ದೀವಾಪುರ: ರವಿರಾಜ್ ಸಾಗರ್. ಮಂಡಗಳಲೆ.

ತವರು ನೆಲಕ್ಕೆ ಕಾಲಿಡುತ್ತಿದ್ದಂತೆ ಕಳೆದುಕೊಂಡ ಅಮೂಲ್ಯ ವಸ್ತುವೊಂದು ಮತ್ತೆ ಸಿಕ್ಕಾಗಿನ ಸಂತಸ, ಮತ್ತದೇನೂ ಅನುಭೂತಿ, ನವ ಯುವಕರಲ್ಲಿ ಕಾಣುವಷ್ಟು ಉತ್ಸಾಹ, ಎಂಭತ್ತರ ಇಳಿವಯಸ್ಸಿನ ನಾರಣಪ್ಪನಲ್ಲಿ ಆದ್ರೆಮಳೆಯ ವರದಾನದಿಯಂತೆ ಉಕ್ಕಿ ಹರಿಯುತ್ತಿತ್ತು. ಬಹಳ ದಶಕದ ನಂತರ ಅಮೆರಿಕದಿಂದ ಊರಿಗೆ ಬರುತಿದ್ದ ನಾರಣಪ್ಪ ಅವರನ್ನು ಸ್ವಾಗತಿಸಲು ಊರಿನ ಅರಳೀಕಟ್ಟಿ ಬಳಿ ಒಂದಿಷ್ಟು ಜನ ಜಮಾಯಿಸಿದ್ದರು. ಅಮೆರಿಕದಿಂದ ಬರುತ್ತಿದ್ದಾರೆ ಎಂದಮೇಲೆ ನಾರಣಪ್ಪ ಅವರು ಅಲ್ಲಿ ಇಂಜಿನಿಯರೋ, ಡಾಕ್ಟರೋ, ವಿಜ್ಞಾನಿಯೋ, ಯಾವುದೋ ದೊಡ್ಡ ನೌಕರಿಗೋ ಹೋಗಿರಬೇಕೆಂದು ತಿಳಿಯಬೇಡಿ. ಅವರು ಎಪ್ಪತ್ತರ ದಶಕದ ಗೇಣಿ ಹೋರಾಟಗಾರರು . ಅವರ ಹುಟ್ಟೂರು ದೀವಾಪುರ.

ಆತ್ತ ಕಡೆ ಪೂರ್ವದಿಂದ ಉತ್ತರಕ್ಕೆ ಸಾಗುವ ವರದಾ ನದಿ

ಇತ್ತ ಕಡೆ ಪಶ್ಚಿಮದಿಂದ ಉತ್ತರಕ್ಕೆ ಸಾಗುವ ಕನ್ನೆಹೊಳೆ ಸಂಗಮವಾಗುವ ಸ್ಥಳವೇ ದೀವಾಪುರ. ಎರಡು ನದಿಗಳು ಸಂಗಮವಾಗುವ ಸ್ಥಳವಾದ್ದರಿಂದ ಪ್ರತಿವರ್ಷ ಪ್ರವಾಹವನ್ನು ಇಲ್ಲಿನವರು ಎದುರಿಸಲೇಬೇಕು. ಆದ್ರೆ ಮಳೆಯಿಂದ ಅಣ್ಣತಮ್ಮನ ಮಳೆವರೆಗೂ ಉಕ್ಕಿ ಹರಿವ ನದಿಗಳು ಪ್ರತಿವರ್ಷ  ದೀವಾಪುರದ ಗದ್ದೆ ತೋಟಗಳನ್ನು ಮುಳುಗಿಸಿ ಮಜಾ ನೋಡುತ್ತ ಸಾಗುತ್ತವೆ. ಮಾನವ ವಾಸಕ್ಕಾಗಿಯಾಗಲಿ, ಕೃಷಿಗಾಗಿ ಆಗಲಿ ಅಷ್ಟೇನೂ ಸುರಕ್ಷಿತ ಪ್ರದೇಶವಲ್ಲದಿದ್ದರೂ ಅದೆಷ್ಟೋ ತಲೆಮಾರುಗಳಿಂದ ಅಲ್ಲೇ ವಾಸವಾಗಿದ್ದಾರೆ ಅಂದರೆ ಅಲ್ಲಿದ್ದವರು ಎಂಥ ದೈರ್ಯವಂತರೆಂದು, ಎಷ್ಟು ಕಷ್ಟಸಹಿಷ್ಣುಗಳೆಂದು ನೀವೇ ಅಂದಾಜಿಸಬಹುದು.

 ಸ್ವಾತಂತ್ರ್ಯಪೂರ್ವಕಿಂತ ಹಿಂದೆ ಆ ಊರಲ್ಲಿ ಅಕ್ಷರ ಕಲಿತವರಾಗಲಿ, ಉತ್ತಮ ತೋಟ ಜಮೀನಿನ ಭೂಮಾಲೀಕರಾಗಲಿ, ಅಷ್ಟೇ ಯಾಕೆ ಮೂರು ಹೊತ್ತು ಸರಿಯಾಗಿ ಊಟಕ್ಕೆ ಆಗುವಷ್ಟು ಕಾಳು, ಕಡ್ಡಿ ಹೊಂದಿರುವ ಕುಟುಂಬಗಳೆ ಇರಲಿಲ್ಲ. ಎಲ್ಲರು ಗುಡಿಸಲು ಕಟ್ಟಿಕೊಂಡು ಗಂಜಿ, ಕೆರೆ ಮೀನು, ಆಗೀಗ ಕಾಡು ಪ್ರಾಣಿಗಳ ಶಿಕಾರಿ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಮೂರು ಹೊತ್ತು ಅನ್ನಕ್ಕಾಗಿ ಮಿಕ್ಕುವಷ್ಟು ಸ್ಥಿತಿವಂತ ಕುಟುಂಬ ಅಂದರೆ ಆ ಊರಿನ ಭೂ ಮಾಲಿಕ ಈರಪ್ಫಗೌಡರ ಕುಟುಂಬವೊಂದೆ ಆಗಿತ್ತು. ಇಡೀ ಊರಿನ ಜಮೀನಿಗೆ ಅವರೇ ಭೂ ಮಾಲೀಕರಾಗಿದ್ದರು. ಉಳಿದವರೆಲ್ಲ ಅವರ ಗೇಣಿದಾರರಾಗಿ, ಒಕ್ಕಲು ಮಕ್ಕಳಾಗಿ ಬದುಕು ನಡೆಸುತ್ತಿದ್ದರು. ಇದು ಎಪ್ಪತ್ತರ ದಶಕದವರೆಗೂ ಇದ್ದ ದೀವಾಪುರದ ಸ್ಥಿತಿ ಗತಿ.

 ಕೆಳದಿ ಸೀಮೆಯ ದೀವಾಪುರ ಸುತ್ತಮುತ್ತಲು ಅಂದಿನ ಸ್ವಾತಂತ್ರ್ಯ ಚಳುವಳಿ, ಸಮಾಜವಾದಿ ಚಳುವಳಿ, ಕಾಗೋಡು ರೈತ ಚಳುವಳಿ ಹಳ್ಳಿ ಹಳ್ಳಿಯ ಅನಕ್ಷರಸ್ಥ ಜನಸಾಮಾನ್ಯರಲ್ಲೂ ಸ್ವಾತಂತ್ರ, ಸ್ವಾಭಿಮಾನ, ಸಮಾನತೆ, ಭೂಮಿಯ ಹಕ್ಕು ಕುರಿತು ಬಾರಿ ಜಾಗೃತಿ ಮೂಡಿಸಿತ್ತು. ಅಂದು ಆಳುತ್ತಿದ್ದ ಬ್ರಿಟೀಷರಿಂದರಿಂದ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹಳ್ಳಿಗಳಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಭೂ ಮಾಲೀಕರಿಂದ ಮಾತ್ರ ಜನಸಾಮಾನ್ಯರಿಗೆ ಸ್ವಾತಂತ್ರ ಸಿಕ್ಕಿರಲಿಲ್ಲ. ರೈತರ ನಿರಂತರ ಹೋರಾಟ, ಅಂದಿನ ಕೆಲವು ರಾಜಕೀಯ ಮುಖಂಡರ ಇಚ್ಚಾಶಕ್ತಿಯಿಂದ ಕೊನೆಗೂ ಉಳುವವನೇ ಹೊಲದೊಡೆಯ ಕಾಯ್ದೆಯಡಿ ಭೂಮಿ ಹಕ್ಕು ಸಿಕ್ಕಿತ್ತು. ರೈತರ ಮನೆ ಬಾಗಿಲಿಗೆ ಸ್ವಾತಂತ್ರದ ಬೆಳಕು ಹರಿದಿತ್ತು.

 ದೀವಾಪುರದ ಜನರಿಗೆ ಅಂದು ಭೂಮಿಯ ಹಕ್ಕು ಕೊಡಿಸಲು ಒಂದಿಷ್ಟು ಶ್ರಮಿಸಿದ್ದವರಲ್ಲಿ ನಾರಣಪ್ಪ, ರಾಮಣ್ಣ, ಮೈಲಪ್ಪ ಗೆಳೆಯರ ಬಳಗವೂ ಒಂದು. ಆಗಿನ್ನೂ ಇವರಿಗೆ ಹದಿನೆಂಟರ ಹರೆಯ. ಹೇಳಿಕೇಳಿ ಹಸಿದ ಗುಡಿಸಲು ಮನೆಯಲ್ಲಿ ಬೆಳೆದ ಬಿಸಿರಕ್ತ. ಹಸಿದ ಗುಡಿಸಲಿನ ನೆತ್ತರಿಗೆ ಹೋರಾಟದ ಕಾವು ಏರಿದಾಗ ಭುಗಿಲೇಳುವ ಸುನಾಮಿಯು ಹೊಟ್ಟೆ ತುಂಬಿದ ದರ್ಪೀಷ್ಟರ ಬಲಿ ತೆಗೆದುಕೊಳ್ಳುವುದನ್ನು ತಪ್ಪಿಸಲು ಯಾರಿಂದಲೂ ಆಗುವುದಿಲ್ಲ. ದೀವಾಪುರದ ಗೆಳೆಯರ ಬಳಗವು ಅಂದು ಭೂಮಾಲೀಕರ ದರ್ಪಕ್ಕೆ ಸೆಡ್ಡು ಹೊಡೆದು ಭೂಮಿ ಹಕ್ಕು ಪಡೆಯುವಲ್ಲಿ ಗೆಲುವಿನ ಕೇಕೆ ಹಾಕಿತ್ತು. ನಾರಣಪ್ಪ ಸಾಕಷ್ಟು ಉತ್ತಮ ಕೃಷಿಯೋಗ್ಯ ಭೂಮಿಯನ್ನು ತನ್ನದಾಗಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಒಬ್ಬ ಮಗನನ್ನು ಅಮೆರಿಕಕ್ಕೆ ನೌಕರಿಗೆ ಕಳಿಸಿದ್ದ. ಕೆಲವು ವರ್ಷಗಳ ನಂತರ ಬಂದ ಮಗ ಪರಮೇಶ ನಾರಣಪ್ಪನನ್ನು ಸಹ ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದ.

25 ವರ್ಷಗಳ ನಂತರ ಮರಳಿ ದೀವಾಪುರಕ್ಕೆ ಬಂದ ನಾರಣಪ್ಪನಿಗೆ  ಊರನ್ನು ನೋಡುತ್ತಿದ್ದಂತೆಯೇ ಹಲವು ಸಂಗತಿಗಳು ಕಾಡಿದವು.

ಊರಿಗೆ ಬಂದ ಮಾರನೇ ದಿನವೆ ನಾರಣಪ್ಪ ತನ್ನ ತಮ್ಮ ಮಂಜಪ್ಪನ ಮನೆಗೆ ಹೋದ. ಎರಡಂತಸ್ತಿನ ಕಾಂಕ್ರೀಟ್ ಮನೆ. ಮನೆಬಾಗಿಲಲ್ಲಿ ಕಾರು ಬೈಕು ನಿಂತಿದ್ದವು.

ನಾರಣಪ್ಪನನ್ನು ನೋಡಿದ ಕೂಡಲೆ ” ಏನಣ್ಣ ಚೆನ್ನಾಗೈದಿಯನಾ. . . ? ನಾವೆಲ್ಲ ಸತ್ತಿಂವಾ. . . ಬದುಕಿವಾ ಅಂತ ನೋಡಕ್ಕೆ ಬಂದೆನಾ . . . ?” ಅಂದ ಮಂಜಪ್ಪ.

ಕಾಲು ಕೆದರಿ ಗುದ್ದೋಕೆ ಹೊರಟ ಟಗರಿನಂಗೆ ಒಮ್ಮೆ ಮಂಜಪ್ಪನನ್ನೆ ದುರುದುರು ದಿಟ್ಟಿಸಿ, ತನ್ನ ಸಿಟ್ಟನ್ನು ತೋರಿಸುವ ಸಮಯ ಇದಲ್ಲ ಎಂದೆಣಿಸಿ ತಕ್ಷಣವೇ ಕಿಸಕ್ಕನೆ ನಕ್ಕು ” ಹಂಗೆ ಅನ್ಕಳಾ ಮಾರಾಯ. ಎಂತಾ ಮಳ್ಳನಾ . . ? ಇಪ್ಪತೈದು ವರ್ಷಗಳ ಮೇಲೆ ಅಮೇರಿಕಾದಿಂದ ಊರಿಗೆ ಬಂದಿನಿ. ಮೊದಲು ಬಂದುದ್ದೆ ನಿಮ್ಮನೆಗೆ. ನಂಗೇ ಹೇಳ್ತಾನಿವ. ಪೋನುಗೀನು ಮಾಡಿದಾಗ ಒಮ್ಮೆ ಆದರೂ ಸರಿಯಾಗಿ ಮಾತಾಡ್ತಿದ್ದೆನಾ  ನೀನು. ನಾನು ಅಮೇರಿಕಾಕ್ಕೆ ಹೋಗಿಬಿಟ್ರೆ ನಂಗೇನು ಎರಡು ಕೊಂಬು ಬರುಲ್ಲ ತಗಳಾ. ನಾನು ನಿನ್ನಂಗೆ ಇಂದಲ್ಲ ನಾಳೆ ಬಿದ್ದೋಗೋ ಮರ ಅಂತ ಚೂರು ಕೋಪದಲ್ಲಿಯೇ ಉತ್ತರಿಸಿದ ನಾರಣಪ್ಪ ತಮ್ಮನ ಪಕ್ಕದಲ್ಲಿ ಹೋಗಿ ಚಡೀ ಕಟ್ಟೆಮೇಲೆ ಕೂತನು.

“ಅಣ್ಣಾ, ಇಲ್ಲೇ ಎಂತಕೆ ಕುತ್ಕೊಂಡ್ಯಾ. ಒಳುಗೆ ಹೋಗಾನ ನಡಿ” ಅಂತಾ ಮಂಜಪ್ಪ ಒತ್ತಾಯಿಸಿದರೂ ” ಇಷ್ಟು ವರ್ಷ ಒಳಗೆ ಕುಂತು ಕುಂತು ಸಾಕಾಗಿ ಹೋಗೈತಿ. ಹೊರಗಡೆ ಕೂತ್ರೆ ನಾನು ಬಂದೀನಿ ಅಂತ ಊರು ಕೇರಿಗೆ ಗೊತ್ತಾಕೈತಿ, ಇಲ್ಲೇ ಮಾತಾಡನ ತಗಳಾ” ಅಂದನು.

“ನೀ ಹೇಳಿದ್ಮೇಲೆ ಮುಗೀತು ತಗಾ ನಂದೇನೈತಿ. ಮತ್ತೆ ಅಮೆರಿಕ ಹೋದರೆ ಕೂದಲೆಲ್ಲ ಕೆಂಪುಗೆ ಆಕ್ತವೆ ಅಂತಾರೆ. ನಿನ್ನವು ಕೆಂಪುಗೂ ಆಗಿಲ್ಲ, ಬೆಳ್ಳುಗೂ ಆಗಿಲ್ಲ ಇನ್ನೂ ಹಂಗೆ ಕರ್ರಗೆ ಐದವಲ್ಲಾ ಅಂತ ಮಂಜಪ್ಪ ತಮಾಶೆ ಮಾಡಿದನು.

ದೇಶ, ವೇಷ ಬದಲಾಯಿಸಿದ ಮಾತ್ರಕ್ಕೆ, ಭಾಷೆ, ಭಾವನೆ, ಬಣ್ಣ ಬದಲಾಯಿಸೋ ಊಸರವಳ್ಳಿ ಕುಲದ ಜಾತಿಯವನು ಅಲ್ಲಾ ನಾನು, ಅಂತಾ ಗೊತ್ತು ತಾನೆ ನಿಂಗೆ. ನಾನು ಪಕ್ಕಾ ದೀವಾಪುರದ ದೀವ ಕಣಲೆ.

 ಮಗನಿಂದಾಗಿ ಯಾವ ಯಾವ ದೇಶನೋ ತಿರುಗಿ ಬಂದರೂ ನನ್ನಲ್ಲಿ ಈ ಪಾಶ್ಚಾತೀಕರಣ, ಆಧುನಿಕತೆ ಅಂತ ಏನೇನೋ ಹೇಳುತ್ತಾರಲ್ಲ ಅದೆಲ್ಲ ಏನೂ ಆಗಿಲ್ಲ. ನಾನು ಆಗಿನ ಕಾಲದಲ್ಲೆ ಸ್ವದೇಶಿ ಚಲುವಳಿ, ಸಮಾಜವಾದಿ ಚಳುವಳಿಯಲ್ಲಿ ಹೋರಾಡಿದವನು ಅಂತ ಗೊತ್ತಲ್ಲ ನಿಂಗೆ ಅಂದನು.

 ಹೌದು ಬಿಡಣ್ಣಾ. ಮತ್ತೆ ಮಗಾ ಸೊಸೆ ಬಂದಾರನಾ ಎಂದನು. ಅವರನ್ನೂ ಕರಕುಂದೆ ಬಂದೀನಿ ಮತ್ತೆ. ಅವರು ಚೂರುಪಾರು ಬದಲಾಗಿದ್ದಾರೆ. ಆದರೂ ಅವರಿಗೂ ನಮ್ಮ ಊರು ಕೇರಿ, ಭಾಷೆ, ಸಂಸ್ಕೃತಿ ಬಗ್ಗೆ ಹೆಮ್ಮೆಯಿದೆ. ಬೆಳಗ್ಗೆನೇ ನಮ್ಮ ಕಾಗೋಡು ತೋಟದ ಕಡೆ ಹೋಗಿ ಬಂದ್ವಿ. ಅಲ್ಲಾ ಹುಡ್ಗ ಊರಾಗೆಲ್ಲ ಗದ್ದೆಗಿದ್ದೆ ಎಲ್ಲಾ ದೊಡ್ಡವರಿಗೆ ಮಾರಿಕಿಂದು ಕುಂತಾರಂತಲ್ಲಾ . ಏನಾತ ಅವರಿಗೆ ಎಂದು ಏರುದನಿಯಲ್ಲಿ ಪ್ರಶ್ನಿಸಿದನು.

ಏನು ಹೇಳಾನ ತಗಳಾ ಅತ್ತಾಗೆ. ನಮ್ಮ ಕಾಲದಂಗೆ ಈಗಿನ ಹುಡುಗರು ಹಗಲುರಾತ್ರಿ ಬೆವರು ಸುರಿಸಿ ದುಡಿಯಾಕೆ ರೆಡಿ ಇಲ್ಲ. ಈಗ ನನ್ನ ಮಕ್ಕಳು ವೆಂಕಟೇಶ, ಸತೀಶ ರಮೇಶನ್ನೆ ತಗಾ . ರಮೇಶ ಅಲ್ಲಿ ಇಲ್ಲಿ ಹಳ್ಳಿಮನೆ ರಾಜಕೀಯ ಮಾಡಿಕಿಂದ್ದು ಆರಾಮಾಗಿ ಐದನೆ. ವರ್ಷ ಒಂದಿಷ್ಟು ಕಂಟ್ರಾಕ್ಟ್ ಕೆಲಸ, ಆ ಚುನಾವಣೆ, ಈ ಚುನಾವಣೆ ಅಂತ ಅದೂ ಇದೂ ಕೆಲಸ ಮಾಡಿಸುತ್ತಾನೆ. ರಾಜಕೀಯದಾಗೆ ಒಳ್ಳೆ ದುಡ್ಡು ಮಾಡಬಹುದು ಅಂತಾ ಈಗ ಬಾಳ ಜನ ಅದುಕ್ಕೆ ಬಿದ್ದಾರೆ. ಸತೀಶ ಹಂಗೂ ಹಿಂಗೂ ಸರ್ಕಾರಿ ನೌಕರಿ ತಗೊಂಡು ಸಾಗರ ಪ್ಯಾಟೆ ಸೇರಿದ. ವೆಂಕಟೇಶನಿಗೆ ಓದುಗೀದು ಹತ್ತಲಿಲ್ಲ. ಅಲ್ಲಿ ತಿರುಗಿ ತಿರುಗಿ ದಿನಾ ಕಳೀತಿದ್ದ. ಅವನ ಪಾಲಿನ ಗದ್ದೆ ಮಾರಿ ತಾಳಗುಪ್ಪದಲ್ಲಿ ಅಂಗಡಿ ಹಾಕಿಂದು, ಈ ಮನೆನೂ ಕಟ್ಟಿಸಿಗಿಂದು ಕಾರುಗೀರು ಎಲ್ಲಾ ಇಟ್ಟುಕೊಂಡು ಕಾಲಕಳೀತ ಐದನೆ. ಅವರದೆ ಆರಾಮ ಜೀವನ ಅನ್ನಂಗೆ ಆಗೈತಿ ಕಣಾ. ನಮ್ಮ ಕೈಯಾಗೆ ಏನೈತಿ. ಕಾಲ ಬಂದಂಗೆ ಹೋಗದಪ್ಪಾ ಅಂದನು.

ಹಂಗಾಂದ್ರೆ ನಾವು ಆವಾಗ ಭೂಮಿ ಹಕ್ಕಿಗಾಗಿ ಹೋರಾಟ ಮಾಡಿ ಪಡ್ಕೊಂಡ ಭೂಮಿನ ನಮ್ಮ ಕಣ್ಣೆದುರಿಗೆ ನಮ್ಮ ಮಕ್ಕಳು ಬಂಡವಾಳಶಾಹಿಗಳಿಗೆ ಮಾರಿಡ್ಕೊಂಡ್ರೆ ಮುಚ್ಕೊಂಡು ಸುಮ್ನೆ ಇರಿ ಅಂತೀಯನಾ. . . ? ಇದರಿಂದ ಮುಂದೆ ಏನಾಗಬಹುದು ಅನ್ನೋ ದೂರದೃಷ್ಟಿ ಇದೆಯಾ ನಿಮಗೆ. . . ? ಈಗಾಗಲೇ ಪ್ಯಾಟೆ ಬದಿ ಇರೋ ಗೆದ್ದೆಯನೆಲ್ಲ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಹಣದ ಆಸೆ, ಮತ್ತಿತರ ಒತ್ತಡ ಹೇರಿ ನುಂಗಿ ಹಾಕಿದ್ದಾರೆ. ನಮ್ಮಂತ ಕುಗ್ರಾಮಗಳಿಗೂ ಈ ಬಂಡವಾಳ ಶಾಹಿಗಳು ಬಂದು ತೋಟ ಜಮೀನು ಕೊಳ್ತಾಯಿದ್ದಾರೆ ಅಂದ್ರೆ ಅವರಿಗೇನು ತಲೆಕೆಟ್ಟು ದುಡ್ಡು ಹೆಚ್ಚಾಗಿ ಕೊಳ್ಳುತ್ತಿದ್ದಾರೆ ಅನ್ಕೊಂಡ್ರಾ. ಎಲ್ಲಾ ಭೂಮಿ ಬಂಡವಾಳಶಾಹಿಗಳ ಕೈಗೆ ಸೇರಿದರೆ ಮತ್ತದೇ ಭೂಮಾಲೀಕ ಪದ್ಧತಿ ಹೊಸ ರೀತಿಯಲ್ಲಿ ನಮ್ಮನೆಲ್ಲ ಆವರಿಸುತ್ತದೆ. ನಮ್ಮ ಹಳ್ಳಿ ಜನ ಎಲ್ಲರೂ ವಿದ್ಯಾವಂತರು ಆದರೂ ಕೂಡಲೇ ಅವರಿಗೆಲ್ಲ ಏನು ಸರ್ಕಾರಿ ನೌಕರಿ ಸಿಕ್ಕಿಬಿಡಲ್ಲ. ಎಲ್ಲರೂ ಎನೋ ಮಾಡಿ ವ್ಯಾಪಾರ ಮಾಡಿನೆ ಬದುಕೋಕು ಆಗಲ್ಲ. ಈ ಉದ್ಯಮಿಗಳು ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿಸುತ್ತಾರೆ. ಜನಸಾಮಾನ್ಯರು ಅಲ್ಪಸ್ವಲ್ಪ ಹಣದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಮುಂದೆ ಬಂದೇ ಬರುತ್ತೆ. ಯಾರಿಗೂ ಅರಿವಿಗೆ ಬಾರದಂತೆ ಒಂದಿಷ್ಟು ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯ ತಗ್ಗುವಂತೆ ವ್ಯವಸ್ಥೆಯನ್ನು ಅವರೇ ರೂಪಿಸುತ್ತಾರೆ. ಆಮೇಲೆ ಉಳ್ಳವರು ಇಲ್ಲದವರ ನಡುವಿನ ವ್ಯತ್ಯಾಸ ಹೆಚ್ಚಾಗುತ್ತಲೇ ಹೋಗುತ್ತದೆ. ಜನಸಾಮಾನ್ಯರ ಹೊಟ್ಟೆಪಾಡಿಗೆ, ಖಾಲಿ ಕೈಗೆ ಏನಾದರೂ ಒಂದು ಉದ್ಯೋಗ ಬೇಕಲ್ಲ. ಆಗ ಬಂಡವಾಳಶಾಹಿಗಳು ಕೊಂಡ ಕೃಷಿ ಭೂಮಿಯಲ್ಲಿ ಕೃಷಿ ಕೂಲಿಕಾರರಾಗಿ, ಅವರ ಉದ್ಯಮಗಳಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಮತ್ತೆ ನಮ್ಮವರೇ ಹೋಗಬೇಕಾಗುತ್ತದೆ. ಅವರು ಒಂದಷ್ಟು ವರ್ಷ ನೇರವಾಗಿ ಕೂಲಿ ಇಟ್ಟುಕೊಂಡು ಅವರೇ ಕೃಷಿ ಮಾಡಬಹುದು. ಆಮೇಲೆ ಕೂಲಿಕಾರರಿಗೆ ಮತ್ತದೆ ಹಳೆ ಪದ್ದತಿಯಂತೆ ಗೇಣಿಗೂ ಕೊಡಲೂಬಹುದು. ಒಟ್ಟಿನಲ್ಲಿ ಹೀಗೆ ಎಲ್ಲಾ ಸಣ್ಣ ರೈತರು ಜಮೀನು ಮಾರಿಕೊಳ್ಳುತ್ತಾ ಹೋದರೆ ಮುಂದಿನ ದಶಕಗಳಲ್ಲಿ ಎಲ್ಲಾ ಭೂಮಿ ಬಲಾಡ್ಯ ಬಂಡವಾಳಶಾಹಿಗಳ ಕೈ ಸೇರೋದು ಗ್ಯಾರಂಟಿ. ಹಳೆ ಜಮೀನ್ದಾರಿ ಪದ್ಧತಿ, ಗೇಣೀ ಪದ್ದತಿಗಳೆಲ್ಲ ಹೊಸ ರೂಪದಲ್ಲಿ ಬರೋದು ಗ್ಯಾರಂಟಿ ತಗಾ ಎಂದನು.

” ನೀ ಹೇಳೋದೆಲ್ಲ ಸರಿ ಇರಬಹುದು. ಆದರೆ ಇದನ್ನೆಲ್ಲಾ ನಮ್ಮ ಹಳ್ಳಿಯ ರೈತರಿಗೆ ಅರ್ಥಮಾಡಿಸುವುದು ಇರಲಿ, ಈಗ ಶಿಕ್ಷಣ ಪಡೆದ ಹುಡುಗರಿಗೆ ಅರ್ಥಮಾಡಿಸೋಕು ಆಗಲ್ಲ. ನಮ್ಮ ದೇಶ, ಧರ್ಮ, ಭಾಷೆ ಬಗ್ಗೆ ಇದ್ದ ಅಭಿಮಾನ ನಮ್ಮ ಊರು, ನಮ್ಮ ಊರಿನ ಹೊಲಗದ್ದೆ, ಕಾಡುಮೇಡುಗಳ  ರಕ್ಷಣೆ ಬಗ್ಗೆ ಅಭಿಮಾನ ಇಲ್ಲ. ನಮ್ಮ ದೇಶದ ರಕ್ಷಣೆ, ನಮ್ಮ ಸ್ವಾಭಿಮಾನ ಅಂದರೆ ಮೊದಲು ನಮ್ಮ ಹೊಲ ಗದ್ದೆ, ನಮ್ಮ ಕಾಡುಮೇಡುಗಳ ರಕ್ಷಣೆ ಅನ್ನೋ ತಿಳುವಳಿಕೆನೆ ಇಲ್ಲ. ನಮ್ಮಪ್ಪ ಭೂಮಾಲೀಕರೆದುರು ಸ್ವಾಭಿಮಾನದಿಂದ ಹೋರಾಡಿ ಪಡೆದ ಹೊಲವನ್ನು ಹಾಗೆ ಉಳಿಸಿಕೊಳ್ಳಬೇಕು. ನಮ್ಮ ಮಕ್ಕಳು-ಮರಿ ಮಕ್ಕಳಿಗೆ ಉಳಿಸಿ ಹೋಗಬೇಕು ಅನ್ನೋ ಛಲಾನೇ ಕಾಣ್ತಾ ಇಲ್ಲ. ನಮ್ಮ ಜಮೀನು, ನಮ್ಮಿಷ್ಟ , ನಾವು ಏನಾದರೂ ಮಾಡಿಕೊಳ್ಳುತ್ತೇವೆ. ಮುಂದಿನ ನಮ್ಮ ಮಕ್ಕಳ ಭವಿಷ್ಯ ಕಂಡವರು ಯಾರು. . . ಈಗ ನಾವು ಚೆನ್ನಾಗಿರಬೇಕು ಅಂದ್ರೆ ದುಡ್ಡು ಬೇಕೆ ಬೇಕು . ಅದಕ್ಕೆ ಒಳ್ಳೆ ಬೆಲೆ ಕೊಟ್ಟರೆ ಕೊಡ್ತೀವಿ ಅಷ್ಟೇ ಅಂತಾರೆ” ಎಂದು ಒಂದಿಷ್ಟು ಆವೇಶಕ್ಕೆ ಒಳಗಾಗಿ ಮಾತಾಡುತ್ತಲೇ ಮಂಜಪ್ಪ ತನ್ನ ಹೆಗಲಮೇಲಿದ್ದ ಹಳೆಯ ಟವಲನ್ನು ಕೊಡಗಿ ಮೇಲೆದ್ದನು.

“ಏ ರೇಣುಕಿ, ಎಲ್ಲಿದೀಯೆ. ತೂ, ಇವು ಮೂರು ಹೊತ್ತು ಟೀವ್ಯಾಗೆ ಹೊಕ್ಕುಂಡು ಕೂತ್ಕುತವೆ. ಇಲ್ಲಾ ಅಡುಗೆ ಮನ್ಯಾಗೆ ಹೊಕ್ಕಂತವೆ. ಆ ಮಕ್ಕಳು, ಮರಿ ಮಕ್ಕಳೂ ಮೊಬೈಲ್ ಹಿಡ್ಕೊಂಡು ಕಿಸಿಕಿಸೀ ನಕ್ಕಂತ ಕೂತ್ಕುಂತವೆ. ಯಾರು ಬಂದರು ಯಾರು ಹೋದರು, ಕೊಟ್ಟಿಗ್ಯಾಗೆ ಇದ್ದ ಕರಾಮರಿ ಏನಾದವು . ? ಏನಾರೂ ಚೂರು ಅಚಾರ ವಿಚಾರ ಐತನಾ ಇವುಕ್ಕೆ. ? ನೀ ದೇಶಾ ಸುತ್ತಿ ಪ್ಯಾಟ್ಯಾಗಿಂದ ಬಂದವ ಹಳ್ಳಿ ಬಗ್ಗೆ ಯೋಚನೆ ಮಾಡ್ತ ಐದಿಯಾ. ಇವು ಪ್ಯಾಟ್ಯಾರಂಗೆ ನಾವು ಕುತ್ಕಂಡು ಬದುಕಬೇಕು ಅಂತ ಆಶೆ ಹಚ್ಚಿಕೊಂಡು ಹಾಳಾಗೋಕೆ ಹತ್ಯವು ತಗಳಾ. ಏನು ಮಾಡಿಕಿಂದು ಸಾಯೋದು. ನಾವೇನು ಇಂದೊ ನಾಳೆನೋ ಕಣ್ಮುಚ್ಚಿಕೊಂಡು ಸಾಯೋರು. ಅವರವರ ಹಣೆಬರಹ ಮುಂದೆ ಹೆಂಗೈತೋ ಕಾಲ” ಎಂದು ಪೇಚಾಡುತ್ತಾ ಒಳಗೆ ಹೊರಟನು. ನಾರಣಪ್ಪನೂ ಒಳಗೆ ಹೊರಟನು.

ನಡುಮನೆ ಒಳಗೆ ಹಸೆಗೋಡೆ ಹತ್ತಿರ ಇಬ್ಬರು ಸಣ್ಣ ಮಕ್ಕಳು ಮೋಬೈಲ್ ಗೇಮ್ ಆಡುತ್ತಾ ಕುಳಿತಿದ್ದವು.

“ಏನಾ, ಮೊಮ್ಮಕ್ಕಳನಾ” ಎಂದನು. “ಹೂಂ ತಗಾ, ನೋಡು ಅವುಕ್ಕೆ ನಾವೇನಾದರೂ ಮಾತಾಡಿದ್ದು ಕಿವಿಗೆ ಬೀಳ್ತಾ ಐತಾ ಅಂತ. ದಿನಾ ಹಿಂಗೆ ಮೊಬೈಲ್ನಲ್ಲಿ ಹೊಂಕಂಡಿರ್ತವೆ. ಇಂತವುಕೆ ನಾವು ಜಮೀನು, ತೋಟ ಎಲ್ಲಾ ಕೂಡಿಟ್ಟು ಏನ್ ಮಾಡನಾ. ದುಡುಕುಂದು ತಿಂತಾವೆ ಅನಿಸುತ್ತಾನಾ ಮಾರಾಯಾ. . . ? ಒಳಗಿದ್ದ ಹೆಂಗಸರೇನೂ ಹೊರಗೆ ಬರಂಗೆ ಕಾಣ್ಸಲ್ಲ . ನಾವೆ ಒಳಗೆ ಹೋಗನ ಬಾ.

ಎನ್ನುತ್ತಾ ಅಡುಗೆ ಕೋಣೆಗೆ ಕರೆದುಕೊಂಡು ಹೋದನು.

ನಾರಣಪ್ಪನನ್ನು ನೋಡುತ್ತಲೇ ಮಂಜಪ್ಪನ ಸೊಸೆ ಸುಶೀಲ

“ಆರಾಮಾಗೈದೀರಾ. . . ” ಎಂದಳು.

ಹೂಂ, ಚೆನ್ನಾಗಿದ್ದೀನಿ. ಏನಿವು ಹೊಸ್ಕರೆ ಕಜ್ಜಾಯ ಅಲನೆ. . . ನೀವು ನಮ್ಮ ಕಾಲದ ಹೊಸ್ಕರೆ ಕಜ್ಜಾಯ ಮಾಡೋದು ಮಾತ್ರ ಬಿಟ್ಟಿಲ್ಲ ಅಲ್ಲಾ. . . ಎಂದನು.

ಅದೆಂಗೆ ಬಿಡಕೆ ಬರ್ತತೀ. ಎಂತಾ ಕಾಲ ಬಂದರೂ  ನಮ್ಮ ಹೊಸ್ಕರೆ ಕಜ್ಜಾಯದ ರುಚಿ ಮುಂದೆ ಯಾವದೈತಿ. . ? ಅಮೆರಿಕದಲ್ಲೂ ಇಂತ ಕಜ್ಜಾಯ ಎಲ್ಲಾ ಐದಾವ ಎಂದಳು.

ಹಂಗೆಲ್ಲಾ ತಂಗೀ, ಈಗಿನ ಊರುಕೇರಿ ಅಲ್ಲ ಬದಲಾಗಿ ಹೋಗ್ಯಾವಲ್ಲ ಅದಕ್ಕೆ ಕೇಳಿದೆ. ಅಮೇರಿಕಾದಲ್ಲೂ ಬೇರೆ ಬೇರೆ ರೀತಿಯ ಕಜ್ಜಾಯ ಇದಾವೆ. ನಾವು ಅಕ್ಕಿಯಲ್ಲಿ ಮಾಡಿದಂಗೆ ಅವರು ಜೋಳದಲ್ಲಿ ಬೇರೆಬೇರೆ ಕಜ್ಜಾಯ ಮಾಡ್ತಾರೆ. ಅವರು ಭಾಷೆಯಲ್ಲಿ ಯಾವುದ್ಯಾವುದೋ ಹೆಸರು ಕರೀತಾರೆ ಅಷ್ಟೇ. ಅಲ್ಲೂ ಹಬ್ಬಹುಣ್ಣೇವು ಶಾಸ್ತ್ರಗೀಸ್ತ್ರ ಎಲ್ಲಾ ಇದ್ದಾವೆ. ಮನುಷ್ಯ ಇದ್ದ ಕಡೆ ಎಲ್ಲವೂ ಇರುತ್ತವೆ. ನಂಗೊಂದು ಕಜ್ಜಾಯ ಹಾಕ್ಕೊಡು ಮತ್ತೆ. . . ಎಂದನು.

ಸುಶೀಲ ಕಜ್ಜಾಯ ಜೊತೆಗೆ ಕೋಳಿಸಾರು ಹಾಕಿಕೊಟ್ಟಳು.

25 ವರ್ಷಗಳಿಂದ ಅಮೇರಿಕಾದ ಗೋದಿ ಅಡುಗೆ ತಿಂದಿದ್ದ ನಾರಣಪ್ಪ ಇದೇ ಮೊದಲು ಸಲ ಯಾವುದೋ ಅಪರೂಪದ ರುಚಿಕರವಾದ ಅಡುಗೆ ಸವಿಯುತ್ತಿರುವಷ್ಷು ಸಂತೃಪ್ತಿಯಿಂದ ಹೊಸ್ಕರೆ ಕಜ್ಜಾಯ, ಕೋಳಿಸಾರು ಸವಿದನು. “ಇಷ್ಟು ರುಚಿ ಊಟ ಮಾಡದೆ ಬಹಳ ದಿನ ಆಗಿತ್ತು. ಏನೇ ಹೇಳಿ, ನಮ್ಮ ನೆಲದ ಅಡುಗೆ ರುಚಿ ಜಗತ್ತಿನ ಬೇರಾವ ಭಾಗದಲ್ಲೂ ಸಿಗುವುದಿಲ್ಲ ” ಎಂದನು.

“ನಿಮಿಗಿಲ್ಲ ಬೇರೆ ಬೇರೆ ದೇಶದ ಅಡುಗೆ ತಿಂದು ಸಾಕಾಗಿದೆ. ಎಲ್ಲಾ ದೊಡ್ಡಡ್ಡೋರು ಹಳ್ಳಿಗೆ ಬಂದಾಗ ಹೇಳೋದೇ ಹಿಂಗೆ. ಆದರೆ ನಮಿಗೆ ಬೇರೆ ಬೇರೆ ದೇಶದ ಅಡುಗೆ ತಿನ್ನೋ ಆಸೆ. ನಮಿಗೆಲ್ಲ ಇದೇ ಹುಳಿಸಾರು, ಒಣಮೀನು, ಈ ಹಳ್ಳಿ ಅಡುಗೆ ತಿಂದು ಸಾಕಾಗಿದೆ” ಎಂದಳು ಸುಶೀಲ.

ಪಕ್ಕದ ಮನೆಯಿಂದ ಏನು ದೊಡ್ಡ ಗಲಾಟೆ ಕೇಳಿಬರುತ್ತಿತ್ತು.

” ಏನಾ ಗಲಾಟೆ ಆಗ್ತಾ ಐತಲ್ಲಾ. ನಿಮ್ಮ ಪಕ್ಕದ ಮನೆ ಆ ಮಲ್ಲಟ್ಟೆ ಮೈಲಪ್ಪಂದಲ್ಲನಾ. ?ಎಂತಾ ಗಲಾಟೆನಾ. . “ಎಂದನು.

ಹೂಂ, ಅವುಂದೆ. ಅವನು ತೀರಿ ಹೋಗಿ ಬಳಾ ವರ್ಷ ಆತು. ಅವನ ಮಕ್ಕಳದೇ ಹಿರೇತನ ಈಗ. ಅವುರದೊಂದು ದೊಡ್ಡ ಕತೆ ತಗಳಾ ಅತ್ತಾಗೆ. . .

ಅದ್ಯಾರೋ ಎಂಎಲ್ಎ ಕಡೆಯವರಿಗೆ ಎಕರೆಗೆ 25 ಲಕ್ಷದಂತೆ ಎರಡೆಕರೆ ಕೊಡೋಕೆ ಮಾತುಕತೆ ಆಗಿತ್ತಂತೆ.

ಅವರು ಎಲ್ಲಾ ಕಾಗದ ಪತ್ರ ರೆಡಿ ಮಾಡಿಕೊಂಡು ಬಂದಾಗ 35ಲಕ್ಷ ಬೇಕೇ ಬೇಕು ಅಂತ ಹಠ ಹಿಡಿದು ಕುಂತಾರಂತೆ. ಆ ಎಂ ಎಲ್ ಎ ಕಡೆಯೋರು ಅದೆಲ್ಲ. ಆಗಲ್ಲ . ವ್ಯಾಪಾರ ಮಾಡುವಾಗ ನಡೆದ ಮಾತುಕತೆಯಂತೆನೆ ಆಗಬೇಕು ಅಂತ ಪಟ್ಟು ಹಿಡಿದು ಜಗಳಕ್ಕೆ ನಿಂತಿದ್ದಾರೆ. ಇವರು ಏನ್ ಕಡಿಮೆ ಇಲ್ಲ. ಆಗ ನಮಗೆ ಸರಿಯಾಗಿ ತಿಳಿಲಿಲ್ಲ. ನಾವು ಈಗ ಜಮೀನು ಬರೋಕೆ ರೆಡಿ ಇಲ್ಲ. ಅದೇನ್ ಮಾಡ್ತಿರೋ ಮಾಡ್ರಿ ಅಂತ ಹೇಳಿದ್ದಾರೆ. ಅವರು ಸಿಟ್ಟಿಗೆದ್ದು ಕೈ ಕೈ ಮಿಲಾಯಿಸಿ ಜಗಳ ನೂ ಆಗಿ ಹೋಗಿತ್ತು. ಆಗೀಗ ಬಂದು ಅವರು ಕೆಣಕುತ್ತಲೇ ಇದ್ದಾರೆ. ಜಮೀನು ಕೊಡಲೇ ಬೇಕು ಅಂತ ಬೇರೆ-ಬೇರೆ ರೀತಿಯ ಒತ್ತಡ ಹಾಕುತ್ತಿದ್ದಾರೆ. ಪಾಪ ಅವನ ಮಗನ ಮೇಲೆ ಯಾವುದು ಸುಳ್ಳು ಕೇಸ್ ಹಾಕಿಸಿ ಕೋರ್ಟು-ಕಚೇರಿ ಅಲೆಯೋ ಹಾಗೆ ಮಾಡಿದ್ದಾರೆ. ಇನ್ನು ಏನೇನ್ ಕಥೆ ಇದೆಯೋ, ಅದೆಂಗೆ ಬಗೆಹರಿಸಿಕೊಳ್ಳುತ್ತಾರೆಯೋ ಗೊತ್ತಿಲ್ಲ” ಅಂದನು.

ಹೋ, ಹಂಗಾ ವಿಷಯ. ಆಗಿನ ಕಾಲದಲ್ಲಿ ಭೂಮಾಲೀಕರಿಂದ ನಮ್ಮ ಜನಗಳಿಗೆ ಭೂಮಿ ಸಿಗಲಿ ಅಂತ ನಾವು ದೊಡ್ಡ ದೊಡ್ಡ ಮಂತ್ರಿಗಳನ್ನೆಲ್ಲ ಎದುರುಹಾಕಿಕೊಂಡು ಹೋರಾಟ ಮಾಡಿದ್ದೆವು. ಅವತ್ತಿನ ಭೂ ಹೋರಾಟಗಾರರ ಜೊತೆ ನಾವೆಲ್ಲ ನಮ್ಮ ಜೀವನದ ಸಾಕಷ್ಟು ವರ್ಷಗಳನ್ನು ಹೋರಾಟಕ್ಕಾಗಿಯೇ ಕಳೆದಿದ್ದೆವು. ನಮ್ಮ ಕೃಷಿ ಕೂಲಿಕಾರರಿಗೆ ತುಂಡು ಹೊಲ ಸಿಕ್ಕರೆ ಸಾಕು ಸ್ವಾಭಿಮಾನದಿಂದ ಬದುಕು ಸಾಗಿಸಬಹುದು ಎಂದು ಕನಸು ಕಂಡಿದ್ದೆವು. ಈಗ ನೋಡಿದರೆ ಅದಾಗಿ ಕೆಲವೇ ದಶಕಗಳಲ್ಲಿ ಆ ಭೂಮಿಯನ್ನು ನಮ್ಮ ಸಣ್ಣರೈತರು ಉಳಿಸಿಕೊಳ್ಳೋಕೆ ಇಷ್ಟು ಕಷ್ಟ ಎದುರಿಸಬೇಕಾಗುತ್ತೆ ಅಂತ ಊಹಿಸಿರಲಿಲ್ಲ. ಸಣ್ಣ ರೈತರು ಮತ್ತದೇ ರೂಪದ ದೊಡ್ಡ ಹಿಡುವಳಿದಾರರು, ಬಂಡವಾಳಶಾಹಿಗಳ ಹಿಂದೆ ಅಲೆಯಬೇಕಾಗುವ ಕಾಲ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಇದೊಂತರ ವಿಚಿತ್ರ ಸರಪಳಿಯಲ್ಲಿ ಸಿಕ್ಕಿಹಾಕಿಕೊಂಡ ತರ ಕಾಣಿಸ್ತಾ ಇದೆ. ಸಣ್ಣ ಮೀನುಗಳು ಎಂದಾದರೊಂದು ದಿನ ದೊಡ್ಡ ಮೀನುಗಳಿಗೆ ಆಹಾರವಾಗಬಹುದಾದ ಅಪಾಯ ಇದ್ದೇ ಇರುತ್ತದೆಯಲ್ಲವೇ. . ? ಹಾಗೆಯೇ ನಮ್ಮ ಸಣ್ಣ ರೈತರ ಪಾಡು ಅನಿಸುತ್ತದೆ “ಎಂದನು.

“ಹೌದಣ್ಣ, ನಮ್ಮ ಬಾಳು ಹಂಗೆ ಆಗಿದೆ. ವರ್ಷ ವರ್ಷ ಗೊಬ್ಬರ ಔಷಧಿ ಬೆಲೆ ಮಾತ್ರ ಏರುತ್ತಿದೆ. ನಾವು ಬೆಳೆದ ಭತ್ತದ ಬೆಲೆ ಮಾತ್ರ ಏರುವುದಿಲ್ಲ. ಹಂಗಾಗಿ ಈ ಸಣ್ಣ ಸಣ್ಣ ರೈತರೆಲ್ಲ ಹೊಲ ಮಾಡಿ ಲಾಭ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಏನೋ ಚೂರು ಅಡಿಕೆ ತೋಟಗೀಟ ಇದ್ದವರು ಹೆಂಗೋ ಬದುಕುತ್ತಾರೆ. ಬರೀ ಒಣ ಭತ್ತ ಬೆಳೆಯುವ ರೈತರ ಪಾಡು ಹೇಳಂಗಿಲ್ಲ. ಹಂಗಾಗಿ ಅವರೆಲ್ಲ ಲಕ್ಷ ಲಕ್ಷ ಕೊಡುವ ದೊಡ್ಡ ದೊಡ್ಡ ಶ್ರೀಮಂತರಿಗೆ ಹೊಲ ಮಾರಿ ತಮ್ಮ ಪಾಡು ತಾವು ನೋಡಿಕೊಳ್ಳುತ್ತಿದ್ದಾರೆ. ಮುಂದೆ ತಮ್ಮ ಮಕ್ಕಳ ಭವಿಷ್ಯ ದ ಬಗ್ಗೆಯಾಗಲೀ, ನಮ್ಮ ಹಿರಿಯರು ಕಷ್ಟಪಟ್ಟು ಕೂಡಿಟ್ಟ ಹೊಲವನ್ನು ಯಾರಿಗೂ ಮಾರಬಾರದು ಅನ್ನೋ ಸ್ವಾಭಿಮಾನವಾಗಲೀ ಅವರಿಗೆ ಇಲ್ಲ. ಈಗ ಅವರು ಜುಂ ಅಂತ ಬದುಕ್ಬೇಕು ಅಷ್ಟೆ. ತುಂಡು ಹೊಲವೂ ಇಲ್ಲದೆ ತಮ್ಮ ಮಕ್ಕಳು ಮರಿಮಕ್ಕಳ ಬದುಕು ಹೇಗೆ ಅನ್ನೋ ಯೋಚನೆ ಮಾಡ್ತಾ ಇಲ್ಲ “ಎಂದು ಹೇಳಿದ ರಾಮಪ್ಪನ ಮಾತು ಕೇಳುತ್ತಿದ್ದಂತೆಯೇ ನಾಡಿನ ರೈತರ ದುಸ್ಥಿತಿಯನ್ನು ಅರಿತು ನಾರಾಯಣಪ್ಪ ತುಂಬಾ ನೊಂದುಕೊಂಡನು. ಊಟದ ತಟ್ಟೆಯಲ್ಲಿ ಇನ್ನೂ ಎರಡು ಹೊಸ್ಕರೆ ಕಜ್ಜಾಯ ಹಾಗೆ ಉಳಿದಿದ್ದವು. ಇಷ್ಟೊತ್ತು ತುಂಬಾ ರುಚಿಯಾಗಿವೆ ಎಂದು ನಾಲಿಗೆ ಚಪ್ಪರಿಸಿ ತಿಂದಿದ್ದ ನಾರಣಪ್ಪನಿಗೆ ಇದ್ದಕ್ಕಿದ್ದಂತೆ ಅವು ರುಚಿಸದಾದವು. ಹಾಗೆ ಎದ್ದು “ಏ ಹುಡ್ಗಾ, ಏಳಾ, ಆ ಮಲ್ಲಟ್ಟೆ ಮೈಲಪ್ಪನ ಮನಿಗೆ ಹೋಗನಾ ಬಾರಾ . ಅದ್ಯಾವ ಎಂಎಲ್ಎ ಕಡೆಯವರು, ಅದ್ಯಾವ ಬಂಡವಾಳ ಶಾಹಿಗಳು ನಮ್ಮ ಸಣ್ಣ ರೈತರಿಗೆ ಹಣದಾಸೆ ತೋರಿಸಿ, ಅದೆಂತಾ ಕೇಸ್ ಗೀಸ್ ಅಂತ ಹಾಕಿಸಿ, ಒತ್ತಡ ಹೇರಿ ಜಮೀನು ಮಾರ್ಕೋಳ್ಳೋ ಹಾಂಗೆ ಮಾಡ್ತಾರೋ ನೋಡೇಬಿಡೋಣ. ಈ ಕೃಷಿ ಭೂಮಿ ಯಾರಪ್ಪನ ಆಸ್ತಿಯಲ್ಲ. ಇದು ಉತ್ತಿ ಬಿತ್ತುವ ರೈತನ ಆಸ್ತಿಯಾಗಿಯೇ ಉಳಿಯಬೇಕು. ಈ ನಾಡು ಸ್ವಾಭಿಮಾನಿ ರೈತರ ಸರ್ವೋದಯದ ಬೀಡಾಗಬೇಕು”. ಎಂದು ಎಪ್ಪತ್ತರ ದಶಕದಲ್ಲಿ ಗರ್ಜಿಸಿದ ಧನಿಯಲ್ಲೇ ಗರ್ಜಿಸಿದನು. ಊರು ಉಸಾಬರೀ ನಮಗ್ಯಾಕೆ ಬೇಕು ಅಂತ ಇಡೀ ಊರೇ ಸುಮ್ಮನೆ ಕುಂತೈತಿ. ನೀವೂದ್ರೂ ಜನರನ್ನ ಎಚ್ಚರಿಸಬೇಕು. ನೀವು ಹಿರಿಯರು. ನೀವು ಹೇಳಿದ ಮಾತು ಎಲ್ಲರೂ ಕೇಳುತ್ತಾರೆ. ಈಗ ಎಲ್ಲರೂ ವಿದ್ಯಾವಂತರೇ ಇರೋದು. ಹೇಳಿದ್ದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವೂ ನಿಮ್ಜೊತೆ ಇದ್ದೇವೆ”ಎಂದು ಸುಶೀಲಳು ಚೌಡಿ ಮೈಮೇಲೆ ಬಂದವರಂತೆ ಆವೇಶದಲ್ಲಿ ಹೇಳಿದಳು.

ಅದನ್ನು ಕಂಡ ನಾರಾಯಣಪ್ಪ “ತಂಗೀ ನೀನೆ ಹಿಂಗೆ ಹೇಳಿದೆ ಅಂದ ಮೇಲೆ ನಾವು ಗೆದ್ದಂತೆಯೇ ಲೆಕ್ಕ. ನ್ಯಾಯಯುತವಾದ ರೈತ ಹೋರಾಟಕ್ಕೆ ಎಂದೆಂದು ಗೆಲುವು ಸಿಕ್ಕೇ ಸಿಗುತ್ತದೆ. ನಡೀರಿ ಹೋಗಾಣ ಎಂದನು.

ಇಡುಕಲಿಗೆ ಮುಡಿಸಿದ ಹೂವು ಕೆಳಗೆ ಬಿದ್ದು ಪ್ರಸಾದವಾಗಿ ಶುಭಹಾರೈಸಿತು.

ರವಿರಾಜ್ ಸಾಗರ್. ಮಂಡಗಳಲೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
3 1 vote
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವಿಶಾಲಾ ಆರಾಧ್ಯ
ವಿಶಾಲಾ ಆರಾಧ್ಯ
4 months ago

ಸ್ವಂತ ಬೆಳೆದ ಊರು, ನಾಡು,ನೆಲ,ಧರ್ಮ, ಒಗ್ಗಟ್ಟು,ದೇಶಾಭಿಮಾನದ ಉತ್ತಮ ಹೆಣಿಗೆಯ ಕಥೆ.

1
0
Would love your thoughts, please comment.x
()
x