ಅಂದರ ಇದು ನಮ್ಮ ಪದ್ದಕ್ಕಜ್ಜಿ ಮದುವಿ ಅಲ್ಲ, ಅಕೀ ಮದುವ್ಯಾಗಿ ಐವತ್ತ ಅರವತ್ತ ವರ್ಷಾಗೇದ. ಅಕೀ ಮೊನ್ನೆ ಮೊನ್ನೆ ಮಾಡಿದ ಮೊಮ್ಮಗನ ಮದುವೀ ಕತಿಯಿದು. ಅಷ್ಟ.
ಮೊನ್ನೆ ನಮ್ಮ ಪದ್ದಕ್ಕಜ್ಜಿ ಬಂದಿದ್ದಳು. ಪದ್ದಕ್ಕಜ್ಜಿ ಅಂದರ ಅಕೀ ಏನೂ ಸಾಮಾನ್ಯದಾಕಿ ಅಲ್ಲ. ಒಂದು ಕಾಲದಾಗ, ನಮ್ಮ ಇಡೀ ಬಾಳಂಬೀಡವನ್ನು ಆಳಿದಾಕಿ. ಅಂದರ, ನಿಮ್ಮ ಬಾಳಂಬೀಡ ಅಂದರ ಒಂದು ದೊಡ್ಡ ಸಾಮ್ರಾಜ್ಯವೇನು ಅಂತಲೋ ಅಥವಾ ಪದ್ದಕ್ಕಜ್ಜಿ ತಾಲೂಕು ಮತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೋ ಅಂತ ಪ್ರಶ್ನೆ ಕೇಳ ಬ್ಯಾಡರೀ. ಉತ್ತರಾ ಹೇಳೋ ಅಷ್ಟು ತಾಳ್ಮೆ ನನಗಿಲ್ಲ. ಆದರ ಇಷ್ಟು ಮಾತ್ರ ಖರೇ, ಪದ್ದಕ್ಕಜ್ಜಿ ಸರಿ ಅಂದಿದ್ದಕ್ಕ, ಇಡೀ ಊರೇ ಒಪ್ಪಿಕೋತಿತ್ತು, ಇಲ್ಲಾಂದರ ಇಡೀ ಊರೇ ಇಲ್ಲಾಂತ ಹೇಳತಿತ್ತು. ಸೊಸೆಂದಿರಂತೂ ಪದ್ದಕ್ಕಜ್ಜಿನ್ನ ಮೆಚ್ಚಸಲಿಕ್ಕೆ ಕಾದಿರತಿದ್ದರು. ಹೋಗಲಿ ಬಿಡರೀ, ಇಂತಾ ಪದ್ದಕ್ಕಜ್ಜಿ, ತನ್ನ ಗಂಡ, ನೌಕರೀಯಿಂದ ನಿವೃತ್ತಿ ಆದ ಕೂಡಲೇ ಗಂಡನ ಜೋಡಿ, ಅಮೇರಿಕಾಕ್ಕ ಹಾರಿದ್ದಳು, ಮಗ ಮತ್ತ ಮಗಳು ಅಮೇರಿಕಾದಾಗ ಇದ್ದಾರಂತ ಹೇಳಿ. ಈಗ ಇಪ್ಪತ್ತು ವರ್ಷದ ಮ್ಯಾಲ ಬಂದಾಳ, ಆವಾಗ ಕಚ್ಚಿ ಸೀರಿ ಇದ್ದಾಕೀ, ಈಗ ಗೋಲ ಸೀರಿ, ಬಾಬ್ ಕಟ್ ಕೂದಲನ್ನು ಜುಟ್ಟು ಮಾಡಿಕೊಂಡಾಳ. ಇರಲೀ ಬಿಡರೀ, ಅದಲ್ಲ ವಿಷಯ.
ಅಕೀ ಬಂದಿದ್ದು ಯಾಕಂದರ, ಅಲ್ಲೇ ಹುಟ್ಟಿ ಬೆಳದ ಮೊಮ್ಮಗನಿಗೆ, ಅಮೇರಿಕಾದ ಹುಡುಗಿ ಜೊತೆ ಲಗ್ನ ಅಂತ. ಅದರ ತಯಾರಿಗೇ ಅಂತ ಬಂದಾಳ. ಅಮೇರಿಕಾದ ಲಗ್ನದ ತಯಾರಿ ಇಲ್ಲೇನು ಅಂತೀರಾ. ವಿಷಯಕ್ಕ ಈಗ ಬಂದಿರಿ ನೋಡರೀ. ಅಮೇರಿಕಾದ ಹುಡುಗ, ಅಮೇರಿಕಾದ ಹುಡುಗೀ, ಲಗ್ನ ಬಾಳಂಬೀಡದಾಗ, ವರದಾ ನದಿ ದಂಡೀ ಮ್ಯಾಲಂತ. ಛೇ, ಛೇ, ಹಿಂಗನಬ್ಯಾಡಪಾ, ಅಂತ ಪದ್ದಕ್ಕಜ್ಜೀನೆ ಬೈದಳು ನಿನ್ನೆ. ಅದು ವರದಾ ನದೀ ದಂಡೀ ಮ್ಯಾಲಿರೋ ವೆಂಕಪ್ಪನ ಗುಡಿ ಆವರಣದಾಗ ಅಂತ ಅನಬೇಕಿತ್ತಂತ. ಹಂಗಂತ ಗುಡಿ ಏನು ದೊಡ್ಡದಿಲ್ಲ. ಗರ್ಭಗುಡಿಯೊಳಗೆ, ವೆಂಕಪ್ಪನ ಜೊತೆ ಆಚಾರ್ಯರು ನಿಲ್ಲಬಹುದು, ಅಷ್ಟು ದೊಡ್ಡದು. ಮತ್ತ ಮುಂದಿನ ಪೌಳಿಯೊಳಗ ಹತ್ತು ಮಂದಿ ಕೂಡಬಹುದು.
ಆದರ, ನಮ್ಮ ಪದ್ದಕ್ಕಜ್ಜಿ ಅಲ್ಲೆ ಹೆಂಗ ಲಗ್ನಾ ಮಾಡತಾಳ, ಅದೂ ಅಮೇರಿಕಾದವರದು, ಮುಂದ ಹದಿನೈದು ದಿನಕ್ಕ, ಮಗಾ ಸೊಸಿ, ಮಗಳು ಅಳಿಯಾ ಬರತಾರಂತ ಹೇಳಿದಳು. ಇದನ್ನ ಕೇಳಿ, ಲಗ್ನದ ಗತಿ ಹೆಂಗ ಅಂತ ನನಗ ಚಿಂತಿ ಶುರುವಾತರೀ. ಅಕೇನು ನಕ್ಕೋತನೇ ಇದ್ದಳರೀ. ಆದರೂ ಮನಸೀನ್ಯಾಗ, ನಮ್ಮ ಪದ್ದಕ್ಕಜ್ಜಿ, ಮೊಮ್ಮಗನ ಲಗ್ನಾ ಯಾವುದರೆ ಫೈವ್ ಸ್ಟಾರ್ ಹೊಟೇಲದಾಗ ಮಾಡಿ, ನಮ್ಮನ್ನು ಕರದಿದ್ದರ, ನಾವೂ ಹೋಗೀ, ಮೂರು ದಿನಾ ಅಮೇರಿಕಾದವರ ಜೊತೆ, ಚೈನಿ ಹೊಡದು, ಅಷ್ಟಿಷ್ಟು ಬಾಯಿಗೆ ಸುರಕೊಂಡು, ನಾಕ ದಿನ ಅದರ ನೆನಪನ್ಯಾಗ ಸುಖಪಡತಿದ್ದಿವಿ, ಅದಕ್ಕೂ ಕಲ್ಲು ಹಾಕ್ಯಾಳ, ಇಲ್ಲೇ ನದೀ ದಂಡೀ ಮ್ಯಾಲ, ಅಲ್ಲಲ್ಲ ವೆಂಕಪ್ಪನ ಗುಡೀ ಒಳಗ ಲಗ್ನಾ ಹೂಡಿ, ಅನಿಸಿದ್ದೇನು ಸುಳ್ಳಲ್ಲ ನೋಡರೀ. ಸುಡಗಾಡು, ಈ ರೊಕ್ಕಿದ್ದವರಿಗೆ ಸೊಕ್ಕು ಭಾಳರೀ, ಖರ್ಚ ಮಾಡೂದಿಲ್ಲ. ಮತ್ತ, ನಮ್ಮೂರ ಇತಿಹಾಸದಾಗ, ಎಂತಾ ಬಡವರಿದ್ದರೂನು, ಲಗ್ನಾ ಯಾರೂ ನದೀ ದಂಡೀ ಮ್ಯಾಲ ಮಾಡಿಲ್ಲರೆಪಾ. ಅದಕ್ಕ ಎಲ್ಲೆ ಗೆಜೆಟ್ ಅದ ಅಂತ ಕಾಯಿದೆ, ಕಟ್ಟಳೆ ಹಚ್ಚ ಬ್ಯಾಡರೀ, ರೀತಿ ರಿವಾಜು ನೋಡರೀ. ಮೊನ್ನೆ ಬಡವ ವಾಸಣ್ಣಿ ಕೂಡಾ ಮನೀ ಮುಂದ ಹಂದರಾ ಹಾಕಿ ಲಗ್ನಾ ಮಾಡಿದಳು, ಈ ಪದ್ದಕ್ಕಜ್ಜಿಗೆ ಏನ ಬಂದದ ಧಾಡಿ.
ಎರಡು ದಿನದಾಗ, ತಮ್ಮ ಮನೀ ಸ್ವಚ್ಛ ಮಾಡಿಸಿಕೊಂಡು, ಬಣ್ಣಾ ಹಚ್ಚಿಸಿಕೊಂಡು, ಒಂದು ತಿಂಗಳತನಕಾ ಕಾರು ಬಾಡಿಗೆ ತೊಗೊಂಡು ತಾನೇ ಓಡಿಸಿಕೊಂಡು ಬಂದಾಗ, ನನಗ ಆಶ್ಚರ್ಯ ಆತರೀ. ಇಕಿ ಏನಾರ ಸಾಧಸೋಕಿನೇ ಬಿಡು ಅಂತ ಅನಿಸಿ ಬಿಟ್ಟಿತರೀ.
ಮುಂದ ಏನಾತು ಅನ್ನೋದಕ್ಕಿಂತ, ಮಾರನೇ ದಿನಾ, ಮುಂಜಾನೆ ಮುಂಜಾನೆ, ಹಾವೇರಿಗೆ ಹೋಗಿ, ಈಗೀಗ ಹಾವೇರಿ ಜಿಲ್ಲಾ ಆದ ಮ್ಯಾಲ ಆಗಿರೋ ಅಂತಹ ಒಂದೆರಡು ಫೈವ್ ಸ್ಟಾರ್ ಹೋಟೇಲ ಚೆಕ್ ಮಾಡಿ, ಅದರೊಳಗ ಒಂದು ಹೊಟೇಲಿನ ಮ್ಯಾನೇಜರನ ಜೊತೆ ಮಾತಾಡಿ, ಇವೆಂಟ್ ಮ್ಯಾನೇಜಮೆಂಟ್ ಬಗ್ಗೆ ತನ್ನ ಕಲ್ಪನಾ ಹೇಳಿದಳರೀ. ಅವಾ, ಪಾಪ ನಾಕ ಮಂದೀ ಕಡೆ ಮಾತಾಡಿ, ಲೈಟು, ಪೆಂಡಾಲು, ಹಾಸಿಗೀ ಇದಲ್ಲದೇ, ಮಂಚ, ಡೇರೆ, ಖುರ್ಚೆ, ಮೈಕು ಇದೆಲ್ಲಾ ವ್ಯವಸ್ಥಾದವರ ಜೊತೆ ಮಾತಾಡಿದಳಂತರೀ, ಅವರೆಲ್ಲಾ ಒಟ್ಟಿಗೇ ನಾಳೆ ಬಾಳಂಬೀಡಕ್ಕ ಬರತಾರಂತರೀ.
ಹಂಗ, ಹಾವೇರಿಯೊಳಗ, ಕಟ್ಟಿ ಆಚಾರ್ ಮನೀಗೆ ಹೋಗಿ, ಎರಡೂ ಕಡೆ ಆಚಾರು ಬೇಕು, ಎಲ್ಲಾ ಪದ್ಧತೀ ಪ್ರಕಾರನೇ ಲಗ್ನಾ ಆಗಬೇಕು, ಮಡೀ ಅಡಿಗಿ, ದೇವರ ಪೂಜಾ ನೈವೇದ್ಯಾ ಎಲ್ಲಾ ನೀವೇ ವ್ಯವಸ್ಥಾ ಮಾಡಬೇಕು, ಅಂದಾಗ, ಆಚಾರ್ರು, ಅಡಗೀ ಊಟಕ್ಕಸಂಜಯನ ಹತ್ತರ ವ್ಯವಸ್ಥಾ ಮಾಡಿಸಿದರುರೀ, ಮಡೀ ಅಡಗೀ ಮಾಡಿ ಬಡಸಲಿಕ್ಕೆ ಉಡುಪಿಯವರನ ಕರಸಬೇಕು, ಬ್ಯಾರೆ ಕಡೆಯವರಾದರಂದರ, ಕರೇ ಕರೇ ಮಾರಿ ಬಿಟಕೊಂಡವರು ಬ್ಯಾಡಾ, ಅಂತ ಕೂಡಾ ಕಂಡೀಷನ್ ಹಾಕಿದಳಂತ.
ವರಗ ರೇಶಿಮಿ ಮಡಿ, ಮತ್ತ ಹುಡುಗೀಗೆ ಕಚ್ಛೀ ಸೀರಿ ಎಲ್ಲಾ ರೆಡಿಮೇಡ್ ತಯಾರಾಗಿದ್ದವು. ಹುಡುಗಾ ಹುಡುಗೀ ತಯಾರ ಮಾಡಲಿಕ್ಕೆ, ಅವರ ಆಭರಣಗಳು ಎಲ್ಲಾ ತಯಾರಾಗಿದ್ದವು. ನಾಕ ದಿನ ಅದ ಲಗ್ನಾ ಅಂದಾಗ, ಅಮೇರಿಕಾದಿಂದ ಬಂದವರು, ಹಾವೇರಿ ಫೈವ್ ಸ್ಟಾರ್ ಹೋಟೇಲಿನೊಳಗ, ಜೆಟ್ ಲ್ಯಾಗ್ ಅಂತ ಇಡೀ ದಿನ ಮಲಗಿದರಂತ.
ಇತ್ಲಾಗ, ಬಾಳಂಬೀಡಕ್ಕ ಬಂದುವು ನೋಡರೀ ಆರು ಟ್ರಕ್ಕ, ನದೀ ದಂಡೀ ಮ್ಯಾಲ, ಎಂಕಪ್ಪನ ಗುಡೀ ಬಾಜೂಕ, ಎರಡು ಎಕರೇ ಖಾಲೀ ಹೊಲ ಇತ್ತರೀ ನಮ್ಮ ಪದ್ದಕ್ಕನದು. ಅದನ್ನ ಪೂರ್ತಿ ಸಮಾ ಮಾಡಿ, ಪಂಪಸೆಟ್ಟಿನಿಂದ ನೀರು ಹೊಡದು, ಸ್ವಲ್ಪ ಆರಿಸಿದರ ಮ್ಯಾಲೆ, ಫರಸೀ ಕಲ್ಲು ಜೋಡಿಸಿ ಬಿಟ್ಟರು ರೀ. ಅದರ ಮ್ಯಾಲ, ಸಣ್ಣ ಸಣ್ಣ ಡೇರಾ ಹಾಕಿದರು. ಒಂದೊಂದು ಡೇರಾದಾಗೂ ಎರಡೆರಡು ಮಂಚ, ಹಾಸಿಗಿ, ಜೊತೀಗೆ ಒಂದು ಟೇಬಲ್, ಒಂದು ಕಪಾಟು ಜೋಡಿಸಿದರರೀ. ಅದರ ಹಿಂದನ ಸಣ್ಣದ ಡೇರಾ, ಅದಕ್ಕ ಬಚ್ಚಲ, ಎಲ್ಲಾ ಮೂವೇಬಲ್ ಸಂಡಾಸ, ನೀರಂತೂ ನದೀಯಿಂದನ ಕನೆಕ್ಷನ್ ಕೊಟ್ಟಾರ. ಒಂದಲ್ಲದೇನೇ ಎರಡು ಡೀಸೆಲ್ ಜನರೇಟರ್ ತಂದಾರ. ಈಗ ಎಲ್ಲಾ ಡೇರೆಕ್ಕನೂ ಲೈಟು ಜೋಡಿಸಿದರು.
ಇನ್ನ ಮದುವೀ ಪೆಂಡಾಲ ಅಂತೀರಾ ಅಲ್ಲರೀ, ಅದೇನದು, ಇಂದ್ರನ ಅಮರಾವತೀನೂ ಹಿಂಗಿರಲಿಕ್ಕಿಲ್ಲ ಬಿಡರೀ, ಸುತ್ತಲೂ ಜೋಡಿಸಿದ ಕಂಬಗಳು, ಮಂಟಪಾ, ಸ್ವಾಗತಕ್ಕ ಆನಿ, ಅದಕ್ಕ ಪ್ಲಾಸ್ಟಿಕ್ಕಿನ ಹೂವು, ತೋರಣದ ಎಲಿ, ಅದೆಲ್ಲಾದಕ್ಕೂ ಲೈಟಿನ ಸರ, ಫಳ ಫಳ ಕೇಳತೀರೇನು. ಆಕಾಶದಾಗಿನ ಚಿಕ್ಕಿ ಚಂದ್ರಾಮ ಮಂಟಪದ ಮ್ಯಾಲ ಕಾಣೂ ಹಂಗ ಲೈಟಿನ ಸೋಲಾರ ಸಿಸ್ಟೇಮ್, ಬಂದವರಿಗೆ ಕೂಡಲಿಕ್ಕೆ ಮಹರಾಜಾ ಖುರ್ಚೆ, ನಾವಂತೂ ಜನ್ಮದಾಗ ಈ ಮಹರಾಜಾ ಖುರ್ಚೆದ ಮ್ಯಾಲ ಕೂತಿರಲಿಲ್ಲರೀ, ಹುಡುಗಾ ಹುಡುಗೀ, ಅವರಪ್ಪಾ ಅವ್ವಾ ಕೂಡಲಿಕ್ಕೆ ಬೆಳ್ಳೀ ಖುರ್ಚೆ ರೀ.
ಬಾರಾತ, ಅಂದರ ಹುಡುಗನ ಎದುರುಗೊಳ್ಲಲಿಕ್ಕೆ, ಬಂದವರಿಗೆಲ್ಲಾ ಪಟಗಾ ಸುತ್ಯಾರ. ಕುಣಿಯೋ ಹುಡುಗರಿಗೆ, ಸೊಂಟಕ್ಕ ಕುದುರಿ ಕಟ್ಟಿ, ಹುಡುಗೇರಿಗೆ, ಹೆಣ್ಣುಗೊಂಬಿ ಕಟ್ಟಿದ್ದರು. ಹುಡುಗಾ ಖರೇ ಖರೇ ಕುದುರೀ ಮ್ಯಾಲೆ ಕೂತವಾ, ಕೆಳಗ ಹಾರೀ, ತಾನೂ ಅವರ ಸರೀ ಸಮ ಕುಣದ ನೋಡರೀ. ರಾತ್ರಿ ರುಖ್ಖೋತ ಎರಡೂವರಿ ಮುಗದಾಗ, ಯಾರೂ ಮನೀ ನೆನಸೇ ಇಲ್ಲ. ಸುತ್ತಲೂ ತಿಂಡಿ ತಿನಿಸು ಜೋಡಿಸಿಟ್ಟಾರ. ಹೋದಾಗೆಲ್ಲಾ, ಏನು ಬೇಕೋ ಅಲ್ಲಿ ಪ್ಲೇಟ್ ಹಿಡಿಯೋದು, ಹಾಕಿಸಿಕೊಂಡು ತಿನ್ನೋದು. ಅಷ್ಟಾದ ಮ್ಯಾಲೆ, ರುಖ್ಖೋತಕ್ಕೆ ಬಂದವರಿಗೆಲ್ಲಾ ಇಡೀ ಗೋಪುರದಂಗ ಮಂಡಗೀ, ತುಪ್ಪಂತೂ ವರದಾ ನದೀ ಹಂಗ ಹರೀತು ನೋಡರೀ.
ಮಡೀಯವರಿಗೆ, ಕಂಡೂ ಕೇಳದಂತಾ ಊಟರೀ. ಪಕ್ಕಾ ಇದ್ದಲೀ ಒಲೀ ಮ್ಯಾಲ, ಉಡುಪೀಯವರೇ ಮಾಡ್ಯಾರ. ಅವರಿಗೆ ಮಡಿ ಮಟ್ಟಿ, ಸ್ನಾನಕ್ಕ ವ್ಯವಸ್ಥಾ, ಖರೇ ಹೇಳಬೇಕಂದರ, ಮಡೀ ಮಾಡದೇ ಇದ್ದವರು ಸತೇಕ, ಆ ವ್ಯವಸ್ಥಾ ನೋಡಿ, ನಾ ಮಡೀಲೇನೇ ಊಟಾ ಮಾಡತೇನಿ ಅಂತಿದ್ದರು. ಹಂಗಿತ್ತು.
ಮೂರ ದಿನ ಅಂದರ, ನಮಗೆಲ್ಲಾ, ನಾವು ಹುಟ್ಟಿದಾಗೇ ಹಿಂಗಿದ್ದಿವಿ ಅನ್ನೋ ಹಂಗ ಊಟಾ ತಿಂಡಿ, ವ್ಯವಸ್ಥಾ. ನಮಗೆಲ್ಲಾ ಮದುವೀ ಉಡುಗೊರಿ ಅಂದರ, ಮೂರೂ ದಿನ ಹಾಕಿಕೊಳ್ಳಲಿಕ್ಕೆ ಹೊಸಾ ಬಟ್ಟಿ ಬರಿ, ಹೆಂಗಸರಿಗೆ ನಾಕ ನಾಕ ಸೀರಿ ಕೊಟ್ಟಾಳ. ಪದ್ಧತಿ ಶೀರ ಲಗ್ನ ಆತು ಬಿಡರೀ. ಹುಡುಗಾ ಹುಡುಗೀನೂ ಆಚಾರ್ರು ಏನೇನು ಹೇಳತಾರೋ, ಹೇಳಿದಂಗ ಎಲ್ಲಾ ಕೇಳಿದರು. ನಾಗೋಲಿ, ಕೂಸು ಒಪ್ಪುಸೋದು, ಲಕ್ಷ್ಮೀ ಪೂಜಾ, ಮನೀ ತುಂಬಿಸಿಕೊಂಡಿದ್ದು ಎಲ್ಲೆಂದೀರೀ, ಎಂಕಪ್ಪನ ಗುಡಿಯೊಳಗ. ಸಾಕ್ಷಾತ್ ವೆಂಕಪ್ಪ ಪದ್ಮಾವತಿ ಲಗ್ನಾಧಂಗಿತ್ತು. ಮತ್ತ, ಚೊಚ್ಚಲ ಗಂಡಸ ಮಗನ ನೇಮಾ ಬಿಡಿಸೋದರಿಂದ ಎಲ್ಲ ತಯಾರಿತ್ತು, ಬೆಳ್ಳಿ ಮಣಿ, ಬೆಳ್ಳಿ ಮರದ ಬಾಗಣಾ, ದೊಡ್ಡ ಹಾಗಲ ಹಂದರಾನೂ ಬೆಳ್ಳೀದೇ. ಇವರು ಕೊಟ್ಟರು, ಅವರು ಇಸಗೊಂಡರು, ಆಮ್ಯಾಲೇ ಆಚಾರ್ರು ವಾಪಸ್ಸು ಜೋಡಿಸಿಕೊಂಡರು, ಆ ಮಾತು ಬ್ಯಾರೇ. ಆಚಾರಂತೂ ಲಗ್ನದ ಪ್ರತಿಯೊಂದು ಮಂತ್ರಾನೂ ಇಂಗ್ಲೀಷಿನ್ಯಾಗ ವಿವರಿಸಿದಾಗ, ಹುಡುಗಾ ಹುಡುಗೀ ಇಬ್ಬರೂ ಎಸ್ ಎಸ್ ಅಂತಿದ್ದರು.
ನಾಕನೇ ದಿನ, ಹಾವೇರಿ ಒಳಗ, ಕಡಿದದ್ದು, ಕುಡಿದದ್ದು ವ್ಯವಸ್ಥಾ ಇತ್ತಂತ. ನಮ್ಮನ್ನೇನು ಕರದಿಲ್ಲ ಬಿಡರೀ. ಅಂತೂ ಪದ್ದಕ್ಕಜ್ಜಿ ಎಲ್ಲಾ ಸವರಿಸಿ, ಅದ್ಭುತ ಕಲ್ಯಾಣೋತ್ಸವ ಮಾಡಿದ್ದಳರೀ. ನಾವೂ ಕಣ್ಣು ತುಂಬಿ ಕೊಂಡೇವಿ, ಹಂಗ ಹೊಟ್ಟೀನೂ ತುಂಬಿ ಕೊಂಡೇವಿ ಬಿಡರೀ. ಆದರ, ಮದಿವ್ಯಾಗೋ ವರನ ಮಗಳು, ಮತ್ತ ಕನ್ಯಾದ ಮಗಾ ಇಬ್ಬರೂ ಎರಡ-ಮೂರು ದಿನಾನೂ ಒಂಚೂರು ಅತ್ತಿಲ್ಲಂತ ನೋಡರೀ. ಸುಮ್ಮ ಕೂತಿದ್ದವಂತ. ಅಪ್ಪಾ ಅವ್ವನ ಲಗ್ನಾ ನೋಡಿಕೋತ. ಪಾಪ, ಅವರೇ ಏನು ಮಾಡತಾವ. ಈ ವರಾ ಮತ್ತ ಕನ್ಯಾ ಇಬ್ಬರೂ ಈಗಾಗಲೇ ಒಂದೊಂದು ಲಗ್ನಾ ಮಾಡಿಕೊಂಡು ಡೈವೋರ್ಸ ತೊಗೋಂಡವರು.
ಹೀಂಗ, ನಮ್ಮ ಭಾರತೀಯ ಪದ್ಧತೀ ಪ್ರಕಾರ ಲಗ್ನಾ ಆಗಿದ್ದಿಲ್ಲ ಹಿಂದ. ಅದಕ್ಕ ಹಂಗಾತೂ ಅಂತ ಪದ್ದಕ್ಕಜ್ಜಿ ಯಾರಿಗೇನ ಹೇಳಿಲ್ಲರೀ. ಬರೇ ಇನ್ನ ಮುಂದರೆ, ಇವರಿಬ್ಬರೂ ನೂರು ವರ್ಷ ದಾಂಪತ್ಯದೊಳಗಿರಲಿ ಅಂತ ಆಶೀರ್ವಾದ ಮಾಡಿಸಿದಳಂತ, ಆಚಾರ್ಯರ ಹತ್ತರ.
ನಮಗ್ಯಾಕ ಬೇಕರೀ, ಬ್ಯಾರೇಯವರ ಮನೀ ಖಾರಬಾರ. ಅದೂ ಪದ್ದಕ್ಕಜ್ಜೀ ಮುಂದ, ಅಂದು ಗೆಲ್ಲಲಿಕ್ಕಾಗತದ. ಅದಕ್ಕ ಎಲ್ಲಾ ಬಾಯಿ ಮುಚಕೊಂಡು ಕೂತಾರ, ಗಪ್ ಚಿಪ್.
-ಡಾ.ವೃಂದಾ ಸಂಗಮ್