ಒಳತೋಟಿ: ಆನಂದ್ ಗೋಪಾಲ್

‘ಒಂದು ಶುಕ್ರವಾರ ಸರಿ; ಪ್ರತಿ ಶುಕ್ರವಾರವೂ ಕಾಲೇಜಿಗೆ ತಡ ಎಂದರೆ ಯಾವ ಪ್ರಿನ್ಸಿಪಾಲ್ ತಾನೆ ಸುಮ್ಮನಿರುತ್ತಾರೆ?’ – ಹೀಗೆ ಯೋಚಿಸುತ್ತಲೇ ಶೀಲಶ್ರೀ ಪ್ರಿನ್ಸಿಪಾಲರ ಕಚೇರಿಯೊಳಗೆ ಕಾಲಿಟ್ಟಳು. ಅದೇ ಅಲ್ಲಿಂದ ಎಲ್ಲಿಗೋ ಹೊರಟಿದ್ದ ಅವರು ಇವಳತ್ತ ನೋಡಲೂ ಸಮಯವಿಲ್ಲದವರಂತೆ ದುಡುದುಡು ನಡದೆಬಿಟ್ಟರು. ಶೀಲಶ್ರೀಗೆ ಇದು ತುಸು ಸಮಾಧಾನ ತಂದಿತು. ಆದರೂ ‘ವಾರದ ಮೀಟಿಂಗ್’ನಲ್ಲಿ ಇದನ್ನು ಅವರು ಪ್ರಸ್ತಾಪಿಸದೆ ಬಿಡುವವರಲ್ಲ ಎಂದು ಅವಳಿಗೆ ಗೊತ್ತಿತ್ತು! ಸದ್ಯ ಇವತ್ತಿಗೆ ಮುಜುಗರ ತಪ್ಪಿತು ಎಂದು ಹಾಜರಾತಿ ವಹಿಯಲ್ಲಿ ಸಹಿ ಹಾಕಿ ಕ್ಲಾಸ್ನತ್ತ ನಡೆದಳು.

ಮೊದಲ ಪಿರಿಯಡ್ ಶೀಲಶ್ರೀಗೆ ಇರಲಿಲ್ಲ. ಅದಕ್ಕಾಗಿ ಅವಳು ತಡ ಆಗಲಿಲ್ಲ. ಪ್ರತಿ ಶುಕ್ರವಾರ ಡಬಲ್ ರೋಡಿನಲ್ಲಿರುವ ಅಮ್ಮನವರ ಗುಡಿಗೆ ಹೋಗಿ ಪೂಜೆ ಮಾಡಿ ಬರುವ ಪದ್ಧತಿ ಅವಳದು. ಇದು ನಲ್ವತ್ತು ವಾರ ಪೂರೈಸಬೇಕಾದ ವ್ರತ. ತನ್ನ ತಮ್ಮನಿಗೆ ಒಳ್ಳೆಯ ಕಡೆ ಹೆಣ್ಣು ಸಿಗಲಿ ಎಂಬ ಆಶಯ ಇದರ ಹಿಂದೆ ಇದ್ದ ಮುಖ್ಯ ಕಾರಣ. ಇದು ಅವಳ ಜೊತೆ ಉದ್ಯೋಗಿಗಳಿಗೆ ತಿಳಿದಿತ್ತು. ಹಾಗಾಗಿಯೇ ಅವರು ಶುಕ್ರವಾರ ಮೊದಲ ಪಿರಿಯಡ್ ಅವಳಿಗೆ ಬೀಳದ ಹಾಗೆ ವ್ಯವಸ್ಥೆ ಮಾಡಿದ್ದರು. ಮಸಲ ಬಿದ್ದರೂ ತಾವೇ ಹೇಗೋ ಸಂಭಾಳಿಸುತ್ತಿದ್ದರು. ‘ಪಾಪ! ಚಿಕ್ಕ ವಯಸ್ಸಿಗೇ ಗಂಡನ ಕಳೆದುಕೊಂಡವಳು! – ಎಂಬ ಸಿಂಪಥಿ ಅವರ ಈ ಸಹಕಾರದ ಹಿಂದೆ ಕೆಲಸ ಮಾಡುತ್ತಿತ್ತು.

ಶೀಲಶ್ರೀ ಹುಟ್ಟಿ ಬೆಳೆದದ್ದು, ಓದಿದ್ದು ಪೂರಾ ಮೈಸೂರಿನಲ್ಲೆ. ತಂದೆ ಶಿವನಾರಾಯಣ ಅಡುಗೆ ಭಟ್ಟರು. ನಗರದ ಯಾವುದೇ ಶುಭ ಕಾರ್ಯಗಳಲ್ಲೂ ಇವರ ಅಡುಗೆ ಮೇಜವಾನಿ ಇರಬೇಕು ಎಂಬಷ್ಟು ಅವರ ಖ್ಯಾತಿ ಹಬ್ಬಿತ್ತು. ಶಿವನಾರಾಯಣರು ಸ್ವಭಾವತಃ ಒಳ್ಳೆಯ ಜನ ಆದರೂ ಲೌಕಿಕ ಬುದ್ಧಿ ಕಡಿಮೆ. ದುಡ್ಡುಕಾಸನ್ನು ಗಂಟು ಮಾಡುವ ಬುದ್ಧಿ ಇರಲಿಲ್ಲ. ಆದರೆ ಮಕ್ಕಳ ಸುಖಕ್ಕೆ ಎಂದೂ ಕೊರೆ ಮಾಡಿದವರಲ್ಲ. ಹೆಂಡತಿ ರೇವತಿ ಹೋದ ಮೇಲೆ ಅವರಿಗೆ ಮಗಳು ಶೀಲಶ್ರೀ ಬಿಟ್ಟರೆ ಇದ್ದದ್ದು ಮಗ ಸುಂದರಮೂರ್ತಿ ಮಾತ್ರ!

ಶಿವನಾರಾಯಣರಿಗೆ ಮಗಳ ಓದಿನಲ್ಲಿ ಏನೇ ಅಭಿಮಾನ ಇದ್ದರೂ ಅವಳು ಒಂದಲ್ಲ ಒಂದು ದಿನ ಮದುವೆಯಾಗಿ ಕಂಡವರ ಮನೆಗೆ ಹೋಗಬೇಕಾದವಳು. ಹಾಗಾಗಿ ಒಂದು ‘ಡಿಗ್ರಿ’ ಅವಳ ಹೆಸರಿನಲ್ಲಿ ಇದ್ದರೆ ಸಾಕಲ್ಲವೇ! ಎಂಬ ಆಲೋಚನೆ ಅವರದು. ಮಗ ಸುಂದರ ಡಬಲ್ ಡಿಗ್ರಿಗೆ ಆಸ್ಥೆ ತೋರಿದರೂ ಅವರು ಅದನ್ನು ಪೂರೈಸಲು ರೆಡಿಯಿದ್ದರು. ಮಗಳ ವಿಷಯದಲ್ಲಿ ಈ ಮಾತನ್ನು ಅವರು ನೇರ ಹೇಳಲಾರರು. ಆಗಾಗ ಹೀಗೆ ತೇಲಿ ಬಿಡುತ್ತಿದ್ದರು: ‘ಮಗಳೇ, ಇನ್ನು ನೀನು ಎಷ್ಟು ದಿನ ಈ ಮನೆಯಲ್ಲಿ!’

ಮೊದಮೊದಲು ಅಪ್ಪ ಇದನ್ನು ರೇಗಿಸಲು ಅನ್ನುತ್ತಿದ್ದಾರೆಂದು ಶೀಲಶ್ರೀ ತಿಳಿದುಕೊಂಡಿದ್ದಳು. ಕ್ರಮೇಣ ಇದರ ಹಿಂದೆ ತನ್ನ ಮುಂದಿನ ಓದಿಗೆ ತಡೆ ಒಡ್ಡುವ ಹಿಕಾಮತ್ತು ಇದೆ ಎಂದು ಅವಳಿಗೆ ಬೋಧೆಯಾಯಿತು. ಇದನ್ನು ಅವಳು ಬೇರೆ ರೀತಿಯೆ ಹ್ಯಾಂಡಲ್ ಮಾಡಬೇಕೆಂದು ಯೋಚಿಸಿ, ಒಂದು ದಿನ ತಂದೆಯ ಎದುರು ಮಾತು ತೆಗೆದಳು:
” ಅಪ್ಪಾ, ಅಮ್ಮ ಇದ್ದಿದ್ದರೆ ನಾನು ಇಷ್ಟೊತ್ತಿಗೆ ಯಾರನ್ನಾದರೂ ಮದುವೆ ಆಗಿರ್ತಿದ್ದೆ ಅಲ್ವಾ?!”
“ಛೇ! ಛೇ! ಖಂಡಿತ ಇಲ್ಲ. ನಿಮ್ಮಮ್ಮನಿಗೆ ನಿನ್ನನ್ನು ಡಾಕ್ಟರ್ ಓದಿಸಬೇಕೆಂದು ಆಸೆಯಿತ್ತು!”
“ಆದರೆ ನನಗೆ ಡಾಕ್ಟರ್ ಆಗುವ ಆಸೆ ಇಲ್ಲವಲ್ಲ!”
“ಅದು ನನಗೆ ಗೊತ್ತು! ಅದಕ್ಕೆ ನಾನು ನಿನ್ನನ್ನು ಫೋರ್ಸ್ ಮಾಡಲಿಲ್ಲ!”
” ಆದರೆ ನನಗಿಷ್ಟ ಇರೋ ಡಿಗ್ರಿ ಓದೋಕೆ ನಿಮ್ಮ ಅಬ್ಜೆಕ್ಷನ್ ಇದೀಯಾ?”
“ಆಗೇನೂ ಇಲ್ಲವಲ್ಲ!”
“ಆಗಾದರೆ ಮ್ಯಾನೇಜ್ಮೆಂಟ್ ವಿಷಯದಲ್ಲಿ ಮಾಸ್ಟರ್ಸ್ ಮಾಡಬೇಕಂತ ನನ್ನ ಆಸೆ.”
“ಅದರಿಂದ ಏನು ಸುಖ ಅಂತಾ!”
” ಅದು ನನಗೆ ಇಷ್ಟ, ಅಷ್ಟೇ!”
” ಆದರೂ!”
“ಅಮ್ಮ ಇದ್ದಿದ್ದರೆ!”
“ಹೋಗ್ಲಿ ಬಿಡು, ನಿನ್ನ ಇಷ್ಟದಂತೆ ಮಾಡುವಂತೆ!”


ಶೀಲಶ್ರೀ ಹೀಗೆ ಮಾಸ್ಟರ್ ಡಿಗ್ರಿಗೆ ದಾಖಲಾದಳು


ಎರಡನೇ ಪಿರಿಯಡ್ಡಿಗೆ ಶೀಲಶ್ರೀ ತಯಾರಾದಳು.’ಬಿಸಿನೆಸ್ ಮ್ಯಾನೇಜ್ಮೆಂಟ್’ ಲೆಕ್ಚರರ್, ರಮ್ಯಾ, ‘ಹಾಯ್!’ ಎಂದು ಇವಳಿಗೆ ವಿಶ್ ಮಾಡಿದಳು. ಶೀಲಶ್ರೀ ಸಣ್ಣಗೆ ನಕ್ಕು, ‘ಹಾಯ್!’ ಎಂದಳು ಪ್ರತಿಯಾಗಿ.
” ಏನು, ಇನ್ನೂ ಮುಗಿದಿಲ್ವಾ ಪೂಜೆ?”
“ಇನ್ನೂ ಹತ್ತು ವಾರ ಇದೆ.”
“ಎನಿ ಪಾಸಿಟಿವ್ ಮೂವ್ಮೆಂಟ್ಸ್?!”
‘ಇಲ್ಲ!’ ಎನ್ನುವಂತೆ ಮುಖವನ್ನು ಅಡ್ಡಡ್ಡ ಅಲುಗಾಡಿಸಿದಳು, ಶೀಲಶ್ರೀ.
‘ಉಫ್!’ ಎಂದ, ರಮ್ಯಾ ಈ ಮಾತು ಕೇಳಬಾರದದಿತ್ತು ಎಂಬಂತೆ ಉಸಿರು ಬಿಟ್ಟು, ಮುಂದಿನ ಪಿರಿಯಡ್ಡಿಗೆ ಪುಸ್ತಕ, ಅಟೆಂಡೆನ್ಸ್
ರಿಜಿಸ್ಟರ್ ಹಿಡಿದು ಹೊರಟು ನಿಂತಳು.


ಶೀಲಶ್ರೀ ಇಂದು ‘ಸ್ಟ್ರೆಸ್ ಮ್ಯಾನೇಜ್ಮೆಂಟ್’ ಬಗ್ಗೆ ಪಾಠ ಮಾಡಬೇಕಿತ್ತು. ಅದಕ್ಕೆ ಪೀಠಿಕೆಯಾಗಿ ಮಕ್ಕಳಿಗೆ ಕೆಲವು ದೈನಂದಿನ ಒತ್ತಡದ ಸಂಗತಿಗಳನ್ನು ಉದಾಹರಣೆಯಾಗಿ ಹೇಳಬೇಕಿತ್ತು. ‘ಒತ್ತಡ’ ಯಾಕೆ ಬರುತ್ತೆ? ಎಂದು ಮಕ್ಕಳಲ್ಲೆ ಉತ್ತರ ತೆಗೆಯಲು ಕೆಲ ಪ್ರಶ್ನೆಗಳನ್ನು ಹಾಕಿದಳು. ಮಕ್ಕಳು ತಮಗೆ ತೋಚಿದ್ದನ್ನು ಹೇಳಿದರು. ಈ ಮಾತು-ಕತೆಯಲ್ಲಿ ಹೆಣ್ಣು ಮಕ್ಕಳಿಗೆ’ಒತ್ತಡ’ ಜಾಸ್ತಿ ಎಂಬ ಮಾತು ಬಂತು. ಇದು ನೂರಕ್ಕೆ ನೂರರಷ್ಟು ದಿಟ ಎಂದ ಶೀಲಶ್ರೀ, ಫಾರ್ ಎಗ್ಸಾಂಬಲ್ ನನ್ನನ್ನೇ ತೆಗೆದುಕೊಳ್ಳಿ, ಎಂದು ಮಾತಿನ ಓಘದಲ್ಲಿ ಅಂದಿನ ತನಕ ಮುಸುಕು ಹಾಕಿ ಇಟ್ಟಿದ್ದ ತನ್ನ ವೈಯಕ್ತಿಕ ಸಿಕ್ಕುಗಳ ಗಂಟುಗಳನ್ನು ಬಿಚ್ಚಿಬಿಟ್ಟಳು. ಅನಂತರ ಇದೆಲ್ಲಾ ಹೇಳಬಾರದಿತ್ತು ಎಂದು ಹಳಹಳಿಸಿದಳು.
ಆಕೆ ಹೇಳಿದ ಸಂಗತಿ ಪೂರಾ ಮಕ್ಕಳು ಅವರ ಮನೆಗಳಿಗೆ ಮುಟ್ಟಿಸದೆ ಬಿಡಲಾರರು. ಇದು ಇನ್ನೇನೇನು ಅವಾಂತರಗಳಿಗೆ ದಾರಿ ತೆರೆಯುತ್ತೋ ಎಂದು ಮಿಡುಕಿದಳು.


ಲಂಚ್’ ಮುನ್ನಾ ಮೂರನೆಯ ಪಿರಿಯಡ್ಡಿಗೆ ಮಕ್ಕಳಾರೂ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಕಾಲೇಜಿಗೆ ಆಹ್ವಾನಿಸಿದ್ದು; ಅವರ ಉಪನ್ಯಾಸ ಹಾಗೂ ಗೌರವ ಸಮರ್ಪಣೆಗಾಗಿ ಮಕ್ಕಳನ್ನು ಆಡಿಟೋರಿಯಂಗೆ ಕರೆದೊಯ್ಯಲಾಗಿತ್ತು. ಶೀಲಶ್ರೀ ತನ್ನ ಟೇಬಲ್ ಮೇಲಿದ್ದ ‘ಸುಧಾ’ ಮ್ಯಾಗಝೀನ್ ಅನ್ನು ಎತ್ತಿಕೊಂಡು ಸುಮ್ಮನೆ ಪುಟಗಳನ್ನು ತಿರುಗಿಸುತ್ತಿದ್ದಳು.


‘ಲಂಚ್’ ಅವರಿನಲ್ಲಿ ಐ.ಟಿ. ಲೆಕ್ಚರರ್ ನಯನ ಒಂದು ವಿಷಯ ಪ್ರಸ್ತಾಪಿಸಿದಳು. ಉಳಿದವರ ಮುಖಭಾವ ನೋಡಿದರೆ ತನ್ನ ವಿನಾ ಎಲ್ಲರಿಗೂ
ಇದು ತಿಳಿದ ಸಂಗತಿಯೆ ಹೌದು ಎಂದು ಶೀಲಶ್ರೀಗೆ ತೋರಿತು. ಮುಖದ ಭಾವ ಬದಲಿಸದೆ ಎಲ್ಲವನ್ನೂ ಕೇಳಿಸಿಕೊಂಡಳು.
ಸಂಗತಿ ಏನಪ್ಪಾ ಅಂದರೆ:
ಇಂದು ಸಂಜೆ ನಾಲ್ಕು ಗಂಟೆಗೆ ವಿಭಾಗದ ಎಲ್ಲಾ ಸ್ಟಾಪು ಪ್ರಿನ್ಸಿಪಾಲರ ಮನೆಗೆ ಹೋಗುವುದು. ಮೂವತ್ತೈದನೆ ವಿವಾಹ ವಾರ್ಷಕೋತ್ಸವ ಆಚರಿಸಿಕೊಳ್ಳುತ್ತಿರುವ ಅವರನ್ನು ಹಾಗೂ ಅವರ ಕುಟುಂಬವನ್ನು ಗೌರವಿಸಿ, ಶುಭಾಶಯ ಹೇಳಿ, ಬರುವುದು.
ಶೀಲಶ್ರೀಗೆ ಈಗ ಹೊಳೆಯಿತು. ಬೆಳಗ್ಗೆ ಪ್ರಿನ್ಸಿಪಾಲರು ಗಡಿಬಿಡಿಯಲ್ಲಿ ಹೊರಟದ್ದು ಏತಕ್ಕೆಂದು!


ಮಧ್ಯಾಹ್ನದ ಲಂಚ್ ಮುಗಿಸಿಕೊಂಡು ಲೇಡಿ ಫ್ಯಾಕಲ್ಟಿ ಮನೆಗಳಿಗೆ ಹೋದರು, ಜೆಂಡ್ಸ್ ಫ್ಯಾಕಲ್ಟಿ ಹೇಗೆ ಇದ್ದರೋ ಹಾಗೆ ಬರುವವರಿದ್ದರು. ಲೇಡಿಸ್ನಲ್ಲಿ ಒಬ್ಬ ಶೀಲಶ್ರೀ ಮಾತ್ರ ಗಂಡಸರಂತೆ ಹಾಗೇ, ಮೇಕಪ್ ಇಲ್ಲದೆ ಬರಲು ನಿರ್ಧರಿಸಿದಳು.!


ಸಂಜೆ ನಾಲ್ಕೂಕಾಲರ ಹೊತ್ತಿಗೆ ಚಾಮುಂಡಿ ಪುರಂನ ಐದನೆಯ ಕ್ರಾಸ್ನಲ್ಲಿರುವ ಪ್ರಿನ್ಸಿಪಾಲರ ಮನೆಗೆ ಎಲ್ಲರೂ ಅವರವರ ಗಾಡಿಗಳಲ್ಲಿ ಬಂದಿಳಿದರು. ‘ಮೇಘನಿಲಯ’ ಹೆಸರಿನ ಆ ಮನೆಯ ಮುಂದೆ ಎರಡು ಮಾವಿನ ಮರಗಳಿದ್ದವು. ಅದೆ ಆಗಷ್ಟೇ ಹೊಸ ಚಿಗುರು ಅಲ್ಲಿ ಮೂಡಿ ನೋಡುಗರ ಎದೆಯಲ್ಲಿ ಹಸಿರು ಹುಟ್ಟಿಸುತ್ತಿತ್ತು.

ಪ್ರಿನ್ಸಿಪಾಲರು ಇವರುಗಳ ನಿರೀಕ್ಷೆಯಲ್ಲಿ ಇರಲಿಲ್ಲ ಎನಿಸುತ್ತದೆ. ಇವರುಗಳ ಸಡನ್ ಭೇಟಿ ಅವರಿಗೆ ಸರ್ಪ್ರೆಸ್ನಿಂದ ಕೂಡಿದ ಸಂತೋಷವೇ ಉಂಟು ಮಾಡಿತ್ತು. ಶ್ರೀಮತಿ ಪ್ರಿನಿಪಾಲರು ಇಪ್ಪತ್ತು ನಿಮಿಷ ತೆಗೆದುಕೊಂಡು ಒಳ್ಳೆಯ ಸೀರೆಯಲ್ಲಿ ಕಾಣಿಸಿಕೊಂಡರು. ಇವರು ತಂದಿದ್ದ ಶಾಲು, ಹಾರ, ಪೇಟ, ರವಿಕೆ ಎಲ್ಲವನ್ನೂ ಇತ್ತು ಪ್ರತಿಯೊಬ್ಬರೂ ಆ ದಂಪತಿ ಕಾಲು ಮುಟ್ಟಿ ನಮಸ್ಕರಿಸಿದರು.

ಬಂದವರಿಗೆ ಸಿಹಿ ತಿಂಡಿ, ಬಾದಾಮಿ ಹಾಲು ದೊರೆಯಿತು. ಇನ್ನೇನೂ ಹೊರಡುವ ಅಂತ ಎಲ್ಲರೂ ಕಣ್ಣುಗಳಲ್ಲೇ ಸನ್ನೆ ಮಾಡಿಕೊಳ್ಳುವ ಸಮಯಕ್ಕೆ ಇದನ್ನು ಬಲ್ಲವರಂತೆ ಶ್ರೀಮತಿ ಪ್ರಿನ್ಸಿಪಾಲರು ಅವರ ಎದುರಿಗೆ ಕೂತಿದ್ದ ಶೀಲಶ್ರೀಯನ್ನು ಒಳಕರೆದರು. ದೇವರ ಮನೆಯಲ್ಲಿದ್ದ ಅರಿಶಿನ ಕುಂಕುಮದ ಬೆಳ್ಳಿ ಡಬ್ಬಿಯನ್ನು ತೆಗೆದುಕೊಂಡು ಎಲ್ಲರಿಗೂ ಕೊಡುವಂತೆ ಹೇಳಿದರು. ಶೀಲಶ್ರೀ ಹಿಂಜರಿದಳು.

“ನಮ್ಮಲ್ಲಿ ಅಂತಹ ಭೇದ ಭಾವ ಏನಿಲ್ಲ, ಹೂಂ! ತಗೋ! ಎಂದು ತುಸು ತಳ್ಳಿಯೇ ದೇವರ ಮನೆಯೊಳಕ್ಕೆ ಅವರು, ಇವಳನ್ನು ನುಗಿಸಿದರು.
ಶೀಲಶ್ರೀಗೆ ಏನು ಹೇಳಬೇಕೋ ತೋಚದೆ ಹೋಯ್ತು ! ಈಗ ಕೈಯಲ್ಲಿ ಬೆಳ್ಳಿ ಡಬ್ಬಿ ಹಿಡಿದಾಗಿದೆ. ಲೇಡಿ ಫ್ಯಾಕಲ್ಟಿ ತಮ್ಮ ಕುಪ್ಪಸಗಳೊಳಗಿಂದ ತಾಳಿ ಹೊರ ತೆಗೆಯಲು ಹಿಂಜರಿದ ಹಾಗೆ ಅವಳಿಗೆ ಅನಿಸಿತು.
ಪ್ರಿನ್ಸಿಪಾಲರು ಇಂಗಿತ ಜ್ಞಾನ ಉಳ್ಳವರಂತೆ ತತ್ ಕ್ಷಣವೇ ರಮ್ಯಾಳಿಗೆ,” ಅದನ್ನು ತಗೊಂಡು ಎಲ್ಲರಿಗೂ ಕೊಡಮ್ಮಾ!” ಎಂದರು.
ಶ್ರೀಮತಿ ಪ್ರಿನ್ಸಿಪಾಲರು, “ಯಾಕೇ, ಇವ್ರೇ ಕೊಡಲಿ ಬಿಡಿ!” ಎಂದರು, ಶೀಲಶ್ರೀ ಪರ ಬ್ಯಾಟ್ ಮಾಡುತ್ತಾ! ಪ್ರಿನ್ಸಿ ಇದಕ್ಕೆ ಏನು ಹೇಳಬೇಕು! ಮುಖದಲ್ಲಿ ಏನೇನೋ ಸಂಜ್ಞೆಗಳನ್ನು ಮಾಡಿ ಹೆಂಡತಿಗೆ ಅರ್ಥೈಸಲು ನೋಡಿದರು. ಆಕೆಗೋ ಇದು ಬಿಡಿಸಲಾರದ ಒಗಟಿನಂತೆ ಭಾಸವಾಗಿ ಗಂಡನ ಮುಖವನ್ನು ಮತ್ತೆ ಮತ್ತೆ ನೋಡಿದಳು. ಈ ಇಡೀ ಕಲಾಪದಲ್ಲಿ ಶೀಲಶ್ರೀ ಮುಖವನ್ನು ಯಾರು ಗಮನಿಸಬೇಕು! ಆಕೆಯ ಕಣ್ಣು ತುಂಬಿಕೊಂಡಿತು. ರಮ್ಯಾ ಎಲ್ಲರ ತಾಳಿಗೂ ಅರಿಶಿನ ಕುಂಕುಮ ಕೊಡುತ್ತಾ ಬರುವಾಗ, ಶ್ರೀಮತಿ ಪ್ರಿನ್ಸಿಪಾಲರು,” ಈ ಹುಡುಗಿಗೂ(ಶೀಲಶ್ರೀ) ಕುಂಕುಮ ಕೊಡಿ” ಎಂದದ್ದು ಕೇಳಿ ಅವಳು ಅಲ್ಲಿ ಕೂರಲಾಗಲಿಲ್ಲ. ಸೀದಾ ಎದ್ದು ಆಚೆ ಬಂದು ಬಿಟ್ಟಳು. ಹೊರಗೆ ಮಾವಿನ ಮರದ ಬುಡದಲ್ಲಿ ನಿಂತು ತುಂಬಿದ ಕಣ್ಣೀರನ್ನು ತುಳುಕದ ಹಾಗೆ ತಡೆಯಲು ಯತ್ನಿಸುತ್ತಿದ್ದಳು. ನಯನ ಹಿಂದಿನಿಂದ ಬಂದು ಅವಳ ಬೆನ್ನು ಸವರಿದಳು. ಅವಳ ಅಳು ಕಟ್ಟೆಯೊಡೆಯಿತು. ಒಳಗೆ ಪ್ರಿನ್ಸಿಪಾಲರು ಹೆಂಡತಿಯನ್ನು ತಗುಲಿಸಿಕೊಂಡಿದ್ದು ಕೇಳುತ್ತಿತ್ತು.


ಮಗಳು ಡಲ್ಲಾಗಿರುವುದನ್ನು ನೋಡಿ ಶಿವನಾರಾಯಣರಿಗೆ ಆತಂಕವಾಯಿತು. ವಸ್ತುತಃ ಅವರೂ ಖಿನ್ನ ಸ್ಥಿತಿಯಲ್ಲೇ ಇದ್ದರು. ಮಗ ಸುಂದರ ಮೂರ್ತಿ ಅವರಿಗೆ ತಲೆನೋವಾಗಿದ್ದ. ಡಿಗ್ರಿ ನಂತರ ಅವನು ಓದಲು ಇಂಟ್ರೆಸ್ಟ್ ತೋರಿಸಿರಲಿಲ್ಲ. ತಂದೆಗೆ ಭಾರೀ ನಿರಾಶೆ. ಮಗ ದೊಡ್ಡ ಓದು ಓದಿ, ದೊಡ್ಡ ಮಟ್ಟದ ನೌಕರಿ ಸಂಪಾದಿಸುವ ಕನಸು ಕಂಡಿದ್ದರು ಅವರು. ಇತ್ತ ಮಗಳು ಸಣ್ಣ ವಯಸ್ಸಿಗೇ ಗಂಡನನ್ನು ಕಳೆದುಕೊಂಡು ಕೂತಿದ್ದಾಳೆ. ಅವರಿವರು ಏನೇನೋ ಮಾತು ಆಡಬಾರದಲ್ಲ ಎಂದು ಅವರ ಮನಸ್ಸು ಯೋಚಿಸುತ್ತದೆ. ಮಗಳಿಗೆ ಇನ್ನೊಂದು ಮದುವೆ ಮಾಡಿದರೆ ಹೇಗೆ ಎಂಬ ಆಲೋಚನೆ ಒಮ್ಮೊಮ್ಮೆ ಸುಳಿದು, ಅದನ್ನು ಅವಳಲ್ಲಿ ಪ್ರಸ್ತಾಪಿಸುವ ಬಗೆ ಕಾಣದೆ ಪರಿತಪಿಸುತ್ತಾರೆ.

ಮಾಸ್ಟರ್ಸ್ ಓದುವಾಗ ಶೀಲಶ್ರೀ ಪಾದರಸದಂತಿದ್ದಳು. ಎಲ್ಲರಲ್ಲೂ ಬೆರೆಯುವ, ಮರುಗುವ, ಒದಗುವ ಗುಣಗಳಿಂದ ಆಕೆ ಎಲ್ಲರ ಮನಸ್ಸನ್ನು ಗೆದ್ದಿದ್ದಳು.

ಅವಳ ಮದುವೆ ಸಂದರ್ಭ ಶಿವನಾರಾಯಣರಿಗೆ ನೆನಪಾಗುತ್ತದೆ: “ತಾನು ಸುಧೀರನನ್ನು ಮೆಚ್ಚಿರುವುದಾಗಿ ಎಷ್ಟು ನೇರವಾಗಿ ಹೇಳಿದ್ದಳು! ಆತನೂ ಅಷ್ಟೇ ಸರಳವಾದ ಮನುಷ್ಯ. ಇವಳಿಗೆ ಡಿಗ್ರಿಯಲ್ಲಿ ಲೆಕ್ಚರರ್ ಆಗಿದ್ದನಂತೆ. ಮಗಳ ಜೊತೆ ವಿವರ ಕೇಳಲಾರೆ. ಆದರೆ ಊಹಿಸಬಲ್ಲೆ; ಇಬ್ಬರೂ ಮೂರ್ನಾಲ್ಕು ವರ್ಷಗಳಿಂದ ಇಷ್ಟಪಟ್ಟಿದ್ದಾರೆ ಎಂದು. ಹುಡುಗ ಹಾಸನದ ಕಡೆಯವನು. ಆಸ್ತಿಪಾಸ್ತಿ ಇರುವವನೆ. ಇಲ್ಲೆ ಹುಣಸೂರು ರಸ್ತೆಯ ಇಂಟರ್ ನ್ಯಾಷನಲ್ ಕೂರ್ಗ್ ಕಾಲೇಜಿನಲ್ಲಿ ಒಳ್ಳೆಯ ಸಂಬಳದ ಲೆಕ್ಚರರ್ ಆಗಿದ್ದ. ಜಾತಿ ವಿಷಯದಲ್ಲಿ ವ್ಯತ್ಯಾಸ ಇರಲಿಲ್ಲ ಅಂತಲ್ಲ! ಹುಡುಗ ಹುಡುಗಿ ಒಪ್ಪಿದ ಮೇಲೆ ನಮ್ಮದೇನು ಎಂಬ ನಿರ್ಲಿಪ್ತಿ ಎರಡು ಮನೆಯವರಿಗೂ! ಹೊಸ ಕಾಲದ ಗಾಳಿ! ಎದೆಯೊಡ್ಡಲೆ ಬೇಕು!

ಮದುವೆ ಸರಳವಾಗಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಆಯ್ತು. ನವದಂಪತಿ ಬಸಪ್ಪ ಹಾಸ್ಪಿಟಲ್ ಹತ್ತಿರ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಕೊಂಡರು. ಅಳಿಯನಿಗೂ ಕಾಲೇಜು ಹತ್ತಿರವಿತ್ತು. ಇವಳೂ ನಾಳೆದಿನ ಕಾಲೇಜೊಂದಕ್ಕೆ ಕೆಲಸಕ್ಕೆ ಹೋಗಲು ಯೋಚಿಸುತ್ತಿದ್ದಳು.

ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಇತ್ತ ಸುಂದರ ಕೂಡ ಅಗರಬತ್ತಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ದ. ಇನ್ನು ಒಂದೆರೆಡು ವರ್ಷದಲ್ಲಿ ಅವನಿಗೂ ಮದುವೆ ಮಾಡಬೇಕು.

ಆದರೆ!
ಅದೊಂದು ಘಟಿಸದಿದ್ದಿದ್ದರೆ!


ಆ ದಿನ ಶಿವನಾರಾಯಣರಿಗೆ ಚೆನ್ನಾಗಿ ನೆನಪಿದೆ. ಮೈಸೂರು ತಾತಯ್ಯನವರ ಜಯಂತಿಯನ್ನು ಅನಾಥಾಲಯದಲ್ಲಿ ಆಚರಿಸುತ್ತಿದ್ದರು. ಊಟದ ಮೇಜವಾನಿ ಇವರದೇ. ತುಂಬಾ ಅಡಾವುಡಿ ಕೆಲಸ. ಗದ್ದಲದಲ್ಲಿ ನಾಲ್ಕೂ ಬಾರಿ ಪೋನ್ ರಿಂಗಾದರೂ ಗೊತ್ತಾಗಲಿಲ್ಲ. ಹೆಲ್ಪರ್ ನಂಜಪ್ಪನೆ ಅದನ್ನು ಗಮನಿಸಿ ,’ಒಮ್ಮೆ ನೋಡಬಾರದೇ’ ಅಂತ ಹೇಳಿದ. ನೋಡಿದರೆ ಶೀಲಶ್ರೀ ಪೋನು!
ವಿಷಯ ಕೇಳಿ ಅಲ್ಲೆ ಕುಸಿದು ಬಿದ್ದ ಶಿವನಾರಾಯಣರನ್ನು ನಂಜಪ್ಪ ಸಮಾಧಾನ ಮಾಡಿ, “ನೀವು ಹೊರಡಿ ಅಣ್ಣಾ, ಉಳಿದ ಕೆಲಸ ನಾನು ನೋಡ್ಕೋತೀನಿ”ಎಂದಿದ್ದ.
ಬಸಪ್ಪ ಆಸ್ಪತ್ರೆಗೆ ಒಂದೇ ದೌಡಲ್ಲಿ ಶಿವನಾರಾಯಣರು ಬಂದರು. ಶೀಲಶ್ರೀ ಅಪ್ಪನ ತೆಕ್ಕೆಗೆ ಬಿದ್ದವಳೆ ಭೋರಿಟ್ಟು ಅತ್ತಳು. ಮಗ ಸುಂದರ ಮೂರ್ತಿ ಕೂಡ ಅಷ್ಟೊತ್ತಿಗೆ ಅಲ್ಲಿಗೆ ಬಂದಿದ್ದ. ಅವನ ಮುಖವೂ ನೋವಿನಿಂದ ಅದ್ದಿದ ಆಗಿತ್ತು!
ಸುಧೀರ ಹುಣಸೂರು ರಸ್ತೆಯಲ್ಲಿ ಬರುವಾಗ ಆಕ್ಸಿಡೆಂಟಿಗೆ ಒಳಗಾಗಿ ಕಣ್ಣು ಮುಚ್ಚಿ ಕಣ್ಣು ತೆಗೆಯುವುದರೊಳಗೆ ಸತ್ತು ಹೋಗಿದ್ದ! ಅಷ್ಟು ಭೀಕರವಾಗಿತ್ತು ಅಪಘಾತ! ಅವನ ಟು ವೀಲರ್ ಎರಡು ತುಂಡಾಗಿ ರಸ್ತೆಯಲ್ಲಿ ಬಿದ್ದಿತ್ತು.


ಇದಾದ ಮೇಲೆ ಶೀಲಶ್ರೀ ಬದುಕಿನಲ್ಲಿ ಆದ ಎರಡು ಮಾರ್ಪಾಡುಗಳು ಇಂತಿವೆ: ಒಂದು: ಸುಧೀರನ ಕೆಲಸ ಅಲ್ಲಿನ ಮ್ಯಾನೇಜ್ಮೆಂಟ್ ಇವಳಿಗೆ ಕೊಡಲು ಮುಂದಾಯಿತು. ಎರಡು: ಅವಳು ಅಪ್ಪನ ಲಕ್ಮೀಪುರಂ ಮನೆಗೆ ತನ್ನ ವಾಸ್ತವ್ಯ ಬದಲಿಸಿದಳು. ಗಂಡನ ಕೂರ್ಗ್ ಕಾಲೇಜಿಗೆ ಹೋಗಿ ಬಂದು ಮಾಡುತ್ತಿರುವುದು ಸದ್ಯಕ್ಕೆ ಅವಳಲ್ಲಿ ಹೊಸ ಚೈತನ್ಯ ತಂದಿದೆ.


ಕ್ರಮೇಣ ಎಲ್ಲವೂ ಸಹಜ ಸ್ಥಿತಿಗೆ ಬಂದ ಹಾಗೆ ಅನಿಸಿತು. ವರ್ಷ ಕಳೆಯುವದರಲ್ಲಿ ‘ಸ್ಥಿತಿ’ ಸಹಜ ಅಲ್ಲ! ಅನಿಸಲಿಕ್ಕೆ ಸುರುವಾಯಿತು. ತಮ್ಮ, ಸುಂದರ ಮೂರ್ತಿಗೆ ಬರುತ್ತಿದ್ದ ಸಂಬಂಧಗಳು ಒಂದೂ ಹಣ್ಣಾಗದೆ ಹೋಗುತ್ತಿದ್ದವು. ಇದಕ್ಕೆ ಕಾರಣ ಹುಡುಗನಿಗೆ ಏನಾದ್ರೂ ಐಬೇ ಎಂದರೆ ಎಂತದೂ ಇಲ್ಲ! ಮತ್ತೆ? ಒಂದೇ ಕಾರಣ- ವಿಧವೆ ಅಕ್ಕ ಇರುವ ಮನೆಗೆ ಹೆಣ್ಣು ಕೊಡಲು ಜನ ಮುಂದೆ ಬರುತ್ತಿಲ್ಲ! ಇದು ತಮ್ಮನಲ್ಲಿ ಅಸಹನೆಗೆ ಕಾರಣವಾದರೆ, ಅಪ್ಪನಿಗೆ ಏನೂ ಮಾಡಲಾರದ ಸ್ಥಿತಿ ತಂದೊಡ್ಡಿತ್ತು.

ಡಲ್ಲಾಗಿರುವ ಮಗಳನ್ನು ನೋಡಿ ತಂದೆಗೆ ಇವೆಲ್ಲಾ ಒದ್ದುಕೊಂಡು ಹೊರ ಚೆಲ್ಲಿಕೊಂಡವು. ಅವಳನ್ನು ನೋಡಿದಾಗೆಲ್ಲ ಅವರ ಮನಸ್ಸು ಮುದುಡುತ್ತದೆ. ತಾನು ಹರಹರ ಅನ್ನುವ ಮುನ್ನ ಅವಳ ಬದುಕಿಗೆ ಒಂದು ನೆಲೆ ಕಲ್ಪಿಸುವ ತನ್ನ ಆಸೆ ಈಡೇರುತ್ತೋ ಇಲ್ಲವೋ ಎಂಬ ಚಿಂತೆ ಇತ್ತೀಚೆಗೆ ಅವರಲ್ಲಿ ಹೆಚ್ಚಾಗಿದೆ.


ಪ್ರಿನಿಪಾಲರ ಮನೆಯಿಂದ ಬಂದ ಮೇಲೆ ಶೀಲಶ್ರೀಗೆ ಸಾಯುವ ಆಲೋಚನೆ ಮತ್ತೆ ಬಂತು. ಈ ಭಾವ ಇದೇ ಮೊದಲಲ್ಲ ಅವಳಲ್ಲಿ ಬಂದಿರುವುದು! ಸುಧೀರ ಸತ್ತಾಗಲೇ ಅವಳು ಸಾಯಬೇಕಿತ್ತು. ಆದರೆ ಹೊಟ್ಟೆಯಲ್ಲಿ ಮೂರು ತಿಂಗಳ ಮಗುವಿತ್ತು! ಅದರ ಮೇಲೆ ಬೆಳೆದ ಮೋಹ ಅವಳ ಸಾಯುವ ಆಸೆಯನ್ನು ಕ್ಷೀಣಿಸಿತು. ಜೀವನದ ಆಸ್ಥೆಯನ್ನು ಬೆಳೆಸಿತು. ಆದರೆ ಆ ಮಗು ಇವಳ ಕೈ ಹತ್ತುವ ಮುನ್ನವೇ ಜಾರಿಹೋಯಿತು. ಅತಿ ಚಿಂತೆ ಈ ಜಾರಿಕೆಗೆ ಕಾರಣ ಅಂದರು.

ಸುಂದರನಿಗೆ ಒಳ್ಳೆಯ ಕಡೆ ಸಂಬಂಧ ಸಿಗಲಿ ಎಂದು ಪ್ರತಿ ಶುಕ್ರವಾರ ಅಮ್ಮನವರ ಗುಡಿಗೆ ಶೀಲಶ್ರೀಗೆ ಹೋಗಿ ಬರುವಂತೆ ಹೇಳಿದವರು , ಈ ವ್ರತ ಕೈಗೊಂಡರೆ ‘ಮಿರಾಕಲ್’ ಘಟಿಸುತ್ತೆ ಎಂದವರು ಅಮ್ಮನ ಗುಡಿ ಅರ್ಚಕರಾದ ನರಸಿಂಹ ಶಾಸ್ತ್ರೀಗಳು. ಅವಳ ಈ ವ್ರತದ ಕಲಾಪ ಅಪ್ಪ , ತಮ್ಮ ಇಬ್ಬರಿಗೂ ತಿಳಿದಿದೆ.

ಇಂಟರ್ ನ್ಯಾಷನಲ್ ಕೂರ್ಗ್ ಕಾಲೇಜಿನಲ್ಲಿನ ಆಕೆಯ ಗಂಡನ ಕಲೀಗ್ಸ್ ಇವಳ ಬಗ್ಗೆ ಅನುತಾಪ ಪಟ್ಟಾಗೆಲ್ಲಾ ಇವಳು ಸಿಡಿಮಿಡಿ ಆಗುತ್ತಿದ್ದಳು. ಈ ಅನುಕಂಪದ ಜೊತೆ ಚುಚ್ಚು ಮಾತೂ ಬೆರೆತಿರುತ್ತಿತ್ತು. ಸುಧೀರ ಸತ್ತ ತರುಣದಲ್ಲಿ ಶೀಲಶ್ರೀ ತನ್ನ ಮೊಬೈಲಿನ ಡಿ.ಪಿ.ಗೆ ಅವನ ಪೋಟೋ ಹಾಕಿಟ್ಟಿರುತ್ತಿದ್ದಳು; ಸ್ಟೇಟಸ್ನಲ್ಲಿ ತಮ್ಮಿಬ್ಬರ ಪೋಟೋ! ಇದು ಒಂದು ವರ್ಷ ಆಗುವ ತನಕ ಹಾಗೆಯೆ ಇತ್ತು! ಆಮೇಲಾಮೇಲೆ ಡಿ.ಪಿ.ಯಲ್ಲಾಗಲಿ, ಸ್ಟೇಟಸ್ನಲ್ಲಾಗಲಿ ಸುಧೀರನ ಚಿತ್ರ ಪೂರ್ತಿ ಮಾಯವಾಯಿತು. ಆ ಜಾಗಕ್ಕೆ ತನ್ನ ಚಿತ್ರಗಳು ಮಾತ್ರ ಬಳಕೆಯಾಯಿತು.

ಇದು ಕಲೀಗ್ಸ್ ಹುಬ್ಬನ್ನು ಮೇಲೇರಿಸಿತು. ಅವರು ಇದನ್ನು ಚೆನ್ನಾಗಿ ಮಾತಲ್ಲೇ ನುಲಿದು ನುಲಿದು ಆಸ್ವಾದಿಸತೊಡಗಿದರು. ಅವಳು ಹೊಸ ಸೀರೆ ಉಟ್ಟು ಬಂದರೆ, ಐಬ್ರೋ ಮಾಡಿಸಿ ಕೊಂಡರೆ, ಮುಂದಲೆ ಕತ್ತರಿಸಿದರೆ, ನಕ್ಕು ಮಾತಾಡಿದರೆ, ಜೆಂಡ್ಸ್ ಜೊತೆ ಉಲಿದರೆ ಒಂದು ತರ ಮುಖ ಮಾಡುತ್ತಿದ್ದರು. ಅವರ ವ್ಯಂಗ್ಯ ಅವಳಿಗೆ ಅರ್ಥವಾಗುತ್ತಿರಲಿಲ್ಲ ಎಂದಲ್ಲ! ಆದರೆ ಅವಳಿಗೆ ಅವರ ನಿರೀಕ್ಷೆಯ ಚೌಕಟ್ಟಿನಲ್ಲಿ ಇರಲು ಸಾಧ್ಯವಾಗುತ್ತಿರಲ್ಲಿಲ್ಲ!

ತಮ್ಮ ಸುಂದರ ಮೂರ್ತಿ ಕೂಡ ಈ ಬಗ್ಗೆ ಕಟಕಿ ಆಡಿದ್ದಿದೆ. ಶಿವನಾರಾಯಣರಿಗೆ ಇದು ಕಣ್ಣಿಗೆ ಬೀಳದ ಸಂಗತಿ ಅಲ್ಲ!
ಒಮ್ಮೆ ಅವರು ಅಂದೂ ಅಂದರು:
“ನಿನಗೆ ಬೇಕಿರುವುದು ಎರಡು ಊಟ ತಾನೆ! ಈ ಕೆಲಸ ಬಿಟ್ಟು ಬಿಡು!”
ಶೀಲಶ್ರೀ ಸರ್ರನೆ ಹಿಂತಿರುಗಿಸುತ್ತಾಳೆ:
“ಬರೀ ಎರಡು ಊಟ ಮಾತ್ರಾನಾ ಅಪ್ಪಾ, ನನಗೆ ಬೇಕಿರುವುದು!”
ತಂದೆ ತಡವರಿಸಿ ತಡವರಿಸಿ ಹೇಳುತ್ತಾರೆ:
” ಹಾಗಲ್ಲ ಮಗಳೇ, ಸುಂದರನೂ ಇದನ್ನು ಇಷ್ಟಪಡೋಲ್ಲ!”
“ಯಾವುದನ್ನು ಅಪ್ಪಾ!”
“ಈ ರೀತಿ ಕಾಲೇಜಿಗೆ ಹೋಗುವುದು!”
“ಈ ರೀತಿ ಅಂದರೆ? ಯಾವ ರೀತಿ ಅಪ್ಪಾ!”
ತಂದೆಗೆ ಬದಲು ಕೊಡಲು ಆಗಲಿಲ್ಲ!


ಶೀಲಶ್ರೀ ಈಗ ಒಂದು ನಿರ್ಣಯಕ್ಕೆ ಬಂದಿದ್ದಾಳೆ! ಇದನ್ನು ಅಪ್ಪನ ಮುಂದೆ ಇಟ್ಟಾಗ ಅವರು ಬೇಸರ ಪಟ್ಟರು. ತಮ್ಮ ಕೂಡ ಇಷ್ಟ ಪಡಲಿಲ್ಲ. ಆದರೆ ಇದು ನಮ್ಮ ಮೂವರಿಗೂ ಅನುಕೂಲ. ಹೀಗೆಂದು ಅವಳು ಅವರನ್ನು ಕನ್ವಿನ್ಸ್ ಮಾಡಿದಳು.


ಶೀಲಶ್ರೀ ಈಗಲೂ ತಪ್ಪದೆ ಪ್ರತಿ ಶುಕ್ರವಾರ ಅಮ್ಮನವರ ಗುಡಿಗೆ ಹೋಗಿ ಬರುತ್ತಾಳೆ. ತನ್ನ ಹೊಸ ಮನೆಯಿಂದ ಗುಡಿಗೆ ದೂರ ಸ್ವಲ್ಪ ಹೆಚ್ಚು, ಅಷ್ಟೇ!

-ಆನಂದ ಗೋಪಾಲ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Prashanth cp
1 year ago

ಅದ್ಭುತವಾಗಿದೆ ಸರ್ ನಿಮ್ಮ ಕಥೆ ಆನಂದ ಸರ್. ನೀವೇ ನಮಗೆ ಸ್ಫೂರ್ತಿ ಸರ್
ಇದೇ ರೀತಿ ಬೇರೆ ಬೇರೆ ಕಥೆ ಮಾಡಿ ಸರ್
ತುಂಬಾ ಆಸಕ್ತಿ ಇದೆ
ನಿಮ್ಮ ಕಥೆಯಲ್ಲಿ
ಅದರಲ್ಲೂ ಇವರು ನಮ್ಮ ಸರ್
ನಂಗೆ ಹೆಮ್ಮೆ ಸರ್ ನಿಮ್ಮ ಬಗ್ಗೆ
ನಾನ್ ನಿಮ್ಮ ಅಭಿಮಾನಿ ಸರ್

1
0
Would love your thoughts, please comment.x
()
x