ನೆತ್ತರ ಕಲೆ ?: ಶರಣಗೌಡ ಬಿ ಪಾಟೀಲ ತಿಳಗೂಳ

ಆ ಘಟನೆ ನನ್ನ ಕಣ್ಮುಂದೆ ನಡೆದು ಹೋಯಿತು ಅದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಾಗಿದೆ ಇಂತಹ ಘಟನೆ ಇದೇ ಮೊದಲ ಸಲ ನೋಡಿದೆ ಅಂತ ಆಗ ತಾನೆ ಬಸ್ಸಿಳಿದು ಬಂದ ಫಕೀರಪ್ಪನ ಬೀಗ ಬಸಪ್ಪ ಶಂಕ್ರಾಪೂರದ ಕಟ್ಟೆಯ ಮೇಲೆ ದೇಶಾವರಿ ಮಾತಾಡುವವರ ಮುಂದೆ ಹೇಳಿದಾಗ ಅವರು ಗಾಬರಿಯಿಂದ ಕಣ್ಣು, ಕಿವಿ ಅಗಲಿಸಿದರು. ಬಾ ಬಸಪ್ಪ ಅಂಥಾದು ಏನಾಯಿತು? ಅಂತ ಪ್ರಶ್ನಿಸಿ ಅತಿಥಿ ಸತ್ಕಾರ ತೋರಿ ತಮ್ಮ ಮಧ್ಯೆ ಕೂಡಿಸಿಕೊಂಡರು. ಕಲ್ಬುರ್ಗಿ ರಿಂಗ ರಸ್ತಾ ಮೊದಲಿನಂಗ ಇಲ್ಲ ಜನರ ಓಡಾಟ ಹೆಚ್ಚಾಗ್ಯಾದ ಗದ್ದಲ ಇದ್ದಲ್ಲಿ ಘಟನೆಗೋಳು ಜಾಸ್ತಿ ನಡೀತಾವೆ ಅಂತ ಮಾತು ಪುನರಾವರ್ತಿಸಿದ. ಮೊದಲು ನಡೆದದ್ದಾರು ಏನು ಹೇಳು ? ನಿನ್ನ ಬಾಯಿಂದ ಕೇಳಿಯಾದರೂ ತಿಳಕೋತೀವಿ ಅಂತ ಮುದುಕಪ್ಪ ಕುತೂಹಲದಿಂದ ಪ್ರಶ್ನಿಸಿದ.

ಮುಂಜಾನೆ ಎಂಟರ ಸುಮಾರಿಗೆ ನಾನು ರಿಂಗರೋಡಿಗೆ ಬಂದಾಗ ಶಾಲೆ ಕಾಲೇಜು, ಕೆಲಸ ಕಾರ್ಯ, ಊರು ಕೇರಿ ಅಂತ ಎಲ್ಲರೂ ಅವಸರದಾಗ ಇದ್ದರು. ಎಲ್ಲಿ ನೋಡಿದಲ್ಲಿ ಜನವೋ ಜನ , ಇರುವೆ ಸಾಲಿನಂತೆ ದ್ವಿಚಕ್ರ ವಾಹನ ಕಪ್ಪು ಕವರಿನ ಅಟೋಗಳು ಬಣ್ಣ ಬಣ್ಣದ ಕಾರು ಜೀಪು ಒಂದೇ ಶಬ್ದ ಮಾಡಿ ಹೋಗುತಿದ್ದವು ಸಿಟೀ ಬಸ್ಸಗಳು ಆಗೊಮ್ಮೆ ಈಗೊಮ್ಮೆ ಬಂದು ಜನರನ್ನು ಹತ್ತಿಸಿಕೊಂಡು ಹೋದರೂ ಜನ ಕಡಿಮೆ ಆಗಲಿಲ್ಲ. ನಿಮ್ಮೂರಿಗೆ ಬರಲು ವಹಾನಕ್ಕಾಗಿ ಕಣ್ಣಿನ ರೆಪ್ಪೆ ಬಡಿಯದೆ ಕಾಯುತಿದ್ದೆ ಅದೇ ಸಮಯ ಮುದುಕನೊಬ್ಬ ಹುಡುಗನ ಜೊತೆ ಹರಸಹಾಸ ಪಟ್ಟು ಮುಂದಿನ ರಸ್ತೆ ದಾಟಿ ನಮ್ಮ ಪಕ್ಕ ಬಂದು ನಿಂತುಕೊಂಡ. ಆತ ಯಾವ ಊರಿಗೆ ಹೋಗುವವನಿದ್ದನೊ ಗೊತ್ತಿಲ್ಲ ತಲೆಗೊಂದು ದೊಡ್ಡ ರುಮಾಲು , ಮುಖದ ಮೇಲೆ ಬಿಳಿ ಜೊಂಡು ಮೀಸೆ, ಗಜ್ಜರಿಯ ಮೈಬಣ್ಣ ಹೆಗಲಿಗೊಂದು ಜೋಳಿಗೆ ನೇತಾಡುತಿತ್ತು. ಹುಡಗನ ಕೈಯಲ್ಲೂ ಕೈಚೀಲವಿತ್ತು. ಬಹುಶಃ ಆತ ಎಲ್ಲಿಯೋ ಮುಕ್ಕಾಂ ಮಾಡಿ ಬಂದಂತೆ ಕಾಣಿಸುತಿತ್ತು.

ದಿಢೀರನೇ ಧೂಳಿನಿಂದ ಭೂತ ಎದ್ದು ಬಂದಂತೆ ಮರಳಿನ ಟಿಪ್ಪರೊಂದು ಮರಳು ಖಾಲಿ ಮಾಡಿಕೊಂಡು ಬಂದು ನಿಂತಿತು. ಅದು ಬಹುಶಃ ಕಾಗಿಣಾ ನದಿಯಿಂದ ಮರಳು ತುಂಬಿಕೊಂಡು ಬರಲು ಹೋಗುತಿತ್ತು “ಹಾಫ್ ರೇಟ್ ಬರ್ರಿ ಬರ್ರಿ ಸಣ್ಣೂರ ಕ್ರಾಸ್ ಸಂಕ್ರೊಡಗಿ ಬಾಗೋಡಿ ” ಅಂತ ಡ್ರೈವರ್ ನಮ್ಮ ಕಡೆ ನೋಡಿ ಕೂಗತೊಡಗಿದ. ಹಾಫ್ ರೇಟಂದ್ರ ಹೋಗೋಣ ನಡೀರಿ ಅಂತ ಕೆಲವರು ಲಗುಬಗೆಯಿಂದ ಕ್ಯಾಬಿನ ಹತ್ತದರು. ಅದು ಭರ್ತಿಯಾದಾಗ ಕೆಲವರು ಟ್ರಾಲಿ ಹತ್ತಿದರು ಇನ್ನೂ ಕೆಲವರು ಇದರಾಗ ನಿಂತುಕೊಂಡೇ ಹೋಗಬೇಕು ಬಟ್ಟೆ ಹೊಲಸಾಗ್ತವೆ ಅರ್ಧ ರೊಕ್ಕ ಉಳಿಸಿಕೊಳ್ಳಲು ಹೋಗಿ ಮೈಕೈ ಬ್ಯಾನೀ ಮಾಡಿಕೊಂಡು ದವಾಖಾನಿಗಿ ಹೋಗಬೇಕ್ತಾದೆ ಬೇಡವೇ ಬೇಡ ಬಸ್ಸಿಗೆ ಹೋದರೆ ಆರಾಮ ಹೋಗಬಹುದು ಅಂತ ಹಿಂದೇಟು ಹಾಕಿದರು.

ಅರ್ಧ ತಾಸಿನ್ಯಾಗೇ ಕ್ರಾಸೀಗಿ ಇಳೀತೀವಿ ಹಾಫ್ ರೇಟ್ ಅಂತಿದ್ದಾನೆ ಒಂದಿಷ್ಟು ರೊಕ್ಕ ಉಳಿದರೆ ನಮಗೂ ಛೊಲೊನೇ ಆಗ್ತಾದೆ ಸುಸಲಾ ತಿಂದು ಚಹಾ ಕುಡಿದು ಊರಿಗೆ ಹೋಗೋಣ ಅಂತ ಮುದುಕ ಹೇಳಿದಾಗ ಹುಡುಗ ಧೂಸರಾ ಮಾತಾಡದೇ ತಲೆಯಾಡಿಸಿದ. ಮುದುಕ ಹತ್ತಲು ಆತುರ ಪಡುತಿದ್ದ. ವಯಸ್ಸಾದರೂ ಟಿಪ್ಪರ ಟೈರಿನ ಮ್ಯಾಲ ಕಾಲಿಟ್ಟು ಮೇಲೇರುತಿದ್ದ ಜನ ಆಶ್ಚರ್ಯದಿಂದ ಆತನ ಕಡೆ ನೋಡಿ ” ಮುದುಕ ನೋಡ್ರಿ ಹ್ಯಾಂಗ ಟಿಪ್ಪರ ಹತ್ತತಿದ್ದಾನೆ ಇನ್ನೂ ಸಣ್ಣ ಹುಡುಗರಂಗ ಅಂತ ಆಶ್ಚರ್ಯ ವ್ಯಕ್ತಪಡಿಸಿ ಮಾತಾಡಿಕೊಂಡರು. ಆತನ ಉದ್ದನೆಯ ಬಿಳಿ ಖಮೀಸ ಅಂಗಿಯ ಎಡಬಲದ ಬಗಲು ಕಿಸೆಯಲ್ಲಿ ಒಂದಿಷ್ಟು ನೋಟು ಚಿಲ್ಲರು ತುಂಬಿ ಅದು ದಪ್ಪಾಗಿ ಕಾಣುತಿದ್ದವು. ಪಾರದರ್ಶಕದಂತಿರುವ ಕಿಸೆಯಲ್ಲಿ ನೋಟು ಕಾಣುತಿದ್ದವು. ಕಿಸೆಗಳ್ಳನ ಗಮನ ಆತನ ಕಿಸೆಯ ಕಡೆ ಹರಿದು ಮುದುಕನ ಬಳಿ ಆತನ ಬಲಗಾಲಿನ ಚಪ್ಪಲಿ ಬೇಕಂತಲೇ ಕೆಳಗೆ ಬೀಳಿಸಿದ. ಅದು ಮುದುಕನಿಗೆ ಗೊತ್ತೇ ಆಗಲಿಲ್ಲ. ಚಪ್ಪಲಿ ತಂತಾನೆ ಜಾರಿದೆ ಅಂತ ತಿಳಿದು ಅದನ್ನ ಪುನಃ ಹಾಕಿಕೊಳ್ಳಲು ಒಂದು ಕೈ ಮೇಲ್ಗಡೆ ಟಿಪ್ಪರ ಫಾಟಕ್ ಹಿಡಿದು ಕಾಲು ಇಳಿ ಬಿಟ್ಟು ಚಪ್ಪಲಿ ಕಡೆ ಗಮನ ಹರಿಸಿದ. ತಕ್ಷಣ ಕಳ್ಳ ಬಗಲ ಕಿಸೆಗೆ ಕೈ ಹಾಕತೊಡಿಗಿದ. ಮದುಕನ ಗಮನ ಚಪ್ಪಲಿ ಕಡೆ ಇತ್ತೇ ಹೊರತು ಕಿಸೆಯ ಕಡೆ ಇರಲಿಲ್ಲ. ಕಳ್ಳ ಕೈಚಳಕ ತೋರಿಸುತ್ತಿರುವದು ಕೆಳಗೆ ನಿಂತ ಹುಡುಗನಿಗೆ ಗೊತ್ತಾದ ಕೂಡಲೆ “ರೊಕ್ಕ ಜ್ವಾಕಿ ಕಳ್ಳ ನಿನ್ನ ಕಿಸೇ ಹೊಡೀತಾನೆ ಜಲ್ದಿ ಹತ್ತಿ ಮ್ಯಾಲ ಹೋಗಿ ಕೂಡು” ಅಂತ ಒಂದೇ ಸವನೆ ಕೂಗತೊಡಗಿದ.

ಆಗ ಮುದುಕ ಜಾಗೃತಗೊಂಡು ಒಂದು ಕೈಯಿಂದ ತನ್ನ ಕಿಸೆ ಮತ್ತೊಂದು ಕೈಯಿಂದ ಟಿಪ್ಪರಿನ ಫಾಟಕ್ ಹಿಡಿದು ಹಾಗೇ ಮೇಲೇರಿ ಒಂದು ಕಾಲು ಟ್ರಾಲಿಯಲ್ಲಿ ಹಾಕಿದ. ಸಧ್ಯ ಮುದುಕ ತಪ್ಪಿಸಿಕೊಳ್ತಾನೆ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ ಅಂತ ಹತಾಶೆಗೊಂಡ ಕಳ್ಳ ತನ್ನ ಬಳಿ ಇದ್ದ ಬ್ಲೇಡಿನಿಂದ ಮುದುಕನ ತೊಡೆಯ ಭಾಗಕ್ಕೆ ಎರ್ಡ್ಮೂರು ಬಾರಿ ಕೊಯ್ದೇ ಬಿಟ್ಟ. ಜನ ಮೂಕಸ್ಮಿತರಾಗಿ ನೋಡುತಿದ್ದರು. ವಿಷಯ ಡ್ರೈವರನಿಗೆ ಗೊತ್ತಾಗುತಿದ್ದಂತೆ ಇಲ್ಲೇ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಯೋಚಿಸಿ ಅವಸರವಾಗಿ ಟಿಪ್ಪರ ಚಾಲೂ ಮಾಡಿ ಮುಂದೆ ಸಾಗಿದ. ಕೆಲವರು ಟಿಪ್ಪರ ಹತ್ತದೇ ರಸ್ತೆಯಲ್ಲೇ ನಿಂತುಕೊಂಡರು. ಅವರಲ್ಲಿ ಆ ಹುಡುಗ ಕೂಡ ಒಬ್ಬನಾಗಿದ್ದ. ಹುಡುಗ ಕಕ್ಕಾಬಿಕ್ಕಿಯಾದ ಜನ ಆತನಿಗೆ ಸುತ್ತುವರೆದು ವಿಚಾರಿಸುತಿದ್ದರು. ಅಷ್ಟರಲ್ಲಿ ನಿಮ್ಮೂರಿನ ಬಸ್ ಬಂತು ನಾನು ಬಂದು ಬಿಟ್ಟೆ ಮುಂದೇನಾಯಿತೋ ಗೊತ್ತಿಲ್ಲ ಅಂತ ಹೇಳಿದ.

ಬಸಪ್ಪನ ಮಾತು ಎಲ್ಲರಿಗೂ ಗಾಬರಿ ತರಿಸಿ ಇಂತಹ ಘಟನೆಯಿಂದ ನಾವೂ ಜಾಗೃತರಾಗಬೇಕು ಇಲ್ಲದಿದ್ದರೆ ಮುದುಕನಿಗಾದ ಗತಿ ನಮಗೂ ಬರಬಹುದು ಅಂತ ಯೋಚಿಸಿದರು. ನಮ್ಮ ಹಳ್ಳಿನೇ ಛೊಲೊ ಇವ್ಯಾವೂ ನಡೆಯುವದಿಲ್ಲ ಬರಬರುತಾ ಸಿಟೀ ಡೇಂಜರ ಆಗ್ತಿವೆ ಅಂತ ಫಕೀರಪ್ಪ ಆತಂಕ ಹೊರ ಹಾಕಿದ. ಬಸಪ್ಪ ಸ್ವಲ್ಪ ಹೊತ್ತು ಇವರ ಜೊತೆ ಮಾತುಕತೆ ನಡೆಸಿ ಚಹಾ ಕುಡಿದು ತಮ್ಮೂರಿಗೆ ಹೊರಟು ಹೋದ.


ಮದ್ಯಾಹ್ನ ಕಲ್ಲಪ್ಪ ಊಟ ಮುಗಿಸಿಕೊಂಡು ಹಲ್ಲೊಳಗೆ ಕಡ್ಡೀ ಹಾಕಿಕೊಳ್ಳುತ್ತಾ ಹಣಮಂದೇವರ ಗುಡಿ ಕಟ್ಟೆಗೆ ಹೋಗಿ ವಿಶ್ರಾಂತಿ ಪಡೀಬೇಕು ಅಂತ ಬಂದ. ಅದೇ ಸಮಯ ತುಳಜಪ್ಪ ಮತ್ತೊಂದು ರಸ್ತೆಯಿಂದ ಮನೆ ಕಡೆ ಹೋಗುತಿರುವದು ಕಂಡು ಬಂದಿತು. ಆತನ ಧೋತರಿಗೆ ನೆತ್ತರ ಕಲೆ ಹತ್ತಿದಂತೆ ಕಾಣುತಿತ್ತು ಬಿಳಿ ಧೋತರ ಹಿಂಗ್ಯಾಕ ಆಗ್ಯಾದ ಇವನ ಮಾರೀ ಮ್ಯಾಲ ಜರಾನೂ ಖಳೀ ಇಲ್ಲ ಜೋಲಿ ಹೊಡಕೊಂತ ಯಾಕ ಹೋದ ಅಂತ ತಳಮಳಗೊಂಡ. ಹಾಗೇ ಬಲಕ್ಕೆ ಹೊರಳಿ ಈ ವಿಷಯ ಯಾರ ಮುಂದೆ ಹೇಳಿಲಿ ಹೆಂಡತಿ ಮುಂದೆ ಹೇಳಬೇಕೆಂದರೆ ಅವಳು ಹೊಲದ ಕಡೆ ಹೋಗಿದ್ದಾಳೆ ಅಕ್ಕ ಪಕ್ಕದ ಮನೆಯವರ ಮುಂದೆ ಹೇಳಬೇಕೆಂದರೆ ಯಾರೂ ಕಾಣತಿಲ್ಲ ಅಂತ ಗುಡಿ ಕಡೆ ಹೆಜ್ಜೆ ಹಾಕಿದ. ಸುಮಾರು ಜನ ಗುಡಿ ಕಟ್ಟೆಗೆ ಕುಳಿತು ದೇಶಾವರಿ ಮಾತುಕತೆಯಲ್ಲಿ ಮಗ್ನರಾಗಿರೋದು ಕಂಡು ಬಂತು, ವಿಷಯ ಇವರಿಗೆ ಹೇಳಬೇಕು ಅಂತ ಹತ್ತಿರ ಬಂದು ತುಳಜಪ್ಪನ ಧೋತರ ತುಂಬಾ ನೆತ್ತರು ಹತ್ತಿದಂಗ ಕಾಣಸ್ತಿದೆ ಏನಾಗ್ಯಾದೋ ಏನೋ ತಿಳಿವಲ್ದು ಅಂತ ಹೇಳಿದ. ಕಲ್ಲಪ್ಪನ ಮಾತು ಸಹಜವಾಗಿ ಆಶ್ಚರ್ಯ ಮೂಡಿಸಿತು. ಇದು ನಿಜಾನಾ? ನೀನು ಹೇಳಿದ ಮ್ಯಾಲೇ ಗೊತ್ತಾಗಿದ್ದು ಅಂತ ಫಕೀರಪ್ಪ ಗಾಬರಿಗೊಂಡ. ಯಾಕೆ ಹಿಂಗಾತು? ತುಳಜಪ್ಪನಿಗೆ ವಯಸ್ಸಾದರೂ ಇನ್ನೂ ಗಟ್ಟಿ ಮನುಷ್ಯ ಕೈಕಾಲು ಕಣ್ಣು ಎಲ್ಲವೂ ಛೊಲೊ ಇದ್ದವನು, ಕಾಲು ಜಾರಿ ಬಿದ್ದು ಗಾಯ ಮಾಡಿಕೊಳ್ಳುವವನೂ ಅಲ್ಲ. ಯಾರ ಜೊತೆಗೂ ದುರ್ವರ್ತನೆ ತೋರಿ ತಂಟೆ ತಕರಾರು ತೆಗೆಯುವವನೂ ಅಲ್ಲ ಅದೇನು ಅನಾಹುತ ಆಗಿರಬೇಕು ? ಅಂತ ಪರುಶಪ್ಪನೂ ಶೂನ್ಯ ದಿಟ್ಟಿಸಿದ.

ನಿನ್ನೆ ಮಗನ ಜೊತೆ ಖಡಕ್ಕಾಗಿ ಊರಿಗೆ ಹೋಗಿದ್ದು ನಾನೇ ನೋಡಿದೆ ಮಗನ ಕೈಯಾಗ ಗೊಂದಳ ಸಾಮಾನು ಇದ್ದವು ಆದರೆ ವಾಪಸ್ ಬರುವಾಗಲೇ ಏನೋ ಆಗಿರಬಹುದು ಅಂತ ಧೂಳಪ್ಪ ವಾಸ್ತವ ಹೇಳಿ ದನಿಗೂಡಿಸಿದ. ತುಳಜಪ್ಪ ಮೊದಲೇ ಗೊಂದಳ ಕಲಾವಿದ ಪೂಜಾ ಪುನಸ್ಕಾರ ಅಂತ ಅದರಾಗೇ ಮುಳಗಿರೋನು ಗೊಂದಳ ಮುಗಿದ ಮ್ಯಾಲ ಮನೆಯವರು ಪದ್ದತಿ ಪ್ರಕಾರ ಬಟ್ಟೆ ಅಯ್ಯೇರಿ ಮಾಡತಾರೆ ಆವಾಗ ಕುಂಕುಮದ ನೀರು, ಅದು ಇದು ಬಿದ್ದು ಧೋತರ ಕೆಂಪಾಗಿ ನೆತ್ತರ ಹತ್ತಿದಂಗ ಆಗಿರಬೇಕು, ಅದೇ ವಿಷಯ ಇವನು ಉಲ್ಟಾ ತಿಳಕೊಂಡು ಗಾಬರಿಯಾಗ್ಯಾನ ಅಂತ ಮುದುಕಪ್ಪ ಉಹೆ ಮಾಡಿದ. ಮುದುಕಪ್ಪನ ಮಾತು ಕೆಲವರಿಗೆ ಸರಿ ಅನಿಸಿತು . ನೀನು ಹೇಳಿದ್ದು ಬರೋಬ್ಬರಿ ಇದ್ದಿರಬೇಕು ಅಂತ ಸಹಮತ ವ್ಯಕ್ತಪಡಿಸಿದರು.

ಬಟ್ಟೆ ಅಯ್ಯೇರಿ ಮಾಡಿ ಸನ್ಮಾನ ಮಾಡಿದ್ದರೆ ಅದು ಖುಷಿ ಪಡೋ ವಿಷಯ ತುಳಜಪ್ಪ ನಗುಮುಖದಿಂದ ಎಲ್ಲರಿಗೂ ಈ ವಿಷಯ ಹೇಳಿ ಮನೆ ಕಡೆ ಹೋಗಬೇಕಾಗಿತ್ತು ಹಿಂದೆ ಯಾವುದೇ ಗೊಂದಳ ಕಾರ್ಯಕ್ಕೆ ಹೋದರೂ ವಾಪಸ್ ಬರುವಾಗ ಎದಿರು ಕಂಡವರಿಗೆ ಕೇಳುವದಕ್ಕಿಂತ ಮೊದಲೇ ಆಯೇರಿ ಮಾಡಿದ್ದು ಕಾಣಿಕೆ ಕೊಟ್ಟಿದ್ದು ಎಲ್ಲಾ ಹೇಳಿ ಖುಷಿ ಹೊರ ಹಾಕ್ತಿದ್ದ ಆದರೆ ಈ ಸಾರಿ ಅವನ ಮುಖದ ಮ್ಯಾಲ ಎಳ್ಳಷ್ಟೂ ಖುಷಿ ಕಾಣಲಿಲ್ಲ ನಾನೂ ಒಂದೆರಡು ಸಲ ಕೂಗಿ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದೆ ಆದರೆ ಆತ ನನ್ನ ಮಾತು ಕೇಳಿಸಿಕೊಂಡರೂ ತಿರುಗಿ ನೋಡದೇ ಹಾಗೇ ಹೊರಟು ಹೋದ. ಏನೋ ಕೆಟ್ಟದ್ದು ನಡೆದು ಹೋಗ್ಯಾದ ಅಂತ ಕಲ್ಲಪ್ಪ ಪುನಃ ಒತ್ತಿ ಹೇಳಿದ.

ರಾತ್ರಿ ನಿದ್ದೆಗೆಟ್ಟು ಗೊಂದಳ ಹೇಳಿ ಸುಸ್ತಾಗಿರಬೇಕು ಸ್ವಲ್ಪ ಹೊತ್ತಿನ ಮ್ಯಾಲ ಅವನೇ ಬರ್ತಾನೆ ಆವಾಗ ಎಲ್ಲ ವಿಷಯ ಹೇಳತಾನೆ ಅಂತ ಕೆಲವರು ಸಮಜಾಯಿಷಿ ನೀಡಲು ಮುಂದಾದರು. ಅವನಿಗೆ ಗೊಂದಳ ವೀಳ್ಯಾ ಕೊಡೋರು ಕಮ್ಮಿ ಇಲ್ಲ ತಿಂಗಳದಾಗ ಒಂದೆರಡು ಬಾರಿಯಾದರೂ ಇದ್ದೆ ಇರ್ತಾವೆ ದಸರೀ ಬಂದರಾಯಿತು ಪುರುಸೊತ್ತೇ ಸಿಗೋದಿಲ್ಲ . ಯಾರೇ ವೀಳ್ಯಾ ಕೊಟ್ಟರೂ ಎಷ್ಟೇ ದೂರ ಇದ್ದರೂ ಒಲ್ಲೆ ಅಂತ ಅವನ ಬಾಯಿಂದ ಬರೋದೇ ಇಲ್ಲ ಅವರೇನಾದರು ರೊಕ್ಕ ಗಿಕ್ಕಾ ಕಮ್ಮಿ ಕೊಟ್ಟರೂ ಬ್ಯಾಸರ ಮಾಡಿಕೊಳ್ಳೋದಿಲ್ಲ ಗೊಂದಳಕ ಮಂಗಳ ಹಾಡಿ ಭೇಷ್ ಅನಿಸಿಕೊತಾನೆ ಅಂತ ಫಕೀರಪ್ಪ ಗುಣಗಾನ ಮಾಡಿದಾಗ ಅವನ ಮೂಲ ಕಾಯಕಾನೇ ಗೊಂದಳ ಅಂದ್ಮೇಲೆ ಅದನ್ನು ಬಿಟ್ಟು ಮತ್ತೇನು ಮಾಡ್ತಾನೆ ? ಅದು ಇರದಿದ್ದಾಗ ಹೊಲ ಮನೆ ಕೆಲಸಾ ಇದ್ದೇ ಇರ್ತಾದೆ ಅಂತ ಮುದುಕಪ್ಪ ಕೂಡ ಸಮರ್ಥಿಸಿದ .

ಮೊನ್ನೆ ಅಮಾಷಿ ದಿನಾ ಯಾರೋ ಸಿಟೀದವರು ಗಾಡೀಮ್ಯಾಲ ಬಂದು ನಮ್ಮ ಮನ್ಯಾಗ ಬಾರಾ ತಾರೀಕ ಗೊಂದಳ ಮಾಡಬೇಕು ಪಂದ್ರಾ ತಾರೀಕ ಮಗನ ಮದುವೆ ಅದಾ ಅಂತ ಹೇಳಿ ವೀಳ್ಯಾ ಕೊಟ್ಟು ಹೋಗ್ಯಾರ ಅಂತ ಬರಮಣ್ಣ ಆಗ ತಾನೇ ಗುಡಿ ಕಟ್ಟೆಗೆ ಬಂದು ವಾಸ್ತವ ಹೇಳಿದಾಗ ತುಳಜಪ್ಪ ಗೊಂದಳ ಕಾರ್ಯಕ್ಕೆ ಹೋದದ್ದು ಖಾತ್ರಿಯಾಯಿತು. ಸಿಟೀ ಜನಾನೂ ಈ ಗೊಂದಳ ಕಾರ್ಯ ಮಾಡ್ತಾರಂದ್ರ ನನಗೆ ಯಾಕೋ ನಂಬೋಕ ಆಗ್ತಿಲ್ಲ ಅಂತ ಕಲ್ಲಪ್ಪ ಕುತೂಹಲದಿಂದ ಪ್ರಶ್ನಿಸಿದ. ಸಿಟೀಯವರು ಗೊಂದಳ ಕಾರ್ಯ ಮಾಡಬಾರದು ಅಂತ ಎಲ್ಯಾದರು ಶಾಸ್ತ್ರದಾಗ ಬರದಾದೇನು? ಮನೀ ದೇವರ ಅಂಬಾಬಾಯಿ ಇದ್ದೋರು ಮದುವೆ ಶುಭ ಕಾರ್ಯ ಮಾಡೋ ಮುಂದೆ ಗೊಂದಳ ಹಾಕೇ ಮದುವೆ ಮಾಡತಾರೆ ಅಂತ ಮುದುಕಪ್ಪ ರೀತಿ ರಿವಾಜಿನ ಬಗ್ಗೆ ವಿವರಿಸಿದ. ಸಿಟೀ ಅಂದ್ರ ಅದೇನು ಬ್ಯಾರೇ ಆದೇನು ಅದು ಕೂಡ ಒಂದಾನೊಂದು ಕಾಲದಾಗ ನಮ್ಮಂಗ ಹಳ್ಳೀನೇ ಇತ್ತು ಹಳ್ಳಿ ಜನ ಹೋಗಿ ನೆಲೆ ಮಾಡಿಕೊಂಡಿದ್ದರಿಂದಲೇ ಅದು ದೊಡ್ಡ ಸಿಟೀ ಆಗ್ಯಾದ ಅನ್ನುವ ವಿಷಯ ಇವನಿಗೆ ಗೊತ್ತೇ ಇಲ್ಲ ಅಂತ ಫಕೀರಪ್ಪ ಹಾಸ್ಯ ಮಾಡಿದ. ಎಲ್ಲವೂ ಒಂದು

ಕಾಲದಾಗ ಹಳ್ಳಿಗೋಳೇ ಬಿಡು ಇದರಾಗ ಯಾವ ಅನುಮಾನನೂ ಇಲ್ಲ ಅಂತ ಬಹುತೇಕರು ಸಹಮತ ವ್ಯಕ್ತಪಡಿಸಿದರು. ನೀನೇನೇ ಹೇಳು ಇಂದಿನ ದಿನಮಾನದಾಗ ಈ ಗೊಂದಳ ಹಾಕಿಸೋರು ಬಹಳ ಕಮ್ಮಿ ಆಗ್ಯಾರ ಅಂತ ಕಲ್ಲಪ್ಪ ವಾಸ್ತವ ಹೇಳಿದಾಗ. ಹಾಕಿಸೋರು ಕಮ್ಮಿ ಆಗಿಲ್ಲ ಸಾಕಷ್ಟು ಖರ್ಚು ಮಾಡಿ ದೇವರ ಹರಕೆ ತೀರಸ್ತಾರೆ ಆದರೆ ಗೊಂದಳ ಕಲಾವಿದರು ಕಮ್ಮಿ ಆಗ್ಯಾರ ಸುತ್ತ ಹತ್ತೂರಾಗ ಹುಡಕಿದರು ಈ ಗೊಂದಳ ಕಲಾವಿದ ಯಾರಾದರೂ ಇದ್ದರೆ ಅದು ನಮ್ಮ ತುಳಜಪ್ಪ ಮಾತ್ರ ಈ ಕಾಯಕ ಸಣ್ಣವನಿದ್ದಾಗಿನಿಂದಲೇ ಮಾಡಿಕೊಂಡು ಬಂದಿದ್ದಾನೆ ಮೊದಲು ಈ ಕಲೆ ಲಕ್ಕಪ್ಪನಿಗಿತ್ತು ಈಗ ವಂಶಪಾರಂಪರ್ಯವಾಗಿ ಮಗನಿಗೆ ಬಂದಿದೆ ಅಂತ ಫಕೀರಪ್ಪ ವಾಸ್ತವ ಬಿಚ್ಚಿಟ್ಟ . ಯಮನಪ್ಪನೂ ಇದ್ದಾನಲ್ಲ ಅಣ್ಣನಂಗ ಅವನೂ ಗೊಂದಳ ಕಲಾವಿದ ಅಪ್ಪನ ಕೈಯಾಗೇ ಪಳಗಿದವನು ಅಂತ ಕಲ್ಲಪ್ಪ ಹೇಳಿದಾಗ ಯಲ್ಲಪ್ಪನೂ ಗೊಂದಳ ಕಲಾವಿದ ಆದರೆ ತುಳಜಪ್ಪನಂಗ ಅನುಭವಿ ಅಲ್ಲ ಅಂತ ಹೋಲಿಕೆ ಮಾಡಿದ.


ಗೊಂದಳ ವಿಷಯಕ್ಕೆ ಅಣ್ಣ ತಮ್ಮ ಇಬ್ಬರಿಗೂ ಜಗಳಾ ಬಂದಿದ್ದು ತುಳಜಪ್ಪಗ ಜಾಸ್ತಿ ಜನ ವೀಳ್ಯಾ ಕೊಡ್ತಾರಂತ ಯಲ್ಲಪ್ಪನ ಹೆಂಡತಿ ದಾನವ್ವಗ ಹೊಟ್ಟೆ ಕಿಚ್ಚು ಅವಳು ಯಾವಾಗಲೂ ಇವರ ಮ್ಯಾಲ ಏನಾದರೊಂದು ಅಪವಾದ ಹೊರಸ್ತಾನೇ ಇರ್ತಾಳೆ ಬೇಕಂತಲೇ ಇವರ ಜೊತೆ ಜಗಳಾ ತೆಗಿತಾಳೆ ಗಂಡನ ತಲ್ಯಾಗ ಇಲ್ಲಸಲ್ಲದು ಹೇಳಿ ಇವನ ಜೊತೆ ಮಾತಾಡಲಾರದಂಗ ಮಾಡ್ಯಾಳ ಬಹಳ ಬೆರಕಿ ಅವಳು ಅಂತ ಬರಮಣ್ಣ ಹೇಳಿದಾಗ ಹುಟ್ಟುತ್ತಲೇ ಅಣ್ಣತಮ್ಮರು ಬೆಳೆಯುತ್ತಲೇ ಭಾಗಾದಿಗಳು ಅಂತ ಅರ್ಥಾನೇ ಇದೇ ಹೊರಗಿನವರಿಗಿಂತ ರಕ್ತ ಹಂಚಿಕೊಂಡು ಹುಟ್ಟಿದೋರಿಗೇ ದ್ವೇಷ ಅಸೂಯೇ ಜಾಸ್ತಿ ಇರ್ತಾದೆ ಇದು ಮನುಷ್ಯನ ಜೊತೆ ಬೆಳೆದು ಬಂದ ಕೆಟ್ಟ ಗುಣ ಅಂತ ಮುದುಕಪ್ಪ ಲೋಕೋಕ್ತಿ ಹೇಳಿ ಉದಾಹರಣೆ ನೀಡಿದ.

ತುಳಜಪ್ಪ ಗೊಂದಳ ಚಾಲೂ ಮಾಡಿದರೆ ಹೆಣ್ಣು, ಗಂಡು, ಮಕ್ಕಳು, ಮರಿ ಎಲ್ಲರೂ ಕಣ್ಣಿಗಿ ಎಣ್ಣೆ ಬಿಟಗೊಂಡು ಬೆಳತನ ಕುಂತು ಕೇಳತಾರೆ ಆತ ಮನಮುಟ್ಟುವಂಗ ಹಾವಭಾವದಿಂದ ಹೇಳತಾನೆ , ದಿವಟಿಗಿ ಹಿಡಿದು ಹಾಡು ಹಾಡಿ ಕುಣೀತಾನೆ ಸಾಕ್ಛಾತ ಅಂಬಾಬಾಯಿನೇ ಪ್ರತ್ಯಕ್ಷಳಾಗ್ತಾಳೇನೋ ಅಂತ ಅನಿಸ್ತಾದೆ. ಅದಕ್ಕಾಗೇ ಜನ ಇವನ ವಿಳಾಸ ಹುಡುಕಿಕೊಂಡು ವೀಳ್ಯಾ ಕೊಡಲು ಬರೋದು ಅಂತ ಫಕೀರಪ್ಪ ವರ್ಣನೆ ಮಾಡಿದ. ಹಂಗಾದ್ರ ತುಳಜಪ್ಪ ಅಂದ್ರ ಗೊಂದಳ, ಗೊಂದಳ ಅಂದರೆ ತುಳಜಪ್ಪೇನು? ಅಂತ ಕಲ್ಲಪ್ಪ ಕುತೂಹಲದಿಂದ ಪ್ರಶ್ನಿಸಿದ. ಧೂಸರಾ ಮಾತೇ ಇಲ್ಲ ಅಂತ ಫಕೀರಪ್ಪ ಸಮರ್ಥಿಸಿದ.

ನಿನ್ನ ಮಾತು ಸರಿ ಆದರೆ ತುಳಜಪ್ಪನ ಧೋತರಕ ಹತ್ತಿದ ಆ ಕೆಂಪು ನೆತ್ತರ ಬಗ್ಗೆ ಇನ್ನೂ ನನ್ನ ಅನುಮಾನ ದೂರಾಗಿಲ್ಲ ಅಂತ ಕಲ್ಲಪ್ಪ ಪುನಃ ನೆನಪಿಸಿದ. ನೀನೇನೂ ಚಿಂತೆ ಮಾಡಬೇಡ ನಾವೇ ಖುದ್ದಾಗಿ ಅವನ ಮನೆಗೆ ಹೋಗಿ ವಿಚಾರಿಸಿಕೊಂಡು ಬಂದದಾರಿಯಿತು ಆಗ ಸತ್ಯ ತಾನೇ ಗೊತ್ತಾಗ್ತದೆ ಅಂತ ಮುದುಕಪ್ಪ ಸಲಹೆ ನೀಡಿದ. ಅವನ ಸಲಹೆ ಎಲ್ಲರಿಗೂ ಸಮಯೋಚಿತವೆನಿಸಿತು. ಹಾಗೇ ಆಗಲಿ ನಡೀರಿ ಹೋಗೋಣ ಅಂತ ಎಲ್ಲರೂ ಶಲ್ಯ ಝಾಡಿಸಿಕೊಂಡು ಅಗಸೀ ಹತ್ತಿರ ಇರುವ ತುಳಜಪ್ಪನ ಮನೆ ಕಡೆ ಬಂದರು. ತುಳಜಪ್ಪನ ಮನೆ ಬಾಗಿಲು ಮುಚ್ಚಿದ್ದು ನೋಡಿ ಬಾಗಿಲ ಮುಂದೆ ನಿಂತು ಇಂಥಾ ಮಟ ಮಟ ಮದ್ಯಾಹ್ನ ಹೊತ್ತಿನ್ಯಾಗ ಎಲ್ಲಿಗೆ ಹೋಗ್ತಾನೆ ಒಳಗೇ ಇರ್ತಾನೆ ಅಂತ ಟಪಟಪನೆ ಬಾಗಿಲು ಭಾರಿಸಿ ಒಂದೆರಡು ಬಾರಿ ಜೋರಾಗಿ ಕೂಗಿದರು. ಸ್ವಲ್ಪ ಹೊತ್ತಿನ ಮ್ಯಾಲ ತುಳಜಪ್ಪನ ಹೆಂಡತಿ ಸಾತವ್ವ ಬಾಗಿಲು ತೆಗೆದು ಹೊರ ಬಂದು ಬರ್ರಿ ಬರ್ರಿ ಅಂತ ಒಳಕರೆದು ಪಡಸಾಲ್ಯಾಗ ಕೌದಿ ಹಾಸಿ ಕೂಡಿಸಿ ಕುಡಿಯಲು ಒಂದಿಷ್ಟು ನೀರು ಆಮ್ಯಾಲ ಚಹಾ ಕೊಟ್ಟಳು.

ತುಳಜಪ್ಪ ಎಲ್ಲಿ ಅವನಿಗೆ ಏನಾತು? ಅಂವ ಆರಾಮ ಇದ್ದಾನೊ ಇಲ್ಲವೊ ಅಂತ ಫಕೀರಪ್ಪ ಪ್ರಶ್ನಿಸಿದ. ಏನು ಹೇಳಲಿ ಊರಿಗೆ ಹೋದವನ ಸುದ್ದಿ ದೇವರೇ ಬಲ್ಲ ನನಗೂ ಯಾವ ವಿಷಯಾನೂ ತಿಳಿತಿಲ್ಲ ಕೇಳಿದರೆ ಇವನೇನೂ ಹೇಳತಿಲ್ಲ ಏನೂ ಕೇಳಬ್ಯಾಡ ಅಂತ ಸಿಟ್ಟಿಗಿ ಬಂದು ಬೈದು ಬಿಟ್ಟ. ಮನೀಗಿ ಬಂದವನೇ ಕೈಕಾಲು ಮುಖ ತೊಳಕೊಳ್ಳದೇ ಹಂಗೇ ಹೋಗಿ ಒಳ ಮನ್ಯಾಗ ಹೊರಸಿನ ಮ್ಯಾಲ ಅಡ್ಡಾಗ್ಯಾನ ನಾನೇ ಹೋಗಿ ಬಿಸಿ ನೀರಿನಿಂದ ಮಾರೀಮ್ಯಾಲ ಕೈಯಾಡಿಸಿ ಮುಖ ತೊಳೆದು ಡಿಕಾಶನ ಮಾಡಿ ಕೊಟ್ಟೀನಿ , ಒಂದೆರಡು ಗುಟಕ ಕುಡಿದು ಸುಸ್ತಾಗಿ ಮಲಗ್ಯಾನ ನೆತ್ತರ ನೋಡಿ ನನಗೇ ಎದಿ ಒಡದಂಗ ಆಯಿತು. ಧೋತರ ಬಿಚ್ಚಿಸಿ ನೀರಾಗ ಹಿಂಡಿದರ ಬಕೇಟ ತುಂಬಾ ಕೆಂಪಾಗ್ಯಾದ ಅಂತ ವಾಸ್ತವ ಹೇಳಿ ಕಣ್ತುಂಬಾ ನೀರು ತಂದಳು.

ಇಂಥಾ ಸಮಯವಾಗ ಸಮಾಧಾನ ಮಾಡಿಕೊಳ್ಳದೇ ಬೇರೆ ದಾರೀನೇ ಇಲ್ಲ ಅಂತ ಎಲ್ಲರೂ ಸಮಜಾಯಿಷಿ ನೀಡಲು ಮುಂದಾದರು. ಆದ ಘಟನೆ ಬಗ್ಗೆ ತುಳಜಪ್ಪನಿಗೆ ಕೇಳಿ ತಿಳಕೋಳ್ಳಬೇಕು ಅಂತ ಫಕೀರಪ್ಪ ಆತನ ಹೊರಸಿನ ಮ್ಯಾಲ ಬಂದು ಕುಳಿತುಕೊಂಡ.. ತುಳಜಪ್ಪ ಅಂಗಾತ ಮಲಗಿ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದು ಗೊತ್ತಾಗಿ ಸಧ್ಯ ಇವನಿಗೆ ಝುಳಕ ನಿದ್ದಿ ಹತ್ಯಾದ ಎಬ್ಬಿಸಿ ತೊಂದರೆ ಕೊಡೋದು ಬೇಡ ಆಮ್ಯಾಲ ವಿಚಾರಿಸಿದರಾಯಿತು. ಇವನ ಮಗನಿಗೆ ಕೇಳಿದರೂ ಎಲ್ಲ ಹಕೀಕತ ತಿಳೀತಾದೆ ಅಂತ ಯೋಚಿಸಿ ಮಂಜು ಎಲ್ಲಿ ಅಂತ ಫಕೀರಪ್ಪ ಪ್ರಶ್ನಿಸಿದ. ಅವನೆಲ್ಲಿ ಬಂದಾನೆ ಇವನ ಜೊತೆ ಗೊಂದಳಕ್ಕ ಹೋದವನು ಇನ್ನೂ ವಾಪಸ್ ಬಂದಿಲ್ಲ ಅಂತ ಸಾತವ್ವ ವಾಸ್ತವ ಹೇಳಿದಳು.

ಮಂಜು ಎಂಥ ಹುಡುಗ ಅಪ್ಪನಿಗೆ ಈ ಸ್ಥಿತಿದಾಗ ಬಿಟ್ಟು ಎಲ್ಲಿಗಾದರು ಯಾಕೆ ಹೋಗಬೇಕು ಅಂತ ಕಲ್ಲಪ್ಪ ಪ್ರಶ್ನಿಸಿದ. ಈಗಿನ ಹುಡುಗರ ಸ್ವಭಾವ ಏನು ಅಂತ ಗೊತ್ತೇ ಇದೆಯಲ್ಲ ನಮ್ಮ ಮಕ್ಕಳೂ ಹಂಗೇ ಮಾಡ್ತಾರೆ ಯಾವ ಕೆಲಸಾನೂ ದಂಡೆ ಮುಟ್ಟಿಸಂಗಿಲ್ಲ ಅಂತ ಮುದುಕಪ್ಪ ಎಲ್ಲ ಹುಡುಗರ ಜೊತೆ ಮಂಜೂಗ ಹೋಲಕಿ ಮಾಡಬ್ಯಾಡ ಅವನು ಹಿಂಗೆಲ್ಲ ಮಾಡೋ ಹುಡುಗ ಅಲ್ಲ ಏನೋ ಮಿಸ್ಟೇಕ ಆಗ್ಯಾದ ಇದರ ಬಗ್ಗೆ ಪೂರ್ತಿ ಮಾಹಿತಿ ಸಿಗಬೇಕಾದರೆ ಅವನಿಗೇ ಕಾಯಬೇಕು ಅಂತ ಫಕೀರಪ್ಪ ಸಮಜಾಯಿಷಿ ನೀಡಿದ. ಎಲ್ಲರೂ ಪುನಃ ವಾಪಸ್ ಬಂದು ಅದೇ ಹಣಮಂದೇವರ ಗುಡಿ ಕಟ್ಟೆಗೆ ಕುಳಿತರು.


ತುಳಜಪ್ಪನ ವಿಷಯ ಗೋಡೆಗೆ ಕಿವಿ ಕೊಟ್ಟು ದಾನವ್ವ ಆಗಲೇ ತಿಳಿದುಕೊಂಡಳು ಅವನಿಗೆ ಹೀಗಾಗಿದ್ದು ಒಳಗೊಳಗೆ ಖುಷಿ ನೀಡಿತು ತಕ್ಷಣ ಗಂಡನಿಗೂ ವಿಷಯ ತಿಳಿಸಿದಳು ಆತನಿಗೆ ಖುಷಿ ಆಗಲಿಲ್ಲ ಅಣ್ಣನಿಗೆ ಏನಾತು? ಧೋತರಕ ಯಾಕೆ ನೆತ್ತರ ಹತ್ಯಾದ ಅಂತ ಗಾಬರಿಯಾದ. ನಾನು ಹೋಗಿ ಅವನಿಗೆ ಮಾತಾಡಿಸಿಕೊಂಡು ಬರ್ತೀನಿ ಆವಾಗ ಎಲ್ಲ ಗೊತ್ತಾಗ್ತದೆ ಅಂತ ಹೇಳಿದಾಗ ದಾನವ್ವ ಸುತಾರಾಂ ಒಪ್ಪದೆ ಅವನ ಜೊತೆ ಮಾತಾಡಿ ಬರೋದು ಬ್ಯಾಡ ಅವರ ವಿಷಯ ನಮಗ್ಯಾಕ ಬೇಕು ಅಂತ ಒತ್ತಾಯಪೂರ್ವಕ ತಡೆಯಲು ಮುಂದಾದಳು. ನಾವು ಎಷ್ಟಾದರೂ ಒಡ ಹುಟ್ಟಿದವರು ಅವನಿಗಾದರ ನಮಗೂ ಆದಂಗೇ ಇಂತಹ ಸಮಯದಾಗ ಹೋಗಿ ಮಾತಾಡದಿದ್ದರೆ ಅದು ಸರಿ ಅನಿಸೋದಿಲ್ಲ ಜನ ಏನಂದಾರು ಅಂತ ಪ್ರಶ್ನಿಸಿದ. ಜನರಿಗೆ ಹೆದರಿ ಸಂಸಾರ ನಡೆಸಲು ಆಗ್ತಾದೇನು ? ಅವನಿಗೂ ನಮಗೂ ಯಾವ ಸಂಬಂಧಾನೂ ಇಲ್ಲ ನನ್ನ ಮಾತು ಮೀರಿ ಹೋದರ ನಾನು ಮಾತ್ರ ಒಂದು ಕ್ಷಣವೂ ಮನ್ಯಾಗ ಇರೋದಿಲ್ಲ ಅಂತ ಬೆದರಿಕೆ ಹಾಕಿದಳು. ಹೆಂಡತಿಯ ಮಾತು ಯಲ್ಲಪ್ಪನಿಗೆ ಬಿಸಿತುಪ್ಪವಾಗಿ ಪರಿಣಮಿಸಿತು.

ತುಳಜಪ್ಪನಿಗೆ ಹೀಗಾದದ್ದು ದಾನವ್ವಳಿಗೆ ಹೋಳಗಿ ತುಪ್ಪ ಉಂಡಷ್ಟೇ ಖುಷಿಯಾಯಿತು. ಈ ವಿಷಯ ನಾನು ಸರಿಯಾಗಿ ಬಳಸಿಕೊಬೇಕು ಇವನ ಹೆಸರು ಖರಾಬ ಮಾಡಿದರೆ ಮುಂದೆ ಎಲ್ಲರೂ ಗೊಂದಳ ವೀಳ್ಯಾ ನಮಗೇ ಕೊಡ್ತಾರೆ ಅಂತ ದುರಾಲೋಚನೆ ಮೂಡಿ ಓಣಿತುಂಬಾ ತಿರುಗಾಡಿ ಎಲ್ಲರ ಮುಂದೆ ನಮ್ಮ ಭಾವ ಏನೋ ಬಾನಗೇಡಿ ಕೆಲಸಾ ಮಾಡಿ ಬಂದಾನೆ ಯಾರ ಜೊತೆನೋ ಜಗಳಾ ಮಾಡಿಕೊಂಡು ಈ ಗತಿ ತಂದುಕೊಂಡಾನ. ಅನ್ನ ಹೆಚ್ಚಿದರೆ ಆಪತ್ತು ಹೆಚ್ಚಾಗ್ತದೆ ಅನ್ನೋ ಮಾತು ಖರೇ ಮಾಡಿದ ಇಂಥವನಿಗೆ ಹ್ಯಾಂಗ ನಂಬಬೇಕು ನೀವೆಲ್ಲ ಅವನಿಗೇ ತಾರೀಫ ಮಾಡತಿದ್ದರಿ ಈಗಲಾದರು ಅವನ ಗುಣ ಗೊತ್ತಾಯಿತಿಲ್ಲ ಅಂತ ಇಲ್ಲ ಸಲ್ಲದ ಚಾಡಿ ಹೇಳಿದಳು. ದಾನವ್ವಳ ಮಾತಿಗೆ ಕೆಲವರು ನಂಬಿದರು ಇನ್ನೂ ಕೆಲವರು ನಂಬದೆ ಅವಳದೇನು ಆ ಹೆಂಗಸು ಹೊಟ್ಟೆ ಕಿಚ್ಚಿನಿಂದ ಏನೇನೋ ಸುಳ್ಳು ಹೇಳತಿರಬಹುದು ತುಳಜಪ್ಪ ಎಂದೂ ಖರಾಬ ಕೆಲಸ ಮಾಡೋ ಮನುಷ್ಯ ಅಲ್ಲ ಅಂತ ಮಾತಾಡಿಕೊಂಡರು. ಆದರೆ ತುಳಜಪ್ಪನಿಗೆ ಏನಾಯಿತು ಅನ್ನುವ ಕುತೂಹಲ ಗಾಬರಿ ಮಾತ್ರ ಹಾಗೇ ಮುಂದುವರೆಯಿತು.

ಮಂಜು ಮಧ್ಯಾಹ್ನ ಎರಡರ ಸುಮಾರಿಗೆ ಬಸ್ಸಿಳಿದು ಬರುತ್ತಲೇ ಗುಡಿ ಕಟ್ಟೆಗೆ ಕುಳಿತವರು ಅವನಿಗೆ ಕೂಗಿ ಕರೆದಾಗ ಮೊದಲು ಅಪ್ಪಗ ನೋಡಬೇಕು ಅಂವ ಬಹಳ ನಿತ್ರಾಣ ಆಗ್ಯಾನ ಅಂತ ಕಣ್ಣೀರು ತೆಗೆದು ಹೇಳಿದ. ನಾವೂ ಅದನ್ನೇ ಕೇಳತಿದ್ದೀವಿ ನಿಮ್ಮಪ್ಪನಿಗೆ ಏನಾಗ್ಯಾದ? ಅಂವಾ ಏನೂ ಹೇಳತಿಲ್ಲ ನೀನಾದರು ಹೇಳು ಮಾರಾಯ ಅವನಿಗೆ ಅಂಥಾ ಸ್ಥಿತಿದಾಗ ಬಿಟ್ಟು ನೀನೆಲ್ಲಿ ಹೋಗಿದ್ದೆ ? ನಮಗೆಲ್ಲ ಅವನದೇ ಚಿಂತೆ ಆಗೈತಿ ಅಂತ ಫಕೀರಪ್ಪ ಗಾಬರಿಯಿಂದ ಪ್ರಶ್ನಿಸಿದ. ನಾನೆಲ್ಲೂ ಹೋಗಿಲ್ಲ ಅಪ್ಪನ ಜೊತೆಗೆ ಇದ್ದೆ ನನ್ನ ಕಣ್ಮುಂದೆ ಈ ಘಟನೆ ನಡೆದು ಹೋಯಿತು. ಕಿಸೆಗಳ್ಳನೊಬ್ಬ ಅಪ್ಪನ ತೊಡೆಗೆ ಬ್ಲೇಡ ಹಾಕಿದ ಎಂದಾಗ ಇದು ಮುಂಜಾನೆ ರಿಂಗರೋಡಿನ್ಯಾಗ ನಡದಾದಿಲ್ಲ ಅಂತ ಪ್ರಶ್ನಿಸಿದ. ಹೌದು ಅಂತ ತಲೆಯಾಡಿಸಿದಾಗ ಇದರ ಬಗ್ಗೆ ನಮ್ಮ ಬೀಗ ಬಸಪ್ಪ ಈಗಾಗಲೇ ಎಲ್ಲ ವಿಷಯ ಹೇಳಿದ್ದಾನೆ. ಇದು ಆಗಿದ್ದು ತುಳಜಪ್ಪನಿಗೇ ಅಂತ ಗೊತ್ತಿರಲಿಲ್ಲ ಈಗ ಇದರ ಹಕೀಕತ ಗೊತ್ತಾಯಿತು ಅಂತ ಫಕೀರಪ್ಪ

ಹೇಳುತಿದ್ದಂತೆ ಎಲ್ಲರೂ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿ ನಾವು ಯಾವ ಊರವನೋ ಏನೋ ಪಾಪ ಅಂತ ಯೋಚನೆ ಮಾಡತಿದ್ದೇವು. ಹುಡುಕೋ ಬಳ್ಳಿ ತಾನೇ ಕಾಲಿಗೆ ತೊಡಕಿದಂಗಾಯಿತು ಅಂತ ಗಾಬರಿಯಾದರು. ನಡೀರಿ ಈಗಲಾದರು ಅಂವ ಎದ್ದು ಕುಂತಾನೋ ಇಲ್ಲವೋ ಹೋಗಿ ನೋಡಿ ಬರೋಣ ಇಲ್ಲದಿದ್ದರೆ ಅವನಿಗೆ ದವಾಖಾನಿಗಿ ಕಳಿಸೋ ವ್ಯವಸ್ಥೆ ಮಾಡೋಣ ಅಂತ ಎಲ್ಲರೂ ಪುನಃ ತುಳಜಪ್ಪನ ಮನೆಗೆ ಬಂದರು ಆತ ಹೊರಸಿನ ಮ್ಯಾಲ ಎದ್ದು ಕುಳಿತು ಹೆಂಡತಿ ಮಾಡಿಕೊಟ್ಟ ಗಂಜಿ ಕುಡಕತಿದ್ದ ಎಲ್ಲರಿಗೂ ಆತ್ಮೀಯವಾಗಿ ಬರಮಾಡಿಕೊಂಡ. ನಿನಗೆ ಆರಾಮ ಆಗಿದ್ದು ಛೊಲೊ ಆಯಿತು ಏನೋ ಕೆಟ್ಟ ಘಳಿಗ್ಯಾಗ ಹೀಗಾಯಿತು, ಏನಾದರೂ ಹೆಚ್ಚು ಕಮ್ಮಿ ಆಗಿದ್ದರೆ ಏನ್ಮಾಡೋದಿತ್ತು ಅಂತ ಫಕೀರಪ್ಪ ಆತಂಕ ಹೊರ ಹಾಕಿದ. ” ನೆತ್ತರ ಹೋದರೂ ರೊಕ್ಕ ರೊಕ್ಕ ಹೋಗಲಿಲ್ಲ” ಅಷ್ಟೇ ಸಾಕು ಇದು ನನ್ನ ಪರಿಶ್ರಮದ ರೊಕ್ಕ ಇಡೀ ರಾತ್ರಿ ನಿದ್ದೆಗೆಟ್ಟು ದಿವಟಿಗಿ ಹಿಡಿದು ಗೊಂದಳ ಹೇಳಿ ಬೆವರು ಸುರಸೀನಿ ಆ ರೊಕ್ಕದ ಕಿಮ್ಮತ್ತು ಏನೂ ಅಂತ ನನಗೇ ಗೊತ್ತು ಅದನ್ನು ನಾನು ಕಳಕೊಳ್ತೀನಾ? ಅಂತ ಮುಗ್ಳನಗೆ ಬೀರಿದ. ಭೇಷ್ ತುಳಜಪ್ಪ ನಿನ್ನ ಧೈರ್ಯ ಮೆಚ್ಚಲೇಬೇಕು ಅಂತ ಎಲ್ಲರೂ ಹೊಗಳಿದಾಗ ತುಳಜಪ್ಪನಿಗೆ ಬಹುಮಾನ ಕೊಟ್ಟಷ್ಟೇ ಖುಷಿಯಾಯಿತು.

-ಶರಣಗೌಡ ಬಿ ಪಾಟೀಲ ತಿಳಗೂಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x