ಪಂಜು ಕಾವ್ಯಧಾರೆ

“ಬೇಕಿದ್ದರೊಮ್ಮೆ ಅತ್ತುಬಿಡು”

ಬೇಕಿದ್ದರೊಮ್ಮೆ ಜೋರಾಗಿ ಅತ್ತುಬಿಡು
ಒಳಗೊಳಗೇ ಮಮ್ಮಲ ಮರುಗುವುದೇಕೆ?
ಸಿಗಲಾರದಕ್ಕೆ ಕೈ ಚಾಚುವ ಹುಂಬತನವೇಕೆ?
ಹಸಿದ ಭುವಿಗೆ ಕೊಳದೊಳಗೆ ಬಿದ್ದ
ಚಂದ್ರ ಹೊಟ್ಟೆ ತುಂಬಿಸಲಾರ!
ಬಿಸಿಯುಸಿರಿಗೆ ಕುದಿಯುವ ರಕ್ತ ಆರಿ
ಮೌನದಲಿ ಹೆಪ್ಪುಗಟ್ಟುವುದು ಬೇಡ..

ಜುಳು ಜುಳು ಸದ್ದು ಮಾಡುತ
ಹರಿಯುವ ನದಿ ಅತ್ತದು ಯಾರಾದರೂ
ಗಮನಿಸಿಹರೇ?
ಕಾಲ್ಗಳ ಇಳಿಬಿಟ್ಟು ತೋಯ್ದುಕೊಂಡರೆ ವಿನಃ
ಆತುಕೊಂಡವರಿಲ್ಲ..
ಅಳಿದ ಮೇಲೂ ಉಳಿದು ಹೋಗುವ
ಗಾಯದ ಕಲೆಗಳಿಗೆ ನಿತ್ಯ ನರಳಾಡದೆ
ಅತ್ತು ಮುಕ್ತಿ ಕೊಟ್ಟು ಬಿಡು..

ಇಳೆಯ ಕೊಳೆಯನ್ನು ತೊಡೆದು ಹಾಕಲು
ಸುರಿವ ಭಾರೀ ಮಳೆಯಂತೆ..
ಕಿಟಕಿಯಾಚೆ ಕಾಣುವ ರಸ್ತೆಗೆ ನೆಟ್ಟ
ಕಣ್ಣ ಪದರಿನಿಂದ ನೋವುಗಳೆಲ್ಲ
ಹರಿದು ಹೋಗುವಂತೆ ಒಮ್ಮೆ
ಜೋರಾಗಿ ಅತ್ತುಬಿಡು..
ಹಠಮಾರಿ ನೆನಪುಗಳು ಎದೆಯೊಳಗೆ
ಗೂಡು ಕಟ್ಟದಂತೆ ತೊಡೆದುಬಿಡು..

ಸೂರ್ಯನೊಂದಿಗೆ ಅಸ್ತವಾದ ಗಳಿಗೆಯ
ನೆನೆದು ಎದೆಯೇರಿಳಿತದಲ್ಲಿ ಏದುಸಿರು
ಬಿಟ್ಟು ನಿತ್ಯ ಸಾಯುವ ಹಂಗಿಗೆ
ತೆರೆದುಕೊಳ್ಳ ಬೇಡ..
ಉಸಿರಲಿ ಬೆರೆತ ಆ ಹೆಸರಿನ ಗುಟ್ಟು
ರಟ್ಟು ಮಾಡದೆ ಎದೆಯ ಒಡಲಿಗೆ
ಬೆಂಕಿಯಿಟ್ಟು ಆ ವಿರಹದ ಕಾವು
ಒಮ್ಮೆಗೆ ತಣಿಯುವಂತೆ
ಜೋರಾಗಿ ಅತ್ತುಬಿಡು..!

-ನಂದಾದೀಪ, ಮಂಡ್ಯ

ಸರ್ಕಲ್ ಗಾಂಧೀ…

ಕಿಕ್ಕಿರಿದು ತುಂಬಿದ ಟ್ರಾಫಿಕ್ ಗೌಜು ಗದ್ದಲದ ನಡುವೆ
ಕಾಗೆ ಪಕ್ಷಿಯ ಪಿಚಕಾರಿಯ ಸಿಂಪಡನೆಯ ಜಾಗದಲ್ಲಿ
ಮಳೆ ಬಿಸಿಲು ಚಳಿ ಗಾಳಿಯ ನಡುವೆ
ಮಳೆಯ ಗಾಳಿಗೆ ಮಿಂಚಿಗೆ ಒಡೆದ ಕನ್ನಡಕ ಸರಿಮಾಡಿಕೊಂಡು
ಕೋಲನ್ನು ಆಣಿಸಿಕೊಂಡು ನಿಂತಿದ್ದಾನೆ
ನಮ್ಮ ಗಾಂಧೀ ತಾತಾ …!

ಇಲ್ಲಿ ನಾಲ್ಕು ಬೀದಿ ಕೂಡಿದ್ದು ನಿಜ
ನಾಲ್ಕು ಮತ ಕೊಡುವುದು ಕಷ್ಟ
ಯಾರು ನೆಮ್ಮದಿ ಕಾಣಲಿಲ್ಲ
ಯಾರು ಈ ಸರ್ಕಲ್ ನಲ್ಲಿ ನಿಲ್ಲಿಸುವ ಯೋಚನೆ ಮಾಡಿದರೋ
ಸಿಕ್ಕರೆ ಅತಿ ಶ್ರೇಷ್ಠ ಪ್ರಶಸ್ತಿ ನೀಡಬೇಕು…!

ಹಲವು ನಮೂನೆಯ ಹಾರ್ನ್ ಸದ್ದಿಗೂ
ಬಂದ್ ಪ್ರತಿಭಟನೆ ಗಲಾಟೆ ಸದ್ದಿಗೂ
ಜಗಳ ಹಾರಾಟದ ಕೂಗಾಟದ ಸದ್ದಿಗೂ
ರಾತ್ರಿ ಕುಡುಕರ ನೀತಿಪಾಠದ ಭೋದನೆಯ ಸಂಭಾಷಣೆಯ ಸದ್ದಿಗೂ
ಹಸಿವಿಗಾಗಿ ಮೈ ಮಾರುವ ಹೆಣ್ಣಿನ ಚೌಕಾಸಿ ಪಿಸುಮಾತಿನ ಸದ್ದಿಗೂ
ಲಂಚ ಪಡೆಯುವ ಕೈ ಜೇಬಿನ ಕುಹಕು ನಗುವಿನ ಸದ್ದಿಗೂ
ಲಂಚ ಎನ್ನುವ ಹೆಸರು ಪಡೆದ ತನ್ನದೇ ಮುಖವಿರುವ ನೋಟಿನ ಮಜಲಿಗೂ
ಬಡವರ ಖಾಲಿ ಹೊಟ್ಟೆಯ ಕರುಳಿನ ಚುರುಕಿನ ಸದ್ದಿಗೂ
ಒಂದೇ ನೋಟ ಒಂದೇ ಭಂಗಿ ಒಂದೇ ನಗು ನೂರು ಅವತಾರದ
ನಮ್ಮ ಸರ್ಕಲ್ ಗಾಂಧೀ ತಾತಾ…!

ಸತ್ಯ ಅಹಿಂಸೆ ದಯೆ ಪ್ರಮಾಣಿಕತೆ ನನ್ನ ತತ್ವಗಳು
ಇವುಗಳೆ ನನ್ನ ಹೋರಾಟದ ಆಯುಧಗಳು
ನಿಜ ನಿನ್ನ ಜಮಾನದಲ್ಲಿ ಆದರೆ ಈಗ
ದುಡ್ಡು ಇದ್ದವರ ಅಂಡಿನ ಕೆಳಗಿನ ಖುರ್ಚಿಯ ಸವಕಲು ಕಾಲುಗಳು….

ನಾನು ಮಣ್ಣಾದರೂ ನನ್ನ ತತ್ವಗಳು ಜೀವಂತ ಎಂದು ಸಂತಸಪಟ್ಟೆ
ತಡಮಾಡದೆ ಸ್ವಾರ್ಥದ ಜಲ್ಲಿಕಲ್ಲು ಸಿಮೆಂಟು ಹಾಕಿ
ಸರ್ಕಲ್ ನಲ್ಲಿ ನಿಲ್ಲಸಿ ಬಿಟ್ಟರು ಬರಿ ಪ್ರತಿಮೆಯಾಗಿಸಿ
ಸ್ವತಂತ್ರಕ್ಕಾಗಿ ಹೋರಾಡಿದ್ದಕ್ಕೆ ರಾಷ್ಟ್ರಪಿತ ಎಂದರು
ನಿನ್ನ ತತ್ವವನ್ನು ಅಳವಡಿಸಿಕೊಳ್ಳಲು ಯಾರು ತಯಾರಿಲ್ಲ
ನನ್ನ ತತ್ವ ಆದರ್ಶಗಳು ನಿನ್ನಂತೆ ಕಲ್ಲಾಗಿಬಿಟ್ಟೆವೆ…!

ಆದರೂ, ಅಲ್ಲಲ್ಲಿ
ಗಾಂಧೀ ಬದುಕಿದ್ದಾನೆ, ಬದುಕಲೇಬೇಕಾದ ಅನಿರ್ವಾತೆಯಲ್ಲಿ
ಸಕಲ ಸರ್ಕಾರಿ ಕಛೇರಿಯ ಫೋಟೋದೊಳಗೆ
ಅಲ್ಲಿ ಗಾಂಧೀ ತತ್ವ ನಡೆಯದ ನಾಣ್ಯ
ಆದರೆ ಅವನ ಮುಖವಿರುವ ನೋಟು ಮಾನ್ಯ
ನೀವು ಕಷ್ಟಕೂ,ಸುಖಕ್ಕೂ ಚಲಾಯಿಸುವ ನೋಟಿನೊಳಗೆ
ಇನ್ನೂ ಬದುಕಿದ್ದಾನೆ…!

-ವೃಶ್ಚಿಕ ಮುನಿ

ಕಿತ್ತೊಗೆ ಕೀಳರಿಮೆಯ

ಕುಳಿತಲ್ಲೇ ಕಂಗಾಲಾದ
ಕಣ್ಣೊಂದು ಕೌತುಕದಿಂದ
ಮನಸಲೇ ತಾಳೆಹಾಕಿ ಗುಣಿಸುತಿಹುದು,
ತನ್ನ,ಪರವೆಂಬ ತುಲನೆಯಲೇ
ಬದುಕಿನ ಲೆಕ್ಕಾಚಾರ
ಮಸ್ತಿಷ್ಕದಲೇ ಮನೆಮಾಡುತಿಹುದು..

ತಪ್ಪು ಯೋಚನೆಯ ಫಲಶೃುತಿಯಾದಿ
ಕಳೆದುಕಂಡ ಕ್ಷಣಗಳೆಷ್ಟೋ..
ತಂಪಾದ ಹೊತ್ತಲ್ಲೂ ಬಿಕ್ಕಳಿಸಿ
ಖಿನ್ನತೆಯಿಂದಲೇ ಕಳೆದ ರಾತ್ರಿಗಳೆಷ್ಟೋ..
ಸೈಕೋಸಿಸ್ ನ್ಯೂರೋಸಿಸ್ ಗಳ ಸೇವೆಯಲೇ
ತನ್ನನೇ ತಾ ನಿಷ್ಪ್ರಯೋಜಕನೆಂದು
ಹಳಿದುಕೊಂಡದ್ದೆಷ್ಟೋ.

ಸಾಕು ಸಾಕಿನ್ನು ಹೋಲಿಕೆಯ ಇರಾದೆ,
ಹುಟ್ಟಿಬಿಡಲಿ ಈಗಿಂದೀಗಲೇ
ಕೀಳರಿಮೆಯೆಂಬ ಹೆಮ್ಮರವ
ಬೇರು ಸಮೇತ ಕೀಳುವ ಖಯಾಲಿ!
ಕಂಡಕಂಡವರ ಕನಸು
ನಿನ್ನ ಕಣ್ತುಂಬದೇ
ಸಾಧನೆಯ ಅಮಲೊಂದು
ನಿನ್ನದೇ ಹಳೆ ಚೌಕಟ್ಟನ್ನು ಮೀರಲಿ!

ಅಂಕೆ ಮೀರಿದ ಅಂಜಿಕೆಗೆ
ತೆರೆದ ಮಾತುಗಳೇ ಉತ್ತರ,
ಮುಜುಗರದ ಮಜಲುಗಳ ದಾಟಲು
ತೇಲಿಸು ಮನದಾಲಯವ ಸಕಾರಾತ್ಮಕತೆಯ ಹತ್ತಿರ..

-ಆಶಾ ಹೆಗಡೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x