“ಏನ್ರೀ ಅದು, ಅಷ್ಟು ಡೀಪಾಗಿ ಮೊಬೈಲ್ ನೋಡ್ತಾ ಇದ್ದೀರಾ, ಏನ್ ಗರ್ಲ್ ಫ್ರೆಂಡ್ ಮೆಸೇಜಾ ? ” ರಾತ್ರಿ ಊಟದ ಸಮಯದಲ್ಲಿ ಗೆಳೆಯ ಪ್ರಕಾಶ ಮೈಸೂರಿನ ಅಕ್ಕನ ಮನೆಗೆ ಹೋದವ ತಂದು ಕೊಟ್ಟ ನಾಟಿ ಕೋಳಿಯಿಂದ ಮಾಡಿದ ಚಿಕ್ಕನ್ ಸುಕ್ಕ ಮೆಲ್ಲುತ್ತಿದ್ದ ಹೆಂಡತಿ ನನ್ನ ಕಾಲೆಳೆದಿದ್ದಳು ” ಅಲ್ಲ ಕಣೆ. . ಪ್ರಪಂಚದಲ್ಲಿ ಯಾವ ಗಂಡಸಿಗಾದರೂ ಹೆಂಡತಿ ಎದುರುಗಡೆ ತನ್ನ ಗರ್ಲ್ ಫ್ರೆಂಡ್ ಮೆಸೇಜ್ ನೋಡುವ ಧೈರ್ಯ ಇರುತ್ತೆ ಹೇಳು ? ಅದು ನಮ್ಮ ನಟರಾಜ್ ಡಾಕ್ಟರ್ ಮೆಸೇಜ್ ಮಾಡಿದ್ರು ನೋಡ್ತಾ ಇದ್ದೆ ” ಚಿಕನ್ ಫೀಸ್ನ್ನು ಬಾಯಿಗಿಳಿಸಿಕೊಳ್ಳುತ್ತ ಉತ್ತರಿಸಿದೆ.
” ಈ ಕೊರೊನ ಬಂದ ಮೇಲೆ ಡಾಕ್ಟರ್ ಮೆಸೇಜ್ ಅಂದ್ರೆ ಎಲ್ಲ ಭಯ ಪಡ್ತಾರೆ, ಅದು ಬೇರೆ ಮತ್ತೊಂದು ಅಲೆ ಬೇರೆ ಬರುತ್ತೆ ಅಂತ ಹೇಳ್ತ ಇದ್ದಾರೆ, ಡಾಕ್ಟರ್ ಅನ್ನೋ ಶಬ್ದ ಕೇಳಿದ್ರೆ ಜನ ಬೆಚ್ಚಿಬಿಳೋ ಈ ಟೈಮ್ ನಲ್ಲಿ ನೀವು ಕೂಲಾಗಿ ಡಾಕ್ಟರ್ ಮೆಸೇಜ್ ನೋಡ್ತಾ ಇದ್ರಲ್ಲ, ಏನಾದ್ರು ಕೊರೊನದ ಬಗ್ಗೆ ಜೋಕ್ ಕಳಿಸಿದ್ದಾರಾ ? ” ಅಂತ ಕುತೂಹಲ ಬೀರಿದಳು ಆಕೆ.
“ಇವ್ರು ಔಷದಿ ಕೊಡೊ ಡಾಕ್ಟರ್ ಅಲ್ಲ, ಸೈಂಟಿಸ್ಟ್. . ಅದೇ ನಮ್ ಪಂಜು ಆನ್ಲೈನ್ ಮ್ಯಾಗಝಿನ್ ಎಡಿಟರ್. . ನಮ್ ಪಂಜು ಪತ್ರಿಕೆಗೆ ಹತ್ತು ವರ್ಷ ಆಗಿದೆ, ಸೊ ದಶಮಾನೋತ್ಸವ ವಿಶೇಷಾಂಕ ತರ್ತಿದ್ದಾರೆ, ಅದಕ್ಕೆ ಕತೆ ಕಳಿಸಿ ಅಂತ ಮೆಸೇಜ್ ಹಾಕಿದ್ದಾರೆ, ಒಂದು ವಾರ ಆಯಿತು, ನಾನ್ ನೋಡಿರಲಿಲ್ಲ, ಈಗ ಮತ್ತೆ ಜ್ಞಾಪಿಸಿದ್ದಾರೆ, ಟೂ ಡೇಸ್ ಟೈಮ್ ಇದೆ, ಅದನ್ನೇ ಯೋಚಿಸ್ತಾ ಇದ್ದೆ, ಏನ್ ಕತೆ ಬರಿಲಿ ಅಂತ ” ಅಂತ ಆಕೆಯ ಕುತೂಹಲಕ್ಕೆ ಪ್ರತಿಕ್ರಿಸಿದೆ.
” ಬರ್ದಿರೋ ಯಾವುದಾರೂ ಒಂದು ಕತೆ ಕಳಿಸಿ, ಇನ್ನೆರಡು ದಿನದಲ್ಲಿ ಹೊಸ ಕತೆ ಬರೆಯೋಕಾ ಎಲ್ಲಿ ಆಗುತೆ ಅಲ್ವ ? “
” ಹ್ಮ್ಮ್. ಆದ್ರೆ ಒಂದು ಟ್ರೈ ಮಾಡಿ ನೋಡೋಣ. . ಸರಿ ಈ ಸಲ ಒಂದು ಕೆಲಸ ಮಾಡೋಣ, ಕತೆಗೆ ವಸ್ತು ನಿನ್ ಕೊಡು, ಅದನ ಹಿಡ್ಕೊಂಡು ನನ್ ಕತೆ ಬರೀತೀನಿ. ಯೋಚ್ನೆ ಮಾಡು ನಿನ್ನಲ್ಲೂ ಒಬ್ಬಳು ಕತೆಗಾರ್ತಿ ಹುಟ್ಟಬಹುದು ” ಅಂತ ಸ್ವಲ್ಪ ಸೀರಿಯಸ್ ನೋಟದಲ್ಲಿ ಕಾಲೆಳೆದೆ. .
” ಹೌದಲ್ವಾ, ಆದ್ರೆ ನಮ್ಮದು ಏನಿದ್ರೂ ಲೇಡೀಸ್ ಬೇಸ್ಡ್ ಕತೆಗಳು. ನೀವ್ ಬಿಡಿ ಹೆಂಗಸರ ಬಗ್ಗೆ ಕತೆ ಬರೆಯೋಲ್ಲ ಅಂತೀರಾ. ನಿಮ್ಮ ಅಜ್ಜ ನೆಟ್ಟ ಹಲಸಿನ ಮರದ ಬುಕ್ ನಲ್ಲಿ ಬರೀ ಗಂಡಸರ ಪಾತ್ತ್ರಗಳೇ ತುಂಬಿ ಕೊಂಡಿದೆ ” ಅಂತ ಆಕೆ ಚಿಕ್ಕನ್ ಲೆಗ್ ಪೀಸ್ ನ ಸವಿಯುತ್ತ ಸ್ವಲ್ಪ ಅಸಹನೆಯ ನೋಟ ಬೀರಿದಳು. .
” ಸ್ತ್ರೀ ಸಂವೇದನೆ ಬಗ್ಗೆನೂ ಬರೆಯಬಹುದಪ್ಪಾ, ಸರಿ ಒಂದ್ ಕೆಲಸ ಮಾಡು, ನಾಳೆ ಸಂಜೆ ಒಳಗೆ ಕತೆಗೆ ಒಂದೊಳ್ಳೆ ವಸ್ತು ಹುಡುಕು, ಅದನ್ನೇ ಹಿಡ್ಕೊಂಡು ಒಂದು ಕತೆ ಬರೆದು ಪಂಜುಗೆ ಕಳಿಸೋಣ ” ಅಂತ ಮಾತು ಕತೆಗೆ ಪೂರ್ಣ ವಿರಾಮ ಹಾಕಿದೆ.
” ರೀ ಅಪ್ಪಯ್ಯ ಕಾಲ್ ಮಾಡಿದ್ರು, ನಿಮ್ಮ ಹತ್ರ ಅರ್ಜೆಂಟ್ ಆಗಿ ಮಾತಾಡಬೇಕಿತ್ತು ಅಂತೇ. ನೀವು ನೋಡಿದ್ರೆ ಅರ್ಧ ಗಂಟೆ ರೆಸ್ಟ್ ರೂಮ್ ನಲ್ಲಿ ಕುಳಿತಿದ್ರಿ. ” ಬೆಳಿಗ್ಗೆ ಆಫೀಸ್ ಗೆ ಹೊರಡುವ ತರಾತುರಿಯಲ್ಲಿ ಅಡ್ಡ ಬಂದ ಹೊಟ್ಟೆ ಸಮಸ್ಯೆಗೆ ಅಂತ್ಯ ಹಾಡಿ ರೆಸ್ಟ್ ರೂಮಿನಿಂದ ಹೊರಬಂದು ಕಾರ್ ಕೀ ಎತ್ತಿಕೊಂಡು ಲ್ಯಾಪ್ಟಾಪ್ ಬ್ಯಾಗ್ ಹೆಗಲೇರಿಸಿಕೊಳ್ಳುತ್ತಿದ್ದ ನನಗೆ ಅಡುಗೆ ಮನೆಯಿಂದ ಆಕೆ ನುಡಿದಾಗ ಸ್ವಲ್ಪ ವಿಚಲಿತನಾದೆ. ಇಷ್ಟಕ್ಕೂ ಊರಿಂದ ನನಗೆ ಕಾಲ್ ಬರುವುದು ಅಪರೂಪ, ಅದು ಬೇರೆ ಬೆಳಿಗ್ಗೆನೇ ಕಾಲ್ ಬಂದಿದೆ ಅಂದ್ರೆ ಸ್ವಲ್ಪ ಯೋಚಿಸಬೇಕಾದ ವಿಷಯಾನೇ. .
“ನಿಮ್ಮ ಅಪ್ಪಯ್ಯ ಎನ್ನಾದ್ರೂ ಹೇಳಿದ್ರ” ಅಂತ ಆಕೆಯನ್ನು ಕೇಳಿದೆ.
” ಹ್ಮ್ಮ್. ಅದು ರಾಮ ನಾಯ್ಕ ಅಂತ ನಮ್ಮ್ ಮನೆ ಕೆಲಸಕ್ಕೆ ಬರ್ತಾನೆ ಅಲ್ವ, ಅವನ ಮಗಳ ಮಗ ಅರವಿಂದ ಇಲ್ಲೇ ವಿಜಯನಗರದಲ್ಲಿ ಯಾವ್ದೋ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ ಅಂತೇ. ನಿನ್ನೆ ಆಫೀಸ್ ನಲ್ಲಿ ಏನೋ ದೊಡ್ಡ್ ಗಲಾಟೆಯಾಗಿ ಕೇಸ್ ಆಗಿದೆ ಅಂತೇ, ಅದಕ್ಕೆ ಪೊಲೀಸ್ ಅವನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ರಂತೆ. ಪಾಪ ಅವನ ರಿಲೇಟಿವ್ ಅಂತ ಇಲ್ಲಿ ಯಾರು ಇಲ್ಲ. ಅವ್ನ ರೂಮ್ ಮೆಟ್ ನಿನ್ನೆ ರಾತ್ರಿಯಿಂದ ಒದ್ದಾಡ್ತಾ ಇದ್ನಂತೆ, ಪೊಲೀಸ್ ಕೇರ್ ಮಾಡ್ತಾ ಇಲ್ಲ ಅಂತೇ. ನಿಮ್ ಕಡೆಯಿಂದ ಏನಾದ್ರು ಮಾಡೋಕೆ ಆಗುತ್ತಾ ಅಂತ ಕೇಳೋಕೆ ಫೋನ್ ಮಾಡಿದ್ಫ್ರು” ಅಂತ ಆಕೆ ಒಪ್ಪಿಸಿದ ವರದಿ ಸ್ವಲ್ಪ ಕಳವಳಕಾರಿಯಾಗಿಯೇ ಇತ್ತು. ಈ ಹುಡುಗರು ಈ ಕಾರ್ಪೊರೇಟ್ ಥಳಕು ಜೀವನಕ್ಕೆ ಮಾರು ಹೋಗಿ ಅದೇನ್ ಕಿತಾಪತಿ ಮಾಡ್ಕೊಳ್ತಾರೋ ? ಅದರಲ್ಲಿ ಇವನದ್ದು ಏನ್ ಕೇಸೂ ?, ಒಳ್ಳೆ ತಲೆನೋವು ಬಂತಲ್ಲ. ಅಂತ ಮನಸಲ್ಲಿ ಗೊಣಗಿಕೊಳ್ಳುತ್ತ ” ಸರಿ ಯಾವ ಸ್ಟೇಷನ್ನಲ್ಲಿ ಅವನ್ ಅರೆಸ್ಟ್ ಮಾಡಿದ್ದು ಗೊತ್ತಾ ” ಅಂತ ಹೆಂಡತಿಯನ್ನು ಕೇಳಿದಾಗ ಆಕೆಯಿಂದ ಬಂದ ಉತ್ತರ ಈ ವಿಷಯದಲ್ಲಿದ್ದ ನನ್ನೆಲ್ಲ ಒತ್ತಡವನ್ನು ಕಡಿಮೆ ಮಾಡಿತ್ತು.
” ಕೆ ಪಿ ಅಗ್ರಹಾರ ಪೊಲೀಸ್ ಸ್ಟೇಷನ್ ತಾನೇ, ನಮ್ ಗೋಳು ಇದ್ದಾನೆ, ಅವ್ನಿಗೆ ಹೇಳ್ತಿನಿ, ಎಲ್ಲ ಅವ್ನೆ ಹ್ಯಾಂಡಲ್ ಮಾಡ್ತಾನೆ ಬಿಡು. ” ಅಂತ ತುಂಬಾ ಕ್ಯಾಶುಯಲ್ ಆಗಿ ಹೇಳಿ ಲ್ಯಾಪ್ ಟಾಪ್ ಬ್ಯಾಗ್ ಹೆಗಳಿಗರೇರಿಸಿ ಕೊಂಡು ಕಾರ್ ಪಾರ್ಕಿಂಗ್ ನತ್ತ ಹೊರಟೆ.
ಕಾರಿನ ಬ್ಲೂಟೂತ್ ಮೊಬೈಲ್ ಗೆ ಕನೆಕ್ಟ್ ಆಗ್ತಾ ಇರುವಂತೆ ಗೆಳೆಯ ಪ್ರಕಾಶ್ ಗೆ ಕಾಲ್ ಮಾಡಿ ಎಲ್ಲ ವಿಷಯ ವಿವರಿಸಿ ಪ್ರಕರಣವನ್ನು ನೋಡಿಕೊಳ್ಳುವಂತೆ ಹೇಳಿದೆ. ಮುಂಬರುವ ಕಾರ್ಪೊರೇಟ್ ಚುನಾವಣೆಗೆ ಸ್ಪರ್ದಿಸಲು ಸಜ್ಜಾಗುತ್ತಿದ್ದ ಆತ ” ಇದೆಲ್ಲ ನನಗೆ ಬಿಡಿ, ನೋಡ್ಕೊಳ್ತೇನೆ, ನೀವು ಆರಾಮಾಗಿ ಆಫೀಸ್ ಗೆ ಹೋಗಿ” ಅಂತ ಥೇಟು ರಾಜಕಾರಣಿಯ ತರಹ ಭರವಸೆ ನೀಡಿದ. ಇಷ್ಟಕ್ಕೂ ನಾನು ಗೋಳು ಅಂತ ಗೋಳುಹೊಯ್ದುಕೊಳ್ಳೋ ಈ ಪ್ರಕಾಶನಿಗೂ ಮತ್ತು ಕೆಪಿ ಅಗ್ರಹಾರದ ಪೊಲೀಸ್ ಠಾಣೆಗೂ ಬಾರೀ ಆತ್ಮೀಯ ಸಂಬಂಧವಿದೆ. ಅದರಲ್ಲೂ ಈಗ ಇರೋ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶನ ತಂದೆಯ ಮಾಜಿ ಸಹೋದ್ಯೋಗಿಯ ಮಗ, ಆದ್ದರಿಂದ ಕೆಪಿ ಅಗ್ರಹಾರ ಪೊಲೀಸ್ ಸ್ಟೇಷನ್ ಅಂತ ಹೆಂಡತಿ ಹೇಳಿದ ಕೂಡಲೇ ವಿಷಯ ಇನ್ಮುಂದೆ ತುಂಬಾ ಸಿಂಪಲ್ ಅನ್ನಿಸಿತ್ತು.
ರಾಜರಾಜೇಶ್ವರಿ ನಗರದ ಮನೆಯಿಂದ ಹೊರಟು ಕಚೇರಿಯ ಅರ್ಧ ದಾರಿ ತಲುಪುವ ಒಳಗೆ ಪ್ರಕಾಶ ಕೇಸಿನ ವರದಿ ಒಪ್ಪಿಸಿದ್ದ ಮತ್ತು ಅದು ನಾನು ಅಂದುಕೊಂಡಂತೆ ತುಂಬಾ ಸಿಂಪಲ್ ಅಲ್ಲ ಅನ್ನೋದು ಅವನು ಕೊಟ್ಟ ಮಾಹಿತಿಯಲ್ಲಿ ಸ್ಪಷ್ಟವಾಗಿತ್ತು. ಈ ರಾಮ ನಾಯ್ಕನ ಮಗ ಜಿಪ್ ಟಾಪ್ಕೆ ಅನ್ನೋ ಗುಜರಾತಿ ಕಂಪನಿಯಲ್ಲಿ ಮಾರ್ಕೆಟಿಂಗ್ ಎಸ್ಎಕ್ಯುಟಿವ್ ಆಗಿ ಕೆಲಸ ಮಾಡ್ತಾ ಇರೋದು. ಅಲ್ಲಿ ಕೆಲಸಕ್ಕೆ ಸೇರಿಕೊಂಡು ಕೆಲವೇ ತಿಂಗಳು ಆಗಿದೆ ಅಷ್ಟೇ. ಅದಾನಿ ಕಂಪನಿ ತನ್ನ ಯಾವುದೊ ಪ್ರೋಜೆಕ್ಟಿಗೆ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದ ಜಿಪ್ ಟಾಪ್ಕೆ ಯ ಮಾರ್ಕೆಟಿಂಗ್ ಟೀಮ್ ನಲ್ಲಿ ಇವನಿದ್ದ. ಅದು ವಾರ್ಷಿಕ ಸುಮಾರು ನೂರು ಕೋಟಿ ರೂಪಾಯಿಯ ಟೆಂಡರ್. ಅದಾನಿ ಕಂಪನಿಯ ಪರ್ಚಸ್ ಟೀಮ್ ನ ಮ್ಯಾನೇಜರ್ ಜೊತೆಗೆ ಲಿಂಕು ಇಟ್ಟುಕೊಂಡಿದ್ದ ಜಿಪ್ ಟಾಪ್ಕೆ ನ ಮಾರ್ಕೆಟಿಂಗ್ ಹೆಡ್ ಕಡಿಮೆ ಮೊತ್ತಕ್ಕೆ ಟೆಂಡರ್ ತಯಾರು ಮಾಡಿ ಅದಾನಿಗೆ ಸಲ್ಲಿಸಿದ್ದರು. ಆದರೆ ಎಲ್ಲರೂ ಆಶ್ಚರ್ಯಪಡುವ ಹಾಗೆ ಟೆಂಡರ್ ಜಿಪ್ ಟಾಪ್ಕೆ ನ ಪ್ರತಿಸ್ಪರ್ದಿ ಕಂಪನಿಯಾದ ತೇಜಕಮಲ್ ಪಾಲಾಗಿತ್ತು. ಇದನ್ನ ಸಹಿಸಲಾಗದ ಜಿಪ್ ಟಾಪ್ಕೆ ನ ಸಿಇಓ, ಪ್ರತಿಸ್ಪರ್ದಿಗೆ ಎಲ್ಲೊ ಮಾಹಿತಿ ಸೋರಿಕೆಯಾಗಿದೆ ಅಂತ ಬಲವಾದ ಸಂಶಯದಲ್ಲಿ ಆಂತರಿಕ ತನಿಖಾ ತಂಡಕ್ಕೆ ತನಿಖೆ ಮಾಡಲು ಆದೇಶಿಸಿದ್ದರು. ತನಿಖೆ ನೆಡೆಸಿದ ತಂಡ ಬಹುದೊಡ್ಡ ಆಘಾತಕಾರಿ ಮಾಹಿತಿ ನೀಡಿತ್ತು. ಜಿಪ್ ಟಾಪ್ಕೆಯ ಟೆಂಡರ್ ಕಾಸ್ಟಿಂಗ್ ಮಾಹಿತಿ ತೇಜಕಮಲ್ ಕ್ಕೆ ಸೋರಿಕೆಯಾಗಿತ್ತು, ಅದೂ ಕಂಪನಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮನಮೋಹನ್ ತ್ರಿಪಾಠಿಯ ಮೇಲ್ ಐಡಿಯಿಂದ. ವರದಿ ನೋಡಿದ ಜಿಪ್ ಟಾಪ್ಕೆ ನ ಮ್ಯಾನೇಜ್ಮೆಂಟ್ ಹೌಹಾರಿತ್ತು, ಕಾರಣ ಮನಮೋಹನ್ ಜಿಪ್ ಟಾಪ್ಕೆ ನ ಟ್ರಂಪ್ ಕಾರ್ಡ್. ಕಳೆದ ಹತ್ತು ವರ್ಷದಿಂದ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥನಾಗಿದ್ದ ಆತ ಸಾವಿರಾರು ಕೋಟಿಯ ಅದೆಷ್ಟೋ ಟೆಂಡರ್ ಗಳನ್ನು ಜಿಪ್ ಟಾಪ್ಕೆ ನ ಜೋಳಿಗೆಗೆ ತುಂಬಿಸಿದ್ದ. ಕಂಪನಿಯ ಬೋರ್ಡ್ ಗೆ ಈತ ಒಂದು ತರಹ ದತ್ತುಪುತ್ರ ಇದ್ದ ಹಾಗೆ. ಆದ್ರೆ ಈ ತನಿಖಾ ವರದಿ ಎಲ್ಲವನ್ನು ತಲೆಕೆಳಗಾಗಿಸಿತ್ತು. ಆದರೆ ಒಂದು ಅಂಶ ಇಲ್ಲಿ ಮನಮೋಹನನಿಗೆ ಸಹಕಾರಿಯಾಗಿತ್ತು. ಮೇಲ್ ಹೊರಹೋದ ಸಮಯದಲ್ಲಿ ಆತ ಆಫೀಸ್ ನಲ್ಲಿ ಇರಲಿಲ್ಲ. ಕಂಪನಿಯ ಸಿಇಓ ಜೊತೆಗೆ ಕ್ಲೈಂಟ್ ಮೀಟಿಂಗ್ ನಲ್ಲಿ ಇದ್ದಿದ್ದ. ಅದನ್ನೇ ಡಿಫೆನ್ಸ್ ಆಗಿ ಬಳಸಿಕೊಂಡ ಮನಮೋಹನ್ ನಾನು ಆಫೀಸ್ ನಲ್ಲಿ ಇಲ್ಲದ ಸಮಯದಲ್ಲಿ ಯಾರೋ ಈ ಕೆಲಸ ಮಾಡಿದ್ದಾರೆ ಅಂತ ಬೋರ್ಡ್ ಗೆ ತಕರಾರು ಸಲ್ಲಿಸಿದ್ದ. ಒಪ್ಪಲಾರ್ಹವಾದ ತಕರಾರನ್ನು ಸ್ವೀಕರಿಸಿದ ಬೋರ್ಡ್ ಹೆಚ್ಚಿನ ತನಿಖೆಗೆ ಆದೇಶಿಸಿತ್ತು ಮತ್ತು ಅದರ ಫಲವಾಗಿಯೇ ಅರವಿಂದ ನಿನ್ನೆ ಜೈಲು ಪಾಲಾಗಿದ್ದು.
ಮಾರ್ಕೆಟಿಂಗ್ ಟೀಮ್ ನ CC ಕ್ಯಾಮರಾ ಹಾಳಾಗಿ ವಾರವಾಗಿತ್ತು. ಅದು ತನಿಖಾ ತಂಡಕ್ಕೆ ದೊಡ್ಡ ತಲೆನೋವು ತಂಡ ವಿಷಯ. ಇ ಮೇಲ್ ಹೋದ ಸಮಯ ಮಧ್ಯಾಹ್ನ ಎರಡು ಗಂಟೆ ಆಗಿದ್ದರಿಂದ ಅಲ್ಲಿರುವ ಎಲ್ಲಾ ಉದ್ಯೋಗಿಗಳು ಅ ಸಮಯಕ್ಕೆ ಊಟಕ್ಕೆ ಹೋಗಿರುತ್ತಾರೆ, ಇತ್ತ CC ಕ್ಯಾಮರಾ ಬೇರೆ ಕೆಲಸ ಮಾಡ್ತಾ ಇಲ್ಲ, ಇದರ ಲಾಭ ಪಡೆದ ಯಾರೋ ಈ ಕೆಲಸ ಮಾಡಿದ್ದಾರೆ ಅನ್ನೋದು ಖಚಿತವಾಗಿದ್ದರೂ ಅದನ್ನು ಕಂಡು ಹಿಡಿಯೋದು ಅಷ್ಟು ಸುಲಭವಾಗಿರಲಿಲ್ಲ. ಆದ್ದರಿಂದ ಕಚೇರಿಯಲ್ಲಿ ಇರೋ ಪ್ರತಿಯೊಬ್ಬರನ್ನು ವಿಚಾರಿಸಬೇಕಾದ ಅನಿವಾರ್ಯತೆ ತನಿಖಾ ತಂಡಕ್ಕೆ ಒದಗಿತ್ತು. ಈ ಹಂತದಲ್ಲೇ ಆಫೀಸ್ ಬಾಯ್ ಸುರೇಶ ಕೊಟ್ಟ ಮಾಹಿತಿ ತನಿಖೆಗೆ ಹೊಸ ತಿರುವು ನೀಡಿದ್ದು. ಆ ಮಾಹಿತಿಯ ಪ್ರಕಾರ ಎಲ್ಲ ಲಂಚ್ ಗೆ ಹೋದ ಸಮಯದಲ್ಲಿ ಅರವಿಂದನು ಮನಮೋಹನನ ಕ್ಯಾಬಿನ್ ನಿಂದ ಹೊರಬಂದಿರುವುದನ್ನು ಸುರೇಶ ನೋಡಿದ್ದಾಗಿ ಹೇಳಿದ್ದ. ಆತ ಹೇಳಿದ ಸಮಯಕ್ಕೂ ಇ ಮೇಲ್ ಕಳಿಸಿದ ಸಮಯಕ್ಕೂ ತಾಳೆಯಾಗಿದ್ದರಿಂದ ತನಿಖಾ ತಂಡ ಅರವಿಂದನನ್ನು ವಿಶೇಷವಾಗಿ ವಿಚಾರಿಸಿ ವಿಷಯ ಹೊರಗೆಡವಿತ್ತು.
ತನಿಖಾ ತಂಡದ ದಾಳಿಗೆ ಅರವಿಂದ ತಪ್ಪೊಪ್ಪಿಕೊಂಡಿದ್ದ, ಆದರೆ ಅದು ನಾನು ನಾನಾಗಿ ಮಾಡಿದ ತಪ್ಪಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನನ್ನ ಮ್ಯಾನೇಜರ್ ವಂದನಾ ಮೇಡಂ ನನ್ನ ಹತ್ರ ಒಂದು ಪೆನ್ ಡ್ರೈವ್ ಕೊಟ್ಟು ಜೊತೆಗೆ ನನ್ನ ಕೈಯಲ್ಲಿ ಒಂದ್ ಪೇಪರ್ ಕೊಟ್ಟು, ಅದರ ಮೇಲೆ ಬರೆದುಕೊಳ್ಳುವಂತೆ ಒಂದು ಇ ಮೇಲ್ ಐಡಿ ಮತ್ತು ಮನಮೋಹನ್ ಅವರ ಲ್ಯಾಪ್ಟಾಪ್ ಪಾಸ್ವರ್ಡ್ ನ್ನು ಹೇಳಿ ಅರ್ಜೆಂಟ್ ಆಗಿ ಪೆನ್ ಡ್ರೈವ್ ನಲ್ಲಿ ಇರೋದನ್ನ ಅವರ ಲ್ಯಾಪ್ಟಾಪ್ ನಿಂದ ಇ ಮೇಲ್ ಮಾಡುವಂತೆ ಹೇಳಿದ್ರು, ಅದೇ ಪ್ರಕಾರ ಮಾಡಿದೆ ಅಷ್ಟೇ. ಪೆನ್ ಡ್ರೈವ್ ನಲ್ಲಿ ಏನಿತ್ತು ಅನ್ನೋದು ನನಗೆ ಗೊತ್ತಿಲ್ಲ ಅಂತ ಆತ ತನಿಖಾ ತಂಡಕ್ಕೆ ವಿವರಿಸಿದ್ದ. ಆದರೆ ಆತ ಹೇಳಿದನ್ನು ವಂದನಾ ಜೋಶಿ ನಿರಾಕರಿಸಿದ್ದಳು. ಟೆಂಡರ್ ಟೀಮ್ ನ ಲೀಡ್ ಆಗಿರುವ ಆಕೆಯ ಬಗ್ಗೆ ಮ್ಯಾನೇಜ್ಮೆಂಟ್ ಗೆ ಒಳ್ಳೆ ಅಭಿಪ್ರಾಯ ಇರೋದರಿಂದ ಮತ್ತು ಆಕೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂತ ಮನಮೋಹನ್ ಬೇರೆ ಸಾಕ್ಷಿ ನುಡಿದಿದ್ದರಿಂದ ತನಿಖಾ ಸಮಿತಿ ಅರವಿಂದನನ್ನು ಅಪರಾಧಿ ಅಂತ ಘೋಷಿಸಿ ಆತನ ಮೇಲೆ ಕಂಪನಿ ಪೊಲೀಸ್ ಕಂಪ್ಲೇಂಟ್ ದಾಖಲಿಸಿತ್ತು.
ಕೇಸಿನ ಸಂಪೂರ್ಣ ವರದಿಯನ್ನು ಪ್ರಕಾಶನಿಂದ ಕೇಳಿದ ಮೇಲೆ ನನಗೆ ಈ ಕೇಸಿನಲ್ಲಿ ಏನೋ ಮಿಸ್ ಲೀಡಿಂಗ್ ಪಾಯಿಂಟ್ ಇದೆ ಅನ್ನಿಸತೊಡಗಿತು. ಅರವಿಂದ ಆ ಕಂಪನಿ ಸೇರಿ ವರ್ಷವಾಗಿರಲಿಲ್ಲ, ಅದು ಬೇರೆ ಕಾಲೇಜು ಮುಗಿಸಿ ನೇರವಾಗಿ ಕೆಲಸಕ್ಕೆ ಸೇರಿದ್ದರಿಂದ, ಪ್ರತಿಸ್ಪರ್ದಿ ಕಂಪನಿಯ ಜೊತೆಗೆ ಲಿಂಕ್ ಇರುವ ಸಾಧ್ಯತೆ ಇಲ್ಲ. ಇನ್ನೊಂದು, ಆತ ಕಂಪನಿಯಲ್ಲಿ ಒಬ್ಬ ಎಸ್ಎಕ್ಯುಟಿವ್, ಅವನು ರಿಪೋರ್ಟಿಂಗ್ ಬಂದು ಮ್ಯಾನೇಜರ್ ಗೆ, ಆ ಮ್ಯಾನೇಜರ್ ರಿಪೋರ್ಟಿಂಗ್ ಬಂದು CMO ಮನಮೋಹನ್ ಗೆ. ಆದ್ದರಿಂದ ತನ್ನ ಮ್ಯಾನೇಜರ್ ಅಣತಿ ಇಲ್ಲದೆ ಆತ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂತ ನನ್ನ ಮನಸ್ಸಿಗೆ ದೃಢವಾಗಿತ್ತು. ಅದು ಅಲ್ಲದೆ ಕೋಟಿಗಟ್ಟಲೆ ಮೌಲ್ಯದ ಟೆಂಡರ್ ನ ಪ್ರೈಸಿಂಗ್ ವಿವರಗಳು ಕೆಳಮಟ್ಟದ ನೌಕರರಿಗೆ ಸಿಗುವ ಸಾಧ್ಯತೆಯೇ ಇರೋದಿಲ್ಲ, ಅಷ್ಟು ಗೌಪ್ಯವಾಗಿರುತ್ತೆ. ಆದ್ದರಿಂದ ಇಲ್ಲಿ ಅರವಿಂದನನ್ನು ಯಾರೋ ಹರಕೆಯ ಕುರಿ ಮಾಡಿದ ಹಾಗಿದೆ ಅನ್ನೋ ಅಂಶ ನನ್ನ ಮನಸಿನ್ನಲ್ಲಿ ಬಲವಾಗಿ ನಿಂತಿತ್ತು. ಅದನ್ನೇ ಪ್ರಕಾಶನಿಗೆ ವಿಸ್ತೃತವಾಗಿ ವಿವರಿಸಿದೆ ಮತ್ತು ಆತ ನನ್ನ ಥಿಯರಿಯನ್ನು ಸರ್ಕಲ್ ಇನ್ಸ್ಪೆಕ್ಟರಿಗೆ ತಲುಪಿಸಿದ್ದ. ಅವರಿಗೂ ನನ್ನ ಮನದಿಂಗಿತ ಸಹ್ಯ ಅನ್ನಿಸಿರಬೇಕು, ಜೊತೆಗೆ ಅರವಿಂದನನಲ್ಲಿ ಅಮಾಯಕತೆ ಮತ್ತು ಅಸಹಾಯಕತೆಯನ್ನು ಗಮನಿಸಿರಬೇಕು. ಆದ್ದರಿಂದ ಈ ಕೇಸನ್ನು ಸಂಧಾನದ ಮೂಲಕ ಬಗೆಹರಿಸೋಣ ಅಂತ ನಿರ್ಧರಿಸಿ ಸಂಜೆ ಐದು ಗಂಟೆಗೆ ಪೊಲೀಸ್ ಠಾಣೆಯಲ್ಲಿ ಸಭೆ ನಿಗದಿಪಡಿಸಿದ್ದರು. ಈ ಕೇಸಿನ ಮುಖ್ಯ ಕೊಂಡಿ ಮನಮೋಹನ ಮತ್ತು ವಂದನಾ ಜೋಶಿ ಕಡ್ಡಾಯವಾಗಿ ಸಭೆಗೆ ಬರಬೇಕು ಅನ್ನೋ ನನ್ನ ಆಗ್ರಹ ಕೆಲಸ ಮಾಡಿತ್ತು. ಆದರೆ ಮನಮೋಹನ ಕಂಪನಿ ಕೆಲಸದ ಮೇಲೆ ದೆಹಲಿಗೆ ಹೋಗಿದ್ದರಿಂದ ಜಿಪ್ ಟಾಪ್ಕೆ ತನಿಖಾ ತಂಡ ತನ್ನ ಜೊತೆಗೆ ಮೀಟಿಂಗ್ ಗೆ ವಂದನಾ ಜೋಶಿ ಮತ್ತು ಎಚ್ ಆರ್ ಮುಖ್ಯಸ್ಥರನ್ನು ಕರೆದುಕೊಂಡು ಬಂದಿತ್ತು.
ಪೊಲೀಸ್ ಠಾಣೆಯಲ್ಲಿ ಮೀಟಿಂಗ್ ಮುಗಿಸಿ ಎಲ್ಲವನ್ನು ಸುಖಾಂತ್ಯಗೊಳಿಸಿದ ಸರ್ಕಲ್ ಇನ್ಸ್ಪೆಕ್ಟರ್ ಗೆ ಧನ್ಯವಾದ ಹೇಳಿ ಕಾರು ಹತ್ತುವ ವೇಳೆಗೆ ಸಮಯ ರಾತ್ರಿ ಹತ್ತಾಗಿತ್ತು. ಪೊಲೀಸ್ ಕೇಸುಗಳು, ಸಂಧಾನಗಳು ಅಂದ್ರೆ ಹಾಗೆ ತಾನೇ ? ಯಾವುದು ಬೇಗ ಮುಗಿಯೋಲ್ಲ. ನಮ್ಮದೇ ಪರವಾಗಿಲ್ಲ ನಾಲ್ಕೈದು ಗಂಟೆಯಲ್ಲಿ ಎಲ್ಲ ಮುಗಿದಿತ್ತು. ಜಿಪ್ ಟಾಪ್ಕೆ ಯವರು ಅರವಿಂದನ ಮೇಲಿನ ಕೇಸನ್ನು ಹಿಂತೆಗೆದುಕೊಳ್ಳುವುದರ ಮೂಲಕ ನಮ್ಮ ಪಾಲಿಗೆ ಎಲ್ಲಾ ಸುಖಾಂತ್ಯವಾಯಿತು. ” ಸರ್ ನೀವ್ ಲಾಯರ್ ಆಗಬೇಕಿತ್ತು, ಅಕೌಂಟ್ ಫೀಲ್ಡ್ ಗೆ ಹೋಗಿ ತಪ್ಪು ಮಾಡಿದ್ರಿ, ಇವತ್ತು ನೀವು ಮಾತಾಡಿದ್ದು ರೀತಿ ನೋಡಿದ್ರೆ ನೀವೇಲ್ಲಾದ್ರೂ ಲಾಯರ್ ಆಗಿದ್ರೆ ಇಷ್ಟು ಹೊತ್ತಿಗೆ ಕೋಟ್ಯಧಿಪತಿ ಆಗ್ತಾ ಇದ್ರಿ ” ಅಂತ ಸಂಧಾನ ಸಭೆಯಲ್ಲಿ ನನ್ನ ಮಾತಿನ ಬಗ್ಗೆ ಸರ್ಕಲ್ ಇನ್ಸ್ಪೆಕ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈ ಕೇಸು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗದೆ ಇದ್ದಿದ್ದರೆ ಮತ್ತು ನಮ್ಮ ಪ್ರಕಾಶ ಇಲ್ಲದೆ ಇದ್ದಿದ್ದರೆ ಇವತ್ತು ಅರವಿಂದ ತಿಥಿ ಆಗುತ್ತಿತ್ತು ಅನ್ನೋದು ಅಷ್ಟೇ ಸತ್ಯ. ಪಾಪ ಆತ ಬದುಕಿದೆಯಾ ಬಡ ಜೀವ ಅಂತ ಸಂಧಾನ ಮುಗಿದ ಮೇಲೆ ತನ್ನ ರೂಮ್ ಮೆಟ್ ನ ಜೊತೆಗೆ ಒಂದೇ ಉಸಿರಿಗೆ ತನ್ನ ರೂಮಿಗೆ ಓಡಿಹೋಗಿದ್ದ.
ಕಾರು ಹತ್ತಿದವನೇ, ಹೆಂಡತಿಗೆ ಫೋನ್ ಮಾಡಿ ವಿಷಯ ಎಲ್ಲ ಹೇಳಿ, “ಅಪ್ಪಯ್ಯನಿಗೆ ನೀನೇ ಎಲ್ಲ ವಿಷಯ ಹೇಳು” ಅಂತ ತಿಳಿಸಿ ಮನೆ ಕಡೆಗೆ ಕಾರು ಚಲಾಯಿಸಿದೆ. ಏನೋ ಅಂದುಕೊಂಡ ಕೇಸು ಏನೋ ಆಗಿ ಹೋಯ್ತಲ್ಲ, ಮೇಲ್ನೋಟಕ್ಕೆ ಅರವಿಂದನ ತಪ್ಪು ಇದ್ದರೂ, ಅದರ ಹಿಂದೆ ಇನ್ನೊಬ್ಬರ ಷಡ್ಯಂತರ ಇದೆ ಅನ್ನೋ ನನ್ನ ಗುಮಾನಿ ಸರಿ ಆಗಿದ್ದರೂ ಅದನ್ನು ಷಡ್ಯಂತರ ಆಂತ ವ್ಯಾಖ್ಯಾನಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಬ್ಬಳು ಅಸಹಾಯ ಹೆಣ್ಣು ಮಗಳು ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಂಡು ಕೊಂಡ ಹಾದಿ ಇದು. ಆದರೆ ಈ ಕಾರ್ಪೊರೇಟ್ ಜಗತ್ತಿನ ಹೆಬ್ಬುಲಿಗಳ ಮುಂದೆ ಅವಳು ಏನು ಸಾಧಿಸಲಾರಳು ಅನ್ನೋದು ನನ್ನ ಅನುಭವದ ಮಾತು.
ಪೊಲೀಸ್ ಠಾಣೆಯಲ್ಲಿ ನಮ್ಮ ಉಪಸ್ಥಿತಿಯಿಂದ ಗುಲಗಂಜಿಯಷ್ಟು ಧೈರ್ಯ ತಂದುಕೊಂಡ ಅರವಿಂದ ಇದು ನಾನಾಗಿ ಮಾಡಿದ ಕೆಲಸ ಅಲ್ಲ, ವಂದನಾ ಮೇಡಂ ಅಣತಿಯ ಮೇಲೆ ಮಾಡಿದ್ದು, ಅಂತ ಗೋಡೆಯಲ್ಲಿದ್ದ ದೇವರ ಫೋಟೋದ ಮೇಲೆ ಕೈ ಇಟ್ಟು ಪ್ರಮಾಣ ಮಾಡಿ ಹೇಳಿದ್ದ. ಆತನ ಈ ವರ್ತನೆ ಇನ್ಸ್ಪೆಕ್ಟರ್ ನ ಮನಸ್ಸು ಕಲುಕಿತು. ತನ್ನ ಕಣ್ಸನ್ನೆ ಮೂಲಕ ಇಬ್ಬರು ಮಹಿಳಾ ಪೊಲೀಸರನ್ನು ವಂದನಾ ಜೋಶಿಯ ಪಕ್ಕಕ್ಕೆ ಕಳುಹಿಸಿದ ಆತ ಆಕೆಯ ಬಾಯಿ ಬಿಡಿಸಲು ಶುರು ಮಾಡಿದ. ಅನ್ಯ ಮಾರ್ಗವಿಲ್ಲದೆ ವಂದನಾ ಅವಾಗ ನಿಜ ಅರುಹಿದಳು. . .
ಜಿಪ್ ಟಾಪ್ಕೆ ದ CMO ಮನಮೋಹನ್ ನಲ್ಲಿ ತನ್ನ ಟೀಮ್ ಮೆಂಬರ್ ವಂದನಾ ಮೇಲೆ ಏನೋ ಒಂಥರಾ ಮೋಹ ಗೂಡು ಕಟ್ಟಿತ್ತು. ಸುಮಾರು ಐದಾರು ವರ್ಷಗಳ ವೃತ್ತಿ ಒಡನಾಟ ಮತ್ತು ಸದಾ ಎದುರಲ್ಲೇ ಓಡಾಡುತ್ತಿದ್ದ ವಂದನಾ, ಮನಮೋಹನ್ ಮನಸ್ಸು ಕಲಕಿ ಕನಸಲ್ಲಿ ಕಾಡತೊಡಗಿದ್ದಳು. ಇಬ್ಬರು ಹೆಣ್ಣು ಮಕ್ಕಳ ತಂದೆ ಆತ, ತನಗಿಂತ ಹದಿನಾಲ್ಕು ವರ್ಷ ಚಿಕ್ಕವಳಾದ ಒಂದು ಗಂಡು ಮಗುವಿನ ತಾಯಿಯಾದ ಆಕೆಯ ಮೇಲೆ ಒಲವಿನ ಬೆಳಕು ಹರಿಸಲು ಹಾತೊರೆದಿದ್ದ. ಆರಂಭದಲ್ಲಿ ಕೆಲಸದ ವಿಷಯ ಬಿಟ್ಟು ಆತ ಕಳಿಸುತ್ತಿದ್ದ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಗಳಿಗೆ ಎಷ್ಟೇ ಆದರೂ ರಿಪೋರ್ಟಿಂಗ್ ಬಾಸ್ ಬೇರೆ, ರಿಪ್ಲೈ ಮಾಡದಿದ್ದರೆ ತೊಂದರೆ ಆಗಬಹುದು ಅನ್ನೋ ಅಸಹಾಯಕತೆಯಲ್ಲಿ ಆತನ ಮೆಸೇಜ್ ಗಳಿಗೆ ರಿಪ್ಲೈ ಮಾಡುತ್ತಿದ್ದಳು. ನಂತರ ಆತನ ಮೆಸೇಜುಗಳ ಧಾಟಿ ನಿಧಾನವಾಗಿ ಬದಲಾಗತೊಡಗಿತು. ಮೀಸ್ ಯು, , ಲೈಕ್ ಯು, ಡ್ರೀಮ್ ಗರ್ಲ್ ಅಂತ ಮುಂದುವರಿದ ಮೆಸೇಜುಗಳು ಲವ್ ಯು ಅನ್ನೋ ತನಕ ಬಂತು. ಯಾವಾಗ ಮೆಸ್ಸೇಜುಗಳ ಧಾಟಿ ಹಳಿ ತಪ್ಪಿತೋ ಆಗ ಆತನ ಮೆಸೇಜ್ಗಳಿಗೆ ಆಕೆ ರಿಪ್ಲೈ ಮಾಡುವುದನ್ನು ನಿಲ್ಲಿಸಿದ್ದಳು. ಇದಲ್ಲದೆ ಅನಗತ್ಯವಾಗಿ ಆಕೆಯನ್ನು ಕ್ಯಾಬಿನ್ ಗೆ ಕರೆದು ಕೆಲಸಕ್ಕೆ ಸಂಬಂಧ ಪಡದ ವಿಷಯಗಳ ಬಗ್ಗೆ ಮಾತಾಡೋದು, ಇವಳಿಗೆ ಸಂಬಂಧವಿಲ್ಲದ ಮೀಟಿಂಗ್ ಗಳಿಗೆ ಕರೆದುಕೊಂಡು ಹೋಗೋದು, ತನ್ನ ಲ್ಯಾಪ್ಟಾಪ್ ಕೊಟ್ಟು ಪಕ್ಕದಲ್ಲಿ ನಿಲ್ಲಿಸಿಕೊಂಡು ಈ ಮೇಲ್ ಡ್ರಾಫ್ಟ್ ಮಾಡಿಸೋದು,
ಅವಕಾಶ ಸಿಕ್ಕಿದಾಗೆಲ್ಲ ಮೈ ಕೈ ಮುಟ್ಟೋದು, ಲಂಚ್ ಗೆ ಡಿನ್ನರ್ ಗೆ ಬನ್ನಿ ಅಂತ ಕರೆಯೋದು, ಪೋಲಿ ಜೋಕು, ಪೋಲಿ ವಿಡಿಯೋ ಕಳಿಸೋದು ಹೀಗೆ ಮನಮೋಹನನ ಕಾಮಚೇಷ್ಟೆ ವಿತಿಮೀರಿತ್ತು. ಒಂದೆರಡು ಸಲ ಆಕೆ “ಇದೆಲ್ಲ ಸರಿ ಅಲ್ಲ ಸರ್ ನಾನು ನೀವು ತಿಳ್ಕೊಂಡಿರೋ ತರ ಅಲ್ಲ ಸರ್, ದಯವಿಟ್ಟು ಈ ತರ ಮೆಸೇಜ್ ಕಳಿಸಬೇಡಿ ” ಅಂತ ಆತನಿಗೆ ಹೇಳಿದ್ರೂ ಪ್ರಯೋಜನವಾಗಲಿಲ್ಲ. ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನದ ಸಮಯದಲ್ಲಿ ಮನಮೋಹನ್ ಆಕೆಯನ್ನು ಡೇಟಿಂಗ್ ಗೆ ಕರೆದಿದ್ದ, ಆಕೆ ನಿರಾಕರಿಸಿದ ಫಲವಾಗಿ ಕಳೆದ ಸಲ ನ್ಯಾಯವಾಗಿ ಆಕೆಗೆ ದಕ್ಕಬೇಕಿದ್ದ ಬಡ್ತಿಯೂ ತಪ್ಪಿ ಹೋಗಿದ್ದಲ್ಲದೆ ಕಡಿಮೆ ಇನ್ಕ್ರಿಮೆಂಟ್ ಬಂದಿತ್ತು. ಆದರೆ ಇದನ್ನೆಲ್ಲಾ ಎಲ್ಲೂ ಹೇಳಿಕೊಳ್ಳುವ ಹಾಗಿರಲಿಲ್ಲ. ಮನಮೋಹನ ಬಗ್ಗೆ ಏನೆ ಸಾಕ್ಷ್ಯ ಇದ್ರೂ ಅದನ್ನು ಕಂಪನಿಯ ಬೋರ್ಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸೋಲ್ಲ ಅನ್ನೋದು ಅವಳಿಗೆ ಖಚಿತವಾಗಿ ಗೊತ್ತಾಗಿತ್ತು, ಯಾಕೆಂದ್ರೆ ಆತ ಬೋರ್ಡ್ ಪಾಲಿನ ನೀಲಿ ಕಣ್ಣಿನ ಹುಡುಗನಾಗಿದ್ದ. ಇನ್ನು ಹೊರಗಡೆ ಪೊಲೀಸ್ ಕೋರ್ಟ್ ಅಂತ ಹೋಗಲು ಸಂಪ್ರದಾಯಸ್ಥ ಮನಸ್ಥಿತಿಯ ಆಕೆಗೆ ಅಸಾಧ್ಯವಾಗಿತ್ತು. ಇದೆರಡೇ ಕಾರಣಗಳು ಅಲ್ಲವೇ ಇವತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಸ್ತ್ರೀ ಶೋಷಣೆಯ ಮೂಲ ಮತ್ತು ಗಂಡು ಜಗತ್ತು ಈ ವಿಷಯದಲ್ಲಿ ನಿರ್ಭಯವಾಗಿರುವುದು. ಅದೆಷ್ಟೋ ಹೆಣ್ಣು ಮಕ್ಕಳ ಈ ತರಹದ ಅಸಹಾಯಕ ಕೂಗಿಗೆ ಈ ಕಾರ್ಪೊರೇಟ್ ಲೋಕದ ಕಿವಿಯಿಲ್ಲದಾಗಿರುವುದು.
ಆದರೆ ಬೇರೆ ಹೆಣ್ಣು ಮಕ್ಕಳಂತೆ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿರುವುದು ಅಥವಾ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರನೆಡೆಯುವ ಯೋಚನೆ ಆಕೆಗೆ ಕಷ್ಟ ವಾಗಿತ್ತು. ಮನೆ ಮತ್ತು ಕಾರಿನ EMI, ಮಗನ ಶಿಕ್ಷಣಕ್ಕಾಗಿ ಗಂಡನ ಜೊತೆಗೆ ಈಕೆಯೂ ಪ್ರತಿ ತಿಂಗಳು ತಪ್ಪದೆ ವರಮಾನ ತರುವ ಅನಿವಾರ್ಯಯ ಜೊತೆಗೆ ಬೇಜವಾಬ್ದಾರಿ ಅಣ್ಣನಿಂದ ತಂದೆ ತಾಯಿಯನು ನೋಡಿಕೊಳ್ಳಬೇಕಾದ ಸ್ಥಿತಿ ಆಕೆಗೆ ಇತ್ತು. ಇತ್ತ ಕಡೆ ದಿನೆ ದಿನೆ ಹೆಚ್ಚಾಗುತ್ತಿದ್ದ ಮನಮೋಹನನ ಕಿರಿಕುಳ ಆಕೆಯ ನೆಮ್ಮದಿಯನ್ನು ಕಿತ್ತುಕೊಂಡಿತ್ತು. ಹಾಗಾಗಿ ಎಲ್ಲವನ್ನು ಸಹಿಸಿಕೊಂಡು ಸಹನಾಮೂರ್ತಿಯಾಗಲು ಅವಳಿಗೆ ಸಾಧ್ಯವಾಗಲ್ಲ. ಆದ್ದರಿಂದ ಆಕೆ ಹೇಗಾದರೂ ಮಾಡಿ ಮನಮೋಹನನ್ನು ಕಂಪನಿಯಿಂದ ಓಡಿಸುವ ನಿರ್ಣಯ ಮಾಡಿದ್ದಳು ಮತ್ತು ಫಲವೇ ಜಿಪ್ ಟಾಪ್ಕೆ ಯಾ ಮಾಹಿತಿ ಸೋರಿಕೆ ಪ್ರಕರಣ.
ಯಾವ ಕಂಪನಿಯು ಯಾವುದೇ ಕಾರಣಕ್ಕೂ ತನ್ನ ಕಾಸ್ಟಿಂಗ್ ಸಂಬಂದಿಸಿದ ಗೌಪ್ಯ ಮಾಹಿತಿಯನ್ನು ಪ್ರತಿಸ್ಪರ್ಧಿ ಕಂಪನಿಗೆ ಸೋರಿಕೆಯಾಗುವುದನ್ನು ಸಹಿಸಿಕೊಳ್ಳೋಲ್ಲ. ಮನಮೋಹನನಂಥ ಕಂಪನಿಯ ದತ್ತು ಪುತ್ರರಿಗೆ ಒಂದೆರಡು ಸಲ ಕ್ಷಮೆ ಸಿಕ್ಕಿದರೂ ಅದು ಪದೇ ಪದೇ ಆಗಲು ಸಾಧ್ಯವಿಲ್ಲ. ಆದ್ದರಿಂದ ಆತನ ಲ್ಯಾಪ್ಟಾಪಿನ ಪಾಸ್ವರ್ಡ್ ಗೊತ್ತಿದ್ದರಿಂದ ಈ ಕೆಲಸಕ್ಕೆ ಮುಂದಾಗಿದ್ದಳು. CC ಕ್ಯಾಮರಾ ಕೆಟ್ಟುಹೋಗಿದ್ದು ಆಕೆಗೆ ವರದಾನವಾಗಿತ್ತು. ತಾನೇ ಈ ಕೆಲಸ ಮಾಡಿ ಸಿಕ್ಕಿಹಾಕಿಕೊಳ್ಳದರಿಂದ ಬೇರೆಯವರಿಂದ ಮಾಡಿಸುವುದೇ ಒಳಿತು, ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ನಾನು ಸೇಫಾಗಿರಬಹುದು ಅಂತ ಕ್ರಿಮಿನಲ್ ಲೆಕ್ಕ ಹಾಕಿದ ಆಕೆ ಆ ಕೆಲಸಕ್ಕೆ ತನ್ನ ಜೂನಿಯರ್ ಅರವಿಂದನನನ್ನು ಆಯ್ಕೆ ಮಾಡಿಕೊಂಡಿದ್ದಳು. ಹಳ್ಳಿಯಿಂದ ಬಂದು ನಗರ ಜೀವನ ಶೈಲಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದ ಆತನ ಅಮಾಯಕತೆಯ ಲಾಭ ಪಡೆದ ವಂದನದ ಮನಮೋಹನನ್ನು ಸಿಕ್ಕಿ ಹಾಕಿಸಲು ಈತನನ್ನು ತನ್ನ ಗಾಳಕ್ಕೆ ಎರೆಹುಳುವಾಗಿಸಿಕೊಂಡಿದ್ದಳು. .
ವಂದನನ ವ್ಯಥೆ ಕೇಳಿದ ಮೇಲೆ ಇಡೀ ಪೊಲೀಸ್ ಠಾಣೆ ತುಂಬಾ ಮೌನ ಮನೆಮಾಡಿತ್ತು. ಅಲ್ಲಿದ್ದ ಜಿಪ್ ಟಾಪ್ಕೆ ಎಚ್ ಆರ್ ಮುಖ್ಯಸ್ಥ ಮತ್ತು ಸಿಇಓ ಸಹ ಗಾಬರಿಯಾಗಿದ್ದರು, . ಆಕೆಯ ಮೊಬೈಲ್ನ ಸೀಕ್ರೆಟ್ ಫೋಲ್ಡೆರ್ರಿನಲ್ಲಿದ್ದ ಮನಮೋಹನ ಕಳಿಸಿದ್ದ ಮೆಸೇಜುಗಳ ಕೆಲ ಸ್ಕ್ರೀನ್ ಶಾಟ್ ನೋಡಿದ ಸರ್ಕಲ್ ಇನ್ಸ್ಪೆಕ್ಟರ್, ವಂದನಾಗೆ ” ನೋಡಮ್ಮ ಈಗ್ಲೇ ಇಲ್ಲೇ ಒಂದು ಕಂಪ್ಲೇಂಟ್ ಬರೆದುಕೊಡು, ಬಡ್ಡಿ ಮಗನ ಗಂಡಸ್ಥನ ಎಷ್ಟು ಸ್ಟ್ರಾಂಗ್ ಇದೆ ಅಂತ ಚೆಕ್ ಮಾಡ್ತೀನಿ ” ಅಂತ ಗಡಸು ಧ್ವನಿಯಲ್ಲಿ ಕಿಡಿ ಕಾರಿದ. ಅದಕ್ಕೆ ಆಕೆ ಹಿಂದೇಟು ಹಾಕುತ್ತಿರುವಿದನ್ನು ಗಮನಿಸಿದ ಜಿಪ್ ಟಾಪ್ಕೆ ಸಿಇಓ ” ಸರ್ ಇದು ಸ್ವಲ್ಪ ಸೆನ್ಸಿಟಿವ್ ವಿಷಯ, ಕಂಪ್ಲೇಂಟ್ ಏನೂ ಬೇಡ, ಆಕೆಗೆ ನಾವು ನ್ಯಾಯ ಕೊಡ್ತೀವಿ ಹಾಗೆ ಮನಮೋಹನನಿಗೆ ಏನ್ ಪನಿಶ್ಮೆಂಟ್ ಇದೆಯೋ ಅದನ್ ಕೊಡಿಸ್ತೀವಿ, ಸುಮ್ನೆ ಕೇಸ್ ಆದ್ರೆ ಕಂಪನಿ ಗೆ ಬ್ಯಾಡ ನೇಮ್ ಬರುತ್ತೆ ” ಅಂತ ಇನ್ಸ್ಪೆಕ್ಟರ್ ಹತ್ರ ಅತಿ ವಿನಯದಿಂದ ಬೇಡಿಕೊಂಡಿದ್ದ.
” ಕಂಪನಿಗೆ ಬ್ಯಾಡ ನೇಮ್ ಬರುತ್ತೆ ಅಲ್ವ, ಸರಿ ಒಂದು ವಾರ ಟೈಮ್ ಕೊಡ್ತೀನಿ ಅದೇನ್ ಆಕ್ಷನ್ ತಗೊಳ್ತಿರೋ ತಗೊಂಡು ನನಗೆ ರಿಪೋರ್ಟ್ ಕೊಡಿ, ಆಗಿಲ್ಲ ಅಂದ್ರೆ ನಾನೇ ಸ್ವಯಂ ಕೇಸು ದಾಖಲಿಸಿಕೊಂಡು ಏನ್ ಮಾಡಬೇಕೋ ಅದು ಮಾಡ್ತೀನಿ. ” ಅಂತ ಹೇಳಿ ಇನ್ಸ್ಪೆಕ್ಟರ್ ಅವರನ್ನೆಲ್ಲ ಕಳುಹಿಸಿ ಕೊಟ್ಟಿದ್ದ
ಮನೆ ಸೇರಿ ಊಟ ಮುಗಿಸುವ ಹೊತ್ತಿಗೆ ಗಂಟೆ ಹನ್ನೊಂದಾಗಿತ್ತು. ಬೆಳಿಗ್ಗೆಯಿಂದ ಕಚೇರಿ ಕೆಲಸ ಮತ್ತು ಅರವಿಂದನ ಪ್ರಕರಣದ ಓಡಾಟದಿಂದ ವಿಪರೀತ ಸುಸ್ತಾಗಿ ದೇಹ ನಿದ್ದೆಯ ಹಂಬಲಿಸುತ್ತಿತ್ತು. ಮಕ್ಕಳಿಬ್ಬರು ಆವಾಗಲೇ ಗಾಢ ನಿದ್ದೆಯಲ್ಲಿದ್ದರು. ದಿಂಬಿಗೆ ತಗೆಯೊಡ್ಡಿ ಇನ್ನೇನ್ನು ನಿದ್ರಾದೇವಿಯನ್ನು ಮೈಮೇಲೆ ಅವರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಹೆಂಡತಿ ಮಾತಿಗೆಳೆದಿದ್ದಳು.
“ಅಲ್ಲರೀ ಆ ಕಂಪನಿಯವರು ಮನಮೋಹನನನ್ನು ಕೆಲ್ಸದಿಂದ ತಗಿತಾರೆ ತಾನೇ ” ಅಂತ ಕೇಳಿದಳು.
” ಅವರಿಗೇನು ಮರ್ಲಾ, ಚಿನ್ನದ ಮೊಟ್ಟೆ ಇಡೋ ಕೋಳಿಯ ಕತ್ತು ಕುಯ್ಯಲು ” ನನ್ನ ಉತ್ತರ ಅವಳನ್ನು ಗಲಿಬಿಲಿಗೊಳಿಸಿತು.
“ಅಲ್ಲಾರಿ ಆ ಇನ್ಸ್ಪೆಕ್ಟರ್ ಬೇರೆ ತಾಕೀತು ಮಾಡಿದರಲ್ಲ, ಅದು ಅಲ್ಲದೆ ಪಾಪ ಆ ವಂದನಾಳಿಗೆ ಅನ್ಯವಾಗಿದೆಯಲ್ಲ. ಆದ್ರೂ ಅವರು ಕ್ಯಾರೇ ಮಾಡೋಲ್ವಾ ” ಗೊಂದಲವಿತ್ತು ಆಕೆಯ ಪ್ರಶ್ನೆಯಲ್ಲಿ
“ನೋಡಮ್ಮ ಇದು ಕಾರ್ಪೊರೇಟ್ ಜಗತ್ತು, ದುಡ್ಡು, ಬ್ಯುಸಿನೆಸ್, ಲಾಭ ನಷ್ಟ ಅಂತ ಬಿಟ್ರೆ ಇಲ್ಲಿಯ ಜನರಿಗೆ ಮನುಷತ್ವ, ನೈತಿಕತೆ, ಅನ್ನೋದೋದೆಲ್ಲ ಅಕ್ವೆರಿಯಂ ಒಳಗಿನ ಮೀನುಗಳಂತೆ, ಎಲ್ಲರೂ ನೋಡಬಹುದು ಆದರೆ ಉಪಯೋಗಕ್ಕೆ ಬರದು. ಅಲ್ಲ ಜಿಪ್ ಟಾಪ್ಕೆ ಗೆ ಪಾಲಿಗೆ ಆತ
ಚಿನ್ನದ ಮೊಟ್ಟೆ ಇಡೋ ಕೋಳಿ. ಸಾವಿರಾರು ಕೋಟಿ ಹೊಸ ಬಿಸಿನೆಸ್ ತಂದಿದ್ದಾನೆ, ಕಂಪನಿಯ ಬೆಳವಣಿಗೆಯಲ್ಲಿ ಆತನ ಪಾಲು ದೊಡ್ಡದಿದೆ. ಆತನನ್ನು ತಮ್ಮ ಜೇಬಿಗಿಳಿಸಿಕೊಳ್ಳಲು ಜಿಪ್ ಟಾಪ್ಕೆ ಯ ಕಾಂಪಿಟೇಟರ್ ಗಳು ಕಾಯ್ತಾ ಇದ್ದಾರೆ, ಅಂತಹುದರಲ್ಲಿ ಅವನನ್ನು ಕೆಲಸದಿಂದ ತೆಗೆಯುವ ಹುಚ್ಚು ಸಹವಾಸ ಆ ಕಂಪನಿ ಮಾಡೋಲ್ಲ. ಅವರಿಗೆ ವಂದನಾ ಪ್ರಕರಣವೆಲ್ಲ ಕಾಮೋನ್, ಅದನ ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಚೆನ್ನಾಗಿ ಗೊತ್ತು. ಎಲ್ಲೂ ಏನೂ ಆಗಿಲ್ಲ ಅನ್ನೋ ತರಹ ಹೇಗೆ ನಿಭಾಯಿಸುತ್ತಾರೆ ನೋಡು “
“ಹೌದಾ. . ಹಾಗಾದ್ರೆ ವಂದನಾ ಗತಿ ? ಮನಮೋಹನ ಇನ್ನಷ್ಟು ಚಿಗುರಿಕೊಳ್ತಾನೆ ಅಲ್ವ? ಇನ್ಸ್ಪೆಕ್ಟರ್ ಸುಮ್ನಿರ್ತಾರಾ ? “
“ಹ್ಮ್ಮ್ಮ್. ಕಂಪನಿ ವಂದನಾಳಿಗೆ ಒಂದಷ್ಟು ಒಳ್ಳೆ ಇನ್ಕ್ರಿಮೆಂಟ್ ಕೊಡಬಹುದು ಜೊತೆಗೆ ಪ್ರಮೋಷನ್ ಸಹ ನೀಡಬಹುದು. ಮನಮೋಹನನ ಕೆಳಗೆ ಬೇಡ ಅಂತ ಬೇರೆ ಟೀಮ್ ಗೆ ಟ್ರಾನ್ಸ್ಫರ್ ಮಾಡಬಹುದು ಅಷ್ಟೇ. ಇದನ್ ಒಪ್ಪಿಕೊಂಡು ಆಕೆ ಅಲ್ಲೇ ಕೆಲಸ ಮಾಡಬಹುದು ಅಥವಾ ನಿಧಾನವಾಗಿ ಬೇರೆ ಕಡೆ ಕೆಲಸ ನೋಡಿಕೊಂಡು ಹೋಗಬಹುದು ಅಷ್ಟೇ. ಇನ್ನು ಇನ್ಸ್ಪೆಕ್ಟರ್, ಆವರ ಕೆಲಸದ ಒತ್ತಡದಲ್ಲಿ ಯಾರೂ ವಿಷಯ ಎತ್ತದೆ ಇದ್ರೆ ಎಲ್ಲ ಮರೀತಾರೆ ಅಷ್ಟೇ, ವಂದನಾ ಒಬ್ಬಳೇ ಈ ವಿಷಯವನ್ನು ಮತ್ತೆ ಸ್ಟೇಷನ್ ಮೆಟ್ಟಿಲ್ಲು ಹತ್ತಿಸಬೇಕು ನಾನು ಗಮನಿಸಿರೋ ಪ್ರಕಾರ ಆಕೆ ಅಲ್ಲಿ ತನಕ ಬರೋಲ್ಲ, ಟಿಪಿಕಲ್ ಇಂಡಿಯನ್ ವಿಮೆನ್ ಮೆಂಟಾಲಿಟಿ, ಮಾನ ಮರ್ಯಾದೆ ಪ್ರಶ್ನೆ, ಸೊ ಮನಮೋಹನ ಸೇಫ್ ಅಷ್ಟೇ “
“ಇದು ಮೋಸಾರಿ. ಪಾಪ ಒಬ್ಬಳು ಹೆಣ್ಣಿಗೆ ಇಷ್ಟು ಮೋಸವಾಗಿದೆ, ಯಾರ್ ಕೈಲೂ ಏನು ಮಾಡಲು ಆಗ್ತಾ ಇಲ್ಲ ಅಂದ್ರೆ “
” ಹ್ಮ್ಮ್ಮ್. ಇಷ್ಟೇ ಆದ್ರೆ ಪರವಾಗಿಲ್ಲ, ಆದ್ರೆ ಮನಮೋಹನ ಸುಮ್ಮನಿರೋಲ್ಲ, ಆಕೆ ತನಗೆ ದಕ್ಕಿಲ್ಲ, ದಕ್ಕೊಲ್ಲ ಅನ್ನೋ ಹತಾಶೆಯಲ್ಲಿ ಅವಳನ್ನು ಕಣ್ಣೆದುರು ನೋಡಲು ಅವನ ಕೈಲಿ ಕಷ್ಟ ಆಗುತ್ತೆ. ಆದ್ದರಿಂದ ನಿಧಾನವಾಗಿ ಕೆಲಸದ ವಿಷಯದಲ್ಲಿ ಮಸಲತ್ತು ಮಾಡಿ ಆಕೆಯನ್ನು ಕಂಪನಿಯಿಂದ ಓಡಿಸೋದು ಪಕ್ಕ. ಇದೆಲ್ಲ ಈ ಕಾರ್ಪೊರೇಟ್ ಜಗತ್ತಿನಲ್ಲಿ ಸರ್ವೇ ಸಾಮಾನ್ಯ. ನನ್ನ ಸುತ್ತಮುತ್ತ ಇಂಥಹುದು ತುಂಬಾ ನೋಡಿದ್ದೇನೆ. ಅಧಿಕಾರ ಅಂದ್ರೆ ಸ್ವೇಚ್ಛೆ ಅಂದುಕೊಳ್ಳೋ ಈ ತರಹದ ಮೇಲಾಧಿಕಾರಿಗಳಿಂದ ಒಂದಷ್ಟು ಹೆಣ್ಣು ಮಕ್ಕಳು ನರಕ ಅನುಭವಿಸೋದು ತಪ್ಪೊಲ್ಲ. ಎಲ್ಲಾ ಗೊತ್ತಿದ್ದೂ ಏನು ಮಾಡಲಾಗದ ಅಸಹಾಯಕತೆ ನಮ್ಮದು ಅಷ್ಟೇ. . ಬಿಡು ಒಟ್ಟಾರೆ ನಮ್ಮ ಅರವಿಂದ ಸೇಫ್ ಆದ ಅಲ್ವ. ಅಷ್ಟು ಸಾಕು. . ನಿದ್ದೆ ಬರ್ತಾ ಇದೆ ಮಲಗುತ್ತೆನೇ ” ಅಂತ ಹೇಳಿ ಬೆಡ್ ಶೀಟ್ ನ್ನು ಮೈಮೇಲೆ ಎಳೆದುಕೊಂಡೆ. .
” ಏನ್ ಕರ್ಮನೋ, ಏನ್ ಜನನೋ, ದೇವರು ಅವರನ್ನು ಸುಮ್ನೆ ಬಿಡೋಲ್ಲ ಬಿಡಿ. ” ಅಂತ ಶಾಪ ಹಾಕಿದ ಆಕೆ ” ಅಲ್ಲರೀ ನಾಳೆ ಅರ್ಜೆಂಟ್ ಆಫೀಸ್ ಕೆಲಸದ ಮೇಲೆ ಮುಂಬೈ ಗೆ ಹೋಗ್ತೀನಿ ನಾಲ್ಕ್ ದಿನ ಊರಲ್ಲಿ ಇರೋಲ್ಲ ಅಂತ ಹೇಳಿದ್ರಲ್ಲ, ಇನ್ನ್ಯಾವಾಗ ನೀವು ಪಂಜುಗೆ ಕತೆ ಬರೆದು ಕಳಿಸೋದು, ” ಅಂತ ಕತೆಯ ವಿಷಯ ಜ್ಮಾಪಿಸಿದಳು. .
“ಇವತ್ತೇ ದೊಡ್ಡ ಕತೆ ಅಯಿತಲ್ವಾ, ಇನ್ನ್ಯಾವ ಕತೆ ಇದೆ. ಒಂದೆರಡು ಬೇರೆ ಕತೆ ಬರೆದದ್ದು ಇದೆ. ಆದ್ರೆ ಅದನ್ನು ಇನ್ನಷ್ಟು ಟ್ಯೂನ್ ಮಾಡಬೇಕು, ಟೈಮ್ ಇಲ್ಲ. ಸೊ ಕತೆ ಕಳುಹಿಸಲು ಆಗೋಲ್ಲ ಅಂತ ಈಗ್ಲೇ ಮೆಸ್ಸೇಜ್ ಹಾಕ್ತಿನಿ ಇರು ” ಹಂತ ಹೇಳಿ ಮೊಬೈಲ್ ಕೈಗೆತ್ತಿಕೊಂಡು ನಟರಾಜ ಡಾಕ್ಟರಿಗೆ ಮೆಸೇಜ್ ರವಾನಿಸಿದೆ
“ಕ್ಷಮಿಸಿ ಸಂಪಾದಕರೇ. . . ಕತೆ ಕಳುಹಿಸಲಾಗುತ್ತಿಲ್ಲ “””
-ಸತೀಶ್ ಶೆಟ್ಟಿ ವಕ್ವಾಡಿ
ಕಥೆ ಸೂಪರ್ ಆಗಿದೆ ಸರ್, ಓದುತ್ತ ಕುಂತ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ..
ನೀವು ಯಾವಾಗ್ಲೂ ಗ್ರೇಟ್ ಸರ್,