ಮಲೆನಾಡಿನ ಪದವೀಧರ ಯುವಕನ ಜೇನುಕೃಷಿ ಯಶೋಗಾಥೆ: ಚರಣಕುಮಾರ್


ಸಹ್ಯಾದ್ರಿಯ ಶೃಂಗದ ದಟ್ಟಡವಿಯ ಮಧ್ಯಭಾಗದಲ್ಲೊಂದು ಪುಟ್ಟ ಗ್ರಾಮ ಹಕ್ಲಮನೆ. ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕಿನಲ್ಲಿ ಬರುವ ಈ ಹಳ್ಳಿಯಲ್ಲೊಬ್ಬ ಪ್ರಗತಿಪರ ಮತ್ತು ಪದವಿಧರ ಜೇನುಕೃಷಿಕ ಸಂತೋಷ ಹೆಗಡೆ. ಹೆಸರಿನಲ್ಲೇ ಸಂತೋಷ ಎಂದು ಇಟ್ಟುಕೊಂಡಿರುವ ಈ ಸಂತೋಷ ಬಿ.ಕಾಂ ಪದವಿ ಪಡೆದಿದ್ದರೂ ಕೂಡ ಪೇಟೆಯ ಕಡೆ ಮುಖ ಮಾಡಲಿಲ್ಲ. ಆದರೂ ಒಮ್ಮೆ ಬಿ.ಕಾಂ ಮುಗಿದ ಮೇಲೆ ಉದ್ಯೋಗಕ್ಕಾಗಿ ಪೇಟೆಯ ಕಡೆ ಹೊರಟ ಈತನಿಗೆ, ತಾಯಿಯ ಆರೋಗ್ಯದಲ್ಲಿ ಕಾಣಿಸಿಕೊಂಡ ಏರು-ಪೇರು ಮನೆಬಿಟ್ಟು ಹೋಗಲು ಅವಕಾಶ ನೀಡಲೇಇಲ್ಲ. ಹೇಳಿ-ಕೇಳಿ ಇವರದು ಸಾಂಪ್ರದಾಯಿಕ ಕುಟುಂಬ. ತನ್ನ ಬಾಲ್ಯಾವಸ್ಥೆಯಲ್ಲಿ ಕೃಷಿಯಲ್ಲಿ ಕುಟುಂಬ ಅನುಭವಿಸಿದ ಕಷ್ಟ-ಕಾರ್ಪಣ್ಯಗಳನ್ನರಿತ ಈತ, ಏನಾದರೂ ಸಾಧಿಸಬೇಕೆಂಬ ತುಮುಲವನ್ನು ಹೊಂದಿದ್ದ. ಈತನ ಅಜ್ಜನವರು ಹೊಟ್ಟೆಪಾಡಿಗಾಗಿ ಸಾಗರದಿಂದ ಬರಿಗೈಲಿ ವಲಸೆ ಬಂದು ಹಕ್ಲಮನೆಯಲ್ಲಿ ನೆಲೆನಿಂತು, ನೆರೆ-ಹೊರೆಯವರ ಸಹಾಯದಿಂದ ಕೃಷಿ ಆರಂಬಿಸಿ ಗೌರವಯುತವಾಗಿ ಬಾಳಿದವರು.

ಮೊದಲಿನಿಂದಲೂ ಕೃಷಿಯೇ ಮೂಲ ಆದಾಯದ ಆಧಾರವಾದುದರಿಂದ ಸಹಜವಾಗಿ ಸಂತೋಷನಿಗೆ ಕೃಷಿಯಲ್ಲಿ ಆಸಕ್ತಿ ಮತ್ತು ಅದರಲ್ಲಿಯೂ ಸಾಂಪ್ರದಾಯಿಕ ಕೃಷಿಯನ್ನೇ ಅಳವಡಿಸಿಕೊಂಡನು. ಪ್ರಸ್ತುತ ಎಲ್ಲರೂ ಬಯಸುವ ಅಭಿವೃದ್ಧಿ ಪಥವನ್ನು ಹಿರಿಯರು ತುಳಿಯಲೇ ಇಲ್ಲ, ಈತನೂ ಕೂಡ.

ಹೀಗೆ ಒಬ್ಬ ಪದವಿಧರ ಕೃಷಿಯನ್ನು ನಂಬಿದ ಮೇಲೆ ಎನಾದರೂ ಕೃಷಿ ಸಲಕರಣೆ ತರಲು, ಆಸ್ಪತ್ರೆ ಹೋಗಬೇಕೆಂದರೆ 25 ಕಿಲೋಮೀಟರ್ ದೂರದ ಶಿರಸಿ ಪೇಟೆಯನ್ನೇ ಅವಲಂಬಿಸಬೇಕಾಗಿತ್ತು. ಅಕ್ಷರಸ್ಥನಾಗಿದ್ದ ಈತ ಅನೇಕ ಪ್ರಗತಿಪರ ಕೃಷಿಕರನ್ನು ಭೇಟಿ ಮಾಡಿದ, ಹಲವೆಡೆ ಕೃಷಿ ಕಾರ್ಯಕ್ರಮಗಳಿಗೆ ಭಾಗಿಯಾಗಿ ಪಾಳುಬಿದ್ದ ಜಾಗ ನಿರ್ವಹಣೆ, ಭತ್ತ ಮತ್ತು ಅಡಿಕೆ ಬೇಸಾಯದ ಏರುಪೇರುಗಳನ್ನು ಅರಿತುಕೊಂಡನು. ಕೃಷಿಯಲ್ಲಿ ಶೈಕ್ಷಣಿಕ ಅನುಭವಕ್ಕಿಂತ ಹಣಕಾಸಿನ ನಿರ್ವಹಣೆ ಬಹುಮುಖ್ಯ. ಆರ್ಥಿಕ ನಿರ್ವಹಣೆಯ ಅನುಭವ ಇವನು ವರ್ಷದ ಬಹುಪಾಲು ಸಮಯವನ್ನು ಸಂಘ ಸಂಸ್ಥೆಗಳಲ್ಲಿ ಅತವಾ ವ್ಯಾಪಾರಿಗಳ ಹತ್ತಿರ ಸಾಲ ಮಾಡುವುದರಲ್ಲೇ ಕಳೆಯುವುದು ಆಗಿತ್ತು. ಆ ವರ್ಷದ ಬೆಳೆ ಬಂದ ಕೂಡಲೇ ಅವರ ಸಾಲವನ್ನು ತುಂಬುವುದು. ಹೀಗಿರುವಾಗ ಕೃಷಿಯಲ್ಲಿ ಎನಾದರೂ ಹೊಸ ಅನ್ವೇಶಣೆ ಹೇಗೆ ಸಾಧ್ಯ.
ಮೊದಲು ಪಾಲು ಬಿದ್ದ ಜಾಗದಲ್ಲಿ ಅಡಿಕೆ ಕೃಷಿ ಆರಂಬಿಸಿದ. ಯಂತ್ರಗಳನ್ನು ಬಳಸಿ ಕೃಷಿ ಮಾಡಲಾಗದ ಕಾರಣ ಏಕಾಂಗಿಯಾಗಿಯೇ ಹೋರಾಡಬೇಕಾಯಿತು. ಅಡಿಕೆ ಕೃಷಿ ಮಾಡಲು ಸಲಹೆ ಕೊಡುವವರೂ ಸಹ ಇರಲಿಲ್ಲ. ಇಷ್ಟೆಲ್ಲ ಕಸರತ್ತುಗಳ ನಡುವೆ ಎಲ್ಲಾದರೂ ಒಂದು ಕೆಲಸವನ್ನು ಪಡೆಯಬೇಕೆಂಬ ಹಂಬಲ ತಲೆಯಲ್ಲಿ ಇದ್ದೇ ಇತ್ತು. ಅದೃಷ್ಠವೆಂಬಂತೆ ನೆಟ್ಟ ಅಡಿಕೆ ಸಸಿಗಳು ಚೆನ್ನಾಗಿ ಬೆಳೆದವು, ಆಗ ಮಾತ್ರ ನೋಡುಗರು ಶಹಬಾಸ್‍ಗಿರಿ ನೀಡಿದರು ಮತ್ತು ಇನ್ನುಳಿದ ಜಾಗದಲ್ಲೂ ಅಡಿಕೆ ಕೃಷಿ ಮಾಡಬೇಕೆಂಬ ಯೋಜನೆ ಆರಂಭಸಿತು. ಮುಂದಿನ ಎರಡು ವರ್ಷಗಳ ನಂತರ ಆ ಕೆಲಸವೂ ಏಕಾಮಗಿಯಾಗಿಯೇ ಸಾಗಿತು.

2017 ರಲ್ಲಿ ಗುರುಮೂರ್ತಿ ಓಣಿಕೇರಿ ಅವರಿಂದ ಒಂದು ಜೇನುಪೆಟ್ಟಿಗೆಯನ್ನು ಹವ್ಯಾಸಕ್ಕಾಗಿ ಖರೀಸಿದರು. ಜೇನು ಕೃಷಿಯ ಗಂಧ-ಗಾಳಿಯೂ ಇಲ್ಲದೆ ಹುಮ್ಮಸ್ಸಿನಿಂದ (ಹೆದರಿಕೆಯ ಜೊತೆಯಲ್ಲಿ) ಆರಂಬಿಸಿದನು. ನಿರ್ವಹಣೆಯ ಕೊರತೆಯಿಂದ ಕೆಲವೇ ದಿನಗಳಲ್ಲಿ ಜೇನು ಒಕ್ಕಲನ್ನು ಕಳೆದುಕೊಳ್ಳಬೇಕಾಯಿತು. ಬೇಸರದೊಂದಿಗೇ ಜೇನು ಗೂಡು ಫಲಾಯನ ಮಾಡಲು ಕಾರಣಗಳನ್ನು ಹುಡುಕುತ್ತಾ ಹೊರಟ. ಚಿಕ್ಕಂದಿನಿಂದಲೂ ಕಾಡಿನಲ್ಲಿ ಸಾಂಪ್ರದಾಯಿಕವಾಗಿ ಜೇನು ಕಿತ್ತು ತರುವುದು ಮೊದಲೇ ತಿಳಿದಿತ್ತು. ಆದರೆ ಪ್ರಾಯೋಗಿಕವಾಗಿ ಎಂದೂ ಕಾಡು ಜೇನು ಕೀಳುವುದರಲ್ಲಿ ಭಾಗವಹಿಸಿರಲಿಲ್ಲ. ಹೀಗೆ ಒಂದು ಕುಟುಂಬ ವಿಫಲವಾದ ಮಾಹಿತಿ ತಿಳಿದ ಓಣಿಕೇರಿ ಗುರುಮೂರ್ತಿ ಮತ್ತೊಂದು ಜೇನು ಒಕ್ಕಲು ನೀಡಿ ಹುರಿದುಂಬಿಸಿದರು. ಜೊತೆಗೆ ಉಚಿತ ಜೇನುಸಾಕಣಿಕೆಯ ಸಲಹೆ, ಸಹಕಾರ ಮತ್ತು ಸೂಚನೆಗಳು. ಇದರೊಂದಿಗೆ ಜೇನುಕೃಷಿಯ ಮೇಲೆ ವಿಶ್ವಾಸ ಮೂಡತೊಡಗಿತು. ಕುಟುಂಬ ಸಧೃಢವಾಯಿತು. ಗುರುಮೂರ್ತಿ ಕುಟುಂಬವನ್ನು ಪಾಲುಮಾಡಿ ಒಂದು ಕುಟುಂಬದಿಂದ ಎರಡು ಕುಟುಂಬಗಳನ್ನು ಹೇಗೆ ಪಡೆಯಬಹುದು ಎಂದು ತಿಳಿಸಿಕೊಟ್ಟರು. ಮೊದಲ ಪ್ರಯತ್ನದಲ್ಲೇ ಕುಟುಂಬ ಪಾಲು ಮಾಡುವ ಕಾರ್ಯ ಯಶಸ್ವಿಯಾಯಿತು. ನಂತರ ಐದು ಕುಟುಂಬಗಳು. ಕೇವಲ ಈದು ಕುಟುಂಬಗಳಲ್ಲೇ 24 ಕಿಲೋ ಜೇನುತುಪ್ಪ ದೊರೆಯಿತು. 2020 ರಷ್ಟರಲ್ಲಿ ಕೇವಲ 14 ಕುಟುಂಬಗಳಲ್ಲಿ 80 ಕಿಲೋ ಜೇನುತುಪ್ಪ. ಮುಂದಿನ ವರ್ಷದಲ್ಲಿ ಕುಟುಂಬಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ 40 ರ ಗಡಿ ದಾಟಿತು. ಆದರೆ 2021 ರ ಬೇಸಿಗೆಯಲ್ಲಿ ಅಕಾಲಿಕ ಮಳೆ ಆದ ಕಾರಣ ಜೇನುತುಪ್ಪದ ಸಂಗ್ರಹಣೆ ಗಣನೀಯವಾಗಿ ಕಡಿಮೆಯಾಯಿತು. ಜೊತೆಯಲ್ಲಿ ಅತೀರ್ವವಾದ ಕಡಜಗಳ ಕಾಟದಿಂದ ಕುಟುಂಬಗಳ ಸಂಖ್ಯೆಯೂ ಅರ್ಧಕ್ಕೆ ಕುಸಿದವು. ಕಲಿತ ವಿದ್ಯೆ ಎಂದಿಗೂ ನಾಶವಾಗುವುದಿಲ್ಲ ಎಂಬ ಮಾತಿನಂತೆ ಮುಂದಿನ ವರ್ಷ ಅಂದರೆ 2022 ರಲ್ಲಿ 30 ಕ್ಕೂ ಹೆಚ್ಚು ಕುಟುಂಬಗಳಾದವು. ಅಚ್ಚರಿಯೆಂಬಂತೆ ಎರಡೂವರೆ ಕ್ವಿಂಟಾಲ್‍ಗಿಂತಲೂ ಹೆಚ್ಚು ಜೇನುತುಪ್ಪದ ಸಂಗ್ರಹಣೆ ಆಯಿತು. ಇದೆಲ್ಲವೂ ಕೂಡ ಏಕಾಂಗಿಯಾಗಿ ಸಾಧಿಸಬಹುದು ಎಂದು ತೋರಿಸಿಕೊಟ್ಟವರು ಸಂತೋಷ ಹೆಗಡೆ.

ಸಾಧನೆಯನ್ನು ಹೇಳುವುದು ಮತ್ತು ಹೊಗಳುವುದು ತುಂಬಾ ಸುಲಭ, ಆದರೆ ಅದರ ಇಂದಿನ ಪ್ರಯತ್ನ ತುಂಬಾ ಕಠಿಣವಾದುದು. ಆರಂಭದಲ್ಲಿ ಜೇನುಕೃಷಿಯ ಮತ್ತು ಜೇನುನೊಣಗಳ ಕುರಿತು ಕಡಿಮೆ ಅನುಭವ ಹೊಂದಿದ್ದ ಇವರು ಎಲ್ಲವನ್ನೂ ಸ್ನೇಹಿತ ಗುರುಮೂರ್ತಿಯವರಿಂದಲೇ ತಿಳಿದುಕೊಳ್ಳಬೇಕಾಗಿತ್ತು. ಒಮ್ಮೆ ಜೇನು ಕುಟುಂಬ ನಿರ್ವಹಣೆಯ ಸಂದರ್ಬದಲ್ಲಿ ಇವರು ಮಾಡಿದ ಅಚಾತುರ್ಯವೋ ಅಥವಾ ಆ ಸಮಯದಲ್ಲಿ ಜೇನುಕುಟುಂಬವನ್ನು ಮುಟ್ಟಬಾರದಿತ್ತೇನೋ ಒಮ್ಮಲೇ 30 ರಿಂದ 35 ಕೆಲಸಗಾರ ನೊಣಗಳು ತಮ್ಮ ಮುಳ್ಳುಗಳಿಂದ ಮುತ್ತಿಟ್ಟವು. ಸ್ವಲ್ಪ ಸಮಯದಲ್ಲೇ ರಕ್ತದೊತ್ತಡ ತೀರ್ವ ಕಡಿಮೆಯಾಗಿ ಪ್ರಾಣಾಪಾಯದ ಹಂತ ತಲುಪಿದ್ದರು. ಒಂದು ಕ್ಷಣ ಜೇನುಕೃಷಿ ಸಹವಾಸ ಬೇಡವೆಂಬ ಸ್ಥಿತಿಗೆ ತಲುಪಬೇಕಾಯಿತು. ಸುತ್ತಮುತ್ತಲಿನ ಜನರು ಉಚಿತವಾಗಿ ಈ ಕೆಲಸಗಳೆಲ್ಲ ನಿನಗೆ ಸೂಕ್ತವಲ್ಲ ಎಂದು ಹೇಳಲು ಸುಲಭದ ದಾರಿಯಾಯಿತು. ಇವರ ಸ್ಥಿತಿ ನೋಡಿದ ಅವರ ತಾಯಿಯೂ ಕೂಡ ಹೆದರಿದರು. ಆದರೆ ಸ್ನೇಹಿತ ಗುರುಮೂರ್ತಿ ಮತ್ತೆ ಜೇನುಕೃಷಿ ಮಾಡಲು ಹುರಿದುಂಬಿಸಿದರು. ಮನಸ್ಸಿಲ್ಲದಿದ್ದರೂ ಆತನ ಮಾತಿಗೆ ಬೆಲೆ ಕೊಟ್ಟು ಒಪ್ಪಿಕೊಳ್ಳಬೇಕಾಯಿತು. ಆಗಲೇ ಅವರು ಒಂದು ಕುಟುಂಬದಿಂದ ಪಾಲು ಮಾಡಿ ಎರಡು ಕುಟುಂಬ ಪಡೆದದ್ದು. ಆಗ ಸ್ವಲ್ಪ ಧೈರ್ಯ ಮತ್ತು ಹುಮ್ಮಸ್ಸಿನೊಂದಿಗೆ ನಾನೂ ಕೂಡ ಜೇನುಕೃಷಿ ಮಾಡಬಲ್ಲೆ ಎಂದು ಮುಂದಿನ ಹೆಜ್ಜೆ ಇಟ್ಟರು. ಹೀಗೆ ಧೈರ್ಯ ಮಾಡಲು ಇನ್ನೂ ಒಂದು ಕಾರಣ ಇದೆ, ಇವರ ಸ್ಥಿಯನ್ನು ನೋಡಿ ಉಚಿತವಾಗಿ ಉಡುಗೊರೆಯಂತೆ ಸಿಗುತ್ತಿದ್ದ ಹಲವರ ಚುಚ್ಚು ಮಾತುಗಳು ಮತ್ತು ಹಣಕಾಸಿನ ತೊಂದರೆ ಜೊತೆಯಲ್ಲಿ ಇದೆಲ್ಲಾ ನಮ್ಮಿಂದ ಸಾಧ್ಯವಾ ಎಂಬ ಮನಸ್ಥಿತಿ. ಇದರಿಂದ ದುಡ್ಡು ಬರುತ್ತಾ?? ನಿಮ್ಮಿಂದ ಇದೆಲ್ಲಾ ಸಾಧ್ಯವಾ? ಎಂಬ ಹೇಳಿಕೆ, ಅದರ ಬದಲು ಇದು ಮಾಡು, ಇದರ ಬದಲು ಅದು ಮಾಡು ಎಂಬ ದಾರಿಹೋಕರ ಬಿಟ್ಟಿ ಸಲಹೆಗಳು.

ಇಂತಹವುಗಳಿಗೆಲ್ಲ ಉತ್ತರಿಸುವ ಬದಲು ಸಾಧಿಸಿ ತೋರಿಸಬೇಕೆಂಬುವ ದೃಢಸಂಕಲ್ಪ ಇಂದು ಇವರನ್ನು ಎಲ್ಲರೂ ಶಹಬಾಸ್‍ಗಿರಿ ಹೇಳುವ ಹಂತಕ್ಕೆ ನಿಲ್ಲಿಸಿದೆ. ಕಠಿಣ ಪರಿಶ್ರಮ ಮತ್ತು ಆಸಕ್ತಿ ಮತ್ತು ಜನರ ಕೊಂಕು ಮಾತುಗಳಿಗೆ ಕಿವುಡರಾದಾಗ ಮಾತ್ರ ಸಾಧನೆ ತಾನಾಗಿಯೇ ಒಲಿಯುತ್ತದೆ ಎಂಬುದಕ್ಕೆ ಸಂತೋಷ ಹೆಗಡೆ ಒಂದು ಉತ್ತಮ ಉದಾಹರಣೆ.

ಇಂದು ಮಲೆನಾಡಿನಲ್ಲಿ ಜೇನುಕೃಷಿಯ ಉಪಯೋಗ, ತೊಂದರೆಗಳು ಹಾಗೆಯೆ ಜನ ಜೇನುಕುಟುಂಬಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನು ಇವರು ಚೆನ್ನಾಗಿ ಅರಿತುಕೊಂಡಿದ್ದಾರೆ.

ಮಲೆನಾಡಿನಲ್ಲಿ ಅಡಿಕೆ ಬಹುಮುಖ್ಯ ಬೆಳೆ ನಂತರದಲ್ಲಿ ತೆಂಗು, ಬಾಳೆ, ಮಾವು, ಗೇರು ಮುಂತಾದವುಗಳು ಸ್ಥಾನ ಪಡೆಯುತ್ತವೆ. ಜೇನುಕೃಷಿಯಿಂದ ಈ ಎಲ್ಲಾ ಬೆಳೆಗಳಿಗೂ ಪರಾಗಸ್ಪರ್ಷದ ಲಾಭವಿದೆ ಮತ್ತು ಇಳುವರಿಯೂ ಕೂಡ ಗಣನೀಯವಾಗಿ ಹೆಚ್ಚುತ್ತದೆ. ಹೇಳಿ-ಕೇಳಿ ಮಲೆನಾಡು ಅರಣೈಗಳ ತಾಣ ಜೊತೆಗೆ ರೈತರೇ ನಿರ್ವಹಿಸುವ ಸೊಪ್ಪಿನ ಬೆಟ್ಟಗಳು. ಹೆಚ್ಚಿನ ಜೇನು ಇಳುವರಿ ಬೇಕೆಂದರೆ ನಮ್ಮ ತೋಟದ ಬೆಳೆಗಳಷ್ಟೇ ಸಾಲದು. ಹತ್ತಿರದ ಅರಣ್ಯದ ಮರಗಳ ಪಾತ್ರ ಜೇನು ಇಳುವರಿಯಲ್ಲಿ ಬಹುಪಾಲು ಪಡೆಯುತ್ತವೆ. ಆದರೆ ಮಲೆನಾಡಿಗರು ಅಡಿಕೆ ತೋಟಕ್ಕೆ ಹಸಿರೆಲೆ ಗೊಬ್ಬರಕ್ಕಾಗಿ ಸೊಪ್ಪಿನ ಬೆಟ್ಟದಲ್ಲಿ ಮರಗಳು ಬೋಳಾಗುವಂತೆ ಸೊಪ್ಪು ಕಡಿಯುತ್ತಾರೆ. ಹೀಗೆ ಒಮ್ಮೆ ಮರವನ್ನು ಬೋಳುಮಾಡಿದರೆ ನಂತರ ಮರ ಬೆಳೆದು ಸೊಂಪಾಗಿ ಹೂ ಬಿಡಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ. ಹೂವಾಗುವಷ್ಠರಲ್ಲೇ ಮತ್ತೊಮ್ಮೆ ಕಡಿದಿರುತ್ತಾರೆ. ಹೀಗೆ ಮಾಡಿದಲ್ಲಿ ಹೆಚ್ಚಿನ ಜೇನು ಇಳುವರಿ ಹೇಗೆ ಸಾಧ್ಯ, ಪದೇ-ಪದೇ ಮರಗಳ ರೆಂಬೆ-ಕೊಂಬೆಗಳನ್ನು ಕಡಿದು ಬೋಳುಮಾಡಿದರೆ ಮರಗಳು ಸಾಯುವ ಸಾಧ್ಯತೆಯೂ ಹೆಚ್ಚು.

ಇನ್ನು ಕೆಲವರು ಬೆಳೆಗಳ ಇಳುವರಿ ಹೆಚ್ಚಾಗುತ್ತದೆ ಎಂಬ ಕಾರಣದಿಂದ ತಮ್ಮ-ತಮ್ಮ ತೋಟಗಳಲ್ಲಿ ಜೇನುಪೆಟ್ಟಿಗೆಗಳನ್ನಿಡುತ್ತಾರೆ. ಆದೆರ ಯಾವುದೇ ನಿರ್ವಹಣೆ ಮಾಡದೆ ಕುಟುಂಬ ಕಳೆದುಕೊಳ್ಳುತ್ತಾರೆ, ಕೊನೆಗೆ ಜೇನುಕೃಷಿ ಎಲ್ಲರಿಗೂ ಸೂಕ್ತವಲ್ಲ ಎಂಬ ಮುದ್ರೆಹಾಕಿದ ಮಾತು. ತೋಟಗಳಲ್ಲಿ ಜೇನುಪೆಟ್ಟಿಗೆ ಇಟ್ಟುಕೊಂಡೂ ಕೂಡ ಅಡಿಕೆಗೆ ವಿಷಯುಕ್ತವಾದ ಕೀಟನಾಷಕ ಮತ್ತು ರೋಗನಾಷಕಗಳನ್ನು ಸಿಂಪಡಿಸುತ್ತಾರೆ. ಇದರಿಂದ ಜೇನುನೊಣಗಳು ಒಮ್ಮೆಲೇ ಸಾಯುತ್ತವೆ. ಮೂಲ ಕಾರಣವನ್ನು ಕೃಷಿಕರು ಹುಡುಕುವುದೇ ಇಲ್ಲ. ಆದರೆ ಜೇನು ಗೂಡು ಹೊಂದಿಕೊಳ್ಳವುದಿಲ್ಲ ಮತ್ತು ಜೇನು ಇಳುವರಿಯೇ ಆಗಲಿಲ್ಲ ಎಂದು ದೂರುತ್ತಾರೆ. ಕೆಲವೊಮ್ಮೆ ವಿಷಕಾರಿ ಕೀಟ ಮತ್ತು ರೋಗನಾಷಕಗಳನ್ನು ಸಿಂಪಡಿಸಿದಾಗಲೂ ಕೂಡ ಜೇನು ಕುಟುಂಬ ನಾಶವಾಗುವುದಿಲ್ಲ. ಆದರೆ ಆ ಜೇಣುಕುಟುಂಬಗಳ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇಂತಹ ಕುಟುಂಬಗಳನ್ನು ಪಾಲುಮಾಡಿ ವೃದ್ಧಿಪಡಿಸಿದಾಗ ಇನ್ನೂ ತೀರ್ವವಾಗಿ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಅವುಗಳ ಜೈವಿಕ ಅಶ ಬದಲಾವಣೆ ಹೊಂದುತ್ತಾ ಹೋಗುತ್ತದೆ. ಇಂತಹ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಗಂಡು ನೊಣಗಳು ಕಾಡಿನಲ್ಲಿರುವ ನೈಸರ್ಗಿಕ ಜೇನುಕುಟುಂಬಗಳು ಪಾಲಾಗಿ ಹೋಗುವಾಗ ಹೊಸದಾಗಿ ಹುಟ್ಟುವ ರಾಣಿಯೊಂದಿಗೆ ಸಮ್ಮಿಲನ ಹೊಂದಿ ಅವುಗಳ ರೋಗನಿರೋಧಕ ಶಕ್ತಿಯನ್ನೂ ಕೂಡ ಕುಂಠಿತಗೊಳಿಸುತ್ತವೆ. ರೋಗನಿರೋಧಕ ಶಕ್ತಿ ಕುಂಠಿತಗೊಂಡರೆ ಜೇನು ಉತ್ಪಾದನೆಯಲ್ಲಿ ಕುಂಠಿತ ಕಾಣಿಸುತ್ತದೆ. ಕೆಲವೊಮ್ಮೆ ಜೇನುನೊಣಗಳು ಹೆಚ್ಚು ಚುಚ್ಚುವ ಸ್ವಭಾವವನ್ನು ಹೊಂದಬಹುದು. ಸ್ವಲ್ಪ ಘಾಸಿಯಾದರೂ ಕೂಡ ಫಲಾಯನ ಮಾಡುವ ಲಕ್ಷಣಗಳನ್ನು ಹೊಂದುತ್ತವೆ.

ಇದು ಜೇನುನೊಣಗಳಿಗೆ ಪರೋಕ್ಷ ತೊಂದರೆಯಾದರೆ ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇರಣೆಗೊಂಡು ಏಕಾಏಕಿ ಜೇನುಕೃಷಿ ಆರಂಭಿಸುತ್ತಾರೆ. ಅತಿಯಾದ ಖರ್ಚು ಮಾಡಿ ನಾಳೆಯೇ ಆ ಹಣವನ್ನು ಪಡೆಯಬೇಕೆಂದು ಜೇನುನೊಣಗಳ ಜೀವಶಾಸ್ತ್ರವನ್ನು ತಿಳಿಯದೇ ಅವೈಜ್ಞಾನಿಕವಾಗಿ ಪಾಳು ಮಾಡಿ ಕುಟುಂಬಗಳನ್ನು ಕಳೆದುಕೊಳ್ಳುತ್ತಾರೆ ಜೊತೆಗೆ ಸುರಿದ ದುಡ್ಡೂ ಕೂಡ.
ಸಂತೋಷ ಹೆಗಡೆಯವರಂತೆ ಜೇನುನೊಣಗಳ ಪೂರ್ಣ ಸ್ವಭಾವಗಳನ್ನು ಅರಿತು, ಒಂದು ಅಥವಾ ಎರಡು ಹೆಚ್ಚೆಂದರೆ ಐದು ಕುಟುಂಬಳೊಂದಿಗೆ ಆರಂಬಿಸಿ, ಶೀಘ್ರ ಆದಾಯಕ್ಕಾಗಿ ಹಂಬಲಿಸದೇ ಸುಸ್ಥಿರ ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಜೇನುಕೃಷಿಯು ಮಲೆನಾಡಿನ ಕೃಷಿಕರಿಗೆ ಉತ್ತಮ ಆದಾಯ ತಂದುಕೊಡಬಲ್ಲ ಪೂರಕ ಉಪಕಸುಬು. ತಾಳ್ಮೆ ಮತ್ತು ಆಸಕ್ತಿ ಇದ್ದರೆ ಇಂದಿನ ನಿರುದ್ಯೋಗಿ ಯುವಕರಿಕೆ ಪೂರ್ಣ ಪ್ರಮಾಣದಲ್ಲಿ ಉದ್ಯೋಗವಾಗಬಹುದು ಸ್ಥಳಾಂತರ ಜೇನುಕೃಷಿ.

-ಚರಣಕುಮಾರ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x