್ಡರಲ್ಲಿ, ಅಡುಗೆಯಾಳು ಕ್ಲಾರಮ್ಮ ಒಳಗೆ ಬಂದು, “ಫಾದರ್, ಇಂದ ತಿಂಗಳ ಮೊದಲನೇ ರವಿವಾರ ಅದ, ಇಂದ ಪಾಲನಾ ಸಮಿತಿ ಮೀಟಿಂಗ ಅದ. ಮಂದಿ ಹೊರಗ ಕಾಯ್ತಿದ್ದಾರ’’ ಅಂದಳು.

ತಮ್ಮ -ಸಾಲಮೊನಪ್ಪನ ಮಾತುಗಳ ಕಡೆಗಿದ್ದ ಗುರುಗಳ ಲಕ್ಷö್ಯ, ಈಗ ಕ್ಲಾರಮ್ಮಳ ಕಡೆಗೆ ತಿರುಗಿತ್ತು.

ಮೊದಲನೇ ಪೂಜಿ ಹೇಳಿದ್ದ ಸಹಾಯಕ ಗುರುಗಳು ಇವತ್ತು, ಎಲ್ಲರ ಜೊತಿ ಬ್ರೆಕ್ ಫಾಸ್ಟ್ ಗೆ ಬರದೇ, ಮೊದಲ ನಾಷ್ಟಾ ಮಾಡಿ ತಮ್ಮ ಖೋಲಿಗೆ ಹೋಗಿದ್ದರು. ಅವರಿಗೆ ಗುರುಪಟ್ಟ ಆಗಿ ಏಳ ತಿಂಗಳ ಆಗಿದ್ದವು. ಇಷ್ಟ ದಿವಸ, ಬಿಷಪ್ ಹೌಸ್ನಲ್ಲೇ ಅವರನ್ನು ಇಟ್ಟಗೊಂಡಿದ್ದರು ಬಿಷಪ್ಪರು. ಪ್ಯಾರಿಷ್ ಎಕ್ಸಪಿರಿಯನ್ಸ ಅಗಲಿ ಅಂತ ಅವರನ್ನ ಇಲ್ಲಿಗೆ ಹಾಕಿದ್ದರು. ಅವರು ಇಲ್ಲಿಗೆ ಬಂದ ಹದಿನೈದ ದಿನಾ ಆಗಿತ್ತು.

ಒಂಬತ್ತು ವರ್ಷ ಗುರುಮಠದಲ್ಲಿ ಓದಿ ಹೊಸದಾಗಿ ಗುರುಗಳ ಪಟ್ಟಕ್ಕ ಏರಿದ್ದ ಹುಡುಗಾಟಿಕೆಯ ಯುವಗುರುಗಳಿಗೆ, ಸ್ವತಂತ್ರವಾಗಿ ಗುಡಿಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಡುವ ಮೊದಲ, ಅವರನ್ನ ಕನಿಷ್ಠ ಮರ್ನಾಲ್ಕ ಗುಡಿಯ ಧರ್ಮಕೇಂದ್ರಗಳಲ್ಲಿ ಧರ್ಮಕೇಂದ್ರದ ಸಹಾಯಕ ಗುರುಗಳಾಗಿ ಕಳಸೂದು ರೂಢಿ ಅದ, ಅವರಿಗೆ ಆಯಾ ಗುಡಿಯ ವ್ಯಾಪ್ತಿಗೆ ಸೇರುವ ಧರ್ಮಕೇಂದ್ರ – ಪ್ಯಾರಿಷ್ ಮುನ್ನಡೆಸಿಕೊಂಡು ಹೋಗೂದು, ಧರ್ಮಕೇಂದ್ರದ ಜನರ ಜೋಡಿ ಹೆಂಗ ವ್ಯವಹಾರ ನಡಸೂದು ಅಂತ ಎಲ್ಲಾ ಸೂಕ್ಷö್ಮವಾಗಿ ಹೇಳಿಕೊಡಬೇಕು. ಗುಡಿ ವ್ಯವಹಾರ ಗೊತ್ತಾಗಬೇಕು. ಅದೊಂದ ದೊಡ್ಡ ಜವಾಬ್ದಾರಿ. `ಯಾವುದೇ ಪ್ಯಾರಿಷ್ನಲ್ಲಿ ಮಿಖೇಲಪ್ಪ ಫಾದರ್ ಅದಾರ ಅಂದ್ರ ಆತು, ಅಲ್ಲಿ ಯಾವ ಸಮಸ್ಯೆನೂ ಇರೂದಿಲ್ಲ. ಎಲ್ಲಾ ಸುರಳೀತ ನಡಕೊಂಡ ಹೋಗ್ತದ ಅನ್ನೂ ಮಾತು ನಮ್ಮ ಈ ಧರ್ಮಪ್ರಾಂತ್ಯದ – ಡಯಾಸಿಸ್ಸನ ಎಲ್ಲಾ ಹಿರಿಯ ಗುರುಗಳ ಬಾಯಲ್ಲಿ ಕೂತಬಿಟ್ಟದ’. ಬಿಷಪ್ಪರಿಗಂತೂ ಮಿಖೇಲಪ್ಪ ಫಾದರ್ ಅಂದ್ರ ಆತು, ಅವರನ್ನು ತಮ್ಮ ಮಗನಂಗ ಟ್ರೀಟ್ ಮಾಡ್ತಾರು. ಅವರನ್ನು ಅವರು “ಹಲೋ ಫಾದರ್ ಮಿಖೇಲಪ್ಪ ದಂಡೀನ, ಮೈ ಡೀಯರ್ ಸನ್, ಬಿಕಾಜ್ ಆಫ್ ಯುವರ್ ನೇಮ್ ಯು ಬಿಕಮ ಅಪ್ಪ- ಫಾದರ್’ ಅನಕೋತ ಚಾಷ್ಟಿ ಮಾಡತ ಮಾತಾಡಸ್ತಾರ. ಫಾದರ್ ಮಿಖೇಲಪ್ಪ ಅವರ ಕೈ ಕೆಳಗ ಅಸಿಸ್ಟಂಟ್ ಗುರುಗಳಾಗಿ ಕೆಲಸ ಮಾಡಿದ ಫಾದರ್ ಅಂದ್ರ ಸಾಕು, ಅವರು- ಆ ಫಾದರ ಗಳು ಪ್ಯಾರಿಷ್ ನ ಎಲ್ಲ ವಿಷಯದೊಳಗ ಪಳಗ್ಯಾರ ಅನ್ನೂ ಮಾತ ಡಯಾಸಿಸ್ ಒಳಗ ಚಾಲ್ತಿಯಲ್ಲದ.

“ನಮ್ಮ ಅಸಿಸ್ಟಂಟ್ ಪ್ಯಾರಿಷ್ ಪ್ರೀಸ್ಟ್ ಅದಾರಲಾ, ಫಾದರ್ ಜೋಕಿಂ ಅವರಿಗೆ ಸ್ವಲ್ಪ ಪ್ಯಾರಿಷ್ ಹಾಲಲ್ಲಿ ಕೂಡಿರೂ ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ಸದಸ್ಯರನ್ನು ಪರಿಚಯ ಮಾಡಕೊಳ್ಳಾಕ ಹೇಳು. ನಾನು ಲಗೂನ ಅವರ ಹಿಂಬಾಲ ಬಂದ ಸರ್ಕೊಳ್ಳತೀನಿ. ’’

“ಸ್ವಾಮ್ಯಾರು, ಅಣ್ಣಾ . . ‘’

ತಮ್ಮ ಸಾಲಮೊನಪ್ಪನ ಮಾತನ್ನು ಅರ್ಧಕ್ಕೆ ಕತ್ತರಿಸಿದ ಫಾದರ್ ಮಿಖೇಲಪ್ಪ, ಅವರು, “ಸಾಲು, ನಾನು ಮಧ್ಯಾಹ್ನ ಅಷ್ಟೊತ್ತಿಗೆ ಬರ್ತೀನಿ. ತಡಾ ಅನ್ನಿಸಿದರ ನೀನು ಟೈಮಿಗೆ ಸರಿಯಾಗಿ ಊಟ ಮಾಡು. ಮಿಟಿಂಗ್ ಮುಗಸ್ಕೊಂಡ ಬರ್ತೀನಿ, ಆಯಿತಾ. . ’’ ಎಂದು ಕೈ ತೊಳೆದು ಹೊರಟೇ ಬಿಟ್ಟರು.

ಎರಡನೇ ಪೂಜೆಗೆ ಹೋಗಿದ್ದ ಸಾಲಮೊನಪ್ಪ ಬೆಳಗಿನ ತಿಂಡಿ ಸನಾ ಇಡ್ಲಿ, ಮೀನು ಸಾರು ತಿಂದದ್ದೇ ಆಯಿತು.

*

ಅಣ್ಣ ಹೊಸದಾಗಿ ಈ ಊರಿನ ಸಂತ ಅನ್ನಮ್ಮರ ಗುಡಿಗೆ ಧರ್ಮಕೇಂದ್ರದ ಗುರುವಾಗಿ ಬಂದ ವ್ಯಾಳೆದಾಗ, ಅಂದರ ಸುಮಾರ ಒಂದೂವರೆ ತಿಂಗಳ ಹಿಂದ ಬಂದಾಗ, ಜಾಲಿಯಾಗಿ ಮಾತಾಡಿಕೊಂಡು ಓಡಾಡುತ್ತಿದ್ದ ವಾಚಮನ್ ತ್ರಿಮೂರ್ತಿ ಇಂದು ಸಾಲಮೊನಪ್ಪನಿಗೆ ಕಾಣಲಿಲ್ಲ.

ವಾಚಮನ್ ಹೆಸರು ತ್ರಿಮೂರ್ತಿ ಅಲ್ಲ ತಿಮೋತಿ’. ಆದರ, ಹೈಸ್ಕೂಲ್ ಹುಡುಗರು ಸುಮ್ಮನಿರಬೇಕಲ್ಲ. ಎಲ್ಲಾರಿಗೂ ಹೆಸರಿಡುವಂಗ ತಿಮೋತಿಗೂ ತ್ರಿಮೂರ್ತಿ ಎಂದು ಹೆಸರಿಟ್ಟಿದ್ದರು. ಗಣಿತದ ಮಾಸ್ತರರನ್ನುಅಂಕಿ ಮಾಸ್ತರ್ ಡಾಂಕಿ ಮಾಸ್ತರ್’ ಎಂದು ಪ್ರಾಸವಾಗಿ ಹಾಡಿಕೊಂಡು ಓಡಾಡತಿದ್ರು ಹುಡುಗರು ಅಂತ, ಈ ತಿಮೋತಿನ ಸಾಲಮೊನಪ್ಪನಿಗೆ ಹೇಳಿದ್ದ.

ತಿಮೋತಿದು ಒಂಟಿ ಜೀವ. ಬಡತನದ ಕುಟುಂಬದಲ್ಲಿ ಹುಟ್ಟಿದ್ದ. ಸಣ್ಣವನಿದ್ದಾಗ ಚಕ್ಕಡಿ ಮ್ಯಾಲ ಯಾರದೋ ಗುಡ್ಡದ ಹೊಲಕ್ಕ ದುಡಿಮಿಗೆ ಹೊಂಟಾಗ, ಗಾಡಿ ಒಗ್ಗಾಲಿ ಆಗಿ ಬಿದ್ದಿತ್ತು. ಎತ್ತಗೋಳು ಮತ್ತ ತಿಮೋತಿಯ ಅವ್ವ ಅಪ್ಪ ಸೇರಿ ಒಟ್ಟ ನಾಕ ಮಂದಿ ಕೂಲಿಯಾಳುಗಳು ಸತ್ತಿದ್ದರು. ಹಿಂದಿಲ್ಲ ಮುಂದಿಲ್ಲದ ಅನಾಥ ಹುಡುಗ ತಿಮೋತಿಯನ್ನ ತಂದ ಹೈಸ್ಕೂಲಿನ ಪಕ್ಕದ ಅನಾಥಾಶ್ರಮಕ್ಕ ಸೇರಿಸಿದ್ದರು. ಅಲ್ಲೊಂದ ಸಾಲಿನೂ ಇತ್ತೂ. ಕುಟುಂಬದ ಸದಸ್ಯರನ್ನ ಕಳಕೊಂಡ ಅಂತರ್ಮುಖಿಯಾಗಿ, ಮಂಕಾಗಿ ಕೂಡತಿದ್ದ. ತಿಮೋತಿಗೆ `ವಿದ್ಯಾ’ ತಲಿಗೆ ಹತ್ತಲಿಲ್ಲ. ಕಡೀಕ ಅದ ಸಾಲ್ಯಾಗ ವಾಚಮನ್ನಕಿ ಮಾಡಕೋತ ಜೀವನ ನಡಸ್ತಿದಾನಂತ. ಹಂಗಂತ ಅಡುಗೆ ಆಳು ಕ್ಲಾರಮ್ಮ ಹೇಳೂದನ್ನ ಸಾಲಮೊನಪ್ಪ ಕೇಳಿಸಿಕೊಂಡಿದ್ದ.

“ಕ್ಲಾರಮ್ಮ, ನಮ್ಮ ತ್ರಿಮೂರ್ತಿಗೆ ಏನಾಗೇದ? ಹುಷಾರಿಲ್ಲ? ನಿನ್ನೆ ಬಂದಾಗಿನ ಕುಟ ಅವನ್ನ ನೋಡೆ ಇಲ್ಲ ನಾನು’’

“ಅವನಿಗೇನ್ ಧಾಡಿ ಅಗೇದರಿ? ಅವಾಂ ಆರಾಮ ಅದಾನು. ತನ್ನ ಕೆಲಸ ಆತು ತಾನಾತು ಅನಕೋತ ಕೂತಾನು. ’’

“ಯಾಕ ಏನಾತು? ಒಬ್ಬಂಟಿ ಜೀವ. . ’’

“ಏನೂ ಆಗಿಲ್ಲ ಅವಂಗ. ಯಾರ ಛಂಧ ಮಾತಾಡತಾರ ಅವರ ಕೂಟ ಹೋಗ್ತಾನು. ಯಾರರೇ ಏನರೆ ಅಂದ್ರ, ಮನಸಿಗೆ ಹಚಗೊಂಡ ಕೂಡತಾನು. ವಿಚಾರಣಾ ಸ್ವಾಮ್ಯಾರಿಗೆ ಯಾರರೇ ಸುಮ್ಮಸುಮ್ಮಕ ಏನರೆ ಅಂದ್ರ ಅವನಿಗೆ ಬಾಳ ಸಿಟ್ಟ ಬರ್ತದ. ಇವನಿಗೆ ಅದು ಸುಖಾಸುಮ್ಮನ, ಆದರ, ಅನಭಿಸಿದೋರಿಗೆ. . ’’

“ಅಂಥಾದ್ದ ಏನಾತ ನಮ್ಮವ್ವ. ನಮ್ಮಣ್ಣ ಫಾದರ್ ಗ ಯಾರ ಏನ್ ಅಂದ್ರ ಏನ?’’

“ಹಂಗೇನ್ ಇಲ್ಲ, ಒಂದ ಮಾತ ಬರ್ತದ ಹೋಗ್ತದ. ಗುಡಿ ಧರ್ಮಕೇಂದ್ರ, ಸಾಲಿ, ಬೋರ್ಡಿಂಗ ಅಂದ್ರ, ಮಂದಿ ಬಾಯಿಂದ ನಾಕ ಮಾತ ಕೇಳಬೇಕಾಗ್ತದ. ಅಂಥಾ ಮಾತ ಕೇಳಿದರ ಅವನಿಗೆ ಆಗಾಂಗಿಲ್ಲ. ಏನಕೇನರ ಮಾತಾಡ್ತಾನು. ಅದಕ್ಕ ಹಂಗ ಏನರೇ ಆತು ಅಂದ್ರ, ನೀ ಸಾಲಿ ಗೇಟ್ ಬಾಗಾಲಾ ಕಾಯೂದ ಬ್ಯಾಡ. ಮನಿಗೆ ಹೋಗಿ ತಣ್ಣಗ ಮಲಕ್ಕೊ ಅಂತ ಸ್ವಾಮ್ಯಾರು ಹೇಳ್ಯಾರ. ಅದಕ್ಕ ಅವಾಂ ನಿನ್ನೆ ಯಿಂದ ಇಲ್ಲಿತನಕ ನಿಮ್ಮ ಕಣ್ಣಿಗೆ ಬಿದ್ದಿಲ್ಲ. ’’

“ಮಂದಿ ಏನಂದ್ರು ನಮ್ಮಣ್ಣ ಫಾದರ್ ಗ?

“ಅಯ್ಯೋ ಏಸುವೆ? ಅದೇನೋ ಅಂತಾರಲ್ಲಾ ಮಸೀದಿಗೆ ನಮಾಜಿಗೆ ಹೋದರ ಮಸೀದಿ ಕಡಕೊಂಡ ಮೈಮ್ಯಾಲ ಬಿತ್ತ ಅಂತ. ಹಂಗಾತ ನೋಡ್ರಿ ನನ್ನ ಬಾಳವೆ. ನೀವ್ ಏನೋ ಕೇಳಿದಿರಿ. ನಾ ಏನೋ ಹೇಳಿದೆ. ಎಲ್ಲಾ ನನ್ನ ಬುಡಕ್ಕ ಬರಾಕ ಹತ್ತೇದ. ನಮ್ಮಪ್ಪ, ನನಗ ಏನೂ ಗೊತ್ತಿಲ್ಲ. ಮಾರಾಯರ, ನೀವ ಅದೀರೀ ಸ್ವಾಮ್ಯಾರ ಅದಾರು, ನನ್ನ ನಡಬರಕ ತರಬ್ಯಾಡರಿ. ನನ್ನ ಸಣ್ಣ ಸಂಸಾರದ ಎರಡ ಹೊತ್ತಿನ ಕೂಳಿಗೂ ಕಲ್ಲ ಹಾಕಾಕ ಹೋಗಬ್ಯಾಡರಿ. ’’

ಸಾಲಮೊನಪ್ಪ, ಕ್ಲಾರಮ್ಮಳೊಂದಿಗೆ ಮುಂದೆ ಮಾತು ಬೆಳೆಸಲು ಆಗಲಿಲ್ಲ. `ನಾ ಒಂದ ಚಿಂತಿ ಕಳಕೊಳ್ಳಾಕ ಇಲ್ಲಿ ಬಂದ್ರ, ನಮ್ಮಣ್ಣ ಫಾದರ್ ಬ್ಯಾರೆ ಚಿಂತ್ಯಾಗ ಬಿದ್ದಾನಲ್ಲಪೋ?’ ಸಾಲಮೊನಪ್ಪ ಚಿಂತಿತನಾದ.

`ಸುಮ್ಮನ ಊರಿಗೆ ವಾಪಸ್ ಹೋದರ ಹೆಂಗ? ನಮ್ಮೂರಾನ ಕತಿ ಮತ್ತ ಒಂದ ದಿನ ಬಂದ ಹೇಳಕೊಂಡರಾತು. ಈಗ ನಮ್ಮಣ್ಣನ ತಲಿಮ್ಯಾಲ ಏನ ಬಂದ ಕುಂತದ ಏನೋ? ಆದರ, ಇಷ್ಟ ದೂರ ಊರ ಬಿಟ್ಟ ಬಂದಾಗೇದ. ಬರಿಗೈಲಿ ಊರಿಗೆ ಹೋದರ ಊರಾನ ಮಂದಿ ಏನಂದಾರೂ. ಏನಕೇನರ ಆಗಲಿ. ಬಂದ ಕೆಲಸ ಮುಗಿಸಿಕೊಂಡ ಹೋಗೂದ ಪಾಡ. ’ ಸಾಲಮೊನಪ್ಪ ಒಂದು ಗಟ್ಟಿ ನಿರ್ಧಾರಕ್ಕೆ ಬಂದ ನಿಂತ.

*

ಅವತ್ತಿನ ಪೇಪರ್ ಓದಿದ. ಒಬ್ಬನ ಬ್ಯಾಸರಕಿ ಬಂದ ಅಡಗಿ ಮನಿ ಕಡೆ ಹ್ವಾದ ಸಾಲಮೊನಪ್ಪ. ಕ್ಲಾರಮ್ಮ ಮಧ್ಯಾನ್ನದ ಸಾರಿಗೆ ಕೊಬ್ಬರಿ ರುಬ್ಬಕೋತ ಕೂತಿದ್ದಳು.

“ಯಾಕ ಕ್ಲಾರಮ್ಮ, ಇಲ್ಲಿ ಮಿಕ್ಸರ್ ಗಿಕ್ಸರ್ ಇಲ್ಲೇನ್? ರುಬ್ಬು ಗುಂಡು ಮುಂದ ಕೂತ ರುಬ್ಬಕೋತ ಕೂತಿಯಲ್ಲ. ’’

“ಸಾಲಿ ಬೋರ್ಡಿಂಗ್ ಒಳಗ ದೊಡ್ಡ ಮಿಕ್ಸರ್ ಐತಿ. ಇಲ್ಲೂ ಇತ್ತು. ಯಾಕೋ ಸಣ್ಣ ಮಿಕ್ಸಿಯೊಳಗ ನಾಕ ಮಂದಿ ಅಡಿಗಿಗೆ ಕೊಬ್ಬರಿ ಸಣ್ಣ ಮಾಡಿದರ ರುಚಿ ಬಾಯಿಗೆ ಹತ್ತೂದಿಲ್ಲ. ಕಲ್ಲಿನ ರುಬ್ಬಗುಂಡದಾಗ ಕೊಬ್ಬರಿ ರುಬ್ಬಿದರ ಅದರ ರುಚಿ, ಸ್ವಾದ ಬ್ಯಾರೆ ಬರ್ತದ. ನನಗ ಸಣ್ಣಾಕಿಂದಲೂ ಇದ ರೂಢಿ ಅದ. ಅದಕ್ಕ ರುಬ್ಬಕೋತ ಕೂತೀನಿ. ’’

“ಅಂದಂಗ, ಇಲ್ಲಿ ಗುಡಿ ಪಾಲನಾ ಸಮಿತಿ, ಅಂದ್ರ ಪ್ಯಾರಿಷ್ ಕೌನ್ಸಿಲ್ನ್ಯಾಗ ಯರ್ಯಾರ ಇರ್ತಾರು? ನಮ್ಮ ಊರಾಗ, ಗುಡಿ ಸ್ವಾಮ್ಯಾರು, ಕನ್ಯಾಮಠ- ಕಾನ್ವೆಂಟಿನ ಒಬ್ಬ ಅಮ್ಮನೋರು, ನಮ್ಮಲ್ಲಿಂದ ನಾಕಮಂದಿನ್ನ ಸೇರಿಸಿಕೊಂಡ ಪಾಲನಾ ಸಮೀತಿ ಮ್ಯಾಡ್ಯಾರು. ಇಲ್ಲೂ ಹಂಗ ಏನು? ಈಗ ನಮ್ಮಣ್ಣ, ಗುಡಿಯ ಧರ್ಮಕೇಂದ್ರದ ಗುರುವಿನ ಜವಾಬ್ದಾರಿ ಮ್ಯಾಲ, ಅದ ಸಮಿತಿ ಮಿಟಿಂಗ್ ಗೆ ಹೋಗ್ಯಾನಲ್ಲ? ಅದಕ್ಕ ಕೇಳಿದೆ. ’’

“ಇಲ್ರೆಪಾ ಇಲ್ಲಿ ಪ್ಯಾರಿಷ್ ಕೌನ್ಸಿಲ್ಲಿಗೆ ಎಲೆಕ್ಷನ್ ನಡಿತದ. ಪ್ಯಾರಿಷ್ ಪ್ರೀಸ್ಟ್, ಮತ್ತ ಸಿಸ್ಟರ್ಗೋಳು ಇದ್ದ ಇರ್ತಾರು. ’’

“ಇಲೆಕ್ಷನ್ ನಡೀತದ? ಮಂದಿ, ನಮಗ ಓಟ್ ಹಾಕ್ರಿ ಅಂತ ಮೈಕ್ ಹಿಡಕೊಂಡ ಪ್ರಚಾರಾನು ಮಾಡ್ತಾರ?’’

“ಇಲ್ಲಿ ಹಂಗ ಆಗೂದಿಲ್ಲ. ಪ್ಯಾಂಪ್ಲೆಟ್ ಹಂಚೂದು, ರೊಕ್ಕ ಖರ್ಚ ಮಾಡೂದು ಇರೂದಿಲ್ಲ. ’’

“ನಮ್ಮದ ಛಲೋ ಅಲಾ? ಫಾದರ್ ಹೆಸರ ಹೇಳಿದರ ಮುಗೀತು. ಅವರ ಗುಡಿ ಪಾಲನಾ ಸಮೀತಿ ಮೇಂಬರ್. ಉಳಿದವರು ಯಾರೂ ಕಿಮಕ್ ಅನ್ನಾಂಗಿಲ್ಲ. ’’

“ಇಲ್ಲೂ ಹಂಗ ಇತ್ತಂತ ಮುಂಚ್ಯಾಕ. ದೊಡ್ಡ ಸ್ವಾಮ್ಯಾರು- ಬಿಷಪ್ಪರು, ಪ್ರತಿಯೊಂದು ಪ್ಯಾರಿಷ್ನ್ಯಾಗೂ ಪ್ಯಾರಿಷ್ ಕೌನ್ಸಿಲ್ – ಧರ್ಮಕೇಂದ್ರದ ಪಾಲನಾ ಸಮಿತಿ ಇರಬೇಕು. ಎರಡ ವರ್ಷಕ್ಕೊಮ್ಮಿ ಅದಕ್ಕ ಚುನಾವಣಿ ನಡಿಬೇಕು. ಮತ್ತ ಪ್ರತಿ ತಿಂಗಳಿಗೊಮ್ಮಿ, ತಪ್ಪಿದರ ಮೂರ ತಿಂಗಳಿಗೊಮ್ಮೆರ ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ನಡಸಬೇಕು. ಗುಡಿ ವ್ಯವಹಾರ ಎಲ್ಲಾ ಆರಪಾರ ಇರಬೇಕು. ಮುಚ್ಚುಮರಿ ಏನೂ ಇರಬಾರದು. ಎಲ್ಲಾರೂ ಕೂಡಿದ ಪ್ಯಾರಿಷ್ ಕೌನ್ಸಿಲ್ ತಗೊಳ್ಳು ನಿರ್ಧಾರನ ನಿರ್ಧಾರ-ಅಂತಹೇಳಿ ನೋಟಿಸ್ ಕಳಿಸಿದ ಮ್ಯಾಲ, ಇದೆಲ್ಲಾ ಶುರು ಆಗೇದ. ’’

“ಅಯ್ಯೋ, ನಮ್ಮೂರಾಗ ಫಾದರ್ ಮಾತ ಅಂದ್ರ ಮುಗೀತು. ನಮ್ಮೂರಾಗಂತಿ ಗುಡಿ ಪಾಲನಾ ಸಮಿತಿ ಮಿಟಿಂಗ ನಡದದ್ದ ನೆನಪಿಲ್ಲ ನನಗ. ’’

“ನಿಮ್ಮೂರು ಸಣ್ಣದಲ್ಲಾ, ಅಲ್ಲೆಲಾ, ್ಲ ಇದೆಲ್ಲಾ ಯಾಕ ಬೇಕ ಬಿಡ್ರಿ. ’’

“ನೀ ಅನ್ನೂದ ಖರೇನ. ಇಲ್ಲಿ ಮನಿಗೋಳು ದೂರ ದೂರ ಅದಾವು. ಮಂದೀನು ಜಾಸ್ತಿ. ನಮ್ಮೂರದ್ದೇನ ಕೇಳತಿ? ಗುಡಿ ಅಂಗಳದಾಗ ನಿಂತ ಕೂಗ ಹಾಕಿದರ ಸಾಕು, ಊರಾನ ಮಂದೆಲ್ಲಾ ಬಂದ ಕೂಡತದ. ’’

“. . . . ‘’

“ಕ್ಲಾರಮ್ಮ, ಈಗ ನಮ್ಮಣ್ಣ ಫಾದರ್ ಮಿಟಿಂಗ್ ನಡಸಾಕ ಹೋಗ್ಯಾನಲ್ಲಾ, ಇದು ತಿಂಗಳ ಮಿಟಿಂಗಾ?’’

“ಅಲ್ಲ ಮಾರಾಯರ, ಎರಡ ತಿಂಗಳು ಮಿಟಿಂಗ್ ನಡದಿಲ್ಲ. ಇದು ಫಾದರ್ ಬಂದ ಮ್ಯಾಲ ನಡಸೂ ಮೊದಲ ಮಿಟಿಂಗ್. ’’

“ನಮ್ಮಣ್ಣ ಫಾದರ್ ಮಿಖೇಲಪ್ಪ ಭಾಳ ಶಿಸ್ತಿನ ಮನಷ್ಯಾ, ಹಂಗ ಮಾಡಾಂವಲ್ಲ ತಗಿ. ಪ್ರತಿ ತಿಂಗಳೂ ತಪ್ಪದ ಮಿಟಿಂಗ್ ನಡಿಸಿರ್ತಾನು. ನಿನಗ ಗೊತ್ತಾಗಿರಾಕಿಲ್ಲ ನೋಡ. ’’

ಕ್ಲಾರಮ್ಮ ಏನೂ ಮಾತನಾಡದೇ, ಸುಮ್ಮನೇ ರುಬ್ಬಿದ ಕೊಬ್ಬರಿಯನ್ನು ಭಾಂಡೆಯಲ್ಲಿ ತುಂಬಿಸಿಕೊಳ್ಳಾಕ ಹತ್ತಿದಳು.

ಅಷ್ಟರಾಗ, ಅಡಗಿ ಮನಿ ಬಾಗಲಿಗೆ ಬಂದ ನಿಂತಿದ್ದ ತಿಮೋತಿ. ಟ್ರಿಮ್ ಆಗಿ ಡ್ರೆಸ್ ಮಾಡಕೊಂಡ ಬಂದ ನಿಂತಿದ್ದ. ಕರಿ ಪ್ಯಾಂಟು, ೦೦೭ ಬೆಲ್ಟ್ ಕಟಗೊಂಡಿದ್ದ. ಮ್ಯಾಲ ಬಿಳಿ ಅಂಗಿ ಇತ್ತು. ಅದರ ಮ್ಯಾಲ ಕರಿ ಕೋಟು. ಎಲ್ಲಾ ಇಸ್ತಿç ಮಾಡಕೊಂಡ ಬಂದಿದ್ದ, ಯಾರದೋ ಮದವಿ ರಿಸೆಪ್ಷನ್ಗೆ ಹೊಂಟಾವರಂಗ.

`ನೋಡ್ರಿ, ಅದೇನೋ ಅಂತರಲ್ಲಾ,ನೆನಸುದರಾಗ ತೊನಸ್ಯಾಳ ಗೌಡ ಬಂದ ಅಂತ’ ನೀವ ನೆನಸಿದ್ರಿ, ನಿಮ್ಮುಂದ ಬಂದ ನಿಂತಾನ ನೋಡ್ರಿ. ನಿಮಗಿನ್ನ ಮಾತಾಡಾಕ ಒಬ್ಬರು ಸಿಕ್ಕರಲ್ಲಾ? ನನ್ನ ಸುಮ್ಮನ ಬಿಡ್ರಿ ಇನ್ನ. ’’

ದೊಡ್ಡ ಬಿಕ್ಕಟ್ಟಿನಿಂದ ಬಿಡುಗಡೆ ದೊರೆತಷ್ಟು ಖುಷಿಯಲ್ಲಿ, ರುಬ್ಬಿದ ಕೊಬ್ಬರಿ ಇದ್ದ ಭಾಂಡೆ ಎತ್ತಿಕೊಂಡು ನಿಂತಿದ್ದಳು ಕ್ಲಾರಮ್ಮ.

ತಿಮೋತಿಯ ನೆದರು, ಅಲ್ಲಿ ಬೆನ್ನು ಮಾಡಿ ನಿಂತಿದ್ದ ಫಾದರ್ ತಮ್ಮ ಸಾಲಮೊನಪ್ಪ ಅವರ ಮೇಲೆ ಬಿದ್ದಿರಲಿಲ್ಲ.

“ಕ್ಲಾರಕ್ಕ, ನನ್ನ ಡ್ರೆಸ್ ಹೆಂಗೈತಿ? ಪ್ಯಾರಿಷ್ ಕೌನ್ಸಿಲ್ನೊಳಗ ನಾನೂ ಮಾತಾಡ್ತೀನಿ. ಮಿಟಿಂಗ್ ಶುರು ಆತು?’’

“ಏ ಖೋಡಿ, ಮತ್ತ ಬಂದ್ಯಾ? ನಿನಗ ಎಷ್ಟ ಸಲ ಹೇಳಬೇಕು? ಫಾದರ್ ಎಷ್ಟ ಕೆಲಸ ಹೇಳ್ತಾರು ಅಷ್ಟ ಮಾಡು. ಊರ ಉಸಾಬರಿ ಯಾಕ ಮಾಡ್ತಿ? ಇಲ್ಲದ್ದ ಮೈ ಮ್ಯಾಲ ಎಳಕೋತಿ, ಮತ್ತ ಚಿಂತಿ ಮಾಡಕೋತ ಮೂಲಿ ಹಿಡಕೊಂಡ ಕೂಡತಿ. ನೋಡ ಇಲ್ಲಿ, ಊರಿಂದ ಮಿಖೇಲಪ್ಪ ಸ್ವಾಮ್ಯಾರ ತಮ್ಮಾರು ಸಾಲಮೊನಪ್ಪಾರು ಬಂದಾರು. ಅವರ ಜೋಡಿ ಮಾತಾಡಕೋತ ಕೂಡ. ಅವರೂ ಒಬ್ಬರ ಆಗ್ಯಾರ. ನೀ ಮಾತ್ರ ಅಪ್ಪಿ ತಪ್ಪಿ ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ನಡೆಯೂ ಜಾಗಕ ಹೋಗಬಾರದ ಅಂದ್ರ ಹೋಗಬಾರದ ನೋಡ. ’’

ದೊಡ್ಡ ಸ್ವಾಮ್ಯಾರು, `ನಾಳಿ ಪ್ಯಾರಿಷ್ ಕೌನ್ಸಿಲ್ ಮಿಟಿಂಗ ನಡೆಯು ಮುಂದ ಈ ಕಂಪೌಂಡನ್ಯಾಗ ಕಾಲಿಡಬಾರದು’ ಅಂತ ತಾಕೀತ ಮಾಡಿ ಕಳಿಸಿದ್ದರು. ಕ್ಲಾರಮ್ಮ ಅದನ್ನ ನೆನಪ ಮಾಡಿದ್ದಳು.

ಆತ ಬಿಡವಾ, ನೀನೂ ಅದನ ಹೇಳತಿ. ’’ ಸಾಲಮೊನಪ್ಪಾರ ಕಡೆ ಮುಖ ಮಾಡಿದ ತಿಮೋತಿ,ಸಾಲಮೋನಪ್ಪಾರ ಸ್ತೋತ್ರರಿ’’ ಅಂದ.

“ನಿನಗೂ ಸ್ತೋತ್ರಪಾ. ’’

“ಯಾವಾಗ ಬಂದ್ರಿ? ನಿನ್ನಿ ರಾತ್ರಿ ಬಂದಿರಬೇಕು. ನನಗ ಬಾಳ ಬ್ಯಾಸರಾಗಿತ್ತು. ನಿನ್ನೆ ವಿಚಾರಣಾ ಗುರು ಮಿಖೇಲಪ್ಪ ಸ್ವಾಮ್ಯಾರಿಗೆ ಹೇಳಿ ಸೂಟಿ ಮಾಡಿದ್ನಿರಿ. ’’

ಇಬ್ಬರೂ ಅಡಗಿ ಮನೆಯಿಂದ ಹೊರಗ ಬಂದಿದ್ದರು.

“ಮತ್ತೇನಪಾ ಸುದ್ದಿ ನಿಮ್ಮೂರ ಕಡೇದು. ’’

“ನನಗೇನ ಗೊತ್ತಾಗ್ತದರಿ? ನಾ ಏನ ಊರಾಗ ಇಲ್ಲ, ಸಾಲ್ಯಾಗೂ ಇಲ್ಲ ಗೇಟಿನ್ಯಾಗ ಕೂತಿರ್ತಿನಿ. ನನಗೇನ ಮಜಕೂರ ಗೊತ್ತಾಗುದಿಲ್ಲ ಬಿಡ್ರಿ. ’’

“ನೀ ಸಾಲಿ ಗೇಟಿನ್ಯಾಗ ಕೂತಿದ್ದರೂ, ನಿನ್ನ ನೆದರ ಎಲ್ಲಾ ಕಡೆ ಇರ್ತದ. ನನಗ ಗೊತ್ತಿಲ್ಲೇನ? ಮತ್ತ ನಮ್ಮಣ್ಣ ಮಿಖೇಲಪ್ಪ ಸ್ವಾಮ್ಯಾರು ನಿನಗ ಯಾಕ ಗುಡಿ ಪಾಲನಾ ಸಮಿತಿ ಮಿಟಿಂಗ್ ಗೆ ಬರಬ್ಯಾಡ ಅಂದಾರು?’’

“ಅದರ ಮಾತ ತಗಿ ಬ್ಯಾಡರಿ. ಇನ್ನ ಏನರ ಬ್ಯಾರೆ ಮಾತ ಇದ್ರ ತಗೀರಿ. ’’

“ಹೋಗ್ಲಿ ಬಿಡು. ನಿನಗ್ಯಾಕ ನಿನ್ನಿ ಬ್ಯಾಸರಾಗಿತ್ತು?’’

“. . . . . . ’’

“ತಿಮೋತಿ, ನಿನ್ನಿ ಯಾಕ ಬ್ಯಾಸರಾ ಮಾಡಿಕೊಂಡಿದ್ದಿ? ಯಾರರೆ ಏನರೆ ಅಂದರೇನ್?’’

“ಅದೇನ್ ಇದ್ದದ್ದ ಬಿಡ್ರಿ. ’’

ಉದಾಸೀನತೆಯಿಂದ ಉತ್ತರಿಸಿದ ತಿಮೋತಿ.

“ಇರ್ಲಿ ಹೇಳಪಾ. . ’’

“ನಮ್ಮ ಮಂದಿ ಬಾಳ ಸುಮಾರ ಅದರ್ರಿ. ನಮ್ಮ ಸಂತ ಅನ್ನಮ್ಮನ ಗುಡಿ ವಿಚಾರಣಾ ಗುರು ಮಿಖೇಲಪ್ಪ ಸ್ವಾಮ್ಯಾರ ಮ್ಯಾಲ ಏನೇನೋ ಮಾತಾಡಿದರು. ನನಗ ಸಿಟ್ಟ ಬಂತು. ಬಾಯಿ ಸುಮ್ಮನಿರಲಿಲ್ಲ. ನನ್ನ ಕೈ ಕಡ್ಯಾಕ ಶುರು ಆದುವರಿ. . ’’

“ಆತ ಬಿಡಪಾ, ಮುಂದಿಂದ ಏನೂ ಹೇಳಬ್ಯಾಡ. ನನಗ ಗೊತ್ತಾತು. ’’

. ’’ಏನ್ರಿ ಗೊತ್ತಾಗ್ತದ ನಿಮಗ? ಮಿಖೇಲಪ್ಪ ಸ್ವಾಮ್ಯಾರು, ಮನಿಮನಿಗೆ ಬರಬೇಕಂತ ಅವರ ಕರದಾಗ. ಮನ್ಯಾಗ ಕುಂತವರಿಗೆ ಸತ್ಪçಸಾದ – ಅಪ್ಪನ್ನ ಕೊಟ್ಟ ಬರಬೇಕಂತ. ಹಂಗ ಸತ್ಪçಸಾದ ಬೇಕ ಅನ್ನಾವರು ವ್ಯಾಳೇಕ ಗುಡಿಗೆ ಬರಬೇಕು. ಛಂದಂಗಿ ಪೂಜಿ ಕೇಳಬೇಕು ಕಡೀಕ ಸತ್ಪçಸಾದ ಕೊಡ್ತಾರ, ಭಕ್ತಿಯಿಂದ ಸ್ವೀಕಾರ ಮಾಡಬೇಕು. ’’

“ಅಲ್ಲ ಮಾರಾಯಾ, ಕೆಲವು ಕುಟುಂಬದವರಿಗೆ ಏನೇನ್ ತ್ರಾಸ್ ಇರ್ತದೋ ಏನ್ ಕತಿಯೋ? ಶೀಕ್ ಆಗಿ ಹಾಸಿಗಿ ಹಿಡದಿರ್ತಾರು. ತಮ್ಮ ಪುರ್ತೇಕ ತಾವು ದಾರಿ ಹಿಡಕೊಂಡ ಹೊಂಟವರ ಮ್ಯಾಲ ಗಾಡಿ ಹರದ, ಡಿಕ್ಕಿ ಹೊಡದ ಗಾಯ ಆಗ್ತಾವು. ಕಾಲಿಗೆ ಕೈಗೆ ಪ್ಲಾಸ್ಟರ್ ಕಟಕೊಂಡ ಗುಡಿಗೆ ಬರಾಕಾಗ್ತದ? ಮತ್ತ ಕೆಲವರ ಮನ್ಯಾಗ ಹಿರಿಯ ಜೀವ ಇರ್ತಾವು. ಯಾರರ ಖಾಲಿ ರಿಕಾಮಿ ಆಸಾಮಿ ಮನ್ಯಾಗ ಇದ್ದರ ಅಂಥವರನ್ನ ಗುಡಿಗೆ ಕರಕೊಂಡ ಬರ್ತಾರು. ಇಲ್ಲ ಅಂದ್ರ ಏನ್ ಮಾಡೂದು? ಹಳ್ಯಾಗಿನ ವಯಸ್ಸಿನ ಹುಡುಗರು ಮನಿ ಬಿಟಕೊಟ್ಟ ಕೆಲಸಾ ಹುಡಕೊಂಡ ಶಹರಗಳ್ನ ಸರ್ಯಾರು. ಮನಿ ಮೂಲಿ ಹಿಡದ ಅಂಥಾ ಶೀಕ್ ಆದಾವರು, ವಯಸ್ಸಾದ ಹಿರಿಯರು ವಾರಾ ತಪ್ಪದ ಗುಡಿಗೆ ಬರಬೇಕು ಅನ್ನೂದ ಗೈರ ಮಾತ ಆಗೂದಿಲ್ಲೇನ?’’

“ಸಾಲಮೊನಪ್ಪಾರ, ಅದೇನ್ ಹೇಳ ಬ್ಯಾಡ್ರಿ ತಗೀರಿ ನೀವ್. ಧರ್ಮಕೇಂದ್ರದ ಗುರುಗಳು, ಸ್ವಾಮ್ಯಾರು ಅಂದ್ರ ಅವರ ಸ್ವಾಮ್ಯಾರು. ಅವ್ರಿಗೆ ಎಲ್ಲಾ ಗೊತ್ತಾಗ್ತೆöÊತಿ. ಅಷ್ಟಕ್ಕ ಗುಂಪುಗೂಡಿ ಬಂದ ಗುಡಿ ಮುಂದ ಗುಸುಗುಸು ಮಾತಾಡೂದು ಛಂಧ ಕಾಣ್ತದರಿ? ಬುದ್ಧಿಲ್ಲ ಅವರಿಗೆ. ಮುಂದ ಏನರ ಎಡವಟ್ಟ ಮಾಡಿಕೊಂಡರ?’’

`ಜೇಸುನಾಥಾ, ಇದೇನು ನಾನು ಕೇಳತಿರೂದು? ನಮ್ಮಣ್ಣನ ಗುಡಿಯ ಧರ್ಮಕೇಂದ್ರದ ಒಳಗೂ ಇದ ತಕರಾರ ಐತ್ಯಲಾ?’

ಸಾಲಮೊನಪ್ಪ ಚಿಂತಿಗಿ ಬಿದ್ದಬಿಟ್ಟ.

ಸಾಲಮೊನಪ್ಪರ ಊರಿನ ಗುಡಿಗೆ ಬಂದಿದ್ದ ಸ್ವಾಮ್ಯಾರು ಐದಾರ ಕೆರಿ ನೀರ ಕುಡದವರು. ತಮ್ಮ ಪುರ್ತೇಕ ತಾವ ಕಮ್ಮಗ ಇದ್ದರು. ತಮಗ ಬೇಕಾದವರನ್ನ ಪ್ಯಾರಿಷ್ ಕೌನ್ಸಿಲ್ಗೆ ಹಾಕ್ಕೊಂಡಿದ್ದರು. ಅವರು, ಫಾದರ್ ಹೇಳುದನ್ನ ಕೇಳೂ ಗೌಲೆತ್ತಿನ ಹೌದಪ್ಪಗಳಾಗಿದ್ದರು. ಊರಾನ ನಾಲ್ಕೆöÊದ ಮನ್ಯಾಗ ಹರ್ಯಾ ಮನಷ್ಯಾರು ಇದ್ದರು. ಶೀಖ್ ಮಂದಿನೂ ಇದ್ದರು. ಊರಿನ ಗುಡಿಗೆ ಬಂದ ಸ್ವಾಮ್ಯಾರು ಮರ್ನಾಲ್ಕ ತಿಂಗಳಾದರೂ, ವಯಸ್ಸಾದವರ, ಶೀಕ್ ಬಿದ್ದ ಒಬ್ಬರ ಮನಿಗೆ ಬಂದಿರಲಿಲ್ಲ, ಸತ್ಪ್ರಸಾದ ಕೊಟ್ಟಿರಲಿಲ್ಲ. ಹಿರೀ ಜೀವಗಳು ವಿಲಿ ವಿಲಿ ಒದ್ದಾಡತಿದ್ದವು. ಹುಷಾರಿದ್ದಾಗ, ವಯಸ್ಸಿನ್ಯಾಗ ಒಂದ ಬೇಸ್ತವಾರನೂ ಗುಡಿ ಪೂಜಿ ತಪ್ಪಿಸಿದವರಲ್ಲ. ಗುರುಗಳಲ್ಲಿ ಪಾಪ ನಿವೇದನ ಮಾಡಿ, ಪಶ್ಚಾತ್ತಾಪ ಪಟ್ಟ, ಗುರುಗಳ ಕೊಟ್ಟ ಶಿಕ್ಷಾ ಪಾಲಿಸಿ ಸತ್ಪ್ರಸಾದ ತಗೋಳ್ಳುದನ್ನ ಮರತವರ ಅಲ್ಲ. ಆದರ, ಈಗ ಅವರ ಕೈ ಕಾಲ ಹೋದಂಗಾಗಿ ಕೂತಲ್ಲೇ ಕೂಡ್ರಂಗಾಗೇದ. ಅಂಥಾ ಹಿರೀ ಜೀವಗಳ ಪಟ್ಟಯಗ ಸಾಲಮೊನಪ್ಪಾರ ತಾಯಿನೂ ಒಬ್ಬಳು.


“ಇಲ್ಲಿ ನಡದದ್ದ ಇಲ್ಲೇ ಇರಬೇಕ. ಹೊರಗ ಏನ ಹೇಳಬೇಕು, ಅದನ್ನ ನಾ ಹೇಳ್ತೀನಿ. ಸುಮ್ಮಸುಮ್ಮನ ಇಲ್ಲಿನ ಗುಟ್ಟಿನ ಸಂಗತಿ ಹೊರಗ ರಟ್ಟಾಗಬಾರದು ಗೊತ್ತಾತು?’’

ಎಂದೂ ಸಿಟ್ಟಿಗೆ ಬಾರದ ಸಂತ ಅನ್ನಮ್ಮರ ಗುಡಿಯ ಧರ್ಮಕೇಂದ್ರದ ಗುರು ಮಿಖೇಲಪ್ಪ ಸ್ವಾಮ್ಯಾರು, ಫಾದರ್ ಮಿಖೇಲಪ್ಪಾರು ಇಂದ ಸ್ವಲ್ಪ ಗರಂ ಆಗಿದ್ದರು.

ಎಲ್ಲಾರೂ ಕೂಡಿ ಶಿಲುಬಿ ಗುರುತು ಹಾಕಿ. ಪರಲೋಕ ಮಂತ್ರ, ಮತ್ತ ನಮೋ ಮರಿಯ ಮಂತ್ರ ಮತ್ತ ಸರ್ವೇಶ್ವರ ದೇವರಿಗೆ ಸ್ತೋತ್ರ ಹೇಳಿ, ಸರಳೀತ ಸಭಾ ನಡೀಲಿ ಅಂತ ಕೋಳಿಕೊಂಡ ಮ್ಯಾಲ, ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ಶುರು ಆಗಿತ್ತು. ಯಾರದೋ ಮೊಬೈಲ್ ರಿಂಗ ಟೋನ್ ಕೇಳಿಸ್ತು.

ಮೊನ್ನಿ ಬಿಷಪ್ ಹೌಸ್ ನ್ಯಾಗ ನಡದ ಮಿಟಿಂಗ್ ಒಳಗ, ಒಬ್ಬ ಫಾದರ್, ‘ನಮ್ಮ ಪಾರಿಷ್ ಕೌನ್ಸಿಲ್ ಮಿಟಿಂಗನ್ಯಾಗ ನಡದದ್ದ ಎಲ್ಲಾ ಹೊರಗಿನ ಮಂದಿಗೆ ಹಂಗಂಗ ಗೊತ್ತಾಗ್ತದ. ನನಗ ಭಾಳ ಭಿರಿ ಆಗಾಕ ಹತ್ತೇದ’ ಅಂದಿದ್ದ.

ಮೊಬೈಲ್ ರಿಂಗ್ ಟೋನ್ ಕೇಳಿಸಿದ ಕೂಡಲೇ, ಅದು ನೆನಪಾಗಿ ಮಿಖೇಲಪ್ಪಾರು ಗರಂ ಆಗಿದ್ದರು.

“ಎಲ್ಲಾರೂ ನಿಮ್ಮ ನಿಮ್ಮ ಮೊಬೈಲ್ ಫೋನ್ ಆಫ್ ಮಾಡ್ರಿ. ಚರ್ಚಿನ ಪಿಸಿಸಿ ಮಿಟಿಂಗ್ ಮಾತುಗಳು ಹೊರಗ ಕೇಳಾಕ್ಹತ್ತಾವು. ’’ ಫಾದರ್ ಅತ್ತ ಇತ್ತ ನೋಡಿದರು.

ಜೋಷಿ ಮಾಮ- ಅದ ನಮ್ಮ ಜೋಸೆಫ್ ಮಾಮಾ, “ಸ್ವಾಮ್ಯಾರ, ಇಲ್ಲಿ ವಿಷಯ ಹೊರಗ ಯಾಕ ಹೇಳೂಣು? ನಮ್ಮದ ನಮಗ ರಗಡ ಆಗಿರ್ತದ’’ ಅಂದ್ರು.

“ಅದೇನೋ ಗೊತ್ತಿಲ್ಲ, ್ಲ ಸುದ್ದಿ ಬಂದ ನನ್ನ ಕಿವಿ ಮುಟ್ಟೇದ. ’’

ಮುದಕ ಚಾರ್ಲಿ ಕಾಕಾ ಸ್ವಲ್ಪ ಧೈರ್ಯದ ಮನಷ್ಯಾ. “ನಾವ್ಯಾಕ ಹೊರಗಿನವರಿಗೆ ಹೇಳೂದು? ಹೇಳೂ ಪ್ರಸಂಗೂ ಬರೂದಿಲ್ಲ. ಅವರಾಗಿ ಕೇಳಿದರ, ನಮಗ ಹೇಳಬೇಕು ಅನ್ನಸಬೇಕು. ಅವಾಗ ವಿಷಯ ಹೊರಗ ಬರ್ತಾವು. ’’

ಚಾರ್ಲ್ಸ ಜಂತ್ಲಿ ಅವರ ಮಾತು, ಸ್ವಾಮ್ಯಾರ ಸಿಟ್ಟು ತಣ್ಣಗ ಆಗೂಹಂಗ ಮಾಡಿತು.

“ಏನ ಆಗಲಿ, ಇಲ್ಲಿ ಬಂದಾಗ ನೀವೆಲ್ಲಾ ಮೊಬೈಲ್ ಬಂದ ಮಾಡ್ರಿ. ಇಲ್ಲಕಂದ್ರ ಸೈಲೆಂಟ್ ಮೋಡ್ ಗೆ ಹಾಕರಿ. ನಮ್ಮ ಇನ್ನೊಂದ ಚರ್ಚಿನ ಪಿಸಿಸಿ ಮಿಟಿಂಗನ್ಯಾಗ ಮೊನ್ನಿ ಯಾರೋ ರಿಕಾರ್ಡ ಮಾಡಿಕೊಂಡಾರ. ‘ನೋಡ, ಹೊರಗ ಸುದ್ದುಳ್ಳವರಂಗ ಕಾಣ್ತಾರ ಸ್ವಾಮ್ಯಾರು, ಇಲ್ಲಿ ಒಳಗ ಮಾತಾಡೂದ ನೋಡ್ರಿ’ ಅಂತ ಆಡಕೊಂಡದ್ದೂ ಅಲ್ಲಿ ನನ್ನ ಕಿವಿಗೆ ಬಿದ್ದೈತಿ. ಮೊಬೈಲ್ ಸ್ವಿಚ್ ಆಫ್ ಮಾಡ್ರಿ. ಇಲ್ಲಾ ಅದನ್ನ ಮನ್ಯಾಗ ಬಿಟ್ಟ ರ್ರಿ. ’’

ಸಮಾಧಾನ ಚಿತ್ರದಿಂದ ಸ್ವಾಮ್ಯಾರು, ಪ್ಯಾರಿಷ್ ಕೌನಿಲ್ ಮಿಟಿಂಗಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿ ಬೀರಿದರು. ಅಧಿಕಾರವಾಣಿಯಲ್ಲಿ, “ಚರ್ಚ ಉಳಸೂದು ಬೆಳಸೂದ ನಿಮ್ಮ ಕೈಯಾಗ ಇರ್ತದ. ನಾವೇನು? ಮೂರ ವರ್ಷ, ಇಲ್ಲಾ ನಾಕ ವರ್ಷ ಇಲ್ಲಿ ಇರ್ತಿವಿ. ಮತ್ತ ದೊಡ್ಡ ಸ್ವಾಮ್ಯಾರು ಬಿಫಪ್ಪರು ಕಳಸೂ ಮುಂದಿನ ಊರಿನ ಗುಡಿಗೆ ಗಂಟ ಕಟಗೊಂಡ ಹೋಗ್ತೀವಿ. ನೀವ ಇಲ್ಲಿನ ಚರ್ಚಿನ ಆಧಾರ ಸ್ತಂಭಗಳು- ಪಿಲ್ಲರಗಳು ನೀವ್ ಹಿಂಗ ಮಾಡಿದರ ಹೆಂಗ?’’ ಫಾದರ್ ಮಿಖೇಲಪ್ಪಾರು ಪ್ರಶ್ನೆ ಮಾಡಿದರು.

“ಇನ್ನ, ಮಿಟಿಂಗ್ ಮುಂದುವರಿಸೂಣ. ’’

“ಫಾದರ್, ಇನ್ನ ಮುಂದ ಧರ್ಮೋಪದೇಶ ತರಗತಿ ಆರಂಭಿಸಬೇಕಲಾ. ಮಕ್ಕಳಿಗೆ ಕೆಟಕಿಸಂ ಪಾಠ ನಿಂತ ಹೋಗೇದ. ಈಗ ಹೆಂಗೂ ನಿಮಗ ಒಬ್ಬರು ಅಸಿಸ್ಟಂಟ ಬಂದಾರು. ಅವರಿಗೆ ಕಾನ್ವೆಂಟಿನ ಸಿಸ್ಟರು ಸಾಥ್ ಕೊಡ್ತಾರು. ’’

ಹ್ಯೂಬರ್ಟ ಹುಗ್ಗಿ ಮಾತ ಎತ್ತಿದರು.

“ಹೌದು ನೀವು ಹೇಳೂದ ಖರೆ ಅದ. ಮುಂದಿನ ತಿಂಗಳ ಮೊದಲನೇ ವಾರದಿಂದ ಕೆಟಕಿಸಂ ಕ್ಲಾಸ್ ಶುರು ಮಾಡೂಣು. ’’

ಫಾದರ್ ಅವರು, ಹ್ಯೂಬರ್ಟ ಹುಗ್ಗಿ ಮಾತಿಗೆ ತಮ್ಮ ಒಪ್ಪಿಗೆ ಸೂಚಿಸಿದರು.

“ಸ್ವಾಮ್ಯಾರ, ನಿಮ್ಮ ಸಾಲಿ, ಬೋಡಿಂಗ್, ಬೋರ್ಡಿಂಗ್ ಸುತ್ತ ಇರೂ ಹೊಲಪಲಾ ನೀವ ನೋಡಕೊಂಡರ್ರಿ. ಆದರ, ಈ ಗುಡಿ ಪ್ಯಾರಿಷ್ನರ್ ಅಂದ್ರ ಈ ಧರ್ಮಕೇಂದ್ರದ ಮಂದಿ ನಾವು, ನಮ್ಮ ಮಕ್ಕಳ ಬಗ್ಗೆನೂ ಸ್ವಲ್ಪ ಕಾಳಜಿ ತೋರಸರೆಲಾ?’’

ಅರಳಿಮರದ ಅಂತೋನಪ್ಪಾ ಅವರು, ಸುತ್ತ ಕಣ್ಣಾಡಿಸಿದರು. ಉಳಿದವರು ತನ್ನ ಮಾತಿಗೆ ದನಿ ಕೂಡಸ್ತರೋ ಇಲ್ಲೋ ಅನುಮಾನ ಇತ್ತು ಅವರಿಗೆ.

“ಹೌದು ಫಾದರ್, ಅಂತೋನಪ್ಪಾ ಹೇಳೂದ ಖರೆ ಅದ’’ ಚಾರ್ಲಿ ಕಾಕಾ ಅಂತೋನಪ್ಪಾರ ಜೋಡಿ ನಿಂತ್ರು.

“ಸ್ವಾಮ್ಯಾರ, ನಾವು ಗುಡಿಗೆ ಬಂದ ಕಾಣಕಿ ದುಡ್ಡ ಕೇಳಾಂಗಿಲ್ಲ. ಹಬ್ಬಕ್ಕ ಅಂತ ಎಲ್ಲಾರೂ ದುಡ್ಡ ಕೊಟ್ಟಿರತೀವಿ. ಕೆಲವರು ಐನೂರು ಕೊಡಲಿ, ಕೆಲವರು ಐದ ಸಾವಿರ ಕೊಡಲಿ. ಎಲ್ಲಾರು ತಮ್ಮ ಕೈಲಾದಷ್ಟು ಕೊಟ್ಟ ಕೊಟ್ಟಿರ್ತಾರ. ಅದರಾಗ ಉಳಿದ ರೊಕ್ಕಾ ಬ್ಯಾಂಕಿನ್ಯಾಗ ಠೇವಣಿ ಇಟ್ಟ ಅಂದ್ರ ಫಿಕ್ಸ್ ಡಿಪಾಜಿಟ್ ಇಟ್ಟ, ಅದರಲೇ ಬಂದ ರೊಕ್ಕದಾಗ ಸಾಲಿ ಕಲಿಯೂ ನಮ್ಮ ಮಕ್ಕಳಿಗೆ ಏನಾರ ಸಹಾಯ ಆಗೂವಂಗ ಮಾಡ್ರೆಲಾ’’ ಅಂತೋನಪ್ಪಾರ ಮಾತಿಗೆ ಎಲ್ಲಾರೂ ಚಪ್ಪಾಳಿ ತಟ್ಟಿದರು.

“ಆತು ಹಂಗ ಮಾಡೂಣ, ಕೆರಿ ನೀರ ಕೆರಿಗೆ ಚಲ್ಲಾಕ ನಂದೇನ ತಕರಾರಿಲ್ಲ. ನಿಮ್ಮಲ್ಲೇ ಒಬ್ಬರು, ಮುಂದ ಬಂದ ಅದರ ಜವಾಬ್ದಾರಿ ಹೊರಬೇಕು. ತಿಳಿತಲಾ?’’

ಅಂತೋನಪ್ಪಾರ ಸಲಹೆ ಪ್ಯಾರಿಷ್ ಕೌನ್ಸಿಲ್ ಮಿಟಿಂಗನ್ಯಾಗ ಪಾಸ್ ಆಗಿಬಿಟ್ಟಿತು.

“ಫಾದರ್, ನಮ್ಮ ಪ್ಯಾರಿಷ್ ಮೆಂಬರ್ಸ್ ಇರೂ ಏರಿಯಾಗಳನ್ನ, ಮುನಸಿಪಾಲಟಿ ವಾರ್ಡಿನಂಗ ವಲಯಗಳಲ್ಲಿ- ಝೋನ್ಗಳಲ್ಲಿ ವಿಂಗಡಿಸೇದ. ಸಂತ ಜೋಸೆಫರ ಝೋನು, ಸಂತ ಥಾಮಸ್ಸರ ಝೋನು, ಸಂತ ತೆರೆಸಾರ ಝೋನು, ಸಂತ ಅಲ್ಫೋನ್ಸರ ಝೋನು, ಸಂತ ಜೂಡರ ಝೋನು ಅಂತ ಮಾಡೇವಿ. ಆದರ, ಗುಡಿಗೆ ದೂರ ಇರೂ ಸಂತ ತೆರೆಸಾರ ಝೋನಿನವರು ಒಬ್ಬರೂ ಗುಡಿ ಪೂಜಿಯೊಳಗ ರೀಡಿಂಗ ಮಾಡಾಕ- ಬೈಬಲ್ ವಾಕ್ಯ ಓದಾಕ ಬರವಲ್ಲರೂ. ಅಲ್ಲಿ ಹುಡುಗರು ಚರ್ಚಿನ ಹಾಡು ತಂಡ- ಕ್ಯಾಯರ್ನ್ಯಾಗೂ ಸೇರತಿಲ್ಲ. ’’

ಸಕ್ಕರಿ ಸಿಮೋನಪ್ಪ ಅವರು ಮಿಟಿಂಗ್ ಗಮನಕ್ಕೆ ತಂದರು.

“ಅವರು, ಪ್ರತಿವಾರ ಗುಡಿಗರೆ ಬರ್ತಾರೋ ಇಲ್ಲೋ?’’

`ಅಯ್ಯೋ ಫಾದರ್, ನೀವ ಬಂದ ಒಂದೂವರಿ ತಿಂಗಳಾತು. ನಾವು ಇರಾವರ ಮೂವತ್ತು ಇಲ್ಲಾ ನಲವತ್ತ ಕುಟುಂಬಗಳು. ನಮ್ಮೆಲ್ಲ ಕುಟುಂಬಗಳ ಗುರ್ತ ನಿಮಗ ಇಷ್ಟೊತ್ತಿಗೆ ಆಗಬೇಕಿತ್ತು. ನಾವು ಕುರಿಗಳು, ನೀವು ಕುರುಬರು- ಮೇಷಪಾಲಕರು. ಒಳ್ಳೆಯ ಕುರುಬನಿಗೆ ತನ್ನ ಮಂದೆಯಲ್ಲಿರುವ ಎಲ್ಲಾ ಕುರಿಗಳ ಗುರ್ತ ಇರಬೇಕು. ಯೇಸು ಸ್ವಾಮಿನ್ನ ನಾವುಗುಡ್ ಷೆಫರ್ಡ್’ ಅಂತ ಕರಿತೀವಿ. ನೀವು ಇಲ್ಲಿ ನಮಗ ಸಾಕ್ಷಾತ್ ಯೇಸುಸ್ವಾಮಿ ಇದ್ದಂಗ. ’’

ಚಾರ್ಲಿ ಕಾಕಾನ ನೇರವಾದ ಮಾತಿನಿಂದ ಫಾದರ್ ಮಿಖೇಲಪ್ಪ ಅವರು ಗಲಿಬಲಿಗೊಂಡವರಂತೆ ಕಂಡರು.

“ಹೌದು, ಚಾರ್ಲಸ್ ಅವರ, ನೀವು ಹೇಳೂದು ಖರೆ ಅದ. ಆದರ ಏನ ಮಾಡೂದು ನಾ ಇಲ್ಲಿಗೆ ಹೊಸಬ. ’’

ಫಾದರ್ ಮಾತನ್ನು ತಡೆದ ಚಾರ್ಲಿ ಕಾಕಾ, “ಫಾದರ್, ಮತ್ತ ಹೇಳ್ತೀನಿ. ಎಣಿಸಿ ನೋಡಿದರ ನಾವಿಲ್ಲಿ ಇರಾವರು ಮೂವತ್ತು ಇಲ್ಲಾ ನಲವತ್ತು ಕುಟುಂಬಗಳು. ನೀವು ಬಂದ ಒಂದೂವರೆ ತಿಂಗಳಾತು. ಕುಟುಂಬಗಳ ಪರಿಚಯ ಇಲ್ಲ ಅನ್ನೂ ಮಾತು ಸರಿ ಕಾಣಸೂದಿಲ್ಲ’’ ಎಂದು ದೂರಿದರು.

ಸ್ವಲ್ಪ ಮೆತ್ತಗಾದ ಫಾದರ್ ಮಿಖೇಲಪ್ಪ ಅವರು, “ನನಗೂ ಮುಂಜಾನಿಂದ ಸಂಜಿಮಟ ಮೈ ಉದ್ದ ಕೆಲಸ ಅದಾವ. ಸಾಲಿ ನೋಡಕೋಬೇಕು, ಬೋರ್ಡಿಂಗ್ ನಡಸಬೇಕು ಮತ್ತು ಈ ಚರ್ಚಿನ ಹೊಲಾಗದ್ದಿನೂ ನೋಡಕೋಬೇಕು. ಆಯ್ತು, ಇನ್ನ ಮುಂದ ಪ್ರತಿ ರವಿವಾರಕ್ಕೊಮ್ಮಿ ನಾಲ್ಕ ಕುಟುಂಬಗಳ ಪರಿಚಯ ಮಾಡಕೊಳ್ತೀನಿ. ಹಳೆ ಉಪದೇಶಿ ಚಿನ್ನಪ್ಪ ಕುದರಿ ತೀರಿಕೊಂಡ ಮ್ಯಾಲೆ, ಇಲ್ಲಿ ಯಾರೂ ಉಪದೇಶೀನ ಇಲ್ಲ. ಹಳಬ ಅಂದ್ರ ನಮ್ಮ ಸಾಲಿ ವಾಚಮನ್ ತಿಮೋತಿ ಅದಾನು, ಅವನ್ನ ಕರಕೊಂಡ ಇದನ್ನ ಮಾಡ್ತೀನಿ’’ ಎಂದು ಫಾದರ್ ಮಿಟಿಂಗ ಸದಸ್ಯರಿಗೆ ಭರವಸೆ ಕೊಟ್ಟರು.

ಪ್ಯಾರಿಷ್ ಕೌನ್ಸಿಲ್ ಮಿಟಿಂಗನಲ್ಲಿ ಪ್ಯಾರಿಷ್ ಪ್ರೀಸ್ಟ್ ಜೊಡಿ ಕೂತು, ಮಿಟಿಂಗ್ ನಡಾವಳಿಯನ್ನ ನೋಡುತ್ತಾ, ಕೇಳುತ್ತಾ, ದಾಖಲಿಸುತ್ತಾ ಕುಳಿತಿದ್ದ ಅಸಿಸ್ಟಂಟ್ ಫಾದರ್ ಜೋಕಿಂ ಅವರು, ತಮ್ಮ ಮುಂದಿನ ಗುರು ಜೀವನದಲ್ಲಿ ಎದುರಿಸಬಹುದಾಗಿದ್ದ ಒಂದು ಮಹತ್ವದ ಪಾಠವನ್ನೂ ಮೌನವಾಗಿ ಕಲಿಯುತ್ತಿದ್ದರು.

ಎಲ್ಲಾರೂ ಕೂಡಿ ಒಂದೊಂದ ಟಾಪಿಕ್ ಎತ್ತಾಣ ಪ್ಯಾರಿಷ್ ಪ್ರೀಸ್ಟ್ ಹೈರಾಣ ಆಗತಿದ್ದರು. ಆದರ ತೋರಿಸಿಕೊಳ್ತಿರಲಿಲ್ಲ. ಅವರನ್ನ ನೋಡಿದರ ಸಂಸಾರಸ್ಥರ ಬಾಳುವೇನ ಛಲೋ. ಅವರ ಜಗಳ ಜೂಟಿ ಉಂಡು ಮಲಗೂ ಮಟ ಇರ್ತದ.ನಾವಿಬ್ಬರು ನಮಗಿಬ್ಬರು’ ಬಂದ ಮ್ಯಾಲ, ಇಬ್ಬರಲ್ಲಿ ಒಬ್ಬರನ್ನ ಫಾದರ್ ಮಾಡಾಕ, ಸಿಸ್ಟರ್ ಮಾಡಾಕ ಮನಿಲಿಂದ ಮಕ್ಕಳನ್ನ ಕಳಸೂದ ಬ್ಯಾಡ ಅನ್ನಸ್ತದ. ಸಂಸಾರಸ್ಥರದು ಏನಿದ್ದರೂ ನಾಲ್ಕ ಗೋಡ್ಯಾಗ ಇರ್ತಾವು. ದೇವರು ಎಲ್ಲಾ ತಿಳದವರು. ಕಷ್ಟಗಳು ಮನುಷ್ಯರಿಗೆ ಬರದ ಮರಕ್ಕ ಬಾರ್ತಾವು? ಇರುವೆಯ ಶಿಲುಬೆಯ ಭಾರ ಇರವಿಗೇ ಗೊತ್ತ. ಆನಿ ಹೊತ್ತ ಶಿಲುಬೆಯ ಭಾರ ಆನಿಗೆ ಗೊತ್ತಿರ್ತದ. ಈ ನಡುವ, ಬಿಷಪ್ಪರು ಒಂದಲ್ಲ, ಎರಡಲ್ಲ ಮೂರ ಮಕ್ಕಳನ್ನರೆ ಮಾಡಕೊಳ್ರಿ ಅಂತ ಹೇಳಾಕ ಶುರು ಮಾಡಿದರು ಎಂಬ ಮಾತುಗಳು ನೆನಪದಾದವು. ’ ಈ ವಿಚಾರಗಳು ತಲ್ಯಾಗ ಸುಳದಾಡು ಮುಂದ ಸಹಾಯಕ ಗುರು ಜೋಕಿಂ ಫಾದರ್ ಮುಖದಾಗ ಮುಗಳ್ನಗಿ ಮೂಡಿ ಮಾಯವಾಯಿತು.

“ಇನ್ನ ಮಿಟಿಂಗ ಮುಗಸೂಣು ಅಲಾ?’’ ಫಾದರ್ ಮಿಖೇಲಪ್ಪ ಸದಸ್ಯರತ್ತ ಮುಖ ಮಾಡಿ ಕೇಳಿದರು,

ಇದ್ದಕಿದ್ದಂಗ ಎದ್ದ ನಿಂತ ಚಾರ್ಲಿ ಕಾಕಾ, ಬಗಲಲ್ಲಿ ಮಡಚಿಕೊಂಡ ಬಂದ ನ್ಯೂಸ್ ಪೇಪರ್ ಉಚಕೊಂಡ ಓದಾಕ ಹಚ್ಚಿದರು.

`ಬೆಂಗಳೂರಿನ ಕಮ್ಮನಹಳ್ಳಿಯ ಸಂತ ಹತ್ತನೇ ಭಕ್ತನಾಥರ ದೇವಾಲಯದ ಬೀಗ ಮುರಿದು ಒಳಗೆ ನುಗ್ಗಿ ದಾಂಧಲೆ ಮಾಡಿದ್ದ ಚರ್ಚ ಸದಸ್ಯನನ್ನು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕುಟುಂಬ. ತಾಯಿ ತಪ್ಪದೇ ಗುಡಿಗೆ ಬರುತ್ತಿದ್ದಳು. ಗಂಡ ದೂರವಾಗಿದ್ದ.ನಾನೇ ನಿನ್ನ ದೇವರು’ ಎಂದು ಬಡಬಡಿಸುತ್ತಿದ್ದ ಮಗ, ಈ ಘನಂದಾರಿ ಕೆಲಸ ಮಾಡಿದ್ದ. ’’

ನ್ಯೂಸ್ ಪೇಪರ್ ಓದು ಮುಗಿಸಿ, ಪೇಪರ್ ಮತ್ತ ಬಗಲಿಗೆ ಸೇರಿಸಿಕೊಂಡ ಚಾರ್ಲಿ ಕಾಕಾ, “ಗುಡಿ ಪಾಲನಾ ಸಮಿತಿ ಸದಸ್ಯರಿಂದ, ಧರ್ಮಕೇಂದ್ರದ ಸ್ವಾಮಿಗಳಿಂದ, ಜೀವನ ಎದುರಿಸುವ ಧೈರ್ಯದ ಮತ್ತ ನಾಲ್ಕ ಸಾತ್ವನದ, ಸಮಾಧಾನದ ಮಾತಗಳಿಗೆ ಕಷ್ಟದಲ್ಲಿದ್ದ ಆ ಕುಟುಂಬ ಕಿವಿ ಆಗಿದ್ದರ. ಅಲ್ಲಿ, ಆ ಪರಿಸ್ಥಿತಿ ಬರ್ತಿರಲಿಲ್ಲ. ’’

ಇಷ್ಟ ಹೇಳಿ ಕೆಳಗ ಕೂತ ಚಾರ್ಲಿ ಕಾಕಾ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದರು. ಇಡೀ ಸಭೆ ಶಾಂತವಾಯಿತು.

ಆಗ, ಗುಡಿಯ ಪಕ್ಕದ ಸಂತ ಅನ್ನಮ್ಮರ ಕಾನ್ವೆಂಟಿಗೆ ಬಂದ ಹತ್ತು ವರ್ಷ ಮಣ್ಣು ಹೊತ್ತಿದ್ದ, ಸಿಸ್ಟರ್ ವೆರೋನಿಕಾ ಅವರು, “ಫಾದರ್, ಇಂಥ ಸಿರಿಯಸ್ ವಿಷಯಗಳು ಮನಗಂಡ ಅದಾವು. ಪಿಸಿಸಿ ಮೆಂಬರ್ ಗಳಿಗೆ ನಿಮಗ ಹೆಂಗ ಹೇಳೂದು ಚಿಂತಿ ಆಗೇದ. ಆದರ ಹೊರಗ ಭಾಳ ಗುಸುಗುಸು ಮಾತ ಬರಾಕ್ಹತ್ತಾವು. ’’ ಅಂದರು.

ಆಗ ಸದಸ್ಯರಲ್ಲಿ ಸಂಚಲನ ಮೂಡಿದಂತಾಗಿ, ಮಿಟಿಂಗ್ನಲ್ಲಿದ್ದ ಎಲ್ಲ ಮುಖಗಳು ಸಿಸ್ಟರ್ ವೆರೋನಿಕಾ ಅವರತ್ತ ತಿರುಗಿದವು.

`ನೀವು ಬಂದಾಗಿನಿಂದ ಒಬ್ಬರ ಮನಿಗೂ ಹೋಗೇ ಇಲ್ಲ, ಯಾವ ಕುಟುಂಬದ ಸರಿಯಾದ ಪರಿಚಯಾನೂ ನಿಮಗಾಗಿಲ್ಲ. ಅದಕ್ಕ ನೀವು, ಈಗ ಸಮಜಾಯಿಷಿ ಕೊಟ್ಟೀರಿ. ನಾನ್ ಹೇಳಾಕ್ಹತ್ತಿರೋದು ಸ್ವಲ್ಪ ಗಂಭೀರ ವಿಷಯ. ಇಲ್ಲಿ ನಲವತ್ತ ಕುಟುಂಬ ಅದಾವ ಅಂದಕೊಂಡರ, ಅದರಾಗ ಹತ್ತ ಕುಟುಂಬಗಳಲ್ಲಿ ಒಂದರೇ ಒಂದ ಕುಟುಂಬದಾಗ ಶೀಕ್ ಆದಾವರು, ಹಾಸಗಿ ಹಿಡದವರು ಇದ್ದ ಇರ್ತಾರು. ಅವರು ಛಲೋ ಇದ್ದಾಗ ತಪ್ಪದ ದಿನಾ ಚರ್ಚಿಗೆ ಬರಾವರು. ಪೂಜಿಯೊಳಗ ಜಗದ ಉದ್ಧಾರಕ್ಕ ಶಿಲುಬೆ ಮ್ಯಾಲೆ ಅಸುನೀಗಿದ ದೇವಸುತ ಯೇಸುಸ್ವಾಮಿಯ ಕೊನೆಯ ಭೋಜನದ ದೃಶ್ಯವನ್ನು ಪುನರಾವರ್ತಿಸುತ್ತಾ, ರೊಟ್ಟಿಯಲ್ಲಿ ನೀವು ಆವಾಹನೆ ಮಾಡುವ ಕ್ರಿಸ್ತ ಶರೀರವನ್ನು ಸ್ವೀಕರಿಸುತ್ತಿದ್ದರು. ಈಗ, ಅವರಿಗೆ ಜಡ್ಡ ಬಂದ, ವಯಸ್ಸಾಗಿ, ಸತ್ಪçಸಾದ -ಕ್ರಿಸ್ತ ಶರೀರ’ ಸೇವನೆಗೆ ಅವಕಾಶ ಇಲ್ಲದಂಗ ಆಗೇದ. ಹಿಂಗಾದರ ಹೆಂಗ? ಸತ್ಪ್ರಸಾದ ಸಿಗದ ಭಾಳ ದಿನಾ ಆದವು. ಇನ್ನೂ ನೀವು ಅಂಥವರ ಮನಿಗೆ ಹೋಗಿ, ಸಾಧ್ಯ ಆದರ ಪಾಪನಿವೇದನೆ ಕೇಳಿಸಿಕೊಂಡ, ಪ್ರಾಯಾಶ್ಚಿತ್ತ ವಿಧಿ ಪೂರೈಸಿದ ಮ್ಯಾಲ ಸತ್ಪ್ರಸಾದ ಕೊಡದ ಇದ್ದರ ಹೆಂಗರಿ ಫಾದರ್?’’

ಸಿಸ್ಟರ್ ವೆರೋನಿಕಾ ಅವರು ಮಾತು ಮುಗಿಯುತ್ತಿದ್ದಂತೆಯೇ, ಚಾರ್ಲಿ ಕಾಕಾ, `ನಮ್ಮವರೂ ಸಿಸ್ಟರ್’ ಹೇಳೂದು ಸತ್ಯವಾದ ಮಾತು. ಅವರು ನಮ್ಮ ಗಂಟಲದಾಗ ಸಿಕ್ಕೊಂಡ ಮಾತಿಗೆ ದನಿ ಆದರು’’ ಎಂದರು.

ಎಲ್ಲರ ಮುಖದಲ್ಲೂ ನಿರಾಳವಾದ ಭಾವ ಮೂಡಿತ್ತು.

ಕಾನ್ವೆಂಟಿಗೆ ಬರೂ ಊರಾನ ಮಂದಿಗೆ ಅವರು ವೆರೋನಿಕಾ ಸಿಸ್ಟರ್’ ಆಗಿದ್ದರ, ನಾವೆಲ್ಲಾ ಅಂದ್ರ ಧರ್ಮಕೇಂದ್ರದ ಮಂದಿ ಪ್ರೀತಿಲಿಂದವರೂ ಸಿಸ್ಟರ್’ ಅಂತ ಕರಿಯೂದು. ಈಗ ನಮ್ಮ ಪರವಾಗಿ ಮಾತ ಎತ್ಯಾರು.

“ಮನ್ಯಾಗ ಶೀಕ್ ಆಗಿ ಕೂತವರಿಗೆ, ವಯಸ್ಸಾದವರಿಗೆ ಸತ್ಪ್ರಸಾದ ಸಿಗದ ಒಂದೂವರೆ ತಿಂಗಳಾಗೇದ. ಇಷ್ಟ ದಿವಸ ಸುಮ್ಮನಿದ್ವಿ. ನಿಮ್ಮ ಪರಿಸ್ಥಿತಿ ನಮಗೂ ಅರ್ಥಾಗತದ. ಈಗ ನಿಮಗ ಒಬ್ಬ ಅಸಿಸ್ಟಂಟ್ ಕೊಟ್ಟಾರು. ಈಗೂ ನೀವು ಸತ್ಪ್ರಸಾದ ಕೊಡಾಕ ಮನಿಗೆ ಬಂದಿಲ್ಲ ಅಂದ್ರ ಹೆಂಗ ನಡಿತದ?’’ ಚಾರ್ಲಿ ಕಾಕಾ, ಫಾದರ್ ಕಡೆ ನೇರವಾಗಿ ನೋಡಕೋತ ಹೇಳಿದರು.

“ಈಗ, ನೀವು ತಿಂಗಳದಾನ ಒಂದ ಡೇಟ್ ಫಿಕ್ಸ್ ಮಾಡ್ರಿ. ಇಲ್ಲಾ ವಾರದಾಗ ಶುಕ್ರವಾರ ರವಿವಾರ ಎರಡ ದಿನಾ ಫಿಕ್ಸ್ ಮಾಡ್ರಿ. ನಾವೂ ಅಂಥಾ ದಿನ ಸವಡ ಮಾಡಕೊಂಡ ಯಾರರೆ ಒಬ್ಬರು ಮನ್ಯಾಗ ಇರ್ತೀವಿ, ಶೀಕ್ ಮಂದಿ ಮತ್ತ ಹರ್ಯಾರ ಜೋಡಿ. ಮನಿ ಹೊರಗ ಹೋಗಲಾಗದ ಹರ್ಯಾರ ಮನಸ್ಥಿತಿ ಹೆಂಗ ಇರ್ತದ ಅನ್ನೂದನ್ನ ನಾವು ನಿಮಗ ಹೇಳಿಕೊಡೂದು ತಪ್ಪಾಗ್ತದ. ನೀವು ತಿಳದವರ ಅದೀರಿ. ಇದಕ್ಕಿಂತ ಹೆಚ್ಚಿಗೆ ಇನ್ನೇನ ಹೇಳೂದು ಐತಿ ನಮಗ?’’

“ಆಯಿತು, ನಿಮ್ಮ ಭಾವನೆ, ನೋವು ನನಗೂ ಅರ್ಥ ಆಗ್ತದ. ಅದು ನನ್ನ ಜವಾಬ್ದಾರಿಯ ಒಂದು ಭಾಗ. ’’

`ಊರಾಗ ನಮ್ಮವ್ವನೂ ಹಾಸಿಗಿ ಹಿಡದ ಮೂರು ತಿಂಗಳಾತು. ಅವಳಿಗೆ, ಅಲ್ಲಿ ಫಾದರ್ ಸಂಡೆಗೊಮ್ಮಿ ಮನಿಗೆ ಹೋಗಿ ಸತ್ಪ್ರಸಾದ ಕೊಡದಿದ್ದರ, ಅಲ್ಲಿ ಸ್ವಾಮ್ಯಾರು ತಮ್ಮ ಜವಾಬ್ದಾರಿ ನಿಭಾಯಿಸಿದಂಗ ಆಗ್ತದ. ಅಲ್ಲಿ ಹಂಗ ಆಗಿರಾಕಿಲ್ಲ ಅನಕೋತೀನಿ’ ಹಂಗ ವಿಚಾರ ಮಾಡಕೋತ, ಸಿಸ್ಡರ್ ಕಡೆ ಮುಖಾ ಮಾಡಿದರು.

“ಸಿಸ್ಟರ್ ವೆರೋನಿಕಾ, ಐ ಆಮ್ ವೆರಿಮಚ್ ಗ್ರೇಟಫುಲ್ ಟು ಯು. ಚಾರ್ಲಸ್ ಅವರ, ನನ್ನ ಕಣ್ಣ ತಗಸಿದಿರಿ. ನಾ, ಕೆಲಸ ಕೆಲಸ ಅಂತ ಅದರಾಗ ಮುಳಿಗಿ ಹೋಗಿದ್ದೆ. ’’

*

ಪ್ಯಾರಿಷ್ ಹಾಲಿನಿಂದ ಹೊರಗೆ ಬರುತ್ತಿದ್ದಂತೆ, ತಮ್ಮ `ಸಾಲೂ’ ಊರಿನಿಂದ ಅಚಾನಕ್ ಆಗಿ ಅವಸರದಲ್ಲಿ ಫೋನ್ ಮಾಡಿ ರಾತ್ರಿ ಬಂದುದು, ಮುಂಜಾನೆ ನಾಷ್ಟಾಗೆ ಕುಳಿತಾಗ ಏನೋ ಹೇಳಲು ಹೊರಟದ್ದು, ತಾವು ಅವನ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿ ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ಗೆ ಬಂದುದು ನೆನಪಾಯಿತು ಫಾದರ್ ಮಿಖೇಲಪ್ಪ ದಂಡೀನ ಅವರಿಗೆ.

ಅಯ್ಯೋ, ಊರಲ್ಲಿ ಏನಾದರೂ ಅವಗಢವಾಗಿದೆಯೆ?’ ಎಂದು ಅಂದುಕೊಂಡವರಿಗೆ ತಕ್ಷಣ ಊರ ಮನೆಯಲ್ಲಿರುವ ವಯಸ್ಸಾದ, ಹಾಸಿಗೆ ಹಿಡಿದಿರುವ ಅವ್ವನ ನೆನಪಾದಳು.ಅವ್ವನಿಗೆ ಏನಾಗಿರಬಹುದು? ಅವಳ ಆರೋಗ್ಯದಲ್ಲಿ ಏನಾದರೂ ಏರುಪೇರು ಆಗಿದೆಯಾ? ಇರಲಿಕ್ಕಿಲ್ಲ. ಅದನ್ನು ಬರುವೆನೆಂದು ಫೋನ್ ಮಾಡಿದಾಗಲೇ ಸಾಲೂ ತಿಳಿಸುತ್ತಿದ್ದ’ ಎಂದು ತಲೆ ಕೊಡವಿಕೊಂಡರು.

ಇಂದಿನ ಪ್ಯಾರಿಷ್ ಕೌನ್ಸಿಲ್ ಮಿಟಿಂಗ್ ನಲ್ಲಿ ಕೊನೆಯಲ್ಲಿ ಪ್ರಸ್ತಾಪವಾದ ವಿಷಯ ಮನಸ್ಸಿನಲ್ಲಿ ಸುಳಿದಾಡಿತು.

ಅದರ ಹಿಂದೆಯೇ, ನನ್ನ ಊರಲ್ಲಿನ ಪ್ಯಾರಿಷ್ ಪ್ರೀಸ್ಟ್ ಸಹ ನನ್ನಂತೆಯೆ ವಿಶ್ವಾಸಿಕರ ಮನೆಗಳ ಭೇಟಿಯನ್ನು ನಿರ್ಲಕ್ಷಿಸಿರುವರೆ? ತಮ್ಮ ಜವಾಬ್ದಾರಿಯಿಂದ ದೂರ ಸರಿದಿರುವರೆ? ’ ಎಂಬ ಪ್ರಶ್ನೆ ಮೂಡಿತು. ಅದರ ಹಿಂದೆಯೇ, ನಾಷ್ಟಾಗೆ ಕುಳಿತಾಗ,ತಮ್ಮ ಸಾಲೂ, ಊರಲ್ಲಿ ಅದೇನೋ ಸ್ವಾಮ್ಯಾರ ಎಡವಟ್ಟು. . ಎಂದು ಹೇಳುತ್ತಿದ್ದುದು’ ನೆನಪಾದಾಗ, ತಮ್ಮ ಸಾಲೊಮನ್ ಅನ್ನು ಮಾತನಾಡಿಸುವ ತವಕ ಹೆಚ್ಚಾಗತೊಡಗಿತು. ಅವರ ನಡಿಗೆ ಚುರುಕಾಯಿತು.

ದೂರದಲ್ಲಿ ತಮ್ಮ ಸಾಲೊಮನ್ ಅವರಿಗಾಗಿ ಕಾಯುತ್ತಿದ್ದುದು ಕಾಣಿಸಿತು.

-ಎಫ್. ಎಂ. ನಂದಗಾವ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x