“ಅಪ್ಪ ಯಾಕೆ ಹಾಗೆ ಹೇಳಿದರು ಎಂದು ನನಗೆ ಗೊತ್ತಾಗಲಿಲ್ಲ. ಮೋಳಿಯ ಮನೆಯವರು ನಮ್ಮಷ್ಟು ಸಿರಿವಂತರೇನು ಅಲ್ಲ ನಿಜ, ಆದರೆ ದೂರದ ಸಂಬಂಧಿಕರು ಎಂಬ ನೆಲೆಯಲ್ಲಿ ನಾನು ಆತ್ಮೀಯವಾಗಿ ಮಾತನಾಡಿದ್ದೆ. ಮದುವೆ ಮನೆಯಲ್ಲಿಯೇ ಅಪ್ಪನ ಮುಖ ಊದಿಕೊಂಡಿತ್ತು. ಊಟದ ಹೊತ್ತಿಗೆ ಸ್ವಲ್ಪ ಅವಕಾಶ ಸಿಕ್ಕಿದ್ದೇ ನನಗೆ ಮಾತ್ರ ಕೇಳುವಂತೆ ಗಡುಸಾಗಿಯೇ ಪಿಸುಗುಟ್ಟಿದ್ದರು.
“ಅವರ ಹತ್ತಿರ ಅತಿಯಾದ ಆಪ್ತತೆಯೇನು ಬೇಕಾಗಿಲ್ಲ, ಅವರು ಜನ ಅಷ್ಟು ಸರಿ ಇಲ್ಲ. ನಮಗೂ ಅವರಿಗೂ ಆಗಿ ಬರಲ್ಲ” ಅಪ್ಪನ ಪಿಸುಗುಟ್ಟುವಿಕೆಯಲ್ಲಿ ಬುಸುಗುಟ್ಟುವ ಭಾವ ತುಂಬಿತ್ತು. ನನಗೆ ಬುದ್ಧಿ ತಿಳಿದ ನಂತರ ಗಮನಿಸುತ್ತಾ ಬಂದಿರುವೆ. ಅಪ್ಪ ಬಹಳ ಸೂಕ್ಷ್ಮಮತಿ. ಸುಮ್ಮನೇ ಯಾರನ್ನೂ ಏನು ಹೇಳಲ್ಲ. ಆದರೆ ಮೋಳಿಯ ಅಜ್ಜಿ ಮತ್ತು ನನ್ನಪ್ಪನ ಅಜ್ಜಿ ಇಬ್ಬರೂ ಸವತಿಯರು. ಅದು ಯಾವುದೋ ಕಾಲದ ಕಥೆ. ಈಗ ಅದರ ನಂತರದ ಎರಡು ತಲೆಮಾರು ಬೆಳೆದಾಗಿದೆ. ಅವರ ನಡುವೆ ಏನೇನೋ ನಡೆದು ಹೋದುದರ ಕುರುಹಾಗಿ ಎರಡೂ ಕುಟುಂಬದ ನಡುವೆ ಒಂದು ಸಣ್ಣ ಅಂತರ ಸದಾ ಇರುತ್ತಿತ್ತು. ನನಗೆ ಆ ಬಗ್ಗೆ ಕುತೂಹಲ ಹುಟ್ಟಿ ಅಮ್ಮನ ಹತ್ತಿರ ಕೇಳಿದ್ದೆ. ಉತ್ತರವೂ ದೊರೆತಿತ್ತು.
ಆ ಕಾಲದಲ್ಲಿ ನನ್ನ ಅಪ್ಪನ ಅಜ್ಜ ಅಚ್ಚಪ್ಪು ಬಹಳ ಸ್ಥಿತಿವಂತರು. ದುಡ್ಡಿನ ಬಲ, ಜನ ಬಲ ಸಾಕಷ್ಟು ಇತ್ತು. ಅವರು ಆಡಿದ್ದೇ ಆಟ. ತನಗೆ ಆಗುವುದಿಲ್ಲ, ತನ್ನ ಮಾತು ಒಪ್ಪುವುದಿಲ್ಲ ಎಂದರೆ ಕೈಕಾಲು ಮುರಿಸಿ ಮೂಲೆಗೆ ತಳ್ಳುವಷ್ಟು ಕೌರ್ಯ. ಸಾಮಾನ್ಯರು ಅವರ ನೆರಳು ಕಂಡರೆ ನಡುಗುತ್ತಿದ್ದರಂತೆ. ಯೌವನದ ಮದವೇರಿದ ಸಲಗದ ನಡೆಯದು. ವಿಧವೆಯಾಗಿ ನಿರಾಶ್ರಿತರಾಗಿ ಮನೆಯಲ್ಲಿದ್ದ ಅತ್ತೆಯ ಮಗಳನ್ನು ಬೇಕಾದ ಹಾಗೆ ಚಾಕ್ರಿಗೂ, ದೇಹದ ತೀಟೆ ತೀರಿಸಿಕೊಳ್ಳುವುದಕ್ಕೂ ಉಪಯೋಗಿಸಿಕೊಂಡಾಗಿತ್ತು. ಮಗಳ ಸ್ಥಿತಿ ನೋಡಿ ಪಾಪ ತಾಯಿ ಯಾರೋ ಮೂರನೆಯವರಲ್ಲಿ ಬಾಯಿ ಬಿಟ್ಟದ್ದು ಅವರ ಕಿವಿಗೆ ಬಿದ್ದು ರಣ ರಂಪಾಟವಾಗಿತ್ತಂತೆ. ಆ ಹೊತ್ತಿಗೆ ಅಲ್ಲೇ ಮನೆಯ ಪಕ್ಕದ ಮಂದಿರದ ಎದುರು ತಾಳಿ ಬಿಗಿದು ಹೆಂಡತಿ ಎಂಬ ಹೆಸರು ಕೊಟ್ಟು ಊರವರ ಬಾಯಿ ಮುಚ್ಚಿಸಿದಲ್ಲಿಗೆ ಮುಗಿಯಿತು. ಯಾವ ಕಾಯಿಲೆಯೂ ಇಲ್ಲದ ಅತ್ತೆಗೆ ಒಮ್ಮೆಗೆ ಏನಾಯಿತೋ ಒಂದು ತಿಂಗಳಲ್ಲಿ ಅತ್ತೆ ತೀರಿಕೊಂಡಿದ್ದರು. ಅಷ್ಟರಲ್ಲಿ ಈ ಹೆಣ್ಣು ಮಗಳು ಬಸುರಿಯಾಗಿ ಆಗಿತ್ತು.
ಇಷ್ಟು ಸಾಲದು ಎನ್ನುವ ಹಾಗೆ ಪಕ್ಕದೂರಿನ ಮರಿ ಪುಢಾರಿಯೊಬ್ಬ ತನ್ನ ಮಗಳನ್ನು ಅಚ್ಚಪ್ಪುವಿಗೆ ಎರಡನೇ ಮದುವೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದ. ಮೊದಲು ಒಂದು ಮದುವೆ ಆದರೆ ಏನಂತೆ ? ಮುತ್ತಜ್ಜನಿಗೆ ಇದ್ದ ಆಸ್ತಿಯಲ್ಲಿ ಒಂದು ಭಾಗ ಸಿಕ್ಕರೂ ಸಾಕು, ಮೊಮ್ಮಕ್ಕಳ ಬದುಕು ನಿರಾಳ ಎಂಬ ಲೆಕ್ಕಾಚಾರ. ಆ ಕಾಲಕ್ಕೆ ಎರಡು ಮೂರು ಹೆಂಡಿರು ಇರುವುದು ಸಾಮಾನ್ಯವಾಗಿತ್ತು. ಗಂಡನ ಮರು ಮದುವೆಯ ವಿಚಾರ ತಿಳಿದಾಗ ಬಸುರಿ ಹೆಂಡ್ತಿ ಏನೋ ಸಣ್ಣ ಮಾತು ಅಂದುಬಿಟ್ಟಳು ಎಂಬ ಕಾರಣಕ್ಕೆ ರಾತ್ರೋ ರಾತ್ರಿ ಆಕೆಯನ್ನು ಮನೆಯಿಂದ ಹೊರದಬ್ಬಿದ್ದರಂತೆ. ಬಿದ್ದ ಹೊಡೆತಕ್ಕೋ ಬಡಿತಕ್ಕೂ ಹೆರಿಗೆ ನೋವು ಕಾಣಿಸಿಕೊಂಡು ಬೆಳಗ್ಗೆ ಹೊತ್ತು ದನದ ಕೊಟ್ಟಿಗೆಯಲ್ಲಿ ಹೆಣ್ಣು ಮಗು ಹುಟ್ಟಿತ್ತು. ಆದರೂ ಗಂಡನೆನಿಸಿಕೊಂಡ ಮಹಾನುಭಾವ ಒಳ ಸೇರಿಸಿಕೊಳ್ಳಲಿಲ್ಲ. ದೂರದ ಸಂಬಂಧಿಕರೊಬ್ಬರು ಬುಟ್ಟಿ ಚಾಕರಿಗೆ ಜನ ಆಯಿತು ಎಂದು ಕರೆದುಕೊಂಡು ಹೋಗಿದ್ದರು.
ಅದೇ ಮನೆಯಲ್ಲಿ ನಮ್ಮಜ್ಜಿ ಬೆಳೆದಿದ್ದರು. ಹುಟ್ಟಿಸಿದ ಮನುಷ್ಯ ಒಂದು ಸಲವೂ ಇವರೇನಾದರೂ ಎಂದು ವಿಚಾರಿಸಿಕೊಳ್ಳಲೇ ಇಲ್ಲ. ಆ ಕಾಲದಲ್ಲಿ ಆ ಊರಿನಲ್ಲಿ ನಡೆದ ಎಲ್ಲಾ ಕೆಟ್ಟ ಘಟನೆ, ಮರಣಗಳ ಜೊತೆ ಮುತ್ತಜ್ಜನ ಹೆಸರು ಸೇರಿಕೊಂಡೇ ಇತ್ತು. ಆದರೆ ವಯಸ್ಸು ನಿಲ್ಲುತ್ತದೆಯೇ? ಎರಡನೇಯ ಹೆಂಡತಿಗೆ ನಾಲ್ಕು ಮಕ್ಕಳು. ರಾಜ ಯೋಗ ಹೊತ್ತವರಂತೆ ಬೆಳೆಯುತ್ತಿದ್ದರೆ ನನ್ನ ಅಜ್ಜಿ ಹರಕಲು ಬಟ್ಟೆಯಲ್ಲಿ ಮೈ ಮುಚ್ಚಿಕೊಳ್ಳುತ್ತಾ ಅರೆ ತುಂಬಿದ ಹೊಟ್ಟೆಯಲ್ಲಿ ಗತಿಯಿಲ್ಲದವಳ ಹಾಗೆ ಬೆಳೆದಳು. ಮಗಳಿಗೆ ಮದುವೆ ಮಾಡಿಸಬೇಕು ಎಂದು ದಾರಿಯಲ್ಲಿ ಗಂಡನ ಕಾಲಿಗೆ ಬಿದ್ದು ಕೇಳಿಕೊಂಡದ್ದಕ್ಕೆ ಎಲ್ಲರ ಎದುರೇ ಒದ್ದು ಹೋಗಿದ್ದರಂತೆ. ಅಂದಿನಿಂದ ಆಕೆಯ ಮಾನಸಿಕ ಸಮತೋಲನವೇ ಕಳೆದು ಹೋಗಿತ್ತು. ಕೊನೆಗೆ ಅವರಿದ್ದ ಮನೆಯವರೇ ಹುಡುಗಿಯನ್ನು ಕಾಲಿನಲ್ಲಿ ಸಣ್ಣ ಒಡಕು ಇದ್ದ ಹುಡುಗನೊಬ್ಬನಿಗೆ ವಿವಾಹ ಮಾಡಿದ್ದರು. ಗಂಡ-ಹೆಂಡತಿ ಕಂಡವರ ಮನೆಯಲ್ಲಿ ದುಡಿದರಷ್ಟೇ ಹೊಟ್ಟೆಗೆ ಹಿಟ್ಟು. ಆದರೆ ಪಾಪ ಮಗಳಿಗೆ ಮಾತ್ರ ಮತ್ತೂ ಅಪ್ಪ ಒಪ್ಪಿ ಅಪ್ಪಿಕೊಳ್ಳಬಹುದು ಎಂಬ ಸಣ್ಣ ನಿರೀಕ್ಷೆ. ಮಗಳಿಗೆ ಮೂರು ಮಕ್ಕಳಾಗುವಾಗ ತಾಯಿ ತೀರಿಕೊಂಡಾಗಿತ್ತು. ಅತ್ತ ಮುತ್ತಜ್ಜನ ಪೌರುಷ ತಣ್ಣಗಾಗುತ್ತಾ ಬಂತು. ಅಲ್ಲಲ್ಲಿ ಮರಿ ಪುಡಾರಿಗಳು ಹುಟ್ಟಿಕೊಂಡು ಗುಂಪು ಕಟ್ಟಿಕೊಂಡಿದ್ದರು. ಅದೂ ಅಲ್ಲದೇ ಬೆಳೆದು ನಿಂತ ಮಕ್ಕಳೂ ಅವರನ್ನು ಬೇಕಾಬಿಟ್ಟಿ ವರ್ತಿಸುವುದಕ್ಕೆ ಬಿಡುತ್ತಿರಲಿಲ್ಲ. ಆಸ್ತಿ, ಹಣದ ವಹಿವಾಟುಗಳೆಲ್ಲ ನಿಧಾನವಾಗಿ ಅವರ ಕೈಯೊಳಗೆ ಸೇರಿಕೊಳ್ಳುತ್ತಿತ್ತು. ಆದರೂ ಮುತ್ತಜ್ಜ ಮೊದಲ ಹೆಂಡತಿಯ ಮಗಳನ್ನು ಮಾತನಾಡಿಸಲು ಬರಲಿಲ್ಲ. ಮಡದಿ ಸತ್ತ ವಿಚಾರ ತಿಳಿದಾಗಲೂ ಈ ಕಡೆ ಬಾರದೇ ಕಟುಕತನ ತೋರಿದ್ದರಂತೆ.
ಗಂಡ ಹೆಂಡಿರಿಬ್ಬರ ಶ್ರಮದ ದುಡಿಮೆಯೇ ಮಕ್ಕಳನ್ನು ಬೆಳೆಸಿದ್ದು. ಹಾಗಾಗಿ ಇಂದೂ ಕೂಡ ನನ್ನಪ್ಪ ಬಲು ಛಲಗಾರ. ಎಷ್ಟೇ ಕಷ್ಟ ಬಂದರೂ ಸೋತು ಹೋಗುತ್ತಿರಲಿಲ್ಲ. ಬಾಲ್ಯದ ದಿನಗಳಲ್ಲಿ ಮಾವಂದಿರು ಸ್ವಂತ ವಾಹನದಲ್ಲಿ ಓಡಾಡುವಾಗ ಅವರು ಚರ್ಮ ಕಿತ್ತ ಪಾದವನ್ನು ಕಾದ ನೆಲದ ಬಿಸಿಗೆ ಕೆಳಗೆ ಇಡಲಾಗದೇ ಡೊಂಕ ಹಾಕಿ ನಡೆಯುತ್ತಿದ್ದರಂತೆ. ಅವರನ್ನು ನೋಯಿಸುವ ಮತ್ತು ಅವರ ಎದುರು ಮೆರೆಯುವ ಯಾವ ಅವಕಾಶವನ್ನೂ ಮಾವಂದಿರು ಬಿಡುತ್ತಿರಲಿಲ್ಲವಂತೆ. ಈ ಕಷ್ಟಗಳ ಸುರಿಮಳೆಯ ನಂತರ ಹದಗೊಂಡ ಮನಸ್ಸಿನ ಸಹನೆಯ ಕಾರಣಕ್ಕೆ ಇರಬೇಕು, ಅಪ್ಪ ಯಾರನ್ನೂ ಪಕ್ಕನೆ ಕ್ಷಮಿಸಿ ಬಿಡುತ್ತಿದ್ದರು. ಸ್ವಂತ ಶ್ರಮದಿಂದ ಬಹಳಷ್ಟು ಎತ್ತರಕ್ಕೆ ಏರಿ ಆಗಿತ್ತು. ಸಣ್ಣ ಮೇಸ್ತ್ರಿಯಿಂದ ತೊಡಗಿ ಈಗ ದೊಡ್ಡ ಮಹಲುಗಳನ್ನು ನಿರ್ಮಿಸುವ ಕಾಂಟ್ರಾಕ್ಟುದಾರನ ಹಂತಕ್ಕೆ ಅಪ್ಪ ತಲುಪಿದ್ದರು. ಚಿಕ್ಕಪ್ಪಂದಿರಿಗೆ ಸಾಕಷ್ಟು ಕೃಷಿ ಜಮೀನನ್ನು ಖರೀದಿಸಿ ಕೊಟ್ಟಿದ್ದರು. ಅವರು ಮುತ್ತಜ್ಜನದೇ ಊರಿನಲ್ಲಿ ಇದ್ದರೆ ನಾವು ಅಪ್ಪನ ಅನುಕೂಲಕ್ಕಾಗಿ ಪೇಟೆ ಸೇರಿದ್ದೆವು. ಇಲ್ಲಿ ಬಲು ದೊಡ್ಡ ಬಂಗ್ಲೆ ನಮ್ಮದು. ಸಮಾಜದಲ್ಲೂ ಉತ್ತಮ ಗೌರವದ ಗುರುತಿಸುವಿಕೆ ಇತ್ತು. ಮೋಳಿ ನನ್ನ ಅಪ್ಪನ ಮಾವನ ಮಗನ ಮಗಳು. ನನ್ನದೇ ತಲೆಮಾರಿನ ಹುಡುಗಿ. ಅವಳಲ್ಲಿ ನಾನು ಆಪ್ತವಾಗಿ ಮಾತನಾಡಿದ್ದರಲ್ಲಿ ಅಪ್ಪ ಅಷ್ಟು ಸಿಡಿಮಿಡಿಕೊಳ್ಳುವುದಕ್ಕೆ ಏನಿತ್ತು? ಮನೆ ತಲುಪುವುದನ್ನೇ ಕಾಯುತ್ತಿದ್ದೆ.
ಬಟ್ಟೆ ಮಡಚಿ ಇಡುತ್ತಿದ್ದ ಅಮ್ಮನ ಹತ್ತಿರ ಹೋಗಿ ಮೆತ್ತಗೆ ವಿಷಯ ತೆಗೆದೆ.
“ಅಮ್ಮಾ.., ಯಾವತ್ತೋ ಮುತ್ತಜ್ಜ ಹಾಗೆಲ್ಲಾ ನಡೆದುಕೊಂಡಿದ್ದು ಹೌದು. ಅದೆಲ್ಲಾ ಮುಗಿದ ಕಥೆ ಅಲ್ವಾ. ಈಗಲೂ ಅದನ್ನೆಲ್ಲಾ ಮನಸ್ಸಲ್ಲಿ ಇರಿಸಿಕೊಂಡಿರುವುದೇಕೆ ಅಪ್ಪ?” ನನ್ನ ದ್ವನಿಯಲ್ಲಿ ಬೇಸರವಿತ್ತು. ಅಮ್ಮನ ಮೊಗದಲ್ಲಿ ಸಣ್ಣ ನಗು ಸುಳಿಯಿತು. ಮತ್ತೆ ಸಣ್ಣ ವಿಷಾಧದ ಛಾಯೆ. ಬಟ್ಟೆ ಮಡಚಿಡುವುದನ್ನು ನಿಲ್ಲಿಸಿ ಆಕೆ ನನ್ನ ಹತ್ತಿರ ಬಂದು ಕೂತಳು.
“ಪುಟ್ಟೀ.., ಕೆಲವು ನೋವುಗಳು ಮಾಸಿ ಹೋಗುವುದೇ ಇಲ್ಲ. ಅದೂ ನಮ್ಮ ಅಸಹಾಯಕತೆಯ ಸಂದರ್ಭದಲ್ಲಿ ಕೆಲವರ ನಡವಳಿಕೆಯ ಕ್ರೂರತೆಗಳು” ಅವಳ ದ್ವನಿಯಲ್ಲಿ ನೋವಿತ್ತು. ನನ್ನ ಕಣ್ಣುಗಳು ಅಚ್ಚರಿಗೆ ಮತ್ತಷ್ಟು ಅರಳಿದವು. ನಾನು ಬಿಡುವುದಿಲ್ಲ ಎಂದು ಅವಳಿಗೆ ಗೊತ್ತು, ಹಾಗಾಗಿಯೇ ಮಾತು ಮುಂದುವರಿಸಿದಳು.
“ನಿನ್ನ ಅಜ್ಜ ತೋರಿಸಿದ ಕ್ರೂರತೆಯ ನೋವಿನ ಗೆರೆಗಳು ಅಷ್ಟು ಸುಲಭದಲ್ಲಿ ಮಾಸುವಂಥದ್ದು ಅಲ್ಲ. ಮಡದಿಯ ಮಾತು ಹಾಗಿರಲಿ ತನಗೇ ಹುಟ್ಟಿದ ಏಕೈಕ ಮಗಳ ಕುರಿತಾಗಿ ಈ ನಿಲುವು ಬೇಡವಿತ್ತು. ನಿನ್ನ ಅಪ್ಪನ ಜೊತೆ ಅವರು ನಡೆದುಕೊಂಡ ರೀತಿ ಬಹಳ ಕೆಟ್ಟದಾಗಿತ್ತು. ಅದನ್ನು ಅವರು ಮರೆಯುವುದಕ್ಕೆ ಸಾಧ್ಯವಿಲ್ಲ” ಅಮ್ಮ ಮೆಲ್ಲಗೆ ಹೇಳುತ್ತಿದ್ದಳು. ನಾನು ಅಮ್ಮನಿಗೆ ಇನ್ನೂ ಹತ್ತಿರ ಬಂದು ಕುಳಿತೆ.
“ಆವತ್ತು ವಿಪರೀತ ಮಳೆ ಬಂದು ಮನೆಯ ಒಂದು ಭಾಗ ಕುಸಿದು ಬಿದ್ದಿತ್ತಂತೆ. ನಿನ್ನ ಚಿಕ್ಕಪ್ಪನಿಗೆ ವಿಪರೀತ ಜ್ವರ ಬೇರೆ. ಆ ಜ್ವರದ ಮಗುವನ್ನು ಮಲಗಿಸುವುದಕ್ಕೂ ಸ್ಥಳವಿಲ್ಲದಂತೆ ಮನೆಯೊಳಗೆಲ್ಲಾ ಸೋರುತ್ತಿದ್ದ ನೀರು. ಮುಳಿಯ ಮಾಡಿಗೆ ಆ ವರ್ಷ ಹೊಸ ಮುಳಿ ಹುಲ್ಲು ಹೊದಿಸಲು ಆಗಿರಲಿಲ್ಲ. ಹಾಗೂ ಹೀಗೂ ಬೆಳಗ್ಗೆ ಮಾಡಿದ ನಿನ್ನ ಅಜ್ಜಿ, ಅಪ್ಪನನ್ನು ಮುತ್ತಜ್ಜನ ಮನೆಗೆ ಒಂದು ನೂರು ಹೆಂಚಿನ ಹಣ ಕೊಡಿ ಎಂದು ಕೇಳುವುದಕ್ಕೆ ಹೇಳಿ ಕಳುಹಿಸಿದರಂತೆ. ಅಪ್ಪ ಹರಿದ ಅಂಗಿ ಜಾರುವ ಚಡ್ಡಿಯಲ್ಲಿ ಬಿಕ್ಷುಕನ ಹಾಗೆ ಹೋಗಿ ಮುತ್ತಜ್ಜನ ಮನೆ ಬಾಗಿಲಲ್ಲಿ ನಿಂತು ಅವರು ಹೊರ ಬರುವುದನ್ನೇ ಕಾದು ನಿಂತಿದ್ದರಂತೆ. ಕೊನೆಗೂ ತುಂಬಾ ಹೊತ್ತಿನ ನಂತರ ಹೊರಗೆ ಬಂದ ಅಜ್ಜನಲ್ಲಿ ಮನೆಯ ಪರಿಸ್ಥಿತಿ ಹೇಳಿ ಗೋಗರೆದು ಅತ್ತರಂತೆ. ಆದರೆ ಮುತ್ತಜ್ಜ ಮಾಡಿದ್ದೇನು? ದುಡ್ಡಿಲ್ಲದವನಿಗೆ ಅರಮನೆಯ ಕನಸು ಯಾಕೆ? ಮುಳಿಯ ಮನೆ ಸಾಕು ನಿಂಗೆ, ಹೆಂಚಿನ ಮನೆಯ ಕನಸು ಹೊತ್ತುಕೊಂಡು ಈ ಕಡೆ ಬಂದರೆ ಜಾಗ್ರತೆ ಎಂದು ಅಲ್ಲೇ ಬದಿಯಲ್ಲಿ ಇರಿಸಿದ್ದ ಎತ್ತಿಗೆ ಹೊಡೆಯುವ ಬೆತ್ತದಿಂದ ನಾಲ್ಕು ಬಾರಿಸಿದರಂತೆ. ಎಳೆಯ ದೇಹದ ಚರ್ಮ ಬಿರಿದು ರಕ್ತ ಚಿಮ್ಮಿತ್ತಂತೆ. ಮನಸ್ಸಿನ ನೋವು ಮತ್ತು ದೇಹದ ನೋವಿನಲ್ಲಿ ಮನೆಗೆ ಓಡಿ ಬಂದು ಬಿದ್ದ ಹುಡುಗನಿಗೆ ಸಂಜೆಯವರೆಗೆ ಬೋಧವೇ ಇರಲಿಲ್ಲವಂತೆ” ಅಮ್ಮ ಕಣ್ಣೀರು ಒರೆಸಿಕೊಂಡಳು. ಹೌದು ಅಪ್ಪನ ಬೆನ್ನಿನ ಮೇಲೆ ಒಂದು ಗಾಯದ ಬರೆ ಈಗಲೂ ಇದೆ. ನನ್ನ ಕಣ್ಣು ತುಂಬಿತು. ಎಂತೆಂಥವರ ಬಗ್ಗೆ ಕೇಳಿದ್ದೆ. ಆದರೆ ನನ್ನ ಮುತ್ತಜ್ಜ ಯಾಕೆ ಇಷ್ಟು ಕ್ರೂರಿಯಾದರು ಎಂದೇ ಅರ್ಥವಾಗಲಿಲ್ಲ! ಒಂದಿಷ್ಟು ಹೊತ್ತು ನಾವಿಬ್ಬರೂ ಮೌನವಾಗಿದ್ದೆವು. ನಂತರ ನಾನೇ ಮಾತನಾಡಿದೆ.
“ಅಮ್ಮಾ.., ಅಪ್ಪ ಮತ್ತೆಂದೂ ಮುತ್ತಜ್ಜನ ಮನೆಗೆ ಹೋಗಲಿಲ್ವಾ?” ಅಮ್ಮ ನಿಟ್ಟುಸಿರು ಬಿಟ್ಟಳು.
“ಹೋಗಿದ್ದರಂತೆ, ನಮ್ಮ ಮದುವೆಯ ಆಮಂತ್ರಣ ಕೊಡುವುದಕ್ಕೆ…” ಅವರ ಮಾತು ನಿಲ್ಲುವ ಮೊದಲೇ ನಾನು ಆತುರಾತುರವಾಗಿ ಕೇಳಿದೆ,
“ಅಂದ್ರೆ ಅವರು ಮುತ್ತಜ್ಜನನ್ನು ಕ್ಷಮಿಸಿ ಬಿಟ್ರಾ!” ಅಮ್ಮ ಈಗ ಹಗುರವಾಗಿ ಒಮ್ಮೆಗೆ ನಕ್ಕುಬಿಟ್ಟಳು.
“ ಕ್ಷಮೆ?! ಅದು ಸಾಧ್ಯವಿರಲಿಲ್ಲ. ನಿನ್ನ ಅಪ್ಪ ಆ ಹೊತ್ತಿಗೆ ಸಾಕಷ್ಟು ಸಂಪಾದಿಸಿದ್ದರು. ಸ್ವಂತ ಕಾರಿತ್ತು, ಮನೆಯಿತ್ತು. ನೀವು ತಳ್ಳಿದರು, ತುಳಿದು ಹೊಸಕಿಟ್ಟರೂ ನಾವು ಪುಟಿದೆದ್ದು ಬದುಕಿದ್ದೇವೆ ಎಂದು ತೋರಿಸಬೇಕಿತ್ತು. ಆದರೆ ಆ ಹೊತ್ತಿಗೆ ಮುತ್ತಜ್ಜ ಹಾಸಿಗೆ ಹಿಡಿದಿದ್ದರಂತೆ. ಯಾರು ಬಂದದ್ದು ಎಂದು ಕೇಳಿದಾಗ ಪರಿಚಯ ಹೇಳಿದ್ದು ಆಲಿಸಿ ಕಣ್ಣೀರಿಟ್ಟರಂತೆ. ಮಗಳನ್ನು ನೋಡಬೇಕು ಅಂತ ಬೇಡಿಕೊಂಡರಂತೆ. ಆದ್ರೆ ನಿನ್ನ ಅಪ್ಪನ ಮನಸ್ಸು ಕಲ್ಲಾಗಿತ್ತು. ಗಟ್ಟಿಯಾಗಿ ಹಿಡಿದ ಕೈ ಬಿಡಿಸಿಕೊಂಡು,
“ಅಜ್ಜಾ.., ನೀನು ಕ್ಷಮೆ ಕೇಳುವುದು, ನಾವು ಕ್ಷಮಿಸುವುದು, ಆ ಕಾಲ ಯಾವತ್ತೋ ಮಿಂಚಿ ಹೋಗಿದೆ. ನೀನು ಎಷ್ಟು ತುಳಿದೆ, ನಾವು ಬಿಕ್ಷುಕರಿಂದ ಕಡೆಯಾಗಿ ಬದುಕಿದೆವು. ಅಜ್ಜಿ ಯಾರ ಯಾರದ್ದೋ ಮನೆಯ ಎಂಜಲನ್ನ ತಿಂದು ಉಸಿರಾಡಿದಳು. ಸಾಯುವ ಹೊತ್ತು ಆಕೆಯ ಬಾಯಿಗೆ ಒಂದಿಷ್ಟು ನೀರು ಬಿಡುವುದಕ್ಕೆ ಯಾರೂ ಇರಲಿಲ್ಲ. ಇನ್ನು ಅಮ್ಮ, ನಮ್ಮನ್ನು ದೊಡ್ಡ ಮಾಡುವುದಕ್ಕೆ ಪಟ್ಟ ಪಾಡು ಎಂಥದ್ದು? ಒಂದು ತುತ್ತು ಅನ್ನಕ್ಕಾಗಿ ಬೇಡಿ ನಿಂತರೆ ನಿನ್ನ ಮೇಲಿನ ದ್ವೇಷಕ್ಕೆ ಹುಚ್ಚು ನಾಯಿಯನ್ನು ಓಡಿಸಿದಂತೆ ಓಡಿಸುತ್ತಿದ್ದರು ಊರ ಮಂದಿ. ಮೂವರು ಗಂಡು ಮಕ್ಕಳು ಆದ ಕಾರಣ ಉಸಿರು ಬಿಗಿ ಹಿಡಿದು ಬದುಕಿದೆವು. ಹೆಣ್ಣು ಮಗಳು ಇರುತ್ತಿದ್ದರೆ ವಿಧಿ ಅವಳ ಮೇಲೆ ಯಾವ ಕ್ರೂರತೆ ಮೆರೆದು ಖುಷಿ ಪಡುತ್ತಿತ್ತೋ? ನೀನು ಸಾಯಿಸ ಹೊರಟರೂ ನಾವು ಜೀವಂತವಾಗಿ ಇದ್ದೇವೆ ಅಂತ ತೋರಿಸುವುದಕ್ಕೆ ನಾನು ಬಂದದ್ದು. ನೀನು ಇದನ್ನೆಲ್ಲಾ ನೆನಪಿಸಿಕೊಂಡು ನರಳಿ ನರಳಿ ಸಾಯಬೇಕು” ಎಂದು ಹೇಳಿ ತಿರುಗೀ ನೋಡದೇ ಅಲ್ಲಿಂದ ಎದ್ದು ಬಂದಿದ್ದರಂತೆ. ನಮ್ಮ ಮದುವೆ ಆಗಿ ಒಂದು ತಿಂಗಳಿನಲ್ಲಿ ಅವರು ತೀರಿಕೊಂಡರು. ನಾವು ಯಾರೂ ಹೋಗಲಿಲ್ಲ. ಎಷ್ಟು ಮನೆಯ ಬೆಳಕು ನಂದಿಸಿದವರೋ ಏನೋ, ಮಲಗಿದಲ್ಲಿ ದೇಹದಿಂದ ಇಷ್ಟುದ್ದುದ ಹುಳು ಹೊರ ಬರುತ್ತಿತ್ತಂತೆ. ಶವಕ್ಕೆ ಮಕ್ಕಳು ಹೆಗಲು ಕೊಡುವುದಕ್ಕೆ ಹೇಸಿ ಕೆಲಸದವರೇ ಹೊತ್ತರಂತೆ. ಇದೆಲ್ಲಾ ಒಂದು ದಿನ ನಿನ್ನ ಅಪ್ಪನೇ ನನ್ನ ಹತ್ತಿರ ಅವರಾಗಿ ಹೇಳಿಕೊಂಡದ್ದು” ಅಮ್ಮ ದೀರ್ಘ ಉಸಿರೆಳೆದುಕೊಂಡಳು.
“ಅವರ ಮರಣ ನಂತರ ಆ ಮನೆಯಲ್ಲಿ ಹಲವು ಅಸಹಜ ಮರಣಗಳು. ಮುತ್ತಜ್ಜನ ಎರಡನೇಯ ಮಡದಿ ತೋಟದ ಕೆರೆಯಲ್ಲಿ ಶವವಾಗಿ ಸಿಕ್ಕಿದ್ದರು. ಮಗನೊಬ್ಬ ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡು ಕುಳಿತಲ್ಲಿಯೇ ಆಗಿದ್ದ. ಅವನ ಹೆಂಡತಿ ವಿಚ್ಛೇದನ ಕೊಟ್ಟು ಅವರದೇ ಸಂಬಂಧಿಕರಲ್ಲಿ ಒಬ್ಬನ್ನು ಮದುವೆಯಾಗಿ ಅವರೆದುರೇ ಓಡಾಡಿಕೊಂಡು ಆರಾಮವಾಗಿದ್ದಳು. ಇನ್ನೊಬ್ಬ ಮಗ ಮಾನಸಿಕ ಅಸ್ವಸ್ಥನಾಗಿದ್ದ. ಅವನ ಮಡದಿ ಮಕ್ಕಳು ಅವನನ್ನು ಕೋಣೆಯಲ್ಲಿ ಕೂಡಿ ಹಾಕಿ ಹಾಯಾಗಿದ್ದರು. ಉಳಿದವನೊಬ್ಬ ಮಗ ಈ ಕಿರಿಕಿರಿಯೇ ಬೇಡ ಎಂದು ದೂರದ ಪೇಟೆಯಲ್ಲಿದ್ದ. ತಪ್ಪಿ ಕೂಡ ಈ ಕಡೆ ಸುಳಿದವನಲ್ಲ. ಮುತ್ತಜ್ಜನ ಎಲ್ಲಾ ಆಸ್ತಿ ಅವರ ಹೆಸರಿಗೇ ಬರೆಸಲ್ಪಟ್ಟಿತ್ತು. ಈ ಎಲ್ಲಾ ಪಲ್ಲಟಗಳ ನಡುವೆ ಆಸ್ತಿ ಕರಗುತ್ತಾ ಬಂದಿತ್ತು.” ಅಮ್ಮ ಮಾತು ನಿಲ್ಲಿಸಿದಳು.
“ಹೋ.., ಆ ಪೇಟೆಯಲ್ಲಿರುವವರ ಮಗನ ಮಗಳೇ ಅಲ್ವಾ, ಮೋಳಿ” ನಾನು ಹೇಳಿ ನಿಲ್ಲಿಸಿದಾಗ ಮನೆಯ ಗೇಟು ಸದ್ದಾಯಿತು. ಅಮ್ಮ ಎದ್ದು ನಿಂತು ಮುಖ ಕಣ್ಣು ಒರಸಿಕೊಂಡಳು. ನಾನೂ ಎದ್ದು ನಿಂತೆ.
“ಅಪ್ಪ ಬಂದ್ರು. ಈ ವಿಚಾರ ಬಿಡು. ಎಂದಿನ ಹಾಗೆ ಸಹಜವಾಗಿರು. ಸುಮ್ಮನೆ ಅವರಿಗೆ ಕಿರಿಕಿರಿ ಮಾಡುವುದು ಬೇಡ. ಇನ್ನು ಅವರನ್ನು ಕೇಳಿ ನೀನು ಎಡವಟ್ಟು ಮಾಡಿಕೊಳ್ಳಬೇಡ ಎನ್ನುವ ಕಾರಣಕ್ಕೆ ನಾನು ನಿನಗೆ ಎಲ್ಲಾ ವಿವರಿಸಿ ಹೇಳಿದ್ದು. ಈಗ ಹೋಗು ನಿನ್ನ ರೂಂ ಗೆ” ಅಮ್ಮ ಅವಸರಪಡಿಸಿದಾಗ ನಾನು ಅತ್ತ ನಡೆದೆ. ಅಪ್ಪ ಸಹಜವಾಗಿದ್ದರು. ನಾನೂ ಅವರ ಜೊತೆ ಸಹಜವಾಗಿರುವ ಪ್ರಯತ್ನ ನಡೆಸಿದ್ದೆ.
ನನಗೆ ಈ ವಿಚಾರವನ್ನು ಮರೆಯುವುದಕ್ಕೆ ಸಾಧ್ಯವೇ ಆಗಲಿಲ್ಲ. ಒಳಗೊಳಗೇ ಮತ್ತೆ ಮತ್ತೆ ಮುತ್ತಜ್ಜ ಯಾಕೆ ಹಾಗೆ ಮಾಡಿದರು ಎನ್ನುವ ಪ್ರಶ್ನೆ ಕಾಡುತ್ತಿತ್ತು. ನನ್ನ ಕಾಲಕ್ಕೆ ಇದು ಪ್ರಶ್ನಾರ್ಹ ಆದರೂ ಆ ಕಾಲಕ್ಕೆ ಅದು ದೊಡ್ಡ ಸಂಗತಿಯಾಗಿರಲಿಲ್ಲ. ಒಂದೋ ಎರಡೋ ಮದುವೆಯಾಗಿ, ಇನ್ನೆರಡು ಹೆಸರಿಲ್ಲದ ಸಂಬಂಧಗಳನ್ನು ಸುಖದ ಅಮಲಿಗೆ ಇರಿಸಿಕೊಂಡು ಯಾವ ಸಂಬಂಧಕ್ಕೂ ನ್ಯಾಯ ಒದಗಿಸದೆ ಬಾಳಿದವರು ಹಲವರಿದ್ದರು. ಆದರೆ ಮುತ್ತಜ್ಜನಲ್ಲಿ ಕೊಳೆತು ಹೋಗುವಷ್ಟು ಸೊತ್ತು ಇತ್ತು. ಅವರಿಗೇ ಹುಟ್ಟಿದ ಮಗಳು ಹೀಗೆ ಭಿಕಾರಿಯ ಬದುಕು ಬದುಕಿದ ಹೊತ್ತಿಗೆ ಹೊಟ್ಟೆ ಬಟ್ಟೆಯ ವ್ಯವಸ್ಥೆಯಾದರೂ ಮಾಡಿಕೊಡುತ್ತಿದ್ದರೆ ಅವರ ಗಂಟೇನೂ ಕರಗುತ್ತಿರಲಿಲ್ಲ. ಹೀಗೆ ಯೋಚಿಸುವಾಗ ನನಗೂ ಅವರ ಬಗ್ಗೆ ಅಸಹ್ಯ ಹುಟ್ಟುತ್ತಿತ್ತು. ಅಂಗಿ ಧರಿಸಿರದ ಹೊತ್ತಿನಲ್ಲಿ ಅಪ್ಪನ ಬೆನ್ನ ಹಿಂದಿನ ಗಾಯದ ಗುರುತಿನಲ್ಲಿ ರಕ್ತ ಜಿನುಗುತ್ತಿದೆ ಎಂಬ ಕಲ್ಪನೆ ಹುಟ್ಟಿ ಗಟ್ಟಿಯಾಗಿ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ.
ಯಾಕೋ ಅಜ್ಜಿಯನ್ನು ನೋಡಿ ಮಾತನಾಡಿಸಬೇಕು ಎಂದು ಅನ್ನಿಸತೊಡಗಿತ್ತು. ಅಜ್ಜಿಗೆ ನಾವಿರುವ ಪೇಟೆಯ ವಾತಾವರಣ ಅಷ್ಟು ಹಿಡಿಸುತ್ತಿರಲಿಲ್ಲ. ಚಿಕ್ಕಪ್ಪನ ಜೊತೆ ಹಳ್ಳಿ ಮನೆಯಲ್ಲಿ ಇದ್ದರು. ಬಂದರೆ ತಿಂಗಳಿದ್ದು ಹೋಗುತ್ತಿದ್ದರು. ಅಪ್ಪನೂ ನೆನಪಾದ ತಕ್ಷಣ ಹೋಗಿ ಬರುತ್ತಿದ್ದರು.
ಈ ಸಲ ರಜೆಯಲ್ಲಿ ಅಜ್ಜಿ ಮನೆಯಲ್ಲಿ ನಾಲ್ಕು ದಿನ ನಿಂತು ಬರುವೆನೆಂದು ಹೇಳಿದಾಗ ಪೇಟೆ ವಾಸ ಸಾಕಾಯಿತಾ ಮಗಳೇ ಅಂತ ಅಪ್ಪ ಪ್ರೀತಿಯಿಂದ ತಮಾಷೆ ಮಾಡಿ ನಕ್ಕು ಬಿಟ್ಟಿದ್ದರು. ಅಮ್ಮ ಮಾತ್ರ ಹೊರಡುವ ಹೊತ್ತಿಗೆ ಮೆಲ್ಲ ಮೂಲೆಗೆ ಕರೆದು, “ಅಜ್ಜಿ ಹತ್ತಿರ ಏನೇನೋ ಕೇಳುವುದಕ್ಕೆ ಹೋಗಬೇಡ, ಪಾಪ ಈ ವಯಸ್ಸಿನಲ್ಲಿ ಆದರೂ ನೆಮ್ಮದಿಯ ಉಸಿರಾಡುತ್ತಿದೆ ಹಿರಿ ಜೀವ, ಆದದ್ದು ಆಗಿ ಹೋಯಿತು. ಕೊಳೆತದದ್ದನ್ನು ಮತ್ತೆ ಮೇಲೆತ್ತುವ ಕೆಟ್ಟ ಕುತೂಹಲ ಯಾಕೆ, ಸುಮ್ಮಗೆ ಹಾಯಾಗಿ ಇದ್ದು ಬಾ..” ಎಂದು ಎಚ್ಚರಿಸಿದ್ದಳು. ನಮ್ಮಿಬ್ಬರ ನಡುವೆ ಅಂದು ನಡೆದ ಮಾತುಕತೆಯನ್ನು ಆಕೆ ಮರೆತಿರಲಿಲ್ಲ. ಎಲ್ಲದಕ್ಕಿಂತ ನನ್ನ ಶೋಧಕ ಬುದ್ಧಿಯ ಬಗ್ಗೆ ಆಕೆಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿಯೇ ಅವಳ ಕರ್ತವ್ಯ ಮಾಡಿದ್ದಳು. ನನ್ನ ಮನಸ್ಸು ಏನೋ ನಿರ್ಧರಿಸಿಕೊಂಡಿತ್ತು.
ಅಜ್ಜಿಗೆ ನನ್ನ ಮುಖ ನೋಡುವಾಗ ಖುಷಿಯೋ ಖುಷಿ. ಅದು ಯಾವಾಗಲೂ ಅಷ್ಟೇ. ಅಜ್ಜಿ ಎಲ್ಲಾ ಮೊಮ್ಮಕ್ಕಳನ್ನು ಒಂದೇ ರೀತಿ ನೋಡಿಕೊಳ್ಳುತ್ತಿದ್ದರು. ಅಜ್ಜಿ ಸದಾ ಹಸನ್ಮುಖಿ. ಅವರಿಗೆ ಹೊಂದಿಕೊಂಡು ನಡೆಯುವ ಚಿಕ್ಕಮ್ಮಂದಿರು, ಚಿಕ್ಕಪ್ಪಂದಿರು ಮತ್ತು ಅವರ ಮಕ್ಕಳು. ಆ ಹಳ್ಳಿಯಲ್ಲಿಯೇ ಅದೊಂದು ಮಾದರಿ ಮನೆ. ಸದಾ ಯಾರಾದರೂ ಅಜ್ಜಿಯನ್ನು ಸುತ್ತುವರಿದಿದ್ದ ಕಾರಣ ನನಗೆ ಅಜ್ಜಿ ಏಕಾಂಗಿಯಾಗಿ ಮಾತಿಗೆ ಸಿಗುತ್ತಿರಲಿಲ್ಲ. ನಾನು ಅವಕಾಶಕ್ಕಾಗಿ ಕಾದದ್ದೇ ಬಂತು.
ಆವತ್ತು ಇಬ್ಬರು ವಯಸ್ಸಾದವರು ಮನೆಗೆ ಬಂದಿದ್ದರು. ಅವರು ಚಿಕ್ಕಪ್ಪನಿಗೆ ಯಾವುದೋ ಆಮಂತ್ರಣ ಕೊಡುವುದಕ್ಕೆ ಬಂದವರಾಗಿದ್ದರು. ಅವರು ಚಿಕ್ಕಪ್ಪನ ಹತ್ತಿರ ಮಾತನಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಜ್ಜಿ ಚಾವಡಿಗೆ ಬಂದಿದ್ದರು. ಅವರನ್ನು ನೋಡಿದ ಕೂಡಲೇ ಬಂದವರಲ್ಲಿ ಒಬ್ಬರು ಅಚ್ಚರಿಯಿಂದ,
“ನೀವು ಆಚ್ಚಪ್ಪನವರ ಮಗಳಾ?” ಎಂದು ಕೇಳಿ ಬಿಟ್ಟರು. ಒಮ್ಮೆ ಅಲ್ಲಿದ್ದವರ ಮುಖದ ಬಣ್ಣವೆಲ್ಲಾ ಇಳಿದು ಹೋಯಿತು. ಆದರೆ ಅಜ್ಜಿ ಮಾತ್ರ ಅದೇ ನಗು ಮುಖದಿಂದ,
“ಹೌದು, ಹೇಗೆ ಗುರುತು ಹಿಡಿದಿರಿ?!” ಎಂದು ಮರು ಪ್ರಶ್ನಿಸಿದರು.
“ಅದು ಬಾಯಿ ಬಿಟ್ಟು ಹೇಳಬೇಕಾ? ನಿಮ್ಮ ಮುಖ ನೋಡಿದರೆ ಅವರ ಪಡಿಯಚ್ಚು. ರಾಜಾರೋಷದಿಂದ ಬೇಕಾದಂತೆ ಬದುಕಿ ಕೊನೆಗಾಲಕ್ಕೆ ಬಹಳ ಹಿಂಸೆಪಟ್ಟು ತೀರಿಕೊಂಡರಂತೆ” ಕಟುಕನಂತೆ ಬದುಕಿದವನ ಬಗ್ಗೆ ಕರುಣೆಯ ಮಾತನ್ನಾಡುತ್ತಿರುವ ದೊಡ್ಡತನ ಅವರ ದ್ವನಿಯಲ್ಲಿತ್ತು. ಯಾಕೋ ನನಗೆ ಸುಮ್ಮನಿರಲಾಗಲಿಲ್ಲ. ನನಗರಿವಿಲ್ಲದಂತೆ ಮಾತು ಹೊರ ಬಿತ್ತು.
“ಕರ್ಮಫಲ…”
ಒಮ್ಮೆಗೆ ಎಲ್ಲರೂ ನನ್ನತ್ತ ತಿರುಗಿ ನೋಡಿದಾಗ ಬೆದರಿ ಹೋದೆ. ನನಗರಿವಿಲ್ಲದಂತೆ ಮಾತು ಹೊರ ಬಂದಾಗಿತ್ತು. ಒಮ್ಮೆಗೆ ನಾಲಗೆ ಕಚ್ಚಿಕೊಂಡೆ. ಯಾರ ಮುಖವನ್ನು ನೋಡುವುದಕ್ಕೆ ಧೈರ್ಯ ಬರಲಿಲ್ಲ. ಎದ್ದು ಒಳಹೋದೆ. ಅದನ್ನು ಉಳಿದವರು ಮರೆತುಬಿಟ್ಟರು. ಆದರೆ ಅಜ್ಜಿ ಏನೆಂದುಕೊಂಡಳೋ ಎಂದು ಒಳಗೊಳಗೆ ಭಯ ಕಾಡುತ್ತಿತ್ತು. ನಾನು ಒಮ್ಮೆಯೂ ಕಾಣದ ವ್ಯಕ್ತಿಯ ಬಗ್ಗೆ ಅವರ ಮಗಳ ಎದುರೇ ನನ್ನ ವಯಸ್ಸಿಗೆ ಮೀರಿದ ಮಾತು ಆಡಿಬಿಟ್ಟಿದ್ದೆ. ನನಗೆ ಏನೋ ಗೊತ್ತಿದೆ ಎನ್ನುವ ಸಂಶಯ ಅಜ್ಜಿಗೆ ಖಂಡಿತಾ ಬಂದಿರಬಹುದು. ಈ ಬಗ್ಗೆ ಅಪ್ಪನಲ್ಲಿ ಏನಾದರೂ ಕೇಳಿದರೆ ಎಂಬ ವಿಚಾರ ನೆನಪಿಸಿಕೊಂಡಾಗೆಲ್ಲಾ ಭಯ, ಗಾಭರಿಯಾಗುತ್ತಿತ್ತು. ಅಜ್ಜಿಗೆ ಆ ದಿನವೆಲ್ಲಾ ಸರಿಯಾಗಿ ಮುಖಕೊಟ್ಟು ಮಾತನಾಡಲೇ ಇಲ್ಲ. ಅಜ್ಜಿ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ ಎನ್ನುವ ಭಾವ ನನ್ನನ್ನು ಕಾಡುತ್ತಿತ್ತು. ಒಳಗೊಳಗೆ ನಾನು ಭಯಗೊಂಡಿದ್ದೆ. ಇದೆಲ್ಲಾ ಬೇಡದ ವಿಚಾರ ನನಗ್ಯಾಕೆ, ಸುಮ್ಮನೆ ಎಲ್ಲರ ಮನಸ್ಸು ಕೆಡಿಸುವ ಕುತೂಹಲವನ್ನು ಕಳಚಿಡುವುದೇ ಉತ್ತಮ ಎಂದು ನಿರ್ಧರಿಸಿ ಮರುದಿನ ಮನೆಗೆ ಹೊರಟುಬಿಡಬೇಕು ಅಂದುಕೊಂಡೆ. ದೂರವಾಣಿ ಕರೆ ಮಾಡಿ ಅಪ್ಪನನ್ನು ಕರೆದೊಯ್ಯಲು ಬರ ಹೇಳಿದ ನಂತರ ಮನಸ್ಸು ನಿರಾಳವಾಗಿತ್ತು.
ಸಂಜೆಯ ರಂಗು ಅಂಗಳದಲ್ಲಿ ಮೆಲ್ಲಗೆ ನೆರಳಿನೆಡೆಯಲ್ಲಿ ಸುಳಿದಾಡುತ್ತಿತ್ತು. ಚಿಕ್ಕಪ್ಪನ ಮಕ್ಕಳು ಕೋಣೆಯೊಳಗೆ ಕೂತು ಓದಿಕೊಳ್ಳುತ್ತಿದ್ದರು. ಚಿಕ್ಕಪ್ಪಂದಿರು ತಮ್ಮ ತಮ್ಮ ಕೆಲಸಕ್ಕೆ ಹೋದವರು ಬಂದಿರಲಿಲ್ಲ. ಚಿಕ್ಕಮ್ಮಂದಿರಿಗೆ ಸಂಜೆಯಡುಗೆಯ ಗಡಿಬಿಡಿ. ನಾನು ಸುಮ್ಮನೆ ಅಂಗಳದಲ್ಲಿ ಚುರುಕಾಗಿ ಆಚೀಚೆ ಓಡಾಡುತ್ತಿದ್ದ ಅಳಿಲಿನತ್ತ ನೋಡುತ್ತಾ ಕುಳಿತಿದ್ದೆ. ಒಮ್ಮೆಗೆ ಹೆಗಲಿನ ಮೇಲೆ ಕೈ ಬಿದ್ದಾಗ ಗಾಭರಿಯಿಂದ ಹಿಂದೆ ತಿರುಗಿ ನೋಡಿದೆ. ಅಜ್ಜಿ ನನಗೆ ಅಂಟಿಕೊಂಡು ನಿಂತಿದ್ದರು. ಅವರಾಗಿಯೇ ಮಾತೆತ್ತಿದರು,
“ಬೇಜಾರಾಯಿತಾ ಪುಟ್ಟೀ…, ನನಗೂ ಕಾಲು ಜಡ್ಡು ಹಿಡಿದ ಹಾಗೆ ಆಗಿದೆ. ಬಾ ತೋಟದ ನಡುವೆ ನಾಲ್ಕು ಹೆಜ್ಜೆ ನಡೆದು ಬರೋಣ. ನನಗೂ ಜಡ ಹೋಗುತ್ತೇ, ನಿನಗೂ ಹಳ್ಳಿಯ ಹಸಿರು ನೋಟದ ಖುಷಿ.” ಅವಳ ಮಾತಿನ ಒಳಗೆ ಬೇರೇನೋ ಇದೆ ಎಂದು ನನಗನ್ನಿಸಿತ್ತು. ನಿರಾಕರಿಸದೆ ಮೌನವಾಗಿ ಆಕೆಯನ್ನು ಹಿಂಬಾಲಿಸಿದೆ. ಆಕೆ ಮುಂದೆ ಮುಂದೆ ನಡೆಯುತ್ತಿದ್ದಳು. ನಾನು ಅವಳ ಹಿಂದೆ ಹೆಜ್ಜೆ ಇರಿಸಿದ್ದೆ. ನನಗೆ ಏನು ಮಾತನಾಡುವುದು ಎಂಬ ಗೊಂದಲವಾಗಿತ್ತು. ತೋಟದ ನಡುವೆ ಬೆಳೆದ ಚೆಂಡು ಹೂವಿನ ಗಿಡದಿಂದ ನಾಲ್ಕು ಐದು ಹೂಗಳನ್ನು ಆಕೆ ಕಿತ್ತು ತೆಗೆದುಕೊಂಡಳು. ಅಚ್ಚರಿಯಿಂದ ನೋಡುತ್ತಿದ್ದ ನನ್ನ ಕೈಗೆ ಅದನ್ನು ತುರುಕಿದಳು. ನನಗೆ ಒಂದೂ ಅರ್ಥವಾಗಲಿಲ್ಲ. ನಾವು ತೋಟದ ಈ ತುದಿಗೆ ಬಂದು ನಿಂತಿದ್ದೆವು. ಎದುರು ಬೇಲಿ ಇತ್ತು. ಬೇಲಿಯಾಚೆ ಮುತ್ತಜ್ಜನ ಸಮಾಧಿ ಕಾಣಿಸುತ್ತಿತ್ತು. ನಾನು ಬಹಳ ಸಲ ಅದನ್ನು ನೋಡಿದ್ದೆ. ಏನೂ ಅನ್ನಿಸಿರಲಿಲ್ಲ. ಆದರೆ ಇಂದು ನನ್ನ ಮುಖದಲ್ಲಿ ಒಂದು ಬಗೆಯ ತಾತ್ಸಾರದ ಭಾವ ತುಂಬಿಕೊಳ್ಳುತ್ತಿತ್ತು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡೆ. ಅಪ್ಪನ ಬೆನ್ನಿನ ಮೇಲಿನ ಗಾಯ ಮಾಸಿದ ಕಲೆಯಲ್ಲಿ ರಕ್ತದ ಬಿಂದು ಸಾಲಾಗಿ ಉದಿಸುತ್ತಿತ್ತು. ಕೈಯಲ್ಲಿದ್ದ ಹೂವನ್ನು ಬೆರಳುಗಳು ಹೊಸಕುತ್ತಿದ್ದವು.
“ಹೂವನ್ನು ಹೊಸಕಬೇಡಾ… ಮುತ್ತಜ್ಜನ ಸಮಾಧಿಗೆ ಹಾಕು” ಅಜ್ಜಿಯ ಮಾತಿಗೆ ಕಣ್ಣು ಬಿಟ್ಟು ನೋಡಿದೆ. ಬೇಲಿಯಾಚೆಗಿನ ಸಮಾಧಿಯ ಮೇಲೆ ಈ ಕಡೆ ನಿಂತು ಆಕೆ ಹೂ ಸುರಿಯುತ್ತಿದ್ದಳು. ನಾನು ಅಪ್ಪಚ್ಚಿಯಾಗದೆ ಉಳಿದ ಹೂವುಗಳನ್ನು ಬೇಲಿಯಾಚೆ ಸುರಿದೆ. ಹೆಚ್ಚಿನ ಹೂವುಗಳು ನನ್ನ ಕೈಗೆ ಅಂಟಿ ರೂಪ ಕಳೆದುಕೊಂಡು ನನ್ನದೇ ಒಳ ಮನಸ್ಸಿನ ಭಾವವನ್ನು ಪ್ರತಿನಿಧಿಸುವಂತೆ ಇದ್ದವು. ಈಗ ನನಗೆ ಸುಮ್ಮನಿರಲಾಗಲಿಲ್ಲ.
“ಅಜ್ಜಿ.., ನೀನು ಮುತ್ತಜ್ಜನನ್ನು ಕ್ಷಮಿಸಬಲ್ಲೆಯಾ?” ನಾನು ಒಳಗೊಳಗೆ ಕೋಪದಿಂದ ಕುದಿಯುತ್ತಿದ್ದೆ. ಅಜ್ಜಿ ಒಂದು ಕೈಯಿಂದ ಮೃದುವಾಗಿ ನನ್ನ ಕೈ ಹಿಡಿದುಕೊಂಡಳು. ಮತ್ತೊಂದು ಕೈಯಿಂದ ನನ್ನ ತಲೆಯನ್ನು ಪ್ರೀತಿಯಿಂದ ನೇವರಿಸಿದಳು.
“ಪುಟ್ಟೀ.., ಏನೋ ಅರೆಬರೆ ತಿಳಿದುಕೊಂಡಿರುವೆ ಎಂದು ಗೊತ್ತಾಗಿದೆ ನನಗೆ. ಯಾವುದೇ ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಳ್ಳದೆ ಒಂದು ನಿರ್ಧಾರಕ್ಕೆ ಬರಬಾರದು. ನಾನು ಮುತ್ತಜ್ಜನನ್ನು ಕ್ಷಮಿಸುವುದು, ಕ್ಷಮಿಸದೇ ಇರುವುದು, ಈ ಎರಡರಿಂದ ಏನು ಬದಲಾಗುವುದಕ್ಕೆ ಸಾಧ್ಯ? ಈ ದ್ವೇಷ ಸೇಡು ಸೆರಗಲ್ಲಿ ಸುರುವಿಕೊಂಡ ಕೆಂಡದ ಹಾಗೆ. ನಮ್ಮನ್ನೇ ಸುಡುತ್ತದೆ” ಆಕೆಯ ದ್ವನಿಯಲ್ಲಿ ಯಾವ ಉದ್ವೇಗವೂ ಇರಲಿಲ್ಲ. ಅವಳು ನಡೆದು ಬಂದ ದಾರಿ ಸಹನೆಯನ್ನು ಅರೆದು ಕುಡಿಸಿತ್ತು. ನನಗೋ ಈಗ ಇಪ್ಪತ್ತರ ಹಸಿ ಬಿಸಿ ಹರೆಯ.
“ಎಂಥ ಕ್ರೂರಿ ಮನುಷ್ಯ ಅಲ್ವಾ? ಮತ್ತೂ ಕೊನೆಗಾಲದಲ್ಲಿ ಮಗಳನ್ನು ನೋಡಬೇಕು ಅಂತ ಹೇಳಿದ್ರಂತೆ. ಯಾವ ಮುಖ ಹೊತ್ತು ಕೊಂಡು ನಿಮ್ಮನ್ನು ನೋಡುತ್ತಿದ್ದರೋ…! ಅಷ್ಟೆಲ್ಲಾ ಮಾಡಿದ ಮೇಲೆ ಮತ್ತೆ ಹೀಗೊಂದು ಆಸೆ. ಅಲ್ಲಾ ಅಜ್ಜಿ, ನೀನಗಾದರೂ ಹೋಗಬೇಕು ಅಂತ ಅನ್ನಿಸಿತಾ?” ನಾನು ಅಸಹ್ಯ ಪಟ್ಟುಕೊಂಡು ಹೇಳಿದೆ.
“ಹ. ಅನ್ನಿಸಿತ್ತು, ಹೋಗಿದ್ದೆ” ಅಜ್ಜಿ ಹಾಗೆ ಹೇಳಿದಾಗ ನಾನು ಮೈ ಮೇಲೆ ಕಪ್ಪೆ ಜಿಗಿಯಿತೇನೋ ಎಂಬ ಹಾಗೆ ಬೆಚ್ಚಿಬಿದ್ದೆ.
“ಅಜ್ಜೀ….!” ಬಹಳ ಶ್ರಮಪಟ್ಟು ಸ್ವರ ಹೊರಡಿಸಿದ್ದೆ.
ನಾನೇ ಏನೋ ತಪ್ಪಾಗಿ ಕೇಳಿಸಿಕೊಂಡೆ ಅನ್ನಿಸಿತ್ತು. ಬವಳಿ ಬಂದ ಹಾಗನ್ನಿಸಿ ಹತ್ತಿರದಲ್ಲಿ ಇದ್ದ ಮುರಿದು ಬಿದ್ದ ಕಂಗಿನ ತುಂಡಿನ ಮೇಲೆ ಕುಳಿತೆ. ಅಜ್ಜಿಗೆ ನನ್ನ ಸ್ಥಿತಿ ಅರ್ಥವಾಗುತ್ತಿತ್ತು. ಅನುಭವದಿಂದ ಹಣ್ಣಾದ ದೇಹ ಮತ್ತು ಮನಸ್ಸು. ಅಜ್ಜಿ ನನ್ನ ಪಕ್ಕದಲ್ಲಿಯೇ ನನಗೊತ್ತಿಕೊಂಡು ಕುಳಿತುಕೊಂಡರು.
“ಹಾ…ಪುಟ್ಟೀ, ನಾನು ಹೋಗಿದ್ದೆ. ನಿನ್ನ ಅಪ್ಪನ ಹತ್ತಿರ ಅವರು ಹೇಳಿದ ಮಾತು ನನ್ನಲ್ಲಿಗೆ ತಲುಪಿತ್ತು. ಆ ಕ್ಷಣ ಹೋಗಬೇಕೆನ್ನಿಸಿತ್ತು. ಜೀವನ ಪೂರ್ತಿ ಗರ್ವಿಷ್ಠ, ಅಹಂಕಾರಿ, ಕ್ರೂರಿ ಅಪ್ಪನ ಪರಿತ್ಯಕ್ತ ಮಗಳು ಎಂಬ ಮೂದಲಿಕೆ ಹೊರಗಿನಿಂದಲೂ ಒಳಗಿನಿಂದಲೂ ಕೇಳಿ ಕೇಳಿ ಸಾಕಾಗಿತ್ತು. ಈಗ ನನಗೆ ಅಪ್ಪನನ್ನು ದೂರುವುದಕ್ಕೆ ಕಾರಣಗಳಿರಲಿಲ್ಲ. ನನ್ನ ಬಳಿ ಎಲ್ಲವೂ ಇತ್ತು. ಬೇಡುವ ಆವಶ್ಯಕತೆ ಇರಲಿಲ್ಲ. ಆದರೆ ಈ ಕ್ಷಣದ ಅಸಹಾಯಕತೆಯಲ್ಲಿ ಮಗಳನ್ನು ನೋಡಬೇಕು ಎನ್ನಿಸಿದ ಆ ಮನುಷ್ಯನ ಅನಿವಾರ್ಯತೆಯ ಬಗ್ಗೆ ತಿಳಿದುಕೊಳ್ಳಬೇಕೆನ್ನಿಸಿತ್ತು.” ಆಕೆ ನಿಧಾನವಾಗಿ ಏರಿಳಿತಗಳಿಲ್ಲದೇ ಮಾತನಾಡುತ್ತಿದ್ದಳು. ನಾನು ನನ್ನ ನಿಲುವಿನಿಂದ ಹೊರ ಬಂದಿರಲಿಲ್ಲ.
“ಮತ್ತೇನಿರುತ್ತೆ…? ಅವರಲ್ಲಿ ನಾಯಿಯಿಂದ ಕಡೆ ನೋಡುತ್ತಿದ್ದರು. ನೀನು, ಅಪ್ಪ ಎನ್ನುವ ಕರ್ಮಕ್ಕೆ ಚಾಕರಿಗೆ ನಿಲ್ಲಬಹುದು ಎನ್ನುವ ದುರಾಲೋಚನೆ ಇದ್ದಿರಬಹುದು.” ನಾನು ಹಲ್ಲು ಕಡಿದೆ.
“ಹಾಗೇನೋ ಇರಬಹುದೇನೋ ಅಂತ ನಾನು ಅಂದುಕೊಂಡೆ. ಏನಾದರೂ ಆಗಲಿ ಎಂಬ ಹಾಗೆ ಯಾರಿಗೂ ಗೊತ್ತಾಗದಂತೆ ಒಂದು ದಿನ ಹುಟ್ಟು ಕಾಣದೆ ಹೊಟ್ಟೆಯಲ್ಲಿದ್ದ ನನ್ನನ್ನು ಒದ್ದು ಹೊರಹಾಕಿದ ಆ ಮನೆಯ ಹೊಸಿಲು ತುಳಿದೆ. ಅಲ್ಲಿನವರು ನಿರಾಕರಿಸಲಿಲ್ಲ. ಯಾಕೆಂದರೆ ನನ್ನ ಅಪ್ಪನಿಂದ ನಾನು ಏನನ್ನು ಕಿತ್ತುಕೊಳ್ಳುವುದಕ್ಕೆ ಅವರು ಉಳಿಸಿರಲಿಲ್ಲ. ಮೂಳೆ ಚಕ್ಕಳವಾದ ದೇಹ ಮುದುಡಿ ಮಲಗಿತ್ತು. ಅಪ್ಪಾ.. ಎಂದು ಎಂದೂ ಕರೆಯದ ನಾನು ಮೂರು ಮಕ್ಕಳ ಅಮ್ಮನಾದ ನಂತರ ನನ್ನ ಅಪ್ಪನನ್ನು ಮೊದಲ ಸಲ ಅಪ್ಪಾ… ಎಂದು ಬಾಯಿ ಬಿಟ್ಟು ಕರೆದಿದ್ದೆ.
ಅವರ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ನನಗೆ ಪ್ರಶ್ನಿಸುದಕ್ಕೆ ಏನೂ ಇರಲಿಲ್ಲ. ನಾನು ಅವರ ಉತ್ತರಗಳಿಂದ ಎತ್ತರಕ್ಕೆ ಬೆಳೆದಿದ್ದೆ.
“ನೋಡಬೇಕು ಎಂದಿರಂತೆ!” ನಾನೇ ಮಾತನಾಡಿಸಿದೆ. ನನಗೆ ನನ್ನ ಮಾತಿನಲ್ಲಿ ಪ್ರೀತಿಯನ್ನು ತುರುಕುವುದಕ್ಕೆ ಆಗಲಿಲ್ಲ. ಅವರಿಗೆ ಅದರ ನಿರೀಕ್ಷೆ ಮೊದಲೇ ಇರಲಿಲ್ಲ.
“ಬಹಳ ನೋವು ಕೊಟ್ಟೆ, ಕ್ಷಮಿಸುವಂಥ ತಪ್ಪು ಅಲ್ಲ ನಾನು ಮಾಡಿದ್ದು. ಈ ಜನ್ಮದಲ್ಲಿ ನಿನ್ನ ಮುಖ ನೋಡಲಾದಿತು ಎಂಬ ಕನಸು ಕೂಡ ನಾನು ಇರಿಸಿದವನಲ್ಲ. ಭಾರ ತಡೆಯಲಾಗುತ್ತಿಲ್ಲ ಮಗಳೇ…” ನಾನು ಕರಗಿ ಹೋಗಿದ್ದೆ. ಆ ಮಗಳೇ ಎನ್ನುವ ಅಪ್ಪನ ಒಂದು ಕರೆಗಾಗಿ ನಾನು ಬಾಲ್ಯದಲ್ಲಿ ಅಮ್ಮನ ಜೀವ ಹಿಂಡಿದ್ದೆ. ಪಾಪ ಆಕೆ ಅಸಹಾಯಕತೆಯಿಂದ ಎಷ್ಟು ಅತ್ತಿರಬಹುದು. ಈವತ್ತು ನಾನು ಅನಾಯಾಸವಾಗಿ ಆ ಕರೆಯನ್ನು ಕೇಳಿಸಿಕೊಂಡರೂ ದೊಡ್ಡ ಮಟ್ಟಿನ ಸಂವೇದನೆ ನನ್ನಲ್ಲಿ ಹುಟ್ಟಲಿಲ್ಲ. ಅವರು ಮಾತು ಮುಂದುವರಿಸಿ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು.
“ಆದರೂ ಮಗಳೇ.., ಕ್ಷಮಿಸಿ ಬಿಡು, ಇದು ನಿನ್ನ ಕಾಲು ಎಂದು ತಿಳಿದಿರುವೆ. ನನ್ನ ತಪ್ಪುಗಳನ್ನು ಒಂದೊಂದೇ ಲೆಕ್ಕ ಹಾಕುತ್ತಾ ದಿನ ಎಣಿಸುತ್ತಿರುವೆ. ನಿನ್ನ ಮತ್ತು ನನ್ನ ಪತ್ನಿಯ ಶಾಪದ ತೂಕವಾದರೂ ಒಂದಿಷ್ಟು ಕಡಿಮೆಯಾಗಲಿ. ನಿನಗನ್ನಿಸಿರಬಹುದು, ನಾನು ಎಲ್ಲಾ ಕಳೆದುಕೊಂಡ ನಂತರ ನನಗೆ ನಿಮ್ಮ ನೆನಪಾಯಿತು ಎಂದು. ಇಲ್ಲ, ನನಗೆ ಮೊದಲೇ ಅರಿವಿಗೆ ಬಂದಿತ್ತು. ನಿನ್ನ ಅಮ್ಮನನ್ನು ಹೊರ ತಳ್ಳಿ ನಾನು ಕೈ ಹಿಡಿದು ಒಳ ತಂದವಳು ನಾನೆನಿಸಿದಷ್ಟು ಸರಳವಾಗಿರಲಿಲ್ಲ. ನನ್ನ ಎಲ್ಲಾ ಕೆಟ್ಟ ಮುಖದ ಪರಿಚಯ ಅವಳಿಗೆ ಆಗಿತ್ತು. ಅವಳಿಗೆ ನಾನು ಅನಿವಾರ್ಯವಾಗಿರಲಿಲ್ಲ. ನಾನು ಮಾಡಿದ ಅನ್ಯಾಯದ ಪಾಪ ನನ್ನನ್ನೇ ಸುತ್ತಿಕೊಳ್ಳುತ್ತಿತ್ತು. ಎಷ್ಟು ಅಸಹಾಯಕ ಹೆಣ್ಣು ಮಕ್ಕಳ ಮಾನ ಕಳೆದಿದ್ದೆ. ಎಷ್ಟು ಜನರ ಕೈ ಕಾಲು ಮುರಿದಿದ್ದೇ. ಹಲವು ಮನೆಗಳ ಸಂತೋಷದ ಬೆಳಕನ್ನು ಒಮ್ಮೆಗೆ ನಂದಿಸಿದ್ದೆ.” ಅವರೊಮ್ಮೆ ದೀರ್ಘ ಉಸಿರೆಳೆದುಕೊಂಡರು. ಮತ್ತೆ ಮುಂದುವರಿಸಿದರು,
ಅವಳು ಮೂರು ಮಕ್ಕಳಾದ ನಂತರ ಅಪರೇಷನ್ ಮಾಡಿಸಿಕೊಳ್ಳುವಂತೆ ನನ್ನನ್ನೇ ಒತ್ತಾಯಿಸಿದಳು. ಮತ್ತೆ ನಾನು ಅವಳ ಮಕ್ಕಳಿಗೆ ದಕ್ಕಬಹುದಾದ ಆಸ್ತಿಗೆ ಹೊಸ ಪಾಲುಗಾರರನ್ನು ಹುಟ್ಟಿಸುವ ಭೀತಿ. ಆದರೆ ಆನಂತರ ನನ್ನ ಜೊತೆಗಾರರೆಲ್ಲಾ ನನ್ನನ್ನು ನರ ಸತ್ತವನೆಂದು ಹಂಗಿಸಿದಾಗ ಒಳಗೇ ಕುಸಿದಿದ್ದೆ. ಆದರೆ ಮರು ವರ್ಷ ಅವಳು ಮತ್ತೆ ಬಸುರಾದಾಗ ಒಳಗಿನ ಕಿಡಿ ಧಗಧಗಿಸಿತು. ನಾನು ಅವಳನ್ನು ದೂರುವುದಿಲ್ಲ. ನನ್ನ ಯೋಗ್ಯತೆಯೇ ಅದಾಗಿರಬಹುದು, ಇಲ್ಲಾ ವೈದ್ಯರ ತಪ್ಪು ಆಗಿರಲೂಬಹುದು. ಆದರೆ ಆ ಮಗುವನ್ನು ನನಗೆ ಒಪ್ಪಿಕೊಳ್ಳಲೇ ಆಗಲಿಲ್ಲ. ಬೆಳೆದ ಹಾಗೆ ನಾನು ಮಕ್ಕಳ ಕೈಯಿಂದಲೇ ಹೊಡೆಸಿಕೊಂಡೆ. ನನ್ನ ಅಹಂ ಇಳಿಯಿತು. ಆಸ್ತಿ ಎಲ್ಲಾ ಅವರ ಹೆಸರಿಗೆ ಬರೆದಿರುವೆ. ನಿನಗೆ ಸ್ವಲ್ಪನೂ ನೀಡಲಿಲ್ಲ…” ಅವರು ನನ್ನ ಮುಖ ನೋಡಿದರು. ನಾನು ಅವರ, ನಾನು ಮೆಲುವಾಗಿ ನಕ್ಕು ಬಿಟ್ಟೆ. ಆ ನಗುವಿನಲ್ಲಿ ವ್ಯಂಗ್ಯ ಇರಲಿಲ್ಲ ಎಂಬುದು ನಾನು ಮಾತ್ರ ಸಮರ್ಥಿಸಿಕೊಳ್ಳಬಲ್ಲ ವಿಚಾರ ಎಂದು ನನಗೆ ಗೊತ್ತಿತ್ತು.
“ನನಗೊತ್ತು ನಿನಗೆ ನನ್ನ ಸೊತ್ತು ಬೇಡ ಎಂದು, ನನಗೂ ಅದನ್ನು ನಿನಗೆ ನೀಡುವುದಕ್ಕೆ ಮನಸ್ಸಿರಲಿಲ್ಲ. ನನ್ನ ಪಾಪದ ಗಳಿಕೆ ಅದು. ಯಾರ್ಯಾರದೋ ಶಾಪದ ಲೇಪದ ಸೊತ್ತು. ಅದು ನಿನಗೆ ಅಂಟುವುದು ಬೇಕಿರಲಿಲ್ಲ ನನಗೆ. ಅವನು ಬಂದಿದ್ದ ಪುಟ್ಟ ಕಂದಾ.., ಹೆಂಚಿಗೆ ಹಣ ಕೇಳುವುದಕ್ಕೆ, ಬೀಸಿ ಬೆನ್ನಿಗೆ ಹೊಡೆದಿದ್ದೆ. ಅವನು ನನ್ನೆದುರು ಬಿಡು, ಯಾರ ಹತ್ತಿರವೂ, ಯಾವತ್ತೂ ಕೈಚಾಚಿ ನಿಲ್ಲಬಾರದು, ಕೊಡುವ ಯೋಗ್ಯತೆ ನನಗೆ ಮೊದಲೇ ಇದ್ದರಲ್ವಾ. ಪಾಪ ನೋವಿನಿಂದ ಚೀರಿಕೊಂಡು ಓಡಿದ್ದ, ಎರಡು ದಿನ ನಾನು ಅನ್ನಾಹಾರ ಸ್ವೀಕರಿಸಲಿಲ್ಲ. ಅವನ ಉರಿ ತಗ್ಗಿತೋ ಇಲ್ಲವೋ ನನ್ನಲ್ಲಿ ಎದ್ದ ಉರಿ ತಗ್ಗಿದ್ದು ಅವನು ಮೊನ್ನೆ ಸ್ವಂತ ಕಾರಿನಲ್ಲಿ ನನ್ನದೇ ಮನೆಯಂಗಳದಲ್ಲಿ ಬಂದು ಇಳಿದು ನನ್ನೆದುರು ಕೂತು ನನಗೆ ಮುಖ ಕೊಟ್ಟು ಮಾತನಾಡಿದ ಕ್ಷಣ. ನಿನಗೆ ಏನು ಕೊಡುವ ಯೋಗ್ಯತೆಯೂ ನನಗಿಲ್ಲ. ನಾನು ತಿರಸ್ಕರಿಸಿದ ನನ್ನವಳು ಅಲ್ಲೆಲ್ಲೋ ಸಿಗುವಂತಾದರೆ ಅವಳ ಪಾದ ಹಿಡಿದು ಕ್ಷಮೆ ಬೇಡಿಕೊಳ್ಳುತ್ತೇನೆ” ಅವರು ಎರಡೂ ಕೈ ಮೇಲೆತ್ತಿದರು.
ಅವರೂ ಅಳುತ್ತಿದ್ದರು, ನಾನೂ.
“ಅಪ್ಪಾ.., ನಾನು ನಿಮ್ಮನ್ನು ನನ್ನ ಜೊತೆ ಕರೆದೊಯ್ಯಲಾ” ಕೈಹಿಡಿದು ಕೇಳಿದೆ. ಅವರು ಬೇಡ ಎನ್ನುವ ಹಾಗೆ ತಲೆ ಅಲ್ಲಾಡಿಸಿದರು. ಅಷ್ಟರಲ್ಲಿ ಅವರ ಮಗ ಒಂದು ಬಟ್ಟಲಿನಲ್ಲಿ ಅನ್ನ ತಂದಿಟ್ಟ.
“ಇದು ಎರಡು ತುತ್ತು ಕೊಡಿ, ನಾವು ಕೊಟ್ಟರೆ ತಿನ್ನುವುದಿಲ್ಲ. ಹಾಳಾದದ್ದು ಪ್ರಾಣವೂ ಹೋಗುವುದಿಲ್ಲ” ಆತ ಉತ್ತರಕ್ಕೆ ಕಾಯದೇ ಹೊರ ನಡೆದ. ಬಟ್ಟಲು ಯಾವುದೋ ಕಮಟು ವಾಸನೆ ಬರುತ್ತಿತ್ತು. ಯಾವುದೋ ಸಂಶಯ ಕಾಡಿತು. ಅಪ್ಪ ತುತ್ತು ಕೊಡಲು ಒತ್ತಾಯಿಸಿದಾಗ ಇಲ್ಲವೆನ್ನಲಾಗಲಿಲ್ಲ ನನಗೆ. ಅವರು ಪೂರ್ತಿ ಊಟ ಮಾಡಿದರು.
“ಅವರು ವಿಷವಿಕ್ಕಿ ಕೊಟ್ಟಾರು ಎಂಬ ಭಯ ನನಗೆ. ಹಾಗೆ ನನಗೆ ಬಿಡುಗಡೆ ಸಿಗಬಾರದು ನೋಡು. ನೀನು ಕೊಟ್ಟ ಅನ್ನದಲ್ಲಿ ವಿಷವಿದ್ದರೂ ಅದನ್ನು ಕೊಡುವ ಯೋಗ್ಯತೆ ನಿನಗೆ ಮತ್ತು ತಿನ್ನುವ ಯೋಗ್ಯತೆ ನನಗೆ ಇದೆ. ಹಾಗೆ ನೆಮ್ಮದಿಯಿಂದ ಉಂಡಿದ್ದೀನಿ” ನೋವಿನ ಆ ನಗು ನನ್ನ ಹೃದಯ ಹಿಂಡಿತು.
ನನಗೆ ಹೆಚ್ಚು ಹೊತ್ತು ಅಲ್ಲಿ ಇರುವ ಹಾಗಿರಲಿಲ್ಲ. ನಾನು ಎದ್ದು ಹೊರ ಬಂದೆ. ಅವರ ಕೊನೆಯ ಮಾತು ನನ್ನನ್ನು ಹಿಂಬಾಲಿಸಿತ್ತು.
“ನಾನೇನಾದರೂ ಪುಣ್ಯ ಮಾಡಿದ್ದರೆ, ಅದರ ಫಲ ನಿನ್ನ ಪಾಲಿಗಿರಲಿ. ನಿನ್ನ ಮಗನ ಮನಸ್ಸನ್ನು ಕಲ್ಲಾಗಿಸಿದ್ದೇನೆ. ಅವನು ಮಹಲುಗಳನ್ನು ಕಟ್ಟುತ್ತಾ ಹೋಗುತ್ತಾನೆ. ಅದನ್ನು ಬೀಳಿಸಲು ಅಸಾಧ್ಯ. ಹಸಿ ಮಣ್ಣಿನಲ್ಲಿ ಇಟ್ಟಿಗೆಯ ಚೂರುಗಳಿಂದ ಹೆಂಚಿನ ಮನೆಗಳನ್ನೂ ಕಟ್ಟಲಾಗದು. ಮಗಳೇ…, ಹೊರ ಹೋಗುವಾಗ ಬಟ್ಟೆ ಕೊಡವಿಕೋ, ನನ್ನ ಬೆನ್ನು ತುಂಬಾ ಹುಳುಗಳು ಹರಿದಾಡುತ್ತಿವೆ. ತಪ್ಪಿ ನಿನ್ನ ಮೈಗೆ ಹತ್ತಿರಬಹುದೇನೋ… ಮೈ ಚೆನ್ನಾಗಿ ತೊಳೆದುಕೋ…” ನಾನು ಸರಸರನೆ ಸೀರೆ ಕೊಡವಿ ನಡೆದೆ. ಯಾರಿಗೂ ಗೊತ್ತಾಗದಂತೆ ಮರಳಿ ಮನೆ ಸೇರಿಕೊಂಡೆ. ಆ ದಿನವೇ ಸಂಜೆ ಅವರ ಮರಣದ ಸುದ್ದಿ ಬಂತು. ವಿಷಾಹಾರದಿಂದ ಎಂದು ಯಾರೋ ಆಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೆ! ನನ್ನ ಕಲ್ಪನೆಯ ಕಟುಕ ಅಪ್ಪ ಮೊದಲೇ ಸತ್ತಿದ್ದರು. ಕೊನೆಗೆ ನನ್ನಲ್ಲಿ ಉಳಿದುಕೊಂಡದ್ದು ನನ್ನನ್ನು ನನ್ನ ಮಕ್ಕಳನ್ನು ಬಹುವಾಗಿ ಪ್ರೀತಿಸಿದ್ದ ಅಪ್ಪ” ಅಜ್ಜಿ ಮಾತು ನಿಲ್ಲಿಸಿದರು. ನಾವಿಬ್ಬರು ಮಾತಿನ ನಡುವೆ ಪರಿಸರವನ್ನೇ ಮರೆತಿದ್ದೆವು.
ಎಚ್ಚೆತ್ತು ನೋಡಿದರೆ ಅಪ್ಪ ಮುತ್ತಜ್ಜನ ಸಮಾಧಿಗೆ ಅಡ್ಡವಾಗಿ ಕಟ್ಟಿದ್ದ ಬೇಲಿ ಮುರಿಯುತ್ತಿದ್ದರು. ಈಗ ಸಮಾಧಿ ನಮ್ಮ ತೋಟದಲ್ಲಿತ್ತು. ಆನಂತರ ಅಪ್ಪನ ಬೆನ್ನಿನ ಗಾಯದ ಗುರುತನ್ನು ನಾನು ನೋಡಲೇ ಇಲ್ಲ.
–ರಾಜಶ್ರೀ ಟಿ. ರೈ ಪೆರ್ಲ