ನಮ್ಮ ಶ್ರೀರಾಮಚಂದ್ರನಿಗೊಂದು ಹೆಣ್ಣು ಕೊಡಿ: ಪ್ರಶಾಂತ್ ಬೆಳತೂರು

ಹೆಗ್ಗಡದೇವನಕೋಟೆಯಿಂದ ೨೫ ಕಿ.ಮೀ. ದೂರದಲ್ಲಿರುವ ಬೆಟ್ಟದ ಕೆಳಗಿನ ಕೂಲ್ಯ‌ ಗ್ರಾಮದ ನಮ್ಮ ಈ ಶ್ರೀರಾಮಚಂದ್ರ ಓದಿದ್ದು ಎಸ್. ಎಸ್. ಎಲ್. ಸಿ.ಯವರೆಗೆ ಮಾತ್ರ.ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ ಇರದ ಶ್ರೀರಾಮಚಂದ್ರನಿಗೆ ದನ-ಕುರಿಗಳೆಂದರೆ, ಹೊಲದ ಕೆಲಸಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಅತೀವ ಪ್ರೀತಿ.ಪರಿಣಾಮವಾಗಿ ಓದುವುದರಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದ ಇವನಿಗೆ ಶಾಲೆಯೆಂದರೆ ರುಚಿಗೆ ಒಗ್ಗದ ಕಷಾಯ.ಸದಾ ಕೊನೆಯ ಬೆಂಚಿನ ಖಾಯಂ ವಿದ್ಯಾರ್ಥಿಯಾಗಿ ಮೇಷ್ಟ್ರುಗಳ ಕೆಂಗಣ್ಣಿಗೆ ಗುರಿಯಾಗಿ ಅವರು ಆಗಾಗ ಕೊಡುತ್ತಿದ್ದ ಬೆತ್ತದೇಟಿಂದ ಇವನ ಕೈಗಳು ಜಡ್ಡುಗಟ್ಟುವುದಿರಲಿ ಮೇಷ್ಟ್ರು ಕೈಗಳೇ ಸೋತು ಸುಣ್ಣವಾಗಿದ್ದವು. ಶೇ ೧೦೦ ರ ಫಲಿತಾಂಶವನ್ನು ಈ ಬಾರಿ ನಮ್ಮ ಶಾಲೆಯಿಂದ ಕೊಡಲೇಬೇಕೆಂದು ಹಾಗೂ ಆ ಮೂಲಕ ನಮ್ಮ ಈ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಹೊಸದಾಗಿ ಬಂದ ರೇವಣ್ಣ ಹೆಡ್ಮೇಷ್ಟ್ರು ಸಹಶಿಕ್ಷಕರನ್ನೆಲ್ಲಾ ಮೀಟಿಂಗ್ ಕರೆಸಿ ತಾಕೀತು ಮಾಡಿದಾಗ ಎಲ್ಲಾ ಮೇಷ್ಟ್ರುಗಳು ಹಾಗೂ ಆ ಶಾಲೆಯಲ್ಲಿದ್ದ ಏಕೈಕ ಮೇಡಮ್ಮು ಕೂಡ ಒಟ್ಟಾಗಿ ಒಕ್ಕೊರಲಿನಿಂದ ಈ ಶ್ರೀರಾಮಚಂದ್ರನೆಂಬ ಬೆಪ್ಪು ತಕ್ಕಡಿಗೆ ಏನೇನೂ ಕಲಿಸಲು ನಮ್ಮಿಂದಾಗುತ್ತಿಲ್ಲವೆಂದು ಅವನನ್ನು ಪಾಸು ಮಾಡಲು ಹರಿಹರ ಬ್ರಹ್ಮಾದಿಗಳಿಂದಲೂ ದುಸ್ಸಾಧ್ಯವೆಂದು ತಮ್ಮ ಅಸಹಾಯಕತೆಯನ್ನು ಎಳೆಎಳೆಯಾಗಿ ವಿವರಿಸುತ್ತಾ ; ಈ ಹಾಳು ಸರ್ಕಾರ ಬೇರೆ ೧- ೧೦ ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ ಮಾಡಿ ಅವನನ್ನು ೯ ನೇ ವರ್ಗದಲ್ಲಿ ಫೇಲ್ ಕೂಡ ಮಾಡಲಾಗದೆ ಎಸ್. ಎಸ್.ಎಲ್. ಸಿ. ಗೆ ಅವನನ್ನು ಬೇರೆ ದಾರಿಯಿಲ್ಲದೆ ದಾಟಿಸಿದ ದಾರುಣ ಕತೆಯನ್ನು ಶಪಿಸುತ್ತಾ ವಿವರವಾಗಿ ಬಿಚ್ಚಿಟ್ಟರು.

ಈ ಪವಾಡದ ಕತೆಯನ್ನು ಕೇಳಿ ಬೆಚ್ಚಿಬಿದ್ದ ಹೆಡ್ಮೇಷ್ಟ್ರು ರೇವಣ್ಣ ಅವರು ತಮ್ಮ ಛೇಂಬರಿಗೆ ಈ ಶ್ರೀರಾಮಚಂದ್ರನನ್ನು ಕರೆಸಿ ಗಂಭೀರ ದನಿಯಲ್ಲಿ ಸರಿಯಾಗಿ ಇನ್ಮುಂದೆ ಓದಬೇಕೆಂದು ಬೆದರಿಕೆ ಹಾಕಿ ನಾಲ್ಕೇಟೂ ಕೊಟ್ಟಿದ್ದೇ ಬಂತು ಅಂದಿನಿಂದ ಇವನಿಗೆ ಎಲ್ಲಾ ಮೇಷ್ಟ್ರುಗಳು ಶನಿಯಂತೆ ಕಾಟ ಕೊಡಲು ಶುರು ಮಾಡಿದರು. ಹತ್ತು ಸಲ ಬರೆ ಈ ಪದ್ಯವನ್ನು ಎಂದು ಒಬ್ಬ ಮೇಷ್ಟ್ರು ಹೇಳಿದರೆ, ಮತ್ತೊಬ್ಬ ಮೇಷ್ಟ್ರು ಈ ಲೆಕ್ಕದ ಸೂತ್ರವನ್ನು ಐವತ್ತು ಸಲ ಬರೆ ಎಂದು ದುಂಬಾಲು ಬಿದ್ದರು. ಎರಡಕ್ಷರವನ್ನು ಬರೆಯಲು ಮುಕ್ಕಾಲು ಗಂಟೆ ಮಾಡುತ್ತಿದ್ದ ಇವನಿಗೆ ಇವೆಲ್ಲವೂ ಅಪಥ್ಯವೆನಿಸಿ ಇವರೆಲ್ಲರಿಂದ ಮುಕ್ತಿ ಹೊಂದುವ ದಾರಿ ಹುಡುಕತೊಡಗಿದ ಶ್ರೀರಾಮಚಂದ್ರನಿಗೆ ಒಂದು ದಿನ ಈ ಮೇಷ್ಟ್ರುಗಳ ‌ವಿಪರೀತ ಕಾಟದಿಂದ ರೋಸಿಹೋಗಿ ತನ್ನೆಲ್ಲಾ ಪುಸ್ತಕಗಳನ್ನು ಊರಿಗೆ ಹತ್ತಿರದಲ್ಲಿದ್ದ ಕಪಿಲೆಯ ಹೊಳೆಯಲ್ಲಿ ಎಸೆದು ಮೈಸೂರಿನ ಬಸ್ಸೇರಿ ಹೊರಟೇಬಿಟ್ಟ. ಇತ್ತ ಮುಸ್ಸಂಜೆಯಾದರೂ ಬರದೇ ಇದ್ದ ಮಗನಿಗಾಗಿ ಅವನವ್ವ ಕೂಲ್ಯದ ಬೀದಿ- ಬೀದಿಯೆಲ್ಲಾ ಸುತ್ತಿ ಸಾಕಾಗಿ ಬರಿಗಾಲಲ್ಲಿ ಬೆಳತೂರಿನವರೆಗೂ ಆಮೇಲೆ ಮಾದಾಪುರದವರೆಗೂ ಹುಡುಕಾಡಿ ಮಗನ ಸುಳಿವು ಸಿಗದೆ ಹತಾಶಳಾಗಿ ಕೂತಿರುವಾಗ ಮಗನೊಂದಿಗಿನ ಓರಿಗೆಯ ಗೆಳೆಯರು ಇವಳಿಗೆ ಸಿಕ್ಕಿ ಹೀಗೆ ಅವನು ಕಾಣದಿರುವುದಕ್ಕೆ ಆ ಶಾಲೆಯ ಮೇಷ್ಟ್ರುಗಳೇ ಕಾರಣವೆಂದು, ನಿತ್ಯ ಅವನಿಗೆ ಅದು ಬರೆದಿಲ್ಲ ಇದು ಬರೆದಿಲ್ಲವೆಂದು ಒಂದಲ್ಲ ಒಂದು ಕಾರಣಕ್ಕೆ ಏಟು ಕೊಡುತ್ತಿದ್ದರಿಂದಲೇ ಅವನು ಈ ರೀತಿಯಾಗಿ ಮಾಡಿರಬಹುದೆಂಬುದನ್ನು ಕೇಳಿದಾಗ ಹೌಹಾರಿದ ಅವಳು ಮರುದಿನ ಬೆಳಗ್ಗೆ ಏಕಾಏಕಿ ಶಾಲೆಗೆ ನುಗ್ಗಿ ಹೆಡ್ಮೇಷ್ಟ್ರು ರೇವಣ್ಣನಿಂದ ಹಿಡಿದು ಎಲ್ಲ ಮೇಷ್ಟ್ರುಗಳ ಗ್ರಾಚಾರ ಬಿಡಿಸಿ ಅವರ ಜಂಘಾಬಲವೇ ಹುದುಗಿ ಹೋಗುವಂತೆ ಬಾಯಿಗೆ ಬಂದಂತೆಲ್ಲಾ ಬೈದು ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದ್ದಳು.

ಆಮೇಲೆ ಯಾರೋ ನಾಲ್ಕಾರು ಜನ ಊರಿನ ಮುಖ್ಯಸ್ಥರು ಮಧ್ಯೆ ಪ್ರವೇಶಿಸಿ ಈ ಅಚಾತುರ್ಯವಾಗಿ ಘಟಿಸಿದ ಪ್ರಕರಣವನ್ನು ಕುರಿತಂತೆ ಒಂದೆರಡು ಸಮಾಧಾನದ ಮಾತುಗಳನ್ನು ಆಡಿದ ಮೇಲೆ ಧೈರ್ಯ ತಂದುಕೊಂಡ ಅವಳು ಮೇಷ್ಟ್ರುಗಳು ಮತ್ತು ನಾಲ್ಕಾರು ಜನ ಗ್ರಾಮದ ಮುಖ್ಯಸ್ಥರೊಂದಿಗೆ ಹೆಗ್ಗಡದೇವನಕೋಟೆಯ ಪೊಲೀಸ್ ಸ್ಟೇಷನ್ನಿನವರೆಗೂ ಹೋಗಿ ಕಾಣೆಯಾಗಿರುವ ಮಗನ ಕುರಿತು ದೂರೊಂದನ್ನು ನೀಡಲು ಒಪ್ಪಿದಳು. ಇದಾದ ಹದಿನೈದು ದಿನಕ್ಕೆ ಹತ್ತಿರದ ಸಂಬಂಧಿಕರೊಬ್ಬರು ಮೈಸೂರಿನ ಒಂಟಿಕೊಪ್ಪಲಿನ ಬೇಕರಿಯೊಂದರಲ್ಲಿ ಶ್ರೀರಾಮಚಂದ್ರ ಕೆಲಸ ಮಾಡುತ್ತಿರುವುದಾಗಿ ಪತ್ತೆಹಚ್ಚಿ ಅವನನ್ನು ಮತ್ತೆ ಮನೆಗೆ ಕರೆತರಲಾಯಿತು. ಅಂದಿನಿಂದ ತಮಗಿದ್ದ ಈ ಏಕೈಕ ಮಗನಿಗೆ ಮತ್ತೆ ಶಾಲೆಗೆ ಹೋಗುವಂತೆ ಇತ್ತ ಮನೆಯವರು ಕೂಡ ಮನದಲ್ಲಿ ಅಳುಕು ಮೂಡಿ ಬಲವಂತ ಮಾಡಲು ಹೋಗಲಿಲ್ಲ .ಅತ್ತ ಇವನು ಮಾಡಿ ಹೋದ ಘನಕಾರ್ಯದಿಂದ ತಮಗಾದ ಮೇಲಿನವರ ಕಿರುಕುಳದಿಂದ ಅವನ ತಾಯಿಯಿಂದ ಆದ ಅಪಮಾನದ ಮಾತುಗಳಿಂದ ಮೇಷ್ಟ್ರುಗಳು ಕೂಡ ಇವನನ್ನು ಮತ್ತೆ ಶಾಲೆಗೆ ಕರೆತರುವ ಮನಸು ಮಾಡದೆ ನಿರ್ಲಕ್ಷ್ಯ ವಹಿಸಿದ ಏಕಮೇವ ಕಾರಣದಿಂದಾಗಿ ನಮ್ಮ ಶ್ರೀರಾಮಚಂದ್ರ ಎಸ್.ಎಸ್.ಎಲ್. ಸಿ.ಯ ಓದನ್ನು ಅರ್ಧಕ್ಕೆ ತಿಲಾಂಜಲಿ ಹಾಡಿ ಓದುವ ಗೋಜಲಿನಿಂದ ಪಾರಾದದ್ದು ಅವನ ಹಳೆಯ ಕತೆ.

ಈಗ ಶ್ರೀರಾಮಚಂದ್ರನೆಂದರೆ ಹೆಗ್ಗಡದೇವನಕೋಟೆಯ ತಾಲ್ಲೂಕಿನಾದ್ಯಂತ ಮಾದರಿ ರೈತನೆಂದು ಹೆಸರುವಾಸಿಯಾಗಿದ್ದಾನೆ. ಓದುವುದನ್ನು ನಿಲ್ಲಿಸಿದ ಮೇಲೆ ಅಪ್ಪನ ಬೇಜವಾಬ್ದಾರಿಯಿಂದ, ಅವನು ಅಂಟಿಸಿಕೊಂಡಿದ್ದ ಕುಡಿತದ ಚಟದಿಂದ, ಬೀಳುಬಿದ್ದಿದ್ದ ನಾಲ್ಕು ಎಕರೆಯ ಹೊಲವನ್ನು ತುಂಬಾ ಆಸ್ಥೆಯಿಂದ ಹಸನು ಮಾಡಿ ಅಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಶುರು ಮಾಡಿದ ಇವನಿಗೆ ಮೊದಮೊದಲು ಅಷ್ಟು ಲಾಭವಾಗದಿದ್ದರೂ ಆ ನಂತರ ಪರಿಚಯವಾದ ಮಾದಾಪುರದ ಟಿ.ಎಫ್.ಸಿ.ಎಂ.ಎಸ್. ಅಧ್ಯಕ್ಷರಿಂದ ಸಾವಯವ ಕೃಷಿಯ ಬಗೆಗೆ ಒಂದಷ್ಟು ಮಾಹಿತಿಗಳನ್ನು ಕಲೆಹಾಕಿಕೊಂಡು ಸುತ್ತಮುತ್ತಲಿನ ರೈತರು ಬೆಳೆಯುತ್ತಿದ್ದ ಬೆಳೆಗೆ ಪರ್ಯಾಯವಾಗಿ ತನಗಿದ್ದ ನಾಲ್ಕೆ ಎಕರೆಯಲ್ಲಿ ಅಡಿಕೆ,ತೆಂಗು ಬಾಳೆ,ವಿವಿಧ ರೀತಿಯ ಪುಷ್ಪಗಳು, ಹಣ್ಣು ತರಕಾರಿಗಳನ್ನು ಬೆಳೆದು ಕೈ ತುಂಬಾ ಹಣ ಸಂಪಾದನೆ ಮಾಡಿ ಕೇವಲ ಐದೇ ವರ್ಷಗಳಲ್ಲಿ ಮಾದರಿ ರೈತನಾಗಿ ಹೊರಹೊಮ್ಮಿದ.ಅಪ್ಪ ತನ್ನ ಕುಡಿತದ ಚಟಕ್ಕೆ ಜೂಜಿಗೆ ಮಾಡಿದ್ದ ಸಾಲ ತೀರಿಸಿ ಅವನನ್ನು ಹದ್ದುಬಸ್ತಿನಲ್ಲಿಟ್ಟ.ಎಂದೋ ತನ್ನ ಮುತ್ತಾತನ ಕಾಲದಲ್ಲಿ ಕಟ್ಟಿ ಶಿಥಿಲಾವಸ್ಥೆಯಲ್ಲಿದ್ದ ತಮ್ಮ ವಾಸದ ಮನೆಯನ್ನು ಕೆಡವಿ ವಿಶಾಲವಾದ ಎರಡಂತಸ್ತಿನ ಮನೆ ಕಟ್ಟಿಸಿ ಜನ ದಂಗಾಗುವಂತೆ ಮಾಡಿದ.ಒಮ್ಮೆ ಇವನ ಸಾಧನೆಯನ್ನು ಕೇಳಿ ಮರುಳಾದ ಸರಗೂರಿನ ವಿವೇಕಾನಂದ ಯೂತ್ ಮೂವ್ಮೆಂಟಿನ ಕೃಷಿ ವಿಭಾಗದ ಕಾರ್ಯಕಾರಿ ನಿರ್ವಾಹಕರೊಬ್ಬರು ಇವನ ಕೃಷಿಯ ಪ್ರಗತಿಪರತೆಯನ್ನು ಸಾವಯವ ಮಾದರಿಯ ಯಶೋಗಾಥೆಯನ್ನು ಅವರಿವರಿಂದ ಕೇಳಿ ಕುತೂಹಲಗೊಂಡು ಇವನನ್ನು ಖುದ್ದು ಭೇಟಿ ಮಾಡಿ ಕೊನೆಗೆ ಇವನೊಂದಿಗೆ ರೇಡಿಯೋ ಸಂದರ್ಶನವನ್ನು ತಮ್ಮ ಸರಗೂರಿನ ಸ್ಥಳೀಯ ರೇಡಿಯೋ ನಿಲಯದಲ್ಲಿ ಏರ್ಪಡಿಸಿ ಸನ್ಮಾನಿಸಿದ್ದರು.

ಅಷ್ಟೇ ಅಲ್ಲ ಮಗದೊಮ್ಮೆ ಮೈಸೂರಿನ ಆಕಾಶವಾಣಿಯವರು ಕೂಡ ಇವನು ಬೆಳೆದ ಬೆಳೆಗಳ ವಿವರ,ಇವನು ಕೈಗೊಂಡ ಸಾವಯವ ಕೃಷಿ ವಿಧಾನದಲ್ಲಿ ಬೆಳೆಯ ಹಾರೈಕೆಗಳು, ಆ ನಂತರ ಇವನು ಆರಂಭಿಸಿದ ಹೈನುಗಾರಿಕೆಯ ಒಂದು ವಿಚಾರ ಸಂಕಿರಣವನ್ನು ಅರ್ಧಗಂಟೆಯ ಒಂದು ಎಪಿಸೋಡ್ ಮಾಡಿ ಪ್ರಸಾರ ಮಾಡಿದ್ದರು. ಇಷ್ಟೆಲ್ಲಾ ಖ್ಯಾತಿಗೊಂಡ ಮೇಲೆ ತಾಲ್ಲೂಕಿನ ಕೃಷಿ ಅಧಿಕಾರಿಗಳಿಂದ ಇವನಿಗೊಂದು ದೊಡ್ಡ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇವೆಲ್ಲದರ ನಡುವೆ ಶ್ರೀರಾಮಚಂದ್ರ ಎಷ್ಟು ಬುಧ್ಧಿವಂತನಾಗಿದ್ದರೆ ತನಗೆ ಬಂದ ಲಾಭದ ಹಣವನ್ನೆಲ್ಲಾ ಯಾವುದಕ್ಕೂ ಅನವಶ್ಯಕವಾಗಿ ವ್ಯಯ ಮಾಡದೆ ಬ್ಯಾಂಕಿನಲ್ಲಿ ಕೂಡಿಸಿಟ್ಟಿದ್ದ. ತನಗಿರುವ ಒಬ್ಬಳೇ ತಂಗಿಯನ್ನು ತಮ್ಮ ವಹಿವಾಟಿಗೆ ತಕ್ಕನಾದ ಒಬ್ಬ ಸರ್ಕಾರಿ ಪ್ರಥಮ ದರ್ಜೆ ನೌಕರನಿಗೆ ಅದ್ದೂರಿಯಾಗಿ ವರೋಪಾಚಾರಗಳನ್ನು ನೀಡಿ ಸಿದ್ದೇಗೌಡರ ದೊಡ್ಡ ಚೌಲ್ಟ್ರಿಯಲ್ಲಿ ವಿವಾಹ ಮಾಡಿ ಊರ ಜನರಿಂದ ಸೈ ಎನಿಸಿಕೊಂಡಿದ್ದ. ಊರಿನ ಮನೆ-ಮನೆಯಲ್ಲೂ ಶ್ರೀರಾಮಚಂದ್ರನದೇ ಗುಣಗಾನ. ಮಗನಿದ್ದರೆ ಅವನಂತಹ ಮಗನಿರಬೇಕು. ಅಪ್ಪ ಕುಡುಕನಾದರೂ ಮನೆಯ ಜವಾಬ್ದಾರಿಯನ್ನೆಲ್ಲಾ ತಾನೇ ಹೊತ್ತು ಸ್ವಂತ ಖರ್ಚಿನಲ್ಲಿ ತಂಗಿಯ ವೈಭೋಗದ ಮದುವೆಯನ್ನು ಈ ಕಾಲದ ಯಾವ ಅಣ್ಣ ತಾನೇ ಮಾಡಿಯಾನು? ಎಂಬ ಹೊಗಳಿಕೆಯ ಮಾತುಗಳಿಂದಾಗಿ ಇಡೀ ಊರೇ ಶ್ರೀರಾಮಚಂದ್ರನನ್ನು ಕೊಂಡಾಡುವ ಪರ್ವ ಕಾಲವೆಂದರೂ ಅದು ತಪ್ಪಾಗಲಾರದು.

ತಾನಾಯ್ತು ತನ್ನ ಹೊಲಮನೆಯ ಕೆಲಸವಾಯಿತು ಎಂಬುದಕ್ಕಷ್ಟೇ ಜೀವಿಸಿದ್ದ ಶ್ರೀರಾಮಚಂದ್ರನಿಗೆ ಯುಗಾದಿ ಹಬ್ಬಕ್ಕೆಂದು ಬಂದ ತನ್ನ ಮನೆಯ ಸಂಬಂಧಿಕರು, ಮೇಲಾಗಿ ತನ್ನ ತಂಗಿ ಮತ್ತು ತಂಗಿಯ ಗಂಡ ಹೀಗೆ ಬಂಧುಬಳಗವೆಲ್ಲಾ ಒಂದೆಡೆ ಕೂಡಿ ಹಬ್ಬದ ಸಂಭ್ರಮದಲ್ಲಿರುವಾಗ ಪ್ರೀತಿಯ ತಂಗಿಯು ತನ್ನ ಬಳಗದವರೆದುರು ಅಣ್ಣನಿಗೊಂದು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆ ಮಾಡಬೇಕೆಂದು, ಅವನಿಗೂ ಮೂವತ್ತರ ಪ್ರಾಯವೆಂದು ಪ್ರಸ್ತಾಪಿಸಿದ ಮೇಲೆ ಇವನು ಎಲ್ಲರೆದುರು ಹ್ಞೂಂ ಎಂದು ತಲೆಯಾಡಿಸಿ ಮುಗುಳ್ನಗುತ್ತಾ ಮಲಗಲು ತನ್ನ ರೂಮಿಗೆ ಬಂದ ಇವನ ಕಣ್ಣುಗಳಿಗೆ ಆ ರಾತ್ರಿ ಯಾಕೋ ಸರಿಯಾಗಿ ನಿದ್ದೆ ಹತ್ತಲಿಲ್ಲ. ಏನೇನೋ ಬಗೆ ಬಗೆಯ ಆಲೋಚನೆಗಳು ತಲೆಯಲ್ಲಿ ಸುಳಿದಾಡತೊಡಗಿದವು. ಮಾರನೇದಿನ ಬೆಳಿಗ್ಗೆ ಎದ್ದವನೇ ಕನ್ನಡಿಯಲ್ಲಿ ತನ್ನನ್ನು ತಾನೇ ಎವೆಮುಚ್ಚದಂತೆ ನೋಡಿದ. ಪ್ರಾಯಶಃ ಅವನು ಕನ್ನಡಿಯನ್ನು ನೋಡಿ ಹನ್ನೆರಡು ವರ್ಷಗಳೇ ಕಳೆದು ಹೋಗಿದ್ದವು. ಸುಕ್ಕುಗಟ್ಟಿದ ಮುಖದಿಂದಾಗಿ ವಿರಳಗೊಂಡ ಕೂದಲುಗಳಿಂದಾಗಿ ಈ ಮೂವತ್ತರ ಪ್ರಾಯದಲ್ಲಿದ್ದರು ಅದಕ್ಕಿಂತಲೂ ತುಸು ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ ತನ್ನ ದೇಹವನ್ನು ಕಂಡು ಕಂಗಾಲಾದ. ಬಿಸಿಲುಮಳೆಯೆನ್ನದೆ,ಚಳಿಯೆನ್ನದೆ, ಹಗಲೆನ್ನದೆ, ಇರುಳೆನ್ನದೆ ಹೊಲದ ಕೆಲಸಗಳನ್ನು ಮಾಡಿ ಸೊರಗಿ ಹೋಗಿದ್ದಕ್ಕೆ ವಿಷಾದದ ಕಣ್ಣೀರು ತುಂಬಿಕೊಂಡ.ಹೊಲದ ದುಡಿಮೆ ಅವನು ಬಯಸಿದ್ದೇ ಆದರೂ ಅದು ತನ್ನ ಇಡೀ ಯೌವ್ವನವನ್ನು ಹಿಂಡಿ ಹಿಪ್ಪೆ ಮಾಡಿ ಹೀಗೆ ವಯಸ್ಸಾದವನಂತೆ ಕಾಣುತ್ತಿದ್ದಕ್ಕೆ ಒಂದಷ್ಟು ಹೊತ್ತು ಬೇಸರ ಮಾಡಿಕೊಂಡ.ಆಮೇಲೆ ತಾನು ತುಸುವಾದರೂ ಬಿಡುವು ಮಾಡಿಕೊಂಡು ತಲೆಗೆ ಹರಳೆಣ್ಣೆಯನ್ನೋ, ಕೊಬ್ಬರಿ ಎಣ್ಣೆಯನ್ನೋ ವಾರಕ್ಕೊಮ್ಮೆ ಹಚ್ಚಿದ್ದರೆ ಇಷ್ಟು ತಲೆಗೂದಲು ಉದುರಿ ಹೋಗುತ್ತಿರಲಿಲ್ಲ.

ನನ್ನಪ್ಪನಿಗೆ ಈ ವಯಸ್ಸಿನಲ್ಲೂ ಕೂದಲು ಅಷ್ಟು ಹುಲುಸಾಗಿರುವಾಗ ತನಗೇಕೆ ಹೀಗಾಯಿತು ಎಂದು ಬಹಳ ಖೇದಗೊಂಡ. ಕಡೇಪಕ್ಷ ವಾರಕ್ಕೊಮ್ಮೆ ನಾನು ತಲೆಗಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಈ ಕೆಂಪು ಸಾಬೂನಿನ ಬದಲಾಗಿ ಕೂದಲು ನವಿರಾಗುವ ಒಂದು ಶ್ಯಾಂಪನ್ನಾದರೂ ಹಚ್ಚಿಕೊಂಡಿದ್ದರೆ ಒಳ್ಳೆಯದಿತ್ತೇನೋ ಎಂದು ಕೂಡ ಅನಿಸತೊಡಗಿ ಮೌನವಾದ. ಕೊನೆಗೆ ಬೇಸರದಿಂದ ಒಲ್ಲದ ಮನಸ್ಸಿನಲ್ಲಿ ಮೊದಲ ಬಾರಿಗೆ ತಾನು ಅತ್ಯಂತ ಪ್ರೀತಿಯಿಂದ ದುಡಿದು ಬೆವರು ಬಸಿದು ಹಸಿರಾಗಿಸಿದ ಹೊಲದ ಬೆಳೆಗಳನ್ನು ನೋಡುತ್ತಾ, ನಾನು ಹೀಗೆ ನಳನಳಿಸಿ ಅಂದವಾಗಿ ಕಾಣುವ ಹಸಿರಾದ ಹೊಲವಾಗಿದ್ದರೆ ಎಷ್ಟು ಚೆಂದವಿತ್ತು ಎಂದುಕೊಂಡ. ಆಮೇಲೆ ಯಾಕೋ ಈ ರೀತಿಯ ಯೋಚನೆಗಳು ಸರಿಯಿಲ್ಲವೆನಿಸಿ ಯಾವ ಹೆಣ್ಣಾದರೂ ನಾನು ಒಪ್ಪದಷ್ಟು ಕೆಟ್ಟದಾಗಿಲ್ಲ. ಏನು ಕಮ್ಮಿಯಾಗಿದೆ ನನಗೆ? ಹೆಚ್ಚೆಂದರೆ ಈಗಷ್ಟೇ ಮೂವತ್ತರ ಪ್ರಾಯ. ಮುಖ ಒಂದಷ್ಟು ಕಂಗೆಟ್ಟಿರಬಹುದು, ಕೂದಲು ಒಂದಷ್ಟು ವಿರಳಗೊಂಡಿರಬಹುದು ಅಷ್ಟೇ. ಅದನ್ನು ಬಿಟ್ಟರೆ ನನಗೇನು ಕಡಿಮೆ? ಸ್ವಂತ ದುಡಿಮೆಯಲ್ಲಿ ಎರಡಂತಸ್ತಿನ ಮನೆ ಕಟ್ಟಿದ್ದೇನೆ.ಸಾಲದ್ದಕ್ಕೆ ಇರುವ ಒಬ್ಬಳು ತಂಗಿಗೆ ಒಳ್ಳೆಯ ಸಂಬಂಧವನ್ನು ನೋಡಿ ನಾಲ್ಕು ಜನ ಮೆಚ್ಚುವಂತೆ ಅದ್ದೂರಿಯಾಗಿ ಮದುವೆ ಮಾಡಿದ್ದೇನೆ. ನಾಲ್ಕು ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಉಣ್ಣುವುದಕ್ಕೆ ಉಡುವುದಕ್ಕೆ ಏನು ಕೊರತೆಯಿಲ್ಲದೆ ನಿರುಮ್ಮಳ ಜೀವನ ಸಾಗಿಸುವಷ್ಟು ಹಣವಿರುವಾಗ ನನ್ನನೇಕೆ ಹೆಣ್ಣು ಒಪ್ಪದಿದ್ದರೆ ಎಂಬ ಅಳುಕು ಯೋಚನೆ ಮಾಡಬೇಕೆಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಮನೆಗೆ ಹಿಂದಿರುಗಿದ.

ಇದಾದ ಒಂದು ವಾರದ ನಂತರ ಶ್ರೀರಾಮಚಂದ್ರನ ಕನ್ಯಾನ್ವೇಷಣೆಯ ಪ್ರಸಂಗ ಶುರುವಾಯಿತು. ಮೊದಲು ತಮಗೆ ಹತ್ತಿರವಿದ್ದ ಸಂಬಂಧಿಕರೊಂದಿಗೆ ಹೆಗ್ಗಡದೇವನಕೋಟೆಯ ಸುತ್ತಮುತ್ತ ಇರುವ ಒಂದೆರಡು ಹಳ್ಳಿಗಳಿಗೆ ಹೋಗಿ ಬಂದ.ಹೋಗಿ ಬಂದ ಆ ಎರಡು ಕಡೆಯಲ್ಲೂ ಹುಡುಗ ಏನೋ ಬುಧ್ಧಿವಂತನೇ ಸಾಧಾರಣ ಎತ್ತರದ, ಕಪ್ಪಗಿನ ಮುಖಲಕ್ಷಣ ಹೊಂದಿದ್ದರೂ, ಅವನು ಕೊಂಚ ಓದಿದ್ದರೆ ಒಳ್ಳೆಯದಿತ್ತು. ನಮ್ಮ ಹುಡುಗಿ ಪಿ.ಯು.ಸಿ. ಓದಿದ್ದಾಳೆ ಆಗಾಗಿ ಅವಳು ” ಹುಡುಗ ಈ ಕಾಲದಲ್ಲಿ ಬರೀ ಎಸ್.ಎಸ್.ಎಲ್.ಸಿ. ಯೇ ?” ಸುತಾರಂ ನನಗೆ ಈ ಹುಡುಗ ಬೇಡವೇ ಬೇಡ ಎಂದು ಬಿಟ್ಟಳೆಂಬ ಹುಡುಗಿ ಮನೆಯವರ ಪ್ರತಿಕ್ರಿಯೆಗಳನ್ನು ಕೇಳಿ ಮಂಕಾದ ಶ್ರೀರಾಮಚಂದ್ರ ಹೆಣ್ಣಿಗಾಗಿ ಎರಡೇ ಎರಡು ಹಳ್ಳಿಗಳ ಸುತ್ತಿ ಬಂದಿದ್ದಕ್ಕೆ ಅವನ ಮನಸ್ಸೇಕೋ ತಾನು ಹೆಚ್ಚಿಗೆ ಓದಿಲ್ಲದರ ಕುರಿತು ಕೀಳರಿಮೆಯಿಂದ ಖಿನ್ನವಾಗಿ ತೊಡಗಿತು. ಆಮೇಲೆ ಇವನ ಚಿರಪರಿಚಿತ ಬಾಲ್ಯ ಸ್ನೇಹಿತನೊಬ್ಬ ದಾರಿಯಲ್ಲಿ ಅಕಸ್ಮಾತ್ ಸಿಕ್ಕಿ ಕುಶಲೋಪರಿ ವಿಚಾರಿಸುತ್ತಾ ಗೆಳೆಯ ಮದುವೆಯಾಗಲು ಹೆಣ್ಣನ್ನು ಹುಡುಕುತ್ತಿರುವ ವಿಚಾರ ಮಾತಿಗೆ ಸಿಕ್ಕಿ ತಾನು ಕೂಡ ಈ ರೀತಿ ಹೆಣ್ಣನ್ನು ನೋಡಿ ಮದುವೆಯಾಗಲು ಹರಸಾಹಸ ಪಟ್ಟ ಕತೆಯನ್ನು ಎಳೆಎಳೆಯಾಗಿ ಹೇಳತೊಡಗಿದ. ನೋಡೋ ಗೆಳೆಯ ನನಗೂ ಮೊದಮೊದಲಿಗೆ ಹೆಣ್ಣು ಕೊಡಲು ತಾನು ಹೆಚ್ಚಿಗೆ ಓದಿಲ್ಲವೆಂದು, ಹುಡುಗ ನೋಡಲು ಅಂದವಾಗಿಲ್ಲವೆಂದು ಕನಿಷ್ಠ ಒಂದಿಪ್ಪತ್ತು ಕಡೆ ತಿರಸ್ಕರಿಸಿಬಿಟ್ಟಿದ್ದರು.

ಆಮೇಲೆ ನಮ್ಮ ಸಂಬಂಧಿಕರೊಬ್ಬರು ಈ ಕಾಲದಲ್ಲಿ ಹೆಣ್ಣು ಪಡೆಯಬೇಕೆಂದರೆ ಒಂದಷ್ಟು ನಾಜೂಕು ಕಲಿಯಬೇಕೆಂದು, ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಕೊಳ್ಳುವ ಚಾಲಾಕಿತನವಿರಬೇಕೆಂಬ ಅವರ ಸತ್ಯ ದರ್ಶನದಿಂದ ನಾನು ದೂರದ ಗುಂಡ್ಲುಪೇಟೆಗೆ ಸೂಟು ಬೂಟು ತೊಟ್ಟು ಬಿ.ಎ. ಪದವೀಧರನೆಂದು, ಮೈಸೂರಿನ ವಿಕ್ರಾಂತ್ ಫ್ಯಾಕ್ಟರಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸಮಾಡುತ್ತಿರುವುದಾಗಿ ಸುಳ್ಳು ಹೇಳಿ ಸಂಬಂಧ ಕುದುರಿಸಿಕೊಂಡು ಮದುವೆಯಾದನೆಂಬ ಸಾಹಸಗಾಥೆಯನ್ನು ಯಾವ ಮುಜುಗರವೂ ಇಲ್ಲದೆ ಹೆಮ್ಮೆಯಿಂದ ಹೇಳಿ ಮುಗಿಸಿ; ಲೋ ನೀನು ಹೀಗೆ ಪೆಕರನ ಹಾಗೆ ಹಳೇಕಾಲದವರ ತರ ದೊಗಳೆ ಕರಿ ಪ್ಯಾಂಟು ಬಿಳಿ ಶರ್ಟು ಹಾಕಿಕೊಂಡು ತಿರುಗಿದರೆ ಈ ಜನ್ಮದಲ್ಲಿ ನಿನ್ನ ಮದುವೆ ಕನಸೆಂದು ಗೇಲಿ ಮಾಡಿ ನಕ್ಕ. ಆ ನಂತರ ಯಾವುದೋ ಕೆಲಸಕ್ಕೆ ತಡವಾಯಿತೆಂದು ಹೇಳಿ ಅಲ್ಲಿಂದ ನಿರ್ಗಮಿಸಿದ. ಬಳಿಕ ತುಂಬಾ ಹೊತ್ತು ಒಬ್ಬನೇ ಚಿಂತಾಕ್ರಾಂತನಾಗಿ ಕೂತ ಶ್ರೀರಾಮಚಂದ್ರನಿಗೆ ಅವನ ಮಾತಿನಲ್ಲಿ ಸತ್ಯವಿದೆ ಎನಿಸಿತು. ನಾನು ಹೀಗೆ ಈ ಕರಿಪ್ಯಾಂಟು ಮತ್ತು ಬಿಳಿ ಶರ್ಟು ಹಾಕಿ ಪೆಂಗನ ತರ ಹುಡುಗಿ ಮನೆಗೋದರೆ ಯಾವ ಹುಡುಗಿ ತಾನೇ ಒಪ್ಪಿಯಾಳು? ನಾನು ಇನ್ನಾದರೂ ಅವನು ಹೇಳಿದಂತೆ ಒಂದಷ್ಟು ನಾಜೂಕು ಕಲಿಯಬೇಕು ಸಾಧ್ಯವಾದರೆ ನನ್ನ ಈ ಪುಣ್ಯಕೋಟಿಯ ಬುದ್ಧಿಯನ್ನು ಬಿಟ್ಟು ಹುಡುಗಿಯ ಮನೆಯವರೆದುರು ಒಂದೆರೆಡು ಹಸಿ ಸುಳ್ಳುಗಳನ್ನು ರಾಜಾರೋಷವಾಗಿ ಹೇಳುವ ಧೈರ್ಯ ಮಾಡಬೇಕೆಂದು ಯೋಚಿಸಿದವನೇ ಹತ್ತಿರದ ಊರುಗಳಲ್ಲಾದರೆ ಅವನು ಹೇಳಿದಂತೆ ನಿಜಸಂಗತಿ ಬಹುಬೇಗ ಬಯಲಾಗಿ ಬಿಡಬಹುದೆಂದು ದೂರದ ಊರಿನಲ್ಲಾದರೆ ಈ ಪರಿಪಟಾಲು ಒದಗುವ ಸಂಭವವೇ ಇಲ್ಲವೆಂದು ಧೈರ್ಯ ಮಾಡಿ ಮನೆಯವರೊಂದಿಗೆ” ಈ ಹತ್ತಿರದ ಊರುಗಳ ಸಂಬಂಧ ಬೇಡವ್ವ.

ದೂರದ ಊರಾದ್ರೂ ಪರವಾಗಿಲ್ಲ ಒಳ್ಳೆಯ ಕಡೆ ನೋಡಿ ಮದುವೆ ಮಾಡಿ “ಎಂಬ ಶ್ರೀರಾಮಚಂದ್ರನ ಮಾತಿಗೆ ಮರುಮಾತಿಲ್ಲದೆ ತಲೆಯಾಡಿಸಿದ ಅವನ ಮನೆಯವರು ನಂಜನಗೂಡಿನ ಕಡೆಗೆ ಒಳ್ಳೆಯ ಸಂಬಂಧಗಳಿವೆ ಹುಡುಕೋಣವೆಂದಾಗ ಹರ್ಷಗೊಂಡನು. ತಾನು ಸುಂದರವಾಗಿ ಕಾಣಬೇಕೆಂದು ಹ್ಯಾಂಡ್ ಪೋಸ್ಟಿನ ಮೆನ್ಸ್ ಪಾರ್ಲರ್ ಹೋಗಿ ನೀಟಾಗಿ ತನಗಿದ್ದ ವಿರಳ ಕೂದಲುಗಳನ್ನು ಕತ್ತರಿಸಲು ಹೇಳಿದ. ಮುಖದ ಮೇಲಿನ ಸುಕ್ಕುಗಳು ಹೋಗುವಂತೆ ಬಗೆಬಗೆಯ ಕ್ರೀಮುಗಳ ಹಚ್ಚಿಸಿಕೊಂಡು ಫೇಸ್ ವಾಶ್ ಮಾಡಿಸಿಕೊಂಡ. ನಡುವೆ ಅಲ್ಲಲ್ಲಿ ಬೆಳ್ಳಗಾಗಿದ್ದ ತನ್ನ ವಿರಳ ಕೂದಲುಗಳಿಗೆ ಹೇರ್ ಡೈ ಮಾಡಿಸಿಕೊಂಡ. ಮೀಸೆಯ ನಡುವೆ ನುಸುಳಿದ್ದ ಬಿಳಿಗೂದಲನ್ನು ಕತ್ತರಿಸುವಂತೆ ಹೇಳಿ ಹೊಸ ರೀತಿಯಲ್ಲಿ ಸಿಂಗಾರಗೊಂಡು ಕನ್ನಡಿಯ ಮುಂದೆ ನಿಂತು ಹಿಗ್ಗಿದ. ಅಶ್ವಿನಿ ಟೆಕ್ಸ್ಟ್ ಟೈಲ್ಸ್ ಗೆ ಭೇಟಿಕೊಟ್ಟು ತನ್ನ ಅಳತೆಗೊಪ್ಪುವ ಭರ್ಜರಿಯಾದ ನಾಲ್ಕು ಜೊತೆ ಸೂಟು ಬೂಟುಗಳನ್ನು ಖರೀದಿಸಿ ಮನೆಗೆ ಹಿಂದಿರುಗಿದ ಶ್ರೀರಾಮಚಂದ್ರನ ಪಯಣ ನಿಗದಿಪಡಿಸಿದಂತೆ ನಂಜನಗೂಡಿನ ಕಡೆಗೆ ಹೊರಟಿತು. ಆದರೆ ಅಲ್ಲಿ ಯಾವ ಸಂಬಂಧವೂ ಇವನಂದುಕೊಂಡಂತೆ ಅಷ್ಟು ಸುಲಭವಾಗಿ ಕುದುರಲಿಲ್ಲ. ಇದರಿಂದ ಹತಾಶನಾಗದೆ ಹೊಸ ಹುರುಪು ಉತ್ಸಾಹವನ್ನು ನಾಜೂಕುತನವನ್ನು ಕಂಡುಕೊಂಡಿದ್ದ ಶ್ರೀರಾಮಚಂದ್ರ ಹೆಣ್ಣುಕೊಡಿಸುವ ದಲ್ಲಾಳಿಯೊಬ್ಬನನ್ನು ಪತ್ತೆ ಹಚ್ಚಿ ಹೆಣ್ಣು ತೋರಿಸಿ ಇನ್ನಾರು ತಿಂಗಳಲ್ಲಿ ಮದುವೆ ಸಂಬಂಧವನ್ನು ಕುದುರಿಸಿಕೊಟ್ಟರೆ ಐವತ್ತು ಸಾವಿರಗಳ ಕೊಡುವುದಾಗಿ ಹೇಳಿ, ಮುಂಗಡವಾಗಿ ಅವನಿಗೆ ಹತ್ತು ಸಾವಿರ ತೆತ್ತು ಗುಂಡ್ಲುಪೇಟೆ, ಚಾಮರಾಜನಗರ, ತಾಳವಾಡಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕನ್ಯಾಶೋಧ ನಡೆಸಿದ್ದು ವಿಫಲವಾಗಿ ಕೊನೆಗೆ ಶತಾಯಗತಾಯ ಹಟಕ್ಕೆ ಬಿದ್ದವನಂತೆ ಊಟಿಯವರೆಗೂ ಶೋಧಕಾರ್ಯ ಮುಂದುವರಿಸಿದರೂ ಯಾವ ಫಲವೂ ದೊರಕದೆ ಬರಿಗೈಯಲ್ಲಿ ವಾಪಸ್ಸಾದ.ಕಡೆಗೆ ಅವನ ಮನೆಯವರು ಬೆಳತೂರಿನ ಜೋಯಿಸರ ಬಳಿ ಪಂಚಾಂಗ ಓದಿಸಿದ್ದನ್ನು ಹಾಗೂ ಅವರು ಮೂಡಲ ಸೀಮೆಯಲ್ಲಿ ಯಾವ ನಂಟುಕೂಡದಿರುವುದನ್ನು, ಹಾಗೂ ಪಡುವಣ ಸೀಮೆಗೋ ಅಥವಾ ಬಡಗಣ ಸೀಮೆಗೋ ಮುಂದಿನ ಶುಕ್ರವಾರ ಹೊರಟರೆ ಹೂವನೆತ್ತಿದ ಹಾಗೆ ನಂಟು ಕೂಡುತ್ತದೆಂಬ ಜೋಯಿಸರ ಮಾತನ್ನು ಮನೆಯವರು ಹೇಳಿದಾಗ ಅದನ್ನು ಕೇಳಿದ ಶ್ರೀರಾಮಚಂದ್ರನಿಗೆ ನಂಬಿಕೆ ಬರದಿದ್ದರೂ ಒಂದು ರೀತಿಯ ಕುತೂಹಲ ಉಂಟಾಯಿತು.

ಆದರೂ ಆಗಬಹುದೆಂಬ ಒಂದು ಸಣ್ಣ ಆಸೆಯೂ ಅವನ ಮನಸ್ಸಿನಲ್ಲಿ ಮೊಳಕೆಯೊಡೆದು ಮೊದಲಿಗೆ ಹುಣಸೂರು,ಕೆ.ಆರ್. ನಗರ , ಪಿರಿಯಾಪಟ್ಟಣದವರೆಗೂ ಆ ನಂತರ ಮಂಡ್ಯ,ಮೈಸೂರು, ಮದ್ದೂರು, ಮಳವಳ್ಳಿಯವರೆಗೂ ಹೋಗಿ ಬಂದ ಶ್ರೀರಾಮಚಂದ್ರನಿಗೆ ದೊಡ್ಡ ನಿರಾಸೆಯಾಯಿತು. ಹೋದಲೆಲ್ಲಾ ಯಾವುದಾದರೂ ಒಂದು ನೆಪ ಹೇಳಿ ಸಂಬಂಧವನ್ನು ಬೇಡವೆನ್ನುತ್ತಿದ್ದನ್ನು ಕಂಡು ಹತಾಶೆಗೊಂಡು ಇನ್ನಾವ ಕಾರಣಕ್ಕೂ ಹೆಣ್ಣು ಹುಡುಕುವ ಗೋಜಿಗೆ ಹೋಗಬಾರದು ಮದುವೆ ನನ್ನ ಪಾಲಿಗೆ ಕನಸೇ ಸರಿಯೆಂದು ನಿರ್ಧರಿಸಿ ಒಳಗೊಳಗೆ ವ್ಯಥೆಪಟ್ಟುಕೊಂಡು ಮನಸಿಗೆ ಮಂಕು ಕವಿದಂತಾಗಿ ತನಗಿಷ್ಟವಾದ ಕೃಷಿ ಕೆಲಸಗಳ ಮೇಲೂ ನಿರಾಸಕ್ತನಾಗಿ ಏಕಾಂತದಲ್ಲಿ ಕೂತು ಬಿಡುತ್ತಿದ್ದ. ಸತತ ಐದು ವರ್ಷಗಳ ಕಾಲ ಹೆಣ್ಣಿಗಾಗಿ ಹುಡುಕಾಟ ನಡೆಸಿದ ಮೇಲೂ ಯಾವೊಂದು ಹೆಣ್ಣು ಕೂಡ ತನ್ನನ್ನು ಯಾಕೆ ಒಪ್ಪಲಿಲ್ಲವೆಂದು ಚಿಂತಿಸಿದ. ತಾನು ಇಲ್ಲಿಯವರೆಗೆ ಹೋಗಿ ಬಂದ ಹೆಣ್ಣಿನ ಮನೆಗಳನ್ನು ಒಂದೊಂದಾಗಿ ಲೆಕ್ಕ ಹಾಕಿ ಕನಿಷ್ಠ ಮೂನ್ನೂರರ ಗಡಿ ದಾಟಿರುವುದನ್ನು ಖಾತ್ರಿಪಡಿಸಿಕೊಂಡು ಇನ್ನೆಲ್ಲೂ ನನ್ನ ಪಾಲಿಗೆ ಹೆಣ್ಣಿನ ಋಣವಿದ್ದಂತಿಲ್ಲ ಎಂಬುದನ್ನು ಮತ್ತೆ ಮತ್ತೆ ನೆನೆದು ಎರಡು ಹನಿ ಕಣ್ಣಿರು ತರಿಸಿಕೊಂಡು ಹಗುರಾದ ಅವನ ಮನದೊಳಗೆ ಎಂದೋ ತನ್ನೆದುರಿಗೆ ಹಾದು ಹೋದ ಹೆಣ್ಣಿನ ಚಿತ್ರವಾದರೂ ನನ್ನ ಪಾಲಿನ ನೆನಪಿಗಾದರೂ ಕನಿಷ್ಠ ಇರಬೇಕಿತ್ತು ಎಂದುಕೊಂಡ. ಊರಿನಲ್ಲಿ ಅದೆಷ್ಟು ಜನ ಈ ಗಂಡೆಂಬ ಅಪಪೋಲಿಗಳಿಗೆ ರತಿಯಂತಹ ಹೆಣ್ಣುಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ? ಆದರೆ ನನ್ನಂತಹ ಒಬ್ಬ ಶ್ರಮಜೀವಿ ರೈತನಿಗೆ ಹೆಣ್ಣು ಕೊಡಲು ಈ ಜನ ನಿರಾಕರಿಸುತ್ತಿದ್ದಾರಲ್ಲ ಎಂದು ಪಶ್ಚಾತ್ತಾಪ ಪಟ್ಟ.

ಆ ಚಂದ್ರೇಗೌಡರ ಮಗ ಅನಂತ ಅದೆಷ್ಟು ಚಟಗಳನ್ನು ಹತ್ತಿಸಿಕೊಂಡಿದ್ದ ನಾ ಕಂಡಂತೆ ಸಿಗರೇಟು ಸೇದುತ್ತಿದ್ದ, ಜೂಜಾಡುತ್ತಿದ್ದ, ಕುಡಿಯುತ್ತಿದ್ದ, ಸಾಲದ್ದಕ್ಕೆ ವರ್ಷಕ್ಕೊಂದು ಹೆಣ್ಣುಗಳ ಕಟ್ಟಿಕೊಂಡು ಪ್ರೀತಿಯ ನೆವದಲ್ಲಿ ಮೈಸೂರು ಸುತ್ತುತ್ತಾ ಕೈ ತೊಳೆದುಕೊಳ್ಳುತ್ತಿದ್ದ ಅಂತಹ ಮಹಾನ್ ಕಚ್ಚೆ ಹರುಕನಿಗೆ ಬಿ.ಎ. ಪಾಸು ಮಾಡಿದ್ದನ್ನೇ ಘನ ಸಾಧನೆಯೆಂಬಂತೆ ಕಂಡು ಬೊಂಬೆಯಂತ ಹೆಣ್ಣನ್ನು ಕೊಟ್ಟಿರುವಾಗ ನನಗೇಕೆ ಹೀಗಾಯಿತು ಎಂದು ಅವನ ಬಗ್ಗೆ ವಿನಾಕಾರಣ ಕರುಬಿಕೊಂಡ.ಹೀಗೆ ತನ್ನೊಳಗೆ ಅರಿವಿಲ್ಲದಂತೆ ಸಹಜವಾಗಿ ಬೆಳೆಯುತ್ತಿರುವ ಇಂತಹ ಸಣ್ಣತನದ ಆಲೋಚನೆಗಳನ್ನು ನೆನೆದು ದಿಗಿಲುಗೊಂಡ.ಎಂದೋ ಹೈಸ್ಕೂಲಿನಲ್ಲಿ ಓದುವಾಗ ತನ್ನ ಓರಿಗೆಯ ಗೆಳೆಯರು ಕ್ಲಾಸಿನಲ್ಲಿ ಕದ್ದು ನೋಡುತ್ತಿದ್ದ ಬೆತ್ತಲೆ ಚಿತ್ರಗಳನ್ನು ಒಮ್ಮೆಯಾದರೂ ನಾನು ಕೂಡ ಅವರ ಕೈಗಳಿಂದ ಕಸಿದುಕೊಂಡು ನೋಡುವ ಧೈರ್ಯವನ್ನು ಆಗ ನಾನೇಕೆ ಮಾಡಲಾಗಲಿಲ್ಲ ಎಂದು ಮನೆಯ ಮುಂದಿನ ಎಳೆಯ ಚಂದಿರನ ನೋಡುತ್ತಾ ಮಲಗಲು ಹೋದ. ಆದರೆ ಅದೇಕೋ ಅವನಿಗೆ ಈಗ ನಿದ್ದೆಯೆಂದರೆ ಕಣ್ಣಿಗೆ ಹತ್ತೊಲಲ್ಲದು.ಮೊದಲಾದರೆ ಯಾವ ಚಿಂತೆಯೂ ಇಲ್ಲದೆ ಬೆಳಗಿನಿಂದ ಸಂಜೆಯವರೆಗೆ ಬೆವರು ಹರಿಸಿ ದುಡಿದು ಬಂದು ಅವ್ವ ಮಾಡಿದ ಬಿಸಿಮುದ್ದೆಯನ್ನು ಗಡತ್ತಾಗಿ ತಿಂದು ಚೂರು ಬರೀ ನೆಲಕ್ಕೆ ಒರಗಿದರೆ ಸಾಕು ಅದೆಂತಹ ಸುಖನಿದ್ದೆ ಮಾಡುತ್ತಿದ್ದವನ ಬದುಕು ಈಗ ನಿದ್ದೆ ಬಾರದೆ ಈ ರೀತಿ ಒದ್ದಾಡುವಂತಾಯಿತಲ್ಲವೆಂಬುದನ್ನು ನೆನೆಸಿಕೊಂಡು ನಗುತ್ತಾ ನಾನೇಕೆ ಸಾಮಾನ್ಯವಾಗಿ ಎಲ್ಲಾ ಗಂಡುಮಕ್ಕಳಂತೆ ಯಾವೊಂದು ಚಟಕ್ಕೂ ಬೀಳದೆ ವೃಥಾ ಹೀಗೆ ಜೀವನವನ್ನು ವ್ಯರ್ಥಗೊಳಿಸಿಕೊಂಡೆ ಎಂದು ತನಗೆ ತಾನೇ ಪ್ರಶ್ನಿಸಿಕೊಂಡ.

ಈ ಊರಿನಲ್ಲಿ ನನಗಿಂತ ಹತ್ತು ಹದಿನೈದು ವರ್ಷದ ಚಿಕ್ಕ ಹುಡುಗರೆಲ್ಲ ಹೆತ್ತವರಿಗೂ ಹೆದರದೆ ಅನ್ಯ ಜಾತಿಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿಲ್ಲ. ಕೆಲವರು ಒಂದೋ ಎರಡೋ ಮಕ್ಕಳಿಗೆ ತಂದೆಯಾಗಿ ತಮ್ಮ ಅಮೂಲ್ಯ ಯೌವ್ವನವನ್ನು ಸಾಫಲ್ಯಗೊಳಿಸಿಕೊಂಡಿಲ್ಲ.ಆದರೆ ನಾನು ಕಾಮದ ವಿಚಾರವಾಗಿ ಯಾಕೆ ಒಂದು ದಿನವಾದರೂ ಪ್ರಚೋದನೆಗೊಳ್ಳದೆ ನನ್ನ ಪುರುಷತ್ವವನ್ನು ಯಾವ ಘನಕಾರ್ಯದ ಕಾರಣಗಳಿಗಾಗಿ ಅದುಮಿಟ್ಟುಕೊಂಡಿದ್ದೆ? ಆರಂಭದ‌ ವರ್ಷಗಳಲ್ಲಿ ನಮ್ಮ ಜಮೀನಿನ ಕಳೆಯ ಕೆಲಸಕ್ಕೆ ,ನಾಟಿ ಕೆಲಸಕ್ಕೆ ಬರುತ್ತಿದ್ದ ಎಷ್ಟೋ ಹೆಂಗಸರುಗಳ ನಿತಂಬ ತೊಡೆಗಳನ್ನು, ಅವರ ದುಂಡಾದ ಮೊಲೆಗಳನ್ನು ನೋಡಿಯೂ ನೋಡದಂತೆ ಸಜ್ಜನನ ರೀತಿ ವರ್ತಿಸುತ್ತಿದ್ದ ನನಗೆ ಕಡೇಬೀದಿಯ ರಾಜೀವನ ಹೆಂಡತಿ ನನ್ನನ್ನು ಕಂಡು ನಗುತ್ತಾ ಮನೆಯೊಳಗೆ ಕರೆದು ಮನೆಯವರ ಕುಶಲೋಪರಿ ವಿಚಾರಿಸುತ್ತಾ ನಾವು ನಿಮಗೆ ಸಂಬಂಧಿಕರಾಗಬೇಕೆಂದು ತಮ್ಮ ನಂಟಿನ ಕತೆಯನ್ನು ವಿವರಿಸುತ್ತಾ ಹಾಲು ಕೊಡುವ ನೆಪದಲ್ಲಿ ತನ್ನ ಕೈ ಹಿಡಿದೆಳೆದಾಗ ತನ್ನ ತೊಡೆಸಂದಿಗಳು ಅದುರಿ ಹೋಗಿ ಅಲ್ಲಿಂದ ಕಾಲ್ಕಿತ್ತು ಮೈ ತುಂಬಾ ಬೆವರಿ ಮನೆಯತ್ತ ದಾಪುಗಾಲು ಹಾಕಿ ಕೊಳದಪ್ಪಲೆಯ ನೀರು ಕುಡಿದು ಸುಧಾರಿಸಿಕೊಂಡಿದ್ದು ಹೀಗೆ ಬೇಕಾದ್ದು ಬೇಡವಾದುದ್ದೆಲ್ಲವೂ ನೆನಪಾಗಿ ಗರಬಡಿದವನಂತೆ ಪಡಸಾಲೆಯಲ್ಲಿಯೇ ಎಷ್ಟೋ ಬಾರಿ ನಿರಾಸಕ್ತಿಯಿಂದ ಕೂತು ಬಿಡುತ್ತಿದ್ದ ಶ್ರೀರಾಮಚಂದ್ರನಿಗೆ ಹೊಸ ಸುದ್ದಿಯೊಂದು ಕಾದಿತ್ತು.!

ಅದೇನೆಂದರೆ ಅವನ ತಂಗಿಯ ಗಂಡ ಶ್ರೀರಾಮಚಂದ್ರನ ಒಂದೆರಡು ಲಾಯಕ್ಕಾದ ಪೋಟೋವನ್ನು ಕನ್ನಡ ಶಾದಿಡಾಟ್ಕಾಮ್ ನಲ್ಲಿ ಅಪ್ಲೋಡ್ ಮಾಡಿ ವಿವರಗಳಲ್ಲಿ ಮಾದರಿರೈತನಾದ ಯಶೋಗಾಥೆಯನ್ನು, ಅದಕ್ಕಾಗಿ ಸನ್ಮಾನಿಸಿದ ಒಂದು ಸಣ್ಣ ಪೇಪರ್ ಕಟಿಂಗ್ ಅನ್ನು ಸಾಕ್ಷ್ಯವೆಂಬಂತೆ ಅದರಲ್ಲಿ ಸೇರಿಸಿದ್ದರ ಪರಿಣಾಮ ಕೊಡಗು ಸೀಮೆಗೆ ಸೇರಿದ ವಿರಾಜಪೇಟೆಯ ಹುಡುಗಿಯೊಬ್ಬಳು ಇದನ್ನು ಮೆಚ್ಚಿ ಮದುವೆಯಾಗಲು ಸಮ್ಮತಿಸಿದಳೆಂಬ ಈ ಹೊಸಸುದ್ದಿಯೊಂದು ಶ್ರೀರಾಮಚಂದ್ರನ ಕಿವಿಗೆ ಬಿದ್ದಾಗ ಮನಸೊಳಗೆ ಖುಷಿಗೊಂಡರೂ ಅದನ್ನು ವ್ಯಕ್ತಪಡಿಸಲು ಹಿಂದೇಟು ಹಾಕಿ ತನ್ನ ಭಾವನಿಂದ ವಿವರಗಳನ್ನಷ್ಟೇ ಪಡೆದುಕೊಂಡ. ಆ ನಂತರ ಮನೆಯವರು ನಿಗದಿಪಡಿಸಿದ ದಿನಕ್ಕಾಗಿ ಲೆಕ್ಕ ಹಾಕಿ ಇನ್ನೂ ಹತ್ತು ದಿನಗಳನ್ನು ದೂಡಬೇಕಲ್ಲ ಎಂದು ಹೊರಡಲು ವೇಳೆ, ಮೂಹೂರ್ತ, ದಿನಾಂಕವನ್ನು ಹಾಕಿಕೊಟ್ಟ ಬೆಳತೂರಿನ ಜೋಯಿಸರಿಗೆ ಮನದಲ್ಲೇ ಶಪಿಸಿಕೊಂಡ. ಅಂತೂ ಮೂರು ದಿನ ಮುಂಚಿತವಾಗಿಯೇ ಹುಡುಗ ಬರಲೆಂದು ಹುಡುಗಿ ಮನೆಯವರೇ ಒತ್ತಡ ಹೇರಿರುವುದಾಗಿ ತಿಳಿದು “ರೋಗಿ ಬಯಸಿದ್ದು ಹಾಲು ಅನ್ನ; ವೈದ್ಯರು ಹೇಳಿದ್ದು ಹಾಲು ಅನ್ನ”ವೆಂದು ಹಿಗ್ಗಿದ. ಅಂತೂ ವಿರಾಜಪೇಟೆಗೆ ಹೊರಡುವ ಸಿದ್ದತೆ ಭರದಿಂದ ನಡೆದು ಒಂದು ಭಾನುವಾರ ಹೆಣ್ಣಿನ ಮನೆಗೆ ನಮ್ಮ ಶ್ರೀರಾಮಚಂದ್ರನ ಭೇಟಿ ನಡೆದೇ ಹೋಯಿತು. ಹತ್ತಾರು ಮನೆಯ ಹಿರಿಯ ಸದಸ್ಯರೆದುರು ಬಂಧುಬಳಗದವರೆದುರು ಅಪ್ಸರೆಯಂತಹ ಹೆಣ್ಣೊಂದು ಗಾಜಿನ ತಟ್ಟೆಯಲ್ಲಿ ತುಂಬಿದ ನೀರಿನ ಲೋಟಗಳೊಂದಿಗೆ ಬಂದವರಿಗೆ ಒಂದೊಂದಾಗಿ ಕೊಡುತ್ತಾ ಮೆಲ್ಲನೆಯ ಹೆಜ್ಜೆಗಳನ್ನಿರಿಸುತ್ತಿದ್ದನ್ನು ಕಂಡು ಅವಕ್ಕಾಗಿ ಅವಳನ್ನೇ ದಿಟ್ಟಿಸಿ ನೋಡುತ್ತಾ ಮುಗಳ್ನಗೆಯಲ್ಲಿ ತೇಲುತ್ತಿದ್ದ ನಮ್ಮ ಶ್ರೀರಾಮಚಂದ್ರನನ್ನು ಕಂಡು ಹುಡುಗಿ ಕೂಡ ಕಿಲಕಿಲ ನಗುತ್ತಾ ನಾಲ್ಕಾರು ಬಾರಿ ಜ್ಯೂಸಿಗೆ, ಬಿಸ್ಕತ್ತಿಗೆ, ಹಣ್ಣಿಗೆ, ಮನೆಯಲ್ಲಿ ತಯಾರಿಸಿದ ಬಗೆಬಗೆಯ ಸಿಹಿ ಖಾದ್ಯವನ್ನು ವಿತರಿಸಲಿಕ್ಕೆ ಚುರುಕಾಗಿ ಓಡಾಡುವುದನ್ನು ನೋಡಿ ಕಣ್ತುಂಬಿಸಿಕೊಂಡ ಇವನ ಮೈಮನವೆಲ್ಲಾವನ್ನು ಸದ್ದಿಲ್ಲದೆ ಸೂರೆಗೊಂಡಿದ್ದಳು.

ಕೊನೆಗೆ ಮನೆಯವರೆಲ್ಲರೂ ಹುಡುಗ ಹುಡುಗಿಯರ ಪರಸ್ಪರ ಒಪ್ಪಿಗೆಯನ್ನು ಮತ್ತೊಮ್ಮೆ ಕೇಳಿ ಸಮ್ಮತಿಸಿದ ಮೇಲೆ ಹಾಜರಿದ್ದ ಎರಡು ಕಡೆಯವರು ಸಮಾಧಾನಗೊಂಡು ಇದು ಒಳ್ಳೆಯ ಸಂಬಂಧವೆಂದು ನಿಶ್ಚಯಿಸಿದ ಮೇಲೆ ಇನ್ನೇನಿದೆ? ಮುಂದಿನ ತಿಂಗಳೇ ಮದುವೆಯ ಮಾತುಕತೆಯಾಡುವ ಮುನ್ನ ಈಗಲೇ ಗಂಡು ಹೆಣ್ಣಿನ ಜಾತಕವನ್ನು ನೋಡಿ ಹೊಂದಾಣಿಕೆಯಾಗುತ್ತದೆಯೇ ಎಂದು ಕೇಳಿಬಿಡೋಣವೆಂದು ಹೊರಟಾಗ ವಿರಾಜಪೇಟೆಯ ಪ್ರಸಿದ್ಧ ಜ್ಯೋತಿಷಿಗಳು ಬರೆದುಕೊಟ್ಟಂತೆ “ಇದು ಅಮೂಲ್ಯ ಶಕ್ತಿಯನ್ನು ಹೊಂದಿರುವ ಗುರುಬಲದ ಮೇಲೆ ನಡೆಯುತ್ತಿರುವ ಮದುವೆಯೆಂದು; ಈ ಸಂಬಂಧವು ಸ್ವರ್ಗದಲ್ಲೇ ನಿಶ್ಚಯಿಸಿ ಆಗುತ್ತಿರುವ ಅಪೂರ್ವ ಬಾಂಧವ್ಯಗಳ ಮಿಲನವೆಂದು ಹೇಳಿ ಎರಡು ಕಡೆಯಿಂದಲೂ ಎರಡು ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿ ಖುಷಿಯಿಂದ ಕಳುಹಿಸಿಕೊಟ್ಟರು. ಮುಂದೆ ಮದುವೆಯ ಮಾತುಕತೆಗೆ ಹೋದಾಗ ಇವರಂದುಕೊಂಡಂತೆ ಮದುವೆ ಮಾಡಲು ಶಕ್ಯರಲ್ಲದ ತಮ್ಮ ಪರಿಸ್ಥಿತಿಯನ್ನು, ಐವರು ಹೆಣ್ಣು ಮಕ್ಕಳಲ್ಲಿ ಮೂವರ ಹೆಣ್ಣು ಮಕ್ಕಳ ಮದುವೆ ಮಾಡಿ ಇನ್ನು ಎರಡು ವರ್ಷಗಳು ಸಹ ಕಳೆದಿಲ್ಲವೆಂದು, ಹಿಂದಿನ ಸಾಲಕ್ಕೆ ತಾವು ಬಡ್ಡಿ ಕಟ್ಟುತ್ತಿರುವ ಅಸಹಾಯಕತೆಯನ್ನು, ಗುಮಾಸ್ತನ ಕೆಲಸದಿಂದ ನಿವೃತ್ತನಾದ, ಹೆಣ್ಣಿನ ತಂದೆಯ ಆ ಮಾತುಗಳನ್ನು ಕೇಳಿ ಬಹುವಾಗಿ ಮರುಗಿದ ನಮ್ಮ ಶ್ರೀರಾಮಚಂದ್ರನ ಮನಸು ಎಷ್ಟು ವಿಶಾಲವಾದುದೆಂದರೆ ತಾವು ಹೆಣ್ಣಿಗೆ ನೀರುಯ್ದು ಕಳುಹಿಸಿಕೊಟ್ಟರೆ ಸಾಕು ತಾವು ನನಗೆ ಯಾವ ವರೋಪಚಾರವನ್ನು ನೀಡಬೇಕಿಲ್ಲವೆಂದೂ, ಬದಲಿಗೆ ಮದುವೆಗೆ ತಗುಲುವ ಖರ್ಚನ್ನು ಕೂಡ ನಾನೇ ಹೊಂದಿಸಿಕೊಳ್ಳುತ್ತೇನೆಂದು, ಮಾತು ಕೊಟ್ಟು ಬಂದು ಹೆಣ್ಣಿನ ಮನೆಯವರ ಪಾಲಿಗೆ ಸಾಕ್ಷಾತ್ ದೇವರ ಪ್ರತಿರೂಪವೇ ಎನಿಸಿದ.

ತಾನಂದುಕೊಂಡಂತೆ ಇಡೀ ಊರೇ ನನ್ನ ಮದುವೆಯನ್ನು ನಿಬ್ಬೆರಗಾಗುವಂತೆ ನೋಡಬೇಕೆಂದು ಆಲೋಚಿಸಿ ತಯಾರಿ ನಡೆಸಿಕೊಂಡ. ದಿನ ಬೆಳಗಾದರೆ ಎದುರಿಗೆ ಸಿಗುತ್ತಿದ್ದ ಇವನ ಎಷ್ಟೋ ಪರಿಚಯಸ್ಥರು ರಾಮಚಂದ್ರಪ್ಪ ನಿನ್ನ ಮದ್ವೆ ಯಾವಾಗ? ನಾವು ಬದುಕಿರುವಾಗಲೇ ಪಾಯಸದೂಟ ಹಾಕ್ಸಪ್ಪಾ? ಎಂದು ಮತ್ತೆ ಮತ್ತೆ ಕೇಳುತ್ತಿದ್ದುದ್ದೆಲ್ಲಾ ಕಿರಿಕಿರಿ ಎನಿಸಿ ಮೌನವಾಗಿ ಕೇಳದವನಂತೆ ಒಲ್ಲದ ಮನಸ್ಸಿನಿಂದ ಹಾದು ಹೋಗಿ ಬಿಡುತ್ತಿದ್ದ ಶ್ರೀರಾಮಚಂದ್ರನಿಗೆ ಮದುವೆ ನಿಶ್ಚಯವಾದ ಮೇಲೆ ಹಕ್ಕಿಗೆ ಹೊಸ ರೆಕ್ಕೆ ಬಂದಂತಾಗಿ ಅವನ ಮನಸು ಗರಿಗೆದರಿ ಅವರು ಕೇಳದಿದ್ದರೂ ತಾನೇ ಎದುರಿಗೆ ಸಿಕ್ಕವರ ಕುಶಲೋಪರಿ ವಿಚಾರಿಸುತ್ತಾ ಮದುವೆ ನಿಶ್ಚಯವಾದ ಸುದ್ದಿ ತಿಳಿಸುತ್ತಿದ್ದ.ಅಷ್ಟೇ ಅಲ್ಲ ತಾನು ಮದುವೆಯಾಗುತ್ತಿರುವ ಹೆಣ್ಣಿನ ಸೌಂದರ್ಯವನ್ನು ವರ್ಣಿಸುತ್ತಾ ನಿಜಕ್ಕೂ ಅಪ್ಸರೆ ಎಂದೂ ಅವಳ ಮೈ ಬಣ್ಣ ಇಡೀ ಸುತ್ತ ಮುತ್ತಲ ಊರಿನಲ್ಲೇ ಇಲ್ಲವೆಂದು ಹುಂಬತನದ ಮಾತಾಡುತ್ತಾ ಬೀಗುತ್ತಿದ್ದ.ಮುಂದುವರೆದು ತಾನು ಐದು ವರ್ಷಗಳ ಕಾಲ ಹೆಣ್ಣಿಗಾಗಿ ಹುಡುಕಾಟ ನಡೆಸಿದ ತನ್ನ ಪರಿಪಾಟಲಿನ ವೇದನೆಯ ಕತೆಯನ್ನು ಅದಕ್ಕಾಗಿ ಅವನಿಗೆ ತಗುಲಿದ ಲಕ್ಷಾಂತರ ರೂಪಾಯಿಗಳ ಹಣ ಪೋಲಾಗಿ ಹೋದದ್ದನ್ನು ನೆನೆದು ನೊಂದುಕೊಳ್ಳುತ್ತಾ ದೇವರು ಯಾಕಿಲ್ಲ ಹೇಳು ಕಡೆಗೂ ಈ ಮಹಾಲಕ್ಷ್ಮೀಯಂತಹ ಹೆಣ್ಣನ್ನು ತನಗಾಗಿ ಕಾದಿರಿಸಿದ್ದ ಎಂದು ಭಾವುಕನಾಗಿ ಹೇಳುವಾಗ ಅರಿವಿಲ್ಲದಂತೆ ಅವನ ಕಣ್ಣುಗಳು ತುಂಬಿಬರುತ್ತಾ ಕಣ್ಣೀರಾಗಿ ಜಿನುಗುತ್ತಿದ್ದವು.

ಮುಂದೆ ಶ್ರೀರಾಮಚಂದ್ರನ ಮದುವೆ ಕಾರ್ತಿಕ ಮಾಸದ ಶುಭಲಗ್ನದಲ್ಲಿ ಅದ್ದೂರಿಯಾಗಿ ಹೆಗ್ಗಡದೇವನಕೋಟೆಯ ಮಂಗಳಮಂಟಪದ ಛತ್ರದಲ್ಲಿ ಜರುಗಿ ಭಕ್ಷ್ಯ ಭೋಜನಗಳಿಂದ ತುಂಬಿ ತುಳುಕಿ ಊರಿನಾದ್ಯಂತ ಮನೆಮಾತಾಯಿತು. ಮದುವೆಯ ಕಾರ್ಯ ಮುಗಿದ ಮೇಲೆ ಸೀದಾ ಗಂಡಿನ ಮನೆಗೆ ಹೆಣ್ಣು ಬರಬೇಕೆಂಬ ಸಂಪ್ರದಾಯದಂತೆ ಅಂದಿನ ಸಂಜೆಯ ಹೊತ್ತಿಗೆ ಆಗಮಿಸಿದ ನವ ವಧು- ವರರು ಊರ ದೇವಾಲಯಕ್ಕೆ ಪೂಜೆ ಸಲ್ಲಿಸಿ ಮನೆ ತುಂಬಿಸಿಕೊಳ್ಳಲು ಹೊಸ್ತಿಲು ದಾಟುವ ಶಾಸ್ತ್ರವನ್ನು ಸಂಭ್ರಮದಿಂದ ಮುಗಿಸುವ ಹೊತ್ತಿಗೆ ನವ ವಧು -ವರರು ಸುಸ್ತಾಗಿ ಹೋಗಿದ್ದರು. ಮೊನ್ನೆ ರಾತ್ರಿಯಿಂದಲೂ ಇವನು ಕೇಳೇ ಇರದ ಅದೆಷ್ಟೋ ಶಾಸ್ತ್ರ ಸಂಪ್ರದಾಯಗಳನ್ನು ಮುಗಿಸಿ ಮದುವೆಗೆ ಬಂದವರ ಕುಶಲೋಪರಿ ವಿಚಾರಿಸಿ ಅವರು ನೀಡುವ ಶುಭಾಶಯಗಳಿಗೆ,ಉಡುಗೊರೆಗಳಿಗೆ ಹಸ್ತಲಾಘವ ಮಾಡಿ ಕೈ ಕುಲುಕಿ ಮುಗಳ್ನಗುವ,ವಧುವಿನೊಂದಿಗೆ ಬಗೆ ಬಗೆಯ ಭಂಗಿಯಲ್ಲಿ ಪೋಟೋಗ್ರಾಫರನ ಸೂಚನೆಗೆ ಅನುಗುಣವಾಗಿ ನಿಂತುಕೊಳ್ಳುವ ಕಸರತ್ತುಗಳಿಂದಾಗಿ ಶ್ರೀರಾಮಚಂದ್ರನಿಗೂ ತುಂಬಾ ದಣಿವಾಗಿತ್ತು. ಅದಕ್ಕೂ ಮಿಗಿಲಾಗಿ ಪ್ರಸ್ಥದ ಕಾರ್ಯವನ್ನು ಕಟ್ಟುನಿಟ್ಟಾಗಿ ಹೆಣ್ಣಿನ ಮನೆಯಲ್ಲಿಯೇ ಕೈಗೊಳ್ಳಬೇಕೆಂಬ ಸಂಪ್ರದಾಯನಿಷ್ಠ ನಿಯಮಗಳಿಂದಾಗಿ ಹಿರಿಯರೆದುರು ಗೋಣು ಅಲ್ಲಾಡಿಸಿದ್ದ. ಒಂದು ವಾರ ಕಾಲವಿರುವ ಈ ಕಹಿಯಾದ ಏಕಾಂತದ ಇರುಳುಗಳು ಮಂಜು ಕರಗಿದಂತೆ ಕರಗಿ ಹೊಸಬೆಳಕಿನ ಮಧುರಮೈತ್ರಿಯ ಮೊದಲರಾತ್ರಿಯ ಘಳಿಗೆಗಾಗಿ ಹಪಹಪಿಸುತ್ತಿದ್ದ ಶ್ರೀರಾಮಚಂದ್ರ ತಾನು ಮದುವೆಯಾದ ಹೆಣ್ಣಿನೊಂದಿಗೆ ಹೆಚ್ಚಿನ ಮಾತುಕತೆಯನ್ನೇ ಆಡಿರಲಿಲ್ಲ.

ಮದುವೆ ನಿಶ್ಚಯವಾದ ಮೂರು ತಿಂಗಳ ಅಂತರದಲ್ಲಿ ಎರಡು ಬಾರಿ ಹೆಣ್ಣಿನ ಮನೆಯಲ್ಲಿ ತಂಗಿದ್ದರು ಅವಳು ಓದಿದ ವಿವರಗಳನ್ನು ಅವಳ ಬಾಲ್ಯದ ಕತೆಗಳನ್ನು ಮಗುವಿನಂತೆ ಕೇಳಿ ತಲೆಯಾಡಿಸಿದ್ದ.ಜೊತೆಗೆ ತನಗೆ ವಿದ್ಯೆ ಮೈಗತ್ತದ ಎಸ್.ಎಸ್. ಎಲ್.ಸಿ.ಯಲ್ಲಿ ಮೇಷ್ಟ್ರುಗಳ ಕಾಟದಿಂದಾಗಿ ಪುಸ್ತಕವನ್ನು ಹೊಳೆಗೆಸೆದು ಮೈಸೂರಿಗೆ ಪಲಾಯನ ಮಾಡಿದ ಕತೆಯನ್ನು ನಗುತ್ತಲೇ ಅವಳೊಂದಿಗೆ ಹಂಚಿಕೊಂಡಿದ್ದ. ಆಮೇಲೆ ತಾನು ಸಾವಯವ ಕೃಷಿ ಮಾಡಿ ಮಾದರಿ ರೈತನಾದದ್ದು ಆಕಾಶವಾಣಿಯಲ್ಲಿ ಇವನ ಸಂದರ್ಶನ ನಡೆದದ್ದು,ಅಧಿಕಾರಿಗಳು ಇವನನ್ನು ಸನ್ಮಾನಿಸಿದ್ದು,ತಂಗಿಯ ಮದುವೆ ಮಾಡಿದ್ದು,ಮನೆ ಕಟ್ಟಿದ್ದು ಇತ್ಯಾದಿ ವಿಚಾರಗಳನ್ನು ಭಾವುಕನಾಗಿ ಹೇಳಿಕೊಂಡಾಗ ಅವಳು ಕೂಡ ಅವನೊಂದಿಗೆ ಒಂದಷ್ಟು ಕಣ್ಣೀರು ಜಿನುಗಿಸಿದ್ದು ಬಿಟ್ಟರೆ ಅವರಿಬ್ಬರ ನಡುವೆ ಅಷ್ಟು ಏಕಾಂತವೇ ದೊರಕಿರಲಿಲ್ಲ.ಅಕಸ್ಮಾತ್ ದೊರಕಿದ್ದರು ಅದನ್ನು ಬಳಸಿಕೊಳ್ಳುವ ಚಾಲಾಕೀತನವಾಗಲಿ ರಸಿಕತನವಾಗಲಿ ಇರದ ಮುಗ್ಧ ಮನಸ್ಸಿನ ಶ್ರೀರಾಮಚಂದ್ರ ಮದುವೆಯಲ್ಲಿ ಕೈಕೈ ಹಿಡಿದು ಜೊತೆಯಾಗಿ ನಿಂತರು ಅವಳಿಗಿರದ ಸಂಕೋಚ ತುಸು ಈತನಿಗೆ ಹೆಚ್ಚಿದ್ದ ಕಾರಣ ಅವಳ ಮುದ್ದಾದ ಮುಖವನ್ನು ಬರೀ ಓರೆಗಣ್ಣಿನಲ್ಲಿಯೇ ನೋಡಿ ನಾಚಿ ನೀರಾಗುತ್ತಿದ್ದ.ಅಂತೂ ನವ ವಧು- ವರರು ಆ ರಾತ್ರಿ ಬೇರೆ ಬೇರೆ ಹಾಸಿಗೆಯಲ್ಲಿ ಮಲಗಿ ದಣಿವಾರಿಸಿಕೊಂಡು ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಅರಿಶಿಣದ ಓಕುಳಿ ಸಿದ್ದವಾಗಿ ಪರಸ್ಪರ ನೀರೆರೆಚಿಕೊಂಡು ನಗುವಿನಲ್ಲಿ ತೇಲುತ್ತಾ ಬಟ್ಟೆ ಬದಲಾಯಿಸಿಕೊಂಡು ತಿಂಡಿ ಮುಗಿಸುವ ಹೊತ್ತಿಗೆ ರಾಮಚಂದ್ರನ ತಾಯಿ ಇವತ್ತು ಶುಕ್ರವಾರ ಗಂಡಹೆಂಡಿರಿಬ್ಬರು ಚಿಕ್ಕದೇವಮ್ಮನ ಬೆಟ್ಟಕ್ಕೆ ಪೂಜೆ ಮುಗಿಸಿಕೊಂಡು ಮನೆಗೆ ಬನ್ನಿ ಎಂದಾಗ ಶ್ರೀರಾಮಚಂದ್ರನ ಕಣ್ಣು ಅರಳಿತು.

ಹೊಸದಾಗಿ ಎರಡು ತಿಂಗಳ ಹಿಂದೆ ಖರೀದಿಸಿದ್ದ ತನ್ನ ಪಲ್ಸರ್ ಬೈಕಿನಲ್ಲಿ ಹೊರಡಲು ಅನುವು ಮಾಡಿಕೊಂಡು ಹೆಂಡತಿಯನ್ನು ಕೂರಿಸಿಕೊಂಡ ಶ್ರೀರಾಮಚಂದ್ರ ತನ್ನ ಎಂದಿನ ಸಂಕೋಚ ಭಾವದಿಂದ ಮೌನವಾಗಿ ಒಂದೆರಡು ಕಿಲೋಮೀಟರ್ ಕ್ರಮಿಸಿ ಹೆಂಡತಿಯ ಮಾತಿಗಾಗಿ ಕಾಯುತ್ತಿರುವಾಗ ಅಚಾನಕ್ಕಾಗಿ ಬೈಕಿನ ಹಿಂದೆ ಕೂತಿದ್ದ ತನ್ನ ಹೆಂಡತಿ ಬಿಗಿಯಾಗಿ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟದ್ದನ್ನು ಕಂಡ ಶ್ರೀರಾಮಚಂದ್ರನ ಮೈಗೆ ವಿದ್ಯುತ್ ಸ್ಪರ್ಶವಾದಂತೆ,ಮಿಂಚು ಸಂಚರಿಸಿದಂತೆ ಒಮ್ಮೆಲೇ ಜುಮ್ಮೆಂದು ರೋಮಾಂಚನಗೊಂಡಿತು.ಉದ್ವೇಗದಲ್ಲಿ ಅವಳ ಕೈಯ ಹಿಡಿದು ಮೃದುವಾಗಿ ಸವರಿ ತಾನು ಕೂಡ ಮುತ್ತಿಟ್ಟ. ಅವಳು ತನ್ನ ಬಾಯಿಯನ್ನು ಇವನ ಕಿವಿಯ ಹತ್ತಿರಕ್ಕೆ ತಂದು ಮೃದು ದನಿಯಲ್ಲಿ ಐ ಲವ್ ಯೂ ಎಂದು ಉಸುರಿದಳು..! ತಿರುಗಿ ಲವ್ ಯೂ ಟು ಎಂದು ಸಮ್ಮತಿಸಲು ಬಾರದ ಶ್ರೀರಾಮಚಂದ್ರ ಅರ್ಥವಾದವನಂತೆ ನಗುತ್ತಾ ಅವಳು ಹೇಳಿದ್ದನ್ನೇ ತಿರುಗಿಸಿ ಕರ್ಕಶವಾಗಿ ಐ ಲವ್ ಯೂ ಎಂದ.ಅವಳ ಬಿಸಿಯುಸಿರಿನ ಅಪ್ಪುಗೆಗಳ ಸುರಿಮಳೆಯಿಂದ ಬೈಕನ್ನು ನಿಯಂತ್ರಿಸುವುದು ಅವನಿಗೆ ಸ್ವಲ್ಪ ತ್ರಾಸದಾಯಕವಾದರೂ ಅವಳ ಸ್ಪರ್ಶ ಸುಖದಿಂದ ಅದು ಅವನಿಗೆ ಅಮುಖ್ಯವೆನಿಸಿ ಹೇಳುವ ಮನಸು ಮಾಡಲಿಲ್ಲ. ಮುಂದೆ ಚಿಕ್ಕದೇವಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗಬೇಕೆನುವಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು.ಆದರೆ ಅವನ ಹೆಂಡತಿಯು ವಾರದ ಹಿಂದೆ ತನ್ನ ನೆಚ್ಚಿನ ನಟ ದರ್ಶನ್ನಿನ ಯಾವುದೋ ಹೊಸ ಸಿನಿಮಾವೊಂದು ರಿಲೀಸ್ ಆಗಿದ್ದು ನಾನು ಅವನ ಎಲ್ಲಾ ಚಿತ್ರಗಳನ್ನು ತಪ್ಪದೇ ನೋಡುತ್ತಿದ್ದೆನೆಂದು ನಾನೀಗ ಈ ಸಿನಿಮಾವನ್ನು ಕೂಡ ತಪ್ಪದೇ ನೋಡಬೇಕೆಂದು ಹಟ ಮಾಡಲಾಗಿ ಸರಗೂರಿನ ಶಂಕರ್ ಚಿತ್ರಮಂದಿರಕ್ಕೆ ಮ್ಯಾಟನಿ ಶೋಗೆ ಹೆಂಡತಿಯನ್ನು ಪ್ರೀತಿಯಿಂದ ಕರೆದುಕೊಂಡು ಬಂದ.

ಬಾಲ್ಕನಿಯ ಎರಡು ಟಿಕೆಟ್ಗಳನ್ನು ಖರೀದಿಸಿ ಸಿನಿಮಾದ ಗಾಳಿಗಂಧವೇ ಗೊತ್ತಿರದ ಶ್ರೀರಾಮಚಂದ್ರ ಮೊದಲ ಬಾರಿಗೆ ಹೆಂಡತಿಯ ಸಲುವಾಗಿ ಸಿನಿಮಾ ನೋಡಲು ಕೂತ. ಅವನ ಹೆಂಡತಿಯಂತೂ ಸಿನಿಮಾ ಶುರುವಾದಾಗಿನಿಂದ ಇಂಟರ್ವಲ್ಲಿನವರೆಗೂ ಗಂಡನ ಕೈಯನ್ನೇ ಪ್ರೀತಿಯಿಂದ ಗಟ್ಟಿಯಾಗಿ ಹಿಡಿದು ಸಿನಿಮಾ ನೋಡುವುದರಲ್ಲಿ ತಲ್ಲೀನಳಾಗಿದ್ದಳು.ವಿರಾಮದ ನಡುವೆ ಅವಳು ಶೌಚಾಲಯಕ್ಕೆ ಹೋಗಿ ಬರುತ್ತೆನೆಂದು ಎದ್ದು ಹೋದಳು. ಇತ್ತ ಇವನು ಹೆಂಡತಿಗಾಗಿ ತಿನ್ನಲು ಒಂದಷ್ಟು ತರೇವಾರಿ ಚಿಪ್ಸ್ ಪ್ಯಾಕೆಟ್ಗಳನ್ನು ಕೈಯಲ್ಲಿ ಹಿಡಿದು ತಾನು ಕೂತಿದ್ದ ಕುರ್ಚಿಯ ಬಳಿ ಬಂದ. ಹೆಂಡತಿ ಶೌಚಕ್ಕೆಂದು ಹೊರ ಹೋಗಿ ಹದಿನೈದು ನಿಮಿಷವಾದರೂ ಬಾರದೇ ಇದ್ದುದನ್ನು ಕಂಡು ಅಳುಕು ಮೂಡಿ ಹೆಂಗಸರ ಶೌಚಾಲಯದವರೆಗೂ ಹೋಗಿ ಬಂದರೂ ಹೆಂಡತಿಯ ಸುಳಿವಾಗದೆ ಏನಾಗಿರಬಹುದೆಂದು ಸಂಶಯಗೊಂಡ. ಸಿನಿಮಾ ಶುರುವಾದರು ಹೆಂಡತಿ ಎತ್ತ ಹೋದಳೆಂದು ಥಿಯೇಟರಿನ ತುಂಬಾ ಧಾವಂತದಲ್ಲಿ ಓಡಾಡತೊಡಗಿದ. ಕೊನೆಗೆ ಈ ಜನಜಂಗುಳಿಯಲ್ಲಿ ಕಾಣದಿರಬಹುದೆಂದು ನಿಶ್ಚಯಿಸಿ ಮುಂಚಿತವಾಗಿ ಥಿಯೇಟರಿನ ಮುಖ್ಯ ಗೇಟಿನಲ್ಲಿ ಕಾದು ನಿಂತ.

ತನ್ನ ಕಣ್ಣೆದುರು ಹಾದು ಹೋದ ನೂರಾರು ಜನರುಗಳ ಗುಂಪಿನಲ್ಲಿ ಹೆಂಡತಿಯ ಸುಳಿವು ಪತ್ತೆಯಾಗದೆ ಆಗಸವೇ ಕಳಚಿ ಬಿದ್ದಂತಾಗಿ ದಾರಿಕಾಣದ ಹಸುಗೂಸಿನಂತೆ ಅವಕ್ಕಾಗಿ ತುಂಬಾ ಹೊತ್ತು ಗೇಟಿನಲ್ಲಿಯೇ ನಿಂತಿದ್ದ. ಆಮೇಲೆ ಅವನ ಸರಗೂರಿನ ಹಳೆಯ ಸಂಬಂಧಿಕರೊಬ್ಬರು ಎದುರಾದಾಗ ಕಣ್ಣೀರಿಡುತ್ತಾ ಮುಜುಗರದ ಭಾವದಲ್ಲಿ ತನ್ನ ಹೆಂಡತಿಯೊಂದಿಗೆ ಸಿನಿಮಾ ನೋಡಲು ಬಂದದ್ದು ಇಂಟರ್ವಲ್ ನಂತರ ಹೆಂಡತಿ ಕಾಣದೆ ಹೋದದ್ದನ್ನು ವಿವರಿಸಿ ಅವರ ಸಲಹೆಯಂತೆ ಮುನ್ನೆಚ್ಚರಿಕೆಯಾಗಿ ಸರಗೂರಿನ ಪೊಲೀಸ್ ಸ್ಟೇಷನ್ನಿನಲ್ಲಿ ತನ್ನ ಹೆಂಡತಿ ಕಾಣೆಯಾಗಿರುವುದರ ಬಗ್ಗೆ ದೂರೊಂದನ್ನು ನೀಡಿ ಅವಳ ಭಾವಚಿತ್ರವನ್ನು ಮರುದಿನ ತಂದುಕೊಡುತ್ತೇನೆಂದು ಒಪ್ಪಿಕೊಂಡು ಮನೆಗೆ ಹಿಂದಿರುಗುವ ಹೊತ್ತಿಗೆ ರಾತ್ರಿ ಹತ್ತು ದಾಟಿ ಊರೆಲ್ಲ ನಿಶ್ಯಬ್ದದಲ್ಲಿ ಮಲಗಿತ್ತು. ಬೇಸರದಲ್ಲಿ ಭಾರವಾದ ಹೆಜ್ಜೆಗಳೊಂದಿಗೆ ಮನೆಯೊಳಗೆ ಒಬ್ಬನೇ ಪ್ರವೇಶಿಸಿದ ಶ್ರೀರಾಮಚಂದ್ರನ ಮುಖಚರ್ಯೆಯನ್ನು ಕಂಡು ಅವನವ್ವ ಹೆಂಡತಿ ಎಲ್ಲೆಂದೂ ಕೇಳಲೇ ಇಲ್ಲ. ಎಲ್ಲ ಅರ್ಥವಾದವಳಂತೆ ಸದ್ದಾಗದ ಹಾಗೆ ಕಣ್ಣೀರು ಹಾಕುತ್ತಾ ಮೆಲುದನಿಯಲ್ಲಿ ಶಪಿಸುತ್ತಾ ದಿಂಬಿಗೆ ಒರಗಿಕೊಂಡಳು. ಇತ್ತ ವೈಭವದಲ್ಲಿ ಅದ್ದೂರಿಯ ಮದುವೆ ಮಾಡಿಕೊಂಡ ಮೂವತ್ತೈದರ ಪ್ರಾಯದ ಶ್ರೀರಾಮಚಂದ್ರನಿಗೆ ನಾಳೆ ಬೆಳಗಾದರೆ ಹೆಂಡತಿ ಓಡಿಹೋದಳೆಂಬ ಸುದ್ದಿ ಸುತ್ತಮುತ್ತಲಿನ ಊರುಗಳಿಗೆಲ್ಲಾ ಜಗಜ್ಜಾಹೀರಾಗಿ ಅವರೆದುರು ತಲೆಯೆತ್ತಿ ನಡೆಯುವುದು ಹೇಗೆಂದು ಚಿಂತಿಸುತ್ತಲೇ ತುಂಬಾ ಹೊತ್ತಿನ ನಂತರ ನಿದ್ದೆ ಹೋದ.

ಅವನಂದುಕೊಂಡಂತೆ ಹೆಂಡತಿ ಓಡಿಹೋದ ಸುದ್ದಿ ಎರಡೇ ದಿನಕ್ಕೆ ಕಾಳ್ಗಿಚ್ಚಿನಂತೆ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹಬ್ಬಿಕೊಂಡು ಬಾಯಿಚಪ್ಪರಿಸುವ ವಿಷಯವಾಗಿ ಹೋಗಿತ್ತು. ಕೆಲವರು ಮಾತಿಗೆಂದು ಗೇಲಿ ಮಾಡುತ್ತಾ ” ನಮ್ಮ ಕೂಲ್ಯದ ಮರಿಗೌಡ್ರು ಮೊಮ್ಮಗ ಸಾಕ್ಷಾತ್ ಶ್ರೀರಾಮಚಂದ್ರಪ್ಪ ಕಡ ಟೇಮ್ನಲ್ಲೂ ಪಾಯಿ ಗುಳಿನೇ ನೋಡ್ನಿಲ್ಲವಂತ ಕಣಾ” ಎಂದು ಲೊಚಗುಟ್ಟಿದರೆ ಮತ್ತೊಬ್ಬ ” ಅಯ್ಯೋ ಆ ಗುಳಿಗಾ ಇವ್ನ್ ಮೊಂಡು ಗುದ್ಲಿ ಸಾಕಾಯ್ತಿರನ್ನಿಲ್ಲ ಬುಡು” ಅದ್ಕೆ ಓಡೋಗಿರಬೇಕು ಕಣಾ ಇದ್ರ ಕೈಲಿ ಅಗ್ದು ಮಸಿಯಕ್ಕಾಗಲ್ಲ ಅಂತ.ಹೀಗೆ ತರತರದ ಅಪಹಾಸ್ಯದ ನಗೆಪಾಟಲುಗಳು,ವಿಧವಿಧ ರೀತಿಯ ಪೋಲಿ ಜೋಕುಗಳು ಶ್ರೀರಾಮಚಂದ್ರನ ಸುತ್ತ ಹುಟ್ಟಿಕೊಂಡದ್ದೇ ಬಂತು.ಅವನು ಮನೆಯಿಂದಾಚೆಗೆ ಬರುವ ಮನಸ್ಸು ಮಾಡದೆ ಮಾನಸಿಕವಾಗಿ ಕುಗ್ಗಿ ಹೋಗಿ ದಿನಕಳೆದಂತೆ ಹೊಲಮನೆಗಳ ಪರಿವೆಯೂ ಇಲ್ಲದೆ ಅರೆಹುಚ್ಚನಾಗಿ ಮಾರ್ಪಟ್ಟು ಹಾಸಿಗೆಯಲ್ಲಿಯೇ ಉಳಿದು ಹೋದ…!

ಆದರೆ ಅವನ ಹೆತ್ತವರು ಮಾತ್ರ ತಮ್ಮ ಮಗನ ಒಳ್ಳೆಯತನಕ್ಕೆ ಆದ ಅನ್ಯಾಯವನ್ನು ಬಗೆಬಗೆಯಾಗಿ ಶಪಿಸಿ ಮನೆಗೆ ಬಂದವರೆದುರು ಪುಂಖಾನುಪುಂಖವಾಗಿ ತಮ್ಮ ಖೇದದ ಕತೆಯ ತುತ್ತೂರಿ ಊದುತ್ತಾ ನಲವತ್ತರ ಗಡಿದಾಟಿರುವ ತಮ್ಮ ಮಗನಿಗಾಗಿ ಆಸೆಗಣ್ಣುಗಳಿಂದ ಈಗಲೂ ಕೇಳುತ್ತಿದ್ದಾರೆ

ದಯಮಾಡಿ…!

” ನಮ್ಮ ಶ್ರೀರಾಮಚಂದ್ರನಿಗೊಂದು ಹೆಣ್ಣು ಕೊಡಿ”

-ಪ್ರಶಾಂತ್ ಬೆಳತೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
RPS
RPS
1 year ago

Tunba channagide karunada koteya Kavi Kannada Kavi ps

Rps
Rps
1 year ago
Reply to  RPS

ಕರುನಾಡ ಕೋಟೆಯ ಕವಿ ಪ್ರಶಾಂತ್ ಸರ್ ನಿಮಗೆ ಕೋಟಿ ನಮನಗಳು

2
0
Would love your thoughts, please comment.x
()
x