ಅಂದು ಮೂವತ್ತೊಂದನೇಯ ತಾರೀಖು, ಎಂದರೆ ಆ ಮಾಹೆಯ ಕೊನೆಯ ದಿನ. ಎಂದಿನಂತೆ ಮನೆಗೆಲಸ ಪೂರೈಸಿ ಹೊರಟು ನಿಂತ ನಿಂಗಿಯನ್ನು ಕಂಡ ಪಮ್ಮೀ “ಏಯ್. . . ನಿಂಗೀ. . . ನಾಳೆಯಿಂದ ನೀ ಕೆಲಸಕ್ಕೆ ಬರೋದು ಬೇಡ”ಎಂದಾಗ ಶಾಕ್ ಹೊಡೆಸಿಕೊಂಡವಳ ತರಹ ನಿಂತ ನಿಂಗಿ-“ಯಾಕ್ರವ್ವಾ. . ಬೇರೆ ಕಡೆ ಎಲ್ಲಾದ್ರೂ ಹೋಗ್ತಿದ್ದೀರಾ?, ನನ್ನ ಕಡೆಯಿಂದ ಏನಾದ್ರೂ ತೆಪ್ಪ ಆಗೈತಾ? ನಾನು ಉಸಾರಾಗೇ
ಅವ್ನೀ. . , ಎರಡೂ ಡೋಸ್ ವ್ಯಾಕ್ಸಿನೇಷನ್ ಕೂಡ ಹಾಕ್ಸೊಂಡಿದ್ದೀನಿ. . ಮತ್ಯಾಕ್ರವ್ವಾ. ?” ಹೀಗೆ ಒಂದರ ಹಿಂದೆ ಒಂದರಂತೆ ಪ್ರಶ್ನೆ ಹರಿ ಬಿಟ್ಟಳು. ಅವಳ ಎಲ್ಲ ಪ್ರಶ್ನೆಗಳನ್ನೂ ಸಾವಧಾನದಿಂದ ಆಲಿಸಿದ ಪಮ್ಮೀ-“ನೀ ತಿಳ್ದಾಂಗೆ ಅಂಥದ್ದೇನೂ ಇಲ್ಲ, ನಿನ್ನೆ ನಮ್ಮ ಯಜಮಾನ್ರು ಒಂದು ರೋಬೊಟ್ ಖರೀದಿ ಮಾಡ್ಕೊಂಡು ಬಂದಿದ್ದಾರೆ. . “ಎಂದು ಹೇಳುತ್ತಿದ್ದ ಪಮ್ಮೀ ಯನ್ನು ಅರ್ಧಕ್ಕೆ ತಡೆದ ನಿಂಗಿ”ಹಾಗೆಂದ್ರೆ ಏನ್ರವ್ವಾ. . ನನ್ನ ಕೆಲಸಕ್ಕೂ ಅದ್ಕು ಏನು ಸಂಬಂಧ. . ?”ಎಂಬ ಪ್ರಶ್ನೆ ಹಾಕಿದಾಗ ಪಮ್ಮೀ-“ನೋಡು ನಿಂಗೀ. . ಈ ರೋಬೊಟ್ ಅಂದ್ರೆ ಅದೊಂದು ಯಂತ್ರ ಮಾನವ ಇದ್ದಾಂಗೆ, ನಾವು ಏನೇ ಕೆಲಸಾ ಹೇಳಿದ್ರೂ ಅದು ಕಡ್ಮೆ ಟೈಂ ನಲ್ಲಿ ಅಚ್ಚುಕಟ್ಟಾಗಿ ಮಾಡಿ ಮುಗಸ್ತದೆ. ” ಎಂದು ಅವಳಿಗೆ ಅರ್ಥ ವಾಗುವ ಹಾಗೆ ವಿವರಿಸಿದಳು.
ಪುನ: ನಿಂಗಿ-“ಅದ್ಸರಿ ಕಣ್ರವ್ವಾ. . ಅದೆಲ್ಲಾ ಕಟ್ಕೊಂಡು ನನಗೇನೂ ಆಗಬೇಕಾಗಿಲ್ಲ. . ನೀವು ಕೆಲಸಕ್ಕೆ ಬರೋದು ಬ್ಯಾಡಾ ಅನ್ನೊ ಇಚಾರಾನಾ ಮೂರು ತಿಂಗ್ಳ ಮೊದ್ಲೇ ಹೇಳಬೇಕಾಗಿತ್ತಲ್ವಾ. . . “ಸಣ್ಣ ಬಾಂಬ್ ಸಿಡಿಸಿದಳು. ಅದೇಕೋ ನಿಂಗಿಯ ಮಾತಿನ ಧಾಟಿಯಲ್ಲಿ ಕಾನೂನಿನ ವಾಸನೆ ಗ್ರಹಿಸಿದ ಪಮ್ಮೀ ಇನ್ನು ಇವಳೊಂದಿಗೆ ವಾದಕ್ಕೆ ಇಳಿಯೋದು ಸೂಕ್ತ ಅಲ್ಲ ಎಂದರಿತು”ಬಂದೇ ಒಂದ್ನಿಮಿಷ. . ಇರು”ಎನ್ನುತ್ತ ರೂಮಿಗೆ ಹೋಗಿ ಆ ತಿಂಗಳ ಸಂಬಳದ ಜೊತೆಗೆ ಮತ್ತೆ ಮೂರು ತಿಂಗಳ ಸಂಬಳ ಸೇರಿಸಿ ತಂದು ಅವಳ ಕೈಗಿತ್ತು ಸಾಗ ಹಾಕುವಷ್ಟರಲ್ಲಿ ಹೈರಾಣಾಗಿದ್ದಳು.
ಸಂಜೆ ಸಮಯ ಕಚೇರಿಯಿಂದ ಮನೆಗೆ ಆಗಮಿಸಿದ ಪತಿ ಪರಮೇಶಿ, ಕಾಫೀ ತಿಂಡಿ ಪೂರೈಸಿ, ತಾನು ಖರೀದಿಸಿ ತಂದಿದ್ದ ರೋಬೊಟ್ ಸುತ್ತಲೂ ಭದ್ರವಾಗಿ ಬಿಗಿದಿದ್ದ ಪ್ಯಾಕ್ ಗಳನ್ನು ನಿಧಾನವಾಗಿ ಬಿಚ್ಚಿ, ಪಮ್ಮೀಗೆ ಹೂವು-ಗಂಧದಕಡ್ಡಿ ತಂದು ಪೂಜೆ ಮಾಡುವಂತೆ ಹೇಳಿದ. ಅವಳು ಆತ ಹೇಳಿದಂತೆ ಪೂಜೆ ಮಾಡಿ ಮುಗಿಸಿದಳು. ಆರಂಭದಲ್ಲಿ ಅದಕ್ಕೆ ಕಸ ಗುಡಿಸುವ ಕೆಲಸ ವಹಿಸುವುದು ಶೋಭೆ ಅಲ್ಲ ಎಂದರಿತವ ಅದಕ್ಕೆ ವೆರಾಂಡಾ ದಲ್ಲಿನ ಟೀ ಪಾಯ್ ಮೇಲೆ ಅಸ್ತವ್ಯಸ್ತ ವಾಗಿ ಬಿದ್ದಿದ್ದ ಮ್ಯಾಗ್ಜೀನ್-ದಿನ ಪತ್ರಿಕೆ ತರುವಂತೆ ಸೂಚಿಸಿ , ರಿಮೋಟ್ ನ ಸಂಬಂಧ ಪಟ್ಟ ಬಟನ್ ಒತ್ತಿದ. ಕ್ಷಣ ಮಾತ್ರದಲ್ಲಿ ಅದು ಹೋಗಿ ಅಲ್ಲಿದ್ದ ಎಲ್ಲಾ ಮ್ಯಾಗ್ಜಿನ್-ಪೇಪರ್ ಗಳನ್ನು ಅಂದವಾಗಿ ಜೋಡಿಸಿ ತಂದು ಆತನೆದುರು ಇಟ್ಟಿತು. ಅದನ್ನು ನೋಡುತ್ತಿದ್ದ ಪಮ್ಮೀ-“ವಾರೇವಾ. . . “ಎಂದು ಕಣ್ಣರಳಿಸಿ ಚಪ್ಪಾಳೆ ತಟ್ಟುತ ಸಂತೋಷ ವ್ಯಕ್ತಪಡಿಸಿದಳು. ಅವಳಿಗಂತೂ ಖುಷಿಯೋ ಖುಷಿ, ಏಕೆಂದರೆ ಆಕೆ ಮಾಡುವ ಮನೆಗೆಲಸಗಳಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿತ್ತು.
ಹೀಗೆ ಸತತವಾಗಿ ಎರಡು ಮೂರು ದಿನಗಳಲ್ಲಿ ಆ ರೋಬೊಟ್ ಮನೆ ಸ್ವಚ್ಛಗೊಳಿಸುವುದು, ಪಾತ್ರೆ-ಪರಡೆಗಳನ್ನು ಲಕ-ಲಕ ಹೊಳೆಯುವಂತೆ ತೊಳೆದು ಅವುಗಳನ್ನು ಸ್ಟ್ಯಾಂಡ್ ನಲ್ಲಿ ನೀಟಾಗಿ ಜೋಡಿಸುವುದು, ಒಗೆದು ಒಣ ಹಾಕಿದ ಬಟ್ಟೆಗಳನ್ನು ಮಡಿಸಿ ಆಯಾ ಬೀರುವಿನಲ್ಲಿ ಇಡುವುದು ಮಾಡುತ್ತ ಪರಮೇಶಿಯ ಮನೆಯ ಲುಕ್ಕೇ ಬದಲಾಯಿಸಿತು. ಪಮ್ಮೀಗಂತೂ ಈ ವಿಷಯ ಆಸುಪಾಸಿನ, ಎದುರು ಮನೆಯಲ್ಲಿದ್ದ ತನ್ನ ಗೆಳತಿಯರಿಗೆ ತಿಳಿಸಿ ಸಂಭ್ರಮಿಸುವ ತುಡಿತ ಹೆಚ್ಚಾಯಿತು. ಮರುದಿನ ತನ್ನ ಪತಿರಾಯ ಕಚೇರಿಗೆ ತೆರಳಿದ ಬಳಿಕ ಹತ್ತಿರದ ಮನೆಯ ಗೆಳತಿಯರಿಗೆಲ್ಲ ಫೋನಾಯಿಸಿ ತನ್ನ ಮನೆಗೆ ಬಂದು ನೋಡಿ ಹೋಗುವಂತೆ ತಿಳಿಸಿದಳು. ಹೊಸ ವಿಚಾರ, ಹೊಸ, ಪ್ರಯೋಗ ನೋಡುವ ಕುತೂಹಲ ಹೊತ್ತು ಆಕೆಯ ಗೆಳತಿಯರು ಸರಿಯಾದ ಸಮಯಕ್ಕೆ ಬಂದಿಳಿದು ಅಡುಗೆ ಕೋಣೆಯಲ್ಲಿ ಜಮಾಯಿಸಿದರು. ಇಕ್ಕಟ್ಟಾದ ಜಾಗದಲ್ಲಿ ಒಬ್ಬರಿಗೊಬ್ಬರು ಅಂಟಿ ನಿಂತು ಬೆರಗು ಕಣ್ಣುಗಳಿಂದ ಬೇಸಿನ್ ಕಡೆಗೆ ನೋಡತೊಡಗಿದರು. ಬೇಸಿನ್ ಭರ್ತಿ ಪಾತ್ರೆ, ಪ್ಲೇಟು, ಊಟದ ತಟ್ಟೆ, ಕಾಫೀ-ಟೀ ಕುಡಿದ ಗ್ಲಾಸುಗಳಿಂದ ತುಂಬಿ ತುಳುಕಾಡುತ್ತಿತ್ತು.
ಗೆಳತಿಯರಿಗೆ ಸರ್ಪ್ರೈಸ್ ಕೊಡುವ ಹುಮ್ಮಸ್ಸಿನೊಂದಿಗೆ ಪಮ್ಮೀ ರೋಬೊಟ್ ತಂದು ಬೆಸಿನ್ ಎದುರು ತಂದಿಟ್ಟಳು. ಅಮಿತಾನಂದ ಸ್ಥಿತಿಯಲ್ಲಿದ್ದಾಕೆ ರಿಮೋಟ್ ನಲ್ಲಿ ಯಾವುದೋ ಬಟನ್ ಬದಲಿ ಇನ್ಯಾವುದೋ ಬಟನ್ ಒತ್ತಿಬಿಟ್ಟಳು. ಪರಿಣಾಮ ಆ ರೋಬೊಟ್”ಗುಂಯ್”ಎನ್ನುವ ಶಬ್ದ ಮಾಡುತ್ತ ಬೇಸಿನ್ ಒಳಗಿದ್ದ ಪಾತ್ರೆ, ಪ್ಲೇಟು, ಗಾಜಿನ ಲೋಟ, ಊಟದ ತಟ್ಟೆ ಎಲ್ಲವನೂ ಎತ್ತಿ ಎತ್ತಿ ಕೆಳಗೆ ಬಿಸಾಕತೊಡಗಿತು. ನೀಟಾಗಿದ್ದ ಅಡುಗೆ ಮನೆ ಕ್ಷಣಾರ್ಧದಲ್ಲಿ ತಿಪ್ಪೆಗುಂಡಿ ಆದಂತಾಯಿತು. ಇದನ್ನು ಕಂಡ ಆಕೆಯ ಗೆಳತಿಯರು ಕೈಯಲ್ಲಿ ಜೀವ ಹಿಡಿದು ಓಡುವರಂತೆ ಲಗುಬಗೆಯಿಂದ ಎಲ್ಲ ಆಚೆ ಓಡೋಡಿ ಬಂದರು. ವಿಚಿತ್ರ ಎಂಬಂತೆ ಆ ಬೇಸಿನ್ ಖಾಲಿ ಯಾದರೂ ಸಹಿತ ಆ ರೋಬೊಟ್ ಎತ್ತಿ ಎತ್ತಿ ಹಾಕುವ ಆಕ್ಷನ್ ಮಾಡುತ್ತಲೇ ಇತ್ತು. ಕೆಲ ನಿಮಿಷಗಳ ಬಳಿಕ ಅದರೊಳಗಿಂದ “ಘುಡ್. . ಘುರ್. . ಘುರ್ ಎಂಬ ಶಬ್ದ ಬಂದು ಅದು ಸ್ಥಬ್ದ ವಾಯಿತು. “ಥೂ. . ಇದರಿಂದ ಇನ್ನೇನು ಅನಾಹುತ ಆಗುತ್ತೋ. . . “ಎಂದು ಗೊಣಗುತ್ತ ಪಮ್ಮೀ ಕಷ್ಟಪಟ್ಟು ಅಡುಗೆ ಮನೆಯಿಂದ ಸರಸರನೇ ಹೊರಗಡೆ ಕಾಂಪೌಂಡ್ ಬಳಿ ಓಡಿ ಬಂದು, ಪತಿಗೆ ಫೋನಾಯಿಸಿ ವಿಷಯ ತಿಳಿಸಿ ತಕ್ಷಣವೇ ಹೊರಟು ಬರುವಂತೆ ಫರ್ಮಾನ್ ಹೋರಡಿಸಿದಳು. ಗಾಬರಿಗೊಂಡ ಪರಮೇಶಿ ಅರ್ಧ ಘಂಟೆಯೊಳಗೆಲ್ಲ ಅದಕ್ಕೆ ಸಂಬಂಧಿಸಿದ ಟೆಕ್ನೀಶಿಯನ್ ಜೊತೆ ಬಂದು , ತಿಪ್ಪೆಗುಂಡಿ ಯಾಗಿದ್ದ ಅಡುಗೆ ಮನೆಯಿಂದ ಅದನ್ನು ಎತ್ತಿ ಕೊಂಡು ಹೊರಗೆ ತಂದು ಚೆಕ್ ಮಾಡಿಸಿದ ಆ ನಂತರ ಆತ ಒಳಗಡೆ ಪ್ರಮುಖ ಕನೆಕ್ಟಿಂಗ್ ವೈರ್ ಹುಟ್ಟಿದೆ, ಹಾಗೂ ಒಂದು ಮೊಟಾರ್ ಕೂಡ ಹಾಳಾಗಿದೆ, ಇದನ್ನು ನಮ್ಮ ವರ್ಕ್ ಶಾಪ್ ಗೆ ತೆಗೆದುಕೊಂಡು ಹೋಗಿ ಇನ್ನಷ್ಟು ಪರೀಕ್ಷೆ ಮಾಡಿ ತಿಳಿಸುವುದಾಗಿ ಹೇಳಿ ಬಾಡಿಗೆ ವ್ಯಾನ್ ನಲ್ಲಿ ಹಾಕಿಕೊಂಡು ಹೊರಟು ಹೋದ.
ಅವನು ಹೋದ ಬಳಿಕ ಅಡುಗೆ ಮನೆ ಯಲ್ಲಿ ರೋಬೊಟ್ ನಿಂದಾಗಿ ಆದ ರಾದ್ಧಾಂತ ಸರಿಪಡಿಸಲು ಪಮ್ಮೀ ಹಾಗೂ ಪರಮೇಶಿ ಸತತ ಮೂರು ಘಂಟೆ ಬೆವರು ಸುರಿಸಬೇಕಾಗಿ ಬಂದಿತು. ಆ ಸಂಜೆ ಟೆಕ್ನಿಷಿಯನ್ ನಿಂದ ಬಂದ ಕಾಲ್ ನಲ್ಲಿ ಆತ ಎಲ್ಲಾ ಪರೀಕ್ಷೆ ಮಾಡಿದೆ, ಅದರಲ್ಲಿನ ಎರಡು-ಮೂರು ಪಾರ್ಟಗಳನ್ನು ಕಂಪನಿಯಿದಲೇ ತರಿಸಿ ಹಾಕಬೇಕು ಅದಕ್ಕೆ ಕನಿಷ್ಠ ಮೂರು ವಾರಗಳಾದರೂ ಬೇಕಾಗಬಹುದು ಎಂದು ತಿಳಿಸಿದ್ದ. ಈ ವಿಷಯ ವನ್ನು ಪಮ್ಮೀಗೆ ತಿಳಿಸದಾಗ ಸುಸ್ತಾಗಿದ್ದ ಆಕೆ ಸರಣಿ ಪಟಾಕಿ ಸಿಡಿಸಿದಂತೆ ಪರಮೇಶಿ ಗೆ ಕ್ಲಾಸ್ ತೆಗೆದಕೊಳ್ಳುತ್ತ ಕೊನೆಯದಾಗಿ ಏರು ಸ್ವರದಲ್ಲಿ”ನೋಡಿ. . ದಯವಿಟ್ಟು ಆ ನಿಂಗಿಯ ಮನೆಗೆ ಹೋಗಿ ಆಕೆಯನ್ನು ಹೇಗಾದರೂ ಮಾಡಿ ಒಪ್ಪಿಸಿ, ನಾಳೆಯಿಂದ ಕೆಲಸಕ್ಕೆ ಬರುವಂತೆ ಮಾಡಿ. . “ಎಂದು ದುಂಬಾಲು ಬಿದ್ದಳು. ಅರ್ಧಾಂಗಿಯ ಮನಸ್ಥಿತಿ ಅರ್ಥಮಾಡಿಕೊಂಡ ಪರಮೇಶಿ ಅದೇ ಘಳಿಗೆಯಲ್ಲಿ ನಿಂಗಿಯ ಮನೆಗೆ ಸ್ಕೂಟರ್ ಏರಿ ಬಂದು ಗೋಗೆರೆಯುವ ರೀತಿಯಲ್ಲಿ ಆಕೆಗೆ ಎಲ್ಲವನ್ನೂ ವಿವರಿಸಿ, ನಾಳೆಯಿಂದಮನೆ ಕೆಲಸಕ್ಕೆ ಬರುವಂತೆ ಕೇಳಿದ. ಸ್ವಲ್ಪ ಹೊತ್ತು ಯೋಚನೆ ಮಾಡಿದ ನಿಂಗಿ , ಕೊನೆಗೆ ಗತ್ತಿನ ಸ್ವರದಲ್ಲಿ”ಆಯ್ತು ಸ್ವಾಮೀ ನೀವ್ಹೇಳಿದ್ರೀ ಅಂತ ಬರ್ತೀನಿ, ಆದ್ರೆ ಒಂದು ಕಂಡೀಷನ್ ಏನೆಂದ್ರೆ ಮೊದ್ಲಿಗಿಂತಲೂ ಎರಡು ಪಟ್ಟು ಹೆಚ್ಚು ಸಂಬಳಾ ಕೊಟ್ರೇ. . . . “ಎನ್ನುತ್ತಿದ್ದಂತೆ, ಪರಮೇಶಿ “ಆಯ್ತು-ಆಯ್ತು. . “ಎನ್ನುತ್ತ ಮನದಲ್ಲೇ “ಸಧ್ಯ ಇವಳು ಒಪ್ಪಿಕೊಂಡಳಲ್ಲ. . . “ಎಂದು ಸಮಾಧಾನ ಪಟ್ಟು, ನಾಳೆಯಿಂದ ನಿಂಗಿ ಕೆಲಸಕ್ಕೆ ಬರುವ ವಿಚಾರ ಸೆಲ್ ಫೋನ್ ಮೂಲಕ ಹೆಂಡ್ತಿಗೆ ಹೇಳಿ ನಿಟ್ಟುಸಿರು ಬಿಟ್ಟ.
-ಅರವಿಂದ. ಜಿ. ಜೋಷಿ.