ಕುಟುಂಬವೆಂದರೆ ಒಬ್ಬ ವ್ಯಕ್ತಿಯಲ್ಲ, ಅವನೊಡನೆ ನಿಲ್ಲುವ ಪ್ರಪಂಚವೇ ಕುಟುಂಬ ಎನ್ನುವ “ಅಜ್ಜನ ಕಮೋಡು”: ಡಾ. ನಟರಾಜು ಎಸ್.‌ ಎಂ.

ಈ ತಿಂಗಳ ಮೊದಲ ವಾರದಲ್ಲಿ ಹಾಸನಕ್ಕೆ ಹೋಗಿದ್ದೆ. ನಮ್ಮ ನಡುವಿನ ಅಧ್ಬುತವಾದ ಅನುವಾದಕರಾದ ಜೆವಿ ಕಾರ್ಲೊ ಸರ್‌, ಮೈಸೂರಿನ ಕಥೆಗಾರ ಗೆಳೆಯ ಡಾ. ಗವಿಸ್ವಾಮಿ ಸಿಕ್ಕಿದ್ದರು. ಅವರ ಜೊತೆ ಮಾತನಾಡಿ ಸಂಜೆ ಹಿರಿಯ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು ರವರನ್ನು ಭೇಟಿಯಾದೆ. ಹಾಸನದ ಬಳಿ ಅತ್ತಿಹಳ್ಳಿಯ ತೋಟದ ಮನೆಯಲ್ಲಿ ವಾಸವಿರುವ ಹಿರಿಯರಾದ ನಾಗರಾಜುರವರನ್ನು ಭೇಟಿಯಾದ ದಿನ ಹೊರಗೆ ಸಣ್ಣನೆ ತುಂತುರು ಮನೆ ಹನಿಯುತ್ತಿತ್ತು. ಒಂದೆರಡು ಗಂಟೆ ಅವರೊಡನೆ ಹರಟೆ ಹೊಡೆದು ರಾತ್ರಿ ಊಟ ಮಾಡಿ ವಾಪಸ್ಸು ಬರುವಾಗ ನನ್ನ ಕೈಗೆ ಆರೇಳು ಪುಸ್ತಕಗಳು ಮತ್ತು ಅವರೇ ಬೆಳೆದಿದ್ದ ಬೆಣ್ಣೆ ಹಣ್ಣುಗಳನ್ನು ಕೊಟ್ಟು ಕಳುಹಿಸಿದರು. ಅವರು ಕೊಟ್ಟಿದ್ದ ಪುಸ್ತಕಗಳಲ್ಲಿ ಅವರ ಮಗ ಚಲಂ ಹಾಡ್ಲಹಳ್ಳಿ ಬರೆದ “ಈ ಮಳೆಗಾಲ ನಮ್ಮದಲ್ಲ” ಎಂಬ ಪುಸ್ತಕದಲ್ಲಿನ ಕವಿತೆಗಳು ನನಗೆ ತುಂಬಾ ಹಿಡಿಸಿದವು. ಅವರು ಕೊಟ್ಟ ಪುಸ್ತಕಗಳ ಗುಚ್ಛದಲ್ಲಿದ್ದ ಅವರೇ ಬರೆದ “ಅಜ್ಜನ ಕಮೋಡು” ಪುಸ್ತಕವನ್ನು ಮೊನ್ನೆ ಓದಲು ಕುಳಿತೆ. ತುಂಬಾ ಸರಳವಾಗಿ ಓದಿಸಿಕೊಳ್ಳುವ ಬರಹ ನಾಗರಾಜುರವರದಾದ ಕಾರಣ ನೂರನಲವತ್ತೆರಡು ಪುಟಗಳ ಪುಸ್ತಕವನ್ನು ಎರಡು ದಿನಗಳಲ್ಲಿ ಎರಡೆರಡು ಗಂಟೆ ಓದಿ ಮುಗಿಸಿದೆ.

ಕಮೋಡು ಅನ್ನುವುದೇ ಒಂದು ಬೇರೆಯ ಹೆಸರು. ಸಾಮಾನ್ಯವಾಗಿ ಮಡಿವಂತಿಕೆಯ ಕಾರಣಕ್ಕೆ ಪುಸ್ತಕಗಳಿಗೆ ಆ ರೀತಿಯ ಹೆಸರು ನೀಡುವುದು ಬಹಳ ಅಪರೂಪ. ಜೊತೆಗೆ ಕಮೋಡಿನ ಚಿತ್ರವನ್ನು ಕಲಾತ್ಮಕವಾಗಿ ಮುಖಪುಟದಲ್ಲಿ ಹಾಕಿಕೊಂಡ ಉದಾಹರಣೆಗಳಿಲ್ಲ. ಆದರೆ ನಾಗರಾಜುರವರು ಈ ಪುಸ್ತಕಕ್ಕೆ “ಅಜ್ಜನ ಕಮೋಡು” ಅಂತ ಹೆಸರಿಟ್ಟು ಕಮೋಡಿನ ಕಾರಣದಿಂದಲೇ ತಮ್ಮ ತಾತನ ಕಾಲದ, ತಮ್ಮ ತಂದೆಯ ಕಾಲದ, ತಮ್ಮ ಕಾಲದ ಮತ್ತು ಇವತ್ತಿನ ಕತೆಗಳನ್ನು, ತಮ್ಮ ಮೊಮ್ಮಕ್ಕಳಿಗೆ ಈ ಪುಸ್ತಕದಲ್ಲಿ ಹೇಳಿದ್ದಾರೆ. ಕಾದಂಬರಿಯ ಕತೆಯನ್ನು ಓದುತ್ತಾ ಓದುತ್ತಾ ಕಾದಂಬರಿಯಲ್ಲಿನ ಅಜ್ಜ, ಕತೆಯನ್ನು ಬರೀ ತಮ್ಮ ಮೊಮ್ಮಕ್ಕಳಿಗಷ್ಟೇ ಹೇಳುತ್ತಿಲ್ಲ. ನಮಗೂ ಸಹ ಹೇಳುತ್ತಿದ್ದಾರೆ ಅನಿಸದೆ ಇರದು. ಈ ಕತೆಯಲ್ಲಿ ಅಜ್ಜ, ಮೊಮ್ಮಕ್ಕಳಾದ ನಿಹಾರಿಕಾ ಮತ್ತು ಸಾಗರೀಕ, ಮಗ ಚಂದ್ರಪ್ಪ, ಸೊಸೆ ಕನಕ ಮತ್ತು ಸೈಕಲ್‌ ಮುಖ್ಯ ಪಾತ್ರದಲ್ಲಿದ್ದಾರೆ. ಅಜ್ಜ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ ತೋಟವೊಂದನ್ನು ಖರೀದಿಸಿ ಆ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಕರೋನ ಕಾರಣಕ್ಕೆ ಲಾಕ್‌ ಡೌನ್‌ ಆಗಿದೆ. ಶಾಲೆಗೆ ರಜೆ ಇರುವ ಮೊಮ್ಮಕ್ಕಳ ಜೊತೆ ಅಜ್ಜ ಸಮಯ ಕಳೆಯುತ್ತ ಕತೆಗಳನ್ನು ಹೇಳುತ್ತಿದ್ದಾರೆ.

ಕತೆಯಲ್ಲಿನ ಅಜ್ಜನದು ಒಂದು ಕೂಡು ಕುಟುಂಬ. ಕೂಡು ಕುಟುಂಬದ ಪರಿಕಲ್ಪನೆ ನಾಶವಾಗುತ್ತಿರುವ ಈ ಕಾಲಘಟ್ಟದಲ್ಲಿ ಅಜ್ಜ ಮತ್ತು ಆತನ ಕುಟುಂಬದ ಸದಸ್ಯರು ಹೇಗೆ ಒಂದೆಡೆ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ ಎನ್ನುವುದು ಪುಸ್ತಕ ತುಂಬಾ ನಮಗೆ ಕಾಣಸಿಗುತ್ತದೆ. ಈ ಕುಟುಂಬ ಕೃಷಿಯನ್ನು ನಂಬಿ ಬದುಕುತ್ತಿರುವುದರಿಂದ ಕೃಷಿಕರ ಕಷ್ಟಗಳು, ಸಾಲಸೋಲಗಳು, ಆರ್ಥಿಕ ಸಂಕಷ್ಟಗಳಾಚೆ ಇರುವ ಜೀವನ ಪ್ರೀತಿ ಎಲ್ಲವೂ ಪುಸ್ತಕದಲ್ಲಿ ದಾಖಲಾಗಿದೆ. ಮೊಮ್ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿ ಇಟ್ಟು ಕತೆ ಹೇಳುತ್ತಿರುವುದರಿಂದ ಆ ಪುಟ್ಟ ಹುಡುಗರು ಪಾದರಸದಂತೆ ಇರುವುದು, ಅವರ ಮಾತು, ಅವರ ಆಟಗಳು, ಅಜ್ಜನನ್ನ ಕತೆ ಹೇಳು ಎಂದು ಕಾಡಿಸುವ ರೀತಿಗಳು ನಾಗರಾಜುರವರು ಅಜ್ಜನ ಜೀವನಾನುಭವವನ್ನು ಕಾದಂಬರಿಯ ರೂಪದಲ್ಲಿ ಕಟ್ಟಿಕೊಡಲು ತುಂಬಾ ಸಹಕಾರಿಯಾಗಿದೆ.

ಈ ಕಾದಂಬರಿಯ ಮುಖ್ಯ ಭೂಮಿಕೆ ಅಜ್ಜನ ತೋಟದ ಮನೆಯೇ ಆಗಿರುವುದರಿಂದ ಪರಿಸರ ಪ್ರಜ್ಞೆಯನ್ನು ಅಜ್ಜ ಮೊಮ್ಮಕ್ಕಳಲ್ಲಿ ತುಂಬುವ ರೀತಿ ಅನನ್ಯ. ಈಗಿನ ಕಾಲದ ಮಕ್ಕಳಿಗೆ ಮೊಬೈಲ್‌ ನೀಡಿ ಗೇಮ್‌ ಆಡಿ, ವಿಡೀಯೋ ನೋಡಿ ಎನ್ನುವ ಪೋಷಕರಂತೆ ಅಜ್ಜ ಮಕ್ಕಳ ಕೈಗೆ ಮೊಬೈಲ್‌ ನೀಡದೆ ತಮ್ಮ ಹೊಲ ಗದ್ದೆಗಳಲ್ಲಿ ಹಾರುವ ಚಿಟ್ಟೆ, ಹಕ್ಕಿ ಪಕ್ಷಿ, ಹೂವುಗಳನ್ನು ತೋರಿಸುತ್ತಾ ಮಕ್ಕಳ ಬಾಲ್ಯವನ್ನು ವರ್ಣರಂಜಿತವಾಗಿಸಿದ್ದಾರೆ. ಜೊತೆಗೆ ನಿಹಾರಿಕಾ ಮತ್ತು ಸಾಗರೀಕ ಎಂಬ ಹೆಸರುಗಳು ತೇಜಸ್ವಿಯವರ “ಸುಶ್ಮಿತಾ ಮತ್ತು ಹಕ್ಕಿಮರಿ” ಎಂಬ ಪಾಠದ ಸುಶ್ಮಿತಾ ಪಾತ್ರವನ್ನು ನೆನಪಿಸುತ್ತವೆ. ಈ ಪುಟ್ಟ ಹುಡುಗಿಯರು ತುಳಿಯುವ ಸೈಕಲ್‌ ನಮ್ಮ ಕಣ್ಣ ಮುಂದೆ ಚಲಿಸುತ್ತಲೇ ಇರುತ್ತದೆ. ಈ ಇಬ್ಬರು ಮಕ್ಕಳ ಸಂಭಾಷಣೆಗಳು ಒಮ್ಮೊಮ್ಮೆ ನಮ್ಮ ಮುಖದ ಮೇಲೆ ಮಂದಹಾಸ ಮೂಡಿಸುತ್ತವೆ. ಕೌಟುಂಬಿಕ ಕಾರಣಗಳಿಗೆ, ಆರೋಗ್ಯದ ಏರುಪೇರುಗಳ ಭಯಕ್ಕೆ ವೃದ್ಧಾಪ್ಯ ತಲುಪುವುದೇ ಶಾಪ ಎಂಬಂತೆ ಬಿಂಬಿತವಾಗುತ್ತಿರುವ ಈ ಕಾಲದಲ್ಲಿ ಕುಟುಂಬದ ಸದಸ್ಯರ ಸಹಕಾರ ಮತ್ತು ಪ್ರೀತಿಯಿದ್ದರೆ ಎಂತಹಾ ಆರೋಗ್ಯದ ಸಮಸ್ಯೆಯನ್ನಾಗಲಿ, ಆರ್ಥಿಕ ಸಂಕಷ್ಟವನ್ನಾಗಲಿ ಮೆಟ್ಟಿ ನಿಲ್ಲಬಹುದು ಎನ್ನುವುದನ್ನು ಈ ಪುಸ್ತಕ ಹೇಳುತ್ತದೆ.

ಹಾಡ್ಲಹಳ್ಳಿ ನಾಗರಾಜ್

ಪುಸ್ತಕದಲ್ಲಿ ಮುಖ್ಯಪಾತ್ರದಾರಿಗಳ ಜೊತೆಗೆ ಅಜ್ಜನ ತೋಟಕ್ಕೆ ಕೆಲಸಕ್ಕೆ ಬರುವ ಹೆಂಗಸರ ರಸವತ್ತಾದ ಸಂಭಾಷಣೆಗಳು, ಹಳ್ಳಿಯಲ್ಲಿ ಕೆಲವರು ಯಾಮಾರಿಸುವ ಪರಿಗಳು ಪುಸ್ತಕದಲ್ಲಿ ನಮಗೆ ಅಲ್ಲಲ್ಲಿ ಓದಲು ಸಿಗುತ್ತದೆ. ಅಜ್ಜ ಸರ್ಕಾರಿ ನೌಕರನಾಗಿದ್ದ ಕಾರಣಕ್ಕೆ ತನ್ನ ಕಾರ್ಯಸ್ಥಾನದಲ್ಲಿ ಕಟ್ಟಿಕೊಂಡಿರುವ ಅಪಾರವಾದ ಸ್ನೇಹಿತರ ಬಳಗ, ಅವರು ಅಜ್ಜನ ಸಂಕಷ್ಟದ ಕಾಲದಲ್ಲಿ ಜೊತೆ ನಿಲ್ಲುವ ಪರಿ ನಿಜಕ್ಕೂ ಶ್ಲಾಘನೀಯ. ಪುಸ್ತಕದ ಒಂದಷ್ಟು ಪುಟಗಳು ಕಮೋಡ್‌ ಕುರಿತೇ ಆಗಿರುವುದರಿಂದ ಲೇಖಕರ openness ಕೆಲವು ಓದುಗರಿಗೆ ಚೂರು ಇರುಸುಮುರುಸು ಅನಿಸಬಹುದೇನೋ. ಆ ಇರುಸು ಮುರುಸುಗಳು ಆಗದ ಹಾಗೆ ನಿಹಾರಿಕ ಮತ್ತು ಸಾಗರೀಕರ ತುಂಟತನಗಳು ಪುಸ್ತಕದ ತುಂಬಾ ಇವೆ. ಹಾಸನದ ಕಡೆಯ ಭಾಷೆಯ ಸೊಗಡು, ಒಂದಷ್ಟು ತುಂಬಾ ಒರಟು ಎನಿಸುವ ಗಾದೆಮಾತುಗಳನ್ನು ನಾವು ಪುಸ್ತಕದಲ್ಲಿ ಕಾಣಬಹುದು. ಒರಟು ಎನಿಸುವ ಗಾದೆಮಾತುಗಳು ಸಹಜವಾಗಿ ನಾಗರಾಜುರವರ ಬರಹಗಳಲ್ಲಿ ಕಾಣಸಿಗುತ್ತವೆ. ಅದು ಅವರ ಬರಹದ ಶೈಲಿ. ಆ ಗಾದೆಗಳಲ್ಲಿನ ಅಶ್ಲೀಲತೆ ಪೋಲಿತನಗಳು ಗ್ರಾಮೀಣ ಭಾಗದ ಜನರ ಭಾಷೆಯೇ ಆಗಿರುವಾಗ ಅವುಗಳ ಬಳಕೆ ಪುಸ್ತಕದ ಪುಟಗಳಲ್ಲಿ ಇದ್ದರೆ ತಪ್ಪೇನಿಲ್ಲ ಅನಿಸುತ್ತದೆ.

ಸಾಮಾನ್ಯವಾಗಿ ಪುಸ್ತಕ ಓದುವ ಮುಂಚೆ ಪುಸ್ತಕದ ಮುನ್ನುಡಿಯನ್ನು, ಬೆನ್ನುಡಿಯನ್ನು ಓದುವ ಅಭ್ಯಾಸವಿಲ್ಲದ ನನಗೆ ಲೇಖಕರ ಮಾತನ್ನು ತಪ್ಪದೇ ಓದಿಕೊಳ್ಳುತ್ತೇನೆ. ಪುಸ್ತಕದ ಕಥಾಹಂದರಗಳನ್ನು ಕೆಲವು ಮುನ್ನುಡಿಕಾರರು ಅತೀ ಹೆಚ್ಚು ಎನಿಸುವಷ್ಟು ತೆರೆದಿಟ್ಟುಬಿಡುವ ಅಪಾಯವಿರುವುದರಿಂದ ಪುಸ್ತಕ ಕುರಿತ ಆಸಕ್ತಿಯೇ ಹೊರಟು ಹೋಗುತ್ತದೆ. ಈ ಲೇಖನ ಬರೆದ ಮೇಲೆ ಈ ಪುಸ್ತಕದ ಮುನ್ನುಡಿಯ ಮೇಲೆ ಸುಮ್ಮನೆ ಕಣ್ಣಾಡಿಸಿದೆ. ಈ ಪುಸ್ತಕಕ್ಕೆ ಸಾಹಿತಿಗಳಾದ ಡಾ.ಬಾಳಾಸಾಹೇಬ ಲೋಕಾಪುರ ರವರ ಚಂದದ ಮುನ್ನುಡಿ, ದಯಾ ಗಂಗನಘಟ್ಟರವರ ಬೆನ್ನುಡಿ ಇದೆ. ಸ್ವರೂಪ್‌ ಹಾಸನ್‌ ಅವರು ಈ ಪುಸ್ತಕಕ್ಕೆ ರೇಖಾಚಿತ್ರಗಳನ್ನು ಕತೆಗೆ ತಕ್ಕ ಹಾಗೆ ಬರೆದಿದ್ದಾರೆ, ಎಂದಿನಂತೆ ಹಾಡ್ಲಹಳ್ಳಿ ಪ್ರಕಾಶನದ ಪುಸ್ತಕಗಳಿಗಿರುವಂತೆ ವಿಆರ್‌ ಕಾರ್ಪೆಂಟರ್‌ ಈ ಪುಸ್ತಕದ ಮುಖಪುಟ ಮತ್ತು ಪುಟ ವಿನ್ಯಾಸ ಮಾಡಿದ್ದಾರೆ. ಹಾಸನ ಭಾಗದಲ್ಲಿ ಪುಸ್ತಕ ಪ್ರಕಟಣೆಯ ಜವಾಬ್ದಾರಿಗಳನ್ನು ಅನೇಕ ವರ್ಷಗಳಿಂದ ನಿಭಾಯಿಸುತ್ತಾ ಬಂದಿರುವ ಹಾಸನದ ಹಾಡ್ಲಹಳ್ಳಿ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ. ಕನ್ನಡದ ಓದುಗರು ಪುಸ್ತಕಗಳನ್ನು ಓದಲಿ ಎಂಬುದು ಈ ಲೇಖನ ಮಾಲೆಗಳ ಉದ್ದೇಶವಾಗಿರುವುದರಿಂದ, ಹಾಡ್ಲಹಳ್ಳಿ ನಾಗರಾಜುರವರ ಈ ಪುಸ್ತಕವನ್ನು ಓದುವ ಆಸಕ್ತಿ ಇದ್ದರೆ ಹಾಡ್ಲಹಳ್ಳಿ ಪ್ರಕಾಶನದ ಚಲಂ ಅವರನ್ನು 8747043485 ನಂಬರಿನಲ್ಲಿ ಸಂಪರ್ಕಿಸಬಹುದು. ಪುಸ್ತಕದ ಬೆಲೆ Rs.150/- ಮಾತ್ರ.

ಡಾ. ನಟರಾಜು ಎಸ್.‌ ಎಂ.

ಪುಸ್ತಕ: ಅಜ್ಜನ ಕಮೋಡು (ಕಾದಂಬರಿ)

ಪ್ರಕಾಶಕರು: ಹಾಡ್ಲಹಳ್ಳಿ ಪ್ರಕಾಶನ, ಹಾಸನ

ಬೆಲೆ: Rs. 150/-

ಸಂಪರ್ಕ ಸಂಖ್ಯೆ: ಚಲಂ ಹಾಡ್ಲಹಳ್ಳಿ 8747043485

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x