ಅನುಭವವೇ ಗುರಿ
ಪ್ರೀತಿ
ಮಗುವನ್ನು ಜಿಗುಟಿದ ಕೈಗಳು ತೊಟ್ಟಿಲನ್ನೂ ತೂಗಿದವು. ನೋಡುವ ಕಂಗಳಿಗೆ ಕಾಣಿಸಿದ್ದು ತೂಗುವತೋಳುಗಳ ಕಾಳಜಿ ಮಾತ್ರ. ಜಿಗುಟಿದ ಉಗುರುಗಳ ಕ್ರೌರ್ಯ ಯಾರ ಕಣ್ಣಿಗೂ ಬೀಳಲಿಲ್ಲ
ಹೊಂದಾಣಿಕೆ
ಅವರಿಬ್ಬರದ್ದು ತುಂಬಾ ಹೊಂದಾಣಿಕೆಯ ಸಂಸಾರ. ಅವನು ಪ್ರತೀ ಬಾರಿ ಅದೇ ತಪ್ಪನ್ನು ಮಾಡುತ್ತಾ ಇದ್ದ. ಮತ್ತು ಅವಳು ಎಲ್ಲಾ ಸಲವೂ ಅದಕ್ಕಾಗಿ ಕ್ಷಮೆ ಕೇಳುತ್ತಲೇ ಹೋದಳು.
ಬೆಸ್ಟ್ ಆಕ್ಟರ್
ಮದುವೆಯಾಗಿದ್ದರೂ ಇನ್ನೂ ಸಿನಿಮಾ ರಂಗದಲ್ಲಿ ಶೋಭಿಸುತ್ತಿರುವ ಅವಳಿಗೆ ಗಂಡ ನೀಡುತ್ತಿರುವ ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ ಸಹನಟಿಯರಲ್ಲಿ ಅಸೂಯೆ ಹುಟ್ಟಿಸುತ್ತಿತ್ತು. ರಾಷ್ಟ್ರ ಮಟ್ಟದ ಅತ್ತ್ಯುತ್ತಮ ನಟಿ ಪ್ರಶಸ್ತಿ ಬಂದಾಗ ಅವಳ ಸಂದರ್ಶನ ಮಾಡಿದ ಜನಪ್ರಿಯ ವಾಹಿನಿಯಲ್ಲಿ ಆ ಬಗ್ಗೆ ಪ್ರಶ್ನೆಬಂದಾಗ ಅವಳು ಮಾದಕವಾಗಿ ನಕ್ಕಳು. “ಒಹ್..ನಿಜವಾಗ್ಲೂ..ಅವರು ನನಗೆಷ್ಟು ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ ಕೊಡುತ್ತಾರೆಂದರೆ,ಎಲ್ಲಾದರೂ ನಾನು ಜೀವನ ಸಾಕಾಗಿದೆ. ಆತ್ಮಹತ್ಯೆ ಮಾಡುತ್ತೇನೆಂದರೆ ‘ವಯ್ ನಾಟ್?ಈಗಲೇ ಮಾಡು ಚಿನ್ನ’. ಅನ್ನುವಷ್ಟು!” ಅವಳ ಮಡಿಲಲ್ಲಿ ಕುಳಿತ ರಾಷ್ಟ್ರ ಪ್ರಶಸ್ತಿಯೂ ಅವಳಷ್ಟೇ ಮುದ್ದಾಗಿ ನಕ್ಕಿತು.
ದುರದೃಷ್ಟ
ಅವಳು ಹುಟ್ಟಿದಾಗ ಮಧ್ಯರಾತ್ರಿ. ಅಮ್ಮನೂ, ಸೂಲಗಿತ್ತಿಯೂ ಜೊಂಪಿನಲ್ಲಿದ್ದುದರಿಂದ ಅವಳು ಅತ್ತುದು ಯಾರಿಗೂ ಕಾಣಲಿಲ್ಲ. ಬದುಕಿನುದ್ದಕ್ಕೂ ನೋಯುತ್ತಲೇ ಬೆಳೆದ ಅವಳ ಅಳುವನ್ನು ಜಗತ್ತು ಕಾಣಲಿಲ್ಲ. ಯಾಕೆಂದರೆ ಆವಳು ಅಳುವಾಗೆಲ್ಲಾ ಜಗತ್ತು ನಿದ್ರಿಸುತ್ತಿತ್ತು. ಈಗ ಸಾವು ಅವಳ ಬಳಿ ಬಂದಿದೆ. ಅವಳ ಸಾವಿಗೆ ಜಗ ಅಳುತ್ತದೆಯೋ? ಅದು ಅವಳಿಗೆ ತಿಳಿಯಲಾರದು. ಯಾಕೆಂದರೆ ಈಗ ಅವಳು ನಿದ್ರಿಸುತ್ತಿದ್ದಾಳೆ.
ದಾಂಪತ್ಯ
ಸಮಾನಾಂತರದಲ್ಲಿ ಸಾಗುತ್ತಿದ್ದ ಆ ರೈಲು ಹಳಿಗಳಿಗೆ ಖಚಿತವಾಗಿ ಗೊತ್ತಿತ್ತು. ತಾವೆಂದೂ ಜೊತೆಯಾಗಲಾರವೆಂದು! ಆದರೂ ಆ ಬಗ್ಗೆ ಅವೆರಡೂ ಯಾವತ್ತೂ ದೂರಲಿಲ್ಲ. ಯಾಕೆಂದರೆ ತಮ್ಮ ಮೇಲೆ ದಿನಂಪ್ರತಿ ಸಾಗುತ್ತಿದ್ದ ರೈಲಿನ ಭಾರದ ಅರಿವು ಎರಡಕ್ಕೂ ಚೆನ್ನಾಗಿ ತಿಳಿದಿತ್ತು.
ಅಜ್ಞಾನಿ ಸದಾ ಜಗಳಾಡುತ್ತಿದ್ದ ಅವಳು ಮಾತು ಬಿಟ್ಟಾಗ ಅವನು ತುಂಬಾ ಕುಶಿಯಾದ. ಅವಳ ಮಾತಿಗಿಂತ ಮೌನವೇ ಹೆಚ್ಚು ಅಪಾಯಕಾರಿಯೆಂದು ಆಗ ಅವನಿಗೆ ತಿಳಿದಿರಲಿಲ್ಲ
ಹೆಣ್ಣು
ಸಂಸಾರದ ಕಷ್ಟಗಳಲ್ಲಿ ಮನನೊಂದ ಅವನು ಸಿಗರೇಟ್ ಸೇದಲಾರಂಭಿಸಿದ. ಬಳಿಕ ಕುಡಿತ ಕಲಿತ. ಮೂರನೆಯದಾಗಿ ಗಾಂಜಾ. ಅದರಿಂದಲೂ ಪ್ರಯೋಜನವಿಲ್ಲವೆಂದಾದಾಗ ಸನ್ಯಾಸಿಯಾದ. ಕೊನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ. ಅವಳೆದುರು ಆಯ್ಕೆಗಳಿರಲಿಲ್ಲ.
ಮೊದಲ ರಾತ್ರಿ
ಮಿಲನ ಮಹೋತ್ಸವ ಕಳೆದು ಗಂಡುದೇಹವು ಸುಖದ ಏದುಸಿರಿನೊಂದಿಗೆ ಹೊರಳಿ ಮಲಗಿದಾಗ ಜತೆಗಿದ್ದ ಹೆಣ್ಣು ಮನಸ್ಸಿನ ಸಂವೇದನೆಯು ನಿಟ್ಟುಸಿರಾಗಿ ಕಣ್ಣ ಅಂಚಲಿ ಸ್ಖಲಿಸಿತು
ಇರುವುದೆಲ್ಲವ ಬಿಟ್ಟು
ತುಂಬಿದ ಮೊಸರನ್ನದ ಬಟ್ಟಲಿದಿರು ಧ್ಯಾನಸ್ಥವಾದ ಬೆಕ್ಕಿನ ಮುಚ್ಚಿದ ಎವೆಗಳ ಒಳಗೆ ಪಂಜದ ಉಗುರುಗಳ ಬಿಗಿತದಲ್ಲಿ ವಿಲಿವಿಲಿ ಒದ್ದಾಡಿದ ಇಲಿಮರಿಯ ಕಣ್ಣೊಳಗೆ ಮೃತ್ಯುಭಯ ನೆತ್ತರಾಗಿ ಚಿಮ್ಮಿತು. ಅದೇ ವೇಳೆಗೆ ಮೊಸರನ್ನದ ಬಟ್ಟಲಲ್ಲಿ ರೆಕ್ಕೆಮಡಚಿದ ನೊಣ ಮೂಗರಳಿಸಿತು
ವಾಸ್ತವ
“ಇಷ್ಟೊಂದು ಚೆನ್ನಾಗಿ ಹರಿತವಾದ ಚೂರಿಗಳಂತೆ ನೋವುಗಳನ್ನು ಚಿತ್ರಿಸುತ್ತೀರಲ್ಲಾ.ಹೇಗೆ?” ಅಭಿಮಾನಿಯ ಪ್ರಶ್ನೆಗೆ ಕತೆಗಾರ್ತಿ ಬರಿದೆ ಮುಗುಳ್ನಕ್ಕಳು. ತಾನು ಕಸಾಯಿಖಾನೆಯ ಕೆಲಸಗಾರನ ಹೆಂಡತಿಯೆಂದು ಅವಳು ಹೇಳಲಿಲ್ಲ.
ನೆರಳುಗಳು
ಕನಸು ಕಾಣುವಾಗ ಕಣ್ಣು ಮುಚ್ಚಿರಬೇಕು. ಎವೆಗಳ ಮುಚ್ಚಿಗೆಯಿಲ್ಲದಿದ್ದರೆ ಕನಸುಗಳು ಜಾರಿಹೋಗುತ್ತವೆ ಎಂದು ಅವಳಲ್ಲಿ ಯಾರೂ ಹೇಳಿರಲಿಲ್ಲ. ಎಳವೆಯಿಂದಲೇ ಹಗಲುಗನಸು ಕಾಣುತ್ತಾ ಬೆಳೆದವಳ ಕಣ್ಣುಗಳಲ್ಲಿ ಇದೀಗ ಕನಸುಗಳಿಲ್ಲ. ಬರೀ ನೆರಳುಗಳು ಮಾತ್ರ!
ಕಣ್ಣೀರು
‘ಎಂತಹ ಉಕ್ಕುವ ನೀರಿನ ಜೀವಸೆಲೆಯೂ ಒಂದಿಲ್ಲೊಂದು ದಿನ ಬತ್ತಿಯೇ ಬತ್ತುವುದಂತೆ’ ಅಮ್ಮ ಹೇಳಿದ ನೆನಪು! ನಾನು ಕಾಯುತ್ತಲೇ ಇದ್ದೇನೆ.
–ಸ್ನೇಹಲತಾ ದಿವಾಕರ್, ಕುಂಬ್ಳೆ.