ಪಂಜು-ವಿಶೇಷ

“ಸಂಪಾದಕರಿಗೊಂದು ಪತ್ರ”: ಎಂ. ಜವರಾಜ್

-೧-

ಸರ್ ನಮಸ್ಕಾರ, ಏನ್ ಸರ್ ನೀವು ಆಡಾಡ್ತ ಹತ್ತು ವರ್ಷ ತುಂಬಿಸಿ ಬಿಟ್ಟಿರಲ್ಲ. ಗ್ರೇಟ್ ಸರ್. ಹತ್ತು ವರ್ಷ ಅಂದ್ರೆ ಸಾಮಾನ್ಯನ ಸರ್. ಸಾಹಿತ್ಯ ಸಂಬಂಧಿತ ಪತ್ರಿಕೆಯನ್ನು ಮಾಡಿ ಅದರಲ್ಲು ಸಾಹಿತ್ಯಾಸಕ್ತ ಆನ್ ಲೈನ್ ಓದುಗರನ್ನು ಹಿಡಿದಿಟ್ಟುಕೊಂಡು ನಿಗಧಿತವಾಗಿ ಪತ್ರಿಕೆ ರೂಪಿಸುವುದಿದೆಯಲ್ಲ ಸುಮ್ನೆನಾ ಸರ್. ಪ್ರತಿ ಸಂಚಿಕೆಗೂ ಕಥೆ, ಕವಿತೆ, ವಿಮರ್ಶೆ, ಪ್ರಬಂಧ ತರಹದ ಭಿನ್ನ ಬರಹಗಳನ್ನು ಆಯ್ದು ಸೋಸಿ ರಂಗೋಲಿ ಚಿತ್ತಾರದಾಗೆ ತುಂಬುವುದಿದೆಯಲ್ಲ ಅದು ಸರ್. ಅದಕ್ಕೆ ನಾನ್ ಹೇಳಿದ್ದು ಗ್ರೇಟ್ ಅಂತ.

ಈ ನಿಮ್ಮ ಸಾಹಿತ್ಯ ಮತ್ತು ಪತ್ರಿಕೆ ನಿಷ್ಟತೆಯ ಕಾರಣವಾಗಿ ಸಾವಿರಕ್ಕು ಹೆಚ್ಚು ದಾಟಿದ ಲೇಖಕರು ‘ಪಂಜು’ ವಿನ ಶಾಖ ಕಾಯಿಸಿಕೊಂಡೆ ಬಂದವರೆಂಬ ಮಾಹಿತಿ ತಿಳಿದು ಅಚ್ಚರಿ ಅನ್ನಿಸಿತು ಸರ್. ನೀವು ಪಂಜುವಿನಲ್ಲಿ ದಾಖಲಿಸಿರುವಂತೆ ಆ ಸಾವಿರಾರು ಹೆಸರುಗಳ ಲೇಖಕರು ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ಭಾಗಶಃ ಉತ್ತುಂಗದಲ್ಲಿರುವುದನ್ನು ನಾನೂ ಗಮನಿಸಿರುವೆ. ಹಾಗಾಗಿ ಇದೊಂತರ – ಹಾಗೇ ಹಿನ್ನೆಲೆಯಲ್ಲಿ ಉಳಿದು ಬಿಡಬಹುದಾಗಿದ್ದ ಬರಹಗಾರ ಪ್ರತಿಭೆಗಳನ್ನು ಹೊರಗೆತ್ತಿ ಲೋಕಾರ್ಪಣೆಗೊಳಿಸಿದ್ದು “ಪಂಜು ಗುರುತು ಪರಂಪರೆ” ಅನ್ನಬಹುದು ಸರ್.

ಈ ತರಹದ ಗುರುತು ಪರಂಪರೆಯನ್ನು ಒಂದು ಕಾಲದಲ್ಲಿ ಪಿ. ಲಂಕೇಶ್ “ಲಂಕೇಶ್ ಪತ್ರಿಕೆ” ಮುಖೇನ ಮಾಡುತ್ತಿದ್ದರು. ಆ ನಂತರ ‘ಅಗ್ನಿ’ ಮುಂದುವರಿಸಿತ್ತು. ಈ ಪರಿಯ ‘ಗುರುತು ಪರಂಪರೆ’ಯಿಂದ ಅನೇಕ ಹೊಸ ಲೇಖಕರು ಪಂಜುವಿನಂತಹುದೇ ಬೆಳಕಿನಲ್ಲಿ ಬೆಳಗಿ ಬೆಳೆದಿದ್ದಾರೆ. ಇದು ನೀವು ‘ಪಂಜು’ ಮುಖೇನ ಮಾಡ್ತಿರೋದು ಅತ್ಯಂತ ದೊಡ್ಡ ವಿಚಾರ ಅಲ್ವ ಸರ್. ಹಾಗಾಗಿ ‘ಪಂಜು’ ಪತ್ರಿಕೆ ‘ಲಂಕೇಶ್ ಪತ್ರಿಕೆ’ ಮತ್ತು ‘ಅಗ್ನಿ’ ಪತ್ರಿಕೆಗಳ ಪರಂಪರೆಯ ಕೊಂಡಿ ಅನ್ನಲು ನನಗೆ ನೂರೆಂಟು ಕಾರಣಗಳಿವೆ ಸರ್. ಈ ಬಗ್ಗೆ ನಿಮ್ಮೊಂದಿಗೆ ಸಾಕಷ್ಟು ಚರ್ಚಿಸಿರುವುದು ನಿಮಗೆ ತಿಳಿದೇ ಇದೆ ಸರ್. ದಲಿತ, ಬಂಡಾಯ, ಸಾಹಿತ್ಯ ಮತ್ತು ಚಳವಳಿ, ಜಾತ್ಯಾತೀತ ವಿಚಾರ, ವ್ಯಕ್ತಿಯ ವ್ಯಕ್ತಿತ್ವದ ನಿಲುವು, ಮೌಲ್ಯಾಧಾರಿತ ರಾಜಕಾರಣಿಗಳ ಪರಿಚಯ, ಆ ಮುಖೇನ ಪ್ರಸ್ತುತ ರಾಜಕೀಯ ಸ್ಥಿತ್ಯಂತರ, ಧರ್ಮ, ಜಾತಿಗಳ ವಿಚಾರಗಳ ಚರ್ಚೆಯ ವೇದಿಕೆಯಾಗಿಯೂ ಪತ್ರಿಕೆ ರೂಪಿಸಬಹುದಲ್ವ ಎಂಬ ಮಾತನ್ನು ನಾನು ತಿಳಿಯದೋ ತಿಳಿಯದೆಯೋ ನಿಮ್ಮೊಂದಿಗೆ ಚರ್ಚಿಸಿದ್ದು ಗೊತ್ತಲ್ಲ ಸರ್. ಹೀಗೆ ಸಂದರ್ಭಾನುಸಾರ ಚರ್ಚಿತ ವಿಷಯಗಳಿಗೆ ಒಡ್ಡಿಕೊಳ್ಳಲು ಮತ್ತು ಪ್ರಭುತ್ವದ ವಿರುದ್ದ ನೀವು ಧ್ವನಿ ಎತ್ತಲು ನಿಮಗೂ ನಿಮ್ಮದೇ ಆದ ಮಿತಿ ಇರುವುದೆಂಬುದನ್ನು ಬಲ್ಲೆ ಸರ್. ಈ ಇತಿ ಮಿತಿ ಅಂಕೆಯೊಳಗು ‘ಈ ಹತ್ತು ವರ್ಷಗಳ ಪಂಜು’ ಸಾಧನೆಯ ಹೊತ್ತಲ್ಲಿ ಇವೆಲ್ಲ ನೆನಪಾದವಷ್ಟೆ ಸರ್.

ನಿಮಗೆ ಗೊತ್ತೊ ಏನೋ.. 2019 ನೇ ಇಸವಿ.. ಅದೇ ವರ್ಷದಲ್ಲಿ..ಅದೇ ಸರ್, ಕರೋನಾ ಅಪ್ಪಳಿಸುವ ಮುನ್ನಿನ ಮಾತು ಸರ್. ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಪಕ್ಕದ ರಸ್ತೆಯ ರೋಟರಿ ಸಭಾಂಗಣದಲ್ಲಿ ಸರ್.. ಸಾಹಿತ್ಯಾಸಕ್ತ ಮನಸ್ಸುಗಳ ಕೂಟದಡಿ ಕವಿ ಕಥೆಗಾರ ಕುಕ್ಕರಳ್ಳಿ ಬಸವರಾಜು ಅವರ ‘ಕಾಲನೊದ್ದವರು’ ಕೃತಿ ಬಿಡುಗಡೆ ಇತ್ತಲ್ವ ಸರ್. ಅದು ನಿಮಗೂ ಗೊತ್ತಲ್ವ…? ನೀವು ಹೇಗೆ ಬಂದಿದ್ರೋ ಗೊತ್ತಿಲ್ಲ ಸರ್! ಆದರೆ ನಾನು ನನ್ನ ಸಾಹಿತ್ಯಾಸಕ್ತ ಗೆಳೆಯರ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದೆ. ಅದೊಂದು ಸುಂದರ ಕಾರ್ಯಕ್ರಮ. ಗೋವಿಂದಯ್ಯ, ಪರಮೇಶ್ವರ್, ರೇಣುಕಾರಾಧ್ಯ, ಎಸ್.ಕೆ.ಮಂಜುನಾಥ್, ಮಹೇಶ್ ಹರವೆ, ಸುಧೀಂದ್ರಕುಮಾರ್, ಇವರಲ್ಲದೆ ಸಾಹಿತ್ಯದ ಪೊಳ್ಳಿನ ಬಗ್ಗೆ, ಸುಳ್ಳಿನ ಬಗ್ಗೆ, ಮುಖವಾಡದ ಸಾಹಿತಿಗಳ ಬಗ್ಗೆ, ಗಟ್ಟಿ ಸಾಹಿತ್ಯದ ಅವಶ್ಯಕತೆಗಳ ಬಗ್ಗೆ ಮಾತಾಡುವ ಮನಸ್ಸುಗಳೇ ಬಂದಿದ್ರಲ್ಲವೇ ಸರ್.

ನಿಮಗೆ ಗೊತ್ತಾ ಸರ್, ಕುಕ್ಕರಳ್ಳಿ ಬಸವರಾಜು, ಸದ್ಯ ಅವರು ನಮ್ಮೊಂದಿಗಿಲ್ಲ ಅನ್ನೋದು ನಿಮಗೂ ಗೊತ್ತಲ್ವ ಸರ್. ಅವತ್ತು ಅವರು ತಮ್ಮ ‘ಕಾಲನೊದ್ದವರು’ ಕೃತಿ ಬಿಡುಗಡೆ ಹೊತ್ತಲ್ಲಿ ಕನ್ನಡ ಸಾಹಿತ್ಯದ ದಿಕ್ಕುದೆಸೆಗಳ ಬಗ್ಗೆ ಮಾತಾಡಿದ್ದು.. ದೇವನೂರು, ಸಿದ್ದಲಿಂಗಯ್ಯ, ಬಸವಲಿಂಗಯ್ಯ, ದಲಿತ ಬಂಡಾಯ ಸಾಹಿತ್ಯದ ಓರೆ ಕೋರೆಗಳ ಬಗ್ಗೆ ಮಾತಾಡಿದ್ದು..ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳ ಕುರಿತಾದ ಅವರ ಅಸಮಾಧಾನದ ಮಾತುಗಳು ಹೊರ ಬಂದವಲ್ಲ.. ಜೊತೆಗೆ ಪುಸ್ತಕಗಳ ಚರ್ಚೆಯ ಕುರಿತು, ಇವತ್ತಿನ ವಿಮರ್ಶಾ ವಲಯದಲ್ಲಿ ಏಕಮುಖ ಹಾಗು ವ್ಯಕ್ತಿಕೇಂದ್ರಿತ ಗುಂಪುಗಾರಿಕೆ ಬಗ್ಗೆ ಸಿಟ್ಟು ಹೊರ ಹಾಕಿದ್ದು… ಅದು ನಿಮಗೂ ಗೊತ್ತು. ಅದು ಬಿಡಿ ಸರ್, ಅದೇ ಹೊತ್ತಲ್ಲಿ ಮೈಸೂರು ಗೆಳೆಯರನೇಕರ ಭೇಟಿಯೂ ಆಯ್ತು. ಮುಖತಃ ಭೇಟಿಯಾಗದ ಸಾಕಷ್ಟು ಫೇಸ್ ಬುಕ್ ಗೆಳೆಯರೂ ಒಟ್ಟುಗೂಡಿ ಒಂದಷ್ಟು ಮಾತುಕತೆಯೂ ಆಯ್ತು. ಅದೂ ಲೋಕಾಭಿರಾಮವಾಗಿ. ಕೆಲವು ಗೆಳೆಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡುದ್ದು ಉಂಟು. ಆಗಿನ್ನು ನೀವು ಯಾರೆಂದೇ ನನಗೆ ಗೊತ್ತಿರಲಿಲ್ಲ ಸರ್.

ಕಾರ್ಯಕ್ರಮ ಮುಗಿದು ಅಲ್ಲಿಂದ ನಿರ್ಗಮಿಸುವ ಮುನ್ನ ಕುಕ್ಕರಳ್ಳಿ ಅವರ ‘ಕಾಲನೊದ್ದವರು’ ಕೃತಿ ನನ್ನ ಕೈಲಿ ಜಾಗ ಪಡೆದು ಓದಿಸಿಕೊಳ್ಳಲು ಕಾತರಿಸುತ್ತಿತ್ತು ಸರ್. ದೇವನೂರರ ‘ಕುಸುಮಬಾಲೆ’ ಗಿಂತಲೂ ತೀರಾ ಕಡಿಮೆ ಪುಟಗಳಿದ್ದ ‘ಕಾಲನೊದ್ದವರು’ ಕೃತಿಯನ್ನು ಬಸ್ಸಿನೊಳಗೇ ಕುಳಿತು ಪುಟ ತಿರುವಿದೆ. ತಿರುವುತ್ತಾ ತಿರುವುತ್ತಾ ಊರು ತಲುಪಿದ್ದೇ ಗೊತ್ತಾಗದಷ್ಟು ಆಳವಾದ, ಅತ್ಯಂತ ಕ್ಲಿಷ್ಟ ಎನಿಸುವ ಬದುಕಿನ ಪಡಿಪಾಟಲನ್ನು ಬಿತ್ತರಿಸುವ, ವರ್ತಮಾನದ ತಲ್ಲಣಗಳನ್ನು ಹೇಳುವ ಶಕ್ತ ಕಥೆ ಸರ್ ಅದು. ಮೊದಲಿಗೆ ಅವರಿಗೆ ಒಂದು ಸೆಲ್ಯೂಟ್ ಹೇಳಲೇಬೇಕು ಸರ್.

ಹೀಗೆ ತಲ್ಲಣದ ಬದುಕಿನ ಹಪಾಹಪಿಯನ್ನು ಕಟ್ಟಿಕೊಡುವ ‘ಕಾಲನೊದ್ದವರು’ ಕುರಿತು ನನ್ನ ಅನಿಸಿಕೆ ವ್ಯಕ್ತಪಡಿಸಿದ ಬರಹವನ್ನು ಬರೆದು ಎಫ್ ಬಿ ಯಲ್ಲಿ ಪೋಸ್ಟಿಸಿದಾಗಲೆ ಸರ್ ನೀವು ನನ್ನ ಸಂಪರ್ಕಕ್ಕೆ ಸಿಕ್ಕಿದ್ದು! ಒಮ್ಮೆ ನೀವು ಮೆಸೆಂಜರ್ ಗೆ ಬಂದು ಮೊಬೈಲ್ ನಂಬರ್ ಕೇಳುವವರೆಗೂ ನನ್ನ ಫ್ರೆಂಡ್ ಲಿಸ್ಟ್ ಲಿ ನೀವು ಇದಿರಾ ಅನ್ನೊ ಕಲ್ಪನೆಯೂ ಇರಲಿಲ್ಲ ಸರ್. ಆವಾಗಲೇ ಸರ್ ನೀವು ಪಂಜು ವೆಬ್ ಮ್ಯಾಗಜಿನ್ ಎಡಿಟರ್ ಎಂದು ತಿಳಿದ್ದದ್ದು! ಈ ಮೂಲಕ ಕೆಲವರಾದರು ನಮ್ಮ ನಡೆಯನ್ನು ಗಮನಿಸುತ್ತಿರುತ್ತಾರೆ ಎಂಬ ಸೂಕ್ಷ್ಮತೆ ನನಗೆ ಹೊಳೆದದ್ದು. ನೀವು ಮೊದಲು ನನ್ನ ಮೆಸೆಂಜರ್, ಆನಂತರ ವಾಟ್ಸಪ್ ನಲ್ಲಿ ಬಂದು ‘ಸರ್ ಪಂಜುವಿಗೆ ಏನಾದರು ಬರೆಯಿರಿ. ರೈಟಿಂಗ್ ಇದ್ರೆ ಕಳುಹಿಸಿ ಸರ್’ ಅಂದ್ರಲ್ಲ… ನಿಜವಾಗಿ ಹೇಳ್ತಿನಿ ಸರ್, ಆಗ ನನಗೆ ಏನು ಕಳುಹಿಸುವುದೆಂದು ಅರ್ಥವಾಗದೆ ಒದ್ದಾಡಿರುವೆ ಸರ್. ಈ ಹಿಂದೆ ನನ್ನೆಲ್ಲ ಕಥೆಗಳು ಮೈಸೂರಿನ ಆಂದೋಲನದಲ್ಲಿ ಪ್ರಕಟವಾಗಿವೆ. ಹಾಗೆ ಲಂಕೇಶ್ ಪತ್ರಿಕೆ, ಅಗ್ನಿ, ಪ್ರಜಾವಾಣಿಯಲ್ಲಿ ಕವಿತೆಗಳು ಪ್ರಕಟವಾಗಿವೆ. ಎಫ್ ಬಿ ಯಲ್ಲಿ ಸಕ್ರಿಯನಾದ ಮೇಲೆ ಅಲ್ಲಿ ಅನೇಕ ವಿಚಾರಗಳು ಚರ್ಚಿಗೊಳ್ಳುತ್ತಿದ್ದವು. ನಾನೂ ಈ ವಿಚಾರಗಳಿಗೆ ಪೂರ್ಣವಾಗಿ ಇನ್ ವಾಲ್ವ್ ಆದೆ ಅಂತ ಹೇಳಿದ್ನಲ್ಲ ಸರ್, ಅದೊಂತರ ತಕ್ಷಣದ ಪ್ರತಿಕ್ರಿಯೆ. ರಾಡಿ ರೊಚ್ಚು ಕಿಚ್ಚು ಅಪಸವ್ಯದ ಮಾತುಗಳು.

-೨-

ಒಳ ಮೀಸಲಾತಿ ವಿಚಾರವಂತು ದಲಿತರ “ಎಡ-ಬಲ” ಗಳ (ಹೊಲೆಯ ಮಾದಿಗ) ನಡುವೆಯೇ ದ್ವೇಷಾಸೂಯೆಗಳು ಹುಟ್ಟಿಕೊಂಡಿದ್ದವು. ಮಾದಿಗರ ಒಳ ಮೀಸಲಾತಿ ಪರವಾಗಿ ದೇವನೂರ ಮಹಾದೇವ ಅವರ ಉಪಸ್ಥಿತಿ/ ಭಾಗವಹಿಸುವಿಕೆಯಿಂದ ಹೊಲೆಯ ಮಾದಿಗರ ನಡುವಿನ ಕಿಚ್ಚು ಆರಬಹುದೆಂಬ ಒಟ್ಟಾಭಿಪ್ರಾಯವೂ ಚರ್ಚೆಯ ಭಾಗವಾಯ್ತಲ್ಲ ಸರ್. ಆಗ ನನಗೆ ಎಲ್ಲಿಲ್ಲದ ಸಿಟ್ಟು! ಈ ಸಿಟ್ಟಿನಲ್ಲೆ “ಒಳ ಮೀಸಲಾತಿ ವಿಚಾರದಲ್ಲಿ ದೇವನೂರ ಮಹಾದೇವರನ್ನು ಅಪ್ರಸ್ತುತಗೊಳಿಸಿ” ಎಂದು ಲೇಖನ ಪೋಸ್ಟಿಸಿದೆ. ಇದು ದೇವನೂರನ್ನು ಆರಾಧಿಸುವ ಕೆಲವರಲ್ಲಿ ಸಿಟ್ಟಾದಂತೆ ಅನಿಸಿತು ಸರ್. ಅದೇ ಕ್ಷಣ ನನ್ನ ಮೇಲೆ ಪ್ರಹಾರ ಮಾಡತೊಡಗಿದರು. ವೈಯಕ್ತಿಕ ತೇಜೋವಧೆಗೆ ನಿಂತು ಬಿಡೋದ ಸರ್ ಎಲ್ರು..! ಆದರೆ ಇವರ‌್ಯಾರೂ ದೇವನೂರರನ್ನು “ಸರಿಯಾಗಿ” ಓದಿಕೊಂಡಿಲ್ಲ. ದೇವನೂರರ ಸಾಹಿತ್ಯವನ್ನು ಅಧ್ಯಯನ ಮಾಡಿಲ್ಲ ಅನಿಸಿತು ಸರ್. ಸರ್ ದೇವನೂರರ ಬಗ್ಗೆ ನನ್ನ ಮನಸ್ಸಿನೊಳಗಿನ ತಳಮಳವೂ ಇವರಿಗೆ ಅರ್ಥ ಆದಂತಿಲ್ಲ ಅನಿಸುತ್ತದೆ. ಸರ್ ಇನ್ನೊಂದು ವಿಚಾರ ಏನ್ ಗೊತ್ತಾ ಸರ್? ನಾನು ಇದುವರೆಗೆ ದೇವನೂರರನ್ನು ಎರಡು ಬಾರಿ ಮುಖಾಮುಖಿ ಆಗಿರಬಹುದೇನೋ..! ಮೊದಲಿಗೆ ನನ್ನ ಮೊದಲ ಕಥಾ ಸಂಕಲನ ‘ನವುಲೂರಮ್ಮ ಕಥೆ’ ಕೊಡಲು ಅವರ ಮನೆ ಹತ್ತಿರ ಹೋದೆ ಸರ್. ಅವರು ನಮ್ಮ ಸದ್ದು ಕೇಳಿ ಸರ‌್ರನೆ ಹೊರಗೆ ಬಂದು ‘ಯಾರು.. ಏನು’ ಅಂದರು ಸರ್. ‘ನಾನು..’ ಅಂತ ನನ್ನ ಪರಿಚಯ ಮಾಡಿಕೊಂಡೆ. ಅವರು ‘ಓ.. ನರಸೀಪುರ ಅಲ್ವ..ಕೇಳಿದಿನಿ ಕೇಳಿದಿನಿ. ಆಂದೋಲನದಲಿ ನಿಮ್ಮ ಹೆಸರು ನೋಡಿದಿನಿ. ಕೊಡಿ.. ಕೊಡಿ ಓದ್ತಿನಿ..ಹಾ.. ಸರಿ, ಮತ್ತೆ ಸಿಗೋಣ.. ಈಗ ಯಾರೋ ಬಂದಿದಾರೆ. ಅವರೊಂದಿಗೆ ಇದ್ದೆ. ಬನ್ನಿ ಹೋಗ್ಬನ್ನಿ’ ಅಂದರು. ನಾನು ಗೇಟ್ ಒಳಗೆ ಹೋಗೇ ಇರಲಿಲ್ಲ. ಅವರು ಹಾಗಂದ ಮೇಲೆ ನಮಸ್ಕಾರ ಅಂತಂದು ಹಾಗೇ ಹಿಂತಿರುಗಿದ್ದೆ.

ದೇವನೂರ ಮಹಾದೇವ ಅವರು ಸ್ಪಷ್ಟವಾಗಿ “ಒಳ ಮೀಸಲಾತಿ ಪರ ಅಂದರೆ ದಲಿತರನ್ನೇ ಇಬ್ಬಾಗ ಮಾಡಿದಂತೆ. ಹಾಗಾಗಿ ಇದರ ಪರ ನನ್ನ ಒಪ್ಪಿಗೆ ಇಲ್ಲ” ಎಂದಿದ್ದರು. ದೇವನೂರು ಒಬ್ಬ ಅಪ್ಪಟ ಗಾಧೀವಾದಿ. ಗಾಂಧಿ ಎಂದಿಗೂ ಒಡಕನ್ನು ಬಯಸಿದವರಲ್ಲ. ಒಡಕನ್ನು ಸರಿಪಡಿಸಿ ಒಗ್ಗಟ್ಟಿನಲ್ಲಿ ಇರುವ ಶಕ್ತಿಯ ಮಹತ್ವದಲ್ಲಿ ಬಿಕೆ ಇಟ್ಟವರು. ಸ್ವಾತಂತ್ಯ ಹೋರಾಟದ ಕಾಲಘಟ್ಟದಲ್ಲಿ ಪೂನಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಗಾಂಧೀಜಿ, ಅಂಬೇಡ್ಕರ್ ಅವರ ಕೆಲವು ನಿಲುವು ವಿರೋಧಿಸಿದ್ದರು. ಗಾಂಧೀಜಿಯ ವಿರೋಧದ ಉದ್ದೇಶವೂ ಸ್ಪಷ್ಟವಿತ್ತು. ಸಮಸ್ತ ಭಾರತೀಯರು ಬ್ರಿಟೀಷ್ ಪ್ರಭುತ್ವದ ವಿರುದ್ದ ಹೋರಾಡುತ್ತಿತ್ತು. ಈ ಹೊತ್ತಿನಲ್ಲಿ ಅಂಬೇಡ್ಕರ್ ಅವರ ಬೇಡಿಕೆ ಭಾರತೀಯ ಮನಸ್ಸು ಇಬ್ಬಾಗ ಮಾಡಿದಂತೆ ಆಗುತ್ತದೆ ಎಂಬ ಆತಂಕ ಗಾಂಧಿಗಿತ್ತು. ಇದು ಒಟ್ಟು ಸ್ವಾತಂತ್ರ್ಯ ಪಡೆಯುವ ಉದ್ದೇಶಕ್ಕೆ ಪೆಟ್ಟು ಬಿದ್ದು ಬ್ರಿಟೀಷರಿಗೆ ಅಸ್ತ್ರವಾಗಬಾರದೆಂಬ ಸದುದ್ದೇಶದ ಕಾರಣವೇ ಆಗಿತ್ತು. ಆದರೆ ವಿರೋಧಿಗಳು ಅಂದುಕೊಂಡಂತೆ ಗಾಂಧಿ ಯಾವತ್ತಿಗೂ ದಲಿತ ವಿರೋಧಿ ನೀತಿ ಅನುಸರಿಸಿಲ್ಲ. ದಲಿತರ ಭಾಗವಹಿಸುವಿಕೆ ಮತ್ತು ಏಳಿಗೆ ಅವರ ಪರಮ ಪ್ರೀತಿಯಾಗಿತ್ತು. ಅಸ್ಪೃಶ್ಯ ಆಚರಣೆ ತೊಲಗಿಸುವುದೇ ಜೀವನದ ಉದ್ದೇಶವಾಗಿತ್ತು. ಅಂಬೇಡ್ಕರ್ ಅವರಿಗೂ ಗಾಂಧಿ ಬಗ್ಗೆ, ಅವರ ನಡೆಯ ಬಗ್ಗೆ ಗೊತ್ತಿತ್ತು. ಆದರೆ ಕೆಲವು ಗಾಂಧಿ ವಿರೋಧಿ ಮನಸ್ಸುಗಳು ಇವತ್ತಿಗೂ ಗಾಂಧಿ ಬಗ್ಗೆ ದಲಿತರೊಳಗೆ ಕೆಟ್ಟ ಅಭಿಪ್ರಾಯ ರೂಪಿಸಿ ಜೀವಂತವಾಗಿಸಿರುವಂತೆ ಮಾಡುತ್ತಿರುವುದು ನಡೆಯುತ್ತಲೇ ಇದೆ. ಆದರೆ ಇದಾವುದರಿಂದಲೂ ಗಾಂಧಿಯನ್ನು ಕೆಡವಲಾಗಿಲ್ಲ. ಕಾರಣ ಗಾಂಧಿ ಎಂದರೆ ಕಠಿಣ. ಎಲ್ಲವನ್ನು ಅರಗಿಸಿಕೊಳ್ಳಬಲ್ಲ ಸಂತ.

ಸರ್ ಗಾಂಧೀಜಿ, ಭಾರತವನ್ನು ಬ್ರಿಟೀಷರ ಶೃಂಖಲೆಯಿಂದ ಬಿಡುಗಡೆಗೊಳಿಸುವ ಮನಸ್ಥಿತಿಯಾದರೆ, ಅಂಬೇಡ್ಕರ್, ಭಾರತದೊಳಗಿನ ದಲಿತರನ್ನು ಮೇಲುವರ್ಗದವರ ಬ್ರಾಹ್ಮಣ್ಯದ ಶೃಂಖಲೆಯಿಂದ ಬಿಡುಗಡೆಗೊಳಿಸುವ ಚಿಂತನೆಯ ಮನಸ್ಥಿತಿಯಾಗಿತ್ತು ಸರ್. ಹೀಗಾಗಿ ನಮಗೆ ಗಾಂಧಿ ಮತ್ತು ಅಂಬೇಡ್ಕರ್ ಅತಿ ಮುಖ್ಯವಾಗಬೇಕಾದ ಅನಿವಾರ್ಯತೆ ಇದೆ ಅಲ್ವ ಸರ್. ಇದು ಗಾಂಧಿ ವಿರೋಧಿಗಳಿಗೆ ಅರ್ಥವಾಗುವುದು ಯಾವಾಗ?

ಹಾಗೆ ಗಾಂಧಿ ಐಕ್ಯತೆಯ ಸಂಕೇತ. ಈ ಸಂಕೇತವನ್ನು ಚಾಚೂ ತಪ್ಪದೆ ಪರಿಪಾಲಿಸುವ ದೇವನೂರ ಮಹಾದೇವ ಅವರು ದಲಿತರೊಳಗಿನ ‘ಎಡ ಬಲ’ ( ಹೊಲೆಯ ಮಾದಿಗ) ಎನ್ನುವುದಕ್ಕಿಂತ ದಲಿತ ಐಕ್ಯತೆಯೇ ಮುಖ್ಯ ಅಂತ ಅಂದುಕೊಂಡಿರೋರು ಸರ್. ದೇವನೂರರದು ಪಕ್ಕಾ ಗಾಂಧೀಜಿ ಮಾರ್ಗ. ಆ ಮಾರ್ಗದಲ್ಲಿ ದಲಿತರ ಒಗ್ಗಟ್ಟಿನ ಬಗ್ಗೆ ಆಳವಾಗಿ ಚಿಂತಿಸಿದವರು. ಇಷ್ಟಾಗಿಯೂ ಬದಲಾದ ಕಾಲಘಟ್ಟ ಮತ್ತು ಹೊಸ ತಲೆಮಾರಿನ ಚಿಂತನೆಗಳನ್ನು ಅಳೆದು ತೂಗಿ ನೋಡುತ್ತ ತಮ್ಮ ಹಳೇ ಶೈಲಿಯ ಚಿಂತನಾ ಕ್ರಮವನ್ನು ಕಾದ ಕಬ್ಬಿಣದ ಸಲಾಕೆಗಿಟ್ಟವರಂತೆ ಪರೀಕ್ಷಿತ ಗುಣದಲ್ಲಿ ತಮ್ಮ ಕಟು ನಿಲುವು ಬದಿಗಿಟ್ಟು ಒಳ ಮೀಸಲಾತಿ ಪರವಾದ ನಿಲುವು ಪ್ರಕಟಿಸಿರುವುದು ಸಹ ಗಾಂಧಿ ಮಾರ್ಗವೇ ಸರ್. ಅದು ತಾಯ್ತನದ ನಿಲುವಲ್ಲದೆ ಬೇರೇನು ಸರ್.

ದೇವನೂರು ಎಂಥ ಸಂದರ್ಭದಲ್ಲಿ ಒಳ ಮೀಸಲಾತಿ ಪರ ವಕಾಲತ್ತು ವಹಿಸಿದರು ಅನ್ನುವುದು ಮುಖ್ಯ ಆಗುತ್ತೆ ಸರ್. ಇವತ್ತಿನ ಪ್ರಭುತ್ವದ ನೀತಿ ಕೋಮುವಾದವನ್ನು ಪೋಷಿಸುವ ಒಂದಂಶ ಇಟ್ಟುಕೊಂಡು ಎಲ್ಲ ವಲಯದಲ್ಲು ಧರ್ಮ ದ್ವೇಷ, ಜನಾಂಗ ದ್ವೇಷ, ಪ್ರಾದೇಶಿಕ ಭಾಷೆಗಳ ಮೇಲೆ ಪ್ರಭುತ್ವ ಸ್ಥಾಪಿಸುವ ಹಿಡೆನ್ ಅಜೆಂಡಾವನ್ನು ಮುನ್ನೆಲೆಗೆ ತರುತ್ತಿದ್ದಾರಲ್ವ ಸರ್. ಸಂಸ್ಕೃತ ಹಿಂದಿ ಹೇರಿಕೆಯೇ ಅದರ ಗೌಪ್ಯ ಕಾರ್ಯಸೂಚಿ. ಸಣ್ಣಪುಟ್ಟ ಜನಾಂಗಗಳ ಸಣ್ಣಪುಟ್ಟ ಆಸೆ ಬೇಡಿಕೆಯನ್ನೆ ಬಂಡವಾಳ ಮಾಡಿಕೊಂಡು ಸಮಸ್ತ ಭಾರತೀಯರನ್ನು ಒಡೆದು ಬ್ರಾಹ್ಮಣ್ಯವನ್ನು ಹೇರಿ ಆಳುವ ನೀತಿಗೆ ನಿಂತಿದ್ದಾರಲ್ಲ ಸರ್, ಈ ಪ್ರಜಾ ವಿರೋಧಿ ನೀತಿಯನ್ನು ಹತ್ತಿಕ್ಕುವ ಸಲುವಾಗಿ ದಲಿತರ ಐಕ್ಯತೆಯಾಗಲಿ ಅನ್ನೊ ಕಾರಣದಿಂದ ದೇವನೂರರ ಸ್ಪಷ್ಟತೆ ಕಾಣುತ್ತದೆ‌ ಸರ್.

ಹಾಗಾಗಿ ಅಂದು ಅವರು ಖಡಕ್ ಧ್ವನಿಯಲ್ಲಿ ‘ಪರವಿಲ್ಲ’ ಎಂದ ಮೇಲೆ ಮತ್ತೆ ಅವರನ್ನು ಹೋರಾಟದ ಭಾಗವಾಗಿ ಎಂದು ಅವರ ಹಿಂದೆ ಬೀಳುವುದು, ಅವರನ್ನು ಟೀಕಿಸುವುದು ಸರಿಯಲ್ಲ ಎಂಬುದು ಅಂದಿನ ನನ್ನ ವಾದವಾಗಿತ್ತು ಸರ್.

ಒಮ್ಮೆ ಹೀಗಾಯ್ತು ಸರ್, ನಿಮಗೆ ಹೇಳದ ವಿಚಾರ ಯಾವುದಿದೆ ಹೇಳಿ..! ಪ್ರಜಾವಾಣಿಯಲ್ಲಿ ಮೊಗಳ್ಳಿ ಗಣೇಶ್ ಒಳ ಮೀಸಲಾತಿ ವಿರುದ್ದ ಬರೆದಿದ್ದರು. ಅದೇ ಚರ್ಚೆಯಲ್ಲಿ ಕೆ.ಬಿ.ಸಿದ್ದಯ್ಯನವರು ಪರವಾಗಿ ವಾದಿಸಿದ್ದರು. ಈ ಎರಡು ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹುಯಿಲೆಬ್ಬಿಸಿದ್ದವು. ನಾನು ಮೊಗಳ್ಳಿ ನಿಲುವನ್ನು ಖಂಡಿಸಿದ್ದೆ. ನನ್ನ ಖಂಡನಾ ಪೋಸ್ಟ್ ಹರಿದಾಡಿದ ಮೇಲೆ ಮೊಗಳ್ಳಿ ಅವರ ಮುಖಪುಟ ನನಗೆ ಇದುವರೆಗೂ ಕಂಡಿಲ್ಲ ಸರ್! ಸರ್, ನನಗೆ ದೇವನೂರು, ಮೊಗಳ್ಳಿ ಅಂದರೆ ತುಂಬಾ ಇಷ್ಟ. ಅವರ ಕಥೆಗಳಿಂದ ಸಾಕಷ್ಟು ಪ್ರಭಾವಿತಗೊಂಡಿದ್ದೇನೆ. ಆದರೆ ಇವರನ್ನು ಎಂದೂ ನಕಲಿಸಿಲ್ಲ. ಆದರೆ ನನ್ನ ಕಥೆಗಳ ಬಗ್ಗೆ ವಿಮರ್ಶೆ ಮತ್ತು ಮುನ್ನುಡಿ ಬರೆಯುವವರು ಈ ಈರ್ವರ ಕಥೆಗಳ ಇನ್ ಫ್ಲುಯೆನ್ಸ್ ನ್ನು ದಾಖಲಿಸದೇ ಬಿಟ್ಟಿಲ್ಲ! ಇದರಿಂದ ನನಗೆ ಕಿರಿಕಿರಿಯೂ ಆಗಿರುವುದಂತೂ ಸುಳ್ಳಲ್ಲ ಸರ್.

-೩-

ಅದೇ ಹೊತ್ತಲ್ಲಿ ನನ್ನ ಖಾರವಾದ ಪುಟ್ಟ ಪುಟ್ಟ ಪೋಸ್ಟ್ ಗಳ ಕಾರಣವಾಗಿಯೋ ಏನೋ ಕೆಲವು ಪ್ರಿಂಟ್ ಅಂಡ್ ವೆಬ್ ಮ್ಯಾಗಜಿನ್ ಗಳು ದಲಿತರ ಒಳ ಮೀಸಲಾತಿ ವಿಚಾರವಾಗಿ ನನ್ನಿಂದ ಲೇಖನ ಬಯಸಿದ್ದರು. ಆದರೆ ಹೀಗೆ ಒಂದು ಪರ್ಟಿಕ್ಯುಲರ್ ವಿಷಯವನ್ನು ಪ್ರಸ್ತಾಪಿಸಿ ಬರೆಯಿರಿ ಎಂದರೆ ನನಗಾಗದು ಸರ್. ಜೊತೆಗೆ ಈಗಾಗಲೇ ಒಳ ಮೀಸಲಾತಿ ವಿಚಾರವಾಗಿ ಸಾಕಷ್ಟು ಬರಹಗಳು ಬಂದಿವೆ. ಇದರ ಬಗ್ಗೆ ಇನ್ನೇನು ಬರೆಯಲಿ..? ಹಾಗಾಗಿ ಒಳ ಮೀಸಲಾತಿ ಲೇಖನ ಬರೆಯದೆ ಅಂತರ ಕಾಯ್ದುಕೊಂಡೆ ಸರ್. ಹೀಗೆ ಅಂತರ ಕಾಯ್ದುಕೊಂಡ ಮೇಲೆ ಕೆಲವರು ನನ್ನ ಎಫ್ ಬಿ ಪೋಸ್ಟ್ ಗಳತ್ತ ಗಮನ ಹರಿಸದೆ ಜಾಣ ಮೌನ ಪ್ರದರ್ಶಿಸಿದ್ದು ನನ್ನ ಅರಿವಿಗೆ ಬಂದ ಹೊತ್ತಲ್ಲೇ ಯಾವ ಪರ್ಟಿಕ್ಯುಲರ್ ವಿಚಾರದ ಬಗ್ಗೆ ಪ್ರಸ್ತಾಪ ಮಾಡದೆ ನೀವು ‘ಏನಾದರು ಬರೀರಿ’ ಅಂದ್ರಲ್ಲ ಆಗಲೇ ಸರ್ ನನಗೆ ನಿಮ್ಮ ಸೂಕ್ಷ್ಮತೆ ಅರಿವಿಗೆ ಬಂದದ್ದು. ಸೋ ಗ್ರೇಟ್ ಸರ್ ನೀವು!

ಇಷ್ಟಾದರು ನಾನು ತಿಂಗಳಾನುಗಟ್ಟಲೆ ಪಂಜುವಿಗೆ ಬರೆಯಲೇ ಇಲ್ಲ. ಆದರೆ ನೀವು ಬಿಟ್ರಾ.. ಇಲ್ಲ! ಬೆನ್ನು ಬಿದ್ದಿರಿ. ಹೀಗೆ ಬೆನ್ನು ಬಿದ್ದು ಬರೆಸಿಕೊಂಡಿದ್ದು ‘ಜಪ್ತಿ’ ಕಥೆ ಸರ್. ಆದರೆ ನಿಮ್ಮ ಒತ್ತಡಕ್ಕಾಗಿ ಬರೆದ ‘ಜಪ್ತಿ’ ಯನ್ನು ನಾನು ಮತ್ತೆ ಓದಿ ಎಡಿಟ್ ಮಾಡಿ ಕಳುಹಿಸುವ ಸೂಕ್ಷ್ಮತೆ ಇರಬೇಕಾಗಿತ್ತು. ಆದರೆ ಯಾವುದೋ ಹಕೀಕತ್ತಿಗೆ ಒಳಗಾಗಿ ಬರೆದದ್ದನ್ನು ಬರೆದ ಹಾಗೆ ಪಂಜುವಿಗೆ ಮೇಲ್ ಮಾಡಿದೆ. ಅದು ಪ್ರಕಟವೂ ಆಯ್ತು. ಪ್ರಕಟವಾದಾಗಲು ಸಹ ಓದದೆ ಎಲ್ಲ ಕಡೆ ಹಂಚಿಕೊಂಡೆ. ಅನೇಕರು ಅದರ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರು. ಅದರಲ್ಲು ‘ಅ ಆ ಮತ್ತು…’ ಕವಿ ಹೆಚ್.ಗೋವಿಂದಯ್ಯ ಫೋನಾಯಿಸಿ ‘ಈಚೆಗೆ ಬರೆದಿದ್ದಿರಲ್ಲ ಕತೆ, ಅದು ಚೆನ್ನಾಗಿದೆ ಜವರಾಜ್. ಇಷ್ಟ ಆಯ್ತು’ ಅಂದರು. ಆವಾಗಲೇ ನಾನೊಬ್ಬ ಕಥೆಗಾರ ಆಗಿದ್ದೀನಿ ಅನಿಸಿದ್ದು. ಯಾಕೆಂದರೆ ನನ್ನ ಸಾಹಿತ್ಯದ ಬಗ್ಗೆ ಪಾಸಿಟಿವ್ ನೆಗೆಟಿವ್ ಆದಂತಹ ಅನೇಕರು ವ್ಯಕ್ತಪಡಿಸಿದ್ದರು ಸಹ ನಾನು ವೈಯಕ್ತಿಕವಾಗಿ ಇಷ್ಟ ಪಡುವ, ಚಳುವಳಿ ಮತ್ತು ಸಾಹಿತ್ಯದ ಆಳ ಅಗಲ ಬಲ್ಲ ಗೋವಿಂದಯ್ಯ ಅವರು ಏನೊಂದೂ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಅವರು ಅಭಿಪ್ರಾಯಿಸಿದ್ದು ನನಗೆ ಖುಷಿಯೂ ಆಯ್ತು. ಏಕೆಂದರೆ ಬಹು ಹಿಂದೆ ಪಿ.ಲಂಕೇಶರು ಒಂದು ಮಾತು ಹೇಳಿದ್ದರು.

ಅದು “ಒಬ್ಬ ಲೇಖಕ ಮತ್ತು ಆತನ ಸಾಹಿತ್ಯ ಯಾವೊಂದು ಹೊಗಳಿಕೆಗು ತೆಗಳಿಕೆಗು ಅಥವಾ ಟೀಕೆಗು ಗುರಿಯಾಗದೆ ಅಥವಾ ಲೇಖಕ ಮತ್ತು ಅವನ ಸಾಹಿತ್ಯವನ್ನು ಓದುಗ ಅಥವಾ ವಿಮರ್ಶಕ ಅಥವಾ ಸಾಹಿತ್ಯಾಸಕ್ತ ಓದಿಯೂ ಓದದವರ ಹಾಗೆ ಯಾವೊಂದು ಅಭಿಪ್ರಾಯವನ್ನೂ ದಾಖಲಿಸದೆ ತಣ್ಣಗೆ ಒಳಗೇ ಇರುವುದೊ ಅಂತಹ ಲೇಖಕ ಮತ್ತವನ ಸಾಹಿತ್ಯ ಇದ್ದೂ ಸತ್ತಂತೆ” ಎಂಬುದು ನನ್ನೊಳಗೆ ಕೊರೆಯುತ್ತಿತ್ತು. ಹಾಗಾಗಿ ನನ್ನ ಸಾಹಿತ್ಯದ ಬಗ್ಗೆ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕ್ರಿಟಿಕ್ ವಿಮರ್ಶಕ, ಕಟು ಟೀಕಾಕಾರ ಕವಿ ಹೆಚ್.ಗೋವಿಂದಯ್ಯ ಅಭಿಪ್ರಾಯಿಸಿದ್ದು ನನಗೆ ಬರೆದದ್ದು ಸಾರ್ಥಕ ಅನಿಸಿತು ಸರ್. ಇದೇ ಖುಷಿಯಲ್ಲಿ ಕನ್ನಡದ ವಿಶಿಷ್ಟ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ ಹೊತ್ತ ನನ್ನ “ಮೆಟ್ಟು ಹೇಳಿದ ಕಥಾ ಪ್ರಸಂಗ” ವನ್ನೂ ಆಸ್ಥೆಯಿಂದ ಓದಿ ನನ್ನ ಸಾಹಿತ್ಯದೊಳಗೂ ಗಟ್ಟಿತನ ಇರುವುದನ್ನು ದಾಖಲಿಸಿರುವುದು ನನಗೆ ಇನ್ನಷ್ಟು ಬರೆಯಲು ಹುರುಪು ತುಂಬಿದ್ದಾರೆ ಸರ್. ಇದಕ್ಕೆಲ್ಲ ಕಾರಣ ಯಾರು ಸರ್‌..? ನೀವು ಸರ್.. ನೀವು! ಈ ‘ಮೆಟ್ಟು ಹೇಳಿದ ಕಥಾ ಪ್ರಸಂಗ’ ವನ್ನು ನನ್ನಿಂದ ಬಲವಂತವಾಗಿ ಬರೆಸಿ ಪಂಜುವಿನಲ್ಲಿ ಪ್ರಕಟಿಸಿದಿರಲ್ಲ ಸರ್ ಅದು ನಾಡಿನ ಸಮಸ್ತ ಓದುಗರನ್ನು ತಲುಪಲು ಕಾರಣರಾದಿರಲ್ಲ ಸರ್. ನೀವು ಬಲವಂತ ಮಾಡಿರದಿದ್ದರೆ ಈ ಕಥನ ಕಾವ್ಯ ನನ್ನಿಂದ ಬರೆಯಲು ಆಗುತ್ತಿತ್ತೊ ಏನೊ ಹಾಗಾಗಿ ಇದಕ್ಕೆಲ್ಲ ಮೂಲ ಕಾರಣ ನೀವು…ನಿಮ್ಮ ಪಂಜು ಸರ್!

ಇಷ್ಟಾಗಿ ಗೋವಿಂದಯ್ಯ ಅವರು ‘ಪಂಜು’ ಮ್ಯಾಗಜಿನ್ ಯಾರದು? ಎಡಿಟರ್ ಯಾರು? ‘ ಅಂತ ಕೇಳಿದ್ದರು ಸರ್. ಅಂದು ನನಗೆ ನಿಮ್ಮ ಬಗ್ಗೆ ಏನೂ ಗೊತ್ತಿರದ ಕಾರಣ ಸುಮ್ಮನೆ ಒಂದೆರಡು ಮಾತಾಡಿದೆ ಸರ್.

-೪-

ಈ ನಡುವೆ ‘ಏನಾದ್ರು ಬರುದ್ರಾ’ ಅಂತ ಮತ್ತೆ ನಿಮ್ಮ ಮೆಸೇಜ್! ಥೂತ್ತೇರಿ..! ಹೇಗೋ ಎಫ್ ಬಿ ಯಲ್ಲಿ ನನಗಿಷ್ಟವಾದ ವಿಚಾರ ಬರೆದು ಪೋಸ್ಟಿಸಿ ಹಲವು ಲೈಕುಗಳನ್ನು ಪಡೆದು ಖುಷಿಗೊಂಡು ಸುಮ್ಮನಿದ್ದೆ. ಆದರೆ ಆಗಾಗ ನಿಮ್ಮ ಮೆಸೇಜು ನನ್ನನ್ನು ತೀರಾ ಡಿಸ್ಟರ್ಬ್ ಮಾಡಿದವು ಸರ್. ಇಷ್ಟಾಗಿಯೂ ನನ್ನಿಂದ ನಿಮ್ಮ ಪತ್ರಿಕೆಗೆ ಮತ್ತೆ ಬರೆಯಲಾಗದೆ ಸುಮ್ಮನಾದರು ನೀವು ಮೇಲಿಂದ ಮೇಲೆ ಕಾಲ್ ಮಾಡ್ತನೆ ಇದ್ದಿರಿ. ಅದೆಂತ ತಾಳ್ಮೆ ನಿಮ್ಮದು..! ಬೇರಿಸಿಕೊಳ್ಳದೆ ಆರಂಭಿಕವಾಗಿ ನನ್ನ ಪರಿಚಯವಾದಾಗಿನಿಂದ ಹೇಗೆ ಕೇಳುತ್ತಿದ್ದಿರೋ ಹಾಗೇ ಒಂದೇ ರೀತಿಯ ನಿಮ್ಮ ಸೌಜನ್ಯದ ಕೇಳಿಕೆ ಒತ್ತಾಸೆ ಅಪರಿಮಿತ ನಂಬಿಕೆ ನನ್ನಲ್ಲಿ ಅಚ್ಚರಿ ಹುಟ್ಟಿಸಿತು ಸರ್. ಯಾಕೆಂದರೆ ಪತ್ರಿಕಾ ಸಂಪಾದಕರೆಂದರೆ ಯಾವಾಗಲು ಅನುಮಾನ, ಸಿಟ್ಟು ಸೆಡವು ಇರುವಂತವರು ಎಂಬುದನ್ನು ಕೇಳಿದ್ದೇನೆ. ಯಾರಲ್ಲು ಮೇಲೆ ಬಿದ್ದು ಬರೆಸುವವರು ಕಮ್ಮಿ. ಅವರಲ್ಲಿ ಕೆಲಬಮವರಾದರು ಇದ್ದಾರೆ. ಇರಬಹುದು. ಪಿ‌ಲಂಕೇಶ್ ವಿಚಾರಕ್ಕೆ ಬಂದರೆ ಅವರೊಬ್ಬ ಯಾರನ್ನೂ ನಂಬದ ಸಂಪಾದಕ. ಇದಕ್ಕೆ ಉದಾಹರಣೆಗಳಿವೆ. ಕೆಲವರು ಅವರ ವರ್ತನೆಯಿಂದ ಕೆಲಸವನ್ನೂ ಬಿಟ್ಟಿದ್ದಾರೆ. ಏಕಕಾಲಕ್ಕೆ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ ತರಹದ ಗೆಳೆಯರನ್ನು ದೂರ ಮಾಡಿಕೊಂಡಿದ್ದಾರೆ. ಅವರು ಯಾವ ಮುಲಾಜಿಗೂ ಜಗ್ಗದವರು ಸರ್. ಆದರೆ ಎಲ್ಲರೂ ಹಾಗೆ ಇರಲು ಸಾಧ್ಯವಿಲ್ಲ. ಹೊಂದಿಕೊಂಡು ಹೋಗುವ ಗುಣ ಸ್ವಭಾವದವರು ಇದ್ದಾರೆ. ಹೀಗೆ ಇರುವವರು ಅಪ್ರಮಾಣಿಕರೂ ಆಗಿರುವವರಿದ್ದಾರೆ. ಒಂದು ಪತ್ರಿಕೆ ಸಂಪಾದಕ ಅನುಮಾನ, ಕ್ರಿಟಿಕ್ ಗುಣ ಇಲ್ಲದೆ ಒಳ್ಳೆ ಗುಣ ಸ್ವಭಾವದವನೂ ಪ್ರಾಮಾಣಿಕನೂ ಆಗಿರಬೇಕು. ಈ ತರಹದ ಸರಳತೆ, ತಾಳ್ಮೆ, ಸಹನೆ, ಪ್ರಾಮಾಣಿಕ ಗುಣ ಸ್ವಭಾವ ಧ್ಯಾನಸ್ಥ ಸ್ಥಿತಿಯನ್ನು ಅನೇಕರಲ್ಲಿ ಇದ್ದರು ಒಂದು ಪತ್ರಿಕೆಯ ಸಂಪಾದಕರಾಗಿ ನಿಮ್ಮನ್ನು ಹತ್ತಿರದಿಂದ (ಫೋನ್ ನಲ್ಲಿ) ಬಲ್ಲ ನನಗೆ ಇವೆಲ್ಲವು ನಿಮ್ಮಲ್ಲಿ ಇರಬಹುದೆಂಬ ಕಿಂಚಿತ್ ನಂಬಿಕೆ ನನ್ನದು ಸರ್. ಹಾಗಾಗಿಯೇ ನಿಮ್ಮೊಂದಿಗಿನ ಸುದೀರ್ಘ ಪತ್ರಿಕಾ ಒಡನಾಟ ಇರುವುದು ಸರ್.

ಸರ್ ಈ ಸರಳತೆ, ಪ್ರಾಮಾಣಿಕತೆ, ಧ್ಯಾನಸ್ಥ ಮನಸ್ಥಿತಿ ಅಂತ ಹೇಳುದ್ನಲ್ಲ ಅದು ನಾನು ಕಂಡಿದ್ದು ಕೇಳಿದ್ದು ಕನ್ನಡದ ಬಹುಮುಖ್ಯ ನಟ ಕಲಾವಿದ ರಾಜ್ ಕುಮಾರ್ ಅವರಲ್ಲಿ ಸರ್. ಇದನ್ನು ಇನ್ನಷ್ಟು ವಿಸ್ತಿರಿಸಿ ಹೇಳ್ತಿರೊದ್ರಿಂದ ಬೇಸರಿಸಿಕೊಳ್ಳದೆ ಓದಿ ಸರ್. ಸರ್ ಅವರು ಎಂಥ ವ್ಯಕ್ತಿ ಅಂದರೆ ನನ್ನಂಥ ಸಾಮಾನ್ಯನಿಂದ ಅಂತಹ ವ್ಯಕ್ತಿತ್ವವನ್ನು ವಿವರಿಸಲು ಸಾಧ್ಯವೇ ಸರ್? ರಾಜ್ ಕುಮಾರ್ ಬಗ್ಗೆ ಅಪ್ಪ ದಿನವಿಡೀ ಹೇಳ್ತಿದ್ದ ಸರ್. ಅವರ ಅಷ್ಟೂ ಚಿತ್ರಗಳನ್ನು ಅಪ್ಪ ನೋಡಿದ್ದ ಸರ್. ಅಪ್ಪನಿಂದಲೆ ರಾಜ್ ಕುಮಾರ್ ಏನು ಅಂತ ಗೊತ್ತಾಗಿದ್ದು ಸರ್. ಸರ್ ಇನ್ನೊಂದು ವಿಚಾರ ಗೊತ್ತಾ ನಿಮಗೆ? ‘ಚಕ್ರತೀರ್ಥ’ ಸಿನಿಮಾ ಶೂಟಿಂಗ್ ನಮ್ಮೂರಲ್ಲೆ ಸರ್ ನಡೆದಿದ್ದು. ಆಗ ನಾನಿನ್ನು ಹುಟ್ಟೇ ಇರಲಿಲ್ಲ ಸರ್. ನಮ್ಮ ಹಳೇ ತಿರುಮಕೂಡಲಿನ ಕಾವೇರಿ ಕಪಿಲ ಸಂಗಮ, ಅಗಸ್ತೇಶ್ವರ ದೇವಾಲಯ, ನರಸೀಪುರ ಪಟ್ಟಣದ ಅಗ್ರಹಾರ ಬೀದಿ, ತಲಕಾಡು, ಹೆಮ್ಮಿಗೆ ಇಲ್ಲೆಲ್ಲ ಸರ್.

ಸರ್ ಹೀಗೆ ಅಗ್ರಹಾರ ಬೀದಿಲಿ ಶೂಟಿಂಗ್ ವೇಳೆ ಅಪ್ಪ ಗಾಡಿ ಹೊಡ್ಕಂಡು ಹೋಗುತ್ತಿದ್ನಂತೆ. ರಾಜ್ ಕುಮಾರ್ ದು ಶೂಟಿಂಗು ಅಂತ ಗೊತ್ತಾಗಿ ಅಪ್ಪ ಶೂಟಿಂಗ್ ನೋಡಕೇ ಅಂತ ಹಂಗೆ ರಾಜ್ ಕುಮಾರ್ ನೋಡೋಣ ಅಂತ ಹಸುಗಳ ಬಿಚ್ಚಿ ಗಾಡಿ ಮೂಕಿ ಕೆಳಗಿಳಿಸಿ ಅತ್ತ ಮುಖ ಮಾಡುತ್ತಿದ್ದಾಗಲೆ ಜನಗಳ ಸಂದಿನಿಂದಲೇ ರಾಜ್ ಕುಮಾರ್ ಅಪ್ಪನ ಹತ್ತಿರವೇ ಬಂದು ಹಸುಗಳ ಮೈ ತಡವಿ ಹಾಗೆ ಅಪ್ಪನ ಹೆಗಲ ಮೇಲೆ ಕೈ ಹಾಕಿ ಮಾತಾಡಿಸಿದ್ರಂತೆ ಸರ್. ಅಪ್ಪ ಖುಷಿಗೊಂಡು ಕೈಕಟ್ಕಂಡು ನಗ್ತಾ, ಹಾಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡುದ್ರಂತೆ ಸರ್. ರಾಜ್ ಕುಮಾರ್ ಅಷ್ಟೂ ಜನರಿದ್ದರು ಅಪ್ಪ ಹತ್ರನೇ ಯಾಕೆ ಬಂದ್ರು ಅಂದ್ರೆ ಹಸುಗಳ ನೋಡಿ ಸರ್. ಆ ಹಸುಗಳ ದೆಸೆಯಿಂದ ಅಪ್ಪನಿಗೂ ರಾಜ್ ಕುಮಾರ್ ಕೈಯಿಂದ ಮುಟ್ಟಿಸಿಕೊಳ್ಳುವ ಅದೃಷ್ಟ ಹೊಡಿತು ಅಂತ ಅಪ್ಪ ಹೇಳ್ತಾ ಹೇಳ್ತಾ ಮೈಮರೆಯುತ್ತಿದ್ದರು ಸರ್. ಹೀಗೆ ಅಪ್ಪ ರಾಜ್ ಕುಮಾರ್ ಗುಣಗಾನ ಮಾಡ್ತ ಏನೇನೊ ಕಥೆ ಹೇಳ್ತಿದ್ದ ಸರ್.

ಇಂಥ ಅಪ್ಪ ನನ್ನನ್ನು ಆಗಾಗ ಸುತ್ತಿಕೊಳ್ಳುತ್ತಾನೆ. ರಾತ್ರಿ ಹೊತ್ತು ಇದ್ದಕ್ಕಿದ್ದ ಹಾಗೆ ಅಪ್ಪ ನೆನಪಾಗ್ತಾನೆ ಸರ್. ಆ ನೆನಪೇ ನನ್ನನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸುತ್ತದೆ ಸರ್. ಎಷ್ಟೋ ಸಾರಿ ನಿದ್ರೆ ಹತ್ತದೆ ಅಪ್ಪ ಹೇಳ್ತಿದ್ದ ಅಷ್ಟೂ ಕಥೆ ಸುಳಿದಂತಾಗುತ್ತದೆ ಸರ್. ಅದೆ ಸರ್. ನಿದ್ರೆ ಬಾರದಿದ್ದಾಗ ನಮ್ಮನ್ನು ಮಲಗಿಸಲು ಮಲಗಿದ್ದ ಮಗ್ಗುಲಲ್ಲಿ ಅಪ್ಪ ಹೇಳ್ತಿದ್ದ ತರಾವರಿ ಕಥೆಗಳು ಸರ್. ಅವನು ಗರ್ಗೇಶ್ವರಿ ಲಾಯರಿ ಖಾಲಕ್ ಸಾಬರ ಮನೆಯಲ್ಲಿ ಜೀತಕ್ಕಿದ್ದದ್ದು, ನಡುರಾತ್ರಿಲಿ ಅಪ್ಪನನ್ನು ಕಿರುಬ ಅಟ್ಟಿಸಿಕೊಂಡು ಬಂದದ್ದು… ಹೀಗೆ ಏನೇನೋ ಸರ್. ಅದರಲ್ಲಿ ಅಯ್ನೋರ ಕಥೆಯೂ ಒಂದು ಸರ್. ಅಪ್ಪ ಇದನ್ನು ಎಷ್ಟು ಸಲ ಹೇಳಿಲ್ಲ ಹೇಳಿ..? ಅವು ಹಾಗೇ ನನ್ನೊಳಗೆ ಮಾಗುತ್ತ ಇದ್ದವು ಸರ್. ಅಪ್ಪ ಸಾಯುವ ಮುನ್ನ, ಅವನು ಸತ್ತ ಮೇಲೂ ಕಾಡ್ತಾನೆ ಇತ್ತು ಸರ್.

ಹತ್ತು ವರ್ಷಗಳೇ ಆಯ್ತು ಅಪ್ಪ ಸತ್ತು! ಅವನು ಹೇಳ್ತಿದ್ದ ಕಥೆಗಳು ನನ್ನ ತಲೆಯೊಳಗೆ ಈಗಲೂ ಗುಂಯ್ಞ್ ಗುಟ್ಟುತ್ತಾ ಇವೆ. ಅದರಲ್ಲು ಅಯ್ನೋರು. ‘ನೀವು ಏನಾದ್ರ ಬರೀರಿ’ ಅಂದ್ರಲ್ಲ ನನ್ನ ಮನಸ್ಸು ತಳಮಳಿಸುತ್ತಿತ್ತಲ್ಲ.. ಅದೀಗ ನನ್ನನ್ನು ಒಮ್ಮೆಲೆ ಎಚ್ಚರಿಸಿ ಅದೇ ತಳಮಳದಲ್ಲಿ ಹತ್ತಾರು ಸಾಲು ಬರೆದೆ ಸರ್. ಬರೆದು ಮತ್ತೆ ಮತ್ತೆ ಓದಿದೆ ಸರ್. ಅದನ್ನು ಓದುತ್ತಿದ್ದರೆ ಯಾವುದೋ ಕಾವ್ಯ ಓದುತ್ತಿದ್ದ ಹಾಗೆ ಅನುಭವಕ್ಕೆ ಬಂತು ಸರ್. ನಿಮಗೂ ಈ ಬಗ್ಗೆ ಹೇಳಿದ್ದೆ ಅಲ್ವ ಸರ್. ನನಗೆ ಸರಿಯಾಗಿ ನೆನಪಿಲ್ಲ. ಬಹುಶಃ ಹೇಳಿರಬಹುದು. ನೀವು ಉಲ್ಲಾಸ ಬಂದವರಂತೆ ‘ಬರೀರಿ ಸರ್’ ಅಂದಿರಿ. ಅದೇ ಉಲ್ಲಾಸದಲ್ಲಿ ಬರೆದೆ ಸರ್. ನನ್ನನ್ನು ನಾನು ಮರೆತು ಬರೆದೆ ಸರ್. ಕುಂತಲ್ಲಿ ನಿಂತಲ್ಲಿ ಅದರಲ್ಲು ಬಸ್ ಪ್ರಯಾಣ ಮಾಡುವಾಗ ಬರೆಯುತ್ತಲೇ ಹೋದೆ ಸರ್. ಹಾಗೆ ಬರೆಯುವಾಗ ಅಲ್ಲಿ ಅಪ್ಪನೇ ಹೇಳಿ ಹೇಳಿ ಬರೆಸುತ್ತಿದ್ದನೇನೋ ಅನಿಸಿ ಒಂದಲ್ಲ ಎರಡಲ್ಲ ಕೋವಿಡ್ ನಡು ನಡುವೆಯೇ ಎಂಭತ್ತು ಎಪಿಸೋಡ್ ಒಂದೂವರೆ ವರ್ಷ ಬರೆಸಿಕೊಂಡಿತಲ್ಲ ಸರ್.

-೫-

ಇದರ ಬಗ್ಗೆ ಚರ್ಚಿಸುತ್ತಾ ಮಾತಾಡುತ್ತಾ… ಜೊತೆ ಜೊತೆಗೆ, ನೀವೋ ಯಾವುದಾವುದೊ ಪುಸ್ತಕಗಳ ಫೋಟೋ ಕಳುಹಿಸಿ ಅಥವಾ ಆ ಪುಸ್ತಕಗಳೇ ನನ್ನಲ್ಲಿ ಬರುವಂತೆ ಮಾಡಿ ಓದಿ ಸರ್ ಅಂತ ಎಷ್ಟೊಂದು ಪುಸ್ತಕ ಓದಿಸಿದಿರಿ ಸರ್… ನನಗೆ ದಂಗು! ಇಷ್ಟೆಲ್ಲ ಓದಲು ಹೇಗೆ ಸಾಧ್ಯವಾಯ್ತು ಅಂತ ಅಚ್ಚರಿ ಸರ್. ನನಗೊ ಓದಲು ಸಮಯ ಖಂಡಿತ ಇರಲಿಲ್ಲ ಸರ್.

ಮೊದಲ ಮಗು ತೀರಿಕೊಂಡು ಎರಡನೇ ಮಗುವಿನ ಬಾಣಂತನ ನಾನೇ ಮಾಡಬೇಕಾದ ಪ್ರಮೇಯ ಬಂತಲ್ಲ ಸರ್… ಅದನ್ನು ನಿಮಗೂ ಹೇಳಿದ್ದೇನೆ ಅಂದುಕೊಂಡಿರುವೆ. ಮನೇಲಿ ಬಾಣಂತನ, ವಯಸ್ಸಾದ ಅವ್ವಳ ಹಾರೈಕೆ, ಬೆಳಗ್ಗೆ ನಾಲ್ಕಕ್ಕೆ ಎದ್ದು ಎಲ್ಲ ರೆಡಿ ಮಾಡಿ ಕೆಲಸಕ್ಕೆ ಏಳಕ್ಕೆ ಹೋಗಬೇಕಾದನು ಎಂಟು ಗಂಟೆಯಾದರು ಹೋಗಲಾಗದ ಕೆಲಸದ ಒತ್ತಡ. ಲೇಟಾದರೆ ಆಫೀಸಲ್ಲಿ ಸಾಹೇಬರ ಗೊಣಗಾಟ. ನಾನೋ ಹ್ಯಾಪೆ ನಗು ನಗುತ್ತಾ ತಲೆ ಕೆರೆಯುತ್ತಾ ಕೆಲಸಕ್ಕೆ ಹಾಜರ್. ನನ್ನದು ಹೊರ ಗುತ್ತಿಗೆ ಕೆಲಸ. ಈ ಹೊರ ಗುತ್ತಿಗೆ ಕೆಲಸ ಸಾಕು ಸಾಕೆನಿಸಿದೆ ಸರ್. ಆದರು ಏನು ಮಾಡೋದು ಅನಿವಾರ್ಯ ಸರ್. ಲೈಫ್ ಪ್ರಶ್ನೆ ಅಲ್ವ ಸರ್. ಎಲ್ಲವನ್ನು ಏಗಬೇಕಲ್ವ ಸರ್. ಕೊಡೊ ಒಂದಷ್ಟು ಸಾವಿರ ‘ಕೊರೆ’ ಸಂಬಳದಿಂದ ಕಣ್ಣಿಗೆ ದೇಹಕ್ಕೆ ರೆಸ್ಟಿಲ್ಲದ ಯಮ ಯಾತನೆ ಕೆಲಸ. ಕಾಲಕಾಲಕ್ಕೆ ಏರುತ್ತಲೇ ಇರುವ ದಿನ ಬಳಕೆ ವಸ್ತುಗಳ ಬೆಲೆ. ಈ ಸಂಬಳದಲ್ಲಿ ಏನು ಮಾಡುವುದು. ಒಂದು ಕೊಂಡರೆ ಇನ್ನೊಂದಕ್ಕೆ ಕೊರತೆ. ಥೂತ್ತೇರಿ! ಸರ್ ಏನೇ ಹೇಳಿ ಪುಣ್ಯಾತ್ಮ ಅಧಿಕಾರಕ್ಕೆ ಅನ್ನಭಾಗ್ಯ ಮಾಡಲಾಗಿ ನ್ಯಾಯಬೆಲೆ ಅಂಗಡಿ ಅಕ್ಕಿಯಿಂದ ಹೇಗೋ ಲೈಫ್ ನೀಗಿಸಿಕೊಂಡು ಹೋಗ್ತಾ ಇದೀನಿ ಸರ್. ನನ್ನ ಹಾಗೆ ಲಕ್ಷಾಂತರ ಕುಟುಂಬಗಳೂ ಈ ಅನ್ನಭಾಗ್ಯದಿಂದಲೇ ಹಸಿದ ಹೊಟ್ಟೆ ತುಂಬಿಸಿಕೊಳ್ತಾ ಇದಾರೆ ಅನ್ನೋದು ನನ್ನ ಬಾಳಾಟದಿಂದ ನನಗೆ ಅರಿವಿಗೆ ಬಂದಿದೆ ಸರ್. ಇವರು ಕೊಡೊ ಸಂಬಳ ನೆಚ್ಚಿ ಬದುಕೊಕಾಗುತ್ತಾ ಸರ್? ಅನ್ನಭಾಗ್ಯ ಕೊಟ್ಟ ಪುಣ್ಯಾತ್ಮನಂತೆ ಬರುವವರೆಲ್ಲರು ಬಡವರಿಗೆ ಅಷ್ಟೊ ಇಷ್ಟೊ ದಿನ ಬಳಕೆ ವಸ್ತುಗಳು ಕೈಗೆಟುವಂತೆ ಮಾಡಿದರೆ ಎಷ್ಟೊ ಉಪಕಾರವಾಗುತ್ತೆ ಸರ್. ಹಾಗಾಗಿ ಸರ್ ಆಳುವ ಸರ್ಕಾರಗಳು ಕಿಂಚಿತ್ ಜನರ ದಿನನಿತ್ಯದ ಬದುಕಿನ ಬಗ್ಗೆ ಗಮನಹರಿಸಿ ಬದುಕಲು ಬೇಕಾಗುವ ಕನಿಷ್ಟ ಕೂಲಿಯನ್ನಾದರು ಸಿಗುವಂತೆ ಮಾಡಬೇಕು ಸರ್. ಇದಾಗದಿದ್ದರೆ ಯಾವ ಸರ್ಕಾರ ಬಂದು ಏನು ಪ್ರಯೋಜನ ಸರ್?

ಇರಲಿ ಸರ್, ಎಲ್ಲ ಕೆಲಸ ಮುಗಿಸಿ ಬಸ್ಸು ಹತ್ತಿ ಕುಳಿತರೆ ಅರವತ್ತು ಎಪ್ಪತ್ತು ಕಿ.ಮೀ ಪ್ರಯಾಣದ ನಡುವೆ ಮೊಬೈಲ್ ನಲ್ಲೆ ಓದು ಬರಹ.ಸರ್. ಬಸ್ಸಿನಲ್ಲೆ ಕುಳಿತು ಮೊಬೈಲ್ ನಲ್ಲಿ ಮೂರು ಪುಸ್ತಕ ಬರೆದದ್ದು.. ಮುವ್ವತ್ತು ನಲವತ್ತು ಪುಸ್ತಕ ಓದಿದ್ದು… ಮತ್ತೆ ಅದರ ರಿವ್ಯೂಗೇ ಅಂತ ಮತ್ತಷ್ಟು ಪುಸ್ತಕಗಳ ಕಡೆ ಕಣ್ಣಾಡಿಸುವುದು… ಅಬ್ಬಾ ಇದೆಲ್ಲ ಹೇಗೆ ಸಾಧ್ಯ ಆಯ್ತು ಎಂಬುದೇ ಅರ್ಥ ಆಗ್ತಿಲ್ಲ ಸರ್.

ಸರ್, ನಾನು ಒಂದೆರೆಡು ಪುಸ್ತಕ ಬರೆದು ಸುಮ್ನನಿದ್ದೆ. ನೀವೋ ರಿವ್ಯೂ ಮಾಡಿ ಅಂದಿರಿ. ರಿವ್ಯೂ ಅಂದರೇನೇ ಕಷ್ಟಕಷ್ಟ ಅನಿಸಿತು. ಅದಕ್ಕೆ ಕಾರಣ ಇದೆ ಸರ್. ಕೆಲ ವರ್ಷಗಳ ಹಿಂದೆ ಶಶಿಕುಮಾರ್ ಸಿಕ್ಕಿದ್ದರು. ಶಶಿಕುಮಾರ್ ಅಂದ್ರೆ ಅವರೊಳ್ಳೆ ಗಂಭೀರ ಓದುಗರು. ಬರಹಗಾರರು. ಸಂಶೋಧಕರು. ಭಾಷಾ ಅನುವಾದಕರು. ಅವರೊಂದಿಗೆ ಹೀಗೆ ಮಾತಾಡ್ತ ಇರುವಾಗ ಅವರು ‘ಅಸ್ಪೃಶ್ಯ ಗುಲಾಬಿ’ ಅನ್ನೊ ಒಂದು ಕಾದಂಬರಿ ಕೊಟ್ಟು ಓದಿ ಅಂದ್ರು ಸರ್. ಓದಿದೆ. ಆ ಕಾದಂಬರಿ ಓದ್ತಾ ಓದ್ತಾ ನನ್ನನ್ನು ಇನ್ನಿಲ್ಲದಂತೆ ಸುಸ್ತು ಮಾಡಿತು ಸರ್. ಅದರ ಕರ್ತೃ ಮಂಜುನಾಥ್ ವಿ.ಎಂ.ಅಂತ. ಬೆಂಗಳೂರಿನ ಹೊರ ವಲಯದವರು. ಸಿನಿಮಾ, ನಾಟಕ, ಅದೂ ಇದು ಚಿತ್ರಕಲೆ ಅಂತ ಇನ್ನು ಏನೇನೋ ಹೊಸತೊಂದರ ತುಡಿತದ ಕಲಾವಿದ ಅವರು ಅಂತ ಆಮೇಲೆ ಗೊತ್ತಾಯ್ತು ಸರ್. ಅಸ್ಪೃಶ್ಯ ಗುಲಾಬಿ ಅಂತ ಹೇಳುದ್ನಲ್ಲ ಸರ್, ಅದೊಂದು ವಿಚಿತ್ರ ಮತ್ತು ವಿಕ್ಷಿಪ್ತ ಬದುಕಿನ ಅನಾವರಣದ ಕಾದಂಬರಿ ಸರ್. ಶಶಿಕುಮಾರ್ ಮತ್ತೆ ಅದರ ಬಗ್ಗೆ ಕೇಳಿದರು. ಹೇಳಿದೆ. ಹಾಗಾದ್ರೆ ಅದರ ಬಗ್ಗೆ ನಿಮಗೆ ಅನಿಸಿದ್ದು ಬರೆದುಕೊಡಿ ‘ಋತುಮಾನ’ಕ್ಕೆ ಅಂದ್ರು. ನಾನು ಹಿಂದೆ ಮುಂದೆ ಯೋಚಿಸದೆ ಆಯ್ತು ಅಂತ ಒಪ್ಪಿದೆ. ಆದ್ರೆ ಅದರ ಬಗ್ಗೆ ಬರೆಯುವುದೇ ತ್ರಾಸವಾಯ್ತು ಸರ್. ಅದರ ವಸ್ತು ವಿಷಯ ಬೇಡುವ ಇನ್ನಿತರ ಪುಸ್ತಕಗಳ ಕಡೆ ಕಣ್ಣಾಡಿಸಿ ಅಂತು ಇಂತು ಹೇಗೋ ಬರೆದು ಅವರಿಗೆ ಕೊಟ್ಟು ಉಸ್ಸಪ್ಪ ಅಂತ ನಿಟ್ಟುಸಿರು ಬಿಟ್ಟಿದ್ದೆ. ಇಷ್ಟಾದರು ಅವರು ನನ್ನ ಬರಹದ ಬಗ್ಗೆ ಏನೊಂದು ಪ್ರತಿಕ್ರಿಯಿಸಲಿಲ್ಲ. ಆದರೆ ‘ಋತುಮಾನ’ದಲ್ಲಿ ಪ್ರಕಟವಾಯ್ತು. ಅದರ ಕರ್ತೃ ಮಂಜುನಾಥ್ ವಿ.ಎಂ ಕಾಲ್ ಮಾಡಿ ಖುಷಿಯಿಂದ ಹೊಗಳಿದ್ದರು. ನನಗೊ ಹೊಗಳಿಕೆಯ ಕಸಿವಿಸಿ. ಅದಾದ ಮೇಲೆಯೇ ನೀವು ಸಿಕ್ಕಿದ್ದು ಪಂಜುವಿಗೆ ಬರೆದದ್ದು. ಕಥನ ಕಾವ್ಯವೂ ಜೀವ ಪಡೆದದ್ದು ಸರ್.

-೬-

ಈ ಕಥನ ಕಾವ್ಯ ಬರೆಯುವ ನಡು ನಡುವೆ ನೀವು ಕೆಲವು ಪುಸ್ತಕ ಕಳುಹಿಸಿ ರಿವ್ಯೂ ಮಾಡಿ ಅಂದಿರಲ್ಲ… ನನ್ನ ಎದೆ ದಸಕ್ಕಂತು ಸರ್. ಯಾಕೆಂದರೆ ಆಗಲೇ ಹೇಳಿದೆನಲ್ಲ ಅಸ್ಪೃಶ್ಯ ಗುಲಾಬಿ ರಿವ್ಯೂ ನನ್ನನ್ನು ಸುಸ್ತು ಮಾಡಿತ್ತು ಅಂತ. ರಿವ್ಯೂ ಅಂದ್ರೆ ಕಥೆ ಕವಿತೆ ಬರೆದಂಗಲ್ಲ ಸರ್. ನೀವೇನೊ ಹೇಳಿದಿರಿ. ಇಲ್ಲ ಎನ್ನುವ ಹಾಗಿಲ್ಲ. ಏಕೆಂದರೆ ಈಗಾಗಲೇ ಪಂಜು ಓದುಗ ವಲಯದಲ್ಲಿ ನನ್ನ ಕಥನ ಕಾವ್ಯ ಸಾಕಷ್ಟು ಚರ್ಚೆಯನ್ನೇ ಹುಟ್ಟು ಹಾಕಿತ್ತು‌. ನೀವು ಹೇಳಿದಿರಿ ಅಂತ ಕೆಲವು ಹೊಸ ತಲೆಮಾರಿನ ಲೇಖಕರ ಕಥೆ ಕವಿತೆ ಕಾದಂಬರಿ ಪ್ರಕಾರಗಳನ್ನು ಓದುತ್ತಾ. ಓದಿದ್ದರ ಬಗ್ಗೆ ಒಂದೆರಡು ಅನಿಸಿಕೆ ಬರೆದು ಲೇಖಕರಿಗೆ ಕಾಲ್ ಮಾಡಿ ಹೇಳಲು ಬರೆಯುತ್ತ ಕೂತರೆ ಪುಟಗಟ್ಟಲೆ ಆಗುತ್ತಿತ್ತು. ಅದನ್ನು ಹಾಗೆ ಪಂಜುವಿಗೆ ಕಳುಹಿಸುತ್ತಿದ್ದೆನಲ್ಲ.. ನೀವು ಪ್ರಕಟಿಸಿ ಎಲ್ಲ ಕಡೆ ನನ್ನ ಬಗ್ಗೆ ಮಾತಾಡಿಕೊಳ್ಳುವ ಹಾಗೆ ಮಾಡಿದಿರಲ್ಲ ಸರ್.

ಸರ್, ನಿಮಗೆ ಗೊತ್ತಾ, ಅದುವರೆಗೂ ನಾನು ಚೆನ್ನಾಗಿ ಬರಿತೀನಿ ಅಂದುಕೊಂಡು ವ್ಯಸನಭರಿತನಾಗಿ ಸಿಕ್ಕಸಿಕ್ಕವರಿಗೆ ನನ್ನ ಪುಸ್ತಕ ಓದಿದ್ರಾ? ನನ್ನ ಕಥೆ ಏನನ್ನಿಸಿತು? ಅಂತ ಕೇಳ್ತಿದ್ದೆ. ಆದರೆ ಹೊಸ ಹೊಸ ಬರಹಗಾರರ ಬರಹ ಓದುತ್ತಾ ನನ್ನದು ತೀರಾ ಕಳಪೆ ಅನ್ನಿಸಲು ಶುರುವಾಗಿ ನಂತರ ನನ್ನ ಯಾವ ಕೃತಿಗಳನ್ನು ಯಾರಿಗೂ ಓದಿ ಅಂತ ಹೇಳಲು ಮನಸ್ಸು ಯಾಕೊ ಹಿಂಜರಿಯಿತು ಸರ್. ಎಂತೆಂಥ ರೈಟರ್ ಇದಾರೆ ಸರ್ ಕನ್ನಡದ ಹೊಸ ತಲೆಮಾರಿನಲ್ಲಿ…! ಗ್ರೇಟ್ ಸರ್. ಹೊಸ ತಲೆಮಾರಿನ ಲೇಖಕರಿಗೆ ಹ್ಯಾಟ್ಸಪ್ ಸರ್.

ಶ್ರುತಿ, ಭುವನಾ, ಮೌಲ್ಯ, ಹಡಪದ, ಹಾಲಿಗೇರಿ, ವಕ್ವಾಡಿ, ಗೊಬ್ಬಿ, ಬಿದಲೋಟಿ, ಆರನಕಟ್ಟೆ, ಮೋದೂರು, ಕಂಟಲಗೆರೆ, ಮಂಜುನಾಥ್, ರಾಜು ದರ್ಗಾದವರ, ಪೊನ್ನಾಚಿ, ಆನಂದ್ ಗೋಪಾಲ್ ಹೀಗೆ ಹೆಸರಿಸುತ್ತಾ ಹೋದರೆ ಖುಷಿಯಾಗುತ್ತೆ ಸರ್. ಇವರೆಲ್ಲ ನನಗಿಂತ ವಯಸ್ಸಿನಲ್ಲಿ ಕಿರಿಯರಾದರು ಅದ್ಬುತ ಬರಹಗಾರರು ಸರ್. ನಾಡಿನಾದ್ಯಂತ ಹರಡಿಕೊಂಡಿರುವ ಈ ನನ್ನ ‘ನೆಲದ ಚಿತ್ರಗಳ’ ಸಖ್ಯ ಸರ್ ಅವರು. ಇವರ ಓದಿನ ಬರಹದ ದೆಸೆಯಿಂದ ನನಗೂ ಒಂಚೂರು ಐಡೆಂಟಿಟಿ ಅಂತ ದೊರಕಿದ್ದು ಧನ್ಯ ಅಲ್ಲವೇ ಸರ್. ಇದೆಲ್ಲ ನಿಮ್ಮಿಂದ. ನಿಮ್ಮ ಪಂಜುವಿನಲ್ಲಿ ನನ್ನ ಬರಹ ಪ್ರಕಟವಾಗಿದ್ದರಿಂದ ಸರ್.

ಸರ್, ನನ್ನ ಹಾಗೆ ಪಂಜು, ಎಷ್ಟು ಲೇಖಕರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿಲ್ಲ ಹೇಳಿ…? ಅದು ಗ್ರೇಟ್ ಸರ್, ಗ್ರೇಟ್!

ಇನ್ನೊಂದು ಮಾತು, ಇದನ್ನ ನೀವೆ ಆಗಾಗ ಹೇಳ್ತಿದ್ರಿ. ಎಷ್ಟೊ ಲೇಖಕರಿಗೆ ಕರೆ ಮಾಡಿ ಪಂಜುವಿಗೆ ಬರೆಯಿರಿ ಅಂತ ಕೇಳಿದರೂ ಅವರಿಂದ ರೆಸ್ಪಾನ್ಸ್ ಕೂಡ ಬಂದಿದ್ದಿಲ್ಲ ಅಂತ. ಇದು ಹೋಗಬೇಕು ಸರ್. ಲೇಖಕ ಯಾವಾಗಲು ತನ್ನನ್ನು ತಾನು ತೆರೆದುಕೊಳ್ಳಬೇಕು. ಅಟ್ಲೀಟ್ಸ್ ಸ್ಪಂದಿಸಬೇಕು. ಕೆಲವು ಲೇಖಕರ ವರ್ತನೆಗಳು ನನಗೂ ಹಿಡಿಸೊಲ್ಲ ಸರ್. ಈ ಕಾರಣಕ್ಕಾಗಿಯೇ ನಾನು ಯಾವುದೇ ಲೇಖಕನನ್ನು ಮೀಟ್ ಮಾಡಲು ಇಚ್ಚಿಸೊದಿಲ್ಲ. ಇದನ್ನು ನಿಮ್ಮ ಜೊತೆ ಸಾಕಷ್ಟು ಹಂಚಿಕೊಂಡಿರುವೆ ಅಲ್ವೆ ಸರ್. ಆದರೆ ಎಲ್ಲರೂ ಹಾಗಲ್ಲ ಸರ್. ಗೋವಿಂದಯ್ಯ, ಬರಗೂರು, ಕೇಶವ ಮಳಗಿ, ಎಂ.ಆರ್‌.ಕಮಲ, ಜ್ಯೋತಿ ಗುರುಪ್ರಸಾದ್, ಜಿ.ಪಿ.ಬಸವರಾಜು ತರಹದ ಅನೇಕ ದೊಡ್ಡ ಲೇಖಕರು ನಮ್ಮಂಥ ಚಿಕ್ಕ ಬರಹಗಾರರೊಂದಿಗೆ ಎಷ್ಟು ಆತ್ಮೀಯವಾಗಿ ಸ್ಪಂದಿಸುತ್ತಾರೆಂದರೆ ಬಹಳ ಖುಷಿಯಾಗುತ್ತೆ ಸರ್. ಇನ್ನೂ ಕೆಲವರಿದ್ದಾರೆ. ಅವರದೊಂದು ತಂಡ. ಈ ತಂಡ ಅವರವರಲ್ಲೆ ಸಾಹಿತ್ಯ ಚರ್ಚೆ ಮಾಡಿಕೊಳ್ಳೊದು. ತಾವೇ ಗ್ರೇಟ್ ಅಂದುಕೊಳ್ಳೊದು. ಕನ್ನಡದಲ್ಲಿ ಬಹುತೇಕ ಬರಹಗಳಿದ್ದರು ಸಹ ಇಂಗ್ಲಿಷ್ ಲಿಟರೇಚರ್ ತಂದು ಸುಮ್ಮಸುಮ್ಮನೆ ಅದರ ಬಗ್ಗೆ ಚರ್ಚಿಸೋದು. ಅವರಿಗವರೇ ಇಂಗ್ಲಿಷ್ ಸಾಹಿತ್ಯದಲ್ಲಿ ಹಿಡಿತವಿದೆ ಅಂದುಕೊಳ್ಳೋದು. ಅವರು ಕನ್ನಡ ಸಾಹಿತ್ಯ ಬಿಟ್ಟು ಯಾವಾಗಲೂ ಪರ್ಶಿಯನ್, ರಷ್ಯನ್ ಆಫ್ರಿಕನ್, ಜರ್ಮನ್ ಪುಸ್ತಕಗಳನ್ನು ಕೋಟ್ ಮಾಡೋದು! ಇದೆಲ್ಲ ಬೇಕಾ ಸರ್ ? ನಮ್ಮ ದೇಸೀ ಸಾಹಿತ್ಯವನ್ನು ಚರ್ಚಿಸಿ ಅದರೊಂದಿಗೆ ಅದಿರಲಿ. ಎಲ್ಲವೂ ಬೇಕು ಸರ್. ಹೊರಗಿನ ಸಾಹಿತ್ಯವೂ ನಮಗೆ ಮುಖ್ಯ ಸರ್. ಜರ್ಮನ್, ಪರ್ಶಿಯನ್, ಆಫ್ರಿಕನ್, ರಷ್ಯನ್ ಸಾಹಿತ್ಯವನ್ನು ಓದಿಕೊಳ್ಳೊದು ಚರ್ಚಿಸೋದು ಬೇಕು. ಆದರೆ ಅದನ್ನು ಮುನ್ನೆಲೆಗೆ ತಂದು ಕನ್ನಡ ಸಾಹಿತ್ಯದ ಕಡೆ ನಿರ್ಲಕ್ಷ್ಯ ವಹಿಸುವುದು ಎಷ್ಟು ಸರಿ?

ಇವತ್ತು ಅನುವಾದ ಕವಿತೆಗಳಂತು ಪುಂಖಾನು ಪುಂಖ! ಸರಿಯಾಗಿ ಕನ್ನಡದಲ್ಲಿ ನಾಲ್ಕು ಸಾಲು ಬರೆಯಲಾರದವನು ಸಾಮಾಜಿಕ ಜಾಲತಾಣದಲ್ಲಿ ಯಾವುದಾವುದೋ ಪಶ್ಚಿಮದ ಬರಹಗಾರರ ಹೆಸರು ಹಾಕಿ ಅನುವಾದ ಕವಿತೆ ಅಥವಾ ಅನುವಾದ ಕಥೆ ಅಂತ ಪೋಸ್ಟಿಸುತ್ತಾರೆ. ನಾನು ಪ್ರತಿನಿತ್ಯ ನೋಡುತ್ತಿದ್ದೇನೆ ಈಗ ಕನ್ನಡದಲ್ಲಿ ಎಷ್ಟು ಸಾಹಿತ್ಯ ಕೃಷಿ ಆಗುತ್ತಿದೆ ಅಂತ! ಅವನ್ನು ಕಣ್ಣೆತ್ತಿಯೂ ನೋಡದ ‘ಘನ ವಿದ್ವಾಂಸರು’ ತಮ್ಮ ಪಾಂಡಿತ್ಯ ಪ್ರದರ್ಶಿಸುವುದರಲ್ಲೇ ಕಾಲಹರಣ ಮಾಡುತ್ತಿರುವುದು ಯಾತಕ್ಕೊ ತಿಳಿಯದು ಸರ್. ಇದರಿಂದ ಕನ್ನಡ ಸಾಹಿತ್ಯಕ್ಕೆ ಏನಾದರು ಒಳಿತೇ ಸರ್ ? ನೋಡೋಣ ಸರ್ ಏನೇನು ಮಾಡ್ತಾರೋ ಈ ಸಾಹಿತ್ಯದ ರಾಜಕಾರಣ ಯಾವ ಹಂತ ಮುಟ್ಟುತ್ತೋ..!

ಸರ್, ಬೇಜಾರಾಗ್ಬೇಡಿ ಸರ್. ಅತಿಯಾಗಿ ಮಾತಾಡಿದ್ದಿನೇನೊ ಅನ್ನಿಸ್ತಿದೆ. ಮಾತಾಡುವಾಗ ಮಾತಾಡ್ಬೇಕು ಅಂತ ಯಾರೋ ಹೇಳಿದ್ದು ನೆನಪು ಸರ್. ಹೀಗೆ ಹೇಳೋಕೆ ಇನ್ನೂ ಬೇಕಾದಷ್ಟಿದೆ ಸರ್! ಸದ್ಯಕ್ಕೆ ಇಷ್ಟು ಸಾಕು ಅನ್ನಿಸ್ತಿದೆ ಸರ್. ಸರ್, ನೋಡಿದ್ರಾ ಪಂಜುವಿನ ಹತ್ತು ವರ್ಷದ ಹಂಬಲಿಕೆಗೆ ಕೊನೆಗೂ ‘ಏನಾದ್ರು ಬರೀರಿ ಸರ್’ ಅಂತ ಬರೆಸಿ ಬಿಟ್ರಲ್ಲ! ನಾನು ಆಗಲೆ ಹೇಳಿದ್ನಲ್ಲ ಗ್ರೇಟ್ ಅಂತ! ಗ್ರೇಟ್ ಸರ್ ನೀವು….

-ಎಂ. ಜವರಾಜ್


ಲೇಖಕರ ಪರಿಚಯ

ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂದೆ -ಮಾದಯ್ಯ, ತಾಯಿ- ತಾಯಮ್ಮ ಅವರ ಆರು ಹೆಣ್ಣು ಐವರು ಗಂಡು ಮಕ್ಕಳು ಸೇರಿ ಒಟ್ಟು ಹನ್ನೊಂದು ಮಕ್ಕಳಲ್ಲಿ ಎಂಟನೇ ಮಗುವಾಗಿ ಜನಿಸಿದವರು. ಪ್ರಾಥಮಿಕ ಮತ್ತು ಮಾಧ್ಯಮಿಕ ವ್ಯಾಸಂಗ ಹುಟ್ಟೂರು ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ . ಪ್ರೌಢಶಾಲಾ ಶಿಕ್ಷಣ, ಪದವಿ ಪೂರ್ವ, ಪದವಿ ವಿದ್ಯಾಭ್ಯಾಸ ಟಿ.ನರಸೀಪುರ ಪಟ್ಟಣದ ಎಂ.ಸಿ.ಶಿವಾನಂದ ಶರ್ಮರ ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ. ನಂತರ ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅನಿರೀಕ್ಷಿತ. ಇದರ ಭಾಗವಾಗಿ “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) “ಮೆಟ್ಟು ಹೇಳಿದ ಕಥಾ ಪ್ರಸಂಗ” (ಕಥನ ಕಾವ್ಯ). ಇವರ ಕಥೆ, ಕವಿತೆ, ಇತರೆ ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *