ನಿಲುವಂಗಿಯ ಕನಸು (ಅಧ್ಯಾಯ ೧೪-೧೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೪: ಸಮೂಹ ಸನ್ನಿ

ಚಿನ್ನಪ್ಪ ಕ್ಷಣ ತಬ್ಬಿಬ್ಬಾದ. ಸಮಸ್ಯೆಯ ಗೊಸರಿನ ಮೇಲೆ ಕಾಲಿಟ್ಟಿದ್ದೇನೆ. ಕಾಲಕ್ರಮದಲ್ಲಿ ಭಾರ ಹೆಚ್ಚಾಗಿ ಅದರಲ್ಲಿ ಹೂತು ಹೋಗಿ ಬಿಟ್ಟರೆ, ಶರೀರ ಭಯದಿಂದ ಸಣ್ಣಗೆ ಅದುರಿದಂತೆನಿಸಿತು. ಅಂಗೈಯಲ್ಲಿದ್ದ ಕರಿಮಣಿ ಸರವನ್ನೊಮ್ಮೆ ವಿಷಾದದಿಂದ ನೋಡಿ ನಂತರ ಪ್ಯಾಂಟಿನ ಜೇಬಿನಲ್ಲಿ ಇಟ್ಟಿಬಿಟ್ಟು ರಸ್ತೆಗೆ ಇಳಿದ.
ಎದುರಿಗೇ ಪ್ರಭಾಕರನ ಬ್ರಾಂಡಿ ಷಾಪು ಕಾಣುತ್ತಿತ್ತು. ಈವತ್ತು ಸಂತೆಯ ದಿನವಾಗಿದ್ದರೆ ವಾಡಿಕೆಯಂತೆ ಸಂಜೆ ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಬ್ರಾಂದಿ ಗುಟುಕರಿಸುತ್ತಾ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟು ಮನಸ್ಸು ಹಗುರಮಾಡಿ ಕೊಳ್ಳಬಹುದಿತ್ತಲ್ಲ!
ಚಿನ್ನಪ್ಪನ ಮನಸ್ಸಿನಲ್ಲಿ ಯೋಚನೆ ಸುಳಿದು ಹೋಯಿತು. ಮಾಧ್ಯಮಿಕ ಶಾಲೆಯಲ್ಲಿ ಜತೆಗಿದ್ದ ಸಹಪಾಠಿಗಳಲ್ಲಾ ಎತ್ತೆತ್ತ ಹೋದರೋ. ಇವರು ಮೂರು ಜನ ಮಾತ್ರ ವಾರಕೊಮ್ಮೆ ಬುಧವಾರ ಸಂತೆಯ ದಿನ ನಿಯಮಿತವಾಗಿ ಭೇಟಿಯಾಗುತ್ತಾರೆ.
ಇದೇ ದೊಡ್ಡೂರಿನ ನಾಗರಾಜ ಈಗ ಪಂಚಾಯ್ತಿ ಉಪಾದ್ಯಕ್ಷ, ಪಂಚಾಯ್ತಿ ಮಟ್ಟದ ಬಹುತೇಕ ಕಾಮಗಾರಿಗಳ ಗುತ್ತಿಗೆ ಹಿಡಿಯುತ್ತಾನೆ. ತನ್ನ ತಮ್ಮಂದಿರಿಗೆ ಕಾಫಿ ತೋಟ ಮಾಡಲು ನೆರವಾಗುತ್ತಾನೆ. ಇನ್ನು ದೇವರಬನದ ಹೊನ್ನೇಗೌಡ ಕೃಷಿಯೊಂದಿಗೆ ಜೂಜಾಟಕ್ಕೆ ನಿಂತು ಹಲವಾರು ಏಳು ಬೀಳುಗಳನ್ನು ಈಗಾಗಲೇ ಕಂಡಿದ್ದಾನೆ. ಈಗ ಚಿನ್ನಪ್ಪನೂ ಅವನ ಹಾದಿಯನ್ನೇ ಹಿಡಿದಿದ್ದಾನೆ.
ನಾಗರಾಜನ ಕೈಯಲ್ಲಿ ಅಧಿಕಾರವಿದೆ, ದುಡ್ಡೂ ಓಡಾಡುತ್ತದೆ, ಹಾಗಾಗಿ ಊರಲ್ಲಿ ಅವನ ಮಾತು ನಡೆಯುತ್ತದೆ.

ಬ್ರಾಂಡಿ ಷಾಪಿನ ಹಿಂಭಾಗದಲ್ಲಿ, ಮದ್ಯದ ಬಾಟಲಿಯ ಕೇಸುಗಳನ್ನು ದಾಸ್ತಾನು ಮಾಡಿರುವ ರೂಮಿನಲ್ಲಿ ಒಂದೆಡೆ ಮರ್ನಾನಲ್ಕು ಕುರ್ಚಿ ಹಾಕಿ ನಾಗರಾಜನಿಗೆಂದೇ ರಿಜರ್ವ್ ಇಟ್ಟಿದ್ದಾನೆ ಪ್ರಭಾಕರ.
ಪ್ರತೀವಾರ ಸಂತೆಯ ದಿನ ಮೂವರೂ ಅಲ್ಲಿ ಕಡ್ಡಾಯವಾಗಿ ಸೇರಬೇಕೆಂತಲೂ, ಅರ್ಧಬಾಟಲಿ ಬ್ರಾಂಡಿ ಹಾಗೂ ನೂರು ಗ್ರಾಂ ಕಾರ ಇಟ್ಟುಕೊಂಡು ಅದರ ಮಜಾ ಸವಿಯುತ್ತಾ, ಕಷ್ಟ ಸುಖ ಮಾತಾಡುತ್ತಾ ಒಂದು ಗಂಟೆ ಕಾಲ ಕಳೆಯುವುದೆಂತಲೂ, ಒಂದೊಂದು ವಾರ ಒಬ್ಬೊಬ್ಬರು ರೊಟೇಷನ್ ಪದ್ಧತಿಯಂತೆ ಬಿಲ್ ಪಾವತಿಸುವುದೆಂತಲೂ ಒಡಂಬಡಿಕೆಯಾಗಿತ್ತು.
ಅವರು ಪ್ರತೀವಾರ ಅಲ್ಲಿ ಸೇರಿ ಒಡಂಬಡಿಕೆಯಂತೆ ನಡೆದು ಕೊಳ್ಳುತ್ತಿದ್ದರೂ, ಒಡಂಬಡಿಕೆಯ ಕೊನೆಯ ಭಾಗದಲ್ಲಿ ಏರುಪೇರಾಗುತ್ತಿತ್ತು. ಆದರೆ ಅದಕ್ಕೂ ಒಂದು ತಿದ್ದುಪಡಿಯಿತ್ತು. ಅದರಂತೆ ಯಾರದೇ ಬಳಿ ದುಡ್ಡಿಲ್ಲದಿದ್ದರೂ ಅಂದಿನ ಬಿಲ್ ಹಣವನ್ನು ನಾಗರಾಜನ ಲೆಕ್ಕಕ್ಕೆ ಬರೆಸಬಹುದಾಗಿತ್ತು….
ಪಂಚಾಯ್ತಿ ಕಛೇರಿಯಿಂದ ಹೊರಬಂದ ನಾಗರಾಜ ತನ್ನ ಸ್ನೇಹಿತ ಪ್ರಪಂಚವೇ ತಲೆಯ ಮೇಲೆ ಬಿದ್ದವನಂತೆ ಭಾರವಾದ ಹೆಜ್ಜೆ ಹಾಕುತ್ತಾ ಬರುತ್ತಿರುವುದನ್ನು ನೋಡಿ ಚಪ್ಪಾಳೆ ಹೊಡೆದು ಅವನ ಗಮನ ಸೆಳೆದ.

‘ಬಾ ನಾಗೇಶ ಡಾಕ್ಟ್ರು ಪೋನ್ ಮಾಡಿದ್ರು, ಹೋಗಿ ಬರೋಣ’ ಎನ್ನುತ್ತಾ ಆತ್ಮೀಯತೆಯಿಂದ ಅವನ ಹೆಗಲ ಮೇಲೆ ಕೈ ಹಾಕಿದ. “ಏನ್ ಕೆಳಗಿಂದ ಬಂದಲ್ಲ, ಕತ್ತೆ ಅಂಗಡಿ ಕಡೆ ಹೋಗಿದ್ದಾ? ಏನ್ ಸಮಾಚಾರ? “ನಾಗರಾಜ ಕೇಳಿದ., ಚಿನ್ನಪ್ಪ ಜೇಬಿನಿಂದ ಕರಿಮಣಿ ಸರ ಈಚೆಗೆಳೆದು ತೋರಿಸಿದ, “ಕತ್ತೆ ತುಂಬಾ ಜನಕ್ಕೆ ಕರಿಮಣಿ ಸರ ಕೊಡ್ಸಿದಾನೆ ಅಂತಾ ಕೇಳಿದ್ದೆ. ಇವತ್ತು ನಿನ್ನನ್ನೂ ಆ ಗುಂಪಿಗೆ ಸೇರಿಸ್ಕಂಡನಾ! ರ್ಲಿ ಬಾ ವಿರಾಮವಾಗಿ ಮಾತಾಡಣಂತೆ ನಾಗರಾಜ ಸಮಾಧಾನ ಪಡಿಸುವವನಂತೆ ಚಿನ್ನಪ್ಪನ ಬೆನ್ನು ಚಪ್ಪರಿಸುತ್ತಾ ಹೇಳಿದ,
ಬೆಳಗಿನ ಡ್ಯೂಟಿ ಮುಗಿಸಿ ಮಧ್ಯಾಹ್ನದ ಊಟದ ಬಿಡುವಿಗೆ ಮನೆಗೆ ಬಂದಿದ್ದ ನಾಗೇಶ ಇವರ ನಿರೀಕ್ಷೆಯಲ್ಲೇ ಇದ್ದವರಂತೆ “ ರ್ರಿ ರ್ರಿ ನಿಮ್ಮನ್ನ ಪೋನ್ ಮಾಡಿ ಕರೆಸಿಕೊಂಡು ಮಾತಾಡೋ ಹಾಗೆ ಆಗಿಹೋಯ್ತಲ್ಲಾ. ನಾನೂ ನಿಮ್ಮಂಗೇ ಹಳ್ಳಿ ರೈತನ ಮಗನೇ ಕಂಡ್ರೀ ನನ್ನನ್ನೂ ಸ್ವಲ್ಪ ಲೆಕ್ಕಕ್ಕೆ ಇಟ್ಕಳಿ. ಹಳ್ಳಿಗಾಡಿನ ಕ್ರಿಯಾಶೀಲ ಯುವಕರನ್ನು ಕಂಡರೆ ನನಗೂ ಅಭಿಮಾನ ಅಲ್ವಾ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗದಿಕ್ಕೆ ನನಗೂ ಸ್ವಲ್ಪ ಅವಕಾಶ ಕೊಡಿ” ಎನ್ನುತ್ತಾ ಒಳಕರೆದು ಹಾಲ್ ನಲ್ಲಿ ಕುರ್ಚಿ ತೋರಿಸಿದರು.
ಮತ್ತೆ ನಾಗರಾಜನ ಕಡೆ ತಿರುಗಿ “ಇದೇನು ತ್ರಿಮೂರ್ತಿಗಳ ಪೈಕಿ ಇಬ್ರೇ ಇದ್ದೀರಲ್ಲಾ ಇನ್ನೊಬ್ರ ಎಲ್ಲಿಗೆ ಕಳಿಸಿದ್ರಿ” ಎಂದು ಕುತೂಹಲ ವ್ಯಕ್ತ ಪಡಿಸಿದರು.
“ಅವನು ಇಷ್ಟ್ ಹೊತ್ತಲ್ಲಿ ಎಲ್ಲಿ ಅಂಗಡಿ ಬೀದಿಗೆ ರ್ತಾ ನೆ. ತ್ರಿಮೂರ್ತಿಗಳನ್ನು ಒಟ್ಟಿಗೇ ನೋಡಬೇಕು ಅಂದ್ರೆ ಸಂತೆ ದಿನ ಸಾಯಂಕಾಲ ಪ್ರಭಾಕರನ ಬ್ರಾಂಡಿ ಷಾಪಿಗೆ ಬರಬೇಕು” ನಾಗರಾಜ ಕುಟುಕಿದ.
“ಅಲ್ಲಿ ಕೂತ್ಕಂಡು ನೀವ್ ನೀವೇ ಎಂಜಾಯ್ ಮಾಡ್ತಿರಿ. ನಮ್ಮಂತವ್ರನ್ನ ಎಲ್ಲಿ ಸೇರಿಸ್ತೀರಿ” ನಾಗೇಶ ಆಕ್ಷೇಪ ಎತ್ತಿದರು.

“ರ್ಲಿ ರ್ಲಿ ಬಿಡಿ ಡಾಕ್ಟ್ರೆ. ಆ ಜಾಗ ಏನಿದ್ರೂ ನಮ್ಮಂತವ್ರಿಗೇ ಸರಿ. ವೈದ್ಯರು ಅಂದ್ರೆ ದೇವರ ಸಮಾನ ಅಂತಾರೆ. ಇಲ್ಲಿ ಹಳ್ಳಿ ಜನರ ನಡುವೆ ಒಳ್ಳೆ ಹೆಸರು ಗಳಿಸಿದ್ದೀರಿ ಅದನ್ನು ಉಳಿಸಿಕೊಂಡು ಹೋಗಿ ಅದೇ ಸಂತೋಷ ನಮಗೆ” ನಾಗರಾಜ ಸಮಜಾಯಿಸಿ ಹೇಳಿದ.
ಅದುವರೆಗೂ ಒಂದೂ ಮಾತಾಡದೇ ಬಾಡಿದ ಮುಖ ಹೊತ್ತು ಕುಳಿತಿದ್ದ ಚಿನ್ನಪ್ಪನನ್ನು ಕುರಿತು “ಏನ್ ನಿಮ್ಮ ಸ್ನೇಹಿತ ಬಹಳ ಬೇಸರದಲ್ಲಿದ್ದಾರಲ್ಲ” ಎಂದರು ಡಾಕ್ಟ್ರು.
“ಏನಿಲ್ಲ ಚಿನ್ನಪ್ಪ ಸಾಲಕ್ಕೆ ಅಂತಾ ಕತ್ತೆ ಅಂಗಡಿಗೆ ಹೋಗಿದ್ನಂತೆ ಅವ್ನು ಕರಿಮಣಿ ಸರ ಕೊಟ್ ಕಳ್ಸಿದ್ದಾನೆ”
“ ಓ,,,, ಹಾಗಾ ಸಾರಿ, ವೆರಿಸಾರಿ ನೀವೂ ಆ ಕತ್ತೆಗೆ ಕೊರಳೊಡ್ಡಿ ಬಿಟ್ರಾ?” ಎನ್ನುತ್ತಾ ಚಿನ್ನಪ್ಪನ ಕೈ ಹಿಡಿದುಕೊಂಡರು.
“ಅವರ ಹತ್ರ ರಕ್ತ ಮಾಂಸ ತುಂಬಿದ ಹೃದಯ ಇಲ್ಲ ಕಣ್ರೀ. ಅಲ್ಲಿರದು ಬರೀ ಕಲ್ಲು. ಅವನ ಸಾಲ ಹೆಚ್ಚು ಕಾಲ ಉಳಿಸಿಕೊಬ್ಯಾಡ. ಆದಷ್ಟು ಬೇಗ ಪೂರ್ತಿ ತೀರಿಸಿ ಬಿಡಿ” ಎನ್ನುತ್ತಾ ನಾಗರಾಜನ ಕಡೆ ತಿರುಗಿ “ಅಲ್ಲಾರೀ ಕತ್ತೆ ಒಡ್ಡಿರುವ ಉರುಳಿಗೆ ಇನ್ನೂ ಪೂರ್ತಿ ತಲೆ ಕೊಟ್ಟಿಲ್ಲವಲ್ಲ. ಅದನ್ನು ತಪ್ಪಿಸಿ ಚಿನ್ನಪ್ಪನಿಗೆ ಬೇರೆ ದಾರಿ ತೋರಿಸೋಕೆ ಆಗದಿಲ್ವ ಯೋಚ್ನೆ ಮಾಡಿ” ನಾಗೇಶ ಸುಲಭದ ಪರ್ಯಾಯ ಮಾರ್ಗ ಬಯಸಿ ನಾಗರಾಜನ ಮುಖ ನೋಡಿದರು. ಕ್ಷಣ ಯೋಚಿಸಿದ ನಾಗರಾಜ. ಸ್ನೇಹಿತನನ್ನು ಕತ್ತೆಯಿಂದ ವಿಮುಖಗೊಳಿಸುವ ದಾರಿಕಾಣದಾಯಿತು.

ಹೊನ್ನೇಗೌಡನ ಹಾಗೇ ಚಿನ್ನಪ್ಪನೂ ನನ್ನ ಆಪ್ತ ಸ್ನೇಹಿತ ಡಾಕ್ಟ್ರು. ಕಂಡೂ ಕಂಡು ಗುಂಡಿಗೆ ಬೀಳಕ್ಕೆ ಹ್ಯಾಗೆ ಬಿಡದು ಅಂತ ಬೇಸರವಾಗುತ್ತೆ, ಕಾಮಗಾರಿ ಮುಗಿದಿರುವ ಯಾವ ಗುತ್ತಿಗೆಗೂ ಬಿಲ್ ಬಂದಿಲ್ಲ. ದುಡ್ಡಿಲ್ಲದೇ ಈಗ ಹಿಡಿದಿರುವ ಕಾಮಗಾರಿ ನಡೆಸುವುದೇ ಕಷ್ಟವಾಗಿದೆ. ಇನ್ನು ತೋಟದ ಕೂಲಿಗಳ ವಾರದ ಬಟವಾಡೆಯನ್ನು ನಿಭಾಯಿಸದೇ ಬೇರೆ ದಾರಿಯಿಲ್ಲ. ಈಗ ಬೇರೆ ವಿಧಿಯಿಲ್ಲ. ಚಿನ್ನಪ್ಪ ದುಡ್ಡು ತಗಂಡು ಕೆಲಸ ನಡೆಸ್ತಾ ರ್ಲಿ . ಮುಂದೆ ಒಳ್ಳೆ ಪರಿಸ್ಥಿತಿ ಉಂಟಾದಾಗ ಸಹಾಯ ಮಾಡದು ಇದ್ದೇ ಇದೆ. ಅದು ಒಂದ್ ಕಡೆ ರ್ಲಿಿ. ಇದಕ್ಕಿಂತಾ ದೊಡ್ಡ ಹಣಕಾಸಿನ ತೊಂದರೆ ಎದುರಾದರೆ ಹೇಗೆ ಎದುರಿಸ ಬೇಕು ಎನ್ನುತ್ತಾ ನಾಗರಾಜ ಚಿನ್ನಪ್ಪನ ಕಡೆ ನೋಡಿದ.
ಮೊದಲೇ ಭಯಗೊಂಡಿದ್ದವರ ಮೇಲೆ ಹಾವು ಎಸೆದರೆ ಹೇಗಾಗಬೇಡ! ಹಾಗಾಯ್ತು ಚಿನ್ನಪ್ಪನ ಸ್ಥಿತಿ. ಗಾಬರಿಯಿಂದ ಎದುರಿದ್ದವರ ಮುಖ ನೋಡತೊಡಗಿದ.
ನಾಗೇಶಗೂ ಅರ್ಥವಾಗಲಿಲ್ಲ “ಅದೇನ್ರಿ ಇದೊಂದು ಹೊಸಾ ಸಮಸ್ಯೇ?” ಎಂದರು. ಚಿನ್ನಪ್ಪ ಎನೂ ತಿಳಿಯದೆ ತಬ್ಬಿಬ್ಬಾಗಿ ಕುಳಿತಿದ್ದ.

“ಚಿನ್ನಪ್ಪ, ನಿಮ್ಮೂರಿನ ಸರ್ಕಾರಿ ಕನ್ನಡ ಶಾಲೆಯನ್ನು ಮುಂದಿನ ವರ್ಷದಿಂದ ಮುಚ್ಚಬೇಕು ಅಂತಾ ಸರ್ಕಾರಿ ಆದೇಶ ಆಗಿದೆಯಂತೆ. ನಿಮ್ಮ ಹುಡುಗಿನ ಯಾವ ಶಾಲೆಗೆ ಸೇರಿಸ್ತೀರಿ? ಅಜ್ಜಿ ಮನೇಲಿರುವ ಹುಡುಗಿಗೆ ಈಗಾಗ್ಲೇ ನಾಲ್ಕುವರೆ ವರ್ಷ ಆಗಿದೆ. ಬರೋ ವರ್ಷ ಕರ್ಕಂಡ್ ಬಂದು ಊರಿನ ಕನ್ನಡ ಶಾಲೆಗೇ ಸೇರಸ್ತೀವಿ ಅಂತಾ ಇದ್ರಲ್ಲ ಪುಟ್ಟಿನ, ಊರ್ ಬಡ್ಡೆಯ ಕನ್ನಡ ಶಾಲೆಗೇ ಸೇರುಸ್ತೀವಿ ನಮ್ ಕಣ್ಮುಂದೆನೇ ಓದ್ತಾಳೆ ಅಂತಾ ಸೀತಕ್ಕನೂ ಸಂತೋಷವಾಗಿದ್ರು ಈಗ ಈ ತರ ಆಗಿದ್ಯಲ್ಲಾ ಏನ್ಮಾಡ್ತಿರಿ?” ನಾಗರಾಜನ ಮಾತಿನಲ್ಲಿ ಆತಂಕ ತುಂಬಿತ್ತು.
ಪೆಟ್ಟಿನ ಮೇಲೆ ಪೆಟ್ಟು. ಚಿನ್ನಪ್ಪನಿಗೆ ಪರಿಸ್ಥಿತಿಯನ್ನು ಹ್ಯಾಗೆ ನಿಭಾಯಿಸುವುದು ಎಂದೇ ತೋಚದಾಯಿತು.
ಚಿನ್ನಪ್ಪನ ಮನಸ್ಸಿನ ಗೊಂದಲವನ್ನು ಗಮನಿಸಿದ ವೈದ್ಯರು ಮಾತಿಗೆ ಮುಂದಾದರು.
“ಇನ್ನೇನು ಮಾಡೋದು ವಿಧಿಯಿಲ್ಲ ಇಲ್ಲಿನ ಆಕ್ಸಫರ್ಡ್ ಕಾನ್ವೆಂಟ್ ಇದೆಯಲ್ಲಾ”,
ಬಾಣಲೆಯಿಂದ ಬೆಂಕಿಗೆ ಬೀಳುತ್ತಿರುವಂತೆ ಆಯಿತು ಚಿನ್ನಪ್ಪನ ಸ್ಥಿತಿ, “ಈಗಿನ ನನ್ನ ಕಷ್ಟದ ಪರಿಸ್ಥಿತಿಯಲ್ಲಿ ಅದು ಹೇಗೆ ಸಾಧ್ಯ?” ವರ್ಷದ ಡೊನೇಷನ್ನೇ ಇಪ್ಪತ್ತೊಂದು ಸಾವಿರವಂತೆ. ಇನ್ನು ಪುಸ್ತಕ ಬ್ಯಾಗು, ಬಟ್ಟೆ ಎಲ್ಲಾ ಸೇರಿ ಅದೊಂದು ಇಪ್ಪತ್ತೊಂದು ಸಾವಿರ. ನಮ್ಮಂತ ಬಡ ರೈತರಿಗೆ ಎಟುಕದ ಮಾತು……. ನಮ್ಮೂರ ಶಾಲೆ ಮುಚ್ಚಿದರೆ ಏನಾಯ್ತು ಇಲ್ಲಿನ ಸರ್ಕಾರಿ ಶಾಲೆ ಇದೆಯಲ್ಲ’ಚಿನ್ನಪ್ಪ ತನಗೆ ತಾನೇ ಸಮಾದಾನ ಮಾಡಿಕೊಳ್ಳುವವನಂತೆ ಹೇಳಿದ.

ಹಾಗಲ್ಲಾ ಮಾರಾಯ ನಿಮ್ಮೂರಿನ ಕೆಲವು ಜನ ಈಗಾಗಲೇ ಆಕ್ಸ್ಫರ್ಡ್ ಕಾನ್ವೆಂಟ್ ಎದುರು ಸುಳಿದಾಡುವುದನ್ನು ನಾನೇ ಕಣ್ಣಾರೆ ನೋಡಿದ್ದೀನಿ. ಆ ಮಕ್ಕಳೆಲ್ಲಾ ಕಾನ್ವೆಂಟಿಗೆ ಸೇರಿದರೆ ಅವರು ಸ್ಕೂಲ್ ವ್ಯಾನಲ್ಲಿ ರ್ತಾನರೆ. ನಿಮ್ಮ ಪುಟ್ಟ ಹುಡುಗಿ ಒಂದೇ ಅಲ್ಲಿಂದ ನಡಕೊಂಡು ಬರೋಕೆ ಆಗುತ್ತಾ? ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡು. ನಾಗರಾಜ ಸಮಜಾಯಿಸಿ ಮಾಡುವವನಂತೆ ಹೇಳಿದ.
ನಾಗೇಶ್‌ಗೆ ಚಿನ್ನಪ್ಪನ ಮನಸ್ಥಿತಿ ಅರಿವಾಯಿತು ಅವರು ಕನ್ನಡ ಶಾಲೆಗೆ ಸೇರಿಸುವ ಆಸೆ ಇಟ್ಟು ಕೊಂಡಿರುವುದೇನೋ ಸರಿ ಆದರೆ, ನಾವಿರುವ ಈ ಕಾಲ ಘಟ್ಟದಲ್ಲಿ ಅದು ಕಾರ್ಯ ಸಾಧ್ಯವೇ? ಇವನಿಗೆ ಹೇಗೆ ತಿಳಿಯ ಹೇಳುವುದು? ಎಂದು ಯೋಚಿಸಿದ ಅವರು “ಚಿನ್ನಪ್ಪ ನಿಮ್ಮ ಆಲೋಚನೆ ಏನೋ ಸರಿ. ನಾನೂ ಬಡ ರೈತನ ಮಗನೇ. ಒಂದರಿಂದ ಹತ್ತರವರೆಗೂ ಹಳ್ಳಿಯ ಕನ್ನಡ ಶಾಲೆಯಲ್ಲೇ ಓದಿದವನು. ನಾಲ್ಕನೇ ಕ್ಲಾಸಿನವರೆಗೆ ನನ್ನ ವ್ಯಾಸಾಂಗ ಬರೀ ಒಂದು ಸ್ಲೇಟು ಎರಡು ಬಳಪದಲ್ಲಿ ನಡೆದಿತ್ತು ಕಣ್ರೀ. ಆದರೆ, ಈಗ ನೀವು ನಿಮ್ಮ ಪುಟ್ಟ ಹುಡುಗಿಯನ್ನು ಶಾಲೆಗೆ ಸೇರಿಸಲು ದೊಡ್ಡ ಮೊತ್ತದ ಹಣವನ್ನೇ ಹೊಂದಿಸಬೇಕಾಗಿದೆ. ಅದು ಕಷ್ಟ. ನಿಮ್ಮ ಪರಿಸ್ಥಿತಿ ಅರ್ಥವಾಗುತ್ತೆ. ಆದರೆ ಏನು ಮಾಡುವುದು? ಕಾಲ ಬಂದ ಹಾಗೇ ಕೋಲಕಟ್ಟು ಎಂಬ ಗಾದೆ ಕೇಳಿಲ್ವ? ಈಗಿನ ಪರಿಸ್ಥಿತಿಯಲ್ಲಿ ಜನರೆಲ್ಲಾ ಕಾನ್ವೆಂಟ್ ವ್ಯಾಮೋಹಕ್ಕೆ ಒಳಗಾಗಿ ಹೋಗಿದ್ದಾರೆ, ಇಂಗ್ಲಿಷ್ ವ್ಯಾಮೋಹ ಎಂಬ ಸಮೂಹ ಸನ್ನಿ ಎಲ್ಲ ಮನಸ್ಸಿನಲ್ಲಿ ವ್ಯಾಪಿಸಿ ಬಿಟ್ಟಿದೆ. ಅದಕ್ಕೆ ನಾವೊಬ್ಬರು ಹೊರತಾಗುವುದಕ್ಕೆ ಸಾಧ್ಯವಾ ಯೋಚಿಸಿ ನೋಡಿ’ ಡಾಕ್ಟರು ಆದಷ್ಟು ಚಿನ್ನಪ್ಪನಿಗೆ ಮನದಟ್ಟು ಮಾಡಲು ಪ್ರಯತ್ನಿಸಿದರು.
ಈ ಮಧ್ಯೆ ಕಾನ್ವೆಂಟ್ ಶಿಕ್ಷಣದ ನೆಪದಲ್ಲಿ ಮೊದಲ ವರ್ಷದಿಂದಲೇ ಇಂಗ್ಲಿಷ್, ಕನ್ನಡ, ಹಿಂದಿ, ಗಣಿತ ವಿಜ್ಞಾನ ಎಲ್ಲವನ್ನೂ ಒಮ್ಮೆಗೇ ತುಂಬುತ್ತಾ ಎಳೆಯ ಮಕ್ಕಳ ಪುಟ್ಟ ಮೆದುಳಿನ ಮೇಲೆ ಸಿಡಿಯುವಷ್ಟು ಒತ್ತಡ ಹೇರುತ್ತಿರುವುದು, ತನ್ಮುಖೇನ ಬಾಲ್ಯ ಸಹಜ ಸಂತಸಗಳನ್ನೆಲ್ಲಾ ಕಸಿದುಕೊಂಡು ಅವರ ಸರ್ವತೋಮುಖ ಬೆಳವಣಿಗೆಯನ್ನು ಕುಂಠಿತ ಗೊಳಿಸುತ್ತಿರುವ ವಿಚಾರವೆಲ್ಲಾ ಸುಳಿದು ಹೋಗಿ ನಾಗೇಶ್ ಮುಖದಲ್ಲಿ ವಿಷಾದದ ಛಾಯೆ ಆವರಿಸಿಬಿಟ್ಟಿತು.

ನಂತರ ನಾಗರಾಜನ ಕಡೆತಿರುಗಿ “ನೋಡ್ರಿ ಇದು ನಿಮ್ಮ ಕೇಸು ಈಗ ಇವರೊಂದಿಗೆ ಹೆಚ್ಚು ಚರ್ಚಿಸುತ್ತಾ ಕೂರುವುದು ಸಮಂಜಸವಲ್ಲ. ನಂತರ ತಿಳಿಯಾದ ವಾತಾವರಣದಲ್ಲಿ ಪರಿಸ್ಥಿತಿಯ ಕುರಿತು ತಿಳಿಯ ಹೇಳುವುದು ಒಳ್ಳೆಯದು. ಇದು ಹ್ಯಾಗೇ ಸುತ್ತಾಡಿದರೂ ಕೊನೆಯಲ್ಲಿ ಕಾನ್ವೆಂಟ್ ಬಾಗಿಲಿಗೇ ಹೋಗಿ ನಿಲ್ಲುವುದು. ಈ ವಿಚಾರವನ್ನು ಸೀತಕ್ಕನವರಿಗೂ ಮನದಟ್ಟು ಮಾಡಿ ಕೊಡಿ….. ಈಗ ಸದ್ಯಕ್ಕೆ ಅವರ ಪರವಾಗಿ ನೀವೇ ನಿರ್ಧಾರ ತೆಗೆದು ಕೊಳ್ಳಬೇಕು. ಹ್ಯಾಗೂ ಸೊಸೈಟಿ ಅಧ್ಯಕ್ಷರು ನಿಮ್ಮ ಸ್ನೇಹಿತರೇ ಇದ್ದಾರೆ. ಡೊನೇಷನ್‌ಗೆ ಆ ಕಡೆಯಿಂದ್ಲೇ ವ್ಯವಸ್ಥೆ ಮಾಡಿಸಿ ಕೊಡಿ. ಮುಂದೆ ನೋಡಿ ಕೊಳ್ಳೋಣವಂತೆ…… ನಾನು ನಿಮಗೂ ಇಲ್ಲಿಗೇ ಊಟ ತರಿಸಿದ್ದೀನಿ…… ನೀವು ಇವರನ್ನ ಕರಕೊಂಡು ಕಾನ್ವೆಂಟ್ ಕಡೆ ಹೋಗಿ ವಿಚಾರ ಎಲ್ಲಾ ತಿಳಿದು ಹಾಗೇ ಸೊಸೈಟಿಯಲ್ಲಿ ನಿಮ್ಮ ಸ್ನೇಹಿತರನ್ನು ಭೇಟಿಮಾಡಿ ಬನ್ನಿ’ ಎನ್ನುತ್ತಾ ಚಿನ್ನಪ್ಪನಿಗೆ ಧೈರ್ಯ ತುಂಬುವವರಂತೆ ಬೆನ್ನು ತಟ್ಟಿದರು.
ಇಕ್ಕಟ್ಟಾದ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಕ್ಸ್ಫರ್ಡ್ ಕಾನ್ವೆಂಟ್ ಕಡೆಗೆ ಸ್ನೇಹಿತರಿಬ್ಬರೂ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕಿದರು.

ಅಧ್ಯಾಯ ೧೫: ಸೀತೆಗೊಂದು ಮೊಬೈಲು!

ಗಂಡನನ್ನು ದೊಡ್ಡೂರಿಗೆ ಕಳಿಸಿದ ಸೀತೆ ಸುಮ್ಮನೆ ಕೂರಲಿಲ್ಲ. ದನಗಳನ್ನು ಬಾರಿಗೆ ಹೊಡೆದು, ಮನೆಯ ಕೆಲಸವನ್ನೆಲ್ಲಾ ತೀರಿಸಿ ಗದ್ದೆಯ ಕಡೆ ಹೊರಟಿದ್ದಳು;
ಮೆಣಸಿನ ಮಡಿಗೆ ಸೀನಪಟ್ಟಿಯಿಂದ ನೀರು ಹಾಕಿ ನಳನಳಿಸುವ ಸಸಿಗಳನ್ನೊಮ್ಮೆ ಎಳೆಯ ಮಕ್ಕಳ ತಲೆ ನೇವರಿಸುವಂತೆ ನೇವರಿಸಿದಳು. ನಿಂತು ಸುತ್ತಲೊಮ್ಮೆ ಕಣ್ಣು ಹಾಯಿಸಿದಳು. ತೀನ ತಳಿ ಎಲ್ಲಾ ಬಿದ್ದಿವೆ; ಬೇಲಿ ಕಟ್ಟಬೇಕು, ಪಾತಿ ಮಾಡಬೇಕು. ಗಿಡಗಳನ್ನು ನೆಟ್ಟನಂತರ ನೀರು ಮೊಗೆದು ಹುಯ್ಯಲು ಅನುಕೂಲವಾಗುವಂತೆ ಅಲ್ಲಲ್ಲಿ ಗುಂಡಿಗಳನ್ನು ಮಾಡಬೇಕು. ಆದರೆ ಇವೆಲ್ಲಾ ಒಬ್ಬಳು ಮಾಡುವ ಕೆಲಸ ಅಲ್ಲ, ಗಂಡಾಳು ಬೇಕು. ಹ್ಯಾಗೂ ಇನ್ನೆರಡು ದಿನಗಳಲ್ಲಿ ಊರಿಂದ ಅಪ್ಪಣಿ ಬರುವವನಿದ್ದಾನಲ್ಲ. ಅವನೂ ಚಿನ್ನಪಪನೂ ಸೇರಿದರೆ ಈ ಕೆಲಸ ಯಾವ ಲೆಕ್ಕ. ನಾನೂ ಅವರೊಂದಿಗೆ ಸರಿಸಮ ನಿಲ್ಲುತ್ತೇನಲ್ಲ. ಯೋಚಿಸುತ್ತಾ ಮೇಲೆ ದಿಬ್ಬದಲ್ಲಿದ್ದ ತಿಪ್ಪೆಯ ಕಡೆ ಕಣ್ಣು ಹರಿಸಿದಳು. ಒಂದು ವರ್ಷದಿಂದ ದಿನವೂ ಕೊಟ್ಟಿಗೆ ಗುಡಿಸಿ ತಂದು ಹಾಕಿದ ಗೊಬ್ಬರ ಕೊಳೆತು ಹಣ್ಣಾಗಿ ದೊಡ್ಡ ರಾಶಿಯೇ ಆಗಿದೆ. ಮೆಣಸಿನ ಗಿಡಕ್ಕೆ ಹಾಕಬೇಕಾದರೆ ಸಸಿದು ಹುಡಿಮಾಡಿ ಅಣಿಗೊಳಿಸಿ ಕೊಳ್ಳಬೇಕು. ಅದೇ ಸರಿ. ಚಿನ್ನಪ್ಪ ಬರುವವರೆಗೆ ಗೊಬ್ಬರವನ್ನಾದರೂ ಸಸಿಯುತ್ತಿರೋಣ ಎಂದು ಕೊಳ್ಳುತ್ತಾ ಗುದ್ದಲಿ ಹಿಡಿದು ತಿಪ್ಪೆಯ ಬಳಿ ಸಾಗಿದಳು! ಇತ್ತೀಚೆಗೆ ತಂದು ಹಾಕಿದ್ದ ಇನ್ನೂ ಕರಗದ ಗೊಬ್ಬರ, ಕಸಕಡ್ಡಿಗಳನ್ನೆಲ್ಲಾ ಎಳೆದು ಒಂದು ಕಡೆಗೆ ಹಾಕಿದ್ದಷ್ಟೇ ನೆನಪು. ಮೈಯಲ್ಲಿ ದೆವ್ವ ಹೊಕ್ಕವರಂತೆ ಗುದ್ದಲಿ ಹಿಡಿದು ಕೆಲಸಕ್ಕೆ ನಿಂತವಳಿಗೆ ಹೊತ್ತೇರಿ ಸೂರ್ಯ ಪಶ್ಚಿಮದ ಕಡೆ ವಾಲುತ್ತಿರುವುದೂ ಅರಿವಾಗಲಿಲ್ಲ.
ಮಂಡಿಗೂ ಮೀರಿ ಬೆಳೆದು ಎಲೆಗೊಂದು ಹೂ ಕಾಯಿ ಹೊತ್ತು ನಿಂತು ಕಣ್ಣು ಕುಕ್ಕುವ ಹಸಿರು ಬಣ್ಣದ ಮೆಣಸಿನ ತೋಟ. ಪೂರ್ವ ದಿಕ್ಕಿಗೆ ಎತ್ತರದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ರಾಗವಾಗಿ ಹೇಳುವ ಮಗ್ಗಿ, ಕಾಡು ಬೆಟ್ಟಗಳಲ್ಲೆಲ್ಲಾ ಅನುರಣಿಸುವ ಸಮೂಹಗಾನದ ಪರಿ. ಶಾಲೆ ಬಿಟ್ಟೊಡನೇ ಸ್ಲೇಟಿರುವ ಸಣ್ಣ ಚೀಲವನ್ನು ಹೆಗಲಲ್ಲಿ ನೇತಾಡಿಸುತ್ತಾ ಮೆಣಸಿನ ತೋಟಕ್ಕೆ ಓಡೋಡಿ ಬಂದು ಪಾತಿಯ ಅಂಚಿನಲ್ಲಿ ನೆಟ್ಟ ಸೌತೆ ಗಿಡಗಳಲ್ಲಿ ಎಳೆಯ ಕಾಯಿಗಳನ್ನು ಹುಡುಕುವ ಪುಟ್ಟಿಯ ಸಂಭ್ರಮ….. ವಾರ ವಾರ ಚಿನ್ನಪ್ಪ ಎಣಿಸುವ ಗರಿಗರಿ ನೋಟುಗಳ ಸರ ಭರ ಸದ್ದು. ಎದುರಿನ ಕಾಡಿನಲ್ಲಿ ಹಸಿರೆಲೆಯ ನಡುವೆ ಅಲ್ಲಲ್ಲಿ ಬಗೆಬಗೆಯ ಹೂ ತಳೆದು ಗಾಳಿಗೆ ಓಲಾಡುವ ಮರಗಳು ಹಾರಾಡುವ ಬಣ್ಣ ಬಣ್ಣದ ನಿಲುವಂಗಿಗಳೋ ಎಂಬಂತೆ……..

ತಿಪ್ಪೆಯ ಮುಂದೆ ಬಾಗಿ ನಿಂತು ಕನಸು ಕಾಣುತ್ತಾ ಗುದ್ದಲಿಯಲ್ಲಿ ಅಗೆದಗೆದು ಹುಡಿಮಾಡಿದ ಗೊಬ್ಬರವನ್ನು ಕಾಲ ಸಂದಿ ಹಿಂದಕ್ಕೆ ಎಳೆಯುತ್ತಾ ಇದ್ದವಳು
‘ಬೌ ಬೌ’ ಸದ್ದು ಕಾಲ ಬಳಿಯೇ ಕೇಳಿ ಬೆಚ್ಚಿ ಮೈ ಮರೆವು ಬಿಟ್ಟು ಹಿಂತಿರುಗಿ ನೋಡಿದಳು.
ನಗುತ್ತಾ ನಿಂತಿದ್ದವನು ಸುಬ್ಬಪ್ಪ. “ಥೋ ನಿನ್ನ ಬಾಯಿಗೆ ಮಣ್ಹಾಕ! ಹಿಂಗೇನಾ ಅಪ್ಪಣಿ ಹೆದುರ್ಸದು?” ಎಂದು ಪ್ರೀತಿಯಿಂದ ತಮ್ಮನನ್ನು ಜರೆದಳು ‘ಇನ್ನೇನ್ ಮಾಡದಕ್ಕ ಬಂದ್ ನಿಂತು ಹತ್ತು ನಿಮಿಷ ಆದ್ರೂ ತಿರುಗಿ ನೋಡ್ದೆ ಇದ್ರೆ ನಾನೇನ್ ಮಾಡ್ಲಿ………….’ ಸುಬ್ಬಪ್ಪ ಸಮಜಾಯಿಸಿ ಹೇಳಿದ.
ಸೀತೆ ತಲೆ ಅರಿವೆ ತೆಗೆದು ಕುತ್ತಿಗೆಯ ಬೆವರನ್ನು ಒರೆಸಿಕೊಳ್ಳುತ್ತಾ ಪಕ್ಕದ ಗಿಡದಿಂದ ಸೊಪ್ಪು ಮುರಿದು ಒಂದೆಡೆ ಹಾಕಿ ‘ಇಲ್ಲಿ ಬಾರಾ ಕೂತ್ಕಾ….. ನೀನು ನಾಕು ದಿನ ಬಿಟ್ಟು ರ್ತೀ್ನಿ ಅಂತ ಅಲ್ವಾ ಹೇಳಿ ಹೋಗಿದ್ದು. ಇದೇನು ಸುದ್ದಿ ಇಲ್ದಂಗೆ ಇದ್ದಕ್ಕಿದ್ದಂಗೆ ಪ್ರತ್ಯಕ್ಷ ಆಗಿ ಬುಟ್ಟೆ, ಎಂದಳು ಸೀತೆ, ತಾನೂ ಒಂದೆಡೆ ಕೂರುತ್ತಾ.

ಇದ್ದಕ್ಕಿದ್ದಂಗೆ ರ್ದೆದ ಏನ್ಮಾಡಲಕ್ಕ ಯಾವ ಪೋನಿಗೆ ಅಂತಾ ಸುದ್ದಿ ಕೊಡ್ಲಿ ಹೇಳು…… ನೀವು ಗಂಡ ಹೆಂಡ್ತಿ ಇನ್ನೂ ಯಾವ ಕಾಲ್ದಲ್ಲಿ ಇದ್ದೀರಂತಿನಿ. ಈಗ ಎಂತಾ ಕೂಲಿ ನಾಲಿ ಮಾಡಿ ಬದ್ಕವ್ರೂ ಜೇಬಲ್ಲಿ ಒಂದು ಮೊಬೈಲ್ ಇಟ್ಟರ್ತಾ ರೆ’ ಹರಡಿದ ಸೊಪ್ಪಿನ ಮೇಲೆ ಕುಳಿತ ಸುಬ್ಬಪ್ಪ ಕೈಚೀಲವನ್ನು ಜೋಪಾನವಾಗಿ ಕಾಲ ಬಳಿ ಇಡುತ್ತಾ ಅಕ್ಕನನ್ನು ಸಣ್ಣಗೆ ಕುಟುಕಿದ.
‘ಈಗೇನ್ಮಾಡದು ಅಂತಿಯಾ! ಬರಿಗೈಲಿ ಕೂತಿದೀವಲ್ಲ ಮುಂದಿನ ಸಲ ನೋಡನ. ಒಳ್ಳೆ ದಿನ ನೋಡ್ಬೇಕು ಅಂತಲೇ ಅಲ್ವ ಎರಡು ಪಾಲಿನ ಗದ್ದೆಗೂ ಮೆಣಸಿನ ಗಿಡ ಹಾಕ್ತಾಇರದು’ ಸೀತೆಯ ಸಬೂಬು ಸುಬ್ಬಪ್ಪನಿಗೆ ಹಿಡಿಸಲಿಲ್ಲ, ಕಾಲ ಮುಂದೆ ಮುಂದೆ ಹೋದ ಹಾಗೆ ನೀವು ಹಿಂದೆ ಹಿಂದೆ ಸರೀತಾ ಇದ್ದೀರಿ, ಕಾಲಕ್ಕೆ ತಕ್ಕಂಗೆ ಬದ್ಕದ್ ಕಲೀಬೇಕು ಅಲ್ವೇನಕ್ಕಾ. ಈವತ್ತಿನ ಪ್ರಪಂಚಕ್ಕೆ ನಿಮ್ಮ ಸ್ಪೀಡ್ ಸಾಲ್ದು………. ಕಳೆದ ಸಲ ಬಂದಾಗ ಒಂದ್ ಅಡ ಇಟ್ಟು ಬಿಟ್ಟೋಗಿರೋ ಹಳೇ ಸೆಟ್ ಇದೆ ಅಂತಾ ನಿಮ್ಮ ಕಾಳಮ್ಮ ಹೇಳಿದ್ಲು……. ಬಾವಗೆ ಹೇಳ್ತಿನಿ! ಅದಿನ್ನೂ ಅವಳ ಹತ್ರ ಇದ್ರೆ ಎಲ್ಲಾದ್ರೂ ದುಡ್ ಹೊಂದ್ಸಿ ತಗಳ್ಲಿ………… ನೀನೂ ಯಾಕೆ ನಿನ್ನ ಆಸೆಯೆಲ್ಲ ಅದುಮಿಡ್ತೀಯಾ? ನಿಂಗು ಆಸೆ ಇರದಿಲ್ವ, ಅವ್ವನ ಜೊತೆ, ಪುಟ್ಟಿ ಜೊತೆ ಮಾತಾಡ್ಬೇಕು ಅಂತಾ!’
ತಮ್ಮ ಹೇಳಿದ್ದು ಸರಿಯೆನಿಸಿದರೂ ಅವನ ಮಾತಿನಲ್ಲಿ ಸಿಲುಕಿಕೊಳ್ಳುವುದು ಸಮಂಜಸವೆನಿಸಲಿಲ್ಲ ಸೀತೆಗೆ. ಹಾಸನದಲ್ಲಿ ಮಾಡಿ ಬಂದಿರುವ ಸಾಲ ಮೂರು ಸಾವಿರ ಹಾಗೇ ತಲೆಮೇಲೆ ಕೂತಿದೆ. ವಾರಗಿತ್ತಿ ವಾರಕ್ಕೊಂದು ಸಲ ಪೋನ್ ಮಾಡ್ತಾಳೆ, ಇನ್ನು ಚಿನ್ನಪ್ಪ ದೊಡ್ಡೂರಿನಿಂದ ಎಷ್ಟು ಹೊಸ ಸಾಲ ಹೊತ್ತುಕೊಂಡು ಬರುತ್ತಾನೋ.

ಮನಸ್ಸಿನಲ್ಲೇ ಯೋಚಿಸಿದ ಸೀತೆ ‘ಅದರ್ಲಿಕ ಪುಟ್ಟಿ ನನ್ನ ಕೇಳ್ತಾ ರ್ತಾಕಳ ಇಲ್ಲಾ ಮರೆತುಗೊಂಡೇ ಬಿಟ್ಟವ್ಳ. ಇನ್ನ ಅವ್ವನ್ನ ಬುಡು, ಅವ್ಳಿಗೆ ಪುರುಸೊತ್ತಿಲ್ಲದ ಕೆಲಸ…. ನೀನೊಬ್ಳನ್ನ ಕಟ್ಟಿಕೊಂಡು ಬುಡು, ಅವ್ವನಿಗೂ ಪುರುಸೊತ್ತಾಗಿ ನಮ್ಮ ಬಗ್ಗೆನೂ ಯೋಚ್ನೆ ಮಾಡಕ್ಕೆ ಟೈಮ್ ಸಿಕ್ಕುತ್ತೆ” ಮಾತನ್ನು ಬೇರೊಂದು ದಿಕ್ಕಿಗೆ ಹೊರಳಿಸಿದಳು.
‘ಅವ್ವ ಏನು ನಿನ್ನ ರ್ತುಕ ಬಿಟ್ಟಳೆ ಅಂದ್ಕೊಂಡಿದ್ದಿಯಾ. ಇನ್ನೊಂದು ದಿನ ಬಿಟ್ಟು ಬರಬೇಕೆಂದ ನನ್ನ ಈವತ್ತೆ ಹೊರಡಿಸಿ ಕಳಿಸಿದ್ದಾಳೆ’ ಎನ್ನುತ್ತಾ ಕೈ ಚೀಲದಿಂದ ಒಂದು ಪೊಟ್ಟಣ ಹೊರಗಳೆದು ಅಕ್ಕನ ಕೈಗೆ ನೀಡಿದ. ತುಸು ತೂಕವೇ ಆಗಿದ್ದ ಆ ಪೊಟ್ಟಣವನ್ನ ಅತ್ತಿತ್ತ ತಿರುಗಿಸಿ ನೋಡಿದಳು. ಪರಿಮಳ ಮೂಗಿಗೆ ಬಡಿಯಿತು. ಪೊಟ್ಟಣವನ್ನು ಮೂಗಿನ ಹತ್ತಿರಕ್ಕೆ ತಂದು ತೌರು ಮನೆಯ ಪ್ರೀತಿಯೆಲ್ಲಾ ಆ ಪೊಟ್ಟಣದೊಳಗೆ ಅಡಗಿದೆ ಎಂಬಂತೆ ಜೋರಾಗಿ ಉಸಿರೆಳೆದು ಕೊಂಡು ಸುಖ ಅನುಭವಿಸಿದಳು.
“ಸುಮ್ನೆ ಮೂಗು ಕಣ್ಣು ಅರಳಿಸದಲ್ಲಾ ಅದೇನು ಹೇಳು ನೋಡನ” ಸುಬ್ಬಪ್ಪ ಒಗಟನ್ನು ಒಡ್ಡುವವನಂತೆ ಹೇಳಿದ ‘ಅಷ್ಟೂ ತಿಳಿಲಿಲ್ಲ ಅಂದ್ರೆ ನಮ್ಮವ್ವನ ಕೈಲಿ ನಾನು ಒಗೆತನ ಕಲ್ತಿರದೇ ಸುಳ್ಳು ಹಾಂಗಾದ್ರೆ ……. ಗುಳುಗನ ಮೀನಿನ ಹುರುಕ್ಲು ಅಲ್ವೇನಾ. ಹಿಂಗೆ ಗಮಗುಡ ಹಂಗೆ ಮೀನಿನ ಹುರುಕ್ಲು ಮಾಡದು ನಮ್ಮ ಅವ್ವಂಗಲ್ದೆ ಇನ್ನಾರಿಗಾಗುತ್ತೆ ಹೇಳು. ಅವಳ ಕೈಯಲ್ಲಿ ಅದೆಂತಾ ಮೋಡಿ ಇದ್ದಾತು ಅಂತೀನಿ. ಬರೀ ಉಪ್ಪುಕಾರ ಹುಳಿ ಹಾಕಿ ನೀರಿನ ಅಂಶ ಎಲ್ಲಾ ಇಂಗಿಸಿ ಹುರುಕಲು ಮಾಡಿದ್ರೆ ತಿಂಗ್ಳುಗಟ್ಲೆ ಇಟ್ಕಂಡು ತಿನ್ನಬಹ್ದು ಅನ್ನದು ನನಗೆ ತಿಳೀದಾ. ಒಂದ್ ಊಟಕ್ಕೆ ಒಂದ್ ಮೀನು ಹಾಕಂಡ್ರೆ ಸಾಕು ಸೇರಕ್ಕಿ ಅನ್ನ ಉಣ್ಣಬಹ್ದು…..” ಸೀತೆಗೆ ತನ್ನ ಅವ್ವನನ್ನು ಎಷ್ಟು ಹೊಗಳಿದರೂ ಸಾಲದಾಯಿತು. ‘ ನಿಮ್ಮ ಭಾವನಿಗೆ ಉಪ್ಪಿನಕಾಯಿ ಹಂಗೆ ತಿನ್ನಕೆ ಒಂದು ತಿಂಗಳಿಗೆ ಆಯಿತು’ ಎನ್ನುತ್ತಾ ಪೊಟ್ಟಣವನ್ನು ಬ್ಯಾಗಿಗೆ ಸೇರಿಸಿದಳು.

‘ಬರೀ ಗಂಡನಿಗೆ ತಿನ್ಸದೇ ನೋಡ್ತಿಯಲ್ಲಕ್ಕ ! ನೀನೂ ಸ್ವಲ್ಪ ತಿನ್ನು…… ಹೆಂಗಾಗಿ ಹೋಗಿದ್ದೀಯಾ ನೋಡು. ಇಷ್ಟ್ ಹೊತ್ತಾದ್ರೂ ಮಧ್ಯಾಹ್ನದ ಊಟನೇ ಮಾಡಿಲ್ಲ ಅಂತಿಯಾ….. ಅನ್ನ ನೀರು ಬಿಟ್ಕಂಡು ಕೆಲಸ ಮಾಡು ಅಂತಾ ಯಾರಾದ್ರೂ ಹೇಳಿದ್ದಾರ? ನಿನ್ನ ಅವತಾರ ನೋಡು. ಯಾವಾಗ ನೋಡಿದ್ರೂ ಇದೇ ಹರಕಲು ಹಳೇ ಸೀರೆಲೆ ರ್ತಿ ಯಾ. ತಲೆ ಅರಿವೇ ಸೈತ ಹರಿದು ಜಲ್ಲಾಗಿತೆ…. ಬಟ್ಟೆ ಬರೆಲಿ ಸ್ವಲ್ಪ ಅಚ್ಚುಕಟ್ಟಾಗಿರದು ಕಲ್ತ್ಳಕ್ಕ…… ನಿಮ್ಮೂರಲೇ ನಿನ್ನ ವಯಸ್ಸಿನ ಹೆಂಗಸರು ಹೆಂಗಿದ್ದಾರೆ ನೋಡಿ ಕಲ್ತ್ಕ. ಅವ್ರ ಚೂಡಿದಾರ್ ಏನು. ನೈಟಿ ಏನು…. ನೀನು ಮುದುಕಿ ಆಗಿದೀಯ ಅಂದ್ಕಂಡಿದ್ದಿಯಾ. ನಡಿ ನಡಿ …. ಹಸಿವಾಗಿ ಹೊಟ್ಟೆಒಳಗಿನ ಹುಳ ಎಲ್ಲಾ ಸತ್ ಹೋಗಿದ್ದಾವೆ. ಮನಿಗೋಗಿ ಏನಾದರೂ ತಿನ್ನಣ, ಎನ್ನುತ್ತಾ ಅವಸರಿಸಿ ಏಳತೊಡಗಿದ….


ಅವರು ಮನೆಗೆ ಹೋಗಿ ಊಟ ಮಾಡಿ ಕೈತೊಳೆಯುವಷ್ಟರಲ್ಲಿ ದನಗಳು ಕೊಟ್ಟಿಗೆಗೆ ಬಂದವು, ಬೆಳಗ್ಗೆ ಹೋದವರು ಇಷ್ಟು ಹೊತ್ತಾದರು ಬಂದಿಲ್ಲವಲ್ಲಾ. ಸಾಮಾನಿನ ಹೊರೆ ಜಾಸ್ತಿಯಾಗಿ ಯಾವುದಾದರೂ ಈ ಕಡೆ ಬರುವ ಆಟೋಗಾಗಿ ಕಾಯುತ್ತಿರಬಹುದೇ. ಇಲ್ಲ, ಅಂಗಡಿಯವರು ಸಾಮಾನು ಸಾಲ ಕೊಡಲು ಒಪ್ಪಿದರೋ ಇಲ್ಲವೋ.
ಯೋಚಿಸುತ್ತಾ ವ್ಯಾಕುಲಳಾದಳು ಸೀತೆ. ರಸ್ತೆಯ ಕಡೆಗೆ ದೃಷ್ಟಿ ನೆಟ್ಟು ಬಾಗಿಲಲ್ಲೇ ನಿಂತಳು. ಯಾವುದೇ ಆಟೋದ ಸುಳಿವು ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಚಿನ್ನಪ್ಪ ಕಾಲೆಳೆಯುತ್ತಾ ಬರುವುದು ಕಾಣಿಸಿತು. ಒಳಗೆ ಬಂದ ಗಂಡನ ಉದಾಸ ಮುಖಭಾವವನ್ನು ಸಮೀಪದಿಂದ ಕಂಡ ಸೀತೆಗೆ ಗಾಬರಿಯಾಯಿತು.
“ಊಟ ಆಯ್ತಾ” ಗಂಡನನ್ನು ಮಾತಾಡಿಸಿದಳು
“ಹೂಂ” ಅಂದ ಚಿನ್ನಪ್ಪ. ಹೋದ ಕೆಲಸ ಆಗಿಲ್ಲ. ಏನೋ ಸಮಸ್ಯೆಯಾಗಿರಬಹುದು ಅಂದು ಕೊಂಡಳು

ಯಾಕೆ? ಏನಾಯ್ತು? ಬೆಂಚಿನ ಮೇಲೆ ಕುಸಿದು ಕುಳಿತ ಗಂಡನನ್ನು ಪ್ರಶ್ನಿಸಿದಳು
‘ ಏನಕ್ಕ ನಿನಗೆ ಅಷ್ಟೂ ತಿಳಿಯದಿಲ್ವ. ಭಾವ ಸುಸ್ತಾಗಿ ಬಂದು ಕೂತಿದ್ದಾರೆ. ಆ ಮೇಲೆ ವಿರಾಮವಾಗಿ ಮಾತಾಡಬರ್ದಮ. ಹೋಗಿ ಬರಗಾಪಿಗೆ ಇಡೋಗು’ ಸುಬ್ಬಪ್ಪ ಅಕ್ಕನನ್ನು ಗದರಿದ.
‘ಪ್ರಪಂಚವೇ ಬದಲಾಗಿ ಹೋಗಿದೆ’ ಕಾಪಿಲೋಟವನ್ನು ಕೆಳಗಿಡುತ್ತಾ ಚಿನ್ನಪ್ಪ ಸುಬ್ಬಪ್ಪನ ಕಡೆ ತಿರುಗಿ ಹೇಳಿದ. ಅವನ ಧ್ವನಿ ಭಾರವಾಗಿತ್ತು. ಗಂಡ ಬಾಯ್ತೆರೆದದ್ದು ಕೇಳಿ ಒಳಗಿದ್ದ ಸೀತೆ ತಾನೂ ಹೊರಬಂದು ಬಾಗಿಲಿಗೆ ಒರಗಿ ನಿಂತು ಕೊಂಡಳು.
“ಯಾಕೆ ಭಾವ, ಏನಾಯ್ತು?” ಎಂದ ಸುಬ್ಬಪ್ಪ,
“ಕತ್ತೆ ಅಂಗಡಿಯಲ್ಲಿ ಸಾಮಾನು ಸಾಲ ಕೊಡೋದಿಲ್ವಂತೆ! ಈಗೇನಿದ್ರೂ ಕ್ಯಾಷ್ ಅಂಡ್ ಕ್ಯಾರಿ ಅಂದು ಬಿಟ್ಟ! ಸಾಲದ ವ್ಯವಹಾರ ಏನಿದ್ರೂ ಪಕ್ಕದಲ್ಲಿ ಅವನದೇ ಫೈನಾನ್ಸ್ ಇಲ್ಲವ ಅದರಲ್ಲಿ ಅಂದು ಬಿಟ್ಟ.
ಸೀತೆಗೆ ಗಾಬರಿಯಾಯಿತು. ಈಗೇನ್ಮಾಡದು ಎಂದಳು. “ಫೈನಾನ್ಸ್ನಲ್ಲಿ ಹತ್ತು ಸಾವಿರ ಸಾಲ ಕೊಡಕ್ಕೆ ಒಪ್ಪಿದ್ದಾರೆ” ಎಂದ ಇನ್ನೇನ್ ಭಾವ ಮತ್ತೇ? ಮೆಣಸಿನ ತೋಟದ ಖರ್ಚಿಗೆ ಸಾಕಾಗದಿಲ್ವ? ಎಂದ ಸುಬ್ಬಪ್ಪ.
‘ಅದು ಹಂಗಲ್ಲ ಮಾರಾಯ! ಚೈನ್ ತಂದು ಅಡ ಇಡಿ ಅಂತಾ ಹೇಳಿದ್ದಾರೆ’ ಎನ್ನುತ್ತಾ ಅಂಜುತ್ತಲೇ ಕರಿಮಣಿ ಸರ ಜೇಬಿನಿಂದ ಹೊರಗೆಳೆದು ಕಿಟಕಿಯ ಮೇಲೆ ಇಟ್ಟ.
‘ಅದಕ್ಯಾಕೆ ಬೇಜಾರ ಮಾಡ್ಕಳ್ತಿರಾ, ಮನೆ ವ್ಯವಾರಾ ತಾನೆ. ಏನ್ ಕುಡಿಯಕ್ಕೆ ತಿನ್ನಕೆ ಅಲ್ವಲ್ಲ” ಎನ್ನುತ್ತಾ ಕರಿಮಣಿ ಸರ ತೆಗೆದು ಕೊಂಡು ಒಳಹೋದವಳು ಮತ್ತೆ ಹೊರಬಂದು ‘ತಗಳ್ಳಿ ಚೈನು’ ಎಂದು ಗಂಡನ ಮುಂದೆ ಹಿಡಿದಳು.
ಚಿನ್ನಪ್ಪನಿಗೆ ಹೆಂಡತಿ ಮುಖ ನೋಡಲು ಧೈರ್ಯವಾಗಲಿಲ್ಲ. ಸುಮ್ಮನೆ ಕೈಯೊಡ್ಡಿದ.

ಮುಂದೆ ಯಾರೂ ಮಾತಾಡಲಿಲ್ಲ. ನೀರವ ಮೌನ ಅಸಹನೀಯ ಎನ್ನಿಸುವಂತೆ ಆವರಿಸಿಕೊಂಡಿತು
“ಇನ್ನೇನು ಭಾವ, ಧೈರ್ಯವಾಗಿ ಮುನ್ನುಗ್ಬೇಕು. ಅಕ್ಕನೇ ಅಷ್ಟು ಗಟ್ಟಿ ಮನಸ್ಸಿಂದ ತಾಳಿ ಚೈನ್ ಬಿಚ್ಚಿಕೊಟ್ಟಿದ್ದಾಳೆ, ವ್ಯವಹಾರ ಚನ್ನಾಗಿ ನಡೆಸಿಕೊಂಡು ಟೈಮಲ್ಲಿ ಬಿಡಿಸಿಕೊಟ್ರೆ ಆಯ್ತು’ ಸುಬ್ಬಪ್ಪ ಮೌನ ಒಡೆಯಲು ಯತ್ನಿಸಿದ
‘ಅದಷ್ಟೇ ಆಗಿದ್ರೆ ಪರವಾಗಿತ್ತಿಲ್ಲ, ಅದರ ಜೊತೆ ಜೊತೆಗೇ ಮತ್ತೆ ಇಪ್ಪತ್ತೊಂದು ಸಾವಿರದ ಹೊರೆ ಬಂದ್ರೆ ಏನ್ಮಾಡಬೇಕು?”
ಚಿನ್ನಪ್ಪನ ಮಾತು ಒಗಟಿನಂತೆನಿಸಿತು “ಅದೇನದು ಒಂದರ ಜೊತೆಗೆ ಮತ್ತೊಂದು ಸರಿಯಾಗಾದ್ರೂ ಹೇಳಿ” ಸೀತೆ ಮಾತಾಡಿದಳು.
“ಏನ್ ನಡಿತು ಅಂತಾ ಸ್ವಲ್ಪದರಲ್ಲೇ ಹೇಳ್ತಿನಿ ಕೇಳ್ಕೊಳ್ಳಿ’ ಎನ್ನುತ್ತಾ ಚಿನ್ನಪ್ಪ ಮಾತಿಗೆ ಆಣಿಯಾದ.
“ಈ ಊರಿನ ಸರ್ಕಾರಿ ಕನ್ನಡ ಶಾಲೆ ಮುಚ್ಚಲು ಗರ್ಮೆಂ ಟ್ ಆರ್ಡರ್ ಆಗಿದೆ. ನಮ್ಮ ಹುಡುಗಿಯನ್ನು ದೊಡ್ಡೂರಿನ ಆಕ್ಸ್ಫರ್ಡ್ ಕಾನ್ವೆಂಟ್‌ಗೆ ಸೇರಿಸದೇ ವಿಧಿಯಿಲ್ಲಾ, ಡೊನೇಷನ್ ಇಪ್ಪತ್ತೊಂದು ಸಾವಿರ. ಮುಂದಿನ ವಾರದಲ್ಲೇ ಅಡ್ವಾನ್ಸ್ ಆಗಿ ಕಟ್ಟಬೇಕು. ನಾನೂ ನಮ್ಮ ಸ್ನೇಹಿತ ನಾಗರಾಜ ಸೇರಿಕೊಂಡು ನಾಗೇಶ್ ಡಾಕ್ಟ್ರು ಮನೆಯಲ್ಲಿ ಇದೇ ವಿಚಾರ ಮಾತಾಡಿದ್ದೀವಿ. ಡಾಕ್ಟ್ರೂ ಸಹ ಇಂಗ್ಲಿಷ್ ಕಾನ್ವೆಂಟ್ ಪರವಾಗಿ ಇಲ್ಲ. ಆದರೂ ವಿಷಯವನ್ನು ಕೂಲಂಕುಶವಾಗಿ ಚರ್ಚಿಸಿದಾಗ ಈಗಿನ ಪರಿಸ್ಥಿತಿಯಲ್ಲಿ ನಮ್ಮ ಹುಡುಗಿಗೆ ಕಾನ್ವೆಂಟ್ ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬುದು ಇತ್ಯರ್ಥವಾಯಿತು.

ಸೊಸೈಟಿಗೂ ಹೋಗಿ ಮಾತಾಡಿಕೊಂಡು ಬಂದಿದ್ದೀವೆ. ಅಧ್ಯಕ್ಷರು ನಾಗರಾಜನ ಪ್ರೆಂಡು. ಅದೂ ಅಲ್ಲದೆ ನಾಗರಾಜ ಪಂಚಾಯ್ತಿ ಉಪಾಧ್ಯಕ್ಷ ಆಗಿರೋದ್ರಿಂದ ದೊಡ್ಡೂರಿನ ವ್ಯಾಪ್ತಿಲಿ ಅವನ ಮಾತು ನಡೆಯುತ್ತೆ. ಸೊಸೈಟಿ ಅಧ್ಯಕ್ಷರು ಇಪ್ಪತ್ತೆöÊದು ಸಾವಿರ ಸಾಲ ಮಂಜೂರು ಮಾಡಿಸಿಕೊಡಕೆ ಒಪ್ಪಿದ್ದಾರೆ. ನಾಳೆಯಿಂದಲೇ ಪಹಣಿ ಎಲ್ಲಾ ಹೊಂದಿಸಬೇಕು” ಚಿನ್ನಪ್ಪ ಸ್ವಲ್ಪದರಲ್ಲೇ ವಿವರ ಹೇಳಿ ಮಾತು ನಿಲ್ಲಿಸಿದ.
ತನ್ನ ಮಗಳಿಗೆ ಕನ್ನಡ ಶಾಲೆ ತಪ್ಪಿದ್ದರಿಂದ ಸೀತೆ ಬೆಪ್ಪು ಹಿಡಿದವರಂತೆ ನಿಂತಿದ್ದಳು
“ಈ ತರದಲ್ಲಾದರೂ ನಮ್ಮ ಪುಟ್ಟಿ ಇಂಗ್ಲಿಷ್ ಕಾನ್ವೆಂಟಿಗೆ ಹೋಗೋ ಹಾಗೆ ಆಯ್ತಲ್ಲ ಬಿಡಿ”. ಸುಬ್ಬಪ್ಪ ಆ ವಿಚಾರಕ್ಕೆ ಮಂಗಳ ಹಾಡಿದ.
ಸೀತೆ ಬಚ್ಚಲು ಮನೆಗೆ ಹೋಗಿ ಕೋಳಿಗಳೆಲ್ಲವೂ ಬಂದು ಕೂತಿದಾವ ಎಂದು ಕಣ್ಣಲ್ಲೇ ಎಣಿಸಿ ನೀರೊಲೆಗೆ ಬೆಂಕಿ ಹಾಕಿ ಬರುವಷ್ಟರಲ್ಲಿ ಹಿಂದುಗಡೆ ಕರಿಯಪ್ಪನ ಮನೆಯಲ್ಲಿ ಕಾಳಮ್ಮನ ಮಗನಿಗೆ ಮನೆ ಪಾಠ ಶುರುವಾಗಿತ್ತು.
‘ಟೂ ಒನ್ ಜ಼ ಟು’ ಕರಿಯಪ್ಪನ ಮಗ ಹೇಳುತ್ತಿದ್ದ. ಅದನ್ನೇ ಕಾಳಮ್ಮನ ಮಗ ‘ಟೂ ಒನ್ ಜುಟ್ಟು’ ತಿರುಗಿ ಹೇಳುತ್ತಿದ್ದ. ಎಷ್ಟು ಬಾರಿ ಹೇಳಿಕೊಟ್ಟರೂ ಕಾಳಮ್ಮನ ಮಗನ ಅದೇ ‘ಟೂ ಒನ್ ಜುಟ್ಟು’ ಪುನಾರಾವರ್ತನೆ.
ಸೀತೆಗೆ ಕರ್ಕಶವಾಗಿ ಕೇಳತೊಡಗಿತು ‘ಹಂಗಂದ್ರೇನ ಅಪ್ಪಣಿ’ ಎಂದು ತಮ್ಮನನ್ನು ಕೇಳಿದಳು, ಹಾಗಂದ್ರೆ ಇಂಗ್ಲಿಷ್ ಮಗ್ಗಿ ಕಣಕ್ಕ ‘ಟೂ ಒನ್ ಜ ಟು’ ಅಂದರೆ ‘ಎರಡೊಂದ್ಲ ಎರಡು ಅಂತಾ’ ಎಂದ ಸುಬ್ಬಪ್ಪ.
ಊರ ಸರ್ಕಾರಿ ಶಾಲೆಯಲ್ಲಿ ಕಾಡೆಲ್ಲಾ ಅನುರಣಿಸುವಂತೆ ಸುಶ್ರಾವ್ಯ ಸಂಗೀತದಂತೆ ಮಕ್ಕಳು ಸಾಮೂಹಿಕವಾಗಿ ಹಾಡುವ ಕನ್ನಡ ಮಗ್ಗಿ ‘ಎರಡೊಂದ್ಲ ಎರಡು’ ನೆನಪಾಗಿ ಮನಸಿಗೆ ಪಿಚ್ಚೆನಿಸಿತು. ಗೊತ್ತಿಲ್ಲದ ಭಾಷೆ ಕಲಿಸಬೇಕು ಎಂಬ ಹಟದಲ್ಲಿ ಈ ಎಳೆ ಮಕ್ಕಳಿಗೆ ಯಾಕೆ ಹಿಂಗೆ ಹಿಂಸೆ ಕೊಡ್ತಾರೊ. ನಾಳೆ ನಮ್ಮ ಪುಟ್ಟಿಯ ಪಾಡು ಹಿಂಗೇ ಅಲ್ವೇನಾ. ಅವಳಿಗೆ ಇದೆಲ್ಲನೂ ಹೇಳಿ ಕೊಡಾಕೆ ಯಾರಿದ್ದಾರೆ ಎಂದಳು

‘ಇರ್ಲಿ ಬಿಡಕ್ಕ ನೀನೂ ಅವಳ ಜತೆ ಕಾನ್ವೆಂಟಿಗೆ ಹೋದರೆ ಆಯಿತು. ಕಲಿತು ಕೊಂಡು ಬಂದು ಹೇಳಿ ಕೊಡುವೆಯಂತೆ’ ಸುಬ್ಬಪ್ಪ ಅಕ್ಕನನ್ನು ಗೇಲಿ ಮಾಡಿದ.
ಆ ಕಡೆ ಮಗ್ಗಿ ಕಲಿಯೋ ಕ್ರಿಯೆ ನಡೆದೇ ಇತ್ತು. ಕಾಳಮ್ಮನ ಮಗನ ‘ಟೂ ಒನ್ ಜುಟ್ಟು’ ಪುನರಾವರ್ತನೆ ಯಾಗುತ್ತಲೇ ಇತ್ತು, ಕಲಿಸುತ್ತಿದ್ದವನ ತಾಳ್ಮೆ ಕಳೆದು ಹೋಗಿತ್ತು ‘ನಿನ್ನಮ್ಮನ ಜುಟ್ಟು’ ಎನ್ನುತ್ತಾ ಕೈಯಲ್ಲಿದ್ದ ಪುಸ್ತಕವನ್ನು ಅವನು ಎದುರಿನ ಗೋಡೆಗೋ ಅಥವಾ ಬಾಗಿಲಿಗೋ ರಪ್ಪನೆ ಎಸೆದ.
ಆ ಸದ್ದಿನ ಹಿಂದೆಯೇ ಕರಿಯಪ್ಪನ ಹೆಂಡತಿಯ ಧ್ವನಿ ಕೇಳಿತು ‘ಸೀತೆ ನಿನಗೆ ಹಾಸನದಿಂದ ಪೋನ್ ಐತೆ ಬೇಗ ಬಾ, ಮತ್ತೆ ಮಾಡ್ತಾರಂತೆ’ ಎಂದಳು
ಚಿನ್ನಪ್ಪ ಚಾಪೆಯ ಮೇಲೆ ಸುಮ್ಮನೆ ಮಲಗಿದ್ದ. ಪೋನ್ ವಿಚಾರ ಕೇಳಿ ಸುಬ್ಪಪ್ಪ್ಪನಿಗೆ ಕುತೂಹಲವಾಯಿತು, ಅಕ್ಕನ ಮುಖ ನೋಡಿದ.
“ಇನ್ನೇನಿರುತ್ತೆ ಅದೇ ದುಡ್ಡಿನ ವಿಚಾರ” ಎಂದು ಗೊಣಗುತ್ತಾ ಹಿಂದಲ ಮನೆಗೆ ಓಡಿದಳು.
ಮಗನನ್ನ ಕರೆದು ಕೊಂಡು ಹೋಗಲು ಬಂದಿದ್ದ ಕಾಳಮ್ಮ ಸೀತೆಗೆ ಪೋನ್ ಬಂದಿದ್ದು ತಿಳಿದು ಕುತೂಹಲದಿಂದ ಅಲ್ಲಿಯೇ ನಿಂತಳು. ಕರಿಯಪ್ಪನ ನಾದಿನಿ ಅಕ್ಕನ ಮನೆಗೆ ಬಂದಿದ್ದವಳು ನಡುಮನೆಯ ಬಾಗಿಲಿಗೆ ಬಂದು ನಗೆಯಲ್ಲೇ ಮಾತಾಡಿಸಿದಳು. ಒಳಮನೆಯಲ್ಲಿ ಮತ್ತೆ ಪೋನ್ ರಿಂಗ್ ಆಯಿತು. ಪೋನೆತ್ತಿದ್ದ ಕರಿಯಪ್ಪನ ಹೆಂಡತಿ ಸ್ಪೀಕರ್ ಗುಂಡಿ ಒತ್ತಿ, ‘ತಗೋ ನಿಂಗೇ ಪೋನು’ ಎಂದು ಸೀತೆಯ ಕೈಗೆ ಕೊಟ್ಟಳು
ಆ ಕಡೆಯಿಂದ ಮಾತಾಡುತ್ತಿದ್ದವಳು ತನ್ನ ವಾರಗಿತ್ತಿ ಕಾವೇರಿ ಎಂದು ಎಣಿಸುತ್ತಾ ಪೋನ್ ಕಿವಿಗಿಟ್ಟಳು.
ಹಲೋ ಎನ್ನುವಷ್ಟರಲ್ಲೇ ಆ ಕಡೆ ಇರುವವರು ಭವಾನಮ್ಮ ಎಂದು ತಿಳಿದು ಮೈಯೆಲ್ಲಾ ಬೆವರತೊಡಗಿತು.
ಮೊದಲ ಬಾರಿಗೆ ಶಾಲೆಯಲ್ಲಿ ಎಲ್ಲರೆದುರು ಭಾಷಣ ಮಾಡಲು ನಿಂತ ಪುಟ್ಟ ಹುಡುಗಿಯಂತಾಗಿತ್ತು ಅವಳ ಸ್ಥಿತಿ.

“ಏನ್ರಿ ಎಷ್ಟ್ ದಿನ ಆಯಿತು ಮೂರು ಸಾವಿರ ಇಸ್ಕಂಡ್ ಹೋಗಿ. ಇಸಗಂಡ ಸಾಲ ಹಿಂದಿರುಗಿಸಬೇಕು ಅನ್ನ ಪರಿಜ್ಞಾನ ಬೇಡ್ವಾ. ಎಷ್ಟಾದರೂ ಹಳ್ಳಿ ಜನಾ ಅಂದ್ರೆ ಹಳ್ಳಿ ಜನಾನೇ, ಕಾವೇರಿ ಮಾತು ಕೇಳಿಕೊಂಡು ಒಂದೂ ಮಾತಾಡ್ದೆ ಯಾವುದೊ ಕಂತ್ ಕಟ್ಟಕೆ ಇಟ್ಟಿದ್ದ ದುಡ್ಡ ಕೊಟ್ ಕಳಿಸಿದ್ನಲ್ರಿ. ಕಾವೇರಿಗೂ ಇವತ್ತು ಚನ್ನಾಗಿ ಉಗ್ದಿದ್ದೀನಿ. ನಿಮ್ಮಿಂದಾಗಿ ನಾವು ಅಕ್ಕಪಕ್ಕದ ಮನೆಯವರು ಸಂಬಂಧ ಕೆಡಿಸಿಕೊಂಡಂಗಾಯ್ತು….. ಅದ್ಯಾಕ್ ಸುಮ್ನಾದ್ರಿ ಬಾಯಿ ಬಿಟ್ಟು ಮಾತಾಡ್ರಿ …..”
ಸೀತೆಗೆ ಭವಾನಮ್ಮ ಬೆಂಡೆತ್ತುತ್ತಿದ್ದುದ್ದು ಪೋನಿನ ಸ್ಪೀಕರ್ ಮುಖಾಂತ ನೆರೆದವರಿಗೆ ಜಾಹಿರಾಗುತ್ತಿತ್ತು. ಸೀತೆಗೆ ಅವಮಾನದಿಂದ ಗಂಟಲು ಕಟ್ಟಿತು.
‘ಅದು ಹಂಗಲ್ಲ ……..’ ಎನ್ನುತ್ತಾ ತೊದಲತೊಡಗಿದೊಡನೆಯೇ ಆ ಕಡೆಯಿಂದ ಭವಾನಮ್ಮ ‘ ಹಂಗೂ ಇಲ್ಲ, ಹಿಂಗೂ ಇಲ್ಲ. ಇನ್ನೊಂದು ವಾರದಲ್ಲಿ ದುಡ್ಡು ತಂದು ಕೊಟ್ಟು ಹೋಗಿ…… ಇಲ್ಲಾಂದ್ರೆ ಅಲ್ಲಿಗೇ ಬಂದು ರ್ಯಾ ದೆ ಹರಾಜಾಕಿ ಹೋಗ್ತಿನಿ’ ಕಿರುಚುವ ಧನಿಯಲ್ಲಿ ಹೇಳಿ ಪೋನ್ ನಿಲ್ಲಿಸಿದಳು.
ಅವಳು ಬಂದು ಸೀತೆಯ ರ್ಯಾ ದೆ ಹರಾಜು ಹಾಕಲು ಏನೂ ಉಳಿದಿರಲಿಲ್ಲ.
ಅಷ್ಟು ಜನರ ಎದುರಿಗೆ ಆದ ಅವಮಾನದಿಂದ ಕುಗ್ಗಿ ಹೋದ ಸೀತೆ ಸೆರಗನ್ನು ಬಾಯಿಗೆ ಒತ್ತಿಹಿಡಿದು ಅಳುತ್ತಾ ಮನೆಗೆ ಓಡಿದಳು

ಅವಳು ಅಳುತ್ತಾ ಓಡಿ ಬರುವ ರಭಸಕ್ಕೆ ಚಿನ್ನಪ್ಪ ಗಾಬರಿಯಿಂದ ಎದ್ದು ಕುಳಿತ.
‘ಎಲ್ಲರೆದುರಿಗೆ ನನ್ನ ರ್ಯಾ್ದೆ ಮೂರು ಕಾಸಿಗೆ ಆಗಿ ಹೋಯ್ತಲ್ಲಾ ಈವತ್ತು’ ಅಳುತ್ತಲೇ ಒಳಕೋಣೆಗೆ ಓಡಿ ಟ್ರಂಕ್ ಬಾಗಿಲು ತೆಗೆದು, ಜೋಪಾನವಾಗಿಟ್ಟಿದ್ದ ಓಲೆಗಳನ್ನು ತಂದು ಚಿನ್ನಪ್ಪನ ಬಲಗೈಯನ್ನು ಮುಂದಕ್ಕೆ ಎಳೆದು ಅದರಲ್ಲಿ ಹಾಕಿದಳು.
“ಈಗ್ಲೆ ಹೋಗಿ ಕಾಳಮ್ಮನ ತವ ಅಡ ಇಟ್ಟು ದುಡ್ ತಂದು ಬೆಳಗ್ಗೆಲ್ಲೇ ಹಾಸನಕ್ಕೆ ತಲಪಿಸಿ ಬುಡಿ. ನನಗೆ ಈ ಗಿಲೀಟ್ ವಾಲೆನೇ ಖಾಯಂ ಅಂತಾ ಕಾಣುತ್ತೆ” ಎನ್ನುತ್ತಾ ತಮ್ಮನ ಕಡೆ ತಿರುಗಿ ‘ನೀನೂ ಹೋಗ ಇವರ ಜತೆ. ಅದ್ಯಾವ್ದೋ ಮೊಬೇಲ್ ಐತೆ ಕಾಳಮ್ನ ತಾವ ಅಂದಲ್ಲಾ. ಮಾತಾಡಿ ತಗಂಡ್ ಬಾ’ ಎನ್ನುತ್ತಾ ಭರಭರನೆ ಹೋಗಿ ಅಡುಗೆ ಮನೆ ಸೇರಿಕೊಂಡಳು.

–ಹಾಡ್ಲಹಳ್ಳಿ ನಾಗರಾಜ್

ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x