ಬೆತ್ತಲೆ ಒಂದು ಸುಂದರವಾದ ಸ್ಥಿತಿ ಎನ್ನುವ “ಅತ್ತರ್”:‌ ಡಾ. ನಟರಾಜು ಎಸ್‌ ಎಂ

ತಮ್ಮ “ಬೇರು” ಕೃತಿಗಾಗಿ ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಗೆಳೆಯ ಶ್ರೀಧರ ಬನವಾಸಿಯವರು ಕಳೆದ ವಾರ ‌ತಮ್ಮ ಪಂಚಮಿ ಪ್ರಕಾಶನದಿಂದ ಹೊರ ತಂದಿರುವ ಕೆ ನಲ್ಲತಂಬಿಯವರ ಹೊಚ್ಚ ಹೊಸ ಕೃತಿ “ಅತ್ತರ್” ಅನ್ನು ಕಳುಹಿಸಿಕೊಟ್ಟಿದ್ದರು. ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಗೆಳೆಯ ಶ್ರೀಧರ್‌ ತಮ್ಮ ಪ್ರಕಾಶನ ಸಂಸ್ಥೆಯಿಂದ ನಲವತ್ತೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. “ಅತ್ತರ್”‌ ಇವರ ಸಂಸ್ಥೆ ಪ್ರಕಟಿಸಿರುವ ಕೆ ನಲ್ಲತಂಬಿಯವರ ಮೊದಲ ಪುಸ್ತಕ.

ಕೆ ನಲ್ಲತಂಬಿಯವರು ಅನುವಾದ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವವರು. ಮೂಲತಃ ಮೈಸೂರಿನವರಾದ ಇವರು ಈವರೆಗೆ ಇಪ್ಪತ್ತೊಂದು ಕೃತಿಗಳನ್ನು ಕನ್ನಡದಿಂದ ತಮಿಳಿಗೆ ಅನುವಾದಿಸಿರುವುದಲ್ಲದೆ, ತಮಿಳಿನಿಂದ ಕನ್ನಡಕ್ಕೆ ೯ ಕೃತಿಗಳನ್ನು ಅನುವಾದಿಸಿದ್ದಾರೆ. ನೇಮಿಚಂದ್ರ ಅವರು ಬರೆದಿರುವ “ಯಾದೇ ವಶೀಮ್‌” ಎಂಬ ಕೃತಿಯನ್ನು ತಮಿಳಿಗೆ ಅನುವಾದಿಸಿರುವ ಕೆ ನಲ್ಲತಂಬಿಯವರು ಆ ಕೃತಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅನುವಾದ ವಿಭಾಗದಲ್ಲಿ ತಮಿಳು ಭಾಷೆಗೆ ಪಡೆದಿದ್ದಾರೆ. ಅವರ ಪ್ರಕಟಿತ ಕೃತಿಗಳನ್ನು ಗಮನಿಸಿದಾಗ ೨೦೧೩ ರಿಂದ ಅನುವಾದ ಸಾಹಿತ್ಯದಲ್ಲಿ ಹೆಚ್ಚು ತೊಡಗಿಕೊಂಡಿರುವ ನಲ್ಲತಂಬಿಯವರು ಕಳೆದೆರಡು ವರ್ಷಗಳಿಂದ ಅನುವಾದ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎನ್ನುವುದು ಕಂಡು ಬರುತ್ತದೆ. ತಮಿಳಿನಲ್ಲಿ ಪ್ರಕಟವಾಗಿರುವ ಅವರ ಸ್ವತಂತ್ರ ಕೃತಿ “ಅತ್ತರ್”‌ ಕಥಾಸಂಕಲನ ಈಗ ಕನ್ನಡದಲ್ಲಿಯೂ ಪ್ರಕಟವಾಗಿದೆ. ಎರಡೂ ಭಾಷೆಗಳಲ್ಲೂ ಇವರೇ ಕತೆಗಾರರಾಗಿರುವುದರಿಂದ ಇದನ್ನು ಅನುವಾದ ಎನ್ನದೇ ಸ್ವತಂತ್ರ ಕೃತಿ ಎನ್ನಬಹುದು.

“ಅತ್ತರ್‌” ಕೃತಿ ೧/೮ ಕ್ರೌನ್‌ ಅಳತೆಯ ೯೬ ಪುಟಗಳ ಕೇವಲ ಆರು ಕತೆಗಳುಳ್ಳ ಪುಟ್ಟ ಪುಸ್ತಕವಿದು. ಎಲ್ಲಾ ಕತೆಗಳು ೧೨ ರಿಂದ ಹದಿನೈದು ಪುಟಗಳ ಒಳಗೆ ಇರುವ ಕತೆಗಳು. ಒಂದೊಂದು ಕತೆಗಳನ್ನು ನಿಧಾನವಾಗಿ ಓದಿಕೊಂಡರೂ ಎಲ್ಲಾ ಕತೆಗಳನ್ನು ಎರಡು ಎರಡೂವರೆ ಗಂಟೆಗಳಲ್ಲಿ ಪೂರ್ತಿಯಾಗಿ ಓದಿ ಮುಗಿಸಿಬಿಡಬಹುದು. ಈ ಪುಸ್ತಕಕ್ಕೆ ಸೌಮ್ಯ ಕಲ್ಯಾಣಕರ್‌ ಅವರ ಚಂದದ ಮುಖಪುಟ, ಶೇಷಾದ್ರಿ ಧನಗೂರು ಅವರ ಒಳ ಪುಟವಿನ್ಯಾಸವಿದೆ. “ಅತ್ತರ್‌” ಕಥಾ ಸಂಕಲನದಲ್ಲಿ ಮುನ್ನುಡಿಗಳಾಲಿ, ಲೇಖಕರ ನುಡಿಗಳಾಗಲಿ ಇಲ್ಲ. ಪುಸ್ತಕದ ಬ್ಲರ್ಬ್‌ ನಲ್ಲಿ ಕೀರ್ತಿ ಭಟ್‌, ಶಿವರಾಮ ಪಡಿಕ್ಕಲ್‌ ರವರ ನುಡಿಗಳಿದ್ದರೆ, ಶ್ರೀಧರ್‌ ಬನವಾಸಿಯವರ ಬೆನ್ನುಡಿ ಈ ಪುಸ್ತಕಕ್ಕಿದೆ. “ಹೇಳದ ಎಲ್ಲಾ ಪ್ರೇಮಗಳಿಗೆ” ಎಂದು ಪುಸ್ತಕವನ್ನು ಅರ್ಪಿಸಿರುವ ಕೆ ನಲ್ಲತಂಬಿಯವರ ಪುಸ್ತಕದ ಕತೆಗಳಲ್ಲಿ ಅನೇಕ ಒಳಹೂರಣಗಳಿದ್ದರೂ ಅವರ ಕತೆಗಳಲ್ಲಿನ ಆಹಾರ ಸಂಸ್ಕೃತಿ ಮತ್ತು ಕತೆಗಾರನ ತಂತ್ರಗಾರಿಕೆ ಎಂಬ ಎರಡು ವಿಚಾರಗಳನ್ನು ಮಾತ್ರ ಇಲ್ಲಿ ತಿಳಿಸಲು ಬಯಸುತ್ತೇನೆ. ಉಳಿದ ವಿಚಾರಗಳನ್ನು ನೀವು ಪುಸ್ತಕವನ್ನು ಕೊಂಡು ಓದಿ ತಿಳಿಯಿರಿ.

ಫುಡ್‌ ಕಲ್ಚರ್‌
ಸಾಮಾನ್ಯವಾಗಿ ಕತೆಗಳಲ್ಲಿ ಕತೆಗಾರರು ಸಂಬಂಧಗಳ ಸಂಕೀರ್ಣತೆಗಳ ಬಗ್ಗೆಯೋ, ಕತೆಯು ನಡೆಯುತ್ತಿರುವ ಪರಿಸರದ ಬಗ್ಗೆಯೋ ಹೆಚ್ಚು ಒತ್ತುಕೊಟ್ಟು ಬರೆಯುತ್ತಾರೆ. ಆದರೆ ಕತೆಗಳಲ್ಲಿ ಆಹಾರ ಸಂಸ್ಕೃತಿ ಕುರಿತು ಬರೆಯುವುದು ತುಂಬಾ ಕಡಿಮೆ. ಕೆ ನಲ್ಲತಂಬಿಯವರ ಕತೆಗಳಲ್ಲಿ ಆಹಾರ ಸಂಸ್ಕೃತಿಯ ಕುರಿತು ಅನೇಕ ಕತೆಗಳಲ್ಲಿ ಪ್ರಸ್ತಾಪವಾಗಿದೆ. “ಫ್ರಿಡ್ಜಿನಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಇಡ್ಲಿ ಹಿಟ್ಟು ರುಬ್ಬಿಟ್ಟು ಹೋಗಿದ್ದಳು” ಎನ್ನುವ ಸಾಲಿರುವ “ಮನೆಯಲ್ಲಿ ಒಂಟಿಯಾಗಿ..” ಕತೆಯಲ್ಲಿ ಕಥಾನಾಯಕ ಮನೆಯಲ್ಲಿ ಇಡ್ಲಿಯ ಹಿಟ್ಟಿದ್ದರೂ ಬೋರ್‌ ಆಗಿ “ದೋಸೆ” ತಿಂದು ಮಲಗುತ್ತಾನೆ. ಈ ಕತೆಯಲ್ಲಿ ಇಡ್ಲಿ ಮತ್ತು ದೋಸೆಯ ಪ್ರಸ್ತಾವನೆ ಸಾಮಾನ್ಯವಾದ ಆಹಾರ ಪದ್ದತಿಯ ಕುರಿತು ಹೇಳುತ್ತದೆ.

“ಅತ್ತರ್‌” ಕತೆಯಲ್ಲಿ “ಸಣ್ಣದಾಗಿ ಕ್ಯಾರೆಟ್‌ ಬೀನ್ಸ್‌ ಹೆಚ್ಚಿ, ಬಟಾಣಿ ಹಾಕಿ ಬಾಳೆಲೆಯಲ್ಲಿ ಬಡಿಸಿದ ಬಿಸಿಬೇಳೆಬಾತಿನ ಮೇಲೆ ತುಪ್ಪ ಸುರಿದು, ಕರಿದ ಕಡಲೆ ಬೀಜ ಹಾಕಿ, ಆಂಬೊಡೆ, ಈರುಳ್ಳಿ ಸೌತೆಕಾಯಿ ರಾಯಿತಾದೊಂದಿಗೆ” ಎಂದು ಬಣ್ಣಿಸುವ ಲೇಖಕರು ಬಿಸಿಬೇಳೆಬಾತು ಕನ್ನಡಿಗರ ಊಟ ಎಂದಿದ್ದಾರೆ. ಜೊತೆಗೆ ಈ ಕತೆಯಲ್ಲಿ ಹೈದರಾಬಾದಿನ ರೆಸ್ಟೋರೆಂಟ್‌ ಒಂದರ ಮೆನುವನ್ನು ನಮ್ಮ ಮುಂದಿಡುತ್ತಾರೆ. “ಸ್ವೀಟ್‌ ಅಂಡ್‌ ಸಾಲ್ಟ್‌ ಲೆಮೆನ್‌ ಸೋಡ, ರೋಟಿ, ಆಲೂ ಪಾಲಕ್‌, ಗೋಬಿ ಮಸಾಲ, ಜೀರಾ ರೈಸ್‌, ದಾಲ್‌ ತಡ್ಕಾ, ಕ್ಯಾರಮಲ್‌ ಕಸ್ಟರ್ಡ್‌, ಕುರ್ಬಾನಿ-ಕ-ಮೀಟಾ, ಶಾಹಿ ತುಕ್ಡಾ,” ಹೀಗೆ ಲೇಖಕರು ಕತೆಯಲ್ಲಿ ನಮೂದಿಸಿರುವ ಈ ಎಲ್ಲಾ ಐಟಮ್ ಗಳು ಸಾಮಾನ್ಯವಾಗಿ ರೆಸ್ಟೋರೆಂಟ್‌ ಗಳಲ್ಲಿ ಸಿಗುತ್ತದೆಯಾದರೂ ಕುರ್ಬಾನಿ-ಕ-ಮೀಟಾ ಮತ್ತು ಶಾಹಿ ತುಕ್ಡಾ ಹೈದರಾಬಾದಿನ ವಿಶೇಷ ಖಾದ್ಯಗಳು ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಕತೆಯಲ್ಲಿ ಮೊಗಲರ ಕಾಲದಲ್ಲಿ ಆವಿಸ್ಕಾರಗೊಂಡ ಶಾಹಿ ತುಕ್ಡಾದ ವರ್ಣನೆಯೇ ಒಮ್ಮೆಯೂ ಅದರ ರುಚಿ ನೋಡದ ನನ್ನಂತಹವರು ಸಹ ಒಮ್ಮೆ ಅದರ ಸವಿ ಸವಿಯಬೇಕು ಅನಿಸುತ್ತದೆ….

“ಆರೆಂಜ್‌ ಜ್ಯೂಸ್‌, ಪಪ್ಪಾಯ, ಟೋಸ್ಟ್‌, ಆಮ್ಲೆಟ್‌” ಇದು “ತಮನ್ ನೆಗಾರ” ಕತೆಯಲ್ಲಿ ಸಿಗುವ ಬ್ರೇಕ್‌ ಫಾಸ್ಟ್.‌ “ಪಿಂಕ್‌ ಅಂಡ್‌ ಬ್ಲೂ” ಕತೆಯಲ್ಲಿ ಬರುವ “ಕಟ್ಲೇಟ್‌”, ಅದನ್ನು ತಿನ್ನುವ ವಿಧಾನ, “ಆಲ್ಬರ್ಟ್‌ ಕಮೂವಿನ ಔಟ್‌ ಸೈಡರ್‌” ಕತೆಯಲ್ಲಿ ಬರುವ “ಹುರಿದ ಗೋಡಂಬಿ, ಚಿಪ್ಸ್‌,” ಹೀಗೆ ಸಂದರ್ಭಕ್ಕೆ ತಕ್ಕ ಹಾಗೆ ಲೇಖಕರು ಕಥಾನಾಯಕ ಮತ್ತು ಕಥಾನಾಯಕಿಗೆ ಒಳ್ಳೊಳ್ಳೆ ಊಟ ಮಾಡಿಸಿದ್ದಾರೆ ಎನ್ನಬಹುದು. ಜೊತೆಗೆ ಅನೇಕ ಕತೆಗಳಲ್ಲಿ ಕಾಫಿ ವಿಶೇಷ ಸ್ಥಾನ ಪಡೆದಿದೆ. ಬಿಯರ್‌, ವೈನ್‌, ಶಾಂಫೈನ್‌, ಷಿವಾಸ್‌ ರೀಗಲ್‌ ವಿಸ್ಕಿ ಮುಂತಾದ ಪಾನೀಯಗಳು ಕೂಡ ಕತೆಗಳಲ್ಲಿ ಕಥಾಹಂದರಕ್ಕೆ ತಕ್ಕ ಹಾಗೆ ಬಂದು ಹೋಗುತ್ತವೆ. ವಿಶೇಷ ಸಂದರ್ಭದ ಊಟಗಳ ಕುರಿತು ಮಾತನಾಡುವ ಲೇಖಕರು “ಆಲ್ಬರ್ಟ್‌ ಕಮೂವಿನ ಔಟ್‌ ಸೈಡರ್‌” ಕತೆಯಲ್ಲಿ “ಎರಡು ದಿನ ಏನನ್ನೂ ತಿನ್ನದೇ ನಲ್ಲಿಯ ನೀರನ್ನು ಮಾತ್ರವೇ ಕುಡಿದು ಹೊಟ್ಟೆ ತುಂಬಿಸಿಕೊಂಡು ಇಂಟರ್ವ್ಯೂವಿಗೆ ಹೋಗಿ ಬರುತ್ತಿದ್ದ.” ಎನ್ನುವುದರ ಮೂಲಕ ಹಸಿವನ್ನು ಕೂಡ ಇಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.

ಕತೆಗಾರನ ತಂತ್ರಗಾರಿಕೆ
ಕೆ ನಲ್ಲತಂಬಿಯವರು ತಮ್ಮ ಈ ಕತೆಗಳಲ್ಲಿ ಎಷ್ಟು ಪಾತ್ರಗಳಿರಬೇಕು, ಅವುಗಳಿಗೆ ಒಂದಕ್ಕೊಂದು ಏನು ಸಂಬಂಧ, ಕತೆ ಯಾವ ಯಾವ ಜಾಗಗಳಲ್ಲಿ ನಡೆಯಬೇಕು, ಆ ಜಾಗಗಳ ವೈಶಿಷ್ಟ್ಯತೆ ಏನು, ಕತೆಗಳಿಗೆ ಏನೇನು ತಿರುವು ಕೊಡಬೇಕು ಎನ್ನುವ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕತೆ ಹೆಣೆದಿದ್ದಾರೆ ಎನ್ನಬಹುದು. ಅವರ ತಂತ್ರಗಾರಿಕೆಯ ಬ್ಲೂ ಪ್ರಿಂಟ್‌ ಅನ್ನು “ಪಿಂಕ್‌ ಅಂಡ್‌ ಬ್ಲೂ” ಕತೆಯಲ್ಲಿ ತುಂಬಾ ಓಪನ್‌ ಆಗಿ ತೆರೆದಿಟ್ಟಿದ್ದಾರೆ. ಕತೆ ಕಟ್ಟೋದು ಹೇಗೆ ಎಂದು ಯೋಚಿಸುವವರಿಗೆ “ಪಿಂಕ್‌ ಅಂಡ್‌ ಬ್ಲೂ” ಕತೆಯ ಮೇಲೆ ಕಣ್ಣಾಡಿಸಿದರೆ “ಓ ಕತೆಯ ರೂಪು ರೇಶೆಗಳನ್ನು ಹೀಗೆ ಬರೆದಿಟ್ಟುಕೊಳ್ಳಬೇಕು” ಅನಿಸದೆ ಇರದು. “ಪಿಂಕ್‌ ಅಂಡ್‌ ಬ್ಲೂ” ಕತೆಯಲ್ಲಿ ಲೇಖಕರು “ಕಾವೇರಿ”, “ಶ್ರೀರಂಗಪಟ್ಟಣ” “ಒಲಂಪಿಯಾ ಟಾಕಿಸ್‌” “ಕರಿಷ್ಮಾ ರೆಸ್ಟೋರೆಂಟ್”‌ “ಸರೋಜ, ಅನುರಾಧ, ಅತ್ರೇಯ,” “ಪಿಂಕ್‌ ಅಂಡ್‌ ಬ್ಲೂ” ಮತ್ತು “ಲಲಿತಾ ಮಹಲ್‌ ಪ್ಯಾಲೆಸ್” ಎಂಬ ಸಬ್‌ ಹೆಡ್ಡಿಂಗ್‌ ಗಳನ್ನು ನೀಡಿದ್ದಾರೆ. ಆ ಸಬ್‌ ಹೆಡ್ಡಿಂಗ್‌ ಗಳ ಅಡಿಯಲ್ಲಿ ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಇದೇ ಅಂಶಗಳು ಇವರ ಉಳಿದ ಐದು ಕತೆಗಳಲ್ಲಿ ಬೇರೆ ಬೇರೆ ರೂಪದಲ್ಲಿ ಹೊರಹೊಮ್ಮಿ ಕತೆಗಳಾಗಿ ಹೆಣೆಯಲ್ಪಟ್ಟಿವೆ ಎನ್ನಬಹುದು.

ಮೊದಲಿಗೆ ಕಾವೇರಿಯ ಪ್ರಸ್ತಾಪನೆಯನ್ನು ನೋಡಿದರೆ, ಒಂದು ನದಿ ಎಂದಾಗ ಅದರಲ್ಲೂ ಕಾವೇರಿ ಎಂಬ ಹೆಸರು ಕಣ್ಣಿಗೆ ಬಿದ್ದಾಗ ನಮ್ಮೊಳಗೆ ಒಂದು ಪ್ರಕೃತಿಯ ಸೌಂದರ್ಯ ಪ್ರಜ್ಞೆ ಜಾಗೃತವಾಗಿಬಿಡುತ್ತದೆ. ಅದೇ ಸೌಂದರ್ಯ ಪ್ರಜ್ಞೆಯನ್ನು ಲೇಖಕರು ಮಲೇಶಿಯಾದ ರಾಷ್ಟ್ರೀಯ ಉದ್ಯಾನವನ ಹಾಗು ಮಳೆಕಾಡಾದ “ತಮನ್‌ ನೆಗಾರ”ವನ್ನು ತಮ್ಮ ಕತೆ “ತಮನ್‌ ನೆಗಾರ”ದಲ್ಲಿ ವರ್ಣಿಸಲು ಬಳಸಿದ್ದಾರೆ.. ಇನ್ನು ಶ್ರೀರಂಗಪಟ್ಟಣದ ಪ್ರಸ್ತಾವನೆ ಒಂದು ಊರಿನ ಹೆಸರಾದರೂ ಅದರ ಸಾಂಸ್ಕೃತಿಕ ಹಿನ್ನಲೆ, ಆ ಸ್ಥಳದ ಮಹಿಮೆ ನಮಗೆ ಅದಾಗಿ ಅದೇ ಮನಸ್ಸಿಗೆ ಬಂದುಬಿಡುತ್ತದೆ. ಯಾಕೆಂದರೆ ಶ್ರೀರಂಗಪಟ್ಟಣವನ್ನು ನೋಡಿಯೋ, ಇಲ್ಲ ಅದರ ಬಗ್ಗೆ ಓದಿಯೋ ತಿಳಿದಿರುತ್ತೇವೆ. ಅದೇ ರೀತಿ ಲೇಖಕರು, ಮಲೇಶಿಯ, ಸಿಂಗಾಪುರ್‌, ಹೈದರಾಬಾದ್‌, ಶಿವಮೊಗ್ಗ ಊರುಗಳ ಕುರಿತು ತಮ್ಮ ಕತೆಗಳಲ್ಲಿ ದೀರ್ಘವಾಗಿ ಬರೆಯುತ್ತಾ ಹೋಗುತ್ತಾರೆ. ಮಲೇಶಿಯಾದ ಮಳೆಕಾಡು, ಸಿಂಗಾಪುರ್‌ ದ ಏರ್‌ ಲೈನ್ಸ್‌, ಹೈದರಾಬಾದಿನ ಅತ್ತರ್‌ ಕುರಿತು ಬರೆಯುವ ಲೇಖಕರು, ಶಿವಮೊಗ್ಗದ ಕೆಂಪವ್ವನ ಮನೆ ಕುರಿತು ಬರೆದಿದ್ದಾರೆ. ಕತೆಯನ್ನು ಓದುವಾಗ ಆ ತರಹದ ಒಂದು ಮನೆ ಶಿವಮೊಗ್ಗದಲ್ಲಿ ಇದ್ದಿರಲು ಸಾಧ್ಯವೇ ಎಂದು ಯೋಚಿಸುವಂತೆ ಮಾಡುತ್ತದೆ. ಬಹುಶಃ ಲೇಖಕರು ತಮಿಳಿನ ವರ್ಷನ್‌ ನ ಕತೆಯಲ್ಲಿ ಒಂದು ನಗರವನ್ನು ಚಿತ್ರಿಸಿರುವ ಕಾರಣಕ್ಕೆ ಅದೇ ನಗರವನ್ನು ಕನ್ನಡೀಕರಿಸುವಾಗ ಆಗಿರಬಹುದಾದ ಅಚಾತುರ್ಯ ಇದು ಎನ್ನಬಹುದು.

ಇನ್ನು ಪಿಂಕ್‌ ಅಂಡ್‌ ಬ್ಲೂ ಕತೆಯಲ್ಲಿನ ಸರೋಜ, ಅನುರಾಧ, ಅತ್ರೇಯ ರಂತೆ, ತಮನ್‌ ನೆಗಾರ ದಲ್ಲಿನ ವೆರೋನಿಕ ಮತ್ತು ನಿರೂಪಕ, ಅತ್ತರ್‌ ನ ದಿಟ್ಟಿ ಮತ್ತು ಎಂ, “ಆಲ್ಬರ್ಟ್‌ ಕಮೂವಿನ..” ಅನಿರುದ್ದ ಮತ್ತು ರೋಜಾ ಇವರೆಲ್ಲರ ಪ್ರೇಮಕತೆಗಳು ಡೇಟಿಂಗ್‌ ನಂತಹ, ಒನ್‌ ನೈಟ್‌ ಸ್ಟಾಂಡ್‌ ನಂತಹ ತರಹದ ಪ್ರೇಮಕತೆಗಳಾದರೂ ಅವುಗಳಿಗೆ ಅತ್ತರ್‌ ನ ಘಮಲನ್ನು ಚಿಮುಕಿಸಿ ಲೇಖಕರು ಕತೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಒಂದು ಡೇಟಿಂಗ್‌ ಅಂದ ಮೇಲೆ ಡೇಟಿಂಗ್‌ ಹೊರಡಲು ತಯಾರಾಗುವ ಪಾತ್ರಗಳು, ಆ ಪಾತ್ರಗಳು ತಿರುಗುವ ಸ್ಥಳಗಳು, ಅವರು ಊಟ ಮಾಡುವ ಸ್ಥಳಗಳು, ಅವರು ಭೇಟಿಕೊಡುವ ರೆಸ್ಟೋರೆಂಟ್‌ ಗಳು, ಹೋಟೆಲ್‌ ಗಳು ಎಲ್ಲದಕ್ಕೂ ರೋಮ್ಯಾಂಟಿಟಿಸಂನ ಟಚ್‌ ನೀಡಿ ಲೇಖಕರು ಕತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಇನ್ನು “ಕನ್ನಡಿ” ಮತ್ತು “ಮನೆಯಲ್ಲಿ ಒಂಟಿಯಾಗಿ..” ಕತೆಗಳು ೫೦ ನ್ನು ದಾಟಿದ ವಯಸ್ಸಿನವರ ಮಾನಸಿಕ ತುಮುಲಗಳನ್ನು ತೆರೆದಿಡಲು ಪ್ರಯತ್ನಿಸಿದ್ದಾರೆ. ಹಾಗೆ ನೋಡಿದರೆ ಕೆ ನಲ್ಲತಂಬಿಯವರ ಇಷ್ಟೂ ಕತೆಗಳು ೪೦ ದಾಟಿದವರ ಕತೆಗಳು ಎನ್ನಬಹುದು.

ತಮ್ಮ ಕತೆಗಳಲ್ಲಿ ಭಾಷೆಯ ಬಳಕೆಗೆ ವಿಶೇಷವಾದ ಒತ್ತುಕೊಟ್ಟಿರುವ ಲೇಖಕರ ಅನೇಕ ಪಂಚಿಂಗ್‌ ಸಾಲುಗಳನ್ನು ಪುಸ್ತಕದುದ್ದಕ್ಕೂ ನಾವು ಕಾಣಬಹುದು. ಉದಾಹರಣೆಗೆ “ಹಗಲು ಘನ ಆಕೃತಿಗಳಾಗಿ ತಿರುಗುವ ನಾವು, ರಾತ್ರಿಯಲ್ಲಿ ದ್ರವವಾಗಿ ಕರಗಿ ಹೋಗುತ್ತಿದ್ದೆವು.” ಎನ್ನುವಂತಹ ಸಾಲುಗಳನ್ನು ಬರೆದಿರುವ ಕೆ ನಲ್ಲತಂಬಿಯವರ ಕತೆಗಳು ಓದುಗರನ್ನು ಹಿಡಿದಿಡಲು ಯಶಸ್ವಿಯಾಗುತ್ತವೆ ಎನ್ನಬಹುದು. ಇವರ ಕತೆಗಳನ್ನು ಓದುವಾಗ ಪ್ರಜಾವಾಣಿಯ ಪೋಡೋಕಾಸ್ಟ್‌ ನಲ್ಲಿ ಉದಯ ಎನ್ನುವ ಒಬ್ಬರು ಕತೆಗಳನ್ನು ಓದುತ್ತಾರೆ. ಅವರೇ ಈ ಕತೆಗಳನ್ನು ಓದುತ್ತಿದ್ದಾರೇನೋ ಅನ್ನುವಂತೆ ನನಗೆ ಭಾಸವಾಯಿತು. ಹಾಗೆಯೇ ಪುಸ್ತಕವನ್ನು ಓದುವ ಅಭ್ಯಾಸವಿರುವ ಈ ಕತೆಗಳಲ್ಲಿನ ಪಾತ್ರಗಳು ಕಾಫ್ಕಾವಿನ “ಮೆಟಾಮಾರ್ಪೋಸಿಸ್‌”, ಕಮೂವಿನ “ಔಟ್‌ ಸೈಡರ್‌”, ಲಿಂಡಾ ಗುಡ್ಮನ್‌ “ರಾಶಿಗಳ ಬಗ್ಗೆ” ಬರೆದ ಪುಸ್ತಕಗಳನ್ನು ಹೆಸರಿಸುತ್ತಾ ಹೋಗುವುದು eat roam read love ಎನ್ನುವ ಮಂತ್ರದ ಮೇಲೆ ಕತೆಗಳು ರಚಿತವಾಗಿವೆಯೇನೋ ಎಂಬಂತೆ ಭಾಸವಾಗುತ್ತದೆ. ಸ್ವಚ್ಚತೆಯ ಅತೀವ ಕಾಳಜಿ ವಹಿಸುವ ಪಾತ್ರಗಳು ಮನೆ ಗುಡಿಸುತ್ತಲೋ, ಮನವನ್ನು ತೊಳೆಯುತ್ತಲೋ ಶುದ್ಧವಾಗುವ ಕಡೆ ಧ್ಯಾನಕ್ಕೆ ಕೂರುವುದು ಕೆ ನಲ್ಲತಂಬಿಯವರ “ಅತ್ತರ್‌” ಕಥಾಸಂಕಲನದಲ್ಲಿನ ಪಾತ್ರಗಳ ವೈಶಿಷ್ಟ್ಯ ಕೂಡ ಆಗಿದೆ…

ಒಟ್ಟಾಗಿ, ಅನುವಾದ ಕ್ಷೇತ್ರದಲ್ಲಿ ಹೆಚ್ಚು ತೊಡಗಿ ಕೊಂಡಿರುವ ಕೆ ನಲ್ಲತಂಬಿಯವರು ಕನ್ನಡದಲ್ಲಿ ಒಂದು ಸ್ವತಂತ್ರ ಕೃತಿಯನ್ನು ತಂದಿರುವುದು ಖುಷಿಯ ಸಂಗತಿ. ಅನುವಾದ ಸಾಹಿತ್ಯಕ್ಕಾಗಿ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವ ಕೆ ನಲ್ಲತಂಬಿಯವರಿಗೆ ಹೃದಯಪೂರ್ವಕ ಅಭಿನಂದನೆಗಳು.. “ಅತ್ತರ್‌” ನ ಘಮದಂತೆ ಅವರ ಸಾಹಿತ್ಯ ಕೃಷಿ ಓದುಗರನ್ನು ಹೆಚ್ಚು ತಲುಪಲಿ. “ಅತ್ತರ್”‌ ಕಥಾಸಂಕಲನವನ್ನು ಸಹೃದಯಿ ಕನ್ನಡ ಓದುಗರು ಕೊಂಡು ಓದಲಿ, ಹಾಗೆಯೇ ಕೆ ನಲ್ಲತಂಬಿಯವರಿಂದ ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಲಿ ಎಂದು ಹಾರೈಸುತ್ತೇನೆ…
-ಡಾ. ನಟರಾಜು ಎಸ್‌ ಎಂ

ಕೃತಿ: ಅತ್ತರ್‌ (ಕಥಾಸಂಕಲನ)

ಲೇಖಕರು: ಕೆ ನಲ್ಲತಂಬಿ

ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್‌

ಬೆಲೆ: ೧೨೦/- ರೂಪಾಯಿಗಳು

ಪ್ರತಿಗಳಿಗಳಿಗಾಗಿ ಸಂಪರ್ಕಿಸಿ: 9739561334

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x