Marriages are made in heaven
-John lyly
ಬಿಎಂಡ್ಬ್ಲೂ ಕಾರೊಂದು ಮನೆ ಮುಂದೆ ನಿಂತಾಗ ಮನೆಯಿಂದ ಹೊರಗೆ ಬಂದು ಆಶ್ಚರ್ಯಚಕಿತಳಾಗಿ ಕಣ್ಣಗಲಿಸಿ ನೋಡುತ್ತಿರಬೇಕಾದರೆ ತಿಳಿಗುಲಾಬಿ ಸೀರೆ , ಕಡು ಕಪ್ಪು ಬಣ್ಣದ ರವಿಕೆ ತೊಟ್ಟು ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ್ದ ನೀಳಕಾಯದ ಸುಂದರ ಹೆಣ್ಣೊಂದು ಕಾರಿನಿಂದ ಇಳಿದು ಬರುತ್ತಿರಬೇಕಾದರೆ ಸಾಕ್ಷಾತ್ ಅಪ್ಸರೆಯೇ ತನ್ನತ್ತ ನಡೆದು ಬರುವಂತೆ ಕಲ್ಪನಾಳಿಗೆ ಭಾಸವಾಗಿತ್ತು.
“ಗುರುತು ಸಿಗಲಿಲ್ಲವೇನೇ.. ಕಲ್ಪನಾ?”
ಎಂದು ಆ ಗುಲಾಬಿ ಹೂವಿನಂತಹ ಹೆಣ್ಣು ತನ್ನ ಇಂಪಾದ ಕಂಠದಿಂದ ಉಲಿದಾಗಲೇ ಕಲ್ಪನಾ ವಾಸ್ತವಲೋಕಕ್ಕೆ ಬಂದಿದ್ದು. ಇನಷ್ಟು ಹತ್ತಿರ ಬಂದ ಅವಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲೇ ಅವಳ ಮುಖ ಪರಿಚಯ ಸಿಕ್ಕಿದ್ದು. ಅವಳ ಪರಿಚಯ ಸಿಕ್ಕ ಕೂಡಲೇ ಕಲ್ಪನಾಗೆ ಎಷ್ಟೊಂದು ಸಂತೋಷವಾಯಿತೆಂದರೆ ಅದು ಪದಗಳಲ್ಲಿ ಬಣ್ಣಿಸಲು ಸಾಧ್ಯ ಇರಲಿಲ್ಲ. ಕಲ್ಪನಾಳ ಹತ್ತಿರಕ್ಕೆ ಬಂದ ಭಾವನಾಳನ್ನು –
“ಹೇ ಭಾವನಾ… ಯಾವಾಗ ಬಂದಿಯೇ?” ಎನ್ನುವಷ್ಟರಲ್ಲಿ ಭಾವನಾ ಕಲ್ಪನಳನ್ನು ಸಂತೋಷದಿಂದ ಅಪ್ಪಿಕೊಂಡೇ ಬಿಟ್ಟಿದ್ದಳು. ಕಲ್ಪನಾ ಕೂಡ ಅಷ್ಟೇ ಆತ್ಮೀಯವಾಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಳು. ಕೆಲವು ಕ್ಷಣಗಳ ಆತ್ಮೀಯ ಅಪ್ಪುಗೆಯ ನಂತರ ಕಲ್ಪನಾ ಅವಳ ಕೈಹಿಡಿದು ಬಾ ಒಳಗೆ ಎನ್ನುತ್ತ ಎಳೆದುಕೊಂಡು ಒಳಗೆ ಬಂದು ಸೋಫಾದ ಮೇಲೆ ಕೂರಿಸಿದಳು. ಒಳಗೆ ಹೋಗಿ ನೀರು ತಂದು ಕೊಟ್ಟು “ಕಾಫೀ ಮಾಡ್ತೀನಿ ಇರು” ಕುಡಿಯುತ್ತ ಮಾತಾಡೋಣ ಎಂದು ಒಳಗೆ ಹೋದಳು”
ಕೆಲವೇ ಕ್ಷಣಗಳಲ್ಲಿ ಬಿಸಿ ಬಿಸಿ ಹೊಗೆಯಾಡುವ ಕಾಫಿಯೊಂದಿಗೆ ಹಿಂದಿರುಗಿದ ಕಲ್ಪನಾ ಮುಂದವರೆಸಿದ್ದಳು.
” ಅದೆಷ್ಟು ಚೆಂದಾಕಾಣ್ತಾ ಇದಿಯೇ, ಗುಲಾಬಿ ಈಗಷ್ಟೇ ಅರಳಿದ ತಾಜಾ ಹೂವಿನ ಹಾಗೆ, ನನ್ನದೇ ದೃಷ್ಟಿಯಾಗುತ್ತೆ ನೋಡು ನಿನಗೆ” ಎಂದಿದಕ್ಕೆ ನಕ್ಕು ಭಾವನಾ-
“ನೀನಾದರು ಏನು ಕಡಿಮೆ… ಮೈಕೈ ತುಂಬಿಕೊಂಡು ಕೆಂಪಗೆ ಟೊಮ್ಯಾಟೊ ಹಣ್ಣಿನ ಹಾಗೇ ಆಗಿದ್ದೀಯಾ? ನನಗೂ ನಿನ್ನ ಮೇಲೆ ಮನಸಾಯ್ತು ನೋಡು..” ಎಂದಾಗ ಇಬ್ಬರೂ ಬಿದ್ದು ಬಿದ್ದು ನಕ್ಕರು.
“ಮತ್ತೇನು ವಿಶೇಷ ಹೇಳು ಹೇಗಿದ್ದೀಯಾ ಜೀವನ ಹೇಗೆ ನಡೆದಿದೆ” ಎಂದು ಭಾವನ ನಕ್ಕು ಹೇಳಿದಳು
” ಸೂಪರ್” ಎಂದು.
“ಹೌದು.. ಮತ್ತೆ ನಿಮ್ಮಂಥ ಶ್ರೀಮಂತರ ಜೀವನ ಸೂಪರ್ ಇರದೇ ಇರುತ್ತಾ” ಅದಕ್ಕವಳು ಮತ್ತೆ ನಕ್ಕಳು ಆದರೆ ನಗುವಿನಲಿ ಎಲ್ಲೋ ಒಂದು ನೋವಿನ ಅಲೆ ತೇಲಿ ಬಂದು ಹೃದಯ ತಾಕಿ ಹೊದಂತೆನಿಸಿತು.
” ನಿಜ ಕಣೇ.. ಶ್ರೀಮಂತ ಗಂಡ, ಕೈಗೊಂದು ಕಾಲಿಗೊಂದು ಆಳು.. ಕಾರು ಬಂಗ್ಲೆ ಎಲ್ಲ.. ಐಶ್ಯಾರಾಮಿ ಜೀವನ. ಮನುಷ್ಯನಿಗೆ ಸುಖವಾಗಿರಲು ಇದೆಲ್ಲ ಬಿಟ್ಟು ಇನ್ನೇನು ಬೇಕು” ಎಂದಳು.
“ಹೌದು ಕಣೇ.. ಮನುಷ್ಯನ ಜೀವನದಲ್ಲಿ ದುಡ್ಡುವೊಂದು ಇದ್ದರೆ. ಎಲ್ಲ ಇದ್ದಹಾಗೆ ನೋಡು”
ನಮ್ಮಂಥ ಬಡವರು ಜೀವನದಲ್ಲಿ ಪ್ರತಿಯೊಂದಕ್ಕೂ ಪರದಾಡಬೇಕು, ಹೋರಾಟ ಮಾಡಿಯೇ ಸತ್ತು ಹೋಗಬೇಕು..”
“ಹಾಗ್ಯಾಕ ಹೇಳ್ತೀಯಾ ಇನ್ಮೇಲೆ ನಾನಿದೀನಲ್ಲ”
” ಹೌದಮ್ಮ.. ಮಹಾರಾಯತಿ.. ನೀನಿದಿಯಲ್ಲ.. ಇಷ್ಟು ದಿನಗಳ ನಂತರ ಪ್ರಾಣ ಸ್ನೇಹಿತೆಯನ್ನು ನೋಡಲು ಬಂದಿರುವೆ.. ನೀ ಅದಿ ಅಂದ್ರು ನಿನಗೆ ನಿನ್ನದೇ ಜೀವನ ಸಂಸಾರ ಇಲ್ವಾ, ನಿನ್ನ ಗಂಡಾ ಬಿಡಬೇಕಲ್ಲಾ?” ಎಂದಾಗ
“ಗಂಡಾ..” ಅಂತಾ ಏನೋ ಹೇಳಲು ಹೋಗಿ ಬರೀ ನಕ್ಕು ಸುಮ್ನಾದಳು ಭಾವನ.
“ಯಾಕೇ ಏನಾಯ್ತು..?” ಎಂದು ಪ್ರಶ್ನಿಸಿದಕ್ಕೆ.
“ಏನಿಲ್ಲ ಬಿಡು.. ” ಎಂದು ಸುಮ್ನಾದಳು. ಹೋಗಲಿ ಅವಳ ವೈಯಕ್ತಿಕ ವಿಷಯಗಳನ್ನೆಲ್ಲ ಕೆದಕಿ ಯಾಕೆ ಅವಳ ಮನಸ್ಸು ಕೆಡಿಸುವುದು ಅಂತಾ ಕಲ್ಪನಾ ಸುಮ್ಮನಾದಳು. “ಊಟದ ಸಮಯ ಬಾ ಮೊದಲು ಊಟ ಮಾಡೋಣ” ಎಂದು ಡೈನಿಂಗ್ ಟೇಬಲಿಗೆ ಕರೆತಂದು ಊಟ ಮಾಡುತ್ತಲೇ ಮಾತಿಗೆ ಎಳೇದಳು. ಅವರ ಮಾತಿನ
ನಡುವೆ ಗತ ಜೀವನದ ನೆನಪುಗಳ ಸುರುಳಿ ಬಿಚ್ಚಿಕೊಂಡಿತ್ತು.
ಭಾವನಾ ಹೆಸರಿಗೆ ತಕ್ಕಂತೆ ಅತೀ ಸೂಕ್ಷ್ಮ ಮನಸ್ಸಿನ ಭಾವನಾ ಜೀವಿಯಾದರೆ, ಕಲ್ಪನಾ ಹೆಸರಿಗೆ ತಕ್ಕ ಹಾಗೆ ಕಲ್ಪನಾ ವಿಹಾರಿ. ಕಲ್ಪನಾಳಿಗೆ ವಿಜ್ಞಾನದ ಓದಿನ ಜೊತೆ ಜೊತೆಗೆ ಕಲ್ಪನಾಳಿಗೆ ಕಾವ್ಯ ಗೀಚುವ ಗೀಳಿದ್ದರೆ, ಭಾವನಾಳಿಗೆ ಚೆಂದದ ಚಿತ್ರ ಬಿಡಿಸುವ ಹವ್ಯಾಸ.ಇಬ್ಬರದೂ ಸೃಜನಶೀಲ ಮನಸ್ಸುಗಳು. ಕಾಲೇಜನಲ್ಲಿ ಏರ್ಪಡಿಸಲಾಗುತ್ತಿದ್ದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯ ಕಾರಣ ಭಾಗವಹಿಸಿ ಪ್ರಶಸ್ತಿ ಬಹುಮಾನಗಳು ಗಿಟ್ಟಿಸುವ ಮೂಲಕ ಇಡೀ ಕಾಲೇಜಿನ ಗಮನ ಸೆಳದಿದ್ದಷ್ಟೇ ಅಲ್ಲದೆ ಒಂದು ತರಹದಲ್ಲಿ ತಾರಾಮೌಲ್ಯವನ್ನು ಪಡೆದುಕೊಂಡಿದ್ದರು. ಹಾಗೇ ಪಿಯೂ ಒಳ್ಳೆಯ ರ್ಯಾಂಕ ಪಡೆದು ಪಾಸಾಗಿ ಅದೇ ಕಾಲೇಜಿನಲ್ಲಿ ಪದವಿ ಮುಂದುವರೆಸಿದ್ದರು. ಆಗಲೇ ಪದವಿಗೆ ಹೊಸದಾಗಿ ಪ್ರವೇಶ ಪಡೆದಿದ್ದ ಆಕರ್ಷ್ ಎನ್ನುವ ವಿದ್ಯಾರ್ಥಿ ಓದಿನಲ್ಲಿ ಇವರಿಬ್ಬರಕಿಂತ ಮುಂದಿದ್ದ. ಮತ್ತು ಹೆಸರಿನಂತೆ ತುಂಬಾ ಸುಂದರನಾಗಿಯೂ ಆಕರ್ಷಕನಾಗಿಯೂ ಇದ್ದ. ಓದಿನ ನೆಪ ಮಾಡಿಕೊಂಡು ಆಕರ್ಷ್ ಬರಬರುತ್ತ ಈ ಗೆಳತಿಯರಿಗೆ ಹತ್ತಿರವಾಗಲೂ ಆರಂಭಿಸಿದ್ದ. ಕಾಲೇಜಿನಲ್ಲಿ ಈ ಮೂರು ಜನರ ಒಂದು ಗುಂಪೇ ಆಗಿ ಹೋಗಿತ್ತು. ಕಲ್ಪನಾ ಗೊತ್ತಿಲ್ಲದಂತೆ ಭಾವನಾ, ಭಾವನಾಗೆ ಗೊತ್ತಿಲ್ಲದಂತೆ ಕಲ್ಪನಾ ಆಕರ್ಷ್ ನತ್ತ ಆಕರ್ಷಿತರಾಗುತ್ತಿದ್ದರು. ಬಹುಶಃ ಇವರೆಲ್ಲರಲ್ಲಿ ಅವರಿಗೆ ಅರಿವಿಲ್ಲದಂತೆ ಅನುರಾಗ ಭಾವ ಮೊಳೆಯುತಿತ್ತು. ಆದರೆ ಆಕರ್ಷ್ ಮಾತ್ರ ಭಾವನಾಳಲ್ಲಿ ಅನುರಕ್ತನಾದಂತಿದ್ದ, ಬಹುಶಃ ಅವನ ಸೌಂದರ್ಯಕಿಂತ ಹೆಚ್ಚಾಗಿ ಅವಳ ಸಂಪತ್ತಿಗೆ ಮನಸೋತಂತೆ ಇತ್ತು. ಭಾವನಾಳು ಅಷ್ಟೇ ಅವನನ್ನು ಹಚ್ಚಿಕೊಂಡಿದ್ದಳು. ಮಾತೆತ್ತಿದ್ದರೆ ಅವನ ಕುರಿತೇ ಮಾತಾಡುವುದು.. ಅವನನ್ನೆ ಹೊಗಳುವುದು ಮಾತಾಡುತ್ತಿದ್ದಳು. ಕಲ್ಪಾನಳಿಗೆ ಅವಳ ಹೊಗಳಿಕೆ ಕೇಳಿ ಕಿವಿಗಳಿಗೆ ಲಾವಾರಸ ಸುರಿದಂತೆ ಅನುಭವವಾಗುತಿತ್ತು. ಈಗೀಗ ಅವರು ಪಾರ್ಕ್ ಸುತ್ತೋದು, ಮಾಲ್ ಗೆ ಹೋಗೋದು, ಸಿನೇಮಾ ನೋಡೋದು ಎಲ್ಲ ಜೋರಾಗಿತ್ತು. ಬರಬರುತ್ತ ಭಾವನಾ ಮತ್ತು ಆಕರ್ಷ ಪ್ರೀತಿ ವಿಷಯ ಗಂಧಗಾಳಿಯಾಗಿ ಎಲ್ಲಡೆ ಹರಡಲು ಅರಂಭಿಸಿತ್ತು. ಬಹುಶಃ ಮುಂದೆ ಈ ವಿಷಯ ಭಾವನಾಳ ಮನೆಯಲ್ಲೂ ಗೊತ್ತಾಗಿರಬಹುದು. ಅವಳ ಅಮ್ಮಾ ಒಂದೆರಡು ಬಾರಿ ಫೋನ್ ಮಾಡಿ ಕಲ್ಪನಾಳನ್ನು ವಿಚಾರಿಸಿದ್ದರು. ಕಲ್ಪನಾ ಹಾಗೇನಿಲ್ಲ ಅವರ ನಡುವೆ ಕೇವಲ ಸ್ನೇಹ ಮಾತ್ರ ಇದೆ, ಅವನೂ ವೈಜ್ ಸ್ಟೂಡೆಂಟ್ ಹೀಗಾಗಿ ಸ್ವಲ್ಪ ಸಲುಗೆ ಜಾಸ್ತಿ ಅಂತಾ ಹಾರಿಕೆಯ ಉತ್ತರ ಕೊಟ್ಟಿದ್ದಳು. ಮುಂದೆ ಭಾವನಾಳ ಮನೆಯಲ್ಲಿ ಅದೇನು ನಡೆಯಿತೋ ಬರಬರುತ್ತ ಅವಳು ಕಾಲೇಜಕೆ ಬರುವುದೇ ಕಡಿಮೆ ಮಾಡಿದಳು. ಆಗಾಗ ಬಂದರೂ ಆಕರ್ಷ ಜೊತೆಗೆ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದಳು. ಭಾವನಾ ತಂದೆ ತಾಯಿ ಮನೆತನದಿಂದ ಅಗರ್ಭ ಶ್ರೀಮಂತರು.ಒಳ್ಳೆಯ ಪ್ರತಿಷ್ಟಿತ ರಾಜಕಾರಣಿಗಳು. ಅವರ ಮಗಳು ಹೀಗೆ ಯಾರ ಹಿಂದೆಯೋ ಬಿದ್ದು ಮನೆ ಮರ್ಯಾದೆ ಹಾಳಾಗುವುದು ಅವರಿಗೆ ಬೇಕಿರಲಿಲ್ಲ.
ಬಹುಶಃ ಅವಳಿಗೆ ಮನೆಯಲ್ಲಿ ಬುದ್ದಿವಾದ ಹೇಳಿದ್ದರೋ ಏನೋ. ಅಥವಾ ಏನಾದರೂ ಹೇಳಿ ಹೆದರಿಸಿದ್ದರೋ ಅವಳು ಆಕರ್ಷ್ ನಿಂದ ದೂರ ಸರಿಯಲು ಪ್ರಯತ್ನಿಸುತ್ತಿದರೆ ಆಕರ್ಷ್ ಮಾತ್ರ ಅವಳನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ. ಬೇಡವೆಂದರೂ ಕೇಳದೆ ಅವಳ ಹಿಂದೆ ಬಿಳುತ್ತಿದ್ದ. ಇದೇ ಆತನ ವರ್ತನೆ ಬರುಬರುತ್ತ ಅವಳ ಮಾನಸಿಕ ಹಿಂಸೆಗೂ ಕಾರಣವಾಗತೊಡಗಿತು. ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವನ ಕೈಗೆ ಒಂದಿಷ್ಟು ದುಡ್ಡು ಇಟ್ಟು ನೀನೇ ಎಲ್ಲಿಯಾದರು ಹೋಗಿ ಎಂಜಾಯ್ ಮಾಡಿ ಬಾ, ಬೇಕಾದರೆ ಕಲ್ಪನಾಳನ್ನು ಜೊತೆಗೆ ಕರೆದುಕೊಂಡು ಹೋಗು ಎನ್ನುತ್ತಿದ್ದಳು. ಆಕರ್ಷ್ ಕಲ್ಪನಾಳನ್ನು ಜೊತೆಗೆ ಕರೆದುಕೊಂಡು ಹೋಗಲು ನೋಡಿದ ಆದರೆ ಕಲ್ಪನಾ ಅದಕ್ಕೆ ಅವಕಾಶ ನೀಡಲಿಲ್ಲ. ಈಗ ಅವನ ವರ್ತನೆ ಕಲ್ಪನಾಗೆ ಎಳ್ಳಷ್ಟು ಹಿಡಿಸುತ್ತಿರಲಿಲ್ಲ. ಇವನು ದುಡ್ಡಿಗಾಗಿ ಏನಾದರೂ ಮಾಡಬಹುದು ಎಂದು ಕಲ್ಪನಾಗೆ ತಿಳಿದು ಹೋಗಿತ್ತು. ಈ ನಡುವೆ ಭಾವನಾಳಿಗೆ ಬ್ಲ್ಯಾಕ್ ಮೇಲ್ ಮಾಡುವುದು ಹೆಚ್ಚಾಯಿತು.ಇದಕ್ಕೆ ಬೇಸತ್ತು ಅವಳು ದಿನ ದುಡ್ಡು ಕೊಡುವುದು ನಡೆಯಿತು. ಆಕರ್ಷ್ ಕಾಲೇಜಿನ ಕೆಲವು ನಡತೆಗೆಟ್ಟ ಹೆಣ್ಣುಗಳನ್ನು ಕರೆದುಕೊಂಡು ಹೋಗಿ ಮಜಾ ಉಡಾಯಿಸಿ ಬರಲು ಆರಂಭಿಸಿದ. ಆಕರ್ಷ್ ಹೀಗೇ ಮುಂದುವರೆಸಿದಾಗ ಭಾವನಾಳ ಮನೆಯಲ್ಲಿ ಅದೇನು ನಡೆಯಿತು ಭಾವನಾ ಕಾಲೇಜಕ್ಕೆ ಬರುವುದನ್ನೆ ನಿಲ್ಲಿಸಿದಳು. ಇತ್ತ ಭಾವನಾಳನ್ನು ಕಾಣದೆ, ಅವಳ ಕೊಡುವ ದುಡ್ಡು ಇಲ್ಲದೆ ಆಕರ್ಷ್ ಹುಚ್ಚನಂತೆ ವರ್ತಿಸಲು ಆರಂಭಿಸಿದ್ದ. ಆಕರ್ಷ್ ಒಂದೆರಡು ಬಾರಿ ಭಾವನಾಳ ಮನೆಗೂ ಹೋಗಿ ರಂಪಾಟ ಮಾಡಿದ್ದನೆಂದು ತಿಳಿದು ಬಂದಿತ್ತು. ನಂತರ ಒಂದು ದಿನ ಬೈಕ್ ನಲ್ಲಿ ಬರಬೇಕಾದರೆ ಯಾವುದೋ ಕಾರವೊಂದು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಆಕರ್ಷ್ ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಲ್ಲದೇ ಕೆಲವು ದಿನಗಳ ನಂತರ ಅವನು ಅವನ ಮನೆಯವರು ಊರೇ ಬಿಟ್ಟು ಹೋದರೆಂದು ತಿಳಿಯಿತು. ಈ ಎಲ್ಲದರ ಹಿಂದೆ ಭಾವನಾಳ ತಂದೆಯ ಕೈವಾಡ ಇರಬಹುದು ಎನ್ನವ ಸುದ್ದಿ ಸಂದೇಹ ಎಲ್ಲಡೆ ಹಡಿತ್ತು. ಆಕರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರ ಕುಟುಂಬದವರು ಅವಳನ್ನು ಚಿನೈಕ್ಕೆ ಕರೆದುಕೊಂಡು ಹೋಗಿ ಉದ್ಯಮಿಯಾಗಿದ್ದ ದೂರದ ಸಂಬಂಧಿಯೊಬ್ಬನನ್ನು ಗುಟ್ಟಾಗಿ ಮದುವೆ ಮಾಡಿಕೊಟ್ಟಿದ್ದರು. ಈ ಘಟನೆಗಳ ನಂತರ ಭಾವನಾ ಮತ್ತು ಕಲ್ಪನಾ ಒಮ್ಮೆಯೂ ಭೇಟಿಯಾಗುವ ಪ್ರಸಂಗ ಬಂದಿರಲಿಲ್ಲ.
ಇತ್ತ ಪದವಿ ಮುಗಿಸಿದ ಕಲ್ಪನಾ ಯಾವುದೋ ಒಂದು ಖಾಸಗೀ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕಾದರೆ ಪರಿಚಯವಾದವನೇ ಕುಮಾರ. ಒಂದು ದಿನ ತನ್ನ ತಂದೆ ತಾಯಿಗಳೊಂದಿಗೆ ಕಲ್ಪನಾ ಮನೆಗೆ ಬಂದು ತನ್ನನ್ನು ಸುಮಂತ ಎಂದು ಪರಿಚಯಸಿಕೊಂಡು ಜೊತೆಗೆ ಬಂದವರನ್ನು ಇವರು ತನ್ನ ತಂದೆ ತಾಯಿಯೆಂದು ಪರಿಚಯಿಸಿದ್ದ. ಮುಂದೆ ಸುಮಂತನ ತಂದೆತಾಯಿಗಳು ಮಾತನಾಡಿದ್ದರು. “ಸುಮಂತ ತಮಗೆ ಒಬ್ಬನೇ ಮಗ.. ತಮ್ಮ ಮಗಳು ಕೆಲಸ ಮಾಡುವ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾನೆ. ನಮ್ಮ ಮಗ ನಿಮ್ಮ ಮಗಳ ತುಂಬಾನೇ ಇಷ್ಟ ಪಟ್ಟಿದ್ದಾನೆ. ತಾವು ಒಪ್ಪಿದರೆ ನಾವು ಅವಳನ್ನು ಮನೆ ಸೊಸೆಯನ್ನಾಗಿ ಮಾಡಿಕೊಳ್ಳುತ್ತೇವೆ” ಎಂದು ನೇರವಾಗಿ ತಾವು ಮನೆಗೆ ಬಂದ ಉದ್ದೇಶವನ್ನು ವಿವರಿಸಿದ್ದರು. ತಾವು ಕೂಡ ಬಂದು ನಮ್ಮ ಮನೆಯಲ್ಲ ನೋಡಿ ತಮ್ಮ ನಿರ್ಧಾರ ತಿಳಿಸಬೇಕೆಂದು ವಿನಂತಿಸಿದ್ದರು. ಅದರಂತೆ ಕಲ್ಪನಾಳ ತಾಯಿಕೂಡ ತಮ್ಮ ಕೆಲ ಸಂಬಂಧಿಗಳಿಗೆ ಕರೆದುಕೊಂಡು ಹೋಗಿ ಅವರ ಮನೆಯಲ್ಲ ನೋಡಿ ಅವರ ಅಕ್ಕಪಕ್ಕದವರನ್ನೆಲ್ಲ ವಿಚಾರಿಸಿಕೊಂಡು ಬಂದು ಒಬ್ಬನೇ ಮಗ ಒಳ್ಳೆಯ ಪೋಸ್ಟ್ ನಲ್ಲಿ ಇದ್ದಾನೆ ಎನ್ನುವ ಕಾರಣಕ್ಕೆ ಸಮ್ಮತಿಸಿದ್ದಳು. ಅದರಂತೆ ಮುಂದೊಂದು ಶುಭ ಮುಹೂರ್ತದಲ್ಲಿ ಮದುವೆಯೂ ನಡೆದು ಹೋಗಿ ಕಲ್ಪನಾ ಸುಮಂತನ ಪತ್ನಿಯಾಗಿ ಸುಂದರ ಆಶಾಗೋಪುರಗಳನ್ನು ಕಟ್ಟಿಕೊಂಡು ಅವನ ಮನ ಮನೆ ತುಂಬಲು ಹೋಗಿದ್ದಳು. ಆದರೆ ಅವಳ ಆಶಾಸೌಧ ರಟ್ಟಿನ ಮನೆಯಂತೆ ಕುಸಿದು ಬಿಳಲು ಬಹಳ ದಿನ ಬೇಕಾಗಲಿಲ್ಲ. ಕೆಲವೇ ದಿನಗಳಲ್ಲಿ ಸುಮಂತನ ನಿಜವಾದ ರೂಪ ಬಯಲಿಗೆ ಬಂದಿತ್ತು. ಆತ ಮನುಷ್ಯನ ಮುಖವಾಡಲ್ಲಿರುವ ಗೋಮುಖ ವ್ಯಾಘ್ರನಾಗಿದ್ದ. ತಮಗೆ ಏನೇನೂ ಬೇಡ ಹುಡುಗಿಗೆ ಧಾರೆಯೆರೆದು ಕೊಟ್ಟರೆ ಸಾಕು ಎಂದು ಅಂಗಲಾಚಿ ಬೇಡಿ ಮದುವೆ ಮಾಡಿಕೊಂಡ ಹೋದ ಸುಮಂತ ಮತ್ತವಳ ತಾಯಿ ತನ್ನ ಬಣ್ಣ ಬದಲಿಸಿದ್ದರು. ಸಣ್ಣದಾಗಿ ಮನೆಯ ತಾಪತ್ರಯ ಹೇಳಿಕೊಂಡು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದ್ದರು. ಮನೆಯ ಕಷ್ಟಕ್ಕೆ, ಗಂಡನ ದುಃಖದಲ್ಲಿ ಭಾಗಿಯಾಗದ ಸತಿಯಾದರು ಎಂಥವಳು ಎಂದು ಕೊಂಡು ಕಲ್ಪನಾ ಮದುವೆಗೆಂದು ಅಮ್ಮ ಹಾಕಿದ ಒಡುವೆಗಳನ್ನೆಲ್ಲ ಕೊಟ್ಟು ತೊಂದರೆ ತೀರಿಸಿಕೊಳ್ಳುವಂತೆ ಹೇಳಿದ್ದು ಆಯ್ತು. ಅಷ್ಟಕ್ಕೂ ಅವರ ಬೇಡಿಕೆ ಮುಗಿದಿರಲಿಲ್ಲ. ತಾಯಿ ಹತ್ತರ ಕಷ್ಟ ಕಾಲಕ್ಕೆಂದು ಕೂಡಿಟ್ಟ ಹಣ ಅದು ಆಯಿತು. ಇಷ್ಟಾದರೂ ಅವರ ತೊಂದರೆ ಮುಗಿಯಲಿಲ್ಲ. ಮುಂದೆ ತಾಯಿಯ ಒಡುವೆಗಳು ಕೂಡ ಕೊಟ್ಟು ಖಾಲಿಯಾಗಿದ್ದು ಆಯಿತು. ಮನೆಯಲ್ಲ ಬರಿದಾದರೂ ಅವರ ತಾಪತ್ರಯ ಮಾತ್ರ ನೀಗಲೇ ಇಲ್ಲ. ಹಾಗೇ ತಾಯಿ ಮಗನ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ನಡೆದಿತ್ತು. ಆದರೆ ಅವರ ಬೇಡಿಕೆಗಳು ಇಡೇರಿಸಲು ಏನೂ ಉಳಿದಿರಲಿಲ್ಲ. ಕಲ್ಪನಾ ಹೆಗಲಿಗಿರು ಬ್ಯಾಗ ಒಂದು ಬಿಟ್ಟು. ಅದರಲ್ಲಿ ಎನೋ ಬಚ್ಚಿಟ್ಟಿದೀಯಾ ಅದರಲ್ಲಿ ಏನೋ ರಹಸ್ಯ ಇದೆ ಅಂತಾ ಕೊನೆಗೆ ಅವಳ ಪ್ರಾಣಕ್ಕೂ ಸಂಚಕಾರ ತರಲು ಆರಂಭಿಸಿದರು. ಮಾತು ಮಾತಿಗೆ ಏನಾದರೂ ನೆಪ ಮಾಡಿಕೊಂಡು ಹೊಡೆಯೋದು ಬಡಿಯೋದು ಮಾಡಲು ಆರಂಬಿಸಿದು. ಮಾನಸಿಕವಾಗಿಯೂ ದೈಹಿಕವಾಗಿಯೂ ಹಿಂಸೆ ನೀಡಲು ಮುಂದಾದರು. ಇದನ್ನೆಲ್ಲ ಕಲ್ಪನಾಳಿಂದ ಸಹಿಸಿಕೊಳ್ಳುವುದು ಅಸಾಧ್ಯವಾಗಿತ್ತು.
“ಇನ್ನು ನಮ್ಮ ಹತ್ರ ಏನೂ ಉಳಿದಿಲ್ಲ. ಬೇಕಾದರೆ ನನ್ನಾತ್ಮ ಸತ್ತಹೋದ ಈ ದೇಹವೊಂದು ಇದೆ. ಇದನ್ನು ಬೇಕಾದರೆ ಸೀಮೆ ಎಣ್ಣೆ ಹಾಕಿ ಸುಟ್ಟು ಬಿಡಿ” ಎಂದು ಆಕ್ರೋಶದ ಧ್ವನಿಯಲ್ಲಿ ವಿನಂತಿಸಿಕೊಂಡಳು. ಆದರೆ ಅವರ ಹತ್ತಿರ ಅದಕ್ಕೂ ಉತ್ತರ ಸಿದ್ಧವಾಗಿತ್ತು.
“ನಿಮ್ಮ ಅಮ್ಮನ ಹೆಸರಿನಲ್ಲಿ ಮನೆಯೊಂದು ಇದೆಯಲ್ಲ..!” ವಾಹ್! ಅದೆಂಥ ದುಷ್ಟ ಬುದ್ದಿ ಇವರುದು. ಕೊನೆಗಾಲಕ್ಕೆ ಆಸರೆಯಾಗಿ ತಾಯಿ ಹೆಸರಿನಲ್ಲಿರುವ ಇರುವ ಮನೆ ಕೂಡ ಮಾರಿ ಇವರಿಗೆ ದುಡ್ಡು ತಂದು ಕೊಡಬೇಕಂತೆ. ಇವರ ಈ ಧನದಾಹಿ ವರ್ತನೆ ಕಂಡು ಕಲ್ಪನಾಗೆ ಮನಸ್ಸಿನಲ್ಲಿ ಹೇಸಿಗೆ ಅನಿಸಲು ಆರಂಭವಾಗಿತ್ತು. ಅದು ತನ್ನ ತಂದೆಯ ನೆನಪಿನಿಂದ ಕೂಡಿದ ಮನೆ. ತಾಯಿ ಕೊನೆಗಾಲಕ್ಕಿರುವ ಒಂದೇ ಒಂದು ಆಶ್ರಯ ಅದನ್ನು ಕೊಡುವುದು ಖಂಡಿತವಾಗಿಯೂ ಸಾಧ್ಯವಿಲ್ಲವೆಂದು ಹೇಳಿದಾಗ “ಬಿಟ್ಟಿಯಾಗಿ ತಿಂದು ಬಿಳುವ ನಾಯಿಗಳಿಗೆ ನಮ್ಮ ಮನೆಯಲ್ಲೂ ಜಾಗವಿಲ್ಲ” ಎಂದು ಸುಮಂತನ ಅಮ್ಮ ಗರ್ಜಿಸಿದ್ದಳು. ಹಣ ಗುಣ ಎಲ್ಲಾ ಹೋದರೆ ಹೋಯಿತು ಪ್ರಾಣವಾದರು ಉಳಿಯಲಿ ಎಂದುಕೊಂಡು ಆ ನರಕದಿಂದ ಬಿಡುಗಡೆಯಶಗಲು ಬಯಸಿ ಕಲ್ಪನಾ ತವರಿಗೆ ಮರಳಿದ್ದಳು. ಮನೆಗೆ ಬರುವಷ್ಟರಲ್ಲಿ ಉದರದಲ್ಲಿ ಕದಲುತ್ತಿದ್ದ ಪುಟ್ಟ ಜೀವವೊಂದು ದೇಹಕ್ಕಿಂತ ಹೆಚ್ಚಾಗಿ ಉಂಟಾದ ಮಾನಸಿಕ ಪರಿಣಾಮದ ಕಾರಣ ಭೂಮಿಗೆ ಬರುವ ಮೊದಲೇ ಪ್ರಾಣ ಹಾರಿ ಹೋಗಿ ಜೀವ ಚೆಲ್ಲಿತ್ತು. ತನ್ನ ಮಗಳ ಜೀವನ ತನ್ನಿಂದಲೇ ಹಾಳಾಯಿತು ಎಂದುಕೊಂಡು ಕೊರಗು ಹಚ್ಚಿಕೊಂಡ ಅಮ್ಮ ಕೂಡ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಳು. ಕಂಪನಿಯಲ್ಲಿ ಕೆಲಸ ಮಾಡಿ ಅನುಭವವಿದದ್ದಕ್ಕೆ ಬೇರೆ ಕಂಪನಿ ಸೇರಿ ಕೆಲಸ ಮಾಡುತ್ತ ಹೊಟ್ಟೆ ಬಟ್ಟೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ತಾಯಿ ಸತ್ತ ನಂತರ ಸುಮಂತ ಮತ್ತೆ ನಾಟಕವಾಡಿಕೊಂಡು ಬಂದು ಸಂಬಂಧ ಬೆಳೆಸಲು ನೋಡಿದನಾದರೂ ಕಲ್ಪನಾ ಅವಕಾಶಕೊಡಲಿಲ್ಲ. ಅವನು ಕಲ್ಪನಾಳ ಮನಸ್ಸಿನಿಂದ ಸಂಪೂರ್ಣವಾಗಿ ಇಳಿದು ಹೋಗಿದ್ದ. ಈಗ ಕೇವಲ ತನಗಾಗಿ ತಾನು ಬದುಕುವುದೇ ಜೀವನದ ಏಕೈಕ ಉದ್ದೇಶವಾಗಿ ಹೋಗಿತ್ತು
ಇನ್ನೂವರೆಗೂ ಯಾರ ಮುಂದೆಯೂ ನಿವೇದಿಸಿಕೊಳ್ಳದ ಗೆಳತಿಯರ ಬೇಗುದಿ ವೇದನೆ ಅಂದು ಮಾತಾಗಿ ಕರಗಿ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಮಾತು ಮಾತಿನಲ್ಲೆ ಊಟ ಕೂಡ ಮುಗಿಸಿ ಇನ್ನೂ ಅಷ್ಟು ಕುಶಲೋಪರಿ ಮುಗಿಸಿ ಮಧ್ಯಾನ ಒಂದಿಷ್ಟು ವಿರಾಮ ತೆಗೆದುಕೊಳ್ಳೋಣ ಎಂದು ಎದ್ದು ಬೆಡ್ ರೂಂಗೆ ಬಂದು ಬೆಡ್ ಮೇಲೆ ದೇಹ ಚೆಲ್ಲಿ ವಿರಾಮಕ್ಕೆ ಪ್ರಯತ್ನಿಸಿದರೆ ಮನಸಿನಲ್ಲಿ ತುಮುಲು ಹೊಯ್ದಾಟಗಳು ಹಾಗೇ ಮುಂದುವರೆದಿದ್ದವು. ಈ ನಡುವೆ ಭಾವನಳ ಕತೆ ಸಂಪೂರ್ಣವಾಗಲಿಲ್ಲ ಅನಿಸಿ ಕಲ್ಪನಾ ಮತ್ತೆ ಮಾತಿಗೆ ಮುಂದಾದಳು. ಕಲ್ಪನಾ ಭಾವನಾಳ ವೈವಾಹಿಕ ಜೀವನದ ಬಗ್ಗೆ ಕೇಳಿದಾಗ ಧೀರ್ಘವಾದ ನಿಟ್ಟುಸಿರು ಬಿಟ್ಟ ಭಾವನಾ
“ಅದನ್ಯಾಕ ಕೇಳ್ತೀಯಾ? ನನ್ನ ವೈವಾಹಿಕ ಜೀವನದ ಬಗ್ಗೆ ನೆನಪಿಸಿಕೊಂಡರೆ ನನಗೇ ಹೇಸಿಗೆಯಾಗುತ್ತೆ. ಮೈಯೆಲ್ಲ ಉರಿದು ಹೋಗುತ್ತೆ” ಎಂದಳು
“ಯಾಕೇ ಹಂಗಂತೀಯಾ” ಎಂದು ಮರುಪ್ರಶ್ನೆಗೆ ಅವಳು ತನ್ನ ಕತೆ ಹೇಳಲು ಆರಂಭಿಸಿದಳು.
“ನಿನಗೆ ಗೊತ್ತಿರುವಂತೆ ನನ್ನ ಮದುವೆ ಚಿನೈನಲ್ಲಿ ಉದ್ಯಮಿಯಾಗಿರುವ ನಮ್ಮ ದೂರದ ಸಂಬಂಧಿ ಶರತ್ ನೊಂದಿಗೆ ಆಯ್ತು. ಮೊದಲೇ ಆಕರ್ಷ್ ನ ಬ್ಲ್ಯಾಕ್ ಮೇಲ್ ದಿಂದ ಮಾನಸಿಕವಾಗಿ ತತ್ತರಿಸಿ ಹೋಗಿದ್ದ ನಾನು ನಮ್ಮ ಮನೆಯವರ ಮಾಡಿದ ನಿರ್ಧಾರಕ್ಕೆ ಬದ್ಧನಾಗಲೇ ಬೇಕಿತ್ತು. ನನಗೆ ಅನ್ಯ ಮಾರ್ಗ ಇರಲಿಲ್ಲ. ಹಾಗಂತ ನನಗೆ ಗಂಡನ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಕೈಗೊಂದು ಕಾಲಿಗೊಂದು ಆಳು, ಕಾರು ಬಂಗ್ಲೆ, ಕೋಟಿ ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಎಲ್ಲ ಇತ್ತು. ಆದರೆ ನೆಮ್ಮದಿ ಮಾತ್ರ ಇರಲಿಲ್ಲ. ಮದುವೆಯ ಮೊದಲ ರಾತ್ರಿಯೇ ಶರತ್ ನ ಬಣ್ಣ ಬಯಲಾಗಿತ್ತು. ನನ್ನಂಥ ಚಿನ್ನದ ಗಣಿ ರೂಪರಾಶಿ ಕಣ್ಣು ಮುಂದೆ ಇದ್ದಾಗಲೂ ಅವನು ನಿರ್ಲಿಪ್ತ ನಿಷ್ಕ್ರೀಯನಾಗಿರುವುದು ಕಂಡು ನನ್ನಲ್ಲಿ ಆತಂಕ ಮೂಡಲಾರಂಭಿಸಿತು. ಮದುವೆಯಾಗಿ ದಿನಗಳೇ ಕಳೆದರೂ ನಮ್ಮ ನಡುವೆ ಏನೂ ನಡೆಯಲೇ ಇಲ್ಲ. ದಿನೆದಿನೇ ನನ್ನ ಆತಂಕ ಅನುಮಾನ ಹೆಚ್ಚುತ್ತಲೇ ಸಾಗಿತ್ತು. ನಾನು ನಿತ್ಯ ಕಣ್ಣೀರಲಿ ಕೈತೊಳೆಯುತ್ತಿದ್ದೆ. ಕೊನೆಗೊಂದು ರಾತ್ರಿ ನನ್ನ ನೋವು ನೋಡಲಾಗದೆ ಶರತ್ ನನ್ನ ಹತ್ತಿರಕ್ಕೆ ಬಂದು.
“ನಿನಗೆ ನನ್ನಿಂದ ತುಂಬಾ ಮೋಸವಾಯಿತು ಭಾವನಾ. ನಾವೆಲ್ಲ ಸೇರಿ ನಿನ್ನ ಮೋಸ ಮಾಡಿ ಬಿಟ್ಟೆವು” ಎಂದು ನಡದೆದ್ದೆಲ್ಲ ಆತ ಹೇಳಿ ಬಿಟ್ಟ. ಆತನಿಗೆ ಮದುವೆ ಮಾಡಿಕೊಳ್ಳುವ ಆಸೆ ಇರಲಿಲ್ಲವಂತೆ, ಅವನು ತನ್ನ ನಿರ್ಧಾರ ಅವರ ಮನೆಯವರ ಮುಂದೆ ಹೇಳಿಬಿಟ್ಟಿದ್ದನಂತೆ. ಆದರೂ ಮನೆಯವರು ಒತ್ತಾಯದಿಂದ ಒಪ್ಪಿಸಿ ನೀನು ಮೊದಲು ಮದುವೆಯಾಗು ಎಲ್ಲ ತಾನೇ ಸರಿಹೋಗುತ್ತೆ ಅಂತಾ ಹೇಳಿ ಮದುವೆ ಮಾಡಿದ್ದರಂತೆ. ತನ್ನ ದೌರ್ಬಲ್ಯ ಸರಿ ಹೋಗದು ಎಂಬುದು ಅವನಿಗೆ ತಿಳಿದಿದ್ದರೂ ಮನೆಯವರ ಒತ್ತಾಯಕ್ಕೆ ಮಣಿದು ಮದುವೆ ಮಾಡಿಕೊಂಡಿದ್ದನಂತೆ. ಕೊನೆಗೆ ಅವನೇ ತನ್ನ ಬಗ್ಗೆ ಹೇಳಿಕೊಂಡಿದ್ದ. ತಾನೊಬ್ಬ ನಪುಸಂಕ “ಗೇ” ಎಂದು. ಹೆಣ್ಣಿನ ಶರೀರದ ಸಾಮಿಪ್ಯ ಸ್ಪರ್ಶಗಳಿಂದ ತನ್ನಲ್ಲಿ ಪ್ರೇಮ ಕಾಮದ ಭಾವನೆಗಳ ಸಂಚಲನವೇ ಆಗುವುದಿಲ್ಲ. ತನಗೆ ಪುರುಷ ದೇಹ ಕಂಡಾಗ ಮಾತ್ರ ಇಂಥ ಪ್ರೇಮ ಕಾಮದ ಭಾವನೆಗಳು ಉತ್ಪತ್ತಿಯಾಗುತ್ತವೆ ಎಂದು ಸತ್ಯ ಬಿಚ್ಚಿಟ್ಟಿದ್ದ. ಅವನ ಸತ್ಯದ ಜ್ವಾಲೆಯಲ್ಲಿ ತನ್ನ ದೇಹ, ಆತ್ಮ, ಭವಿಷ್ಯ, ಕನಸುಗಳು ಅಷ್ಟೇಯಲ್ಲ ಇಡೀ ಜೀವನವೇ ದಹಿಸಿದ ಅನುಭವಾಗಿತ್ತು. ನನ್ನ ನೋವು ನೋಡಲಾಗದೆ ಅವನು ನನಗೆ ಯಾವುದಕ್ಕೂ ಅಡ್ಡಿಯಾಗುವುದಿಲ್ಲ. ನನ್ನ ಮನಸ್ಸಿಗೆ ತಿಳಿದಂತೆ ಬದುಕು ಬಹುದು. ಎಷ್ಟಾದರೂ ದುಡ್ಡು ಖರ್ಚು ಮಾಡಬಹುದು. ಯಾರೊಂದಿಗಾದರೂ ಸ್ನೇಹ ಇಟ್ಟುಕೊಳ್ಳಬಹುದು, ಯಾರ ಜೊತೆಗಾದರೂ ಸಂಬಂಧ ಬೆಳೆಸಬಹುದು ತಾನೆಂದೂ ಯಾವುದಕ್ಕೂ ಅಡ್ಡಿ ಬರುವದಿಲ್ಲ ಹೆಸರಿಗೆ ಮಾತ್ರ ಹೆಂಡ್ತಿಯಾಗಿದ್ದರೆ ಸಾಕು ಎಂದಿದ್ದ. ಇರಲಿ ವಿರಹ ವೇದನೆ ನೋಡಲಾಗದೆ ಅವನು ಹೀಗೆ ಹೇಳಿದ್ದನೇನೋ ಇದು ಅವನ ದೊಡ್ಡತನವೇ ಅನ್ನೋಣ ಆದರೆ ಅಂಥದೆಲ್ಲ ಕೆಟ್ಟ ಕೆಲಸ ಮಾಡಲು ನನ್ನ ಮನಸ್ಸು ಒಪ್ಪಬೇಕಲ್ಲ?. ಹೀಗೆ ವಿರಹದ ದಿನಗಳು ಉರುಳತೊಡಗಿದವು. ನನ್ನ ವಿರಹ ವೇದನೆ ಮುಗಿಲು ಮುಟ್ಟುತ್ತಿದ್ದರೆ. ಅವನು ಮಾತ್ರ ಇನ್ನೇಲ್ಲೋ ಬಳಲಿ ಬೆಂಡಾಗಿ ಬಂದು ನಿದ್ರೆಗೆ ಜಾರಿ ಬಿಡುತ್ತಿದ್ದ. ಬರಬರುತ್ತ ಆತ ನನ್ನತ್ತ ನೋಡುವುದು ಗಮನಹರಿಸುವದನ್ನೆ ಬಿಟ್ಟು ಬಿಟ್ಟ.ಎರಡ್ಮೂರು ವರ್ಷಕಳೆದರೂ ವಂಶೋದ್ಧಾರಕ ಹುಟ್ಟದಿರುವುದು ಅವರ ತಂದೆ ತಾಯಿಗಳ ಆತಂಕಕ್ಕೆ ಕಾರಣವಾಗಿತ್ತು. ಇದ್ದ ಒಬ್ಬ ಮಗನಿಗೆ ಮಕ್ಕಳಾಗಲಿಲ್ಲವೆಂದರೆ ಮುಂದೆ ಹೇಗೆ? ತಮ್ಮ ವಂಶದ ಗತಿಯೇನು? ಈ ಆಸ್ತಿ ಪಾಸ್ತಿಯ ಸ್ಥಿತಿಯೇನು ಎನ್ನುವ ಚಿಂತೆ ಅವರಿಗೆ ಕಾಡಲಾರಂಭಿಸಿತು. ಈ ಕುರಿತು ಅವರು ತಮ್ಮ ಮಗನಲ್ಲಿ ಕೇಳಲಾರಂಭಿಸಿದರು. ಇದರಿಂದ ಅವಮಾನಿತನಾದವನಂತಿದ್ದ ಶರತ್ ಅದಕ್ಕೆ ನಾನೇನು ಮಾಡಲಿ ನಾನಂತೂ ನನಗೆ ಮದುವೆ ಬೇಡ ಅಂತಾ ಮೊದಲೇ ಹೇಳಿ ಬಿಟ್ಟಿದ್ದೆ ಎಂದಿದ್ದ. ಬೇಗ ಹೇಗಾದರೂ ಮಾಡಿ ಶುಭ ಸಮಾಚಾರ ಕೊಡಲೇಬೇಕು ಎನ್ನುವ ತಂದೆತಾಯಿಗಳ ಹಠಕ್ಕೆ ಶರಣಾಗಿ ಭಾವನಾಳಿಗೆ ಕಾಡಲ ಆರಂಭಿಸಿದ. ಪಾರ್ಟಿಗಳಿಗೆ ಅಲ್ಲಿ ಇಲ್ಲಿ ಕರೆದುಕೊಂಡು ಹೋಗಿ ಬೇರೆಯವರಿಗೆ ಪರಿಚಯಿಸಲಾರಂಭಿಸಿದ, ಮೊದಲೇ ಇವನ ದೌರ್ಬಲ್ಯ ತಿಳಿದಿದ್ದ ಜನ ನನ್ನಂಥ ಚೆಲುವೆಯನ್ನು ಕಂಡು ಸುಮ್ನಿರಲು ಸಾಧ್ಯವೇ? ಮದ್ಯದ ಅಮಲಿನಲ್ಲಿ ನನ್ನ ಅಂಗಾಂಗಗಳು ಸ್ಪರ್ಶಿಸಿ ಅನುಚಿತವಾದ ವರ್ತನೆ ತೋರಲಾರಂಭಿಸಿದರು. ಇದರಿಂದ ನನ್ನ ಮನಸ್ಸು ರೋಷಿ ಹೋಯಿತು. ಮನೆಗೆ ಬಂದು ಅದೆಲ್ಲವೂ ಅವನ ಮುಂದೆ ಹೇಳಿ ಜಗಳ ಕಾದರೆ ಅವನು ಕಗ್ಗಲಿನಂತೆ ನಿಶ್ಚಲನಾಗಿ ಬಿಡುತ್ತಿದ್ದ.
ನನ್ನ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೆ ಅವನು ನಿರ್ಲಿಪ್ತನಾಗಿ ಇಷ್ಟಕ್ಕೆಲ್ಲ ದೊಡ್ಡ ರಾದ್ಧಾಂತ ಮಾಡಿದರೆ ಹೇಗೆ? ನೀನೇ ಸ್ವಲ್ಪ ಅಡಜಸ್ಟ್ ಮಾಡಿಕೊಂಡರೆ ಮುಗಿದು ಹೋಗುತ್ತೆ’ ಎಂದು ತುಂಬಾ ಶಾಂತಾವಾಗಿ ತಣ್ಣನೆ ಧ್ವನಿಯಲ್ಲಿ ನಿರ್ವಿರ್ಯನಾಗಿ ಹೇಳಿ ಬಿಡುತ್ತಿದ್ದ…
ಇದನ್ನೆಲ್ಕ ಕೇಳಿದ ಕಲ್ಪನಾ ಬೆವೆತು ಹೋಗಿದ್ದಳು. ಅವಳ ನರಕ ಸದೃಶ ಬದುಕು ಕಣ್ಣು ಮುಂದೆ ಬಂದಂತಾಗಿ ಭಯದಿಂದ ನಡುಗಿ ಹೋಗಿದ್ದಳು. ಹೇಳಹೇಳುತ್ತಲೇ ಒಂದು ದುಃಸ್ವಪ್ನ ಕಂಡವರಂತೆ ಬೆಚ್ಚಿಬಿದ್ದು ಭಯಭೀತಗೊಂಡು ನಡಗುತ್ತಿದ್ದ ಅವಳ ಕೈಎಳೆದುಕೊಂಡು ಕಲ್ಪನಾ ತನ್ನ ಎದೆಯಮೇಲೆ ಎಳೆದು ಕೊಂಡು “ಮುಂದೆ” ಎಂದಾಗ ಅವಳು ಮುಂದವರೆದಿದ್ದಳು.
“ಮುಂದೆ ಇವನ ಪಾರ್ಟಿಗಳ ಸಹವಾಸವೇ ಬೇಡ ಎಂದು ಮನೆ ಹೊರಗಡೆ ಹೋಗುವದನ್ನೆ ನಿಲ್ಲಿಸಿದೆ. ಆದರೆ ಅವನ ಆಟ ಅಷ್ಟಕ್ಕೆ ನಿಲ್ಲಲಿಲ್ಲ. ಅವನು ತನ್ನ ಅಂತಿಂಥ ಶ್ರೀಮಂತ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಹತ್ತಿರವಾಗಿಸಲು ಪ್ರಯತ್ನಿಸಲು ಆರಂಭಿಸಿದ. ಇದ್ಯಾವದಕ್ಕೂ ನಾನು ಸೊಪ್ಪು ಹಾಕದಿರುವುದು ಬಂದ ಅತಿಥಿ ಸ್ನೇಹಿತರಿಗೆ ಅವಮಾನ ಮಾಡುತ್ತಿದ್ದೇನೆ ಎಂದು ಅವನಿಗೆ ಅನಿಸಲಾರಂಭಿಸಿತು. ಒಂದು ದಿನಾ ಅಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿಯೇ ಬಿಟ್ಟಿತ್ತು. ಒಬ್ಬ ಮಂತ್ರಿಯನ್ನು ಆತ ಮನೆಗೆ ಕರೆದುಕೊಂಡು ಬಂದು ಅವನನ್ನು ಉಪಚರಿಸುವಂತೆ ಕೇಳಿಕೊಂಡು. ಅವನಿಂದ ಯಾವುದೋ ಪ್ರಾಜೆಕ್ಟ್ ಗೆ ಅನುಮೋದನೆ ಸಿಗಬೇಕಾಗಿದೆ ಅವನಿಗೆ ಸ್ವಲ್ಪ ಸಹಕರಿಸು ಎಂದು ವಿನಂತಿಸಿದ್ದ. ಅದೆಲ್ಲ ತನ್ನಿಂದ ಆಗುವುದಿಲ್ಲ ಎಂದು ನಿರಾಕರಿಸಿ ಜಗಳಾಡಿ ಬೆಡರೂಮ್ ಗೆ ಓಡಿದರೂ, ಮಂತ್ರಿಯನ್ನು ನನ್ನ ಮಂಚದವರೆಗೂ ಬಿಟ್ಟು ಹೋಗಿ ಹೊರಗೆ ಬಾಲ್ಕನಿಯಲ್ಲಿ ಕುಳಿತು ಆಕಾಶ ನೋಡುತ್ತಿದ್ದ. ತನ್ನ ಹತ್ತಿರಕ್ಕೆ ಬರಬೇಡಿ ಎಂದು ಕೈಮುಗಿದು ಕೇಳಿಕೊಂಡರೂ ಕುಡಿದ ಮತ್ತಿನಲ್ಲಿದ್ದ ಮಂತ್ರಿ ನನ್ನ ಹತ್ತಿರಕ್ಕೆ ಬರುತ್ತಿದ್ದಂತೆ ನಾನು ಅವನನ್ನ ಬಲವಾಗಿ ನೂಕಿ ಹೊರಗೆ ಓಡಿ ಹೋಗಿ ಅವನ ತಂದೆ ತಾಯಿ ಮುಂದೆ ತನಗೆ ಎಲ್ಲರೂ ಸೇರಿ ಮೋಸ ಮಾಡಿರುವ ಬಗ್ಗೆ ಅರಚಾಡಿದರೆ ಅವರಿಗೆ ತನ್ನ ಮಗನ ದೌರ್ಬಲ್ಯ ಮತ್ತು ಅವರು ಮಾಡಿದ ಮೋಸಿನ ಅರಿವು ಆಗಿ ಅವರೂ ಮೌನವಾಗಿ ತೆಲೆ ತೆಗ್ಗಿಸಿ ಕುಳಿತು ಬಿಟ್ಟರು. ನಾನು ಹೊರಟು ಹೇಗೆ ಬೆಂಗಳೂರ ಸೇರಿದೇನೋ ನನಗೇ ಗೊತ್ತಿಲ್ಲ” ಎಂದು ಹೇಳಿದಾಗ ಕಲ್ಪನಾಳ ದೇಹ ಆತ್ಮ ಒಟ್ಟಿಗೆ ಭೂಕಂಪವಾದಂತೆ ಗಡಗಡನೇ ಕಂಪಿಸಿಹೋಗಿದ್ದವು. ಕಲ್ಪನಾ ಭಯದಲಿ ಭಾವನಾಳನ್ನು ಅವುಚಿಕೊಂಡು ಗಟ್ಟಿಯಾಗಿ ತಬ್ಬಿಕೊಂಡಳು. ಅವಳು ಕೂಡ ಭಾವನಾತ್ಮಕವಾಗಿ ಅಷ್ಟೇ ಬಲವಾಗಿ ತಬ್ಬಿಕೊಂಡು ಕಲ್ಪನಾಳ ಹರುವಾದ ಎದೆಯಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳ ಅಂತರಾಳದ ವೇದನೆ ಕಣ್ಣೀರಾಗಿ ಹರಿದು ಹೋಗಿ ಅವಳು ಹಗುರಾಗಲಿ ಎಂದು ಮನಸ್ಸು ಬಯಸಿ ಕಲ್ಪನಾಳ ಕೈಗಳು ಅವಳ ಬೆನ್ನು ನೇವರಿಸುತ್ತಲೇ ಅವಳಿಗೆ ಅವ್ಯಕ್ತ ಸಮಾಧಾನ ನೀಡುತ್ತಿದ್ದವು. ಅವಳು ಎಷ್ಟೊಂದು ಅತ್ತಿದ್ದಳೆಂದರೆ ಅವಳ ಕಣ್ಣೀರಿನಿಂದ ಕಲ್ಪನಾಳ ಎದೆಯಲ್ಲ ಹಸಿಯಾಗಿ ಹೋಗಿತ್ತು. ಹಾಗೇ ಅವಳು ಎದೆಗೆ ಮುಖ ಒತ್ತಿ ಒತ್ತಿ ಬಿಕ್ಕಳಿಸುತ್ತಲೇ ಇದ್ದರೆ ಕಲ್ಪನಾ ತಾಯಿಯೊಬ್ಬಳು ತನ್ನ ಮಗುವಿನ ಮುಖ ಎದೆಗೆ ಒತ್ತಿ ಹಿಡಿದುಕೊಂಡು ಸಮಾಧಾನಿಸುವಂತೆ ಅವಳ ಕೇಶರಾಶಿಯಲ್ಲಿ ಬೆರಳಾಡಿಸುತ್ತ ಅಮ್ಮನಾಗಿ ಅಕ್ಕರೆ ತೋರುತ್ತಿದ್ದಳು. ಹೀಗೆ ಅವಳು ಅತ್ತು ಸುಸ್ತಾಗಿರಬಹುದು. ಹಾಗೇ ಕಲ್ಪನಾಳ ಎದೆಯ ಮೇಲೆ ತೆಲೆಯಿಟ್ಟು ಸಣ್ಣಗೆ ಸುಖದ ನಿದ್ರೆಗೆ ಜಾರಿದಳು. ಕಲ್ಪನಾ ಕೂಡ ಒಂದು ಕೈಯಿಂದ ಮುಸುಕೆಳೆದುಕೊಂಡು ಬಿಟ್ಟಿದ್ದಳು. ಎಚ್ಚರಾದಾಗ ಎಷ್ಟೋ ವರ್ಷಗಳಿಂದ ಹೆಪ್ಪಗಟ್ಟಿದ ಹೃದಯ ನೋವೆಲ್ಲ ಕರಗಿ ಹಗುರಾದ ಭಾವನೆ ಮೂಡಿತ್ತು. ಭಾವನಾ “ತುಂಬಾ ಹೊತ್ತಾಯ್ತು. ಅಮ್ಮ ಅಪ್ಪ ದಾರಿ ನೋಡತಾರೆ ನಾನಿನ್ನು ಹೊರಡಬೇಕು ಎಂದು ಬಟ್ಟೆಗಳು ಸರಿಪಡಿಸಿಕೊಳ್ಳುತ್ತ ಎದ್ದಳು.
“ನಿನ್ನೊಂದಿಗೆ ಕಾಲಕಳೆದು ಮನಸ್ಸು ತುಂಬಾ ಹಗುರಾಯಿತು, ತುಂಬಾ ತುಂಬಾ ಥ್ಯಾಂಕ್ಸ್ ಕಣೇ” ಎಂದಳು.
“ಇದರಲ್ಲಿ ಥ್ಯಾಂಕ್ಸ್ ಏನು ಬಂತೇ, ನನ್ನ ಮನಸ್ಸು ನಿನ್ನೊಂದಿಗೆ ಬೆರೆತು ಅಷ್ಟೇ ಹಗುರಾಗಿದೆ. ನಾವಿಬ್ಬರು ಒಂದೇ ದೋಣಿಯ ಪಯಣಿಗರಲ್ಲವೇ?” ಎಂದು ಕಲ್ಪನಾ ಎಂದಿದಕ್ಕೆ ಅವಳು ನಕ್ಕಳು.
“ನಾವಿಬ್ಬರೂ ಇಷ್ಟು ದಿನ ಹಿಂಸೆ ಅನುಭವಿಸಿದ್ದು ಸಾಕು ಇನ್ಮೇಲೆ ನಾನು ನೀನು ಒಂದಾಗಿ ಬದುಕೋಣ. ನಾನು ಚಿತ್ರ ಕಲಾವಿದೆ, ನೀನು ಕವಿಯತ್ರಿ. ನಮ್ಮ ಸತ್ತ ಭಾವನೆಗಳಿಗೆ ಕಲ್ಪನೆಗಳಿಗೆ ಮರುಜೀವ ತುಂಬೋಣ, ನಮ್ಮ ಮುದುಡಿದ ಕನಸುಗಳಿಗೆ ರೆಕ್ಕೆಗಳು ಹಚ್ಚೋಣ. ನಮ್ಮದೇ ಆದ ಹೊಸ ದಿಗಂತದಲಿ ಮನಬಿಚ್ಚಿ ಹಾರಾಡೋಣ ಏನಂತೀಯಾ?’
ಕಲ್ಪನಾ ನಸುನಕ್ಕು.ಭಾವನಾಳ ಮಾತುಗಳಿಂದ ಕಲ್ಪನಾಳಿಗೆ ಒಂದು ತರಹ ಚೈತನ್ಯ, ಹುಮ್ಮಸ್ಸು ಉಕ್ಕಿ ಬಂದಂತಾಗಿತ್ತು. ಸೋತ ಬದುಕಿಗೆ ಒಂದು ಹೊಸ ಉದ್ದೇಶ, ಜೀವನಕ್ಕೆ ಒಂದು ಹೊಸ ತಿರುವು, ಒಂದು ಹೊಸ ದಿಕ್ಕು ಸಿಕ್ಕಂತಾಗಿತ್ತು.ಬರುವಾಗ ಗಜಗಾಮಿನಿಯಂತೆ ಬಂದ ಭಾವನಾ ಈಗ ಚಿಟ್ಟೆಯಂತೆ ಹಾರಿ ಹೋಗುತ್ತಿದ್ದಳು. ಬರುವಾಗ ಅತಿಥಿಯಾಗಿ ಬಂದವಳು ಈಗ ಮನೆಯ ಸದಸ್ಯಳಾಗಿ ಹಿಂದಿರುಗುತ್ತಿದ್ದಳು. ಅಷ್ಟಕ್ಕೂ ರಾತ್ರಿಯಲ್ಲ ಅವಳದೆ ಯೋಚನೆ.. ಅವಳದೆ ಖಯಾಲಿ ಅವಳದೇ ನೆನಪಿನಲ್ಲಿ ಅದು ಹೇಗೋ ಕಲ್ಪನಾಳ ಹೃದಯದಲ್ಲಿ ಪದಪುಂಜಗಳು ನವಿಲಿನಂತೆ ಲಾಸ್ಯವಾಡಿ ಕವಿತೆಯಾಗಿ ರೂಪಗೊಂಡಿದ್ದವು. ಬೆಳಗಿನ ಜಾವ ಕಲ್ಪನಾ ಭಾವನಾಳ ಕಾಯುವಿಕೆಯಲ್ಲೆ ಇದ್ದಳು. ಅಷ್ಟರಲ್ಲಿ ಅವಳು ತುಂಬ ಖುಷಿಯಾಗಿ ಬಂದವಳೇ ಕಲ್ಪನಾಳನ್ನು ಬಿಗದಪ್ಪಿ ಕೆನ್ನೆಗೊಂದು ಮತ್ತು ಕೊಟ್ಟು “ಸರ್ಪ್ರೈಜ..” ಎಂದು ಕಾರ್ಡ್ ಸೀಟವೊಂದನ್ನು ಕೈಗಿಟ್ಟಳು. ಕಲ್ಪನಾ ತುಂಬಾ ಧಾವಂತದಿಂದ ಅದರ ಸುರಳಿ ಬಿಚ್ಚಿ ಕಣ್ಣಗಲಿಸಿ ನೋಡಿದಾಗ ಆಶ್ಚರ್ಯವೇ ಆಶ್ಚರ್ಯ! ಅವಳು ಎಷ್ಟೊಂದು ಸುಂದರವಾದ ಚಿತ್ರ ಬಿಡಿಸಿದ್ದಳೆಂದರೆ ಅದನ್ನು ಬಣ್ಣಿಸಲು ಕಲ್ಪನಾ ಹತ್ತಿರ ಪದಗಳೇ ಇರಲಿಲ್ಲ.ಒಂದು ಕನ್ನಡಿಯ ಮೇಲೆ ಜಾರುವ ವಿವಿಧ ಬಣ್ಣದ ಹನಿಗಳು. ಅದರಲ್ಲಿ ಮಸುಕು ಮಸಕಾಗಿ ಮೈದಾಳಿದ ಇಬ್ಬರು ಸೌಂದರ್ಯ ತುಂಬಿದ ತರುಣಿಯರು ಅರೆನಗ್ನಾವಸ್ಥೆಯಲ್ಲಿರುವುದು ನಿಜಕ್ಕೂ ಒಂದು ಅದ್ಭುತ ಕಲೆಯೇ ಆಗಿತ್ತು. ಚಿತ್ರದ ಕೊನೆಯಲ್ಲಿ ತೇಲುವ ಅಕ್ಷರಗಳಲ್ಲಿ ಬರೆಯಲಾಗಿತ್ತು.
“ಮದುವೆಗಳು ನರಕದಲ್ಲಿ ನಿಶ್ಚಿಯಿಸಲ್ಪಟ್ಟರೆ ಸ್ನೇಹ ಸ್ವರ್ಗದಲ್ಲಿ !”
ಅದ್ಭುತವಾ ಚಿತ್ರ ಕಂಡು ಯೋಚಿಸುತ್ತ ಕುಳಿತಿದ್ದ ಕಲ್ಪಾಳ ಹತ್ತಿರ ಬಂದ ಭಾವನಾ
“ಯಾಕೆ.. ಏನಾಯಿತು?..ಸರಿ ಅನಿಸಲಿಲ್ವಾ” ಎಂದು ಕೇಳಿದ್ದಳು.
“ಅದ್ಭುತ ಕಣೇ, ಇದನ್ನು ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಇದೊಂದು ಮಾಸ್ಟರ್ ಪೀಸ್” ಎಂದಳು.
“ನಿನಗೆ ಇಷ್ಟಾ ಆಯಿತಲ್ಲ ಅಷ್ಟೇ ಸಾಕು ಬಿಡು”
ಎನ್ನುವಷ್ಟರಲ್ಲಿ ” ನಾನೊಂದು ಕವಿತೆ ಬರೆದಿರುವೆ” ಎಂದಳು ಕಲ್ಪನಾ ಹೇಳುವಷ್ಟರಲ್ಲಿ.
“ಹೌದೇನೇ? ಕೋಡೇ ಎಲ್ಲಿ ನೋಡೋಣ” ಎಂದಳು ಭಾವನಾ.
“ಹೌದು ಕಣೇ ನಿನ್ನೆ ರಾತ್ರಿ ನಿನ್ನದೇ ಯೋಚನೆ ಮಾಡುತ್ತ ನಿನ್ನದೇ ನೆನಪಿನಲ್ಲಿ ಮಲಗಿರುವಾಗ.. ಕವಿತೆಯೊಂದು ಅನಾಯಾಸವಾಗಿ ನನ್ನ ಹೃದಯದಲಿ ಅಚ್ಚಾಯಿತು ಎಂದು ಹೇಳಿದಾಗ “ನಿಜವೇನೇ.. ಹಾಗಿದ್ದರೆ.. ನನ್ನ ಮುಂದೆ ಓದು ನೋಡೋಣ” ಎಂದಾಗ ಅವಳ ಹೃದಯದಲ್ಲಿ ಅಚ್ಚಾದ ಕವಿತೆ ಓದಲಾರಂಭಿಸಿದಳು-
“…………………
ಅವಳೆದೆಯ ನೋವು
ಸೋನೆ ಮಳೆಯಾಗಿ
ನನ್ನ ಹೃದಯದಾಳಕ್ಕಿಳಿದು
ಆರ್ದ್ರಗೊಳಿಸಿ
ಹಿತಸ್ಪರ್ಶದಲಿ ನನ್ನ
ಸಂಪೂರ್ಣಾವರಿಸಿ
ಉಸಿರಿಗೆ ಬಿಸಿಯುಸಿರು
ಬೆರೆತು ನರನಾಡಿಗಳಲೆಲ್ಲ
ವಿದ್ಯುತಾಗಿ ಪ್ರವಹಿಸಿದಳು
……………..
ಕಲ್ಪನಾಳ ಓದು ಮುಗಿದಿತ್ತು. ಮೂಕ ವಿಸ್ಮಿತಳಾದ ಭಾವನಾ ಯಾವುದೋ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಕುಳಿತಿದ್ದಳು. ಅದನ್ನು ನೋಡಿ “ಏಯ್ ನನ್ನ ಕವಿತೆ ಕೇಳಿ ನಿದ್ರೆ ಬಂತೇನೆ” ಎಂದು ಎಚ್ಚರಿಸಿದ್ದೇ ತಡ ಸಂತೋಷದಿಂದ ಓಡಿ ಬಂದ ಭಾವನಾ ಕಲ್ಪನಾಳ ತುಟಿಗಳಿಗೆ ಪ್ರೀತಿ ತುಂಬಿದ ಮೆಚ್ಚುಗೆಯ ಮುದ್ರೆ ಒತ್ತಿದಾಗ ಇಬ್ಬರ ಕಣ್ಣುಗಳಿಂದ ಆನಂದ ಭಾಷ್ಪ ಧಾರೆಯಾಯಿತು.
–ಅಶ್ಫಾಕ್ ಪೀರಜಾದೆ