ಇಡಿ ಕಿಡಿ ಕವಿತೆಗಳು: ಅನುಸೂಯ ಯತೀಶ್

ಮಂತ್ರಮುಗ್ಧಗೊಳಿಸುವ
ಅಕ್ಷರ ಮಾಂತ್ರಿಕನ ಕಾವ್ಯ ಚಮತ್ಕಾರಿಕೆಯಲ್ಲರಳಿದ
ಇಡಿ ಕಿಡಿ ಕವಿತೆಗಳು.

ಹನಿಗವಿತೆಗಳ ಚಕ್ರವರ್ತಿ, ಚುಟುಕುಗಳು ರಾಜ, ಶಬ್ದ ಗಾರುಡಿಗ, ಹರಟೆಯ ಕವಿ, ಕಾವ್ಯ ಲೋಕದ ವಿದೂಷಕ, ಹಾಸ್ಯ ಲೇಖಕ, ನಗು ಬಿಗುವಿನ ಕವಿ, ಸಾಮಾಜಿಕ ಪ್ರಜ್ಞೆಯ ಬರಹಗಾರ ಮುಂತಾದ ನಾಮಾಂಕಿತಗಳಿಗೆ ಭಾಜನರಾದ ನಮ್ಮ ನಾಡಿನ ಹೆಮ್ಮೆಯ ಕವಿಯನ್ನು ಕನ್ನಡದ ಹಿರಿಯ ಹಾಗೂ ಶ್ರೇಷ್ಠ ಸಾಹಿತಿಗಳಾದ ಅ.ರಾ.ಮಿತ್ರರವರು “ಇಡಿ ಕಿಡಿ ಕವನಗಳು” ಕೃತಿಯ ಮುನ್ನುಡಿಯಲ್ಲಿ ಓದುಗರಿಗೆ ಪರಿಚಯಿಸಿರುವ ಪರಿಯಿದು.

“ಚೇಷ್ಟೆಯ ಬುದ್ಧಿಯ ತುಂಟತನ ಇವಗುಂಟು
ಶಬ್ದಗಳ ವಕ್ರ ಸಂಚಾರವೂ ಉಂಟು
ಮೂಲೆ ಮೂಲೆಗಳಲ್ಲಿ ಬಾಯಾಡಿಸುವ ಬುದ್ಧಿ
ಎಲ್ಲ ಮೂಲೆಗಳಿಂದ ಬಂತು ಪ್ರಸಿದ್ಧಿ”

ಈ ಕವಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ದೊರೆತ ಮೇಲೆ ಅವರ ಪರಿಚಯವನ್ನು ವಿಶೇಷವಾಗಿ ಮಾಡಬೇಕಿಲ್ಲ. ಓದಿನ ಅಭಿರುಚಿಯಿರುವ ಪ್ರತಿಯೊಬ್ಬ ಕನ್ನಡಿಗನಿಗೂ, ಕಾವ್ಯವನ್ನು ಅಪ್ಪಿ ಒಪ್ಪಿ ಬರೆಯುವ ಬರಹಗಾರರಿಗೂ ಚಿರಪರಿಚಿತವಾದ ಹೆಸರಿದು. ಅವರೆ ಎಲ್ಲರ ಮೆಚ್ಚಿನ ಕವಿಗಳಾದ ಎಚ್. ಡುಂಡಿರಾಜ್ ರವರು.

ಡುಂಡಿರಾಜ್ ಪದ್ಯ ಹಾಗೂ ಗದ್ಯ ಎರಡು ಪ್ರಕಾರಗಳಲ್ಲೂ ತಮ್ಮ ಬರಹದ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಹನಿಗವನಗಳು, ಕವನಗಳು, ಅಂಕಣ ಬರಹಗಳು, ನಾಟಕಗಳು, ಮಕ್ಕಳ ಸಾಹಿತ್ಯ, ಲಿಲಿತ ಪ್ರಬಂಧಗಳು, ಪ್ರವಾಸ ಕಥನ, ಹಾಸ್ಯ ಲೇಖನಗಳು ಸೇರಿದಂತೆ ವಿಭಿನ್ನ ಪ್ರಕಾರಗಳಲ್ಲಿ ಕೈಯಾಡಿಸಿ ಸುಮಾರು ೬೦ ಕೃತಿಗಳಿಂದ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅದಕ್ಕೆ ಬಹುಶಃ ಅ.ರಾ.ಮಿತ್ರ ಅವರು ಮೂಲೆ ಮೂಲೆಗಳಲ್ಲಿ ಬಾಯಾಡಿಸುವ ಬುದ್ಧಿ ಎಂದಿರುವುದು.
ಸಾಹಿತ್ಯದಲ್ಲಿ ಇಷ್ಟೆಲ್ಲ ಉತ್ಕೃಷ್ಟ ಫಸಲನ್ನು ತೆಗೆದಿದ್ದರೂ ಕವಿಯ ವಿನಮ್ರಭಾವ ತನ್ನದು ಅಳಿಲು ಸೇವೆ ಎಂಬುದಾಗಿದೆ. ಅದಕ್ಕೆ ಪುಷ್ಠಿ ತುಂಬಲು ಈ ಹನಿ ಒಂದು ಸಾಕು.

“ದೊಡ್ಡ ದೊಡ್ಡ
ಸಾಹಿತಿಗಳು
ಶ್ರೇಷ್ಠ ಗ್ರಂಥಗಳ ಬರೆದು
ಕಟ್ಟುತ್ತಾರೆ ಸಾಹಿತ್ಯ ಸೇತುವೆ
ಹನಿಗವನಗಳದ್ದು
ಕಪಿಸೇನೆಯ ನಡುವೆ
ಅಳಿಲು ಸೇವೆ”

ಡುಂಡಿರಾಜ್ ರವರ ಹಲವಾರು ಕೃತಿಗಳನ್ನು ಓದಿರುವೆ. ಬ್ಯಾಂಕ್ ಉದ್ಯೋಗಿಯಾದ ಇವರು ವೃತ್ತಿಯಿಂದ ನಿವೃತ್ತರಾದ ಸವಿ ನೆನಪಿಗೆ ಹೊರ ತಂದ “ಇಡಿ ಕಿಡಿ ಕವನಗಳು” ನನ್ನನ್ನು ಬಹುವಾಗಿ ಕಾಡಿದವು. ನಿತ್ಯ ಹಣ ಒತ್ತಡಗಳ ನಡುವೆ ವೃತ್ತಿ ಬದುಕು ಕಟ್ಟಿಕೊಂಡರೂ ಇವರ ಬರಹಗಳಲ್ಲಿ ಇರುವ ಹಾಸ್ಯ ಮಾತ್ರ ಎಲ್ಲರಿಗೂ ಬೆರಗು ಮತ್ತು ಬೆಡಗಲ್ಲದೆ ಮತ್ತೇನಾಗಿರಲು ಸಾಧ್ಯ. ಕನ್ನಡದಲ್ಲಿ ಹಾಸ್ಯ ಬರಹಗಾರರ ಪರಂಪರೆ ದೊಡ್ಡದು. ಈಗ ಆ ಗುಂಪಿನಲ್ಲಿ ಡುಂಡಿರಾಜರು ಕೂಡ “ಮಿನುಗುತಾರೆ” ಯಾಗಿದ್ದಾರೆ. ಇದಕ್ಕೆ ಪೂರಕವಾಗಿ ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿಯವರ ಮಾತನ್ನು ನಾವು ಸ್ಮರಿಸಿಕೊಳ್ಳಬಹುದು. “ಬೇಂದ್ರೆ, ಬಿಳಿಗಿರಿ,ಚಂಪಾ, ವೈಯೆನ್ಕೆ, ಲಕ್ಷ್ಮಣ್ ರಾವ್ ಮೊದಲಾದವರಂತೆ ಡುಂಡಿರಾಜರು punಡಿತ ಪರಂಪರೆಗೆ ಸೇರಿದ್ದಾರೆ”

“ಕನ್ನಡದಲ್ಲಿ ಗಂಭೀರ ಸಾಹಿತ್ಯ ಕೃಷಿ ಇಂದು ನಡೆಯಲಿ ಅಥವಾ ಬಿಡಲಿ ಹಾಸ್ಯ ಸಾಹಿತ್ಯದ ಮಳೆಯಂತೂ ಸಣ್ಣಪುಟ್ಟ ಊರುಗಳು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಕಡೆ ಸಮಾನವಾಗಿ ಸುರಿಯುತ್ತಿದೆ” ಎಂಬ ಎಸ್.ಆರ್.ವಿಜಯ ಶಂಕರ್ ರವರ ಮಾತು ನವರಸಗಳಲ್ಲಿ ಹಾಸ್ಯ ರಸ‌ ಪ್ರಧಾನ ಪಾಲು ಪಡೆಯುತ್ತದೆ ಎನ್ನುವುದರ ಜೊತೆಗೆ ನಗೆಬರಹದ ಮಹಿಮೆಯನ್ನು ಸಾರುತ್ತದೆ. ಬಹುಶಃ ಹಾಸ್ಯದ ಮೂಲಕ ಹೆಚ್ಚು ಕಾವ್ಯ ಪ್ರೇಮಿಗಳನ್ನು ತಲುಪಬಹುದೆಂಬ ಭಾವ ಕವಿಯದು.

ಈ ಹೊತ್ತಿಗೆಯಲ್ಲಿ ೬೦ ಇಡಿ ಕವನಗಳು ಹಾಗೂ ೨೦೦ ಕಿಡಿ ಕವನಗಳಿವೆ. ಅಂದರೆ ಮೊದಲ ಭಾಗ ಪೂರ್ಣ ಕವಿತೆಗಳು ಎರಡನೇ ಭಾಗದಲ್ಲಿ ಹನಿಗವನಗಳು ಸೇರಿವೆ. ಈ ಪುಸ್ತಕದ ಮುಖಪುಟ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತದೆ.ಡುಂಡಿರಾಜರ ವ್ಯಂಗ್ಯಚಿತ್ರ ಆಕರ್ಷಕವಾಗಿ ಮೂಡಿಬಂದಿದ್ದು ಓದುಗರೊಂದಿಗೆ ಮಾತಿಗಿಳಿಯುವ ಅನುಭವವನ್ನು ನೀಡುತ್ತದೆ. ಅಷ್ಟು ಆಕರ್ಷಕವಾಗಿ ಮೂಡಿಬಂದಿದ್ದು ಅದರೊಳಗೆ ೬೦ಎಂಬ ಸಂಖ್ಯೆಯನ್ನು ನಮೂದಿಸುವ ಮೂಲಕ ೬೦ ವರ್ಷ ತುಂಬಿ ವೃತ್ತಿಯಿಂದ ನಿವೃತ್ತರಾದಂತಹ ಸವಿನೆನಪನ್ನು ಹೊತ್ತು ತಂದಿದೆ. ಒಂದು ರೀತಿಯಲ್ಲಿ ಇದೊಂದು ಅಭಿನಂದನಾ ಗ್ರಂಥವೆನ್ನಬಹುದು.

ಇವರ ಇಡಿ ಕಿಡಿ ಕವಿತೆಗಳೆರಡರಲ್ಲೂ ಹದವರಿತ ವಿಡಂಬನೆ, ನಯವಾದ ಹಾಸ್ಯ, ಹಾಸು ಹೊಕ್ಕಾಗಿದೆ. ಅಂದ ಮಾತ್ರಕ್ಕೆ ಗಂಭೀರತೆ ಇಲ್ಲವೆಂದಲ್ಲ. ಗಹನವಾದ ವಿಚಾರಗಳನ್ನು, ಸೂಕ್ಷ್ಮಾತಿ ಸೂಕ್ಷ್ಮ ಘಟನೆಗಳನ್ನು ತಮ್ಮ ನಗೆ ಬರಹದ ಮೂಲಕ ಹೃದಯ ಮುಟ್ಟುವಂತೆ ತಟ್ಟಿ ಹೇಳುವ ಅಕ್ಷರ ಮಾಂತ್ರಿಕರಿವರು. ಯಾರಿಗೂ ಬೇಸರಿಸದಂತೆ ಸಹಜ ಸುಂದರ ಅಭಿವ್ಯಕ್ತಿಯೊಂದಿಗೆ ತನ್ನ ಮನೋಗತವನ್ನು ತೆರೆದಿಡುವ ಚಾಣಾಕ್ಷತೆ ಇವರಿಗೆ ಕರಗತವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹನಿ ಎಂದರೆ ಡುಂಡಿರಾಜರು ನೆನಪಾಗುತ್ತಾರೆ.
ಇದಕ್ಕೆ ಪುಷ್ಟಿ ತುಂಬುವಲ್ಲಿ ಲಕ್ಷ್ಮಿ ನಾರಾಯಣ ಭಟ್ಟರು
“ದೇವತೆಗಳಲ್ಲಿ ಎಲ್ಲರಿಗೂ ಮೊದಲು ಗಜರಾಜ
ಹನಿಗವಿತೆಗಳಲ್ಲಿ ಎಲ್ಲರಿಗೂ ಮೊದಲು ಡುಂಡಿರಾಜ” ಎಂದಿರುವುದು ಸೂಕ್ತವಾಗಿದೆ. ಇವರ ಕಾವ್ಯಗಳಲ್ಲಿ ಅತಿಯಾದ ಶಬ್ದಗಳ ಹೇರಿಕೆ ಇಲ್ಲ. ಕಡಿಮೆ ಶಬ್ದಗಳಲ್ಲಿ ಅಪಾರ ಸಾರವನ್ನು, ಭಾವವನ್ನು, ಸಂದೇಶವನ್ನು ತುಂಬಿಸಿ ಅದರ ಸೊಬಗು ಸೊಗಡು ಕುಂದದಂತೆ ಕರಾಮತ್ತು ತೋರುತ್ತಾರೆ.

ಸಂದರ್ಭ ಯಾವುದೇ ಇರಲಿ ಇವರ ಬರಹಗಳು ಮಾತ್ರ ಮಾನ್ಯ ವಾಗುವಂತಿರುತ್ತವೆ. ಇವರ ಕಾವ್ಯ ವಸ್ತುವಿನ ಆಯ್ಕೆಯನ್ನು ಗಮನಿಸಿದಾಗ ಕವಿಯು ಯಾವುದೇ ಚೌಕಟ್ಟಿನೊಳಗೆ ಬಂಧಿಯಾಗದೆ, ವೈಯಕ್ತಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ ವಿಚಾರಗಳನ್ನು ನಿರಾತಂಕವಾಗಿ ತಮ್ಮ ವಿಡಂಬನ ಶೈಲಿಯಲ್ಲಿ ವಿಶ್ಲೇಸುತ್ತಾರೆ. ಇವರ ಕೈಯಿಂದ ತಪ್ಪಿಸಿಕೊಳ್ಳುವ ಕಾವ್ಯ ವಿಚಾರವೆ ಇಲ್ಲ ಎನ್ನಬಹುದು. ಅಷ್ಟು ನಿರಾತಂಕವಾಗಿ ಕಾವ್ಯ ವಸ್ತುವನ್ನು ದುಡಿಸಿಕೊಳ್ಳುವಂತಹ ಲೇಖನಿ ಇವರದು.

ಇಲ್ಲಿರುವ ಬರಹಗಳು ಹೆಚ್ಚಾಗಿ ವಾಸ್ತವವನ್ನು ಪ್ರತಿದ್ವನಿಸುತ್ತವೆ. ಮತ್ತೆ ಕೆಲವೊಮ್ಮೆ ನಮ್ಮ ಸುತ್ತ ಮುತ್ತಲಿನ ಅನ್ಯಾಯವನ್ನು ಪ್ರತಿಭಟಿಸುತ್ತವೆ. “ಡುಂಡಿ ವರ್ತಮಾನದಲ್ಲಿ ಹುಟ್ಟುವ ಕವಿತೆ ಬರೆಯುತ್ತಾರೆ. ಜನರಾಡುವ ಮಾತುಗಳನ್ನು ಕವನವಾಗಿಸಿ ಓದುವರ ಹೃದಯ ತಲುಪಿಸುತ್ತಾರೆ” ಎಂಬ ಎಚ್.ಎಸ್.ವಿ. ಅವರ ಮಾತು ಇವರ ಬರಹಗಳಲ್ಲಿ ನಮಗೆ ಕಾಣುತ್ತದೆ.

ಅಕ್ಷರ ಪ್ರೇಮಿಯಾದ ಇವರ ಬರಹದಲ್ಲಿ ಕನ್ನಡಾಂಬೆ ನಲಿಯುತ್ತಾಳೆ. ಕುಣಿಯುತ್ತಾಳೆ, ತಿದ್ದುತ್ತಾಳೆ, ಚಾಟಿ ಬೀಸುತ್ತಾಳೆ, ಹಿಮದಂತೆ ಮಡುಗಟ್ಟುತ್ತಾಳೆ, ಸಮುದ್ರದಂತೆ ಭೋರ್ಗರೆಯುತ್ತಾಳೆ. ಜ್ವಾಲಾಮುಖಿಯಂತೆ ಸಿಡಿಯುತ್ತಾಳೆ, ಆದರೂ ನವಿರಾದ ಪ್ರೀತಿಯಿಂದ ಸಂತೈಸುತ್ತಾಳೆ, ಸೊಗಸಾದ ರಮ್ಯಾ ಭಾವದಿಂದ ಮೋಹ ಪರವಶಗೊಳಿಸುತ್ತಾಳೆ. ಅವರ ಅನನ್ಯ ಅನುಭವದ ಅನುಸಂಧಾನಗಳಾಗಿ ಇವರ ಕಾವ್ಯಗಳು, ಕಾಲ ಗತಿಸಿದರೂ ಮೂಲೆಗುಂಪಾಗದೆ ಎಲ್ಲಾ ಕಾಲಗಳಲ್ಲೂ ಪ್ರಸ್ತುತವಾಗಿ ಉಸಿರಾಡುವ ಗುಣವನ್ನು ಹೊಂದಿವೆ.

ಇವರ ಕವಿತೆಗಳಿಗೆ ಚುಂಬಕಶಕ್ತಿ ಇದೆ. ಅದರಿಂದಲೇ ಓದುಗರ ಮೊಗದಲ್ಲೊಂದು ಮಂದಹಾಸದ ಮಿಂಚೊಂದು ಸುಳಿದಾಡುತ್ತದೆ. ನೇರ ನುಡಿಯ ಕಾವ್ಯಗಳ ಮೂಲಕ ತಪ್ಪನ್ನು ಪ್ರಶ್ನಿಸುವ ಗಟ್ಟಿಗರಿವರು. ನಾವು ಬದುಕನ್ನು ನೋಡುವ ಪರಿ, ನಮ್ಮ ಸಂವೇದನೆಗಳಂತೆ ಡುಂಡಿರಾಜರಿಗೂ ಅದೇ ಬದುಕು ಅದೇ ಸಂವೇದನೆಗಳು. ಆದರೆ ದೃಷ್ಟಿಕೋನದಲ್ಲಿ ವಿಭಿನ್ನತೆಗಳಿವೆ. ಬೇರೆಯವರಿಗೆ ಸಾಧಾರಣ ಎನಿಸುವ ವಿಚಾರ ಅವರಿಗೆ ವಿಶಿಷ್ಟವೆನಿಸುತ್ತದೆ. ಸಪ್ಪೆ ಎನಿಸುವ ಕಾವ್ಯ ವಸ್ತು ಅವರಿಗೆ ರಸಪಾಕದಂತೆ ಎದುರುಗೊಳ್ಳುತ್ತದೆ.
ಅದಕ್ಕೆ ಇಂಬು ನೀಡುವಂತಹ ಕಾವ್ಯಗಳು ಈ ಹೊತ್ತಿಗೆಯಲ್ಲಿವೆ.

ಡುಂಡಿರಾಜರು ಹಾಸ್ಯ ಕವಿಯಾದರೂ ಅವರ ಬರಹಗಳು ಕೇವಲ ಮನೋರಂಜನೆಯ ಸಾಧನಗಳಲ್ಲ. ಅವು ಸಾರ್ವಕಾಲಿಕ, ಸಾಮಾಜಿಕ ಪ್ರಜ್ಞೆಯ ಪ್ರತೀಕಗಳಾಗಿವೆ. ಸಮಾಜದ ಅಂಕುಡೊಂಕುಗಳನ್ನು, ಓರೆಕೋರೆಗಳನ್ನು ಲೋಪದೋಷಗಳನ್ನು ತಮ್ಮ ಚೂಪಾದ ಲೇಖನಿಯ ಮೂಲಕ ಚುಚ್ಚಿ ತಿದ್ದುವ ಹಂಬಲ ಕವಿಯದು. ಆ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವ ಆಶಯದಲ್ಲಿ ಕಾವ್ಯ ರಚಿಸಿರುವದನ್ನು ನಾವಿಲ್ಲಿ ನೋಡಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಡುಂಡಿರಾಜರು ಯಾವುದನ್ನು ಮೂರನೇ ವ್ಯಕ್ತಿಗೆ ಹೇಳದೆ ಸುಧಾರಣೆ ಎನ್ನುವುದು ಮೂಲದಿಂದ ಅಂದರೆ ತನ್ನಿಂದಲೇ ಪ್ರಾರಂಭವಾಗಬೇಕೆಂಬ ಆಶಯ ಹೊಂದಿದ್ದಾರೆ. ತನ್ನನ್ನು ಅದರೊಳಗಿನ ಪಾತ್ರವಾಗಿಸಿಕೊಂಡು ವ್ಯಂಗ್ಯ ಸ್ವರೂಪದಲ್ಲಿ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಅರ್ಥವಾಗುವಂತೆ ವಿಶ್ಲೇಷಿಸಿ ಹೇಳುವುದರಿಂದ ಕವಿಯು ಸಮಾಜದ ಭಾಗವಾಗಿ ವಿಭಿನ್ನ ಒಳಹುಗಳನ್ನು ಸೃಷ್ಟಿಸುತ್ತಾರೆ. ಜನ ಸಮುದಾಯದ ಬದುಕೆ ಕಾವ್ಯವಾದಾಗ ಅಲ್ಲಿ ಸಹಜತೆ ಮೂಡಿ ಆ ಬರಹದ ತೂಕ ದುಪ್ಪಟ್ಟಾಗುತ್ತದೆ. ಅಂತಹ ಘನತೆ ಇಡಿಕಿಡಿ ಕವನಗಳ ಹೈಲೈಟಾಗಿದೆ.

ದುಂಡಿರಾಜರ ವಿನೂತನವಾದ ಕಾವ್ಯ ಸಂರಚನೆ ಕೇವಲ ಚಮತ್ಕಾರಿಕಾ ತಂತ್ರಗಳು ಮಾತ್ರವಲ್ಲ ಇಮ್ಮಡಿ ಮುಮ್ಮಡಿ ನೂರ್ಮಡಿ ಅಂತ:ಸತ್ವವನ್ನು, ಒಳ ನೋಟಗಳನ್ನು ಬಿಂಬಿಸುತ್ತವೆ. ಹಾಗಾಗಿ ಕಾಲಘಟ್ಟದಲ್ಲಿ ಇವರ ಕಾವ್ಯ ಹೆಚ್ಚು ಸ್ಥಿರವಾಗಿ ನಿಲ್ಲುತ್ತದೆ. ಅತಿ ಕಡಿಮೆ ಶಬ್ದಗಳಲ್ಲಿ ಪ್ರಪಂಚವನ್ನು ತೋರಿಸುವ ಸೂಕ್ಷ್ಮಗ್ರಾಹಿಯಿವರು. ಇವರು ಸಂಕೀರ್ಣತೆಗೆ ಜೋತುಬಿದ್ದು ಓದುಗರನ್ನು ಡಿಕ್ಷನರಿ ಹಿಡಿದು ಅರ್ಥ ಹುಡುಕದಂತೆ ಎಚ್ಚರವಹಿಸಿ ಸರಳವಾಗಿ ಕಾವ್ಯ ಕಟ್ಟಿ ಅಗಾಧವಾದ ಅರ್ಥ ವಿಸ್ತಾರ ತುಂಬಿದ್ದಾರೆ.

ಡುಂಡಿರಾಜರ ಅನುಭವ ಸಾಂದ್ರತೆಯಲ್ಲಿ ಹರಳು ಕಟ್ಟಿದ ಸತ್ವದಿಂದ ಕಾವ್ಯ ವಸ್ತುವಿನ ಹರವು ವಿಸ್ತಾರಗೊಳ್ಳುತ್ತಾ ಗಮನಾರ್ಹ ಚಿಂತನೆಗಳನ್ನು, ತಾರ್ಕಿಕ ಆಲೋಚನೆಗಳನ್ನು ಬಿತ್ತರಿಸುತ್ತದೆ. ಇದು ಅವರ ಹೃದಯದ ತಾಜಾ ಮಿಡಿತವಾಗಿದೆ. ಸಹಜ ಚಿಂತನೆಯಲ್ಲಿ ಮೂಡುವ ಇಲ್ಲಿನ ಕಾವ್ಯ ಉತ್ಕೃಷ್ಟವಾಗಿರುತ್ತದೆ. ಅಪ್ರಯತ್ನಪೂರ್ವಕವಾದ ಭಾಷಾ ಹಿಡಿತ, ಕಾವ್ಯಾಭಿವ್ಯಕ್ತಿ, ಜನರ ಮನೋಗತಕ್ಕನುಗುಣವಾಗಿ ವಿಷಯವನ್ನು ಚಿಕ್ಕದಾಗಿ ಚೊಕ್ಕವಾಗಿ ಹೇಳುವ ಮೂಲಕ ಕಿರಿದರಲ್ಲಿ ಹಿರಿಯರ್ಥ ತುಂಬುವಂತಹ ಕುಶಲತೆ ಇವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಸಾಗರವನ್ನು ಬೊಗಸೆಯಲ್ಲಿ ತುಂಬಿಡುವ ಬೊಗಸೆಯಷ್ಟನ್ನು ಸಾಗರದಷ್ಟು ಹರಿಸುವ ಎರಡು ಕಲೆಗಳು ಇವರಲ್ಲಿ ಮಿಳಿತವಾಗಿದ್ದರಿಂದಲೇ ಇವರು ಹನಿಗವನ ಮತ್ತು ಕವಿತೆಗಳೆರಡನ್ನೂ ಕಲಾತ್ಮಕವಾಗಿ ಬಳಸಲು‌ ಸಾಧ್ಯವಾಗಿದೆ.

ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು ಸಮಾಜವನ್ನು ಹದಗೆಡಿಸುವ ಆತಂಕ ಇವರದಾಗಿದ್ದು ತಮ್ಮ ಬರಹಗಳ ಮೂಲಕ ಸಮಾಜವನ್ನು ಸ್ವಾಸ್ಥ್ಯದಡೆಗೆ ಕೊಂಡೊಯ್ಯುವ ಅಭಿಲಾಷೆ ಕವಿಯದಾಗಿದೆ.ವ್ಯಂಗ, ವಿಡಂಬನೆಗಳನ್ನು ದಾಳ ಮಾಡಿಕೊಂಡು ಹಾಸ್ಯವನ್ನು ಬೆರೆಸಿ ಸಮಾಜಕ್ಕೆ ಮಾರಕವಾಗುವ ಹೊಟ್ಟನ್ನು ತಮ್ಮ ಕಾವ್ಯ ಶಕ್ತಿಯಿಂದ ಜರಡಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಜೊಳ್ಳನ್ನು ತೂರದ ಹೊರತು ಗಟ್ಟಿಕಾಳುಗಳಿಗೆ ಮೌಲ್ಯ ಸಿಗದೋ ಹಾಗೆ ದುಷ್ಟತನ ಅಳಿಯದೆ ಒಳ್ಳೆಯತನವನ್ನು ಕಾಣಲಾಗದು ಎಂಬ ಪ್ರಜ್ಞಾವಂತಿಕೆ ಇರುವ ಕವಿ ಡುಂಡಿರಾಜ್ ರವರು. ಅದಕ್ಕಾಗಿ ಸಮಾಜಮುಖಿ ಬರಹಗಳಿಗೆ ಜೀವ ತುಂಬಿದ್ದಾರೆ.

ಕಬ್ಬಿಣದ ಕಡಲೆಯಂತಹ ವಿಷಯವನ್ನು ಉರುಗಡಲೆಯಂತೆ ಸರಳವಾಗಿ ಸ್ಥಿತಪ್ರಜ್ಞೆಯ ಹಾಸ್ಯ ಝರಿ ಹರಿಸಿ ಸಾಮಾನ್ಯಕರಣಗೊಳಿಸುತ್ತಾ ವ್ಯಕ್ತಿಗತ ನೆಲೆಯಿಂದ ಸಾಮಾಜಿಕ ನೆಲೆಗೆ ವರ್ಗಾಯಿಸುತ್ತಾರೆ. ಇವರ ಆಲೋಚನೆಗಳು ವಿಭಿನ್ನ ಮಗ್ಗಲುಗಳ ದಿಗ್ದರ್ಶನ ಮಾಡಿಸುತ್ತವೆ. ಇವರ ಲಕ್ಷ್ಯ ಸೂಕ್ಷ್ಮವಾಗಿ ಇರುವ ಕಾರಣ ಓದುಗರು ಅಲಕ್ಷ್ಯ ತೋರಲು ಅವಕಾಶವಿಲ್ಲ. ಚುವುಟಿ ಹಾಕಲಾರದಷ್ಟು ಪಕ್ವತೆಯ ಗಂಭೀರ ಸಂದೇಶ ಇವರ ಚುಟುಕಗಳಲ್ಲಿ ಅಡಗಿದೆ.

ಡುಂಡಿರಾಜ್ ರವರ ಶಬ್ದ ಭಂಡಾರಕ್ಕೆ ಕೈ ಹಾಕಿದರೆ ಸಾಕು ತಮಾಷೆ ಎಂಬ ಅಸ್ತ್ರದ ಮೂಲಕ ಕಾವ್ಯದ ಹೊನಲು ಪುಂಖಾನುಪುಂಖವಾಗಿ ಹರಿದು ಹಾಸ್ಯಧಾರೆ ಸೃಷ್ಟಿಸುವುದಂತು ಸತ್ಯ. “ಡುಂಡಿರಾಜ್ ಹಾಸ್ಯ ಮಾಡಿದ ಮೇಲೆ ಹಾಸ್ಯ ಮಾಡಲು ಆಗುವುದಿಲ್ಲ” ಎಂಬ ಯು.ಆರ್. ಅನಂತಮೂರ್ತಿ ಯವರ ವಾಣಿಯನ್ನು ನಾವಿಲ್ಲಿ ನೆನೆಸಿಕೊಳ್ಳಬಹುದು.

ಈ ಹೊತ್ತಿಗೆಯಲ್ಲಿರುವ ಬರಹಗಳು ಲಾಸ್ಯದಿಂದ ಕೂಡಿದ್ದು ಒಂದಿಷ್ಟು ತುಂಟತನ ಒಂದಿಷ್ಟು ಪೊಲೀತನ ಮನಮೋಹಕ ರಮ್ಯತೆ ಶೃಂಗಾರ ಭಾವದಿಂದ ಸಮ್ಮೇಳಿತವಾಗಿದ್ದರು ಎಲ್ಲೋ ಸೌಜನ್ಯತೆ ಮೀರಿಲ್ಲ, ಅಶ್ಲೀಲವೆನಿಸುವ ಪದಗಳನ್ನು ಪ್ರಯೋಗಿಸಿಲ್ಲ.

ಈ ಇಡಿ ಕಿಡಿ ಹೊತ್ತಿಗೆಯಲ್ಲಿ ಇಡಿ ಕವನಗಳಷ್ಟೇ ಪ್ರಾಧಾನ್ಯತೆಯನ್ನು ಹನಿಗವನಗಳು ಕೂಡ ಪಡೆದಿವೆ. ಇವರು ಹನಿಗವನ ಮತ್ತು ಕವನಗಳ ಎರಡರಲ್ಲೂ ಬರೆಯುತ್ತಿದ್ದರೂ ಸಹ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ತಂದು ಕೊಟ್ಟಿದ್ದು ಹನಿಕವನಗಳು.
ನಾಲ್ಕು ದಶಕಗಳ ಇವರ ದಣಿವರಿಯದ ನಿರಂತರ ಸಾಹಿತ್ಯ ಸೇವೆಯನ್ನು ಶ್ಲಾಘಿಸುತ್ತಾ ಡಾ. ಎಚ್.ಎಸ್. ಸತ್ಯನಾರಾಯಣ್ ರವರು ತಮ್ಮ “ಕಣ್ಣೋಟ” ವಿಮರ್ಶಾ ಲೇಖನಗಳ ಕೃತಿಯಲ್ಲಿ “ದುಂಡಿರಾಜ್ ಎಂಬ ಕವಿಜೇನಿಗೆ ಹನಿ ಸಂಗ್ರಹಿಸಿ ಸುಸ್ತಾಗಿಯೇ ಇಲ್ಲ. ರೋಬೋಟ್ ತರ ದುಡಿಯುವ ಶ್ರಮಜೀವಿ ಜೇನಿಗಾದರೂ ಸುಸ್ತೆಂಬುದಿರಬಹುದು”. ಆದರೆ ಹನಿ ಬರವಣಿಗೆಯಲ್ಲಿ ಬಿಜಿಯಾಗಿರುವ “ಹನಿ ಬೀ” ಇವರೆಂದಿದ್ದಾರೆ.

೧೯೮೫ ರಿಂದ ಹನಿಗವನಗಳನ್ನು ಬರೆಯಲು ಪ್ರಾರಂಭಿಸಿದೆ. ಮೊದಲು ದಿನಕರ ದೇಸಾಯಿ ಅವರ ಶೈಲಿಯಲ್ಲಿ ಬರೆಯುತ್ತಿದ್ದೆ. ನಂತರ ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಅವರ ಸಲಹೆಯಂತೆ ತನ್ನದೇ ಶೈಲಿಯನ್ನು ರೂಡಿಸಿಕೊಂಡೆ. ಮುಂದೆ ಇದು ಹೊಸ ಪ್ರಕಾರವಾಗಿ ಗುರುತಿಸಿಕೊಂಡಿತು ಎಂದು ತಮ್ಮ ಹನಿ ಪಯಣದ ಯಶೋಗಾಥೆಯನ್ನು ಸ್ವತಃ ಡುಂಡಿರಾದರೆ ಸಂದರ್ಶನ ಒಂದರಲ್ಲಿ ತೆರೆದಿಟ್ಟಿದ್ದಾರೆ. ಹಾಸ್ಯ, ವಿಡಂಬನೆ,ವ್ಯಂಗ್ಯ ಬರಹದ ಚೂಪಾದ ಶೈಲಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ವಿ ಪಯಣ ನಡೆಸುತ್ತಿದ್ದಾರೆ.
ನಮ್ಮ ರಾಷ್ಟ್ರಕವಿ ಜಿ.ಎಸ್.ಎಸ್. ರವರು ಹನಿ ಗವಿತೆಗಳನ್ನು ಕುರಿತು “ಕೊಂಡಿಯಿಲ್ಲದ ಚೇಳುಗಳು” ಎಂದು ಕುಟುಕಿದರು ಡುಂಡಿರಾಜರ ರಚನೆಗಳನ್ನು ಕೊಂಡಾಡುತ್ತಾ “ಸಹಜ ಉಕ್ತಿ ವೈಚಿತ್ರದ ಕವಿ” ಎಂದು ಶ್ಲಾಘಿಸಿದ್ದಾರೆ (ಎಚ್.ಎಸ್. ಸತ್ಯ ನಾರಾಯಣ ಕಣ್ಣೋಟ ಕೃತಿ)

ಹಾಸ್ಯ ಲಾಸ್ಯ ಪ್ರಾಸ ಲಯವಿದ್ದು ಇದೆಲ್ಲದಕ್ಕೂ ಶೋಭೆ ತುಂಬಿ ಹೇಳುವ ವಿಷಯವನ್ನು ಪರಿಣಾಮಕಾರಿಯಾಗಿ ಮಿಂಚಿನಂತೆ ತಲುಪಿಸುವ ಪಂಚ್ ಗಳ ಶಬ್ದ ಚಮತ್ಗಾರಿಕೆ ಇವರ ಹನಿಗಳ ವಿಶೇಷವಾಗಿದ್ದು, ವೇದಿಕೆಗಳಲ್ಲಿ ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಗಳ ಬಾಯಿಂದ ಇವರ ಹನಿಗಳು ಬಾಣದಂತೆ ಚಿಮ್ಮಿ ಗಂಭೀರವಾದಂತಹ ವೇದಿಕೆಗಳಲ್ಲಿನ ವಾತಾವರಣವನ್ನು ತಿಳಿಯಾಗಿಸುತ್ತವೆ ಎಂದರೆ ಉತ್ತರಕ್ಷೆಯಾಗಲಾರದು. ಇದಕ್ಕೆ ಪೂರಕವಾಗಿ ಬಿ. ಎಸ್. ಚಂದ್ರಶೇಖರ್ ಅವರ ಮಾತನ್ನು ನಾವು ಸ್ಮರಿಸಬಹುದು.
“ಭಾಷಣ ಮತ್ತು ಉಪನ್ಯಾಸಗಳಲ್ಲಿ ಅತಿ ಹೆಚ್ಚು ಉಲ್ಲೇಖಿತವಾಗಿರುವ ಕನ್ನಡದ ಮೊದಲ ಕವಿ ಮಂಕುತಿಮ್ಮನ ಕಗ್ಗದ ಡಿವಿಜಿ ನಂತರದ ಸ್ಥಾನ ಡುಂಡಿರಾಜರದು”.

ಓದುಗರಿಗೆ ಆಪ್ತವಾಗುವಂತಹ ಹಾಸ್ಯ ಬರಹಗಳ ಅಗತ್ಯವಿದೆಯೇ ಎಂದರೆ ಬರಿ ಅಗತ್ಯವಲ್ಲ, ಅತಿ ಅಗತ್ಯವೆಂದೇ ನಾನು ಹೇಳುವೆ. ಬದುಕಿನ ಒತ್ತಡ, ದೈನಿಕ ಜಂಜಡಗಳು, ಮಾನಸಿಕ ತೊಳಲಾಟಗಳು, ತಲ್ಲಣಗಳು, ಹಿಂದಿನ ಜನರ ಜೀವನವನ್ನು ಜರ್ಜರಿತಗೊಳಿಸಿ ಹತಾಶ ಭಾವ ಮೂಡಿಸಿ ಸೋತು ಶರಣಾಗತಿ ಬಯಸುವ ಹಂತ ತಲುಪುವ ಸ್ಥಿತಿಯಲ್ಲಿ ಈ ಹಾಸ್ಯವೆಂಬುದು ಅವರಲ್ಲೊಂದಿಷ್ಟು ಚೈತನ್ಯವನ್ನು ಮೂಡಿಸಿ, ಚಿಂತನಶೀಲವಾಗಿ ಯೋಚಿಸಿ, ಲವಲವಿಕೆಯಿಂದ ಕಾರ್ಯ ಪ್ರವೃತ್ತವಾಗಿ ಹೆಗಲಾಗುತ್ತವೆ. ಹಾಸ್ಯ ಪ್ರಜ್ಞೆ ಎಂದು ಪ್ರಯತ್ನ ಕಪೂರ್ವಕವಾಗಿ ಪಡೆಯುವಂಥದ್ದಲ್ಲ ಅದು ದುಂಡಿರಾಜರ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದೆ ಅದರಿಂದ ಅವರ ಬರಹಗಳು ಹಾಸ್ಯ ಮಿಶ್ರಿತವಾದ ಅಂತರ್ದರ್ಶನವನ್ನು ಮಾಡಿಸುತ್ತವೆ. ಇವರ ಸೃಜನಶೀಲ ಮನಸ್ಸು ನಿತ್ಯ ಹೊಸ ಹುಡುಕಾಟಕ್ಕಾಗಿ ತುಡಿಯುತ್ತದೆ. ಅದು ಅವರ ಬರಹಗಳಲ್ಲಿ ಗೋಚರಿಸುತ್ತದೆ. ಪ್ರಯೋಗ ಶೀಲ ಕಾವ್ಯದ ಮೂಲಕ ಬರಹಕ್ಕೆ ಸ್ವಾರಸ್ಯ ತುಂಬುವುದು ಇವರಿಗಿರುವ ಅದ್ಭುತ ಶಕ್ತಿ. ಭಾವಪೂರ್ಣತೆಯೊಂದಿಗೆ ಚಿಂತನಾತ್ಮಕ ಅಭಿವ್ಯಕ್ತಿಯನ್ನು ಗೇಯತೆಯ ಸ್ವರೂಪದಲ್ಲಿ ಹಿಡಿದಿಡುವ ಇವರ ಬರಹಗಳ ಪ್ರಮುಖ ಗೆಲುವಾಗಿದೆ.

ಡುಂಡಿರಾಜ್ ರವರ ಕಿಡಿಗವನ ಮತ್ತು ಇಡಿಕವನಗಳ ಕೆಲವು ಝಲಕ್ ಗಳನ್ನು ನೋಡುವುದಾದರೆ
“ಹೇಗೆ ಗಳಿಸುತ್ತಾರೆ
ಐದು ವರ್ಷಗಳಲ್ಲಿ
ಅಷ್ಟೊಂದು ಐಶ್ವರ್ಯ
ರಾಜ
ಕೀಯ
ಅಂದರೆ
ಕುಬೇರನ ಖಜಾನೆಯ
Keyಯಾ”

ಈ ಹನಿ ರಾಜಕೀಯ ವ್ಯವಸ್ಥೆಯ ಭ್ರಷ್ಟತೆಯನ್ನು ದ್ವನಿಸುತ್ತದೆ. ಜನಹಿತಕ್ಕಿಂತ ಸ್ವಹಿತ ಜೋರಾಗಿ ಸರ್ಕಾರದ ಬೊಕ್ಕಸವೆಲ್ಲ ರಾಜಕಾರಣಿಗಳ ಖಜಾನೆ ಸೇರುವುದನ್ನು ವ್ಯಂಗ್ಯವಾಗಿ ಬರೆದ ಪರಿ ಅನನ್ಯ. ಡುಂಡಿರಾಜರ ಇಂತಹ ಶಕ್ತಿಯನ್ನು ಗುರುತಿಸಿಯೇ “ಚೆನ್ನವೀರ ಕಣವಿ”ಯವರು “ಚುಚ್ಚಿ ನೋಯಿಸದ ಮಧುರ ಹಾಸ್ಯಕ್ಕೆ ನಿಮ್ಮದೇ ಆದ ಮುದ್ರೆ ಇದೆ” ಎಂದು ಡುಂಡಿರಾಜರನ್ನ ಪ್ರಶಂಸಿರುವುದು.

“ಮೇಲಧಿಕಾರಿಗಳು ಮಾತ್ರ ಮಾತನಾಡುತ್ತಿದ್ದರೆ
ಅದು ಸರ್ಕಾರಿ ಕಚೇರಿಯ ಸಭೆ
ಯಾರು ಮಾತನಾಡದೆ ತಲೆತಗ್ಗಿಸಿ ನಿಂತಿದ್ದರೆ
ಅದು ಶೋಕ ಸಭೆ
ಎಲ್ಲರೂ ಮಾತಾಡುತ್ತಾ ಕಿರುಚಾಡುತ್ತಾ ಇದ್ದರೆ
ಅದು ಲೋಕಸಭೆ”

ಇದು ರಾಜಕೀಯ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತೆ ಜೀವ ತಳೆದಿದೆ. ವ್ಯವಸ್ಥೆಯ ಲೋಪದೋಷಗಳನ್ನು ಸಾರಾಸಗಟಾಗಿ ಪ್ರಶ್ನಿಸುವ ಇವರ ದಿಟ್ಟತನದ ಪ್ರತೀಕವಾಗಿ ಗಹನವಾದ ಚಿಂತನೆಯನ್ನು ಸಮಾಜದಲ್ಲಿ ಹುಟ್ಟು ಹಾಕುತ್ತದೆ.

“ಮದುವೆಯ ದಿನ ಎಲ್ಲರೂ
ಮಾತನಾಡಿಕೊಳ್ಳುತ್ತಿದ್ದರು
ವರನ ಕಡೆಯವರು ಭಾರಿ
ದೊಡ್ಡ ಕುಳ
ಮೂರೇ ತಿಂಗಳಲ್ಲಿ ವಧು
ನೇಣಿಗೆ ಶರಣಾದಳು
ಕಾರಣ
ವರದಕ್ಷಿಣೆ ಕಿರುಕುಳ”

ಇಲ್ಲಿ ಕವಿಯು ನಮ್ಮ ಸಮಾಜದ ಅಂಟು ಜಾಢ್ಯವಾದ ವರದಕ್ಷಣೆ ಕಿರುಕುಳದ ಭೀಕರತೆಯನ್ನು ತೆರೆದಿಡುತ್ತಾರೆ. ಮತ್ತೊಂದು ಮುಖದಲ್ಲಿ ಉಳ್ಳವರು ಮತ್ತಷ್ಟು ಲೋಭಿಗಳಾಗಿ ಮಗದಷ್ಟು ಬೇಕೆಂಬ ಆಸೆಯನ್ನು ತೋರಿ ಹೆಣ್ಣಿನ ಬದುಕು ಗೋರಿಯಾಗುವುದನ್ನು ಸಮಾಜದ ಮುಂದೆ ಸೂಚ್ಯವಾಗಿ ಹೇಳಿರುವುದು ಗಮನಾರ್ಹ ಸಂಗತಿಯಾಗಿದೆ.

“ಮೋಜು ಮಾಡಲು
ಇರಬಾರದು
ಮನೆಯಲ್ಲಿ ವಿಘ್ನ
ಅದರಿಂದಲೇ
ಜಾಣ ಗಣಪತಿ
ಆಗಲಿಲ್ಲ ಲಗ್ನ”

“ಓದುಗರನ್ನು ಅಯಸ್ಕಾಂತಿಸಿ ಹಲ್ಲು ಕಿರಿಸುತ್ತಲೆ ತಲೆ ಕೆರೆದುಕೊಳ್ಳುವಂತೆ ಮಾಡುವ ಕವಿ ದುಂಡಿರಾಜ್” ಎಂದು ಕೆ.ಎಸ್.ನಿಸಾರ್ ಅಹಮದ್ ಅವರ ಮಾತು ಈ ವಿಘ್ನ ಲಗ್ನದ ಕವಿತೆ ಓದಿದಾಗ ಸತ್ಯವೆಂದು ನಮ್ಮರಿವಿಗೆ ಬರುತ್ತದೆ.

“ವಿ.ಐ.ಪಿ.ಗಳು
ತೊಡುತ್ತಾರೆ
ಗುಂಡು
ನಿರೋಧಕ ಅಂಗಿ
ನಾನೇನು ಕಡಿಮೆ
ನನ್ನ ರಕ್ಷಣೆಗೆ ಸದಾ
ಗುಂಡು ನಿರೋಧಕ ಅರ್ಧಾಂಗಿ

ಇಲ್ಲಿ ಕವಿಯು ಮಡದಿಯನ್ನು ರಕ್ಷಕಿಯಾಗಿ ಬಿಂಬಿಸಿದ್ದಾರೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ಹಾಸ್ಯವನ್ನು ಉಣಬಡಿಸುವ ಕಲೆ ಇವರಿಗೆ ಅದೆಷ್ಟು ಸರಳವೆಂಬುದನ್ನು ನೋಡಿದಾಗ ಅಚ್ಚರಿಯ ಜೊತೆಗೆ ಹೆಮ್ಮೆಯು ಆಗುತ್ತದೆ.
ಗುಂಡು ನಿರೋಧಕ ಅಂಗಿ ನಾಯಕರನ್ನು ರಕ್ಷಿಸಿದರೆ ಕುಡಿತವನ್ನು ಖಂಡಿಸಿ ಹೆಂಡತಿಯು ತನ್ನ ಗಂಡನ ಚಟಗಳ ವಿರುದ್ಧ ಪ್ರತಿಭಟಿಸುತ್ತಾಳೆ ಎಂಬ ಸಂದೇಶವಿದೆ.ಇಲ್ಲಿ ಹೆಣ್ಣು ತಪ್ಪನ್ನು ತಿದ್ದಲು ಚಂಡಿಯು ಆಗಬಲ್ಲಳು ಎಂಬುದಕ್ಕೆ ಈ ಹನಿ ಸಾಕ್ಷಿಯಾಗಿದೆ.

“ಎಷ್ಟು ಯತ್ನಿಸಿದರು
ಕೂರುವುದಿಲ್ಲ
ನನ್ನ ಸೊಂಟದ ಮೇಲೆ
ಕೊಡ
ತರುಣಿಯರ
ನಡುವೆ ಇಷ್ಟ
ಕೊಡಗಳಿಗೂ ಕೂಡ”

ಈ ಹನಿ ಕವಿಯ ರಸಿಕತೆಯನ್ನು ತೋರುತ್ತದೆ. ಇದು ತುಂಬಾ ನವಿರಾಗಿ ಮೂಡಿ ಬಂದಿದ್ದು ಮೃದು ಮಧುರತೆಯನ್ನು ಸಾರುತ್ತದೆ. ಹೆಣ್ಣಿನ ನಡು ಅದೆಷ್ಟು ಕವಿಗಳನ್ನು ಸೆಳೆದು ಕಾವ್ಯ ಸೃಷ್ಟಿಸಿಕೊಂಡಿಲ್ಲ ಹೇಳಿ ?
ಅದಕ್ಕೆ ಡುಂಡಿರಾಜರು ಹೊರತಾಗಿಲ್ಲ

“ತಮ್ಮ ಕವಿತೆಗಳ ಆಕರ್ಷಣೆ ಹೆಚ್ಚಿಸಲು ಈ ಕವಿ ಬಳಸದೆ ಉಳಿಸುವ ಅಲಂಕಾರ ಸಾಮಗ್ರಿಗಳು ಕಡಿಮೆ. ತಮ್ಮ ತಾಜಾತನದಿಂದ ಬೆರಗುಗೊಳಿಸುವ ಪ್ರಾಸಾನು ಪ್ರಾಸಗಳು, ಚತುರೋಕ್ತಿ, ಶ್ಲೆಷೆ, ಉಪಮೆ, ರೂಪಕಗಳು ಇವರ ಕವಿತೆಗಳಲ್ಲಿ ಧಾರಾಳವಾಗಿ ಕಂಡುಬರುತ್ತವೆ” ಎಂಬ ಬಿ.ಆರ್ ಲಕ್ಷ್ಮಣ್ ರಾವ್ ರವರ ವಿಶ್ಲೇಷಣೆ ಡುಂಡಿರಾಜರ ಕಾವ್ಯ ಶಕ್ತಿಯ ಪರಿಚಯವನ್ನು ಮಾಡಿಸುತ್ತದೆ.

“ಕಾಡು ಕಡಿಯುವಾಗ
ನಮಗೆ ಆಗುವುದಿಲ್ಲ ದುಃಖ
ವೈಶಾಖದಲ್ಲಿ ಕೇಳುತ್ತೇವೆ
WHY ಶಾಖ? WHY ಶಾಖ?”

ಪ್ರಕೃತಿಯೊಂದಿಗೆ ನಮ್ಮ ಬದುಕು. ಆದರೆ ಅದನರಿಯದಂತೆ ಮೂರ್ಖತನದಿಂದ ನಿಸರ್ಗದ ವಿರುದ್ಧದ ಹೆಜ್ಜೆ ಹಾಕಿ ಅದರ ಪರಿಣಾಮ ಎದುರಿಸುವಾಗ ಪರಿತಪಿಸುವ ನಮ್ಮ ನಡೆಯನ್ನು ಕವಿಯು ಹೀಗೆ ಟೀಕಿಸುತ್ತಾರೆ.

“Biಚೀಯವರ ಗದ್ಯದಲ್ಲಿನ ಹಾಸ್ಯದ ಘನತೆ ಪದ್ಯ ರೂಪಕ್ಕೆ ಇಳಿದರೆ ಎಷ್ಟು ಸುಂದರವಾಗಿರಬಲ್ಲದೊ ಅಷ್ಟು ಘನತೆ ಮತ್ತು ತಮಾಷೆ ಡುಂಡಿ ಅವರ ಚುಟುಕುಗಳಲ್ಲಿ ಇರುತ್ತದೆ” ಎಂಬ ಟಿ.ಎನ್. ಸೀತಾರಾಮ್ ಅವರ ಅಭಿಪ್ರಾಯವನ್ನು ಇಂತಹ ಕವಿತೆಗಳನ್ನು ಓದಿದ ಮೇಲೆ ಒಪ್ಪದಿರಲಾದೀತೆ ?

“ತನ್ನ ಮಗನ ಬಗ್ಗೆ
ತಾಯಿ ಗೌರಿಗೆ
ಎಷ್ಟೊಂದು
ಕಾಳಜಿ ಮಮತೆ
ಹಿಂದಿನ ದಿನವೇ ಬಂದು
ಎಲ್ಲ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸುವಳು ಮಾತೆ”

“ಹೊರಗಡೆ ಭರ್ಜರಿ
ಬಣ್ಣದ ಅಂಗಿ
ಹರಿದಿವೆ ಒಳಗಿನ
ಬನಿಯನ್ನು
ಹೊಡಿಸುವವನು
ನಗೆ ಮಾತುಗಳೊಹಗೆ
ನೋವು ವಿಷಾದ
ಕಂಬನಿಯನ್ನು”

“ದುಂಡಿರಾಜ ಮಧ್ಯಮ ವರ್ಗದ ಏಕತಾನದ ಬದುಕಿನ ಸರಳ ಸಾಧಾರಣ ಸಂಗತಿಗಳನ್ನು ವಕ್ರದೃಷ್ಟಿಯಿಂದ ನೋಡಿ ನಗಿಸುವ ಕವಿ. ಅವರ ಕಾವ್ಯದ ವಿದೂಷಕ ಬಹಿರಂಗದಲ್ಲಿ ನಗುತಿದ್ದರೂ ಅವರ ಅಂತರಂಗದಲ್ಲಿ ವಿಷಾದ ತುಂಬಿದೆ” ಎಂಬ “ಮುರಳಿದರ ಉಪಾಧ್ಯ”ರ ಮಾತಿಂದ ಇವರಿಗೆ ಮಧ್ಯಮ ವರ್ಗದ ಜನರ ಬದುಕಿನ ಸಂಘರ್ಷಗಳ ಅರಿವಿದೆ ಎಂದು ತೋರಿಸುತ್ತದೆ.
ಆ ಅನುಭವದಂದಲೆ ಈ ಕಾವ್ಯ ಹುಟ್ಟಿದೆ.

“ಹೊದಿಕೆ ಏಕೆ
ಬೇಸಿಗೆಯಲ್ಲಿ
ವಿಪರೀತ
ಸೆಕೆ ಇರುವಾಗ,
ಹೊದಿಕೆ ಬೇಕೆ
ಚಳಿಗಾಲದಲ್ಲಿ
ಪಕ್ಕದಲ್ಲೇ
ಸಖಿ ಇರುವಾಗ”

“ಹೇಗೆ ತಡೆಯಲಿ
ಮೈ ನಡುಗುವ ಚಳಿ ?
ಇಲ್ಲ ನನ್ನ ಬಳಿ
ಹೊದಿಯಲು ಕಂಬಳಿ
ಆದ್ದರಿಂದ ಪ್ರಿಯೆ
ನೀನೆ Comeಬಳಿ”

ತುಂಬಾ ಸೊಗಸಾದ ರಮ್ಯ ಸಾಲುಗಳಲ್ಲಿ ಕವಿಯ ತುಂಟತನ ಗೋಚರಿಸುತ್ತದೆ. ಹೆಣ್ಣು ಗಂಡಿನ ಸರಸ ಸಲ್ಲಾಪದ ಸವಿಕ್ಷಣಗಳನ್ನು ತಮ್ಮ ಸುಂದರ ಪದ ಪುಂಜಗಳಿಂದ ಪೋಣಿಸಿ ಕಾವ್ಯವನ್ನು ಅಲಂಕರಿಸಿದ್ದಾರೆ.
“ದುಂಡಿರಾಜರ ಸಾಹಿತ್ಯದಲ್ಲಿ ಸುಸಂಸ್ಕೃತ ರಸಿಕತೆ ಮತ್ತು ಅಖಂಡ ಜೀವನಾನುಭವದ ಸವಿಯಿದೆ” ಎನ್ನುವ ಶ್ರೀನಿವಾಸ ವೈದ್ಯರ ಮಾತು ಈ ಮೇಲಿನಂತಹ ಕಾವ್ಯಗಳನ್ನು ಅನೇಕ ಕಾವ್ಯ ಓದಿಯೇ ಉದ್ಘಾಟಿಸಿರಬಹುದು.

“ಇವರು ದೊಡ್ಡ ಸಾಹೇಬರು
ಸುತ್ತಲೂ ಹತ್ತು ಹಲವು ವೃತ್ತಗಳು”


ಈಗಿಲ್ಲ ಇವರ ಸುತ್ತ
ಒಂದೇ ಒಂದು ವೃತ್ತ
ಇವರೀಗ ನಿವೃತ್ತ”

ಈ ಕವಿತೆ ಮನುಷ್ಯನ ಅವಕಾಶವಾದಿತನದ ಪ್ರತಿಬಿಂಬವಾಗಿದೆ. ಅಧಿಕಾರ ಹಣ ಇದ್ದಾಗ ನಮ್ಮ ಸುತ್ತಲೂ ಮುತ್ತಿಕೊಳ್ಳುವ ಜನ ಅದು ಇಲ್ಲವಾದಾಗ ನಮ್ಮಿಂದ ಹೇಗೆ ದುಡಿದು ದೂರ ಸರಿಯುತ್ತಾರೆ ಎಂಬುದು ಒಂದು ಮುಖವಾದರೆ, ಅಧಿಕಾರವಿದ್ದಾಗ ಒಳಿತು ಮಾಡಿದರೆ ನಂತರವೂ ಜನ ಪ್ರೀತಿಯಿಂದ ಆವರಿಸುತ್ತಾರೆಂಬ ಮತ್ತೊಂದು ಮುಖವನ್ನು ನೋಡಬಹುದಾಗಿದೆ.

“ಕವಿತೆ ಬರೆಯಲು ಬೇಕೇ ಬೇಕು
ಕುತ್ತಿಗೆಯ ಮೇಲೊಂದು ತಲೆ
ಮತ್ತು ತಲೆಯೊಳಗೆ ಕವಿತೆಯ ಸೆಲೆ”

ಕಾವ್ಯ ರಚನಾ ಶಕ್ತಿ ಎಲ್ಲರಿಗೂ ಸುಲಭವಾಗಿ ದಕ್ಕುವಂತದ್ದಲ್ಲ. ಅದೊಂದು ಧ್ಯಾನದಂತೆ. ಮನದೊಳಗಿನ ಭಾವಗಳ ಅಭಿವ್ಯಕ್ತಿಯೇ ಕಾವ್ಯ. ಅದನ್ನು ಬರೆಯಲು ತಲೆಯೊಳಗೆ ಒಳಗೊಂದಿಷ್ಟು ಅರಿವಿನ ಸರಕು ಮತ್ತು ಕವಿತೆಗೆ ಭಾವ ತುಂಬುವ ಅಗತ್ಯವಿದೆ ಎಂದು ಕವಿತೆ ಆಶಿಸುತ್ತದೆ.

“ಖಡ್ಗವಾಗಲಿ ಕಾವ್ಯ ಎಂಬ ಘೋಷಣೆ ನಂಬಿ
ಮುನ್ನುಗ್ಗಬೇಡಿ ಬರಿ ಪೆನ್ನು ಹಿಡಿದು
ಪರಮಾಣು ಬಾಂಬುಗಳ ಯುಗದಲ್ಲಿ ಇದ್ದೇವೆ
ಖಡ್ಗವಾದರೂ ಕಾವ್ಯ ಏನು ಕಡಿಯುವುದಿಲ್ಲ”

ಇದು ಖಡ್ಗಕ್ಕಿಂತ ಲೇಖನಿ ಹರಿತವಾದದ್ದು ಎಂಬ ಘೋಷಣೆಯು ಪ್ರಸ್ತುತ ಕಾಲಮಾನದಲ್ಲಿ ಹೇಗೆ ಮೌಲ್ಯವನ್ನು ಶಕ್ತಿಯನ್ನು ಕಳೆದುಕೊಂಡು ಹಣ ಅಧಿಕಾರಗಳ ದರ್ಪದಡಿಯಲ್ಲಿ ಸಿಲುಕಿ ಶರಣಾಗುತ್ತಿದೆ ಎಂಬ ವಿಷಾದವನ್ನು ಇದು ತೆರೆದಿಡುತ್ತದೆ.

ಗಿರಿಶಿಖರಗಳಿಗೆ
ಅಭ್ಯಂಜನ
ಮಾಡಿಸುತ್ತಿದೆ ಬಾನು
ಮೋಡಗಳು
ಸಾಬೂನು
ಕವಿ ಕಲ್ಪನೆ ಅದೆಷ್ಟು ಅಮೋಘ ಅದ್ಭುತ. ಪ್ರಕೃತಿಯ ಪ್ರತಿ ಅಂಶದಲ್ಲೂ ವಿಶೇಷತೆ ಗುರುತಿಸುವುದು ನಿಸರ್ಗಾರಾಧನೆಯ ಮನಸ್ಸುಳ್ಳ ಹೃದಯಗಳಿಗೆ ಮಾತ್ರ ಸಾಧ್ಯ.ಅಂತಹ ರಚನೆಗಾಗಿ‌ ಡುಂಡಿಯವರನ್ನು ಅಭಿನಂದಿಸಲೆಬೇಕು. ಈ ಕವಿತೆ ಓದುತ್ತಿದ್ದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ.

“ಗೊತ್ತಿದ್ರೆ ಹೇಳ್ತೀನಿ
ಇಲ್ದಿದ್ರೆ ಆಗಲ್ಲ
ಏನ್ ಕೇಳಿದ್ರು ಹೇಳೋಕೆ
ನಾನೇನು ಗೂಗಲ್ಲಾ”

ಇಂದಿನ ತಂತ್ರಜ್ಞಾನದ ಪ್ರಗತಿಯ ಪ್ರತೀಕವಾಗಿದೆ.ಇಂದು ನಾವು ಅದರ‌ ಮೇಲೆ ಅದೆಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಈ ಕವಿತೆ ತಿಳಿಸುತ್ತದೆ. ನಮಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆಯಲು ಸರ್ಚ್ ಎಂಜಿನ್ ಗಳು ಸಹಕಾರಿಯಾಗುತ್ತವೆ
ಎಂಬರಿವು ನಮಗಿದೆ.

“ಹಬ್ಬದ ಸಲುವಾಗಿ
ಒಳ ಉಡುಪುಗಳ ಮೇಲೆ
ಬಾರೀ ದರ ಕಡಿತ
ನಂತರ ಗೊತ್ತಾಗುತ್ತದೆ
ಒಳಗಡೆ
ಭಾರೀ ಕಡಿತ”
ವಣರಂಜಿತ ಜಾಹೀರಾತುಗಳು ಜನರ ಮನಸ್ಸನ್ನು ಸೆಳೆದು ರಿಯಾಯಿತಿ ಹೆಸರಲ್ಲಿ ಮಾಡುವ ಮೋಸದ ಕುರಿತು ಹುಷಾರಾಗಿರಬೇಕೆಂದು ಇದು ನಿರ್ದೇಶಿಸುತ್ತದೆ. ಉತ್ತಮ ಗುಣಮಟ್ಟದ್ದು ಉತ್ತಮ ಬೆಲೆಯನ್ನೇ ಆಶಿಸುತ್ತದೆ. ಇಂತಹ ಮರಳು ಮಾಡುವ ಜಾಹೀರಾತುಗಳಿಗೆ ಮಾರುಹೋಗಿ ಮಕ್ಮಲ್ ಟೋಪಿ ಹಾಕಿಸಿಕೊಂಡು ತೊಂದರೆ ಪಡಬಾರದೆಂಬ ಕವಿಯ ಕಿವಿಮಾತಿದು.

“ನನ್ನವಳ ಕಣ್ಣುಗಳು
ತಾವರೆಯ ಹೆಸಳು
ಕಣ್ಣು ತೆರೆಯಲು
ಬೀಳಬೇಕು ಬಿಸಿಲು”

ಇಲ್ಲಿ ಕವಿಯು ಸರಳವಾಗಿ ಸೊಗಸಾಗಿ ಸಖಿಯನೊಗಳುತಲೆ‌ ಗಂಭೀರವಾದ ವಿಷಯವನ್ನು ಚರ್ಚೆಗೆ ತಂದಿದ್ದಾರೆ. ನಮ್ಮ ಪೂರ್ವಜರು ಮುಂಜಾವಿನಲ್ಲಿ ಎದ್ದು ದೈನಿಕ ಕಾರ್ಯಗಳಲ್ಲಿ ತೊಡಗುವ ಶ್ರಮಜೀವಿಗಳಾಗಿದ್ದರು. ಆದರೆ ನಾವಿಂದು ಸೋಮಾರಿಗಳಾಗಿ ಅನಾರೋಗ್ಯ ಪೂರಿತ ಅಭ್ಯಾಸಗಳನ್ನು ರೂಢಿಸಿಕೊಂಡು ಮಲಗುವ ಮತ್ತು ಏಳುವ ವಿಧಾನಗಳಲ್ಲಿ ಮಾಡಿಕೊಂಡಿರುವ ಮಾರ್ಪಾಡುಗಳ ಪ್ರತಿಬಿಂಬ ಈ ಕವಿತೆ.

“ಯಾವಾಗಲೂ ಇವಳ ಕಿವಿಗೆ
ಅಂಟಿಕೊಂಡೆ ಇರುತ್ತದೆ ಮೊಬೈಲು
ಗಂಟೆಗಟ್ಟಲೆ ಮಾತನಾಡಿದರು
ಮುಗಿಯುವುದಿಲ್ಲ ಕಾಲು
ಊಹುಂ ಇದು ಕಾಲಲ್ಲಿ
ಇದು ಫೆವಿಕಾಲ್”

ಇದು ಮೊಬೈಲ್ ನ ಮಿತಿಯನ್ನು ಸೂಚಿಸುತ್ತದೆ. ಈ ಮೊಬೈಲ್‌ನಿಂದ ಏನೆಲ್ಲಾ ಅನುಕೂಲಗಳಿದ್ದರೂ ಅನಾನುಕೂಲಗಳಿಂದ ಹೊರತಾಗಿಲ್ಲ. ಹಾಗಂತ ಬಳಕೆ ಬಿಡಲು ಆಗದು. ಅದಕ್ಕೆ ವ್ಯಸನಿಗಳಾಗದೇ ಜಾಗೃತವಾಗಿ ಅಗತ್ಯಾನುಸಾರ ಬಳಸಬೇಕೆಂದು ಸಂದೇಶ ನೀಡಿದ್ದಾರೆ.

“ಚಂದ್ರಲೋಕದಲ್ಲೂ ಗುಳಿಗಳಿವೆ ನಮ್ಮಲ್ಲಿದ್ದರೆ ತಪ್ಪೆ
ಕಸವನ್ನು ಹೊಂಡಕ್ಕೆ ಎಸೆದರಾಯಿತು
ಬೇಡ ಪ್ರತ್ಯೇಕ ತಿಪ್ಪೆ?
ಹೀಗೂ ಸಮರ್ಥನೆ ನೀಡಬಹುದು
ನಗರ ಸಭೆಯವರು ನಾಳೆ”

ಈ ಕವಿತೆ ನಮ್ಮ ವ್ಯವಸ್ಥೆಯ ಅಣಕು ಬರಹವಾಗಿದೆ. ಮಾಡುವ ಕೆಲಸವನ್ನು ನಿಷ್ಠೆ ಪ್ರಾಮಾಣಿಕತೆಯಿಂದ ನ್ಯಾಯಯುತ ವಾಗಿ ಮಾಡದೆ ಯೋಜನೆಗಳ ಹೆಸರಲ್ಲಿ ಹಣವನ್ನು ಗುಳುಂ ಮಾಡಿ ಸಾರ್ವಜನಿಕರಿಗೆ ಸಬೂಬು ನೀಡುವ ಪರಿಯನ್ನು ಕವಿಯಲ್ಲಿ ಹೀಗೆ ನಿರೂಪಿಸಿದ್ದಾರೆ.

“ಅವಳ ಕಣ್ಣುಗಳಲ್ಲಿ
ಮೀನು ಕಂಡ ಕವಿ
ಕವಿತೆ ಬೆಲೆಯ ಬೀಸಿದ
ಅವಳ ಕಣ್ಣುಗಳಲ್ಲಿ
ಹೂವು ಕಂಡ ಕವಿ
ದುಂಬಿಯಂತೆ ಅಲೆದ”

ಹೆಣ್ಣಿನ ಕಣ್ಣನ್ನು ಮೀನಿಗೆ ಹೋಲಿಸಿ ಅದರಿಂದ ಆಕರ್ಷಿತನಾಗಿ ಕವಿತೆ ಬರೆಯುವ ಕವಿ ಅವಳ ಕಣ್ಣಲ್ಲಿ ಜಿನಗುವ ಪ್ರೇಮ ರಸವನ್ನು ಬಯಸುವ ದುಂಬಿಯಾಗಿದ್ದಾನೆ ಎನ್ನುವಲ್ಲಿ ಹೆಣ್ಣು ಕವಿ ಕಾವ್ಯಕ್ಕೆ ಸ್ಪೂರ್ತಿಯ‌ ಚಿಲುಮೆ‌ ಎಂಬ ಸಾರ್ವಕಾಲಿಕ ಸತ್ಯವನ್ನು ಗುಂಡಿಯಲ್ಲಿ ಕಾವ್ಯದಲ್ಲಿ ನಾವು ಮತ್ತೊಮ್ಮೆ ನೋಡಬಹುದು.

“ನನ್ನದು ಪೆನ್ನು ಹಿಡಿದು
ಬರೆವ ಕವನ
ನಿನ್ನದು ಕಣ್ಣು ಹೊಡೆದು
ಕರೆವ ಕವನ”
ಇಲ್ಲಿ ನಲ್ಲೆಯ ಕಂಗಳ ಪ್ರೀತಿಯ ಸೆಳೆತ ಕವಿಗೆ ಕಾವ್ಯದಂತೆ ಕಂಡಿದೆ. ನಾನು ಲೇಖನಿಯಿಂದ ಗೀಚಿ ಹೇಳಲು ಹೋರಾಟ ವಿಚಾರವನ್ನು ನೀನು ಕೇವಲ ಕಣ್ಣುಗಳಲ್ಲಿ ರವಾನಿಸಬಲ್ಲೆ ಅಂತಹ ಅದ್ಭುತ ಶಕ್ತಿ ನಲ್ಲೆಯ ಪ್ರೀತಿ ತುಂಬಿದ ಕಂಗಳಿಗಿದೆ ಎಂಬುದು ಕವಿ ಭಾವ.

“ಎಲೆಗಳೆಲ್ಲ ಉದುರಿ
ಪೂರ್ತಿ ಬೋಳಾಗಿದೆ
ಮರಗಳ ಶಿರ
ಬ್ಲೇಡು ಕತ್ತರಿ ಇಲ್ಲದೆ
ಎಷ್ಟು ಚೆನ್ನಾಗಿ ಕ್ಷೌರ
ಮಾಡಿದ್ದಾನೆ ಶಿಶಿರ”

ಸ್ವಾಭಾವಿಕ ಸೌಂದರ್ಯ ಮತ್ತು ಕೃತಕ ಸೌಂದರ್ಯಗಳ ಶಕ್ತಿಯ ದಿಗ್ದರ್ಶನ ಈ ಕವಿತೆಯಲ್ಲಿ ಅಡಗಿದೆ. ಇಲ್ಲಿ ಎಲೆಗಳುದುರಿದ ಮರ ಕವಿಗೆ ಕ್ಷೌರ ಮಾಡಿದ ಮನುಜನಂತೆ ಕಂಡಿದೆ.ಇದು ಡುಂಡಿರಾಜ್ ರ ಪ್ರಜ್ಞೆಯು ಪ್ರತೀಕ.

“ಸವತಿಯ ಹಾಗೆ ನೋಡಬೇಡ ಪ್ರಿಯೆ
ಗೆಳತಿಯಂತೆ ಕಾಣು
ವಿನಾಕಾರಣ ದೋಷಿಸಬೇಡ
ನನ್ನ ಕವಿತೆಯನ್ನು”

ಎಲ್ಲಾ ಕವಿಗಳಿಗಿರುವ ಸಹಜ ಸವಾಲಿದು. ಕವಿ ಕಾವ್ಯಯಾನದಲ್ಲಿ ವಿಹರಿಸಲು ಪ್ರಶಾಂತತೆ, ಏಕಾಂತತೆ ಬಯಸುವನು. ಅದರಿಂದ ಸಹಜವಾಗಿ ಸಂಗಾತಿ ಕವಿತೆ ಮೇಲೆ ಹುಸಿಗೋಪ ತೋರುವುದು. ಇದನ್ನರಿತ ಕವಿ ಕವಿತೆಯನ್ನು ಸವತಿಯಂತೆ ಕಾಣದೆ ಗೆಳತಿಯಂತೆ ನಡೆಸಿಕೊ ಎಂದು ಸಲಹೆ ನೀಡುತ್ತಾರೆ.

“ಇರಲಿ ಬಿಡಿ; ಕವಿತೆಗಳು ಭಾವಜೀವಿಗಳು
ಆದರೆ ಕವಿ ಕಾವ್ಯ ಬೇಡದ ಜನರು
ಬಿಡುತ್ತಾರೆಯೇ ಮರಗಳನ್ನಾ
ಅಗೆಯದೆ ಸಿಗುವ ಹಸಿರು ಹೊನ್ನು”

ಇದು ಕವಿಯ ಪ್ರಕೃತಿ ಆರಾಧನೆ ಮತ್ತು ಪರಿಸರವನ್ನು ಸ್ವಾರ್ಥಕ್ಕಾಗಿ ಬಲಿಕೊಡುವ ಜನರ ದುರ್ವತನೆಯನ್ನು ಸೆರೆ ಹಿಡಿದಿದೆ. ಗಿಡಮರಗಳು ಕವಿಗೆ ಕಾವ್ಯದ ಉಸಿರು ಅದರ ಸೊಬಗನ್ನು ವರ್ಣಿಸಿ ಆಸ್ವಾದಿಸುವರು. ಆದರೆ ಆಸೆಬುರುಕನಿಗೆ ಅದೊಂದು ಲಾಭ ಮಾಡಿಕೊಡುವ ಸರಕಷ್ಟೆ. ನಿಸರ್ಗದ ಮಹಿಮೆ ಅರಿಯದೆ ಮರದ ಬುಡಕ್ಕೆ ಕೊಡಲಿ ಪೆಟ್ಟುಕೊಟ್ಟು ಶ್ರಮವಿಲ್ಲದೆ ಬಂಗಾರವನ್ನು ಪಡೆಯುತ್ತಾನೆ ಎಂಬ ವಿಷಾದಿಸುತ್ತಾರೆ.

ಹೀಗೆ ಇವರ ಕವಿತೆಗಳು ಒಂದಕ್ಕಿಂತ ಮತ್ತೊಂದು ವಿಭಿನ್ನ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಸಮಾಜದ ವೈವಿಧ್ಯಮಯ ಮುಖಗಳ ಪರಿಚಯ ಮಾಡಿಸುತ್ತವೆ. ಇವರ ಕವಿತೆಗಳಲ್ಲಿ ಕೆಲವು ಕಥನ ಕಾವ್ಯ ರೂಪದಲ್ಲಿ ಮೂಡಿಬಂದಿದ್ದು ಗಮನ ಸೆಳೆಯುತ್ತವೆ. ಅಲ್ಲಲ್ಲಿ ಅಗತ್ಯಾನುಸಾರ ಇಂಗ್ಲಿಷ್ ಪದಗಳು ಬಳಕೆ ಕಾವ್ಯದ ವಿಭಿನ್ನತೆ ಒದಗಿಸಿದೆ. ಬಿ‌.ಆರ್. ಲಕ್ಷ್ಮಣರಾವ್, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪನವರ ಕುರಿತು ಮೂಡಿಬಂದಿರುವ ಅಭಿನಂದನಾ ಕಾವ್ಯಗಳು ಮತ್ತಷ್ಟು ಮೆರುಗು ನೀಡಿವೆ.ಒಟ್ಟಾರೆ ಈ ಶಬ್ದಗಾರುಡಿಗನ ಕಾವ್ಯದ ಗರಡಿಯೊಳಗೆ ಸಿಲುಕಿ ಹೊರಹೊಮ್ಮಿದ ಬರಹಗಳು ಜಟ್ಟಿಯಂತೆ ಗಟ್ಟಿಯಾಗಿ, ಎಲ್ಲರಿಗೂ ಆಪ್ತವಾಗಿ ಮನದೊಳಗೆ ಎಂದು ಮರೆಯದ,ಮಾಸದ ತಾಜಾ ಅಚ್ಚೆಯಾಗಿ ಉಳಿಯುತ್ತವೆ.

“ನಗಿಸುತ್ತಿರಲಿ ನಮ್ಮ ಡುಂಡಿ
ಬರೆಯುತಿರಲಿ ಪದ್ಯ ದಂಡಿ ಘಮಘಮಿಸಲಿ ತೋಟದಲ್ಲಿ ದುಂಡು ಮಲ್ಲಿಗೆ
ಭುವನೇಶ್ವರಿ ಮುಡಿಯ ತುಂಬ ಡುಂಡಿಮಲ್ಲಿಗೆ”

ಎಂಬ ಖ್ಯಾತ ಲೇಖಕರಾದ ಜೋಗಿಯವರ ಪ್ರಶಂಸೆಯೊಂದಿಗೆ ಶ್ರೀಯುತರು ಚಿರಕಾಲ ನಗುವಿನ ಚಟಾಕಿ ಹಾರಿಸಿ ಎಲ್ಲರ ತನು ಮನಗಳನ್ನು ತೇಲಿಸಲಿ ಎಂದು ಆಶಿಸುವೆ.

-ಅನುಸೂಯ ಯತೀಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x