ಬಾಳ ಹಣತೆ
ಸುಳ್ಳು ಸತ್ಯದಾಟದಲ್ಲಿ
ಶೂನ್ಯವಾಯಿತೇ ಬದುಕಿಲ್ಲಿ…..
ಅನ್ಯಾಯವ ಅವಮಾನವ ಸಹಿಸಿ
ಮುಖವಾಡದ ನಾಟಕವ ದಿಟ್ಟಿಸಿ….
ಹಣತೆಯೊಂದನ್ನು ಹಚ್ಚಬೇಕಿದೆ
ಇರಿಸು ಮುರಿಸಿನ ವ್ಯಥೆಯಲ್ಲಿ….
ದಾರಿಯ ದೂರ ಸಹಿಸನೆಂದರೆ
ನೆರಳ ಹಂಗು ಬಿಡುವುದೇ….
ಯಾರದ್ದೋ ಬದುಕ ಬೆಳಕ ನಂದಿಸಿ
ಕಗ್ಗತ್ತಲು ಎಂಬುವುರೇ……
ಗುಡುಗು ಸಿಡಿಲಿನ ಆರ್ಭಟಕ್ಕೆ
ಅಂಜದಿರೆಂದು….
ಮತ್ತೆ ಮತ್ತದೇ ಹಣತೆಯಲ್ಲಿ
ಪ್ರಕಾಶಮಾನವಾದ ಬೆಳಕು ಹೊಮ್ಮಲಿ…..
ನೋವು ನಲಿವಿಗೆ ಕಾಲದ
ಲೆಕ್ಕವಿಲ್ಲಿ…..
ಅಂಧಕಾರವೇ ತುಂಬಿದ ಮನಗಳಲ್ಲಿ
ಹೃದಯ ಜ್ಯೋತಿ ಬೆಳಗಲಿ
-ರೋಹಿಣಿ ಪೂಜಾರಿ ಕೋಣಾಲು.
ದೂರು…
ಈ ಪದಗಳೇ ಮೊದಲಿನಂತಿಲ್ಲ..
ಯಾವ ಭಾವಕ್ಕೂಹೊಂದಿಕೊಳ್ಳುವುದಿಲ್ಲ
ಕವಿತೆಗಾಗಿ ಹಂಬಲಿಸುವ ನನ್ನಂಥವನನ್ನು ಬೆಂಬಲಿಸುವುದಿಲ್ಲ..
ಅರ್ಥಕ್ಕೆ ಅಪಾರ್ಥ ಕೊಡುವ ಇವು ಪದಗಳೇ ಅಲ್ಲ
ಎದೆಯೊಳಗೆ ಹದವಾಗಿ ಹುಟ್ಟುವ ಇವು
ಯಾರ ಕಿವಿಗೂ ಮುಟ್ಟುವುದಿಲ್ಲ..
ಗಂಟಲಲ್ಲಿ ತೂರಿ ನಾಲಿಗೆ ದಾಟಿ ತುಟಿಗೆ ಬಂದು
ತಡವರಿಸಿಕೊಳ್ಳುತ್ತ ದನಿಯಾಗುವುದೇ ಇಲ್ಲ..
ದಿನಗಳೆದಂತೆ ನನ್ನ ನೋವುನಲಿವುಗಳನ್ನು ಹೊತ್ತು
ಗೀತವಾಗುತ್ತವೆಯೇನೋ ಎಂಬ ಹುಸಿ ನಿರೀಕ್ಷೆ
ಏನನ್ನೂ ಬಯಸದ ಮನಕೆ ಬಂದೊದಗುವ ಅಗ್ನಿ ಪರೀಕ್ಷೆ
ಚಂದಿರನೇ ಭುವಿಗೆ ಬಂದು ಬೇಡಿದಂತೆ ತಿಂಗಳ ಭಿಕ್ಷೆ
ಪದಗಳಿಲ್ಲದೇ ಕವಿತೆ ಕಟ್ಟುವುದು ಹೇಗೆ?
ಅವು ಮೊದಲಿನಂತೆ ಅರ್ಥಗರ್ಭಿತಗೊಂಡು ಹದಗೊಂಡು
ಭಾವ ಸ್ಫುರಿಸಿದರೇ ಮಾತ್ರ ಕವಿತೆ ಜೀವಂತ..
ಅರಿಯಬಲ್ಲವೇ ನಾವು ಸಾವಿಗೇಕೋ ಬದುಕ ಪ್ರೀತಿಸುವ ಧಾವಂತ..!
-ಸಚಿನ್‌ಕುಮಾರ ಬ ಹಿರೇಮಠ
“ದೀಪದ ಆವಳಿಯಲ್ಲ ನೆನಪಿನ ಹಾವಳಿ”.
ಪ್ರತಿ ಬಾರಿಯಂತೆ
ಈ ಬಾರಿಯೂ ದೀಪ ಹಚ್ಚಿದ್ದೇನೆ,
ಆದರೆ ಪಟಾಕಿ ಹಚ್ಚಿಲ್ಲ ಕಾರಣ
ಧೈರ್ಯಕ್ಕೆ ನಿಲ್ಲುವ ಅಪ್ಪನೇ ಜೊತೆಗಿಲ್ಲ.
ಪ್ರತಿ ಬಾರಿಯಂತೆ
ಈ ಬಾರಿಯೂ ಮಿಂದಿದ್ದೇನೆ,
ಆದರೆ ಹೊಸ ಬಟ್ಟೆ ತೊಟ್ಟಿಲ್ಲ
ಕಾರಣ ಕೊಡಿಸುವ ಅಪ್ಪನೇ ಜೊತೆಗಿಲ್ಲ.
ಪ್ರತಿ ಬಾರಿಯಂತೆ
ಈ ಬಾರಿಯೂ ಶೇಡಿ ಕೆಮ್ಮಣ್ಣ ಬಡಿದಿದ್ದೇನೆ
ಆದರೆ ರಂಗೋಲಿ ಇಟ್ಟಿಲ್ಲ,
ಕಾರಣ ಚೆನ್ನಿದೆ ಎಂದು ಹೊಗಳುವ ಅಪ್ಪನೇ ಜೊತೆಗಿಲ್ಲ.
ಪ್ರತಿ ಬಾರಿಯಂತೆ
ಈ ಬಾರಿಯೂ ಪೂಜೆ ಮಾಡಿದ್ದೇನೆ,
ಆದರೆ ಯಾವುದೂ ಸರಿಯಿಲ್ಲ,
ಕಾರಣ ಅದು ಹಾಗಲ್ಲ ಹೀಗೆ ಎನ್ನುವ ಅಪ್ಪ ಜೊತೆಗಿಲ್ಲ.
ಪ್ರತಿ ಬಾರಿಯಂತೆ
ಈ ಬಾರಿಯೂ ಹಬ್ಬವಾಗಿದೆ
ಆದರೆ ಹೋಳಿಗೆಯಿಲ್ಲ,
ಕಾರಣ ತಿಂದು ಚಪ್ಪರಿಸುವ ಅಪ್ಪ ಜೊತೆಗಿಲ್ಲ.
ಪ್ರತಿ ಬಾರಿಯಂತೆ
ಈ ಬಾರಿಯೂ ದೀಪಾವಳಿ ಬಂದಿದೆ,
ಆದರೆ ಈ ಬಾರಿ ದೀಪಗಳ ಆವಳಿಯಿಲ್ಲ
ಕೇವಲ ನೆನಪುಗಳದ್ದೇ ಹಾವಳಿ.
-ಏಕತಾ ಶಂಕರನಾರಾಯಣ ಭಟ್ಟ.
ಬೆಳಕು
ಕತ್ತಲು ಸರಿದು
ಸುತ್ತಲು ಬೆಳಕು
ಮುತ್ತಲು ಜಗಕೆ
ಎತ್ತಲು ಸಂಭ್ರಮ!
ಅಭ್ಯಂಜನ ಸ್ನಾನ
ಕೊಳೆಯೆಲ್ಲ ಮಾಯ
ದೇವರಲ್ಲಿ ಧ್ಯಾನ
ಬೇಡುವೆವು ಜ್ಞಾನ!
ದೀಪಗಳ ಗೊಂಚಲು
ಜ್ಞಾನವನು ಹಂಚಲು
ಪ್ರಣತಿಗಳ ಸಾಲು ಸಾಲು
ಬೀರುತಿವೆ ಕಂಪು ಕಂಪು!
ಮನದಾಳದ ಶುಭಹಾರೈಕೆ
ದೀಪಾವಳಿಯ ಪರ್ವಕೆ
ಅನುದಿನವು ವಿನೂತನ
ಅಭ್ಯುದಯವು ಚಿರಂತನ!
-ಗಾಯತ್ರಿ ನಾರಾಯಣ ಅಡಿಗ
“ಮಳೆ, ಬಿಸಿಲು ಮತ್ತು ಬಣ್ಣ”
ಮಳೆಯ ಬಿಲ್ಲೊಂದು
ಬಾನ ಹಾಳೆಯಲಿ
ಬಿಡಿಸಲ್ಪಟ್ಟಿದೆ.
ಅಲ್ಲಿ ಬಣ್ಣಗಳಿವೆ,
ಏಳು ಬಣ್ಣ ಸಂಧಿಸಿ
ಬಿಳಿ ಬಣ್ಣವೋ!
ಬಿಳಿಯ ಬಣ್ಣವೇ
ಏಳು ಬಣ್ಣಗಳಾಗಿ
ಚದುರಿದೆಯೋ!
ಗೊತ್ತಿಲ್ಲ.
ಮಳೆಯೊಡನೆ
ಬಿಸಿಲು ಬಂತೋ? ಅಥವಾ
ಬಿಸಿಲಲ್ಲಿ ಮಳೆಯೋ!
ಅಥವಾ ಎರಡೂ! ಇರಬಹುದು.
ಮಳೆಬಿಲ್ಲು, ಕಾಮನಬಿಲ್ಲು,
ಬಣ್ಣದ ಬಿಲ್ಲು, ಬಣ್ಣದ ಕಮಾನು
ಇಂಗ್ಲೀಷಲ್ಲಿ ರೇನ್ ಬೋ…..
ಎಲ್ಲವೂ ಒಂದೇ.
ಮಳೆ ಮತ್ತು ಬಿಸಿಲಿನ
ಬಣ್ಣದಾಟವಿದು.
–ಅಜಯ್ ಅಂಗಡಿ
ಹೆಮ್ಗೆಂಪು ಮಳೆ
ರಾತ್ರಿ ಪೂರ್ತಿ ಮಳೆ ಅಳುತ್ತಿತ್ತು
ಘನಘೋರ ಸದ್ದಿನೊಂದಿಗೆ ಬಂದ ಮಳೆ
ಪಟ್ಟು ಬಿಡದೆ ಕಣ್ಣೀರು ಸುರಿಸುತ್ತಿತ್ತು!
ಈ ಮಳೆಯೂ ಗಿಬ್ರಾನ್ ಕವಿಯ ದೂರದ ಲೆಬನಾನ್ ನಿಂದಲೂ-
ಗಾಜಾದಿಂದಲೂ ಬಂದು ನೇರವಾಗಿ
ಮಣಿಪುರ ತಲುಪಿತ್ತು!
ಹಿಂದೆ ನಾನು ಚಿಕ್ಕವನಾಗಿದ್ದಾಗ
ಕಾರ್ಗಿಲ್ ನಿಂದಲೂ ಈ ಮಳೆ ಬಂದಿತ್ತು.
ನಾನಾಗ ಇಸ್ಕೂಲಿನಿಂದ ಮನೆಗೆ ಹೋಗುವಾಗ ಈ
ಮಳೆಯನು ನೆನೆ ನೆನೆದು ಹೋಗಿದ್ದೆ.
ನನ್ನ ಎಳೆ ಹೃದಯ ನೊಂದು ಹೋಗಿತ್ತು.
ಈ ದುಃಖದ ನೆನಪಲ್ಲೇ ಮೂರು ಬಾರಿ ಅನುತ್ತೀರ್ಣನಾದುದು
ಯಾರಿಗೂ ತಿಳಿಯಲೇ ಇಲ್ಲ!
ಈಗ ಮತ್ತೆ ಅದೇ ಮಳೆ ಬಂದಿದೆ.
ಈ ಮಳೆಯ ಆಕ್ರಂದನ ಘೋರವಾಗಿದೆ.
ಹಸುಗೂಸುಗಳು ಕಣ್ಣರಳಿಸುವ ಮುನ್ನವೇ
ಮಣ್ಣುಪಾಲಾಗಿವೆ.
ಭೂಮ್ತಾಯಿಯ ಮಡಿಲು ಸೇರಿದ ಚೇತನಗಳ ಕೇಕೆ ಶಾಶ್ವತ ಮೌನವಾಗಿದೆ.
ಈ ಕರಾಳ ರಾತ್ರಿಯಲಿ
ರಕ್ತದ ಹನಿಗಳು-
ಮಾಂಸದ ಮುದ್ದೆಗಳು ನೆಲಕ್ಕಪ್ಪಳಿಸಿದ ರಭಸಕ್ಕೆ ಕಲ್ಲುಗಳೆದ್ದು ಹೆಮ್ಗೆಂಪಾಗಿವೆ-
ನೀಲಿ ಸಾಗರವೀಗ ಕಡುಕೆಂಪಾಗಿ ಹೋಗಿದೆ!
ಆ ಅಲ್ಲಿ ತಾಯಿಯೊಬ್ಬಳು
ತುಂಬಿದ್ದ ತನ್ನೆದೆಯ್ಹಾಲುಣಿಸಲು
ತನ್ನ ಮಗುವನ್ನು ಹುಡುಕುತ್ತಾ ಒದ್ದಾಡುತ್ತಿದ್ದಳು.
ಹರ್ಷದಿಂದ ಹಾಲುಣಬೇಕಿದ್ದ ಹಸುಗೂಸು ನೂರು ಚೂರಾಗಿ ಬಿದ್ದಿತ್ತು.
ಓ ದುಃಖವೇ,
ನಿನ್ನೆಯಿಂದಲೂ ಒಂದೇ ಸಮನೇ
ಹಾಳೂರಗನಿ ಹೋಗಿ ಗೋಳೂರಿಗನಿ ಬಾ ಎಂದೆನ್ನೆದೆ
ಒಸರುತ್ತಿದ್ದ ಅರ್ಥಮಾನ ತಿಳಿಯದೇ ಹೋಯಿತು!
ಮಳೆ ನಿಂತಿರಲಿಲ್ಲ-
ಬೆಳಗಾಗುವುದನ್ನೇ ಕಾಯುತ್ತಿದ್ದೆ.
ಗಾಬರಿಯಿಂದಲೂ, ಆತಂಕದಿಂದಲೂ ತೋಯ್ದು ಹೋಗಿದ್ದ ನನ್ನ ಮನಸ್ಸು ಗ್ರಂಥಾಲಯದೊಳಗೆ ಓಡಿ ಹೋದೆ.
ದಿನ ಪತ್ರಿಕೆಯನು ಬೆರಳ ತುದಿಯಿಂದ ತಿವಿಯುತ್ತಿದ್ದೆ.
ನಾಲ್ಕನೇ ಪುಟದ ತಲೆಬರಹ ಹುಲಿ ಉಗುರು ಎಂದಿತ್ತು;
ಕಣ್ಣಾಡಿಸಿದೆ.
ಹುಲಿ ಉಗುರನ್ನು ಧರಿಸಿದವರನ್ನು ಬಿಡುಗಡೆಗೊಳಿಸಲಾಗಿದೆ.
ಕಡವೆ(ಜಿಂಕೆ) ಭೇಟಿಗೆಂದು ಹೋಗಿದ್ದ ಭೀಮನಬೀಡು ಮನುವನ್ನು ಫಾರೆಸ್ಟಿನವರು ಬಂಡೀಪುರದಲ್ಲಿ ಕೊಂದಿದ್ದಾರೆ ಎಂಬ ಸುದ್ದಿ ಇತ್ತು!
ಒಂದು ಧೀರ್ಘ ಉಸಿರೆಳೆದುಕೊಂಡ ಸಂಕಟದ ನೋಟ ಗ್ರಂಥಾಲಯದ ಗಾಜಿನ ಕಿಟಿಕಿಯ ಹೊರ ಹರಿಯಿತು.
ಆ ಹೆಮ್ಗೆಂಪು ಮಳೆ ಇನ್ನೂ ಸುರಿಯುತ್ತಲೇ ಇತ್ತು!
-ಗೋಳೂರ ನಾರಾಯಣಸ್ವಾಮಿ
“ಛೋಟಾ ಭಾರತ ಕಥಾ!”
ಧೃತರಾಷ್ಟ್ರನ ಸ್ವಾರ್ಥ
ಶಕುನಿ ಆಡಿಸಿದ ದ್ಯೂತ
ಧರ್ಮರಾಯ ತನ್ನದೆಲ್ಲವ ಸೋತ
ತಾತಾ ಮಾಡಿದ ಪ್ರಯತ್ನವೆಲ್ಲ ವ್ಯರ್ಥ
ಶ್ರೀಕೃಷ್ಣ ಬೋಧಿಸಿದ ಗೀತ
ಸಮರಕ್ಕೆ ಮನಸು ಮಾಡಿದ ಪಾರ್ಥ
ಅಚ್ಯುತ ಧರ್ಮದ ಜೊತೆಗೆ ನಿಂತ
ಸಮರ ನಡೆಯಿತು ಹದಿನೆಂಟು ದಿನಗಳು ಸತತ
ಅಧರ್ಮ ಕಂಡಿತು ಅಂತ
ಧರ್ಮದ ನಾಗಾಲೋಟ ಗೆಲುವಿನತ್ತ
ಇದೇ ಅನಂತನ ಲೀಲಾಮೃತ
ಮಹಾಭಾರತ ಕಥ!
-ರೂಪ ಮಂಜುನಾಥ
ನಮ್ಮ ಕವಿಗಳ ಕವಿತೆ
ನಮ್ಮ ಕವಿಗಳ ಕವಿತೆ
ಹಸಿದವನ ಹೊಟ್ಟೆ ತುಂಬಸಿಲ್ಲಿಲ್ಲ
ಕಲ್ಲು ಹೊತ್ತವನ ಕಣ್ಣೀರು ಒರೆಸಲಿಲ್ಲ
ಬತ್ತ ಬೆಳೆದವನ ಬದುಕು ಹಸನಾಗಿಸಲಿಲ್ಲ
ಗುಡಿಸಿಲಿನಲ್ಲಿರುವನ ಸಂಕಟ ಗುರುತಿಸಲಿಲ್ಲ
ಆದರೂ ನಮ್ಮ ಕವಿಗಳ ಕವಿತೆ ಯಾವುದರ ಖುಷಿಗೆ
ಹುಟ್ಟಿತೋ ನನಗೆ ತಿಳಿಲಿಲ್ಲ
ನಮ್ಮ ಕವಿಗಳ ಕವಿತೆ
ಸುಂದರಿಯ ಸೌಂದರ್ಯ ವರ್ಣಿಸಿತ್ತು
ಅತ್ಯಾಚಾರಕ್ಕೊಳಗಾದ ಬಾಲಕಿಯ ಮರಿತಿತ್ತು
ನಮ್ಮ ಕವಿಗಳ ಕವಿತೆ
ದೇವ್ರು ದಿಂಡ್ರುಗಳಿಗೆ ಪೂಜೆ ಸಲ್ಲಿಸಿತ್ತು
ಶೋಷಿತನ ಮರೆತು ಶೋಷಿಸಿದವನ ಸಮರ್ಥಸಿಕೊಂಡಿತ್ತು
ಆದರೂ ನಮ್ಮ ಕವಿಗಳ ಕವಿತೆ ನ್ಯಾಯ ಮರೆತು
ಅನ್ಯಾಯದ ದಾರಿಯಲ್ಲಿರೋದ್ಯಾಕೆ ಅರ್ಥವಾಗ್ಲಿಲ್ಲ
ನಮ್ಮ ಕವಿಗಳ ಕವಿತೆ
ಪ್ರಜೆಗಳ ಹಿತಾಸಕ್ತಿನ ಕೊಂದು
ರಾಜಕೀಯ ನಾಯಕನ ಹಾಡಿ ಹೊಗಳಿತ್ತು
ಸೌಕರ್ಯ ವಂಚಿತ ಮನುಷ್ಯನ ಮರೆತು
ಪಕ್ಷಗಳ ಪರ ಬ್ಯಾಟಿಂಗ್ ಮಾಡಿತ್ತು
ಬಡವನ ಕಂಡು ಹೀಯಾಳಿಸಿ
ಶೋಷಿಸುವ ಸಿರಿವಂತನ ಬೂಟು ನೆಕ್ಕಿತ್ತು
ಆದರೂ ನಮ್ಮ ಕವಿಗಳ ಕವಿತೆ ದೊಡ್ಡ, ದೊಡ್ಡ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತ್ತು
ಆದರೂ ನಮ್ಮ ಕವಿಗಳು ಕವಿತೆ ಅಂತದೇನು?
ಸಾಧಿಸಿದೆ ಅಂತ ನನಗೆ ಗೊತ್ತಾಗ್ಲಿಲ್ಲ
-ಜಿ.ಎಸ್.ಶರಣು
ಒಡಕು ಬಿಂಬ
ಕುಟುಂಬ ವತ್ಸಲ ಶ್ರೀರಾಮಚಂದ್ರನ ಭಾವಚಿತ್ರ
ರ‍್ಧಾಂಗಿ ಸೀತೆ, ಅನುಜ ಲಕ್ಷ್ಮಣ, ನಂಬುಗೆಯ ಆಂಜನೇಯ
ಪರಸ್ಪರ ಆಸರೆಯ ಮಧುರ ಬಂಧ
ಶ್ರೀರಾಮ ವಿಚ್ಛೇದಕ್ಕೊಳಗಾದ
ಹೆದೆಯೇರಿಸಿ ಅಗಮ್ಯದ ಕಡೆಗೆ ದಿಟ್ಟಿ ನೆಟ್ಟ
ತೂಣಿರದಿಂದ ಅನವಶ್ಯ ಹೊರ ತೆಗೆದ ರಾಮಬಾಣ
ಟುಸ್ಸೆಂದಿತು!
ಮಂಡಿಯೂರಿದ್ದ ಪರವಶ ಹನುಮಂತ
ನೆದೆಗೆ ಕೊಳ್ಳಿ ಇಟ್ಟರು
ಪರಕೀಯನಂತೆ ಹಲ್ಲು ಕಿರಿದು ಕೆಕ್ಕರಸಿ
ಆಟೋ, ಕಾರು, ಬೈಕುಗಳಲ್ಲಿ ಜೋತಾಡಿ
ಬೀದಿಪಾಲಾದ!
ಬಾಡಿಹೋದಳು ಕಾಡುಪಾಲಾದ ಸೀತೆ
ಮೈದುನ ಏಕಾಂಗಿ
“ಓ ಲಕ್ಷ್ಮಣಾ” “ಓ ಲಕ್ಷ್ಮಣಾ” ಕರೆಗೆ ಕಾತರಿಸಿ
ಕಾಯುತ್ತಿರುವನು
ಮರೆತ ಮಂದಹಾಸ ನೆನೆಯುತ್ತಾ
ರಾಮ ಸಿಗುವನೆಂದು
ಮತ್ತೆ ಆ ದಿನ ಬರುವುದೆಂದು!
-ಎಂ ನಾಗರಾಜ ಶೆಟ್ಟಿ
ನನಗಾಗಿದ್ದು….
ಮಣ್ಣಲ್ಲೆ ಹುಟ್ಟಿ ಮಣ್ಣ ತಿಂದು
ಮಣ್ಣಾಗುವ ಎರೆಹುಳದ
ಹೊಟ್ಟೆಯಲ್ಲಿ ಹುಟ್ಟುವ ಬಯಕೆ
ನನಗಾಯಿತು ತಾಯಿ…..
ನೆಲವು ತನ್ನ ಹುಬ್ಬು ಏರಿಸುವ ಎದುರು
ನಾನು ನನ್ನ ಮೀಸೆಯ ಮೆರೆಸುವ ಹಂಗಾಮಿ ಸ್ವಾತಂತ್ರ್ಯಕ್ಕೆ
ಕತ್ತರಿ ಹಾಕಿದೆನು ಪ್ರಭೂ…
ಅಡಿಯಿಂದ ಆಕಾಶಕ್ಕೆ ಬೆಳೆದ
ಹನುಮಂತನ ಬಾಲ ನೋಡಿದ ನಾನು
ಪರರ ಪರಚುವಂತೆ ಬೆಳೆದ
ನನ್ನ ಮೋಸ ಮತ್ತು ಮೋಹದ
ಉಗುರನ್ನು ಚಿವುಟಿಕೊಂಡೆನು ಗುರುವೆ…
ಹೂವು ಮತ್ತು ದುಂಬಿಯ ಅಕ್ಕರೆ
ನಿನ್ನ ಮತ್ತು ನನ್ನ ಹೃದಯಕ್ಕೆ ಇರದೆ
ಇದ್ದುದರಿಂದ ಇನ್ನೊಂದು
ಹೃದಯದ ಕೊಲೆ ಮಾಡಿದೆನು ಸ್ವಾಮಿ….
ನೀರು ಗಂಟಲಿಂದ
ಹೊಟ್ಟೆಗೆ ಇಳಿಯುವಂತೆ
ನಾನೂ ನಿನ್ನೊಳಗಿಳಿಯುವ
ಧ್ಯಾನ ಈಗ ಸ್ಥಾಪನೆಯಾಯಿತು ಗೆಳೆಯಾ….
-ಸತೀಶ ಜೆ ಚಿಕ್ಕಜಾಜೂರು(ಸಜಲ)
ಅಮೃತದ ಗೊಂಬೆ
ಕರುನಾಡ ತಬ್ಬಿದೆ ಕನ್ನಡದ ಅಪ್ಪುಗೆ
ಕೈಯಿಡಿದು ಮುಂದೆ ನಡೆಸುವ ದೀವಿಗೆ |
ನಗುತಾ ಸಂತಸವ ನೀಡುವಳು ಕನ್ನಡಾಂಬೆ
ನಾಲಿಗೆಯಲಿ ನರ್ತಿಸುವ ಅಮೃತದ ಗೊಂಬೆ |
|| ಕರುನಾಡ ತಬ್ಬಿದೆ ||
ಎರಡು ಸಾವಿರ ವರುಷದ ಇತಿಹಾಸ
ಮಾತನಾಡಿದರೆ ಮೊಗದಲಿ ಮಂದಹಾಸ |
ಅರಳುತಿದೆ ಕಲ್ಲೆದೆ ಕನ್ನಡದ ನುಡಿಗೆ
ಹರಿಯುತಿದೆ ಎಲ್ಲೆಡೆ ಕರುನಾಡ ಗಂಗೆ |
ಅಷ್ಟ ಐಶ್ವರ್ಯ; ನಮ್ಮ ಭಾಷೆ ಸೌಂದರ್ಯ
ಮೂರು ಮುತ್ತುಗಳ ಜೊತೆಗೊಂದು ಮುತ್ತು
ಸಾಗರದಾಚೆಗೆ ಹರಡಿದೆ ಕನ್ನಡದ ಸಂಪತ್ತು |
|| ಕರುನಾಡ ತಬ್ಬಿದೆ ||
ಮಸ್ತಕದ ಮಡಿಲ ತುಂಬಿ ಕಳುಹಿಸಿದಳು ತಾಯಿ
ಪುಸ್ತಕಲ್ಲಿ ಇವಳು ಎಂದೆಂದು ಅಳಿಸದ ಶಾಯಿ |
ಬನ್ನಿ ಏಳೆಯೋಣ ಕನ್ನಡಾಂಬೆಯ ತೇರು
ಹೃದಯದಲಿ ಇಳಿಯಲಿ ಅಕ್ಷರಗಳ ಬೇರು |
ಎಲ್ಲೆಲ್ಲೂ ಹರಡಲಿ ಬೆಳೆಯಲಿ ಕನ್ನಡಮಯವಾಗಲಿ
ತೊಂದರೆಯಾದರೆ ನಾನಿಲ್ಲಿ ಘರ್ಜಿಸುವ ಹುಲಿ |
|| ಕರುನಾಡ ತಬ್ಬಿದೆ ||
-ಸಂಕಲ್ಪ