ಸುಳ್ಳ ಸಾಕ್ಷಿಗಳ ಊರಿಗೆ: ಅಶ್ಫಾಕ್ ಪೀರಜಾದೆ

1 –

Balu is imprisoned for murder. come soon

sms ಓದುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು ಮತ್ತು ಕಣ್ಣು ಸುತ್ತು ಬಂದಂತಾಗಿತ್ತು. ಬಾಲು ಒಂದು ಹೆಣ್ಣಿನ ಕೊಲೆ ಮಾಡಿ ಪೋಲೀಸರ ಅತಿಥಿಯಾಗಿದ್ದಾನೆ ಎಂದು ನನ್ನ ಇನ್ನೊಬ್ಬ ಗೆಳೆಯ ಕುಮಾರ್ ಬರೆದಿದ್ದ. ಆತ ಹೆಚ್ಚಿನ ವಿವರವೇನೂ ನೀಡಿರಲಿಲ್ಲ. ನನಗೆ ಕುಮಾರ್ ತಿಳಿಸಿದ ಸುದ್ದಿಯಿಂದ ಆಘಾತವಾಗಿದ್ದರೂ ಇದೆಲ್ಲ ಸತ್ಯವಾಗಿರಲಿಕ್ಕಿಲ್ಲ ಸತ್ಯವಾಗುವುದೂ ಬೇಡವೆಂದು ಮನದಲ್ಲಿ ಪ್ರಾರ್ಥಿಸಿದೆ. ಏಕೆಂದರೆ ಬಾಲುವಿನ ನಡವಳಿಕೆ ಸ್ವಭಾವದ ಪೂರ್ಣ ಪರಿಚಯ ನನಗಿದೆ. ಅವನ ನಿರ್ಮಲವಾದ ಪ್ರಶಾಂತವಾದ ವ್ಯಕ್ತಿತ್ವದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಹಾಲಿನಂತಹ ಮನಸ್ಸಿನ ಮನುಷ್ಯನವನು. ಯಾವುದೇ ಒಂದು ವ್ಯಕ್ತಿಯ ಜೀವ ತೆಗೆದುಕೊಳ್ಳುವ ಕಾಯಕಕ್ಕೆ ಕೈ ಹಾಕುವಂತಹ ಕೀಳು ಮನಷ್ಯನಲ್ಲ ಎಂದು ಖಂಡಿತ ಹೇಳಬಲ್ಲೆ, ನಾನು-ಬಾಲು ಒಂದೇ ಜೀವ ಎರಡು ದೇಹದಂತೆ ಬೆಳೆದು ದೊಡ್ಡವರಾದವರು. ಎಲ್ಲರಿಗೂ ಪ್ರಿಯವಾಗುವ ಮಗುವಿನಂತಹ ನಡವಳಿಕೆ. ಇಂತಹವನೊಬ್ಬ ಕೊಲೆ ಮಾಡಿದ್ದಾನೆಂದ್ರೆ ನಂಬಲು ಸಾಧ್ಯವೇ ಇಲ್ಲ. ಬಾಲು ಕೇವಲ ಸ್ನೇಹಿತರನ್ನೇ ಹೊಂದಿದ್ದನೇ ಹೊರತು ಅವನಿಗೆ ಒಬ್ಬನೇ ಒಬ್ಬ ವೈರಿ ಇರಲಿಲ್ಲ. ಇಂತಹ ಅಜಾತು ಶತ್ರುವಿನ ಕೈಯಿಂದ ಕೊಲೆಯಾದ ನೃತದೃಷ್ಟ ಹೆಣ್ಣಾದರೂ ಯಾರು? ಅವನು ಯಾಕೆ ಕೊಲೆ ಮಾಡಿರಬೇಕು ? ಅಂತಹ ಪ್ರಸಂಗವೇನಾದರೂ ಬಂದಿರಬಹುದೆ ? ಹಲವಾರು ಪ್ರಶ್ನೆಗಳು ಏಕಕಾಲಕ್ಕೆ ಧಿಗ್ಗನೇ ದಾಳಿ ಇಟ್ಟವು. ಪಾಪ ಬಾಲು ರಾಕ್ಷಸ ಗುಣದ ಆರಕ್ಷಕರ ಕೈಗೆ ಸಿಕ್ಕು ಒದ್ದಾಡುತ್ತಿರಬೇಕು ಎಷ್ಟು ನರಳುತ್ತಿರಬೇಕು ಎಂಬ ವಿಚಾರ ಬಂದು ಒಂದು ಕ್ಷಣ ಕೂಡ ತಡಮಾಡಲಾಗಲಿಲ್ಲ. ಪತ್ನಿ ವಿಶಾಲುಗೆ ವಿಷಯ ತಿಳಿಸಿದವನೇ ಕಾರು ನನ್ನ ಮೂಲ ಗ್ರಾಮ ಗಂಗಾಪುರದತ್ತ ಓಡಿಸಿದೆ. ಕಾರಿನ ಓಟದ ಗತಿಯಲ್ಲೇ ನನ್ನ ಗತ ಸ್ನೇಹದ ಘಟನೆಗಳು ಒಂದೊಂದೇ ಕಣ್ಣೆದುರು ಬಂದು ತೇಲಿ ಹೋಗುತ್ತಿದ್ದವು.

ಬಾಲು ಹೆಚ್ಚಾಗಿ ನಮ್ಮ ಮನೆಯಲ್ಲೇ ಇರುತ್ತಿದ್ದ ಇಬ್ಬರು ಕೂಡಿಯೇ ಊಟ ಮಾಡುತ್ತಿದ್ದೆವು, ಆಡುತ್ತಿದ್ದೆವು. ಇಬ್ಬರು ಕೂಡಿಯೇ ಶಾಲೆಗೂ ಹೋಗುತ್ತಿದ್ದೆವು. ಬಾಲು ತುಂಬಾ ಸೂಕ್ಷ್ಮ ಸ್ವಭಾವದವನು. ಹೆಣ್ಣಿನಂತೆಯೇ ಕೋಮಲ ಮನಸ್ಸಿನವನು. ಹೆಂಗರಳು ಎಂದರೆ ತಪ್ಪಲ್ಲ. ಜಗಳ ತಂಟೆಗಳಿಂದ ಅವನು ಮಾರು ದೂರೇ ಇರುತ್ತಿದ್ದ. ಎಸ್.ಎಸ್.ಎಲ್.ಸಿ.ಪಾಸಾದ ನಾವಿಬ್ಬರೂ ಪಟ್ಟಣದ ಕಾಲೇಜಕ್ಕೆ ಸೇರಿದ್ದೆವು.

“ಬಾಲು ನೀನು ಹುಡುಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು ನೋಡಮ್ಮ” ಎಂದು ಸಹಪಾಠಿಗಳು ಅವನನ್ನು ಛೇಡಿಸುತ್ತಿದ್ದರು. ಬಾಲು ಅವರ ಮಾತಿಗೆ ಸಿಟ್ಟಾಗದೇ ನವಿರಾದ ನಗೆ ನಕ್ಕು ಸುಮ್ಮನಾಗುತ್ತಿದ್ದ. ಬಹುಶಃ ಇದೇ ಕಾರಣದಿಂದಲೇ ಅವನು ಎಲ್ಲರ ಸ್ನೇಹಕ್ಕೆ ಪಾತ್ರನಾಗಿದ್ದನು.ಪರರ ಭಾವನೆಗಳಿಗೆ ಸ್ಪಂಧಿಸುವ ಹೃದಯ ಅವನದು. ಕಥೆ ಕವನ ಬರೆಯುವ ಹವ್ಯಾಸ ಕೂಡ ಅವನಿಗಿತ್ತು. ಬಾಲು ರಚಿಸಿದ ಕಥೆ-ಕವನಗಳು ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು, ಬಾಲು ಎಷ್ಟು ಚೆನ್ನಾಗಿ ಬರೆಯುತ್ತಿದ್ದನೆಂದ್ರೆ ಅವನು ಬರೆಯುವ ಒಂದೊಂದು ವಾಕ್ಯ ಕೂಡ ಹೃದಯಸ್ಪರ್ಶಿ ಆಗಿರುತ್ತಿತ್ತು, ಹೀಗಾಗಿ ಬಾಲು ಕಾಲೇಜಿಗೆಲ್ಲ “ಸಾಹಿತಿ ಬಾಲು” ಎಂದೇ ಪ್ರಖ್ಯಾತನಾಗಿದ್ದ. ಬಿ.ಎ. ಮುಗಿಸಿದ ನಂತರ ಮನೆ ಜವಾಬ್ದಾರಿಯಿಂದಾಗಿ ಅವನಿಗೆ ಮುಂದೆ ಓದಲಾಗಲಿಲ್ಲ. ನಾನು ಎಲ್.ಎಲ್.ಬಿ.ಮುಗಿಸಿ ಪ್ರ್ಯಾಕ್ಟಿಸ್ ಆರಂಭಿಸಿದೆ. ದಿನ ಕಳೆದಂತೆ ವಕೀಲ ವೃತ್ತಿಯಲ್ಲಿ ಹೆಸರು ಸಹ ಸಂಪಾದಿಸಿದೆ. ಇದೇ ಸಮಯಕ್ಕೆ ವಿಶಾಲಾಕ್ಷಿ ನನ್ನ ಜೀವನ ಸಂಗಾತಿಯಾಗಿ ಬಂದು, ನಾನು ಖಾಯಂ ಪಟ್ಟಣವಾಸಿಯಾದೆ.

2 –

ಕವಿ ಹೃದಯ ಹೊಂದಿದ ಬಾಲು ಕೊಲೆಗೈಯಲು ಸಾಧ್ಯವೆ ? ಏನಾದರೊಂದು ಅಚಾತುರ್ಯ ನಡೆದಿರಲೇ ಬೇಕು, ಇದರ ಹಿಂದೆ ಯಾರದಾದ್ರೂ ಕೈವಾಡ ವಿರಬಹುದೇ. ಬೇಕಂತಲೇ ನನ್ನ ಹಾಗೂ ಬಾಲುವಿನ ಸ್ನೇಹ ಸಹಿಸದವರಾರು ಹೂಡಿದ ಸಂಚಿರಬಹುದೇ• • • ಕಾರು ಆಗಲೇ ನನ್ನೂರಿನ ಮುಖ್ಯ ದ್ವಾರ ಪ್ರವೇಶಿಸಿತ್ತು. ನನ್ನ ಊರು ಈಗ ಹಳ್ಳಿಯಾಗಿರಲಿಲ್ಲ. ಹತ್ತು ವರ್ಷಗಳಿಂದ ನಾನಿಲ್ಲಿಗೆ ಬಂದೇ ಇರಲಿಲ್ಲ. ಹತ್ತು ವರ್ಷಗಳ ಹಿಂದೆ ನೋಡಿದ್ದಕ್ಕೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಹಲವಾರು ಶಾಪಿಂಗ್ ಮಾಲ್ ಗಳು, ಅಪಾರ್ಟ್ಮೆಂಟ್ ಗಳು ತೆಲೆಯೆತ್ತಿ ಸಂಪೂರ್ಣ ಜಾಗತಿಕರಣಕ್ಕೆ ಶರಣಾಗಿತ್ತು. ಸಂಘ ಸಾರ್ವಜನಿಕ ಸಂಘಗಳ ಸ್ವಾಗತ ಫಲಕಗಳು ಬರುವವರನ್ನು ತುಂಬ ಹೃದಯದಿಂದ ಬರಮಾಡಿಕೊಳ್ಳುತ್ತಿದ್ದವು. ರಸ್ತೆಯ ಎರಡೂ ಬದಿಗೂ ಭವ್ಯವಾದ ಬಂಗಲೆಗಳು, ಹೊಟೇಲುಗಳು, ಲಾಜ್‌ಗಳು, ಶಾಲೆ-ಕಾಲೇಜುಗಳು ಚಿಕ್ಕ-ಚಿಕ್ಕ ಉದ್ದಿಮೆಗಳು ತಲೆಯೆತ್ತಿ ನಿಂತಿದ್ದವು. ಒಟ್ಟಿನಲ್ಲಿ ನನ್ನ ಹಳ್ಳಿ ಹತ್ತೇ ಹತ್ತು ವರ್ಷಗಳಲ್ಲಿ ಒಂದು ಬ್ರಹತ್ ಪಟ್ಟಣವಾಗಿ ಪರಿವರ್ತನೆಯಾಗಿತ್ತು.

ಊರು ಆ ಅಂಚಿಗೆ ನಮ್ಮ ತೋಟ, ತಂದೆ ತಾಯಿಗೆ ಒಬ್ಬನೇ ಮಗನಾದ ನಾನು ಅವರ ಸಾವಿನ ನಂತರ ತೋಟ ಪರದೇಶಿಯಾಗುವದು ಬೇಡಂತ ಬಾಲುವಿನ ಸುಪರ್ದಿಗೆ ವಹಿಸಿದ್ದೆ. ಅವನೇ ಎಲ್ಲ ಬಿತ್ತನೆ, ಕಳೆ, ನೀರು, ಫಸಲು ರಾಶಿ ಇತ್ಯಾದಿಯಲ್ಲ ಅವನೇ ನೋಡ್ಕೋತ್ತದ್ದ. ನನ್ನ ಅಂತಿಮ ದಿನಗಳಲ್ಲೇ ನಾನ ನನ್ನ ಮಣ್ಣಿಗೆ ಮರಳುವ ವಿಚಾರ ಮಾಡಿದ್ದೆ. ಆ ವರೆಗೆ ತೋಟದ ದೇಖರೇಕಿಯಾಗುತ್ತದೆ ಎನ್ನುವ ಉದ್ದೇಶದಿಂದ ಬಾಲುಗೆ ಅದನ್ನು ಒಪ್ಪಿಸಿದ್ದೆ. ಬಾಲು ತನ್ನ ತಂದೆ ತಾಯಿಗಳು ಬಿಟ್ಟು ಹೋದ ಸ್ವಲ್ಪ ಜಮೀನದ ಜೊತೆಗೆ ನಮ್ಮ ತೋಟ ಕೂಡ ನೋಡ್ಕೊತಿದ್ದ. ಆತ ತೋಟದಿಂದ ಬರುತ್ತಿದ್ದ ಆದಾಯವನ್ನು ನೀಡಲು ಅಥವಾ ಜಮೀನ ಸಂಬಂಧಿಸಿದ ಏನಾದರೂ ವಿಷಯ ಚರ್ಚಿಸಲು ಅಂತಾ ವರ್ಷಕ್ಕೆ ಒಂದೆರಡು ಬಾರಿ ನನ್ನ ಮನೆಗೆ ಬಂದು ಹೋಗುತ್ತಿದ್ದ. ಜಮೀನಿಂದ ಬಂದ ಆದಾಯ ನಾ ಎಷ್ಟೋ ಬಾರಿ ಬೇಡ ಎಂದು ಒತ್ತಾಯಿಸಿದ್ದಾಗಲೂ ಅವನು ಹಠ ಹಿಡಿದು ಅದನ್ನು ಕೊಟ್ಟೇ ಹೋಗುತ್ತಿದ್ದ. ಏಕೆಂದ್ರೆ, ಉಳುವವನಿಗೆ ಅದರ ಲಾಭ ಸಿಗಬೇಕೆನ್ನುವದು ನನ್ನ ಪ್ರಾಮಾಣಿಕ ಅಭಿಪ್ರಾಯವಾದರೆ ಜಮೀನ ಮಾಲಿಕರಿಗೆ ಅದರ ಲಾಭ ದಕ್ಕಲೇ ಬೇಕೆನ್ನುವುದು ಅವನ ನಿಲುವು ಆಗಿತ್ತು. ಬೇಡ ಬೇಡವೆಂದರೂ ಅವನು ನಮಗೆ ವರ್ಷಕ್ಕೆ ಬೇಕಾಗುವ ಕಾಳು-ಕಡಿ ಎಲ್ಲ ಕಳಿಸಿಕೊಡುತ್ತಿದ್ದ.

ಕಾರು ತೋಟದ ಮನೆಯ ಎದುರು ನಿಲ್ಲುತ್ತಿದ್ದಂತಯೇ ಅಲ್ಲಿನ ಆ ಹಸಿರು ಸೋಬಗಕ್ಕೆ ಸೋತು ಮೈಮರೆತೆ. ಸಮೃದ್ಧವಾಗಿ ಫಲವತ್ತಾಗಿ ಬೆಳೆದು ನಿಂತ ಬೆಳೆ ಹೃನ್ಮನ ತಣಿಸುತ್ತಿದ್ದವು. ಹೆಮ್ಮರಗಳಿಂದ ಅವೃತ್ತಗೊಂಡಿದ್ದ ಮನೆಯಂತೂ ಸ್ವರ್ಗ ಸದೃಶ್ಯವಾಗಿತ್ತು. ಕಿಲ ಕಿಲನೆ ನಗುತ್ತಿದ್ದ ಹಸಿರು ನಯನ ಮನೋಹರವಾಗಿತ್ತು. ಅಲ್ಲೇ ಹಾರಾಡುತ್ತಿದ್ದ ಪಕ್ಷಿಗಳ ಇಂಚರ ಕಿವಿಗಿಂಪು ನೀಡುತ್ತಿದ್ದವು. ಇಂತಹ ನಾಕಮಯ ಪರಿಸರ ನಗರದಲ್ಲೆಲ್ಲಿ? ಅಲ್ಲಿ ಬರೀ ಅವಿಶ್ರಾಂತ ಯಾಂತ್ರಿಕ ಬದುಕು. ಹೊಗೆ ಉಗುಳುವ ಮಶಿನ್ ಹಾಗೂ ಮನಷ್ಯರ ಕರ್ಕಶ ಧ್ವನಿ ಸಹಿಸಲು ಅಸಾಧ್ಯ, ಆದರೆ ಈ ಊರು ಕೂಡ ಅದೇ ರೂಪದಲ್ಲಿ ಬದಲಾಗುತ್ತಿರುವುದು ಒಂದರ್ಥದಲ್ಲಿ ನನ್ನ ಮನಸ್ಸಿಗೆ ವೇದನೆ ತಂದಿತ್ತು. ಇವುಗಳ ನಡುವೆ ಬಾಲು ಮಾಡಿದ ಕೊಲೆಯ ಆತಂಕ ಬೇರೆ. ಯಾರದೋ ಹೆಜ್ಜೆ ಸಪ್ಪಳಕ್ಕೆ ಎಚ್ಚೆತ್ತು ನೋಡಿದೆ. ನಮ್ಮ ಮನೆಯ ಆಳು ಮನುಷ್ಯ ಶಿವಪ್ಪ ಬರುತ್ತಿದ್ದ. ಆತ ಕಾರ ಹತ್ತಿರಕ್ಕೆ ಬಂದು ‘ ಯಾರಪ್ಪ ಏನ್ ಬೇಕಾಗಿತ್ತು ?’ ಎಂದು ಕೇಳಿದ.

” ಏನ್ ಶಿವಪ್ಪ ಗುರ್ತ ಸಿಗಲಿಲ್ಲವೇನು ?” ನಾನು ಅಶೋಕ ಎಂದು ಪರಿಚಯಿಸಿಕೊಂಡಿದ್ದೇ ತಡ ಶಿವಪ್ಪ ತನ್ನಿಂದ ಮಹಾಪರಾಧವಾದಂತೆ ಹೇಳಿದ.

“ಕ್ಷಮಿಸಿ ಅಶೋಕಪ್ಪ, ಗುರ್ತಾ ಸಿಗಲಿಲ್ಲ. ನಿಮಗೆ ನೋಡಿ ಬಹಳ ದಿವಸಾತು. ಅಲ್ಲದ ಕಣ್, ಬ್ಯಾರೆ ಸರಿಯಾಗಿ ಕಾಣಾಂಗಿಲ್ಲ ” ಎನ್ನುತ್ತ ಬನ್ನಿ ಮನೆಯೊಳಗೆ ಎಂದು ಆಹ್ವಾನಿಸಿದ. ನಾನು ಒಳಗೆ ಹೋಗಿ ತೂಗು ಮಂಚದ ಮೇಲೆ ಕುಳಿತೆ. ಶಿವಪ್ಪ ಕುಡಿಯಲು ಹಾಲು ಕಾಫಿ ತಂದುಕೊಟ್ಟ. ನಾನು ಹೀರುತ್ತ ಕೇಳಿದೆ. ಶಿವಪ್ಪ-ಬಾಲು ಕೊಲೆ ?…. ನನ್ ಮಾತಿನ್ನೂ ಪೂರ್ತಿಯಾಗಿರಲಿಲ್ಲ. ಶಿವಪ್ಪ ಕಣ್ಣಲ್ಲಿ ನೀರು ತಂದುಕೊಂಡು ಹೇಳಿದ.

“. . . . . ಬಾಲು ಹಾಗೆ ಮಾಡಬಾರದಾಗಿತ್ತು”
ಶಿವಪ್ಪನ ನಾಲಿಗೆಯಿಂದ ಜಾರಿದ್ದೆ ಈ ಮೊದಲು ಮಾತು.
ಹಾಗಾದ್ರೆ ಬಾಲು ಕೊಲೆ ಮಾಡಿದ್ದು ನಿಜಾನಾ ? ಯಾಕೆ ? ಹೇಗೆ ? ಯಾರಿಗೆ ? ಸಂಪೂರ್ಣ ಮಾಹಿತಿ ಪಡೆಯುವ ಕುತೂಹಲದಿಂದ ನಾನಾ ಅವನನ್ನ ಪ್ರಶ್ನಿಸಿದ್ದೆ.

“ ಅದೇ ಆ ಕಸ್ತೂರಿಯನ್ನು “

”ಯಾರು ಕಸ್ತೂರಿ ? ಆ ನನ್ನ ಕಸ್ತೂರಿಯೇ ?” ನಾನು ಆತುರನಾಗಿದ್ದೆ.

“ನನ್ನ ಕಸ್ತೂರಿ’ ಎನ್ನುವ ಮಾತು ನನಗರಿವಿಲ್ಲದಂತೆ ನನ್ನ ನಾಲಿಗೆಯಿಂದ ಜಾರಿತ್ತು. ಕಸ್ತೂರಿ ನನ್ನ ಬಾಲ್ಯ ಸ್ನೇಹಿತೆ ಎಂದು ಹೇಳಿದರೆ ತಪ್ಪಾಗದು. ಅವಳ ನನ್ನ ಸಂಬಂಧ ತೀರ ವಿಚಿತ್ರವಾದದ್ದು ಪ್ರೇಮಕ್ಕೆ ವಯಸ್ಸಿನ ನಿರ್ಭಂಧವಿಲ್ಲ ಎನ್ನುತ್ತಾರಲ್ಲ ! ಅದು ನನ್ನ ಮಟ್ಟಿಗಂತೂ ನೂರಕ್ಕೆ ನೂರರಷ್ಟು ಸತ್ಯ. ಕಸ್ತೂರಿ ನನ್ನ ಪಾಲಿಗೆ ಬಂದ ಪ್ರಥಮ ಪ್ರೇಮವೆಂದೇ ಹೇಳಬೇಕು. ಬಾಲ್ಯದಲ್ಲಿ ನಾವಿಬ್ಬರೂ ಪ್ರೇಮಿಗಳು. ನನ್ನ ಹಾಗೂ ಕಸ್ತೂರಿಯ ನಡುವೆ ಒಂದು ಬಗೆಯ ಆಕರ್ಷಣೆ ಇತ್ತು. ಎಲ್ಲರ ಕಣ್ಣಿಗೆ ನಾವು ಉತ್ತಮ ಗೆಳೆಯರಾಗಿ ಕಾಣುತ್ತಿದ್ದರೂ ನಾವು ಗೆಳೆಯರಾಗಿರಲಿಲ್ಲ. ಇನ್ನೇನೋ ಒಂದು ಅಲೌಕಿಕ ಆಕರ್ಷಣೆ ನಮ್ಮ ನಡುವೆ ಇದೆ ಅನಿಸುತಿತ್ತು. ಎಳೆ ವಯಸ್ಸಿನಲ್ಲಿ ಪ್ರೇಮದ ಅರಿವು ನನಗಿರಲಿಲ್ಲವಾದರೂ ನನ್ನ ಹಾಗೂ ಕಸ್ತೂರಿ ನಡುವೆ ಇದ್ದದ್ದು ಅನುರಾಗವೇ ಎಂದಿಗೂ ಒಮ್ಮೊಮ್ಮೆ ಅನಿಸುತ್ತದೆ. ನಿಜವಾದ ಪ್ರೀತಿಗೆ ಅಲೌಕಿಕವಾದ ಶಕ್ತಿ ಇದೆ. ಅದು ಅನಂತ ಆಕಾಶದಂತೆ ವಿಶಾಲ ಸಾಯುವವರೆಗೂ ಅದರ ನೆರಳು ನಮ್ಮ ಮೈಮನದ ಮೇಲೆ ಆವರಿಸಿರುತ್ತದೆ. ಪ್ರೇಮ ಕಳೆದು ಹೋದರು ಅದರ ನೆನಪು ಮಾತ್ರ ಎಂದೆಂದಿಗೂ ಎದೆ ಗೂಡಿನಲ್ಲಿ ಭದ್ರವಾಗಿ ಶಾಶ್ವತವಾಗಿರುತ್ತದೆ. ಮರೆಯಲು ಪ್ರಯತ್ನಿಸಿದರೂ ಅದು ಚಿತ್ರ ಪಟಲದಿಂದ ಮರೆಯಾಗುವುದಿಲ್ಲ. ಹಾಗೆಯೇ ನಾನೂ ಕೂಡ ಕಸ್ತೂರಿಯ ಪ್ರೇಮವೆಂದೂ ಮರೆಯಲಿಲ್ಲ. ವಿಶಾಲು ನನ್ನ ತೋಳತೆಕ್ಕೆಲ್ಲಿದ್ದಾಗಲೂ ನಾನು ಕಸ್ತೂರಿಯ ನೆನಪು ಕಣ್ಮುಂದೆ ನಗುವುದು ಮಾನವ ಸಂಬಂಧಗಳ ವಿಚಿತ್ರವಲ್ಲದೇ ಇನ್ನೇನು?. ಹಳ್ಳಿ ಮಣ್ಣಲ್ಲಿ ಅರಳಿದ ಅವಳ ನೀಲವರ್ಣದ ಆಕರ್ಷಕ ಸುಂದರ ಮುಗ್ಧ ಮುಖ ಮರೆಲು ತಾನೇ ಹೇಗೆ ಸಾಧ್ಯ?. ಕಸ್ತೂರಿಯ ನೆನಪುಗಳಿಂದ ನನ್ನನ್ನು ಬೇರ್ಪಡಿಸಿಕೊಳ್ಳಲು ಇದೂ ವರೆಗೂ ಸಾಧ್ಯವಾಗಿರಲಿಲ್ಲ. ಅವಳೂ ಕೂಡ ನನ್ನ ಸ್ಮರಣೆಯಲ್ಲೇ ದಿನ ದೂಡುತ್ತಿದ್ದಳು ಅನಿಸುತ್ತೆ. ಕಸ್ತೂರಿ ಮಾನಸಿಕವಾಗಿ ನನ್ನನ್ನು ಸಮರ್ಪಿಸಿಕೊಂಡು ಬಿಟ್ಟಿದ್ದಳು. ನನ್ನ ಮದುವೆಯ ನಂತರ ತನ್ನ ಮದುವೆ ವಿಚಾರವಂತೂ ತೆಗೆದು ಬಿಟ್ಟಿದ್ದಳು. ಇಷ್ಟಾದರೂ ಅವಳೆಂದೂ ನನ್ನ ವಿವಾಹ ಜೀವನಕ್ಕೆ ಅಡ್ಡಿಯಾದವಳಲ್ಲ. ನನ್ನಂತೆ ಅವಳೂ ಎಂದಿಗೂ ತನ್ನ ಸೂಪ್ತ ಪ್ರೇಮ ನಿವೇದಿಸಿದವಳಲ್ಲ. ಅವಳ ನಿಸ್ವಾರ್ಥ ಪ್ರೇಮಕ್ಕೆ ನಾನೆಷ್ಟು ಹೊಗಳಿದರೂ ಕಡಿಮೆಯೇ ಆದರೆ ನನ್ನ ಉಸಿರಲ್ಲಿ ಉಸಿರಾಗಿ ಬೆರೆತಿದ್ದ ಕಸ್ತೂರಿಯನ್ನು ಮುಗಿಸುವ ಮೂಲಕ ಬಾಲು ನನ್ನನ್ನೇ ಮುಗಿಸುವ ಕೆಲಸಕ್ಕೆ ಕೈ ಹಾಕಿದನೇ. ಅವಳು ತೋಟದ ಪಕ್ಕ ಇರುವ ಇನ್ನೊಂದು ತೋಟದ ಮಾಲಿಕರ ಮಗಳು. ಹೀಗಾಗಿ ಬಾಲ್ಯದಿಂದಲೇ ಅದೇನೋ ಆಕರ್ಷಣೆ, ಒಂದುತರಹ ಮೌನ. ನಾನು ಮರಳಿ ನನ್ನೂರಿಗೆ ಬಾರದಿರಲು ಅವಳ ನೆನಪು ಕೂಡ ಕಾರಣವಾಗಿತ್ತು. ಬಂದಾಗ ಅವಳ ನನ್ನ ನಡುವೆ ಏನಾದರು ಘಟಿಸಿಬಿಟ್ಟರೆ ನಾನು ಶಾಲುಗೆ ಏನಂತ ಮುಖ ತೋರಿಸಲಿ. ನಾನು ವಿವಾಹಿತ ಅವಳು ಅವಿವಾಹಿತಳು. ಆದ್ದರಿಂದಲೇ ಅವಳಿಂದ ಆದಷ್ಟು ದೂರ ಇರಲು ಪ್ರಯತ್ನಿಸಿದ್ದೆ. ಅವಳು ಕೂಡ ಅಷ್ಟೇ ತನ್ನ ಪ್ರಾಯವೆಲ್ಲ ನನ್ನ ನೆನಪಿನಲ್ಲೇ ತ್ಯಾಗ ಮಾಡಿದ್ದಳು. ಆದರೆ ಬಾಲು ಇಂದು ನನ್ನ ಜೀವನದ ಒಂದು ಸುಂದರ ಅಧ್ಯಾಯಕ್ಕೆ ಮಂಗಳ ಹಾಡಿದ್ದ.

3 –

ನಾನಿನ್ನೂ ಕಸ್ತೂರಿಯ ನೆನಪಿನ ಲೋಕದಲ್ಲಿ ವಿಹರಿಸುತ್ತಿರುವಾಗಲೇ ನನ್ನ ಮಾನಸಿಕ ಸ್ಥಿತಿ ಅರಿತ ಶಿವಪ್ಪ ಎಚ್ಚರಿಸಿದ್ದ. ನಾನು ಕೇಳಿದೆ-
” ಹಾಂ! ಅವನ್ಯಾಕೆ ಕೊಂದ ಕಸ್ತೂರಿಯನ್ನ?” ವಾಸ್ತವಕ್ಕೆ ಬಂದು ಹೇಳಿದ್ದೆ.
“ಅದೇಗೆ ಹೇಳಲಿ ಬುದ್ದಿ! ಆದರೆ ಬಾಲು ಹಾಗ ಮಾಡಬಾರದಾಗಿತ್ತು.”
“ಬಾಲು ಏನು ಮಾಡಿದ ಸರಿಯಾಗಿ ಬಿಡಿಸಿ ಹೇಳು” ಎಂದೆ.
“ಬಾಲು ಬಹಳ ದಿನಗಳಿಂದ ಕಸ್ತೂರಿಯ ಹಿಂದೆ ಬಿದ್ದಿದ್ದನಂತೆ. ಈ ಸಂಬಂದ ಅವರ ಮನೆಯವರು ಕೂಡ ತಕಾರಾರು ತಗೆದಿದ್ದರಂತೆ, ಈ ಸಂಬಂದ ಬಾಲುಗೂ ಬಾಲು ಹೆಂಡ್ತಿಗೂ ಸಾಕಷ್ಟು ಬಾರಿ ಜಗಳವಾಗಿತ್ತಂತೆ. ಅಲ್ಲದೇ ಈ ವಿಷಯ ತಮಗೆ ತಿಳಿಸುವದಾಗಿ ಕಸ್ತೂರಿ ಹೆದರಿಕೆ ಹಾಕಿದ್ದಳಂತೆ. ಹೀಗೆ ತನ್ನ ಆಸೆ ಮಾನ ಮರ್ಯಾದೆಗೆ ಸಂಚಕಾರದ ಮಾತು ಕೇಳಿ ಕ್ಷುದ್ರಗೊಂಡ ಬಾಲು ತನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಒಂದು ದಿನ ಸಿಟ್ಟಿನಲ್ಲಿ ಅವಳನ್ನೆ ಮುಗಿಸಿಬಿಟ್ಟ ಬುದ್ದಿ..”

ಶಿವಪ್ಪ ತನ್ನ ತಾತಾನ ಕಾಲದಿಂದಲೂ ನಂಬಿಗಸ್ಥ ಮನೆಯಾಳಾಗಿದ್ದರಿಂದ ಅವನ ಮಾತು ನಂಬಲೇ ಬೇಕಾಗಿತ್ತು. ಅವನು ಸುಳ್ಳು ಹೇಳಲಾರನೆಂದು ನನಗೆ ಗೊತ್ತಿತ್ತು. ಕಸ್ತೂರಿಯ ಬದುಕಿಗೆ ಶಾಪವಾಗಿ ಅವಳ ಬದುಕನೇ ಅಂತ್ಯಗೊಳಿಸಿದ್ದ ಬಾಲುವಿನ ಮೇಲೆ ವಿಪರೀತ ಕೋಪ ಉಕ್ಕಿ ಬಂತು. ಅವನನ್ನು ಕೊಚ್ಚಿ ಹಾಕಿದರೂ ಕಡಿಮೆಯೇ. ಅವನನ್ನು ಶಿಕ್ಷೆಗೆ ಗುರಿಪಡಿಸಿ ನಿತ್ಯ ನರಳುವಂತೆ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕೆಂದು ಯೋಚೆ ಬಂದ್ರೂ ಯಾವದಕ್ಕೂ ಅವನಿಗೊಮ್ಮೆ ಭೆಟ್ಟಿಯಾದ ಮೇಲೆ ತೀರ್ಮಾನ ತಗೆದುಕೊಳ್ಳುವುದು ಒಳಿತೆಂದು ಭಾವಿಸಿದೆ. SMS ಮಾಡಿದ ಗೆಳೆಯ ಕುಮಾರ್ ನಿಗೆ ಕರೆ ಮಾಡಿ ಬರಹೇಳಿ ಅವನ‌ ಸಂಗಡ ಠಾಣೆಗೆ ಹೋದೆ. ಲಾಕಪ್‌ನಲ್ಲಿದ್ದ ಅವನು ಏನನ್ನೂ ಹೇಳಲು ನಿರಾಕರಿಸಿದ. ಆಗ ನಾನು –
“ನನ್ನಾಣೆ ಮಾಡಿ ಹೇಳು ನೀನು ಕಸ್ತೂರಿಯನ್ನು ಕೊಲೆ ಮಾಡಿದ್ದು ನಿಜಾನಾ? ನಾನು ಒತ್ತಾಯದಿಂದ ಪದೇ ಪದೇ ಕೇಳಿದಾಗ ಬಾಲು ಬಾಯಿ ಬಿಟ್ಟ.”

” ನನ್ನ ನಂಬು ಕಸ್ತೂರಿಯ ಕೊಲೆ ನಾ ಮಾಡ್ಲಿಲ್ಲ. ನಾ ಕೊಲೆಗಾರನಲ್ಲ. ದಯವಿಟ್ಟು ಹೇಗಾದರೂ ಮಾಡಿ ನನ್ನ ಕಾಪಾಡು ಇದೆಲ್ಲ ನನ್ನ ನಿನ್ನ ಸ್ನೇಹ ಕೆಡಸಲು ಮಾಡಿದ ಪಿತೂರಿ, ನಾನು ಜೈಲಿಗೆ ಹೋದ ನಂತರ ಅನಾಥವಾಗುವ ನಿನ್ನ ಜಮೀನ ಲಪಟಾಯಿಸುವ ಸಂಚು ಇದೆಲ್ಲ ಅದೇ ಕಸ್ತೂರಿಯ ಅಣ್ಣನ ಕರಾಮತ್ತು ಅನಿಸುತ್ತೆ….” ಎಂದು ಏನೇನೋ ಕತೆ ಕಟ್ಟಿ ಕಣ್ಣಲ್ಲಿ ನೀರು ತಂದುಕೊಂಡು ತನ್ನನ್ನು ಶಿಕ್ಷೆಯಿಂದ ಕಾಪಾಡುವಂತೆ ಬಾಲು ಪರಿಪರಿಯಾಗಿ ಪ್ರಾರ್ಥಿಸಿದ್ದ. ಆಗ ನನ್ನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಈತ ಹೇಳುತ್ತಿರುವುದರಲ್ಲಿ ಸತ್ಯ ಇದೆ ಅನಿಸಿತು. ಹೌದು, ಇವನು ನಿಜವಾಗಿಯೂ ಕಸ್ತೂರಿಯ ಕೊಲೆ ಅನ್ನುವುದಕ್ಕೆ ಯಾವ ಸಾಕ್ಷಿ ಪುರಾವೆಗಳು ಇರಲಿಲ್ಲ. ಇವನೇ ಕೊಲೆಗಾರ ಅನ್ನುವುದಕ್ಕೆ ಏನಾದರು ಪುರಾವೆ ಸಿಗಬಹುದೇ ಎಂದು ಸುತ್ತಮುತ್ತಲಿನವರ ಹತ್ತಿರ, ಪೊಲೀಸ್ ರ ಹತ್ತಿರ ವಿಚಾರಿಸಿದೆ. ಕೇವಲ ಅವರ ಅಣ್ಣ ಕೊಟ್ಟ ಕಂಪ್ಲೀಟ್ ನ ಆಧಾರದ ಮೇಲೆ ಸಂದೇಹದ ಮೇಲೆ ಬಂದಿಸಲಾಗಿದೆ. ನಾವು ಸಾಕ್ಷಿಗಳನ್ನ ಹುಡುಕುತ್ತಿದ್ದೇವೆ. ಅದೆಲ್ಲ ನ್ಯಾಲಯದಲ್ಲಿ ತೀರ್ಮಾನ ಆಗುತ್ತೆ ಎಂದು ಪೊಲೀಸ್ ರು ಹೇಳಿದರು. ಹಾಗಾದ್ರೆ ಕಸ್ತೂರಿಯ ಕೊಲೆ ಯಾರು ಮಾಡಿರಬೇಕು ? ಮತ್ತೊಂದು ಪ್ರಶ್ನೆ ಉದ್ಭವವಾಗಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಖಂಡಿತ ಬಾಲುಗೆ ರಕ್ಷಿಸಬಹುದು. ಈ ನಡುವೆ ಇದರಲ್ಲಿ ಶಿವಪ್ಪನ ಪಾತ್ರವೂ ಇದೆ ಎಂದು ಸೂಕ್ಷ್ಮವಾಗಿ ಬಾಲು ಸೂಚನೆ ನೀಡಿದ್ದ. ಹೀಗಾಗಿ ಯಾರಿಗೆ ನಂಬಬೇಕು ಯಾರಿಗೆ ಬಿಡಬೇಕು ಎನ್ನುವುದು ನನಗೆ ತಿಳಿಯದಾಗಿತ್ತು. ಆದರೆ ಅದೆಷ್ಟು ಸತ್ಯವೋ ಗೊತ್ತಿರಲಿಲ್ಲ. ಬಾಲುವಿನ ಭೆಟ್ಟಿಯ ನಂತರ ಅವನ ಬಗ್ಗೆ ಮೂಡಿದ್ದ ತಪ್ಪು ಅಭಿಪ್ರಾಯವೆಲ್ಲ ತೊಳೆದು ಹೋಗಿತ್ತು. ಒಟ್ಟಿನಲ್ಲಿ ನಾನು ಬಾಲುನನ್ನು ಕಾಪಾಡಲು ತೀರ್ಮಾನಿಸಿದೆ.

4 –

ಬಾಲು ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದೆ. ನನ್ನ ವಾದ ಚಾತುರ್ಯದಿಂದ ಬಾಲುಗೆ ಕೊಲೆಗಾರನೆಂದು ಪುಷ್ಠೀಕರಿಸುವ ಸಾಕ್ಷಿಗಳು ಇಲ್ಲದಕ್ಕೆ ಬಾಲು ನಿರಪರಾಧಿಯಂದು ಎಂದು ತೀರ್ಮಾನವಾಗುವ ಕಾಲ ಸನ್ನಿಹಿತವಾಗಿತ್ತು. ಬಾಲು ಅಪರಾಧಿಯೆನ್ನಲು ಒಂದೇ ಒಂದು ಬಲವಾದ ಸಾಕ್ಷಿ ಇರಲಿಲ್ಲ. ಇನ್ನೇನು ಬಾಲು ನಿರಪರಾಧಿ ಎಂದು ಪರಿಗಣಿಸಿ ನ್ಯಾಯಾಧೀಶರು ತೀರ್ಪು ನೀಡಬೇಕು ಎನ್ನುವಷ್ಟರಲ್ಲಿ ಬಾಲು ಕೂಗಿ . …. ಕೂಗಿ….. ಹೇಳಲಾರಂಭಿಸಿದ.

ಜಡ್ಜ್ ಸಾಹೇಬ್ರೆ ನಾನೇ ಕೊಲೆಗಾರ. . . .
ಕಸ್ತೂರಿಯನ್ನು ಕೊಂದಿದ್ದು ನಾನೇ… . . .
ನನಗೆ ಶಿಕ್ಷೆಯಾಗಬೇಕು . . . .
ನನಗೆ ಫಾಶೀ ಸಜೆ ನೀಡಿ…..
ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.

ಬಾಲುವಿನ ಹುಚ್ಚಾಟ ನೆರದಿದ್ದ ಎಲ್ಲ ಜನರಲ್ಲಿ ಆಶ್ಚರ್ಯ ತಂದಿತ್ತು. ಅವನೇನು ಹೇಳುತ್ತಿದ್ದಾನೆಂದು ಬಹುಶಃ ಅವನಿಗೆ ಗೊತ್ತಿರಲಿಕ್ಕಿಲ್ಲ. ನಾನು ಕಷ್ಟ ಪಟ್ಟು ಗೆದ್ದಿದ್ದ ಕೇಸು ಈಗ ಬಾಲುವಿನ ಮೂರ್ಖತನದಿಂದ ಸೂತ್ರ ಹರಿದ ಗಾಳಿಪಟದಂತಾಗಿತ್ತು. ನನ್ನ ಶ್ರಮದ ಮೇಲೆ ಆತ ತಣ್ಣೀರೆರೆಚಿದ್ದ. ಮೊದಮೊದಲು ನಾನು ಕೊಲೆಗಾರನಲ್ಲವೆಂದು ಹೇಳುತ್ತಿದ್ದವನು ಹೀಗೆ ಏಕಾಏಕಿ ತಾನೇ ಕೊಲೆಗಾರನೆಂದು ಒಪ್ಪಿಕೊಳ್ಳುತ್ತಿರುವನೇಕೆ ? ಅವನ ಈ ವಿಚಿತ್ರ ವರ್ತನೆ ನನ್ನಲ್ಲಿ ದಿಗಿಲು ಹುಟ್ಟಿಸಿತು. ಜನರಲ್ಲಿ ಗುಸು ಗುಸು ಆರಂಭವಾಯಿತು. ನ್ಯಾಯಾಧೀಶರು ಆಜ್ಞೆ ಮಾಡಿದರು.
‘ನೀವು ಏನ್ ಹೇಳೋಕಂತಿರೋ ಸರಿಯಾಗಿ ಸ್ಪಷ್ಟವಾಗಿ ಹೇಳಿ ‘ ಎಂದಾಗ ಬಾಲು ತನ್ನ ಮನದ ಅಳಲನ್ನು ಹೊರಗೆ ಹಾಕಿದ.

ಆ ವಯಸ್ಸಿನಲ್ಲಿ ನಾವು ಈ ಜಗತ್ತಿಗೆ ವಂಚಿಸಬಲ್ಲೆ ಆದರೆ ನನ್ನ ಈ ಆತ್ಮವನ್ನೆಲ್ಲ, ಈಗಾಗಲೇ ನಾನು ಕೊಲೆಗಾರನಲ್ಲವೆಂದು ಸುಳ್ಳು ಹೇಳಿ ಸಾಕಷ್ಟು ಮನೋ ಹಿಂಸೆ ಅನುಭವಿಸಿದ್ದು ಸಾಕು. ಇನ್ನು ಈ ಹಿಂಸೆ ಸಹಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಮನೋ ಹಿಂಸೆ ದೈಹಿಕ ಹಿಂಸೆಗಿಂತ ಉಗ್ರವಾದದ್ದು. ಸುಳ್ಳು ಹೇಳಿದ್ದಕ್ಕೆ ನಾನು ಪಶ್ಚಾತ್ತಾಪ ಪಡುತ್ತಿದ್ದೇನೆ. ಹೊರಗಿನ ಯಾವುದೇ ಸಾಕ್ಷಿಗಳಿಗಿಂತ ಮನಸಾಕ್ಷಿಯೇ ಮುಖ್ಯವಾದ ಸಾಕ್ಷಿ , ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನಾನು ಬದುಕುಳಿಯಬಹುದು. ಆದರೆ ನನ್ನ ಆತ್ಮಸಾಕ್ಷಿಗೆ ಏನೆಂದು ಉತ್ತರಿಸಿಲಿ. ಇಂದು ಮಾಡಿದ ಒಂದೇ ಒಂದು ಪಾಪ ನನ್ನ ಸಾವಿನ ವರೆಗೂ ನೆರಳಾಗಿ ಬೆಂಬತ್ತಿ ಬರುವದು ಬೇಡ. ಜಡ್ಜ್ ಸಾಹೇಬರೇ ನನಗೆ ಶಿಕ್ಷೆ ನೀಡಿ, ನಾನು ಅದನ್ನ ಸಂತೋಷದಿಂದ ಅನುಭವಿಸುತ್ತೇನೆ .” ಎಂದು ತಾನು ಮಾಡಿದ ಕೊಲೆ ಬಗ್ಗೆ ವಿವರವಾಗಿ ಹೇಳಿದ. ” ಮನುಷ್ಯ ತಪ್ಪು ಮಾಡುವದು ಸಹಜ, ಆದರೆ ಆ ತಪ್ಪನ್ನು ತಿದ್ದಿಕೊಂಡು ಬಾಳುವವನೇ ನಿಜವಾದ ಮನುಷ್ಯ. ನಾನೂ ತಪ್ಪು ಮಾಡಿದ್ದೇನೆ, ತಪ್ಪು ಮಾಡದೇ ಇರುವದಕ್ಕೆ ನಾನೇನೂ ಮಹಾತ್ಮನೂ ಅಲ್ಲ ; ದೇವರೂ ಅಲ್ಲ, ಮೊದಲಿನಿಂದಲೂ ನಾನು ಕಸ್ತೂರಿಯನ್ನು ಬಯಸುತ್ತಿದ್ದೆ. ಇಂದಲ್ಲ ನಾಳೆ ಅವಳು ನನಗೆ ಸಿಗುತ್ತಾಳೆ ಎನ್ನುವ ನಂಬಿಕೆ ನನ್ನಲ್ಲಿ ಇತ್ತು. ಹೇಗಾದರೂ ಮಾಡಿ ಅವಳನ್ನು ಒಪ್ಪಿಸಿಯೇ ಬಿಡಬೇಕೆಂದು ಅವರು ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿಕೊಂಡು ಒಂದು ದಿನ ರಾತ್ರಿ ಅವ್ರ ಮನೆಗೆ ಹೋದೆ. ಅವರ ಮನೆಯವರೆಲ್ಲ ಯಾವುದೋ ಕಾರ್ಯಕ್ರಮ ಅಂತಾ ಬೇರೆ ಊರಿಗೆ ಹೋಗಿದ್ದರು. ಧೈರ್ಯ ಬರಲು ಒಂಚೂರು ಪಾನ ಮತ್ತನಾಗಿದ್ದೆ. ಅಂದು ನಾನು ಪದೇ ಪದೇ ಅವಳನ್ನ ವಿನಂತಿಸಿಕೊಂಡೆ, ಬೇಡಿಕೊಂಡೆ ಆದರೂ ಅವಳು ಒಪ್ಪದಿದ್ದಾಗ ಒತ್ತಾಯಿಸಿದೆ. ಅದೂ ಕೂಡ ಸಾಧ್ಯವಾಗದಾದಾಗ ನಾನು ನಿಜವಾಗಿ ಮನುಷ್ಯನಾಗಿ ಉಳಿದಿರಲಿಲ್ಲ. ರಾಕ್ಷಸನಾಗಿದ್ದೆ. ನನಗೆ ಬಂದ ಸಿಟ್ಟಿನಲ್ಲಿ ಕೊನೆಗೆ ಅವಳ ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದೆ.. ಆದರೆ ಪ್ರಾಣ ತಗೆಬೇಕೆನ್ನುವ ಉದ್ದೇಶದಿಂದ ನಾನು ಹಾಗೇ ಮಾಡಿರಲಿಲ್ಲ. ಅವಳನ್ನು ಒಪ್ಪಿಸುವ ಭರದಲ್ಲಿ ಈ ದುರಂತ ನಡದೇ ಹೋಗಿತ್ತು” ಒಂದು ದೀರ್ಘವಾದ ವಿವರಣೆಯ ನಂತರ ಅವನು ನಿಟ್ಟುಸಿರು ಬಿಟ್ಟ. ಆದರೆ ಅಪರಾಧ ಒಪ್ಪಿಕೊಳ್ಳುವುದರಿಂದ ಯಾರೇ ನಿರಪರಾಧಿ ಆಗುವುದಿಲ್ಲ. ಅವನಲ್ಲಿ ಪಾಪ ಪ್ರಜ್ಞೆ ಜ್ವಲಿಸುತ್ತಲೇ ಇತ್ತು.

ಬಾಲು ಹೇಳಿದ್ದು ಕೇಳುತ್ತಿದ್ದಂತೆಯೇ ಓ ಬಾಲು ಎಂತಹ ಕೆಲಸ ಮಾಡಿಬಿಟ್ಟೆ’ ಎಂದು ನನ್ನ ಹೃದಯ ಮರುಗಿತು. ಅವನು ನನ್ನ ಕಸ್ತೂರಿಯನ್ನೇ ಕೊಲೆ ಮಾಡಿದ್ದರೂ ಸತ್ಯ ಹೇಳಿ ನನ್ನ ದೃಷ್ಠಿಯಲ್ಲಿ ಮುಗಿಲೆತ್ತರಕ್ಕೆ ಬೆಳೆದಿದ್ದ. ಅವನು ಮನಸ್ಸು ಮಾಡಿದ್ದರೆ ಸುಳ್ಳನ್ನೇ ಒಪ್ಪಿಕೊಂಡು ಶಿಕ್ಷೆಯಿಂದ ಪಾರಾಗಬಹುದಿತ್ತು. ಆದರೆ ಅವನ ಮನಸ್ಸಾಕ್ಷಿ ಸುಳ್ಳು ಹೇಳಲು ನಿರಾಕರಿಸಿತ್ತು. ಅವನು ಭಾವನಾ ಜೀವಿಯೂ ಆಗಿದ್ದರಿಂದಲೇ ಅವನಿಂದ ಸತ್ಯ ಬಚ್ಚಿಡಲು ಸಾಧ್ಯವಾಗಲಿಲ್ಲವೇನೊ ? ಎಂತೆಂತಹ ಮಹಾ ಅಪರಾಧಗಳನ್ನು ಮಾಡಿ ಬದುಕುಳಿಯುವ ಸೈತಾನರಿಗೂ ಈ ಬಾಲುವಿಗೂ ಅದೆಷ್ಟು ವ್ಯತ್ಯಾಸ ! ಅವನ ಮಾನಸಿಕ ಹೊಯ್ದಾಟ ಮನಸ್ಸಿನ ದ್ವಂದ್ವ ಹೃದಯ ತುಮುಲವೆಲ್ಲ ಬಾಲುವಿನ ಕಣ್ಣಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನ್ಯಾಯಾಧೀಶರು ಬಾಲುವಿಗೆ ಜೀವಾವಧಿ ಶಿಕ್ಷೆ ನೀಡಿದಾಗ ಅವನ ತುಟಿಯಿಂದ ಕಿರು ನಗೆ ಜಾರಿತು. ಬಾಲು ತೀರ್ಪನ್ನು ಒಂದು ಶುಷ್ಕ ನಗೆಯಿಂದ ಸ್ವೀಕರಿಸಿದ್ದ.

ಕೊನೆಗೆ ಜೈಲಿಗೆ ಹೊರಡುವಾಗ ಬಾಲು ಅಳುತ್ತ-
‘ನನ್ನ ಕ್ಷಮಿಸು ಅಶೋಕ’ ಎಂದಿದ್ದ. ನನ್ನ ಬಾಯಿಂದ ಮಾತು ಬಾರದೇ, ಬೇಡಿ ಹಾಕಿದ್ದ ಅವನ ಕೈಗಳು ಭಾವುಕತೆಯಿಂದ ಒತ್ತಿದೆ. ಅವನು ಅದೇ ಪಾಪ ಪ್ರಜ್ಞೆಯಿಂದ ತಲೆ ತಗ್ಗಿಸಿ ಹೊರಟು ಹೋದ, ಕೆಲ ಪೋಲೀಸರು ಅವನನ್ನು ಒಯ್ಯುತ್ತಿದ್ದರು, ಅವನು ಹೋಗುವದನ್ನು ನಾನು ಮತ್ತೊಮ್ಮೆ ನೋಡಿದೆ. ನನಗೆ ಅವನ ಬಗ್ಗೆ ಹೆಮ್ಮೆ ಅನಿಸಿತು. ಹರಿಶ್ಚಂದ್ರ ಸತ್ಯ ಹೇಳಿ ಸ್ಮಶಾನಕ್ಕೆ ಹೋದರೆ ಬಾಲು ಸತ್ಯ ಹೇಳಿ ಜೈಲಿಗೆ ಹೋಗಿದ್ದ. ಬಾಲುವಿನ ಹಾಗೆ ಮನಸಾಕ್ಷಿಯಂತೆ ನಡೆಯುವ ಜನರು ನಮ್ಮಲ್ಲಿ ಎಷ್ಟಿದ್ದಾರೆ ? ಎನ್ನುವ ಚಿಂತೆಯಲ್ಲಿ ನನ್ನ ನಿತ್ಯ ಬದುಕಿನತ್ತ ಕಾರು ಓಡಿಸಿದೆ. ಜೀವನದ ಕೆಲವು ಸಿಹಿಕಹಿ ನೆನಪುಗಳೊಂದಿಗೆ…
ಸುಳ್ಳು ಸಾಕ್ಷಿಗಳ ಊರಿಗೆ. ಮರಳಿ ನನ್ನ ಈ ಸುಳ್ಳು ಜೀವನ ಮುಂದುವರೆಸಲು.

-ಅಶ್ಫಾಕ್ ಪೀರಜಾದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x