“ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೆನೋ”..?: ಪೂಜಾ ಗುಜರನ್

ಏನೂ ಬರೆಯಲಿ. ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇದೆಲ್ಲ ಮನದ ಕೋರಿಕೆ. ಆ ದೇವರಿಗೆ ಇಟ್ಟ ಹರಕೆ. ದೈವಾಂಶ ತುಂಬಿರುವ ಮಣ್ಣಲ್ಲಿ ಬದುಕುವ ನನಗೆ ನಂಬಿರುವ ನಂಬಿಕೆಗಳೆ ದಾರಿದೀಪ. ಇದೆಲ್ಲ ನಿನ್ನ ಅರಿವಿಗೆ ಬರದ ಸತ್ಯವೇನೋ.?
ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ ಇಲ್ಲವೋ ನಾ ಅರಿಯೆನು.
ಪತ್ರಗಳನ್ನೇ ಜೀವಾಳ ಅಂತ ತಿಳಿದು ಬದುಕಿದ
ನನಗೆ ನಿನ್ನಿಂದ ಯಾವ ಉತ್ತರಗಳು ಬರಲೇ ಇಲ್ಲ. ಮುಂದೆ ಬರುವುದು ಇಲ್ಲ.‌
ನಿನ್ನ ಆಗಾಧವಾದ ಮೌನಕ್ಕೆ ನನ್ನ ಮನಸ್ಸಿನ ಭಾವಗಳು ಸ್ವರವಾಗುವುದೇ ಇಲ್ಲ. ಈ ಸತ್ಯ ಒಪ್ಪಿಕೊಂಡ ಮೇಲೂ ನನ್ನ ಪತ್ರಗಳು ನಿನ್ನ ಹೃದಯದೂರಿಗೆ ನಿತ್ಯ ಪ್ರಯಾಣವನ್ನು ಮಾಡುತ್ತಲೇ ಇದೆ. ಬಹುಶಃ ಇದು ಈ ಉಸಿರು ಇರುವವರೆಗೂ ಹೀಗೆ ಸಾಗುತ್ತದೆ.

ನೋಡದೇ ಹತ್ತಿರವಾದೆವೂ. ಜಗಳವಾಡದೆಯೇ ದೂರವಾದವೋ. ಕೊನೆಗೂ ನಿನ್ನ ಸಂಕಲ್ಪ ಕೂಡಿ ಬರಲೇ ಇಲ್ಲ. ಪರಿಶುದ್ಧವಾದ ನಿನ್ನ ಆ ಸಂಕಲ್ಪ ಆ ದೇವರಿಗೂ ಇಷ್ಟವಾಗಲಿಲ್ಲವೆನೋ.. ನಮ್ಮ ಬದುಕಲ್ಲಿ ಮತ್ತೆ ಆ ಘಳಿಗೆ ಬಹುಶಃ ಬರುವುದು ಇಲ್ಲ ಅನಿಸುತ್ತದೆ.
ಅದರೂ ಆ ಕಾಲನ ಮಹಿಮೆಯನ್ನು ನಾನಿನ್ನು ನಂಬುತ್ತೇನೆ. ಈ ಜಗತ್ತಿನಲ್ಲಿ ಅದೆಷ್ಟೋ ಅದ್ಭುತಗಳು ನಡೆದು ಹೋಗಿದೆ. ಅದರಲ್ಲಿ ನಮ್ಮಿಬ್ಬರ ಸಂಕಲ್ಪವೂ ನೇರವೇರಬಹುದೆನೋ..? ಇದಕ್ಕೆ ಆ ಕಾಲನೇ ಉತ್ತರಿಸಬೇಕು.

ನೂನ್ಯತೆಗಳನ್ನು ಮೀರಿ ಪ್ರೀತಿಸು. ಆಗ ಪ್ರೀತಿ ಪರಿಶುದ್ಧವಾಗಿರುತ್ತದೆ. ನಿನ್ನಲ್ಲಿರುವ ಬೇಕು ಬೇಡಗಳನ್ನೆಲ್ಲ ನೀನೆ ನಿವಾರಿಸು. ಇಲ್ಲದಿದ್ದರೆ ಅದು ನಿನ್ನ ಜೊತೆ ನನ್ನನ್ನು ಕೂಡ ಉಸಿರು ಕಟ್ಟುವಂತೆ ಮಾಡುತ್ತದೆ.
ನಿನ್ನಲ್ಲಿರುವ ಕೆಲವೊಂದು ಗುಣಗಳು ನನಗೆ ಅರ್ಥವಾಗುವ ಮುನ್ನವೇ ಗೋಜಲಾಗಿ ಕಾಡುತ್ತದೆ. ಅದಕ್ಕೆ ನೀನು ಕೆಲವೊಮ್ಮೆ ನನಗೆ ಪ್ರಶ್ನೆಯಾಗಿಯೇ ಕಾಡುತ್ತಿಯಾ. ಪ್ರೀತಿ ಬದುಕಿನ ಅಪರಿಮಿತ ಅನನ್ಯವಾದ ಭಾವವನ್ನು ಹೊತ್ತು ತರುವ ಸುಂದರವಾದ ರಥ. ಈ ರಥವನ್ನು ಎಳೆಯಲು ಒಲವು ಬಲವಾಗಿ ಇರಬೇಕು. ಒಲವಿಲ್ಲದ ಬದುಕಲ್ಲಿ ಏನಿದ್ದರೂ ವ್ಯರ್ಥನೇ ಅಲ್ವ.

ಈ ಜಗತ್ತಿನಲ್ಲಿ ಅದೆಷ್ಟೋ ಪ್ರೇಮಗಳು ಹುಟ್ಟುತ್ತದೆಯಂತೆ. ಅದರಲ್ಲಿ ಈ ಪ್ರೇಮವೂ ಸೇರಿ ಹೋಗಲಿ. ಜಗಳ ಮಾಡಿ ದೂರ ಆಗುವವರ ಮಧ್ಯೆ ನಾವಿಬ್ಬರೂ ವಿಶೇಷವಾಗಿ ದೂರವಾಗಿದ್ದೇವೆ. ಅತಿಯಾದ ಪ್ರೀತಿ ವಿಶ್ವಾಸದ ಮಧ್ಯೆಯೇ ವಿಚಿತ್ರವಾಗಿ ಸುಮ್ಮನಾಗಿದ್ದೇವೆ.
ಒಮ್ಮೊಮ್ಮೆ ತುಂಬಾ ನೋವಾಗುತ್ತದೆ. ನಿನ್ನ‌ ನೆನಪಾದಾಗಲೆಲ್ಲ ಒಬ್ಬಳೆ ಕೂತು ಕಣ್ಣೀರಾಗುತ್ತೇನೆ. ನೆನಪುಗಳು ‌ತರುವ ನೋವಿಗೆ ಮದ್ದು ಎಲ್ಲಿದೆ ಎಂದು ಮತ್ತೆ ಹುಡುಕಾಡುತ್ತೇನೆ. ಕಾರಣಗಳೆ ಇಲ್ಲದೆ ದೂರವಾಗುವುದು ಅಂದ್ರೆ ಇದೆಯೆನೋ.?

ಈ ಪ್ರೀತಿಗೇ ತುಂಬಾ ಸ್ವಾಭಿಮಾನದ ಗುಣ ಇದೆ. ಅದು ಕೆಲವೊಮ್ಮೆ ಕೆಲವೊಂದನ್ನು ಸಹಿಸೋದಿಲ್ಲ. ನಮ್ಮಿಬ್ಬರ ಮಧ್ಯೆಯೂ ಇದೇ ನಡೆದಿದ್ದು. ಜಗಳಗಳನ್ನು ಮಾಡದೇ ಸುಮ್ಮನಾದೆವೂ ಅದ್ಯಾವ ಮಾತು ನಮ್ಮಿಬ್ಬರ ಸ್ವಾಭಿಮನವನ್ನು ಕೆರಳಿಸಿತೋ ತಿಳಿಯದು.‌ ನಮ್ಮಿಬ್ಬರ ಗುಣಗಳು ಉತ್ತರ ದಕ್ಷಿಣನಾ…? ಇದಕ್ಕೆ ಉತ್ತರ ನನಗಿನ್ನು ಸಿಕ್ಕಿಲ್ಲ.‌ ನಿನ್ನ ಮೇಲೆ ನನಗೆ ಯಾವ ಆರೋಪಗಳು ಇಲ್ಲ.‌ ಆದರೆ ನಿನಗೆ ನನ್ನ ಮೇಲೆ ತುಂಬಾ ಅಸಮಾಧಾನಗಳಿವೆ. ಅದೆಲ್ಲವೂ ನನಗೆ ಸಮ್ಮತವೇ ಬಿಡು. ಬಳಿ ಬಂದವನು ನೀನೇ. ಮತ್ತೆ ದೂರ ಮಾಡಿ ಹೋದವನು ನೀನೇ. ಇದು ಮೌನಗಳ ಸಮರ.‌

ನಾವಿಬ್ಬರೂ ವಾದಗಳನ್ನು ಮಾಡದೇ ದೂರವಾದವರು. ಪ್ರತಿಬಾರಿ‌ ಹೀಗೆ ನಿನಗೊಂದು ಪತ್ರವನ್ನು ಹಾಕುವಾಗ ಯಾವ ಭರವಸೆಗಳು ನನ್ನಲ್ಲಿ ಇರುವುದಿಲ್ಲ. ಯಾಕೆಂದರೆ ನನ್ನೆಲ್ಲ ಭರವಸೆಗಳು ನಿನ್ನ ಮೌನದ ಮುಂದೆ ಸೋತು ಸುಮ್ಮನಾಗಿವೆ.
ಅದಕ್ಕೆ ಈ ಬಾರಿಯೂ ನನ್ನೆಲ್ಲ ಮನಸ್ಸಿನ ಭಾರವನ್ನು ಇಳಿಸಲು ಈ ಪತ್ರದ ಸಹಾಯವನ್ನು ಪಡೆದು ನಿನ್ನ ಹೃದಯದ ಅಂಚೆ ಪೆಟ್ಟಿಗೆಯೊಳಗೆ ಇಳಿಸಿದ್ದೇನೆ.‌

ಉರುಳುತ್ತಿದೆ ಒಂದೊಂದೆ ದಿನಗಳು. ಕರಗುತ್ತಿದೆ ಆಯುಷ್ಯದ ಕ್ಷಣಗಳು. “ಮರಳಿ” ನೀ ಬರಲಾರೆ. ನಿನಗಾಗಿ ಕೂಡಿಟ್ಟ ಅದೆಷ್ಟೋ ಕನಸುಗಳು ಮೂಲೆಯಲ್ಲಿರುವ ಆ ಪೆಟ್ಟಿಗೆಯೊಳಗಿನ ಪ್ರೇಮಪತ್ರಗಳಲ್ಲಿ ಮಾಸುತ್ತಿದೆ.

ಬಗೆಹರಿಯದ ಮಾತುಗಳನ್ನು ಆಡಿ ಪ್ರಯೋಜನ ಏನು ಅಲ್ವ. ನೀನೆಲ್ಲೋ‌ ದೂರದಲ್ಲಿ ಖುಷಿ ಆಗಿರ್ತಿಯಾ ಅಂತ ನಾನು ನಂಬುತ್ತೇನೆ.‌ ನಿನಗೆ ನನ್ನ ನೆನಪು ಅಗುತೋ‌ ಇಲ್ವೊ ದೇವರಾಣೆಗೂ ನನಗೊತ್ತಿಲ್ಲ. ನಾನು ಮಾತ್ರ ನಿನ್ನ ನೆನಪುಗಳ ಹೊತ್ತು ಬಂದು ಕಡಲ ತೀರದಲ್ಲಿ ಕೂರುತ್ತೇನೆ.

ಪ್ರತಿ ಬಾರಿಯೂ ಬಂದು ತೀರವನ್ನು ಚುಂಬಿಸಿ ಸಾಗುವ ಅಲೆಗಳ ಮೇಲೆ ಈ ತಂಗಾಳಿಗೆ ವಿಪರೀತ ವ್ಯಾಮೋಹ. ಅಲೆಗಳ ಮಾತನ್ನು ತೀರವಷ್ಟೆ ಆಲಿಸುತ್ತದೆ.ಅದೆಂತಹ ಬಾಂಧವ್ಯ ಅವುಗಳದ್ದು. ಇದನ್ನೆಲ್ಲ ದಿಟ್ಟಿಸಿ ನೋಡುವಾಗ ಮನಸು ಪುಳಕಗೊಳ್ಳುತ್ತದೆ. ಅದನ್ನು ನೋಡಿ ಒಬ್ಬಳೆ ನಗುವಾಗ ಕಡಲು ನಾಚಿ ಹಿಂದೆ ಸರಿಯುತ್ತದೆ. ಆದರೂ ಈ ಅಲೆಗಳ ಸರಸಗಳು ಸಾಗುತ್ತಲೇ ಇರುತ್ತದೆ. ನಿನ್ನ ನೆನಪುಗಳ ಜೊತೆ ಬದುಕುವ ನನ್ನಂತೆ..
ಒಲವು ಇದ್ದ ಮೇಲೆ ನೋವು ನೂರು ಸಲ ಬಂದು ಒಡಲನ್ನು ಹಿಂಡುತ್ತದೆ ಅನ್ನುವ ಸತ್ಯವನ್ನು ಅರಿತಾಗಿದೆ..ನನ್ನ ಮೌನಕ್ಕೆ ತಂಗಾಳಿಯೊಂದೆ ಸಾಂತ್ವವನಿಸುತ್ತದೆ.

ರಾಮನಂತೆ ಬದುಕುವ ನಿನ್ನಲ್ಲಿ ಅವನ ಅಷ್ಟು ಗುಣಗಳಿವೆ. ಆದರೆ ನಾನು ರಾಧೆಯಂತೆ ಬದುಕಿದವಳು ಬದುಕುವವಳು.‌ ಇಲ್ಲೂ ನಮ್ಮಿಬ್ಬರ ಬದುಕು ಅವರ ಕಥೆಗಳಂತೆ ಅದಲು ಬದಲಾಗಿವೆ.ಆ ರಾಧೆಗೆ ಕೃಷ್ಣನ ಹೆಸರೊಂದೆ ಜೊತೆಯಾಯಿತು.‌ ಈ ರಾಧೆಯ ಬದುಕಿನಲ್ಲಿ ನಿನ್ನ ಹೆಸರೊಂದು ನೆನಪಾಗಿ‌ ಉಳಿದು ಹೋಯಿತು. ಇರಲಿಬಿಡು. ನಿನ್ನ ಬದುಕಲ್ಲಿ ಪ್ರೀತಿಯನ್ನು ಪಡೆದುಕೊಂಡವರು ಅದೃಷ್ಟವಂತರು.‌ ಬಿಟ್ಟುಕೊಟ್ಟವರು ಪರಿಶುದ್ಧವಾದ ಪ್ರೇಮದಲ್ಲಿ ಮತ್ತೆ ಬದುಕುವರು.
ಇದೇ ಅಲ್ವ ಈ ಪ್ರೀತಿಗೆ ಇರುವ ಶಕ್ತಿ.
“ಹಿಡಿಯಷ್ಟಿರುವ ಹೃದಯದಲ್ಲಿ
ಹಿಡಿದಿಲಾರದಷ್ಟು ಭಾವಗಳಿರುತ್ತದೆ”.

ನಿನಗೊತ್ತ ಈಗ ನನ್ನ ಕನಸುಗಳೆಲ್ಲ ಎತ್ತರವಾದ ಗೋಡೆಯೇರಿ ಕುಳಿತಿದೆ. ಅದಕ್ಕೂ ನಿನ್ನ ಆಗಮನದ ತವಕ. ಅಲ್ಲಿ ಕೂತು ನಿನ್ನ ದಾರಿಯನ್ನು ದೂರದವರೆಗೂ ದಿಟ್ಟಿಸುತ್ತದೆ‌. ಪ್ರೀತಿ ಅಂದ್ರೆ ಇದೆ ಅಲ್ವ.‌ ನಂಬಿಕೆಯ ಮೇಲೆ ಬದುಕುವುದು. ನೀನು ಬರುವುದಿಲ್ಲ ಅನ್ನುವ ಸತ್ಯಕ್ಕಿಂತಲೂ ಬರಬಹುದು ಅನ್ನುವ ನಂಬಿಕೆಗೆ ಬಲ ಜಾಸ್ತಿ.. ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೇನೋ..?

-ಪೂಜಾ ಗುಜರನ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x