(೧)
ಮುಚ್ಚಿ ನಿಮ್ಮ ಒಡಕು ಬಾಯಿ
ಬೆದರಿಬಿಟ್ಟಾನು ಮುಗ್ಧ ಹೃದಯಿ
ಕೆಕ್ಕರಿಸುವ ನೋಟ ಬೂದಿಯಾಗುವ ಕೆಂಡ
ಹೊಂಗನಸಿನ ಮನೆಯ ಕಟ್ಟಲು
ತೊಗಲೊಂದೇ ತೊಟ್ಟಿಲು
ಕತೂಹಲದ ರೆಪ್ಪೆಯಗಲಿಸಿ
ಕಲಿವ ತುಡಿತದೆ ನಗೆಯರಳಿಸಿ
ಕುಳಿತ ಭಂಗಿಯ ನೋಡಿ
ಮೋಡಿ ಮಾಡುವ ತೊದಲು ನುಡಿ
ಭವ್ಯಲೋಕಕೆ ಮುನ್ನುಡಿ
ಎತ್ತೆತ್ತಲೋ ಸಾಗುತಿಹವು ಕನಸುಗಳು
ಥಟ್ಟನೆ ಮೈದಳೆದು ಮುಂದೆ ಕುಳಿತಿವೆ
ಮಂಡಿಯೂರಿ; ಎದೆಯ ಕದವ ತೆರೆತೆರೆದು
ತುಂಬಿ ತುಳುಕಲಿ ಸಿಹಿನುಡಿಯ ಹೊಂದೆರೆ
ಸಾಕಿನ್ನು ಅರೆಬರೆ ಮಾತುಗಳು ಬಿತ್ತಿಬಾರದೇ ನಲ್ನುಡಿ
ಇವನು ಅವನಲ್ಲ ಅವನಂತೆ ಇವನಿಲ್ಲ
ಇವನಂತೆ ಅವನಿಲ್ಲ ಅವರಿವರಂತೆ ಇರಬೇಕಿಲ್ಲ
ಅವನೊಲ್ಲೆನೆಂದದ್ದು ಇವನೇನು ಅರಿಯಬೇಕಿಲ್ಲ
ಚಿಗುರುವ ಬಳ್ಳಿಯಿದು ಪಸರಿಸಲಿ ನವಕಂಪು ತನ್ನೊಡಲಲ್ಲಿ.
(೨)
ಒಂದು ಲೋಟದೊಳಗೆ ಹೃದಯ
ಮತ್ತೊಂದರಲ್ಲಿ ಎದೆಯ ಕಸುವು
ಎರಡೂ ಬೆರೆಸಿ ಪ್ರೀತಿಯೊರತೆ ಉಕ್ಕಿ
ಹರಿಯೇ ತಂದು ಬಿಸುಟಳು ಜೀವನಾಡಿ
ಒಂದು ಹಣತೆ ಉರಿಯುತಲಿದೆ
ಮತ್ತೊಂದು ಸುಡುತಲಿದೆ
ಎರಡೂ ಹಣತೆಗಳ ಕಣ್ಣಿಗೊತ್ತಿ
ಬೆಳಕ ನೀಡಿರೆಂದೆನು ದೃಷ್ಟಿ ಕಿತ್ತು ಕತ್ತಲಾಯಿತು ಬದುಕು
ಒಂದು ಬದುಕು ನಗುತಲಿತ್ತು
ಮತ್ತೊಂದು ನಲಿವಿನಾದಿಯಲ್ಲಿತ್ತು
ಎರಡರ ನಡುವೆ ಬಂದು ನಿಂತಳು ಪೋರಿ
ಚೀರಿತೊಂದು ಬದುಕು ಹಾರಿಹೋದವು ನೆನಪು
ಬೆಂಗಾಡಿನ ಒಂಟಿ ಮರ
ಗಾಳಿ ಕೆಡವದು ಬಿಸಿಲು ಉರಿಯದು
ಜಲವಿಲ್ಲ ನೆರಳಿಲ್ಲ ಸಂಗಾಟ ಯಾರೂ ಇಲ್ಲ
ದಿಕ್ದಿಕ್ಕಲ್ಲೂ ಮೌನದ ಮೆರವಣಿಗೆ
ನನ್ನುಸಿರೇ ನನಗಿಲ್ಲ ಬೆನ್ನೇರಿದೆ ಮರೀಚಿಕೆ
ಮಾಯಾ ಲೋಕದಿಂದ ಯಾರೋ ಕರೆದಂತೆ
ಬೀಸಣಿಕೆಯ ಸದ್ದು ತೂರಿದಂತೆ ಮಣ್ಣರಾಶಿ
ಕಣ್ಣತುಂಬಾ ಕಲ್ಲಾದವು ಕನಸಿನ ರಾಶಿ
(೩)
ಎತ್ತ ಸಾಗುತಿಹೆಯೋ ಮನುಜ
ಮಾರಿಕೊಂಡ ಮನಸಿನಿಂದ ಜಾರಿ ಹೋಯ್ತು ಕನಸು
ಬತ್ತಿದೆದೆಯ ಜೋಳಿಗೆಯಲಿ ಪಿಳಿ ಪಿಳಿ ಹೃದಯದ ಕಣ್ಣಿದೆ ಹಚ್ಚುವವರಿಲ್ಲ ಸೌಹಾರ್ದತೆಯ ಹಣತೆ
ಧರ್ಮವೆಂಬ ಮತ್ತೌಷಧಿ ಕುಡಿಯಲು
ಜಡವಾಯಿತು ಬದುಕು ಅಂತರಾಳದ ಕಣಿವೆಯಲ್ಲಿ
ಎದೆಯ ದನಿ ಕೇಳಿಸದು ಕಗ್ಗತ್ತಲ ಕಂದರದಿಂದ
ಕಂದಕದ ಬಂಧನದಿಂದ ಬಿಡುಗಡೆಯು ಬೇಕಿದೆ
ಪಾತಾಳದ ಆಳದಿಂದ ಕಂದಾಚಾರದ ಪರದೆಯ ಸೀಳುತಾ ಕ್ಷಿಪಣಿಯಂತೆ ನುಗ್ಗಿ ಬಾ ನವ ಸಮಾಜದ ಬಾನಿಗೆ ಬಾಲರವಿಯಾಗಿ ಬೆಳೆದು ಬೆಳಗಲು
ಬೆಳಕು ಮೂಡಬಹುದು ಧೀರನೇ
ಮಣ್ಣನ್ನು ಸೋಸಿ ಕಬ್ಬಿಣದ ಸಲಾಕೆಯ ಹದ ಮಾಡಿದವನಾರೋ ಜಳಪಿಸಿ ಹೊಳಪಿಸಿ ರುಂಡ ಚೆಂಡಾಡುವವನಾರೋ ವಿಷವುಂಡ ರಕ್ಕಸ
ನುಗ್ಗಿ ಬಾ ಧೀಶಕ್ತಿ ಕತ್ತಿಯಲಗಿನ ಹರಿತದಂತೆ
ಜಗ್ಗಲಾರದೋ ಕಬ್ಬಂಡೆ ಬಗ್ಗು ಬಡಿದು ನುಗ್ಗುಬೇಕು
ಉರಿಗೊಂಡ ಬದುಕೀಗ ಸೆಟೆದು ನಿಂತಿದೆ ನೋಡು
ಆಗವರು ಧೂಳಿಪಟ ಈಗಿವರು ಗಾಳಿಪಟ
ಮಣ್ಣಿನೊಡಲ ಮಂತ್ರ ಶಕ್ತಿ ನೀಡಲಿದೇ ನವಯುಕ್ತಿ
–ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ