ಬಸವಣ್ಣನ ವಚನಗಳಲ್ಲಿ ‘ಅವಳು’: ಮನು ಗುರುಸ್ವಾಮಿ

“ಹೆಣ್ಣಿನ ಚಂಚಲ ಮನಸ್ಥಿತಿಯ ಮೇಲೆ ಬಸವಣ್ಣನವರ ವಚನಗಳ ಪ್ರಯೋಗ”
ಅವಳ ವಚನ ಬೆಲ್ಲದಂತೆ!
ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,
ವಚನದಲೊಬ್ಬನ ನೆರೆವಳು!
ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!
ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ.

ಬಸವಣ್ಣನವರ ಇದೊಂದು ವಚನ ನನ್ನನ್ನು ತುಂಬಾ ಆಳವಾಗಿ ಚಿಂತನೆಗೆ ಗುರಿ ಮಾಡಿದೆ. ಮಹಾಮಾನವತಾವಾದಿಯಾದ ಬಸವಣ್ಣನವರ ವಚನವೊಂದು ದೃಢ ಮನಸ್ಸಿಲ್ಲದ ಹೆಣ್ಣೊಬ್ಬಳ ಬಗ್ಗೆ ಮಾತನಾಡುತ್ತಿರುವುದು, ‘ಹೆಣ್ಣು ಚಂಚಲೆ’ ಎಂಬ ವಿಚಾರವನ್ನು ಒತ್ತಿ ಹೇಳುತ್ತಿರುವುದು ಬಹಳ ಅಚ್ಚರಿ ತಂದಿತು. ಅನುಭವ ಇಲ್ಲದವ ಕವಿಯಾಗಲಾರ ಎಂಬ ಮಾತಿನಂತೆ ಈ ವಿಚಾರವನ್ನು ಬಸವಣ್ಣನವರು ಬಹಳ ಸೂಕ್ಷ್ಮವಾಗಿ ಗಮನಿಸಿರುವುದು ವಿಶೇಷ. ಆದರೆ ಒಂದಂತೂ ಸತ್ಯ. ಇಲ್ಲಿ ಬಸವಣ್ಣನವರು ಬಳಸಿರುವ ‘ಅವಳು’ ಎಂಬ ಪದ ಎಲ್ಲಾ ಸ್ತ್ರೀಯರನ್ನೂ ಉಲ್ಲೇಖಿಸಿ ಮಾತನಾಡುವಂತದ್ದಲ್ಲ. ಅದು ಕೇವಲ ಚಂಚಲ ಮನಸ್ಥಿತಿಯ ಹೆಣ್ಣನ್ನು ಉದ್ದೇಶಿಸಿ ಮಾತನಾಡುತ್ತಿದೆ. “ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ” ಎಂದು ಸಾರಿರುದ ವಚನಗಳ ರಚನೆಯಲ್ಲೂ ಈ ಪ್ರಯೋಗ ನಡೆದಿರುವುದು ‌ಅಚ್ಚರಿ ತಂದರೂ ಉದ್ದೇಶ ಮಾತ್ರ ಸ್ಪಷ್ಟ. ಈ ವಚನ ಪರೋಕ್ಷವಾಗಿ ತನ್ನೊಳಗೆ ಏನನ್ನೂ ಅಡಗಿಸಿಕೊಂಡಿಲ್ಲ. ವಚನಗಳ ಲಕ್ಷಣವೇ ಸರಳ ಭಾಷೆಯಲ್ಲಿರುವುದು, ಜನತೆಯನ್ನು ಬಹುಬೇಗ ತಲುಪುವುದು. ಹೀಗಾಗಿ ಇಲ್ಲಿ ನೇರವಾಗಿ ಬಸವಣ್ಣ ಚಂಚಲ ಮನಸ್ಥಿತಿಯ ಹೆಣ್ಣನ್ನು “ಮಾನಿಸಗಳ್ಳಿ” ಎಂದಿದ್ದಾರೆ.

ಹೆಣ್ಣಿನ ಮಾತೆಂಬುದು ಜೇನಿನಷ್ಟೂ, ಬೆಲ್ಲದಷ್ಟೂ, ಕಲ್ಲುಸಕ್ಕರೆಯಷ್ಟೂ ಸಿಹಿ, ಸವಿ, ಮೃದುವೆಂಬುದನ್ನು ಕನ್ನಡದ ಎಷ್ಟೋ ಕವಿಗಳು ಕಟ್ಟಿ ಹಾಡಿದ್ದಾರೆ. ಆಕೆ ತನ್ನ ಮೃದುವಾದ ಮಾತುಗಳಿಂದ ಯಾರನ್ನ ಬೇಕಾದರೂ ಆಕರ್ಷಿಸಿಬಿಡುತ್ತಾಳೆ ಎಂಬುದನ್ನು ಕೇಳಿದ್ದೇವೆ; ಓದಿದ್ದೇವೆ. ಜಿ ಎಸ್ ಶಿವರುದ್ರಪ್ಪನವರೇ ಒಂದು ಕವಿತೆಯಲ್ಲಿ ಹೀಗೆ ಹೇಳುತ್ತಾರೆ :

ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ

ಅಂದಮೇಲೆ ವಚನಕಾರರಾಗಲಿ, ಕವಿಗಳಾಗಲಿ ಅವರವರ ಅನುಭವದಂತೆ, ಅವರವರ ಭಾವದಂತೆ ಹೆಣ್ಣನ್ನು ವರ್ಣಿಸಿರುವುದನ್ನು, ಬಣ್ಣಿಸಿರುವುದು, ಟೀಕಿಸಿರುವುದನ್ನು ನಾವು ಕಾಣಬಹುದು. ಆಗೆಂದ ಮಾತ್ರಕ್ಕೆ ಟೀಕೆಯ ವಿಷಯ ಬಂದಾಗ ಇಡೀ ಮಹಿಳಾ ಸಮುದಾಯವನ್ನೇ ಟೀಕಿಸುವುದು ಎಂದರ್ಥವಲ್ಲ. ಅಥವಾ ಮಹಿಳೆಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲವೆ ? ಎಂದು ಪ್ರಶ್ನಿಸುವಂತದಲ್ಲ. ಹೆಣ್ಣಿಗೆ ಸ್ವಾತಂತ್ರ್ಯವಿದೆ. ಆಕೆಗೆ ತನ್ನ ಇಚ್ಛೆಯಂತೆ ಬದುಕುವ ಹಕ್ಕಿದೆ. ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ಆತನ ಜೊತೆ ಬದುಕುವಲ್ಲಿ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮುಕ್ತ ಅವಕಾಶವಿದೆ. ಆದರೆ ಈ ಇದು ಕೆಲವೊಮ್ಮೆ ಕೆಲವರಿಂದ ದುರುಪಯೋಗವಾದಾಗ ತಾನಾಗಿಯೇ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರನ್ನೋ ಹೊಣೆ ಮಾಡುವುದು, ಟೀಕಿಸುವುದು, ಶಪಿಸುವುದರಲ್ಲಿ ಅರ್ಥವಿಲ್ಲ. ಅದನ್ನೇ ಇಲ್ಲಿ ಮಾತನಾಡುತ್ತಿರುವ ವಚನಕಾರ ದೃಢಮನಸ್ಸಿಲ್ಲದವಳನ್ನು ಕುರಿತು “ಅವಳ ಮಾತು ಬೆಲ್ಲದಷ್ಟೇ ಸಿಹಿಯಾಗಿರುತ್ತದೆ. ಆದರೆ ಅವಳ ಅಂತರಂಗ ಮಾತ್ರ ಕೊಳಕು ಮನಸ್ಥಿತಿಯಿಂದ ಕೂಡಿರುತ್ತದೆ. ಆಕೆಯ ವ್ಯಕ್ತಿತ್ವವೇಗೆಂದರೆ ಮಾತಿನಲ್ಲೂ ದೃಡತೆಯಿಲ್ಲದೆ ಅಥವಾ ಸ್ಪಷ್ಟತೆಯಿಲ್ಲದೆ ಮನಸ್ಸಿನಲ್ಲೊಂದು ಎದುರಿಗೊಂದು ಮಾತನಾಡುತ್ತಿದ್ದಾಳೆ; ಜೊತೆಗೆ ಮಾತಿನಲ್ಲೇ ಮರಳು ಮಾಡುತ್ತಾಳೆ. ಆದರೆ ಅವಳ ಹೃದಯದ ತುಂಬ ಸಂಚೆಂಬ ನಂಜಿದೆ.

ಯಾವುದೋ ಕಾರ್ಯ ಸಾಧನೆಗಾಗಿ ಒಬ್ಬನನ್ನು ಬಳಸಿಕೊಳ್ಳುತ್ತಿದ್ದರೆ, ಮತ್ತೊಬ್ಬನನ್ನು ಇನ್ನೊಂದು ಕಾರ್ಯಸಾಧನೆಗಾಗಿ ಬಳಸಿಕೊಳ್ಳುತ್ತಿದ್ದಾಳೆ. ಹೀಗಾಗಿ ಆಕೆ ತನ್ನ ಕಣ್ಣುಗಳಲ್ಲಿ ಸನ್ನೆ ಮಾಡಿ ಒಬ್ಬನನ್ನು ಕರೆದರೆ, ಅವಳ ಮನಸ್ಸಿನಲ್ಲೊಬ್ಬ, ಮಾತಿನಲ್ಲೊಬ್ಬನಿದ್ದಾನೆ. ಆಕೆ ಒಬ್ಬನಿಗಲ್ಲ, ಮೂವರಿಗೂ ವಂಚನೆಗೈಯ್ಯುತ್ತಿದ್ದಾಳೆ. ಒಬ್ಬನಿಗೆ ತಿಳಿಯದಂತೆ ಮತ್ತೊಬ್ಬನನ್ನ, ಆತನಿಗೆ ತಿಳಿದಂತೆ ಇನ್ನೊಬ್ಬನನ್ನು ನೆರೆಯುತ್ತಿದ್ದಾಳೆ. ಈ ರೀತಿ ದೇಹವನ್ನೊಬ್ಬನಿಗೆ, ಮನವನ್ನೊಬ್ಬನಿಗೆ ಕೊಟ್ಟು ಮಾತಿನಲ್ಲಿ ಇನ್ನೊಬ್ಬನನ್ನು ನೆನೆಯುತ್ತಿರುವ ಈ ಚಂಚಲ ಮನಸ್ಥಿತಿಯ ಹೆಣ್ಣನ್ನು ‘ನನ್ನವಳೆಂದು’ ತಿಳಿದು ಭ್ರಮಿಸುವ ಗಂಡು ಇಲ್ಲಿ ‘ಕುರಿ’. ಕುರಿಯೆಂದರೆ ಇಲ್ಲಿ ಬಲಿಕೊಡಲು ತಂದಿರುವ ಸಾಧುಪ್ರಾಣಿ. ತನ್ನನ್ನು ಬಲಿಕೊಡುವರೆಂಬುದನ್ನು ಅರಿಯದೆ ಅದು ತನ್ನೊಡೆಯನನ್ನು ಎಷ್ಟು ನಂಬಿಕೊಂಡಿರುತ್ತದೋ, ಅವನ ಹಿಂದೆಯೇ ಹೇಗೆ ಸುತ್ತುತ್ತಿರುತ್ತದೋ ಆಗೇ ಈ ಗಂಡು ಕೂಡ. ಅವಳ ಮನಸ್ಸಿನ ಒಳಸಂಚನ್ನು ಅರಿಯದೇ ಅವಳನ್ನು ಅತಿಯಾಗಿ ಪ್ರೀತಿಸಲ್ಪಡುವ, ನನ್ನವಳೆಂದು ನೆಚ್ಚಿ ಭ್ರಮಿಸಲ್ಪಡುವ ಗಂಡು, ಅವಳ ಮೋಸಕ್ಕೆ ಸಿಲುಕಿ ನಲುಗಿಬಿಡುತ್ತಾನೆ. ಆದರೆ ಮೋಸಗೈಯುವವರು ಎಲ್ಲಿಯತನಕ ತಾನೇ ಬದುಕಿಯಾರು? ಬಸವಣ್ಣನವರ “ಹಬ್ಬಕ್ಕೆ ತಂದ ಹರಿಕೆಯ ಕುರಿ” ಎಂಬ ವಚನ ಇದನ್ನೇ ಹೇಳುತ್ತದೆ :

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿದ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆವುತ್ತಲಿದೆ?
ಅದಂದೆ ಹುಟ್ಟಿತ್ತು ಅದಂದೇ ಹೊಂದಿತ್ತು!!
ಕೊಂದವರುಳಿವರೆ ಕೂಡಲ ಸಂಗಮದೇವ
ಈ ವಚನದಲ್ಲಿ ಬಳಸಿರುವ ಕೊನೆಯ ಸಾಲು ನೋಡಿ ಎಷ್ಟು ಅರ್ಥಗರ್ಭಿತವಾಗಿದೆ. “ಕೊಂದವರುಳಿದರೆ ಕೂಡಲಸಂಗಮದೇವ.” ಈ ಸಂದರ್ಭದಲ್ಲಿ ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬಳಸಿರುವ ಸಾಲೊಂದು ನೆನಪಾಗುತ್ತದೆ “ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ.” ಬದುಕು ಎಲ್ಲರನ್ನೂ ಒಳಗೊಳ್ಳುವಂತದ್ದು. ಎಲ್ಲರಿಗೂ ಎಲ್ಲವೂ ಸಲ್ಲುತ್ತದೆ. ನೀವು ವಂಚನೆಗೈದರೇ‌ ನಿಮಗೂ ಮತ್ತೊಬ್ಬರು ವಂಚನೆಗೈಯ್ಯಲು ಕಾದಿರುತ್ತಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ.

ಬಸವಣ್ಣನವರ ಮತ್ತೊಂದು ವಚನ ಮಾತನಾಡುತ್ತದೆ :
ಊಡುವ ಉಡಿಸುವ ಗಂಡನಿದ್ದಂತೆ,
ಜೋಡೆ! ಮಿಂಡಂಗೆ ಕಣ್ಣು ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು!

ತನ್ನ ಸುಖದುಃಖಗಳಲ್ಲಿ ಭಾಗಿಯಾಗಿ ತನ್ನನ್ನು ಬಹಳ ನಾಜೂಕಾಗಿ ನೋಡಿಕೊಳ್ಳುತ್ತಿರುವ ಗಂಡನನ್ನು ಮರೆತು ಮತ್ತೊಬ್ಬನಿಗೆ ಮನಸೋತ ಹೆಣ್ಣಿನ ಬಗ್ಗೆ ಇಲ್ಲಿ ವಚನಕಾರ ಮಾತನಾಡಿದ್ದಾರೆ. ಹೆಣ್ಣಿಗೆ ‌ತನ್ನಿಚೆಯಂತೆ ಬದುಕುವ ಹಕ್ಕಿಲ್ಲವೆ ? ನೀವು ಪ್ರಶ್ನಿಸಬಹುದು. ಸಂಸಾರವೆಂದ ಮೇಲೆ ಮನಸ್ತಾಪಗಳು ಇದ್ದೇ ಇರುತ್ತವೆ. ಆಗೆಂದ ಮಾತ್ರಕ್ಕೆ ಸಣ್ಣ ಸಣ್ಣ ವಿಚಾರಕ್ಕೂ ಮುನಿದು ಬೇರೊಂದು ಆಯ್ಕೆ ನಿಂತು ಬಿಟ್ಟರೆ; ಬದುಕೆಲ್ಲಿ ? ಬದುಕಿಗೆ ಅರ್ಥವೆಲ್ಲಿ ? ಜೀವನಪೂರ್ತಿ ಮತ್ತೊದರ, ಮಗದೊಬ್ಬರ ಆಯ್ಕೆಯಲ್ಲೇ ಜೀವನ ದೂಡಬೇಕಾಗಿ ಬರುತ್ತದೆ. ಕೆ ಎಸ್ ನರಸಿಂಹಸ್ವಾಮಿ ಅವರು ಸುಖಾಸುಮ್ಮನೆ ಹೇಳಿಲ್ಲ :

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು |
ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು |
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ? ||

ಇಲ್ಲಿ ಬಸವಣ್ಣನವರ ನಿಲುವು ಅದೇ… “ನಂಬಿದ ಹೆಂಡತಿಗೆ ಗಂಡನೊಬ್ಬನೆ, ನಂಬಬಲ್ಲ ಭಕ್ತಂಗೆ ದೇವನೊಬ್ಬನೆ” ಎಂಬುದು. “ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದಡೇನೊ ಹೋದಡೇನೊ” ಅವರ ಪಾತ್ರ ನಿರರ್ಥಕವೆಂಬುದು. ತಮ್ಮ ಹತ್ತಾರು ವಚನಗಳಲ್ಲಿ ಇದೇ ಮನಸ್ಥಿತಿಯುಳ್ಳ ಹೆಣ್ಣಿನ ಬಗ್ಗೆ ಹತ್ತಾರು ಉದಾಹರಣೆ ನೀಡಿರುವ ಬಸವಣ್ಣ “ಹಸಿದು ಬಂದ ಗಂಡಂಗೆ ಉಣಲಿಕ್ಕದೆ ಬಡವಾದನೆಂದು ಮರುಗುವ ಸತಿಯನ್ನು, ಕಂಡಕಂಡವರೆಲ್ಲ ಗಂಡನೆಂದೆಂಬ ದುಂಡೆಯನವಳನ್ನು ಸಜ್ಜನ ಎಂದೆನ್ನಬಹುದೆ ? ಎಂದು ಪ್ರಶ್ನಿಸಿದ್ದಾರೆ. ವೃತ್ತಿಯಲ್ಲಿ ಸೂಳೆಯಾದವಳಿಗೂ ಒಂದು ದೃಢ ಮನಸ್ಸು ಇರಬೇಕು. ದೃಢ ಮನಸ್ಸು ಇಲ್ಲದವಳು ಸೂಳೆಯಾದರೂ ವೃತ್ತಿಧರ್ಮದಲ್ಲಿ ವಿಫಲಳಾಗುತ್ತಾಳೆ ಎಂಬುದನ್ನು ಬಸವಣ್ಣ ಹೀಗೆ ಹೇಳಿದ್ದಾರೆ :

ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ, ಬೊಜಗಂಗಲ್ಲ.
ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.
ಧನದಾಸೆ ಬಿಡದು ಕೂಡಲಸಂಗಮದೇವಾ.

ಸೂಳೆ ಎಂಬ ಪದವನ್ನು ಕೇಳಿದ ತಕ್ಷಣ ಮುಖಮುರಿಯುವ ಅಗತ್ಯವಿಲ್ಲ. ೧೨ನೇ ಶತಮಾನದ ಹಂತದಲ್ಲಿ ಸೂಳೆ ವೃತ್ತಿಯು ಒಂದು ಪವಿತ್ರವಾದ ವೃತ್ತಿ ಎಂಬುದಾಗಿ ಬಗೆಯಲಾಗಿತ್ತು. ಇದಕ್ಕೆ ಉತ್ತಮ ‌ನಿದರ್ಶನ ಸೂಳೆ ಸಂಕವ್ವ.
ಒಟ್ಟಾರೆಯಾಗಿ ಬಸವಣ್ಣನವರ ನಿಲುವೇನೆಂಬುದು ಈಗ ಸ್ಪಷ್ಟವಾಗಿದೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಗೆ ಎಲ್ಲಾ ವಿಚಾರಗಳಲ್ಲೂ ಸಂಪೂರ್ಣ ಸ್ವಾತಂತ್ರ್ಯ ದಕ್ಕಿದೆ. ಬಹುತೇಕ ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಮಕ್ಕಳ ಪಾಲಿಗೆ ತನ್ನಿಚ್ಛೆಯಂತೆ ಬದುಕುವ ಅವಕಾಶಗಳು ಕಡಿಮೆ ಎಂಬುದನ್ನು ಬಲ್ಲೆ. ಇದಕ್ಕೆ ಕಾರಣವಿಷ್ಟೇ – ದಾರಿ ತಪ್ಪುವ ಹೆಣ್ಣು ಸಾಧನೆಗಾಗಿ ಹಂಬಲಿಸುವ ‌ಹೆಣ್ಣುಮಗಳ ಪಾಲಿಗೆ ಮುಳ್ಳಾಗಿದ್ದಾಳೆ. ಇಲ್ಲಿ ‘ದಾರಿ ತಪ್ಪುವ ಹೆಣ್ಣು’ ಎಂಬ ಪದ ಇಡೀ ಸ್ತ್ರೀಯರನ್ನೇ ದ್ವೇಷಿಸುವ ಅಥವಾ ಟೀಕಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ “ಹೆಣ್ಣೇ ಹೆಣ್ಣಿಗೆ ಶತ್ರು” ಎಂಬ ಮಾತು ಸುಳ್ಳಾಗಬೇಕಾದರೆ ಚಂಚಲತೆಯನ್ನು ಹೊಂದಿರುವ ಹೆಣ್ಣಿನ ಮನಸ್ಥಿತಿ ಬದಲಾಗಬೇಕು ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಹೂವು ಹೂವಿಗೆ ಸ್ಪರ್ಧೆಯಲ್ಲ ಅಲ್ಲವೆ?

ಎಲ್ಲ ಹೆಣ್ಣುಮಕ್ಕಳಿಗೂ ಸಣ್ಣಪುಟ್ಟ ಆಸೆಗಳಿರುತ್ತವೆ. ದೊಡ್ಡ ದೊಡ್ಡ ಕನಸುಗಳಿರುತ್ತವೆ. ಆದರೆ ಇವುಗಳ ಈಡೇರಿಕೆಗಾಗಿ ತಮ್ಮ ಆಯ್ಕೆ ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡಿರಬೇಕು. ಯಾರ ಜೀವನದಲ್ಲೂ ಯಾರೂ ಆಟವಾಡಬಾರದು ನೋಡಿ ಮತ್ತೆ; ಅದೂ ಗಂಡಾಗಲಿ, ಹೆಣ್ಣಾಗಲಿ. ಸಮಸಮಾಜದ ಕನಸು ದುರುಪಯೋಗವಾಗ “ತಾಯಿಯ ಎದೆ ಹಾಲೇ ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವೆ ಕೂಡಲಸಂಗಮದೇವ” ಎಂಬಂತಾಗಿ ಬಿಡುತ್ತದೆ. ಹೆಣ್ಣು ಈ ದೇಶದ ಕಣ್ಣು ಜೀವನಾಡಿ, ಮಿಡಿತ, ಬಡಿತ. ಒಬ್ಬ ಯಶಸ್ವಿ ಪುರುಷನ ಹಿಂದೆ ಇರುವ ಕಾಣದ ಕೈ. ಕಷ್ಟದಲ್ಲಿದ್ದಾಗ ಗಂಡಸಿನ ಕೈ ಹಿಡಿದು, ಆತನ ಸಾಧನೆಯಲ್ಲಿ ಜೊತೆಯಾಗುವಂತವಳು. ಇಂತಹ ಸಂದರ್ಭದಲ್ಲಿ ಅವಳ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತದೆ. ಹೆಣ್ಣು ತ್ಯಾಗಮಯಿ. ಆ ಪದಕ್ಕೆ ಕಳಂಕ ತರುವ ಎಷ್ಟೋ ಹೆಂಗಳಿವೆ‌; ಅದಕ್ಕೆ ಕಾರಣವೇನೇ ಆಗಿರಬಹುದು. ತಪ್ಪು ತಪ್ಪೇ ಅಲ್ಲವೆ? ಹೇಗೆ ಎಲ್ಲಾ ಹೆಂಗಳು ಕೆಟ್ಟವರಲ್ಲವೋ ಅಂತೆಯೇ ಎಲ್ಲಾ ಗಂಡಸರೂ ಕೆಟ್ಟವರಲ್ಲ. ಅಂತೆಯೇ ಎಲ್ಲರೂ ಪರಿಪೂರ್ಣರೂ ಎಂದಲ್ಲ. ಸ್ತ್ರೀವಾದ ಸಿದ್ಧಾಂತದ ಮೇಲೆ ನಾನು ಮಾತುನಾಡುತ್ತಿಲ್ಲ. ಅಥವಾ ಅಲ್ಲಿನ ಸಿದ್ಧಾಂತಗಳನ್ನು ಟೀಕಿಸುತ್ತಿಲ್ಲ. ಹೆಣ್ಣನ್ನ ಪೂಜಿಸುವಲ್ಲಿ ಗಂಡು ಅರ್ಹನಲ್ಲ. ಏಕೆಂದರೆ ಹೆಣ್ಣು ದೇವರಲ್ಲ. ಒಂದು ಕಲ್ಲಾಗಿ ಆಕೆಯನ್ನು ನೋಡಲು ಇಲ್ಲಿ ಯಾರೂ ಇಚ್ಛಿಸುವುದಿಲ್ಲ. ಹೀಗಾಗಿ ಸ್ತ್ರೀಕುಲವೇ ಕಳಂಕವೆಂಬುದನ್ನು ನಿರ್ಧರಿಸುವುದು ಈ ಲೇಖನದ ಉದ್ದೇಶವಲ್ಲ. ಈ ಲೇಖನ ಏನನ್ನೂ ಪ್ರಸ್ತುತ ಪಡಿಸುತ್ತಿದೆ ಎಂಬುದನ್ನು ನೀವು ಅರ್ಥೈಸಿಕೊಂಡಿದ್ದರೆ ನಾನು ಧನ್ಯ.
ಕೊನೆಯದಾಗಿ ಜಿ ಎಸ್ ಎಸ್ ಅವರ ಕವಿಯೊಂದರ ಕೆಳಗಿನ ಸಾಲುಗಳನ್ನು ಈ ಕ್ಷಣ ನೆನಯಲು ಇಷ್ಟಪಡುತ್ತೇನೆ:
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

-ಮನು ಗುರುಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x