ನವರಾತ್ರಿ ಬರತದ ಅಂತ ಸೂಚನಾ ಹೆಂಗ ಅನ್ನೋದು ನೋಡಿದರನ ತಿಳೀತದ. ಶ್ರಾವಣ ಮಾಸ ಹಬ್ಬ- ಹುಣ್ಣವೀ ಸುರಿಮಳಿ. ದಿನಾ ಕಡಬು-ಹೋಳಿಗೆ, ಮಾಡಿ ಮತ್ತ ತಿಂದು ಎರಡೂ ಸುಸ್ತಾಗಿರತದ. ಅಷ್ಟ ಅಲ್ಲ, ಖರ್ಚಂತೂ ಕೇಳಬ್ಯಾಡರೀ, ಮುಗೀದಂಥಾದ್ದು, ಮ್ಯಾಲ ಹೊಲ ಮನೀಯವರಿಗಂತೂ ಕಳೇ-ಕಂಬಳೀ ಅಂತ ಹಗಲೂ ರಾತ್ರೀ ಕೆಲಸಾ. ಅಷ್ಟಲ್ಲದನ ಮ್ಯಾಲ ಜಿಟಿ ಜಿಟಿ ಮಳೀ. ಹಿಂತಾದರಾಗ, ಯಾರನರೇ ಕೇಳರೀ, ನಮ್ಮನಿಯೊಳಗ, ಶ್ರಾದ್ಧ, ಶ್ರಾವಣ ಮಾಸದಾಗ ಬರತಾವ ಅಂತಾರ. ಮತ್ತ ಹಿರೇರೂಂದರ ದೇವರ ಸಮಾನ ಅಂತ ಅವರೂ ತಮ್ಮದೊಂದು ನೆನಪು ಮಾಡದಿದ್ದರ, ನಾವು ಹಿರೇರನ್ನೇ ಮರತ ಬಿಡತಿದ್ದಿವಿ, ಅದೂ ಗೊತ್ತಿತ್ತೇನೋ ನಮ್ಮ ಹಿರಿಯರಿಗೆ. ಇರಲಿ ಬಿಡರಿ, ಇದೆಲ್ಲಾ ಮುಗಿಯೋದ ತಡಾ ಗಣಪ್ಪ ಬರತಾನ, ಗೌರಿ ಸೆರಗ ಹಿಡಕೊಂಡು. ಮತ್ತ ಕಡಬು-ಮೋದಕಾ. ಅಲ್ಲದ ಎಳಷ್ಟಮೀ, ಅದೂ ಮೂರು ದಿನಾ ಹಬ್ಬಾ. ಇದರ ಜೊತೀಗೇನ, ಭಾಗವತ ಪ್ರೋಷ್ಟಪದೀ ಬ್ಯಾರೇ. ಹಬ್ಬದೂಟ ಉಂಡು ಚಂದಾಗಿ ನಿದ್ದೀ ಮಾಡಿದ್ದರೂ, ಭಾಗವತಾ ಕೇಳಿಕೋತನ ಎಲ್ಲಾರೂ ತೂಕಡಿಸತಾರ. ಈ ಕೋಳೀ ನಿದ್ದಿ ಮಾಡಲಿಕ್ಕೇಂತನ ಭಾಗವತಾ ಇಟ್ಟಿರಬಹುದು ಅಂತ ನನ್ನ ಅಭಿಪ್ರಾಯ. ಹಂಗ ಜೋರಾಗಿ ಹೇಳಿದರ ನಮ್ಮಜ್ಜಿ ಬಿಟ್ಟಾಳೇನು. ತಪ್ಪಾತು ತಪ್ಪಾತು ಅಂತ ಗಲ್ಲಾ ಬಡಕೊಂಡು, ಕೃಷ್ಣಗ ನೂರಾ ಎಂಟು ನಮಸ್ಕಾರ ಹಾಕಸತಾಳ. ಅಲ್ಲ ಖೋಡೀ, ಸವೀ ಅನ್ನೋದು, ಧಾರವಾಡ ಫೇಢೇದಾಗ ಇಲ್ಲ, ದಶಮಸ್ಕಂದ ಭಾಗವತದಾಗನ ಅದ ಅಂತಾಳ. ನಾನೂ ಕುಚ್ಯಾಷ್ಟೀ ಮಾಡಿಕೋತ, “ಸವೀ ಅನ್ನೋದು ಪಿಜ್ಜಾ-ಬರ್ಗರ್ ದಾಗೂ ಅದ” ಅಂದರ, “ಹುಚ್ಚ ಖೋಡೀ ಹುಚ್ಚ ಖೋಡೀ, ಎದ್ದ ನಡೀ ಇಲ್ಲಿಂದ. ನೀಯೇನ ಅಮೇರಿಕಾದಾಕೀ ಇದ್ದೀಯೇನು. ನಾಳೆ ನಿನ್ನ ಕಾಲದಾಗ, ಆ ಪಿಜ್ಜಾ ಬರ್ಗರ್ ನ ದೇವರಿಗೆ ನೈವೇದ್ಯ ಮಾಡತೀಯೋ ಏನೋ” ಅಂತಾಳ. “ಅದರಾಗೇನದ, ಮೈದಾ ಹಿಟ್ಟ ಹಾಕಿರೋದು. ನೀ ಜಿಲೇಬಿಗೆ ಹಾಕತೀಯಲಾ” ಅಂದರ, “ನೀ ಈಗ ಇಲ್ಲಿಂದ ಇದ್ದು ನಡೀತೀಯೋ ಇಲ್ಲೋ, ನಿನ್ನ ಮಾತು ಕೇಳಿದರ, ಉಳ್ಳಾಗಡ್ಡೀ, ಗಜ್ಜರೀ, ಮೂಲಂಗೀನೂ ನೈವೇದ್ಯಕ್ಕ ಬರತಾವ ಅಂತೀ, ಅವನ್ನ ಇಲ್ಲೇ, ನಮ್ಮೂರಾಗ, ನದೀ ದಂಡೀ ಮ್ಯಾಲ ಬೆಳೀತಾರ, ನಮ್ಮ ಸುತ್ತಲೂ ಹನ್ನೊಂದು ಕಿಲೋ ಮೀಟರ್ ನೊಳಗ ಬೆಳಿಯೋ ಎಲ್ಲಾ ಬೆಳೀಗಳೂ ನಮಗ ಜೀರ್ಣಾಗತಾವ, ಅಂತ ವಿಜ್ಞಾನ ಬ್ಯಾರೆ ಹೇಳತೀ, ನೋಡೂ ಅವೆಲ್ಲಾ ತಾಮಸ ಪದಾರ್ಥ, ಅವನ್ನ ತಿಂದರ, ತಾಮಸ ಬುದ್ಧೀನ ಬೆಳೀತದ.” ಅಂತಾಳ. ‘ಅಂದರ ಮೈದಾ ಹಿಟ್ಟಿನ್ಯಾಗೂ ತಾಮಸ ಬುದ್ಧಿ ಅದಯೇನು” ಅಂದರ, “ನೀ ಈಗ ಇಲ್ಲಿಂದ ಇದ್ದು ನಡೀತೀಯೋ ಇಲ್ಲೋ” ಅನ್ನೋದೊಂದು ನಮ್ಮಜ್ಜೀ ಕಡೀಂದ ಚಂದದ ಉತ್ತರ. ನಮ್ಮ ಮನ್ಯಾಗ, ಇಂತಾ ಮಾತುಗಳು ಕೇಳಿದವೂಂದರ, ಹಬ್ಬದ ತಯಾರಿ ಶುರುವಾತೂ ಅಂತನ ಲೆಕ್ಕ. ಅಯ್ಯ, ಇನ್ನೂ ಒಂದು ನಡುವ ಬಿಟ್ಟೆ, “ದೊಡ್ಡವರ ಜೊತೆ ಹೆಂಗ ಮಾತಾಡಬೇಕು ಅಂತ ತಿಳ್ಯೂದುಲ್ಲ, ವಾದ ಮಾಡತೀ, ನಾಳೆ ಗಂಡನ ಮನ್ಯಾಗ ಗಂಡನ್ನ ಮಾರಿ ಬರತೀದಿ, ತೌರು ಮನೀಗೆ ಛೋಲೋ ಹೆಸರತೀಯವಾ” ಅಂತ, ಅವ್ವ ಬೈಯೋದು, ಕಣ್ಣ ತಗದು ಅಂಜಸೋದು, ಝಬರಸೋದು, ಅದಕ್ಕ ಅಜ್ಜಿ, “ಸಣ್ಣದು, ಹಂಗ ಮಾತಾಡತದ, ಅದಕ್ಕೇನು ತಿಳೀತದ, ನಾಳೆ ದೊಡ್ಡದಾತಂದರ, ಹಿಂಗ್ಯಲ್ಲಾ ಯಾಕಂದೀತೂ”. ‘ಇನ್ನ ಬಿಟ್ಟರ, ನನ್ನನ್ನ ಈ ಅಜ್ಜಿ ಮತ್ತ ಅವ್ವ ಕೂಡೀ, ಈಗ ನಪುಂಸಕ ಲಿಂಗದಾಗ ಮಾತಾಡಿದರು, ಹಿಂಗ ಇದ್ದರ, ನನ್ನನ್ನೊಂದು ಕ್ರಿಮಿ ಕೀಟಾ ಮಾಡತಾರ ಇವರು’ ಅಂತ ನಾನೂ ಅಲ್ಲಿಂದ ಜಾಗಾ ಖಾಲೀ ಮಾಡತಿದ್ದೆ. ಅಲ್ಲಾ, ಇರೋ ವಿಷಯಾ ಹೇಳಿದರ, ಈ ಹಿರಿಯಾರಿಗೆ ಹಿಂಗ್ಯಾಕ ಆಗತದೋ ಏನೋ ತಿಳೀದ್ಯುಲ್ಲ, ಏನೇನೋ ಹೇಳತೇನಿ ಅನ್ನಬ್ಯಾಡರೀ, ಇದೆಲ್ಲಾ ನವರಾತ್ರಿಯ ಪೂರ್ವಭಾವಿ ತಯಾರೀನ ಅದ. ಪ್ರತೀ ವರ್ಷದ್ದು ಮತ್ತ.
ಖರೇ ಅಂದರ, ಪಕ್ಷ ಮಾಸದಾಗ, ಉಂಡಿ-ಪಾಯಸಾ-ವಡೀ ತಿಂದು ಸಾಕ, ಸಾಕ ಅನಸಿರತದ. ಮತ್ತ, ನಮ್ಮೂರಾಗ ಇರೋವ ಮೂರ್ನಾಕು ಬ್ರಾಹ್ಮಣರ ಮನೀ, ಅದಕ್ಕ, ಒಬ್ಬರಿಗೊಬ್ಬರು ಹಿಂಗ ಶ್ರಾದ್ಧ-ಪಕ್ಷಗಳಿಗೆ ಬ್ರಾಹ್ಮಣಾರ್ಥಕ್ಕಂತ ಕರದರನೂ, ಕರೀದಿದ್ದರನೂ ಊಟಕ್ಕಂತು ಹೋಗಬೇಕಾಗತದ. ಅದು ಮುಗಿಯೋ ಮೊದಲೇನ, ನಮ್ಮ ಅಜ್ಜೀ ಕಾಟ ಶುರುವಾಗತದ.
ದೇವರ ಮನೀ ಸುಣ್ಣಾ ಬಣ್ಣಾ ಮಾಡರೀ, ಮೊದಲ, ಜಂತೀ, ಮಾಡದ ಮ್ಯಾಲಿನ ಎಲ್ಲಾ ಧೂಳಾ ತಗೀರಿ, ಜಾಡಾ ಗೂಡು ಕಟ್ಟ್ಯಾವ. ಅಂತ ಶುರು ಮಾಡತಾಳ, ನಮ್ಮನೀ ದೇವರೂಂದರ, ತಿರುಪತಿ ವೆಂಕಪ್ಪ, ಅವಗ, ನವರಾತ್ರಿಯೊಳಗ, ಮದುವೆಯ ವಾರ್ಷಿಕೋತ್ಸವ. ಅಲ್ಲಾ, ತಿರುಪತಿ ವೆಂಕಪ್ಪಗ ಎರಡನೇ ಲಗ್ನಾಗಿದ್ದು, ತಪ್ಪಾತು, ತಪ್ಪಾತು, ದೇವರಿಗೆ ಹಂಗೆಲ್ಲಾ ಅನಬಾರದು. ಪದ್ಮಾವತಿ ಮತ್ತ ವೆಂಕಪ್ಪನ ಲಗ್ನಾಗಿದ್ದು, ವೈಶಾಖ ಮಾಸದಾಗಂತ, ಅಂದರ, ವೈಶಾಖ ಶುದ್ಧ ದಶಮೀ ದಿವಸಾ, ಖರೇನ ಇರಬೇಕು ಬಿಡರೀ, ಯಾಕಂದರ, ಈ ಜಾತ್ರೀ, ಮದುವೀ, ಮುಂಜವೀ ಎಲ್ಲಾ ಬ್ಯಾಸಗೀ ದಿನದಾಗ ಬರತಾವ. ಆದರ, ವೈಶಾಖದಾಗ ಮದುವಿ ಮಾಡಿಕೊಂಡ ಆ ತಿಮ್ಮಪ್ಪ, ಆ ಸಂಭ್ರಮಾ ಎಲ್ಲಾ ಇರೋದು ಬ್ಯಾಸಗೀಯೊಳಗ. ಆದರ, ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನ ಈ ನವರಾತ್ರೀಯೊಳಗ ಯಾಕ ಇಟಗೊಂಡಿರತಾನೋ. ಇರಲಿ ಬಿಡರೀ, ಒಟ್ಟಿನ ಮ್ಯಾಲ, ಈ ಆನಿವರ್ಸರಿ ಸಂಭ್ರಮ ಏನದ ಅಂದರ, ಇದು ಹತ್ತು ದಿನ ಇರತದ. ಇರವಲ್ಲತ್ಯಾಕ, ಪ್ರಾಥಮಿಕ ಶಾಲೀಯೊಳಗಿದ್ದಾಗ, ಈ ನವರಾತ್ರೀನ ನಾವು ದಸರಾ ಸೂಟೀ ಅಂತನ ಕರೀತಿದ್ದವಿ, ಮತ್ತ ಅದಕ್ಕಂತನ ಕಾಯತಿದ್ದಿವಿ, ಅದರಾಗೂ ಈ ಪುಸ್ತಕ ಪೂಜೀಗೆ ಇರೋ ಬರೋ ಎಲ್ಲಾ ಪುಸ್ತಕಾನೂ ಇಟ್ಟು, ಮೂರು ದಿವಸ, ನಿರಂಬಳ ಆಗಿರತಿದ್ದಿವಿ. ಪರೀಕ್ಷಾ ಬಂದರೂ ಓದಲಿಕ್ಕೆ ಒಂದೂ ಪುಸ್ತಕ ಇಲ್ಲದಂಗ, ಭಾಳ ಎಚ್ಚರದಿಂದ ಹುಡುಕಿ, ಹುಡುಕಿ ಎಲ್ಲಾ ಪುಸ್ತಕಾ-ಪೆನ್ನು, ದೇವರ ಮುಂದ ಇಡಲಿಕ್ಕೆ ನಮಗೂ ಭಾಳ ಅನುಭವ ಇರತಿತ್ತು. ಆದರ, ನಮ್ಮ ಹಿರಿಯರಿಗೆ ಇದು ಗೊತ್ತ ಇರತಿತ್ತು, ಯಾಕಂದರ, ಅವರೂ ಸಣ್ಣವರಿದ್ದಾಗ ಬಹುಷಃ ಇಂತಾವೆಲ್ಲಾ ಉಪಾಯ ಮಾಡಿದವರೇ ಆಗಿರಬೇಕು. ಅದಕ್ಕ, ಇಲ್ಲೆ ನೋಡು, ನಿನಗ ಓದೋದೇನೂ ಇಲ್ಲ ಅಲ್ಲಾ, ಇಕಾ ಇಲ್ಲೆ “ಶ್ರೀ ವೆಂಕಟೇಶ ಪದ್ಮಾವತಿ ಪರಿಣಯ’ ಪುಸ್ತಕ ಅದ. ಸಣ್ಣದು, ಬರೇ ಹತ್ತ ಅಧ್ಯಾಯ, ದಿನಾ ಒಂದೊಂದು ಓದಿದರೂ ಆಗಿ ಹೋಗತದ, ಓದು ಅಂತ ಬೆನ್ನು ಹತ್ತಿ ಓದಸತಿದ್ದರು. ಅದೂ ಹೆಂಗ, ತಮ್ಮ ಅಡಗೀ ಆಗೋತನಕಾ ಎರಡ ತಾಸು ಓದಬೇಕು. ಅದೂ ಜೋರಾಗಿ, ಮತ್ತ ದಿನಾಲೂ ಸಾಲೀ ಪಾಠಾ ಮನಸಿನ್ಯಾಗ ಓದಿ, ಓದಿ, ಜೋರಾಗಿ ಓದೋದೂದಂದರ, ಭಾರೀ ತ್ರಾಸ. ಅಷ್ಟ ಅಲ್ಲ, ನಡು ನಡುವ ಬರೋ ಸಂಸ್ಕೃತ ಶ್ಲೋಕ ಓದೋವಾಗ, ಕಮಕಮ ಅಂದರಂತೂ ಮುಗೀತು. “ಸಣ್ಣವರೂ, ದೊಡ್ಡವರೂಂತ ನೋಡದ, ತಿರಗಿ ತಿರಗಿ ಅಂತೀಯಲಾ ಆವಾಗ ನಿನ್ನ ನಾಲಿಗೆ ಎಷ್ಟು ಚಂದ ತಿರಗತದಲ್ಲಾ , ಈಗ ನಾಲ್ಕು ಸಾಲಿಗೆ ಕಮಕಮ ಮಾಡತೀ, ನಾಚಿಕಿ ಬರೂದಿಲ್ಲ,” ಅಂತ ಅವ್ವನ ಬೈಗಳಾದರ, ಅಜ್ಜೀ, “ಸಣ್ಣ ವಯಸ್ಸಿಗೇ, ಉಳ್ಳಾಗಡ್ಡೀ ತಿಂದರ ನಾಲಿಗಿ ಹೆಂಗ ಹೊಳ್ಳೀತು, ಮತ್ತ ಅದು ಮಡೀಗ್ಯಾಕ ಬರೂದಿಲ್ಲ ಅಂತೀಯಲಾ, ಈಗ ತಿಳೀತ, ಎಂತಾ ತಾಮಸ ಪದಾರ್ಥ ಅದೂಂತ” ಅಂತಿದ್ದಳು, ನನಗಂತೂ ಅದು ಎಂಥಾ ತಾಮಸಾಂತ ಇನ್ನೂ ತಿಳದಿಲ್ಲ, ತಾಮಸ ಪದಾರ್ಥದಾಗೂ ಇಂಥಾ ತಾಮಸಾ. ಅಂಥಾ ತಾಮಸಾ ಅಂತ ಗ್ರೇಡ್ ಇರತಾವೇನೂಂತನೂ ತಿಳಿದಿಲ್ಲ ಬಿಡರೀ. ಅಂತೂ ಎರಡ ತಾಸು, ವೆಂಕಪ್ಪ ಪದ್ಮಾವತಿಗೆ ನಮ್ಮ ರಜಾ ಮೀಸಲಾಗಿರತಿತ್ತು.
ಇನ್ನೂ ಮುಂಜಾನೀ ಸುದ್ದೀನೆ ಹೇಳಿಲ್ಲ ನಿಮಗ. ಅದೂ ಹಿಂಗ ಅದ. ಈ ನವರಾತ್ರಿಯೊಳಗ, ನಮ್ಮೂರಿನ ನದೀ ದಂಡೀ ಮ್ಯಾಲಿನ ವೆಂಕಪ್ಪನ ಗುಡೀಯೊಳಗ, ನಮ್ಮ ಸುಬ್ಬಕ್ಕ ಹಾಡಿದ್ದು, ಅಂದರ ಸುಬ್ಬಲಕ್ಷ್ಮಿ ಹಾಡಿದ್ದು ಸುಪ್ರಭಾತ ಮೈಕ್ ನ್ಯಾಗ ದಿನಾ ಹಾಕತಿದ್ದರು, ಆಗಿನ್ನೂ ಎಫ್ ಎಂ ರೆಡಿಯೋ ಆಗಲಿ, ಮನೀ ಮನೀಯೊಳಗ, ಟೇಪ್ ರೆಕಾರ್ಡರ್ ಮತ್ತ, ಕಂಪ್ಯೂಟರ್ ಬಂದಿರಲಿಲ್ಲ, ಆ ಹತ್ತೂ ದಿನಾ ನಾವು, ಮುಂಜಾನೆ ಆರು ಗಂಟೆಯೊಳಗ, ಸ್ನಾನ ಮಾಡಿ, ಶ್ರೀ ವೆಂಕಟೇಶ್ವರ ಸುಪ್ರಭಾತ ಪುಸ್ತಕ ಹಿಡಕೊಂಡು, ಸುಬ್ಬಲಕ್ಮ್ಮಿ ಹಾಡೋ ಧಾಟೀ ಮ್ಯಾಲೇ, ಅಕೀ ಜೊತೀಗೇನೇ ಹೇಳಬೇಕು, ಪುಣ್ಯಾಕ್ಕ, ಯಾರಿಗೂ ಅಷ್ಟು ಸಂಗೀತಾ ಬರೂದಿಲ್ಲ, ಇಲ್ಲಾಂದರ, ಆ ಗಮಕಾ ಹಿಂಗ ಬಂದಿಲ್ಲ, ಈ ರಾಗಮಾಲಿಕೆ ಹಿಂಗ ಹಾಡಬೇಕು. ಇದು ಏಕತಾಲದಾಗ ಬರತದ ಇವೆಲ್ಲಾ ಚಿಂತಿ ಇರತಿದ್ದಿಲ್ಲ. ಆದರ, ಇನ್ನೂ ಒಂದು ದೊಡ್ಡ ಕಷ್ಟ ಇರತಿತ್ತು. ಈ ವೆಂಕಟೇಶ ಸುಪ್ರಭಾತ, ಕೇಳಿ-ಹೇಳಿ ಆದ ಮ್ಯಾಲೆ ದಿನಕ್ಕೆರಡು ನುಡಿ ಹಂಗ, ಬಾಯಿಪಾಠ ಮಾಡಿ ಒಪ್ಪಿಸಬೇಕು. ಅದೇನೋ ನಾಲ್ಕೂ ಭಾಗ ಅಂದರ, ಕೌಸಲ್ಯಾ ಸುಪ್ರಜಾ ರಾಮ, ಆದ ಮ್ಯಾಲ ಕಮಲಾ ಕುಚ ಚೂಚುಕ, ಈಶಾನಾಂ ಜಗತೋಸ್ಯ ವೆಂಕಟಪತೇ, ಶ್ರಿಯಃ ಕಾತಾಯ ಕಲ್ಯಾಣ ನಿಧಯೇ ಅಂತ ನಾಲ್ಕೂ ಕಲೀಬೇಕು, ಮುಂದ ಸ್ವಲ್ಪ ದಿನದಾಗ, ಈ ಸುಪ್ರಭಾತದ ಧಾಟೀಯೊಳಗೇನೇ, ವೆಂಕಪ್ಪನ ಸುಪ್ರಭಾತ ಕನ್ನಡದಾಗನೂ ಬಂತು, ಕೌಸಲ್ಯಾ ಪುತ್ರನೇ ರಾಮಾ, ಹಿಂಗ, ಅದನ್ನೂ ಹಿಂಗ ಕಲೀಬೇಕು, ಹಿಂಗಾಗಿ, ಇವತ್ತ ನನಗ ಈ ಎರಡೂ ಸುಪ್ರಭಾತ ಬಾಯಿ ಪಾಠ ಬರತಾವ. ನಮ್ಮ ಪುಣ್ಯ ಜೋರದ, ನಮಗ ಕನ್ನಡ ಮಾತ್ರ ಬರತದ, ತಮಿಳು, ತೆಲಗು ಗೊತ್ತಿದ್ದರ, ಆ ಭಾಷಾದ್ದು ಸುಪ್ರಭಾತ ಕಲಸತಿದ್ದರೇನೋ ಈ ಹಿರಿಯರು.
ಇನ್ನೊಂದು ತಮಾಷೆ ಅಂದರ, ಹಿಂಗ ದಿನಾ ನಮಗ ಮಂತ್ರಾ ಕಲಸತಿದ್ದರಲಾ, ಅದರಾಗ ತಪ್ಪದ ಮುಂಜಾನೆ ನಾವು ಹೇಳೋದು ಒಂದು ಮಂತ್ರಾ ಅಂದರ, ಶ್ರೀ ವಾದಿರಾಜರು ರಚಿಸಿದ ಮಂಗಲಾಷ್ಟಕಾ, ಈಗ ಅದನ್ನ ಮದುವಿ ಮುಂಜಿವಿಯೊಳಗ ಮಾತ್ರ ಹೇಳತಾರ. ಈಗೀಗ ನಾನೂ ಯಾರದರೆ ಮದುವೀಗೆ ಹೋದರ, ಪುರೋಹಿತರ ಜೊತಿಗೆ ಜೋರಾಗಿ, ‘ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲಭೂ…’ ಅಂತ ಹೇಳೀ, ನೂರು ರೂಪಾಯಿ ದಕ್ಷಣೀ ತೊಗೋತೇನಿ, ಅದೂ ದೊಡ್ಡ ದನೀಲೆ ಹಾಡೋದು. ಅಷ್ಟ ಅಲ್ಲ, ಕಣ್ನು ಮುಚ್ಚಿ ಭಾವ ಪೂರ್ಣ ಹೇಳೋದು, ನನಗಂತೂ ಗೊತ್ತದ. ಮೊದಲ ಒಂದೆರಡು ನುಡಿ, ಸ್ಟೇಜ್ ಮ್ಯಾಲೆ ನಿತಿರೋ ಜನಾ, ವಧೂ ವರರ ಹತ್ತಿರದ ಬಂಧುಗಳು ಮತ್ತ ತಂದೀ ತಾಯೀ ಯಾರೇ ಆಗಿರಲಿ, ತಾವು ಸಮಾ ನಿಂದರಲಿಕ್ಕೆ, ಮತ್ತ ತಮ್ಮ ಕೈಯಾಗ ಹಿಡಕೊಂಡು ಸಾಮಾನು, ಮುಂದ ಮಾಡಬೇಕಾದ ಕೆಲಸ, ಇದರ ಕಡೆ ಗಮನ ಜಾಸ್ತಿ ಇರತದ, ಆಮ್ಯಾಲ ಒಂದೆರಡು ನುಡಿ ಆಗೋತನಕಾ ವರಾ ಕನ್ಯಾ ನಿಂತಿದ್ದು ನೋಡತಾರ, ಏನರೆ ಮರತೇವೆನು ಅಂತ ನೆನಪಿಸಿಕೋತಾರ, ಆಮ್ಯಾಲ, ಸುತ್ತಲಿನ ಜನಾ ನಿಂತದ್ದನ್ನ ನೋಡತಾರ. ಅದಕ್ಕ, ನಾವೂನೂ ನಾಕನೇ ನುಡಿಯಿಂದ ಜೋರಾಗಿ, ಅತ್ಯಂತ ತನ್ಮಯ ಭಾವ ತುಂಬಿ ಹೇಳತೇವಿ. ಇದು ಭಾಳ ದಿನದಿಂದ ಅಂದರ ನಾನು ಸಣ್ಣಂದಿನಿಂದ ಬಂದ ರೂಢಿ. ನನ್ನ ಲಗ್ನದಾಗೂ, ನನಗ ಅರಿವಿಲ್ಲದನ, ಕಣ್ಣು ಮುಚ್ಚಿಕೊಂಡು ಮಂಗಲಾಷ್ಟಕಾ ಹೇಳತಿದ್ದರ, ಕೊನೇ ನುಡಿಯೊಳಗ, ಮಂಗಲಂ ಭಗವಾನ್ ವಿಷ್ಣು ಅನಕೋತ ದಿನದ ಹಂಗ ಧನಿ ಜೋರ ಮಾಡಿದರ, ಸುತ್ತಿದ್ದವರೆಲ್ಲಾ ಹೋ ಅಂತ ಕೂಗಿದರು, ನನ್ನ ಗೆಳತ್ಯಾರೆಲ್ಲಾ ನಗಲಿಕ್ಕೆ ಶುರು ಮಾಡಿದರು, ನೋಡಿದರ, ನಮ್ಮವರು ನನ್ನ ತಲೀ ಮ್ಯಾಲ ಜೀರಿಗಿ ಬೆಲ್ಲಾ ಹಾಕಿ ಆಗಿತ್ತು. ಇನ್ನೇನು ನಾನೂ ನಾಚಿಕೊಂಡು, ಅಂದರ, ನನ್ನ ದಡ್ಡತನಕ್ಕ ನಾಚಿಕೊಂಡು ಜೀರಿಗಿ ಬೆಲ್ಲಾ ಅವರ ತಲೀ ಮ್ಯಾಲೆ ಹಾಕಿದೆ. ಆದರೂ, ಜಟ್ಟಿ ಬಿದ್ದರೂ ಮೀಸಿ ಮಣ್ಣಾಗಲಿಲ್ಲ ಅಂತ, ಸಂಸಾರ ಸುಲಲಿತವಾಗಿ ಸಾಗ ಬೇಕಾದರ, ಹೆಂಡತಿ ಆದಾಕಿ ಗಂಡನ ಮಾತು ಕೇಳಬೇಕರೀ ಅಂದೆ, ಪಾಪ, ನನ್ನವರು ಖುಷಿಯಾಗಿ ಬಿಟ್ಟರು. ಅವರ ಗೆಳೆಯಂದಿರೆಲ್ಲಾ “ಇಂತಾ ಹೆಂಡತಿ ಸಿಗಲಿಕ್ಕೆ ಪುಣ್ಯಾ ಮಾಡಿದ್ದಿ ಬಿಡಲೇ,” ಅಂದರು. ನನ್ನ ಗೆಳತ್ಯಾರಿಗೆಲ್ಲಾ ಆಶ್ಚರ್ಯ, ನಮ್ಮ ರೌಡೀ ರಂಗಣ್ಣೀ, ಸಾಧೂ ಸಂಗವ್ವ ಯಾವಾಗಾದಳೂ ಅಂತ. ನಮ್ಮ ದೇವರ ಸತ್ಯ ನಮಗ ಗೊತ್ತು ಬಿಡರೀ, ಮಾತು ನವರಾತ್ರೀ ಬಿಟ್ಟು ಎಲ್ಲೆಲ್ಲೋ ಹೋತು, ಅದೇನೋ ಅಂತಾರಲ್ಲಾ, ಹಂಗ.
ನವರಾತ್ರಿ ಅಂದರ, ಬಂಗಾಳದಾಗ ದುರ್ಗಾ ಪೂಜಾ ಭಾರೀ ಪ್ರಸಿದ್ಧ. ಮತ್ತ ಕರ್ನಾಟಕದಾಗೂ ನವರಾತ್ರಿ, ಎಲ್ಲಾ ಕಡೆ ಶಕ್ತಿ ದೇವತೆಯ ಸನ್ನಿಧಾನಗಳೊಳಗ ಭಾರೀ ಪ್ರಸಿದ್ಧ. ಆದರ, ತಿರುಪತಿಯ ಬ್ರಹ್ಮೋತ್ಸವ ಕೂಡಾ ಈಗನ ಆಚರಿಸೋದು. ಅದಕ್ಕ, ತಿರುಪತೀ ತಿಮ್ಮಪ್ಪನ ಒಕ್ಕಲು ಇದ್ದವರ ಮನೀಯೊಳಗ, ಘಟ್ಟ-ಗಂಟಮಾಲಿ, ಹೂರಣದ ಆರತೀ, ಹತ್ತ ದಿನ ತಪ್ಪೂದಿಲ್ಲ. ದೀಪಾ ಹಾಕೋದು, ಗೊಂಬೀ ಕೂಡಿಸೋದು, ಕ್ವಾಟೀ ಹಾಕೋದು ಹಂಗ ಲಿಂಗಾಯತರ ಮನೀಗಳೊಳಗ ಅಲ್ಲೀಕೇರಿಗಳೂ ಈಗ ಶುರುವಾಗತಾವ. ಶ್ರಾವಣ-ಭಾದ್ರಪದ ಮಾಸಗಳ ವರ್ಷಾಕಾಲ ಕಳೆದು, ಮೋಡಗಳಿಲ್ಲದ ನಿರಭ್ರ ಆಕಾಶ, ಕಾಲ ಕೆಳಗಿನ ಕೆಸರು ಆರಿ ಸ್ವಚ್ಛ ನೆಲಾ, ಮಹಾಪೂರ ಇಳಿದರೂ ತುಂಬಿದ ನದೀ-ಭಾವೀ, ಹೊಲದೊಳಗ ಹಚ್ಚ ಹಸುರಿನ ಹಾಲ ತುಂಬಿದ ತೆನಿಯ ಬತ್ತ, ಜ್ವಾಳ, ಹಗಲೂ ರಾತ್ರಿ ಹೊಲದ ಕೆಲಸಾ ಮಾಡಿದ ರೈತರಿಗೆ ಸ್ವಲ್ಪ ಬಿಡುವು, ಇದು ಖರೇನ ಸುಖದ ಹಬ್ಬ, ಕಷ್ಟಗಳು ಕಳೆದು, ಸುಖ-ಸಮಾಧಾನ ತುಂಬಿರುವ ಮನಸ್ಥಿತಿ. ಒಂದು ರೀತಿ ಇಡೀ ಸಮಾಜದ ತುಂಬೆಲ್ಲಾ ಸಮೃದ್ಧ- ಸಂತೃಪ್ತ ಭಾವನೆ. ಶಬ್ದದಾಗ ಹೇಳಿದರ ಆಗದು, ಅರಿತೇ ತಿಳಿಯ ಬೇಕು.
ನಮ್ಮನಿಯೊಳಗೂ ದೀಪಾ ಹಾಕತಾರ. ಮಕ್ಕಳಾದ ನಾವಂತೂ ದಿನಾ ಹೂರಣ-ಪಾಯಸದ ಊಟಕ್ಕ ತಯಾರಿರತೇವಿ. ದೇವರ ಮನೀ, ಅಡಗೀ ಮನೀ ಎಲ್ಲಾ ಧೂಳಾ ಒರಿಸಕೊಂಡು, ಮಾರೀಗೆ ಸುಣ್ಣಾ ಬಣ್ಣಾ ಮಾಡಿಕೊಂಡು, ನವ ವಧು ವರರ ಹಂಗ, ಆಗಿನ್ನೂ ಪಾರ್ಲರ್ ಗೆ ಹೋಗಿ ಬಂದಂಥಾ ಹುಡುಗೇರಂಗ ಮಿಂಚತಿರತಾವ, ಮುಂದ ಸ್ವಲ್ಪ ದಿನದಾಗ ನಮ್ಮಂಗ ಆಗಿ ಹೊಂದಿಕೋತಾವ ಬಿಡರೀ. ದೇವರ ಮಂಟಪಾ ವಾರ್ನೀಸ ಹಚಿಗೊಂಡು, ದೇವರ ಮನೀ ಬಾಗಲಾ ಚೌಕಟ್ಟು ಬಂಗಾರದ ಬಣ್ಣಾ ಅಥವಾ ಕೆಂಪು ಬಣ್ಣದ ಹೊಸಾ ಸೀರಿ ಧೋತರಾ ಉಟಗೊಂಡು ನಿಂತಂಗ ಆಗಿರತಾವ. ಒಟ್ಟಿನ ಮ್ಯಾಲೆ ನಮಗೆಲ್ಲಾ ಭಕ್ತಿ ಭಾವ ತುಂಬಿ ತುಳಕೋ ಹಂಗ ವಾತಾವರಣ ಸೃಷ್ಟಿಯಾಗತಿತ್ತು.
ಈ ಹತ್ತ ದಿನದ ಹಬ್ಬದಾಗೂ, ದಿನಾ ಮುಂಜಾನೆ ಲಗೂನ ಎದ್ದು, ಸುಪ್ರಭಾತ ಹೇಳಿ, ಕಲಿತು ಆದ ಮ್ಯಾಲೆ, ಒಂದು ಸಣ್ಣ ಬ್ರೇಕ್, ಬ್ರೇಕ್ ಕೆ ಬಾದ್, ದೀಪಕ್ಕ ಮತ್ತ ಘಟ್ಟಕ್ಕ ಏರಸಲಿಕ್ಕೆ ಗಂಟಮಾಲಿ ಮಾಡಬೇಕು. ಹಿತ್ತಲ ತುಂಬ ಬಿಳೇ ಗೊರಟಗೀ ಹೂವು ತುಂಬಿರತಿದ್ದವು, ಆದರ, ನಮ್ಮಜ್ಜೀಗೆ ಹಳದೀ ಗೊರಟಗೀ ಹೂವು ಏರಸ ಬೇಕಂತ, ಅದು ಬಂಗಾರದ ಹೂವು ಏರಿಸಿದಂಗ ಅಂತಿದ್ದಳು. ಆ ಹಳದಿ ಗೊರಟಗಿ ಹೂವಿನ ಕಾಲ ದೀಪಾವಳೀ ಹೊತ್ತಿಗೆ, ನವರಾತ್ರಿಯೊಳಗ ಸಿಗೋದು ಕಡಿಮೀ. ಆದರೂ, ಸಿಕ್ಕಷ್ಟು ತಂದು ಬಿಳೇ ಗೊರಟಗೀ ಜೊತೆಗೇನೇ ಸೇರಿಸಿ, ಮಾಲಿ ಮಾಡತಿದ್ದಿವಿ. ಹಳದೀ ಗೊರಟಗೀ ಏರಿಸಿದರ ಬಂಗಾರದ ಹೂವು ಏರಿಸಿದಂಗಾದರ, ಬಹುಷಃ ಬಿಳೇ ಗೊರಟಗೀ ಬೆಳ್ಳೀ ಹೂವು ಏರಿಸಿದ್ದ ಪುಣ್ಯಾ ಇರಬೇಕು, ಈಗ ಮನೀಯೊಳಗ, ಬೆಳ್ಳೀ ಹೂವು, ಬೆಳ್ಳೀ ಹೂವಿನ ಹಾರ ಭಾಳ ಅವ. ಈಗ ಎಷ್ಟೋ ಸಲ ಬೆಳ್ಳೀ ಹೂವು ಏರಿಸಿ ಪೂಜಾ ಮುಗಿಸಿರತೇನಿ. ಆಗ ಅಂದುಕೊಳ್ಳೋದು, ಬೆಳ್ಳೀ ಹೂವು ಏರಿಸಿದರ, ಬಿಳೇ ಗೊರಟಗೀ ಹೂವು ಏರಿಸಿದ ಪುಣ್ಯಾ ಬರತದ ಅಂತ.
ಮುಂದ, ಅಪ್ಪನ ಪೂಜಾದ ಹೊತ್ತಿಗೆ, ವೆಂಕಟೇಶ ಪದ್ಮಾವತಿಯ ಪರಿಣಯದ ಪುಸ್ತಕ ಓದೋದು, ಮತ್ತ ಬೈಸಿಕೊಳ್ಳೋದು ಅದರ ಒಂದು ಭಾಗನ ಆಗಿತ್ತು ಅದು. ನನ್ನ ಮಂಗಳಾರ್ತಿ ಮುಗಿಯೋ ಹೊತ್ತಿಗೆ, ದೇವರಿಗೆ ಮಂಗಳಾರ್ತಿ, ಆರ್ತೀ ಟೈಮ್ ಬರತಿತ್ತು. ಅಥವಾ ದೇವರಿಗೆ ಮಂಗಳಾರತೀ ಟೈಮ್ ಬಂತೂಂದರ, ನನಗ ಮಂಗಳಾರತೀ ಮುಗೀತಿತ್ತು, ಇದ ಸರೀ. ಇನ್ನೊಂದು ಮುಖ್ಯ ವಿಷಯಾಂದರ, ಅಜ್ಜೀ ಪ್ರೀತಿಯಿಂದ ಝಬರಸೋದು, ಅವ್ವ ಕಣ್ಣ ತಗದ ಬೈಯೋದು, ಇವೆಲ್ಲಾ ದಿನಾ ಇದ್ದರೂನೂ ಒಂದೇ ಒಂದು ದಿನಾನೂ ಅಪ್ಪ, ಈ ವಿಷಯದಾಗ ತಲೀ ಹಾಕತಿದ್ದಿದ್ದಿಲ್ಲ. ಯಾಕ ಬೈತೀ ಮಕ್ಕಳನ ಅಂತನೂ ಹೇಳತಿದ್ದಿದ್ದಿಲ್ಲ, ನೀವ್ಯಾಕ ಹಿಂಗ ತಪ್ಪ ಮಾಡತೀರಿ ಅಂತನೂ ಹೇಳತಿದ್ದಿದ್ದಿಲ್ಲ. ಮಕ್ಕಳು ಇರೋದ ತಪ್ಪ ಮಾಡಲಿಕ್ಕೆ, ಅವ್ವಂದಿರಿರೋದ ಬೈಯಲಿಕ್ಕೆ ಅಂತ ಶತಸಿದ್ಧ ಆಗಿರತಿತ್ತು. ಆದರ, ಅಪ್ಪ, ಈ ಎಲ್ಲಾ ಮಾತು ಕೇಳಿದರೂ ಕಿವಿಯಿಂದ ತಲೀಗೆ ಹೋಗಲಿಕ್ಕೆ ಬಿಡತಿರಲಿಲ್ಲ, ವಾಯುಸ್ತುತಿ, ಗುರು ಸ್ತೋತ್ರ, ವೆಂಕಟೇಶ ಸ್ತೋತ್ರ ಇವೆಲ್ಲಾ ಖಡಖಢಾಯಿಸಿ ಹೇಳತಿದ್ದಾ, ನಾವೂ ಗುರುಸ್ತೋತ್ರ, ವೆಂಕಟೇಶ ಸ್ತೋತ್ರ ಅಪ್ಪ ಹೇಳೋದು ಕೇಳಿ ಕಲಿತದ್ದೇ. ತಾನು, ತನ್ನ ಪೂಜಾ, ತನ್ನ ಲೋಕದಾಗ ಇರತಿದ್ದಾಂತ ಅನಸತಿತ್ತು, ಆದರ, ಇವತ್ತಿಗೆ ತಿಳೀತದ, ಎಂಥಾ ದೊಡ್ಡ ಪಾಠಾ ಇದು. ಮಕ್ಕಳ ಮುಂದ ಹೆಂಡತೀಗೆ ಒಂದು ಮಾತೂ ಹೇಳಲಿಲ್ಲ, ಬೈತಿರಲಿಲ್ಲ. ಒಂದ-ಒಂದು ಭಿನ್ನಾಭಿಪ್ರಾಯಾನೂ ಮಕ್ಕಳ ಮುಂದ ತೋರಸಿಕೊಳ್ಳಲಿಲ್ಲ, ಅವ್ವನೂ ಅಷ್ಟ, ಯಾವ ಒಂದು ಮಾತೂ ಕಷ್ಟಾಂತ ಅನ್ನಲೇ ಇಲ್ಲ, ಇದು, ಯಾವ ಆಪ್ತ ಸಮಾಲೋಚಕರಿಂದಲೂ ಕಲಿತದ್ದಲ್ಲ. ಜೀವನದ ವಿಶ್ವವಿದ್ಯಾಲಯದೊಳಗ ಕಲಿತದ್ದು ಇದು. ಬಡತನಾ ಇತ್ತೇನೋ, ಅದು ಅವರ ಹೊಟ್ಟಿ-ಬಟ್ಟಿ ತನಕಾ ಇತ್ತು, ಮಕ್ಕಳ ಮನಸ್ಸಿಗೆ ಸಂತೋಷದ ಸಮೃದ್ಧೀ ತುಂಬಿ ತುಳಕಿಸತಿದ್ದರು. ಈಗ, ನಮಗೆಲ್ಲಾ ಇದ್ದರೂ, ಏನು ಅದ ಅನ್ನೋದಕ್ಕಿಂತ, ನಮಗೇನಿಲ್ಲಾ ಅನ್ನೋದೊಂದೇ ತಿಳಿಕೊಂಡೇವಿ. ಅದೂ ದೊಡ್ಡ ರಂಬಾಟ ಮಾಡತೆವಿ, ಮಕ್ಕಳಗಿಂತಾ ಸಣ್ಣವರಾಗಿ. ಹೂಂ……. ನಮ್ಮ ತಪ್ಪು ತಿಳಿದರೂನು ಸುಧಾರಿಸಿ, ಬದಲಾಯಿಸಿಕೊಳ್ಳಲಿಕ್ಕೆ ಆಗದಷ್ಟು ಮುಂದ ಬಂದೇವಿ.
ನಮ್ಮನೀಯೊಳಗ, ನಮ್ಮವ್ವ, ದೊಡ್ಡದೊಂದು ತಾಟಿನ್ಯಾಗ, ಎಲ್ಲಾ ಅಡಗೀ ಬಡಸಿ, ಅದರೊಳಗೇನೇ ಹೂರಣದ ಆರತೀ ಮಾಡಿ, ಅಲ್ಲೇ ತುಪ್ಪದ ದೀಪಾ ಹಚ್ಚತಿದ್ದರು. ಎಲೀ ತುಂಬಿದ ತಾಟಿನಿಂದ ದೇವರಿಗೆ, ಘಟ್ಟಕ್ಕ, ದೀಪಕ್ಕ ಆರತೀ ಮಾಡಿ, ವೆಂಕಟೇಶ ಪಾರಿಜಾತದ ಹಾಡು, “ಮಂಗಲಂ ಜಯ ಮಂಗಲಂ, ವರ ವೈಕುಂಠದಿ ಬಂದವಗೆ” ಅಂತ ಹಾಡಿದ ಕೂಡಲೇ, ಮಂಗಳಾರತೀ, ಅಮ್ಯಾಲೆ ದೇವರನ್ನ ಭುಜಂಗಿಸಿ, ತೀರ್ಥಾ ಕೊಡೋದೇ. ನಾನು ಬ್ಯಾರೇ ಮನೀಗೀ ಹೋಗೋಕಿ ಆದ್ದರಿಂದ, ನನಗ ಮೊದಲ ತೀರ್ಥಾ, ಮುತ್ತೈದೀಂತ, ಮ್ಯಾಲೆ ದಕ್ಷಿಣೀನೂ. ಕೊಟ್ಟ ದಕ್ಷಿಣಿ ದೇವರ ಮುಂದ ಇರೋ ಡಬ್ಬೀಗೆ ಹಾಕಿದರೂ, ನನಗೊಂದು ಕೋಡು ಮೂಡಿದಂಗ, ತಮ್ಮ ಮನೀಯವ, ಎಲ್ಲಾರಿಗಿಂತ ಸಣ್ಣವಾ, ಅವಗ ಕಡೇಕ ತೀರ್ಥಾ. ಮತ್ತ ಅವಗ ದಕ್ಷಿಣಿ ಕೊಡೂದಿಲ್ಲ. ನಾನೂ ಸೊಟ್ಟ ಮಾರಿ ಮಾಡಿ, ನಾಲಿಗೀ ಚಾಚಿ ಅವನನ್ನ ರೇಗಸತಿದ್ದೆ, ತಮ್ಮ ಮಾರಿ ಸಣ್ಣ ಮಾಡಿದರ, ಅವ್ವ ಬೈತಿದ್ದಳು, “ಶುರುವಾತ ನಿಮ್ಮ ಝಗಳಾ, ಒಂದ ಕ್ಷಣಾನೂ ಪ್ರೀತಿಂದ ಇರೂದಿಲ್ಲ, ಅಕ್ಕಾಂತ ಅಕ್ಕರತಿ ಅವಗಿಲ್ಲ, ತಮ್ಮಾಂತ ಪ್ರೀತಿ ನಿನಗಿಲ್ಲಾ” ಅಂತಿದ್ದಳು.
ವಿಜಯ ದಶಿಮಿ ಬಂದರ, ನಮ್ಮೂರು ಸಣ್ಣ ಹಳ್ಳಿ, ವಿಜಯ ದಶಮೀ ದಿನ ನಮ್ಮನೀ ಮುಂದಿರೋ ಬಾಡದ ಬಂಕಪ್ಪ, ಮಕ್ಕಳಾಗದೇ ಇದ್ದವರಿಗೆ ಯಾವುದೋ ಒಂದು ಮೂಲಿಕೆಯ ಔಷಧಿ ಕೊಡತಿದ್ದ. ಹಿಂಗ ಕೇಳಿ ತಿಳಿದವರು, ದೂರದಿಂದ ಬರತಿದ್ದರು. ಬ್ರಾಹ್ಮಣರಾಗಿದ್ದರ, ನಮ್ಮಜ್ಜಿ, ಇಲ್ಲೇ ಊಟಕ್ಕೇಳರೀ ಅಂತ ಕರೀತಿದ್ದಳು. ಹಿಂಗ, ಒಂದು ನಾಕೈದು ದಂಪತಿಗಳು, ವಿಜಯ ದಶಮೀ ಊಟಕ್ಕ ಇರತಿದ್ದರು. ಈಗ ನೂರಾರು ಮಂದಿ ಬರತಾರಂತ, ಅವತ್ತ ಜನಾ ಜಾತ್ರಿ, ಯಾರೂ ಊಟಾ ಉಡುಗೀಂತ ಹಚಕೋಳೋದಿಲ್ಲಂತ. ನಾನೂ ಹಳ್ಳಿಗೆ ಹೋಗಿ ಭಾಳ ದಿನಾ ಆದವು.
ವಿಜಯ ದಶಮೀ ಸಂಜೀ ಮುಂದ, ಊರ ಮಂದಿ ಎಲ್ಲಾ ಸೇರಿ, ಬನ್ನಿ ಮುಡೀತಿದ್ದರು. ನಾವೂ ವೆಂಕಪ್ಪನ ಗುಡೀಗೆ ಹೋಗಿ, ಬನ್ನಿ ಕೊಟ್ಟು, ಅಮ್ಯಾಲೆ, ಮನೀಯೊಳಗ ಎಲ್ಲಾರಿಗೂ ಬನ್ನಿ ಕೊಡತಿದ್ದಿವಿ. ಓಣ್ಯಾಗೂ ಎಲ್ಲಾರ ಮನೀಗೂ ಹೋಗಿ ಬನ್ನಿ ಕೊಟ್ಟು ಬಂಗಾರದಂಗಿರೋಣು ಅಂತ ಹೇಳಿ ಬರತಿದ್ದಿವಿ. ನಮ್ಮಜ್ಜಿ ಭಾಳ ಮಡೀ, ಯಾರನೂ ಮುಟ್ಟಿಸಿಕೋತಿದ್ದಿದ್ದಿಲ್ಲ, ಆದರ, ಬನ್ನಿ ಕೊಡೋ ಹಬ್ಬದ ದಿನಾ ಎಲ್ಲಾರೂ ಬಂದು, ಪಾದ ಮುಟ್ಟಿ ನಮಸ್ಕಾರಾ ಮಾಡತಿದ್ದರು. ಕೆಲವೊಮ್ಮೆ ಹಿರಿಯರು, ನಮಗೆಲ್ಲಾ ಬನ್ನಿ ಜೊತೆಗೆ ಹತ್ತು ಪೈಸಾನೂ ಕೊಡತಿದ್ದರು. ಬೆಂಗಳೂರು ಸೇರಿ, ಬನ್ನಿ ಮುಡ್ಯೋ ಹಬ್ಬದ ಸಡಗರಾನ ಮರತದ.
ನಮ್ಮನಿಯೊಳಗ, ಹತ್ತ ದಿನಾ ಎರಡು ನಂದಾದೀಪ ಇಡತಿದ್ದರು. ಒಂದು ತುಪ್ಪದ್ದು, ಇನ್ನೊಂದು ಎಣ್ಣೀದು. ತುಪ್ಪದ ದೀಪ ಹಗಲೆಲ್ಲಾ ಕಾಯಬೇಕು. ಒಮ್ಮೊಮ್ಮೆ ತುಪ್ಪ ಘಟ್ಟಾಗಿ ದೀಪ ಶಾಂತ ಆಗತಿತ್ತು. ಆದರೂ, ಸುತ್ತಲೂ ಘಟ್ಟೆನ್ನೀ ತುಪ್ಪ ಇದ್ದರೂನು, ದೀಪದ ಸುತ್ತಲೂ ಕರಗೀ ಎಣ್ಣೀಯಂತಹ ತುಪ್ಪ ತೇಲತಿತ್ತು. ಜೋಡೀ ನಂದಾದೀಪದ ಬೆಳಕು, ಅದರಾಗ ದೇವರನ್ನ ನೋಡಿದರ, ಎಂತಹಾ ನಾಸ್ತಿಕನಿಗೂ ಭಕ್ತಿ ತುಂಬಿ ಕಣ್ನು ಮುಚ್ಚಿ ಒಂದರಘಳಿಗಿ ದೇವರ ಮುಂದ ನಿಂದರೋಣು ಅನಸತಿತ್ತು. ಈ ದೀಪಾ ಹಾಕೋ ಸಂಭ್ರಮಾ ಅಂತೂ ಭಾಳ ಚಂದ. ಸ್ವಲ್ಪ ಒಣಗಿದ ಕಟಗದ ಕಲ್ಲನ್ನ ಕುಟ್ಟಿ ಪುಡಿ ಮಾಡಿ, ಸ್ವಲ್ಪು ಹತ್ತಿ ಹಾಕಿ, ದುಂಡಗ ಮಣಿಹಂಗ ಮಾಡಿ, ಮೂರು ನಾಕು ದಿನ, ಬಿರುಕು ಬಿಡಧಂಗ, ನೀರು ಹಚ್ಚಿ ತೀಡಿ, ಒಣಗಿದ ಮ್ಯಾಲೆ, ಕೆಮ್ಮಣ್ನು ಬಳದು, ಸುಣ್ಣದ ಗೆರೆ ಎಳೀಬೇಕು. ಸದರ ಮ್ಯಾಲೆ ಎರಡು ಸಮೆ ನಮ್ಮನ್ಯಾಗ ಹಿತ್ತಾಳೀ ಸಮೇ ಒಂದೊಂದೂ ಕಾಲಕೇಜಿ ಎಣ್ನಿ ಹಿಡಸತಿದ್ದವು, ಅವಕ್ಕ ಸ್ವಚ್ಛ ತೊಳದಂಥಾ ನಾಲಗೀ ಮ್ಯಾಲ ಬತ್ತಿ ಇಡತಿದ್ದರು, ಮತ್ತ ಬತ್ತಿ ಜಾರಿ ಹೋಗಧಂಗ ಸಣ್ಣ ಬೆಣಚು ಕಲ್ಲ ಇಡತಿದ್ದರು. ದಿನಾ ಸಂಜೀಮುಂದ ಮಡೀಲೆ ದೀಪಾ ನೋಡೋದು, ಅದಕ್ಕೊಂದು ಭಕ್ತಿಯ ತನ್ಮಯತೆ, ಈಗ ಈ ತನ್ಮಯತಾನ ನಮ್ಮಲ್ಲಿಲ್ಲ. ನಮ್ಮ ಮಾಮಾ ಅಮೇರಿಕಾಕ್ಕ ಇರಲಿಕ್ಕೆ ಹೋದಾಗ, ಅಲ್ಲೆಲ್ಲಾ ಫೈರ್ ಕಂಟ್ರೋಲ್ ಇರತದ, ಕಟಗೀ ದೇವರ ಮನೀ, ದೀಪಾ ಹಾಕೋದು ಹೆಂಗ ಅಂದಿದ್ದಳಂತ, ನಮ್ಮ ಮಾಮೀ. ನಮ್ಮಜ್ಜೀ, ನೋಡೂ ದೀಪಾ ದೇವರ ಕಪಾಟಿನ ಹೊರಗಿಡು ಮತ್ತ ಮ್ಯಾಲೆ ಎರಡು ಗುಬ್ಬಿ ಚಿಮಣಿಯ ಪಾವು ಇಡು ಅಂತ್ಹೇಳಿ, ಇಲ್ಲಿಂದ ಹೋಗೋವರ ಹತ್ತರ, ಎರಡು ಕಾಜಿನ ಪಾವು ಕಳಿಸಿದ್ದಳು. ಭಾಳ ಕಷ್ಟಾದರ, ಇಲ್ಲೆ, ನಿನ್ನ ಹೆಸರಲೇ ಗುಡೀಗೆ ಎಣ್ಣಿ ಕೊಡತೇನಿ ಬಿಡು ಅಂತಿದ್ದಳು. ಅದಕ್ಕ ನಮ್ಮ ಮಾಮಿ, ತಾವಿರೋ ಅಲ್ಲಿನೂ ವೆಂಕಪ್ಪನ ಗುಡಿಯದ, ಅಲ್ಲಿನೇ ದೇವರ ದೀಪಕ್ಕ ಎಣ್ನಿ ಕೊಡೋ ಪದ್ಧತಿ ಇಟಗೊಂಡಿದ್ದಳು. ಮನ್ನೆ, ನಮ್ಮ ಮಾಮಾನ ಸೊಸಿ ಫೇಸ್ ಬುಕ್ಕಿನ್ಯಾಗ, ಫೋಟೋ ಹಾಕಿದ್ದಳು, ಹಾಲ್ ನ್ಯಾಗ ಒಂದು ಮಣೀ ಮ್ಯಾಲ ದೇವರನ್ನ ಕೂಡಿಸಿ, ದೊಡ್ಡದೊಂದು ವೆಂಕಪ್ಪನ ಫೋಟೋ ಇಟ್ಟು, ರಗಡಷ್ಟು ಹೂವು ಹಾಕಿ, ಮುಂದ ದೊಡ್ಡವೆರಡು ಬೆಳ್ಳಿ ಸಮೆದಾಗ, ನಂದಾದೀಪ ಹಾಕಿದ್ದಳು, ಅಲ್ಲಿರೋವರನ್ನ, ಸುತ್ತಮುತ್ತಲಿನವರನ್ನ ದಿನಾ ಕರದು, ದೇವರಿಗೆ ಆರತೀ ಮಾಡಿದಳಂತ. ದಿನಕ್ಕೊಂದು ಬಣ್ಣ ಬಣ್ಣದ ರಂಗೋಲಿ, ಬಂದವರಿಗೆ ಪ್ರಸಾದದ ತಿಂಡಿ, ಮಕ್ಕಳಿಗೆ ನಮ್ಮೂರಿನ ಅಂಗೀ ಹಾಕಿ, ನೋಡಲಿಕ್ಕೆ ಭಾಳು ಛಂದಾಗಿತ್ತು. ನಾನೂ ಕಡೇ ಮೂರು ದಿನಾ ದೀಪಾ ಹಾಕಿದೆ, ಇದನ್ನೆಲ್ಲಾ ನೋಡಿದ ಮ್ಯಾಲ. ಇಲ್ಲಾಂದರ, ಈಗೆರಡು ವರ್ಷದಿಂದ, ಹತ್ತ ದಿವಸ ಮಡೀ ಮೈಲಿಗೀ ಆಗೂದಿಲ್ಲಂತ, ಗುಡೀಗೆ ಎಣ್ಣಿ ಕೊಟ್ಟು ಬಿಟ್ಟಿದ್ದೆ. ಒಂದು ಬಿಟ್ಟ ಎರಡು ಕೆಜಿ ಎಣ್ನಿ, ಮತ್ತ ತುಪ್ಪಾ ಒಂದ ಕೇಜಿ. ದೇವರಿಗೆ ಕಡಿಮೀ ಮಾಡಬಾರದೂಂತ. ಇಲ್ಲಪ್ಪಾ ಈ ವರ್ಷ ನಾನೂ ಮನ್ಯಾಗ ತಪ್ಪದ ನಂದಾ ದೀಪಾ ಹಾಕತೇನಿ. ಬೇಕಿದ್ದರ, ಚೆಕ್ ಮಾಡರಿ, ಫೇಸಬುಕ್ ನ್ಯಾಗ ಫೋಟೋ ಅಪ್ ಲೋಡ್ ಮಾಡತೇನಿ, ನೋಡರೀ.
–ಡಾ. ವೃಂದಾ ಸಂಗಮ್