ಸ್ತ್ರೀ ಮತ್ತು ದಲಿತ ಸಂವೇದನೆಯ ವೈರುಧ್ಯಗಳ ನಡುವಿನ ಮಾನವೀಯ ಮೌಲ್ಯಗಳ ಶೋಧ: ಎಂ ಜವರಾಜ್

ನಾನು ಈಚೆಗೆ ಕಣ್ಣಾಡಿಸಿದ ಒಂದು ಕೃತಿ ಕೆ.ಶ್ರೀನಾಥ್ ಅವರ ‘ಕನಸು ಸೊಗಸು’.

ಇದಕ್ಕು ಮುನ್ನ ಇವರ ಕೆಲವು ಬರಹಗಳನ್ನು ಫೇಸ್ ಬುಕ್ ನಲ್ಲಿ ಗಮನಿಸಿದ್ದೆ. ಅವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಸ್ಪಂದಿಸುವ ಪ್ರಗತಿಪರವಾದ ಧ್ವನಿಪೂರ್ಣವಾದ ಮಾನವೀಯ ತುಡಿತದ ಬರಹಗಳು.

ಆಗಾಗ ಎಫ್.ಬಿ ಲೈವ್ ಗೆ ಬರುವ ಕೆ.ಶ್ರೀನಾಥ್ – ಕಥೆ ಕವಿತೆ ವಾಚಿಸಿ ಗಮನ ಸೆಳೆದವರು. ವೀಣೆ ಮತ್ತಿತರ ವಾದ್ಯ ನುಡಿಸುವ, ವಿವರಿಸುವ ಬಹುಗುಣವುಳ್ಳವರು. ಇದಲ್ಲದೆ ಕನ್ನಡ ಕಿರುತೆರೆ, ಹಿರಿತೆರೆ ಕಲಾವಿದರೂ ಕೂಡ.

ಇವರ ಬರಹಗಳನ್ನು ಗಮನಿಸಿದಂತೆ ಇವರು ಪಾಶ್ಚಾತ್ಯ ಸಾಹಿತ್ಯದ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತದೆ. ಅದರಲ್ಲು ಇಂಗ್ಲಿಷ್ ನ ಶೇಕ್ಸಫಿಯರ್ ನಾಟಕ ಸಾಹಿತ್ಯದ ಉಲ್ಲೇಖ ಇವರ ಬರಹದಲ್ಲಿ ಕಾಣಬಹುದು. ಹಾಗೆ ರಷ್ಯನ್ ಲಿಟರೇಚರ್ ನ ಪ್ರಭಾವ ಇವರ ಮೇಲೆ ದಟ್ಟವಾಗಿ ಇದ್ದಂತಿದೆ. ಅನುವಾದ ಬರಹದಲ್ಲಿ ಹೆಚ್ಚು ಆಸಕ್ತಿ ಇರುವ ಕೆಲವು ಕೃತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿಯೇ ಫ್ಯೂದರ್ ದಾಸ್ತೊವಿಸ್ಕಿಯ ‘ಕಮರಜೋವ್ ಸಹೋದರರು’ ‘ದ ಈಡಿಯಟ್’ ಕೃತಿಗಳ ಅನುವಾದ. ಸದ್ಯ ಕಮರಜೋವ್ ಬಗ್ಗೆ ಉತ್ತಮ ಅಭಿಪ್ರಾಯ ಇದೆ.

ಇನ್ನೊಂದು, ಇವರು ಪಿ.ಲಂಕೇಶ್ ಒಡನಾಡಿ ಕೂಡ. ಅವರ ಒಡನಾಟದ ಸಾಹಿತ್ಯ ಕೂಟದ ಚರ್ಚೆಯ ಭಾಗವಾಗಿದ್ದರು ಎಂಬುದು ಅವರ ಫೇಸ್ ಬುಕ್ ಪೋಸ್ಟ್ ಗಳಿಂದ ಗುರುತಿಸಬಹುದು. ಇವರು ಪಾಶ್ಚಾತ್ಯ ಸಾಹಿತ್ಯದತ್ತ ಒಲವು ಹೊಂದಲು ಲಂಕೇಶ್ ಮತ್ತಿತರ ಸಮಕಾಲೀನರ ಒಡನಾಟ ಕಾರಣವಿರಬಹುದು. ಹಾಗೆ ಸಾಹಿತ್ಯದಷ್ಟೇ ಸಂಗೀತ, ಕಲೆ, ರಾಜಕೀಯ, ಹರಟೆ, ಸೆಕ್ಸ್, ಇಸ್ಪೀಟ್, ರೇಸ್ ಹುಚ್ಚಿದ್ದ ಪಿ.ಲಂಕೇಶ್ ಬಗ್ಗೆ ಒಂದು ಕುತೂಹಲ ವಿಚಾರ ಪ್ರಸ್ತಾಪಿಸಿದ್ದುಂಟು. ಲೆಕ್ಚರ್ ಪೋಸ್ಟ್ ಗೆ ರಾಜೀನಾಮೆ ಕೊಟ್ಟು ಜರ್ನಲಿಸಂ ಗೆ ಇಳಿದು ಸ್ವಂತ ಪತ್ರಿಕೆ ಮಾಡಲು ಹೊರಟವರು. ಆ ಸಂದರ್ಭದಲ್ಲಿ ‘ಲಂಕೇಶ್ ಪತ್ರಿಕೆ’ ಬಿಡುಗಡೆ ಹೊತ್ತಲ್ಲಿ ಲಂಕೇಶ್ ರೇಸ್ ಗೆ ಹೋಗಿ ಕೂತಿದ್ದರ ಬಗ್ಗೆ ಕೆ.ಶ್ರೀನಾಥ್ ಹಂಚಿಕೊಂಡಿದ್ದರು. ಹಾಗೆ ಆ ರೇಸ್ ನ ಜಾಕ್ ಪಾಟ್ ನಂತೆ ಬಂದ ಹಣದಿಂದ ಖುಷಿಗೊಂಡ ಲಂಕೇಶ್ ‘ಪಾರ್ಟಿ’ ಮಾಡಿ ಎಂಜಾಯ್ ಮಾಡಿದ್ದು! ಈ ಕಾರಣಕ್ಕು ಇವರ ಬರಹಗಳನ್ನು ಕುತೂಹಲದಿಂದ ಗಮನಿಸತೊಡಗಿದೆ.

ಮೊದಲಿಗೆ ಇವರನ್ನು ಗಮನಿಸಿದ್ದು ಟಿ.ಎನ್.ಸೀತಾರಾಂ ಅವರ ನಿರ್ದೇಶನದ ಚಿತ್ರಗಳಲ್ಲಿ. ಹಾಗೆ ಜಯಂತ್ ಕಾಯ್ಕಿಣಿ ತರಹದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಬಗ್ಗೆ. ಯಾಕೆಂದರೆ ಜಯಂತ್ ಕಾಯ್ಕಿಣಿ ನನ್ನ ಇಷ್ಟದ ಲೇಖಕ. ಆವತ್ತಿನ ಲಂಕೇಶ್ ಪತ್ರಿಕೆಯ ದೀಪಾವಳಿ ಸಂಚಿಕೆಗೆ ಜಯಂತ್ ಕಾಯ್ಕಿಣಿ ಅವರ ಕಥೆ ಕವಿತೆ ಇದ್ದೇ ಇರುತ್ತಿತ್ತು. ಇಲ್ಲಿ ಜಯಂತ್ ಕಾಯ್ಕಿಣಿ ಅವರ ಉಲ್ಲೇಖ ಏಕೆಂದರೆ ಅವರ ಬರಹದ ಪ್ರಭಾವವೂ ಕೆ.ಶ್ರೀಕಾಂತ್ ಮೇಲಿರುವುದನ್ನು ನಾನು ಸೂಕ್ಷ್ಮವಾಗಿ ಗಮನಿಸಿರುವುದರ ಕಾರಣಕ್ಕೆ.

ಹೀಗೆ ಅವರ ತಲೆಮಾರಿನವರಲ್ಲದೆ ಹೊಸ ತಲೆಮಾರಿನ ಲೇಖಕ, ಪ್ರಕಾಶಕ, ಕಲಾವಿದರೊಂದಿಗೆ ಬೆರೆಯುವ ಸಂವಾದಿಸುವ ಸರಳತನ ಅವರಲ್ಲಿದೆ. ಹೀಗಾಗಿಯೇ ಅವರ ‘ಕನಸು ಸೊಗಸು’ ಹೊಸ ತಲೆಮಾರಿನ ಮಮತ ಅರಸೀಕೆರೆ ತರಹದ ಲೇಖಕಿಯಿಂದ ಮುನ್ನುಡಿ ಬರೆಸಿಕೊಂಡಿರುವುದನ್ನು ನಾವಿಲ್ಲಿ ಗಮನಿಸಬಹುದು.

‘ಕನಸು ಸೊಗಸು’ ಸರಳವಾಗಿ ಸುಲಭವಾಗಿ ಓದಿಸಿಕೊಂಡು ಹೋಗುವ ಒಂದು ಕೌಟುಂಬಿಕ ಹಿನ್ನೆಲೆಯ ಕಥಾವಸ್ತು.

ಇಲ್ಲೊಂದು ಪಾತ್ರವಿದೆ. ಆ ಪಾತ್ರದ ಹೆಸರು ಕೃಷ್ಣ. ಈ ಕೃಷ್ಣನೆ ಈ ಕಾದಂಬರಿಯ ಕಥಾ ನಿರೂಪಕ. ಇವನೊಂದಿಗೆ ಅವನ ತಂದೆ, ತಾಯಿ, ಉಷಾ, ನಂದಿನಿ, ಲಕ್ಷ್ಮೀ, ಪಕ್ಕದ ಮನೆ ರಂಗನಾಯಕಮ್ಮ ಮತ್ತು ವಿದೇಶದಲ್ಲಿದ್ದು ಆಗಾಗ ಬಂದು ಹೋಗುವ ಅವನ ಮಗ, ಕ್ಲಾಸ್ ಮೇಟ್ ರೂಮ್ ಮೇಟ್ ಶಂಕರ, ಇನ್ನೊಬ್ಬ ರೂಮ್ ಮೇಟ್ ಸೇತೂಮಾಧವರಾವ್, ಅಡಿಗೆಭಟ್ಟ, ಪ್ರಶಾಂತ್, ಸಿದ್ದಮಲ್ಲಪ್ಪ, ಹೀಗೆ ಹಲವು ಪಾತ್ರಗಳು ಕಾದಂಬರಿಯನ್ನು ಆವರಿಸಿಕೊಂಡು ಸುಖ ದುಃಖ ದುಮ್ಮಾನಗಳನ್ನೇ ಮೈಯೊದ್ದ ಬದುಕಿನ ವಿವಿಧ ಮಜಲುಗಳು ಓದುಗನ ಮುಂದೆ ತೆರೆದುಕೊಳ್ಳುತ್ತವೆ. ಹಾಗೆ ಬೆಂಗಳೂರು, ಮೈಸೂರು, ನಂಜನಗೂಡು, ಮುಂಬೈ, ದೆಹಲಿ, ಭಾಗಶಃ ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳ ಬದುಕು ಬವಣೆ ಉಡುಗೆ ತೊಡುಗೆ ಊಟ ಉಪಚಾರ, ಜನಾಂಗಗಳ ಆಚಾರ ವಿಚಾರವನ್ನು ಪರಿಚಯಿಸುವ ಪ್ರಯತ್ನ ಈ ಕೃತಿಯುದ್ದಕ್ಕು ಕಾಣುತ್ತದೆ. ಶಂಕರನ ಕೌಟುಂಬಿಕ ಸ್ಥಿತಿಗತಿಯನ್ನು ಸಂಕ್ಷಿಪ್ತವಾಗಿ ತೆರೆದಿಡುವುದಲ್ಲದೆ ಲವ್ ಮಾಡಿ ಓಡಿ ಹೋಗಿ ಮದುವೆ ಆದ ಅಕ್ಕ, ಮುಸ್ಲಿಂ ಬಾವನ ನಡೆ, ವ್ಯಕ್ತಿತ್ವ ಶಂಕರನ ಮನಸ್ಥಿತಿಗೆ ಸವಾಲಾಗುತ್ತದೆ.

ಇಲ್ಲಿ ನಿರೂಪಕ, ಉಷಾ, ನಂದಿನಿ, ಲಕ್ಷ್ಮಿಗಿಂತ ಕಾದಂಬರಿಯ ‘ಕೇಂದ್ರ’ ಸೇತೂ ಮಾಧವರಾವ್ ಅಂತ ಓದುಗನನ್ನು ಆವರಿಸುತ್ತದೆ. ಸೇತೂ ಮಾಧವರಾವ್ ಪ್ರವೇಶದ ನಂತರವೆ ಕಾದಂಬರಿಗೆ ಒಂದು ಗತ್ತು ಬರುತ್ತದೆ. ಇಡೀ ಕಾದಂಬರಿ ಆ ಪಾತ್ರದ ಮೇಲೆ ನಿಂತಿದೆಯೇನೊ ಅನ್ನೊ ಫೀಲ್ ಓದುಗನಿಗಾಗುತ್ತದೆ. ಯಾಕೆಂದರೆ ಸೇತೂ ಮಾಧವರಾವ್ ತನ್ನ ಹುಟ್ಟಿನ ಮೂಲ ಚಿಂತಿಸುತ್ತ ಹೆತ್ತವಳ ಅಂತರಂಗದ ಆಳಕ್ಕೆ ಇಳಿದಂತೆ ಸೇತೂ ಮಾಧವರಾವ್ ನ ಜನ್ಮದಾತೆಯೇ ಕಾದಂಬರಿಯ ಕೇಂದ್ರ ಅನಿಸಿಬಿಡುವಷ್ಟು ಸಂಕೀರ್ಣವಾಗಿದೆ. ಅದು ಕಾದಂಬರಿಯುದ್ದಕ್ಕು ಕಾಡುತ್ತದೆ.

ಸೇತೂ ಮಾಧವರಾವ್ ಅನ್ನೊ ಪಾತ್ರ, ತನ್ನ ಹೆತ್ತು ಕಸದ ತೊಟ್ಟಿಗೆ ಹಾಕಿ ಹೋದವಳ ಅವತ್ತಿನ ಮನೊಸ್ಥಿತಿಯನ್ನು ಆಗಾಗ ಪರಾಮರ್ಶೆಗೆ ಒಳಪಡಿಸುತ್ತದೆಯಲ್ಲದೆ ತನ್ನ ಹುಟ್ಟಿಗೆ ಕಾರಣನಾದವನ ಕ್ರೌರ್ಯದ ವಿರುದ್ದವು ತಣ್ಣಗೆ ಸಿಡಿಯುತ್ತದೆ. ಹೀಗಾಗಿ ಹೆತ್ತವಳ ಬಗ್ಗೆ ಆ ಪಾತ್ರದ ಆಳದಲ್ಲಿ ಒಂದು ಪಾಸಿಟಿವ್ ಗುಣ ಧ್ವನಿಸುತ್ತದೆ. ಅಲ್ಲದೆ ಇಡೀ ಕಾದಂಬರಿ ಹೆಣ್ಣಿನ ಹೋರಾಟಮಯ ಬದುಕನ್ನು ಚಿತ್ರವತ್ತಾಗಿ ಚಿತ್ರಿಸುತ್ತದೆ.

ಈ ‘ಕನಸು ಸೊಗಸು’ ಕಾದಂಬರಿ ಜನಪ್ರಿಯ ಶೈಲಿಯದ್ದಾಗಿದೆ. ಇಂಥ ಶೈಲಿಯ ಮೂಲಕವೇ ಎಸ್.ಎಲ್.ಭೈರಪ್ಪ ಅತ್ಯಂತ ಜನಪ್ರಿಯ ಲೇಖಕರಾದುದು.‌‌ ಈ ಜನಪ್ರಿಯ ಶೈಲಿ ಕ್ಲಿಷ್ಟ ಅನ್ನಿಸೊದಿಲ್ಲ. ಇದು ಓದುಗನ ಆಲೋಚನೆಗೆ ಬಿಡುವುದೇ ಇಲ್ಲ. ಬದಲಿಗೆ ಕಾದಂಬರಿಕಾರರೇ ಎಲ್ಲವನ್ನು ವಿವರಿಸಿ ಬಿಡುವುದು ಈ ಶೈಲಿಯ ಮುಖ್ಯ ಲಕ್ಷಣ.

ಹಾಗೆ ಇಲ್ಲಿನ ಪಾತ್ರಗಳು ಯಾವುದೊ ಒಂದು ಸಂದರ್ಭದಲ್ಲಿ ಕಂಡದ್ದು ಮುಂದೊಂದು ದಿನ ಅಚಾನಕ್ ಆಗಿ ಮುಖಾಮುಖಿಯಾಗುತ್ತವೆ. ಹಾಗೆ ಮುಖಾಮುಖಿಯಾದಾಗ ಇಲ್ಲಿನ ನಿರೂಪಕನೆ ಆ ಪಾತ್ರಗಳ ಕಷ್ಟಗಳನ್ನು ನಿವಾರಿಸುತ್ತಾನೆ. ಇಂಥ ಸನ್ನಿವೇಶ, ವಿವರಣೆ, ಕನಸು ಸೊಗಸಿನ ತುಂಬಾ ಇದೆ.

ಈ ‘ಕನಸು ಸೊಗಸು’ ಕಾದಂಬರಿಯ ಪ್ರತಿ ಪುಟ ಓದುತ್ತಾ, ಅತ್ಯಂತ ಗಂಭೀರ ಸಾಹಿತ್ಯದ ಓದು ಒಡನಾಟ ಆಲೋಚನೆ ಇರುವ ಕಾದಂಬರಿಕಾರ ಕೆ.ಶ್ರೀನಾಥ್ ಈ ಜನಪ್ರಿಯ ಶೈಲಿ ರಚನೆ ಆಯ್ದುಕೊಂಡದ್ದೇಕೆ? ಎಂಬ ಪ್ರಶ್ನೆ ಓದುಗನನ್ನು ಕಾಡದೆ ಇರದು. ಇದನ್ನು ತಪ್ಪು ಎನ್ನಲಾಗದು. ಹಾಗೆ ಒಬ್ಬ ಬರಹಗಾರನಿಗೆ ಹೀಗೇ ಬರೆಯಬೇಕು ಎಂದು ಹೇಳಲಾಗದು. ಆದರೆ ಇಲ್ಲಿ ಪಾತ್ರಗಳ ಕಟ್ಟುವಿಕೆ, ಅವುಗಳ ನಡೆ, ಅವು ಆಲೋಚಿಸುವ ಕ್ರಮ, ಎದುರಾಗುವ ಸನ್ನಿವೇಶಗಳು ಭೈರಪ್ಪನವರ ಕಾದಂಬರಿಯಲ್ಲಿ ಬರುವಂತೆ ಕನಸು ಸೊಗಸಿನ ಕೆಲ ಸನ್ನಿವೇಶದ ಚಿತ್ರಣಗಳು ಅಸಹಜವಾಗಿ ಮೂಡಿ ಬಂದಿವೆ.

ಈ ಕಾದಂಬರಿಯನ್ನು ಇಲ್ಲಿನ ಪಾತ್ರವೊಂದು ನಿರೂಪಿಸುತ್ತಾ ಹೋಗುತ್ತದೆ. ನಿರೂಪಿಸುವುದು ಎಂದರೆ ಯಾಥಾವತ್ ಕಂಡದ್ದು ಮಾತ್ರ ಹೇಳುವುದು. ಅರ್ಥಾತ್ ನಿರೂಪಕನ ಎದುರಿಗೇ ಎಲ್ಲವೂ ತೆರೆದುಕೊಳ್ಳುವಂತೆ ಕಟ್ಟುವುದು. ಅಥವಾ ಅದಕ್ಕೆ ಮತ್ತೊಂದು ಘಟನೆ ನಿರೂಪಿಸಬೇಕಾದರೆ ಇನ್ನೊಂದು ಪಾತ್ರ ಆ ಘಟನೆ ಬಗ್ಗೆ ಪ್ರಸ್ತಾಪಿಸಿ ನಿರೂಪಿಸಬೇಕು. ಹೀಗೆ ನಿರೂಪಣೆಯ ಮೂಲಕ ಕಟ್ಟುವುದು ಎಂದರೆ ವಸ್ತುನಿಷ್ಠ ರಚನೆ. ಅದು ಕಥೆ ಅಥವಾ ಕಾದಂಬರಿಗೆ ಗಟ್ಟಿ ಅಡಿಪಾಯ. ಈ ಅಡಿಪಾಯ ಅತ್ತಿತ್ತ ಸರಿಯದಂತೆ ನೀಟಾಗಿ ಕ್ರಮಬದ್ಧವಾಗಿ ಹಾಕುವುದು. ಇದು ಲೇಖಕನ ರಚನಾ ಕೌಶಲ್ಯ. ಇಲ್ಲಿ ಕಾದಂಬರಿಕಾರರ ಎಂಟ್ರಿ ಇಲ್ಲದೆ ಆರಂಭದ ಪುಟದಿಂದ ನಿರೂಪಕ (ಕೃಷ್ಣ) ತನ್ನ ಕಥೆ ಹೇಳುತ್ತಾ ಹೋಗುತ್ತಾನೆ. ಕೆಲವು ಸಲ ತನ್ನ ಕಣ್ಣ ಮುಂದೆ ಜರುಗದ್ದನ್ನು ಹೇಳುತ್ತಾನೆ. ಉದಾ: ನಿರೂಪಕ ಬೆಂಗಳೂರಿನಲ್ಲಿ ಓದುವಾಗ ತನ್ನ ಮನೆಯಲ್ಲಿನ ವಿವರ ಕೊಡುವುದು. ಲಕ್ಷ್ಮಿ ಉಷಾ ನಂದಿನಿಯರ ಖಾಸಗಿ ವಿಚಾರಗಳನ್ನು ಯಥಾವತ್ ವಿವರಿಸುವುದು. ಸೇತೂ ಮಾಧವರಾವ್ ಬದುಕನ್ನು ವಿವರಿಸುವುದು. ಹೀಗೆ ವಿವರಿಸುವಾಗ ನಿರೂಪಕ ಅಲ್ಲಿರುವುದೇ ಇಲ್ಲ. ಅಥವಾ ಅವರು ಇದನ್ನು ತನಗೆ ನಿವೇದಿಸಿಕೊಂಡಿದ್ದರು/ ಹೇಳಿದ್ದರು. ಹಂಚಿಕೊಂಡಿದ್ದರು ಎಂಬ ವಿವರವನ್ನೂ ಸನ್ನಿವೇಶದ‌ ಚಿತ್ರಣ ಒದಗಿಸುವುದಿಲ್ಲ. ಹೀಗಾಗಿ ಲೇಖಕನಿಗೆ ಒಂದು ಕಥೆ ಅಥವಾ ಕಾದಂಬರಿ ರಚನೆ ವೇಳೆ ಈ ಸೂಕ್ಷ್ಮಗಳೂ ಅತ್ಯಂತ ಮುಖ್ಯ.

ಹಾಗೆ ಈ ಕಾದಂಬರಿಯ ನಿರೂಪಣಾ ವಿಧಾನ, ಲಯ, ಸನ್ನಿವೇಶ, ಸಂಭಾಷಣೆಗಳೂ ಸ್ವಲ್ಪ ದಿಕ್ಕು ಬದಲಿಸಿದೆ. ಅದು ಹೀಗಿದೆ:

“ಈ ರೀತಿಯ ಅವಮಾನಗಳಿಗಿಂತ ಲಜ್ಜೆಗೆಟ್ಟು ಲಂಚ ಪಡೆದು ಸಂಪಾದಿಸುವುದೇ ವಾಸಿ ಅಂತ ಅವರ ಮನಸ್ಸಿನಲ್ಲೇ ಹೇಳಿಕೊಂಡರು” (ಪು.37)
ಇಲ್ಲಿ ನಿರೂಪಕ ‘ಅವರ ಮನಸ್ಸಿನಲ್ಲೇ ಹೇಳಿಕೊಂಡರು’ ಎಂಬುದನ್ನು ಹೇಳುತ್ತಾನೆ. ನಿರೂಪಕ ಇನ್ನೊಬ್ಬರ ಮಾತನ್ನು ಊಹಿಸಿ ಹೇಳುವುದು ಎಷ್ಟು ನೈಜ?

“ಅರ್ಧ ಗಂಟೆಯ ನಂತರ ಸೇತೂ ಮಾಧವರಾವ್,
‘ಮದ್ಯಾಹ್ನದ ವೇಳೆಯಲ್ಲಿ ಇಂತಹ ಗಾಢನಿದ್ರೆ ನನಗೆ ಬಂದಿದ್ದು ಇದೇ ಮೊದಲನೆಯ ಸಲ’ ಅಂತ ಹೇಳುತ್ತಲೇ ಎದ್ದರು. ಕೃಷ್ಣ ಜೋರಾಗಿ ನಗುತ್ತಾ, ‘ಹಾಗಾದರೆ ಇಲ್ಲೇ ಶಾಶ್ವತವಾಗಿ ನೆಲೆಸಿಬಿಡಿ” ಅಂತ ಹೇಳಿದ” (ಪು.261)

ಮೇಲಿನ ನಿರೂಪಣೆಯಲ್ಲಿ ‘ಕೃಷ್ಣ ಜೋರಾಗಿ ನಗುತ್ತಾ’ ಅಂತಿದೆ. ಇಲ್ಲಿ ಕಥೆ ನಿರೂಪಿಸುತ್ತಿರುವುದು ಕೃಷ್ಣ ಎಂದಾದ ಮೇಲೆ ‘ಕೃಷ್ಣ ಜೋರಾಗಿ ನಗುತ್ತಾ’ ಅನ್ನೋದು ನಿರೂಪಣೆಯ ಲೋಪ. ಕಾದಂಬರಿಯ ಎಂಟೊಂಭತ್ತು ಅಧ್ಯಾಯಗಳ ನಂತರ ಈತರದ ಲೋಪಗಳ ಕಡೆ ಲೇಖಕರು ಸೂಕ್ಷ್ಮವಾಗಿ ಗಮನಹರಿಸಬೇಕಿತ್ತು. ಜೊತೆಗೆ ಮುವ್ವತ್ತು ಅಧ್ಯಾಯಗಳ ತನಕ ಕಥೆ ಎಳೆಯುವ ಬದಲು ಹದಿನೈದು ಇಪ್ಪತ್ತು ಅಧ್ಯಾಯಗಳಿಗೆ ಸಂಕ್ಷಿಪ್ತಗೊಳಿಸಿದ್ದರೆ ಕನಸು ಸೊಗಸಿಗೊಂದು ಗಟ್ಟಿತನ ಪ್ರಾಪ್ತವಾಗುತ್ತಿತ್ತು. ಹಾಗೆ ಕಾದಂಬರಿಯ ಪಾತ್ರದ ಮೂಲಕ ನಿರೂಪಿಸುವ ಬದಲು ಲೇಖಕರೇ ನೇರವಾಗಿ ನಿರೂಪಿಸಿದ್ದರೆ ಈಗ ತಪ್ಪಿರುವ ನಿರೂಪಣಾ ಲಯದ ಸಮಸ್ಯೆ ಬರದೆ ಕಾದಂಬರಿಯ ನಿರೂಪಣೆಗೊಂದು ಸ್ಪಷ್ಟತೆ ಖಚಿತತೆ ಇರುತ್ತಿತ್ತು.

ಕೆ.ಶ್ರೀನಾಥ್ ಅವರ ಈ ‘ಕನಸು ಸೊಗಸು’ ಓದುತ್ತಾ ಪಿ.ವಿ.ನಾರಾಯಣ ಅವರ ‘ಅಂತರ’ ಕಾದಂಬರಿ ನೆನಪಾಯ್ತು. ಅಲ್ಲಿ ಇಡೀ ಕಾದಂಬರಿ, ಶಾಲೆಗೆ ಹೋಗುವ ಒಂದು ಹುಡುಗನ ಚಿತ್ರವನ್ನು ಕಟ್ಟಿಕೊಡುತ್ತದೆ. ಒಬ್ಬ ಅರವತ್ತರ ವಯಸ್ಸಿನ ಆಸುಪಾಸಿನ ಮುದುಕ ಮತ್ತು ಒಂಭತ್ತು ವರ್ಷದ ಹುಡುಗ ದಾರಿಯಲ್ಲಿ ಹೋಗುತ್ತಾ ಸಂಭಾಷಿಸುವ ಮೂಲಕ ಕಾದಂಬರಿ ತೆರೆದುಕೊಳ್ಳುತ್ತದೆ. ಶಾಲಾ ಮಾಸ್ತರರಿಂದ ಆ ಹುಡುಗನ ಮೇಲಾಗುವ ದೈಹಿಕ ಮಾನಸಿಕ ಲೈಂಗಿಕ ಕಿರುಕುಳದ ವಿವರಗಳಿವೆ. ಹಿನ್ನೆಲೆಯಲ್ಲಿ ಆತನ ಕೌಟುಂಬಿಕ ಬದುಕು. ಅಲ್ಲಿನ ಸನ್ನಿವೇಶ, ಕಟ್ಟಿಕೊಡುವ ವಿಧಾನ ಓದುಗನ ಕಣ್ಣ ಮುಂದೆ ನಡೆಯುತ್ತಿದೆಯೇನೊ ಎಂಬಷ್ಟು ಸಹಜವಾಗಿದೆ. ಅಂತಹ ರಚನಾ ಕೌಶಲ ಅದರಲ್ಲಿದೆ. ಆದರೆ ‘ಕನಸು ಸೊಗಸು’ ಸೃಷ್ಟಿಸುವ ಸನ್ನಿವೇಶ, ಪಾತ್ರ ಪೋಷಣೆ, ನಿರೂಪಣಾ ವೇಗದ ಅತಿಯಿಂದ ಸಹಜತೆ ಮತ್ತು ನೈಜತೆ ಕಳೆದುಕೊಂಡು ಗಂಭೀರ ಸಾಹಿತ್ಯದ ಓದುಗನನ್ನು ತಲುಪಲು ವಿಫಲವಾಗಿದೆಯೇನೋ ಅನಿಸಿ ಬಿಡುವಷ್ಟು ಸಂಕೀರ್ಣವಾಗಿದೆ.

ಈ ‘ಕನಸು ಸೊಗಸು’ ಕಾದಂಬರಿಯ ಹೆಚ್ಚುಗಾರಿಕೆ ಹೇಳಲೇಬೇಕು. ಇದರಲ್ಲಿ ಒಂದು ಗಂಭೀರವಾದ ಸಿನಿಮಾ ಮಾಡಲು ಬೇಕಾದ ಎಲ್ಲಾ ಸರಕು ಇದೆ. ಸೇತೂಮಾಧವರಾವ್ ಮತ್ತು ಅವನ ಹುಟ್ಟಿನ ಸನ್ನಿವೇಶದ ಚಿತ್ರಣವನ್ನು ಕೇಂದ್ರವಾಗಿಸಿಕೊಂಡು ನಂದಿನಿ ವಿಷ ಕುಡಿದು ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶದ ಮುಖೇನ ಆರಂಭಿಸಿ ಉಳಿದದ್ದನ್ನು ಕೃಷ್ಣ ಸೇತೂಮಾಧವರಾವ್ ಮುಖಾಮುಖಿಯಾಗಿರಿಸಿ ಪ್ಲ್ಯಾಶ್ ಬ್ಯಾಕ್ ನಲ್ಲಿ ಕಥಾ ಹಂದರ ಬಿಚ್ಚಿಕೊಳ್ಳುವಂತೆ ಚಿತ್ರಿಸಬಹುದಾದ ಎಲ್ಲ ಲಕ್ಷಣವೂ ಈ ಕಾದಂಬರಿಗಿದೆ. ಅದರ ವಸ್ತು ವಿಶೇಷವೂ ಇದಕ್ಕೆ ಪೂರಕವಾಗಿದೆ.

ಕೊನೆಯದಾಗಿ, ಹಲವು ವೈರುಧ್ಯ, ಕ್ಲೀಷೆ, ಸಹಜ, ಅಸಹಜ ಗುಣಾವಗುಣಗಳ ನಡುವೆಯೂ ‘ಕನಸು ಸೊಗಸು’ ಕಾದಂಬರಿಯಲ್ಲಿ ಬರುವ ಪಾತ್ರಗಳು ವೈಚಾರಿಕ ಮನೋಸ್ಥಿತಿವುಳ್ಳವು. ಸಮಾಜಮುಖಿ ಚಿಂತನೆವುಳ್ಳವು. ಸ್ತ್ರೀ ಮತ್ತು ದಲಿತ ಸಂವೇದನೆಯ ಸೂಕ್ಷ್ಮ ಒಳನೋಟವುಳ್ಳವು. ಅವುಗಳ ಆಳದಲ್ಲಿ ಮಾನವೀಯ ಮೌಲ್ಯಗಳ ಶೋಧವಿದೆ. ಬದುಕಿನ ದಟ್ಟ ವಿವರಗಳು ಈ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿವೆ.

ಎಂ.ಜವರಾಜ್

ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x