ಹಲ್ಮಿಡಿ ಶಾಸನ ಕ್ರಿ.ಶ.ಸುಮಾರು ೪೫೦ -ಒಂದು ಟಿಪ್ಪಣಿ: ಸಂತೋಷ್ ಟಿ

ಜಯತಿ ಶ್ರೀ ಪರಿಷ್ವಙ್ಗ ಶಾರ್ಙ್ಗ (ಮಾನ್ಯತಿ) ರಚ್ಯುತಃ
ದಾನವಾಕ್ಷೋರ್ಯುಗಾನ್ತಾಗ್ನಿಃ (ಶಿಷ್ಟಾನಾನ್ತು) ಸುದರ್ಶನಃ
ನಮಃ ಶ್ರೀಮತ್ಕದಂಬನ್ತ್ಯಾಗಸಂಪನ್ನನ್ಕಲಭೋರ(ನಾ)ಅರಿಕ
ಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾ
ಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀಮೃಗೇಶನಾಗಾಹ್ವಯ
ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ
ಗಣಪಶುಪತಿಯಾ ದಕ್ಷಿಣಾದಿ ಬಹು ಶತವಹನಾ
ಹವದು(ಳ್ ) ಪಶುಪ್ರದಾನ ಶೌರ್ಯ್ಯೋದ್ಯಮಭರಿತೊ(ನ್ದಾನ ) ಪ
ಶುಪತಿಯೆನ್ದು ಪೊಗಳೆಪ್ಪೊಟಣ ಪಶುಪತಿ
ನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯ
ಸುತನ್ಗೆ ಸೇನ್ದ್ರಕಬಣೋಭಯ ದೇಶದಾವೀರಾಪುರುಷ ಸಮಕ್ಷ
ದೆ ಕೇಕೆಯಪಲ್ಲವರಂ ಕಾದೆರೆದು ಪೆತ್ತಜಯನಾ ವಿಜ
ಅರಸನ್ಗೆ ಬಾಳ್ಗಚ್ಚು ಪಲ್ಮಿಡಿಉಂ ಮೂಳವಳ್ಳಉಂ ಕೊ
ಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್
ಇರ್ವ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಿಡಿಗೆ ಕುರು
ಮ್ಬಿಡಿವಿಟ್ಟಾರ್ ಅದಾನಳೆವೊನ್ಗೆ ಮಹಾಪಾತಕಮ್ ಸ್ವಸ್ತಿ
ಭಟ್ಟರ್ಗ್ಗಿಗಳ್ದು ಒಡ್ತಲಿ ಆಪತ್ತೊನ್ದಿವಿಟ್ಟಾರಕರ.

ಕನ್ನಡನಾಡಿನ ಮೊತ್ತಮೊದಲ ಭಾಷಿಕ ಸಾಂಸ್ಕೃತಿಕ ದಾಖಲೆಯಾಗಿರುವ ಈ ಶಾಸನವನ್ನು ೧೯೩೬ರಲ್ಲಿ ಡಾ.ಎಂ.ಎಚ್.ಕೃಷ್ಣ ಅವರು ಸಂಶೋಧನೆ ಮಾಡಿದರು. ಹಾಸನ ಜಿಲ್ಲೆ ಬೇಲೂರಿನ ಸಮೀಪವಿರುವ ಯಗಚಿ ನದಿ ದಂಡೆಯ ಕಡೆ ಚಿಕ್ಕಮಗಳೂರು ರಸ್ತೆಯಲ್ಲಿ ಹಲ್ಮಿಡಿ ಅಥವಾ ಪಲ್ಮಿಡಿ ಗ್ರಾಮದ ವೀರಭದ್ರೇಶ್ವರ ಗುಡಿಯ ಬಳಿ ಈ ಶಾಸನದ ನಕಲು ಪ್ರತಿ ನಿಲ್ಲಿಸಲಾಗಿದೆ. ಮೂಲ ಶಾಸನ ಕಲ್ಲು ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿದೆ . ಮೂಲ ಶಾಸನ
ಹಲ್ಮಿಡಿ ಗ್ರಾಮದ ಕೋಟೆಯ ಭಾಗದಲ್ಲಿ ಸಿಕ್ಕಿದೆ ಎನ್ನಲಾಗಿದೆ. ಸಂಶೋಧನೆ ಮಾಡಿದ ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪಠ್ಯ ಮತ್ತು ಶೈಕ್ಷಣಿಕ ಪಠ್ಯಗಳಲ್ಲಿ ಇದೆ ಪಾಠ ಕನ್ನಡನಾಡಿನ ಮೊದಲ ಸಾಂಸ್ಕೃತಿಕ ಪಠ್ಯವಾಗಿ ಇದೆ. ಇತ್ತೀಚೆಗೆ ಹೆಚ್.ಎಸ್.ಗೋಪಾಲರಾಯರ ಶೋಧನೆ ತುಮಕೂರು ಬಳಿಯ ಹೊನ್ನುಡಿಕೆ ಗ್ರಾಮದ ಜಲಗಾರ ದಿಬ್ಬದ ಶಾಸನ ಹಲ್ಮಿಡಿ ಶಾಸನಕ್ಕು ಪೂರ್ವದ್ದು ಕ್ರಿ.ಶ.೩೫೦ ಎನ್ನಲಾಗಿದೆ. ಮತ್ತೆ ಇದಕ್ಕೂ ಪೂರ್ವದಲ್ಲಿ ಗಂಗರ ಶಾಸನಗಳು ಕೋಲಾರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಲಭ್ಯವಿದೆ ಎಂಬ ಮಾಹಿತಿಗಳು ಇವೆ. ಇದಮಿತ್ಥಂ ಆದರೆ ಹಲ್ಮಿಡಿ ಶಾಸನ ಪಠ್ಯ ಶಾಸನ ಪಾಠವಾದಂತೆ ಇನ್ನು ಈ ಶಾಸನಗಳು ಸಾಹಿತ್ಯ ಪಠ್ಯಗಳಲ್ಲಿ ಊರ್ಜಿತವಾಗಿಲ್ಲ ಎನ್ನಬಹುದು. ಹಾಗಾಗಿ ಈ ದಾಖಲೆಗಳು ಮೊದಲು ಎನ್ನುವ ವಿಚಾರವನ್ನು ಪ್ರಕ್ಷೀಪ್ತವೋ ,ಕೂಟವೋ, ನೈಜವೋ, ಎಂಬುದನ್ನು ತಿಳಿಯಲು ಹೇಳಬೇಕಾಯಿತು.

ಹಲ್ಮಿಡಿ ಶಾಸನದ ಪಠ್ಯ ಕನ್ನಡಿಗರ ಮೊದಲ ಲಿಪಿ ಬರಹದ ಸಾಹಿತ್ಯ ಪಠ್ಯವಾಗಿ ಸಾಂಸ್ಕೃತಿಕವಾಗಿ ಇದೊಂದು ಯುದ್ಧ ಸಂಧರ್ಭದಲ್ಲಿ ಹೋರಾಡಿ ಜಯ ತಂದುಕೊಟ್ಟ ವೀರ ಯೋಧನಕತ್ತಿಯನ್ನು ರಾಜರು ತೊಳೆದು ಕೊಟ್ಟು ಆತನ ಪರಾಕ್ರಮ ಕುಲನೆಲಮೂಲಗಳನ್ನು ವರ್ಣಿಸಿ ದಾನರೂಪವಾಗಿ ಹಳ್ಳಿಗಳನ್ನು ಬಾಳ್ಗಚ್ಚು ನೀಡಿ ಅದರ ಸುಂಕವನ್ನು ಮನ್ನ ಮಾಡಿ ಅದನ್ನು ಅಪಹರಿಸಿದವರಿಗೆ ಘೋರವಾದ ಶಾಪವನ್ನು ವಿಧಿಸಿರುವ ಕನ್ನಡ ಸಂಸ್ಕೃತಿಯ ಬಹು ಮಹತ್ವದ ಶಾಸನವಾಗಿದೆ. ಈ ಶಾಸನವು ಬಳಪ ಕಲ್ಲಿನಲ್ಲಿ ಕೆತ್ತಿರುವ ನಾಲ್ಕು ಅಡಿ ಎತ್ತರದ ಅಗಲ, ೧ಅಡಿ ದಪ್ಪ,೯ ಅಂಗುಲವಿದ್ದು,ಮೂರು ಪಾದಗಳಿವೆ. ಸುದರ್ಶನ ಚಕ್ರದಿಂದ ಶೋಭಿತವಾದ ಅನುಷ್ಠುಪ್ ಶ್ಲೋಕದಿಂದ ಆರಂಭವಾಗುವ ಪೂರ್ತಿ ಶಾಸನ ಪಠ್ಯದಲ್ಲಿ ೨೦ಕನ್ನಡ ಪದಗಳಿವೆ. ಪೂರ್ವದ ಹಳಗನ್ನಡ ಭಾಷೆಯ ವಿಶ್ವಕೋಶದ ಪ್ರೌಢ ಲಕ್ಷಣಗಳಿಂದ ಈ ಹಲ್ಮಿಡಿ ಶಾಸನ ಕನ್ನಡ ಸಾಹಿತ್ಯದ ನಾಂದಿ ಶಾಸನವಾಗಿದೆ ಎಂದರೆ ತಪ್ಪಾಗಲಾರದು.

ಈ ಶಾಸನದ ಕಾಲ ಐತಿಹಾಸಿಕವಾಗಿ ಸುಮಾರು ಕ್ರಿ.ಶ.೪೫೦ ಎಂದು ಖಚಿತವಾಗಿ ಕೆಲವರು ಭಾಷೆಯ ಅಂತಸಂಭಾವ್ಯತೆಯಿಂದ ಒಮ್ಮತಕ್ಕೆ ಬಂದರು. ಇನ್ನು ಕೆಲವು ವಿದ್ವಾಂಸರು ಕ್ರಿ.ಶ ಆರನೇ ಶತಮಾನದಲ್ಲಿ ಎಂದು ,ಬಾದಾಮಿ ಚಾಲುಕ್ಯರ ಮಂಗಳೇಶನ ಕನ್ನಡದ ಶಾಸನದ ನಂತರದ್ದು ಎಂದು, ತಮಟಕಲ್ಲಿನ ಶಾಸನದ ಕಾಲದ್ದು ಎಂತಲ್ಲೂ ಅಭಿಪ್ರಾಯಪಡುವುದುಂಟು. ಆದರೆ ಮೇಲಿನ ಎಲ್ಲಾ ತರ್ಕದಿಂದ ವಿಧಿತವಾದ ಶಾಸನದ ಭಾಷಿಕ ಲಿಪಿ ಸ್ವರೂಪ ಮತ್ತು ಅಂತಸಂಭಾವ್ಯತೆ ಊಹಿಸಿ ಇದು ಕ್ರಿ.ಶ. ೪೫೦ ,ಐದನೇ ಶತಮಾನದ ಪೂರ್ವಕಾಲ ಎಂದು ನಿರ್ಣಯಮಾಡಿದ್ದಾರೆ. ಇದಕ್ಕೆ ಭಿನ್ನವಾದ ವಾದ ತಾಳಗುಂದದ ಒಂದು ಶಾಸನದಲ್ಲಿ ಇದೆ. ಸುಂಕಾಧಿಕಾರಿ,ಹತ್ತು ಮಾಂಡಲಿಕರ ಮುಖ್ಯನೂ ಆದ ಭಟಾರಿ ವಂಶದ ಕಾಕುಸ್ಥ ಎಂಬಾತನ ಉಲ್ಲೇಖವಿದೆ. ಕ್ರಿ.ಶ. ೫ ಮತ್ತು ೬ನೆ ಶತಮಾನದ ತಾಳಗುಂದ ಶಾನನೋಕ್ತನಾದ ಈ ಭಟಾರಿ ವಂಶದ ಕಾಕುಸ್ಥವರ್ಮ ಹಲ್ಮಿಡಿ ಶಾಸನದ ಕಾಕುಸ್ಥ ಭಟ್ಟಾರಕನೂ ಒಬ್ಬನೇ ವ್ಯಕ್ತಿಯಿರಬಹುದು ಎಂಬ ತರ್ಕವೊಂದು ಇದೆ. ಏನಾದರೂ ನಮ್ಮ ಮುಂದಿರುವುದು ಶಾಸನ ಮಾತ್ರ.ಅದನ್ನು ಕಾಲ ದೇಶ ಅಂತರ ಕ್ರಮದಲ್ಲಿ ಜೋಡಿಸಿಕೊಂಡರೆ ಮಾತ್ರ ಕದಂಬ ವಂಶದ ಕಾಕುಸ್ಥವರ್ಮನ ಆಡಳಿತ ಕ್ರಿ.ಶ.೪೨೨-೪೪೭ ಕಾಲ ಎಂದು ಮನವರಿಕೆಯಾಗುತ್ತದೆ.

ಶಾಸನದ ವಿಚಾರ ಮತ್ತು ಅರ್ಥ

ರಾಕ್ಷಸರ ಕಣ್ಣುಗಳಿಗೆ ಪ್ರಳಯಕಾಲದ ಬೆಂಕಿಯಂತೆಯೂ, ಒಳ್ಳೆಯವರ ಕಣ್ಣುಗಳಿಗೆ ಸುದರ್ಶನ ಸ್ವರೂಪಿಯಾಗಿಯೂ ಕಾಣಿಸುವ ಒಂದು ತೋಳಿನಲ್ಲಿ ಲಕ್ಷ್ಮೀಯನ್ನು ಅಪ್ಪಿಕೊಂಡಿರುವ, ಇನ್ನೊಂದು ಕೈಯಲ್ಲಿ ಬಾಗಿದ ಶಾರ್ಙ್ಗ ಎಂಬ ಬಿಲ್ಲನ್ನು ಹಿಡಿದಿರುವ ಅಚ್ಯುತನಿಗೆ ಗೆಲುವಾಗಲಿ. ನಮಸ್ಕಾರ.
ಕನ್ನಡ ಸಂಸ್ಕೃತಿಯ ಧ್ಯೋತಕವಿದು. ಭಗವಂತನಿಗೆ ನಮಸ್ಕರಿಸಿ ಮಹಾವಿಷ್ಣುವನ್ನು ಅಂದರೆ ಸುದರ್ಶನ ಶ್ರೀ ಚಕ್ರವನ್ನು ಪೂಜಿಸಿ ನಮಸ್ಕರಿಸಿ ಶಾಸನ ಆರಂಭವಾಗುತ್ತದೆ. ಶಾಸನದ ಅಗ್ರಭಾಗದಲ್ಲಿ ಸುದರ್ಶನ ಚಕ್ರವನ್ನು ನಂತರ ಸ್ತುತಿ ಪದ್ಯವನ್ನು ಕಾಣಬಹುದು.
ಶ್ರೀಮತ್ ಕದಂಬರ ಅಧಿರಾಜ,ತ್ಯಾಗ ಸಂಪನ್ನ,ಕಲಭೋರನ ಹಗೆಯೂ ಆದ ಕಾಕುಸ್ಥ ಭಟ್ಟಾರಕನು ಆಳುತ್ತಿರುವಾಗ ನರಿದಾವಿಳೆ ನಾಡಿನಲ್ಲಿ ಮೃಗೇಶ ಮತ್ತು ನಾಗೇಂದ್ರ ಎಂಬ ಇಬ್ಬರು ಭಟಹ(ಅಧಿಕಾರಿಗಳು)ರು ಇರುವಾಗ , ಈ ಮೃಗೇಶ ಮತ್ತು ನಾಗೇಂದ್ರ ಹೆಸರಿನವರ ಜೊತೆಗೆ ಪಶುಪತಿ ಎಂಬುವನು ಸೇರಿ ಈ ಮೂವರೂ ಜನರು ವಿಜ ಅರಸ ಎಂಬುವವನಿಗೆ ‘ಬಾಳ್ಗಚ್ಚು’ ಎಂಬ ದಾನವನ್ನು ಕೊಟ್ಟರು. ಈ ಪಶುಪತಿ ಎಂಬುವವನ ಗುಣಗಾನ. ಆ ಪಶುಪತಿ ಭಟಾರಿ ಮನೆತನ ಕುಲವಂಶನಾಮದವನಾದ ನಿರ್ಮಲವಾದ ಆಕಾಶಕ್ಕೆ ಚಂದ್ರನಂತೆ, ಆಳುಪರೆಂಬ ಗಣಕ್ಕೆ ಓಡೆಯನಾದ ಶಿವನಂತೆ ಇದ್ದನು ಎಂದು ವರ್ಣಿಸಲಾಗಿದೆ. ಅಷ್ಟಲ್ಲದೇ ದಕ್ಷಿಣಾಪಥದಲ್ಲಿ ಪ್ರಸಿದ್ಧವಾದ ನೂರಾರೂ ಯುದ್ಧಗಳೆಂಬ ಯಜ್ಞಗಳಲ್ಲಿ ಶತ್ರುಗಳೆಂಬ ಪಶುಗಳನ್ನು ಬಲಿಕೊಡುವ ಸಾಹಸ ಕಾರ್ಯಗಳಿಂದ ಕೂಡಿದ ಆ ಪಶುಪತಿಯು ದಾನ ಮಾಡುವುದರಲ್ಲಿ ವರಪ್ರದಾಯಕ ಶಿವನೆಂದು ಸ್ತುತನಾಗಿದ್ದನು. ಈಗ ವಿಜ ಅರಸನ ಕೊಂಡಾಟ ಬರುತ್ತದೆ. ವಿಜ ಅರಸನು ಸರಕ್ಕೆಲ್ಲ ಭಟರಿಯ ಎಂದರೆ ಸರಕ್ಕೆಲ್ಲ ಎಂಬ ವಂಶಕ್ಕೆ ಸೇರಿದ ಭಟರಿಯ ಪ್ರೀತಿಯ ಮಗನಾಗಿದ್ದನು. ಇತನು ಸೇಂದ್ರಕ ಮತ್ತು ಬಾಣರು ಎಂಬ ಉಭಯ ದೇಶದ ವೀರಪುರುಷರ ಸಮಕ್ಷಮದಲ್ಲಿ ಅವರು ಕಣ್ಣೆದುರಿನಲ್ಲಿ ಹೋರಾಡಿ ಕೇಕೆಯ ಮತ್ತು ಪಲ್ಲವರನ್ನು ಇರಿದು ಗೆಲುವನ್ನು ಸಾಧಿಸಿದನು. ಈ ಜಯವನ್ನು ತಂದು ಕೊಟ್ಟದಕ್ಕಾಗಿ ವಿಜ ಅರಸನಿಗೆ ಪಲ್ಮಡಿ ಮತ್ತು ಮೂಳವಳ್ಳಿ ಎಂಬ ಹಳ್ಳಿಗಳನ್ನು ಅಥವಾ ಊರುಗಳನ್ನು ‘ಬಾಳ್ಗಚ್ಚು’ (ವೀರಪುರುಷನ ರಕ್ತಸಿಕ್ತ ಖಡ್ಗವನ್ನು ತೊಳೆದು ಪರಮಪೂಜ್ಯವಾಗಿ ಕಂಡು ವೀಳ್ಯೆಯಿಂದ ದಾನ ಕೊಡುವುದುಂಟು) ರೂಪದಲ್ಲಿ (ಮೃಗೇಶ, ನಾಗೇಂದ್ರ ಮತ್ತು ಪಶುಪತಿ ಎಂಬವರು)ದಾನ ಕೊಟ್ಟರು. ಭಟಾರಿ ಕುಲದವನಾದ ಆಳ ಕದಂಬನು. ಅಂದರೆ ಇವರೆಲ್ಲ ಕದಂಬರ ಪ್ರಮುಖ ಅರಸ ಕಾಕುಸ್ಥವರ್ಮನ ಅಧಿಕಾರಿಗಳು ಎಂಬುದು ವೇದ್ಯವಾಗುತ್ತದೆ. ಮತ್ತೆ ಮುಂದೆ ಶಾಸನ ಉಲ್ಲೇಖಿಸುವ ಸಾಲುಗಳು ಈ ದಾನವನ್ನು ಅಪಹರಿಸಿದವನು ಮಹಾಪಾತಕನು. ಈ ಇಬ್ಬರೂ ಸಳ್ಬಂಗದವರೂ ಮತ್ತು ವಿಜ ಅರಸರು ಪಲ್ಮಿಡಿಗೆ ಕುರುಂಬಿಡಿಯನ್ನು ಬಿಟ್ಟರು. ಅದನ್ನು ನಾಶಪಡಿಸಿ ದವನಿಗೆ ಮಹಾಪಾತಕ ತಟ್ಟುತ್ತದೆ. ಒಳ್ಳೆಯದಾಗಲಿ,ಭಟ್ಟರಿಗೆ (ಬ್ರಾಹ್ಮಣರಿಗೆ) ಈ ಗದ್ದೆಯ ಹುಟ್ಟುವಳಿಯ ಮೇಲಿನ ಪತ್ತೊಂದಿ ಎಂಬ ಸುಂಕವನ್ನು ಮುಕ್ತಗೊಳಿಸಿಬಿಟ್ಟರು ಎಂಬುದು ಶಾಸನದ ಸಂಪೂರ್ಣ ಪಠ್ಯ ವಸ್ತುವಾಗಿದೆ.

ಇನ್ನು ಒಂದು ರೀತಿಯಲ್ಲಿ ಅರ್ಥಾನೂಸಾರಿ ಓದು ಹೀಗಿದೆ –
ದಾನವರಾದ ರಾಕ್ಷಸರ ಕಣ್ಣುಗಳಿಗೆ ಯುಗಾಂತದ ಕೊನೆಯಲ್ಲಿ ಉದ್ಭವಿಸುವ ಪ್ರಚಂಡ ಅಗ್ನಿ ಸ್ವರೂಪನು, ಸಾತ್ವಿಕ ಸ್ವಭಾವದ ಸತ್ಪುರುಷನಾದ ಸುದರ್ಶನ ಚಕ್ರದಿಂದ ಶೋಭಿತನಾದವನು ಒಳ್ಳೆಯ ದರ್ಶನ ಸ್ವರೂಪಿಯು ಆದವನು ಲಕ್ಷ್ಮೀಯನ್ನು ಆಲಂಘಿಸಿಕೊಂಡು ಚೆನ್ನಾಗಿ ಬಾಗಿದ ಬಳುಕುವ ಧನುಸ್ಸನ್ನು ಹಿಡಿದವನು ಆದ ಅಚ್ಯುತನಿಗೆ ಜಯವಾಗಲಿ ಅಂದರೆ ಚ್ಯುತಿ ಇಲ್ಲದೆ ಸಾವಿಲ್ಲದ ಪುರುಷನಿಗೆ ಜಯವಾಗಲಿ. ಸಂಪದ್ಭುದಯವಾದ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಕದಂಬ ವಂಶಸ್ಥನು ಕಳಭ್ರರು ಎಂಬ ಅರಸ ಮನೆತನದವರ ಶತೃವಾದ ಕಾಕುಸ್ಥ ಭಟ್ಟೋರನ್ ಬನವಾಸಿಯಲ್ಲಿ ರಾಜ್ಯವಾಳುತ್ತಿರಲು ನರಿದಾವಿಳೆ ಎಂಬ ನಾಡು ಈಗಿನ ಬೇಲೂರು ಚಿಕ್ಕಮಗಳೂರು ನಡುವಿನ ಭೂಪ್ರದೇಶದಲ್ಲಿ ಮೃಗೇಶ,ನಾಗೇಂದ್ರರೆಂಬ ಭಯಂಕರ ವೀರರು ತಮ್ಮ ಹೆಸರಿಗೆ ತಕ್ಕಂತೆ ಅಂದರೆ ಶ್ರೇಷ್ಠ ಮೃಗರಾಜ (ಸಿಂಹ )ನಾಗಹ್ವಯ (ಆದಿಶೇಷ )ಸದೃಶವಾಗಿ ಇದ್ದರು. ಇಂತಹ ಪ್ರಸಿದ್ಧವಾದ ಬಟರಿ ವಂಶವೆಂಬ ಪರಿಶುದ್ಧವಾದ ಆಕಾಶದಲ್ಲಿ ನಕ್ಷಾತ್ರಾದಿಪತಿಯೂ (ಚಂದ್ರ) ಆಳುಪರೆಂಬ ಸಾಮಂತ ರಾಜಮನೆತನದಲ್ಲಿ ಶಿವ‌ಸ್ವರೂಪನಾದವನು ಮಹಾ ವಿಸ್ತಾರವಾದ ದಕ್ಷಿಣಭಾರತದಲ್ಲಿ ನೂರಾರು ಯುದ್ಧವೆಂಬ ಯಜ್ಞಗಳಲ್ಲಿ ಜಯಿಸಿ ಗೋದಾನ ಪರಾಕ್ರಮ ಕಾರ್ಯದಲ್ಲಿ ನಿರತನಾದವನು ದಾನಪಶುಪತಿ ಎಂಬುದಾಗಿ ಹೊಗಳಲ್ಪಟ್ಟವನು ಪಶುಪತಿ ಎಂಬ ಹೆಸರಿನವನು ಆದ ಪಶುಪತಿ ಇದ್ದನು. ವಿಜ ಅರಸನು ಎಂಬ ಆ ಸರಕ್ಕೆಲ್ಲ ಬಟರಿಯ ವಂಶಕ್ಕೆ ಸೇರಿದ ಪ್ರೇಮಾಲಯ ಸುತನಾದವನು ಅಂದರೆ ಆತ ಪ್ರದೇಶದಲ್ಲಿ ಜನಪ್ರಿಯ ಪ್ರೀತಿಪಾತ್ರ ಜನರ ನಂಬಿಗಸ್ಥ ರಾಜನು ಸುಪ್ರಸಿದ್ಧವಾದ ವಿಜ ಅರಸನು ಸೇನ್ದ್ರಕ ಅಂದರೆ ಸೇಂದ್ರಕ ಮತ್ತು ಬಾಣರು ಎಂಬ ಉಭಯ ದೇಶಗಳ ವೀರರ ಸಮಕ್ಷಮ ಅಥವಾ ಸಮ್ಮುಖದಲ್ಲಿ ಓರಂಗಲ್ಲಿನ ಕಾಕತೀಯರು ಅಥವಾ ಕೇಕೆಯರನ್ನು ಮತ್ತು ಕಂಚಿಯ ಪಲ್ಲವರನ್ನು ಕಾದಿ ಹೋರಾಡಿ ಕೊಂದು ಜಯಗಳಿಸಿದವನು. ಶತ್ರುವಿನ ರಕ್ತದಿಂದ ಕೂಡಿದ ಖಡ್ಗವನ್ನು ತೊಳೆದು ವೀರೋಚಿತವಾಗಿ ಕೊಡುವ ಬಾಳ್ಗಚ್ಚು ಎಂಬ ಪ್ರಶಸ್ತಿ ಪುರಸ್ಕಾರವಾಗಿ ಪಲ್ಮಿಡಿ ಮತ್ತು ಮೂಳವಳ್ಳಿಗಳನ್ನು ಆ ಮೂರು ಜನ ರಾಜರು ಕೊಟ್ಟರು. ಬಟರಿ ಕುಲದ ವಂಶಸ್ಥನು ಅಥವಾ ಕ್ಷತ್ರಿಯನು ಆದ ಆಳ ಕದಂಬ ಎಂಬ ಕಾಕುಸ್ಥವರ್ಮನು ಈ ದಾನವನ್ನು ನೀಡಿದನು.(ಇವನು ಪ್ರಮುಖ ಅರಸ) ಇದನ್ನು ಕದ್ದವನಿಗೆ ಮಹಾಪಾತಕ ಅಂದರೆ ದಾನವನ್ನು ಕದ್ದವರಿಗೆ ಮಹಾಪಾತಕ ತಟ್ಟುತ್ತದೆ. ಇಬ್ಬರು ಸಳ್ಬಂಗದ ನಾಡಿನವರು ಅಥವಾ ಆಡಳಿತಾಧಿಕಾರಿಗಳು ಮತ್ತು ವಿಜ ಅರಸರು ಈ ಪಲ್ಮಿಡಿ ಮತ್ತು ಮೂಳವಳ್ಳಿ ಗ್ರಾಮಗಳಿಗೆ ಕುರುಂಬಿಡಿ ಎಂಬ ಹೆಸರಿನ ತೆರಿಗೆಯನ್ನು ಬಿಟ್ಟುಬಿಟ್ಟರು ಅಂದರೆ ವಿನಾಯ್ತಿ ರಿಯಾಯಾತಿ ನೀಡಿದರು. ಅದನ್ನು ನಾಶಪಡಿಸಲು ಯತ್ನಿಸುವರಿಗೆ ಮಹಾಪಾತಕ ತಟ್ಟುತ್ತದೆ ಎಂದು ಶಾಪಾಶಯ ಬರೆಸಿದರು. (ಅಂದರೆ ಮಾನ್ಯ ನೀಡಿದ ಹಳ್ಳಿಗಳ ಗದ್ದೆ ಭೂಮಿಯ ಮಾಡುವವರಿಗೆ ರೈತರಿಗೆ ಅಥವಾ ಒಡೆತನಕ್ಕೆ ಸೇರಿದವರಿಗೆ ಸುಂಕವಿಲ್ಲ) ಸ್ವಸ್ತಿ ಶುಭವಾಗಲಿ ಬ್ರಾಹ್ಮಣ ಶ್ರೇಷ್ಠರಿಗೆ ಈ ಕೊಟ್ಟಿರುವ ಗದ್ದೆ ಇಂತಿಷ್ಟು ಎಂದು ರಾಜ್ಯದ ಬೊಕ್ಕಸಕ್ಕೆ ಒಪ್ಪಿಸುವ ಭೂ ಉತ್ಪತ್ತಿ ಯ ಮೊತ್ತ ಅಥವಾ ಧಾನ್ಯ ರೂಪದ ಮೊತ್ತ ವಿಶೇಷವಾದ ಭೂಮಿಯ ಉತ್ಪಾದನೆಯ ಹತ್ತನೆ ಒಂದು ಭಾಗ ಪತ್ತೊಂದಿ ಎಂಬ ಕರವಿನಾಯಿತಿ ಬಿಟ್ಟುಕೊಟ್ಟರು. ಕನ್ನಡದ ಸಾಹಿತ್ಯದ ಮೊದಲ ಆಕರ ಲಿಪಿ ದಾಖಲೆಯಾದ ಈ ಶಾಸನವು ಪೂರ್ವದ ಹಳಗನ್ನಡ ಕಾಲದ ಭಕ್ತಿಯ ಸಮರ್ಪಣೆ ಭಾವ, ಸಮಕಾಲೀನ ಜನಜೀವನ, ಕ್ಷಾತ್ರಯುಗದ ತೇಜಸ್ಸು, ವೀರಪುರುಷರ ಗುಣಲಕ್ಷಣಗಳು, ಅವರವರ ಕುಲಮೂಲ ವಂಶಮೂಲ ನಾಮೆಗಳು, ಅವರು ಗುಣಗಳು, ಬಾಳ್ಗಚ್ಚು ಎಂಬ ಸಂಸ್ಕೃತಿಯ ಪದದ ಮಹತ್ವ, ಕನ್ನಡ ಅರಸರ ದಾನ ಗುಣ, ಅಂದಿನ ಕಾಲದ ತೆರಿಗೆ ಪದ್ಧತಿ ಮತ್ತು ವಿನಾಯತಿ ಹಾಗೂ ಶಾಪಶಾಯವನ್ನು ಸಹ ಈ ಶಾಸನ ಒಳಗೊಂಡಿದೆ. ಇದು ಕನ್ನಡ ಶಾಸನ ಮತ್ತು ಸಾಹಿತ್ಯದ ಮೊದಲ ದಾಖಲೆಯಾಗಿದ್ದು ಕನ್ನಡಿಗರ ಸಾಂಸ್ಕೃತಿಕ ಭಾಷಿಕ ವೈಶಿಷ್ಟ್ಯವನ್ನು ಘನತೆ ಗೌರವಗಳನ್ನು ಎತ್ತಿ ಹಿಡಿದಿದೆ ಎಂಬುದು ಇಲ್ಲಿ ವೇದ್ಯವಾಗುವ ಸಂಗತಿಯಾಗಿದೆ.

ಸಂತೋಷ್ ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
hrl
hrl
10 months ago

Very informative and useful article.

hrl
hrl
10 months ago

Very informative and useful article

2
0
Would love your thoughts, please comment.x
()
x