ಸೋಲೆಂಬುದೇ ನಿಜ ಗೆಲುವು !: ಡಾ. ಹೆಚ್ ಎನ್ ಮಂಜುರಾಜ್

ಕಲಿಸು ಗುರುವೇ, ಸೋಲುವುದನು ! ಸೋತು ಸುಖಿಸುವುದನು……..!! ಎಂಬ ಪದ್ಯವೊಂದನು ಹಿಂದೆ ಬರೆದಿದ್ದೆ. ಅದನು ಗಮನಿಸಿದವರು ಕೇಳಿದರು: ಜಗತ್ತಿನಲ್ಲಿ ಎಲ್ಲರೂ ಗೆಲ್ಲಬೇಕೆಂದು ಹೊರಟಿದ್ದಾರೆ; ನೀವೇನಿದು: ಹೀಗೆ ಬರೆದಿದ್ದೀರಿ? ಅದಕೆ ನಾನೆಂದೆ: ಎಲ್ಲರೂ ಗೆಲ್ಲುವುದಾದರೆ ಸೋಲುವವರು ಯಾರು? ಒಬ್ಬರು ಗೆಲ್ಲಲು ಹಲವರು ಸೋಲಲೇಬೇಕಲ್ಲವೆ? ಅಂಥವರ ಪೈಕಿ ನಾನು ಎಂದೆ. ಅವರಿಗೆ ಏನನಿಸಿತೋ? ವಿಚಿತ್ರವಾಗಿ ನೋಡಿದರು.

ಲೋಕದಲ್ಲಿ ಗೆಲುವಿಗಾಗಿ ಹಂಬಲಿಸುವವರೇ ಎಲ್ಲ; ಸೋಲುವವರು ಇಲ್ಲವೇ ಇಲ್ಲ! ನಮ್ಮ ಮನೆ, ಮನೆತನ, ಸಂಬಂಧಿಕರು, ಸ್ನೇಹಿತರು, ಶಾಲೆ, ಶಿಕ್ಷಣ, ವ್ಯವಸ್ಥೆ ಅಷ್ಟೇ ಅಲ್ಲ; ಹುಟ್ಟಿದಂದಿನಿಂದಲೂ ಸಾಯುವತನಕ ಎಲ್ಲವನ್ನೂ ಎಲ್ಲರನ್ನೂ ಗೆಲ್ಲಲೇಬೇಕೆಂಬ ಹಟ ಮತ್ತು ಚಟವನ್ನು ನಮಗೆ ಕಲಿಸಲಾಗುತ್ತದೆ. ಅದರಂತೆಯೇ ತರಬೇತಿಸಲಾಗುತ್ತದೆ. ನಮ್ಮ ಅಂತರಾತ್ಮವು ಸದಾ ಗೆಲುವನ್ನೇ ಧೇನಿಸಿ, ಧರಿಸಲು ಉತ್ಸುಕವಾಗುತ್ತದೆ. ಒಂದು ಸಲ ಸೋತರೂ ಇನ್ನು ಜೀವನವೇ ಇಲ್ಲವೆನ್ನುವಷ್ಟು ದುಃಖಿಸಲಾಗುತ್ತದೆ. ಸೋಲನ್ನು ಸ್ವೀಕರಿಸುವ ಮನೋಧರ್ಮವನ್ನು ನಾವು ಹೊಂದುವುದೇ ಇಲ್ಲ. ಹಾಗಾಗಿ ಹೊಂದಾಣಿಕೆ ಎಂಬುದು ಬಾಳಲ್ಲಿ ಮರೀಚಿಕೆ. ಚಿಕ್ಕ ಪುಟ್ಟದ್ದಕ್ಕೆಲ್ಲ ರಾಜಿಯಾಗುವಂಥದು ಬರುವುದೇ ಇಲ್ಲ. ಕಲಿತರೆ ತಾನೇ ಬರುವುದು?

ಎಲ್ಲರೂ ಗೆಲ್ಲಲು ಸಾಧ್ಯವೇ? ಇಷ್ಟಕೂ ಗೆಲುವು ಎಂದರೇನು? ಅದೊಂದು ಬಗೆಯ ಅಹಂಕಾರ ತಾನೇ? ಯಾವ ಅಹಂಕಾರಕ್ಕೆ ಬೆಲೆಯಿದೆ? ಬೆಲೆಯಿದ್ದರೂ ಇರಬಹುದು. ಮೌಲ್ಯವಂತೂ ಇಲ್ಲ. ಅಹಮಿಂದ ಮೆರೆದವರು ಏನಾದರು? ಬಡತನವೇ ಎಲ್ಲ ಅಪರಾಧಗಳ ತಾಯಿ ಎಂಬ ಒಂದು ಮಾತಿದೆ. ಅದರಂತೆ, ಎಲ್ಲ ಅಧಃಪತನಕೂ ಅಹಮೇ ತಂದೆ. ಅಹಂ ಹುಟ್ಟಿದೆ ಎಂದರೆ ಮುಂದೊಂದು ದಿನ ಪತನ ಖಂಡಿತ ಎಂಬುದು ಸೂಚಿತ. ಹಾಗಾಗಿ ಗೆಲುವು ನಿಂತಿರುವುದೇ ಅಹಮಿನ ಮೇಲೆ. ಇಷ್ಟಕೂ ಗೆದ್ದ ಮೇಲೆ ನಾವು ಹೇಗಿರುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವದ ಔನ್ನತ್ಯ. ಗೆಲ್ಲುವುದು ಮುಖ್ಯವಲ್ಲ; ಗೆದ್ದ ಮೇಲೆ ಬದುಕುವುದು ಮುಖ್ಯ. ಶಾಂತಿ ನೆಮ್ಮದಿಗಳಿಂದ ಇರುವುದು ಮುಖ್ಯ. ಸಾಧನೆಗಳ ರೆಕಾರ್ಡನ್ನು ಮುರಿಯವುದೇ ಇನ್ನೊಂದು ಸಾಧನೆ. ನಾನು ಗೆದ್ದ ಮೇಲೆ ಗೆಲುವು ನನ್ನ ಬಳಿಯೇ ಇರುವುದಿಲ್ಲ. ಅದು ಲಕ್ಷ್ಮಿಯಂತೆ ಚಂಚಲ. ಇನ್ನೊಬ್ಬರ ಬಳಿ ಓಡಿ ಹೋಗುವುದು. ಒಮ್ಮೆ ನಾನೂ ಗೆದ್ದಿದ್ದೆ. ನನ್ನ ಸರದಿ ಮುಗಿಯಿತು. ಈಗ ಇನ್ನೊಬ್ಬರು ಗೆದ್ದರು ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ತನಕ ನಮ್ಮ ಹುಂಬತನ ಮತ್ತು ಭ್ರಮೆಗಳು ಹೋಗಲಾರವು.

ಎಲ್ಲ ಸಂದರ್ಭಗಳಲ್ಲೂ ಗೆಲ್ಲುವುದೇ ಮುಖ್ಯವಾಗುವುದಿಲ್ಲ ಎಂಬ ಮಾತನ್ನು ಹೇಳಲು ಇವನ್ನು ಬಳಸಿಕೊಂಡಿದ್ದೇನೆ. ತಗ್ಗುವುದು ಬಗ್ಗುವುದು, ತಗ್ಗಿ ಬಗ್ಗಿ ನಡೆಯುವುದು ನಿಜದ ಸೋಲಲ್ಲ. ಅದೂ ಗೆಲುವೇ! ಸೋತಂತಿರುವ ಗೆಲುವು. ಅದು ನಮಗೆ ಕಲಿಸುವ ಸೌಹಾರ್ದ, ಸೌಜನ್ಯ, ಸಹಜೀವನವನ್ನು ಗೆದ್ದು ಬೀಗುವ ಅಹಂಕಾರ ಹೇಳಿಕೊಡದು. ತೀವ್ರ ಹಂಬಲವು ಕೇವಲ ಗೆಲುವಿನದೇ ಆಗಿರಬೇಕಿಲ್ಲ. ಸೋಲಬೇಕೆಂಬುದೂ ಒಂದು ಬಗೆಯ ನಯವಾದ ಹಂಬಲ. ಇದು ಉದಿಸಿದರೆ ಜಗತ್ತು ಬೇರೊಂದು ರೀತಿಯಲ್ಲಿ ಕಾಣತೊಡಗುವುದು. ಸೋತು ಸುಖಿಸುವ ದಾರಿಯಲ್ಲಿ ನಡೆಯುವವರು ತೀರಾ ವಿರಳ. ಅಂಥ ದಾರಿಯ ಅಂದ ಚೆಂದವನ್ನು ನಾವು ಆಸ್ವಾದಿಸಲು ಹೊರಡಬೇಕು. ಇಷ್ಟಕೂ ಸೋಲು ಗೆಲುವುಗಳು ಪಂದ್ಯದಲಿ ಭಾಗವಹಿಸುವವರಿಗೆ ಅನ್ವಯ. ಪಂದ್ಯದಲೇ ಭಾಗವಹಿಸದವರಿಗೆ ಸೋಲು ಗೆಲುವುಗಳು ತಟ್ಟುವುದೇ ಇಲ್ಲ; ಅವರನ್ನು ಮುಟ್ಟುವುದೂ ಇಲ್ಲ! ಆಟದಲೇ ಭಾಗವಹಿಸದವರನ್ನು ಸೋಲಿಸುವುದಾದರೂ ಹೇಗೆ? ಅಂದರೆ ನನ್ನನ್ನು ನಾನು ಗೆಲ್ಲಬೇಕು; ಜಗತ್ತಿನ ಎಲ್ಲದರ ಮುಂದೆ ಸೋಲಬೇಕು. ಆಗ ಲಭಿಸುವುದು ನಿರಂತರ ಸಂತಸ ಮತ್ತು ಉಲ್ಲಾಸ.
ಯೋಗವಾಸಿಷ್ಠದಲಿ ಒಂದು ಸುಭಾಷಿತವಿದೆ: ‘ಅಪಿ ಮೇರುಸಮಂ ಪ್ರಾಜ್ಞಮಪಿ ಶೂರಮಪಿ ಸ್ಥಿರಂ ; ತೃಣೀಕಕರೋತಿ ತೃಷ್ಣೈಕಾ ನಿಮೇಷೇಣ ನರೋತ್ತಮಮ್.’ ಮೇರು ಪರ್ವತದಂತೆ ಸ್ಥಿರವಾಗಿ, ಅದರ ಎತ್ತರದಷ್ಟು ಜ್ಞಾನವುಳ್ಳವರಾಗಿ ಶೂರಸೇನರಾಗಿ ಇರುವಂಥವರು ಕೂಡ ಯಾವುದೋ ಒಂದು ತೀವ್ರ ಸೆಳೆತದ ನೀರಡಿಕೆಗೆ ಸಿಲುಕಿಕೊಂಡು ಬಿಟ್ಟರೆ ಕ್ಷಣಮಾತ್ರದಲೇ ಆ ಎಲ್ಲ ಅರ್ಹತೆಗಳನ್ನು ಕಳೆದುಕೊಂಡು ಹುಲ್ಲಿನ ಮಟ್ಟಕ್ಕೆ ಇಳಿದು ಬಿಡುವರು. ಇದು ಈ ಶ್ಲೋಕದ ಇಂಗಿತ. ತೃಷ್ಣಾ ಎಂದರೆ ಬಾಯಾರಿಕೆ. ಹಲವು ಹಂಬಲಗಳ ಕೊನೆಯಿರದ ಬಯಕೆ. ಮನದಲ್ಲಿ ಉದಿಸಿದ್ದು ಬೇಕೆಂಬ ಚಡಪಡಿಕೆ. ಎಂಥವರು ಎಂಥೆಂಥವರು ಏನೇನಾದರು? ಎಂಬುದನ್ನು ನಮ್ಮ ಪುರಾಣ ಕತೆಗಳೇ ಯಾಕೆ, ಚರಿತ್ರೆಯೂ ಪಾಠ ಹೇಳಿ ಕೊಡುತ್ತದೆ. ಪುರಾಣ, ಚರಿತ್ರೆಗಳುದ್ದಕೂ ಇರುವುದು ಇಂಥವೇ ತಾನೇ? ಗೌರೀಶಂಕರದಷ್ಟು ಎತ್ತರದ ಕೀರ್ತಿವಂತರು ಕೊನೆಗೆ ಹುಲ್ಲಿನ ಮಟ್ಟಕ್ಕೆ ಇಳಿದು ಬಿಡುವರು ಎಂದು ಈ ಸುಭಾಷಿತ ಅಳಲು ಪಡುತ್ತದೆ.

ಹಾಗಾಗಿ, ನಮಗೆ ಬೇಕಾದದ್ದು ಇಂಥ ಸೋಲು ಅಲ್ಲ, ಜಗತ್ತನ್ನು ಗೆದ್ದು ತನ್ನೂರಿಗೆ ಮರಳಿ ಹೋಗುವ ದಾರಿಯಲಿ ಬರಿಗೈಯಾಗಿ ಅಸು ನೀಗಿದ ಅಲೆಗ್ಸಾಂಡರನ ದಿಗ್ವಿಜಯವೂ ಬೇಕಿಲ್ಲ! ಸೋಲು ಗೆಲುವುಗಳೆರಡರಾಚೆಗಿನ ನಿರುಮ್ಮಳ ಮನಸ್ಥಿತಿ. ಅದಕಾಗಿಯೇ ಗೆಲುವು ತರುವ ದುರಹಂಕಾರಕಿಂತ ಸೋಲು ತಂದಿಡುವ ವಿನಯ ವಿವೇಕಗಳೇ ಹೆಚ್ಚು ಸೂಕ್ತ. ಗೆದ್ದವರು ಕೇವಲ ತಮ್ಮ ಸಾಧನೆಯನ್ನು ನೆನೆ ನೆನೆದು ಚರ್ವಿತ ಚರ್ವಣ ಅದನ್ನೇ ಉಸುರುತ್ತಿರುತ್ತಾರೆ. ಆದರೆ ಸೋಲು ಹಾಗಲ್ಲ; ಅದು ಜೀವನಾನುಭವ ತಂದು ಕೊಡುತ್ತದೆ. ವಿಜಯಿಗಳ ವೈಭವಕಿಂತ ಸೋತವರ ನಿರಾಸೆ ಮತ್ತು ಹತಾಶೆಗಳಲ್ಲಿ ಬದುಕು ಬನಿಯಾಗಿರುತ್ತದೆ. ಇಷ್ಟಕೂ ಸೋತ ಮಾತ್ರಕೆ ಸತ್ತಂತಲ್ಲ; ಸೋತಾಗ ದುಃಖ ಮತ್ತು ಅವಮಾನಗಳು ಆಗುತ್ತವೆ. ಇಲ್ಲವೆಂದಲ್ಲ. ಆದರೆ ಅದು ಜೀವನವನ್ನು ಅರ್ಥೈಸುತ್ತದೆ. ಯಾರು ನಮ್ಮವರು ಮತ್ತು ಯಾರು ನಮ್ಮವರಲ್ಲ ಎಂಬುದನ್ನು ಶ್ರುತಪಡಿಸುತ್ತದೆ. ಸ್ನೇಹ ಸಾಂತ್ವನ ಜೊತೆಯಾಗುತ್ತದೆ. ನಿಸ್ವಾರ್ಥಿಗಳು ಮತ್ತು ಸಮಾನ ಮನಸ್ಕರು ಬೆನ್ನಿಗೆ ನಿಲ್ಲುತ್ತಾರೆ; ಇರಿಯುವುದಿಲ್ಲ!

ಬಿರುಗಾಳಿಗೆ ಒಂದು ದೊಡ್ಡ ತೆಂಗಿನಮರ ಬಿದ್ದು ಹೋಗುತ್ತದೆ; ಆದರೆ ನಳನಳಿಸುತ್ತಿರುವ ಪುಟ್ಟ ಗಿಡ ಬಾಗುತ್ತದೆ; ಮುರಿಯುವುದಿಲ್ಲ. ಹಾಗೆ ನಮ್ಮ ಜೀವನದ ಸೋಲು. ಇನ್ನೊಂದು ಅವಕಾಶವನ್ನು ಕೊಡುವ ಎಲ್ಲವೂ ನಮಗೆ ಲಭಿಸಬೇಕಾದರೆ ಸೋಲಬೇಕು. ಸೋಲಿನ ಕಹಿಯನ್ನು ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸಿ, ಅಂತರಾವಲೋಕನಕ್ಕೆ ಹಚ್ಚಬೇಕು. ನಮ್ಮತನವು ನಮಗೇ ಪರಿಚಯವಾಗಲು ಸೋಲಬೇಕು. ಇದುವೇ ನಿಜವಾದ ತನ್ನ ತಾನರಿಯುವ ವಿಧಾನ. ಪರತತ್ತ್ವ ಪರಿಚಯವಾಗುವ ಸಾಧನ.

ಹಿಂದಿನ ಕಾಲದ ದೇವಸ್ಥಾನಗಳಲ್ಲಿ ಗರ್ಭಗುಡಿಯ ಬಾಗಿಲ ಚೌಕಟ್ಟು ತಗ್ಗಿನಲ್ಲಿರುತ್ತಿದ್ದವು. ದೇವರನ್ನು ನೋಡಲು ತಲೆ ತಗ್ಗಿಸು ಎಂದು ಇದರ ಅರ್ಥ. ಜೀವಾತ್ಮವು ಪರಮಾತ್ಮನನ್ನು ಕಾಣಲು ತಗ್ಗಿ ಬಗ್ಗಿ ನಡೆಯಬೇಕು ತಾನೇ. ಹಿರಿಯರಿಗೆ ಗೌರವ ನೀಡಲು ನಮಸ್ಕರಿಸಬೇಕು. ಅದಕಾಗಿ ಬಗ್ಗಬೇಕು, ಬಾಗಬೇಕು. ಅಹಂಕಾರ ತುಂಬಿದ ಶಿರವನ್ನು ನೆಲಕ್ಕೆ ಅಂದರೆ ಭೂದೇವಿಯ ಪದತಲಕ್ಕೆ ಮುಟ್ಟಿಸಬೇಕು. ಅವರ ಕಾಲನ್ನು ಕಣ್ಣಿಗೆ ಒತ್ತಿಕೊಳ್ಳಬೇಕು. ಅಂದರೆ ನಾನು ಮತ್ತು ನಾನೇ ಎಂಬ ಅಹಮು ಇಳಿಯಬೇಕು ಎಂಬುದಿದರ ಸಂಕೇತ. ಮೇರು ಪರ್ವತದಂತೆ ಇದ್ದವರು ಕೂಡ ಸೋಲುತ್ತಾರೆ ಎಂದೂ ಮೇಲಿನ ಸುಭಾಷಿತವನ್ನು ಅರ್ಥೈಸಬಹುದು.

ನಮ್ಮ ಬಗ್ಗೆ ಯಾರೋ ತಿಳಿದೂ ಅಥವಾ ತಿಳಿಯದೆಯೂ ಮಾತಾಡುವರು. ನಾವು ಮತ್ತೆ ಮಾತಾಡದೇ ಸೋಲಬೇಕು. ಅವರಾಡಿದ ಮಾತು ನಮ್ಮ ಅಂತರಾಳವನು ಕೆದಕಿ ಕಲುಷಿತಗೊಳಿಸಲಿಲ್ಲ ಎಂಬುದು ಗೆಲ್ಲಬೇಕು. ಮಾತಿಗೆ ಒಂದೆರಡು ಅರ್ಥಗಳಿರಬಹುದು. ಆದರೆ ಮೌನಕೆ ಸಾವಿರ ಸಂವಹನಗಳಿವೆ. ಮೌನ ಕೊಡುವ ಅರ್ಥಛಾಯೆಗಳು ಮಾತಿನ ಮೆಹನತ್ತಿನಲಿಲ್ಲ. ಜಾಣರ ನಡುವೆ ದಡ್ಡರಂತಿರಬೇಕು. ಆಗ ನಮ್ಮ ಜಾಣತನ ಇನ್ನಷ್ಟು ಹೆಚ್ಚಾಗುವುದು. ನಾನೇ ಜಾಣನೆಂದು ತೋರಿಸಿಕೊಳ್ಳಲು ಹೋದರೇನೇ ಎಡವಟ್ಟಾಗುವುದು.

ಹುಟ್ಟು, ಬಾಲ್ಯ, ವಿದ್ಯೆ, ಬೆಳೆಯುವ ವಾತಾವರಣ, ಬೆಳೆಸಿದವರ ಪದ್ಧತಿ ಸಂಪ್ರದಾಯಗಳು ಅಂತಿಮವಾಗಿ ನಮ್ಮ ಸಂಸ್ಕøತಿಯನ್ನೂ ವರ್ತನೆಯನ್ನೂ ನಿರ್ಧರಿಸಿರುತ್ತವೆ. ಹಾಗಾಗಿ ನಾವು ಭಿನ್ನವಾದ ವಿಭಿನ್ನವಾದ ಅಭಿಪ್ರಾಯಗಳನ್ನೂ ತೀರ್ಮಾನಗಳನ್ನೂ ತೆಗೆದುಕೊಂಡು ನಮ್ಮಿಷ್ಟದಂತೆ ಬದುಕುತ್ತಿರುತ್ತೇವೆ. ಹೀಗಿರುವಾಗ ಪರಸ್ಪರ ಮಾತುಕತೆಗಳನ್ನು ಆಡುವಾಗ, ಒಟ್ಟಿಗೆ ಕೆಲಸ ನಿರ್ವಹಿಸುವಾಗ, ಒಂದು ಸಮಸ್ಯೆಗೆ ಪರಿಹಾರವನ್ನು ಹುಡುಕುವಾಗ ಸಹಜವಾಗಿಯೇ ನಮಗೆ ಸರಿ ಕಂಡದ್ದು ದಾರಿ ಎನಿಸುತ್ತದೆ. ಉಳಿದವರ ಮಾತುಗಳು ಸರಿ ಎನಿಸದೇ ನಮ್ಮೊಳಗೆ ಕೋಪತಾಪಗಳು ಜನಿಸಲು ಕಾರಣವಾಗಬಹುದು. ಎಲ್ಲರೂ ಅವರವರಿಗೆ ಸರಿ ಎನಿಸಿದ ರೀತಿಯಲ್ಲೇ ಜೀವಿಸುವುದರಿಂದ ಯಾರದು ಸರಿ; ಯಾರದು ತಪ್ಪು ಎಂದು ಏಕಪಕ್ಷೀಯವಾಗಿ ನಿರ್ಣಯಕ್ಕೆ ಬರುವುದೇ ತಪ್ಪಾಗಬಹುದು. ಸರಿತಪ್ಪುಗಳು ದೇಶಕಾಲಸಂಸ್ಕøತಿ ನಿರ್ಣಯಿತ. ಇತಮಿತ್ಥಂ ಎಂದು ಹೇಳುವುದು ಯಾವುದೂ ಇಲ್ಲ. ಉದ್ದೇಶ ಒಳ್ಳೆಯದಿದ್ದರೆ ಸರಿ. ಸಮುದಾಯಕ್ಕೆ ಅನುಕೂಲವಾದರೆ ಇನ್ನೂ ಸರಿ. ನಡೆಯುವ ದಾರಿಯಲ್ಲಿ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆಗಳು ಅಳತೆಗೋಲಾದರೆ ತುಂಬಾನೇ ಸರಿ ಅಷ್ಟೆ.

ಸರಕಾರವೇ ಮದ್ಯವನ್ನು ಮಾರಿ ಅದರ ಅಬ್ಕಾರಿ ತೆರಿಗೆಯಲ್ಲಿ ನನಗೆ ಸಂಬಳ ಕೊಡುವಾಗ ನಾನು ಮದ್ಯಪ್ರಿಯರನ್ನು ದ್ವೇಷಿಸಿದರೆ ನನ್ನನ್ನು ನಾನು ದ್ವೇಷಿಸಿದಂತೆಯೇ ತಾನೇ! ಹಣವು ಎಲ್ಲರ ಬಳಿಯೂ ಓಡಾಡುತ್ತಿರುತ್ತದೆ. ಲಂಚ ಪಡೆದ ಭ್ರಷ್ಟರು ತಮ್ಮ ಪಾಪಪ್ರಜ್ಞೆಯಿಂದಾಗಿ ಸ್ವಲ್ಪ ಭಾಗವನ್ನು ದೇವರ ಹುಂಡಿಗೆ ಹಾಕಿದಾಗ ಅದೇ ಸಂಪತ್ತಿನಿಂದ ದೇವಾಲಯದ ಜೀರ್ಣೋದ್ಧಾರ ನಡೆಯುವಾಗ ನಾನು ಏನು ಮಾಡಲು ಸಾಧ್ಯ? ಭೂಮಿಯನ್ನು ತುಂಡು ಮಾಡಿಕೊಂಡು ಮುಳ್ಳು ಬೇಲಿ ಹಾಕಿಕೊಂಡು ಇದು ನನ್ನ ದೇಶ; ಅದು ನಿನ್ನದು ಎಂದು ಹೇಳುವಾಗ ಯುದ್ಧದ ಮೂಲಕ ಅಮಾಯಕರ ಬಲಿಯಾಗುವಾಗ ನಾ ಕಲಿತ ವಿದ್ಯೆ ಮತ್ತು ವಿವೇಕಗಳು ಜಾಗೃತವಾಗಿವೆಯೇನು?

ಪ್ರಪಂಚ ಇರುವುದೇ ಹೀಗೆ. ನಾನು ಬದಲಾಗಬೇಕು; ಜಗತ್ತನ್ನು ಬದಲಿಸಲು ಹೊರಡಬಾರದು ಎಂಬ ವಿವೇಚನೆ ಪ್ರಥಮತಃ ನನಗಿರಬೇಕು. ಆ ಮಟ್ಟಿಗೆ ಒಬ್ಬ ದುಷ್ಟನು ಸಜ್ಜನನಾಗುವನು ತಾನೇ. ಹೀಗಿರುವುದರಿಂದಲೇ ಕವಿ ಕುವೆಂಪು ಅವರು ಪೂರ್ಣದೃಷ್ಟಿ ಎಂಬ ತತ್ತ್ವವನ್ನು ಪ್ರತಿಪಾದಿಸಿದರು. ಯಾವುದೋ ಆ್ಯಂಗಲಿನಿಂದ ನೋಡುವುದಲ್ಲ; ಹಾಗೆ ನೋಡಿದರೆ ಸಹಜವಾಗಿಯೇ ನನಗೆ ಐಬುಗಳು ಕಾಣುತ್ತವೆ. ಕಾಡಿನಲ್ಲಿ ಮಾಂಸಹಾರಿ ಪ್ರಾಣಿಗಳು ಇಲ್ಲದೇ ಹೋಗಿದ್ದರೆ ಸಸ್ಯಾಹಾರಿ ಪ್ರಾಣಿಗಳು ಮಾತ್ರವೇ ಇದ್ದಿದ್ದರೆ ಕಾಡು ನಾಶವಾಗುತ್ತಿತ್ತು. ಜೊತೆಗೆ ಸಸ್ಯಾಹಾರಿ ಪ್ರಾಣಿಗಳು ಸಹ ಹಸಿವೆಯಿಂದ ಸಾಯುತ್ತಿದ್ದವು. ಇಂಥ ಪ್ರಕ್ರಿಯೆಯನ್ನೇ ನಮ್ಮ ಪುರಾಣ ಮತ್ತು ಕಾವ್ಯಗಳು ಲೀಲೆ ಎಂದು ಕರೆದವು. ಲೋಕವೇ ಒಂದು ದೊಡ್ಡ ಲೀಲೆ. ಯಾರೋ ಬಂದು ಭಾಷಣ ಮಾಡುವಾಗ, ಎಲ್ಲಿಂದಲೋ ಜನಸಾಗರವನ್ನು ದುಡ್ಡು ಕೊಟ್ಟು ಕರೆತಂದಾಗ, ಆರ್ಥಿಕ ಚಕ್ರ ಸಲೀಸಾಗಿ ಉರುಳುವ ಚೋದ್ಯವನ್ನು ಗಮನಿಸಬೇಕು. ಅಂಥಲ್ಲಿ ಕೂಡಿಟ್ಟಿದ್ದ ಕಪ್ಪುಹಣ ಕರಗುತ್ತದೆ. ಶ್ರಮಿಕರ ಬಳಿ ಬಿಳಿಯಾಗುತ್ತದೆ! ಹಲವರಿಗೆ ತಾತ್ಕಾಲಿಕವಾಗಿಯಾದರೂ ಉದ್ಯೋಗ ಲಭಿಸುತ್ತದೆ. ಅವರ ಮಕ್ಕಳು ಮನೆಯಲ್ಲಿ ಹೊಟ್ಟೆ ತುಂಬ ಊಟ ಮಾಡುತ್ತಾರೆ. ಇದು ಲೀಲೆಯಲ್ಲದೇ ಇನ್ನೇನು? ಇವನ್ನೆಲ್ಲ ಚಿಂತಿಸುವಾಗ ಲೋಕ ಇರುವುದು ಸರಿ; ನಾನು ಸರಿಯಾಗಬೇಕು ಎನ್ನಿಸುವುದು ಖಾತ್ರಿ.

Slow down, Calm down. Don’t worry, Don’t hurry. Trust the process ಎಂಬ ಮಾತೊಂದಿದೆ. ಚುಚ್ಚುವುದು ಸೂಜಿಯ ಗುಣವಾದರೂ ದಾರದ ಜೊತೆ ಸೇರಿದ ಮೇಲೆ ಅದು ಒಂದನ್ನೊಂದು ಹೊಲಿಯುವ, ಬೆಸೆಯುವ ಕೆಲಸ ಮಾಡುತ್ತದೆ. ಮೇಲ್ನೋಟಕ್ಕೆ ಕೆಡುಕೆನಿಸಿದರೂ ಅದರ ಅಂತರಾಳದಲಿ ಒಳಿತಿನ ಆಶಯ ಇರುತ್ತದೆ. ಇದನರಿತರೆ ಮನಶ್ಶಾಂತಿ ತಾನಾಗಿಯೇ ನೆಲೆಗೊಳ್ಳುವುದು. ಈ ಎಲ್ಲ ಮಾತುಗಳೂ ಸೋತವರ ಉಪದೇಶ ಎಂದೇ ಹೇಳಲಿ, ಚಿಂತೆಯಿಲ್ಲ. ಸೋತ ಸುಖದಲಿ ತನ್ಮಯರಾದವರಿಗೆ ವ್ಯಂಗ್ಯ ಮತ್ತು ಭತ್ರ್ಸನೆಗಳು ಸಹ ಸೈರಣೆಯ ನಗುವನ್ನು ಕದಲಿಸಲಾರವು. ಯಾವುದೂ ನಮ್ಮ ಕಂಟ್ರೋಲಿನಲಿ ಇಲ್ಲ ಎಂಬುದೊಂದು ಜ್ಞಾನೋದಯ. ಜ್ಞಾನೋದಯಗೊಂಡವರು ಸುಮ್ಮನಿರುತ್ತಾರೆ. ಎಲ್ಲವನೂ ಕಂಟ್ರೋಲಿಸಲು ಹೊರಟವರಿಗೆ ದುಃಖ ಕಾದಿದೆ. ಅಲ್ಲಿ ಮಾತ್ರ ಸೋಲು ಗೆಲುವಿನ ಮಾತು ಬರುತ್ತದೆ. ಇಂಥವರಿಗೆ ಎದುರಾಗುವ ಸೋಲು ಆತ್ಮನಿರೀಕ್ಷಣೆಯನ್ನು ತರುವುದಿಲ್ಲ. ಬದಲಿಗೆ ಅಡ್ಡದಾರಿಯಲ್ಲಿ ಗೆಲ್ಲಲು ಪ್ರೇರಿಸುವ ದೌಷ್ಟ್ಯ ಮೈ ದುಂಬುತ್ತದೆ. ಅಲ್ಲಿಂದಾಚೆಗೆ ಸುಳ್ಳು ಮತ್ತು ಮೋಸಗಳೆಂಬ ದುಷ್ಟಮಿತ್ರರು ಜೊತೆಯಾಗುತ್ತಾರೆ. ತನ್ನನೇ ವಂಚಿಸಿಕೊಳ್ಳುವ ಆತ್ಮವಂಚನೆ ಸ್ವಭಾವವಾಗಿ ಬಿಡುತ್ತದೆ.

ಸೋಲೆಂಬುದು ಗೆಲುವಿನ ಮೆಟ್ಟಲು ಎನ್ನುವರು. ಅದು ಯಾವಾಗಲೂ ಮೆಟ್ಟಲಾಗಿಯೇ ಇರಲಿ; ಸಕ್ಕರೆಯ ಬಟ್ಟಲಾಗುವುದು ಬೇಡ. ಗೆದ್ದರೆ ಅಹಮು ಅಡರುತ್ತದೆ. ಆದರೆ ಸೋಲುತಿದ್ದರೆ ಬದುಕು ಅರ್ಥವಾಗುತ್ತಿರುತ್ತದೆ. ಸೋಲು ಗೆಲುವು ಬೇರೆ; ಯಶಸ್ಸು ಪ್ರಗತಿ ಬೇರೆ. ನಾನು ಗೆದ್ದೆ ಎಂದುಕೊಂಡರೆ ಅಲ್ಲಿಗೆ ಜೀವನ ನಿಂತು ಹೋಗುತ್ತದೆ. ಗೆದ್ದರೂ ನಾನು ಸೋತೆ ಎಂದುಕೊಂಡರೆ ವಿನೀತತೆ ಪ್ರಾಪ್ತವಾಗುತ್ತದೆ. ಭಕ್ತನು ಭಗವಂತನ ಬಳಿಗೆ ಹೋಗಲು ಸೋಲಲೇಬೇಕು. ಹಾಗೆಯೇ ಜೀವಿತದ ಗುಟ್ಟನರಿಯಲು ಶರಣಾಗಬೇಕು. ಹೀಗೆ ಕೃತಾರ್ಥನಾದಾಗ ಸೋಲು ಸಹ ಗೆಲುವಾಗುತ್ತದೆ. ಆದರೆ ನಾನು ಗೆದ್ದೆ ಎಂಬ ಭಾವ ಇಲ್ಲದುದರಿಂದ ಮತ್ತು ಅದು ಪಂದ್ಯವಾಗದೇ ಇರುವುದರಿಂದ ಇಂಥ ಕಡೆ ನಾನತ್ವ ವಿಜೃಂಭಿಸುವುದಿಲ್ಲ. ಅಮೃತತ್ವ ಜನಿಸುತ್ತದೆ.
ಸೋತರಂತೆ ; ಸವೆದರಂತೆ. ಗೆದ್ದರಂತೆ ; ಗುರುಗುಟ್ಟಿದರಂತೆ !
ತರುವಾಯ, ಸೋತ ಗುರುವಿನ
ಶಿಷ್ಯರಾದರಂತೆ ಗೆದ್ದ ಜಗವೀರರು.

ಸದಾ ಮಾತಾಡಿದವರು, ಮೌನವ ಕಲಿಯಲು,
ಯಾರೂ ಇಲ್ಲದ ಜಾಗ ತಡಕಿದರು.
ಹಾಗಾಗಿ, ಸೋತ ನೆಮ್ಮದಿ ಗೆದ್ದು ಬೀಗುವ ಅಹಮಿನಲಿಲ್ಲ;
ಬದುಕಿದವರು ಜೀವನದ ವ್ಯಾಖ್ಯಾನ ಮಾಡುವುದಿಲ್ಲ !!

-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x