ಬದುಕಿನ ಸತ್ಯಗಳನ್ನು ಕೆಲವೇ ಪದಗಳಲ್ಲಿ ಕೆಲವೇ ಸಾಲುಗಳಲ್ಲಿ ಕೆಲವೇ ನುಡಿಗಟ್ಟುಗಳಲ್ಲಿ ಹೇಳಬಲ್ಲ ಶಕ್ತಿ ಇರುವುದು ಕಾವ್ಯಕ್ಕೆ. ಸಾಹಿತ್ಯದ ಹುಟ್ಟಿನ ಮೂಲ ಸಾಮಾನ್ಯ ಜನರ ‘ಪದ’ದಿಂದ. ಈ ಜಾನಪದಕ್ಕೆ ಶಕ್ತಿ ಹೆಚ್ಚು. ಒಂದು ಕವಿತೆ ತನ್ನ ಎದೆಯೊಳಗೆ ನೂರಾರು ಸಂಕಟಗಳನ್ನು ನೋವುಗಳನ್ನು ಅಭಿಲಾಷೆಗಳನ್ನು ಇಟ್ಟಕೊಂಡಿರುವ ದೈತ್ಯ ಕಣಜ. ಈ ಕಣಜದೊಳಗೆ ಪ್ರೀತಿ ಪ್ರೇಮ ಪ್ರಣಯ ಲೋಲುಪ ಸಾವು ಹಾಸ್ಯ ಲಾಸ್ಯ ಸರಸ ವಿರಸ ಕಾಮ ಭೋಗ ಸಂಭೋಗ ಒಳಿತು ಕೆಡುಕು ಕಸ ರಸಗಳ ವಿವರಗಳೂ ಉಂಟು. ಹೀಗಾಗಿ ನೂರು ಪುಟಗಳ ಒಂದು ಕಾದಂಬರಿ ಅಥವಾ ನೂರು ಪುಟದ ಒಂದು ಉದ್ದದ ಕಥೆ ಕಟ್ಟಿಕೊಡುವ ಜೀವನ ಪ್ರೀತಿ, ಬದುಕಿನ ಪಡಿಪಾಟಲಿನ ವೈಚಾರಿಕ ಪರಿಚಾರಿಕೆ ಮತ್ತು ವೈರುದ್ಯಗಳ ಅನುಭಾವಿಕ ಸಮರ್ಥ ದಿಗ್ಧರ್ಶನವನ್ನು ಆರು ಸಾಲಿನ ಅಥವಾ ಹತ್ತು ಸಾಲಿನ ಒಂದು ಕವನ ಕಟ್ಟಿಕೊಡ ಬಲ್ಲದು. ಇದೆಲ್ಲ ನನಗೆ ಕಂಡಿದ್ದು ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’ ಕೃತಿ ಓದುತ್ತಾ ಏಕಾಕವಾಗಿ ನನ್ನೊಳಗೆ ಆವರಿಸಿದ ಬಗೆ.
‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ..’ ಎಂಬುದು ಭುವನಾ ಹಿರೇಮಠ ಅವರ ಅರವತ್ತೆಂಟು ಕವಿತೆಗಳ ಒಂದು ಗುಚ್ಛ. ಇದು ಅವರ ಎರಡನೇ ಕೃತಿ. ಈ ಬಗ್ಗೆ ಈ ಕೃತಿಯ ಮುನ್ನುಡಿ ಮತ್ತು ಲೇಖಕರ ಪುಟಗಳಲ್ಲಿ ಇದಕ್ಕು ಮೊದಲಿನ “ಟ್ರಯಲ್ ರೂಮಿನ ಅಪ್ಸರೆಯರು” ಕೃತಿ ಕುರಿತಾದ ಪ್ರಸ್ತಾಪವೂ ಇದೆ. ಆದರೆ ನಾನು ಈ ‘…ಅಪ್ಸರೆಯರ’ ಕಡೆ ಕಣ್ಣಾಡಿಸಿಲ್ಲದ ಕಾರಣ ಅವರ ಹಿಂದಿನ ಬರಹಗಳ ಮೂಲಕ್ಕೆ ಹೋಗಿ ಅಳೆದೂ ತೂಗಿ ನೋಡುವ ಕ್ಲಿಷ್ಟತೆಯಿಂದ ಬಿಡಿಸಿಕೊಂಡ ಭಾವದಲ್ಲಿ ಪ್ರಸ್ತುತ ಮತ್ತೆ ಮತ್ತೆ ಮರ್ತ್ಯಕ್ಕಿಳಿದು ಹೇಳಲಷ್ಟೇ ನನ್ನ ರೇಖಾ ಮಿತಿ ಅನ್ನಬಹುದು.
ಭುವನಾ ಹಿರೇಮಠರು ಈ ಕೃತಿಯ ಕವಿತೆಗಳ ಪುಟ ತಿರುವುವ ಮುನ್ನ “ಈ ಜೀವ, ಜೀವನ ಎಷ್ಟು ಗಹನವೆನಿಸುವವೋ ಅಷ್ಟೇ ಟೊಳ್ಳೆಂದು ಭಾಸವಾಗತೊಡಗಿದಾಗ ವೈರಾಗ್ಯ ಮೈದಳೆವುದು. ಅದು ಬಹಳ ಸಲ ಮೂರು ದಿನ ಒಂದು ದಿನ ಒಂದೇ ಒಂದು ಕ್ಷಣದ ಸೀಮೆಯೊಳಗೆ ಕಳೆದು ಹೋದೀತು. ಅದಕ್ಕೆಂದೇ ಅದನ್ನು ಜಯಿಸಿ ಮತ್ತೆ ಚೇತೋಹಾರಿಯಾಗಿ ಆಸೆಗಳ ಹೆಗಲೇರಿ ನಾವೊ, ಆಸೆಗಳೇ ನಮ್ಮ ಹೆಗಲೇರಿಯೋ ಸವಾರಿ ಮುಂದುವರೆವುದು. ಅಲ್ಪ ಸಂಖ್ಯೆಯ ವಿರಾಗಿಗಳು ಮತ್ತು ಬಹು ಸಂಖ್ಯೆಯ ಜೀವನ್ಮುಖಿಗಳಿಂದಲೇ ಈ ಲೋಕ ಸರಳ ಲೋಲಕದಂತೆ ತೂಗುತ್ತಲೇ ಇದೆ ಅನಿಸುತ್ತದೆ. ವಿರಾಗಿಗಳಿಗೆ ಜೀವನ್ಮುಖಿಗಳು ಹುಚ್ಚರಾಗಿ ಕಂಡರೆ, ಜೀವನ್ಮುಖಿಗಳಿಗೆ ವಿರಾಗಿಗಳು ಹುಚ್ಚರಂತೆ ಕಾಣುವರು” ಎಂದು ಹೇಳುವಲ್ಲಿ ಈ ಕೃತಿಯ ಒಟ್ಟು ತಾತ್ಪರ್ಯವೊ ಎನುವಷ್ಟು ತೀರ ಸಂಕೀರ್ಣವಾದ ಸಂಗತವನ್ನು ಅರ್ಥವತ್ತಾಗಿಯೊ ಅಥವಾ ಸಂಕ್ಷಿಪ್ತವಾಗಿಯೊ ಇಲ್ಲಿನ ಕವಿತೆಗಳ ಒಳಸುಳಿವಿನ ಎದೆಯ ಧ್ವನಿಯನ್ನು ಸೂಚ್ಯವಾಗಿ ಓದುಗನ/ಳ ಅಂಗಳಕ್ಕೆ ಸೂಕ್ಷ್ಮಾತಿಸೂಕ್ಷ್ಮವಾಗಿ ಹೊರಗೆಡವಿದ್ದಾರೆ.
ತಾನು ತಾನಾಗಿ ನೋಡಿಕೊಳ್ಳುವ ಪರಿಯೊಂದು ಮನುಷ್ಯನೊಳಗೆ ಇರಬಹುದಾದ ಪ್ರಾಕೃತಿಕ ಬೆರಗಿನ ಮಾಯೆಯ ರೂಪದಲ್ಲಿ ಮತ್ತೆ ಮತ್ತೆ ಗೋಚರಿಸುವ ವಿಕಲ್ಪಗಳು ‘ರಾತ್ರಿ ಮತ್ತು ಕನ್ನಡಿ’ಯಲ್ಲಿ “ಮುಖ ಕಣ್ಣು ದೃಷ್ಟಿ ಯಾವುದೂ ಕಾಣಿಸದು/ಹೊಡೆದುಕೊಳ್ಳುವ ಎದೆ/ಚೂರಾದ ಮನಸು/ರಾತ್ರಿಗೂ ಕನ್ನಡಿಗೂ” ಉದಿತವಾಗುವ ಭಾಸ “ಈಗ ಇಡೀ ಲೋಕಕ್ಕೆ ಕತ್ತಲಾವರಿಸಿದೆ” ಎಂಬಲ್ಲಿ ತಾತ್ವಿಕವಾದ ಸತ್ಯದ ಪರಿಶೋಧನೆಗೆ ಭೌದ್ಧಿಕ ಆಯಾಮ ಒದಗಿಸುವ ಒಂದು ವಿಶಿಷ್ಟ ರಚನೆಯಾಗಿದೆ. ಹಾಗೆ ವ್ಯಕ್ತಿಯ ಅಂತರಂಗದಲ್ಲಿ ಅಡಗಿ ಕುಳಿತ ಭಾವಗಳು ಬಹಿರಂಗದಲ್ಲಿ ಹೇಳಿಕೊಳ್ಳಲಾಗದ, ಅಥವಾ ತನ್ನ ಪ್ರಚ್ಛನ್ನತೆಯಲ್ಲಿ ಕಾಲದ ತೆಕ್ಕೆಗೆ ಅಂಟಿಕೊಂಡೇ ತನ್ನೊಳಗೆ ಪ್ರಶ್ನಿಕೊಳ್ಳುತ್ತಲೇ ಬಂಡೆದ್ದು ಕೊನೆಗದು “ಒಂದು ರಾತ್ರಿಗೆ/ ಒಂದು ಬೆಳಗಿಗೆ ಸಾಕ್ಷಿಯಾಗುತ್ತಲೇ ನಡೆದು ನಡೆದು/ಎಲ್ಲಿ ಸೇರುವುದು/ ಎಲ್ಲಿ ಅಗಲುವುದು” ಎಂದು ನಲುಗುವ ಜೀವಕಾರುಣ್ಯದ ತುಡಿತವು “ಎರಡೆರಡು ಗೋರಿಯಲಿ ಪ್ರತ್ಯೇಕವಾಗಿ” ಕವಿತೆಯಲ್ಲಿ ಕಾಲನ ಮಹತ್ತಿನ ನಿಗೂಢ ನಡೆಯಿದೆ. ಈ ಜಾಡಿನಲ್ಲೆ ಹಿಡಿಯಲಾಗದ ಅಥವಾ ಕಾಲನೊಂದಿಗೆ ಜೋತು ಬೀಳುತ್ತಲೇ ಸದಾ ಜೀವನ್ಮುಖಿಯಾಗುವ, ಆ ಜೀವನ್ಮುಖದ ಮಾರ್ಗಗಳ ತಪಾಸಣೆಯಲ್ಲಿ ತೊಡಗುವ ಶೋಧನಾತ್ಮಕ ಜೀವಗಳು ಬದುಕಿನ ವಿವಿದ ಮಗ್ಗುಲುಗಳಲ್ಲಿ ಎಷ್ಟೇ ಬೆಸೆದರು ಕೊನೆಗದು ‘ಸಮಾಧಿ’/ ‘ಗೋರಿ’ ರೂಪದಲ್ಲಿ ಪ್ರತ್ಯೇಕವಾಗಿ ಸತ್ಯದ ತಕ್ಕಡಿಯಲ್ಲಿ ತೂಗಿ ಬೇರ್ಪಟ್ಟ ಲಯದ ಒಂದು ಸ್ಥಿತಿಯ ಪರಿಯನ್ನು ಕಟ್ಟಿಕೊಟ್ಟರೆ “ಅರ್ಥ ಕಾಮ ಮೋಕ್ಷ ಮತ್ತು ಸ್ವರ್ಗಕ್ಕಾಗಿ” ಕವಿತೆ ಕವಿಯ ಅಂತರಂಗದಲ್ಲಿ ಏಳುವ ಕುದಿತ ಮತ್ತು ಸಾಂಘಿಕ ತತ್ವದ ಎಲ್ಲೆಗಳ ದಾಟಿ ವಿಶಿಷ್ಟವಾಗಿ ಧ್ವನಿಸುತ್ತದೆ. ಇಲ್ಲಿ ಪ್ರಮುಖವಾಗಿ ‘ಖಾಲಿ ಹಾಳೆಯ ಮೇಲೆ ಕಪ್ಪು ಕುಳಿ’ಇದೆ. ಆ ಕುಳಿಯೊಳಗೆ ಸಾದ್ಯಾತ್ಮಕವಾದ ನಿರ್ವಾಣ ರೂಪದ ಭ್ರಮೆಯೊಂದು ತೇಲುತ್ತದೆ. ಇದರ ಆಳದಲ್ಲಿ ಈ ಸಂಕಲನದ ಮೊದಲ ಕವಿತೆ ‘ಸಕಲ ಸಂಪತ್ತುಗಳು ನಿಶ್ಚಯವಿದೆಂದು’ ಬೇರುಬಿಟ್ಟು “ಪದ ಹೇಳುವಾಗ ಕಪಾಳದ ಗುಂಟ ಇಳಿದ/ಬೆವರ ಹನಿಗಳೇ ಸಂಭಾಳಿಸುತ್ತಿವೆ ಇಂದಿಗೂ/ ದೊಡ್ಡ ಮರದ ರೆಂಬೆಗಳನ್ನೆಲ್ಲ” ಸಾವರಿಸಿ ವಿಶದೀಕರಿಸಿಸುತ್ತಲೆ ಪೂರ್ವದ ಅಲೌಕಿಕ ಆತ್ಮಸಂಧಾನದ “ನಿಷ್ಕಾಮಿ ಪ್ರಾರ್ಥನೆಗಳೆಲ್ಲ/ ಜಂತಿ ಜೋಳಿಗೆ ಪಾಲು” ಹುರಿಗಟ್ಟಿ ವೈರಾಗ್ಯದ ಹೆಜ್ಜೆ ಗುರುತುಗಳ ತಾವಿದೆ. ಈ ಮೂರೂ ಕವಿತೆಗಳು ಕುವೆಂಪು ಅವರ ‘ಪ್ರೇಮದ ಪ್ರೇತ’ ಕವಿತೆಯ ಒಡಲಿಂದ ಬಸಿದು ಅದರ ತದ್ರೂಪವೇನೋ ಅನಿಸುವಷ್ಟು ಸಾಮ್ಯತೆಯನ್ನು ಪಡೆದಿವೆ. ಅದು
“ವೈಕುಂಠ, ಕೈಲಾಸ,/ ನರಕ, ಇಂದ್ರನಿವಾಸ/ ಎಲ್ಲ ಮೊಗಬಾಡಿದವು/ ಎಲ್ಲ ಅಲುಗಾಡಿದವು”
“ಮಸಣದಾ ಮೂಲೆಯಲಿ/ ವೈರಾಗ್ಯದನಿಧಿ”
“ಇಂತು ಧ್ಯಾನದಿ ಮಗ್ನ/ ಇಂತು ಶೂನ್ಯದಿ ಲಗ್ನ/ ಆ ಸ್ಮಶಾನದ ನಗ್ನ ತಪೋಮೂರ್ತಿ”
“ಪ್ರಚ್ಛನ್ನ ಕಾಮಿಯಲಿ/ ವಿಶ್ವದಾಸೆಗಳೆಲ್ಲ”
ಹೀಗೆ ‘ಪ್ರೇಮದ ಪ್ರೇತ’ವನ್ನು ಹೊದ್ದು ಮಲಗಿದಂತಿರುವ ಈ ಕವಿತೆಗಳ ಎದೆಯ ಭಾಷೆ, ಆ ಕವಿತೆಗಳು ಹೊರಡಿಸುವ ತಾತ್ವಿಕ ದರ್ಶನದ ಸಾರವಿದೆಯಲ್ಲ ಅದು, ಬಹುತ್ವದ ನೆಲೆಯಲ್ಲಿ ಮನುಷ್ಯನೊಳಗೆ ಕ್ರಿಯಾತ್ಮಕವಾಗಿ ಹೊಯ್ದಾಡುವ
ಬದುಕಿನ ಲೀಲೆಯ ರೂಪವೇ ಆಗಿದೆ.
ಭುವನಾ ಹಿರೇಮಠರ ಕವಿತೆಗಳು ತನ್ನ ಕಾವ್ಯಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡಿವೆ. ಇಲ್ಲಿ ಹೇಳುವ ಪರಿ ವ್ಯವಧಾನಿತ ಮನಸ್ಥಿತಿಯ ದ್ಯೂತಕವಾಗಿವೆ. ಇಲ್ಲೆಲ್ಲ ಗದ್ಯ ಮಿಶ್ರಿತ ಪದ್ಯಗಳ ರೂಪವಿದೆ. ಈತರದ ಗದ್ಯ ಮಿಶ್ರಿತ ಪದ್ಯದ ಆವಿಷ್ಕಾರ ಹೊಸ ಆಕರಗಳಲ್ಲ. ಕವಿ, ಕವಿತೆ ಕಟ್ಟುವಾಗ ಓದುಗನ ಓದಿಗೆ ಸಡನ್ ಬ್ರೇಕ್ ಬೀಳುವ ಕ್ಲಿಷ್ಟತೆಯಿಂದ ಪಾರು ಮಾಡುವ ತಾಂತ್ರಿಕತೆಯ ಲಕ್ಷಣಗಳೂ ಇದರ ಹಿಂದಿನ ಗೂಢಾರ್ಥವಾಗಿದೆ. ಈ ಗೂಢಾರ್ಥ ಜಾಡಿನಲ್ಲೇ ಭುವನಾ ಹಿರೇಮಠರು ತಮ್ಮ ಕಾವ್ಯದ ಲಯವನ್ನು ಇಲ್ಲಿರುವ ಎಲ್ಲ ಕವಿತೆಗಳಲ್ಲಿ ಸೂಕ್ಷವಾಗಿ ಹದವಾಗಿ ಬೆಸೆದಿದ್ದಾರೆ.
‘ಅನುದಿನದ ಮೊಹರಮ್’ ಒಂದು ಕ್ರಿಯಾಲೋಪದ ಕಡೆಗೆ ಬೊಟ್ಟು ಮಾಡಿ ತೋರುವ ಕವಿತೆ. ಇದು ಈಗಾಗಲೇ ಇರುವ ದೇವರು ಮತ್ತು ಮನುಷ್ಯ ಸಂಬಂಧಗಳ ನಡುವೆ ಇರುವ ಆಚರಣಾ ಪದ್ಧತಿಯ ವಿಧಾನದತ್ತ ಚಿತ್ರಿತವಾಗಿದೆ. ಇದು ಮನುಷ್ಯನ ಸಣ್ಣತನಗಳು ಮತ್ತು ಅದರ ದೂರಗಾಮಿ ಪರಿಣಾಮಗಳು ಯಾವ ಇಲಾಜು ಇಲ್ಲದೆ ವ್ಯಕ್ತವಾಗುವಂಥದ್ದು. ಕೊನೆಗೆ “ದೇವರು ದೇವರೇ ಹೊರತು/ ಮನುಷ್ಯನಾಗಲಾರ” ಎಂಬುದರಲ್ಲಿ ಮನುಷ್ಯನ ಮಿತಿಯಲ್ಲಿ ದೇವರ ಅಸ್ಥಿತ್ವದ ಪರಿಕಲ್ಪನೆಯನ್ನು ಒಂದು ಕಡೆ ತೂಗಿ ಮನುಷ್ಯ ಗುಣದ ಇನ್ನೊಂದು ಮುಖದ ಕಡೆ ಬೊಟ್ಟು ಇಟ್ಟು ತೂಗುತ್ತಾ ಎಳೆದ ಸ್ಪಷ್ಟ ಗೆರೆ.
‘ಆತ್ಮಗಳ ಚಪ್ಪಾಳೆ’ ಮುಖ್ಯವಾಗಿ ಪರಸ್ಪರೊಳಗೆ ಅವಿತಿರುವ ಸಕಲವೂ ಆಗಿದೆ. ಇಲ್ಲಿ ಆತ್ಮಗಳ ಪ್ರಶ್ನೆ ಏಳುತ್ತದೆ. ಅವು ತಮಗೆ ತಾವೆ ಕೇಳಿಕೊಳ್ಳುವ, ಕೇಳಿಸಿಕೊಳ್ಳುವ ಲೋಕಚಿಂತಕ ಮಹತ್ತನ್ನು ಭಿನ್ನ ರೂಪದಲ್ಲಿ ಪ್ರಸ್ತುತಪಡಿಸುವ ಅನುಸಂಧಾನವು
“ನನ್ನ ವಟವಟ ಮಾತಿಗೆ/ನಿನ್ನ ನಗೆಯ ರಾಜಕೀಯ/ ಅವಿತಿಟ್ಟ ಮುಳ್ಳಿನ ಚೂಪಾದ ಅರ್ಥ ಹೇಳಬಲ್ಲೆ” ಎಂಬುದರಲ್ಲಿದೆ. ಆ ಆತ್ಮಗಳ ಚಪ್ಪಾಳೆ ಒಂದೆಡೆ ನಿಲಲಾರದೆ ಪುರ್ರನೆ ಹಾರುತ್ತ ಲೋಕದ ಮಾತಿನ ಸೆರಗಿನಲೆ “ನಮ್ಮ ಮೌನದ ಸೋಗ/ ಚುವುಗುಟ್ಟಿ ಅಣಕಿಸುತ”- ‘ತಬ್ಬಲಿ ನೀರಕ್ಕಿ’ಯ ಎದೆಯ ಮೇಲೆ ಭಾಷ್ಯ ಬರೆದು ಬಿಡುತ್ತದೆ.
ಧ್ಯಾನ ಮತ್ತು ಮೌನ ಆತ್ಮದ ಅಂತರಂಗದೊಳಗಿನ ಒಂದು ನಿಗೂಢ ಭಾವ. ಅದು ಒಳಗೇ ಧೇನಿಸುವ ಚಲನ ಕ್ರಿಯೆ. ಈ ಕ್ರಿಯೆ ಸಮರ್ಪಣಾ ತಾವಿನ ಪ್ರತಿರೂಪ ಪಡೆದು ತನ್ನನ್ನು ನೋಡುಕೊಳ್ಳುವ ನಿರಂತರತೆ. ಆ ನಿರಂತರತೆಯಲ್ಲಿ “ಕಿಟಕಿಯ ಹೊರಗೆ ದೃಷ್ಟಿಯ ನೆಡು ದೇಹದ ಹೊರಗೆ ಮನಸು/ ಚರ್ಮದ್ದೇನು ಸಸಾರ ಆತ್ಮವ ತಡವಿ ನೋಡು” ಎನ್ನುವ ಕವಿ ಮನಸ್ಸು, ಒಳಗಿನ ಬೇಗುದಿಯನ್ನು ಹೊರಕ್ಕೆ ಹಾಕುವ, ಹಗುರ ಮಾಡಿಕೊಳ್ಳುವ, ತನ್ನ ಈಗಿರುವ ಬದುಕಿನ ರೀತಿಯಿಂದ ಜಟ್ಟುಗಟ್ಟಿದ ಮನಸ್ಸನ್ನು ತಡವಿ ಎಚ್ಚರಿಸುವ ದನಿ ಇದೆ. ಧ್ಯಾನ ಡಿಸ್ಟರ್ಬ್ ಆದಾಗೆಲ್ಲ ಸೆಳೆಯುವ ಅಯಸ್ಕಾಂತ. ‘ಧ್ಯಾನಕ್ಕೆ ಕೂರುತ್ತೇನೆ’ ಎಂಬಲ್ಲಿ ಡಿಸ್ಟರ್ಬ್ ಇರುತ್ತದೆ ಎಂದರ್ಥ. ಕವಿ ಕಟ್ಟಿಕೊಡುವ ಧ್ಯಾನದ ಪರಿಕಲ್ಪನೆಯಲ್ಲಿ ಒಂದು ಅಯಸ್ಕಾಂತೀಯ ಗುಣಲಕ್ಷಣದ ವ್ಯವಧಾನವಿದೆ. ಹಾಗಾಗಿಯೇ “ಲೋಕದಲ್ಲಿ ಮುಗ್ಧರು ಮಾತ್ರ/ ಧ್ಯಾನಕ್ಕೆ ಹಾತೊರೆಯುತ್ತಾರೆ” ಎಂಬುದು ವಿಭಿನಾರ್ಥ ಸೂಚವಾಗಿದೆ. ಕೆಲ ವರ್ಷಗಳ ಹಿಂದೆ ‘ನಾಗರೀಕ ಮತ್ತು ಅನಾಗರೀಕದ ಬಗ್ಗೆ ದೇವನೂರ ಮಹಾದೇವ ಅವರು ಭಿನ್ನ ಹೇಳಿಕೆ ನೀಡಿದ್ದರು(ಈ ದಾಖಲು ಸಾಕ್ಷ್ಯ ನನ್ನಲ್ಲಿಲ್ಲ. ಆಗ ದಿನ ಪತ್ರಿಕೆ ವರದಿಯಲ್ಲಿ ಓದಿದ್ದು ಸದ್ಯ ಈ ಕವಿತೆ ಓದುವಾಗ ನೆನಪಿಗೆ ಬಂದಿದ್ದು) ಅದು ನಾಗರೀಕ ಸಮೂಹದಲ್ಲಿರುವಷ್ಟು ವಂಚನೆ ಅನಾಗರೀಕ ಸಮೂಹದಲ್ಲಿಲ್ಲ ಎಂದಿದ್ದರು. ಅಂದರೆ ‘ಅನಾಗರೀಕ’ ಎಂಬುದು ‘ಮುಗ್ಧತೆ’ಯ ಅರ್ಥ ಸಂಕೇತವನ್ನು, ‘ನಾಗರೀಕ’ ಎಂಬುದು ‘ಚಾಲಾಕಿತನ’ದ ಅರ್ಥ ಸಂಕೇತವನ್ನು ಹೊರಡಿಸುವಂಥದ್ದು. ಹಾಗಾಗಿ ಧ್ಯಾನದ ಪರಿಕಲ್ಪನೆ ಕವಿಯ ಮನಸ್ಸಿನಲ್ಲಿ ಮೂಡಿರುವ ಒಂದು ಕ್ರಿಯಾತ್ಮಕ ಅಂಶವೇ ಆಗಿದೆ. ಈ ಕಾರಣ ಅವರು ‘ಮೌನ’ ದ ಬೆಳಕಿನ ಸತ್ಯವನ್ನು ಕತ್ತಲೆ, ಆಗಸ, ಎಲೆ, ಶಾಂತತೆ, ಮತ್ತು ಪ್ರೇಮದ ಸಂದರ್ಭದಲ್ಲಿ ಅದು ವ್ಯಕ್ತ ಪಡಿಸಲಾರದಷ್ಟು ಸೂಕ್ಷ್ಮತೆ ಬುದ್ಧನ ಕಾರಣ್ಯದ ಬೆಳನಷ್ಟೆ ನಿಚ್ಚಳವಾಗಿದೆ.
ಬೇಂದ್ರೆಯವರ “ರಸವೇ ಜನನ/ವಿರಸ ಮರಣ/ಸಮರಸವೇ ಜೀವನ”ವು ಸೃಷ್ಠಿ ಕ್ರಿಯೆಗೆ ಪೂರಕವಾಗಿದೆ. ಈ ಪೂರಕಾಂಶವು ಭುವನಾರ ಅಂತರಂಗದಲ್ಲಿ ಮಾಗಿ ಅವು ಪಿಸುಮಾತಿನಲ್ಲಿ ಅತಿಯಾಗಿ ಒಸರಿ ಒಸರಿ ಸೃಷ್ಟಿ ನಿಯಮಮಾಂಶವನ್ನು ಮೀರಿ “ನಿಮ್ಮ ದೇವರುಗಳ ಮುಚ್ಚಿಕೊಳ್ಳಿ” ಎನ್ನುವಲ್ಲಿ ಸೃಷ್ಠಿಬೀಜದ ಮೇಲಿನ ವ್ಯಂಗ್ಯದ ಲೋಪ. ಈ ವ್ಯಂಗ್ಯದ ಲೋಪದ ದನಿಯು ‘ಯೋನಿರಸ ಜಿನುಗುತ್ತದೆ ಆಗಾಗ/ ಮುಟ್ಟಿದಾಗ ಮುಟ್ಟದಾಗ/ಅಥವಾ ಆತ್ಮಕ್ಕೆ ಸುಳಿಗಾಳಿ ತಗುಲಿದಾಗ’ ಆತ್ಮನಿವೇದನೆ ಮಾಡಿಕೊಳ್ಳುತ್ತಲೆ ‘ಇಡೀ ಇಹದ ತುಂಬ/ ಯೋನಿರಸ ಯೋನಿಬೀಜ ಯೋನಿತಂತು’ ವಿನ ಜರೂರಿನೊಳಗೆ ಅಡ್ಡಾದಿಡ್ಡಿ ಗೀಚಿಗೀಚಿ ಬರೆದ ನೋವಿನ ಗೆರೆಗಳಿವೆ. ಈ ನೋವಿನ ಗೆರೆಗಳು ತಮ್ಮನ್ನು ತಾವು ಹಿಗ್ಗಿಸಿಕೊಂಡು ಒಂದು ಸಮತೂಕದಲ್ಲಿ “ಅಕ್ಕಿ ಆರಿಸಬೇಕು” ಇಲ್ಲದಿದ್ದರೆ “ಬಿಕ್ಕಿ ಬಿಕ್ಕಿ/ ಸಣ್ಣದಾಗುವ ಲಾಟೀನಿನ/ಗಾಜು ದಾಟಲಾರದ ದೀಪ/ಕೊನೆಗೊಮ್ಮೆ ಕಿಸಕ್ಕನೆ ನಕ್ಕು/ನಂದಿ ಹೋಗುವುದು” ಹಾಗಾಗಿ ಬದುಕಿನ ತುತ್ತ ತುದಿಯ ಲೋಪ ಮುಚ್ಚಿಕೊಳ್ಳಲು ‘ಅಕ್ಕಿ ಆರಿಸಬೇಕು/ಸಂಜೆಯ ಗಂಜಿಗೆ..’ ಮಾತಿನ ಲಯವಿಲ್ಲಿ ದೀರ್ಘವಾಗಿ, ಕತ್ತಲು ಹೆತ್ತ ಬಲಾತ್ಕಾರದ ಪರಿಮಾಣವು ಹೆಣ್ಣಿನ ಆತ್ಮದ ಮೇಲೆ ಸ್ಪಷ್ಟವಲ್ಲದ ಒಂದು ಅಸ್ಪಷ್ಟ ಗೆರೆ ಮೂಡಿ ಕಾವ್ಯದ ಓದುಗನಲ್ಲಿ ಪರಿಣಾಮಕಾರಿಯಾಗಿ ಲಯದ ರೂಪದಲ್ಲಿ ವಿಶ್ಲೇಷಣೆಯ ತೀಕ್ಷ್ಮತೆಗೆ ಗುರಿಪಡಿಸುತ್ತದೆ.
“ಈ ಪಾಪದ ಈ ಭೂಮಿಯೊಂದನ್ನು ಬಿಟ್ಟು” ಎಲ್ಲವೂ ಎಲ್ಲೆಲ್ಲೊ ಏನೇನೋ ಆಗಿ ಭ್ರಮೆ ಮತ್ತು ಅವಾಸ್ತವದ ಪಾರಮ್ಯದಲ್ಲಿ ‘ನೆತ್ತರು ಕಂಬನಿ ಮಾತ್ರ/ ಪಾಪದ ಈ ಭೂಮಿಯೊಂದನ್ನು ಬಿಟ್ಟು/ ಎಲ್ಲಿಯೂ ಇಂಗಲಾರವು’ ಅಷ್ಟೇ ಅಲ್ಲ ನೆಲದ ಕರುಣೆಯ ದನಿಗಳು ಸಂಚಿನ ಅಲಗಿನಲ್ಲಿ ಸಿಲುಕಿ ‘ಸ್ಮಶಾನದಲ್ಲೂ ಮಲಗಲು ಪೈಪೋಟಿಯೆದ್ದಿದೆ’ ಯಲ್ಲದೆ ಅದು ಈ ನೆಲದ ಮೇಲ್ಪದರದಿಂದ ಭೂಗರ್ಭದೊಳಕ್ಕು ಇಳಿದು ಮಾರ್ದನಿಸಿ ಅಲೌಕಿಕ ಲೋಕದ ಭ್ರಮೆಯಲ್ಲಿ ತೇಲುವ ಮನಸ್ಸುಗಳ ಎದೆಗೆ ನಾಟುವಂಥ ಪಾಪದ ದೇವರಿಗೆ ನಿದ್ದೆ ಬಂದಿದೆ ಎಂಬ ಖಚಿತ ಧ್ವನಿ ಸ್ಫುರಿಸಿ ದೇವರ ಅಸ್ತಿತ್ವದ ಪ್ರಶ್ನೆ ಎತ್ತುತ್ತದೆ. ಈ ಪ್ರಶ್ನೆ ನಿಂತಲ್ಲಿ ನಲಲಾರದೆ, ಹಾಗೆ ಒಗಟಿನ ರೂಪದಲ್ಲಿ ಕಥೆ ಹೇಳುವ “ಸುಟ್ಟ ಹೂವುಗಳ ಪೋಸ್ಟ್ ಮಾರ್ಟಮ್” ಈ ನೆಲದ ಮಣ್ಣಿಗಂಟಿದ ‘ಬಿಳಿನೆತ್ತರಲ್ಲಿ’ ಹೆಣ್ಣಿನ ವಾಸ್ತವತೆ ಮತ್ತು ಮತ್ತೆ ಮತ್ತೆ ಗಂಡು ಅಲಗಿನ ಮೊನೆ ಚಿಮ್ಮಿಸುವ ಸ್ಖಲನ ಕ್ರಿಯೆಯಿಂದ ಎದುರಾಗುವ ಸೃಷ್ಟಿಯ ಇನ್ನೊಂದು ಬೆರಗು ಮತ್ತು ಆ ಬೆರಗಿನಲ್ಲಿ ಲಾಸ್ಯವಾಡುವ ದೇವರ ಅಸ್ತಿತ್ವದ ಪ್ರಶ್ನೆಯತ್ತಲೇ ಗಿರಕಿಯೊಡೆಯುತ್ತದೆ. ಹಾಗೆ ಮೌಲಿಕ ಸಂದೇಶ ರವಾನಿಸುವಷ್ಟು ಶಸಕ್ತ ಕವಿತೆಯಾಗಿದೆ.
“ವಾಟ್ ನೆಕ್ಸ್ಟ್…?” ಪ್ರಶ್ನೆಯಲ್ಲಿ ‘ಮಕ್ಕಳೇ ಇಲ್ಲದೆಯೂ/ ತಾಯಿಯಾಗುವ ಧರೆ’ ಕೆದಕಿದರೆ ‘ಸಾವಿರದ’ ಸತ್ಯ ಹೊರ ಬೀಳುವಷ್ಟು ಮುನ್ಸೂಚನೆ ನೀಡುತ್ತದೆ. ಅದು ಬಿಡಿಬಿಡಿಯಾಗಿ “…ಅವನಿಗೆ…”ಯಲ್ಲಿ ‘ಅವನ ಕವಿತೆಯೊಳಗಿನ/ ‘ನೀನು’/ನಾನೇ ಎಂದು ಒಳಗೊಳಗೇ ನಗುತ್ತಿದ್ದ/ ನನ್ನಂತೆ ಹತ್ತಾರು ಹುಡುಗಿಯರು ನಕ್ಕದ್ದು’ ಸ್ಪಷ್ಟವಾಗುತ್ತಾ ಹೋಗುತ್ತದೆ. ಇಂಥ ಪುಟ್ಟ ಪುಟ್ಟ ಸಾಲುಗಳಲ್ಲೆ ಭುವನಾ ಹಿರೇಮಠ ಅವರ ಕವಿತೆಗಳ ಗಟ್ಟಿತನ ಸಾಬೀತಾಗುತ್ತಾ ಮತ್ತೆ ಮತ್ತೆ ಓದಿನ ಹಕೀಕತ್ತಿಗೆ ನೂಕುತ್ತವೆ. ಹಾಗೆ ಕಾವ್ಯದ ಓದಿನ ಬುದ್ದಿ ಮತ್ತೆಯನ್ನು ಮತ್ತೆ ಮತ್ತೆ ಕೆಣಕುತ್ತವೆ. ಜೊತೆಗೆ
ಈ ಸಂಕಲನದಲ್ಲಿನ ಬಹುತೇಕ “ಹಣೆಮುತ್ತಿನ ಆಧ್ಯಾತ್ಮ” ದ ಕುಡಿದು ಬಿಡು ತುಟಿ/ಒದ್ದೆ ಆರುವ ಮೊದಲೆ” ಓದುಗನ ಹೊಸ ಆಲೋಚನೆಗಳಿಗೆ ಇಂಬು ನೀಡಿ ಮತ್ತೆ ಮತ್ತೆ ಪರಿಶೀಲನೆ ಗೊಳಪಡಿಸಿದರೆ “ನಸೀಬು” ತನ್ನ ಅಂತರಂಗದಲ್ಲಿ ಜರುಗುವ ಗುರುತರವಾದ ಕಾಠಿಣ್ಯವು ಸ್ವಗತದ ಲಹರಿಯಲ್ಲಿ ಒಂದು ರೀತಿಯ ‘ಸವೆದು ಹೋದ ಟಾರು ರೋಡಿನಂತೆ,/ಅಂಗುಷ್ಟ ಕಿತ್ತುಹೋದ ಹಳೆ ಚಪ್ಪಲಿಯಂತೆ’ ಖಾಲಿತನದ ನಿಕೃಷ್ಟ ಸುಳಿವು ಕೊಟ್ಟರೆ “ಮಹಾ’ ಭಾರತ” ವು ಇಲ್ಲಿ ಗೋಣು ಮುರಿದ ಸ್ಥಿತಿಯಲ್ಲಿದೆ. ಈ ಸ್ಥಿತಿಯಲ್ಲಿಯೂ ಒಮ್ಮೆ ಚೆರಿತ್ರೆಯ ವಿವಿಧ ಮಗ್ಗುಲ ಕಡೆ ಕಣ್ಣಾಡಿಸಿದರೆ ಅದೆಲ್ಲವನ್ನು ಒಳಗಿಟ್ಟುಕೊಂಡೆ ಭವಿತವ್ಯದ ಕನಸು ಹೊತ್ತ ಅಪ್ಪನ ಹೆಗಲಲ್ಲಿ ಕುಳಿತ ಕಂದಮ್ಮಗಳು ವಾಸ್ತವದ ನೆಲದ ಮೇಲೆ ಪುಟ್ಟ ಪಾದಗಳೂರಿ ಮಿಥ್ಯದ ಚೆರಿತ್ರೆಯ ಪುಟಗಳನ್ನು ಮೆಟ್ಟಿ ಮುರಿದು ಕಟ್ಟುವಂತೆ ಪ್ರೇರೇಪಿಸುವ ಕವಿಯ ಇಂಗಿತವೊಂದು ವ್ಯಕ್ತವಾಗುತ್ತದೆ.
ಇಲ್ಲಿ “ನೀನು” ಧ್ಯಾನಸ್ಥವಾಗಿದೆ. ಇಲ್ಲಿ ಬೆಳಕಿನ ಪಂಜಿದೆ. ಇಲ್ಲಿ ಹೂವೂ ಇದೆ.ಚಪ್ಪಲಿ ಗುರುತಿಲ್ಲದ ಹಳೆಯ ರಹದಾರಿಯಿದೆ. ಶೂನ್ಯವಿದೆ. ಕರಾಳ ರಾತ್ರಿಯಿದೆ. ಖಾಲಿ ರಸ್ತೆಯಿದೆ. ನೆನಪು ಧ್ಯಾನ ಘಮ ಎಲ್ಲವೂ ಇದೆ. ಈ ಎಲ್ಲವೂ ಇದ್ದೂ ಇಲ್ಲದ ನಿರ್ಭಾವುಕ ಸ್ಥಿತಿ-ಲಯಗಳಲ್ಲಿ ಕವಿತೆ ದುಮುಗುಡುತ್ತದೆ. ಕೊನೆಗೆ ‘ನಿನ್ನ ಒಡಲಾಳದಲ್ಲೇ ಲೀನಗೋಳ್ಳುತ್ತೇನೆ’ ಎನ್ನುವ ಆತ್ಮತೃಪ್ತಿಯಲ್ಲಿ ಧೇನಿಸುತ್ತದೆ. ಇದು “ಮಗನ ಅನುಭಾವ” “ಎರಡನೇ ದಿನ” “ಮೂರನೇ ಕನಸು” ಕವಿತೆಗಳ ಆಳದೊಳಗೂ ಈ ಧ್ಯಾನಸ್ಥ ಸ್ಥಿತಿಯಿದೆ. ಅದು ಒಂದರ ಹಿಂದೊಂದು ಪೂರಕವಾಗಿ “ಮಗನ ಆಧ್ಯಾತ್ಮ ನೆನಪಾದರೆ/ ಸಾವಿನ ಮೇಲೆ ಪ್ರೀತಿ ಹೆಚ್ಚುತ್ತದೆ” – “ಅವಳ ನಡು/ಅವಳ ಹೊಕ್ಕಳು/ಅವಳ ಕಾಮರೂಪ/ಕನ್ನಡಿಯೊಂದಿಗೆ ಅವನ ಹಾದರ” – “ಗಾಯಗೊಂಡ ನನಗೆ ಅವನಿಗೆ/
ಈ ರಾತ್ರಿಗೆ ತೊಗಲಿನಾಸರೆ ಕತ್ತಲಿನಾಸರೆ”ಯು ಓದುಗನ ಗ್ರಹಿಕೆಗೆ ಸಾಫಲ್ಯ ಒದಗಿಸುತ್ತದೆ.
ಹಾಗೆ ಈ ಸಂಕಲನದೊಳಗೆ ‘ಚೊಕಮಾರ ಚಿಟಚೂರ’ ‘ನನ ಚಿಟ್ಟಿ ಬಹುರಂಗಿ’ ‘ಕಿಚ್ಚದ ಜಳಕ ಬಾಗ್ಯೆ’ ‘ಚಿಂತ್ಯಾಕ ಚೆಲುವಿಯ ಗುಂಗ್ಯಾಕ’ ಕವಿತೆಗಳಲ್ಲಿ ಜನಪದೀಯವಾದ ಭಾಷಾ ಸೊಗಡಿನ ಮಟ್ಟಿದೆ. ‘ಚೊಕಮಾರ ಚಿಟಚೂರ’ ಕವಿತೆಯ “ಒಂದ್ಹೆಣ್ಣ ಯೋನಿಯ ಮಾರ್ಗವ ದಾಟಿ/ ತುಂಬಿದ ಎದೆಗಳ ಅಮೃತವಾ ಹೀರಿ”ದ ತೃಪ್ತಭಾವವು ಕಾಮೋತ್ತೇಜಿತ ಔನ್ನತ್ಯ ಪಡೆದು “ಕಂಡ ಕಂಡ ಸುಂದರಿಯ/ ಒಳಹೊಕ್ಕು ಹೊರಬೀಳೊ ಬಿಳಿಪಟಗೆ ರನದೀರ” ನಲ್ಲಿನ ಕವಿ ಕಟ್ಟಿಕೊಡುವ ವ್ಯಕ್ತತೆ, ಭಾವುಕವಾಗಿ ಅಷ್ಟೇ ತೀಕ್ಷ್ಣವಾಗಿ ಸ್ಪೋಟಗೊಂಡು ಸ್ಪುರಿಸಿ ಸ್ಖಲಿಸುತ್ತದೆ.
‘ದೀಪ ಆರಿಸುತ್ತೇನೆ’- ಕವಿತೆಯ ‘ದೀಪ ಆರಿಸುತ್ತೇನೆ ಕತ್ತಲೆಯ ಘನತೆ ಉಳಿಸಲು’ ‘ದೀಪ ಆರಿಸುತ್ತೇನೆ ದೀಪದ ಹುಳುವಿನ ಜೀವ ಉಳಿಸಲು’ ಸಾಲುಗಳು ಮಾನವೀಯ ಮೌಲ್ಯವುಳ್ಳ ಉನ್ನತ ಧ್ಯೇಯ ಸಂದೇಶ ಹೊತ್ತ ಜೀವ ಕಾರಣ್ಯದ ಒಂದು ಮಹತ್ವದ ಕವಿತೆಯಾಗಿದೆ.
ಇಲ್ಲಿನ “ಬತ್ತಲಾರದ ಗಂಗೆ” ಸಂಕಲನದ ಒಂದು ಪ್ರಮುಖ ಕವಿತೆ. ನೂಲಿನಿಂದ ನೇಯ್ದ ಸೀರೆಯು ‘ಕಿಬ್ಬೊಟ್ಟೆ ನಯವಾದ ಬೆನ್ನು/ಉಬ್ಬಿದ ಸ್ತನಗಳಿಗೆ/ಒಪ್ಪುವಂತೆಯೇ ಒಪ್ಪಿತಗೊಳ್ಳಬೇಕು’ ಎಂಬ ಆಕರ್ಷಣೀಯ ಅಷ್ಟೇ ಹಸಿಯಾದ ಸಾಲುಗಳು ಹೆಣ್ಣಿನ ಬದುಕಿನ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತದೆ. ಈ ಕವಿತೆ ಓದುತ್ತಾ ಅದರ ಆಳಕ್ಕಿಳಿದಂತೆಲ್ಲ ಇದೇ ವಸ್ತು ವಿಷಯದ ಪ್ರವೀಣ ಕೆ. ಅವರ ‘ಲಕ್ಷಾಂತರ ಬತ್ತಿ’ ಕವಿತೆಯ ಸಾಲುಗಳು ಓದುಗನ ಎದೆಗೆ ತಾಕಿ ಹೋದ ಅನುಭವ ನೀಡುತ್ತದೆ. ‘ಲಕ್ಷಾಂತರ ಬತ್ತಿ’ಯಲ್ಲಿ (೧)’ಚಾಣಿಗಿ ಇಲ್ಲದ ಮನೆಯಲ್ಲಿ/ಅಪರೂಪಕ್ಕೆ ಕುದಿಯುತ್ತಿದ್ದ ಚಹಾ/ಸೆರಗ ಚಿಮುಟದಿಂದ ಹಿಡಿದು ಕೆಳಗಿಳಿಸಿ/ಸೀರೆಯಂಚಿನ ಚಾಣಿಗಿಯಲ್ಲಿ ಸೋಸಿ”(೨)’ಅಮ್ಮನ ಸೀರೆ ಬಿಸಿಲು ಬೆವರಾಗಿ/ಹರಿವ ಮುನ್ನ ಚಾಮರವಾಗುತ್ತಿತ್ತು’ (೩)’ಸೀರೆ ಗಂಟಲ್ಲಿ ಮಡಚಿಟ್ಟುಕೊಂಡ/ಬೈಗುಳ, ಅವಮಾನ, ಧಣಿವು, ಸುಸ್ತುಗಳ ಧೂಳನ್ನು ಒದರಿ/ನಡಕ್ಕೆ ಸೆರಗು ಕಟ್ಡಿಕೊಂಡು ಹೊಟ್ಟೆಗೆ/ಹತ್ತಿದ ಬೆಂಕಿ ಆರಿಸಲು ಸ್ಟೋವು ಹೊತ್ತಿಸುತ್ತಾಳೆ’ ಯಲ್ಲದೆ ಅವಳ ಬದುಕಿನ ಒಡಲಾಳದ ಬೇಗುದಿಯನ್ನು ನಿಚ್ಚಳವಾಗಿ ಹೇಳುತ್ತದೆ. ಇಲ್ಲಿ ಸೀರೆ ಮತ್ತು ಸೀರೆಯ ಸೆರಗು ಹೇಳುವ ಬೇಗುದಿ ಅದರೊಳಗಿನ ಅಂತರಾತ್ಮವೂ ಬದುಕಿನ ಬವಣೆಯ ಪೂರ್ವ ಘಟ್ಟಗಳ ತಾಲೀಮಿನಲ್ಲಿ ಹರಿದ ಸೀರೆಯೂ ಕಟ್ಟಕಡೆಯಲ್ಲೂ ತನ್ನ ಉಳಿಸಿಕೊಂಡು ಲಕ್ಷಾಂತರ ಬತ್ತಿಯಾಗಿ ಅದು ಕಾದ ಎಣ್ಣೆಯೊಳಗೆ ಅದ್ದಿ ಬೇಯುತ್ತಾ ಆ ನೋವಿನಲೂ ಬೆಳಗುವ ಬಗೆಯ ಮನೋಜ್ಞ ಚಿತ್ರಿಣವಾದರೆ, ಅದೇ ವಸ್ತು ವಿಷಯದ ಭುವನಾ ಹಿರೇಮಠರ ‘ಸೀರೆ’ ಇಲ್ಲಿ ಆಕರ್ಷಿತ ಲೋಕದ ಕಾಮದ ಹಪಾಹಪಿಯ ಹಸಿಹಸಿ ಬದುಕಿನ ಬಿಸಿಯೇರಿದ ಬೇಗುದಿಯಲ್ಲಿ ಪುರಾಣದೊಂದಿಗೆ ಪ್ರಸ್ತುತವನ್ನು ಮಿಳಿತಗೊಳಿಸಿಗೊಂಡು ಬೇಯುವ ಹೆಣ್ಣಿನ ಒಳ ವೇದನೆಯ ಚಿತ್ರಣವನ್ನು ಓದುಗನ ಎದೆಗೆ ಎರಕ ಉಯ್ದು ಬೆಚ್ಚಿಸುತ್ತದೆ.
ಇನ್ನು ‘ಅಲ್ಲಿಯೇ ಸಿಗೋಣ’ ಗಜ಼ಲ್ ರೂಪ ಧರಿಸಿದರೆ, ‘ಅರ್ಧ ಕುಡಿದಿಟ್ಟ ಕಾಫಿ’ ಗಂಗಾಧರ ಚಿತ್ತಾಲರ ‘ಗುಲ್ ಮೊಹರ್’ ಮತ್ತು ನಿಸಾರ್ ಅಹಮ್ಮದ್ ಅವರ ‘ಮಾಸ್ತಿ’ ಕವಿತೆಗಳ ‘ಧಾಟಿ’ಯನ್ನು ದಾಟದೆ ಅವುಗಳೊಂದಿಗೆ ಸಮನಾಗಿ ಬೆಸೆದುಕೊಂಡು ನಡೆದಾಡುವ ಕವಿತೆಯಂತಿದೆ.
ಕಾಸ್ಮಿಕ್ ಕ್ವೀನುಗಳ ಲೋಕದಲ್ಲಿ, ನನ್ನ ಚಿತ್ರ, ಕಾಲ ನೀನಲ್ಲ ನೀನು ಕಾಲವಲ್ಲ, ಆವರಿಸಿ ಬಿಡುತ್ತಿ, ಬೀದಿ ಕವಿತೆ, ವಿರಹವೊಂದು ಮಹಾಕಾವ್ಯ, ನೀನು ನೆನಪಾಗುತ್ತಿ, ಕಣ್ಣು ತಿರುಗುವ ಇಳಿಜಾರು, ಎಚ್ಚೆತ್ತು ನಡೆ, ತವನದಿ ಗುರುವೆ, ನೀರಡಿಸಿದ ಹಕ್ಕಿ ನಾ, ಯುಗಮೌನ, ಸೀದಾ ಸ್ವರ್ಗಕ್ಕೆ – ಹೀಗೆ ಇಡೀ ಸಂಕಲನದ ಕವಿತೆಗಳು ಹೆಣ್ಣಿನ ಅಂತರಂಗದ ತುಮುಲಗಳನ್ನು ಹೇಳುತ್ತಲೇ ಮನುಕುಲದ ಒಟ್ಟು ವ್ಯವಸ್ಥೆಯ ಧಾರುಣ ಮನಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತವೆ. ಹಾಗೆ ಅರ್ಥ, ಕಾಮ, ಲೋಪ, ಲೋಭ, ಯೋನಿ, ತತ್ವ, ಸ್ಥಿತಿ, ಲಯ, ಸಾವು, ನೋವು, ಲೋಕ, ಪರಲೋಕ, ಇಹಲೋಕ, ಸಂಪತ್ತು, ಭೂಮಿ, ಆಕಾಶ, ನೆಲ, ಮಣ್ಣು, ಗಾಳಿ, ಬೆಳಕು, ಬೆಂಕಿ, ನೀರು, ರಕ್ತ, ಮಾಂಸ, ಮೂಳೆ, ಚಕ್ಕಳಗಳು ಒಂದೆಡೆ ಕಲೆತು ಒಳಗೇ ಇಂಗಿ ವ್ಯಕ್ತ ಅವ್ಯಕ್ತತೆಯ ಒಳಸುಳಿಯಲ್ಲಿ ಒಂದು ಅಸಂಗತ ಭಾವುಕತನವನ್ನು ಕಟ್ಟಿಕೊಡುತ್ತವೆ.
‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’ ಈ ನೆಲದ ಕರುಣೆಯ ಜೀವನ್ಮುಖೀ ಪರಿಭಾಷೆಯಾಗಿದೆ. ಇಲ್ಲಿ ಕವಿ ತಾನು ಕಟ್ಟುವ ಕವಿತೆಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವ, ಆತ್ಮವಿಮರ್ಶೆ ಮಾಡಿಕೊಳ್ಳುವ ಒಂದು ಏಕಾಕ ಬಗೆ. ಅದೊಂದು ಅನನ್ಯವಾದ ಅನಂತತೆ. ಈ ಅನನ್ಯತೆ ಹೀಗೇ ಇರಬೇಕೆಂಬ ಷರಾ ಎನುವುದಿಲ್ಲ. ಹಾಗಾಗಿ ಭುವನಾ ಅವರ ಕವಿತೆಗಳಲ್ಲಿ ಅನನ್ಯತೆಯ ಸಂಕೇತವಿದೆ. ಹಾಗೆ ತೀವ್ರವಾಗಿ ಕಾಡುವ ಸಂವೇದನಾಶೀಲಾ ಕುಸುರಿತನವಿದೆ.
ಹಾಗೆ ನಮ್ಮ ನಡುವಿದ್ದ ವಿಶಿಷ್ಟ, ಮಾನವೀಯ ಮೌಲ್ಯ ತುಡಿತದ ಮಹತ್ವದ ಕವಿ ಎನ್.ಕೆ ಹನುಮಂತಯ್ಯನವರ ಎರಡು ಸಂಕಲನಗಳ ಒಂದು ಗುಚ್ಚವಾಗಿರುವ ‘ಮಾಂಸದಂಗಡಿಯ ನವಿಲು’ ಕವಿತೆಗಳು ಸ್ತ್ರೀ ಮತ್ತು ದಲಿತ ಲೋಕದ ಜೀವನಾನುಭವವನ್ನು ಕಟ್ಟಿಕೊಟ್ಟರೆ ಭುವನಾ ಹಿರೇಮಠರ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’ ಸ್ತ್ರೀ ಲೋಕದ ಪಡಿಪಾಟಲಿನೊಟ್ಟಿಗೆ ತಲ್ಲಣಿಸಿ ಬೆಸೆದುಕೊಂಡ ಜೀವನಾನುಭವವನ್ನು ಕಟ್ಟಿಕೊಡುತ್ತದೆ. ಹಾಗೆ ಈ ಎರಡೂ ಕೃತಿಗಳ ಕವಿತೆಗಳ ಶೀರ್ಷಿಕೆಗಳೂ ಒಂದಕ್ಕೊಂದು ಪೂರಕವಾಗಿವೆ. ಇದು ಕಾಕತಾಳಿಯವೂ ಇರಬಹುದಾದ ಸಾಧ್ಯತೆ ಇದೆ.
ಇಷ್ಟು ಹೇಳುತ್ತಾ, ವೈದೇಹಿ, ಪ್ರತಿಭಾನಂದಕುಮಾರ್, ಜ್ಯೋತಿ ಗುರುಪ್ರಸಾದ್ ತರಹದ ಕವಯಿತ್ರಿಯರ ಕವಿತೆಗಳನ್ನು ಆಸ್ಥೆಯಿಂದ ಒಂದೇ ಗುಕ್ಕಿಗೆ ಓದಿ ಅರ್ಥೈಸಿಕೊಳ್ಳಬಲ್ಲಂಥ ಗುಣ ಲಕ್ಷಣವಿರದ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’ ಸುಲಭಕ್ಕೆ ದಕ್ಕುವಂಥದ್ದಲ್ಲ! ಜೊತೆಗೆ ಕೆ.ಶಿವರಾಮ ಕಾರಂತರು ತಮ್ಮ ಕಡೆಯ ದಿನಗಳಲ್ಲಿ ಹೊರತಂದ ‘ಸೀಳ್ಗವನಗಳು’ ಸಂಕಲನದ ಕವನಗಳ ಭಾಷಾ ಹಿಡಿತವಿರುವ ಇಲ್ಲಿನ ಕೆಲವು ಕವಿತೆಗಳು ‘ಟಫ್’ ಎನಿಸುವಂಥ ಅನುಭವ ನೀಡುತ್ತವೆ.
ಹೀಗಾಗಿ ಈ ಕೃತಿಯಲ್ಲಿನ ಕವಿತೆಗಳ ಬಗ್ಗೆ ಒಂದು ಸ್ಪಷ್ಟ ಓದು, ಒಂದು ಸ್ಪಷ್ಟ ನೋಟ, ಒಂದು ಸ್ಪಷ್ಟ ವಿಶ್ಲೇಷಣೆ ಓದುಗನ ಬುದ್ದಿಮತ್ತೆಗೆ ನಿಲುಕಿದರು ಇಲ್ಲಿನ ಕವಿತೆಗಳು ತೀರಾ ಕ್ಲಿಷ್ಟವಾಗಿವೆ.
ಸಾಮಾನ್ಯ ಸಾಲುಗಳುಳ್ಳ, ಪಾಂಡಿತ್ಯ ಭಾಷಾ ಪ್ರಯೋಗವಿರದ, ‘ಮತ್ತೆ ಮತ್ತೆ….’ ಕವಿತೆಗಳ ಕೇಂದ್ರವನ್ನು ಮೊದಲ ಓದಿಗೆ ಹಿಡಿದಿಡಲಾಗದಷ್ಟು ತೀರಾ ಸಂಕೀರ್ಣವಾಗಿವೆ ಎಂಬುದು ಈ ಕೃತಿಯ ಒಟ್ಟು ಲೋಪ! ಇದು ಅಂಥ ಪ್ರಮಾದವೇನೂ ಅಲ್ಲ. ಬದಲಿಗೆ ಇದು ಇತರ ಓದುಗ ಮಹಾಶಯರಿಗೆ ಹಾಗೆ ಅನಿಸದೆಯೂ ಕೃತಿಯ ಗಟ್ಡಿತನಕ್ಕೆ ಕವಿ ತನ್ನ ಕವಿತಾ ರಚನೆಯಲ್ಲಿ ಅಳವಡಿಸಿಕೊಂಡಿರುವ/ಬಳಸಿರುವ ಅದೊಂದು ಕಾವ್ಯದ ತಂತ್ರವೂ ಇರಬಹುದು. ಇದೆಲ್ಲದ ನಡುವೆಯೂ ‘ಮತ್ತೆ ಮತ್ತೆ..’ ಕನ್ನಡ ಸಾಹಿತ್ಯ ಲೋಕ ಸ್ವೀಕರಿಸಬಹುದಾದ ಒಂದೊಳ್ಳೆ ಕೃತಿ ಅನ್ನಬಹುದು!
-ಎಂ.ಜವರಾಜ್
ಶೀರ್ಷಿಕೆಯಲಿ ಎರಕ ಉಯ್ದು ಅಲ್ಲ, ಎರಕ ಹೊಯ್ದು ಎಂದಾಗಬೇಕು.
ಇದು ಮುಖ್ಯವಲ್ಲ ಎಂದಾದರೆ ಕೈ ಬಿಡಬಹುದು. ನನಗೆ ಮುಖ್ಯ ಅನಿಸಿತು , ತಿಳಿಸಿದೆ ಅಷ್ಟೇ.
ನಿಮಗೆ ಅರ್ಥವಾಯಿತಲ್ಲವೇ? ಮತ್ತೇಕೆ ಹುಕಿ? ಎಂದಾದರೆ ಚಲ್ತಾ ಹೈ , ನೋ ಪ್ರಾಬ್ಲಂ
ನೋ ವಾದ; ಓನ್ಲೀ ಧನ್ಯವಾದ