ಲೇಖನ

ಮಂಜಿನಂತೆ ಮರೆಯಾದ ಮಂಜುಳಾ: ಎಂ. ಜಿ. ರವೀಂದ್ರ

ಚಂದನವನದ ಮಂಜುಳಾ ರವರು ಮರೆಯಾಗಿ 35 ವರ್ಷಗಳು ಗತಿಸಿದರೂ ಅವರ ಮನೋಜ್ಞ ಪಾತ್ರಗಳು ಇಂದಿಗೂ ಜೀವಂತ. ಸ್ವಾಭಿಮಾನಿ ಹೆಣ್ಣಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಸುಮಾರು 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಕನಸು, ಸಂಪತ್ತಿಗೆ ಸವಾಲ್, ಮೂರುವರೆ ವಜ್ರಗಳು ಮುಂತಾದ ಚಿತ್ರಗಳಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸಿ ತಮ್ಮ ಅಭಿನಯ ಪ್ರೌಢ ಪ್ರತಿಭೆ ಪ್ರದರ್ಶಿಸಿ ಇಂದಿಗೂ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆಗೆ ಅತ್ಯುತ್ತಮ ವಾಗಿ ಆಭಿನಯಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನೂ ಪಡೆದಿದ್ದಾರೆ.

ನನ್ನ ಬಾಲ್ಯದ ದಿನಗಳಲ್ಲಿ ಮಂಜುಳಾ ರವರನ್ನು ತುಂಬಾ ಹತ್ತಿರದಲ್ಲಿ ನೋಡಿದ್ದೇನೆ. ನನ್ನ ಸೋದರಮಾವ ಮತ್ತು ಮಂಜುಳಾ ರವರು ಬೆಂಗಳೂರು ಜಯನಗರ ನ್ಯಾಷನಲ್ ಕಾಲೇಜ್ ನಲ್ಲಿ ಪದವಿಯಲ್ಲಿ ಸಹಪಾಠಿಗಳು. ಜಯನಗರ 9ನೇ ಬ್ಲಾಕ್ ನಲ್ಲಿ ನಮ್ಮ ಅಜ್ಜಿ ಮನೆ. ರಾಗೀಗುಡ್ಡ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ಇದ್ದಾಗಲೆಲ್ಲ ಮುಂಚಿತವಾಗಿ ಫೋನ್ ಮಾಡಿ ಬರುತ್ತಿದ್ದರು. ಆಗ ಫೋನ್ ಅಂದ್ರೆ Landline ಮಾತ್ರ. ಸ್ಥಳೀಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ನನ್ನ ಸೋದರ ಮಾವನವರನ್ನು, ಅಜ್ಜಿ, ತಾತ ಎಲ್ಲರನ್ನೂ ಯಾವ ಹಮ್ಮು ಬಿಮ್ಮು ಇಲ್ಲದೆ ಮಾತಾಡಿಸಿಕೊಂಡು ಹೋಗುತ್ತಿದ್ದರು ಮಂಜುಳಾ ರವರು.

ಒಂದು ಘಟನೆ ಇಂದಿಗೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಹೃದಯಿ ಓದುಗರಲ್ಲಿ ಹಂಚಿಕೊಂಡರೆ ತಪ್ಪೇನಿಲ್ಲ ಎಂದುಕೊಂಡಿರುವೆ. ನಾನಾಗ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅನಿಸುತ್ತೆ. ಅಜ್ಜಿ, ನಾನು ರಾಗೀಗುಡ್ಡ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆವು. ಮನೆಯಲ್ಲಿ ಇದ್ದ ಫೋನ್ ಅಂದ್ರೆ ಲ್ಯಾಂಡ್ ಲೈನ್ 2-3ದಿನಗಳಿಂದ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಯಾರದೇ ಕಾಲ್ ಬಂದರೂ ಗೊತ್ತಾಗುತ್ತಿರಲಿಲ್ಲ. ಮೊದಲೇ ಹೇಳಿದಂತೆ ಚಿತ್ರೀಕರಣ ರಾಗೀಗುಡ್ಡದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. ಅಂದು ಸಹಾ ಗುಡ್ಡದ ಮೆಟ್ಟಿಲೇರಿ ದೇವರ ದರ್ಶನ ಮಾಡಲು ಪ್ರಾಂಗಣ ಪ್ರವೇಶಿಸಿದೆವು. ದ್ವಾರದಲ್ಲಿ ಗೇಟ್ ಹಾಕುತ್ತಿದ್ದಾಗ ನಮಗೆ ಅಚ್ಚರಿ. ಒಳಗೆ ಮಂಜುಳಾ ರವರು ಇದ್ದರು. ನನ್ನ ಅಜ್ಜಿ ಯವರನ್ನು ನೋಡಿ “ಅಮ್ಮ ಫೋನ್ ಮಾಡಿದ್ದೆ ಯಾರೂ ರಿಸೀವ್ ಮಾಡಿಲ್ಲ” ಎಂದಾಗ ಫೋನ್ ಕೆಟ್ಟಿರುವ ವಿಷಯವನ್ನು ಅಜ್ಜಿ ಹೇಳಿದರು. ನನ್ನನ್ನು ನೋಡಿ “ಪುಟ್ಟ ರವಿ ಬಂದಿದ್ದಾನೆ “ಎಂದು ಹೇಳಿ ದೇವಾಲಯದ ಒಳಗಡೆ ನಮ್ಮನ್ನು ಬರಮಾಡಿಕೊಂಡರು.

ಅಲ್ಲಿ ಸೀಮಿತ ಸಂಖ್ಯೆಯ ಜನರು ಮಾತ್ರ ಇದ್ದರು. ಜನಸಂದಣಿ ಆಗಬಾರದೆಂದು ಎಲ್ಲಾ ಕಡೆ ಗೇಟ್ ಗಳನ್ನು ಹಾಕಿದ್ದರು. ಹಿರಿಯ ಕಲಾವಿದರಾದ ಲೀಲಾವತಿಯವರು ಮಂಜುಳಾ ರವರ ಜೊತೆಗೆ ಕುಳಿತಿದ್ದರು. ಶೂಟಿಂಗ್ ಆರಂಭ ವಾಗಲು ಇನ್ನೂ ಸಮಯ ಇದ್ದುದರಿಂದ ಅಜ್ಜಿಯೊಡನೆ ಮಾತಾಡುತ್ತಿದ್ದರು. ಆ ಕಾಲಘಟ್ಟದಲ್ಲಿ ಹೊಸದಾಗಿ ಬಂದಿದ್ದ ‘Sugar cane Juicer ‘ಬಗ್ಗೆ ಮಾತಾಡುತ್ತಿದ್ದರು. ಮಂಜುಳಾ ರವರು ತಿಳಿ ನೀಲಿಬಣ್ಣದ ಸೀರೆ ಉಟ್ಟು ಸರಳವಾಗಿ ಕಾಣುತ್ತಿದ್ದರು. ಲೀಲಾವತಿಯವರು ಹಸಿರು ಬಣ್ಣದ ಸೀರೆ ಉಟ್ಟಿದ್ದರು.

ತುಮಕೂರು ಬಳಿಯ ಮಂಜುಳಾ ರವರ ಸಮಾಧಿಯನ್ನು ಪರಿಚಯಿಸುವ, ರಕ್ಷಿಸುವ ಕಾರ್ಯ ಆಗಬೇಕು. ಮಂಜುಳಾರವರ ಚಿತ್ರಗಳು, ಅವರ ಪಾತ್ರಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಯೋಜನೆಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕು.

“ಮಂಜುಳಾ ಆಂಟಿ ತಿಳಿ ನೀಲಿ ಬಣ್ಣದ ಸೀರೆಯಲ್ಲಿನ ಆ ಮುಗ್ಧ ಭಾವ ಇಂದಿಗೂ ನನ್ನ ಸ್ಮೃತಿ ಪಟಲದಲ್ಲಿದೆ. ನೀಲಾಕಾಶದಲ್ಲಿ ನಕ್ಷತ್ರವಾಗಿ, ಚಂದನವನದ ತಾರೆಯಾಗಿ ಕನ್ನಡಿಗರ ಹೃನ್ಮನದಲ್ಲಿ ಚಿರಸ್ಥಾಯಿಯಾಗಿ ನಿಮ್ಮ ಅಮೋಘ ಅಭಿನಯದ ಚಿತ್ರಗಳ ಮೂಲಕ ನೆಲೆಸಿದ್ದೀರಿ. ಮತ್ತೊಮ್ಮೆ ಈ ಧರೆಗೆ ಹುಟ್ಟಿ ಬನ್ನಿ “.

-ಎಂ. ಜಿ. ರವೀಂದ್ರ,


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *