ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ ಎದುರು ನೆಂಟರಿಷ್ಟರ ಎದುರು ಪೋಸ್ ಕೊಡುತ್ತಾ ನಿಂತಿರುತ್ತಾರೆ. ಪಕ್ಕದಲ್ಲಿ ಯಾರು ನಿಂತಿದ್ದಾರೆ ಎಂಬುದರ ಕಡೆಯೂ ಅವರ ಗಮನ ಇರುವುದಿಲ್ಲ. ತುಂಬಾ ಪರಿಚಯದವರಾದರೂ ಒಮ್ಮೆ ಸುಮ್ಮನೆ ನಕ್ಕು ಸುಮ್ಮನಾಗುತ್ತಾರೆ. ಅವರ ಗಮನವೆಲ್ಲ ಫೋಟೋ ಕಡೆಗೆ ಹಾಗೂ ಬಂದವರು ಕೊಡುವ ಉಡುಗೊರೆಗಳ ಕಡೆಗೆ, ಜೊತೆಗೆ ಪಕ್ಕದಲ್ಲೇ ಭಾವೀ ಸಂಗಾತಿ ಇರುವಾಗ ಯಾರು ಯಾಕೆ ಕಾಣಿಸುತ್ತಾರೆ. ಗಂಡಿಗೆ ಹೆಣ್ಣಿನ ಮೇಲೆ ಆಸೆ ಹೆಣ್ಣಿಗೆ ಗಂಡನ ಮೇಲೆ ಆಸೆ ಮದುವೆಗೆ ಬಂದವರಿಗೆ ಊಟದ ಮೇಲೆ ಆಸೆ ಅಷ್ಟೇ ಅಲ್ವೇ ಮತ್ತೆ.

ಮದುವೆಯಲ್ಲಿ ಮೊದಲ ಒಂದೆರಡು ಪಂಕ್ತಿಗಳಿಗೆ ಹೋದರೆ ಎಲ್ಲಾ ಐಟಂಗಳು ಸಿಗುತ್ತವೆ ಎಂಬುದು ಬಹುಜನರ ಲೆಕ್ಕಾಚಾರ. ಇಂತಹ ಲೆಕ್ಕಾಚಾರದ ಹಾಗೂ ಧಾವಂತದ ಜೀವನದ ಜನರು ಹೆಚ್ಚಾಗಿರುವ ಕಾರಣ ಇಂದು ಮದುವೆ ಮನೆಗಳಲ್ಲಿ ಊಟಕ್ಕೆ ಕಿಕ್ಕಿರದ ಜನಸ್ತೋಮ. ಕೊನೆ ಕೊನೆಗೆ ಊಟಕ್ಕೆ ಹೋದರೆ ಎಲ್ಲಾ ಐಟಂಗಳು ಖಾಲಿಯಾಗಿ ಬರಿ ಅನ್ನ ಸಾಂಬಾರ್ ಮಾತ್ರ ತಿನ್ನಬೇಕಾಗುತ್ತದೆ ಎಂಬುದು ಇನ್ನೂ ಕೆಲವರ ಆತಂಕ. ಅದಕ್ಕೆ ಇರಬೇಕು ಹಿರಿಯರು ಊಟಕ್ಕೆ ಮುಂದಿರು, ಸ್ನಾನಕ್ಕೆ ಹಿಂದಿರು ಎಂದು ಹೇಳಿರುವುದು. ಅಂತೂ ಇಂತೂ ಕ್ಯೂನಲ್ಲಿ ನಿಂತು ನಿಂತು ಒಂದರ್ಧ ಗಂಟೆ ಬಳಿಕ ಊಟದ ಹಾಲ್ಗೆ ಪ್ರವೇಶ ಕೊಟ್ಟೆವು. ಅಲ್ಲಿ ಊಟಕ್ಕೆ ಸೀಟ್ ಹಿಡಿಯುವುದು ಇನ್ನೊಂದು ಸಾಹಸ. ಬಸ್ನಲ್ಲಿ ಹತ್ತುವುದಕ್ಕಿಂತ ಮೊದಲೇ ಕರವಸ್ತ್ರ ಹಾಕಿ ಸೀಟ್ ಕಾಯ್ದಿರಿಸಿದಂತೆ ಮದುವೆ ಮನೆಯ ಊಟದ ಹಾಲಿನಲ್ಲೂ ರಿಸರ್ವೇಶನ್. ಎಲ್ಲೋ ಬರುವವರಿಗಾಗಿ ಸೀಟುಗಳು ಕಾಯುತ್ತಿರುತ್ತವೆ. ಇನ್ನೂ ನನ್ನ ಪತಿ ಮಹಾಶಯರಂತೂ ಮುಂದೆ ನುಗ್ಗಿ ಸೀಟ್ ಹಿಡಿಯುವುದಂತೂ ಕನಸಿನ ಮಾತು. ನಾನೇ ಮುನ್ನುಗ್ಗಿ ಅವರಿಗೂ ಸೀಟ್ ಹಿಡಿಯಬೇಕು. ಹಾಗೆ ಕಷ್ಟಪಟ್ಟು ಎರಡು ಸೀಟ್ ಹಿಡಿದು ಊಟಕ್ಕೆ ಕುಳಿತೆವು. ಊಟದಲ್ಲಿ ಮೊದಲು ಉಪ್ಪು, ಉಪ್ಪಿನಕಾಯಿ ಬಂತು.

ನಂತರದಲ್ಲಿ ಕೋಸಂಬರಿ, ಪಲ್ಯ, ಪುಳಿಯೋಗರೆ, ಕಾಳಿನ ಪಲ್ಯ ಮುಂತಾದ ಐಟಂಗಳು ಒಂದೊಂದೇ ಚಮಚ ಬಡಿಸಿಕೊಂಡು ಹೋದರು. ಅದು ಎಷ್ಟು ಚಿಕ್ಕ ಚಮಚ ಎಂದರೆ ನಾವು ಮಕ್ಕಳಿಗೆ ಊಟ ಮಾಡಿಸುವ ಬೇಬಿ ಸ್ಪೂನ್. ಅಂತಹ ಬೇಬಿ ಚಮಚದಲ್ಲಿ ಬಡಿಸಿದ ತಿಂಡಿಗಳು ಒಂದು ತುತ್ತಿಗೆ ಸಾಕಾಗುವಷ್ಟು ಮಾತ್ರ ಇದ್ದವು. ಇನ್ನೂ ರೊಟ್ಟಿ ಚಪಾತಿ ದೋಸೆ ಪೂರಿಗಳ ವಿಷಯಕ್ಕೆ ಬಂದರೆ ಅವು ಬೇಬಿನೇ. ಒಂದು ಮದುವೆಯಲ್ಲಿ ಬೇಬಿ ದೋಸೆ ಇನ್ನೊಂದು ಮದುವೆಯಲ್ಲಿ ಬೇಬಿ ರೊಟ್ಟಿ. ಅಂತಹ ಬೇಬಿ ರೊಟ್ಟಿಗೆ ಸಖತ್ ಕಾಂಬಿನೇಷನ್ ಆಗಿರುವ ಎಣ್ಣೆಗಾಯಿಯಲ್ಲೂ ಬೇಬಿ ಬದನೆಕಾಯಿ. ಒಂದು ಅಡಿಕೆಕಾಯಿ ಗಾತ್ರದ ಚಿಕ್ಕ ಬದನೆಕಾಯಿ ಹಾಕಿದ್ದರು. ಇನ್ನು ಬೇಬಿ ಪೂರಿಗೆ ಜೊತೆಯಾಗಿ ಬೇಬಿ ಪೊಟ್ಯಾಟೋ ಕರಿ ಅಂತೆ. ಅದೆಲ್ಲಿ ಹುಡುಕಿ ತರ್ತಾರೋ ಏನೋ ಇಂಥ ಚಿಕ್ಕ ಚಿಕ್ಕ ಬೇಬಿ ಬದನೆಕಾಯಿ… ಬೇಬಿ ಪೊಟ್ಯಾಟೋನೆಲ್ಲಾ. ಇನ್ನು ಅನ್ನ ಎಷ್ಟು ಬಡಿಸುತ್ತಾರೆಂದರೆ ಅನ್ನದ ಕೈ ಚಮಚದಲ್ಲಿ ಅರ್ಧ ಚಮಚ ಅಷ್ಟೇ. ಒಂದು ಮಗುವಿಗೆ ಉಣ್ಣಿಸುವಷ್ಟು ಒಂದು ಸಣ್ಣ ಬೌಲ್ ನಷ್ಟು ಅನ್ನ. ಈಗ ಹಪ್ಪಳಗಳು ಕೂಡ ಬೇಬಿ ಸೈಜ್ ಗೆ ಬಂದು ಬಿಟ್ಟಿವೆ. ಹಪ್ಪಳವಾಗಲಿ ದೋಸೆ, ಪೂರಿ ಚಪಾತಿ ರೊಟ್ಟಿ ಯಾವುದೇ ಆಗಿರಲಿ ನಾಲ್ಕು ಬೆರಳಗಲದ ಬೇಬಿಸೈಜ್ ನವು. ಒಟ್ಟಿನಲ್ಲಿ ಎಲ್ಲವೂ ಬೇಬಿ ಮಯ. ಅಂದರೆ ಈಗ ಬೇಬಿ ಮಿಲ್ಸ್ ಕಾಲವಯ್ಯ ಬೇಬಿ ಮೀಲ್ಸ್ ಕಾಲ ಎಂದು ಹೇಳಬಹುದು. ಬದಲಾದ ಕಾಲಕ್ಕೆ ತಕ್ಕಂತೆ ಜನರ ಅಭಿರುಚಿ ಆಸಕ್ತಿಗನುಗುಣವಾಗಿ ಎಲ್ಲವೂ ಬದಲಾದಂತೆ ಮದುವೆ ಊಟ ಕೂಡ ತನ್ನ ಸ್ವರೂಪವನ್ನು ಕಳೆದುಕೊಂಡು ಹೊಸ ರೀತಿಯಲ್ಲಿ ಅಪ್ಡೇಟ್ ಆಗಿದೆ.

ಈಗಿನ ಕಾಲದ ಜನಕ್ಕೆ ಬೇಕಾಗಿರುವುದು ಕೂಡ ಇಂತಹ ಫುಡ್ಡೇ. ಈ ಕಾಲದ ಜನರಿಗೆ ಹೇಳಿ ಮಾಡಿಸಿದಂತಹ ಊಟವೆಂದರೆ ಅದು ಬೇಬಿ ಮಿಲ್ಸ್. ವೈಯಾರದಿಂದ ತಿನ್ನುವುದನ್ನೂ ಒಂದು ಫ್ಯಾಶನ್ ನಂತೆ ಪರಿಗಣಿಸಿರುವ ಬಿಂಕದ ಸಿಂಗಾರಿಯರಿಗೆ ಇಂತಹ ಫುಡ್ ಬಹಳ ಸೂಕ್ತ. ಆದರೆ ಓಬಿರಾಯನ ಕಾಲದ ಭೀಮ, ಬಕಾಸುರ ವಂಶಸ್ಥರಿಗೆ ಇಂತಹ ಊಟ ಏನೇನೂ ಸಾಕಾಗುವುದಿಲ್ಲ. ಅಂತಹವರಿಗೆ ಇಂಥ ಊಟ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತದೆ. ಅಂತಹವರು ಮತ್ತೊಮ್ಮೆ ಕೇಳಿ ಬಡಿಸಿಕೊಂಡು ತಿನ್ನುವುದರಲ್ಲಿ ತಪ್ಪೇನಿಲ್ಲ. ಒಟ್ಟಿನಲ್ಲಿ ಆಹಾರ ವ್ಯರ್ಥವಾಗಬಾರದು ಅಷ್ಟೇ. ಕೆಲವರು ಎಲ್ಲವನ್ನು ಕೇಳಿ ಕೇಳಿ ಬಡಿಸಿಕೊಂಡು ಒಂದೆರಡು ತುತ್ತು ತಿಂದು ಮಿಕ್ಕಿದ್ದೆಲ್ಲ ಎಲೆಯಲ್ಲೇ ಬಿಟ್ಟು ಮೇಲೇಳುತ್ತಾರೆ. ಈ ರೀತಿ ಎಲೆಯಲ್ಲಿ ಬಿಟ್ಟ ಅನ್ನವನ್ನು ಇತರರು ತಿನ್ನುವಂತಿಲ್ಲ ತಾನು ತಿಂದ ಹಾಗಲ್ಲ. ಮದುವೆಯಲ್ಲಿ ಹೆಣ್ಣಿನ ತಂದೆ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಕಷ್ಟಪಟ್ಟು ಕೂಡಿಟ್ಟ ಹಣವನ್ನು ತುಂಬಾ ಪ್ಲಾನಾಗಿ ಖರ್ಚು ಮಾಡುತ್ತಾರೆ. ಆದರೆ ಅವರ ಶ್ರಮದ ಫಲ ಈ ರೀತಿಯಾಗಿ ವ್ಯರ್ಥವಾದರೆ ಸಾರ್ಥಕತೆ ಇರುವುದಿಲ್ಲ. ಆ ಕಷ್ಟ ಹೆಣ್ಣೆತ್ತ ತಂದೆಗೆ ಹಾಗೂ ಅನುಭವಿಸಿದವರಿಗೆ ಮಾತ್ರ ಗೊತ್ತು. ಒಟ್ಟಿನಲ್ಲಿ ಈ ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಗೆ ತಕ್ಕಂತೆ ಮದುವೆಯ ಭರ್ಜರಿ ಊಟ ಬೇಬಿ ಮಿಲ್ಸ್ ಆಗಿ ಪರಿವರ್ತನೆ ಆಗಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ ಎಂದೆ ಹೇಳಬಹುದು.

ಎಲೆಯ ತುಂಬಾ ಮಿತಿ ಇಲ್ಲದೆ ಬಡಿಸಿಕೊಂಡು ಅರ್ಧ ತಿಂದು ಅರ್ಧ ಎಲೆಯಲ್ಲಿ ಉಳಿಸಿ ಕಸದ ತೊಟ್ಟಿಗೆ ಎಸೆಯುವುದರಲ್ಲಿ ಅರ್ಥವಿಲ್ಲ. ಅಲ್ಲದೆ ಅಷ್ಟು ಆಹಾರ ಉತ್ಪಾದನೆ ಮಾಡಲು ಹೊಲದಲ್ಲಿ ರೈತ ಅದೆಷ್ಟು ಕಷ್ಟ ಪಟ್ಟಿರುತ್ತಾನೆ. ಅವನು ಹರಿಸುವ ಬೆವರಿನ ಒಂದೊಂದು ಹನಿಯೂ ಶ್ರಮದ ಮಹತ್ವವನ್ನು ಸಾರುತ್ತದೆ ಅನ್ನದಾತನ ಶ್ರಮಕ್ಕೆ ಬೆಲೆ ಬರಬೇಕೆಂದರೆ ಅವನು ಬೆಳೆಯುವ ಪ್ರತಿಯೊಂದು ಅಕ್ಕಿ ಕಾಳು ಸೂಕ್ತವಾಗಿ ಬಳಕೆಯಾಗಬೇಕು. ಎಲ್ಲರಿಗೂ ದೊರಕುವಂತಾಗಿ ಸದ್ವಿನಿಯೋಗ ಆಗಬೇಕು. ಒಬ್ಬರು ತಿಂದುಂಡು ಎಸೆಯುವ ಆಹಾರದಲ್ಲಿ ಇಬ್ಬರು ತಿನ್ನುವಂತೆ ಆಗಬೇಕು. ಆಗ ಮಾತ್ರ ಆಹಾರಕ್ಕೆ ಸೂಕ್ತ ಬೆಲೆ ಬಂದಂತಾಗುತ್ತದೆ.

-ಸರ್ವ ಮಂಗಳ ಜಯರಾಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x