ಪಂಜು ಕಾವ್ಯಧಾರೆ

ನಿನ್ನ ಸಂಧಿಸಿದ ಕುರಿತು

ಒಂದಿನಿತೂ ಕಾಣಿಸದ
ಕತ್ತಲೆಯ ಪ್ರಖರತೆಯಲ್ಲಿ
ನಿನ್ನ ಸಂಧಿಸಿದ ಕುರಿತು…

ಈರ್ವರ ಭೋರ್ಗರೆವ ಮೌನಗಳು
ಡಿಕ್ಕಿ ಹೊಡೆದು..
ಗುಡುಗೂ.. ಸಿಡಿಲೂ..!
ಅಂತಿಪ್ಪ ಕಾಲದ ನೆತ್ತಿಯನ್ನು
ತುಸುವೇ ನೇವರಿಸುತ್ತಾ
ತೇವದ ಅರಿವಾಗಿ ನಿಂತೆ..
ತೇಲು ಮೋಡವ ಹೊತ್ತ
ನಿನ್ನ ಕಣ್ಣು ಹನಿಸಿದ್ದು ಇರಬಹುದೇ
ಅನಿಸಿ ಒಂದಷ್ಟು ನಿಟ್ಟುರಿಸು..

ನಿನ್ನ ಮುಂಗುರುಳ ಗಾಳಿಗೆ ತಾಕಿ
ಸದ್ದಿಲ್ಲದ ಮಾತುಗಳ ಪಟ ಪಟ ಸದ್ದು..
ಬಯಲು ಆಗಸದ ತಾರೆಗಳು ನಮ್ಮ ಕಂಡಾವು
ಎಂಬ ನಾಚಿಕೆ ತುಸು ಹೆಚ್ಚು ನನಗೇ..

ಗಳಿಗೆಗಳು ಉರುಳಿದವು..
ಸೂರ್ಯನ ಟಾರ್ಚು ಮೊಗದ ಮೇಲೆ ನೇರಾ..
ಎಲ್ಲಿದ್ದೇನೆ ನಾನು ಅಂದುಕೊಳ್ಳುವಷ್ಟರಲ್ಲೇ
ನೀನೆಲ್ಲಿ ಮಂಗ ಮಾಯ …?

ಹಾ.. ಅಲ್ನೋಡು ಸುಟ್ಟು ಬೂದಿಯಾದ
ನಿಟ್ಟುಸಿರುಗಳು ..
ಅದೊಂದೇ ನಾವು ಸಂಧಿಸಿದ್ದಕ್ಕೆ ಸಾಕ್ಷಿಭೂತ..
ಜೋಪಾನವಾಗಿ ಎತ್ತಿಟ್ಟುಕೊಂಡಿರುವೆ.
ನಾಳೆ ನೀನು ಕೇಳಿದರೆ, ಪುರಾವೆ ಬೇಕಲ್ಲ..!
ಮತ್ತೊಮ್ಮೆ ಇದೇ ಮಾತು ಎತ್ತಬೇಕಲ್ಲ..!
ಒಂದಿಷ್ಟೂ ಕಾಣಿಸದ ಕತ್ತಲೆಯ ಪ್ರಖರತೆಯಲ್ಲಿ
ಮತ್ತೆ ಸಂಧಿಸುವ ಕುರಿತು…!

-ವಿಜಯ್ ದಾರಿಹೋಕ

ನೀ ಬರುವವರೆಗೂ

ಗೊತ್ತಿಲ್ಲದ ಬದುಕಿನಲ್ಲಿ
ನೀ ಬರುವೆಯಾ
ಬಂದರೂ ಕೂಡಾ
ದಾರಿಯ ಸುಳಿವು ನೀಡುವೆಯಾ
ಈ ಹಸನ್ಮುಖಿ ಮನಸ್ಸಿಗೆ

ನೀ ಬರುವವರೆಗೂ
ನಾ ಇರಬೇಕಲ್ಲವೇ

ನಾನಿರಬೇಕೆಂದರೆ
ನಿನ್ನ ಹೃದಯದ ಗೂಡಿನಲ್ಲಿ
ಪುಟ್ಟದೊಂದು ಬೆಚ್ಚನೆಯ
ಅಪ್ಪುಗೆಯ ಮಡಿಲು
ನನಗಿರಬೇಕು

ಕಾಯವೇ ನಿನಗಾಗಿ
ನೀ ಬರುವವರೆಗೆ
ನಿನ್ನ ಮಡಿಲು ಸೇರಲು

-ಡಾ|| ನವೀನಕುಮಾರ ಜಿ. ತಿಪ್ಪಾ

ಕನಸು..

ಕಣ್ಣ ರೆಪ್ಪೆ ಮುಚ್ಚಿದೊಡನೆ
ಧೊಥ್ ಎಂದು ಉದ್ಭವಿಸಿ
ಹೇಳದೆ ಕೇಳದೆ
ತೇಲಿ ಬಂದು ನನ್ನ ಸ್ಪರ್ಶಿಸಿ
ಎಡಬಿಡದೆ ನನ್ನ ಕಾಡುವೆ.

ಮನದ ಮೂಲೆಯಲ್ಲಿ
ಜಂಗು ಹಿಡಿದು ಬಿದ್ದಿದ್ದ
ನನ್ನ ಭಾವನೆಗಳಿಗೆ ಬೆಳಕು ಚೆಲ್ಲಿ
ಪ್ರೀತಿಯ ಜೀವ ತುಂಬುವೆ.

ತುಸು ಮುನಿಸು ಕೋಪದ
ಬಣ್ಣ ಬಣ್ಣದ ಮಾತುಗಳಿಂದ
ಕಾಡಿ ಬೇಡಿ ಗಲ್ಲಕೆ ಮುತ್ತನಿಕ್ಕಿ
ಕ್ಷಣದಲ್ಲಿ ಕಣ್ಮರೆಯಾಗುವೆ.

ಹಾಸಿಗೆಯಲ್ಲಿ ಮೈಚೆಲ್ಲಿ
ಕಣ್ಮುಚ್ಚಿ ಮಲಗಿದರೂ
ಬಿಡದೆ ಬೆಂಬಿಡದೆ ಕಾಡಿ
ಕದವ ಬಡಿದ ಒಳ ನಡಿದು
ನನ್ನ ಅಪ್ಪಿ ಆಲಂಗಿಸುವೆ.

ಈಗೇನಾಯಿತು ನಿನಗೆ
ಒಂದು ವಾರ ಕಳೆಯಿತು
ಇನ್ನೂ ನಿನ್ನ ಸುಳಿವಿಲ್ಲ
ನೀನಿರದೆ ಚೂರು ಖುಷಿಯಿಲ್ಲ.

ಹೇ! ಕನಸೇ..
ಬಂದು ಬಿಡು ತಡಮಾಡದೆ
ನಿತ್ಯ ನಿನ್ನ ಕಣವರಿಕೆಯಲ್ಲೇ
ಕಾಲ ಕಳೆಯುತ್ತಿದ್ದೇನೆ
ನೀ ಬರುವ ಹಾದಿಯಲಿ ಕಾಯುತ್ತಿದ್ದೇನೆ.

-ಹುಸೇನಸಾಬ ವಣಗೇರಿ,

ಶಶಿಗೊಂದು ಮನವಿಪತ್ರ

ಮೋಡದ ಮರೆಯಲ್ಲಿ
ಮರೆಯಾಗಿಬಿಡಬೇಡ
ಕೊಂಚ ನನ್ನತ್ತ ವಾಲಿ ನೋಡು
ಕಥೆಯೊಂದ ಹೇಳಲು
ಕಾತುರಳಾಗಿದ್ದೇನೆ.

ಕಥೆಯೆಂದರೆ,ನಿಜದ್ದು
ಮಧ್ಯೆ,ಮಧ್ಯ ಹೆಣೆದಿದ್ದೇನೆ
ಅದು ಕಥೆಗೆ ಅನಿವಾರ್ಯ ಅಂಗ
ಕಥೆಯ ನಾಯಕ ನೀನೇ ಎಂದರೆ,
ನಂಬುವೆಯಾ?

ನಿನ್ನ ನೋಡುವ ಕಾತುರ,
ಆತುರ,ಹಂಬಲ,ಸೆಳೆತ
ವಿರಹದ ವೇದಾಂತ,ಸಿದ್ಧಾಂತ
ಬೆಟ್ಟದಷ್ಟು ಪ್ರೀತಿ ಹೊತ್ತ
ಕಥೆಯೊಂದನ್ನು

ಎದೆಗೂಡಲ್ಲಿ ಬಚ್ಚಿಟ್ಟಿದ್ದೇನೆ
ಬಚ್ಚಿಟ್ಟ ಕಥೆಯನ್ನು ಬಿಚ್ಚಿಟ್ಟು,
ನಿನ್ನೆದುರೇ ನೀ ಇಷ್ಟ ಪಡುವ
ರಂಗೋಲಿಯೊಂದ
ಬಣ್ಣಗಳಿಲ್ಲದೆ ಬಿಡಿಸುವಾಸೆ,

ನಿನ್ನ ಕಂಗಳಿಗೆ
ಒಲವಿನ ಮಾಲೆಯೊಂದ
ತೊಡಿಸುವಾಸೆ,
ಮೋಡದ ಮರೆಯಲ್ಲಿ
ಕಳೆದುಹೋಗಬೇಡ,
ಕೊಂಚ ನನ್ನತ್ತ ವಾಲಿ ನೋಡು.

-ಲಕ್ಷ್ಮಿ ಕೆ ಬಿ,

ನಡುರಾತ್ರಿಯ ಕವಿತೆ

ನಿನ್ನ ಹೃದಯ ಬಾಗಿಲಿನಲಿ
ನಾನು ಧ್ಯಾನಸ್ಥನಾಗಿರುವ ಸಾಕ್ಷಿಯನ್ನೇ
ಸುಟ್ಟು ಹಾಕಿರುವ
ನಿನ್ನ ಇರುವಿಕೆಯನ್ನು ದೂಷಿಸುತ್ತೇನೆ;
ನಿನ್ನನಲ್ಲ
ಆಕಾರ-ನಿರಾಕಾರ ನೇಯ್ದ
ಆತ್ಮದ ಕೈಯಗಳನು
ಕುಡಗೋಲಿನಿಂದ ಕರಕರನೆ ಕೋಯ್ದ
ನಿನ್ನ ದ್ವಂದ್ವ ನಿಲುವುಗಳನ್ನು ದೂಷಿಸುತ್ತೇನೆ;
ನಿನ್ನನಲ್ಲ
ನಿಜದ ನೆಲೆಗೆ
ಹುಸಿ ಉಸಿರಿನ ಕಲ್ಲೆಸೆದು
ಸತ್ಯದ ತಲೆಯ ಮೇಲೆ
ಅಸತ್ಯದ ದೀನಸೀಗಳನಿಟ್ಟು ಮಾರಿದ
ನಿನ್ನ ನಡೆಯ ಹುಡಿ-ಕಿಡಿಗಳನ್ನು ದೂಷಿಸುತ್ತೇನೆ;
ನಿನ್ನನಲ್ಲ
ನೋಡುವ ಕಂಗಳು ಹೇಸಿಗೆಯಾಗಿ
ಮಾತು ಆಡುವ ನಾಲಿಗೆ ಮಲಿನವಾಗಿ
ಕಾಣುವ ಕನಸುಗಳಿಗೆ ವ್ಯಭಿಚಾರದ
ವಗ್ಗರಣೆಯ ವಾಸನೆ ಮೂಗಿಗೆ ಬಡೆದು
ನನಸು ಜೀವ ಜಡದ ಒಡಲಾಗಿ
ವಿಲಿವಿಲಿ ಒದ್ದಾಡಿ ಸಾಯುವುವಾಗಲೂ
ನೀನು ನಿರ್ವೀರ್ಯನಾಗಿ ನಗುವುದನ್ನು ದೂಷಿಸುತ್ತೇನೆ;
ನಿನ್ನನಲ್ಲ
ಎಲುಬಿನ ಹಂದರದೊಳಗೆ
ಯಾರ್ಯಾರೋ ಹಚ್ಚಿಟ್ಟು ಹೋದ
ಮಾನವತೆಯ ಕಿರುದೀಪದಾತ್ಮವನು ನಂದಿಸಲು
ನೀನು ಬಿರುಗಾಳಿಯಾಗಿ ಚಲಿಸುವುದನ್ನು ದೂಷಿಸುತ್ತೇನೆ;
ನಿನ್ನನಲ್ಲ

ನೀನು ನಾನಾಗುವ ಕಾಲದ ಕಿರುಗತ್ತಲು ಕವಿದರೆ;
ಕಾಲನ ಅಂಗಾಲಿಗೆ ಚೇಳಾಗಿ ಕುಟುಕಿ
ನಾನು ನಾನಾಗಲು ತುಡಿಯುತ್ತೇನೆ
ತೂಗಾಡುವ ಹಾವಿನ ಹೆಡೆಯ ಎದುರು
‘ಹೋಲ್ಯಾರ ತುಕ್ಕಪ್ಪನ ಜೀತಪದ’ವ ದನಿ ಎತ್ತಿ ಹಾಡಿ,
ಹೂವಾಗಿಸುತ್ತೇನೆ
ನಡುರಾತ್ರಿಯ ಕವಿತೆಗೆ
‘ಮಾನವತೆ’ಯೆಂದು ಹೆಸರಿಟ್ಟು ಕರೆಯುತ್ತೇನೆ.

-ಡಾ. ಸದಾಶಿವ ದೊಡಮನಿ

ಅಮ್ಮ
ನಿನ್ನೊಡಲಲಿ ನೀನಿತ್ತ
ಅಕ್ಷಯ ಪಾತ್ರೆಯಲ್ಲಿನ
ಅಗಳುಗಳ ಮೆಲ್ಲುತ್ತಾ
ನಿರ್ಭಯದಿ ಇರುವ ನನಗೇನು ಗೊತ್ತು
‘ನೀನೊಂದು
ಪಂಚ ಭೂತಗಳ ಸಂಘಾತ’ !
ಅಂತೇ

ನೀನು ನಿಜವಾಗಿಯೂ ಹೆಣ್ಣಿಗಿಂತ
ಒಂದಿಷ್ಟು ಹೆಚ್ಚು ಮಣ್ಣೇ
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ಸಂಪದವು
ಹೊನ್ನು ಹುಟ್ಟೋದು ಮಣ್ಣಲಿ
ಹೊಟ್ಟೆ ಹೊರೆಯೋದು ಮಣ್ಣು
ತೊಟ್ಟ ಬಟ್ಟೆಯ ವೈಭವ ಮಣ್ಣು
ಗುಡಿಸಲುಪ್ಪರಿಗೆ ಮಣ್ಣು
ಬರುವಾಗಲೂ ಮಣ್ಣು
ಹೋಗೋದೂ ಮಣ್ಣು

ಮಣ್ಣಿಗೂ ಕೃತಘ್ನ ತೆ
ತೋರುವ ನಮ್ಮ ಬಾಯಲ್ಲೂ ಉಸಿರಿರುವಾಗಲೆ ಮಣ್ಣು
ಅಮ್ಮನನ್ನು ಮಣ್ಣುಪಾಲು ಮಾಡಿದ
ಪಾಪಿಗಳು…

ಮಣ್ಣೇ ಹಸಿರು ಉಸಿರು
ಕೈಕೆಸರು ಬಾಯ್ ಮೊಸರು
ಜಲದುದರ ಮಣ್ಣು
ಜ್ವಾಲಾಗ್ನಿ ಅಡಗಿಹದು ಮಣ್ಣು
ಕ್ಷಮೆಗೊಂದು ಹೆಸರು ಮಣ್ಣು

ಅಮ್ಮ
ನೀನೊಂದು ಸೃಷ್ಟಿ ಎಂಬುದೂ ಬಲ್ಲೆ
ಇಂದು ನಿನಗೊಂದು ದಿನ
ಅಂತೇ ಬಂದಿರುವೆ ನಾ
ನಾಳೆ ಯಾಗಿ

ನಿನ್ನ ಭಕ್ತರ ಭುಕ್ತರ ದಂಡಿನಲಿ ಸಿಕ್ಕು ನುಗ್ಗಾದೇನೆನ್ನುವ ಭಯಕೆ…
ನಾನೇನೂ ತಂದಿಲ್ಲ ನಿನಗೆ
ಹಾರೈಕೆಯೂ ಇಲ್ಲಿಲ್ಲ
ಹಾರೈಕೆಗಳ ಜನನಿ ನೀನಿರುವಾಗ ನನಗೇನಿಲ್ಲ
ಬರೀಕೈಯಲಿ ಬಂದೆ
ಕೇವಲ ಚೊಂಬು ನೀರನು
ತಂದೆ

ಬೆಳಗಿನಿಂದ ದಣಿದ ನಿನ್ನ ಮನಕೆ ನೀನಿತ್ತ ಹನಿಗಳನ್ನು ಹನಿಸಲು
ಒಂದಿಂಚು ಈ ಕಾಯ ನಿನ್ನಡಿಗೆ
ಬಾಗಲು…..
ಕನಿಕರಿಸಿ ಕರುಣಿಸು
ನಿನ್ನದೊಂದಂಶ ನಾನಾಗಲು

ಅಷ್ಟೇ
ಇನ್ನೆನಿಲ್ಲ ಅಮ್ಮ
ನೀ ನನ್ನತರಂಗದ ಕಣ್ಣು

-ವಿದ್ಯಾಧರ ಮುತಾಲ ಕೈ ದೇಸಾಯಿ

ಚೈತ್ರದ ಕೋಗಿಲೆಗಳಲ್ಲ ನಾವು

ಚೈತ್ರದ ಕೋಗಿಲೆಗಳಲ್ಲ ನಾವು
ಹಾಡುತ್ತೇವೆ ನಿತ್ಯ ಚೈತ್ರವೆನುತ
ಹಾಡಿನ ಆಂತರ್ಯದ ರಾಗ, ವಿರಾಗ,
ಜಿಗುಪ್ಸೆ ಅರಿಯುವ ಹೃದಯವಿರಬೇಕು!

ವಸಂತ ಮಲ್ಲಿಗೆಯರಲ್ಲ ನಾವು ಅರಳುತ್ತೇವೆ
ನಿತ್ಯವೂ ಸೌರಭದೊಂದಿಗೆ! ನಗುವಿನ
ಆಂತರ್ಯದ ನೋವು ನಲಿವು ನರಳಾಟ
ಅರಿಯುವ ಹೃದಯವಿರಬೇಕು!

ವಿದ್ಯುತ್ ದೀಪಗಳಲ್ಲ ನಾವು
ಬೆಳಗುತ್ತೇವೆ ಕರುಳ ಹುರಿ ಬತ್ತಿ ಮಾಡಿ
ಬೆವರ ತೈಲವ ಸುರಿದು!
ಬೆಳಕಿನ ಆಂತರ್ಯದ ಶ್ರಮ, ಸಹನೆ,
ಕಾಳಜಿ ಅರಿಯುವ ಹೃದಯವಿರಬೇಕು!

ಗಂಧದ ಕೊರಡಲ್ಲ ನಾವು
ಸವೆಯುತ್ತೇವೆ ನಿತ್ಯವೂ ಸಿರಿಗಂಧದಂತೆ!
ಮೈ ಮನದ ಸುಳಿಗಳ ದಣಿವು,
ಬೇಸರ ದುಗುಡ- ದುಮ್ಮಾನಗಳರಿಯುವ
ಹೃದಯವಿರಬೇಕು!

ಅಗಸದ ತಾರೆಗಳಲ್ಲ ನಾವು ಮಿನುಗುತ್ತೇವೆ
ನಿತ್ಯವೂ ಅಲಂಕಾರದೊಂದಿಗೆ !
ಹೊಳಪಿನ ಆಂತರ್ಯದಲ್ಲಿರುವ
ಶೂನ್ಯತೆ, ಘನತೆ, ಮಾನ್ಯತೆಯನರಿಯುವ
ಹೃದಯವಿರಬೇಕು!

ದೇವತೆಗಳಲ್ಲ ನಾವು ಒದಗಿಸುತ್ತೇವೆ
ಅಗತ್ಯತೆಗಳನ್ನೆಲ್ಲ ಮಾನವಾಗಿ!
ಮೌನದಾಳದ ಕರುಣೆ, ಮಮತೆ,
ತಾಯ್ತನವನರಿಯುವ ಹೃದಯವಿರಬೇಕು!

ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಪ್ರೀತಿಯ ಭಾವಾರ್ಥ ನೀ

ಹೊಕ್ಕಳ ಬಳ್ಳಿ ಅರಳಿ
ಹೂವಾದ ಸಮಯ

ನನ್ನ ಕನಸು,ನನ್ನ ತೋಳಲ್ಲಿ
ನನ್ನ ಹೃದಯವೇ, ನನ್ನ ಕೈಯಲ್ಲಿ
ಪ್ರಪಂಚವೇ, ಅಂಗೈಯಲಿ.
ನಿತ್ಯ ವೆಲ್ಲವೂ ಮಿತ್ಯ
ಇಂದೇ ಸ್ತುತ್ಯ, ಅದೊಂದೇ ಸತ್ಯ
ಪ್ರೀತಿಯ ಸಾತತ್ಯ ಹರಡಲಿ ಗಾರ್ಹಪತ್ಯ.

ಹೊಸ ಅನುಭವಕೆ,
ಬಣ್ಣ-ಬಣ್ಣದ ಭಾವಗಳ ಲೇಪನ
ಘನವೋ ಘನ ಮನದ ಸಂತಸ ಕ್ಷಣ
ತನು-ಮನ ಪಾವನ, ಮಾತು-ಮೌನ.

ಅಳುವ ಕಂಠದಿ ಸರಿಗಮ ನಾದ,
ಹೊಳೆವ ಕಣ್ಣಲಿ ಪಂಚಮವೇದ
ನಮ್ಮ ಪ್ರೀತಿಯ ಜೀವ ನೀ,
ನಮ್ಮ ಜೀವದ ಪ್ರಾಣ ನೀ.

~ಸ್ವರೂಪ್

ಅಪ್ಪ ಮೊನ್ನೆ ಭೇಟಿಯಾಗಿದ್ದ

ಸಾವು ಮತ್ತು ಬದುಕಿನ ನಡುವಿನ
ನನ್ನುಸಿರಿಗಾಗಿ ನೀವೆಲ್ಲ ಸೇರಿ ಪರದಾಡಿದ
ಆ ಕೊನೆಯ ಹದಿನೇಳು ದಿನಗಳು ನಾನು
ಮರೆತಿಲ್ಲ ಮಗನೇ…

ದೂರ ಊರಿನ ಬದುಕಿನಲ್ಲಿ ನೀನು,
ನಿನ್ನ ಕೊ೦ದು ತಿನ್ನುವ ಕಾಯಿಲೆ
ಒಳಗೊಳಗೆಯೇ ಮುಚ್ಚಿಟ್ಟು ನನ್ನ
ಅನಾರೋಗ್ಯದ ಬಗ್ಗೆ ಜೀವವನ್ನೇ ಬಿಟ್ಟು
ಓಡೋಡಿ ಬಂದು ಬಿಗಿದಪ್ಪಿ ಅತ್ತಿದ ಆ
ದಿನಗಳು ನಾನು ಮರೆತಿಲ್ಲ ಮಗನೇ…

ಮುದಿವಯಸ್ಸಿನ ಈ ಜೀವ ಯಾಕೋ
ಈಗಷ್ಟೇ ಹುಟ್ಟಿದ ಏನೂ ಅರಿಯದ
ಎಳೆಗೂಸಿನ೦ತೆ ಸೋತುಬಿದ್ದ ದೇಹಕ್ಕೆ
ಪ್ರೀತಿಯಿಂದ ಸಮಜಾಯಿಷಿ ಕೈ ತುತ್ತು
ಉಣಿಸುವ ಮಗಳ೦ದಿರು, ಮಗಳ
ಪ್ರೀತಿಯ ನಡುವೆ ಬಾಲ್ಯದ ಅಮ್ಮ
ನೆನಪಾಗಿದ್ದು, ಆ ದಿನಗಳು ನಾನು ಮರೆತಿಲ್ಲ
ಮಗನೇ…

ಸಮಯಗಳ ಪರಿವೆಯಿಲ್ಲದೆ ನಗರದ
ಬೀದಿ ಬೀದಿ ಅಲೆದು ಇನ್ನೂ ಬೇರೆ ಬೇರೆ
ಆಸ್ಪತ್ರೆಗಳ ಹುಡುಕಾಟದ ಗಡಿಬಿಡಿಯಲ್ಲಿ
ಅಳಿಯ೦ದಿರು,
ಮಾವ ಆದಷ್ಟು ಬೇಗನೆ
ಚೇತರಿಸಿಕೊಳ್ಳುತ್ತಾನೆ೦ಬ ಆಸೆಯಿಟ್ಟು
ಕೊನೆಗೂ ನಿರಾಸೆಯಾಗಿ ವೈದ್ಯರೊಬ್ಬರ
ಕುತ್ತಿಗೆ ಹಿಡಿದು ಬೈದಾಡಿಕೊ೦ಡ ಆ
ದಿನಗಳು ನಾನು ಮರೆತಿಲ್ಲ ಮಗನೇ…

ತೆರೆದ ಕಿಟಕಿಯಿಂದ ನೂರಾರು ಬಾರಿ
ಹಣಕಿ ತೋಟದ ಸುತ್ತ ದಿಟ್ಟಿಸಿ
ನೋಡುತ್ತಾಳೆ ನಿನ್ನ ತಾಯಿ,
ಕಳೆದುಹೋದ ಜೀವ
ಮರಳಿ ಬರಬಹುದೆನ್ನುವ ಆಸೆಯಲ್ಲಿ
ದೈವವನ್ನೇ ನ೦ಬಿ ಬ೦ದ ಆಕೆ ಮತ್ತೆ ಮತ್ತೆ
ದೇವರೆದುರು ಕಣ್ಣೀರು ಹಾಕಿ
ಎಕಾ೦ಗಿಯಾಗಿ ಕೊರಗಿ ಕೊರಗಿ ನರಳುವ
ಆ ದಿನಗಳು ನಾನು ಮರೆತಿಲ್ಲ ಮಗನೇ…

ಹೆತ್ತವರ ದು:ಖ ಹೆತ್ತ ಮಕ್ಕಳಿಗಷ್ಟೇ ಎಂದು
ಕಟ್ಟಿಕೊ೦ಡವಳ ಮುಂದೆ ಸಿಡುಕ ಬೇಡಾ
ಮಗನೇ, ನಿನ್ನ ಮಾನಸಿಕ ಬದುಕು
ನೋಡಲಾಗದೆ ದು:ಖವನ್ನು
ಮನಸಿನೊಳಗೆ ಬಚ್ಚಿಟ್ಟು ಮನಸ್ಸಿಗೂ
ತಿಳಿಯದ ಹಾಗೆ ಅವಳು ಬಿಕ್ಕಿ ಬಿಕ್ಕಿ
ಅತ್ತಿದ ಆ ದಿನಗಳು ನಾನು ಮರೆತಿಲ್ಲ
ಮಗನೇ…

ಹಗಲಿರುಳು ಅಜ್ಜನ ಬೆನ್ನಹಿಂದೆಯೇ
ಓಡಾಡುವ ಮೊಮ್ಮಗನ ಪ್ರೀತಿಯ
ತೊದಲು ಮಾತುಗಳು ಇನ್ನೂ
ಬಹಳ ದಿನ ಕೇಳಬೇಕೆನ್ನುವ ನಸೀಬು
ನನಗಿಲ್ಲದಾಗಿಹೋಯಿತು ಮಗನೇ,
ಅಜ್ಜ ದೇವರಲ್ಲಿಗೆ ಹೋಗಿದ್ದಾನೆ೦ದು
ನೀನು ದೊಡ್ಡವನಾದ ಮೇಲೆ ಮರಳಿ
ಬರುತ್ತಾನೆ೦ದು ಸುಳ್ಳು ಹೇಳಿ
ಸುಳ್ಳಿನಲ್ಲಿಯೇ ಸಮಯಗಳುರುಳಿಸಿದ್ದ
ಆ ದಿನಗಳು ನಾನು ಮರೆತಿಲ್ಲ ಮಗನೇ…

ಹೋದ ಜೀವಕ್ಕೆ ಮತ್ತೆ ಮತ್ತೆ ನೆನಪಿಸಿ
ನಿನ್ನ ಜೀವನವನ್ನೇ ಕೊಲ್ಲಬೇಡಾ ಮಗನೇ,
ಈಗಲಾದರೂ ಮರೆತು ಬಿಡು,
ನೀನಗಾಗಿ…
ನಿನ್ನ ಪ್ರೀತಿಯ ನಡುವೆ ಬದುಕು
ಕಟ್ಟಿಕೊ೦ಡವರ ಬದುಕಿಗಾಗಿ…..

-ನರೇಶ ನಾಯ್ಕ ದಾಂಡೇಲಿ

ವಾಸ್ತವ

ಸುಣ್ಣದ ಬರಿಯ ನೀರ ತೋರಿ
ಹಾಲೆಂಬ ಮಂದಿ ಇಲ್ಲಿ ನೂರು
ಬರಿಯ ಮುಖವಾಡಗಳ ಕಾರುಬಾರು
ರಂಗಭೂಮಿ ಪಾತ್ರಗಳ ಆಟ ಸಾವಿರಾರು !!

ನಗೆಯ ತಳದ ಕುಹುಕವ ಬಲ್ಲವನಾರು?
ಅಳುವಿನ ಆಳದ ಸತ್ಯವ ಅರಿತವನಾರು?
ಬರಿಗಣ್ಣ ಸತ್ಯ ಇಲ್ಲಿ ನಿಜದಿ ಸತ್ಯವಲ್ಲ
ಮಿಥ್ಯವೇ ಅಡಗಿಹುದು ನಿಜದ ತುಂಬೆಲ್ಲ!!

ಬರಿಯ ಮಾತಿನ ಗೋಪುರ ಕಟ್ಟಿಹರು
ಕಾಯಕ ಮಾಡದೇ ಪರರ ಜರಿದಿಹರು
ತಾನು ತನ್ನದೆಂದು ಬೀಗಿಹರು ಈ ಮಂದಿ
ಬಿದ್ದಾಗ ನಗುವರು ಇಲ್ಲಿ ಹಲವು ಮಂದಿ!!

ಆತ್ಮವನೇ ವಂಚಿಸಿ ಸಾಗುವ ಈ ಮಂದೆ
ದೇವನೇ ಹೆದರುವನು ಇವರ ಮುಂದೆ
ಬರಿಯ ಧನವೇ ಇವರ ಅತೀ ಬಯಕೆ
ಹೆಣದ ಎದುರೂ ಅದರದೇ ಕಾಡುವ ಕನವರಿಕೆ!!

ತತ್ವಗಳು ಬರಿಯ ಹಳೆಯ ಪುಟದ ಸಾಲುಗಳು
ಓದುಗನಿಲ್ಲದೇ ಸೊರಗಿದ ಸೊಗಸ ಪದಗಳು
ತಿರುಗುತಿದೆ ಭೂಮಿ ಇಂದೂ ಎಂದಿನಂತೆ
ನಿಂತ ದಿನ ಅಳಿಯುವುದು ಈ ಮಿಥ್ಯದ ಸಂತೆ!!

-ನಿರಂಜನ ಕೇಶವ ನಾಯಕ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x