“ಸಿದ್ಧಾಂತಗಳ ಹೇಗೆ ಕೊಲ್ಲುವೆ..?” ಅವಲೋಕನ: ವಿಮಲಾರುಣ ಪಡ್ಡಂಬೈಲ್

ಆನ್ಲೈನ್ ಸಂಗಾತಿ ಪತ್ರಿಕೆಯ ಸಂಪಾದಕರಾದ ಕವಿ ಶ್ರೀ ಕು. ಸ. ಮಧುಸೂದನ ರಂಗೇನಹಳ್ಳಿಯವರ “ಸಿದ್ಧಾಂತಗಳ ಹೇಗೆ ಕೊಲ್ಲುವೆ..?” 50 ಕವಿತೆಗಳ ಗುಚ್ಛದಲ್ಲಿ ಸಮಾಜದ ಸೂಕ್ಷ್ಮತೆಯ ಪಿಸುಮಾತುಗಳು ಮಾರ್ದನಿಸುತ್ತವೆ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಇವರ ಕವನಗಳು ಇತರ ಕವಿಗಳ ಕವನಗಳಿಗಿಂತ ಭಿನ್ನವಾಗಿವೆ. ವಾಚ್ಯತೆ ಇದ್ದರೂ ಹರಿತ ಪದಗಳು ಕವನಗಳಲ್ಲಿ ತಿವಿದಂತೆ ಭಾಸವಾಗುತ್ತವೆ. ಬಿಡಿ ಬಿಡಿ ಕವನಗಳನ್ನು ಓದುತ್ತಿದ್ದ ನನಗೆ ಇಡಿಯಾಗಿ ಓದುವ ಅವಕಾಶಕ್ಕಾಗಿ ಸಂತೋಷ ಪಡುತ್ತೇನೆ. ನನ್ನ ಮನದ ಬಾಗಿಲನ್ನು ತಟ್ಟಿದ ಈ ಕವನ ಸಂಕಲನ ಕಾವ್ಯದ ಅರಿವನ್ನು ದುಪ್ಪಟ್ಟು ಮಾಡಿತು.

ಇವರು ತಮ್ಮ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ಪರಿಸರ, ದೇಶಭಕ್ತಿ, ಕವಿತೆ, ಸಂಘರ್ಷ ಹೀಗೆ ಸಮಾಜದ ಹಲವು ಮುಖಗಳ ಪರಿಚಯವನ್ನು ಕಣ್ಣಮುಂದೆ ರಾಚುವಂತೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಹಲವು ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ದನಿಯಾಗಿದ್ದಾರೆ. ಹಾಗೆಯೇ ಹಲವು ಕವಿತೆಗಳಲ್ಲಿ ಯಾರಿಗೂ ನೋವಾಗದಂತೆ ತಣ್ಣನೆಯ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
‘ಇದು ಮಾತ್ರ ನಿಜ!’ ಈ ಕವನದಲ್ಲಿ ಪ್ರೀತಿ ಮತ್ತು ಮುನಿಸು ಎರಡೂ ಬಿಂಬಿತವಾಗಿದೆ. ಒಬ್ಬರನ್ನೊಬ್ಬರು ಪ್ರತ್ಯಾರೋಪವನ್ನು ಮಾಡಿಕೊಂಡು ಬೆನ್ನು ತಿರುಗಿಸಿ ನಡೆದದ್ದು ಓದುಗರ ತುಟಿಯಲ್ಲಿ ಹೂ ನಗೆಯನ್ನು ಅರಳಿಸುತ್ತದೆ. ‘ತಬ್ಬಲಿ ಕವಿತೆ ‘ ಎರಡು ಸಾಲಿಗಾಗಿ ಅಂಗಲಾಚುವ ಈ ಕವಿತೆ ಪದಗಳ ಅಪ್ಪುಗೆಗಾಗಿ ಕಾಯುತ್ತಿದೆ. ಕಳೆದುಕೊಂಡದ್ದನ್ನು ಪಡೆಯುವ ಕಾತರತೆ ಎದ್ದು ಕಾಣುತ್ತದೆ. ‘ಕಷ್ಟಕಾಲದಲೊಂದು ಗಪದ್ಯ’ ಈ ಕವನದಲ್ಲಿ ಸತ್ಯ ಮಿಥ್ಯ, ಕಷ್ಟ ಸುಖ,ಸಮಾನತೆ- ಅಸಮಾನತೆ, ಹಾಗೆಯೇ ಒಬ್ಬ ಬಡವ ತನ್ನ ಕಷ್ಟವನ್ನು ಹೇಳಿಕೊಳ್ಳುವುದಕಿಂತ ಶ್ರೀಮಂತನ ವೈಭೋಗವನ್ನು ವರ್ಣಿಸುವುದರಲ್ಲಿ ಮಗ್ನನಾಗುವ ಪರಿ, ಅಂತೆಯೇ ಬದಲಿಸಿ ಬಿಡುತ್ತೇನೆಂದು ಹೊರಟವನು ತಾನೇ ಬದಲಾಗಿ ಬಿಡುವುದು, ದುರ್ಬಲರಿಗೆ ಶಕ್ತಿ ತುಂಬುತ್ತೇನೆಂದು ತಾನೇ ಬಲಿಷ್ಟನಾಗುವುದು ಹೀಗೆ ಸಮಾಜದ ಕೊಂಕುಗಳನ್ನು ಈ ಕವನವು ಎತ್ತಿತೋರಿಸುತ್ತದೆ.


‘ಹೀಗೊಬ್ಬ ಕವಿಯ ಪತ್ರಗಳು ‘ ಬಂಧುಗಳಿಲ್ಲದ ಆ ಕವಿಯ ಉಸಿರು ಅಂತ್ಯವಾದಾಗ ಅಂತ್ಯಕ್ರಿಯೆಗೆ ಸೌದೆಗಾಗಿ ನಗರಸಭೆಯವರು ಪರಿತಪಿಸಬೇಕಿರಲಿಲ್ಲ. ಅವನು ತನ್ನ ಪ್ರಿಯತಮೆಗೆ ಬರೆದ ಪತ್ರಗಳು ಒಂದನ್ನು ಅಂಚೆಗೆ ಹಾಕದೆ ಅವನಲ್ಲಿಯೆ ಉಳಿದು ಕೊನೆಗಾಲದಲ್ಲಿ ಆ ಪತ್ರಗಳೇ ಅವನನ್ನು ಸುಟ್ಟು ಬೂದಿ ಮಾಡಿದವು. ಇನ್ನೊಂದು ಊರಿನಲ್ಲಿ ಅವಳು ನಿತ್ಯವೂ ಪತ್ರಕ್ಕಾಗಿ ಕಾಯುವುದು, ಇದು ಓದುಗರಿಗೆ ಖೇದವೆನ್ನಿಸುತ್ತದೆ. ಪ್ರಶ್ನೆಯಾಗಿ ಉಳಿಯುತ್ತದೆ.
ಈ ಸಂಕಲನದ ಶೀರ್ಷಿಕೆಯನ್ನು ಹೊತ್ತಿರುವ “ಸಿದ್ಧಾಂತಗಳ ಹೇಗೆ ಕೊಲ್ಲುವೆ” ಕವನವು ಅನ್ಯಾಯ ಮಾಡುವವನೇ ಒಡೆಯನಾಗುತ್ತಾನೆ ಎನ್ನುವ ಸಂದೇಶ ಕೊಡುವುದಲ್ಲದೆ ಒಬ್ಬನಿಗೆ ಕೆಡುಕನ್ನು ಮಾಡಿ ಅವನನ್ನು ಸಂತೈಸಲು ಕೆಡಕು ಮಾಡಿದವನೇ ಮುಂದಾಗುತ್ತಾನೆ ಎನ್ನುವ ಸತ್ಯವನ್ನು ಕವಿ ನಮ್ಮ ಮುಂದಿಟ್ಟಿದ್ದಾರೆ.

“ದೀಪ ಹಚ್ಚಲು ಹೋಗಿ ಮನೆಯನ್ನೇ ಸುಟ್ಟೆವು
ಉಳಿದ ಬೂದಿಯೊಳಡಗಿದ ಕೆಂಡದಲ್ಲಿ ಅವರು
ಅನ್ನ ಬೇಯಿಸಿಕೊಂಡರು.”

‘ನೀಲಿ ಚೂರು ‘ ಪ್ರಕೃತಿಯ ಸೊಬಗನ್ನು ಹೃದಯದಲ್ಲಿ ಕಾಪಿಡುವಂತೆ ಪ್ರೀತಿಯನ್ನು ಎದೆಗೂಡಲ್ಲಿ ಕಟ್ಟಿಕೊಳ್ಳಬೇಕು. ಅದಕ್ಕಾಗಿ ಭಿಕ್ಷೆ ಬೇಡುವುದಲ್ಲ. ಪ್ರೀತಿ ಕೊಟ್ಟಷ್ಟು ಹೆಚ್ಚಾಗುತ್ತದೆ. ಅಂತಹ ಪ್ರೀತಿ ನಮ್ಮೊಳಗೆ ಲೀನವಾಗಿರಬೇಕು. ಆಗ ಮಾತ್ರ ಭಯ ಮತ್ತು ಆತಂಕದಿಂದ ವಿಮುಕ್ತರಾಗಬಹುದು.
‘ಸ್ರಾವ ಸ್ಖಲನಗಳ ಹಂಗಿರದೆ’ ಅಗಲಿದ ಪ್ರೇಮಿಗಳು ಕೊನೆಯ ಗಳಿಗೆಯಲ್ಲಿ ತಮ್ಮ ಹಿಂದಿನ ಹೆಜ್ಜೆಗಳನ್ನು ಮರೆತು ಇನ್ನಾದರೂ ಮಾತಾಡೋಣವೆಂದು ಕಷ್ಟ ಸುಖಗಳ ಮಾತಾಡುವ ಪರಿ ಆ ಒಲವಿನ ಪಾವಿತ್ರ್ಯತೆಯನ್ನು ಬಿಂಬಿಸುತ್ತದೆ.

‘ನಿನಗಿಷ್ಟ ಬಂದಾಗ’ ಈ ಕವಿತೆಯ ಸಾಲು
‘ಬಿರುಕು ಬಿಟ್ಟ ಗೋಡೆಗಳ ನಡುವೆಯೂ ಮೊಳೆತು
ಬಳ್ಳಿಯಾಗಲು ಕನವರಿಸುತ್ತಿಹ
ಹಸಿರು ಜೀವದ ತವಕದ ಹಿಂದಿರುವುದು
ಬದುಕಿನ ಬಯಕೆಯೇ ಹೊರತು
ಸಾವಿನ ಕನವರಿಕೆಯಲ್ಲ’.

ಉತ್ತಮ ಸಾಲುಗಳಿವು. ಈ ಕವನದಲ್ಲಿ ಕವಿ ಮೌನ ಮುರಿದು ಮಾತಾಡಲು ನಿವೇದಿಸಿಕೊಳ್ಳುತ್ತಾರೆ.
‘ನರಕದ ಭಯ ‘ ಕವನದಲ್ಲಿ ವಿಧ ವಿಧವಾದ ನರಕಗಳು ಹಾದು ಹೋಗುತ್ತವೆ. ನರಕಕ್ಕಿಂತ ಹೆಚ್ಚಾಗಿ ಕಾಡುವ ಕಾಣುವ ಪ್ರಪಂಚವೊಂದಿದೆ ಎಂಬ ಹರಿತವಾದ ಹೆಜ್ಜೆ ಇಲ್ಲಿ ಕಾಣಸಿಗುತ್ತದೆ. ‘ಒಳಗಿನ ದ್ರೋಹಿಗಳು ‘ ಕವಿತೆ ದ್ರೋಹಿಗಳಿಗೆ ಪಾಠ ಹೇಳಿದಂತೆ ಇದೆ. ಗಡಿಯಾಚೆ ಕಣ್ಣು ನೆಟ್ಟು ಕೂತಿರುತ್ತೇವೆ. ಸೈನಿಕರ ಬಲಿ ಕೊಡುತ್ತೇವೆ. ಆದರೆ ನಮ್ಮ ಜೊತೆಯಲ್ಲಿಯೇ ಇರುವ ದ್ರೋಹಿಗಳ ಬಗ್ಗೆ ಚಿಂತಿಸುವುದಿಲ್ಲ ಮತ್ತು ಗುರುತಿಸುವುದಿಲ್ಲ. ಸಮಾನತೆಯ ಬಗ್ಗೆ ಮಾತಾಡುತ್ತಲೇ ದುರ್ಬಲರನ್ನು ತುಳಿಯುತ್ತಾರೆ. ಸಿದ್ಧಾಂತಗಳ ಬಗ್ಗೆ ಮಾತಾಡುತ್ತಲೇ ನೀತಿ ಬಿಟ್ಟಿರುತ್ತಾರೆ. ಇಂತಹ ಮಾತುಗಳೊಂದಿಗೆ ಎಚ್ಚರಿಕೆಯ ಸಂದೇಶ ನೀಡುತ್ತಾರೆ.

‘ಕಾಪಾಡಿಕೊಳ್ಳುವ ಕಷ್ಟ’ ಕಷ್ಟ ಬಂದಾಗಿನ ಸಂಕಟದ ಆಳ ಕವಿವಾಣಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ಇಲ್ಲಿ ಬಿಳಿ ಬಟ್ಟೆಯ ಕಲೆಯ ಪ್ರತಿಮೆ ಇದೆ. ಬಿಳಿ ಬಟ್ಟೆ ಕಲೆಯಾಗದಂತೆ ಕಾಪಾಡಿಕೊಳ್ಳುವುದು ಎಷ್ಟು ಕಷ್ಟವೋ ಹಾಗೆಯೇ ಕಷ್ಟಗಳನ್ನು ಪರಿಹರಿಸಲು ಬಹಳ ಶ್ರಮಿಸಬೇಕಾಗುತ್ತದೆ.
‘ಅದೆಲ್ಲಿಂದ ಬಂದುಬಿಟ್ಟೆ ನೀನು
ಅಮಂಗಳಕರವಾದ ಕನಸೊಂದು
ಮುಂಜಾನೆಯೊಳಗೆ ನನಸಾಗಿ ಬಿಡುವಂತೆ’
ಕಷ್ಟ ಕನಸಲ್ಲಿಯು ಬೆಚ್ಚಿ ಬೀಳಿಸುತ್ತದೆ.

ಮತ್ತೆಂದೂ ಭೇಟಿಯಾಗಲಿಲ್ಲ’ ಈ ಕವನದಲ್ಲಿ ಪ್ರಸ್ತುತಪಡಿಸುವ ವಿಚಾರಗಳನ್ನು ಕೆಲವು ಬಾರಿ ಹೇಳದೆ ಮನದೊಳಗೆ ಅಡಗಿಸುವ ಹೃದಯಗಳಿಗೆ ಪಿಸು ಮಾತು, ಹೌದು ಹಲವು ಕನಸು, ಬೆಚ್ಚನೆಯ ಮಾತು, ಕೆಲವೊಮ್ಮೆ ಹೇಗೆ ಹೇಳುವುದೆಂದು ಆಹವಾಲುಗಳು ಸುಳಿದಾಗ ಆ ವಾಣಿ ಮೌನವಾಗಿ ಕತ್ತಲಲ್ಲಿ ಉಳಿಯುತ್ತವೆ. ಬೇರೆ ಮಾತುಗಳಿಗೆ ಸೊಪ್ಪು ಹಾಕುತ್ತಾ ನುಡಿಯ ಬೇಕೆನ್ನುವ ಮಾತುಗಳ ಭಾರ ಹೊತ್ತುಕೊಂಡು ವೇದನೆಯಲ್ಲಿ ಮರಳುವ ಹೃದಯಕೆ ಪಾಠದಂತಿದೆ . ಮತ್ತೆಂದೂ ಭೇಟಿಯಾಗಲು ಮನಸ್ಸು ಮಾಡುವುದಿಲ್ಲ. ಈ ಕವನದಲ್ಲಿ ಯುವ ಮತ್ತು ಮಧ್ಯವಯಸ್ಸಿನ ಭಾವಗಳು ಒಂದೇ, ಅಳಲು ಒಂದೇ ಎಂದು ತಿಳಿಯುತ್ತದೆ. ‘ಅನಾಮಧೇಯ ಪ್ರೇಮ’ ಈ ಕವನವು ಪ್ರೇಮದ ಗಟ್ಟಿತನವನ್ನು ಸೂಚಿಸುತ್ತದೆ. ‘ದೇಶಭಕ್ತ’ ಕವನವು ರೈತರ ಕಾಯಕದ ಮಹತ್ವವನ್ನು ಸಾರುತ್ತದೆ. ದೇಶ ಭಕ್ತಿಯ ನಿಜವಾದ ಅರಿವಿಲ್ಲದಿದ್ದರೂ, ದೇಶದ್ರೋಹದ ಶಬ್ದವು ಕೇಳದವರಾಗಿದ್ದರು. ಮುಗ್ಧ ಮತ್ತು ನಿಷ್ಕಲ್ಮಶ ಮನಸ್ಸಿನ ಭಾವ ಇಲ್ಲಿ ಎದ್ದು ಕಾಣುತ್ತದೆ. ‘ಕೊಳೆತುಹೋದ ಪ್ರೇಮದೊಳಗೆ’ ‘ಅಲೆಮಾರಿ ಕಾಲುಗಳು’ ‘ತಬ್ಬಲಿ ನಾಯಿ’ ‘ಪ್ರೀತಿಸುವುದು ಹೇಗೆ ‘ ಈ ಕವನಗಳು ಬದುಕಿನ ವಾಸ್ತವತೆಯನ್ನು ಬಿಚ್ಚಿಟ್ಟಿವೆ.

ಒಟ್ಟಿನಲ್ಲಿ ಕವಿ ಹೃದಯ ಯಾವುದಕ್ಕೂ ಅಳುಕದೆ ಸಮಾಜದ ಘಟನೆಗಳಿಗೆ ಲೇಖನಿಯಲ್ಲಿ ಉತ್ತರಿಸಿದೆ. ಹಲವು ಕವನಗಳು ಪ್ರಾಸಬದ್ಧವಾಗಿ ಹಾಡುವ ನಿಟ್ಟಿನಲ್ಲಿಲ್ಲದಿದ್ದರೂ ಕವಿ ಹೃದಯ ಬಯಸುತ್ತಿರುವುದು ತಮ್ಮ ಬೆಚ್ಚನೆಯ ತಾವನ್ನು ಅಕ್ಷರದಲ್ಲಿ ಇಳಿಸಿ ಸಮಾಜಕ್ಕೆ ಕನ್ನಡಿಯಾಗಿಸುವುದನ್ನು. ಕವಿತೆಯನ್ನು ಕಟ್ಟಬೇಕೆಂಬ ನಿಟ್ಟಿನಲ್ಲಿ ಈ ಕವಿತೆಗಳಿಲ್ಲ. ಹೃದಯದಿಂದ ಬಂದ ಪದಗಳಿಗೆ ಮಾಲೆ ಕಟ್ಟಿ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕೆಲವು ಕವಿತೆಗಳು ಮೊದಲ ಓದಿಗೇ ಅರ್ಥವಾಗುವುದಿಲ್ಲ. ಮತ್ತೆ ಮತ್ತೆ ಓದುವುದರಿಂದ ತನ್ನ ಅರ್ಥವನ್ನು ತೆರೆದುಕೊಳ್ಳುತ್ತವೆ. ಗಂಧ ಮತ್ತು ಕಲ್ಲಿನ ಸಂಘರ್ಷದ ನಡುವೆ ಸುಹಾಸನೆ ಚೆಲ್ಲಿದಂತೆ ಕವನಗಳು ಮೂಡಿ ಬಂದಿವೆ. ಹೀಗೆಯೇ ಇನ್ನಷ್ಟು ಕೃತಿಗಳು ಕವಿಯ ಲೇಖನಿಯಿಂದ ಮೂಡಿಬರಲಿ. ಸಮಾಜದ ಅಂಕುಡೊಂಕುಗಳು ಸಾಹಿತ್ಯದ ಮುಖಾಂತರ ಪರಿವರ್ತಿತವಾಗಲಿ. ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಒಂದು ಅತ್ಯಮೂಲ್ಯ ಕವನ ಸಂಕಲನವನ್ನು ಪರಿಚಯಿಸಿದಕ್ಕೆ ಕವಿಗೆ ಹೃತ್ಪೂರ್ವಕ ಅಭಿನಂದನೆಗಳು.

ವಿಮಲಾರುಣ ಪಡ್ಡಂಬೈಲ್

ಕೃತಿ: ಸಿದ್ಧಾಂತಗಳ ಹೇಗೆ ಕೊಲ್ಲುವೆ
ಪ್ರಕಾಶನ: ವಿಶ್ವ ಶಕ್ತಿ ಪ್ರಕಾಶನ, ರಾಣಿ ಬೆನ್ನೂರು
ಪುಟ: 86
ಬೆಲೆ: 100 ರೂ
ಪ್ರತಿಗಳಿಗಾಗಿ: 9483261944


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x