ಪೆಟ್ರಿಕೋರ್‌ ಎಂಬ ಪ್ರೇಮಕಾವ್ಯ: ಡಾ. ನಟರಾಜು ಎಸ್.‌ ಎಂ.

ಒಂದು ಕಾಲದಲ್ಲಿ ಪುಸ್ತಕಗಳ ಕೊಳ್ಳಲು ಕೆಲವೇ ಕೆಲವು ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡಬೇಕಿತ್ತು. ಈಗ ಮನೆಯಲ್ಲೇ ಕುಳಿತು ಇಷ್ಟದ ಪುಸ್ತಕಗಳನ್ನು ಆನ್‌ ಲೈನ್‌ ನಲ್ಲಿ ಆರ್ಡರ್‌ ಮಾಡಿದರೆ ಪುಸ್ತಕಗಳು ಒಂದೆರಡು ದಿನಗಳಲ್ಲಿ ನಮ್ಮ ಮನೆಗಳ ತಲುಪಿಬಿಡುತ್ತವೆ. ಆನ್‌ ಲೈನ್‌ ನಲ್ಲಿ ಹೋಗಿ ವೆಬ್‌ ಸೈಟ್‌ ಗಳಲ್ಲಿ ವಿವರಗಳನ್ನು ತುಂಬಿ ಪುಸ್ತಕ ಆರ್ಡರ್‌ ಮಾಡುವ ಪ್ರಕ್ರಿಯೆಗಳ ಬದಲು ಕನ್ನಡದ ಮಟ್ಟಿಗೆ ಅತೀ ಸುಲಭವಾಗುವಂತೆ ವಾಟ್ಸ್‌ ಅಪ್‌ ಗಳಲ್ಲಿ ಪುಸ್ತಕದ ಹೆಸರು ಮತ್ತು ವಿಳಾಸಗಳನ್ನು ತಿಳಿಸಿದರೆ ಅತೀ ಕಾಳಜಿಯಿಂದ ಪುಸ್ತಕಗಳನ್ನು ಮನೆಗೆ ತಲುಪಿಸುವ ಕಾರ್ಯದಲ್ಲಿ ಅನೇಕ ಜನರು ತೊಡಗಿಕೊಂಡಿದ್ದಾರೆ. ಈ ಪ್ರಕ್ರಿಯೆ ಉದ್ಯಮವಾಗಿ ಬೆಳೆಯುತ್ತಿರುವುದು ಕನ್ನಡದ ಲೇಖಕರ ಮಟ್ಟಿಗೆ ಒಂದು ಆಶಾಕಿರಣ. ಓದುಗರಿಗೂ ಕೂಡ ಪುಸ್ತಕ ಕೊಳ್ಳುವುದು ಈಗ ಸುಲಭ. ಪುಸ್ತಕದ ಬೆಲೆಗಳೂ ಕೂಡ ಕೈಗೆಟುಕುವಂತಿರುವುದು ಪುಸ್ತಕಗಳನ್ನು ಕೊಳ್ಳಲು ಪ್ರೇರೇಪಿಸುತ್ತವೆ ಎಂದರೆ ತಪ್ಪಾಗಲಾರದು.

ನನಗೆ ಆಗಾಗ ಹೊಸ ಪುಸ್ತಕಗಳ ಕುರಿತ ವಿವರಗಳನ್ನು ಕೆಲವು ಪುಸ್ತಕದ ಅಂಗಡಿಯ ಗೆಳೆಯರು ವಾಟ್ಸ್‌ ಅಪ್‌ ನಲ್ಲಿ ಕಳುಹಿಸುತ್ತಲೇ ಇರುತ್ತಾರೆ. ಅಂತಹುದೇ ಒಂದು ಮೆಸೇಜ್‌ ಅನ್ನು ನನ್ನ ಮೊಬೈಲ್‌ ಗೆ ಇತ್ತೀಚೆಗೆ ಅಮೂಲ್ಯ ಪುಸ್ತಕದ ಕೃಷ್ಣರವರು “ಪೆಟ್ರಿಕೋರ್‌” ಕವನ ಸಂಕಲನದ ಕುರಿತು ಕಳುಹಿಸಿದ್ದರು. ಯಾಕೋ ಆ ಕವನ ಸಂಕಲನದ ಮುಖಪುಟ ನೋಡಿದ ತಕ್ಷಣ “ಈ ಪುಸ್ತಕ ಕಳುಹಿಸಿಕೊಡಿ” ಎಂದು ನನ್ನ ವಿಳಾಸವನ್ನು ಕೃಷ್ಣರವರಿಗೆ ಕಳಿಸಿದ್ದೆ. ಪುಸ್ತಕದ ಟೈಟಲ್‌ ಇಂಗ್ಲೀಷ್‌ ಪದವಾಗಿದ್ದರಿಂದ ಅದರ ಅರ್ಥ ಗೊತ್ತಿಲ್ಲದೆ ಗೂಗಲ್‌ ನಲ್ಲಿ ಅರ್ಥ ಹುಡುಕಿದಾಗ, ಪೆಟ್ರಿಕೋರ್‌ (petrichor) ಎನ್ನುವುದು ಮೊದಲ ಮಳೆಯ ಮಣ್ಣಿನ ಘಮ ಎನ್ನುವ ಉತ್ತರ ಸಿಕ್ಕಿತ್ತು. ಪೆಟ್ರಿಕೋರ್‌ ಇದು ಚೈತ್ರಾ ಶಿವಯೋಗಿಮಠ ಅವರ ಪ್ರಥಮ ಕವನ ಸಂಕಲನ. ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ, ಅನೇಕ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸಿರುವ ಚೈತ್ರಾ, ಉತ್ತಮವಾಗಿ ಕತೆಗಳನ್ನು ವಾಚನ ಕೂಡ ಮಾಡಿರುವುದನ್ನು ಯೂಟ್ಯೂಬ್‌ ನಲ್ಲಿ ನಾವು ಕಾಣಬಹುದು.

ಇನ್ನು ಇವರ ಕವನ ಸಂಕಲನದ ಬಗ್ಗೆ ಹೇಳಬೇಕೆಂದರೆ, ಕೆನ್ನೆಗೆ ಕೈ ಇಟ್ಟುಕೊಂಡು ನಮ್ಮನ್ನೇ ದಿಟ್ಟಿಸುತ್ತಿರುವ ಹುಡುಗಿಯ ಚಂದದ ಚಿತ್ರ ಪುಸ್ತಕದ ಮುಖಪುಟದಲ್ಲಿದೆ. ನೆಲ್ಸನ್‌ ಎನ್ನುವವರು ಮುಖಪುಟದ ವಿನ್ಯಾಸಕರು. ಮುಖಪುಟವನ್ನು ತುಂಬಾ ಆಕರ್ಷಕವಾಗಿ ಮಾಡುವುದರ ಜೊತೆಗೆ ಪುಸ್ತಕದ ವಿನ್ಯಾಸವನ್ನು ನೆಲ್ಸನ್‌ ಚೆನ್ನಾಗಿ ನಿರ್ವಹಿಸಿದ್ದಾರೆ. ಆತ್ಮಿಕಾ ಪುಸ್ತಕ ಬೆಂಗಳೂರು ಇವರು ಪುಕಟಿಸಿರುವ ಪುಸ್ತಕವನ್ನು ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಇವರು ಮುದ್ರಿಸಿದ್ದಾರೆ. ಈ ಪುಸ್ತಕದ ಒಳಪುಟಗಳ ಹೊಕ್ಕರೆ ಪುಸ್ತಕದ ಮೊದಲ ಬ್ಲರ್ಬ್‌ ನಲ್ಲಿ ನೀನಲ್ಲದೆ ಮತ್ಯಾರಿಲ್ಲವಯ್ಯ ಎಂಬ ಕವಿತೆಯೂ ಕೊನೆಯ ಪುಟದ ಬ್ಲರ್ಬ್‌ ನಲ್ಲಿ ಚೈತ್ರಾ ಶಿವಯೋಗಿಮಠ ಇವರ ಪರಿಚಯವೂ ಇದೆ. ಅಪ್ಪನಿಗೆ, ಅಮ್ಮನಿಗೆ, ಆತ್ಮಸಖನಿಗೆ, ಒಡಲ ಹೂವಿಗೆ ಪುಸ್ತಕವನ್ನು ಅರ್ಪಿಸಿರುವ ಪುಟ ದಾಟಿದರೆ, ಕನ್ನಡದ ಲೇಖಕರುಗಳಾದ ಆರಿಫ್‌ ರಾಜಾ, ಆರ್‌ ತಾರಿಣಿ ಶುಭದಾಯಿನಿ, ಮತ್ತು ಕೇಶವ ಮಳಗಿಯವರು ಪುಸ್ತಕದ ಕುರಿತು ಆಶಯ ನುಡಿಗಳನ್ನು ಬರೆದಿದ್ದರೆ, ಕವಿ ಎಚ್‌ ಎಸ್‌ ಶಿವಪ್ರಕಾಶರವರ ಬೆನ್ನುಡಿ ಈ ಪುಸ್ತಕಕ್ಕಿದೆ. ಜೊತೆಗೆ ತುಂಬಾ ಆಪ್ತವಾಗಿರುವ, ಕವಿತೆಗಳಿಗೆ ಹೋಲುವ ರೇಖಾಚಿತ್ರಗಳನ್ನು ಪುಸ್ತಕಕ್ಕೆ ನೀಡಿರುವ ಚೇತನಾ ತೀರ್ಥಹಳ್ಳಿಯವರ ಶ್ರಮ ಅವರ ಗೆರೆಗಳಲ್ಲಿ ಎದ್ದು ಕಾಣುತ್ತದೆ. ಮೊದಲ ಮಳೆ ಮತ್ತು ಆ ಮಣ್ಣಿನ ಘಮಲು ಎನ್ನುವ ಲೇಖಕರ ಮಾತುಗಳು ಪುಸ್ತಕದ ಓದಿಗೆ ನಮ್ಮನ್ನು ಕೈ ಹಿಡಿದು ಕರೆದೊಯ್ಯುತ್ತದೆ.

ಪುಸ್ತಕವನ್ನು ಇವತ್ತು ಮುಂಜಾನೆ ಓದಲು ಕೈಗೆತ್ತಿಕೊಂಡರೂ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗೆ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಾಗ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸುವಂತೆ ಅರ್ಥವಾಗುವ ಕವಿತೆಗಳ ಮೇಲೆ ಸುಮ್ಮನೆ ಕಣ್ಣಾಡಿಸಿಕೊಂಡೆ. ಕವಿತೆಗಳನ್ನು ಮನಸ್ಸಿನಲ್ಲಿ ಓದಬಾರದು ಜೋರಾಗಿ ಓದಿಕೊಳ್ಳಬೇಕು ಎನ್ನುವ ಲೇಖಕ ಗೆಳೆಯರಾದ ಜವರಾಜು ರವರ ಮಾತು ನೆನಪಿಗೆ ಬಂದು ನಂತರ ಪುಸ್ತಕವನ್ನು ಕವಿತೆ ವಾಚಿಸುವಂತೆ ಓದಿಕೊಳ್ಳುತ್ತಾ ಹೋದೆ. ನಲವತ್ಮೂರು ಕವಿತೆಗಳನ್ನು ಓದಲು ನಾನು ತೆಗೆದುಕೊಂಡಿದ್ದು ಕೇವಲ ನಲವತ್ತು ನಿಮಿಷಗಳಷ್ಟೆ. ಈ ಮೊದಲು ಒಂದೇ ಗುಕ್ಕಿಗೆ ಒಂದು ಕಾದಂಬರಿಯನ್ನೋ ಕಥಾಸಂಕಲನವನ್ನೋ ಓದಿ ಮುಗಿಸಿದ್ದೇನಾದರೂ ಕವನ ಸಂಕಲನವನ್ನು ಹೀಗೆ ಒಂದೇ ಗುಕ್ಕಿಗೆ ಓದಿದ್ದು ಇದೇ ಮೊದಲು ಎನ್ನಬಹುದು. ಹಾಗಾದರೆ ಈ ಕವನ ಸಂಕಲನದಲ್ಲಿ ಒಬ್ಬ ಓದುಗನನ್ನು ಹಿಡಿದಿಡುವ ಶಕ್ತಿಯಾದರೂ ಏನು ಎನ್ನುವುದನ್ನು ಯೋಚಿಸಿದಾಗ ತಟ್ಟನೆ ಹೊಳೆದಿದ್ದು ಲೇಖಕಿ ತನ್ನ ಕವನ ಸಂಕಲನದಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿರುವ ಪ್ರೇಮದ ಕಲ್ಪನೆ ಓದುಗನನ್ನು ಒಂದು ಬೇರೆಯದೇ ಲೋಕಕ್ಕೆ ಕರೆದೊಯ್ದುಬಿಡುತ್ತದೆ. ಈ ಸಂಕಲನದಲ್ಲಿ ಪ್ರೇಮ ಗೆಲ್ಲುವ ಬಗೆಯನ್ನು ಬರೆದಿರೋ ಕಾರಣಕ್ಕೆ ಸೋಲು ಎಂಬ ಪದ ಒಂದು ಪುಟದಲ್ಲೂ ಕಾಣಸಿಗದಿರುವುದು ಈ ಪುಸ್ತಕದ ಪ್ಲಸ್‌ ಪಾಯಿಂಟ್‌ ಎನ್ನಬಹುದು.

“ಅವರು ನಮ್ಮಿಬ್ಬರ ನಡುವೆ ಗೆರೆ ಕೊರೆದರು, ನಮ್ಮ ಅಗಲಿಕೆಯನು ನಿರೀಕ್ಷಿಸಿದರು, ನಮ್ಮ ಕಂಪನದ ತೀರ್ವತೆಗೆ ಮಾಪಕ ಹಿಡಿದು ನಿಂತರು, ನಾವು ಕೋನವಾಗಿ ನೆಲೆ ನಿಂತೆವು” ಎಂದು ಅದೃಷ್ಟ ರೇಖೆ ಎನ್ನುವ ಕವನದಿಂದ ಶುರುವಾಗುವ ಪುಸ್ತಕದ ಕವಿತಾ ಯಾನ “ಒಬ್ಬರ ನೆತ್ತಿಯ ಮೇಲಿನ ಸೀಮೆ ಮತ್ತೊಬ್ಬರ ಪಾದದಡಿಯಲ್ಲಿ ಬಯಲಾಗುವುದು, ಜೀವ ಜೀವಗಳು ಛೇದಿಸಿ ಎರಡು ದಡಗಳ ನಡುವೆ ಈ ನದಿ ಹರಿಯುವುದು” ಎನ್ನುವ ಕೊನೆಯ ಕವನದ ಕೊನೆಯ ಸಾಲಿನಿಂದ ಮುಕ್ತಾಯವಾಗುತ್ತದೆ. ಈ ಪುಸ್ತಕದ ಶುರುವಾತು ಮತ್ತು ಮುಕ್ತಾಯದ ನಡುವಿನ ಓದುವಿನ ಯಾನ ಇದೆಯಲ್ಲಾ ಅದನ್ನು ಪದಗಳಲ್ಲಿ ಕವಿ ಕಟ್ಟಿಕೊಟ್ಟಿರುವ ರೀತಿಗೆ ಪ್ರತೀ ಕಾವ್ಯ ಪ್ರೇಮಿಗಳ ಪರವಾಗಿ ನನ್ನದೊಂದು ದೊಡ್ಡ ಸಲಾಮ್.‌

ನನ್ನಈ ಮಾತು ಉತ್ಪ್ರೇಕ್ಷೆ ಎನಿಸಿದರೆ ಒಂದಷ್ಟು ಕಾವ್ಯದ ಸಾಲುಗಳು ಹೀಗಿವೆ ನೋಡಿ. ” ಅವಳ ಆಗಮನ ಅಷ್ಟು ಸುಲಭವಲ್ಲ, ಮೈಯ ಹಸಿ ಹಸಿ ಒಣಗಿ, ಗರಿಗರಿಯಾಗಿ ಉದುರಿ, ಕಳಚಿಕೊಳ್ಳಬೇಕು ನವವಸಂತದ ನೆಪಕೆ (ಎದೆಯ ಕಡಲ ಬಸಿರು); ಕೊರಳ ಇಳಿಜಾರಿನಲ್ಲಿ ಸಿಗ್ಗಿಲ್ಲದೇ ಜಾರುತ್ತವೆ ಹೊಂಬಣ್ಣದ ಕೇಶರಾಶಿ ಮತ್ತು ಅವನ ಕಿರುಬೆರಳು! (ಒಂಟಿಗಣ್ಣಿನ ಮಾಯಾವಿ); ಭಾವುಕರ ಭಾಷೆ ಜಾಣರಿಗೆ ಅರ್ಥವಾಗುವುದಿಲ್ಲ, ಅರ್ಥವಾದರೂ ಅವರು ಆಡಬೇಕಾದ ಮಾತನ್ನು ಆಡದೆ ಕೂಡಿಡುವರಲ್ಲ (ಆ ಕಣ್ಣುಗಳು); ಇಲ್ಲಿ ಯಾವುದೂ ಬಯಸಿದಂತಲ್ಲ, ಅಮ್ಮ ಸಿಡಿಮಿಡಿಯಾದಳು, ಕಿತ್ತು ಬಿಡು ಗೊಡ್ಡು ಗಿಡವನ್ನು ನೀರು ಗೊಬ್ಬರಕೆ ದಂಡವಾಗಿರುವುದನು, ನಾನು ಹೂಂ ಅಂದದ್ದಷ್ಟೆ, ಬೀರುವ ಕಾಲಕ್ಕೆ ಸುಗಂಧ ಬೀರುವುದು, ಕಾಯಬೇಕು? ಕಾಯಬೇಕು? ಅಷ್ಟೇ ಧ್ಯಾನಸ್ಥವಾಗಿ ಕಾಯಬೇಕು (ಎದೆಯ ಕುಂಡದ ಮಲ್ಲಿಗೆ)”. ಓದಿದಿರಲ್ಲ ಈ ಸ್ಯಾಂಪಲ್‌ ಸಾಲುಗಳನ್ನು. ಇವು ಚೈತ್ರಾರವರ ಕಾವ್ಯದ ಮಾಧುರ್ಯದ ಒಂದಷ್ಟು ಝಲಕುಗಳಷ್ಟೆ. ಪೂರ್ತಿಯಾಗಿ ಅವರ ಕಾವ್ಯವನ್ನು ಆಹ್ವಾದಿಸಲು ನೀವು ಪುಸ್ತಕವನ್ನು ಖರೀದಿಸಿಯೇ ಓದಬೇಕು.

ಕವಿತೆಯ ಮಾಧುರ್ಯತೆ ಪ್ರತೀ ಸಾಲುಗಳಲ್ಲೂ ನನ್ನನ್ನು ಕಾಡಿದ ಕಾರಣಕ್ಕೆ ಈ ಕವನ ಸಂಕಲನದ ಕುರಿತು ಬರೆಯದೇ ಇರಲಾಗಲಿಲ್ಲ. ಈ ಕೆಲವು ದಿನಗಳ ಟ್ರೆಂಡ್‌ ಗಮನಿಸಿದರೆ ಕಾಂತಾರ ಚಲನಚಿತ್ರದ ಕುರಿತು ಅನೇಕರು ತಮ್ಮ ತಮ್ಮ ಫೇಸ್‌ ಬುಕ್‌ ನಲ್ಲಿಯೂ, ವಾಟ್ಸ್‌ ಅಪ್‌ ನಲ್ಲಿಯೂ ಆ ಚಿತ್ರದ ಕುರಿತು ಒಳ್ಳೆಯದನ್ನೋ ಕೆಟ್ಟದನ್ನೋ ಬರೆಯುತ್ತಲೇ ಇದ್ದಾರೆ. ನನಗನಿಸಿದಂತೆ ಅದೇ ರೀತಿ ಒಂದೊಂದು ಹೊಸ ಪುಸ್ತಕಗಳು ಕನ್ನಡದಲ್ಲಿ ರೀಲೀಸ್‌ ಆದಾಗಲೂ ಅವುಗಳ ಕುರಿತೂ ಸಹ ಓದುಗರು ಚರ್ಚಿಸಿ, ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆ ಪುಸ್ತಕಗಳ ಕುರಿತು ಒಂದಷ್ಟು ಬರೆಯುತ್ತಾ ಹೋದರೆ ಕನ್ನಡ ಸಾಹಿತ್ಯವೂ ಕೂಡ ಮನೆ ಮನೆಗಳನ್ನು ತಲುಪಲು ಸಹಾಯವಾಗುತ್ತದೆ ಎನ್ನುವುದು ನನ್ನ ಭಾವನೆ.

ಕೊನೆಯದಾಗಿ, ಒಂದೆರಡು ಕವಿತೆಗಳನ್ನು ಲೇಖಕಿ ಈ ಪುಸ್ತಕದಲ್ಲಿ ಸೇರಿಸದೆ ಇದ್ದರೆ ಇದೊಂದು ಪೂರ್ತಿ ಪ್ರೇಮಕಾವ್ಯ ಆಗಿರುತ್ತಿತ್ತು. ನೀವು ನಂಬುತ್ತೀರೋ ಇಲ್ಲವೋ ಈ ಪುಸ್ತಕವನ್ನು ಓದಿ ಕೆಳಗಿಟ್ಟಾಗ ನನ್ನೊಳಗೆ ಹಾಡಿನ ಲಹರಿ ಶುರುವಾಗಿ “ಈ ಲೋಕ ಬೇಡ, ಆ ಸ್ವರ್ಗ ಬೇಡ, ಈ ಪ್ರೀತಿ ಇರದ ಕ್ಷಣಗಳೇ ಬೇಡ” ಎನ್ನುವ ಹಾಡನ್ನು ಗುನುಗಲು ಶುರು ಮಾಡಿದೆ. ಹಾಗೆ ಪ್ರೇಮದ ಘಮಲನ್ನು ನಮ್ಮೊಳಗೆ ತುಂಬಿ ಬಿಡುವ ತಾಕತ್ತು ಈ ಪುಸ್ತಕಕ್ಕಿದೆ. ಅನೇಕ ಕನ್ನಡದ ಮತ್ತು ಇಂಗ್ಲೀಷ್‌ ಲೇಖಕರ ಕಾವ್ಯವನ್ನು ಓದುವ ಅಭ್ಯಾಸವನ್ನು ಇಟ್ಟುಕೊಂಡಿರುವ ಕಾರಣಕ್ಕೆ ಚೈತ್ರಾರವರಿಗೆ ಈ ತರಹದ ಒಂದು ಸಶಕ್ತವಾದ ಭಾವಗಳಿಂದ ತುಂಬಿರುವ ಪುಸ್ತಕವನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ. ಅವರಿಂದ ಮತ್ತಷ್ಟು ಕೃತಿ ಬರಲಿ ಎಂದು ಹಾರೈಸುತ್ತಾ.. ಕನ್ನಡದ ಪುಸ್ತಕಗಳನ್ನು ಕೊಂಡು ಓದಿ. ಓದಿಸಿ. ಮತ್ತೊಂದು ಪುಸ್ತಕದ ಪರಿಚಯದೊಂದಿಗೆ ಮತ್ತೆ ಸಿಗೋಣ..

ಧನ್ಯವಾದಗಳೊಂದಿಗೆ
-ಡಾ. ನಟರಾಜು ಎಸ್‌. ಎಂ.

ಪುಸ್ತಕ: ಪೆಟ್ರಿಕೋರ್‌ (ಕವನ ಸಂಕಲನ)

ಲೇಖಕರು: ಚೈತ್ರಾ ಶಿವಯೋಗಿಮಠ

ಪ್ರಕಾಶನ: ಆತ್ಮಿಕಾ ಪುಸ್ತಕ

ಬೆಲೆ: Rs.120/-

ಪ್ರತಿಗಳಿಗಾಗಿ ಸಂಪರ್ಕಿಸಿ: 9845878012

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
1 year ago

Very simple and honest review!
Nice sir. ನಿಮ್ಮ ರಿವ್ಯೂ ನೋಡ್ತಿದ್ದರೆ ಇದೊಂದು ಉತ್ತಮ ಕವಿತೆಗಳು ಅನಿಸುತಿದೆ. ಪುಸ್ತಕ ಪರಿಚಯಿಸಿದ ತಮಗೆ ಮತ್ತು ಪೆಟ್ರಿಕೋರ್ ಲೇಖಕಿಗೆ ಅಭಿನಂದನೆಗಳು.

1
0
Would love your thoughts, please comment.x
()
x