ಜವಾಬ್ದಾರಿ: ಬಂಡು ಕೋಳಿ

ಗುರುಪ್ಪ ಚಿಂತಿ ಮನಿ ಹೊಕ್ಕು ಕುಂತಿದ್ದ. ಹಿಂದಿನ ದಿನ ಊರಿಂದ ಬಂದಾಗಿಂದ ಅವ್ನ ಮಾರಿ ಮ್ಯಾಲಿನ ಕಳೀನ ಉಡುಗಿತ್ತು. ಅವ್ವ ಅಂದಿದ್ದ ಮಾತು ಖರೇನ ಅವ್ನ ಆತ್ಮಕ್ಕ ಚೂಪಾದ ಬಾಣದಂಗ ನಟ್ಟಿತ್ತು. ಅದೆಷ್ಟ ಅಲಕ್ಷ ಮಾಡಾಕ ಪ್ರಯತ್ನಿಸಿದ್ರೂ ಆತ್ಮಸಾಕ್ಷಿ ಅವನನ್ನ ಅಣಕಿಸಿ ಮತ್ಮತ್ತ ಹಿಂಸಿಸಾಕ ಹತ್ತಿತ್ತು. ಮನಸ್ಸಿನ ಮೂಲ್ಯಾಗ ಒಂದ್ಕಡಿ ತಾನು ಹಡೆದಾವ್ರಿಗಿ ಮೋಸಾ ಮಾಡಾಕ ಹತ್ತೇನಿ ಅನ್ಸಾಕ ಹತ್ತಿತ್ತು. ಒಂದ್ರೀತಿ ಅಂವಗ ಎದ್ರಾಗೂ ಚೌವ್ವ ಇಲ್ದಂಗಾಗಿ ತನ್ನಷ್ಟಕ್ಕ ತಾನ ಅಪರಾಧಿ ಮನಸ್ಥಿತಿಯೊಳ್ಗ ಕುಸ್ದ ಕುಂತಿದ್ದ. ಕಾಲೇಜಿನ್ಯಾಗ ದೋಸ್ತ್ರು ‘ಚಹಾ ಕುಡ್ಯಾಕ ಬಾರೋ ದೋಸ್ತಾ’ ಅಂತ ಕರದ್ರ ಸಾಕ ನಟ್ಟಿದ್ದ ಬಾಣ ಮತ್ತಷ್ಟ ಅಳ್ಕಿದಂಗ ಆಗಾಕ ಹತ್ತಿತ್ತು. ಅವ್ವನ ಮಾತು ನೆಪ್ಪಾಗಿ ಅವ್ನ ಸಹಜತನದ ಗುಡ್ಡ ಅಳಗ್ಯಾಡಿ ಎದಿಮ್ಯಾಲ ಬಿದ್ದಂಗ ಆಗಿ ಮನ್ಸು ಗಾಯಗೊಂಡಿತ್ತು.

ಬಿಎ ಪದವಿ ಮುಗ್ಯಾಕ ಇನ್ನಾ ಒಂದ್ವರ್ಸ ಬಾಕಿ ಇತ್ತು. ದಸರಾ, ದೀಪಾವಳಿ ಹಬ್ಬಕ್ಕಂತ ಗುರುಪ್ಪ ಸೂಟಿ ಮ್ಯಾಲ ಊರಿಗಿ ಬಂದಿದ್ದ. ಮಗಾ ಬಂದ ಖುಷಿಗಿ ಲಕ್ಷ್ಮವ್ವಗ ಮಗನ ಸಮಂಧ ಹೂರಣ್ದ ಹೋಳಿಗಿ ಮಾಡು ಹುರುಪು. ‘ಹುಡ್ಗ ಹೋಳ್ಗಿ ತಿಂದ ಎಷ್ಟ ವರ್ಸ ಆಗೇತಿ ಯಾರ್ಗೊತ್ತ. ಲೌಕರ ಹೋಗಿ ಅಂಗ್ಡಿ ಸಂತಿ ತೋಂದ್ಬಾ’ ಅಂತ ಲಕ್ಷ್ಮವ್ವ ಜಟ್ಟಪ್ಪನ್ನ ಜಬ್ರಿ ಮಾಡಿ ಪ್ಯಾಟ್ಯಾಗ ಹಚ್ಗುಟ್ಟಿದ್ಳು. ಅಕ್ಕರತಿ, ಅನುಕಂಪದ ಮೂರ್ತಿ ಆಗಿದ್ದ ಲಕ್ಷ್ಮವ್ವಗ ಮಗನದೇ ಕಾಳ್ಜಿ. ‘ಒಂಚೂರ ಚಹಾ ಅರೆ ಮಾಡ್ಲ್ಯ ಕೂಸ?’ ಅಂತ ಕೇಳಿದ್ಳು. ‘ಬ್ಯಾಡೆವ್ವಾ’ ಅಂತ ಸಹಜಾಗಿ ಅಂದು ಸುಮ್ಮಾಗಿದ್ದ ಗುರಪ್ಪ. ‘ಐ ನನ್ನ ಧ್ಯಾನಿಮನಿ ಓದ್ ಸುಡ್ಲಿ. ನೀ ಚಹಾ ಕುಡ್ಯಾಂಗಿಲ್ಲ ಅನೋದ ಮರ್ತೇನಿ ನೋಡ ಖೋಡಿ’ ಅನ್ಕೋತ ಅಡಿಗಿ ಮನ್ಯಾಗ ತಡಕಾಡಿದ್ಳು. ಒಂದ ಸಣ್ಣ ಮಿಳ್ಳಿ ಎತ್ಕೊಂಡು ‘ಒಂಚೂರ ತಡಿ ತಮ್ಮಾ ಸುಶಕ್ಕನ ಹಂತೇಕ ಒಂದೀಟ ಹಾಲ ಅರೆ ಇಸ್ಗೊಂಡ ಬರ್ತೂನ ಕುಡೇಕೆ ಅಂತ’ ಅಂದಿದ್ಳು. ‘ಯವ್ವಾ ಅದೆಲ್ಲಾ ಯನೂ ಬ್ಯಾಡಾ. ನೀ ಒಂದ್ತಟಕ ಸುಮ್ನ ಕುಂಡ್ರ ನೋಡುನು’ ಅಂತ ಗುರಪ್ಪ ಅವ್ವನ ಕಳಕಳಿ ನೋಡಿ ಅಂದಿದ್ದ. ಆದ್ರ ಲಕ್ಷ್ಮವ್ವ ‘ಐ ಬ್ಯಾಡಂದ್ರ ಹ್ಯಂಗ ಯಪ್ಪಾ’ ಅನ್ಕೋತ ಬಡಬಡಾ ನಡ್ದು ಬಾಜು ಮನಿ ಸುಶೀಲಾನ ಕಡೆಯಿಂದ ಒಂದು ಮಿಳ್ಳಿ ಹಾಲನ್ನ ಕಡ್ನಾ ತಂದ ಮಗನಿಗಿ ಕುಡಿಸಿದ್ಳು.

ಮಧ್ಯಾನ್ಹದ ಹೊತ್ತಿಗಿ ಲಕ್ಷ್ಮವ್ವ ಹೋಳಿಗಿ ಬಡ್ಯಾನ ಮಾಡು ಗುದುಮುರ್ಗ್ಯಾಗ ಸಂಭ್ರಮಿಸಿದ್ಳು. ಲಕ್ಷ್ಮವ್ವ ಅಡಿಗಿ ಮನ್ಯಾಗ ಕಳ್ದ ಹೋಗಿದ್ರ ಜಟ್ಟೆಪ್ಪ ಮಗನ ಮುಂದ ಕುಂತ ಅಂವ್ನ ಗೊಂಬಿಯಂಥಾ ಮಾರಿ ನೋಡೇ ಕಣ್ ತುಂಬ್ಕೊಂಡಿದ್ದ.
‘ಅಪ್ಪಾ. . ನಿನ್ನ ತಬ್ಬೇತ ಹೆಂಗೈತಿ? ಅರಾಂ ಅದಿ?’ ಅಂತ ಗುರಪ್ಪ ಅನುವತನುವ ಕೇಳ್ತಿದ್ರ ಜಟ್ಟೆಪ್ಪ ಮಗನ ಮಾತ್ಗೋಳ್ಗಿ ಕಿವಿ ಸಡ್ಲಬಿಟ್ಟ ಕುಂಡ್ರತಿದ್ದ. ಗುರಪ್ಪ ಕಾಲೇಜಿನ್ಯಾಗ ಮಾಡಿದ್ದ ಅಭ್ಯಾಸ, ಪಾಠ, ಪ್ರವಚನದ ದೊಡ್ಡಸ್ತಿಕಿನಾ ಎದಿ ಉಬ್ಬಿಸಿ ಹೇಳ್ಕೋತಿದ್ರ ಜಟ್ಟೆಪ್ಪಗಂತೂ ಮಠದ ಸ್ವಾಮಿಗೋಳ ಪ್ರವಚನ ಕೇಳಿದಂಗ ಆಗ್ತಿತ್ತು. ಮಗನ ಶಾಣ್ಯಾತನ್ಕ ಮೂಕ ಆಗಿ ಕುಂಡ್ರತಿದ್ದ. ಖುಷಿಗಿ ಮನ್ಸ ತುಂಬಿ ಬಂದಾಗ ಜಟ್ಟೆಪ್ಪ ತುಡಗಿಲೇ ಧೋತ್ರದ ತುದಿಲೆ ಕಣ್ಣೀರ ವರ್ಸಕೊಂಡಿದ್ದ. ಅಪ್ಪ ಮಗನ ನಡುವ ನಡೆದಿದ್ದ ಕುಶಲೋಪರಿ ಮಾತಿಗಿ ಲಕ್ಷ್ಮವ್ವ ಕಿವಿ ಹರಿಬಿಟ್ಟಿದ್ರೂ ಸಹಿತ ಅಡಿಗಿ ಮನ್ಯಾಗ ಕಣ್ಣಾಗಿ ಜಗತ್ತನ್ನs ಮರ್ತಿದ್ಳು. ಇಂಥಾ ಮಗನ ಹಡ್ದಿದ್ಕ ಲಕ್ಷ್ಮವ್ವಂತೂ ಸಾರ್ಥಕದ ಕ್ಷಣ ಅನುಭವಿಸಿದ್ಳು.

ಗರಿ ಗರಿಯಾದ ಹೋಳಿಗಿ, ಆಕಳ ಹಾಲಿನ್ಯಾಗ ಕುದಿಸಿದ್ದ ಬೆಲ್ದಾರಿ, ಅಕ್ಕಿ ಹಿಟ್ಟಿನ ಕುರು ಕುರು ಸಂಡಿಗಿ, ಸುಡು ಸುಡು ಕಟ್ಟಿನ ಸಾಂಬಾರಿನ ರುಚಿಗೆ ಗುರಪ್ಪ ಮೈಯೆಲ್ಲಾ ನಾಲ್ಗಿ ಆಗಿ ಚಪ್ಪರಿಸಿದ್ದ. ಮಗಾ ಹೊಟ್ಟಿತುಂಬ ಉಣತಿದ್ರ ಹಡೆದಾವ್ರಿಗಂತೂ ಬಾಜೂ ಕುಂತ ನೀಡೋದ್ರಾಗ ಹಸಿವ ನೀಗಿ ಹೊಟ್ಟಿ ತಂತಾನ ತುಂಬಿತ್ತು. ನಾಕೈದ್ ತುತ್ತ ಉಂಡ ಬಳ್ಕ ಗುರಪ್ಪ ಅವ್ವನ ಕಡೆ ನೋಡಿ ಅಂದಿದ್ದ,

‘ಅವ್ವ ನಿನ್ನ ಕೈಯ್ಯಾಗ ಅದ್ಯಾನ ಜಾದೂ ಏತ್ಯೋ ಗೊತ್ತಿಲ್ಲ. ನಾ ಸಾಕಷ್ಟ ನಮೂನಿ ಊಟಾ ಮಾಡೇನಿ. ಅದ್ರ ನೀ ಮಾಡು ಅಡ್ಗಿ ರುಚಿ ಹಂಗ ಎಲ್ಲ್ಯೂ ಸಿಕ್ಕಿಲ್ಲೆವ್ವಾ. ಭಹುಶಃ ಅಮೃತ ಅಂತಾರ್ಲಾ ಅದೂ ಸುದ್ಕ ನಿನ್ನ ಅಡ್ಗಿ ಮುಂದ ಸಪ್ಪಗ ಇದ್ದಿರಬೇಕ ನೋಡ’ ಅಂದಿದ್ದ.
ಮಗಾ ತನ್ನ ಅಡಿಗಿ ರುಚಿನಾ ಬಾಯ್ತುಂಬಿ ಹೊಗಳಿದ್ಕ ಲಕ್ಷ್ಮವ್ವ ಹೌಸಗಾರ ಆಗಿದ್ಲು. ಅಕಿ ಕಣ್ಣಿನ ಬಟ್ಲಗೋಳು ತಂತಾನ ತುಂಬಿ ತುಳುಕಿದ್ವು. ‘ನಂದೆಂಥಾ ಅಡಿಗಿ ತಮ್ಮಾ, ಸಜ ಮಾಡ್ದಂಗ ಮಾಡ್ತುನು. ಅಡ್ಗ್ಯಾಗ ಯಾವ ಮಸಾಲಿನೂ ಗೊತ್ತಿಲ್ಲ ಮತ್ತೊಂದ ಗೊತ್ತಿಲ್ಲ. ಅದ್ರ ಓಣ್ಯಾನ ಹೆಂಗಸ್ರೂ ಸಹಿತ ನಾ ಮಾಡಿದ್ದ ವಣಗಿ ಬೇಡಿ ಬೇಡಿ ತಿಂತಾರ ನೋಡೆಪ್ಪ’ ಅಂದಿದ್ಳು.
ಅವ್ವ ಮಗನ ಖುಷಿ ನೋಡಿ ಜಟ್ಟೆಪ್ಪನೂ ನಿರಾಯಾಸ ನಿಟ್ಟುಸ್ರ ಬಿಟ್ಟಿದ್ದ.

ಜಟ್ಟೆಪ್ಪಗ ಯಾನೋ ನೆನಪಾಗಿ ಹೆಂಡ್ತಿಯನ್ನ ಉದ್ದೇಶಿಸಿ, ‘ಯಾನೆವೀ!, ಆ ಬೋಸುಡಿ ಮಗಾ ಗಡ್ಡದ ನಿಂಗ್ಯಾಗ ಹೆಂಥಾ ಹೊಟ್ಟಿಕಿಚ್ಚ ಇರ್ಬೇಕ ಅಂತಿ. ಮೊನ್ನಿ ಅಂತಾನ ಅಲ್ಲೋ ಜಟ್ಟ್ಯಪ್ಪ ನಿನ್ನ ಹುಡ್ಗ ಸಿಟಿಗಿ ಹೋಗಿ ಶೆರಿ ಕುಡ್ಯೋದ ಕಲ್ತಾನಂತ ಖರೇ ಯಾನ? ಹುಡುಗುರ್ನ ಸಿಟಿಗಿ ಸಾಲಿಗಿ ಹಚ್ಚೋದಷ್ಟ ದೊಡ್ದ ಅಲ್ಲ. ಅಲ್ಲಿ ಅವ್ರ ಯಾನ ಮಾಡ್ತಿರ್ತಾರು ಅನೋದು ಚೌಕಾಸಿನೂ ಮಾಡ್ಬೇಕಾಗ್ತೇತಿ ಅಂತಂದಾ. ಅವ್ನ ಅಣ್ಣಾನ ಮಗಾನೂ ಸಿಟ್ಯಾಗ ಕಲ್ಯಾಕತ್ತಾನಂತ. ಅಂವಾ ಒಂದ್ಯಾಡ್ಡ ಸರ್ತಿ ದಾರೂ ಅಂಗ್ಡ್ಯಾಗ ನಮ್ಮ ಗುರಪ್ಪನ ನೋಡ್ಯಾನಂತ ಅನಾಕತಿದ್ದ’ ಅಂದಿದ್ದ.

ಜಟ್ಟೆಪ್ಪ ಹಿಂಗ ಅಂದಿದ್ದ ತಡಾ ಗುರಪ್ಪಗ ಒಂದ ನಮೂನಿ ಕಸಿವಿಸಿ ಆಗಿತ್ತು. ಒಂದ ಗಳಿಗಿ ದಿಗಲ ಬಡ್ದಂಗ ಆಗಿ ಕಳವಳಿಸಿದ್ದ. ಗಂಡನ ಮಾತ್ಕೇಳಿ ಲಕ್ಷ್ಮವ್ವ, ‘ಐ ಹಾದ್ರಗಿತ್ತಿ ಮಕ್ಳ. ಮಂದಿ ಮಕ್ಳ ಕಲ್ತ ಶಾಣ್ಯಾರ ಆದ್ರ ನೋಡಾಕ ಆಗಲ್ದ ಬೀಜ್ಗೋಳ. ನಮ್ಮ ಹುಡ್ಗ ಚಹಾ ಸಹಿತ ಮುಟ್ಟಾಕ ಹಿಂದ್ಮುಂದ ನೋಡ್ತೇತಿ. ಹಂಥಾದ್ರಾಗ ಶೆರಿ ಕುಡಿತಾನ ಅಂತ ಹೇಳ್ತಾನಲ್ಲ ಆ ಬಾವಾ. ಅವ್ನ ಬಾಯಾಗ ಹುಳಾ ಬೀಳ್ಲಿ. . !’ ಅಂದು ಲಕ್ಷ್ಮವ್ವ ಲಟಗಿ ಮುರ್ದು ಹಿಡಿ ಹಿಡಿ ಶಾಪಾ ಹಾಕಿದ್ಳು. ಗುರುಪ್ಪಗ ತುತ್ತು ಗಂಟಲಿನ್ಯಾಗ ಸಿಕ್ಕಿಹಾಕಿ ಕೊಂಡಂತಾಗಿ ಟಸ್ಕಿ ಬಡ್ದಿತ್ತು. ಊಟದ ಮ್ಯಾಲಿನ ಮನಸ್ಸ ಕಳ್ದ ಹೋಗಿತ್ತು. ಗಬಗಬಾ ಒಂದ್ನಾಕ ತುತ್ತ ಬಾಯಾಗಿಟ್ಟ ಕೈ ತೊಳ್ಕೊಂಡಿದ್ದ.

‘ಯಾಕೋ ತಮ್ಮಾ, ಇಷ್ಟ ಲೌಕರ ಕೈ ತೊಳ್ಕೊಂಡಿ?. ಇನ್ನೊಂದ್ಯಾಡ್ಡ ಹೋಳ್ಗಿ ಹಾಕೋಲಾ. ನಿಮ್ಮಪ್ಪನ ಮಾತ ಮನ್ಸಿಗಿ ಹಚ್ಗೊಂಡ್ಯೊ ಹ್ಯಂಗೊ? ಊರ್ಮಂದಿ ನೂರ ಮಾತಾಡ್ತಾರ. ಅಂಥಾವ್ನೆಲ್ಲಾ ತಲ್ಯಾಗ ಹಾಕೋಬಾರ್ದ. ನೀ ಹೊಟ್ಟಿ ತುಂಬ ಉಣ್ಣ ತಮ್ಮಾ’ ಅಂತ ಅವ್ವ ಜಬ್ರಿ ಮಾಡಿದ್ಳು. ಆದ್ರ ಗುರುಪ್ಪಗ ಮನ್ಸ ಆಗ್ಲಿಲ್ಲ. ಎದ್ದು ತನ್ನ ಕೋಲ್ಯಾಗ ಹೋಗಿ ಅಂಗಾತ ಬಿದ್ದುಕೊಂಡಿದ್ದ. ಹತ್ತಾರ ವಿಚಾರ್ಗೋಳು ಅವ್ನಾ ಇಡಿಯಾಗಿ ಹಿಡ್ದು ಹಳಾಳಿಸಿದ್ವು. ಸೂಟಿ ಮುಗ್ಯಾಕ ಇನ್ನಾ ಒಂದ್ವಾರದ ಗಡುವ ಇತ್ತು. ಆದ್ರ ಗುರುಪ್ಪಗ ಮನ್ಯಾಗ ಇರಾಕ ಮನ್ಸ ಆಗಿರ್ಲಿಲ್ಲ.
ಮರುದಿವ್ಸ ಬೆಳ್ಕ ಹರ್ಯೋದ ತಡಾ ಗುರಪ್ಪ ಟ್ರಂಕ್ ತುಂಬಿಟ್ಟಿದ್ದ. ಗುರಪ್ಪ ಇದ್ದಕ್ಕಿದಂಗ ಅರವಿ ಮಡಕಿ ಮಾಡ್ಕೊಂಡ ಹೊರಡಾಕ ಸಜ್ಜಾಗಿ ನಿಂತಿದ್ದನ್ನ ನೋಡಿ ಲಕ್ಷ್ಮವ್ವ ದಿಗ್ಲ್ ಆಗಿ ಕೇಳಿದ್ಳು.

‘ಇದ್ಯಾನೋ ತಮ್ಮಾ ಹಿಂಗ ಒಮ್ಮಿಂದೊಮ್ಲಿ ಟ್ರಂಕ್ ಜೋಡ್ನಾ ಮಾಡೇದಿ? ಎಲ್ಲಿ ಹೋಂಟಿ?’ ಅಂದಿದ್ಳು.
‘ಅವ್ವ ಒಂಚೂರ ಅರ್ಜಂಟ್ ದಗದ ಬಂದೈತಿ ಅದ್ಕ ಅಥಣಿಗಿ ಹೊಂಟೇನಿ’ ಅಂದಿದ್ದ.
‘ಅಲ್ಲೋ ಗುರು ಒಂದ್ವಾರ ತನಾ ಸೂಟಿ ಐತಿ ಅಂದಿದ್ದಿ. ಹಂಥಾದ್ದ್ಯಾನ ಅರ್ಜಂಟ್ ದಗದ ಬಂತೋ ಹುಡುಗ?’ ಅಂತ ಜಟ್ಟೆಪ್ಪ ಕೇಳಿದ್ಕ,
‘ಅಪ್ಪಾ ಪ್ರ್ಯಾಕ್ಟಿಕಲ್ ಕ್ಲಾಸ್ ಚಾಲು ಮಾಡ್ಯಾರ ನಾಳೆನ ಬರ್ಬೇಕಂತ ಹೇಳಿದ್ದ ರಾತ್ರಿನ ನೆಪ್ಪಾತು. ಅದ್ಕ ನಾ ಅರ್ಜಂಟ್ ಹೊಂಡಾಕ ಬೇಕ’ ಅಂದಿದ್ದ.

ಗುರಪ್ಪನ ಧಿಡೀರ್ ನಿರ್ಧಾರ ನೋಡಿ ಅವ್ವ ಅಪ್ಪ ಕಳವಳಿಸಿದ್ರು. ಯನೂ ತಿಳಿಲಾರ್ದಂಗ ಆಗಿ ಸ್ತಬ್ದ ನಿಂತ ಬಿಟ್ಟಿದ್ರು. ಇಳ್ದ ಹೋಗಿದ್ದ ಮಗನ ಮಾರಿ ನೋಡಿ ಅವ್ರಿಬ್ಬರಿಗೂ ಒಂದ್ರೀತಿ ಕಳವಳ ಹುಟ್ಟಿತ್ತು. ಆದ್ರ ಪ್ರ್ಯಾಕ್ಟಿಕಲ್ ಕ್ಲಾಸ್ ಅಂತ ಅಂದಾಗ ಅವ್ರಿಗಿ ಯಾನೂ ಮಾಡಾಕ ಆಗಿರ್ಲಿಲ್ಲ.
ಭಾರವಾದ ಎದಿ ಹೊತ್ಕೊಂಡು ಗುರಪ್ಪ ಅಥಣಿಗಿ ಹೊಂಟ ಬಂದಿದ್ದ.

ಅಥಣಿ ಬಸ್ಸ್ಟ್ಯಾಂಡಿಗಿ ಬಂದ ಇಳ್ಯೋದ ತಡಾ ಲಗಾಲಗಾ ಹೆಜ್ಜಿ ಕಿತ್ತು ತನ್ನ ಕೋಲಿ ಸೇರಿದ್ದ. ಇಡಿ ದಿನ ಮನಸ್ಸಿಗಿ ಚೈನ್ ಇಲ್ಲ. ರಾತ್ರಿ ಸಹಿತ ಬಾಳೋತನ್ಕ ಕಣ್ಣ ಹತ್ತಿರ್ಲಿಲ್ಲ. ಅವ್ವ ಅಪ್ಪನ ಮಾತ್ಗೋಳ ತಲ್ಯಾಗ ಗುಂಯ್ ಅನಾಕ ಹತ್ತಿದ್ವು. ಸರಿಹೊತ್ತಿನ ತನ್ಕ ಹಾಸಿಗ್ಯಾಗ ಒದ್ದ್ಯಾಡಿದ್ದ. ಹಳಾಳ್ಸಿ ಹಳಾಳ್ಸಿ ಕಡೀಕ ನಿದ್ದಿ ಹತ್ತಿದ್ದೂ ಸಹಿತ ಗೊತ್ತಾಗಿರ್ಲಿಲ್ಲ. ಹರೆವತ್ತ ಕಣ್ಣ ತೆರ್ದಾಗ ಯಾಡ್ಡ ಹೊತ್ತಿನ ಸೂರ್ಯಾ ಏರಿ ಬಂದಿದ್ದ. ಎದ್ದು ತಯಾರಾಗುವ ಮನ್ಸಿಲ್ಲ. ಮತ್ತೊಂದ ಗಳಿಗಿ ಜಡ ಆಗಿ ಹಾಸಿಗ್ಯಾಗ ಅಡ್ಡಾದ. ನಿದ್ದಿಯ ಮಬ್ಬು ಪೂರ್ತಾ ಇಳ್ದ ಬಳ್ಕ ಎದ್ದ ಕುಂತ. ಮತ್ತದ ಅವ್ವ ಅಪ್ಪನ ಮಾತ್ಗೋಳು ಮನಸ್ಸಿನ ತುಂಬ ಆವರಿಸಿಕೊಂಡವು. ಮೈ ತೊಳ್ಕೊಂಡು ಮೆಸ್ಸಿಗೆ ಹೋಗುವ ಮನಸ್ಸೂ ಇಲ್ಲ. ಹ್ವಾದ ವಾರ ಕಾಲೇಜ ದೋಸ್ತ್ರ ಜೋಡಿ ಪಾರ್ಟಿ ಮಾಡಿ ಕುತ್ಗಿ ಮಟಾ ಶೆರಿ ಕುಡ್ದು, ನಾನ್ ವೆಜ್ ಊಟಾ ಮಾಡಿ ತೂರ್ಯಾಡ್ಕೋತ ಕೋಲಿಗಿ ಬಂದ ಬಿದ್ದಿದ್ದ ನೆಪ್ಪಾತು.

ವಾರ ಹದ್ನೈದ್ ದಿವ್ಸಿಗೊಮ್ಮಿ ಕಾಲೇಜ್ ದೋಸ್ತ್ರ ಜೋಡಿ ಪಾರ್ಟಿಗಂತ ಬಾರಿಗಿ ಹೋಗೋದು ಗುರಪ್ಪ ಮಾಮೂಲಿ ಆಗಿತ್ತು. ಅದ್ರಾಗೂ ಡ್ರಿಂಕ್ಸ ಮಾಡು ದೋಸ್ತ್ರ ಗುಂಪಿನ್ಯಾಗ ಅಂವ ಕಿಂಗ್. ಜಿದ್ದಿಗಿ ಬಿದ್ದ ಡ್ರಿಂಕ್ಸ ಮಾಡುದ್ರಾಗ ಗುರಪ್ಪ ಎಲ್ಲಾರ್ನೂ ಮೀರಿಸಿದ್ದೂ ಐತಿ. ಎಲ್ಲಾರ್ಕಿಂತ್ಲೂ ಒಂದ ಪೆಗ್ ಜಾಸ್ತಿ ಇಳ್ಸಿ ಸಾಹಸ ಪ್ರದರ್ಶನ ಮಾಡಿದ್ದೂ ಸುಳ್ಳಲ್ಲ. ದೋಸ್ತ್ರೆಲ್ಲಾ ಗುರಪ್ಪನ ಡ್ರಿಂಕ್ಸ್ ಕೆಪ್ಯಾಸಿಟಿ ನೋಡಿ ಭುಜಾ ಬಡ್ದು ಹೊಗಳ್ತಿದ್ರು. ಅವ್ರ ಹೊಗಳ್ಕಿ ಅವ್ನಾ ಮತ್ತಷ್ಟ ಅತಿರೇಕಕ್ಕ ಒಯ್ತಿತ್ತು. ಅದೊಂದು ದೊಡ್ಡ ಸಾಧನಿ ಅನುವಂಗ ಹೆಮ್ಮೆ ಪಡ್ತಿದ್ದ. ಸಾಕಷ್ಟ ಸಾರ್ತಿ ದೋಸ್ತ್ರ ಮಾತಿಗಿ ಉಬ್ಬಿ ಪಾರ್ಟಿ ಅಂತೇಳಿ ನೂರಾರ ರೂಪಾಯಿನೂ ಖರ್ಚಮಾಡ್ತಿದ್ದ.

ಇಷ್ಟ ವರ್ಸ ಅಂವಾ ಖರ್ಚ ಮಾಡಿದ್ದ ಒಂದೊಂದ ಪೈಸೆನೂ ಅವ್ವ ಅಪ್ಪನ ಬೆವರಿನ ಗಳಿಕಿ. ಮಗನ ಸಾಲಿಗಿ ಯಾವ್ದೂ ಅಡಚ್ನಿ ಆಗ್ಬಾರ್ದು ಅನು ಹಡೆದಾವ್ರ ಕಾಳ್ಜಿ ಗುರಪ್ಪನ ಉಡಾಳ ದೋಸ್ತ್ರ ಚಟದ ಬೆಂಕ್ಯಾಗ ಹೋಮಾ ಆಗಾಕ ಹತ್ತಿತ್ತು. ಹಿಂಗ ಗುರಪ್ಪ ತನ್ನ ಶೋಕಿ ಸಮ್ಮಂಧ ತನ್ನ ಮನ್ಯಾವ್ರ ಕಣ್ಣಾಗ ಮಣ್ಣ ಒಕ್ಕೋತ ಬಂದಿದ್ದ. ಊರಿಗಿ ಹ್ವಾದಾಗ ಮಾತ್ರ ತಾ ಅಧ ಭೌಳ್ಯಾತನ್ದ ಗುರು ಯಾನೋ ಅನುವಂಗ ನಟನಿ ಮಾಡ್ತಿದ್ದ.

ಗುರಪ್ಪ ತನ್ನ ಮನ್ಯಾವ್ರಿಗಿ ಸಾಕಷ್ಟ ಸಾರ್ತಿ ಮೋಸಾ ಮಾಡಿದ್ದ. ಆದ್ರ ಜಟ್ಟೆಪ್ಪ ಮತ್ತ ಲಕ್ಷ್ಮವ್ವಗ ಮಾತ್ರ ಮಗನ ಸಂಭಾಯ್ತ ಸ್ವಭಾವ್ದಾಗ ಎಳ್ಳ ಕಾಳಿನಷ್ಟೂ ಹುಳ್ಕ ಕಂಡಿರ್ಲಿಲ್ಲ. ತಮ್ಮ ಹಂತ್ಯಾಕ ಇರ್ಲಿ ಬಿಡ್ಲಿ ಮಗಾ ಖರ್ಚಿಗಿ ಬೆಡ್ಯಾನಂದ್ರ ಯಾರ ಕಡೀಂದಾದ್ರೂ ಕೈಗಡ ಇಸ್ಗೊಂಡ ಅಥಣಿಗಿ ಕಳಿಸಿ ಕುಡ್ತಿದ್ರು. ಗುರಪ್ಪ ಸಿಟಿಗಿ ಬಂದ ಬಳ್ಕ ಶೋಕಿವಾಲಾ ಆಗಿದ್ದ. ಆದರೆ ತಾ ಚೈನಿ ಮಾಡ್ತಿದ್ದ ರೊಕ್ಕಿನ ಹಿಂದ ತನ್ನಾವ್ರು ಅದೆಷ್ಟ ಕಷ್ಟದ ಉಗ್ಳ ನುಂಗಿ ಪೈಸೇಕ ಪ್ಯಸೆ ಗ್ವಾಳಿ ಮಾಡಿ ಬೆವ್ರ ರಕ್ತ ಒಂದ್ಮಾಡ್ಯಾರ ಅನೋದ್ರ ಕಲ್ಪನಾ ಸುಧಕ ಅಂವಗ ಕಾಡಿರ್ಲಿಲ್ಲ. ಮನ್ಯಾವ್ರ ಹಂತ್ಯಾಕ ರೊಕ್ಕ ಸಿಲ್ಲಕ ಇದ್ದಿರ್ಬೇಕು ಅದ್ಕ ಬೇಕಂದ ಕೂಡ್ಲೆ ಹಚ್ಗುಡ್ತಾರು ಅಂತಿಳ್ದ ಬೇಕಾಬಿಟ್ಟಿ ಖರ್ಚಗೇಡಿ ಆಗಿದ್ದ. ಆದ್ರ ಈಗೀಗ ಗುರಪ್ಪನ ತಿಳವಳ್ಕಿ ಬಲ್ತಿತ್ತು. ರೊಕ್ಕಿನ ಕಿಮ್ಮತ್ತು ಅವನ ಅರುವಿಗಿ ಬರಾಕ ಹತ್ತಿತ್ತು. ತಾ ಮಾಡಿದ್ದ ತಪ್ಪಂತ ಅನ್ಸಾಕೂ ಶುರುವಾಗಿತ್ತು. ತನ್ನಿಂದ ಆಗಿದ್ದ ತಪ್ಪಿಗಿ ಪಶ್ಚಾತ್ತಾಪ ಪಟ್ಟಿದ್ದ. ಈ ಸಾರ್ತಿ ಊರಿಗಿ ಹೋಗಿ ಅವ್ವ ಅಪ್ಪನ ಕಷ್ಟಕ್ಕ ಸ್ಪಂಧಿಸಿ ಅವ್ರ ನೋವಿನ್ಯಾಗ ಭಾಗಿ ಆಗಿ ಸಮಾಧಾನಾ ಹೇಳ್ಬೇಕು ಅಂತೂ ದೇನಿಸಿದ್ದ. ಆದ್ರ ಅಚಾನಕ್ಕಾಗಿ ತನ್ನ ಚಟದ ಮಾತು ತಂತಾನ ಮನ್ಯಾವ್ರ ಬಾಯಿಂದ ಬಂದ ಬಳ್ಕ ಅವನ ನೈತಿಕತಿನ ಅಳಗ್ಯಾಡಿ ಬಿಟ್ತು. ಮ್ಯಾಲಾಗಿ ತನ್ನ ಮ್ಯಾಲ ಹಡೆದಾವ್ರಿಗಿ ಇದ್ದ ವಿಶ್ವಾಸ ನೋಡಿ ಅವ್ನ ಆತ್ಮಸಾಕ್ಷಿ ಎದಿನಾ ಹಿಂಡಾಕ ಶುರುಮಾಡ್ತು. ಮನ್ಸ ತಡೀಲಿಲ್ಲ. ಅಥಣಿಗಿ ದೌಡಾಯ್ಸಿ ಬಂದಿದ್ದ.

ಗುರುಪ್ಪಗ ತನ್ನ ತಪ್ಪಿನ ಅರುವ ಆಗಿತ್ತು. ತನ್ನ ಮನಿ ಪರಿಸ್ಥಿಯ ಹಕೀಕತ್ ಯಾನು ಅನ್ನೋದು ಗೊತ್ತಾಗಿತ್ತು. ತನ್ನ ಸುಖದ ಮಬ್ಬಿನ್ಯಾಗ ಹಡೆದಾವ್ರಿಗಿ ತಾ ಮಾಡಿದ್ದ ದೊಡ್ಡ ಮೋಸ ನೆನ್ಸಕೊಂಡ ಒಳ್ಗೊಳ್ಗ ಮುರ್ದ ಬಿದ್ದಿದ್ದ. ತಾ ಕಾಲೇಜಿಗಿ ಸೇರು ಹೊತ್ತಿನ್ಯಾಗ ಮನ್ಯಾವ್ರು ಊರ್ಮಂದಿ ಮುಂದ ತಲಿ ತಗ್ಗಿಸಿ ಕಿಮ್ಮಗೇಡಿ ಆಗಿದ್ದ ಪ್ರಸಂಗಗೋಳು ತಂತಾನ ಕಣ್ಣಿನಿಂದ ಇಳ್ಯಾಕ ಶುರುಮಾಡಿದ್ವು.

‘ಹುಡ್ಗ ಶ್ಯಾಣ ಏತಿ ಸಾಲಿ ಬಿಡ್ಸಬ್ಯಾಡ್ರಿ. ಒಂಚೂರ ತ್ರಾಸ ಆದ್ರೂ ಹರಕತ್ತಿಲ್ಲ ಅವ್ರಿವ್ರ ಕೈಕಾಲ ಹಿಡ್ದ ಅರೆ ಇಲ್ಲಾ ಒಂತುಸು ದೇನೆ ಆದ್ರೂ ಆಗ್ಲಿ ಗುರಪ್ಪಗ ಸಾಲಿ ಕಲ್ಸರಿ. ಯಾರಿಗೊತ್ತ ಮುಂದ ಕಲ್ತ ದೊಡ್ಡ ಸಾಹೇಬಾದ್ರೂ ಆದಾನು. ನಿಮ್ಮ ಜಲ್ಮಕ ನಸೀಬದ ಬಾಗ್ಲ ತೆರ್ಯೋದ ಅಷ್ಟ ಅಲ್ದ ನಮ್ಮೂರಿನ ಕಿಮ್ಮತ್ತೂ ಹೆಚ್ಚಾದೋತ್ಲಾ!’ ಅಂತ ಜ್ಯೋಗವ್ವ ಸಿಂಗಾಡಿ ಲಕ್ಷ್ಮವ್ವನ ಮನಿ ಬಾಗ್ಲಿಗಿ ಬಂದಾಗ ಅಂದಿದ್ಳು.
‘ನಮ್ಮಂಥಾವ್ರಿಗಿ ಸಾಲಿ ಗೀಲಿ ತುಗೊಂಡ ಯಾನ್ ಮಾಡೋದೇತಿ. ಎಷ್ಟ ಕಲತ್ರೂ ಅಡವಿ ದುಡ್ತಾನ ದಂಡಿಗಾಣೋದೇತಿ’ ಅನು ಜಟ್ಟೆಪ್ಪ ಮೊದ್ಲ ಗುರುಪ್ಪನ ವಿದ್ಯಾರೇಖೆಯನ್ನ ಅಡವಿ ಸೀಮಿಗಿ ಅಳತಿ ಮಾಡಿ ಇಟ್ಟಿದ್ದ. ಅಪ್ಪನ ಮನಸ್ಥಿತಿಯ ಮೊಂಡತನಕ್ಕ ಬಲಿ ಆಗಿ ಗೌರವ್ವನ ವಿದ್ಯಾರೇಖೆಯಂತೂ ಕನ್ನಡ ಸಾಲಿ ಸೀಮಿಗೆ ತುಂಡಾಗಿತ್ತು.
‘ಕೂಸ ಇನ್ನೊಂದ ಯಾಡ್ಡ ವರ್ಸ ಕಲಿತೂನ ಅಂತೀತಿ! ಬಿಡಬಾರ್ದ ಯಾಕ?’ ಅಂತ ಲಕ್ಷ್ಮವ್ವ ಮಗಳ ಪರಾ ವಹಿಸಿ ಅಂದಿದ್ಕ, ‘ಯಾನ್ಬೇ! ನಿನ್ನ ಕಾಲಿಗಿ ಬೇಕಾದ್ರ ಬೀಳ್ತೂನ ಇಕಿ ಸಾಲಿ ಬದ್ದಲ್ ನನ್ನ ಹಂತ್ಯಾಕ ಒಂದ ಕಿಲ್ಬಗಾಸಿನ ದಿಲ್ ಇಲ್ಲಾ. ಈಗ ನನ್ನ ತಾಕತ್ ಇದ್ದಷ್ಟ ಕಲ್ಸೇನಿ. ಹೆಣ್ಣ ಹುಡುಗ್ಯಾರಿಗಿ ಹೆಚ್ಚ ಸಾಲಿ ಚಲೋ ಅಲ್ಲ. ಈಗಿನ ಹುಡುಗ್ರೂ ಸಂಭಾಯ್ತ ಇರುಲ್ಲ. ನಾಳಿ ನಮ್ಮ ಜಲ್ಮಕ್ಕ ಬಟ್ಟಾ ತರುವಂಥಾ ದಗದಾ ಯಾನ್ರೆ ಮಾಡ್ಕೊಂಡ ಕುಂತ್ರ ಯಾವ ಗಿಡ್ಕ ಹಗ್ಗಾ ಬಿಕ್ಕೂಣು ಅಂತಿ? ಇಷ್ಟ ವರ್ಸ ಹೊರಸ್ಲಾ ದಾಟುಗೊಟ್ಟಿದ್ದ ಮನಿ ಕಿಮ್ಮತ್ತನ್ನ ಪದ್ರಾಗ ಕಟ್ಕೊಂಡ ತಿರಿಗ್ಯಾಡಿದಂಗ ಆಗೇತಿ. ಇನ್ನೊಂದಾರ ತಿಂಗ್ಳ ಇಕಿಗಿ ಮನಿಗೋಳು ಬರಾಕೂ ಚಾಲೂ ಆಗ್ತಾವ. ಇಕಿ ಜಲ್ಮಕ್ಕ ಒಂದ ಜೋಡ ಮಾಡಿದ್ರ ನಮ್ಮ ಪದ್ರಾನ ಜಬಾದಾರಿನೂ ಖುಲ್ಲಾ ಆದಂಗ ಆಕ್ಕೈತಿ. ದೊಡ್ಡಾಂವ ಇನ್ನೊಂಚೂರ ಕಲಿತೂನ ಅನಾತಾನ. ಮ್ಯಾಟ್ರಿಕ್ ಮುಗ್ದ ಬಳ್ಕ ಅವ್ನೂ ಕೈಯ್ಯಾಗ ಬರ್ತಾನ. ಅಡವಿ ಕದ್ದಿಗಿ ಹಚ್ಚಿದ್ರ ಆತ. ದುಡ್ದ ನಮ್ನಿಬ್ರನೂ ಸಾಕ್ಲಿ’ ಅಂದಿದ್ದ ಜಟ್ಟೆಪ್ಪ.

ಆದ್ರ ಅದ್ಯಾಕೋ ಜೋಗವ್ವನ ಮಾತಿಗಿ ಜಟ್ಟೆಪ್ಪ ತನ್ನ ಮನಸ್ಸಿನಿ ಬಿಗಿ ಒಂಚೂರ ಸಡ್ಲ ಮಾಡಿದ್ದ.
ಇದೆಲ್ಲಾ ನೆಪ್ಪಾಗಿ ಗುರುಪ್ಪಗ ಎದಿ ತುಂಬಿ ಬಂತು.

ಮ್ಯಾಟ್ರಿಕ್ ಅನು ಪದವಿಗೇ ತನ್ನ ಸಾಲಿ ಸೆರಗ ಕಡೀತು ಅಂತ ಗುರುಪ್ಪ ತಿಳ್ದಿದ್ದಾ. ಆದ್ರ ಮ್ಯಾಟ್ರಿಕ್ ಪರೀಕ್ಷೆದಾಗ ಫಸ್ಟ್ ನಂಬರ ತಂದಾಗ ಜಟ್ಟೆಪ್ಪಗ ಜೋಗವ್ವ ಮಾತ ಖರೇ ಅನಿಸಿತ್ತು.
ಜಟ್ಟೆಪ್ಪಗಂತೂ ಕುಲ್ಕಣ್ರ್ಯಾರ ಹೊಲ್ದ ಚಾಕ್ರಿ ಜಲ್ಮ ಜೋಡ ಆಗಿತ್ತು. ನಾಕ ಮಂದಿ ಇದ್ದ ಸಣ್ಣ ಕುಟುಂಬ ಅವಂದು. ತನ್ನ ಕುಟುಂಬ ಸಂಭಾಳ್ಸಾಕ ಕುಲ್ಕಣ್ರ್ಯಾರ ಡೋಣಿ ಬಿಟ್ರ ಬಾರ್ಯೆ ಮೂಲ ಇದ್ದಿರ್ಲಿಲ್ಲ. ಆದ್ರ ಮಗನ ಹೆಚ್ಚುವರಿ ಸಾಲಿ ಹೊರಿಗಿ ಜಟ್ಟೆಪ್ಪ ಧಣ್ಯಾರ ಮುಂದ ಜೀ ಅನಬೇಕಾಗಿತ್ತು.
ಇತ್ತಿತ್ಲಾಗ ದೌಳ್ತನದ ಮಂದಿ ‘ಹೂಂ’ ಅಂದ್ರ ಅದ್ಕ ‘ಇಲ್ಲಾ’ ಅನು ಅರ್ಥಾ ಐತಿ ಅನ್ನೋದ ಜಟ್ಟೆಪ್ಪಗೂ ಗೊತ್ತಾಗಿತ್ತ್ತು. ಯಾಕಂದ್ರ ಅಂಥಾವ್ರ ಮನಿ ಹಿತ್ಲದಾಗ ಅವನ್ದು ಮೂವತ್ತ ಮಳೆಗಾಲದ ಚಾಕ್ರಿ ಅನುಭವ.
ಬರೀ ಯಾಡ್ಡ ಹೊತ್ತಿನ ಕೂಳಿನ ಕಿಮ್ಮತ್ತಿಗಿ ಜಟ್ಟೆಪ್ಪ ಕುಲ್ಕಣ್ರ್ಯಾರ ಹೊಲಾ ಮನ್ಯಾಗ ತನ್ನ ಬದುಕಿನ ಏಳು ಬೀಳು ಉಂಡಿದ್ದ. ಅವ್ರು ಕಾಲಿಲೇ ತೋರ್ಸಿದ್ದನ್ನ ಜಟ್ಟೆಪ್ಪ ತಲಿಮ್ಯಾಲ ಹೊತ್ತ ಮಾಡಿ ತೋರ್ಸಿದ್ದ. ಅದು ಅನ್ನ ಇಟ್ಟ ಮನಿಗಿ ಅವ್ನ ನಿಯತ್ತಾಗಿತ್ತು. ಹಸಿವಿನ ಬೆಂಕಿ ಅನೋದು ಆ ಯಮಧರ್ಮನ ಕೈಯ್ಯಾಗಿನ ಹಗ್ಗದಕಿಂತ ಕಠೋರ ಅನ್ನೋದ ಜಟ್ಟೆಪ್ಪನ ಅನುಭವಕ್ಕ ಇನ್ನೊಂದ ವ್ಯಾಖ್ಯಾನ ಆಗಿತ್ತು. ಧಣ್ಯಾರ ಮ್ಯಾಲ ಅಂವಾ ಅಂಥಾ ನಿಯತ್ತ ಇಡಬೇಕಾದ್ರ ಅದು ಹಿರಿಧಣ್ಯಾರ ಅವ್ನ ಮ್ಯಾಲ ಹೊರ್ಸಿದ್ದ ಋಣದ ಮುಲಾಜ ಆಗಿತ್ತು. ಹಿರಿಧಣ್ಯಾರು ಒಂದ ಜಲ್ಮಕ ತೀರ್ಸಲಾರ್ದಂಥ ಋಣದ ಭಾರಾನಾ ಬಕ್ಷೀಸ ಆಗಿ ಜಟ್ಟೆಪ್ಪನ ಉಡ್ಯಾಗ ಒಗ್ದಿದ್ರು. ಲಕ್ಷ್ಮವ್ವನಂಥಾ ಸಾದ್ವಿನಾ ತಂದು ಅವ್ನ ಜಲ್ಮಕ ಜೋಡ ಮಾಡಿದ್ರು. ಅದ್ಕ ಧಣ್ಯಾರ ಮನಿತನ ಅವ್ನ ಭಾಗಕ್ಕ ದೇವ್ರ ಗುಡಿ ಆಗಿತ್ತು.

‘ಜಟ್ಟೆಪ್ಪ, ನೀ ಬರೀ ನಮ್ಮನಿ ಚಾಕ್ರಿಮನಿಶ್ಯಾ ಅಲ್ಲೋ, ನಮ್ಮನಿ ಮಗಾ ಇದ್ದಂಗ’ ಅಂದಿದ್ದ ಹಿರಿಧಣ್ಯಾರ ಮಾತಿಗಿ ತನ್ನ ಎದ್ಯಾಗ ಉಸ್ರ ಇರುತನ್ಕ ಧಣ್ಯಾರ ಮನಿತನ್ದ ಚಾಕ್ರಿಗಿ ತನ್ನ ಜಲ್ಮಾನ ಮೀಸ್ಲ ಇಟ್ಟಿದ್ದ. ಆದ್ರ ಪುಣ್ಯಾತ್ಮರ ಹೊಟ್ಟಿಲೇ ಪುಣ್ಯತ್ಮರ ಬರ್ತಾರ ಅನು ಮಾತ ಜಟ್ಟೆಪ್ಪಗ ಸುಳ್ಳಾಗಿತ್ತು. ಗೊತ್ತು ಗುರಿ ಇಲ್ಲದಂಗ ಹೊಂಟಿದ್ದ ತನ್ನ ಬದ್ಕಿನ ನಾವಿಗಿ ದಿಕ್ಕಿನ ಜೋಡಿ ಜವಾಬ್ದಾರಿ ಸಹಿತ ಹೊರಿಸಿ ಹೋಗಿದ್ದಾ ಆ ಪುಣ್ಯಾತ್ಮ. ಆ ಒಂದ ಮುಲಾಜಿಗಿ ಈಗಿನ ಕುಲಪುತ್ರರಿಗೂ ಸಲಾಂ ಹೊಡಿಬೇಕಾದದ್ದು ತನ್ನ ಹಣಿಬರಾ ಅಂತ ತಿಳ್ಕೊಂಡ ಜಟ್ಟೆಪ್ಪ ಜೀವನಾ ನಡಿಸಿದ್ದ.
ಧಣ್ಯಾರ ಅಂದಿದ್ದ ‘ಹೂಂ’ ಸಲುವಾಗಿ ತಿಂಗ್ಳ ಮುಕಟ ಅಪ್ಪ ಮಗ ಅವ್ರ ಮನಿ ಹೊರಸ್ಲ ಕಾವ್ಲಾ ಮಾಡಿದ್ದೂ ಗುರುಪ್ಪಗ ಕಣ್ಮುಂದ ಬಂತು. ಕಾಲೇಜ್ ಫೀಜ್ ಕಟ್ಟು ಗಡುವ ಮುಗ್ಯಾಕ ಬಂದಾಗ ಜಟ್ಟೆಪ್ಪ,
‘ಅಣ್ಣಾರ, ನಮ್ಮ ಹುಡ್ಗನ ಸಾಲಿ ಸಮಂಧ. . ’ ಅಂತ ಅಳ್ಕಿಲೇ ಧ್ವನಿ ತಗ್ಗಿಸಿದಾಗ,

‘ಅಲಾ ಎಬಡ ಸೂಳಿ ಮಗನ, ನಿಂಗ ಧಮ್ಮ ಧೀರ ಏತಿಲ್ಲೋ? ರಾಂ ಪಹರೆದಾಗ ಬಂದ ರೊಕ್ಕಾರಿ ಅಂದ್ರ. . ! ಮನ್ಯಾಗ್ಯಾನ ಚಾಪಕಾನಿ ಇಟ್ಟಿದೇವು ಬೇಡಿದ ರೂಪ್ಲೆ ಕುಡ್ಲಾಕ? ಎಂಥಾ ಅಡಮುಟ ಬುದ್ದಿಗೇಡಿ ಅದಿಲೇ? ನಮ್ಮ ಚಿಂತಿ ನಮ್ಗ ಆದ್ರ ನಿಂದೊಂದ! ಇನ್ನೊಂದ್ವಾರ ತಡೀ ನೋಡುನು’ ಅಂತ ಕುಲ್ಕಣ್ರ್ಯಾರ ಹಿರಿಮಗ ಜಟ್ಟೆಪ್ಪನ್ನ ಕಿಮ್ಮತ್ತಗೇಡಿ ಮಾಡಿ ಪಾತಾಳಕ್ಕ ತುಳ್ದಿದ್ದ ದಿನಕ್ಕೂ ಗುರುಪ್ಪ ಕಣ್ಮುಟ ಸಾಕ್ಷಿಯಾಗಿದ್ದ.
ರೊಕ್ಕಿನ ಸೊಕ್ಕು ಅನೋದು ಎದುರಿಗಿದ್ದ ಮನಷ್ಯಾನ ವಯಸ್ಸು, ವ್ಯಕ್ತಿತ್ವ ಸಹಿತ ಲೆಕ್ಕಿಸ್ಲಾರ್ದ ನಾಲ್ಗಿ ಹರಿಬಿಟ್ಟಿತ್ತು. ಆದ್ರ ರೊಕ್ಕ ಅನು ಕುರುಡ ರಾಜಾನ ಮುಂದ ಹೆಂಥೆಂಥಾವ್ರ ಕಿಮ್ಮತ್ತೂ ಅಷ್ಟ ಅನೋ ಸತ್ಯ ಆಗಿನ್ನು ಗುರಪ್ಪನ ತಲಿಗಿ ಹತ್ತಿರ್ಲಿಲ್ಲ. ಅದ್ರ ಈಗೀಗ ಅವ್ನ ಕಣ್ಣಿನ ಪರಿ ಕಳ್ಚಿದಂಗ ಆಗಿತ್ತು. ತನ್ನ ಹಡೆದಾವ್ರು ಅನುಭವಿಸಿದ್ದ ದೈನೇಸಿ ದಿನಗೋಳೆಲ್ಲಾ ತಂತಾನ ಕಣ್ಮುಂದ ಬಂದ ನಿಲ್ಲಾಕ ಹತ್ತಿದ್ವು.
ಅವ್ನ ಕುತ್ಗಿ ಬಿಗಿತು. ದುಃಖ ಕಣ್ಣಿಂದ ಇಳ್ಯಾಕ ಶುರುವಾತು.

ಆಗಿನ್ನಾ ಬರೀ ಗುರಪ್ಪನ ಮೆದಳು ಚರುಕಾಗಿತ್ತು ಆದ್ರ ಮನ್ಸ ಹಣ್ಣಾಗಿರ್ಲಿಲ್ಲ. ತನ್ನ ಹಡೆದವರ ಮನಸ್ಥಿತಿ, ಮನೆ ಪರಿಸ್ಥಿತಿಗಿ ಪೂರ್ತಾ ಕುರುಡಾಗಿದ್ದ. ಅನುನಯ, ಅಂತಃಕರಣ, ನನ್ನವ್ರು, ತನ್ನಾವ್ರು ಅನು ಕಾಳ್ಜಿ, ಕನಿಕರದ ಭಾವ್ನೆಗೋಳ್ಗಿ ಅದ್ಯಾಕೋ ಅವ್ನ ಮನ್ಸ ಕಲ್ಲಾಗಿತ್ತು. ಆದ್ರ ವಯಸ್ಸು ಏರಿದಂಗ ಅವ್ನ ಎದ್ಯಾಗಿನ ಪ್ರೀತಿ, ತಿಳ್ವಳ್ಕಿನೂ ಹಣ್ಣಾಗಾಕ ಶುರು ಮಾಡಿತ್ತು.
ಗುರುಪ್ಪನ ಅಕ್ಷರದ ತಾಲೀಮಿನ ಸಲ್ವಾಗಿ ಜರೂರಿದ್ದ ಪಾಚ ಪಣ್ಣಾಸ ರೂಪಾಯಿ ಸಮ್ಮಂಧ ಜಟ್ಟೆಪ್ಪ ಅಪ್ಪನಾಗಿ ಅನುಭೋಗ್ಸಬೇಕಾಗಿದ್ದ ದೈಹಿಕ ಮತ್ತ ಮಾನಸಿಕ ತರಹದ ಎಲ್ಲಾ ಕಿರುಕುಳನ್ನೂ ಉಂಡಿದ್ದ. ವಾರ ಹದ್ನ ದಿವ್ಸಿಗೊಮ್ಮಿ ಸೂಟಿ ಮಾಡ್ಕೊಂಡ ಗುರಪ್ಪ ಊರಿಗಿ ಬರ್ತಿದ್ದ. ಲಕ್ಷ್ಮವ್ವಗಂತೂ ತಾಯ್ತನದ ಹಬ್ಬಾನ ಶುರು ಆಕ್ಕಿತ್ತು. ಜಟ್ಟೆಪ್ಪಗಂತೂ ಯಾಡ್ಡ ದಿವ್ಸದ ಸೂಟಿಗಿ ಅಂತ ಬರು ಮಗನ್ನ ಹೋಗು ಹೊತ್ತಿನ್ಯಾಗ ಬರಿಗೈಲೆ ಹೆಂಗ ಹಚ್ಗುಡೋದು ಅನು ಚಿಂತ್ಯಾಗ ಒದ್ದ್ಯಾಡ್ತಿದ್ದ. ಗುರುಪ್ಪನ ಊರಿನ ಉಮೇದೂ ಅಧ ಆಗಿರ್ತಿತ್ತು. ತನ್ನ ಖರ್ಚಿನ ಚೌಪಡಿ ಬಿಚ್ಚುಕ್ಕಿಂತ ಮೊದ್ಲ ಜಟ್ಟೆಪ್ಪ ತನ್ನ ಕಿಸೇನೆಲ್ಲಾ ಜಾಡ್ಸಿ ಮಗನ ಕಿಸೇಕ ಸುರಿತಿದ್ದ.

ತಾ ಬಾಯ್ಬಿಡುಕಿಂತ ಮೊದ್ಲ ಕಿಸೇಕ ಬಂದ ಬೀಳ್ತಿದ್ದ ರೊಕ್ಕಿಗಿ ಗುರಪ್ಪ ಕಲ್ಪಿಸಿಕೊಂಡಿದ್ದ ಅರ್ಥಾನ ಬ್ಯಾರೆ ಆಗಿತ್ತು. ತಮ್ಮ ತ್ರಾಸ, ತಾಪತ್ರಿ ಮಗನ ಕಿವಿ ಮ್ಯಾಲ ಬಿದ್ರ ಎಲ್ಲಿ ಕಲ್ಯೂ ಮಗಾ ಮನ್ಸ ಬದ್ಲ ಮಾಡ್ಯಾನು ಅನು ಆತಂಕದ್ಲೇ ಹಡೆದಾವ್ರು ತಮ್ಮ ಸಂಕಟಾನಾ ತಾವ ನುಂಗಿ ನೀರ ಕುಡಿತಿದ್ರು. ಯಾವ್ದ ಬಿಸಿ ಇಲ್ದ ಕಿಸೆಕ ಬಂದ ಬೀಳ್ತಿದ್ದ ನೋಟಗೋಳು ಗುರಪ್ಪನ ಕಣ್ಣಿಗಿ ಪಟ್ಟಿ ಕಟ್ಟಿದ್ವು. ಸುಡು ಬಿಸಿಲಿನ ಝಳಕ್ಕ ಇದ್ರಾಗಿ ಹಡೆದಾವ್ರ ಮಾರಿ ಮ್ಯಾಲಿನ ರಸಾನ ಸುಟ್ಟೋಗಿತ್ತು. ಸುಕ್ಕಗಟ್ಟಿದ್ದ ತೊಗಲಿನ ಬುಡಕ್ಕ ಅದೆಷ್ಟ ಆಸೆ, ಕನ್ಸಗೋಳು ಬಾಯ್ತೆರ್ಕೊಂಡ ಕುಂತಿದ್ವು ಅನೋದು ಗುರಪ್ಪನ ಕಲ್ಪನೆಗೂ ಮೀರಿತ್ತು. ಚಾಕ್ರಿ ನೊಗಕ್ಕ ಹೆಗ್ಲ ಕೊಟ್ಟು ಕೊಟ್ಟು ಸೋತಿದ್ದ ಅಪ್ಪನ ಬೆನ್ನಿಗಿ ತೊಗಲ ಇಲ್ಲಾ ಅನು ಸತ್ಯ ಗುರುಪ್ಪಗ ತೋರ್ಸಾವ್ರ ಆದ್ರೂ ಯಾರಿದ್ರು? ಒಂಟಿಗ್ಯಾ ಎತ್ತ ಆಗಿ ಕುಟುಂಬದ ನೊಗ ಹೊತ್ತು ಜಟ್ಟೆಪ್ಪ ಕುಸ್ದ ಬಿದ್ದಿದ್ದ. ತನಗ ಹೆಗ್ಲಾಗಿ ಎಬ್ಬಿಸಿ ನಿಲ್ಸಾಕ ಮಗಾ ಊರಗೋಲ ಆಗಿ ಬರ್ತಾನ ಅಂತ ಹಾದಿ ಕಾಯ್ಕೋತ ಕುಂತಿದ್ದ. ಆದ್ರ ಗುಳಿ ಬಿದ್ದಿದ್ದ ಅಪ್ಪನ ಕಣ್ಣಿನ ಪಾಪೆ ಹಿಂದ ಹೆಪ್ಪಗಟ್ಟಿ ನಿಂತಿದ್ದ ಕನ್ಸಗೋಳ ವಿಸ್ತಾರಕ್ಕ ಯಾವ ಸಮುದ್ರಾನೂ ಸಮಾನ ಅಲ್ಲಾ ಅನೋದು ಗುರಪ್ಪನ ಅಂದಾಜಿಗೂ ನಿಲುಕಲಾರ್ದಾಗಿತ್ತು.
ಲಕ್ಷ್ಮವ್ವನ ಬಯ್ಕಿಗೋಳಂತೂ ಮರಳ್ಗಾಡಿನ್ಯಾಗ ಬಿದ್ದ ಮಳಿಹನಿ ಆಗಿದ್ವು. ಮನ್ಯಾವ್ರ ಬಾಯಿ ಮುಸ್ರಿ ಸಮ್ಮಂಧ ಅದೆಷ್ಟ ದೌಳಾವ್ರ ಹಿತ್ಲದಾಗ ಭಾಂಡೆ ಬೆಳ್ಗಿ ಬೆಳ್ಗಿ ಸೋತಿದ್ಳೋ ಆ ದೇವ್ರಿಗೆ ಗೊತ್ತ. ಮಂದಿ ಮನಿ ಚಾಕ್ರಿ ಜೋಡಿ ಹೊಲಗೋಳ ಕದ್ದಿಗೂ ಗಂಡಗಚ್ಚಿ ಹಾಕಿ ಗುದ್ದ್ಯಾಡಿ ದುಡ್ಡಿಗಿ ದುಡ್ಡ ಗ್ವಾಳಿ ಮಾಡಿ ಮನಿ ನಿಲ್ಸಾಕ ಹೆಣಗಾಡಿದ್ಳು. ದುಡುದು ದುಡುದು ಸೋತಿದ್ದ ಜೀವಕ್ಕ ಸಾಂತ್ವನ ಹೇಳಿ, ನೊಂದಿದ್ದ ಹೃದಯಕ್ಕ ಪ್ರೀತಿಯ ಮಲಾಮ ಸವ್ರಿ ಭುಜದ ಮ್ಯಾಲ ಅಕ್ಕರತಿಯಿಂದ ಕೈಯಾಡ್ಸು ಜರೂರ ಎಷ್ಟ ಇತ್ತ ಅನೋದು ಏರ್ ವಯಸ್ಸಿನ ಗುರಪ್ಪನ ಅಂತಃ ಸಂಜ್ಞೆಗೂ ಭಾಸವಾಗಿರ್ಲಿಲ್ಲ.

ಇಷ್ಟಾದ್ರೂ ‘ಮಮತೆಯ ಕಳ್ಳಿಗಿ ಹೇಸ್ಗಿ ಇಲ್ಲಾ’ ಅನುವಂಗ ಮಗಾ ಮನಿಗಿ ಬಂದ್ರ ಸಾಕು ಅವ್ನ ಉಪಚಾರ್ಕ ನೆರಿ ಮನ್ಯಾವ್ರ ಮುಂದ ಸೆರಗ ಹಿಡ್ದ ಬೇಡ್ಕಕೊಂಡ ಬರೋದ್ರಾಗ ಹಡ್ದ ಕಳ್ಳಿಗಿ ಅವಮಾನ ಅಂತ ಅನ್ಸೇ ಇರ್ಲಿಲ್ಲ. ಗಂಡ್ಮಗ ಗುರಪ್ಪನ ಮ್ಯಾಲ ಇದ್ದಷ್ಟ ಮಾಯಾ, ಅಕ್ರಿ ಲಕ್ಷ್ಮವ್ವಗ ಹೆಣ್ಣ ಪೊರಿ ಮ್ಯಾಲ ಇರ್ಲಿಲ್ಲ. ಗುರಪ್ಪ ಊರಿಗಿ ಬಂದಾಗೊಮ್ಮಿ ಅವ್ವನ ಸಡಗರ ನೋಡಿ ಗೌರವ್ವ,

‘ಅವ್ವ, ತಿಂಗ್ಳ ಆಗಾಕ ಬಂತ ಹೋಳ್ಗಿ ಮಾಡಂತ ಹೇಳಿ. ಸಂತಿ ತರಾಕ ರೊಕ್ಕಿಲ್ಲ ಮುಂದ ನೋಡುನು ಅಂತಿ. ಆದ್ರ ಅಣ್ಣಾ ಬರೋದ ತಡಾ, ಅಂವಾ ಬಾಯ್ಬಿಡು ಪಹಲೇನ ಹೋಳ್ಗಿಗಿ ತಯಾರಾಗಿ ಕುಂಡ್ರತಿ. ಈಗೆಲ್ಲೇದ ರೊಕ್ಕ ಬರ್ತಾವು?’ ಅಂತ ತಕ್ರಾರ ತಗೀತಿದ್ಳು.
ಅದ್ಕ ಲಕ್ಷ್ಮವ್ವ, ‘ಐ ಖೋಡಿ, ವರ್ಸ ಮಟಾ ನೀ ಮನ್ಯಾಗ ಇರ್ತಿ. ಮಾಡಿದಾಗೆಲ್ಲಾ ಹೊಟ್ಟಿತುಂಬ ತಿಂತಿರ್ತಿ. ಪಾಪ ತಿಂಗ್ಳ ವರ್ಸಕ್ಕೊಮ್ಮಿ ಬರು ಕೂಸಿಗಿ ಒಂದ್ಯಾಡ ಹೋಳ್ಗಿ ಮಾಡಿದ್ರ ನಿಂದೆಂಥಾ ಹೊಟ್ಟಿಕಿಚ್ಚ ಲೌಡಿ’ ಅಂತ ಬೈತಿದ್ಳು.
ಪಾಪ ಗೌರವ್ವ ಅವ್ವನ ಮಾತಿಗಿ ಬ್ಯಾಸ್ರ ಮಾಡ್ಕೊಂಡ ಸೆಟ್ಕೋತಿದ್ಳು. ಆದ್ರೂ ಅಣ್ಣನ ಮೆರವಣಿಗ್ಯಾಗ ಅರ್ಧಾ ಹೊರಿ ಗೌರವ್ವನ ಹೆಗಲಿಗೇ ಬೀಳ್ತಿತ್ತು. ಬ್ಯಾಳಿಗಿ ಹೆಸರಿಟ್ಟು, ಹೂರ್ಣ ಅರ್ದು, ಹುರ್ಣಗಲ್ಲಿನ ಮ್ಯಾಲ ಕಣಕ ಕುಟ್ಟಿ ಹದಾ ಮಾಡಿ ಉಳ್ಳಿ ಲಡಿಸಿ ಕುಡೋದು ಗೌರವ್ವನ ಹೊಣಿ ಆಗಿರ್ತಿತ್ತು.
ಹೋಳ್ಗಿ ಹೈರಾಣಕ ಅಂಜಿ ಗೌರವ್ವ,

‘ಯವ್ವಾ, ಹೋಳ್ಗಿ ದಗದಾ ನಂಗ ಹಚ್ಚಬ್ಯಾಡ್ವಾ. ಬಾಳ ರಿಂದಿ ದಗದ ಆಕೈತಿ’ ಅಂತ ಕೊಂಕ ತಗದ್ರ ಲಕ್ಷ್ಮವ್ವಗ ಕೆಟ್ಟ ಸಿಟ್ಟ ಬರ್ತಿತ್ತು. ‘ಅಲಾ ಆಳುಸಗಿತ್ತಿ ಅಡಗಿ ಮಡಾಕ ಹಿಂಗ ಬ್ಯಾಸತ್ರ ಹೆಂಗ? ನಾಳಿ ಅತ್ತಿ ಮನ್ಯಾಗ ಯಾನ ಕುಂಡ್ರಿಸಿ ಉಣ್ಸತಾರು? ಡೊಗ್ಸಿ ರುಬ್ಬತಾರ. ಲೌಕರ ಹಿಟ್ಟ ಲಡಿಸಿ ಕುಡ್ಬಾ’ ಅಂತ ಜಬ್ರಸ್ತಿದ್ಳು. ಗೌರವ್ವ ಅವ್ವನ ಬೈಗ್ಳಕ ಅಂಜಿ ಒಲ್ಲದ ಮನ್ಸಿಲೆ ಅಡಗಿ ಮನ್ಯಾಗ ಮೈ ಮುರಿತಿದ್ಳು.
ತನ್ನ ಸುಖಾ ಸಂತೋಷದ ಸಮ್ಮಂಧ ಮನ್ಯಾವ್ರೆಲ್ಲ ಪಟ್ಟಿದ್ದ ಪಾಡಗೋಳು ಒಂದೊಂದ ಕಣ್ಮುಂದ ಬಂದಾಗ ಗುರಪ್ಪ ತಲಿ ಹಿಡ್ಕೊಂಡ ಕುಂತ. ಒಂದ ಗಳಿಗಿ ಅಂವಗ ಅನ್ನಿಸ್ತು. ತನ್ನ ಮನ್ಯಾವ್ರನ ಇಷ್ಟೆಲ್ಲಾ ಜೀವಾ ಅರ್ದು ತಾ ಮಾತ್ರ ಸಾಲಿ ಕಲ್ಯುದ್ರಾಗ ಯಾನ ಅರ್ಥಾ ಏತಿ. ತಾ ಕಲ್ತು ಅದ್ಕೊಂದ ಕಿಮ್ಮತ್ತ ಸಿಕ್ಕಿ ತನ್ನಾವ್ರನ್ನ ಸುಖದಾಗ ಇಡು ಕನ್ಸ ಕಾಣುಕಿಂತ ಈಗಿಂದ ದುಡ್ಯಾಕ ಚಾಲು ಮಾಡಿದ್ರ ಬೇಸಿ ಅನ್ನಿಸ್ತು ಗುರಪ್ಪಗ. ತನ್ನ ಕಾಲೇಜ್ ಖರ್ಚಿನ ಸಮ್ಮಂಧ ಮನ್ಯಾವ್ರನ್ನ ಪೀಡಿಸು ಬದ್ಲಿ ಯಾವ್ದಾರೆ ಅಂಗ್ಡ್ಯಾಗ ಒಪ್ಪತ್ತ ದಗದಾ ಮಾಡೋದ ಬೇಸಿ ಅನ್ನಿಸ್ತು. ಒಪ್ಪತ್ತ ಇಲ್ಲಂದ್ರ ಚಂತ್ಯಾನ ಚಾಕ್ರಿ ಮಾಡಿದ್ರೂ ತಪ್ಪ್ಯಾನ ಆಗೋದೇತಿ ಅನ್ನಿಸ್ತು. ಎಷ್ಟ ಮಂದಿ ಸ್ವಂತ ದುಡ್ದ ಸಾಲಿ ಕಲ್ಯಾಕತ್ತಿಲ್ಲ! ನನ್ನ ಮನ್ಯಾಗ ಯಾವ ಲಕ್ಷ್ಮಿ ಕಾಲ ಮುರ್ಕೊಂಡ ಬಿದ್ದಾಳಂತ ನಾ ಹಿಂಗ ಮೆರಿಬೇಕ? ನನ್ನ ಸುಖಕ್ಕ ನನs ಬೆಲಿ ತೆರ್ಬೇಕು. ಇಂಥಾ ಹತ್ತಾರ ಯೋಚ್ನಿಗೋಳು ಗುರಪ್ಪನ್ನ ಇಡಿಯಾಗಿ ಹಿಡ್ದು ಗೋಳ್ಯಾಡಿಸಿದ್ವು.
ಒಮ್ಮಿಂದೊಮ್ಲಿ ಹಾಸಿಗಿ ಬಿಟ್ಟ ಎದ್ದ.

ಒಂದ ಸವನ ಸಪ್ಪಿಲ್ದ ಗುರಪ್ಪ ಒಂದ್ವಾರ ಮಟಾ ಸಿಟಿಯೆಲ್ಲಾ ಸುತ್ತಾಡಿದ. ಸಿಕ್ಕಸಿಕ್ಕ ಅಂಗ್ಡಿ ಮಾಲೀಕರಿಗೆಲ್ಲ ಕೈಜೋಡಿಸ್ದಾ. ಕಡೀಕ ಒಂದ ಕಿರಾಣಿ ಅಂಗ್ಡ್ಯಾಗ ಒಂದ ದಗದ ಅಂತ ಸಿಕ್ತು. ಅದೂ ಫುಲ್ ಟೈಂ. ಅಂಗ್ಡಿ ದಗದ ಗುರಪ್ಪನ್ನ ಓದಿನ ಹಾದಿ ಬಂದ ಮಾಡ್ತು. ಸುಮಾರ ತಿಂಗ್ಳ ಮಟಾ ಗುರಪ್ಪಾ ಕಾಲೇಜ ಮಾರೀನ ನೋಡ್ಲಿಲ್ಲ. ಮುಂಜಾಳೆದಿಂದ ಸಂಜೀ ತನ್ಕ ನಿಂತ ಜಾಗಾದಾಗ ನಿಂತಂಗ ಗಿರಾಕಿಗೋಳ್ನ ಸಂಭಾಳ್ಸಿ ಸುಸ್ತಾಗಿ ಕೋಲಿಗಿ ಬರ್ತಿದ್ದ. ಯಾವುದ್ರೋಳ್ಗೂ ಮನ್ಸ ಇಲ್ದಂಗಾಗಿ ಹಾಸಿಗ್ಯಾಗ ಅಡ್ಡಾಗ್ತಿದ್ದ.
ಇತ್ತಿತ್ಲಾಗ ಗುರಪ್ಪ ಕಾಲೇಜಿಗಿ ಬರೋದ ನಿಲ್ಲಿಸ್ಯಾನ ಅನು ಸುದ್ದಿ ಜಟ್ಟೆಪ್ಪನ ಕಿವಿಗಿ ಮುಟ್ಟಿತು. ಮ್ಯಾಲಾ ಮ್ಯಾಲಾ ಗುರಪ್ಪನ ವಿಚಾರ್ದಾಗ ಚಾಡಿ ಹೇಳಿ ತಲಿತಾಪ ಮಾಡ್ತತಿದ್ದ ಗಡ್ಡದ ನಿಂಗಪ್ಪನ ಹೊಸ ಸುದ್ದಿ ಜಟ್ಟೆಪ್ಪನ ಪಿತ್ತ ನೆತ್ತಿಗೇರ್ಸಿತ್ತು. ‘ಲೇ, ಹಚ್ಚು ಸೂಳಿ ಮಗ್ನ. ನಿಂಗ ಮಾಡಾಕ ಬ್ಯಾರೆ ದಗದ ಇಲ್ಯಾನ? ನಿನ್ನ ಹುಡಗ್ನಾ ಸಾಲಿ ಕಲ್ಯಾಕ ಕಳ್ಸೆದ್ಯೋ ಇಲ್ಲಾ ನಮ್ಮ ಹುಡಗ್ನ ಮ್ಯಾಲ ಜಾಸೂಸಿ ಮಾಡಾಕ ಕಳ್ಸೆದ್ಯೋ? ಇನ್ನೊಂದ ಸಲ ನಮ್ಮ ಹುಡ್ಗನ ಬದ್ದಲ್ ಇಲ್ಲದ ಹೇಳಾಕ ಬಂದಿ ಅಂದ್ರ ನೆಟ್ಟಗ ಇರುಲ್ಲ ಅಂದ್ರಾತ’ ಅಂದು ಜಟ್ಟೆಪ್ಪ ಒದರ್ಯಾಡಿದ್ದ.
ಜಟ್ಟೆಪ್ಪನ ಮಾತಿಗಿ ನಿಂಗಪ್ಪ ಸಹಿತ ತಿರಿಗಿ ಮಾತಾಡಿದ್ದ.

‘ಅಲಾ ಶಾಣ್ಯಾನ ಮಗ್ನ, ನಿನ್ನ ಹುಡುಗ್ನ ಚಲೋ ಸಮ್ಮಂಧ ನಾ ಹೇಳಿದ್ರ ನನ್ಮ್ಯಾಲ ಹಾರಕ ಬರ್ತೀಲಾ? ನಿನ್ನ ಮಗಾ ಕಲತ್ರ ಎಷ್ಟ ಮತ್ತ ಹೊಯ್ಕೋಂತ ಹ್ವಾದ್ರ ಎಷ್ಟ! ನಂಗ್ಯಾನ ಫಾಯ್ದಾನೋ ತೋಟೆನೋ? ನಮ್ಮ ಕುಂಡಿ ಕೆರ್ಕೊಳ್ಳಾಕ ನಮ್ಗ ಪುರುಸೊತ್ತಿಲ್ಲ. ಇನ್ನ ನಿನ್ನ ಮಗ್ನ ಜಾಸೂಸಿ ಮಾಡಾಕ ಯಾಂವ ಖಾಲೇ ಅದಾನು? ನಮ್ಮ ದೋಸ್ತನ ಹುಡಗ ಪಾಪ ಖಾಲಿ ಪುಕ್ಸಟ್ಟ ಹಾಳಾಗಿ ಹೋಕ್ಕೈತಿ ಅನು ಕಾಳ್ಜಿಲೆ ಒಂಚೂರ ಮುತುವರ್ಜೀ ತೋರ್ಸಿದ್ರ ಹಿಂಗ ಮಾತಾಡೋದ? ಹೋಗ್ ಹೋಗ್ ಶ್ಯಾಣ್ಯ ಇದೀ. . ’ ಅಂದು ಮಾರಿ ಮ್ಯಾಲ ಹೊಡ್ದಂಗ ಮಾತಾಡಿದ್ದ ನಿಂಗಪ್ಪ.
ಗಂಡ ಹೆಂಡ್ತಿಗಿ ಮನ್ಸ ತಡೀಲಿಲ್ಲ. ಖರೇ ಹಕೀಕತ್ತ ಅರೆ ಯಾನ್ ಅನೋದ ತಿಳ್ಕೊಂಡ ಬರು ಆತ್ರದಾಗ ಮರದಿವ್ಸ ಬಸ್ಸ್ ಹತ್ತಿದ್ರು. ಅಥಣ್ಯಾಗ ಇಳ್ದು ಗುರಪ್ಪನ ಕೋಲಿಗಿ ಬಂದಾಗ ತಿಳೀತು. ಗುರಪ್ಪ ಕಾಲೇಜ ಬಂದ ಮಾಡಿ ಅಂಗ್ಡ್ಯಾಗ ಚಾಕ್ರಿ ಮಾಡಾಕತ್ತಿದ್ದ ವಿಚಾರ. ದುಗುಡ ಮನ್ಸಲೇ ಇಬ್ರೂ ಪ್ಯಾಟೀ ಕಡೆ ಕಾಲ್ಕಿತ್ರು. ಗುರಪ್ಪ ಗುರ್ತ ಸಹಿತ ಸಿಗಲಾರ್ದಷ್ಟ ಸೊರ್ಗಿ ಹೋಗಿದ್ದ. ಒಂದ ಒದೂವರಿ ತಿಂಗ್ಳ ಹಿಂದ ನೋಡಿದ್ದ ಮಗನ ಮಾರಿ ಈಗ ಅಲ್ಲಿರ್ಲ್ಲಿಲ್ಲ. ಅವ್ವ ಅಪ್ಪ ಇಬ್ರೂ ಹೌಹಾರಿದ್ರು. ‘ಗುರು. . !’ಅಂತ ಲಕ್ಷ್ಮವ್ವ ಒದರಿದ ಬಳ್ಕ ಅಂಗ್ಡಿ ಮುಂದ ನಿಂತಿದ್ದ ಹೆಂಗ್ಸು ತನ್ನ ಅವ್ವ ಅನೋದ ಗುರ್ತಾಗಿ ಗುರಪ್ಪಗ ಕಣ್ಣಾಗ ನೀರ ತಗ್ದ. ಅಪ್ಪನ ಕಡೆ ನೋಡಿ ತಲಿ ಕೆಳಗ ಹಾಕಿದಾ.

‘ತಮ್ಮಾ ಇದೆಲ್ಲಾ ಯಾನೋ? ನೀ ಇಲ್ಯಾನ ಮಾಡಾಕ ಹತ್ತೀ?’ ಅಂತ ಜಟ್ಟೆಪ್ಪ ಕೇಳಿದ.
ಗುರಪ್ಪ ಯಾನೂ ಮಾತಾಡ್ಲಿಲ್ಲ. ಅವ್ನ ಕುತ್ಗಿ ಬಿಗಿದಿತ್ತು. ಅವ್ವ ಅಪ್ಪನ ಕರ್ಕೊಂಡ ನೆಟ್ಟಗ ಕೋಲಿಗಿ ಬಂದ. ಅವ್ರಿಬ್ರಿಗೂ ದಿಗಿಲು. ಗುರುಪ್ಪ ಸಮಾಧಾನ ಮಾಡ್ಕೊಂಡ.
‘ಅಪ್ಪಾ ನನ್ನ ಕ್ಷಮಾ ಮಾಡ’ ಅಂತೇಳಿ ಗಳಗಳ ಅತ್ತ. ತಾ ಮಾಡಿದ್ದ ತಪ್ಪನ್ನೆಲ್ಲಾ ಅಪ್ಪನ ಮುಂದ ಹೇಳಿ ಮನ್ಸ ಹಗರ ಆಗೂ ತನ್ಕ ಅತ್ತ. ಅವ್ರಿಬ್ರಿಗೂ ದುಃಖ ತಡೀಲಿಲ್ಲ. ಮಗನ್ನ ತೆಕ್ಕಿಬಿದ್ದು ಅತ್ರು.
ಲಕ್ಷ್ಮವ್ವ ತುಸು ಸಮಾಧಾನ ಮಾಡ್ಕೊಂಡು,
‘ಹಿಂಗ ಆಗೇತೆವ್ವಾ ಅಂತ ಆವತ್ತ ಒಂದ್ಮಾತ ಹೇಳಿದ್ರ ಯಾನ್ ಆಕ್ಕಿತ್ತು? ನಾವ್ಯಾನ ಅಷ್ಟ ಕಟಕ್ರ ಅದೀವ?’ ಕೇಳಿದ್ಳು ಲಕ್ಷ್ವವ್ವ.

‘ಅವ್ವ ಯಾನ ಅಂತ ಹೇಳ್ಲಿ? ನಾ ಶೆರಿ ಕುಡ್ಯಾಕ ಕಲ್ತೀನಿ ಅಂತ ಹೇಳ್ಲೆ? ಇಲ್ಲಾ ನಿಮ್ಮ ದುಡ್ಮಿನೆಲ್ಲಾ ಹೊಳ್ಯಾಗ ಹುಣ್ಸಿಹಣ್ಣ ತೊಳ್ದಂಗ ತೊಳ್ದ ಬಿಟ್ಟೇನಿ ಅಂತ ಹೇಳ್ಲೆ? ಅವ್ವ ನಾ ಚಟಕ ಬಿದ್ದೇನಿ ಅನೂ ಖರೇದಕ್ಕಿಂತ ಈಗ ಜವಾಬ್ದಾರಿಲೆ ದುಡ್ದ ನಿಯತ್ತಿನ ಹಾದಿ ಹಿಡ್ದ ಸಾಲಿ ಕಲ್ಯಾತುನ ಅಂತ ಹೇಳೋದ ಚಲೋ ಅಲ್ಲ್ಯಾನ್? ನೀವಿಬ್ರೂ ಯಾನೂ ಮನ್ಸಿಗಿ ಹಚ್ಗೊಂಡ ಚಿಂತಿ ಮಾಡ್ಬ್ಯಾಡ್ರಿ. ನಾ ಕಾಲೇಜ ಬಿಟಿಲ್ಲ. ದಗದಾ ಮಾಡ್ಕೋಂತ ಅಭ್ಯಾಸ ಸಹಿತ ಮಡಾತುನ. ಇನ್ನೊಂದ ಆರ ತಿಂಗ್ಳ ಕಾಲೇಜ್ ಮುಗ್ಯಾನ ಊರಿಗಿ ಬರ್ತುನ. ಅಲ್ಲೇ ಯಾವ್ದರೇ ಪ್ಯಾಕ್ಟ್ರ್ಯಾಗ ನೌಕ್ರಿಗಿ ಸೇರ್ಕೋತುನ. ನಿಮ್ಮಿಬ್ರನೂ ದುಡ್ದ ಸಾಕ್ತುನ’

ಅಂದಾಗ ಹಡೆದಾವ್ರಿಗಿ ಭಾಳ ಖುಷಿ ಆತು. ಗುರಪ್ಪ ತಮ್ಮ ಮಗಾ ಅಂತ ಹೇಳಾಕ ಈಗ ಅವ್ರಿಬ್ರಿಗೂ ಹೆಮ್ಮಿ ಅನ್ಸಿತು. ಆದ್ರ ಮನ್ಸಿನ ಮೂಲ್ಯಾಗ ಒಂದ್ಕಡಿ ಹಳಾಳಿನೂ ಆತು. ತುಂಬಿದ್ದ ಮನ್ಸಿಲೇ ಕಣ್ಣೊರ್ಸಕೊಂಡ್ರು. ಗುರಪ್ಪ ತನ್ನ ಟ್ರಂಕ್ ಎತ್ಗೊಂಡ ಬಂದ. ತೆರ್ದು ಅದ್ರಾಗಿಂದ ಎರ್ಡ ಸಾವಿರ ರೂಪಾಯಿ ತಗ್ದ ಅಪ್ಪನ ಕಯ್ಯಾಗ ಕೊಟ್ಟ. ‘ಅಪ್ಪಾ ಗೌರಾನ ಮದ್ವಿ ಖರ್ಚಿಗಿ ಬೇಕಾಗ್ತಾವ ಇಟ್ಗೋರಿ ಅಂದ’

-ಬಂಡು ಕೋಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x