“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6

ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ ಐಕಳ ಎಂಜಾಯ್ ಜೊತೆಗೆ ತಾನೂ ಆ ಐಕಳನ್ನು ತಳ್ಳಿತಳ್ಳಿ ಒತ್ತರಿಸಿ ಎಂಜಾಯ್ ಮಾಡುತ್ತಿದ್ದಳು. ಒಂದಷ್ಟು ವಯಸ್ಸಾದವರು ದೊಡ್ಡಾಲದ ಮರದತ್ರ ಕುಂತು ಬೀಡಿ ಸೇದುತ್ತ ಹೊಗೆ ಬಿಡುತ್ತಾ ಐಕಳ ಕುಣಿತ ನೋಡ್ತಾ ಅವರೂ ‘ಹೊಹೊ ಹೊಯ್..’ ಅಂತ ಎಂಜಾಯ್ ಮಾಡುತ್ತಿದ್ದರು. ನೀಲಳ ಸ್ಟೆಪ್ಗೆ ಚಪ್ಪಾಳೆ ತಟ್ತಾ ವಿಶೆಲ್ ಹಾಕ್ತ ಹತ್ತತ್ತಿರ ಬಂದು ಜೋರಾಗಿ ಚಪ್ಪಾಳೆ ತಟ್ತಾ ನಿಂತಲ್ಲೆ ಕುಣಿಯುತ್ತ ವಾಲಾಡುತ್ತಿದ್ದರು. ಆ ಹಾಡು ಮುಗಿದ ಮೇಲೆ ಮೈಕ್ ಸೆಟ್ ಹಾಕಿದ್ದ ಸಾಬರ ಹುಡುಗ ಪ್ಲೇಟು ಬದಲಿಸಿದ. ಈಗ ಬೇರೆ ಹಾಡು ಬಂತು. ನೀಲ ಮೈಕ್ ಸೆಟ್ ಹಾಕಿದ್ದ ಹೆಚ್.ಸಿ.ಎಂ.‌ಅಂಗಡಿಯ ಸಾಬರ ಹುಡುಗನನ್ನು ‘ಅಣ್ಣವ್ ಪರಾಜಿತ ಹಾಕು ಇನ್ನೊಂದ್ಸಲ ಕುಣಿಬೇಕು’ ಅನ್ನೊಳು. ಅವನು ಇವಳ ಆಕಾರ ವೇಷ ನೋಡಿ ಹೆದರಿದವನಂತೆ ಕಂಡು ಜನಗಳತ್ತ ನೋಡಿ ಕೇಳಿಯೂ ಕೇಳದವನ ಹಾಗೆ ನೋಡಿಯೂ ನೋಡದವನ ಹಾಗೆ ಸುಮ್ಮನೆ ಕುಂತನು. ಬೇರೆ ಹಾಡು ಹಾಡುತ್ತಲೇ ಇತ್ತು. ನೀಲ ‘ಅಣ್ಣವ್ ನಿಂಗೆಲ್ವ ಹೇಳ್ತ ಇರದು ಪರಾಜಿತ ಹಾಕು.. ಕುಣಿಬೇಕು ಅಂತ ಹೇಳ್ನಿಲ್ವ’ ಅಂತ ಇನ್ನೂ ಒಂದೆರಡು ಸಲ ಅಂದಳು. ಆ ಸಾಬರ ಹುಡುಗ ಆಗಲೂ ಸುಮ್ಮನೆ ಕುಂತಿರುವುದನ್ನು ಕಂಡ‌ ನೀಲ ಸಿಡಿಸಿಡಿ ಸಿಡಿದು ಅವನ ಮುಂದಲೆ ಹಿಡಿದು ಎಳೆದು ಬಿಸಾಡಿದಳು. ಅವನು ಮಾರಿಗುಡಿಯಿಂದ ಆಚೆಗಿದ್ದ ಚಪ್ಪರದತ್ತಿರ ಬಿದ್ದ. ಅಲ್ಲಿ ಮೈಕ್ ಸೆಟ್ಟಲ್ಲಿ ಪ್ಲೇಟು ತಿರುಗುತ್ತಲೇ ಇತ್ತು. ಚಪ್ಪರದ ಮೇಲೆ ದೊಡ್ಡ ಹಾರನ್ ನಲ್ಲಿ ಬೇರೆ ಬೇರೆ ಹಾಡು ಮೊಳಗುತ್ತಲೇ ಇತ್ತು. ಇವನು ಗೋಡೆ ಒರಗಿ ಅಳತೊಡಗಿದ. ಅಲ್ಲಿದ್ದವರು ಬಿಡಿಸಿದರು. ಸುಮ್ಮನಿರಿಸಿದರು. ಪರಾಜಿತ ಹಾಡು ಹಾಕಿಸಿದರು. ಈಗ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮತ್ತೆ ಮೊಳಗಿತು. ನೀಲಳ ಸ್ಟೆಪ್ ಸಖತ್ತಾಗಿತ್ತು. ಆ ಪಿಚ್ಛರ್ ನೋಡಿದ್ದವರು ‘ಆ ಪಿಚ್ಚರ‌್ಲು ಈತರ ಡ್ಯಾನ್ಸ್ ಮಾಡಿಲ್ಲ ಬುಡು.. ಏನಾ.. ಈ ಹೆಣ್ಣು ಹಿಂಗ್ ಕುಣಿತುದಾ..’ ಅಂತ ಅಲ್ಲಲ್ಲೇ ಮಾತಾಡಿಕೊಂಡರು.

ಚಂದ್ರ ಅಲ್ಲೆ ಮಾರಿಗುಡಿ ಗೋಡೆಗೆ ಒರಗಿ ತನ್ನ ಇಬ್ಬರು ಚಿಕ್ಕ ತಮ್ಮಂದಿರನ್ನು ನಿಲ್ಲಿಸಿಕೊಂಡು ಬೆರಗಿನಿಂದ ನೋಡುತ್ತಿದ್ದ. ಚಿಕ್ಕ ತಮ್ಮ ಗೊಣ್ಣೆ ಸುರಿಸಿಕೊಂಡು ತನ್ನನ್ನು ಎತ್ತಿಕೊಳ್ಳುವಂತೆ ಅಳುತ್ತಿತ್ತು. ಆ ಚಿಕ್ಕ ತಮ್ಮನ ಅಳು ‘ಸುತ್ತ ಮುತ್ತಲು..’ ಹಾಡಿನ ಸೌಂಡಿಗೆ ಧೂಳೀಪಟವಾಗುತ್ತಿತ್ತು.

ಈಗ ಊರ ಜನ ಒಬ್ಬೊಬ್ಬರಾಗಿ ಸೇರತೊಡಗಿದರು. ಐಕ್ಳು ಮಕ್ಳು ಇನ್ನಷ್ಟು ತುಂಬಿಕೊಂಡು ಕೇಕೆ ಹಾಕಲು ಶುರು ಮಾಡಿ ಎಲ್ಲ ಕೈ ಕೈ ಬಡಿದು ಚಪ್ಪಾಳೆ ತಟ್ಟುತ್ತ ವಿಶೆಲ್ ಹಾಕುತ್ತ… ನಿಂತವರೂ ಕುಂತವರೂ ನಡು ಕುಣಿಸುತ್ತ ಎಂಜಾಯ್ ಮಾಡುತ್ತಿದ್ದರು.

ಚಂದ್ರ ಅಳುತ್ತಿದ್ದ ಚಿಕ್ಕ ತಮ್ಮನ ಸುಮ್ಮನಿರಿಸಿ ಸುಮ್ಮನಿರಿಸಿ ಸಾಕಾಗಿ ಥೂ ಅಂತ ರೇಗ್ತಾ ರೇಗ್ತಾ ಮೇಲೆ ಎತ್ತಿ ಸೊಂಟದಲ್ಲಿ ಕೂರಿಸಿಕೊಂಡು ಸೊಟ್ಟವಾಗಿ ನಿಂತುಕೊಂಡ. ಹಾಗೆ ಇನ್ನೊಬ್ಬ ತಮ್ಮನನ್ನು ಕೈಹಿಡಿದು ಮುಂದಕ್ಕೆ ಬಂದ. ಹೆಚ್.ಸಿ.ಎಂ.ಮೈಕ್ ಸೆಟ್ ನ ಸಾಬರ ಹುಡುಗನು ಇವರ ಡ್ಯಾನ್ಸ್ ನೋಡ್ತಾ ನೋಡ್ತಾ ಹುಮ್ಮಸ್ಸು ಬಂದವನಂತೆ ತಾನೂ ಕುಣಿಯತೊಡಗಿದ. ಆ ಹಾಡು ಮುಗಿಯುತ್ತಿದ್ದಂತೆ ಪ್ಲೇಟು ಬದಲಿಸದೆ ಅದೇ ಹಾಡನ್ನು ರಿಪೀಟ್ ಮಾಡಿ ಮಾಡಿ ಹಾಕುತ್ತ ಡ್ಯಾನ್ಸ್ ಮಾಡತೊಡಗಿ ಊರುಡುಗರ ತಾನೂ ಅವರಂತಾಗಿ ಹೋದ.

ಚಂದ್ರನ ಜೊತೆಗೇ ಒತ್ತರಿಸಿ ನಿಂತಿದ್ದ ದೊಡ್ಡಬಸವಯ್ಯನೂ ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತ ನಡು ಕುಣಿಸುತ್ತಿದ್ದ. ಈ ದೊಡ್ಡಬಸವಯ್ಯ ಬಾಳ ಪ್ಲಾನ್ಗಾರ. ಈಗಾಗಲೇ ಸಾಮಾಜಿಕ ಪೌರಾಣಿಕ ಅಂತೆಲ್ಲ ನಾಟಕ ಮಾಡಿ ಸೈ ಎನಿಸಿಕೊಂಡಿದ್ದ. ಊರಲ್ಲಿ ಹಬ್ಬ ಬಂತೆಂದರೆ ಎಲ್ಲರನ್ನು ಹುರಿದುಂಬಿಸಿ ನಾಟಕ ಮಾಡಿಸಿಯೇ ಬಿಡುತ್ತಿದ್ದ. ಅವನ ಕೆಲಸ ಅವನಿಗಿದ್ದ ಎರಡು ಹುಣಸೇಮರ ಕಾಯುವುದು. ಅಲ್ಲೇ ಮಲಗುವುದು
ಬಿಡುವಾದಾಗ ನಾಟಕದ ಪದ ಹಾಡುವುದು. ಡೈಲಾಗ್ ಹೊಡೆಯುವುದು. ಇದೇ ಕೆಲಸ ಅವನಿಗೆ.

ಒಂದಿನ ಅವನ ಮರದಿಂದ ಹುಣಸೇಹಣ್ಣು ಬೀಳಿಸಲು ಬೇಲಿ ಸಂದಿಲಿ ನಿಂತ ನೀಲ ಕಲ್ಲು ಹೊಡೆದು ಹುಣಸೇಹಣ್ಣು ಉದುರಿಸಿ ಹಾಯ್ದು ಹಾಯ್ದು ತಿನ್ನುತ್ತಿದ್ದಳು. ಇದನ್ನು ನೋಡಿದ ದೊಡ್ಡಬಸವಯ್ಯ ಉಗಿದಿದ್ದ. ಇದರಿಂದ ಸಿಡಿದ ನೀಲ ಲಂಗ ಎತ್ತಿ ಎತ್ತಿ ತೋರುತ್ತ ಕೈಲಿದ್ದ ಅದೇ ಕಲ್ಲನ್ನು ಅವನಿಗೆ ಬೀರಿದ್ದಳು. ಅದು ಅವನ ತಲೆಗೆ ಬಿದ್ದು ರಕ್ತ ಹರಿದಿತ್ತು. ಇದು ಆಗಾಗ ನಡೀತಿತ್ತು. ಈಗ ಅದೆಲ್ಲ ಮರೆತವನಂತೆ ಅವಳ ಡ್ಯಾನ್ಸ್ ನೋಡುತ್ತ ನಡು ಕುಣಿಸುತ್ತ ಅಕ್ಕಪಕ್ಕದವರಿಗೆ ಕುಣಿ ಕುಣಿ ಕುಣಿಯುತ್ತಲೇ ಅವಳ ಬಗ್ಗೆ ಬಡಬಡಿಸುತ್ತಿದ್ದ. ಅಕ್ಕಪಕ್ಕದವರೂ ಅವನ ಮಾತಿಗೆ ದನಿಗೂಡಿಸಿ ಕುಣಿಯುತ್ತಲೇ ಕೆದಕಿ ಕೆದಕಿ ಕೇಳುತ್ತಿದ್ದರು. ಅವನು ಕುಣಿಯುತ್ತಲೇ ನೀಲಳ ಬಗ್ಗೆ ಹೇಳುತ್ತಲೇ ಹೋದ. ಚಂದ್ರ ಅವಳ ಡ್ಯಾನ್ಸ್ ನೋಡ್ತಾ ನೋಡ್ತಾ ದೊಡ್ಡಬಸವಯ್ಯನ ಹುಮ್ಮಸ್ಸಿನ ಮಾತಿಗೂ ಕಿವಿಗೊಟ್ಟಿದ್ದ.

                         -

ಮೊಕ್ಕತ್ತಲ ಬೆನ್ನಿಗೆ ಲಿಂಕ್ ರೋಡಲ್ಲಿ ಬಿಳಿಪಂಚೆ ಬಿಳಿಶರ್ಟು ಟರ್ಕಿಟವಲ್ಲು ಹಾಕೊಂಡು ಬಿಮ್ಮನೆ ನಡೆದುಕೊಂಡು ಹೋಗ್ತಿದ್ದ ಯಂಕ್ಟಪ್ಪ ದೊಡ್ಡಬಸವಯ್ಯನಿಗೆ ಸಿಕ್ಕಿದ್ದ. ದೊಡ್ಡಬಸವಯ್ಯ ಹೆಗಲಲ್ಲಿದ್ದ ಟವೆಲ್ ಕೈಲಿಡಿದು ಬಗ್ಗಿ ‘ಏನ್ ಬುದ್ದಿ ಎಲ್ಬಂದಿದ್ರಿ ಅಳಿ’ ಅಂದ. ಯಂಕ್ಟಪ್ಪ ‘ಓ.. ಬಸ್ವಾ.. ಏನ್ಲಾ..’ ಅಂತಂದ. ‘ಇಲ್ಲೆ ಅಳಿ ಹುಣ್ಸಹಣ್ಣು ತಂದಿದ್ದಿ.. ತೂಕ ಹಾಕ್ಸಿ ಹಿಂಗೆ ತಿರುಗ್ದಿ ನಿಮ್ಮುನ್ನ ಕಂಡಿ.. ಏನಳಿ ಇತ್ತಗ..’ ಅಂದ.

ಯಂಕ್ಟಪ್ಪ ‘ಅದೆ ನಿಮ್ ಚೆನ್ಬಸ್ವಿ ಹೆಣ್ಣು.. ಅದೆ ಸೌದ ಹೊಡಿತನಲ್ಲ ನಿಂಗಯ್ಯ.. ಅವ್ರೆಣ್ಣು ನೀಲ.. ಚೆಂದುಳ್ಳಿ ಹೆಣ್ಣಲ್ವ.. ಅದೇನ ಡ್ಯಾನ್ಸ್ ಮಾಡಕ ಸೇರುಸ್ಕೊಡು ಅಂತ ಬಾಯ್ಬಡುದ್ದಂತ..ನಿಮ್ ಮಲ್ಲಮೇಷ್ಟ್ರು ಮನ ರೇಡಿಯೋಲಿ ಹಾಡು ಬತ್ತಿದಂಗೆ ಮನ ಒಳಗ ತುಮ್ಮ ತುಮ್ನ ಕುಣ್ದು ಕುಪ್ಪುಳುಸ್ತಳಂತ. ಅದೇನ ಅದ್ಕ ಕುಣ್ಯಾ ಹುಚ್ಚು. ಇವ್ಳೂ ಬೆದುರ‌್ಸಿ ಹಂಗ ಹಿಂಗ ಅಂದಳ. ಅದು ಕೇಳಿಲ್ಲ.. ಕೇಳಿ ಕೇಳಿ ಸಾಕಾಗಿ ಅವ ಬಂದು ಎಲ್ಯಾರ ನೋಡಿ ಅಳಿ ಅಂದಿದ್ದ.

ಅವರತ್ತ ಅಡಿನಿಂಗಿಗ ಇದು ಆಗ್ದು. ಅವ್ಳೂ ಇವೆಣ್ಗ ಉಗ್ದು ಉಪ್ಪುಕಾರ ಹಾಕಿದ್ಲಂತ. ಚೆನ್ಬಸ್ವಿ ಆ ಹೆಣ್ಗ ಸಮದನ ಮಾಡಿ ಆಗ್ಲೇ ಒಪ್ಪಿ ಆಯ್ತು ಸೇರುಸ್ತಿನಿ ಇರು ಅಂದಿದ್ದು ಅಡಿನಿಂಗಿಗ ಗೊತ್ತಾಗಿ.. ಕುಣ್ಯಾದು ಪಣ್ಯಾದು ಸೂಳರು ಪಾಳರ್ ಕೆಲ್ಸ.. ನನ್ ಮೊಮ್ಮೆಣ್ನುವ ಹಂಗೆ ಕುಣ್ಯಾಕಾಕ್ದಯ.. ಪೋಡ್ರು ಸುನಾವು ಎಲ್ಲಿಂದ ಬಂದವು ಅಂತ ನಂಗೊತ್ತಿಲ್ವ.. ನನ್ ಮನ್ಗ ಕಾಲಿಟ್ಟುದ್ದೇ ಇಟ್ಟುದ್ದು ನಲ್ದು ನಲ್ದು ಆ ಹೆಣ್ನೂ ಹಾಳ್ ಮಾಡಕೊಂಟಳ.. ಅಂತ ಇದೆ ಮಾತ್ಗ ರಂಪನಂತ.

ಅವ ನೀಲ.. ಓದ್ತ ಇರ ಹೆಣ್ಣು. ಏನ್ ಮಾಡ್ದಯ್… ಅಲ್ಲಿ ಇಲ್ಲಿ ಅದು ಇದು ನೋಡಿರ‌್ತವ.. ನಮ್ತರ ಹಳ ಕಾಲನ… ಇವ ಅವ್ರತ್ತ ಮಾತ್ಗ ಸೊಪ್ಪಾಗ್ದೆ ಸೇರ‌್ಸೇ ಸೇರುಸ್ತಿನಿ.. ನನ್ನೆಣ್ಗ ಡ್ಯಾನ್ಸ ಕಲಿಸೇ ಕಲಿಸ್ತಿನಿ ಅಂತ ಹಟ ಮಾಡಿ ನನ್ ಬೆನ್ ಬಿದ್ದಳ ಕಣ. ನ್ಯನ್ನ ಕರ‌್ಕ ಹೋಗಿದ್ದಿ.. ಅಗ್ರಹಾರುತ್ತವು ಅದಲ್ಲ.. ಬ್ರಾಮುಂಡ್ರು ಎಲ್ಲ.. ರಾಮಂದ್ರಲಿ. ಅದೆಂತೆಂತ ಡ್ಯಾನ್ಸ.. ನಂಗೇನ್ ಗೊತ್ತು. ಬರೀ ಹೆಣೈಕ್ಳೆ.. ಕೋಲ್ ಮಡಿಕಂಡು… ಗೆಜ್ಜ ಕಟ್ಕಂಡು ಅದ ಕುಟ್ಕಂಡು ಹೆಜ್ಜ ಹಾಕ್ತ ಇದ್ದು. ಇವ್ಳೂ ನಾಕೆಜ್ಜ ಹಾಕ್ದ. ಚೆನ್ನಾಗಿ ಕುಣ್ದ. ನಾನೂ ನೋಡ್ದಿ. ಅವ್ರೂ ಒಪ್ಪುದ್ರು.. ಅವ್ಳ್ ಕುಣ್ತ ನೋಡಿ ನಂಗೂ ಕುಣ್ಯಾತರ ಆಯ್ತು ಕ ಬಸ್ವ. ಅಲ್ಲ.. ನಿಮ್ ಜನಲಿ ಈತರನು ಇದ್ದರ ಅಂದ್ಕಂಡಿ. ನೋಡು ನೀನು ಕಾಲ್ದಿಂದ ನಾಟ್ಕ ಮಾಡಿ ಹೆಸುರ್ ಮಾಡಿಲ್ವ.. ನಿಮ್ಮಪ್ನು ಅದೆ ಕೆಲ್ಸ.. ರಕ್ತದಿಂದ ಬಂದುದು. ಕಲಾ ಅಂದ್ರ ಕಲಾನೆ. ಕಲಾಗ ಜಾತಿಗೀತಿ ಇದ್ದುದ ಅಂತ ಅಂದ್ಕಂಡಿ. ನೋಡು, ನಿನ್ನಾ.. ಆ ನೀಲುನ್ನ ನೋಡ್ತಿದ್ರ ನಂಗ ಹೆಮ್ಮ ಕಣ.

ಸರಿ, ಅವ್ಳ್ ಕುಣ್ತ ನೋಡಿ ನಾಳ ಬಾ ಅಂದಿದ್ರು. ಅದ್ಕ ಪುನ ಕರ‌್ಕ ಹೋಗಿದ್ದಿ ಕಣ’ ಅಂತ ದೊಡ್ಡಬಸವಯ್ಯನನನ್ನು ನಾಟಕ ಮಾಡ್ತಿದ್ದ. ಅವನ ನಾಟಕ ಪಾರ್ಟ್ ಬಗ್ಗೆನು ಮಾತಾಡಿ ಹೊಗಳಿದ. ಹೊಗುಳ್ತಾ ಹೊಗುಳ್ತ ‘ಇಷ್ಟಾದ್ರು ಆ ನೀಲುನ್ನ ಸೇರುಸ್ಕಳಲ್ಲ ಅಂದ್ರು ಕ ಬಸ್ವ.. ಅದ್ಯಾಕ ಸೇರುಸ್ಕಳ ಅಂದ್ರು.. ಅವ ಚೆಂದಾಗೆ ಕುಣುದ್ಲಲ್ಲ.. ಅಂತ ಅನ್ಸಿ ನಾನೇ ಅತ್ತಗ ಕರ‌್ದು ಕೇಳ್ದಿ. ಅವ್ರು ನಮ್ಮವ್ರು ಅಂದ್ಕಂಡು ಒಪ್ಪಿದ್ರು. ನಾನು ಈಗೀಗ ಅಂತ ಹೇಳ್ದಿ. ಅವ್ರು ‘ನೋಡಿ ಗೌಡ್ರೆ ಏನು ಅಂದ್ಕೊಬೇಡಿ. ನೀವೇನ ಅಂತ ಇಡಿ ನರ‌್ಸೀಪುರುಕ್ಕೆ ಗೊತ್ತು. ನಿಮ್ಗ ಮರ‌್ವಾದಿ ಇದ್ದೆ ಅದ. ಆದ್ರ ಇದು ನಮ್ಮವ್ರಿಗೆ ಅಂತ ಇರದು ಗೌಡ್ರೆ. ಆಮೇಲ ಲಿಂಗಾಯ್ತ್ರುಗು ಇಲ್ಲ ಅನ್ನಲ್ಲ. ಈಗೀಗ ನಿಮ್ಮವ್ರುಗು ಒಂದು ರೂಮ್ಲಿ ಕಲುಸ್ತಿವಿ.. ಸಂಪ್ರದಾಯ ಬುಡಕಾದ್ದ.. ಅದ್ಬುಟ್ಟು ಆ ಜನ್ವ ಇಲ್ಗೆಲ್ಲ ಒಳಕ ಬುಟ್ಕಳಕಾದ್ದ..’ ಅಂತಂದು ಚೆನ್ಬಸ್ವಿನ ಕರ‌್ದು ‘ ನಿನ್ ಮಗ್ಳು ಚೆನ್ನಾಗೇನೊ ಮಾಡ್ತಳ. ಅಪರಂಜಿ ತರನು ಅವ್ಳ. ನಿನ್ನಂಗೆ ಅವ್ಳ. ಚೂಟಿ ಜಾಸ್ತಿ ಅನ್ಸುತ್ತ.. ಅವ್ಳ್ ಕಣ್ ನೋಡುದ್ರ ಗೊತ್ತಾಗುತ್ತ. ರೂಪೆಲ್ಲ ಚೆನ್ನಗದ.. ನಿಮ್ ಜಾತಿಲಿ ನೀನು ನಿನ್ನಂತ ಮಗ್ಳು ಹುಟ್ಟಿರದೆ ಹೆಚ್ಚು. ಓದ್ತಿದಳಾ ಓದ್ಲಿ ಓದ್ಲಿ.. ಈಗ ಸೀಟಿಲ್ಲ.. ಅದೂ ಅಲ್ದೆ ಇಲ್ಲಿ ಡ್ಯಾನ್ಸ್ ಹೇಳ್ಕೊಡವ್ರು ಮೈಸೂರಿಂದ ಬರದು.. ಕಲಿಯೋರು ಈಗ್ಲೇ ಜಾಸ್ತಿ ಅವ್ರ.. ಟೈಮ್ ಅಜ್ಜೆಸ್ಟ್ ಆಗಲ್ಲ.. ಆಮೇಲ ಗೌಡ್ರ ಜೊತ ಹೇಳಿ ಕಳಿಸ್ತಿನಿ ಬನ್ನಿ..’ ಅಂದ್ರು ಕಾ ಬಸ್ವ.

ಅವೆಣ್ಣು ಮೊಕ ಸಪ್ಪುಗ್ ಮಾಡ್ಕಂಡು ತಿಗುನ್ ಮರ ಒರಿಕಂಡು ಕಣ್ಣೀರ್ ಕಚ್ಕಂಡು ನಿಂತ್ಕತು. ಚೆನ್ಬಸ್ವಿ ಅವ್ರ್ ಕಾಲ್ಗೆಲ್ಲ ಬಿದ್ದು ಗ್ವಾಗರ‌್ದು ಗ್ವಾಗರ‌್ದು ಸಾಕಾಗಿ ಅವ್ರು ಒಪ್ದೆ ಕ್ಯಾಣತ್ಕಂಡು ಆ ಹೆಣ್ಣ ರಟ್ಟ ಹಿಡ್ಕಂಡು ಎಳ್ಕಂಡು ತಾಲೊಕಾಪಿಸ್ ರೋಡ್ ಕಡಯಿಂದ ವಾದ. ನಾನು ಕೂಗುದ್ರು ಮಾತಾಡ್ನಿಲ್ಲ. ನಾನು ಹಿಂಗೆ ಭಗವಾನ್ ಟಾಕೀಸ್ ಬಳಸ್ಕಂಡು ಬಂದಿ’ ಅಂತ ಲೊಚಗುಟ್ಟುತ್ತ ಹಾಗೇ ಹಾದು ಹೋದ.

ತನ್ನ ವ್ಯವಹಾರ ಮುಗಿಸಿ ರಾತ್ರಿ ಎಂಟಾದ ಮೇಲೆ ತಿರುಮಕೂಡ್ಲು ಸರ್ಕಲ್ ಗೆ ಬಂದು ಒಂದು ಕ್ವಾಟರ್ ಸರಾಯಿ ಬಾಟಲು ತಕ್ಕಂಡು ಚಾಕ್ಣ ಕಟ್ಟುಸ್ಕಂಡು ಊರ ಹೆಬ್ಬಾಗಿಲ ಕಲ್ಲಾಸ್ಮೇಲ ಕುಂತ್ಕಂಡು ಅರ್ಧ ಕ್ವಾಟರ್ ಏರಿಸಿ ಚಾಕ್ಣ ತಿಂದು ಚಪ್ಪರಿಸಿ ಇನ್ನರ್ಧ ಜುಬ್ಬದೊಳಗಿದ್ದ ಜೋಬಿಗೆ ಇಳಿಸಿ ಬೀಡಿ ಹಸ್ಸಿ ಸೇದುತ್ತ ನಾಟಕದ ಡೈಲಾಗ್ ಹೊಡೆಯುತ್ತಾ ಎರಡಾಳುದ್ದ ಬೆಳೆದು ಗಟ್ಟಿಯಾಗಿ ನಿಂತಿದ್ದ ಮುಂಡಗಳ್ಳಿ ಬೇಲಿ ರಸ್ತೆಗುಂಟ ಗವ್ವೆನ್ನುವ ಕತ್ತಲಲ್ಲಿ ದಾಪುಗಾಲಿಡುತ್ತ ಮನೆಯತ್ತ ಸಾಗಿದ.

ಆಗ ಅದೇ ದಾರಿಲಿ ಯಂಕ್ಟಪ್ಪನ ಮಗ ಶಿವನಂಜ ಬ್ಯಾಟರಿ ಹಾಕಂಡು ಟ್ರಿಣ್ ಟ್ರಿಣ್ ಅನ್ನುಸ್ತ ಸೈಕಲ್ ತುಳಿಯುತ್ತ ಭರ‌್ರಂತ ಬಂದ. ತೂರಾಡುತ್ತ ಡೈಲಾಗ್ ಹೊಡೆಯುತ್ತ ದಾಪುಗಾಲಿಡುತ್ತಾ ಬರುತ್ತಿದ್ದ ದೊಡ್ಡಬಸವಯ್ಯನನ್ನು ಸೈಕಲ್ ಪೆಟ್ಲು ಒತ್ತುತ್ತಾ ಬ್ಯಾಟರಿ ಲೈಟ್ ನಲ್ಲಿ ನೋಡ್ತಾ ಟ್ರಿಣ್ ಟ್ರಿಣ್ ಅನ್ನಿಸಿ ಲಕ್ಕನೆ ಕೆಳಕ್ಕಿಳಿದು
‘ಏನಯ್ಯ ನಿನ್ ದೌಲತ್ತು ನಾ ಬತ್ತಿದ್ರು ದಾರಿಗ ಅಡ್ಡ ಬತ್ತಿದೈ’ ಅಂದ.
ಅದಕ್ಕೆ ದೊಡ್ಡಬಸವಯ್ಯ
‘ಅಪ್ಪೊಯ್ ನಾನೆಲ್ಲಿ ಅಡ್ಡ ಬಂದಿ.. ಸುಮ್ನ ಹೋಗಿ ಬುದ್ದಿ’ ಅಂದ.
‘ಸರಿ.. ಏನಾ ಗೊತ್ತಾಯ್ತು..’ ಅಂದ.
‘ಏನಳಿ ಅದು..’
‘ನಮ್ಮಪ್ಪ ಅವ್ಳೆಣ್ಣ ಡ್ಯಾನ್ಸ್ ಮಾಡಕ ಸೇರುಸ್ತ ಇದ್ದಾನಂತ.. ನಿಂಗೆಸ್ಟ್ ಕೊಟ್ಟಿದನು ನಮ್ಮಪ್ಪ’
‘ಹ್ಞೂ ಅಳಿ.. ಇದೇನ ದುಡ್ಡುಪಡ್ಡು ಅಂತಿದರಿ… ಅದೇನ ಅವೆಣ್ಣು ಆಸ ಪಟ್ಟಿದ್ದಂತ ಅದ್ಕ ಮುತುವರ್ಜಿ ವಯಿಸರ ಅಳಿ’
‘ಹ್ಞೂ ಮುತುವರ್ಜಿ ಮನಲಿರ ಖಜಾನಿ ಖಾಲಿ ಆಯ್ತ ಅದ. ಅವ ರಸ್ಗುಲ್ಲ ತರ ಅವ್ಳ. ನಂಗೂ ಅವ್ಳ್ ಮ್ಯಾಲ ಆಸ ಅದ.. ಮುತುವರ್ಜಿ ಅದ. ಕಚ್ಚಿ ಕಚ್ಚಿ ತಿನ್ಬೇಕು ಅನ್ಸುತ್ತ.. ನಮ್ಮಪ್ಪ ಅವ್ರೊವ್ವುನ್ನ ಕಚ್ಚಿ ತಿಂದಂಗಿ. ಹಂಗಂತ ಅವ್ಳ ಕಟ್ಕಳಕಾದ್ದ.. ಹಂಗಿರ‌್ಬೇಕಾರ ಡ್ಯಾನ್ಸಂತ ಡ್ಯಾನ್ಸು.. ಡ್ಯಾನ್ಸಾ ಯಾರ್ ಮಾಡಬೇಕೊ ಅವ್ರ್ ಮಾಡುದ್ರೆ ಚೆಂದ.. ಹೇಲು ಉಚ್ಚ ಗೋರೊರೆಲ್ಲ ಡ್ಯಾನ್ಸ್ ಮಾಡ್ತಿನಿ ಅಂತಿದರೆಲ್ಲ… ಎಲ್ಲಿಗ್ ಬಂದ್ಬುಟ್ರಿ..’ ಅಂತ ಅನ್ನುವಾಗ ಇದ್ದಕ್ಕಿದ್ದ ಹಾಗೆ ರಿವ್ವನೆ ಗಾಳಿ ಬೀಸತೊಡಗಿತು. ಗಟ್ಟಿಯಾಗಿ ನಿಂತಿದ್ದ ಮುಂಡಗಳ್ಳಿ ಆ ಗವ್ಗತ್ತಲಲ್ಲೆ ಅದುರಿದಂತಾಗಿ ಬೇಲಿ ಸಂದಿಯೊಳಗಿದ್ದ ಜೀವಗಳು ಸರಸರ ಸರಗುಟ್ಟತೊಡಗಿದವು.

ಆಗ ದೊಡ್ಡಬಸವಯ್ಯ
‘ನೋಡೊಪೊಯ್ ಹಂಗೆಲ್ಲ ಅನ್ಬೇಡಿ.. ಎಂತ ಖಜಾನನ.. ಗೇದ್ರ ಉಂಟು ಇಲ್ದೆ ಇದ್ರ ಇಲ್ಲ.. ಇದ ನಾ ಕಂಡಿನಿ ಸುಮ್ನ ಹೋಗಿ.. ಈ ಕಲಾ ಅನ್ನದು ಏನಂತ ಗೊತ್ತಾ. ಅದು ನನ್ತವು ಅದ.. ಹಂಗೆ ಅವ್ಳುತವು ಅದ. ಅಂತ ಕಲಾನ ಹೇಲು ಉಚ್ಗೆಲ್ಲ ಸೇರ‌್ಸಿ ಮಾತಾಡ್ಬೇಡಿ. ಕಲಾಗ ಅಂತಾ ಶಕ್ತಿ ಅದ. ಹೋಗಿ, ಮಳ ಬರಗದ. ಅದೆಲ್ಯ ಹೊಯ್ತಿದ್ದರಿ ಹೋಗಿ. ನಿಮ್ಮಪ್ಪವ್ರ್ ಗ ಸುತ್ಮುತ್ತ ಹಳ್ಳಳಿಲು ಒಂದೆಸ್ರದ ಅದ ಕೆಡುಸ್ಬೇಡಿ..’ ಅಂತಂದು ಸಿಡುಕಿ ಆ ಗವ್ಗತ್ಲಲ್ಲಿ ದಾಪುಗಾಲಾಕಿದ್ದು ಮುಂಡ್ಗಳ್ಳಿ ಸಹಿತ ಆ ಗವ್ಗತ್ತಲೂ ಆ ಬೀಸುವ ಗಾಳಿಯೂ ಸೈಕಲ್ ಹಿಡಿದು ನಿಂತಿದ್ದ ಶಿವನಂಜನ ಮುಂದೆ ಗಹಗಹಿಸಿ ನಕ್ಕಂತೆ ಮಿಂಚು ಪಣಕ್ಕನೆ ಮಿಂಚಿತು. ಪಣಕ್ಕನೆ ಮಿಂಚಿದ ಆ ಮಿಂಚು ಕಣ್ಣಿಗೆ ರಾಚಿ ಕಣ್ಕತ್ತಲು ಆದಂಗಾಯ್ತು. ಈಗ ಗುಡುಗು ಗುಡುಗುಡು ಅಂತ ಗುಡುಗುತ್ತ ಚಟೀರ್ ಪಟೀರ್ ಅಂತಂತಲೆ ಮಳೆ ಹನಿ ಪಟಪಟ ಉದುರತೊಡಗಿದಂತೆಲ್ಲ ದೊಡ್ಡಬಸವಯ್ಯನ ಕುಣಿತಕ್ಕೆ ಮೈ ಬೆವೆತು ಒದ್ದೆಯಾಗಿ ಚಂದ್ರನ ಮುಂದೆ ಬಟಾಬಯಲಾಗುತ್ತ ಮೊಳಗುತ್ತಿದ್ದ ಪರಾಜಿತ ‘ಸುತ್ತ ಮುತ್ತಲು.. ಸಂಜೆ ಗತ್ತಲು..’ ಚೆನ್ನಬಸವಿಗೂ ತಾಕಿ ಅವಳು ಸ್ಯಬ್ಬ ತಕ್ಕಂಡು ಓಡೋಡಿ ಬಂದು ಕುಣಿಯುತ್ತಿದ್ದ ನೀಲಳಿಗೆ ರಪ್ಪನೆ ಬಡಿಯತೊಡಗಿದಳು.

ಅವಳು ‘ಅವ್ವೊವ್ ಬ್ಯಾಡ ಬುಡವ್ವೊ.. ‘ ಅಂತ ಚಿಟಿಚಿಟಿ ಚೀರುತ್ತ ಓಡುತ್ತಾ ನಟಿಕೆ ಮುರಿಯುತ್ತ ತಾನು ಓಡುತ್ತಿದ್ದ ಹಾದಿಯಲ್ಲಿ ಯಾರು ಸಿಕ್ಕುತ್ತಾರೊ ಅವರ ಮುಂದಲೆ ಹಿಡಿದು ಎಳೆದು ಜಾಡಿಸಿ ಕೆಡವಿ ಬಿಸಾಕಿ ಇನ್ನಷ್ಟು ಚೀರಿ ಓಡತೊಡಗಿದಳು.

ದೊಡ್ಡವ್ವನ ಆವೇಶ ನೋಡಿ ಹೆದರಿದಂತಾದ ಚಂದ್ರ ಚಿಕ್ಕ ತಮ್ಮನನ್ನು ಎತ್ತಿಕೊಂಡೇ ಇನ್ನೊಂದನ್ನು ಕೈಹಿಡಿದುಕೊಂಡು ದಿಗಿಲಾಗಿ ನಿಂತಿದ್ದ.

ಇತ್ತ ಸ್ಯಬ್ಬ ಹಿಡಿದು ನೀಲಳ ಹಿಂದೆಯೇ ಬಯ್ಯುತ್ಯಾ ಹೋದ ಚೆನ್ನಬಸವಿ ತೆಂಗಿನಮರ ಒರಗಿ ನಿಂತಿದ್ದ ನೀಲಳ ಹತ್ತಿರ ಬಂದು ದುರದುರನೆ ನೋಡಿ ಅದ್ಯಾಕೊ ಏನೊ ಮರುಕಪಟ್ಟವಳಂತೆ ಕಂಡಳು.
ಅದನ್ನು ಕಂಡ ನೀಲ ‘ಇದ್ಯಕವ್ವ ಅತೈ.. ಸುಮ್ನಿರು ನಂಗೇನು ಆಗಿಲ್ಲ ಕಣ.. ಹಿಟ್ಟುಂಡ್ಯ.. ಹಬ್ಬುದ್ ಕೆಲ್ಸ ಮಾಡಿ ಸಾಕಾಗಿದೈ.. ಹಸ್ಗ ಇರ‌್ಬೇಡ. ಹೋಗು ಹೊಟ್ಗ ಏನಾರ ತಿನ್ಕ ಮನಿಕ. ಸಂದಕು ತಂಬಿಟ್ನಾರ‌್ತಿ ಬೇರೆ ಮಾಡ್ಬೇಕು. ಒಬ್ಳೆ ಅದೇನಾರಿ ಬಂಗತ್ತಿಯೇ..’ ಅಂತ ಕಿಸಕ್ಕಂತ ನಕ್ಕಿದಾಗ ಚೆನ್ನಬಸವಿ ಹಿಂತಿರುಗಿ ನೋಡಿದಳು.

-ಎಂ. ಜವರಾಜ್

( ಮುಂದುವರಿಯುವುದು…)


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Smn
Smn
10 months ago

Test

1
0
Would love your thoughts, please comment.x
()
x